Tag: Badavara Bandhu

  • ಬಡವರ ಬಂಧು ಸಾಲ ಮನ್ನಾ, ನರೇಗಾ ಕೂಲಿಕಾರ್ಮಿಕರಿಗೆ ಮುಂಗಡ ಹಣ- ಸಿಎಂ ಘೋಷಣೆ

    ಬಡವರ ಬಂಧು ಸಾಲ ಮನ್ನಾ, ನರೇಗಾ ಕೂಲಿಕಾರ್ಮಿಕರಿಗೆ ಮುಂಗಡ ಹಣ- ಸಿಎಂ ಘೋಷಣೆ

    ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ಬಡವರಿಗೆ ಹೊರೆ ಆಗದೇ ಇರಲು ರಾಜ್ಯ ಸರ್ಕಾರ ಹಲವು ಘೋಷಣೆಗಳನ್ನು ಪ್ರಕಟಿಸಿದೆ.

    ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಕೋವಿಡ್ 19 ಮಹಾಮಾರಿ ಕಾಣಿಸಿಕೊಂಡಿದೆ. ಹೀಗಾಗಿ 2 ತಿಂಗಳ ಪಡಿತರ ಮುಂಚಿತವಾಗಿ ಕೊಡುತ್ತಿದ್ದೇವೆ. 13.20 ಕೋಟಿ ರೂ ಬಡವರ ಬಂಧು ಸಾಲ ಮನ್ನಾ ಮಾಡಲಾಗುವುದು. ಸಾಮಾಜಿಕ ಭದ್ರತಾ ಪಿಂಚಣಿ ಮುಂಗಡವಾಗಿ ಕೊಡುತ್ತೇವೆ. ನರೇಗಾ ಕೂಲಿಕಾರರಿಗೆ ಎರಡು ತಿಂಗಳ ಮುಂಗಡ ಹಣ ನೀಡಲಾಗುವುದು ಎಂದು ಭರವಸೆ ನೀಡಿದರು.

    ಈ ವೈರಾಣು ನಿಯಂತ್ರಣಕ್ಕೆ ಸರ್ಕಾರವು ಶಕ್ತಿ ಮೀರಿ ಶ್ರಮಿಸುತ್ತಿದೆ. ಕೊರೊನಾಗೆ ದೇಶದಲ್ಲಿ ಮೊದಲ ಸಾವು ಕರ್ನಾಟಕದಲ್ಲೇ ಆಗಿದ್ದರೂ ಸೋಂಕು ಹರಡದಂತೆ ತಡೆದಿದ್ದೇವೆ. ನಮ್ಮ ಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಜನರು ಇಂತಹ ಪರಿಸ್ಥಿತಿಯಿಂದ ಬಹುಬೇಗ ಗುಣಮುಖರಾಗಿ ಹೊರಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

    ಇಂತಹ ಸಂದರ್ಭದಲ್ಲಿ ವಿಪಕ್ಷಗಳ ಸಹಕಾರ ಬೇಕಿತ್ತು. ಇಂದು ಅನಿವಾರ್ಯ ಕಾರಣದಿಂದ ಅವರು ಸದನದಿಂದ ಹೊರಗೆ ಇದ್ದಾರೆ. ಇದು ನೋವಿನ ಸಂಗತಿ. ನಾನು ಹಸಿರು ಟವಲ್ ಹಾಕಿ ಕೃಷಿ ಬಜೆಟ್ ಮಂಡಿಸಿ, ಕೇಸರಿ ಶಾಲು ಹಾಕಿ ಹೊರಗೆ ಓಡಾಡ್ತೀನಿ ಎಂದು ಟೀಕೆ ಮಾಡಿದ್ದಾರೆ. ಕೇಸರಿ ತ್ಯಾಗದ ಸಂಕೇತ ಎನ್ನುವುದು ಅವರಿಗೆ ಗೊತ್ತಿರಲಿ ಎಂದು ಸಿಎಂ ತಿಳಿಸಿದರು.

    ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದಿಂದ ಈ ಬಾರಿ 11,887 ಕೋಟಿ ರೂ. ಕಡಿತವಾಗಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದೇನೆ. ಹೀಗಾಗಿ ನಮ್ಮ ಪಾಲಿನ ಹಣ ಬಂದೇ ಬರುತ್ತದೆ ಎಂಬ ವಿಶ್ವಾಸವಿದೆ. ಕರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಸಾಲಿಗೆ ಸೇರಿದ ಕಾರಣದಿಂದಾಗಿ ಬಿಹಾರಕ್ಕಿಂತ ನಮಗೆ ಕಡಿಮೆ ಅನುದಾನ ದೊರಕಿದೆ. ಈ ತಾಂತ್ರಿಕ ಸಮಸ್ಯೆ ಬಗ್ಗೆ ಗಮನ ಹರಿಸುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ ಎಂದರು.

  • ಎಚ್‍ಡಿಕೆಗೆ ಯಡಿಯೂರಪ್ಪ ಶಾಕ್ – ಬಡವರ ಬಂಧು ಯೋಜನೆಗೆ ಎಳ್ಳುನೀರು?

    ಎಚ್‍ಡಿಕೆಗೆ ಯಡಿಯೂರಪ್ಪ ಶಾಕ್ – ಬಡವರ ಬಂಧು ಯೋಜನೆಗೆ ಎಳ್ಳುನೀರು?

    ಬೆಂಗಳೂರು: ರಾಜ್ಯ ಸರ್ಕಾರ ಖಜಾನೆ ಖಾಲಿ ನೆಪದಲ್ಲಿ ಕೆಲವು ಮಹತ್ವದ ಯೋಜನೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಈ ಪೈಕಿ ಕಳೆದ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಜಾರಿಗೆ ತಂದಿದ್ದ ಬಡವರ ಬಂಧು ಕಾರ್ಯಕ್ರಮಕ್ಕೆ ಎಳ್ಳುನೀರು ಬಿಡಲು ಬಿಜೆಪಿ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

    ಆರ್ಥಿಕ ಅಶಕ್ತರು, ಬೀದಿಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿಯಲ್ಲಿ ಸರ್ಕಾರವೇ ನಿತ್ಯ ಸುಮಾರು 10 ಸಾವಿರ ರೂ.ವರೆಗೂ ಕೈ ಸಾಲ ಕೊಡುವ ಮಹತ್ವದ ಯೋಜನೆ ಇದಾಗಿದೆ. ಖಾಸಗಿ ಲೇವದೇವಿದಾರರ ಶೋಷಣೆಯಿಂದ ಬೀದಿಬದಿ ವ್ಯಾಪಾರಿಗಳನ್ನು ರಕ್ಷಿಸುವ ಸಲುವಾಗಿ ಕುಮಾರಸ್ವಾಮಿ ಈ ಮಹತ್ವದ ಯೋಜನೆಯನ್ನು 2018ರ ನವೆಂಬರ್ 22 ರಂದು ಜಾರಿಗೊಳಿಸಿದ್ದರು.

    ಆರ್ಥಿಕ ಸಂಕಷ್ಟ, ರಾಜ್ಯದ ಪಾಲಿನ ಕೇಂದ್ರದ ತೆರಿಗೆ ಪಾಲು ಬಾರದಿವುದರಿಂದ ರಾಜ್ಯದ ಬೊಕ್ಕಸ ಬರಿದಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಸಮ್ಮಿಶ್ರ ಸರ್ಕಾರದ ಕೆಲವೊಂದು ಯೋಜನೆಗಳನ್ನು ಕೈಬಿಡಲು ಬಿಜೆಪಿ ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಬಡವರ ಬಂಧು ಯೋಜನೆಯು ಸಹ ಒಂದಾಗಿದೆ ಎಂದು ಹೇಳಲಾಗಿದೆ.

