Tag: badarinath

  • ಚಾರ್ ಧಾಮ್ ಯಾತ್ರಾ 2024: ಬದರಿನಾಥದಲ್ಲಿ VIP ದರ್ಶನ ಸೌಲಭ್ಯ ಸ್ಥಗಿತ

    ಚಾರ್ ಧಾಮ್ ಯಾತ್ರಾ 2024: ಬದರಿನಾಥದಲ್ಲಿ VIP ದರ್ಶನ ಸೌಲಭ್ಯ ಸ್ಥಗಿತ

    – 26 ಲಕ್ಷ ದಾಟಿದೆ ನೋಂದಣಿ ಮಾಡಿಕೊಂಡವರ ಸಂಖ್ಯೆ

    ಡೆಹ್ರಾಡೂನ್:‌ ಚಾರ್ ಧಾಮ್ ಯಾತ್ರೆಗೆ (Char Dham Yatra 2024) ದೇಶ, ವಿದೇಶಗಳಿಂದ ಭಕ್ತರು ಹರಿದು ಬರುತ್ತಿದ್ದಾರೆ. ಯಾತ್ರೆಯ ನೋಂದಣಿ ಸಂಖ್ಯೆ ಈಗಾಗಲೇ 26 ಲಕ್ಷ ದಾಟಿದೆ. ಕಳೆದ ನಾಲ್ಕು ದಿನಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ವಿಐಪಿ (VIP) ದರ್ಶನ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಏಪ್ರಿಲ್ 15 ರಂದು ಚಾರ್ಧಾಮ್ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಅಂದಿನಿಂದ ಇದುವರೆಗೆ ರಾಜ್ಯದಲ್ಲಿ 26 ಲಕ್ಷಕ್ಕೂ ಹೆಚ್ಚು ಯಾತ್ರಿಕರು ನೋಂದಾಯಿಸಿಕೊಂಡಿದ್ದಾರೆ. ಯಾತ್ರಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಶ್ರಮಿಸುತ್ತಿದೆ. ಎಲ್ಲಾ ಅಧಿಕಾರಿಗಳು ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಗಂಭೀರವಾಗಿ ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.

    ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮೇ ತಿಂಗಳಲ್ಲಿ ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಯಾತ್ರೆಗಾಗಿ ಆನ್‌ಲೈನ್ ನೋಂದಣಿಗಳನ್ನು ಸಂಪೂರ್ಣವಾಗಿ ಬುಕ್ ಮಾಡಲಾಗಿದೆ. ಆನ್‌ಲೈನ್ ನೋಂದಣಿಗೆ ನಿಗದಿತ ಸಂಖ್ಯೆಯ ಸ್ಲಾಟ್‌ಗಳು ಲಭ್ಯವಿದೆ. ಪೂರ್ವ ನೋಂದಣಿ ಇಲ್ಲದೆ ಆಗಮಿಸುವ ಭಕ್ತರಿಗೆ ಅವಕಾಶ ಕಲ್ಪಿಸಲು, ರಾಜ್ಯ ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಹರಿದ್ವಾರ ಮತ್ತು ಋಷಿಕೇಶದಲ್ಲಿ ಅವರ ಅನುಕೂಲಕ್ಕಾಗಿ ಆಫ್‌ಲೈನ್ ನೋಂದಣಿ ಸೌಲಭ್ಯಗಳನ್ನು ಆಯೋಜಿಸಿದೆ.

    ಗಂಗೋತ್ರಿ ಯಾತ್ರಾ ಮಾರ್ಗದಲ್ಲಿ ಟ್ರಾಫಿಕ್: ಗೇಟ್ ವ್ಯವಸ್ಥೆ ಜಾರಿಯಿಂದಾಗಿ ಯಮುನೋತ್ರಿ ಮಾರ್ಗದಲ್ಲಿ ವ್ಯವಸ್ಥೆಗಳು ಸುಗಮವಾಗಿ ಕಾರ್ಯನಿರ್ವಹಿಸುತ್ತಿರುವಂತೆ ಕಂಡುಬಂದರೂ ಗಂಗೋತ್ರಿ ಮಾರ್ಗದಲ್ಲಿ ಸವಾಲುಗಳು ಎದುರಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದರಿಂದ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಗಂಗೋತ್ರಿ ಯಾತ್ರಾ ಮಾರ್ಗದಲ್ಲಿ ಗಂಗನಾನಿ ಮತ್ತು ಗಂಗೋತ್ರಿ ನಡುವೆ ಸುಮಾರು 60 ಕಿ.ಮೀ ವ್ಯಾಪಿಸಿರುವ ಟ್ರಾಫಿಕ್ ಜಾಮ್‌ನಲ್ಲಿ ಹಲವು ಪ್ರಯಾಣಿಕರ ವಾಹನಗಳು ಸಿಲುಕಿವೆ.

