Tag: Baby

  • ನವಿಲು ಕಚ್ಚಿ ಗಾಯಗೊಂಡಿದ್ದ ಅನಾಥ ನವಜಾತ ಶಿಶುವಿಗೆ ಮರುಜೀವ ನೀಡಿದ ಕೂಲಿ ಕಾರ್ಮಿಕ ಮಹಿಳೆ

    ನವಿಲು ಕಚ್ಚಿ ಗಾಯಗೊಂಡಿದ್ದ ಅನಾಥ ನವಜಾತ ಶಿಶುವಿಗೆ ಮರುಜೀವ ನೀಡಿದ ಕೂಲಿ ಕಾರ್ಮಿಕ ಮಹಿಳೆ

    ಹಾಸನ: ಮಂಡ್ಯದಲ್ಲಿ ನವಜಾತ ಹೆಣ್ಣು ಶಿಶುವೊಂದು ತನ್ನದಲ್ಲದ ತಪ್ಪಿಗೆ ನಾಯಿದಾಳಿಗೆ ಸಿಕ್ಕಿ ಅನಾಥ ಶವವಾಗಿದ್ದರೆ, ಹಾಸನದಲ್ಲಿ ಸ್ಥಳೀಯರು ಮತ್ತು ಜಿಲ್ಲಾಸ್ಪತ್ರೆ ವೈದ್ಯರ ಸಮಯ ಪ್ರಜ್ಞೆಯಿಂದಾಗಿ ನವಜಾತ ಹೆಣ್ಣು ಶಿಶುವೊಂದು ಮರುಹುಟ್ಟು ಪಡೆದಿದೆ.

    ಹೊಳೆನರಸೀಪುರ ತಾಲೂಕು ಶ್ರೀರಾಮದೇವರ ಕಟ್ಟೆ ರಸ್ತೆಯ ಪೊದೆಯೊಂದರಲ್ಲಿ ಕಳೆದ ಜುಲೈ 13 ರಂದು ಹೆಣ್ಣು ಮಗು ಚೀರಾಡುವ ದನಿ ಕೇಳುತ್ತಿತ್ತು. ಯಾರೋ ಮಗುವನ್ನು ಪೊದೆಯಲ್ಲಿ ಬಿಸಾಡಿ ಹೋಗಿದ್ದರು. ಅನಾಥ ಮಗುವನ್ನು ನವಿಲು ಕುಕ್ಕಿ ಕುಕ್ಕಿ ಕಚ್ಚಿದ್ದರಿಂದ ಮಗು ದೇಹದ ಬಹುತೇಕ ಭಾಗದಲ್ಲಿ ಗಾಯಗಳಾಗಿ ರಕ್ತ ಸೋರುತ್ತಿತ್ತು. ಇದನ್ನು ಆಲಿಸಿದ ಕೂಲಿ ಕಾರ್ಮಿಕ ಮಹಿಳೆ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದರು.

    ಕೂಡಲೇ ಜಾಗೃತರಾದ ಜನರು, ಆಂಬುಲೆನ್ಸ್ ಮೂಲಕ ಮಗುವನ್ನು ಹೊಳೆನರಸೀಪುರ ತಾಲೂಕು ಆಸ್ಪತ್ರೆ ಅಲ್ಲಿಂದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ಆಗ ಮಗು ತೀವ್ರ ಅಸ್ವಸ್ಥಗೊಂಡು, ಆರೋಗ್ಯ ಸ್ಥಿತಿ ವಿಷಮವಾಗಿತ್ತು. ಆತಂಕದ ವಿಷಯ ಎಂದ್ರೆ ಮಗುವಿನ ಶ್ವಾಸಕೋಶಕ್ಕೂ ಗಂಭೀರವಾದ ತೊಂದರೆಯಾಗಿತ್ತು. ಮಗುವನ್ನು ಉಳಿಸಿಕೊಳ್ಳಲು ಜಿಲ್ಲಾಸ್ಪತ್ರೆ ವೈದ್ಯರು ಮತ್ತು ತಾಯಿ ಸ್ಥಾನದಲ್ಲಿ ಶುಶ್ರೂಷಕಿಯರು ಮಾಡಿದ ಆರೈಕೆಯಿಂದಾಗಿ 10 ದಿನಗಳ ಮಗು ಅದೃಷ್ಟವಶಾತ್ ಬದುಕುಳಿದಿದೆ.

    ವಿಪರ್ಯಾಸ ಎಂದ್ರೆ ಹೋಗುವ ಜೀವವೇನೊ ಉಳಿದಿದೆ. ಆದರೆ, ಎಳೆಯ ಕಂದನ ಪಾಲಿಗೆ ನಿಜ ತಾಯಿ ಇಲ್ಲವಾಗಿದ್ದಾಳೆ.

    ಇದನ್ನೂ ಓದಿ: ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ: ನವಜಾತ ಹೆಣ್ಣು ಶಿಶುವನ್ನ ಆಸ್ಪತ್ರೆ ಆವರಣದಲ್ಲೇ ಕಚ್ಚಿ ಕೊಂದ ನಾಯಿಗಳು

  • ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ: ನವಜಾತ ಹೆಣ್ಣು ಶಿಶುವನ್ನ ಆಸ್ಪತ್ರೆ ಆವರಣದಲ್ಲೇ ಕಚ್ಚಿ ಕೊಂದ ನಾಯಿಗಳು

    ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ: ನವಜಾತ ಹೆಣ್ಣು ಶಿಶುವನ್ನ ಆಸ್ಪತ್ರೆ ಆವರಣದಲ್ಲೇ ಕಚ್ಚಿ ಕೊಂದ ನಾಯಿಗಳು

    ಮಂಡ್ಯ: ನವಜಾತ ಹೆಣ್ಣು ಶಿಶುವನ್ನು ಆಸ್ಪತ್ರೆ ಆವರಣದಲ್ಲೇ ನಾಯಿಗಳು ಕಚ್ಚಿ ಕೊಂದಿರುವ ಹೃದಯ ವಿದ್ರಾವಕ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಿಮ್ಸ್ ಆಸ್ಪತ್ರೆ ಆವರಣದಲ್ಲಿರುವ ಬ್ಲಡ್ ಬ್ಯಾಂಕ್ ಮುಂಭಾಗ ಇಂದು ಮುಂಜಾನೆ ನಾಯಿಯೊಂದು ಹೆಣ್ಣು ಶಿಶುವನ್ನು ಕಚ್ಚಿಕೊಂಡು ಹೋಗುತ್ತಿತ್ತು. ಇದನ್ನು ನೋಡಿ ಆತಂಕಕ್ಕೆ ಒಳಗಾದ ಸಾರ್ವಜನಿಕರು ನಾಯಿಯಿಂದ ಮಗುವನ್ನು ಬಿಡಿಸಿದ್ದಾರೆ. ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿದೆ.

    ಆಸ್ಪತ್ರೆ ಆವರಣದಲ್ಲಿ ಮಗು ಶವ ದೊರೆತಿರೋದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನ ಮೂಡಿಸಿದೆ. ಆಸ್ಪತ್ರೆಯಲ್ಲಿರುವ ಮಗುವನ್ನು ನಾಯಿ ಕಚ್ಚಿ ಕೊಂದಿರುವ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಆರೋಪವನ್ನು ನಿರಾಕರಿಸಿರುವ ಆಸ್ಪತ್ರೆ ಸಿಬ್ಬಂದಿ ಈಗಾಗಲೇ ನಾವು ಎಲ್ಲ ವಾರ್ಡ್‍ಗಳನ್ನು ಪರಿಶೀಲನೆ ನಡೆಸಿದ್ದೇವೆ. ಆಸ್ಪತ್ರೆಯಲ್ಲಿ ಯಾವ ಮಗುವೂ ಮಿಸ್ ಆಗಿಲ್ಲ. ಜೊತೆಗೆ ಯಾವ ಮಗುವೂ ಮೃತಪಟ್ಟಿಲ್ಲ. ಯಾರೋ ಮಗುವನ್ನು ಬೇರೆಲ್ಲೋ ಹೆತ್ತು ಆಸ್ಪತ್ರೆ ಬಳಿ ಎಸೆದಿರಬಹುದು ಎಂದು ಹೇಳಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವ ಪೂರ್ವ ಠಾಣೆ ಪೊಲೀಸರು ಆಸ್ಪತ್ರೆ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಕೇವಲ 7 ನಿಮಿಷಗಳಲ್ಲಿ ಏರ್ ಆಂಬುಲೆನ್ಸ್ ಮೂಲಕ ನಾರಾಯಣ ಹೃದಯಾಲಯಕ್ಕೆ 2 ತಿಂಗಳ ಮಗು ರವಾನೆ

    ಕೇವಲ 7 ನಿಮಿಷಗಳಲ್ಲಿ ಏರ್ ಆಂಬುಲೆನ್ಸ್ ಮೂಲಕ ನಾರಾಯಣ ಹೃದಯಾಲಯಕ್ಕೆ 2 ತಿಂಗಳ ಮಗು ರವಾನೆ

    ಬೆಂಗಳೂರು: ಎರಡು ತಿಂಗಳ ಮಗುವನ್ನು ಏರ್ ಆಂಬುಲೆನ್ಸ್ ಮುಖಾಂತರ ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ.

    ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಿಂದ ಹೊಸೂರು ರಸ್ತೆಯ ನಾರಾಯಣ ಹೆಲ್ತ್ ಸಿಟಿಗೆ ಕೇವಲ 7  ನಿಮಿಷಗಳಲ್ಲಿ ಮಗುವನ್ನ ಸ್ಥಳಾಂತರಿಸಲಾಯಿತು. ಎರಡು ತಿಂಗಳ ಮಗುವು ಶ್ವಾಸಕೋಶ ತೊಂದರೆ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು 2 ದಿನಗಳಿಂದ ರಾಮಯ್ಯ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ತ್ವರಿತ ಮತ್ತು ಹೆಚ್ಚಿನ ಚಿಕಿತ್ಸೆಗೆಗಾಗಿ ಮಗುವನ್ನು ನಾರಾಯಣ ಹೆಲ್ತ್ ಸಿಟಿಗೆ ಸ್ಥಳಾಂತರಿಸಬೇಕಾಗಿತ್ತು.

    ಬೆಂಗಳೂರಿನ ಟ್ರಾಫಿಕ್ ಜಂಜಾಟದಲ್ಲಿ ಮಗುವನ್ನು ಅಷ್ಟು ಬೇಗ ಆಸ್ಪತ್ರೆಗೆ ಸಾಗಿಸುವುದು ಕಷ್ಟವೇ ಆಗಿತ್ತು. ಆಗ ಮಗುವಿನ ಪೋಷಕರು ಏರ್ ಆಂಬುಲೆನ್ಸ್ ಸಹಾಯ ಪಡೆದು ಕೇವಲ 7 ನಿಮಿಷಗಳಲ್ಲಿ ಮಗುವನ್ನು ರವಾನಿಸಿದ್ದಾರೆ. ಮಗುವನ್ನು ದಾಖಲಿಸಿಕೊಂಡಿರುವ ನಾರಾಯಣ ಹೆಲ್ತ್ ಸಿಟಿ ವೈದ್ಯರು ಮಗುವಿಗೆ ಚಿಕಿತ್ಸೆಗೆ ಆರಂಭಿಸಿದ್ದು, ಮಗು ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಶೀಘ್ರವೇ ಮಗುವನ್ನು ಗುಣಮುಖವಾಗಿಸುವುದಾಗಿ ವೈದ್ಯರು ಭರವಸೆ ನೀಡಿದ್ದಾರೆ.

  • ಗರ್ಭಿಣಿಯನ್ನ ಜೋಳಿಗೆಯಲ್ಲೇ 16 ಕಿ.ಮೀ ಹೊತ್ತೊಯ್ದರು!

    ಗರ್ಭಿಣಿಯನ್ನ ಜೋಳಿಗೆಯಲ್ಲೇ 16 ಕಿ.ಮೀ ಹೊತ್ತೊಯ್ದರು!

    ಕಲಹಂಡಿ: ಈ ಹಿಂದೆ ಒಡಿಶಾದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಆರೋಗ್ಯ ಸೇವೆ ವೈಫಲ್ಯವಾಗಿರುವುದರ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ಇದೀಗ ಕಾರಣಾಂತರಗಳಿಂದ ಆಂಬುಲೆನ್ಸ್ ಬರಲು ಸಾಧ್ಯವಾಗದೆ ಜೋಳಿಗೆಯಲ್ಲೇ ತುಂಬು ಗರ್ಭಿಣಿಯನ್ನು ಹೊತ್ತೊಯ್ದ ಹೃದಯವಿದ್ರಾವಕ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ಒಡಿಶಾದ ಕಲಹಂಡಿ ಜಿಲ್ಲೆಯ ಕನ್ಸಾಬುಂಡಲ್ ಗ್ರಾಮದಲ್ಲಿ ನಡೆದಿದೆ. ರಸ್ತೆಗೆ ಮರ ಬಿದ್ದು ರೋಡ್ ಬ್ಲಾಕ್ ಆದ ಪರಿಣಾಮ ಆಂಬುಲೆನ್ಸ್ ಬರಲು ಅಸಾಧ್ಯವಾಯಿತು. ಹೀಗಾಗಿ ಮರದ ತುಂಡಿಗೆ ಜೋಳಿಗೆ ಕಟ್ಟಿ ಅದರಲ್ಲೇ ಗರ್ಭಿಣಿಯನ್ನು 16 ಕಿ.ಮೀ ದೂರದವರೆಗೆ ಸಾಗಿಸಿದ್ದಾರೆ.

    ವರದಿಗಳ ಪ್ರಕಾರ, ಶನಿವಾರ ಗರ್ಭಿಣಿ ಹೊಟ್ಟೆ ನೋವಿನಿಂದ ಬಳುತ್ತಿದ್ದರು. ಕೂಡಲೇ ಆಶಾ ಕಾರ್ಯಕರ್ತೆಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೆಂದು 102ಕ್ಕೆ ಕರೆ ಮಾಡಿದ್ದಾರೆ. ಆದ್ರೆ ರಸ್ತೆಗೆ ಮರ ಬಿದ್ದ ಪರಿಣಾಮ ಆಂಬುಲೆನ್ಸ್ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಗರ್ಭಿಣಿಯನ್ನು ಜೋಳಿಗೆಯಲ್ಲಿ 16 ಕಿ.ಮೀ ದೂರದವರೆಗೆ ಹೊತ್ತೊಯ್ದಿದ್ದಾರೆ. ಬಳಿಕ ಅಲ್ಲಿಂದ ಆಂಬುಲೆನ್ಸ್ ನಲ್ಲಿ ಲಂಜಿಗರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸದ್ಯ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ ಎಂಬುವುದಾಗಿ ವರದಿಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಇದೇ ಜಿಲ್ಲೆಯಲ್ಲಿ ಆಂಬುಲೆನ್ಸ್ ಸೂಕ್ತ ಸಮಯಕ್ಕೆ ಬಾರದೇ ಆಗ ತಾನೇ ಹುಟ್ಟಿದ ಮಗುವೊಂದು ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿತ್ತು.

    https://www.youtube.com/watch?v=90zz3YvrXdM

  • 24 ಕೆಜಿ ತೂಕದ ಒಂದು ವರ್ಷದ ಮಗು-ಪೋಷಕರಿಗೆ ಕಂದಮ್ಮನದೇ ಚಿಂತೆ

    24 ಕೆಜಿ ತೂಕದ ಒಂದು ವರ್ಷದ ಮಗು-ಪೋಷಕರಿಗೆ ಕಂದಮ್ಮನದೇ ಚಿಂತೆ

    ಹಾಸನ: ಜನನ ಸಂದರ್ಭದಲ್ಲಿ ಅತ್ಯಂತ ತೂಕ ಹೊಂದಿರುವ ಮಗು ಹೆಗ್ಗಳಿಕೆ ಹೊಂದಿದ್ದ ಮಗು ಇಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಬಂದಿದೆ. ಸದ್ಯ ಒಂದು ವರ್ಷ ಎರಡು ತಿಂಗಳು ತುಂಬಿರುವ ಮಗು ಬರೋಬ್ಬರಿ 24 ಕೆಜಿ ತೂಕವನ್ನು ಹೊಂದಿದೆ. ಆದ್ರೆ ಪೋಷಕರಿಗೆ ಮಾತ್ರ ಮಗುವಿನ ಅಸಹಜ ತೂಕ ಗಾಬರಿ ತರಿಸಿದೆ.

    ಮೂಲತಃ ಹಾಸನ ಜಿಲ್ಲೆಯ ಅರುಣ್ ಕುಮಾರ್ ಮತ್ತು ನಂದಿನಿ ದಂಪತಿಯ ಮುದ್ದಾದ ಮಗು ಸುಖಿ. ಅಹಜ ತೂಕದಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಜನನವಾದ ಸಂದರ್ಭದಲ್ಲಿಯೇ ಸುಖಿ ತೂಕ 7.25 ಕೆಜಿ ತೂಕವಿತ್ತು. ಮಗುವಿಗೆ ಈಗ ಒಂದು ವರ್ಷ ತುಂಬಿದೆ. ಈಗಾಗಲೇ ಸುಖಿ ತೂಕ 24 ಕೆಜಿ ಆಗಿದೆ.

    ಸಹಜ ಮಕ್ಕಳಂತೆಯೇ ಆಹಾರ ತಿನ್ನುವ ಸುಖಿ ಆರೋಗ್ಯವಾಗಿದ್ದಾಳೆ. ಮಗುವನ್ನು ಪ್ರೀತಿಯಿಂದ ಸಾಕುತ್ತಿರುವ ಅರುಣ್ ದಂಪತಿಗೆ ಈಗ ಈ ತೂಕದ ಕುರಿತು ಒಂದು ಚಿಂತೆಯಾಗಿದೆ. ಅಸಹಜ ತೂಕಕ್ಕೆ ಕಾರಣ ಏನೂ ಅಂತಲೂ ತಿಳಿದಿಲ್ಲ. ಆದ್ರೆ ಮುಂದೇನು ಎನ್ನುವ ಸಹಜವಾದ ಸಂದೇಹ ಪೋಷಕರಲ್ಲಿ ಮನೆ ಮಾಡಿದೆ.

    ಎಲ್ಲಾ ಅಪ್ಪಾ ಅಮ್ಮಂದಿರಂತೆ ಅರುಣ್ ಮತ್ತು ನಂದಿನಿ ಮಗುವನ್ನು ಮುದ್ದುಮುದ್ದಾಗಿ ಸಾಕುತಿದ್ದಾರೆ. ಆದ್ರೆ ಅಸಹಜ ತೂಕ ಮುಂದಕ್ಕೇನಾದ್ರು ತೊಂದರೆ ಆಗಬಹುದಾ ಎನ್ನುವ ಸಣ್ಣ ಸಂಶಯವಿದೆ. ಹಾಸನ ಮೂಲದ ಅರುಣ್ ದಂಪತಿ ಈಗ ವಾಸ ಇರೋದು ಬಳ್ಳಾರಿಯಲ್ಲಿ ತಮ್ಮ ಚಿಕ್ಕಪ್ಪನ ಬೇಕರಿಯಲ್ಲಿ ಕೆಲಸ ಮಾಡುವ ಅರುಣ್ ಸದ್ಯ ತಮ್ಮ ಸಂಸಾರ ಸಾಗಿಸಲು ಆಗುವಷ್ಟು ದುಡಿಯುತ್ತಿದ್ದಾರೆ.

    https://www.youtube.com/watch?v=wS-RjE18O1Q

    ತಮ್ಮ ಮಗುವಿನ ಈ ಅಸಹಜ ತೂಕಕ್ಕೆ ಏನಾದ್ರು ಚಿಕಿತ್ಸೆಯ ಅಗತ್ಯ ಇದಿಯಾ, ಎನೂ ತೊಂದ್ರೆ ಆಗೋಲ್ವ ಅಥವಾ ಮುಂದೆ ಸರಿಯಾಗಬಹುದಾ? ಎನ್ನುವ ಕುರಿತು ಸಹಜ ಪ್ರಶ್ನೆಗಳು ಅವರನ್ನು ಕಾಡುತ್ತಿವೆ. ಮಗುವಿಗೆ ಚಿಕಿತ್ಸೆ ಮಾಡಿಸಲೇಬೇಕಾದ್ರೆ ನಮಗೆ ಯಾರಾದ್ರೂ ಉಚಿತವಾಗಿ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಮುಗ್ಧತೆಯಿಂದ ಕೇಳಿಕೊಂಡಿದ್ದು, ದಂಪತಿಗೆ ಸಹಾನೂಭೂತಿಯ ಅವಶ್ಯಕತೆ ಇದೆ.

     

     

  • ದಾದಿಯರೇ ಹೆರಿಗೆ ಮಾಡಿಸಲು ಪ್ರಯತ್ನಿಸಿ ಕೊನೆಗೆ ಬೇರೆ ಆಸ್ಪತ್ರೆಗೆ ಕಳಿಸಿದ್ರು- ತಾಯಿ ಹೊಟ್ಟೆಯಲ್ಲೇ ಮಗು ಸಾವು

    ದಾದಿಯರೇ ಹೆರಿಗೆ ಮಾಡಿಸಲು ಪ್ರಯತ್ನಿಸಿ ಕೊನೆಗೆ ಬೇರೆ ಆಸ್ಪತ್ರೆಗೆ ಕಳಿಸಿದ್ರು- ತಾಯಿ ಹೊಟ್ಟೆಯಲ್ಲೇ ಮಗು ಸಾವು

    ಬೆಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಮೃತಪಟ್ಟ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಆನೇಕಲ್ ತಾಲೂಕಿನ ದೊಮ್ಮಸಂದ್ರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಹೆರಿಗೆಗಾಗಿ ನೇತ್ರಾವತಿ ಎಂಬ ಮಹಿಳೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದರಿಂದ ಹೆರಿಗೆ ಮಾಡಿಸಲು ತಿಣುಕಾಡಿದ ದಾದಿಯರು ವಾಣಿ ವಿಲಾಸ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿ ಕೈ ತೊಳೆದುಕೊಂಡಿದ್ದರು. ವಾಣಿ ವಿಲಾಸ್ ಗೆ ಹೋಗಲು ದೂರವಾಗಿದ್ದರಿಂದ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾದಾಗ ತಾಯಿ ಹೊಟ್ಟೆಯಲ್ಲೇ ಮಗು ಮೃತಪಟ್ಟಿರುವು ಗೊತ್ತಾಗಿದೆ.

    ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿದೆಯೆಂದು ಆರೋಪಿಸಿ ಆಸ್ಪತ್ರೆ ಮುಂಭಾಗದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ನೇತ್ರಾವತಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದರಿಂದಲೇ ಈ ಎಡವಟ್ಟಾಗಿದೆಯೆಂದು ಆರೋಪಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

     

  • ಹೆಣ್ಣು ಮಗುವಿಗೆ ತಾಯಿಯಾದ ಸನ್ನಿ ಲಿಯೋನ್

    ಹೆಣ್ಣು ಮಗುವಿಗೆ ತಾಯಿಯಾದ ಸನ್ನಿ ಲಿಯೋನ್

    ನವದೆಹಲಿ: ಸನ್ನಿ ಲಿಯೋನ್ ಹಾಗೂ ಆಕೆಯ ಪತಿ ವೆಬರ್ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದಾರೆ. 21 ತಿಂಗಳ ಪುಟ್ಟ ಮಗು ನಿಶಾ ಈಗ ಸನ್ನಿ ಹಾಗೂ ವೆಬರ್ ದಂಪತಿ ಮನೆಗೆ ಹೊಸ ಸದಸ್ಯಳಾಗಿದ್ದಾಳೆ.

    ಮಗುವಿಗೆ ನಿಶಾ ಕೌರ್ ವೆಬರ್ ಎಂದು ಹೆಸರಿಡಲಾಗಿದೆ. ಮೊದಲಿಗೆ ನಟಿ ಶೆರ್ಲಿನ್ ಚೋಪ್ರಾ ಈ ವಿಷಯವನ್ನ ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಸನ್ನಿ ದಂಪತಿಗೆ ಶುಭ ಹಾರೈಸಿದ್ರು. ಸನ್ನಿ ಕೂಡ ಇದಕ್ಕೆ ಪ್ರತಿಕ್ರಿಯಿಸಿ ಧನ್ಯವಾದ ಅಂದ್ರು. ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ 2011ರಲ್ಲಿ ವಿವಾಹವಾಗಿದ್ದು ನಿಶಾ ಇವರ ಮೊದಲ ಮಗುವಾಗಿದೆ.

    ಮಹಾರಾಷ್ಟ್ರದ ಲಾತೂರ್‍ನಲ್ಲಿರೋ ಅನಾಥಾಶ್ರಮವೊಂದಕ್ಕೆ ಸನ್ನಿ ದಂಪತಿ 2 ವರ್ಷಗಳ ಹಿಂದೆ ಭೇಟಿ ನೀಡಿದ್ದರು. ಈ ವೇಳೆ ಮಗುವನ್ನ ದತ್ತು ಪಡೆಯಲು ಅರ್ಜಿ ಸಲ್ಲಿಸಿದ್ದರು. ನಾನು ಮಗುವೊಂದನ್ನ ದತ್ತು ಪಡೆಯುವ ಬಗ್ಗೆ ಯಾವತ್ತೂ ಯೋಚಿಸಿರಲಿಲ್ಲ. ಆದ್ರೆ ಅನಾಥಾಶ್ರಮಗಳಲ್ಲಿ ಜನರು ಮಾಡುತ್ತಿರುವ ಕೆಲಸ ಕಂಡು ನನ್ನ ಮನಸ್ಸು ಬದಲಾಯಿತು ಎಂದು ಸನ್ನಿ ಪತಿ ಡೇನಿಯಲ್ ವೆಬರ್ ಹೇಳಿದ್ದಾರೆ. ಮಗುವಿನ ಮೂಲ ಹೆಸರು ನಿಶಾ ಆಗಿದ್ದು, ನಾವು ಅದನ್ನು ಬದಲಾಯಿಸದಿರಲು ನಿರ್ಧರಿಸಿದೆವು ಎಂದು ಸನ್ನಿ ಹೇಳಿದ್ದಾರೆ.

    ಸನ್ನಿ ಲಿಯೋನ್ 2012ರಲ್ಲಿ ಜಿಸ್ಮ್ 2 ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ನೀಡಿದ್ರು. ನಂತರ ರಾಗಿಣಿ ಎಮ್‍ಎಮ್‍ಎಸ್-2, ಏಕ್ ಪಹೇಲಿ ಲೀಲಾ ಹಾಗೂ ಮಸ್ತಿಝಾದೆ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಶಾರೂಖ್ ಖಾನ್ ಅಭಿನಯದ ರಯೀಸ್ ಚಿತ್ರದಲ್ಲಿ ಸನ್ನಿ ಲೈಲಾ ಮೈ ಮೈಲಾ ಹಾಡಿಗೆ ಹೆಜ್ಜೆ ಹಾಕಿದ್ರು. ಸನ್ನಿಯ ಮುಂಬರುವ ಚಿತ್ರ ಬಾದ್‍ಶಾಹೋ ಮತ್ತು ತೇರಾ ಇಂತಿಜಾರ್. ಹಾಗೆ ಸನ್ನಿ ಶೀಘ್ರದಲ್ಲೇ ಸ್ಪ್ಲಿಟ್ಸ್‍ವಿಲ್ಲಾ ಎಂಬ ರಿಯಾಲಿಟಿ ಶೋವೊಂದನ್ನ ನಡೆಸಿಕೊಡಲಿದ್ದಾರೆ.

     

  • 3 ವರ್ಷದ ಕಂದಮ್ಮನ ದೇಹದಿಂದ 7 ಸೂಜಿಗಳನ್ನ ಹೊರತೆಗೆದ ವೈದ್ಯರು!

    3 ವರ್ಷದ ಕಂದಮ್ಮನ ದೇಹದಿಂದ 7 ಸೂಜಿಗಳನ್ನ ಹೊರತೆಗೆದ ವೈದ್ಯರು!

    – ತಾಯಿ ಕೆಲಸಕ್ಕಿದ್ದ ಮಾಲೀಕನಿಂದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

    ನವದೆಹಲಿ: ಕಠಿಣವಾದ ಹಾಗೂ ಸವಾಲಿನ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಮೂರು ವರ್ಷದ ಪುಟ್ಟ ಕಂದಮ್ಮನ ದೇಹದಲ್ಲಿದ್ದ 7 ಸೂಜಿಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವಿನ ತಾಯಿ ಕೆಲಸಕ್ಕಿದ್ದ ಮನೆಯ ಮಾಲೀಕ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಆರೋಪಿಸಲಾಗಿದೆ.

    ವರದಿಯ ಪ್ರಕಾರ ಪುರುಲಿಯಾ ಮೂಲದ ಬಾಲಕಿಯ ತಾಯಿ ಮಗುವನ್ನ ಬಂಕುರಾ ಸಮ್ಮಿಲಾನಿ ಮೆಡಿಕಲ್ ಕಾಲೇಜಿಗೆ ಕರೆತಂದಿದ್ದರು. ಆದ್ರೆ ಮಗುವಿನ ದೇಹದ ಮೇಲೆ ಗಾಯಗಳಿದ್ದರಿಂದ ಎಸ್‍ಎಸ್‍ಕೆಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಮಗುವನ್ನು ಶನಿವಾರದಂದು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು.

    ಮಂಗಳವಾರದಂದು ವೈದ್ಯರು ಸುಮಾರು 2 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು 4 ಇಂಚು ಉದ್ದದ 7 ಸೂಜಿಗಳನ್ನ ಹೊರತೆಗೆದಿದ್ದಾರೆ. ಶಿಶುವೈದ್ಯ, ಶಸ್ತ್ರಚಿಕಿತ್ಸಕ, ಸ್ತ್ರೀರೋಗ ತಜ್ಞರು, ಮೂಳೆ ಹಾಗು ಅರವಳಿಕೆ ತಜ್ಞರ ತಂಡ ಸೇರಿ ಮಗುವಿನ ಸಶ್ತ್ರಚಿಕಿತ್ಸೆ ನಡೆಸಿದ್ರು. ಬಾಲಕಿಯ ಲಿವರ್‍ನಲ್ಲಿ 3 ಸೂಜಿಗಳಿದ್ದವು ಅವುಗಳನ್ನ ಹೊರತೆಗೆಯುವುದು ಕಠಿಣವಾಗಿತ್ತು ಎಂದು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರೊಬ್ಬರು ಹೇಳಿದ್ದಾರೆ. ಮಗುವಿನ ಗುಂಪ್ತಾಂಗದಲ್ಲೂ ಸೂಜಿ ಇತ್ತು ಎಂದು ವರದಿಯಾಗಿದೆ.

    ಮಗುವಿನ ತಾಯಿ 62 ವರ್ಷದ ಸನಾತನ್ ಎಂಬವನ ಮನೆಯಲ್ಲಿ ಮನೆಕೆಲಸಕ್ಕಿದ್ದರು. 15-20 ದಿನಗಳ ಹಿಂದೆ ಮಗುವಿನ ದೇಹಕ್ಕೆ ಸೂಜಿ ಚುಚ್ಚಲಾಗಿದ್ದು, ಇದ್ರಂದ ಮಗು ಅಸ್ವಸ್ಥಗೊಂಡಿತ್ತು. ಮಾತ್ರವಲ್ಲದೇ ಆಕೆ ಊಟ ಮಾಡುವುದನ್ನ ಬಿಟ್ಟಿದ್ದಳು. ಮಗುವಿನ ಈ ಸ್ಥಿತಿಯನ್ನು ನೋಡಿ ನೆರೆಹೊರೆಯವರು ಮಾಲೀಕ ಸನಾತನ್ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದರು.

    ಲೈಂಗಿಕ ದೌರ್ಜನ್ಯದಿಂದಾಗಿ ಮಗು ಆಘಾತಗೊಂಡಿದ್ದರಿಂದ ಆಕೆ ಸಹಜ ಸ್ಥಿತಿ ಬರುವವರೆಗೆ ಕಾದು ಶಸ್ತ್ರಚಿಕಿತ್ಸೆಯನ್ನು ತಡವಾಗಿ ಮಾಡಬೇಕಾಯಿತು ಎಂದು ವೈದ್ಯರ ತಂಡ ಹೇಳಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಮಗುವಿನ ಆರೋಗ್ಯ ಸುಧಾರಿಸಿದೆ. ಆದ್ರೆ ಚಿಕಿತ್ಸೆ ಮುಂದುವರೆದಿದೆ ಅಂತ ಆಸ್ಪತ್ರೆ ನಿರ್ದೇಶಕ ಅಜಯ್ ರಾಯ್ ತಿಳಿಸಿದ್ದಾರೆ. ಮಗುವನ್ನ 48 ಗಂಟೆಗಳ ಕಾಲ ಶಿಶು ತೀವ್ರ ನಿಘಾ ಘಟಕದಲ್ಲಿ ಇರಿಸಲಾಗಿದೆ.

    ಸನಾತನ್ ಮಗುವಿಗೆ ಕಳೆದ 1 ವರ್ಷದಿಂದ ದೈಹಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಸನಾತನ್ ವಿರುದ್ಧ ಪುರುಲಿಯಾದ ಮಕ್ಕಳ ಸಹಾಯವಾಣಿಯವರು ಪೋಕ್ಸೋ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿದ್ದಾರೆ. ಆರೋಪಿ ಸನಾತನ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

  • ಹೆಣ್ಣು ಮಗುವಿಗೆ ಜನ್ಮ ನೀಡಿದ ಬ್ರಿಟನ್ ವ್ಯಕ್ತಿ!

    ಹೆಣ್ಣು ಮಗುವಿಗೆ ಜನ್ಮ ನೀಡಿದ ಬ್ರಿಟನ್ ವ್ಯಕ್ತಿ!

    ಲಂಡನ್: ಬ್ರಿಟನ್ ಮೂಲದ ವ್ಯಕ್ತಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ.

    21 ವರ್ಷದ ಹೇಡನ್ ಕ್ರಾಸ್ ಎಂಬವರು ಬ್ರಿಟನ್ ನಲ್ಲಿ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ ವ್ಯಕ್ತಿಯಾಗಿದ್ದಾರೆ. ಜೂನ್ 16ರಂದು ನಗರದ ರಾಯಲ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನನವಾಗಿದೆ. ಸದ್ಯ ಕ್ರಾಸ್ ಮಗುವಿಗೆ `ಟ್ರಿನಿಟಿ ಲೇಘ್ ‘ ಅಂತ ಹೆಸರಿಟ್ಟಿದ್ದಾರೆ.

    `ಟ್ರಿನಿಟಿ ಎಲ್ಲಾ ರೀತಿಯಲ್ಲೂ ಪರಿಪೂರ್ಣಳಾಗಿದ್ದಾಳೆ. ಅವಳು ಆರೋಗ್ಯವಾಗಿದ್ದಾಳೆ. ಮಗಳನ್ನು ಪಡೆದ ನಾನು ತುಂಬಾ ಅದೃಷ್ಟವಂತ’ ಅಂತ ಕ್ರಾಸ್ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.

    ಹೇಡಿನ್ ಕ್ರಾಸ್ ಹುಟ್ಟುವಾಗ ಹೆಣ್ಣಾಗಿದ್ದು, ಸಲಿಂಗಿಯಾಗಲು ಚಿಕಿತ್ಸೆ ಪಡೆದಿದ್ದರು. ಆ ಬಳಿಕ ಮೂರು ವರ್ಷಗಳ ಕಾಲ ಪುರುಷನಾಗಿದ್ದರು. ಪುರುಷನಾಗಲು ಹಾರ್ಮೋನ್ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಈ ಮಧ್ಯೆ ಕ್ರಾಸ್ ಗೆ ತಾನು ಮಗು ಹೊಂದಬೇಕು ಎನ್ನುವ ಹಂಬಲ ಉಂಟಾಯಿತು. ಹೀಗಾಗಿ ಅವರು ಹಾರ್ಮೊನ್ ಚಿಕಿತ್ಸೆ ಪಡೆಯುವುದನ್ನು ನಿಲ್ಲಿಸಿದ್ದರು.

    ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಭೇಟಿಯಾದ ದಾನಿಯೊಬ್ಬರು ವೀರ್ಯ ನೀಡಲು ಮುಂದಾದ್ರು. ಈ ಮೂಲಕ ಕ್ರಾಸ್ ಗರ್ಭ ಧರಿಸಿದ್ದು, ಕಳೆದ ಜನವರಿ ತಿಂಗಳಿನಲ್ಲಿ ಈ ಬಗ್ಗೆ ಪ್ರಕಟಿಸಿದ್ದರು. ಅಂತೆಯೇ ಜೂನ್ 16ರಂದು ಮಗುವಿಗೆ ಜನ್ಮ ನೀಡಿದ್ದು, ಸದ್ಯ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಾನು ತಾಯಿ ಅಂತಾ ನಮೂದಿಸಿದ್ದಾರೆ. ಆದ್ರೆ ಮಗುವಿನ ತಂದೆಯ ಹೆಸರನ್ನು ಉಲ್ಲೇಖಿಸಿಲ್ಲ.

    `ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ವೀರ್ಯ ದಾನಿಗಳ ನೆರವಿನಿಂದ ಗರ್ಭ ಧರಿಸಿದ್ದೆ. ಈ ಮೊದಲು ಮಗು ಪಡೆಯಲು ವೀರ್ಯ ದಾನಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹುಡುಕುತ್ತಿದ್ದೆ. ಈ ವೇಳೆ ವ್ಯಕ್ತಿಯೊಬ್ಬರು ಸಹಾಯಕ್ಕೆ ಬಂದರು. ಅವರಿಗೆ ನಾನಿನ್ನೂ ಏನೂ ಕೊಟ್ಟಿಲ್ಲ. ಸದ್ಯ ಅವರು ಎಲ್ಲಿದ್ದಾರೆ ಎಂಬುವುದು ತನಗೆ ಗೊತ್ತಿಲ್ಲ’ ಅಂತ ಹೇಳಿದ್ದಾರೆ.

    ಇದೀಗ ಮತ್ತೆ ಲಿಂಗ ರೂಪಾಂತರ ಚಿಕಿತ್ಸೆಯನ್ನು ಮುಂದುವರಿಸಲು ಕ್ರಾಸ್ ತೀರ್ಮಾನಿಸಿದ್ದಾರೆ. ಬ್ರಿಟನ್ ನಲ್ಲಿ ವ್ಯಕ್ತಿಯೊಬ್ಬರಿಗೆ ಮಗು ಜನಿಸಿರೋದು ಇದೇ ಮೊದಲು ಎಂದು ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ.