Tag: Baby

  • ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿದ್ಳು ಪಾಪಿ ತಾಯಿ

    ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿದ್ಳು ಪಾಪಿ ತಾಯಿ

    ಹೈದರಾಬಾದ್: ಅಕ್ರಮ ಸಂಬಂಧಕ್ಕೆ ಅಡ್ಡಿಯಾಯಿತೆಂದು ಪಾಪಿ ತಾಯಿಯೊಬ್ಬಳು ತನ್ನ 4 ವರ್ಷದ ಮಗುವನ್ನ ಬಿಸಿ ಕಾವಲಿಯ ಮೇಲೆ ಕೂರಿಸಿದ ಘಟನೆ ತೆಲಂಗಾಣದ ಎಸ್‍ಆರ್ ನಗರದಲ್ಲಿ ಭಾನುವಾರದಂದು ನಡೆದಿದೆ.

    ಮೂಲತಃ ಶ್ರೀಕಾಕುಲಂ ಜಿಲ್ಲೆಯವಳಾದ ಲಲಿತಾ ಅದೇ ಜಿಲ್ಲೆಯವನಾದ ಪ್ರಕಾಶ್ ಎಂಬವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಗಂಡನನ್ನು ತೊರೆದಿದ್ದ ಲಲಿತಾ 4 ವರ್ಷದ ಮಗಳನ್ನು ತನ್ನೊಂದಿಗೆ ಇರಿಸಿಕೊಂಡಿದ್ದಳು. 9 ತಿಂಗಳ ಹಿಂದೆ ಇಬ್ಬರೂ ಹೈದರಾಬಾದ್‍ಗೆ ಬಂದಿದ್ದರು. ಅಂದಿನಿಂದ ಲಲಿತಾ ಎಸ್‍ಆರ್ ನಗರದ ಶ್ರೀನಿವಾಸ್ ನಗರದ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಳು. ಪ್ರಕಾಶ್ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಆದ್ರೆ ಮಗಳು ರೂಪಳನ್ನ ದೂರ ಮಾಡುವಂತೆ ಪ್ರಕಾಶ್ ಲಲಿತಾಗೆ ಹೇಳುತ್ತಲೇ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಈ ಮಧ್ಯೆ ಲಲಿತಾ ತನ್ನ ಮಗಳನ್ನ ಬಿಸಿಯಾದ ಕಾವಲಿ ಮೇಲೆ ಕೂರಿಸಿ, ನಂತರ ಅದರ ಮೇಲೆ ನಿಲ್ಲಿಸಿ ವಿಕೃತಿ ಮೆರೆದಿದ್ದಾಳೆ. ಈ ಜೋಡಿ ಮಗುವನ್ನ ಮಹಿಳಾ ಮತ್ತು ಮಕ್ಕಳ ಕೇಂದ್ರವಾದ ಭರೋಸಾಗೆ ಕರೆದುಕೊಂಡು ಹೋಗಿದ್ದು, ಇದು ಅನಾಥ ಮಗು. ರಸ್ತೆ ಬದಿಯಲ್ಲಿ ಸಿಕ್ಕಿತು ಎಂದು ಹೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ಭರೋಸಾ ಸಿಬ್ಬಂದಿ ಅಧಿಕೃತವಾಗಿ ದೂರು ದಾಖಲಿಸಲು ಮೂವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಗುವಿನ ದೇಹದ ಮೇಲೆ ಗಾಯದ ಗುರುತುಗಳನ್ನ ನೋಡಿದ ಪೊಲೀಸರಿಗೆ ಅನುಮಾನ ಬಂದಿದ್ದು, ಎಸ್‍ಆರ್ ನಗರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

    ಪ್ರಕಾಶ್ ಹಾಗೂ ಲಲಿತಾ ಮಗುವಿನಿಂದ ಮುಕ್ತಿ ಪಡೆಯಲು ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ತಮ್ಮ ಸಂಬಂಧಕ್ಕೆ ಮಗು ಅಡ್ಡಿಯಾಯಿತೆಂದು ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿ ಹಿಂಸೆ ನೀಡಿದ್ದಾರೆ.

    ಸದ್ಯ ಪೊಲೀಸರು ಲಲಿತಾ ಹಾಗೂ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ. ಮಗುವನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • 3 ವರ್ಷದ ಬಾಲಕನ ಕುತ್ತಿಗೆಗೆ ಬಿಸಿ ಸೌಟಿನಲ್ಲಿ ಹೊಡೆದು ಅಂಗನವಾಡಿ ಸಹಾಯಕಿಯಿಂದ ಹಲ್ಲೆ

    3 ವರ್ಷದ ಬಾಲಕನ ಕುತ್ತಿಗೆಗೆ ಬಿಸಿ ಸೌಟಿನಲ್ಲಿ ಹೊಡೆದು ಅಂಗನವಾಡಿ ಸಹಾಯಕಿಯಿಂದ ಹಲ್ಲೆ

    ಚಾಮರಾಜನಗರ: ಒಂದು ಅಂಗನವಾಡಿಯಿಂದ ಮತ್ತೊಂದು ಅಂಗನವಾಡಿಗೆ ಹೋಗಿದ್ದಾನೆ ಎಂದು ಸಹಾಯಕಿಯೊಬ್ಬಳು ಬಾಲಕನಿಗೆ ಸಾಂಬರ್ ನ ಬಿಸಿ ಸೌಟಿನಲ್ಲಿ ಹಲ್ಲೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಬಸವಪುರ ಗ್ರಾಮದಲ್ಲಿ ಜರುಗಿದೆ.

    ಗ್ರಾಮದ ಜಡೆಸ್ವಾಮಿ ಎಂಬವರ ಮೂರು ವರ್ಷದ ಹಾರ್ಥಿಕ್ ಎಂಬಾತ ಹಲ್ಲೆಗೊಳಗಾದ ಬಾಲಕ. ಬಾಲಕ ಒಂದು ಅಂಗನವಾಡಿಯಿಂದ ಮತ್ತೊಂದು ಅಂಗನವಾಡಿಗೆ ಹೋದ ಎಂಬ ಕಾರಣಕ್ಕೆ ಸಹಾಯಕಿ ಶಿವಮಲ್ಲಮ್ಮ ಸಾಂಬರ್ ನ ಬಿಸಿ ಸೌಟಿನಲ್ಲಿ ಆತನ ಕುತ್ತಿಗೆ ಭಾಗಕ್ಕೆ ಹೊಡೆದಿದ್ದಾರೆ. ಇದರಿಂದ ಬಾಲಕನ ಕುತ್ತಿಗೆಯ ಭಾಗ ಸುಟ್ಟು ಹೋಗಿದ್ದು, ಗಂಭೀರ ಗಾಯಗಳಾಗಿವೆ.

    ಅಂಗನವಾಡಿ ಸಹಾಯಕಿ ಸರಿಯಾಗಿ ಮಗುವನ್ನು ನೋಡಿಕೊಂಡಿದ್ದರೆ ಮಗು ಬೇರೆ ಅಂಗನವಾಡಿಗೆ ಹೋಗುತ್ತಿರಲಿಲ್ಲ. ಸಹಾಯಕಿ ಬೇಜವಾಬ್ದಾರಿಯಿಂದ ನಮ್ಮ ಮಗನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

    ಈ ಬಗ್ಗೆ ಹಾರ್ಥಿಕ್ ಪೋಷಕರು ರಾಮಸಮುದ್ರದ ಪೂರ್ವ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

     

  • ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಟ್ಯಾಂಕ್‍ ನಲ್ಲಿ ಶವವಾಗಿ ಪತ್ತೆ

    ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಟ್ಯಾಂಕ್‍ ನಲ್ಲಿ ಶವವಾಗಿ ಪತ್ತೆ

    ನವದೆಹಲಿ: ಮನೆಯ ಹೊರಗಡೆ ಆಟವಾಡುತ್ತಿದ್ದ 2 ವರ್ಷದ ಕಂದಮ್ಮ ಏಕಾಏಕಿ ಕಾಣೆಯಾಗಿ, ಬಳಿಕ ನೀರಿನ ಟ್ಯಾಂಕಿನಲ್ಲಿ ಶವವಾಗಿ ಪತ್ತೆಯಾಗಿರೋ ಘಟನೆ ಚರೋಲಿಯ ದಿಘಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ಸುಭಾಷ್ ಗೌರವ್ ತಿವಾರಿ ಎಂದು ಗುರುತಿಸಲಾಗಿದೆ. ಮೃತ ಮಗುವಿನ ತಂದೆ ಗೌರವ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದೆಯಷ್ಟೇ ಉತ್ತರಪ್ರದೇಶದಿಂದ ಪುಣೆಗೆ ಬಂದಿದ್ದರು. ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಹಾಗೂ ಆತನ ಭವಿಷ್ಯದ ದೃಷ್ಟಿಯಿಂದ ನಾವು ಇಲ್ಲಿಗೆ ಬಂದಿದ್ದೆವು ಅಂತ ಗೌರವ್ ದುಃಖ ತೋಡಿಕೊಂಡರು.

    ಕಳೆದ ಭಾನುವಾರ ಮಧ್ಯಾಹ್ನ ತಾಯಿ ಮಗುವಿಗೆ ಊಟ ಮಾಡಿಸುತ್ತಿದ್ದರು. ಈ ಮಧ್ಯೆ ಗ್ಯಾಸ್ ಆಫ್ ಮಾಡಲೆಂದು ಮನೆಯೊಳಗೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಮಗ ಅಲ್ಲಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಮಗನಿಗಾಗಿ ಎಲ್ಲಾ ಕಡೆ ಹುಡುಕಾಡಿದರು. ಮಗ ಎಲ್ಲೂ ಕಾಣಿಸದಿದ್ದಾಗ ಕಿಡ್ನಾಪ್ ಆಗಿರಬಹುದೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪೋಷಕರ ದೂರಿನಂತೆ ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಮನೆಯ ಪಕ್ಕದಲ್ಲಿದ್ದ ನೀರಿನ ಟ್ಯಾಂಕ್ ಮುಚ್ಚಳ ತೆಗೆದು ನೋಡಿದ್ದಾರೆ. ಈ ವೇಳೆ ಕಂದಮ್ಮನ ಶವ ನೀರಿನಲ್ಲಿ ತೇಲುತ್ತಿರುವುದು ಬೆಳಕಿಗೆ ಬಂದಿದೆ. ಮಗುವಿನ ತಲೆಯ ಮೇಲೆ ಗಾಯಗಳಿದ್ದಿದ್ದರಿಂದ ಆತ ಟ್ಯಾಂಕಿನೊಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯ ಈ ಕುರಿತು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • 1 ತಿಂಗ್ಳ ಮಗುವಿನ ಜೀವ ಉಳಿಸಲು 7 ಗಂಟೆಯಲ್ಲಿ 516 ಕಿ.ಮೀ ಕ್ರಮಿಸಿದ್ರು ಈ ಆಂಬುಲೆನ್ಸ್ ಡ್ರೈವರ್

    1 ತಿಂಗ್ಳ ಮಗುವಿನ ಜೀವ ಉಳಿಸಲು 7 ಗಂಟೆಯಲ್ಲಿ 516 ಕಿ.ಮೀ ಕ್ರಮಿಸಿದ್ರು ಈ ಆಂಬುಲೆನ್ಸ್ ಡ್ರೈವರ್

    ತಿರುವನಂತಪುರಂ: ರೋಗಿಯ ಪ್ರಾಣ ಉಳಿಸಲು ಆಂಬುಲೆನ್ಸ್ ಗಳು ಸೂಕ್ತ ಸಮಯಕ್ಕೆ ಅವರನ್ನ ಆಸ್ಪತ್ರೆಗೆ ಕರೆದೊಯ್ಯುವುದು ತುಂಬಾ ಮುಖ್ಯವಾಗುತ್ತದೆ. ಹೀಗೆ ಒಂದು ತಿಂಗಳ ಮಗುವಿನ ಪ್ರಾಣ ಉಳಿಸುವ ಸಲುವಾಗಿ ಆಂಬುಲೆನ್ಸ್ ಚಾಲಕರೊಬ್ಬರು ಉತ್ತರ ಕಣ್ಣೂರು ನಗರದಿಂದ ಕೇರಳ ರಾಜಧಾನಿ ತಿರುವನಂತಪುರಂವರೆಗೆ ಆಂಬುಲೆನ್ಸ್ ನಲ್ಲಿ 7 ಗಂಟೆ ಸಮಯದಲ್ಲಿ ಬರೋಬ್ಬರಿ 516 ಕಿ.ಮೀ ಕ್ರಮಿಸಿ ಸುದ್ದಿಯಾಗಿದ್ದಾರೆ.

    ಗೂಗಲ್ ಮ್ಯಾಪ್‍ನ ಪ್ರಕಾರ ನೋಡಿದರೆ ಸ್ವಲ್ಪ ಟ್ರಾಫಿಕ್ ನಡುವೆ ಇಷ್ಟು ದೂರವನ್ನು ಕ್ರಮಿಸಲು ಬರೋಬ್ಬರಿ 13 ಗಂಟೆ ಸಮಯ ಬೇಕು. ಅದರಲ್ಲೂ ಕೇರಳದ ಕಿರಿದಾದ ರಸ್ತೆಗಳಲ್ಲಿ ವಾಹನದಟ್ಟಣೆ ನೋಡಿದ್ರೆ ಸುಮಾರು 14 ಗಂಟೆಗಳೇ ಬೇಕಾಗಬಹುದು. ಹೀಗಿದ್ದರೂ ಆಂಬುಲೆನ್ಸ್ ಚಾಲಕ ಕೇವಲ 7 ಗಂಟೆಗಳಲ್ಲಿ ಆಸ್ಪತ್ರೆಗೆ ಮಗುವನ್ನ ರವಾನಿಸಿದ್ದಾರೆ. 15 ನಿಮಿಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದನ್ನು ಕಡಿತಗೊಳಿಸಿದ್ರೆ ಇವರ ಪ್ರಯಾಣ 6 ಗಂಟೆ 45 ನಿಮಿಷಕ್ಕೆ ಇಳಿಯುತ್ತದೆ. ಅಂದ್ರೆ ಸರಾಸರಿ ವೇಗ ಗಂಟೆಗೆ 76.4 ಕಿ.ಮೀ ಆಗುತ್ತದೆ.

    ಆಂಬುಲೆನ್ಸ್ ಓಡಿಸುತ್ತಿದ್ದ ಚಾಲಕ ತಮೀಮ್. ಇವರು ಮೂಲತಃ ಕಾಸರಗೋಡಿನವರು. ಬುಧವಾರ ರಾತ್ರಿ ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜಿನಿಂದ ತಮೀಮ್ ಅವರಿಗೆ ಕರೆ ಬಂದಿತ್ತು. 31 ದಿನಗಳ ಪುಟ್ಟ ಕಂದಮ್ಮ ಫಾತೀಮಾ ಲಬಿಯಾಳನ್ನು ಕಣ್ಣೂರಿನಿಂದ ತಿರುವನಂತಪುರಂನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು.

    ಏರ್ ಆಂಬುಲೆನ್ಸ್ ವ್ಯವಸ್ಥೆಗೆ 5 ಗಂಟೆ ಬೇಕಿತ್ತು:  ಮಗು ವಾರದಿಂದ ದೀರ್ಘ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ತುರ್ತು ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕಿದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ವಿಮಾನದಲ್ಲಿ ಕರೆದುಕೊಂಡು ಹೋಗೋಣವೆಂದರೆ ಹತ್ತಿರದ ಮಂಗಳೂರು ಮತ್ತು ಕ್ಯಾಲಿಕಟ್ ವಿಮಾನ ನಿಲ್ದಾಣಗಳ ನಡುವೆ ಪ್ರಯಾಣಿಸಲು 3 ಗಂಟೆ ಬೇಕಿತ್ತು. ಆದ್ರೆ ಏರ್ ಆಂಬುಲೆನ್ಸ್ ವ್ಯವಸ್ಥೆ ಮಾಡಲು ಕನಿಷ್ಠ 5 ಗಂಟೆ ಸಮಯ ಬೇಕಿತ್ತು. ಆದ್ದರಿಂದ ರಸ್ತೆ ಮಾರ್ಗದಲ್ಲೇ ಮಗುವನ್ನ ಕಣ್ಣೂರಿನಿಂದ ತಿರುವನಂತಪುರಂಗೆ ರವಾನಿಸಲು ತೀರ್ಮಾನಿಸಿದ್ದರು.

    ಪೊಲೀಸ್, ಎನ್‍ಜಿಓ ಸಹಾಯ: ಮುಂದೆ ನಡೆದಿದ್ದೆಲ್ಲವೂ ಸಿನಿಮಾ ರೀತಿಯಲ್ಲಿತ್ತು. ತಮೀಮ್ ತನಗೆ ನಿಯೋಜಿಸಿದ ಕೆಲಸವನ್ನ ಕೈಗೆತ್ತಿಕೊಂಡ್ರು. ಕೇರಳ ಪೊಲೀಸರು ಆಂಬುಲೆನ್ಸ್ ಗಾಗಿ ರಸ್ತೆ ಅನುವು ಮಾಡಿಕೊಟ್ಟರು. ಇದರಲ್ಲಿ ಭಾಗಿಯಾದ ಮೊದಲ ಅಧಿಕಾರಿ ಕಣ್ಣೂರಿನ ಜಿಲ್ಲಾ ಪೊಲೀಸ್ ಮುಖ್ಯಸ್ಥರು. ಇಡೀ ಪ್ರಯಾಣದ ಜೊತೆ ಸಹಕರಿಸಲು ವಿಶೇಷ ತಂಡವನ್ನು ರಚಿಸಿದ್ರು. ಆಂಬುಲೆನ್ಸ್ ಜೊತೆಗೆ ಹೋಗಲು ಒಂದು ತಂಡ ಹಾಗೂ ತಮೀಮ್ ಅವರ ವಾಹನ ಹೋಗುವ ರಸ್ತೆಗಳಲ್ಲಿ ಟ್ರಾಫಿಕ್ ನಿಯಂತ್ರಿಸಲು ಮತ್ತೊಂದು ತಂಡವನ್ನು ರಚಿಸಿದ್ದರು. ಕೇವಲ ರಾಜ್ಯ ಪೊಲೀಸರಷ್ಟೇ ಅಲ್ಲ, ಮಗುವಿನ ಪ್ರಯಾಣದ ಬಗ್ಗೆ ವಿಷಯ ತಿಳಿದು ಕೇರಳ ಚೈಲ್ಡ್ ಪ್ರೊಟೆಕ್ಷನ್ ಟೀಮ್ ಎಂಬ ಎನ್‍ಜಿಓ ಕೂಡ ಪೊಲೀಸರೊಂದಿಗೆ ಕೈ ಜೋಡಿಸಿದ್ರು.

    ಆಂಬುಲೆನ್ಸ್ ನೋಡಲು ರಸ್ತೆಗಳಲ್ಲಿ ನಿಂತ್ರು ಜನ: ಬುಧವಾರ ರಾತ್ರಿ 8.23ಕ್ಕೆ ತಮೀಮ್ ಆಂಬುಲೆನ್ಸ್ ನ ಸೈರನ್ ಆನ್ ಮಾಡಿ ತಿರುವನಂತಪುರಂವರೆಗಿನ 516 ಕಿ.ಮೀ ಪ್ರಯಾಣವನ್ನ ಆರಂಭಿಸಿದ್ದರು. ಚೈಲ್ಡ್ ಪ್ರೊಟೆಕ್ಷನ್ ಟೀಂ ಸಹಾಯದಿಂದ ಆಂಬುಲೆನ್ಸ್ ಪ್ರಯಾಣದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಜನ ಆಂಬುಲೆನ್ಸ್ ನೋಡಲೆಂದೇ ರಸ್ತೆಗಳಲ್ಲಿ ನಿಂತಿದ್ದರು. ಕೆಲವರು ಮೊಬೈಲ್‍ನಲ್ಲಿ ಇದನ್ನ ವಿಡಿಯೋ ಮಾಡಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ.

    ಒಂದೇ ಒಂದು ಸ್ಟಾಪ್: ಆಂಬುಲೆನ್ಸ್ ಜೊತೆಗೆ ಕೇರಳ ಪೊಲೀಸರ ಎರಡು ಎಸ್‍ಯುವಿ ವಾಹನಗಳಿದ್ದವು. ತಮೀಮ್ ವಾಹನವನ್ನು ನಿಧಾನಗೊಳಿಸದಂತೆ ನೋಡಿಕೊಳ್ಳಲು ಜಿಲ್ಲಾ ಗಡಿಗಳಲ್ಲಿ ಎಸ್‍ಯುವಿ ವಾಹನಗಳು ಬದಲಾವಣೆಯಾಗುತ್ತಿದ್ದವು. ಸುಮಾರು 11 ಗಂಟೆಯ ವೇಳೆಗೆ ವಾಹನಗಳು ಕೋಝಿಕೋಡ್‍ನ ಕಾಕಡು ನಲ್ಲಿನ ಪೆಟ್ರೋಲ್ ಬಂಕ್ ತಲುಪಿದ್ದವು. ಇಡೀ ಪ್ರಯಾಣದಲ್ಲಿ ಇದೊಂದೇ ಕಡೆ ವಾಹನವನ್ನ ನಿಲ್ಲಿಸಿದ್ದು.

    ಕೊನೆಗೆ ಗುರುವಾರ ನಸುಕಿನ ಜಾವ 3.23ರ ವೇಳೆಗೆ ಆಂಬುಲೆನ್ಸ್ ತಿರುವನಂತಪುರಂನ ಆಸ್ಪತ್ರೆ ತಲುಪಿತು. ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಕೂಡಲೇ ಮಗುವನ್ನ ಒಳಗೆ ಕರೆದೊಯ್ದರು.

    100-120 ಕಿ.ಮೀ ವೇಗದಲ್ಲಿದ್ದೆ: ಇಂತದ್ದೊಂದು ಪ್ರಯಾಸಕರ ಪ್ರಯಾಣದ ನಂತರ ಮಾತನಾಡುವಾಗ ತಮೀಮ್ ತಾನು ಮಾಡಿದ ಈ ದೊಡ್ಡ ಕೆಲಸದ ಶಾಕ್‍ನಿಂದ ಇನ್ನೂ ಹೊರಬಂದಿರಲಿಲ್ಲ. ಪೊಲೀಸರು ಹಾಗೂ ಚೈಲ್ಡ್ ಪ್ರೊಟೆಕ್ಷನ್ ಟೀಂ ನ ಕೆಲಸವನ್ನು ಹೊಗಳಿದ ತಮೀಮ್, ಇವರ ಸಹಾಯ ಮತ್ತು ಬೆಂಬಲ ಇಲ್ಲದಿದ್ರೆ ಈ ಯಶಸ್ವಿ ಪ್ರಯಾಣ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ರು. ಬಹುತೇಕ 100-120 ಕಿ.ಮೀ ವೇಗದಲ್ಲಿ ನಾನಿದ್ದೆ. ಎರಡೂ ತಂಡಗಳ ಪರಿಶ್ರಮಕ್ಕೆ ಧನ್ಯವಾದ ಎಂದು ಅವರು ಹೇಳಿದ್ರು.

    ಇಡೀ ಪ್ರಯಾಣಕ್ಕೆ ಮುಖ್ಯ ಕಾರಣವಾಗಿದ್ದ ಮಗು ಫಾತೀಮಾ ಸರಿಯಾದ ಸಮಯಕ್ಕೆ ಆಸ್ಪತೆಯೇನೋ ತಲುಪಿದೆ. ಆದ್ರೆ ಮಗುವಿನ ಸ್ಥಿತಿ ಇನ್ನೂ ಚಿಂತಾನಕವಾಗಿದೆ ಎಂದು ವರದಿಯಾಗಿದೆ.

  • ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ಮಗು ಸಾವು!

    ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ಮಗು ಸಾವು!

    ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ನವಜಾತ ಶಿಶು ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕೆರೂರು ಪಟ್ಟಣದ ನಿವಾಸಿಯಾಗಿರುವ ಲಕ್ಷ್ಮಿ ಪತ್ತಾರ ಎಂಬವರೇ ಬಾಣಂತಿ. ಕಳೆದ ಎರಡು ದಿನಗಳಿಂದ ಹೆರಿಗೆ ನೋವು ಅನುಭವಿಸಿ, ಕೆರೂರಿನ ಎರಡು ಖಾಸಗಿ ಆಸ್ಪತ್ರೆಗೆ ತೆರಳಿದ್ರು. ಆದ್ರೆ ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದ ಕಾರಣ ಲಕ್ಷ್ಮಿ ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಬುಧವಾರ ರಾತ್ರಿಯೇ ಲಕ್ಷ್ಮಿ ಅವರ ಹೊಟ್ಟೆಯಲ್ಲಿ ಮಗು ಸಾವನ್ನಪ್ಪಿದ್ರೂ, ತಲೆಕೆಡೆಸಿಕೊಳ್ಳದ ಸರ್ಕಾರಿ ಆಸ್ಪತ್ರೆ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕುಮಾರೇಶ್ವರ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ರು. ಈ ಹಿನ್ನೆಲೆಯಲ್ಲಿ ಲಕ್ಷ್ಮಿ ಅವರನ್ನು ಕುಮಾರೇಶ್ವರ ಆಸ್ಪತ್ರೆಗೆ ತಂದಾಗ, ತಪಾಸನೆ ಮಾಡಿದ ಕುಮಾರೇಶ್ವರ ಆಸ್ಪತ್ರೆ ವೈದ್ಯರು ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿರುವ ಸುದ್ದಿ ತಿಳಿಸಿದ್ದಾರೆ.

    ಬಾಣಂತಿ ಲಕ್ಷ್ಮಿ ಸರ್ಕಾರಿ ಆಸ್ಪತ್ರೆ ವೈದ್ಯರ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಶಾಲೆಯಲ್ಲಿ ಸಂಪ್ ಗೆ ಬಿದ್ದು 4ರ ಬಾಲಕ ದಾರುಣ ಸಾವು

    ಶಾಲೆಯಲ್ಲಿ ಸಂಪ್ ಗೆ ಬಿದ್ದು 4ರ ಬಾಲಕ ದಾರುಣ ಸಾವು

    ಹೈದರಾಬಾದ್: ನರ್ಸರಿ ಶಾಲೆಯಲ್ಲಿ ತೆರೆದ ಸಂಪ್ ಗೆ ಆಯತಪ್ಪಿ ಬಿದ್ದು 4 ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

    ಈ ಘಟನೆ ಮಲ್ಕಾಜ್ಗಿರಿಯ ಬಾಚ್ಪಾನ್ ಶಾಲೆಯಲ್ಲಿ ಇಂದು ನಡೆದಿದೆ. ಮೃತ ದುರ್ದೈವಿ ಬಾಲಕನನ್ನು ಶಿವರಚಿತ್ ಎಂದು ಗುರುತಿಸಲಾಗಿದೆ.

    ಪುಟ್ಟ ಬಾಲಕ ತನ್ನ ಶಾಲೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಯ್ದೆರೆದಿದ್ದ ಸಂಪ್ ಗೆ ಬಿದ್ದಿದ್ದಾನೆ. ಕೆಲ ಗಂಟೆಗಳ ಬಳಿಕ ಶಾಲೆಯಲ್ಲಿ ಶಿವರಚಿತ್ ಕಾಣದಿರುವುದನ್ನು ಕಂಡ ಶಾಲಾ ಸಿಬ್ಬಂದಿ ಬಾಲಕನ್ನು ಹುಡುಕುವಾಗ ಆತ ಸಂಪ್ ಗೆ ಬಿದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತನನ್ನು ನೀರಿನಿಂದ ಮೇಲಕ್ಕೆತ್ತಿದ್ದು, ಆದ್ರೆ ಬಾಲಕ ಅದಾಗಲೇ ಮೃತಪಟ್ಟಿದ್ದನು.

    ಕೆಲ ತಿಂಗಳಿಂದ ಈ ಸಂಪ್ ಬಾಯ್ದೆರೆದಿದ್ದು, ಈ ಕುರಿತು ಆಡಳಿತ ಮಂಡಳಿ ಗಮನಹರಿಸಿರಲಿಲ್ಲ. ಇದರಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

    ಸದ್ಯ ಮೃತ ಬಾಲಕನ ಪೋಷಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.

  • ಒಂದೂವರೆ ವರ್ಷದ ಕಂದಮ್ಮನ ಮೇಲೆ ರೇಪ್ – ಮನೆಯೊಳಗಿಂದ್ಲೇ ಕೇರ್ ಟೇಕರ್ ಬಂಧನ

    ಒಂದೂವರೆ ವರ್ಷದ ಕಂದಮ್ಮನ ಮೇಲೆ ರೇಪ್ – ಮನೆಯೊಳಗಿಂದ್ಲೇ ಕೇರ್ ಟೇಕರ್ ಬಂಧನ

    ನವದೆಹಲಿ: ತಂದೆ-ತಾಯಿ ಇಬ್ಬರೂ ಕೆಲಸದಲ್ಲಿದ್ದರೆ ಮಕ್ಕಳನ್ನು ನೋಡಿಕೊಳ್ಳಲೆಂದು ಆಳುಗಳನ್ನು ನೇಮಿಸುತ್ತಾರೆ. ಹೀಗೆ ನೇಮಕಗೊಂಡ ವ್ಯಕ್ತಿಯೇ 18 ತಿಂಗಳ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರವೆಸಗಿರೋ ಶಾಕಿಂಗ್ ಘಟನೆ ರಾಜಧಾನಿಯಲ್ಲಿ ನಡೆದಿದೆ.

    ದಕ್ಷಿಣ ದೆಹಲಿಯ ಶಾಹಪುರ್ ಜಾಟ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಕ್ಕಳ ದಿನಾಚರಣೆಯ ಹಿಂದಿನ ದಿನವಾದ ಸೋಮವಾರ ಈ ಘಟನೆ ನಡೆದಿದ್ದು, ಇಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?: ತನ್ನ ಪುಟ್ಟ ಕಂದಮ್ಮನನ್ನು ನೋಡಿಕೊಳ್ಳಲೆಂದು ಮಗುವಿನ ತಂದೆ ಪ್ರಖ್ಯಾತ ಉದ್ಯೋಗ ಸಂಸ್ಥೆಯಿಂದ ವ್ಯಕ್ತಿಯೊಬ್ಬನನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು. ಆದ್ರೆ ಅದೇ ವ್ಯಕ್ತಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿಯ ನೀಚ ಕೃತ್ಯದಿಂದ ಪುಟ್ಟ ಕಂದಮ್ಮನ ಸ್ಥಿತಿ ಚಿಂತಾನಜನಕವಾಗಿದ್ದು, ಸದ್ಯ ನಗರದ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಸೋಮವಾರ ಮಧ್ಯಾಹ್ನದ ಬಳಿಕ ತಾಯಿ ಮನೆಗೆ ಬಂದು ನೋಡಿದಾಗ ಮಗುವಿನ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗುತ್ತಿತ್ತು. ಪುಟ್ಟ ಮಗುವಿಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡು ಹೌಹಾರಿದ ತಾಯಿ ಆತಂಕ ಹಾಗೂ ಗಾಬರಿಗೊಂಡು ಕೂಡಲೇ ಆರೋಪಿಯನ್ನು ಪ್ರಶ್ನಿಸಿದ್ದಾರೆ. ತನ್ನ ಪತಿಗೂ ಈ ವಿಚಾರ ತಿಳಿಸಿದ್ದಾರೆ. ಬಳಿಕ ಆರೋಪಿಯಿದ್ದ ಕೋಣೆಯ ಬಾಗಿಲಿಗೆ ಬೀಗ ಜಡಿದು ಪೊಲೀಸರಿಗೆ ಮಾಹಿತಿ ನೀಡಿದ್ರು.

    ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆಯೊಳಗಿನಿಂದಲೇ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಇತ್ತ ಮಗುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಘಟನೆ ಸಂಬಂಧ ಆರೋಪಿ ವಿರುದ್ಧ ಹಾಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

  • ಚಿಕಿತ್ಸೆ ಸಿಗದೆ ಆಂಬುಲೆನ್ಸ್ ನಲ್ಲೇ ಮಹಿಳೆಗೆ ಹೆರಿಗೆ- ಮಗು ಸಾವು

    ಚಿಕಿತ್ಸೆ ಸಿಗದೆ ಆಂಬುಲೆನ್ಸ್ ನಲ್ಲೇ ಮಹಿಳೆಗೆ ಹೆರಿಗೆ- ಮಗು ಸಾವು

    ಬಾಗಲಕೋಟೆ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಸಿಗದ ಕಾರಣ ಮಹಿಳೆಯೊಬ್ಬರಿಗೆ ಆಂಬುಲೆನ್ಸ್ ನಲ್ಲೇ ಹೆರಿಗೆಯಾಗಿ ಮಗು ಹುಟ್ಟಿದ ತಕ್ಷಣವೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ನಡೆದಿದೆ.

    ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ತಡರಾತ್ರಿ ಆಸ್ಪತ್ರೆ ಮುಂದೆ ಮಗುವಿನ ಶವ ಹೊತ್ತು ತಾಯಿ, ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಭಾರತಿ ತೊಗಲದೋಣಿ ಎಂಬ 31 ವರ್ಷದ ಗರ್ಭಿಣಿ ಹೆರಿಗೆಗಾಗಿ ಹಲಕುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಮಂಜುಳಾ ಗುರಾಣಿ ನಿಲರ್ಕ್ಷ್ಯದ ಹಿನ್ನೆಲೆಯಲ್ಲಿ ಹುಟ್ಟಿದ ಮಗು ಸಾವನ್ನಪಿದೆ ಎಂದು ಗರ್ಭಿಣಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

    ಭಾರತಿ ಹೆರಿಗೆ ಬೇನೆಯಿಂದ ಶುಕ್ರವಾರ ಸಂಜೆ ಆರು ಗಂಟೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ ಎನ್ನಲಾಗಿದೆ. ಎರಡು ಗಂಟೆಗಳ ಕಾಲ ಗರ್ಭಿಣಿ ಮತ್ತು ಕುಟುಂಬಸ್ಥರು ವೈದ್ಯರಿಗಾಗಿ ಕಾಯ್ದಿದ್ದಾರೆ. ಆದರೆ ವೈದ್ಯರು ಬಾರದಿದ್ದಾಗ ಬಾದಾಮಿ ತಾಲೂಕಾಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಭಾರತಿಗೆ ಹೆರಿಗೆ ನೋವು ಜಾಸ್ತಿಯಾಗಿ ಆಂಬುಲೆನ್ಸ್ ನಲ್ಲೇ ಹೆರಿಗೆಯಾಗಿದೆ. ಹೆರಿಗೆಯಾದ ತಕ್ಷಣವೇ ಹೆಣ್ಣುಮಗು ಸಾವನ್ನಪ್ಪಿದೆ. ಇದರಿಂದ ಕುಟುಂಬಸ್ಥರು ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ.

    24×7 ಹೆರಿಗೆ ಮತ್ತು ಚಿಕಿತ್ಸಾ ಸೌಲಭ್ಯವಿರಬೇಕಾದ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದಿರೋದು ಮಗುವನ್ನು ಬಲಿ ಪಡೆದುಕೊಂಡಂತಾಗಿದೆ. ಇನ್ನು ಆಸ್ಪತ್ರೆ ವೈದ್ಯೆ ಮಂಜುಳಾ ಗುರಾಣಿ ಅವರು ಆಸ್ಪತ್ರೆಗೆ ಬಂದಿರದಿದ್ದಾಗ ಸ್ಥಳದಲ್ಲಿದ್ದ ನರ್ಸ್ ಗಳು ನಮ್ಮ ಡ್ಯೂಟಿ ಇಲ್ಲ ಎಂದು ನಿರ್ಲಕ್ಷ್ಯ ಮಾಡಿದ್ದಾರೆ. ಘಟನೆ ಬಗ್ಗೆ ಮಂಜುಳಾ ಗುರಾಣಿ ಅವರಿಗೆ ಕರೆ ಮಾಡಿದರೆ ನನ್ನದು ಸಂಜೆ ಆರು ಗಂಟೆವರೆಗೂ ಮಾತ್ರ ಡ್ಯೂಟಿ. ಏನೇ ಹೇಳೋದಿದ್ದರೂ ಡಿಹೆಚ್‍ಓ ಗೆ ಹೇಳ್ರಿ ಎಂದು ಬೇಜವಾಬ್ದಾರಿತನದಿಂದ ಉತ್ತರಿಸಿದ್ದಾರೆ.

    ಸದ್ಯ ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಅನಂತ ದೇಸಾಯಿ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.

  • ಬಾಲ್ಕನಿಯ ಕಂಬಿಗಳ ಮಧ್ಯೆ ಮಗುವಿನ ತಲೆ ಸಿಲುಕಿಕೊಂಡಿದ್ರೆ ಈ ತಂದೆ ಏನು ಮಾಡಿದ ಗೊತ್ತಾ?

    ಬಾಲ್ಕನಿಯ ಕಂಬಿಗಳ ಮಧ್ಯೆ ಮಗುವಿನ ತಲೆ ಸಿಲುಕಿಕೊಂಡಿದ್ರೆ ಈ ತಂದೆ ಏನು ಮಾಡಿದ ಗೊತ್ತಾ?

    ಬೀಜಿಂಗ್: ಮಕ್ಕಳು ಆಟವಾಡುವಾಗ ಏನಾದ್ರೂ ತೊಂದರೆಯಾದ್ರೆ ಪೋಷಕರು ಥಟ್ಟನೆ ಬಂದು ಮಗುವಿನ ರಕ್ಷಣೆ ಮಾಡ್ತಾರೆ. ಮಗು ಅಪಾಯದಲ್ಲಿದ್ರೆ ಎಲ್ಲಾ ದೇವರಿಗೂ ಅಲ್ಲೇ ಹರಕೆ ಮಾಡಿಕೊಳ್ತಾರೆ. ಹೀಗೆ ಮಗುವೊಂದರ ತಲೆ ಬಾಲ್ಕನಿಯ ಕಂಬಿಗಳ ಮಧ್ಯೆ ಸಿಲುಕಿಕೊಂಡು ಅಗ್ನಿಶಾಮಕ ಸಿಬ್ಬಂದಿ ಮಗುವನ್ನ ಕಾಪಾಡಲು ಕಷ್ಟಪಡುತ್ತಿದ್ರೆ ಮಗುವಿನ ತಂದೆ ಏನು ಮಾಡಿದ ಗೊತ್ತಾ?

    ಮಗುವಿನ ತಂದೆ ಗಾಬರಿಯಿಂದ ಪರದಾಡ್ತಾ ಅದರ ತಲೆಯನ್ನ ಹೇಗಾದ್ರೂ ಕಂಬಿಗಳ ಮಧ್ಯದಿಂದ ಬಿಡಿಸಿದ್ರೆ ಸಾಕು ಅಂತ ಪ್ರಾರ್ಥಿಸುತ್ತಿದ್ದ ಅಂದ್ಕೊಂಡ್ರಾ? ಇಲ್ಲ. ಆತ ಮಗುವಿನ ಹಿಂದೆ ಕುಳಿತು ವಿಡಿಯೋ ಮಾಡ್ತಿದ್ದ.

    ಚೀನಾದ ಫುಜಿಯಾನ ಪ್ರಾಂತ್ಯದಲ್ಲಿ ಕಳೆದ ವಾರ ಈ ಘಟನೆ ವರದಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮಗುವಿಗೆ ಯಾವುದೇ ರೀತಿ ಗಾಯವಾಗಬಾರದೆಂದು ಅದನ್ನು ರಕ್ಷಿಸಲು ಶ್ರಮಿಸುತ್ತಿದ್ದರು. ಆದ್ರೆ ಮಗುವಿನ ತಂದೆ ಮಾತ್ರ ಒಂದು ಕೈಯಲ್ಲಿ ಮಗುವನ್ನ ಹಿಡಿದು ಮತ್ತೊಂದು ಕೈಯಲ್ಲಿ ಸೆಲ್‍ಫೋನ್ ಹಿಡಿದುಕೊಂಡು ಮಗುವಿನ ಕಡೆ ತಲೆಯೇ ಕೆಡಿಸಿಕೊಳ್ಳದೇ ವಿಡಿಯೋ ಮಾಡ್ತಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ನೆಟಿಜನ್‍ಗಳ ಆಕ್ರೋಶಕ್ಕೆ ಕಾರಣವಾಗಿದೆ.

    ತಂದೆಯ ಬೇಜವಾಬ್ದಾರಿತನವನ್ನ ಜನರು ಖಂಡಿಸಿದ್ದರೆ. ಮಗುವಿನ ತಲೆಯನ್ನ ಕಂಬಿಗಳಿಂದ ಹೊರತೆಗೆದ ನಂತರವಷ್ಟೇ ಆ ವ್ಯಕ್ತಿ ವಿಡಿಯೋ ಮಾಡೋದನ್ನ ನಿಲ್ಲಿಸಿದ ಎಂದು ವರದಿಯಾಗಿದೆ.

  • ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!

    ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!

    ಮಂಗಳೂರು: ಗಂಟಲಲ್ಲಿ ಚಕ್ಕುಲಿ ಸಿಕ್ಕಿ ಒಂದು ವರ್ಷದ ಪುಟ್ಟ ಕಂದಮ್ಮವೊಂದು ಮೃತಪಟ್ಟ ಆಘಾತಕಾರಿ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿ ಗಂಡು ಮಗುವನ್ನು ಅರುಷ್ ಎಂದು ಗುರುತಿಸಲಾಗಿದ್ದು, ಈತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ ವಿಠಲ ಎಂಬವರ ಮಗ ಎನ್ನಲಾಗಿದೆ.

    ಮಗ ಅರುಷ್ ಗೆ ಪೋಷಕರು ತಿನ್ನಲು ಚಕ್ಕುಲಿ ತುಂಡೊಂದನ್ನು ನೀಡಿದ್ದರು. ಏನೂ ಅರಿಯದ ಮುಗ್ಧ ಕಂದಮ್ಮ ಈ ತುಂಡನ್ನು ನುಂಗಿದೆ. ಪರಿಣಾಮ ಚಕ್ಕುಲಿ ಪೀಸ್ ಗಂಟಲಲ್ಲಿ ಸಿಲುಕಿಕೊಂಡು ಮಗುವಿಗೆ ಉಸಿರಾಡಲು ಕಷ್ಟವಾಗಿತ್ತು. ಮಗುವನ್ನು ಗಮನಿಸಿದ ಪೋಷಕರು ಕೂಡಲೇ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲೆಂದು ಕರೆದೊಯ್ದರಾದ್ರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಸದ್ಯ ಮಗುವಿನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

    https://www.youtube.com/watch?v=9K7p5aaTaHU