Tag: Baby

  • ನವಜಾತ ಹೆಣ್ಣುಮಗು ಬದುಕಲ್ಲ ಎಂದು ಕಸದ ತೊಟ್ಟಿಗೆ ಎಸೆದ ನಿರ್ದಯಿ ತಂದೆ- ನಂತರ ನಡೆದಿದ್ದು ಪವಾಡ

    ನವಜಾತ ಹೆಣ್ಣುಮಗು ಬದುಕಲ್ಲ ಎಂದು ಕಸದ ತೊಟ್ಟಿಗೆ ಎಸೆದ ನಿರ್ದಯಿ ತಂದೆ- ನಂತರ ನಡೆದಿದ್ದು ಪವಾಡ

    ಬೀಜಿಂಗ್: ಆ ಮಗು ಜನಿಸಿ ಕೇವಲ 2 ಗಂಟೆಗಳಷ್ಟೇ ಕಳೆದಿತ್ತು. ಅದರ ಕರುಳ ಬಳ್ಳಿಯೂ ಕೂಡ ಹಾಗೇ ಇತ್ತು. ಮಗು ಬದುಕುಳಿಯೋದಿಲ್ಲ ಎಂದು ತಂದೆ ಅದನ್ನ ಬ್ಯಾಗ್‍ನಲ್ಲಿ ತುಂಬಿ ಕಸದ ತೊಟ್ಟಿಗೆ ಎಸೆದು ಹೋಗಿದ್ದ. ಆದ್ರೆ ಆ ಮಗು ಇನ್ನೂ ಜೀವಂತವಾಗಿದ್ದು, ಆರೋಗ್ಯಕರವಾಗೇ ಇತ್ತು.

    ಇಂತಹ ಅಮಾನವೀಯ ಘಟನೆ ನಡೆದಿರೋದು ಚೀನಾದ ಕ್ಸುವಾಂಕೀನಲ್ಲಿ. ಮಗುವನ್ನ ಕಸದ ಬುಟ್ಟಿಗೆ ಎಸೆದು ಹೋದ ವ್ಯಕ್ತಿಯನ್ನ ಸದ್ಯ ಪೊಲೀಸರು ಬಂಧಿಸಿದ್ದಾರೆ. 8 ತಿಂಗಳ ಗರ್ಭಿಣಿಯಾಗಿದ್ದ ಈತನ ಗರ್ಲ್ ಫ್ರೆಂಡ್ ಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ನಂತರ ಆಕೆ ಮನೆಯ ಹಾಲ್‍ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗುವನ್ನ ಆಸ್ಪತ್ರೆಗೆ ಕೊಂಡೊಯ್ಯೋ ಬದಲು ತಂದೆ ಮಗುವನ್ನ ಹಾಸಿಗೆ ಮೇಲೆ ಹಾಕಿ ತನ್ನ ಗರ್ಲ್ ಫ್ರೆಂಡ್ ಆರೈಕೆ ಮಾಲು ಹೋಗಿದ್ದ. 2 ಗಂಟೆಗಳ ಬಳಿಕ ಆತ ವಾಪಸ್ ಬಂದು ನೋಡಿದಾಗ ಮಗುವಿನ ದೇಹ ನೇರಳೆ ಬಣ್ಣಕ್ಕೆ ತಿರುಗಿತ್ತು. ಮಗು ಬದುಕಲ್ಲ ಅಂತ ಅಂದುಕೊಂಡಿದ್ದೆ ಎಂದು ಆರೋಪಿ ತಂದೆ ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

    ಬಳಿಕ ವೃದ್ಧ ವ್ಯಕ್ತಿಯೊಬ್ಬರು ಮಗುವನ್ನ ಕಸದ ತೊಟ್ಟಿಯಲ್ಲಿ ನೋಡಿ ಅದನ್ನ ರಕ್ಷಣೆ ಮಾಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವನ್ನ ತೆಗೆದುಕೊಂಡು ಅದರ ಮೇಲೆ ಹೊದಿಕೆ ಹಾಕಿ ಬೆಚ್ಚಗಿರುವಂತೆ ನೋಡಿಕೊಂಡಿದ್ದಾರೆ. ನಂತರ ಮಗುವನ್ನ ಆಸ್ಪತ್ರೆಗೆ ಕೊಂಡೊಯ್ದಿದ್ದು, ಪರೀಕ್ಷೆ ಮಾಡಿದ ನಂತರ ವೈದ್ಯರು, ಮಗು ಸಂಪೂರ್ಣವಾಗಿ ಆರೋಗ್ಯಕರವಾಗಿದೆ ಎಂದು ಹೇಳಿದ್ದಾರೆ.

    ಚಳಿಯಿಂದಾಗಿ ಮಗುವಿನ ಮುಖ ನೇರಳೆ ಬಣ್ಣಕ್ಕೆ ತಿರುಗಿತ್ತು. ನಂತರ ಮಗುವನ್ನ ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಿದ್ದು, ಬಳಿಕ ಅಲ್ಲಿಂದ ಅನಾಥಾಶ್ರಮಕ್ಕೆ ತೆಗೆದುಕೊಂಡು ಹೋಗಲಾಗಿದೆ ಎಂದು ಇಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ.

    ನಿರ್ದಯಿ ತಂದೆ ಮಗುವನ್ನ ಕಸದ ತೊಟ್ಟಿಯಲ್ಲಿ ಎಸೆದು, ತನ್ನ ಕೈಗಳನ್ನ ಜೇಬಿನಲ್ಲಿ ಇರಿಸಿಕೊಂಡು ಆತುರದಿಂದ ನಡೆದುಕೊಂಡು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
    ಸದ್ಯ ಮಗುವಿನ ತಂದೆ-ತಾಯಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

  • ಇಬ್ಬರು ಮಕ್ಕಳ ಮುಂದೆಯೇ ಹೆಂಡತಿ, 18 ತಿಂಗಳ ಮಗುವನ್ನ ಕೊಂದ

    ಇಬ್ಬರು ಮಕ್ಕಳ ಮುಂದೆಯೇ ಹೆಂಡತಿ, 18 ತಿಂಗಳ ಮಗುವನ್ನ ಕೊಂದ

    ನವದೆಹಲಿ: ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳ ಮುಂದೆಯೇ ಪತ್ನಿ ಹಾಗೂ 18 ತಿಂಗಳ ಪುಟ್ಟ ಮಗುವನ್ನು ಕೊಲೆ ಮಾಡಿರೋ ಘಟನೆ ದೆಹಲಿಯ ಜಹಾಂಗಿರ್‍ಪುರಿಯಲ್ಲಿ ನಡೆದಿದೆ.

    ಸುನಿತಾ(30) ಹಾಗೂ ಆಕೆಯ 18 ತಿಂಗಳ ಗಂಡು ಮಗುವನ್ನ ಮೊಂಡಾದ ವಸ್ತುವಿನಿಂದ ಹಲವು ಬಾರಿ ಹೊಡೆದು ಪತಿ ಪ್ರಕಾಶ್ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ದಂಪತಿ 2005ರಲ್ಲಿ ಮದುವೆಯಾಗಿದ್ದು, ಸದಾ ಜಗಳವಾಡುತ್ತಿದ್ದರು. ಮಹಿಳೆ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳದ ಕೇಸ್ ಕೂಡ ದಾಖಲಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣ ಕೋರ್ಟ್ ನಲ್ಲಿದ್ದರೂ ದಂಪತಿ ರಾಜಿ ಮಾಡಿಕೊಂಡಿದ್ದರು. ಒಂದು ವರ್ಷ ಪತಿಯಿಂದ ದೂರವಿದ್ದ ಮಹಿಳೆ ಇತ್ತೀಚೆಗಷ್ಟೇ ವಾಪಸ್ ಬಂದಿದ್ದರು ಎಂದು ತಿಳಿಸಿದ್ದಾರೆ.

    ಪ್ರಕಾಶ್ ಅವರ ಸಹೋದರ ಮನೆಗೆ ಬಂದು ಎಷ್ಟು ಬಾರಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಮಹಿಳೆ ಹಾಗೂ ಮಗುವಿನ ಮೃತದೇಹ ಜೊತೆಗೆ 7 ಹಾಗೂ 4 ವರ್ಷದ ಇಬ್ಬರು ಮಕ್ಕಳು ಪತ್ತೆಯಾಗಿದ್ದಾರೆ.

    ತನ್ನ ತಂದೆಯೇ ತಾಯಿಯನ್ನ ಕೊಲೆ ಮಾಡಿದ್ದು, ಯಾರಿಗಾದ್ರೂ ವಿಷಯ ತಿಳಿಸಲು ಭಯವಾಗಿತ್ತು ಎಂದು ಹಿರಿಯ ಮಗ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಕೊಲೆಗೆ ಬಳಸಿದ ಅಸ್ತ್ರ ಕೂಡ ನಾಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಸಾಂದರ್ಭಿಕ ಚಿತ್ರ
  • ತಮ್ಮನ ಸಾವು, ಅಪ್ಪ ಇನ್ನೊಂದು ಮದ್ವೆಯಾಗಿಬಿಡ್ತಾರೆಂದು ನವಜಾತ ಗಂಡುಮಗುವನ್ನ ಅಪಹರಿಸಿದ ಸಹೋದರಿಯರು!

    ತಮ್ಮನ ಸಾವು, ಅಪ್ಪ ಇನ್ನೊಂದು ಮದ್ವೆಯಾಗಿಬಿಡ್ತಾರೆಂದು ನವಜಾತ ಗಂಡುಮಗುವನ್ನ ಅಪಹರಿಸಿದ ಸಹೋದರಿಯರು!