    ಹಿಂದಿರುಗಿದ ಭಕ್ತರು: ಸಂಚಾರ ದಟ್ಟಣೆಯಲ್ಲಿ ಸಿಲುಕಿದ ಅನೇಕ ಭಕ್ತರು ತಮ್ಮ ದರ್ಶನವನ್ನು ಪೂರ್ಣಗೊಳಿಸದೆ ಉತ್ತರಕಾಶಿಯಿಂದ ಹಿಂದಿರುಗಲು ನಿರ್ಧರಿಸಿದ್ದಾರೆ. ಕಳೆದ ಭಾನುವಾರ ಯಮುನೋತ್ರಿ ಯಾತ್ರಾ ಮಾರ್ಗದಲ್ಲಿ ಉಂಟಾದ ಭಾರೀ ಟ್ರಾಫಿಕ್‌ ಜಾಮ್‌ನಿಂದಾಗಿ ಭಕ್ತರು ಗಂಗೋತ್ರಿ ಧಾಮದ ಕಡೆಗೆ ಪ್ರಯಾಣ ಬೆಳೆಸಿದರು. ದಮ್ಲಾದಿಂದ ಪ್ರಾರಂಭವಾಗುವ ಬರ್ನಿಗಡ್ ಮತ್ತು ರಾಡಿ ಟಾಪ್ ಬೈಪಾಸ್‌ನಂತಹ ಪರ್ಯಾಯ ಮಾರ್ಗಗಳ ಮೂಲಕ ಪ್ರಯಾಣಿಕರು ಗಂಗೋತ್ರಿಯನ್ನು ತಲುಪಿದ್ದಾರೆ.

  • ಸಾಕು ನಾಯಿಯನ್ನು ಕೇದಾರನಾಥಕ್ಕೆ ಕರೆದೊಯ್ದಿದ್ದ ವ್ಯಕ್ತಿಯ ವಿರುದ್ಧ ಎಫ್‍ಐಆರ್

    ಸಾಕು ನಾಯಿಯನ್ನು ಕೇದಾರನಾಥಕ್ಕೆ ಕರೆದೊಯ್ದಿದ್ದ ವ್ಯಕ್ತಿಯ ವಿರುದ್ಧ ಎಫ್‍ಐಆರ್

    ಡೆಹ್ರಾಡೂನ್: ಕೇದಾರನಾಥ ದೇಗುಲದಲ್ಲಿರುವ ವಿಗ್ರಹವನ್ನು ನಾಯಿಯಿಂದ ಸ್ಪರ್ಶಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನೋಯ್ಡಾದ ವ್ಯಕ್ತಿಯ ವಿರುದ್ಧ ದೇಗುಲ ಸಮಿತಿ ಎಫ್‍ಐಆರ್ ದಾಖಲಿಸಿದೆ.

    ನೋಯ್ಡಾದ ವಿಕಾಶ್ ತ್ಯಾಗಿ ಅವರು ಸಾಕಿದ ಹಸ್ಕಿ ಎನ್ನುವ ನಾಯಿಯು ದೇವಾಲಯವನ್ನು ಪ್ರವೇಶಿಸಿತ್ತು. ವಿಕಾಶ್ ತ್ಯಾಗಿ ಅವರು ಚಾರ್‍ಧಾಮ್ ಯಾತ್ರೆಯ ಸಮಯದಲ್ಲಿ ತಮ್ಮ ಮುದ್ದಿನ ನಾಯಿ ಹಸ್ಕಿಯನ್ನು ಕಳೆದ 4 ವರ್ಷಗಳಿಂದ ಪವಿತ್ರ ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಿದ್ದರು.

    ಅಷ್ಟೇ ಅಲ್ಲದೇ ದೇವಸ್ಥಾನದ ಹೊರಗಿರುವ ನಂದಿ ವಿಗ್ರಹವನ್ನು ಅದರ ಕಾಲುಗಳಿಂದ ಸ್ಪರ್ಶಿಸಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಆದರೆ ಘಟನೆಯ ಬಗ್ಗೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮದ್ವೆಯಾಗಲೆಂದು ಹುಡುಗಿ ನೋಡ್ಕೊಂಡು ಬರಲು ಹೋದ ಯುವಕ ನೀರುಪಾಲು

    ಇದು ವಿವಾದವಾಗುತ್ತಿದ್ದಂತೆ ತ್ಯಾಗಿ ಹಸ್ಕಿ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬದರಿನಾಥ್ ಮತ್ತು ತುಂಗನಾಥದಲ್ಲಿ ತಮ್ಮ ನಾಯಿಯ ಹಳೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆ ವೀಡಿಯೋದಲ್ಲಿ ಹಸ್ಕಿಗೆ ಕೇದಾರನಾಥ ದೇಗುಲದಲ್ಲಿ ಅಲ್ಲಿನ ಅರ್ಚಕರೊಬ್ಬರು ತಿಲಕವನ್ನು ಇಟ್ಟಿದ್ದಾರೆ. ಅಷ್ಟೇ ಅಲ್ಲದೇ ದೇವಾಲಯ ಕಮಿಟಿ ವಿರುದ್ಧ ಕಿಡಿಕಾರಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಏನಿದೆ?:
    ನಾನು ಹಸ್ಕಿ ಮತ್ತು ನನಗೆ ಈಗ 4.5 ವರ್ಷ ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಅಪ್‍ಲೋಡ್ ಮಾಡಲಾಗಿದೆ. ನಾನು 4 ವರ್ಷಗಳಲ್ಲಿ ಪ್ರಯಾಣಿಸಿದಷ್ಟು, 70 ವರ್ಷ ವಯಸ್ಸಿನ ವ್ಯಕ್ತಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಏಕೆಂದರೆ ನನ್ನ ಪೋಷಕರು ನನ್ನನ್ನು ಎಲ್ಲೆಡೆ ಕರೆದುಕೊಂಡು ಹೋಗುತ್ತಾರೆ.

    ನನ್ನ ತಂದೆ ತಾಯಿಯರು ನನ್ನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದಲ್ಲ. ಆದರೆ ನನ್ನ ಹೆತ್ತವರು ಆ ಸಮಸ್ಯೆಯೊಂದಿಗೆ ಹೋರಾಡುತ್ತಾರೆ. ಆದರೆ ಯಾವಾಗಲೂ ನನ್ನನ್ನು ಕರೆದುಕೊಂಡು ಹೋಗುತ್ತಾರೆ ಎಂದು ಹಸ್ಕಿಯೇ ಹೇಳಿರುವ ರೀತಿಯಲ್ಲಿ ಶೀರ್ಷಿಕೆಯನ್ನು ಹಾಕಿದ್ದಾರೆ. ಇದನ್ನೂ ಓದಿ: ಚಾರ್ ಧಾಮ್ ಯಾತ್ರೆ – ಇಲ್ಲಿ ವರೆಗೆ 46 ಯಾತ್ರಿಕರು ಹೃದಯಾಘಾತದಿಂದ ಸಾವು

    ಈ ಬಗ್ಗೆ ಮಾತನಾಡಿದ ಬದರಿನಾಥ್ ಕೆದರನಾಥ್ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ್ ಮಾತನಾಡಿ, ಕೋಟಿಗಟ್ಟಲೆ ಜನರು ಬಾಬಾ ಕೇದಾರನಾಥದಲ್ಲಿ ನಂಬಿಕೆ ಹೊಂದಿದ್ದಾರೆ. ಯೂಟ್ಯೂಬರ್ ವಿಕಾಶ್ ತ್ಯಾಗಿಯ ಇಂತಹ ಚಟುವಟಿಕೆಗಳಿಂದ ಅನೇಕರ ಭಾವನೆಗಳಿಗೆ ಘಾಸಿಯಾಗಿದೆ. ಈ ಜನರಿಗೆ ಯಾವುದೇ ಭಕ್ತಿ ಇಲ್ಲ, ಅವರು ಹಿನ್ನೆಲೆಯಲ್ಲಿ ಬಾಲಿವುಡ್ ಹಾಡುಗಳನ್ನು ಪ್ಲೇ ಮಾಡುವ ರೀಲ್‍ಗಳು ಮತ್ತು ವೀಡಿಯೋಗಳನ್ನು ಚಿತ್ರೀಕರಿಸಲು ಮಾತ್ರ ಇಲ್ಲಿಗೆ ಬರುತ್ತಾರೆ. ಬಾಬಾ ಕೇದಾರನಾಥನ ಆಶೀರ್ವಾದ ಪಡೆಯಲು ಬರುವ ಯಾತ್ರಾರ್ಥಿಗಳಿಗೆ ಇದು ಅಡ್ಡಿಯಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

  • ಬದರಿನಾಥದ ವಿಷ್ಣುಪ್ರಯಾಗ ಬಳಿ ಭಾರೀ ಭೂಕುಸಿತ- ಸಂಕಷ್ಟದಲ್ಲಿ ಸಾವಿರಾರು ಕನ್ನಡಿಗರು

    ಬದರಿನಾಥದ ವಿಷ್ಣುಪ್ರಯಾಗ ಬಳಿ ಭಾರೀ ಭೂಕುಸಿತ- ಸಂಕಷ್ಟದಲ್ಲಿ ಸಾವಿರಾರು ಕನ್ನಡಿಗರು

    ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಪ್ರಯಾಗ ಬಳಿ ಭಾರೀ ಭೂ ಕುಸಿತ ಸಂಭವಿಸಿದೆ. ರಿಷಿಕೇಶ್ ಹಾಗೂ ಬದರೀನಾಥ್ ಸಂಪರ್ಕ ಕಲ್ಪಿಸುವ ಹೈವೇಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಕನ್ನಡಿಗರು ಸೇರಿದಂತೆ ಸಾವಿರಾರು ಯಾತ್ರಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ.

    ಹಾಥಿ ಪಹಾರ್ ಪರ್ವತದಿಂದ ಭಾರಿ ಗಾತ್ರದ ಬಂಡೆಗಳು ರಸ್ತೆಗೆ ಕುಸಿದು ಬಿದ್ದಿವೆ. ಚಮೋಲಿ ಜಿಲ್ಲೆಯ ಜೋಶಿ ಮಠದಿಂದ 5 ಕಿ.ಮೀ ದೂರದಲ್ಲಿ ಈ ಅನಾಹುತ ನಡೆದಿದೆ.

    ದೇವಾಲಯಕ್ಕೆ ತೆರಳುವ ದಾರಿ ಸಂಪೂರ್ಣ ಬಂದ್ ಆಗಿ ಎರಡೂ ಕಡೆಗಳಲ್ಲಿ ಸಾವಿರಕ್ಕೂ ಹೆಚ್ಚು ವಾಹನಗಳು ನಿಂತಿವೆ. ಜೋಶಿಮಠ, ಕರ್ಣಪ್ರಯಾಗ, ಪೀಪಲ್‍ಕೋಟಿ, ಗೋವಿಂದಘಾಟ್ ಮತ್ತು ಬದರಿನಾಥದಲ್ಲಿರುವ 20 ಸಾವಿರದಿಂದ 25 ಸಾವಿರ ಯಾತ್ರಿಕರಿಗೆ ಎಲ್ಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

    ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಕಲ್ಲು-ಮಣ್ಣು ತೆರವು ಕಾರ್ಯ ಸಮರೋಪಾದಿಯಲ್ಲಿ ಸಾಗಿದ್ದು, ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಹರ ಸಾಹಸ ನಡೆಯುತ್ತಿದೆ. ಇದೊಂದು ಭಾರೀ ಪ್ರಮಾಣದ ಭೂಕುಸಿತವಾಗಿದ್ದು, ದೊಡ್ಡ ದೊಡ್ಡ ಕಲ್ಲುಬಂಡೆಗಳು ರಸ್ತೆಯ ಮೇಲೆ ಬಿದ್ದಿವೆ. ಈ ಭೂ ಕುಸಿತವನ್ನು ತೆರವು ಮಾಡಲು ಇನ್ನೂ 2 ದಿನಗಳು ಬೇಕಾಗಬಹುದು. ಆದರೂ, ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ ಎಂದು ತೆರವು ಕಾರ್ಯಾಚರಣೆಯಲ್ಲಿ ನಿರತರಾಗಿರುವ ಗಡಿ ರಸ್ತೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

    ಸಿಎಂ ಸೂಚನೆ: ಅಪಾಯಕ್ಕೆ ಸಿಲುಕಿರುವ ಕನ್ನಡಿಗರ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಈ ಸಂಬಂಧ ಉತ್ತರಾಖಂಡ್ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತುಕತೆ ನಡೆಸುವಂತೆ ತಿಳಿಸಿದ ಅವರು, ಅಗತ್ಯವಿದ್ರೆ ಅಧಿಕಾರಿಗಳ ತಂಡವನ್ನು ಕಳುಹಿಸಿ ಎಂದು ಸೂಚಿಸಿದ್ದಾರೆ.