Tag: Baby

  • ನವಜಾತ ಮಗುವನ್ನು ದೇವಸ್ಥಾನದಲ್ಲಿ ಬಿಟ್ಟು ಹೋದ ತಾಯಿ

    ನವಜಾತ ಮಗುವನ್ನು ದೇವಸ್ಥಾನದಲ್ಲಿ ಬಿಟ್ಟು ಹೋದ ತಾಯಿ

    ಧಾರವಾಡ: ನವಜಾತ ಹೆಣ್ಣು ಮಗುವನ್ನು ತಾಯಿಯೊಬ್ಬಳು ನಗರದ ಕೃಷಿ ವಿವಿ ಬಳಿಯ ಬಸವೇಶ್ವರ ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾಳೆ.

    ದೇವಸ್ಥಾನದ ಬಳಿ ಮಗು ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮಗುವನ್ನು 108 ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ನವಜಾತು ಮಗು ಜಿಲ್ಲಾಸ್ಪತ್ರೆಯಲ್ಲಿ ಆರೈಕೆಯಲ್ಲಿದೆ. ಮಗು ಆರೋಗ್ಯವಾಗಿದ್ದು, ಅದನ್ನ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರ ಮಾಡಲಾಗುತ್ತಿದೆ. ಇನ್ನು ಈ ಮಗು 7 ರಿಂದ 8 ದಿನಗಳ ಹಿಂದೆಯೇ ಹುಟ್ಟಿದೆ ಎಂದು ಆಸ್ಪತ್ರೆಯ ವೈದ್ಯ ಗಿರಿಧರ್ ಹೇಳಿದ್ದಾರೆ.

     

  • 10 ತಿಂಗಳ ಮಗುವಿನ ಬೆನ್ನಿಗೆ ಅಂಟಿಕೊಂಡಿದ್ದ ಅವಳಿ ಮಗುವಿನ ಅಂಗಾಂಗ ಬೇರ್ಪಡಿಸಿದ ವೈದ್ಯರು

    10 ತಿಂಗಳ ಮಗುವಿನ ಬೆನ್ನಿಗೆ ಅಂಟಿಕೊಂಡಿದ್ದ ಅವಳಿ ಮಗುವಿನ ಅಂಗಾಂಗ ಬೇರ್ಪಡಿಸಿದ ವೈದ್ಯರು

    ಚಿಕಾಗೋ: 10 ತಿಂಗಳ ಹೆಣ್ಣು ಮಗುವಿನ ಬೆನ್ನಿಗೆ ಅಂಟಿಕೊಂಡಿದ್ದ ಅವಳಿ ಮಗುವಿನ ಅಂಗಾಂಗಗಳನ್ನ ಬೇರ್ಪಡಿಸಿ ತೆಗೆಯುವಲ್ಲಿ ಚಿಕಾಗೋ ವೈದ್ಯರು ಯಶಸ್ವಿಯಾಗಿದ್ದಾರೆ.

    ಪುಟ್ಟ ಮಗು ಡೊಮಿನಿಕ್ಯೂ ಹುಟ್ಟಿದಾಗಿನಿಂದಲೂ ಸಂಪೂರ್ಣವಾಗಿ ಬೆಳವಣಿಯಾಗದ ಕಾರಣ ಅವಳಿ ಮಗುವಿನ ಕಾಲುಗಳನ್ನ ಬೆನ್ನಿನಲ್ಲಿ ಹೊತ್ತುಕೊಂಡಿತ್ತು.

    ಈ ರೀತಿ ಒಂದು ಮಗುವಿನ ದೇಹದಲ್ಲಿ ಕೂಡಿಕೊಂಡ ಅವಳಿ ಮಗುವನ್ನು ವೈದ್ಯರು ಪ್ಯರಾಸಿಟಿಕ್ ಟ್ವಿನ್(ಪರಾವಲಂಬಿ ಅವಳಿ ಮಗು) ಎಂದು ಕರೆದಿದ್ದು, ಈ ರೀತಿಯ ಪ್ರಕರಣಗಳು ತುಂಬಾ ವಿರಳ ಎಂದಿದ್ದಾರೆ. ಅದರಲ್ಲೂ ಬೆನ್ನು ಮೂಳೆಯಲ್ಲಿ ಕೂಡಿಕೊಂಡ ಅವಳಿ ಮಕ್ಕಳ ಪ್ರಕರಣ ಅತ್ಯಂತ ವಿರಳ. ಇಂತಹ ಪ್ರಕರಣಗಳು ವರದಿಯಾಗಿರುವುದು 30ಕ್ಕಿಂತ ಕಡಿಮೆ ಎಂದಿದ್ದಾರೆ.

    10 ತಿಂಗಳ ಮಗು ಡೊಮಿನಿಕ್ಯೂವನ್ನು ಶಸ್ತ್ರಚಿಕಿತ್ಸೆಗಾಗಿ ಫೆಬ್ರವರಿಯಲ್ಲಿ ವೆಸ್ಟ್ ಆಫ್ರಿಕಾದ ಐವರಿ ಕೋಸ್ಟ್‍ನಿಂದ 5 ಸಾವಿರ ಮೈಲಿ ದೂರದ ಚಿಕಾಗೋದ ಅಡ್ವೋಕೇಟ್ ಚಿಲ್ಡ್ರೆನ್ಸ್ ಹಾಸ್ಪಿಟಲ್‍ಗೆ ಕರೆತರಲಾಗಿತ್ತು. ಡೊಮಿನಿಕ್ಯೂ ಪೋಷಕರು ಮಗುವಿನ ಶಸ್ತ್ರಚಿಕಿತ್ಸೆಗಾಗಿ ಚಿಕಾಗೋದಲ್ಲಿ ಉಳಿದುಕೊಳ್ಳಲು ಸ್ವಾಬ್ ಎಂಬವರು ಸಹಾಯ ಮಾಡಿದ್ರು.

    ಡೊಮಿನಿಕ್ಯೂ ದೇಹಕ್ಕೆ ಅಂಟಿಕೊಂಡ ಅವಳಿ ಮಗುವಿನ ಅಂಗಾಗವನ್ನು ತೆಗೆಯಲು ಶಸ್ತ್ರಚಿಕಿತ್ಸೆ ಅಗತ್ಯ. ಇಲ್ಲವಾದ್ರೆ ಅವಳಿ ಮಗುವಿನ ಕಾಲುಗಳಿಗೆ ಶಕ್ತಿ ನೀಡಲು ಅದರ ಹೃದಯ ಹಾಗೂ ಶ್ವಾಸಕೋಶಗಳಿಗೆ ಕಷ್ಟವಾಗಿ ಡೊಮಿನಿಕ್ಯೂ ಹೆಚ್ಚು ದಿನ ಬದುಕಲಾರದು ಅಂತ ವೈದ್ಯರು ಹೇಳಿದ್ದರು. ವೈದ್ಯರು ಡೊಮಿನಿಕ್ಯೂಗೆ ಹಲವು ರೀತಿಯ ವೈದ್ಯಕೀಯ ಪರೀಕ್ಷೆಗಳನ್ನ ಮಾಡಿದ್ರು. ಅವಳಿ ಮಗುವಿನ ಸೊಂಟದ ಭಾಗ, ಮೂತ್ರಕೋಶ, ಕಾಲುಗಳು ಹಾಗೂ ಬೆನ್ನುಮೂಳೆ ಡೊಮಿನಿಕ್ಯೂ ದೇಹಕ್ಕೆ ಅಂಟಿಕೊಂಡಿತ್ತು. ಇದನ್ನು ಬೇರ್ಪಡಿಸುವುದು ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಹೀಗಾಗಿ ಡೊಮಿನಿಕ್ಯೂನ 3ಡಿ ಮಾಡೆಲ್ ತಯಾರಿಸಿ ಹೇಗೆ ಶಸ್ತ್ರಚಿಕಿತ್ಸೆ ಮಾಡಬಹುದು ಎಂಬುದನ್ನ ವೈದ್ಯರು ಪ್ರಯೋಗ ಮಾಡಿದ್ದರು.

    ಅವಳಿ ಮಗುವಿನ ಕಾಲುಗಳು ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿದ್ದು, ಅದರ ನರ ಡೊಮಿನಿಕ್ಯೂ ಬೆನ್ನು ಮೂಳೆಯೊಂದಿಗೆ ಜೋಡಣೆಯಾಗಿತ್ತು. ಹೀಗಾಗಿ ಬೆನ್ನು ಮೂಳೆಯ ಮೇಲೆ ಒತ್ತಡ ಉಂಟಾದ್ರೆ ಡೊಮಿನಿಕ್ಯೂ ಪಾಶ್ರ್ವವಾಯುವಿಗೆ ತುತ್ತಾಗುವ ಸಂಭವವಿತ್ತು. ಹೀಗಾಗಿ ವೈದ್ಯರು ಅತ್ಯಂತ ಎಚ್ಚರಿಕೆಯಿಂದ 6 ಗಂಟೆಗಳ ಕಾಲ ಮಗುವಿನ ಶಸ್ತ್ರಚಿಕಿತ್ಸೆ ಮಾಡಿದ್ರು. ಸೊಂಟದ ಭಾಗ, ನರ ಹಾಗೂ ರಕ್ತನಾಳಗಳನ್ನ ಕಡಿತಗೊಳಿಸಿ ನಂತರ ಡೊಮಿನಿಕ್ಯೂ ದೇಹಕ್ಕೆ ಅಂಟಿಕೊಂಡಿದ್ದ ಅವಳಿ ಮಗುವಿನ ಅಂಗಾಂಗಗಳನ್ನು ಹೊರತೆಗೆದರು.

    ಈಗ ಡೊಮಿನಿಕ್ಯೂ ಕತ್ತಿನ ಭಾಗದಲ್ಲಿ ಊದಿಕೊಂಡಿರೋದು ಬಿಟ್ಟರೆ ಸಾಮಾನ್ಯ ಮಗುವಿನಂತೆಯೇ ಕಾಣುತ್ತಿದೆ. ಆದರೆ ದೇಹದೊಳಗೆ ಇನ್ನೂ ಕೆಲವು ನ್ಯೂನತೆಗಳಿವೆ. ಶೀಘ್ರದಲ್ಲೇ ಮಗು ಗುಣಮುಖವಾಗಿ ಸಾಮಾನ್ಯ ಮಕ್ಕಳಂತೆ ಬದುಕಬೇಕೆಂದು ಬಯಸುತ್ತೇವೆ ಅಂತ ವೈದ್ಯರು ಹೇಳಿದ್ದಾರೆ.

  • ಅಂಬುಲೆನ್ಸ್ ಗೆ ಎಕ್ಸ್ ಪ್ರೆಸ್ ರೈಲು ಡಿಕ್ಕಿ – ಬಾಣಂತಿ ಸೇರಿ ನಾಲ್ವರು ದುರ್ಮರಣ

    ಅಂಬುಲೆನ್ಸ್ ಗೆ ಎಕ್ಸ್ ಪ್ರೆಸ್ ರೈಲು ಡಿಕ್ಕಿ – ಬಾಣಂತಿ ಸೇರಿ ನಾಲ್ವರು ದುರ್ಮರಣ

    – ಪವಾಡಸದೃಶವಾಗಿ 7 ದಿನಗಳ ಮಗು ಪಾರು

    ಚಿತ್ರದುರ್ಗ: ಆಂಬುಲೆನ್ಸ್ ಗೆ ರೈಲು ಡಿಕ್ಕಿಹೊಡೆದ ಪರಿಣಾಮ ಬಾಣಂತಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದಲ್ಲಿ ನಡೆದಿದೆ.

    ಸರ್ಕಾರಿ ಆಸ್ಪತ್ರೆಗೆ ಸೇರಿದ ಅಂಬುಲೆನ್ಸ್ ನಲ್ಲಿ 7 ದಿನಗಳ ಮಗುವಿನೊಂದಿಗೆ ಬಾಣಂತಿ ಚಂದ್ರಕಲಾ ಬಂಡೆ ತಿಮ್ಮಾಪುರ ಗ್ರಾಮಕ್ಕೆ ತೆರಳುತ್ತಿದ್ರು. ಈ ವೇಳೆ ಹೊಸಪೇಟೆಯಿಂದ ಬೆಂಗಳೂರಿಗೆ ಹೊರಟಿದ್ದ ರೈಲು ತಳಕು ಗ್ರಾಮದ ರೈಲ್ವೆಗೇಟ್ ಬಳಿ ಆಂಬುಲೆನ್ಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಂಬುಲೆನ್ಸ್ 50 ಮೀಟರ್ ದೂರದ ಹಳ್ಳಕ್ಕೆ ಹೋಗಿ ಬಿದ್ದಿದೆ. ದುರಂತದಲ್ಲಿ ಬಾಣಂತಿ ಚಂದ್ರಕಲಾ ಸಾವನ್ನಪ್ಪಿದ್ದು, 7 ದಿನಗಳ ಮಗು ಪವಾಡಸದೃಶವಾಗಿ ಪಾರಾಗಿದೆ.

    ಇನ್ನು ಸಾವಿತ್ರಮ್ಮ, ಗಂಗಮ್ಮ, ಸ್ಥಳದಲ್ಲೇ ಮೃತಪಟ್ಟರೆ, ಲಕ್ಷ್ಮಮ್ಮ ಎಂಬವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

    ಗಾಯಗೊಂಡಿರುವ ಆಂಬುಲೆನ್ಸ್ ಚಾಲಕ ಶಿವರೆಡ್ಡಿ, ಚಂದ್ರಕಲಾ ತಾಯಿ ಕದಿರಮ್ಮ ಮತ್ತು ಮಗುವಿಗೆ ಚಿಕಿತ್ಸೆ ನೀಡಲಾಗ್ತಿದೆ. ಘಟನೆಗೆ ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗಿದೆ. ಮಾನವ ರಹಿತ ರೈಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ ರೈಲು ಬರುತ್ತಿದ್ದುದನ್ನು ಗಮನಿಸಿದ್ರೂ ಬೇಗ ದಾಟುವ ಭರದಲ್ಲಿ ವಾಹನವನ್ನ ಅತಿ ವೇಗವಾಗಿ ಚಲಾಯಿಸಿದ್ದಾನೆ. ಈ ಬಗ್ಗೆ ತಳಕು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬಿಸಿ ನೀರಿನ ಬಕೆಟ್‍ನಲ್ಲಿ ಬಿದ್ದು 4 ವರ್ಷದ ಮಗು ಸಾವು

    ಬಿಸಿ ನೀರಿನ ಬಕೆಟ್‍ನಲ್ಲಿ ಬಿದ್ದು 4 ವರ್ಷದ ಮಗು ಸಾವು

    ಬೆಂಗಳೂರು: ಬಿಸಿ ನೀರಿನ ಬಕೆಟ್‍ನಲ್ಲಿ ಬಿದ್ದು 4 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಯಲಹಂಕ ಓಲ್ಡ್ ಟೌನ್‍ನಲ್ಲಿ ನಡೆದಿದೆ.

    ನಾಲ್ಕು ವರ್ಷದ ಶೇಷಾದ್ರಿ ಸಾವನ್ನಪ್ಪಿದ ಮಗು. ಮನೆಯಲ್ಲಿ ಬೆಳಗ್ಗೆ ನೀರು ಕಾಯಿಸೋದಕ್ಕೆ ತಾಯಿ ಬಕೆಟ್‍ನಲ್ಲಿ ಹೀಟರ್ ಹಾಕಿಟ್ಟಿದ್ದರು. ನೀರು ಕಾಯಿಸೋಕೆ ಇಟ್ಟು ಆಕೆ ಹೊರಗಡೆ ತೆರಳಿದ್ದ ವೇಳೆ ಆಟವಾಡುತ್ತಾ ಮಗು ಬಕೆಟ್ ಒಳಗೆ ಬಿದ್ದು ಸಾವನ್ನಪ್ಪಿದೆ.

    ಘಟನೆ ಬಗ್ಗೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಳೆದ ವಾರ ಮಂಡ್ಯದಲ್ಲಿ ಪೋಷಕರು ಅರಿವಿಲ್ಲದೆ ಅವಧಿ ಮುಗಿದ ಔಷಧಿಯನ್ನ ಮಗುವಿಗೆ ನೀಡಿದ್ದರಿಂದ ಎರಡು ವರ್ಷದ ಮಗು ಸಾವನ್ನಪ್ಪಿತ್ತು.

    ಇದನ್ನೂ ಓದಿ:ವಾಷಿಂಗ್‍ ಮಷೀನ್‍ಗೆ ಬಿದ್ದು 3 ವರ್ಷದ ಅವಳಿ ಮಕ್ಕಳ ದಾರುಣ ಸಾವು

  • ಗುಡಿಸಲಿಗೆ ಬೆಂಕಿ ತಗುಲಿ 9 ತಿಂಗಳ ಮಗು ಸಜೀವ ದಹನ

    ಚಾಮರಾಜನಗರ: ಗುಡಿಸಲಿಗೆ ಬೆಂಕಿ ತಗುಲಿ 9 ತಿಂಗಳ ಮಗು ಸಜೀವ ದಹನವಾಗಿರುವ ದಾರುಣ ಘಟನೆ ಚಾಮರಾಜನಗರದ ಮಹದೇಶ್ವರ ಬೆಟ್ಟದ ಆಳಂಬಾಡಿ ಗ್ರಾಮದಲ್ಲಿ ನಡೆದಿದೆ.

    ಆಳಂಬಾಡಿ ಗ್ರಾಮದ ಸುರೇಶ್ ಹಾಗೂ ಮುತ್ತುಲಕ್ಷ್ಮೀ ದಂಪತಿಯ ಮಗುವೇ ಬೆಂಕಿಗಾಹುತಿಯಾಗಿರುವ ಮೃತ ದುರ್ದೈವಿ. ದಂಪತಿಗೆ ಅರಣ್ಯ ಇಲಾಖೆಯು ಸಾಗುವಳಿ ಜಮಿನನ್ನು ನೀಡಿತ್ತು. ಆದ್ದರಿಂದ ದಂಪತಿ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ರು. ಇಲ್ಲಿ ನಿತ್ಯ ಆನೆಗಳು ದಾಳಿ ಮಾಡುತ್ತಿದ್ದು, ಅದನ್ನು ತಪ್ಪಿಸಲು ಬೆಂಕಿ ಹಾಕುತ್ತಿದ್ದರು.

    ಮಂಗಳವಾರ ರಾತ್ರಿ ಕೂಡ ಬೆಂಕಿ ಹಾಕಲಾಗಿತ್ತು. ಬುಧವಾರ ಮಗುವಿನ ತಾಯಿ ಮಗುವನ್ನು ಗುಡಿಸಲಿನಲ್ಲಿ ಮಲಗಿಸಿ ನೀರನ್ನು ತರಲು ತೆರಳಿದ್ದ ವೇಳೆ ಬೆಂಕಿ ಕಿಡಿಯೊಂದು ಗುಡಿಸಲಿಗೆ ತಗುಲಿ ಗುಡಿಸಲು ಸಂಪೂರ್ಣ ಭಸ್ಮವಾಗಿದ್ದು ಮಲಗಿದ್ದ 9 ತಂಗಳ ಮಗು ಮೃತಪಟ್ಟಿದೆ.

    ಮೃತ ಮಗುವಿನ ತಂದೆಯ ದೂರಿನನ್ವಯ ಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ವೀಡಿಯೋ: 3 ದಿನದ ಹಸುಗೂಸಿನ ಕಾಲು ಮುರಿದ ವಾರ್ಡ್ ಬಾಯ್

    ಡೆಹ್ರಾಡೂನ್: 3 ದಿನದ ಮಗುವಿನ ಅಳು ಕೇಳಿ ಕೋಪಗೊಂಡು ಅಟೆಂಡರ್‍ವೊಬ್ಬ ಮಗುವಿನ ಕಾಲನ್ನ ಮುರಿದಿರೋ ಘಟನೆ ಉತ್ತರಾಖಂಡ್‍ನ ರೂರ್ಕಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

    ಜನವರಿ 25ರಂದು ಜನಿಸಿದ್ದ ಮಗುವಿಗೆ ಉಸಿರಾಟದ ಸಮಸ್ಯೆ ಇದ್ದಿದ್ದರಿಂದ ಜನವರಿ 28ರಂದು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವನ್ನ ಐಸಿಯುನಲ್ಲಿ ಇರಿಸಲಾಗಿತ್ತು. ಅಲ್ಲೇ ನಿದ್ದೆಗೆ ಜಾರಿದ್ದ ಅಟೆಂಡರ್‍ಗೆ ಮಗುವಿನ ಅಳು ಕಿರಿಕಿರಿ ಮಾಡಿದೆ. ಅಷ್ಟಕ್ಕೆ ಸಿಟ್ಟಿಗೆದ್ದ ಆತ ಹಾಸಿಗೆ ಬಳಿ ಬಂದು ಮಗುವಿನ ಕಾಲನ್ನು ಜೋರಾಗಿ ಎಳೆದು ಡೈಪರ್ ಬದಲಿಸಿದ್ದಾನೆ. ನಂತರ ಮಗು ಅಳುತ್ತಿದ್ದರೂ ಈತ ಮಾತ್ರ ಎಂದಿನಂತೆ ತನ್ನ ಕೆಲಸ ಮುಂದುವರೆಸಿದ್ದಾನೆ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಮಗುವನ್ನ ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಿಸಿದಾಗ ಅದರ ಕಾಲಿನ ಮೂಳೆ ಮುರಿದಿದೆ ಎಂದು ವೈದ್ಯರು ಹೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ನಡೆಸುತ್ತಿದ್ದಾರೆ.

    ಅಟೆಂಡರ್ ಇಡೀ ರತ್ರಿ ನನ್ನ ಮಗುವಿಗೆ ಕಿರುಕುಳ ನೀಡಿದ್ದಾನೆ, ಕಾಲನ್ನೂ ಮುರಿದಿದ್ದಾನೆ ಎಂದು ಮಗುವಿನ ತಂದೆ ಅಳಲು ತೋಡಿಕೊಂಡಿದ್ದಾರೆ. ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

  • ಜಯನಗರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯಿಂದಲೇ ಮಗು ಕಳ್ಳತನ..!

    ಬೆಂಗಳೂರು: ನಗರದಲ್ಲಿರೋ ವಾಣಿವಿಲಾಸ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿರುವ ಘಟನೆಗಳು ನಡೆಯುತ್ತಿರೋ ಬೆನ್ನಲ್ಲೇ ಇದೀಗ ನಗರದಲ್ಲಿ ಮತ್ತೊಂದು ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಅಪಹರಿಸಿದ ಪ್ರಕರಣ ಬೆಳಕಿಗೆ ಬಂದಿದೆ.

    ಹೌದು. ಹಾಸನ ಮೂಲದ ತ್ಯಾಗರಾಜ್ ಪತ್ನಿ ಸಹನಾ ಜನವರಿ 28 ರಂದು ಹೆರಿಗೆಗೆ ಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಹನಾ ಅವರು ಜನವರಿ 29 ರಂದು ಗಂಡು ಮತ್ತು ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಿಗೆ ಜಾಂಡಿಸ್ ಇದ್ದ ಕಾರಣ ಐಸಿಯುವಿನಲ್ಲಿ ಇಟ್ಟು ಪ್ರತಿ 2 ಘಂಟೆಗೆ ಒಮ್ಮೆ ಮಗುವಿಗೆ ತಾಯಿ ಹಾಲು ಕುಡಿಸಲು ಮಗುವನ್ನ ತಾಯಿಗೆ ನೀಡುತ್ತಿದ್ರು. ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಆ ಮುದ್ದು ಕಂದಮ್ಮನಿಗೆ ತಾಯಿಯಿಂದ ಹಾಲು ಕುಡಿಸಿ ಐಸಿಯುಗೆ ಕರೆದುಕೊಂಡು ಹೋಗುವ ಸಮಯದಲ್ಲಿ ಅಪಹರಣ ಮಾಡಿದ್ದಾರೆ.

    ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ತಿಲಕ ನಗರ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ನಡೆಸಿದ್ದಾರೆ. ಮೂವರು ದಾದಿಯರು ಮಗುವನ್ನ ಬೇರೆ ಯಾರಿಗೋ ಹಸ್ತಂತರಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಆಸ್ಪತ್ರೆಯ ಮೂವರು ನರ್ಸ್‍ಗಳಾದ ತಿಪ್ಪಮ್ಮ, ರಾಧ, ನಳಿನಾಕ್ಷಿ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಇವರು ಕಳೆದ ಒಂದು ವರ್ಷದಿಂದ ಗುತ್ತಿಗೆ ಆಧಾರದಲ್ಲಿ ನರ್ಸ್‍ಗಳಾಗಿ ಕೆಲಸ ಮಾಡುತ್ತಿದ್ದು, ಹಣದ ಆಸೆಗೆ ನವಜಾತ ಶಿಶುವನ್ನ ಅಪಹರಿಸಿ ಬೇರೆಯವರಿಗೆ ಕೊಟ್ಟಿದ್ದಾರೆ ಎಂಬ ಅನುಮಾನವೂ ಹೆಚ್ಚಗಿದೆ. ಬೇಲಿನೇ ಎದ್ದು ಹೊಲ ಮೇಯ್ದಂತೆ ಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಲಿನ ಸಿಬ್ಬಂದಿಯಿಂದಲೇ ನವಜಾತ ಶಿಶುವಿನ ಅಪಹರಣ ನಡೆದಿದೆ.