    ಲಕ್ನೋ: ರಾಜಸ್ಥಾನದ ಭರತ್‍ಪುರ್‍ನ ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶುವನ್ನ ಕಳ್ಳತನ ಮಾಡಿದ ಆರೋಪದ ಮೇಲೆ ಉತ್ತರಪ್ರದೇಶದ ಮಥುರಾ ಜಿಲ್ಲೆಯಲ್ಲಿ ಪೊಲೀಸರು ಇಬ್ಬರು ಮಹಿಳೆಯರನ್ನ ಬಂಧಿಸಿದ್ದಾರೆ.

    ಮಹಿಳೆಯರು ಕಳ್ಳತನ ಮಾಡಿ ಮೂರು ದಿನಗಳ ಬಳಿಕ ಫೀಡಿಂಗ್ ಬಾಟಲ್ ಮತ್ತು ಒಂದು ಪತ್ರದ ಜೊತೆಗೆ ಮಗುವನ್ನ ರಸ್ತೆ ಬದಿಯಲ್ಲಿ ಬಿಟ್ಟುಹೋಗಿದ್ದರೆಂದು ವರದಿಯಾಗಿದೆ. ಆರೋಪಿಗಳನ್ನ ಶಿವಾನಿ ದೇವಿ(23) ಹಾಗೂ ಪ್ರಿಯಾಂಕಾ ದೇವಿ(20) ಎಂದು ಗುರುತಿಸಲಾಗಿದೆ. ತಮ್ಮ 12 ವರ್ಷದ ಸಹೋದರ 2 ವರ್ಷಗಳ ಹಿಂದೆ ಮೃತಪಟ್ಟಿದ್ದ. ಹೀಗಾಗಿ ತಂದೆ ಎರಡನೇ ಮದುವೆಯಾಗಲು ಮುಂದಾಗಿದ್ದು, ಇದರಿಂದ ನಮ್ಮ ತಾಯಿ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಗಂಡು ಮಗುವೊಂದನ್ನ ಉಡುಗೊರೆಯಾಗಿ ನೀಡಬೇಕೆಂದಿದ್ದೆವು ಎಂದು ಆರೋಪಿಗಳು ಪೊಲೀಸರ ಬಳಿ ಹೇಳಿದ್ದಾರೆ.

     

    ಜನವರಿ 10ರಂದು ಮಹಿಳೆಯರು ಮಗುವನ್ನ ಕಳ್ಳತನ ಮಾಡಿದ್ದರು. ಆದ್ರೆ ಪೊಲೀಸರು ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ ಎಂದು ದಿನಪತ್ರಿಕೆಯಲ್ಲಿ ಓದಿದ ನಂತರ ಭಯಗೊಂಡಿದ್ದರು. ಹೀಗಾಗಿ ಜನವರಿ 13ರಂದು, ಈ ಮಗುವನ್ನ ಪತ್ತೆ ಮಾಡಿದವರು ಜನವರಿ 10ರಂದು ಮಗು ಕಳ್ಳತನವಾಗಿತ್ತು ಎಂದು ಪೊಲೀಸರಿಗೆ ತಿಳಿಸಿ ಎಂದು ಕಾಗದದಲ್ಲಿ ಬರೆದು ರಾರಾಹ್ ಗ್ರಾಮದ ಬಳಿ ಮಗುವನ್ನ ಬಿಟ್ಟುಹೋಗಿದ್ದರು.

    ಆಸ್ಪತ್ರೆಯ ಸಿಸಿಟಿವಿ ದೃಶ್ಯವಳಿಗಳ ಆಧಾರದ ಮೇಲೆ ಸಹೋದರಿಯರನ್ನ ಗುರುತಿಸಲಾಯ್ತು. ಇಬ್ಬರೂ ಸಹೋದರಿಯರು ಸ್ಕೂಟರ್‍ನಲ್ಲಿ ಬಂದಿದ್ದರು. ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಇದ್ದ ವ್ಯಕ್ತಿ ವಾಹನದ ನೋಂದಣಿ ಸಂಖ್ಯೆಯನ್ನು ನೆನಪಿಟ್ಟುಕೊಂಡಿದ್ದರು. ನಾವು ಯುವತಿಯರನ್ನ ಅವರ ಸ್ವಗ್ರಾಮವಾದ ಮಥುರಾದ ಸ್ವರೂಪ ನೌಗಾಂವ್‍ನಿಂದ ಬಂಧಿಸಿದ್ದೇವೆ. ಐಪಿಸಿ ಸೆಕ್ಷನ್ 363ರ ಅಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಭರತ್‍ಪುರ್ ಎಸ್‍ಪಿ ಅನಿಲ್ ಕುಮಾರ್ ಹೇಳಿದ್ದಾರೆ.

    ಮಹಿಳೆಯರು ಭರತ್‍ಪುರ್‍ನಲ್ಲಿ ಹುಡುಕಾಡಿ 30 ವರ್ಷದ ಮನೀಷ್ ಎಂಬವರ ಮಗನನ್ನ ಟಾರ್ಗೆಟ್ ಮಾಡಿದ್ದರು. ಮನೀಷ್ ಪತ್ನಿ ಜನವರಿ 10ರಂದು ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಪಹಾರಿ ಟೌನ್ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಹೆಚ್ಚಿನ ಆರೈಕೆಗೆ ತಾಯಿ-ಮಗುವನ್ನ ಮಥುರಾ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಮಧ್ಯಾಹ್ನ 2.30ರ ವೇಳೆಯಲ್ಲಿ ತಾಯಿ ಮಲಗಿದ್ದ ವೇಳೆ ಮಹಿಳೆಯರು ಮಗುವನ್ನ ಕಳ್ಳತನ ಮಾಡಿದ್ದರು. ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಮನೀಷ್ ಅವರ ಮಾವ ಸಾಧಿಕ್ ಮೇವ್ ಈ ಬಗ್ಗೆ ದೂರು ದಾಕಲಿಸಿದ್ದರು.

    ಮಹಿಳೆಯರು ಮೊದಲಿಗೆ ಮಗುವನ್ನ ದತ್ತು ತೆಗೆದುಕೊಳ್ಳಬೇಕು ಎಂದುಕೊಂಡಿದ್ದರು. ಆ ಮೂಲಕ ತನ್ನ ತಂದೆ ಲಕ್ಷ್ಮಣ್ ಸಿಂಗ್ ಗಂಡು ಮಗುವಿಗಾಗಿ ಮತ್ತೊಂದು ಮದುವೆಯಾಗೋದನ್ನ ತಡೆಯಬಹುದು ಎಂದುಕೊಂಡಿದ್ದರು. ಇದಕ್ಕಾಗಿ ಬಡವರಿಂದ ಯಾವುದಾದ್ರೂ ಮಗುವನ್ನ ಕೊಂಡುಕೊಳ್ಳಬಹುದಾ ಎಂದು ಹಲವು ಅಸ್ಪತ್ರೆಗಳಲ್ಲಿ ನರ್ಸ್‍ಗಳನ್ನ ವಿಚಾರಿಸಿದ್ದರು. ಆದ್ರೆ ದತ್ತು ಪಡೆಯಲು ದೀರ್ಘವಾದ ಕಾನೂನು ಪ್ರಕ್ರಿಯೆ, ಕಠಿಣವಾದ ನಿಯಮಗಳು ಹಾಗೂ ಮಗು ಮಾರಾಟಕ್ಕೆ ಶಿಕ್ಷೆ ಈ ಎಲ್ಲವನ್ನೂ ಮನಗಂಡು ದತ್ತು ತೆಗೆದುಕೊಳ್ಳೋ ಯೋಚನೆಯನ್ನ ಕೈಬಿಟ್ಟಿದ್ದರು ಎಂದು ಅನಿಲ್ ಕುಮಾರ್ ಹೇಳಿದ್ದಾರೆ.

    ಆರೋಪಿ ಶಿವಾನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ತನ್ನ ಪತಿಯೊಂದಿಗೆ ವಾಸವಿದ್ದಾಳೆ. ಮತ್ತೋರ್ವ ಆರೋಪಿ ಪ್ರಿಯಾಂಕಾ ಕೂಡ ಮದುವೆಯಾಗಿದ್ದು, ಆಗ್ರಾದಲ್ಲಿ ವಾಸವಿದ್ದಾಳೆ. ಪದವಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ವರದಿಯಾಗಿದೆ.

  • ಭಿಕ್ಷೆಯ ನೆಪದಲ್ಲಿ 20 ಸಾವಿರ ರೂ. ನೊಂದಿಗೆ ಬಾಲಕಿ ಎಸ್ಕೇಪ್!

    ಭಿಕ್ಷೆಯ ನೆಪದಲ್ಲಿ 20 ಸಾವಿರ ರೂ. ನೊಂದಿಗೆ ಬಾಲಕಿ ಎಸ್ಕೇಪ್!

    ಬೆಂಗಳೂರು: ಇನ್ಮುಂದೆ ಭಿಕ್ಷೆ ಬೇಡುವವರ ಬಗ್ಗೆ ಎಚ್ಚರಿಕೆಯಿಂದರಬೇಕು. ಯಾಕಂದ್ರೆ ಭಿಕ್ಷೆ ಬೇಡುವ ನೆಪದಲ್ಲಿ ಇಲ್ಲೊಬ್ಬಳು ಬಾಲಕಿ 20 ಸಾವಿರ ರೂ. ಎಗರಿಸಿದ ಘಟನೆ ನಡೆದಿದೆ.

    ಹೌದು. ಆರ್ ಟಿ ನಗರದಲ್ಲಿರೋ ಟೆಂಡರ್ ಚಿಕನ್ ಅಂಗಡಿಯಲ್ಲಿ ಬಾಲಕಿ ತನ್ನ ಕೈಚಳಕ ತೋರಿಸಿದ್ದಾಳೆ. ಭಿಕ್ಷೆ ಬೇಡುವ ನೆಪದಲ್ಲಿ ಬಂದ ಬಾಲಕಿ 20 ಸಾವಿರಕ್ಕೂ ಹೆಚ್ಚು ಹಣ ದೋಚಿ ಪರಾರಿಯಾಗಿದ್ದಾಳೆ. ಭಿಕ್ಷುಕಿ ಬಾಲಕಿಯ ಕೈ ಚಳಕ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸಿಸಿಟಿವಿಯಲ್ಲೇನಿದೆ?: ಮಹಿಳೆಯೊಂದಿಗೆ ಅಂಗಡಿಗೆ ಬಂದ ಬಾಲಕಿ ಮೊದಲು ಡ್ರಾಯರ್ ಎಳೆದು ಹಣವನ್ನು ನೋಡುತ್ತಾಳೆ. ಕೂಡಲೇ ಇನ್ನೊಂದು ಡ್ರಾಯರ್ ಎಳೆದು ಅದರಲ್ಲೂ ಹಣವಿದೆಯಾ ಎಂದು ಪರೀಕ್ಷಿಸುತ್ತಾಳೆ. ಆ ನಂತರ ಮೊದಲು ತೆರೆದ ಡ್ರಾಯರ್ ನಲ್ಲಿದ್ದ ನೋಟುಗಳ ಕಂತೆಗಳನ್ನು ತನ್ನ ಜೋಳಿಗೆಗೆ ತುಂಬಿಸಿಕೊಂಡು ಯಾರಾದ್ರೂ ನೋಡುತ್ತಾರೆಯೇ ಅಂತ ಅತ್ತ ಇತ್ತ ನೋಡಿ ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.

    https://www.youtube.com/watch?v=9inMbngzJQc&feature=youtu.be

  • ಕಾರವಾರ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು- ಹೆರಿಗೆ ಮಾಡಿಸೋ ವೇಳೆ ಹಲ್ಲೆ ಆರೋಪ

    ಕಾರವಾರ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು- ಹೆರಿಗೆ ಮಾಡಿಸೋ ವೇಳೆ ಹಲ್ಲೆ ಆರೋಪ

    ದಾವಣಗೆರೆ: ಆಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಸಮರ್ಪಕ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ಗರ್ಭಿಣಿ ಮಹಿಳೆ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಆಯೇಷಾ ಗೌಸ್ ಅಕ್ತರ್(32) ಮೃತ ಮಹಿಳೆ. ಇವರನ್ನು ಹೆರಿಗಾಗಿ  ಇತ್ತೀಚೆಗೆ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಈ ಸಂದರ್ಭದಲ್ಲಿ ಹೆರಿಗೆ ಮಾಡಿಸುವಾಗ ವೈದ್ಯರು ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಮಹಿಳೆಯ ದೇಹದಿಂದ ರಕ್ತಸ್ರಾವವಾಗಿತ್ತು. ಇದಲ್ಲದೇ ಹೆರಿಗೆ ಸಂದರ್ಭದಲ್ಲಿ ವೈದ್ಯರು ಗರ್ಭಿಣಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ಸಮರ್ಪಕ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ಅಲ್ಲಿಂದ ಹುಬ್ಬಳ್ಳಿಯ ಕಿಮ್ಸ್ ಗೆ ಕರೆತರಲಾಗಿದ್ದು, ಇಲ್ಲಿ ಮಗುವನ್ನು ಮಾತ್ರ ರಕ್ಷಣೆ ಮಾಡಲಾಗಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಶವವನ್ನು ತಂದು ನ್ಯಾಯಕ್ಕಾಗಿ ಆಹೋರಾತ್ರಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

    ಘಟನೆ ಸಂಬಂಧ ಹಳಿಯಾಳ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಂಡನ ಚಿಕಿತ್ಸೆಗಾಗಿ 15 ದಿನಗಳ ಮಗುವನ್ನ 45 ಸಾವಿರಕ್ಕೆ ಮಾರಿದ ತಾಯಿ

    ಗಂಡನ ಚಿಕಿತ್ಸೆಗಾಗಿ 15 ದಿನಗಳ ಮಗುವನ್ನ 45 ಸಾವಿರಕ್ಕೆ ಮಾರಿದ ತಾಯಿ

    ಲಕ್ನೋ: ಮಹಿಳೆಯೊಬ್ಬರು ಗಂಡನ ಚಿಕಿತ್ಸೆಗಾಗಿ ಹಣ ಹೊಂದಿಸಲು ತನ್ನ 15 ದಿನಗಳ ಪುಟ್ಟ ಮಗುವನ್ನ 45 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಗಂಡನ ಚಿಕಿತ್ಸೆಯ ವೆಚ್ಛವನ್ನ ಭರಿಸಲು ಬೇರೆ ದಾರಿಯಿಲ್ಲದೆ ಮಗುವನ್ನ ಮಾರಾಟ ಮಾಡಬೇಕಾಯ್ತು ಎಂದು ಮಹಿಳೆ ಹೇಳಿದ್ದಾರೆ. ನಮ್ಮ ಬಳಿ ಅಗತ್ಯವಾದಷ್ಟು ಹಣ ಇರಲಿಲ್ಲ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಸಿದ್ದಾರೆ.

    ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಮೀರ್‍ಗಂಜ್‍ನಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಆಘಾತಕಾರಿ ಎಂದೆನಿಸಿದರೂ ಈ ರೀತಿ ನಡೆದಿರುವುದು ಇದೇ ಮೊದಲ ಬಾರಿ ಏನಲ್ಲ. 2017ರ ಮೇ ನಲ್ಲಿ ತ್ರಿಪುರಾದಲ್ಲಿ ಕುಟುಂಬವೊಂದು ಕೇವಲ 200 ರೂ. ಗೆ ಮಗುವನ್ನ ಮಾರಾಟ ಮಾಡಿತ್ತು. ಆಟೋ ರಿಕ್ಷಾ ಚಾಲಕರೊಬ್ಬರಿಗೆ ಮಗುವನ್ನ ಮಾರಲಾಗಿತ್ತು.

    ಸಮಾಜ ಕಲ್ಯಾಣ ಮತ್ತು ಸಮಾಜ ಶಿಕ್ಷಣ ಇಲಾಖೆ ಈ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಮಗುವನ್ನ ಕುಟುಂಬದೊಂದಿಗೆ ಮರಳಿ ಸೇರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದೆ.

  • ಮಗುವನ್ನ ಜೊತೆಯಲ್ಲಿರಿಸಿಕೊಂಡೇ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ತಾಯಿ- ಫೋಟೋ ವೈರಲ್

    ಮಗುವನ್ನ ಜೊತೆಯಲ್ಲಿರಿಸಿಕೊಂಡೇ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ತಾಯಿ- ಫೋಟೋ ವೈರಲ್

    ಮಂಗಳೂರು: ನಗರದ ಬೀದಿಗಳಲ್ಲಿ ಕಸ ಎಸೆಯೋರು ಎಸೆಯುತ್ತಲೇ ಇರುತ್ತಾರೆ. ಈ ಕಸದ ಬಗ್ಗೆ ಎಷ್ಟೇ ಜಾಗೃತಿ ನಡೆಸಿದ್ರೂ ಅಷ್ಟೇ ಎಂಬಂತಾಗಿದೆ. ಆದರೆ ಇಲ್ಲೊಬ್ಬರು ತಾಯಿ ತನ್ನ ಮಗುವನ್ನು ಜೊತೆಯಲ್ಲಿ ಇರಿಸಿಕೊಂಡು ಮಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಈಗ ಎಲ್ಲರ ಗಮನ ಸೆಳೆದಿದೆ.

    ಮಂಗಳೂರಿನ ರಾಮಕೃಷ್ಣ ಮಠದ ವತಿಯಿಂದ ಪ್ರತಿ ವಾರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಈ ವೇಳೆ ಆಸಕ್ತ ಸಾರ್ವಜನಿಕರು, ಕೆಲವು ಸಂಸ್ಥೆಗಳು ಸಹಯೋಗ ನೀಡಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತವೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತಾಯಿ, ಮಗು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಫೋಟೋ ಈಗ ವೈರಲ್ ಆಗಿದೆ.

    ಬೀದಿಯಲ್ಲಿ ಕಸ ಎಸೆಯುವ ಮಂದಿಗೆ ಈ ಮಹಿಳೆ ಮಾದರಿ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ. ಕಸ ಹೆಕ್ಕುವ ಇರಾದೆ ಇದ್ದರೂ ಜನರ ನಡುವೆ ಕಸ ಹೆಕ್ಕುವುದಕ್ಕೆ ಹಿಂದೆ ಮುಂದೆ ನೋಡುವ ಮಂದಿಗೆ ಈ ತಾಯಿ, ಮಗು ನಿಜಕ್ಕೂ ಮಾದರಿ.

  • ಕೋಲ್ಕತ್ತಾದಲ್ಲಿ ಮತ್ಸ್ಯಕನ್ಯೆ ರೀತಿಯ ಮಗು ಜನನ!

    ಕೋಲ್ಕತ್ತಾದಲ್ಲಿ ಮತ್ಸ್ಯಕನ್ಯೆ ರೀತಿಯ ಮಗು ಜನನ!

    ಕೋಲ್ಕತ್ತಾ: ಮತ್ಸ್ಯಕನ್ಯೆಯ ರೀತಿಯಲ್ಲೇ ಎರಡೂ ಕಾಲುಗಳು ಒಟ್ಟಿಗೆ ಜೋಡಿಕೊಂಡಿರುವ ಶಿಶುವಿಗೆ 23 ವರ್ಷದ ಮಹಿಳೆಯೊಬ್ಬರು ಕೋಲ್ಕತ್ತಾದಲ್ಲಿ ಜನ್ಮ ನೀಡಿದ್ದಾರೆ.

    ಮುಸ್ಕರಾ ಬಿಬಿ(23) ಎಂಬ ಮಹಿಳೆ ಮತ್ಸ್ಯಕನ್ಯೆ ಅಥವಾ ಸಿರೆನೋಮೆಲಿಯಾ ಮಗುವನ್ನು ಚಿತ್ತರಂಜನ್ ದೇವ ಸದನ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಆದರೆ ಹುಟ್ಟಿದ ನಾಲ್ಕು ಗಂಟೆಯಲ್ಲಿ ಈ ಮಗು ಸಾವನ್ನಪ್ಪಿದೆ. ಮಗುವಿನ ಅರ್ಧ ದೇಹ ಸರಿಯಾಗಿ ಬೆಳೆಯದ ಕಾರಣ ಮಗುವಿನ ಲಿಂಗ ಯಾವುದು ಎಂದು ಕಂಡು ಹಿಡಿಯುವುದು ಕಷ್ಟವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

    ಆರ್ಥಿಕತೆಯ ಸಮಸ್ಯೆಯಿಂದಾಗಿ ಮುಸ್ಕರಾ ಅಲ್ಟ್ರಾ ಸೋನೊಗ್ರಾಫಿ ಮಾಡಿಸದ ಕಾರಣ ಮಗುವಿನ ಸ್ಥಿತಿ ಗೊತ್ತಾಗಲಿಲ್ಲ. ಮಗುವಿನ ಪೋಷಕರು ಇಬ್ಬರು ಕೂಲಿ ಕಾರ್ಮಿಕರು ಹಾಗೂ ಮುಸ್ಕಾರಾ ಗರ್ಭಿಣಿ ಆದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯದ ಕಾರಣ ಈ ರೀತಿಯ ಮಗು ಹುಟ್ಟಿದೆ ಎಂದು ಮಕ್ಕಳ ತಜ್ಞ ಡಾ. ಸುದೀಪ್ ಸಹಾ ಹೇಳಿದ್ದಾರೆ.

    ಭಾರತದಲ್ಲಿ 2ನೇ ಮತ್ಸ್ಯಕನ್ಯೆಯಾಗಿ ಜನಿಸಿದ ಮಗು ಇದಾಗಿದೆ. ಹುಟ್ಟು ಪ್ರತಿ 1 ಲಕ್ಷ ಮಗುವಿನಲ್ಲಿ ಒಂದು ಮಗುವಿನ ದೇಹ ಈ ರೀತಿಯಾಗಿ ಬೆಳವಣಿಗೆಯಾಗುತ್ತದೆ. 2016 ರಲ್ಲಿ ಉತ್ತರ ಪ್ರದೇಶದಲ್ಲಿ ಈ ರೀತಿ ಮಗುವಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದರು.

  • ಸರ್ಕಾರಿ ಆಸ್ಪತ್ರೆಯ ಗೇಟ್ ಮುಂಭಾಗ ನವಜಾತ ಶಿಶು ಪತ್ತೆ

    ಸರ್ಕಾರಿ ಆಸ್ಪತ್ರೆಯ ಗೇಟ್ ಮುಂಭಾಗ ನವಜಾತ ಶಿಶು ಪತ್ತೆ

    ನಿಜಾಮಾಬಾದ್: ಸರ್ಕಾರಿ ಆಸ್ಪತ್ರೆಯ ಗೇಟ್ ಮುಂಭಾಗ ನವಜಾತ ಶಿಶುವೊಂದನ್ನ ಬಿಟ್ಟು ಹೋಗಿರೋ ಘಟನೆ ತೆಲಂಗಾಣದ ನಿಜಾಮಾಬಾದ್ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಮೀಪದಲ್ಲಿ ಮಗು ಪತ್ತೆಯಾಗಿದೆ.

    ಇಂದು ಅಪರಿಚಿತರು ಆಸ್ಪತ್ರೆಯ ಮುಂಭಾಗ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಜಾನೆ ಆಸ್ಪತ್ರೆ ಮುಂದೆ ಮಗು ಇರುವುದನ್ನು ಆಸ್ಪತ್ರೆ ಸಿಬ್ಬಂದಿಯೊಬ್ಬರು ಗಮನಿಸಿದ್ದಾರೆ. ತಕ್ಷಣ ಮಗುವನ್ನು ಆಸ್ಪತ್ರೆಯ ಒಳಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ.

    ಸದ್ಯಕ್ಕೆ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವನ್ನು ಬಿಟ್ಟು ಹೋಗಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ಹಸಿವು, ಬಡತನ- 200 ರೂ. ಗಾಗಿ 8 ತಿಂಗಳ ಹಸುಗೂಸನ್ನ ಮಾರಿದ್ರು

    ಹಸಿವು, ಬಡತನ- 200 ರೂ. ಗಾಗಿ 8 ತಿಂಗಳ ಹಸುಗೂಸನ್ನ ಮಾರಿದ್ರು

     

    ಅಗರ್ತಲಾ: ಹಸಿವು, ಬಡತನದ ಬೇಗುದಿ ತಾಳಲಾರದೇ ಕುಟುಂಬವೊಂದು ಕೇವಲ 200 ರೂಪಾಯಿಗೆ ತಮ್ಮ 8 ತಿಂಗಳ ಹಸುಗೂಸನ್ನು ಮಾರಾಟ ಮಾಡಿದ ಮನಕಲಕುವ ಘಟನೆ ತ್ರಿಪುರ ದ ಪೆಲಿಯಾಮೋರಾ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ರಾಜ್ಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದು, ರಾಜ್ಯ ಆಡಳಿತ ಈ ಬಗ್ಗೆ ಮಾಹಿತಿ ಪಡೆಯಲು ಗ್ರಾಮಕ್ಕೆ ಅಧಿಕಾರಿಗಳ ತಂಡವನ್ನ ಕಳಿಸಿದೆ. ಹಸಿವಿನಿಂದ ಬಳಲಿ 8 ತಿಂಗಳ ಹೆಣ್ಣುಮಗುವನ್ನ ಮಾರಿಕೊಂಡ ಈ ಬುಡಕಟ್ಟು ಕುಟುಂಬಕ್ಕೆ ಸ್ಥಳೀಯ ಅಧಿಕಾರಿಗಳು ಊಟ ಹಾಗೂ ಬಟ್ಟೆಯನ್ನ ನೀಡಿದ್ದಾರೆ. ಮುಂದೆ ಕೂಡ ನೆರವು ನೀಡುವ ಭರವಸೆ ನೀಡಿದ್ದಾರೆ. ಹಸುಗೂಸನ್ನು ಕುಟುಂಬಕ್ಕೆ ಹಿಂದಿರುಗಿಸಲಾಗಿದೆ.

    ನವಜಾತ ಶಿಶುವನ್ನ ಹೊರತುಪಡಿಸಿ ತಂದೆಗೆ ಈಗಾಗಲೇ 4 ಮಕ್ಕಳಿದ್ದರು. ಹಸಿವು ಹಾಗೂ ಬಡತನ ತಾಳಲಾರದೆ ಮಗಳನ್ನ ಮಾರಾಟ ಮಾಡಬೇಕಾಯಿತು ಎಂದು ಅವರು ಸ್ಥಳೀಯ ಅಧಿಕಾರಿಗಳಿಗೆ ಹೇಳಿದ್ದಾರೆ. ಅಲ್ಲದೆ ಬಡವರಿಗಾಗಿ ಇರುವ ಸರ್ಕಾರಿ ಯೋಜನೆಗಳು ತನ್ನ ಗ್ರಾಮವನ್ನ ತಲುಪಿಲ್ಲ ಎಂದು ಹೇಳಿದ್ದಾರೆ.

    ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಖೋವೈನ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಿಎಸ್ ಮಹಾತಮೇ, ಗ್ರಾಮದಲ್ಲಿರುವ ನಮ್ಮ ತಂಡ ಇದ್ದು, ಬುಡಕಟ್ಟು ಕುಟುಂಬಕ್ಕೆ ಅಗತ್ಯ ನೆರವು ಒದಗಿಸುತ್ತಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

    ಈ ನಡುವೆ ಹಸಿವಿನಿಂದ ಬಳಲಿರೋ ಈ ಕುಟುಂಬದವರ ಹೆಸರು ಬಿಪಿಎಲ್ ಪಟ್ಟಿಯಲ್ಲಿ ಯಾಕಿಲ್ಲ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ವಿರೋಧ ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ.

    ಇದೊಂದು ನಾಚಿಗೆಗೇಡಿನ ಸಂಗತಿ. ಸರ್ಕಾರ ಬಡವರಿಗಾಗಿ ಏನೂ ಮಾಡಿಲ್ಲ. ಹೀಗಾಗಿ ಅವರು ಮಕ್ಕಳನ್ನ ಮಾರಾಟ ಮಾಡ್ತಿರೋದನ್ನ ನೋಡ್ತಿದ್ದೀರ. ಸ್ಥಳೀಯ ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತ್ರಿಪುರಾದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲಲ್ಲ. ಕಳೆದ ಮೇ ನಲ್ಲಿ ಮಹಿಳೆಯೊಬ್ಬರು 200 ರೂ. ಗಾಗಿ ಮಗುವನ್ನ ಆಟೋ ಚಾಲಕನಿಗೆ ಮಾರಿದ್ದರು ಎಂದು ತ್ರಿಪುರಾ ಬಿಜೆಪಿ ಅಧ್ಯಕ್ಷ ಬಿಪ್ಲಬ್ ದಾಸ್ ಹೇಳಿದ್ದಾರೆ.