Tag: Badruddin K mani

  • ಮಾಹಿತಿ ಹಕ್ಕು ಕಾಯ್ದೆ | ತುಮಕೂರು ಜಿಲ್ಲೆಯಲ್ಲಿ 1,323 ಮೇಲ್ಮನವಿ ಬಾಕಿ: ಬದ್ರುದ್ದೀನ್ ಕೆ.ಮಾಣಿ

    ಮಾಹಿತಿ ಹಕ್ಕು ಕಾಯ್ದೆ | ತುಮಕೂರು ಜಿಲ್ಲೆಯಲ್ಲಿ 1,323 ಮೇಲ್ಮನವಿ ಬಾಕಿ: ಬದ್ರುದ್ದೀನ್ ಕೆ.ಮಾಣಿ

    ತುಮಕೂರು: ಮಾಹಿತಿ ಹಕ್ಕು ಕಾಯ್ದೆಗೆ (Right to Information Act) ಸಂಬಂಧಿಸಿದಂತೆ ಜಿಲ್ಲೆಯ (Tumkuru) 1,323 ಮೇಲ್ಮನವಿ ಅರ್ಜಿಗಳು ಆಯೋಗದಲ್ಲಿ ಬಾಕಿಯಿವೆ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಕೆ.ಮಾಣಿ (Badruddin K Mani) ಮಾಹಿತಿ ನೀಡಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೂ ಒಟ್ಟು ಆಯೋಗದಲ್ಲಿ 41,034 ಮೇಲ್ಮನವಿ ಅರ್ಜಿಗಳು ಬಾಕಿಯಿದ್ದು, ಜಿಲ್ಲೆಯಲ್ಲಿ 1,323 ಮೇಲ್ಮನವಿ ಅರ್ಜಿಗಳು ಬಾಕಿಯಿವೆ. ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ಅರಿವಿನ ಕೊರತೆಯಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಮನವಿ ಅರ್ಜಿಗಳು ಆಯೋಗಕ್ಕೆ ಸ್ವೀಕೃತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಆಯೋಗವು ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಅಧಿಕಾರಿಗಳಲ್ಲಿ ಮಾಹಿತಿ ಕೊರತೆಯಿಂದ RTI ಅರ್ಜಿಗಳ ವಿಲೇವಾರಿ ವಿಳಂಬ: ಬಿ.ಆರ್ ಮಮತಾ

    ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆಯ ನಿಯಮಗಳನ್ನು ಅರಿತು ಸಕಾಲದಲ್ಲಿ ಅರ್ಜಿದಾರರಿಗೆ ಮಾಹಿತಿ ನೀಡಬೇಕು. ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರಿಂದ ಸ್ವೀಕೃತ ಅರ್ಜಿಗಳನ್ನು 30 ದಿನದೊಳಗಾಗಿ ವಿಲೇವಾರಿ ಮಾಡಬೇಕು. ಸ್ವೀಕೃತ ಅರ್ಜಿಗಳ ವಿಲೇವಾರಿಯಲ್ಲಿ ತುಮಕೂರು ಜಿಲ್ಲೆಯು ರಾಜ್ಯದಲ್ಲಿ 9ನೇ ಸ್ಥಾನದಲ್ಲಿದ್ದು, ಬಾಕಿಯಿರುವ ಅರ್ಜಿಗಳನ್ನು ನಿಗದಿತ ದಿನಾಂಕದೊಳಗೆ ವಿಲೇವಾರಿ ಮಾಡಿದಲ್ಲಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಕೆಯಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

    ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರಿಗೆ ಮಾಹಿತಿ ನೀಡಲು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಇಲಾಖಾ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಅಧಿಕಾರಿಗಳ ವಿಳಂಬ ದೋರಣೆಯಿಂದ ನಷ್ಟ ಉಂಟಾದಲ್ಲಿ ಪರಿಹಾರವಾಗಿ ಅರ್ಜಿದಾರರಿಗೆ 1 ಲಕ್ಷ ರೂ.ಗಳವರೆಗೆ ಪರಿಹಾರ ನೀಡುವಂತೆ ಸೂಚಿಸುವ ಅಧಿಕಾರವನ್ನು ಮಾಹಿತಿ ಆಯೋಗ ಹೊಂದಿದ್ದು, ಈವರೆಗೂ ಒಟ್ಟು 406 ಅಧಿಕಾರಿಗಳ ವಿರುದ್ಧ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆಯಡಿ ದಂಡ ಹಾಗೂ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ರಾಜ್ಯ ಮಾಹಿತಿ ಆಯೋಗದ ಮತ್ತೊಬ್ಬ ಆಯುಕ್ತ ಡಾ|| ಹರೀಶ್ ಕುಮಾರ್ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಡಿ ನಿಯಮಾನುಸಾರ ಪ್ರಥಮ ಮೇಲ್ಮನವಿ ಅರ್ಜಿಗಳು ವಿಲೇವಾರಿಯಾಗದಿದ್ದಾಗ ಅರ್ಜಿದಾರರು ಆಯೋಗಕ್ಕೆ ದ್ವಿತೀಯ ಮೇಲ್ಮನವಿ ಸಲ್ಲಿಸಲಿದ್ದಾರೆ. ಮಾಹಿತಿ ಲಭ್ಯವಿದ್ದು, ಉದ್ದೇಶಪೂರ್ವಕವಾಗಿ ಅರ್ಜಿದಾರರಿಗೆ ಮಾಹಿತಿ ನೀಡದ ಅಧಿಕಾರಿಗಳಿಗೆ ದಂಡ ವಿಧಿಸಲಾಗುವುದು. ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅರ್ಜಿದಾರರ ಬಗ್ಗೆ ಕೆಟ್ಟ ಭಾವನೆ ಹೊಂದಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗಳನ್ನು ಆನ್‌ಲೈನ್ ಮ್ಯಾಪಿಂಗ್ ಮಾಡಲು ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ)ಕ್ಕೆ ಸೂಚನೆ ನೀಡಬೇಕೆಂದು ಪತ್ರಕರ್ತರು ಮನವಿ ಮಾಡಿದಾಗ ಸ್ಪಂದಿಸಿದ ಅವರು ಸ್ವೀಕೃತ ಮಾಹಿತಿ ಕಾಯ್ದೆ ಅರ್ಜಿಗಳನ್ನು ಆನ್‌ಲೈನ್ ಮ್ಯಾಪಿಂಗ್ ಮಾಡಲು ಎಲ್ಲಾ ಇಲಾಖೆಗಳು ಎನ್‌ಐಸಿಗೆ ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಅರ್ಜಿದಾರರಿಗೆ ನಿಖರ ಮಾಹಿತಿ ನೀಡಲು ಸೂಚನೆ : ಇದಕ್ಕೂ ಮುನ್ನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳಿಗಾಗಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಬದ್ರುದ್ದೀನ್ ಕೆ.ಮಾಣಿ ಮಾತನಾಡುತ್ತಾ, ಜಿಲ್ಲೆಯಲ್ಲಿರುವ ಎಲ್ಲಾ ಇಲಾಖೆಗಳು ಮಾಹಿತಿ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕು. ಜನಸಾಮಾನ್ಯರಿಗೆ ಸಮರ್ಪಕ, ಪಾರದರ್ಶಕ ಮತ್ತು ಸಮಯೋಚಿತ ಮಾಹಿತಿ ನೀಡಲು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

    ಪ್ರಜಾಪ್ರಭುತ್ವವನ್ನು ಬಲಪಡಿಸಲು ಈ ಕಾಯ್ದೆಯು ಮಹತ್ವದ ಸಾಧನವಾಗಿದ್ದು, ಅಧಿಕಾರಿಗಳು ಜನರ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಬೇಕು. ಅರ್ಜಿದಾರರಿಗೆ ಸುಳ್ಳು ಮಾಹಿತಿಯನ್ನು ನೀಡಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಸಾಧ್ಯತೆಯಿರುವುದರಿಂದ ಮಾಹಿತಿ ಹಕ್ಕು ಅರ್ಜಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ನಿಖರವಾದ ಮಾಹಿತಿಯನ್ನು ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

    ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯೂ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಸಂಪೂರ್ಣ ತಿಳುವಳಿಕೆ ಹೊಂದಿರಬೇಕು. ಕಚೇರಿಗಳಲ್ಲಿ ದಾಖಲೆಗಳ ನಿರ್ವಹಣೆಯನ್ನು ಸುರಕ್ಷಿತವಾಗಿಟ್ಟುಕೊಂಡು, ಅರ್ಜಿದಾರರು ಮಾಹಿತಿಗಾಗಿ ಸಲ್ಲಿಸಿದ ಅರ್ಜಿಗೆ 30 ದಿನಗಳೊಳಗೆ ಮಾಹಿತಿಯನ್ನು ಒದಗಿಸುವುದು ಕಡ್ಡಾಯವೆಂದು ತಿಳಿಸಿದರು. ಅಧಿಕಾರಿಗಳು ಮಾಹಿತಿ ನೀಡಲು ಅರ್ಜಿದಾರರನ್ನು ಸತಾಯಿಸಿದಲ್ಲಿ 1 ಲಕ್ಷ ರೂ.ಗಳವರೆಗೆ ಪರಿಹಾರ ಪಾವತಿಗೆ ಗುರಿಯಾಗಬೇಕಾಗುತ್ತದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಅಧಿಕಾರಿಗಳು ಸರಿಯಾಗಿ ಓದಿ ಅರ್ಥೈಸಿಕೊಳ್ಳುವುದನ್ನು ಕಲಿಯಬೇಕು. ಕಾಯ್ದೆಯನ್ನು ಕಬ್ಬಿಣದ ಕಡಲೆಯೆಂದು ಭಾವಿಸದೆ ಸುಲಭವಾಗಿ ಉತ್ತರಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅರ್ಜಿ ಸಲ್ಲಿಕೆಯಾದ 30 ದಿನದೊಳಗೆ ಕಡ್ಡಾಯವಾಗಿ ಹಿಂಬರಹ ಇಲ್ಲವೆ ಸೂಕ್ತ ಮಾಹಿತಿಯನ್ನು ನೀಡಬೇಕು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರು ಯಾವುದೇ ಅಧಿಕಾರಿಯ ಆಸ್ತಿ, ವೈಯಕ್ತಿಕ ವಿವರಗಳನ್ನು ಕೇಳಲು ಅವಕಾಶವಿಲ್ಲ ಎಂದು ತಿಳಿಸಿದರು.

    ಆಯೋಗದ ಮತ್ತೊಬ್ಬ ಆಯುಕ್ತ ಡಾ.ಹರೀಶ್ ಕುಮಾರ್ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ದುರುಪಯೋಗವಾಗದಂತೆ ಎಚ್ಚರಿಕೆವಹಿಸಬೇಕೆಂದು ತಿಳಿಸಿ, ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯ, ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದ ಇಲಾಖೆ, ಕಚೇರಿ, ಸಾರ್ವಜನಿಕ ಸಂಸ್ಥೆಗಳಲ್ಲಿ ನಡೆಯುತ್ತಿರುವ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆಯುವ ಹಕ್ಕು ದೊರೆಯುತ್ತದೆ. ಮಾಹಿತಿ ತಿಳಿದುಕೊಳ್ಳುವುದು ಜನರ ಮೂಲಭೂತ ಹಕ್ಕು ಎಂಬ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸಬೇಕೆಂದರು.

    ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಮಾತನಾಡಿ, ಎಲ್ಲಾ ಸರ್ಕಾರಿ ಇಲಾಖೆಗಳು ಮಾಹಿತಿ ಹಕ್ಕು ಕಾಯ್ದೆ 4(1)ಎ ಮತ್ತು ಬಿ ಅನ್ವಯ ಕಚೇರಿಗಳಲ್ಲಿ ಅಧಿಕಾರಿ/ ಸಿಬ್ಬಂದಿ ಹಾಗೂ ಅವರ ಕಾರ್ಯವಿಧಾನ, ಸ್ವೀಕೃತ ಅರ್ಜಿ ಹಾಗೂ ವಿಲೇವಾರಿ ಮಾಹಿತಿಯನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಈಶ್ವರಪ್ಪ ಹಾಗೂ ಸಂಜೀವಪ್ಪ, ಉಪ ವಿಭಾಗಾಧಿಕಾರಿಗಳಾದ ನಾಹಿದಾ ಜûಮ್ ಜûಮ್ ಹಾಗೂ ಗೋಟೂರು ಶಿವಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ರಾಜ್ಯ ಮಾಹಿತಿ ಆಯುಕ್ತರಾಗಿ ಬದ್ರುದ್ದೀನ್ ಕೆ.ಮಾಣಿ ಸೇರಿದಂತೆ 7 ಮಂದಿ ಪ್ರಮಾಣವಚನ ಸ್ವೀಕಾರ

     

  • ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ʼಪಬ್ಲಿಕ್‌ ಟಿವಿʼಯ ಬದ್ರುದ್ದೀನ್‌ ಕೆ.ಮಾಣಿ ಸೇರಿ ಮೂವರ ನೇಮಕ

    ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ʼಪಬ್ಲಿಕ್‌ ಟಿವಿʼಯ ಬದ್ರುದ್ದೀನ್‌ ಕೆ.ಮಾಣಿ ಸೇರಿ ಮೂವರ ನೇಮಕ

    ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯರನ್ನಾಗಿ ʼಪಬ್ಲಿಕ್‌ ಟಿವಿʼ ಸುದ್ದಿವಾಹಿನಿಯ ವಿದ್ಯುನ್ಮಾನ ಮಾಧ್ಯಮದ ರಾಜಕೀಯ ವಿಭಾಗದ ಮುಖ್ಯಸ್ಥರಾದ ಬದ್ರುದ್ದೀನ್‌ ಕೆ.ಮಾಣಿ ಸೇರಿದಂತೆ ಮೂವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ. ಜೆಸಿಂತ ಅವರು ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಬೆಂಗಳೂರು ವರದಿಗಾರರ ಕೂಟದ ವತಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಈ ಮೂವರು ಸದಸ್ಯರನ್ನು ನೇಮಿಸಿರುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಸ್ಪರ್ಧಿಸಿದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತೆ: ಸಿಎಂ ವಿಶ್ವಾಸ

    ಉದಯವಾಣಿ ಪತ್ರಿಕೆಯ ಉಪ ಮುಖ್ಯ ವರದಿಗಾರ ಎಸ್.ಲಕ್ಷ್ಮೀನಾರಾಯಣ, ಸಣ್ಣ ಮತ್ತು ಮಧ್ಯಮ ವರ್ಗಗಳ ಪತ್ರಿಕಾ ವಿಭಾಗದ ಮೈಸೂರು ಮಿತ್ರ ಮತ್ತು ಸ್ಟಾರ್‌ ಆಫ್‌ ಮೈಸೂರು ಪತ್ರಿಕೆಯ ವಿಶೇಷ ವರದಿಗಾರ ಕೆ.ಎಂ.ಶಿವರಾಜು ಅವರು ಸಹ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಇದನ್ನೂ ಓದಿ: ಸಿಎಂಎಸ್‍ಆರ್ ಮೋರೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಸಿಎಂ ಬೊಮ್ಮಾಯಿ

  • ಪಬ್ಲಿಕ್ ಟಿವಿಯ ಬದ್ರುದ್ದೀನ್ ಮಾಣಿಯವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನ

    ಪಬ್ಲಿಕ್ ಟಿವಿಯ ಬದ್ರುದ್ದೀನ್ ಮಾಣಿಯವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನ

    ಬೆಂಗಳೂರು: ಸೋಮವಾರದಂದು ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ನಡೆದ 2018ರ ವರ್ಷದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಬ್ಲಿಕ್ ಟಿವಿಯ ರಾಜಕೀಯ ವಿಭಾಗದ ಮುಖ್ಯಸ್ಥ ಬದ್ರುದ್ದೀನ್.ಕೆ.ಮಾಣಿ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಈ ಸಮಾರಂಭದಲ್ಲಿ ನಗರಾಭಿವೃದ್ದಿ ಸಚಿವ ಜಿ ಪರಮೇಶ್ವರ್ ಮತ್ತು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಸೇರಿದಂತೆ ಪತ್ರಿಕೋದ್ಯಮದ ಎಲ್ಲಾ ಹಿರಿಯ ಪತ್ರಕರ್ತರು ಭಾಗಿಯಾಗಿದ್ದರು. ಇದೇ ವೇಳೆ ಸಚಿವ ಜಿ. ಪರಮೇಶ್ವರ್ ಮತ್ತು ಸುಧಾಮೂರ್ತಿ ಅವರಿಗೆ ಸನ್ಮಾನ ಮಾಡಲಾಯಿತು. ಹಾಗೆಯೇ ಸಚಿವ ಜಿ ಪರಮೇಶ್ವರ್ ಮತ್ತು ಸುಧಾಮೂರ್ತಿ ಅವರು ಸಾಧನೆ ಮಾಡಿರುವ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.

    ಪಬ್ಲಿಕ್ ಟಿವಿಯ ಬದ್ರುದ್ದೀನ್ ಕೆ. ಮಾಣಿ, ಕೆ.ಎನ್ ತಿಲಕ್ ಕುಮಾರ್, ರವಿ ಹೆಗಡೆ, ಕೆ.ಎಸ್.ಸಚ್ಚಿದಾನಂದ ಮೂರ್ತಿ (ಸಚ್ಚಿ), ತಿಮ್ಮಪ್ಪ ಭಟ್, ಎ.ಬಾಲಚಂದ್ರ, ವೆಂಕಟನಾರಾಯಣ, ರಾಮಣ್ಣ ಎಚ್. ಕೋಡಿ ಹೊಸಹಳ್ಳಿ, ತುಂಗಾ ರೇಣುಕ, ಕೆ.ವಿ.ಪ್ರಭಾಕರ್, ಡಿ.ಸಿ.ನಾಗೇಶ್, ರಾಜಶೇಖರ ಹತ್ ಗುಂದಿ, ವೇದಂ ಜಯಶಂಕರ್, ರಾಜಶೇಖರ ಅಬ್ಬೂರು, ಶಿವಾಜಿ ಗಣೇಶನ್ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಬದ್ರುದ್ದೀನ್ ಕೆ. ಮಾಣಿ, ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದರಿಂದ ನನ್ನ ಜವಾಬ್ದಾರಿ ಹೆಚ್ಚಾದಂತೆ ಅನಿಸುತ್ತಿದೆ. ಈ ಪ್ರಶಸ್ತಿಯನ್ನು ದೃಶ್ಯ ಮಾಧ್ಯಮದ ನನ್ನ ಎಲ್ಲಾ ಗೆಳೆಯರಿಗೆ ಸಮರ್ಪಿಸುತ್ತೇನೆ. ನನ್ನನ್ನು ಗುರುತಿಸಿ ಬೆಳೆಸಿದಂತಹ ಪಬ್ಲಿಕ್ ಟಿವಿಗೆ ನಾನು ಆಭಾರಿಯಾಗಿದ್ದೇನೆ. ಕಳೆದ ನಾಲ್ಕು ವರ್ಷದಿಂದ ರಾಜಕೀಯ ವಿಭಾಗದಲ್ಲಿ ನನಗೆ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಈ ಪ್ರಶಸ್ತಿಯು ನನ್ನ ಪಬ್ಲಿಕ್ ಟಿವಿ ಸಂಸ್ಥೆಗೂ ಸಲ್ಲುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv