Tag: Baby

  • ಪತಿ ಸಾವಿಗೆ ಕಾರಣವಾಗಿದ್ದಕ್ಕೆ ಮಗು ಕೊಟ್ಳು, ಈಗ ಅದೇ ಮಗನಿಗಾಗಿ ಸಾಕು ತಾಯಿಯ ಜೊತೆ ಮಾರಾಮಾರಿ ಮಾಡಿದ್ಳು!

    ಪತಿ ಸಾವಿಗೆ ಕಾರಣವಾಗಿದ್ದಕ್ಕೆ ಮಗು ಕೊಟ್ಳು, ಈಗ ಅದೇ ಮಗನಿಗಾಗಿ ಸಾಕು ತಾಯಿಯ ಜೊತೆ ಮಾರಾಮಾರಿ ಮಾಡಿದ್ಳು!

    ಕೊಪ್ಪಳ: 12 ವರ್ಷದ ಗಂಡುಮಗುವಿಗಾಗಿ ಜನ್ಮ ನೀಡಿದ ತಾಯಿ ಮತ್ತು ಸಾಕು ತಾಯಿ ಮಧ್ಯೆ ಮಂಗಳವಾರ ಬೀದಿ ಜಗಳ ನಡೆದಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ.

    ಗಂಗಾವತಿಯ ಗುಂಡಮ್ಮ ಕ್ಯಾಂಪ್ ನಿವಾಸಿ ಬೀಬಿಜಾನ ಮತ್ತು ಬಳ್ಳಾರಿ ಜಿಲ್ಲೆ ಸಂಡೂರಿನ ನೂರ್ ಜಹಾನ್ ನಡುವೆ 12 ವರ್ಷದ ಶಾಶುವಲಿಗಾಗಿ ನಿನ್ನೆ ಮಾರಾಮಾರಿ ನಡೆದಿದೆ.

    ನಡೆದಿದ್ದೇನು?: 12 ವರ್ಷದ ಹಿಂದೆ ಸಂಡೂರಿನ ನೂರ್ ಜಾನ್ ಮೂರನೇ ಮಗುವಿಗೆ ಜನ್ಮ ನೀಡಿದ್ದಳು. ಕೆಲದಿನದಲ್ಲೇ ಪತಿ ಅನೀರಿಕ್ಷಿತವಾಗಿ ಮೃತಪಟ್ಟಿದ್ದರಿಂದ, ಹುಟ್ಟಿದ ಮಗುವಿನ ದೋಷದಿಂದಲೇ ಪತಿ ಸಾವು ಸಂಭವಿಸಿದೆ ಎಂದು ತಿಳಿದು ತನ್ನ ಮೂರನೇ ಮಗುವಿಗೆ 6 ತಿಂಗಳು ಇರುವಾಗಲೇ ಆ ಮಗುವನ್ನು ಸಹೋದರ ಸಂಬಂಧಿ ಬೀಬೀ ಜಾನ್‍ಗೆ ನೀಡಿದ್ದಾರೆ.

    ಇದೀಗ 12 ವರ್ಷದ ಮಗು ಶಾಶುವಲಿಯನ್ನು ತಮಗೆ ಕೊಡುವಂತೆ ನೂರ್ ಜಾನ್ ಕ್ಯಾತೆ ತೆಗೆದಿದ್ದು, ಪ್ರಕರಣ ಗಂಗಾವತಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆದ್ರೆ, ತನಗೆ ಪರಿಚಯವೇ ಇಲ್ಲದ ಜನ್ಮ ನೀಡಿದ ತಾಯಿ ಜೊತೆ ಹೋಗಲು ಶಾಶುವಲಿ ನಿರಾಕರಿಸುತ್ತಿದ್ದಾನೆ.

    ಮಗನ ಹೆಸರಿನಲ್ಲಿ ಆಸ್ತಿ ಸಿಗುತ್ತದೆ ಎಂದು ಇಷ್ಟು ದಿನವಿಲ್ಲದ ಮಗುವನ್ನು ಈಗ ಕೇಳುತ್ತಿದ್ದಾರೆ ಎಂಬುದು ಸಾಕು ತಂದೆ-ತಾಯಿ ಆರೋಪ ಮಾಡಿದ್ದಾರೆ. ಕೋರ್ಟ್ ನಲ್ಲಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಹೇಳಿ ಪೊಲೀಸರು ಸಾಗ ಹಾಕಿದ್ದಾರೆ.

  • ಮನೆಯ ಮೆಲ್ಛಾವಣಿ ಕುಸಿದು 2 ವರ್ಷದ ಕಂದಮ್ಮ ಸಾವು

    ಮನೆಯ ಮೆಲ್ಛಾವಣಿ ಕುಸಿದು 2 ವರ್ಷದ ಕಂದಮ್ಮ ಸಾವು

    ಯಾದಗಿರಿ: ಮನೆಯಲ್ಲಿ ಮಲಗಿದ್ದ ಮಗುವಿನ ಮೇಲೆ ಮೇಲ್ಛಾವಣಿ ಕುಸಿದ ಪರಿಣಾಮ ಮಗು ಸಾವನ್ನಪ್ಪಿರೋ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಶಹಾಪುರ ನಗರದ ಹನುಮಾನ್ ಮಂದಿರದ ಹತ್ತಿರವಿರುವ ಡಾ.ವೆಂಕಟೇಶ ಶಿರವಾಳಕರ್ ಎಂಬವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿರುವ ಉತ್ತರಾಖಂಡ್ ಮೂಲದ ವಿಜಯಪ್ರಕಾಶ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 30 ವರ್ಷ ಹಳೆಯದಾದ ಮನೆಯ ಮೇಲ್ಛಾವಣಿ ಸ್ಪಲ್ಪ ಭಾಗ ಮಗುವಿನ ತಲೆ ಮೇಲೆ ಬಿದ್ದ ಪರಿಣಾಮ ಎರಡು ವರ್ಷದ ಬಾಲಕ ಪ್ರಿಯಾನಸೂ ಮೃತಪಟ್ಟಿದ್ದಾನೆ.

    ಘಟನೆ ನಡೆದ ವೇಳೆ ತಂದೆ ವಿಜಯಪ್ರಕಾಶ್ ಹೊರಗಡೆ ಕೆಲಸಕ್ಕೆ ತೆರಳಿದ್ದರು. ತಾಯಿ ಇಂದುಮತಿ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಮೇಲ್ಛಾವಣಿ ಮಗುವಿನ ಮೇಲೆ ಕುಸಿದ ಬಳಿಕ ಮಗುವನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರು. ಆದ್ರೆ ಚಿಕಿತ್ಸೆ ಫಲಿಸದೇ ತಾಲೂಕು ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ.

    ಘಟನಾ ಸ್ಥಳಕ್ಕೆ ಶಹಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ‘ಓಂ’ಕಾರ ಪಠಿಸಿ ಅಳುತ್ತಿದ್ದ ಮಗುವನ್ನ ಕೆಲವೇ ಸೆಕೆಂಡ್‍ನಲ್ಲಿ ಮಲಗಿಸಿದ ತಂದೆ- ವಿಡಿಯೋ ವೈರಲ್

    ‘ಓಂ’ಕಾರ ಪಠಿಸಿ ಅಳುತ್ತಿದ್ದ ಮಗುವನ್ನ ಕೆಲವೇ ಸೆಕೆಂಡ್‍ನಲ್ಲಿ ಮಲಗಿಸಿದ ತಂದೆ- ವಿಡಿಯೋ ವೈರಲ್

    ವಾಷಿಂಗ್ಟನ್: ಋಷಿಮುನಿಗಳು, ತಪಸ್ವಿಗಳು ಓಂಕಾರ ಪಠಿಸುತ್ತಾ ವರ್ಷಾನುಗಟ್ಟಲೆ ಜಪ ಮಾಡುತ್ತಿದ್ದರು ಎಂಬ ಬಗ್ಗೆ ಕೇಳಿದ್ದೀವಿ. ಆದ್ರೆ ಮಗುವಿನ ಅಳುವನ್ನ ನಿಲ್ಲಿಸೋಕೆ ಓಂ ಅಂತ ಹೇಳಿದ್ರೆ ಅದು ಕೇಳುತ್ತಾ? ಹೌದು, ಕೇಳುತ್ತೆ. ಅದಕ್ಕೆ ಉದಾಹರಣೆ ಈ ವಿಡಿಯೋ. ವ್ಯಕ್ತಿಯೊಬ್ಬರು ಅಳುತ್ತಿದ್ದ ಪುಟ್ಟ ಕಂದನ ಕಿವಿಯಲ್ಲಿ ‘ಓಂ’ ಎಂದು ಪಠಿಸಿದ ನಂತರ ಅದು ಮಂತ್ರಮುಗ್ಧವಾದಂತೆ ನಿದ್ರೆಗೆ ಜಾರುತ್ತದೆ. ಆಚ್ಚರಿಯಾದ್ರೂ ಇದನ್ನ ನಂಬಲೇಬೇಕು.

    ಅಲ್ಲದೆ ಇದು ನಡೆದಿರೋದು ಭಾರತದಲ್ಲಲ್ಲ. ಕ್ಯಾಲಿಫೋರ್ನಿಯಾದ ಸ್ಯಾನ್ ಡೀಗೋ ನಿವಾಸಿಯಾದ ಡೇನಿಯಲ್ ಐಸೆನ್‍ಮ್ಯಾನ್, ಫೇಸ್‍ಬುಕ್ ಲೈವ್ ವಿಡಿಯೋ ಮಾಡ್ತಿದ್ರು. ಈ ವೇಳೆ ಅಳೋಕೆ ಶುರು ಮಾಡಿದ್ದ ಮಗುವನ್ನ ಸಿಂಪಲ್ ಟ್ರಿಕ್ ಬಳಸಿ ಮಲಗಿಸಿದ್ರು. ಓಂ ಎಂದು ಪಠಿಸುತ್ತಲೇ ಮಗು ನಿದ್ರೆಗೆ ಜಾರಿತು. ವಿಡಿಯೋದ ಈ ಭಾಗವನ್ನ ಡೇನಿಯಲ್ ಏಪ್ರಿಲ್ 22 ರಂದು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಡೇನಿಯಲ್ ಅವರ ಈ ಟ್ರಿಕ್ ನೋಡಿದವರು ಬರೆಗಾಗಿದ್ದಾರೆ. ಈ ವಿಡಿಯೋ ಈವರೆಗೆ 3.5 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು 3.6 ಲಕ್ಷಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಅಲ್ಲದೆ 2.4 ಲಕ್ಷಕ್ಕೂ ಹೆಚ್ಚು ರಿಯಾಕ್ಷನ್ಸ್, 92 ಲಕ್ಷಕ್ಕೂ ಹೆಚ್ಚು ಕಮೆಂಟ್ಸ್ ಗಳಿಸಿದೆ.

    ‘ಓಂ’ ಎಂದು ಪಠಿಸುವಾಗ ಅದರ ವೈಬ್ರೇಷನ್‍ನಿಂದ ಮಗು ನಿದ್ರೆಗೆ ಜಾರುತ್ತದೆ. ತಂದೆ ಓಂ ಎಂದು ಹೇಳುವ ಗತಿಯನ್ನ ನಿಧಾನವಾಗಿ ಬದಲಿಸುತ್ತಾರೆ. ಇದು ನಿಜಕ್ಕೂ ಸುಂದರ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಮಗುವನ್ನ ಸುಮ್ಮನಿರಿಸಲು ನಾವೂ ಕೂಡ ಈ ಟ್ರಿಕ್ ಪ್ರಯೋಗ ಮಾಡಿದ್ವಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

    https://www.facebook.com/DanielEisenman/videos/1524632837547223/

  • ಹೆಂಡ್ತಿಯನ್ನ ಕೊಂದು ರಸ್ತೆ ಬದಿ ಹಾಕಿ, 3 ವರ್ಷದ ಮಗುವನ್ನೂ ಅಲ್ಲೇ ಬಿಟ್ಟು ಪರಾರಿಯಾದ ಗಂಡ

    ಹೆಂಡ್ತಿಯನ್ನ ಕೊಂದು ರಸ್ತೆ ಬದಿ ಹಾಕಿ, 3 ವರ್ಷದ ಮಗುವನ್ನೂ ಅಲ್ಲೇ ಬಿಟ್ಟು ಪರಾರಿಯಾದ ಗಂಡ

    ಶಿವಮೊಗ್ಗ: ಹೆಂಡತಿಯನ್ನು ಕೊಂದ ಪಾಪಿ ತಂದೆಯೊಬ್ಬ ಸುಮಾರು 3 ವರ್ಷದ ಮಗುವನ್ನು ಶವದ ಬಳಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಜಿಲ್ಲೆಯ ಮಲವಗೊಪ್ಪ ಬಳಿ ಬಿ.ಹೆಚ್.ರಸ್ತೆಯಲ್ಲಿ ತಾಯಿಯನ್ನು ಕೊಂದು ರಸ್ತೆ ಬದಿಯ ಹೊಲದಲ್ಲಿ ಹಾಕಲಾಗಿತ್ತು. ಕೊಲೆ ಆಗಿದೆ ಎಂಬುದನ್ನೂ ಅರಿಯದ ಪುಟ್ಟ ಮಗು ರಾತ್ರಿಯಿಡೀ ಶವದ ಬಳಿಯೇ ಇತ್ತು. ಮುಂಜಾನೆ ಶವದ ಪಕ್ಕ ಸೊಳ್ಳೆ- ನೋಣ ಓಡಿಸುತ್ತಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಲೆಯಾಗಿರುವ ಮಹಿಳೆಗೆ ಸುಮಾರು 25 ವರ್ಷವಾಗಿದೆ. ಇವರ ಬಗ್ಗೆ ಹಾಗೂ ಈ ಕೃತ್ಯವೆಸಗಿರುವ ವ್ಯಕ್ತಿ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ದೊರಕಿಲ್ಲ.

    ಮಗು ಮಾತ್ರ ತನ್ನ ಅಪ್ಪನೇ ಅಮ್ಮನಿಗೆ ಹೊಡೆದ ಎಂದು ಹೇಳುತ್ತಿದೆ. ಕೊಲೆಗೀಡಾದ ಮಹಿಳೆಯ ಕೈ ಮೇಲೆ ಯಲ್ಲಮ್ಮ- ನಾಗರಾಜ್ ಎಂಬ ಹಚ್ಚೆ ಬರಹ ಇದೆ. ಮಗುವಿನ ಹೇಳಿಕೆ ಹಾಗೂ ಈ ಹಚ್ಚೆಯ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗಗೆ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉಡುಪಿಯಲ್ಲಿ ಸರ್ಕಾರಿ ಸ್ವಾಮ್ಯದ ಕ್ವಾರಿಗೆ ಬಿದ್ದು ತಾಯಿ-ಮಗ ಸಾವು!

    ಉಡುಪಿಯಲ್ಲಿ ಸರ್ಕಾರಿ ಸ್ವಾಮ್ಯದ ಕ್ವಾರಿಗೆ ಬಿದ್ದು ತಾಯಿ-ಮಗ ಸಾವು!

    – ಮುಗಿಲುಮುಟ್ಟಿದ ತಂದೆಯ ಆಕ್ರಂದನ

    ಉಡುಪಿ: ಬೆಳಗಾವಿಯ ಅಥಣಿಯಲ್ಲಿ ಕೊಳವೆ ಬಾವಿಗೆ 6 ವರ್ಷದ ಬಾಲಕಿ ಬಿದ್ದು ಮೃತಪಟ್ಟ ಘಟನೆ ಮಾಸುವ ಮುನ್ನವೇ ಉಡುಪಿಯಲ್ಲಿ ಮತ್ತೊಂದು ದುರ್ಘಟನೆ ನಡೆದಿದೆ. ಬಟ್ಟೆ ಒಗೆಯಲು ಹೋಗಿದ್ದ ತಾಯಿ ಮಗುವನ್ನು ಕಲ್ಲು ಕ್ವಾರಿ ಬಲಿ ಪಡೆದಿದೆ.

    ನಡೆದಿದ್ದೇನು?: ಉಡುಪಿಯ ಅಲೆವೂರಿನ ಪೆರುಪಾದೆ ಸರ್ಕಾರಿ ಸ್ವಾಮ್ಯದ ಕಲ್ಲಿನ ಕ್ವಾರಿ ಬಾಗಲಕೋಟೆ ಮೂಲದ ದ್ಯಾಮವ್ವ ಮತ್ತು ಹನುಮಂತ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಬಟ್ಟೆ ಒಗೆಯಲು ಹೋದ ದ್ಯಾಮವ್ವ ನಾಲ್ಕು ವರ್ಷದ ಮಗನನ್ನು ಬಂಡೆಯ ಮೇಲೆ ಆಟವಾಡಲು ಬಿಟ್ಟಿದ್ದರು. ಹನುಮಂತ ಆಟವಾಡುತ್ತಾ ಕಲ್ಲಿನ ಕ್ವಾರಿಗೆ ಬಿದ್ದಿದ್ದಾನೆ. ಮಗ ನೀರಿಗೆ ಬಿದ್ದ ತಕ್ಷಣ ರಕ್ಷಿಸಲು ಹೋದ ತಾಯಿ ಕೂಡಾ ಮುಳುಗಿದ್ದಾರೆ. ತಾಯಿ-ಮಗು ಮುಳುಗುವುದನ್ನು ಕಂಡು ರಕ್ಷಿಸಲು ಸ್ಥಳೀಯರು ಹೋಗುವಷ್ಟರಲ್ಲಿ ಸಂಪೂರ್ಣ ಮುಳುಗಿ ಮೃತಪಟ್ಟಿದ್ದಾರೆ.

    ಘಟನೆ ನಡೆದು ಸುಮಾರು 1 ಗಂಟೆ ಬಿಟ್ಟು ಅಗ್ನಿಶಾಮಕ ದಳ ಬೋಟ್ ಜೊತೆ ಬಂತು. ಆ ತಂಡದಲ್ಲಿ ಮುಳುಗು ತಜ್ಞರೇ ಇರಲಿಲ್ಲ. ಗರುಡಪಾತಾಳ ಹಾಕಿ ಮೃತದೇಹ ಹುಡುಕಲು ಯತ್ನಿಸಿದಾಗ ಅದು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಅಧಿಕಾರಿಗಳ ಅಸಹಾಯಕತೆ ಕಂಡು ಸ್ಥಳೀಯ ಮುಳುಗು ತಜ್ಞರನ್ನು ಕರೆಸಲಾಯ್ತು. ಮೂವರು ಮುಳುಗು ತಜ್ಞರು ಬಂದು ಸುಮಾರು 15 ನಿಮಿಷಗಳ ಕಾಲ ಹುಡುಕಾಟ ನಡೆಸಿದರು. ಕ್ವಾರಿಯಲ್ಲಿ ಪಾಚಿ ತುಂಬಿಕೊಂಡಿದೆ. ಹಳೆಯ ಬಟ್ಟೆಗಳ ರಾಶಿಯೇ ಇದೆ. ಆಳದಲ್ಲಿ ಎರಡು ಮೃತದೇಹಗಳು ಸಿಲುಕಿದ್ದು, ಸದ್ಯ ಮೃತದೇಹಗಳನ್ನ ಮೇಲಕ್ಕೆತ್ತಿದ್ದೇವೆ ಅಂತಾ ಮುಳುಗು ತಜ್ಞರಾದ ಅಶೋಕ್ ಶೆಟ್ಟಿ, ನಿತೇಶ್, ಪ್ರಭಾಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ರು.

    ಅಗ್ನಿಶಾಮಕದಳದ ಅಸಹಾಯಕತೆಗೆ ಸ್ಥಳೀಯರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ತಂಡದಲ್ಲಿ 10-15 ಮಂದಿ ಇದ್ದರು. ಅದರಲ್ಲಿ ಒಬ್ಬನೂ ಈಜುಗಾರ ಇರಲಿಲ್ಲ ಎಂಬುದು ವಿಪರ್ಯಾಸ. ಇವರು ದೋಣಿಯಲ್ಲಿ ಕಬ್ಬಿಣದ ಸಲಾಕೆಗಳನ್ನು ಎಸೆದು ಹುಡುಕಾಟ ಮಾಡಿದರು. ಒಬ್ಬ ಸಿಬ್ಬಂದಿಯೂ ನೀರಿಗೆ ಇಳಿಯಲಿಲ್ಲ. ಈಜಲು- ಮುಳುಗಲು ಬಾರದವರನ್ನು ಅಗ್ನಿಶಾಮಕ ಇಲಾಖೆಗೆ ಆಯ್ಕೆ ಮಾಡಿದ್ದು ಯಾಕೆ?, ಸರ್ಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ಪರಿಣತರನ್ನು ಇಲಾಖೆಗೆ ಸೇರಿಸಬೇಕು ಎಂದು ಸ್ಥಳೀಯ ಅಲೆವೂರು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸೇರಿಗಾರ್ ಆಕ್ರೋಶ ವ್ಯಕ್ತಪಡಿಸಿದರು.

    ಮುಗಿಲುಮುಟ್ಟಿದ ಆಕ್ರಂದನ: ದ್ಯಾಮವ್ವನ ಗಂಡ ಯಮುನಪ್ಪ ಹಾಸಂಗಿಗೆ ಮಾತು ಬರಲ್ಲ. ಕಿವಿನೂ ಕೇಳಿಸಲ್ಲ. ಮೃತದೇಹಗಳ ಪಕ್ಕ ಯಮುನಪ್ಪ ಕುಳಿತು ರೋಧಿಸುತ್ತಿದ್ದುದ್ದು ನೆರೆದವರ ಮನ ಕಲಕುವಂತಿತ್ತು. ಕಳೆದ ಮೂವತ್ತು ವರ್ಷಗಳಿಂದ ಇಬ್ಬರ ಕುಟುಂಬ ಉಡುಪಿಯಲ್ಲಿ ಕೂಲಿ ಕೆಲಸಕ್ಕೆಂದು ಬಂದಿತ್ತು. ಇಬ್ಬರಿಗೂ ಇಲ್ಲೇ ಮದುವೆಯಾಗಿತ್ತು. ಎರಡೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

    ಜಿಲ್ಲೆಯಾದ್ಯಂತ ಸರ್ಕಾರ ನೂರಾರು ಬಂಡೆ ಕಲ್ಲು ಕ್ವಾರಿಗಳಿಗೆ ಪರವಾನಿಗೆ ನೀಡಿದೆ. ಕಲ್ಲು ತೆಗೆದು ಖಾಲಿಯಾದಾಗ ಕ್ವಾರಿಯನ್ನು ಹಾಗೆಯೇ ಬಿಟ್ಟು ಹೋಗಲಾಗುತ್ತದೆ. ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಿಲ್ಲ. ಯಾವುದೇ ಮುನ್ನೆಚ್ಚರಿಕಾ ಬೋರ್ಟ್ ಅಳವಡಿಸಿಲ್ಲ. ಜಿಲ್ಲೆಯಾದ್ಯಂತ ನೂರಾರು ಕಲ್ಲುಕ್ವಾರಿಗಳಿದ್ದು ಎಲ್ಲವೂ ಹೀಗೆಯೇ ತೆರೆದುಕೊಂಡಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜವಾಬ್ದಾರಿ ಇದು. ನಿದ್ದೆ ಮಾಡುತ್ತಿರುವ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಮಳೆಗಾಲ ಆರಂಭಕ್ಕೆ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಸ್ಥಳೀಯರು ಒತ್ತಾಯಿಸಿದ್ದಾರೆ.

    https://www.youtube.com/watch?v=58cJh_BFu7Y

  • ಕೋಮಾದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳಾ ಪೊಲೀಸ್!

    ಕೋಮಾದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳಾ ಪೊಲೀಸ್!

    ಬ್ಯೂನಸ್ ಐರಿಸ್: ಮಹಿಳಾ ಪೊಲೀಸರೊಬ್ಬರು ಕೋಮಾ ಸ್ಥಿತಿಯಲ್ಲಿವಾಗಲೇ ಮಗುವಿಗೆ ಜನ್ಮ ನೀಡಿರೋ ಅಪರೂಪದ ಘಟನೆ ಅರ್ಜೆಂಟಿನಾದಲ್ಲಿ ನಡೆದಿದೆ.

    2016ರಲ್ಲಿ ಕಾರು ಅಫಘಾತದಿಂದ 34 ವರ್ಷದ ಮಹಿಳೆ ಎಮಿಲಿಯಾ ಬನ್ನಾನ್ ಕೋಮಾಗೆ ಜಾರಿದ್ದರು. ಕೋಮಾ ಸ್ಥಿತಿಯಲ್ಲೇ ಅವರು ಮಗುವಿಗೆ ಜನ್ಮ ನೀಡಿದ್ದು, ಇದೀಗ 4 ತಿಂಗಳ ನಂತರ ಪ್ರಜ್ಞೆ ಬಂದು ಮಗುವಿನ ಮುಖ ನೋಡಿದ್ದಾರೆ.

    ಕಳೆದ ವರ್ಷ ನವೆಂಬರ್ 1ರಂದು ಪೊಲೀಸ್ ಆದ ತನ್ನ ಪತಿಯೂ ಸೇರಿದಂತೆ ಎಮಿಲಯಾ ಹಾಗೂ ಸಹೋದ್ಯೋಗಿಗಳು ತೆರಳುತ್ತಿದ್ದ ವಾಹನ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಎಮಿಲಿಯಾಗೆ ಗಂಭೀರ ಗಾಯಗಳಾಗಿತ್ತು. ಗಾಯಾಳು ಎಮಿಲಿಯಾರನ್ನ ಪೊಸಾಡಸ್‍ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಎಮಿಲಿಯಾ ಗರ್ಭವತಿ ಆಗಿದ್ದರು. ಕೋಮಾದಲ್ಲಿದ್ದ ಎಮಿಲಿಯಾ ಗರ್ಭಧಾರಣೆ ಅವಧಿಯಲ್ಲಿ ವೈದ್ಯರು ಕಾಳಜಿ ವಹಿಸಿದ್ರು. ನಂತರ ಕ್ರಿಸ್‍ಮಸ್‍ನ ಹಿಂದಿನ ದಿನ ಸಿಜೇರಿಯನ್ ಮಾಡುವ ಮೂಲಕ ಹೆರಿಗೆ ಮಾಡಿಸಿದ್ರು. ಮಗು ಕೂಡ ಆರೋಗ್ಯವಾಗಿತ್ತು.

    ಎಮಿಲಿಯಾ ಸಹೋದರಿ ನೊರ್ಮಾ ಮಗುವಿನ ಆರೈಕೆ ಮಾಡಿದ್ರು. ಪ್ರತಿದಿನ ಸಂಜೆ 6 ಗಂಟೆ ವೇಳೆಗೆ ಮಗುವನ್ನ ಎಮಿಲಿಯಾ ಬಳಿ ಕರೆದುಕೊಂಡು ಹೋಗ್ತಿದ್ರು ಎಂದು ಸಹೋದರ ಸೀಸರ್ ಹೇಳಿದ್ದಾರೆ. ಕಳೆದ ಗುರುವಾರದಂದು ಎಮಿಲಿಯಾಗೆ ಪ್ರಜ್ಞೆ ಬಂದಿದ್ದು, ಸಹೋದರಿ ನೊರ್ಮಾ ಮಗುವನ್ನು ತಂದು ತೋರಿಸಿದಾಗ ಅದು ಸಹೋದರಿಯ ಮಗು ಎಂದು ಎಮಿಲಿಯಾ ಭಾವಿಸದ್ದರಂತೆ. ನಂತರ ಆಕೆಯ ಕುಟುಂಬಸ್ಥರು ಸಿಹಿ ಸುದ್ದಿಯನ್ನ ಎಮಿಲಿಯಾಗೆ ವಿವರಿಸಿದ್ದಾರೆ. ಬಳಿಕ ಎಮಿಲಿಯಾ ನಡೆದ ಘಟನೆಯನ್ನ ನೆನಪಿಸಿಕೊಂಡಿದ್ದು, ಮೊದಲಿಗೆ ಗೊಂದಲಕ್ಕೀಡಾದವರಂತೆ ಮಾತನಾಡಿದ್ರು. ನಂತರ ಎಲ್ಲವೂ ಆಕೆಗೆ ಅರ್ಥವಾಯಿತು ಎಂದು ಸೀಸರ್ ಹೇಳಿದ್ದಾರೆ.

    ಎಮಿಲಿಯಾ ಎಲ್ಲಾ ವೈಜ್ಞಾನಿಕ ತರ್ಕವನ್ನೇ ಮೀರಿ ಮಗುವಿಗೆ ಜನ್ಮ ನೀಡಿದ್ದಾರೆ. ಇದು ನಿಜಕ್ಕೂ ಒಂದು ಪವಾಡವೆಂದು ವೈದ್ಯರು ಅಭಿಪ್ರಾಯಪಟ್ಟಿರುವುದಾಗಿ ಸೀಸರ್ ಹೇಳಿದ್ದಾರೆ. ಎಮಿಲಿಯಾ ಮೆದುಳಿಗೆ ಗಂಭೀರವಾದ ಗಾಯಗಾಳಿಗಿದ್ದರೂ ಆಕೆ ನಮ್ಮನ್ನು ಅಚ್ಚರಿಗೊಳಿಸಿದ್ದಾಳೆ ಎಂದು ಆಕೆಗೆ ಸಿಕಿತ್ಸೆ ನೀಡಿದ ನರತಜ್ಞ ಮಾರ್ಕೆಲೋ ಫೆರಾರಿ ಹೇಳಿದ್ದಾರೆ.

  • 14 ವರ್ಷಕ್ಕೆ ತಾಯಿಯಾದ ಬಾಲಕಿ: ಇಬ್ಬರು ಆರೋಪಿಗಳ ಬಂಧನ

    14 ವರ್ಷಕ್ಕೆ ತಾಯಿಯಾದ ಬಾಲಕಿ: ಇಬ್ಬರು ಆರೋಪಿಗಳ ಬಂಧನ

    ರಾಯಚೂರು: ಮಾನ್ವಿ ತಾಲೂಕಿನ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ 14 ವರ್ಷದ ಬಾಲಕಿ ಕಾಮುಕರ ಕಾಟಕ್ಕೆ ಏನೂ ಅರಿಯದ ವಯಸ್ಸಿನಲ್ಲಿ ತಾಯಿಯಾಗಿದ್ದಾಳೆ.

    ಬಾಲಕಿಗೆ ಎಂಟು ತಿಂಗಳು ತುಂಬಿದಾಗ ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆದಿರುವುದು ಬಯಲಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು ಗಂಡು ಮಗು ಜನಿಸಿದೆ. ಬಾಲಕಿ ಹಾಗೂ ಶಿಶು ಆರೋಗ್ಯವಾಗಿದ್ದಾರೆ. ಆದ್ರೆ ಈಗ ಬಾಲಕಿಯ ಪೋಷಕರು ಮಗಳು ಬೇಕಿಲ್ಲ, ಮೊಮ್ಮಗನೂ ಬೇಕಿಲ್ಲ ಅಂತ ದೂರವಿಟ್ಟಿದ್ದಾರೆ. ಬಾಲಕಿ ಮಾತ್ರ ತನ್ನ ಮಗು ಬೇಕು ಅಂತ ಹಂಬಲಿಸುತ್ತಿದ್ದಾಳೆ.

    ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಕ್ಕಳ ರಕ್ಷಣಾ ಸಮಿತಿ ಅಧಿಕಾರಿಗಳು ತಾಯಿ ಮಗುವನ್ನ ರಾಯಚೂರಿನ ಬಾಲಮಂದಿರಕ್ಕೆ ಸೇರಿಸಿದ್ದಾರೆ. ರಾಯಚೂರಿನಲ್ಲಿ ತಾಯಿ-ಮಕ್ಕಳ ಆರೈಕೆ ಕೇಂದ್ರವಿಲ್ಲದ ಕಾರಣ ಬಳ್ಳಾರಿ ಅಥವಾ ಬಾಗಲಕೋಟಿಗೆ ಬಾಲಕಿ ಹಾಗೂ ಶಿಶುವನ್ನ ಕಳುಹಿಸುವುದಾಗಿ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಡಾ.ಜಯಶ್ರಿ ಚನ್ನಾಳ ಹೇಳಿದ್ದಾರೆ.

    ಮದುವೆಯಾಗುವುದಾಗಿ ಪುಸಲಾಯಿಸಿ ಗ್ರಾಮದ ವಿರೇಶ್ ಹಾಗೂ ಶಿವರಾಜ್ ಎಂಬವರು ಕಳೆದ ಒಂದು ವರ್ಷದಿಂದ ನಿರಂತರವಾಗಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಾಲಕಿ ಗರ್ಭಿಣಿಯಾದಾಗಲೇ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಬಾಲಕಿಯ ಗರ್ಭ ತೆಗೆಸಲು ಪೋಷಕರು ಪ್ರಯತ್ನಿಸಿದಾಗ ಎಂಟು ತಿಂಗಳು ತುಂಬಿರುವುದು ತಾಯಿ ಜೀವಕ್ಕೆ ಕುತ್ತು ತರಬಹುದು ಅಂತ ಹೆದರಿ ಸುಮ್ಮನಾಗಿದ್ದಾರೆ.

    ಇಬ್ಬರು ಆರೋಪಿಗಳ ವಿರುದ್ಧ ಏಪ್ರಿಲ್ 2 ರಂದು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

  • ತಾಯಿಯ ಮೇಲಿನ ದ್ವೇಷಕ್ಕೆ ಮಗುವನ್ನು ಕೊಂದೇ ಬಿಟ್ಟ!

    ತಾಯಿಯ ಮೇಲಿನ ದ್ವೇಷಕ್ಕೆ ಮಗುವನ್ನು ಕೊಂದೇ ಬಿಟ್ಟ!

    ಶಿವಮೊಗ್ಗ: ತಾಯಿ ಮೇಲಿನ ದ್ವೇಷಕ್ಕಾಗಿ ಮಗುವನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮೂಲೆಗದ್ದೆ ಮಠದಲ್ಲಿ ನಡೆದಿದೆ.

    ಮೂರು ವರ್ಷದ ಸುಜಯ್ ಮೃತ ಮಗು. ಸುಜಯ್ ಪೋಷಕರು ಮೂಲಗದ್ದೆ ಮಠದ ನೂತನ ಸ್ವಾಮೀಜಿಯವರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುಣೆ ಪಟ್ಟಣದಿಂದ ಆಗಮಿಸಿದ್ದರು. ಸಂಜಯ್ ತಾಯಿ ಚೈತ್ರ ಅವರ ಮೇಲೆ ಮಠದಲ್ಲಿ ವಾಸವಾಗಿದ್ದ ಕಾಮುಕ ರುದ್ರೇಶ್ ಕಣ್ಣು ಹಾಕಿದ್ದನು. ಎಂಟು ತಿಂಗಳು ಗರ್ಭಿಣಿಯಾಗಿರುವ ಚೈತ್ರ ಅವರು ರುದ್ರೇಶ್‍ನಿಗೆ ಬೈದಿದ್ದರು.

    ಇದರಿಂದ ಕೋಪಗೊಂಡ ರುದ್ರೇಶ್ ಸೋಮವಾರ ರಾತ್ರಿ ಅವರ ಊಟಕ್ಕೆ ನಿದ್ರೆ ಮಾತ್ರೆ ಬೆರೆಸಿದ್ದಲ್ಲದೆ, ಪುಟ್ಟ ಕಂದನಿಗೂ ನಿದ್ರೆ ಮಾತ್ರೆ ಹಾಕಿ ಕೊಂದು ನಂತರ ತಾನೇ ತೆಗೆದುಕೊಂಡು ಹೋಗಿ ಹೊಳೆಗೆ ಹಾಕಿ ಬಂದಿದ್ದಾನೆ.

    ನಿದ್ರೆ ಮಾತ್ರೆ ಬೆರತ ಊಟ ಮಾಡಿದ ಆರು ಜನ ಬೆಳಗ್ಗೆ ಏಳುತ್ತಿದ್ದಂತೆ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಇವರೆಲ್ಲರನ್ನೂ ಮಂಗಳವಾರ ಹೊಸನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಮಯದಲ್ಲಿ ತಮ್ಮ ಜೊತೆ ಮಗ ಸುಜಯ್ ಇಲ್ಲದಿರುವುದೇ ಚೈತ್ರಾ ಅವರಿಗೆ ಗೊತ್ತಾಗಿದೆ.

    ಎಲ್ಲಾ ಕಡೆ ಮಗುವಿಗಾಗಿ ಹುಡುಕಾಟ ನಡೆದ ನಂತರ ಮಂಗಳವಾರ ಸಂಜೆ ಮಠದ ಹಿಂಭಾಗದಲ್ಲಿ ಇರುವ ಹೊಳೆಯಲ್ಲಿ ಮಗುವಿನ ಶವ ಸಂಜೆ ಪತ್ತೆ ಆಗಿದೆ. ಅದೂವರೆಗೂ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದು ಆಕಸ್ಮಿಕ ಎಂದೇ ಭಾವಿಸಲಾಗಿತ್ತು. ಪೊಲೀಸರು ಅನುಮಾನದ ಮೇಲೆ ಮಠದಲ್ಲಿದ್ದ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇದರಲ್ಲಿ ರುದ್ರೇಶ ಎಂಬಾತನೇ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ. ರುದ್ರೇಶ್ ಬೆಳಗಾವಿ ಮೂಲದವನು ಎಂದು ತಿಳಿದು ಬಂದಿದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಧಾರವಾಡ: ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!

    ಧಾರವಾಡ: ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!

    ಧಾರವಾಡ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ 14 ದಿನದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ ವೇಳೆ ವೈದ್ಯಲೋಕಕ್ಕೆ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ.

    ಹೌದು. 14 ದಿನದ ಈ ಮಗುವಿಗೆ ತೀವ್ರ ಹೊಟ್ಟೆ ನೋವು ಇರುವ ಕಾರಣ, ಮಗುವಿನ ಪೋಷಕರು ಧಾರವಾಡದ ಎಸ್‍ಡಿಎಂ ಆಸ್ಪತ್ರೆಗೆ ಮಗುವನ್ನ ತಂದಿದ್ದಾರೆ. ವೈದ್ಯರು ಕೂಡಾ ಮಗುವಿನ ಹೊಟ್ಟೆಯಲ್ಲಿ ಗಂಟು ಇರಬೇಕು ಎಂದು ಶಸ್ತ್ರ ಚಿಕಿತ್ಸೆ ಕೂಡಾ ಮಾಡಿದ್ದಾರೆ. ಆದರೆ ಇದೇ ವೇಳೆ ವೈದ್ಯರಿಗೆ ಕೂಡಾ ಒಂದು ಅಚ್ಚರಿ ಕಾದಿತ್ತು. ಅದೇನಂದ್ರೆ ಈ 14 ದಿನದ ಗಂಡು ಮಗುವಿನ ಹೊಟ್ಟೆಯಲ್ಲಿ ಇನ್ನೊಂದು ಭ್ರೂಣ ಇತ್ತು. ವೈದ್ಯರು ಈ ಮಗುವಿನ ಶಸ್ತ್ರ ಚಿಕಿತ್ಸೆ ಮಾಡಿ ಸದ್ಯ ಭ್ರೂಣವನ್ನ ಹೊರಗೆ ತೆಗೆದಿದ್ದಾರೆ.

    ಇನ್ನು ವಿಶ್ವದ 80 ಪ್ರಕರಣಗಳಲ್ಲಿ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಬೆಳೆದಿದ್ದು ಈ ಪ್ರಕರಣ ಕೂಡಾ ಸೇರಿಕೊಂಡಿದೆ. ಈ ರೀತಿ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಬೆಳೆಯಲು ಕಾರಣ ಕೂಡಾ ಇದೆ. ಅವಳಿ ಮಕ್ಕಳು ಹುಟ್ಟುವ ಸಂದರ್ಭದಲ್ಲಿ ಒಂದೇ ಮಗು ಬೆಳವಣಿಗೆ ಆದಾಗ, ಇನ್ನೊಂದು ಭ್ರೂಣ ಮಗುವಿನ ಹೊಟ್ಟೆ ಸೇರಿ ಈ ರೀತಿ ಆಗುತ್ತೆ ಅನ್ನೊದು ವೈದ್ಯರ ಹೇಳಿಕೆ. ಸದ್ಯ ಎರಡು ತಿಂಗಳ ಭ್ರೂಣವನ್ನ ಈ ಮಗುವಿನ ಹೊಟ್ಟೆಯಿಂದ ಹೊರ ತೆಗೆದು ಮಗುವಿಗೆ ಚಿಕತ್ಸೆ ನೀಡಿ ಮನೆಗೆ ಕಳಿಸಲಾಗಿದೆ.

    ಒಟ್ಟಿನಲ್ಲಿ ಇಂಥದೊಂದು ಅಪರೂಪದ ಘಟನೆ ನಡೆದಿದ್ದು, ವೈದ್ಯರಿಗೆ ಅಷ್ಟೇ ಅಲ್ಲ, ಸಾರ್ವಜನಿಕ ವಲಯದಲ್ಲೂ ಇದು ಚರ್ಚೆಗೆ ಗ್ರಾಸವಾಗಿದೆ. ಧಾರವಾಡದ ಎಸ್‍ಡಿಎಂ ವೈದ್ಯರು ಇದೇ ಮೊದಲ ಬಾರಿಗೆ ಇಂಥದೊಂದು ಪ್ರಕರಣ ನೋಡಿ, ಅದನ್ನ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ, ಚಿಕಿತ್ಸೆ ಯಶಸ್ವಿಗೊಳಿಸಿದ್ದಾರೆ. ಆದರೆ ವಿಶ್ವದಲ್ಲೇ ಇದು 80 ನೇ ಪ್ರಕರಣ ಎಂದು ಹೇಳಬಹುದು.

    https://youtu.be/x8mtIlk7PgE

  • ಮಗುವಿಗೆ ನನ್ನ ಹೋಲಿಕೆಯೇ ಇಲ್ಲವೆಂದು ಹೆಂಡತಿಯನ್ನ ಕತ್ತು ಹಿಸುಕಿ ಕೊಂದ ಪತಿ

    ಮಗುವಿಗೆ ನನ್ನ ಹೋಲಿಕೆಯೇ ಇಲ್ಲವೆಂದು ಹೆಂಡತಿಯನ್ನ ಕತ್ತು ಹಿಸುಕಿ ಕೊಂದ ಪತಿ

    ಬೆಳಗಾವಿ: ಮಗುವಿಗೆ ತನ್ನಂತೆ ಹೋಲಿಕೆ ಇಲ್ಲ ಅಂತ ಅನುಮಾನಗೊಂಡ ಪತಿಯೊಬ್ಬ ಹೆಂಡತಿಯನ್ನ ಹಾಡಹಗಲೇ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿಯ ಮಹಾವೀರ ನಗರದಲ್ಲಿ ಬುಧವಾರ ಮಧ್ಯಾಹ್ನ ಕೊಲೆ ನಡೆದಿದೆ. ಮೃತ ಮಹಿಳೆಯನ್ನ 25 ವರ್ಷದ ಶಿಲ್ಪಾ ಎಂದು ಗುರುತಿಸಲಾಗಿದೆ. ಪತ್ನಿಯನ್ನು ಕೊಲೆ ಮಾಡಿದ 28 ವರ್ಷದ ಪತಿ ಪ್ರವೀಣ್ ಬಡಿಗೇರ ತಾನೇ ಸ್ವತಃ ಟಿಳಕವಾಡಿ ಪೊಲೀಸರಿಗೆ ಶರಣಾಗಿದ್ದಾನೆ. ನಂತರ ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಜಿ. ರಾಧಿಕಾ ಪರಿಶೀಲನೆ ನಡೆಸಿದ್ದಾರೆ.

     ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.