    ಬಡವರ ಬಂಧು ಯೋಜನೆ ಬಿಜೆಪಿ ಸರ್ಕಾರ ಬಂದಾಗಿನಿಂದ ಬಹುತೇಕ ನೆನಗುದಿಗೆ ಬಿದ್ದಿದೆ. ಇದೀಗ ಈ ಯೋಜನೆಗೆ ಸಂಪೂರ್ಣವಾಗಿ ಇತಿಶ್ರೀ ಹಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರವು ತೀರ್ಮಾನಿಸಿದೆ ಎನ್ನಲಾಗಿದೆ. ಇದೇ ಮಾರ್ಚ್ 5ರಂದು ಮಂಡಿಸಲಿರುವ ರಾಜ್ಯ ಬಜೆಟ್‍ನಲ್ಲಿ ಬಡವರ ಬಂಧು ಯೋಜನೆಯನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ಸಲದ ಬಜೆಟ್ ನಲ್ಲಿ ಬಡವರ ಬಂಧು ಯೋಜನೆಗೆ ಸರ್ಕಾರವು ಹಣ ನಿಗದಿ ಮಾಡುವುದಿಲ್ಲ ಎಂದು ತಿಳಿದುಬಂದಿದೆ.

    ಬೀದಿ ಬದಿ ವ್ಯಾಪಾರಿಗಳು, ತಳ್ಳುವ ಗಾಡಿ ಹೊಂದಿರುವ ವ್ಯಾಪಾರಿಗಳು, ಮೋಟಾರ್ ವಾಹನದಲ್ಲಿ ಪಾನೀಯ, ಊಟ, ತಿಂಡಿ, ಸಿಹಿ ಪದಾರ್ಥ ಮಾರಾಟ ಮಾಡುವವರು, ಹಣ್ಣು-ಹೂವು, ತರಕಾರಿ ಮಾರುವವರು, ರಸ್ತೆ ಬದಿ ಬುಟ್ಟಿ ವ್ಯಾಪಾರಿಗಳು, ಪಾದರಕ್ಷೆ ಸೇರಿದಂತೆ ಚರ್ಮದ ಉತ್ಪನ್ನಗಳ ರಿಪೇರಿ, ಮಾರಾಟ ಮಾಡುವವರು, ಆಟದ ಸಾಮಾನುಗಳು ಮತ್ತು ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು ಬಡವರ ಬಂಧು ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.

    ಯೋಜನೆ ಜಾರಿಯಾದ 2018-19ನೇ ಸಾಲಿನಲ್ಲಿ 50 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ ಬಡವರ ಬಂಧು ಯೋಜನೆ ಜಾರಿಯಾದ ಬಳಿಕ ಇದುವರೆಗೆ ಸುಮಾರು 11 ಸಾವಿರ ವ್ಯಾಪಾರಿಗಳಷ್ಟೇ ಯೋಜನೆಯ ಲಾಭ ಪಡೆದಿದ್ದಾರೆ. ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಯೋಜನೆ ಪಡೆದುಕೊಂಡಿದ್ದ ವೇಗ ಬಿಜೆಪಿ ಅಸ್ತಿತ್ವಕ್ಕೆ ಬಂದ ಬಳಿಕ ಕುಂಠಿತವಾಗಿತ್ತು. ಬಿಜೆಪಿ ಸರ್ಕಾರ ಬಂದ ಬಳಿಕ ಯೋಜನೆಗೆ ಸಮರ್ಪಕವಾಗಿ ಹಣ ಬಿಡುಗಡೆಯಾಗದೇ ಹಂತಹಂತವಾಗಿ ಯೋಜನೆ ಮಹತ್ವ ಕಳೆದುಕೊಳ್ಳುತ್ತಾ ಬಂದಿದೆ.

  • ರಾಜ್ಯ ಸರ್ಕಾರದ ಮಹತ್ವದ ‘ಬಡವರು ಬಂಧು’ ಯೋಜನೆಗೆ ಚಾಲನೆ

    ರಾಜ್ಯ ಸರ್ಕಾರದ ಮಹತ್ವದ ‘ಬಡವರು ಬಂಧು’ ಯೋಜನೆಗೆ ಚಾಲನೆ

    ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವ ಮೈತ್ರಿ ಸರ್ಕಾರದ ಮಹತ್ವದ ‘ಬಡವರ ಬಂಧು’ ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಇಂದು ಚಾಲನೆ ನೀಡಲಿದ್ದಾರೆ.

    ಗುರುವಾರ ಬೆಳಗ್ಗೆ 11 ಗಂಟೆಗೆ ನಗರದ ಯಶವಂತಪುರದ ಎಪಿಎಂಸಿ ಯಾರ್ಡ್ ನಲ್ಲಿ ಮುಖ್ಯಮಂತ್ರಿಗಳು ‘ಬಡವರ ಬಂಧು’ ಯೋಜನೆಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರು ನಗರವೊಂದರಲ್ಲೇ ಮೊದಲ ದಿನವೇ 53 ಸಾವಿರ ವರ್ತಕರಿಗೆ ನೆರವು ನೀಡಲಾಗುವುದು. ಈಗಾಗಲೇ ರಾಜ್ಯಾದ್ಯಂತ ಬಡವರ ಬಂಧು ಯೋಜನೆಯಡಿ ಸಾಲಕ್ಕಾಗಿ ಭಾರಿ ಬೇಡಿಕೆ ಬಂದಿದೆ. ಈ ಯೋಜನೆಯಿಂದ ಖಾಸಗಿ ಲೇವಾದೇವಿದಾರರ ಮೀಟರ್ ಬಡ್ಡಿ ದಂಧೆಯ ಮೇಲೆ ಕಡಿವಾಣ ಬೀಳುತ್ತದೆ ಎಂದು ಹೇಳಲಾಗುತ್ತಿದೆ.

    ಇದಲ್ಲದೇ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬಡವರ ಬಂಧು ಯೋಜನೆಗೆ ಒಂದೊಂದು ನೋಡಲ್ ಬ್ಯಾಂಕ್ ಗುರುತಿಸಲಾಗುತ್ತದೆ. ಈ ಬ್ಯಾಂಕುಗಳು ಆಯಾ ಜಿಲ್ಲೆಗಳಲ್ಲಿನ ಸಾಲ ಸೌಲಭ್ಯದ ಬ್ಯಾಂಕ್‍ಗಳನ್ನು ಸೂಚಿಸುತ್ತವೆ. ಬೆಂಗಳೂರಿನಲ್ಲಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್, ಜನತಾ ಕೋ-ಆಪರೇಟಿವ್ ಬ್ಯಾಂಕ್ ಹಾಗೂ ಬೆಂಗಳೂರು ಡಿಸಿಸಿ ಬ್ಯಾಂಕ್‍ಗಳನ್ನು ನೋಡಲ್ ಬ್ಯಾಂಕ್‍ಗಳಾಗಿ ಗುರುತಿಸಲಾಗಿದೆ. ಈ ಬ್ಯಾಂಕ್‍ಗಳು ಮೊಬೈಲ್ ಸರ್ವಿಸ್ ವ್ಯಾನ್‍ಗಳನ್ನು ಹೊಂದಲಿವೆ. ಸಣ್ಣ ವರ್ತಕರು ಬೆಳಗ್ಗೆ ಸಾಲ ಪಡೆದು ಸಂಜೆ ವಾಪಸ್ ಮಾಡಬಹುದಾಗಿದೆ.

    ಏನಿದು ಬಡವರ ಬಂಧು ಯೋಜನೆ?
    ವರ್ತಕರಿಗೆ ಶೂನ್ಯ ಬಡ್ಡಿದರದಲ್ಲಿ 10 ಸಾವಿರ ರೂ.ವರೆಗೆ ಸಾಲ ನೀಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಮೀಟರ್ ಬಡ್ಡಿ ದಂಧೆಗೆ ಶಾಶ್ವತ ಪರಿಹಾರ ನೀಡುವ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಬಡ್ಡಿ, ಸಾಲದ ಶೂಲಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು ‘ಬಡವರ ಬಂಧು’ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಇಂದ ಬೀದಿ ಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ಬಡ್ಡಿಯೇ ಇಲ್ಲದ ದಿನದ ಸಾಲ ಲಭ್ಯವಾಗಲಿದೆ. ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಗಳಿಗೆ ಇನ್ಮುಂದೆ ಸಿಗಲಿದೆ ಬಡ್ಡಿಯೇ ಇಲ್ಲದ ದಿನದ ಸಾಲ: ಏನಿದು ಬಡವರ ಬಂಧು ಯೋಜನೆ? ಯಾರು ಅರ್ಹರು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv