Tag: Bache Gowda

  • ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಚ್ಚೇಗೌಡ ರಾಜೀನಾಮೆ

    ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಚ್ಚೇಗೌಡ ರಾಜೀನಾಮೆ

    ಬೆಂಗಳೂರು: ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ (B.N.Bache Gowda) ಬಿಜೆಪಿ (BJP) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು ರಾಜ್ಯಾಧ್ಯಕ್ಷ ವಿಜಯೇಂದ್ರಗೆ (Vijayendra) ರಾಜೀನಾಮೆ ಪತ್ರ ರವಾನಿಸಿದ್ದಾರೆ.

    ಕಳೆದ ವರ್ಷದ ಆಗಸ್ಟ್‌ನಲ್ಲಿ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದ ಬಚ್ಚೇಗೌಡ ಈಗ ಅಧಿಕೃತವಾಗಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: 5,8,9 ತರಗತಿಗೆ ಪರೀಕ್ಷೆ ಯಾವಾಗ? – ಗೊಂದಲದಲ್ಲಿ ವಿದ್ಯಾರ್ಥಿಗಳು, ಪೋಷಕರು

     

    ಚುನಾವಣಾ (Election) ರಾಜಕೀಯದಿಂದ ದೂರ ಇರಲು ನಿರ್ಧಾರ ಮಾಡಿದ್ದರೂ ಸಕ್ರಿಯ ರಾಜಕಾರಣದಲ್ಲಿಯೇ ಬಚ್ಚೇಗೌಡ ಇರಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಯಾರ ಪರವಾಗಿಯೂ ಕೆಲಸ ಮಾಡದಿರಲು ಬಚ್ಚೇಗೌಡ ನಿರ್ಧರಿಸಿದ್ದಾರೆ.
    ಇದನ್ನೂ ಓದಿ: ಐಪಿಎಲ್‌ ಹಬ್ಬದಲ್ಲಿ ಏನೆಲ್ಲಾ ವಿಶೇಷ – ಚೊಚ್ಚಲ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿ ಆರ್‌ಸಿಬಿ ಕಲಿಗಳು

    ಚಿಕ್ಕಬಳ್ಳಾಪುರ (Chikkaballapura) ಕ್ಷೇತ್ರದಲ್ಲಿ ಬಚ್ಚೇಗೌಡರ ಗೆಲುವಿನ ಮೂಲಕವೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿತ್ತು.ಬಚ್ಚೇಗೌಡರ ಪುತ್ರ ಶರತ್‌ ಬಚ್ಚೇಗೌಡ ಕಾಂಗ್ರೆಸ್‌ ಸೇರ್ಪಡೆಯಾಗಿದ್ದು ಹೊಸಕೋಟೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

    2019ರ ಲೋಕಸಭಾ ಚುನಾವಣೆಯಲ್ಲಿ ಬಚ್ಚೇಗೌಡ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ಅವರನ್ನು 1,82,110 ಮತಗಳ ಅಂತರದಿಂದ ಸೋಲಿಸಿದ್ದರು. ಬಚ್ಚೇಗೌಡ ಅವರಿಗೆ 7,45,912 ಮತಗಳು ಬಿದ್ದರೆ ಮೊಯ್ಲಿ ಅವರಿಗೆ 5,63,802 ಮತಗಳು ಬಿದ್ದಿದ್ದವು.

     

  • ಉಪಚುನಾವಣೆ ಟಿಕೆಟ್ ಫೈಟ್ – ಹೊಸಕೋಟೆ ಟಿಕೆಟ್‍ಗಾಗಿ ಶರತ್ ಬಚ್ಚೇಗೌಡ ಪಟ್ಟು

    ಉಪಚುನಾವಣೆ ಟಿಕೆಟ್ ಫೈಟ್ – ಹೊಸಕೋಟೆ ಟಿಕೆಟ್‍ಗಾಗಿ ಶರತ್ ಬಚ್ಚೇಗೌಡ ಪಟ್ಟು

    ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ರೆಬೆಲ್ ಶಾಸಕರು ಬಿಜೆಪಿ ಸೇರ್ಪಡೆಯಾಗಲು ಸಿದ್ಧತೆ ನಡೆಸಿದ್ದಾರೆ. ಆದರೆ ಅನರ್ಹ ಶಾಸಕರು ಪಕ್ಷ ಸೇರ್ಪಡೆಗೆ ಬಿಜೆಪಿಯಲ್ಲೇ ಅಪಸ್ವರ ಮೂಡಿದೆ. ಅದರಲ್ಲೂ ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ತಮಗೆ ಪಕ್ಷದ ನೀಡಬೇಕು ಎಂದು ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಬಚ್ಚೇಗೌಡ ಪಟ್ಟು ಹಿಡಿದಿದ್ದಾರೆ.

    ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ರಾಜಕಾರಣದಲ್ಲಿ ಹಲವು ದಿನಗಳಿಂದ ವಿವಿಧ ಬೆಳವಣಿಗೆಗಳು ನಡೆಯುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿ ನಡೆಯಲಿದೆ ಎಂದು ಚರ್ಚೆ ಮಾಡುವುದು ಅನಗತ್ಯ ಎಂದರು.

    ಕ್ಷೇತ್ರದಲ್ಲಿ ಪಕ್ಷದ ಪರ ಕೆಲಸ ಮಾಡಿ ಸಂಘಟನೆಯ ಕಾರ್ಯವನ್ನು ಮಾಡಿದ್ದೇವೆ. ಪಕ್ಷದ ಬಗ್ಗೆ ನಮಗೆ ನಂಬಿಕೆ ಇದ್ದು, ನಮಗೆ ಟಿಕೆಟ್ ಲಭಿಸುವ ವಿಶ್ವಾಸ ಇದೆ. ಕಳೆದ ಚುನಾವಣೆಲ್ಲಿ 90 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೇವು. ಲೋಕಸಭಾ ಚುನಾವಣೆಯಲ್ಲೂ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ಪಡೆದಿದ್ದೇವೆ. ನಾನು ಪಕ್ಷದ ಟಿಕೆಟ್ ಕೇಳಿದ್ದೇನೆ. ಟಿಕೆಟ್ ಸಿಗುವ ವಿಶ್ವಾಸ ಇದೆ ಎಂದರು.

    ಎಂಟಿಬಿ ನಾಗರಾಜ್ ಅವರು ಬಿಜೆಪಿಗೆ ಬಂದರೆ ಅಲ್ಲಿನ ಬಿಜೆಪಿ ಕಾಯಕರ್ತರು ಏನು ಮಾಡಲಿದ್ದಾರೆ ಎಂಬುವುದು ಕುತೂಹಲ ಮೂಡಿಸಿದೆ. ಈ ಹಿಂದೆ ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಹಾಗೂ ಬಚ್ಚೇಗೌಡ ಅವರ ಕುಟುಂಬಗಳ ನಡುವೆ ನೇರ ಸ್ಪರ್ಧೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಮಗೆ ಟಿಕೆಟ್ ನೀಡಿ ಎಂದು ಬಚ್ಚೇಗೌಡ ಅವರು ಸಿಎಂ ಬಿಎಸ್‍ವೈ ಅವರ ಮೇಲೆ ಒತ್ತಡ ತಂದಿದ್ದಾರೆ ಎನ್ನಲಾಗಿದೆ. ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಮಾಡಿರುವುದು ನಾವು, ನಮಗೆ ಟಿಕೆಟ್ ಕೊಡಬೇಕು ಎಂಬುವುದು ಬಚ್ಚೇಗೌಡ ವಾದ ಎನ್ನಲಾಗಿದೆ. ಈ ನಡೆ ಬಿಎಸ್‍ವೈ ಅವರಿಗೆ ಹೊಸ ತಲೆನೋವು ತಂದಿದ್ದು, ಈಗಾಗಲೇ ಎಂಟಿಬಿ ನಾಗರಾಜ್ ಹಾಗೂ ಡಿಕೆ ಶಿವಕುಮಾರ್ ಅವರು ಹೊಸಕೋಟೆ ಚುನಾವಣಾ ಕಣದಲ್ಲಿ ಎದುರಿಸುವುದಾಗಿ ಸವಾಲು ನೀಡಿದ್ದಾರೆ.

  • ಎತ್ತಿನ ಹೊಳೆ ನೀರು ಬಂತು, ಬಂತು..! ಮೊಯ್ಲಿ ಕನಸಿನಲ್ಲಿ: ಬಚ್ಚೇಗೌಡ ವಾಗ್ದಾಳಿ

    ಎತ್ತಿನ ಹೊಳೆ ನೀರು ಬಂತು, ಬಂತು..! ಮೊಯ್ಲಿ ಕನಸಿನಲ್ಲಿ: ಬಚ್ಚೇಗೌಡ ವಾಗ್ದಾಳಿ

    ಚಿಕ್ಕಬಳ್ಳಾಪುರ: ಕ್ಷೇತ್ರ ಹಾಲಿ ಸಂಸದರಾಗಿರುವ ವೀರಪ್ಪ ಮೊಯ್ಲಿ ಅವರು ಕಳೆದ 2 ಅವಧಿಗಳಿಂದ ನೀರು ಬಂತು ಬಂತು ಎಂದು ಜನರಿಗೆ ಸುಳ್ಳು ಹೇಳಿದ್ದಾರೆ. ಎತ್ತಿನ ಹೊಳೆ ನೀರು ಅವರ ಕನಸಿನಲ್ಲಿ ಬಂದಿದೆ ಅಷ್ಟೇ. ಆದರೆ ಈ ಬಾರಿ ಮೋದಿ ಸರ್ಕಾರ ಬರುತ್ತೆ, ನಾನು ನೀರು ತರುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಹೇಳಿದ್ದಾರೆ.

    ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಒರ್ವ ಸುಳ್ಳುಗಾರ, ಎರಡು ಬಾರಿ ಗೆದ್ದು ಸಂಸದರಾದ ವೀರಪ್ಪ ಮೊಯ್ಲಿ ಈ ಭಾಗಕ್ಕೆ ನೀರು ಕೊಡುತ್ತೇನೆ ಎಂದು ಕಾಲ ಕಳೆದಿದ್ದಾನೆ. ಆದರೆ ನಮ್ಮ ಭಾಗಕ್ಕೆ ನೀರು ಕೊಡಲಿಲ್ಲ. 2 ದಿನಗಳ ಹಿಂದೆಯಷ್ಟೇ ಮಾತನಾಡಿ ಮತ್ತೆ ನೀರು ಕೊಡುತ್ತೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ವೀರಪ್ಪಮೊಯ್ಲಿ ಎತ್ತಿನಹೊಳೆ ನೀರು ಬಂತು ಬಂತು ಅಂತಿದ್ದು, ಅವನ ಕನಸಿನಲ್ಲಿ ಎತ್ತಿನಹೊಳೆ ಬಂದಿರಬೇಕು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

    ಕಳೆದ ಬಾರಿ ಚುನಾವಣೆ ವೇಳೆ ಎತ್ತಿನಹೊಳೆ ಯೋಜನೆಗೆ ಭಾರೀ ಪ್ರಮಾಣದಲ್ಲಿ ಪೂಜೆ ಮಾಡಿದ್ದು ಬಿಟ್ಟರೆ ಏನು ಅಭಿವೃದ್ಧಿ ಆಗಿಲ್ಲ. ಎತ್ತಿನಹೊಳೆ ಯೋಜನೆ 5 ವರ್ಷ ಆಗುತ್ತೋ 10 ವರ್ಷ ಆಗುತ್ತೋ ಗೊತ್ತಿಲ್ಲ. ಆದರೆ ಈ ಬಾರಿ ಮೋದಿ ಸರ್ಕಾರ ಬಂದೇ ಬರುತ್ತೆ, ನಾನು ನಿಮಗೆ ನೀರು ಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.

    ಹಾಲಿ ಸಂಸದರಾಗಿರುವ ವೀರಪ್ಪ ಮೊಯ್ಲಿ ಅವರು ನಿನ್ನೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಆಂಧ್ರಪ್ರದೇಶದ ಸರ್ಕಾರ ಕೈಗೊಂಡಿರುವ ನೀರಾವರಿ ಯೋಜನೆ ಮೂಲಕ ಅನಂತಪುರಕ್ಕೆ ಬಂದಿರುವ ಕೃಷ್ಣ ನದಿ ನೀರನ್ನು ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸಲು ಕ್ರಮ ಕೈಗೊಳ್ಳುವ ಚಿಂತನೆ ಇದೆ ಎಂದಿದ್ದರು.