ಆನೇಕಲ್: ಬಹಿರಂಗ ವೇದಿಕೆಯೊಂದರಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಸಂಸದ ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡಗೆ ಚಾಲೆಂಜ್ ಮಾಡಿದ್ದು, ಹೊಸಕೋಟೆಯಲ್ಲಿ ಇನ್ನೂ ಫೈಟ್ ಮುಗಿದಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಎಂಟಿಬಿ, ನಿಮ್ಮಿಬ್ಬರ ಅನುದಾನದಲ್ಲಿ ನಡೆಯುವ ಕಾಮಗಾರಿಯ ಪೂಜೆ ನೀವು ಮಾಡಿ. ಜನರಿಗೆ ಯಾರ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬುದು ತಿಳಿಯಲಿ. ನಾನು ತಂದ ಅನುದಾನದ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ ಭಾಗವಹಿಸಿ ತಮ್ಮ ಅನುದಾನ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಎಂಟಿಬಿ ಟಾಂಗ್ ನೀಡಿದರು.

ಶಾಸಕರ ನಿಧಿ ಕೇವಲ 50 ಲಕ್ಷ ಮಾತ್ರ ಇದೆ. ಈಗ ನಡೆಯುತ್ತಿರೋ ಕಾಮಗಾರಿಗಳು ಕೋಟಿ ಲೆಕ್ಕದ ಅನುದಾನ ನಾನು ತಂದದ್ದು. ಇನ್ನು ಕೇವಲ 25 ದಿನದಲ್ಲಿ 20 ಕೋಟಿ ಅನುದಾನ ಬರುತ್ತೆ. ಅದರಲ್ಲಿ ಹೊಸಕೋಟೆಯ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಮಾಡಲಾಗುತ್ತೆ. ನಾನು 3 ಬಾರಿ ಶಾಸಕನಾಗಿದ್ದವನು, 6 ತಿಂಗಳು ಮಂತ್ರಿ ಆಗಿದ್ದಾಗ ತಂದ ಅನುದಾನವಾಗಿದೆ ಎಂದರು.
ಕಾವೇರಿ ನೀರು ಹೊಸಕೋಟೆಗೆ ಕೊಡಲು ಯಡಿಯೂರಪ್ಪ ಒಪ್ಪಿದ್ದಾರೆ. ಈ ಕೆಲಸಗಳು ನನ್ನ ಅನುದಾನದಲ್ಲಿ ಬಂದವು. ಅಪ್ಪ ಲೋಕಸಭಾ ಸದಸ್ಯ, ಮಗ ಶಾಸಕ ಇವರಿಬ್ಬರೂ ಹೊಸಕೋಟೆಗೆ ಕೊಟ್ಟ ಅನುದಾನ ಬಹಿರಂಗಪಡಿಸಲಿ ಎಂದು ಅಪ್ಪ- ಮಗನಿಗೆ ಎಂಟಿಬಿ ಸವಾಲೆಸೆದರು.























