Tag: Baby

  • ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ ಪ್ರಕರಣ – ಶಿಶು ಬಲಿ ನೀಡಿದ್ದು ಈ ಕಾರಣಕ್ಕೆ

    ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ ಪ್ರಕರಣ – ಶಿಶು ಬಲಿ ನೀಡಿದ್ದು ಈ ಕಾರಣಕ್ಕೆ

    ಹೈದರಾಬಾದ್: ಅಪರಿಚಿತ ಮಗುವಿನ ರುಂಡ ಮನೆಯ ಟೆರೇಸ್ ಮೇಲೆ ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಇದು ಮಾನವ ಬಲಿ ಎಂದು ರಾಚಕೊಂಡ ಪೊಲೀಸರು ದೃಢಪಡಿಸಿದ್ದಾರೆ.

    ಫೆಬ್ರವರಿ 1ರಂದು ಇಲ್ಲಿನ ಉಪ್ಪಲ್ ಪ್ರದೇಶದ ಮನೆಯೊಂದರ ಮಹಡಿಯ ಮೇಲೆ ಮಗುವಿನ ರುಂಡ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷದ ಕ್ಯಾಬ್ ಚಾಲಕ ಕೆ. ರಾಜಶೇಖರ್ ಹಾಗೂ ಆತನ ಪತ್ನಿ ಶ್ರೀಲತಾ(35) ಳನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಆರೋಪಿ ರಾಜಶೇಖರ್ ನ ಪತ್ನಿಗೆ ದೀರ್ಘಕಾಲದ ಅನಾರೋಗ್ಯ ಇದ್ದು, ಅದನ್ನ ವಾಸಿ ಮಾಡಲು ನರಬಲಿ ಕೊಡಬೇಕು ಎಂದು ಯಾರೋ ಹೇಳಿದ್ದರಿಂದ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಅನಾಥ ಹೆಣ್ಣುಮಗು ಕಿಡ್ನಾಪ್: ರಾಜಶೇಖರ್ ಜನವರಿ 31ರಂದು ಬೋಯಗುಡ ಪ್ರದೇಶದಲ್ಲಿ ರಸ್ತೆಬದಿಯಿಂದ 3 ತಿಂಗಳ ಅನಾಥ ಹೆಣ್ಣುಮಗುವನ್ನ ಅಪಹರಿಸಿಕೊಂಡು ಬಂದಿದ್ದ ಎಂದು ರಾಚಕೊಂಡ ಪೊಲೀಸ್ ಆಯುಕ್ತರಾದ ಮಹೇಶ್ ಎಂ ಭಾಗ್ವತ್ ಹೇಳಿದ್ದಾರೆ.

    ಮಗುವಿನ ದೇಹ, ಚಾಕುವನ್ನ ನದಿಗೆ ಎಸೆದಿದ್ದ: ರಾಜಶೇಖರ್ ಮಧ್ಯರಾತ್ರಿ ಮಗುವಿನ ರುಂಡ ಕಡಿದು, ಅದರ ದೇಹ ಮತ್ತು ಕೃತ್ಯಕ್ಕೆ ಬಳಸಿದ ಚಾಕುವನ್ನ ನದಿಗೆ ಎಸೆದಿದ್ದ. ನಂತರ ತನ್ನ ಹೆಂಡತಿ ಶ್ರೀಲತಾ ಜೊತೆಗೂಡಿ ಚಿಲುಕನಗರದ ತನ್ನ ಮನೆಯಲ್ಲಿ ಮಗುವಿನ ರುಂಡವನ್ನ ಇಟ್ಟು ಕ್ಷುದ್ರ ಪೂಜೆ ಕೈಗೊಂಡಿದ್ದ. ನಂತರ ತನಗೆ ಹೇಳಿದಂತೆ ಮಗುವಿನ ರುಂಡವನ್ನ ಮನೆಯ ಟೆರೇಸ್ ಮೇಲೆ ನೈಋತ್ಯ ಭಾಗದಲ್ಲಿ ಇಟ್ಟು ಚಂದ್ರಗ್ರಹಣದ ಬೆಳಕು ಹಾಗೂ ಬೆಳಗ್ಗೆ ಸುಮಾರು 4 ಗಂಟೆಯ ಸೂರ್ಯೋದಯದ ಬೆಳಕು ಅದರ ಮೇಲೆ ಬೀಳುವಂತೆ ಇಟ್ಟಿದ್ದ ಎಂದು ಮಹೇಶ್ ತಿಳಿಸಿದ್ದಾರೆ.

    ಜನವರಿ 31ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಿತ್ತು. ಮರುದಿನ ಬೆಳಗ್ಗೆ ರಾಜಶೇಖರ್ ಎಂದಿನಂತೆ ಕೆಲಸಕ್ಕೆ ಹೋಗಿದ್ದ. ಆದ್ರೆ ಆತನ ಅತ್ತೆ ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಮಗುವಿನ ರುಂಡವನ್ನ ನೋಡಿ ಕಿರುಚಿಕೊಂಡಾಗ ಎಲ್ಲರಿಗೂ ವಿಚಾರ ಗೊತ್ತಾಗಿ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

    ಪ್ರಕರಣದ ತನಿಖೆ ವೇಳೆ 122 ಮೊಬೈಲ್ ಕಾಲ್ ರೆಕಾಡ್ರ್ಸ್ ಪರಿಶೀಲಿಸಲಾಗಿತ್ತು, 45 ಜನರನ್ನ ವಿಚಾರಣೆಗೊಳಪಡಿಸಿ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನ ತಪಾಸಣೆ ಮಾಡಲಾಗಿತ್ತು ಎಂದು ಮಹೇಶ್ ಹೇಳಿದ್ದಾರೆ.

    ರಾಜಶೇಖರ್ ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಟೆರೇಸ್ ಮೇಲೆ ಪತ್ತೆಯಾದ ಮಗುವಿನ ರುಂಡದ ಡಿಎನ್‍ಎ ಮಾದರಿ ಜೊತೆ ಹೊಂದಾಣಿಕೆ ಇರುವುದು ವಿಧಿವಿಜ್ಞಾನ ಪರೀಕ್ಷೆಯ ವರದಿಯಿಂದ ತಿಳಿದುಬಂದಿತ್ತು. ಹೀಗಾಗಿ ಪೊಲೀಸರು ವಿಚಾರಣೆ ಮಾಡಿದಾಗ ರಾಜಶೇಖರ್ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

    ದುಷ್ಟಶಕ್ತಿ ಓಡಿಸಲು ನರಬಲಿ ಕೊಟ್ರಂತೆ: ಆರೋಪಿ ರಾಜಶೇಖರ್ ಪತ್ನಿಯ ಕಾಯಿಲೆ ಗುಣಪಡಿಸಲು 4 ವರ್ಷದಿಂದ ವೈದ್ಯರು, ಜ್ಯೋತಿಷಿಗಳು ಹಾಗೂ ಮಾಂತ್ರಿಕರನ್ನ ಸಂಪರ್ಕಿಸಿದ್ದ. ಇತ್ತೀಚೆಗೆ ಸಮ್ಮಕ್ಕ ಸರಳಮ್ಮ ಜಾತ್ರೆಗೆ ಹೋದಾಗ ಬುಡಕಟ್ಟು ವ್ಯಕ್ತಿಯೊಬ್ಬರನ್ನ ಭೇಟಿಯಾಗಿದ್ದ. ಆಗ ಅವರು, ಮನೆಯಲ್ಲಿ ದುಷ್ಟಶಕ್ತಿ ಇದೆ. ಪತ್ನಿಯ ಕಾಯಿಲೆ ವಾಸಿ ಮಾಡಲು ಮಗುವನ್ನ ಬಲಿ ಕೊಡಬೇಕೆಂದು ಹೇಳಿದ್ದರು. ವಾಪಸ್ ಬಂದ ನಂತರ ರಾಜಶೇಖರ್ ಮೂವರು ಮಾಂತ್ರಿಕರನ್ನ ಭೇಟಿಯಾಗಿದ್ದ. ಅವರು ಕೆಲವು ಪೂಜೆಗಳನ್ನ ಮಾಡಿದ್ದರೂ ಪತ್ನಿಯ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ದಂಪತಿ ನರಬಲಿ ಕೊಡಲು ನಿರ್ಧರಿಸಿದ್ದರು.

    ಶ್ರೀಲತಾ ಕಳೆದ 4 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಹೀಗಾಗಿ ಅಕೆಯಿಂದ ದುಷ್ಟಶಕ್ತಿಗಳನ್ನ ದೂರ ಮಾಡಲು ಹೆಣ್ಣುಮಗುವನ್ನ ತಂದು ನರ ಬಲಿ ಕೊಡುವಂತೆ ಯಾರೋ ಸಲಹೆ ನೀಡಿದ್ದರು ಎಂದು ರಾಜಶೇಖರ್ ಪೊಲೀಸರಿಗೆ ಹೇಳಿದ್ದಾನೆ.

    ಅನಾಥ ಮಗುವನ್ನ ಅಪಹರಣ ಮಾಡಿದ್ರೆ ಅದು ಕಾಣೆಯಾದ್ರೂ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡು ರಾಜಶೇಖರ್ ಅನಾಥ ಮಗುವನ್ನೇ ಹುಡುಕಲು ನಿರ್ಧರಿಸಿದ್ದ ಎಂದು ಆಯುಕ್ತರಾದ ಮಹೇಶ್ ಹೇಳಿದ್ದಾರೆ.

    ಆರೋಪಿಗಳ ವಿರುದ್ಧ ಕೊಲೆ, ಅಪಹರಣ ಹಾಗೂ ಐಪಿಸಿ ಸೆಕ್ಷನ್ ನ ಇನ್ನಿತರೆ ಸಂಬಂಧಿತ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಮೃತ ಮಗುವಿನ ಗುರುತು ಪತ್ತೆಹಚ್ಚಲು ಮುಂದೆ ಬರುವಂತೆ ಜನರನ್ನು ಭಾಗ್ವತ್ ಮನವಿ ಮಾಡಿದ್ದಾರೆ.

  • ಉಗ್ರರ ಗುಂಡೇಟಿನಿಂದ ಗಾಯಗೊಂಡ ನಂತರ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ಯೋಧನ ಪತ್ನಿ

    ಉಗ್ರರ ಗುಂಡೇಟಿನಿಂದ ಗಾಯಗೊಂಡ ನಂತರ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ಯೋಧನ ಪತ್ನಿ

    ಶ್ರೀನಗರ: ಜಮ್ಮು ಕಾಶ್ಮೀರದ ಸುಂಜುವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

    ಶನಿವಾರದಂದು ನಾಲ್ವರು ಜೈಷ್ ಎ ಮಹಮ್ಮದ್ ಸಂಘಟನೆಯ ಉಗ್ರರು ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ್ದರು. ಕೂಡಲೇ ಅಲ್ಲಿದ್ದ ನಿವಾಸಿಗಳನ್ನ ಸ್ಥಳಾಂತರ ಮಾಡಲಾಗಿತ್ತು. ಆದರೂ 11 ಜನ ಗಾಯಗೊಂಡಿದ್ದರು. ಇವರಲ್ಲಿ ಗರ್ಭಿಣಿಯಾಗಿದ್ದ 24 ವರ್ಷದ ಶಹ್‍ಝಾದಾ ಖಾನ್ ಎಂಬವರಿಗೂ ಗುಂಡೇಟು ಬಿದ್ದಿತ್ತು. ಆದ್ರೆ ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಇಲ್ಲಿನ ಸತ್ವಾರಿ ಮಿಲಿಟರಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಸದ್ಯ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದು, ಮಗು 2.5 ಕೆಜಿ ತೂಕವಿದೆ. ಶಹ್‍ಝಾದಾ ಅವರಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಇದೇ ಆಸ್ಪತ್ರೆಯಲ್ಲಿ ಸೇನಾಧಿಕಾರಿಯೊಬ್ಬರ ಮಗಳು ಹಾಗೂ ತಲೆಗೆ ಗುಂಡೇಟು ಬಿದ್ದು ಗಾಯಗೊಂಡ 14 ವರ್ಷದ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

    ಉಗ್ರರ ದಾಳಿಯಿಂದಾಗಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಹಾಗೂ ಒಬ್ಬ ನಾಗರೀಕ ಕೂಡ ಮೃತಪಟ್ಟಿದ್ದಾರೆ. ಹುತಾತ್ಮ ಯೋಧರಲ್ಲೊಬ್ಬರಾದ ಸುಬೇದಾರ್ ಮದನ್ ಲಾಲ್ ಚೌಧರ್ ಬರಿಗೈಯಲ್ಲೇ ಯೋಧರನ್ನ ಎದುರಿಸಿದ್ರು. ತುಂಬಾ ಸನಿಹದಿಂದ ಅವರ ಮೇಲೆ ಹಲವು ಬಾರಿ ಗುಂಡಿನ ದಾಳಿ ನಡೆದು ಮೃತಪಟ್ಟರು.

    ಗರ್ಭಿಣಿ ಶಹ್‍ಝಾದಾ ಖಾನ್ ಅವರನ್ನ ಹೆಲಿಕಾಪ್ಟರ್ ಮೂಲಕ ಕ್ಯಾಂಪ್‍ನಿಂದ ಏರ್‍ಲಿಫ್ಟ್ ಮಾಡಿ ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿನ ವೈದ್ಯರು ರಾತ್ರಿಯಿಡೀ ಕಾರ್ಯ ನಿರ್ವಹಿಸಿ ತಾಯಿ-ಮಗುವಿನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯ ಪತಿ ನಾಜಿರ್ ಅಹ್ಮದ್ ಕೂಡ ಗುಂಡೇಟಿನಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಭಾನುವಾರದಂದು ಭದ್ರತಾ ಪಡೆ ನಾಲ್ವರು ಉಗ್ರರನ್ನು ಸದೆಬಡಿದಿದ್ದಾರೆ. ಎಲ್ಲಾ ಉಗ್ರರು ಎಕೆ-56 ಆಯುಧಗಳನ್ನ ಹೊಂದಿದ್ದು, ಅವನ್ನು ದಾಳಿಗಾಗಿ ಬಳಸಿದ್ದರು ಎಂದು ವರದಿಯಾಗಿದೆ.

  • ಸೋಲದೇವನಹಳ್ಳಿ ಮಗು ಕೊಲೆ ಪ್ರಕರಣಕ್ಕೆ ಟ್ವಿಸ್ಟ್- 15 ವರ್ಷದ ಬಾಲಕನ ಬಂಧನ

    ಸೋಲದೇವನಹಳ್ಳಿ ಮಗು ಕೊಲೆ ಪ್ರಕರಣಕ್ಕೆ ಟ್ವಿಸ್ಟ್- 15 ವರ್ಷದ ಬಾಲಕನ ಬಂಧನ

    ಬೆಂಗಳೂರು: ಗುರುವಾರದಂದು ಸೋಲದೇವನಹಳ್ಳಿ ನಡೆದಿದ್ದ 2 ವರ್ಷದ ಮಗು ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ.

    ಸೋಲದೇವನಹಳ್ಳಿಯ ನಿವಾಸಿ ಬಸವರಾಜು ಮತ್ತು ವೆಂಕಮ್ಮ ದಂಪತಿಯ ಮಗನಾದ ಎರಡು ವರ್ಷದ ವೆಂಕಟೇಶ್ ನನ್ನು ಕಾಲಿನಿಂದ ಕುತ್ತಿಗೆಯನ್ನು ತುಳಿದು ಕೊಲೆ ಮಾಡಲಾಗಿತ್ತು. ಎರಡು ದಿನಗಳ ಹಿಂದೆ ಪಕ್ಕದ ಮನೆಯ ಈರಣ್ಣ ಹಾಗೂ ಬಸವರಾಜು ಕುಟುಂಬಕ್ಕೆ ನಾಯಿಗೆ ಹಾಲು ಹಾಕುವ ಬಟ್ಟಲಿನ ವಿಚಾರಕ್ಕೆ ಜಗಳವಾಗಿತ್ತು. ಜಗಳವಾದ ಬಳಿಕ ಈರಣ್ಣನೇ ಮಗುವನ್ನು ಕೊಲೆ ಮಾಡಿದ್ದಾನೆ ಎಂದು ವೆಂಕಟೇಶ್ ಪೋಷಕರು ಆರೋಪಿಸಿದ್ದರು.

    ಆದ್ರೆ ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಈರಣ್ಣನ ಮಗನಾದ 15 ವರ್ಷದ ಬಾಲಕನಿಂದ ವೆಂಕಟೇಶ್ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಆರೋಪಿ ಬಾಲಕ ನಾಲ್ಕೈದು ವರ್ಷಗಳಿಂದ ಮನೆಯಲ್ಲಿ ಪಾರಿವಾಳ ಸಾಕುತ್ತಿದ್ದ. ಕೊಲೆಯಾದ ಮಗು ವೆಂಕಟೇಶ್ ಕೀಟಲೆ ಮಾಡಿ ಆ ಪಾರಿವಾಳವನ್ನೆಲ್ಲಾ ಪಂಜರದಿಂದ ತೆಗೆದು ಹಾರಲು ಬಿಡುತ್ತಿದ್ದ. ಇದ್ರಿಂದ ಆರೋಪಿಗೆ ವೆಂಕಟೇಶನ ಮೇಲೆ ಕೋಪ ಇತ್ತು. ಮೊನ್ನೆಯೂ ಕೂಡ ಮೃತ ವೆಂಕಟೇಶ್ ಪಾರಿವಾಳ ಹಾರಲು ಬಿಟ್ಟಿದ್ದ. ಆ ಪಾರಿವಾಳ ನೀಲಗಿರಿ ತೋಪಿಗೆ ಹೋಗಿತ್ತು. ಅದನ್ನು ಹಿಡಿಯಲು ಹೋದ ಆರೋಪಿ ಜೊತೆ ವೆಂಕಟೇಶ್ ಕೀಟಲೆ ಮಾಡಿದ್ದರಿಂದ ಪಾರಿವಾಳವನ್ನು ಸಾಯಿಸ್ತೀಯಾ ಅಂತ ಕಾಲಿನಿಂದ ತುಳಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಬಾಲಕನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಈರಣ್ಣ ಮತ್ತು ಬಸವರಾಜು ಕುಟುಂಬಗಳ ನಡುವೆ ಜಗಳ ನಡೆದಿತ್ತು. ನಂತರ ಮಧ್ಯಾಹ್ನ 3 ಗಂಟೆಗೆ ವೆಂಕಟೇಶ್ ನಾಪತ್ತೆಯಾಗಿದ್ದ. ಸಂಜೆ 5 ಗಂಟೆ ವೇಳೆ ಮನೆಯಿಂದ ಸುಮಾರು 3 ಕಿಮೀ ದೂರದಲ್ಲಿರುವ ನೀಲಗಿರಿ ತೋಪಿನಲ್ಲಿ ಕಂದಮ್ಮನ ಶವ ಪತ್ತೆಯಾಗಿತ್ತು.

    ಮಧ್ಯಾಹ್ನ ಈರಣ್ಣನೇ ಮಗುವನ್ನು ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಘಟನೆ ಬಳಿಕ ಈರಣ್ಣ ಮತ್ತು ಕುಟುಂಬಸ್ಥರು ನಾಪತ್ತೆಯಾಗಿದ್ದರು. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಮನೆಯ ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ- ಚಂದ್ರಗ್ರಹಣದಂದು ಶಿಶು ಬಲಿ?

    ಮನೆಯ ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ- ಚಂದ್ರಗ್ರಹಣದಂದು ಶಿಶು ಬಲಿ?

    ಹೈದರಾಬಾದ್: ಅಪರಿಚಿತ ಮಗುವಿನ ರುಂಡವೊಂದು ಮನೆಯ ಟೆರೇಸ್ ಮೇಲೆ ಪತ್ತೆಯಾಗಿರುವ ಘಟನೆ ಹೈದರಾಬಾದ್‍ನ ಚಿಲುಕಾ ನಗರದಲ್ಲಿ ನಡೆದಿದೆ. ಮಾಟ ಮಂತ್ರಕ್ಕಾಗಿ ಚಂದ್ರಗ್ರಹಣದಂದು ಮಗುವನ್ನ ಬಲಿ ನೀಡಿರುವ ಶಂಕೆ ವ್ಯಕ್ತವಾಗಿದ್ದು, ಈ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆ ಬಟ್ಟೆ ಒಣಗಿಸಲು ಟೆರೇಸ್ ಮೇಲೆ ಹೋದಾಗ ಮಗುವಿನ ರುಂಡ ನೋಡಿ ಕಿರುಚಿಕೊಂಡಿದ್ದಾರೆ. ಇದನ್ನ ಕೇಳಿ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗು 2 ತಿಂಗಳದ್ದಾ ಅಥವಾ ಮೂರು ತಿಂಗಳದ್ದಾ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ.

    ಮಹಿಳೆಯ ಅಳಿಯನಾದ ಕ್ಯಾಬ್ ಚಾಲಕ ರಾಜಶೇಖರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ನಾಯಿಗಳು ನೆರೆಮನೆಯ ಡಸ್ಟ್ ಬಿನ್ ಬಳಿ ಕೊಂಡೊಯ್ದ ನಂತರ ಆ ಮನೆಯವರಾದ ನರಹರಿ ಹಾಗೂ ರಂಜಿತ್ ಎಂಬಿಬ್ಬರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರೂ ಆಗಾಗ ಮಾಟ ಮಂತ್ರಕ್ಕಾಗಿ ಪೂಜೆ ಮಾಡುತ್ತಿದ್ದರು ಎಂದು ವರದಿಯಾಗಿದೆ.

    ಟೆರೇಸ್‍ನಲ್ಲಿ ಯಾವುದೇ ರಕ್ತದ ಕಲೆಗಳು ಇರಲಿಲ್ಲ. ಹೀಗಾಗಿ ತಲೆಯನ್ನು ಮೊದಲೇ ಕಡಿದು ಅಲ್ಲಿ ಇಡಲಾಗಿದೆ ಎಂಬುದನ್ನ ಸೂಚಿಸಿದೆ. ಮಗುವಿನ ದೇಹಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಮಗುವಿನ ರುಂಡ ನೋಡಿ ಆತಂಕಕ್ಕೀಡಾದ ಮಹಿಳೆ ಬಾಲಲಕ್ಷ್ಮೀ, ಮಗು ಬಲಿ ಕೊಡಲು ನಮ್ಮ ಮನೆಯ ಟೆರೇಸನ್ನೇ ಯಾಕೆ ಆಯ್ದುಕೊಂಡರು ಎಂದು ಗಾಬರಿಯಾಗಿದ್ದು, ಕಣ್ಣೀರಿಟ್ಟಿದ್ದಾರೆ.

  • ದಯವಿಟ್ಟು ಗಮನಿಸಿ, ಸಣ್ಣ ಮಕ್ಕಳ ಕೈಗೆ ಸಿಗುವಂತೆ ಇಯರ್ ಫೋನ್ ಇಡಬೇಡಿ

    ದಯವಿಟ್ಟು ಗಮನಿಸಿ, ಸಣ್ಣ ಮಕ್ಕಳ ಕೈಗೆ ಸಿಗುವಂತೆ ಇಯರ್ ಫೋನ್ ಇಡಬೇಡಿ

    ಹೈದರಾಬಾದ್: ಹನ್ನೊಂದು ತಿಂಗಳ ಹೆಣ್ಣು ಶಿಶು ಆಕಸ್ಮಿಕವಾಗಿ ಇಯರ್ ಫೋನ್ ನುಂಗಿ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಪೂರ್ವ ಗೋದಾವರಿ ಜಿಲ್ಲೆಯ ಪರ್ಸಲಾಪುದಿ ಗ್ರಾಮದಲ್ಲಿ ಈ ಘಟನೆ ನಡೆದೆ. ಶಸ್ತ್ರ ಚಿಕಿತ್ಸೆಯ ಮೂಲಕ ಇಯರ್ ಫೋನನ್ನು ದೇಹದಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

    ಆಗಿದ್ದು ಏನು?
    ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಇಯರ್ ಫೋನ್ ನುಂಗಿದ ಬಳಿಕ ಮಗು ಒಂದೇ ಸಮನೆ ಅಳುತ್ತಿದ್ದಳು. ಏನು ಮಾಡಬೇಕೆಂದು ತೋಚದ ಹೆತ್ತವರು ಮಗಳನ್ನು ಅಮಲಾಪುರಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು

    ಪ್ರಾಥಮಿಕ ಪರೀಕ್ಷೆಯ ವೇಳೆ ವೈದ್ಯರು ದೇಹದ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಆದರೂ ಮಗು ಆಳುತ್ತಿದ್ದ ಕಾರಣ ಎಕ್ಸ್-ರೇ ಮಾಡಿಸಿದ್ದಾರೆ. ಈ ವೇಳೆ ಮೊಬೈಲ್ ಇಯರ್ ಫೋನ್ ಇರುವುದು ಪತ್ತೆಯಾಗಿದೆ.

    ಕೂಡಲೇ ನಮ್ಮ ತಂಡ ಶಸ್ತ್ರಚಿಕಿತ್ಸೆ ನಡೆಸಿ ದೇಹದಿಂದ ಇಯರ್ ಫೋನ್ ಹೊರ ತೆಗೆದಿದ್ದೇವೆ. ಈಗ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಶಸ್ತ್ರ ಚಿಕಿತ್ಸೆ ನಡೆಸಿದ ಅಮಲಾಪುರಂ ಆಸ್ಪತ್ರೆಯ ವೈದ್ಯ ಚಕ್ರವರ್ತಿ ತಿಳಿಸಿದ್ದಾರೆ. ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!

     

  • ಮಣಿಪಾಲದ ಕೆಎಂಸಿ ವೈದ್ಯರಿಂದ 11 ದಿನದ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಸಕ್ಸಸ್

    ಮಣಿಪಾಲದ ಕೆಎಂಸಿ ವೈದ್ಯರಿಂದ 11 ದಿನದ ಮಗುವಿನ ಹೃದಯದ ಶಸ್ತ್ರಚಿಕಿತ್ಸೆ ಸಕ್ಸಸ್

    ಉಡುಪಿ: ಜಿಲ್ಲೆಯ ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರಿಂದ 11 ದಿನಗಳ ಹಸುಗೂಸಿಗೆ ಹೃದಯದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಹುಟ್ಟಿನಲ್ಲೇ ಇದ್ದ ಕಂಟಕದಿಂದ ಮಗುವಿನ ಪ್ರಾಣ ಉಳಿದಿದೆ.

    ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ ಹುಟ್ಟಿದ ಮಗುವಿನ ಉಸಿರಾಟದಲ್ಲಿ ಸಮಸ್ಯೆ ಕಾಣುತ್ತಿತ್ತು. ಹೃದಯದ ಬಡಿತ ವಿಪರೀತವಾಗಿತ್ತು. ದೇಹದ ಎಲ್ಲಾ ಭಾಗದ ಚರ್ಮ ತಣ್ಣಗಾಗಿತ್ತು. ಕೂಡಲೇ ಮಗುವನ್ನು ಕೆಎಂಸಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ, ದೊಡ್ಡ ರಕ್ತನಾಳ ಸ್ಥಾನ ಪಲ್ಲಟವಾಗಿದೆ. ಮಗುವಿನ ತಾಯಿ ಗರ್ಭ ಧರಿಸಿದ ಸಂದರ್ಭ ಅಸಹಜ ಬೆಳವಣಿಗೆಯಿಂದ ಈ ಸಮಸ್ಯೆ ಎದುರಾಗಿದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ.

    ಹೀಗಾಗಿ ಹೃದಯದ ಆಪರೇಶನ್ ಮಾಡಲು ನಿರ್ಧಾರ ಮಾಡಿದ್ದಾರೆ. ಪುಟ್ಟ ಮಗು ಆಗಿದ್ದರಿಂದ 10 ದಿನಗಳ ಕಾಲ ನಿಗಾ ಘಟಕದಲ್ಲಿಟ್ಟು, ಬಳಿಕ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದೀಗ ಈ ಆಪರೇಷನ್ ಯಶಸ್ವಿಯಾಗಿ ನಡೆದಿದೆ. ಮಣಿಪಾಲ ಕಾರ್ಡಿಯಾಕ್ ಸರ್ಜನ್ ಡಾ. ಅರವಿಂದ ಬಿಷ್ಣೋಯ್ ಬಹಳ ಮುತುವರ್ಜಿಯಿಂದ ಆಪರೇಶನ್ ಮಾಡಿದ್ದಾರೆ.  ಇದನ್ನೂ ಓದಿ: ಬೇರ್ಪಟ್ಟಿದ್ದ 2 ಕಾಲುಗಳ ಮರು ಜೋಡಣೆ – ಮಂಗ್ಳೂರಿನ ಎಜೆ ಆಸ್ಪತ್ರೆ ವೈದ್ಯರಿಂದ ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿ

    ಮಕ್ಕಳ ತಜ್ಞ ಡಾ, ಲೆಸ್ಲೀ ಲೂಯೀಸ್, ಹೃದ್ರೋಗ ತಜ್ಞ ಪದ್ಮಕುಮಾರ್, ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಮಾತನಾಡಿ, ಇದೊಂದು ಅಪರೂಪದ ಶಸ್ತ್ರಚಿಕಿತ್ಸೆ ವೈದ್ಯರು ಬಹಳ ರಿಸ್ಕ್ ತೆಗೆದುಕೊಂಡು ಮಗುವಿನ ಜೀವ ಉಳಿಸಿದ್ದಾರೆ. ಈಗ ಮಗು ಆರೋಗ್ಯಯುತವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಕ್ಕಳ ಆರೋಗ್ಯ ವಿಮೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ.

    ಉಡುಪಿಯ ಆಸ್ಪತ್ರೆಯಲ್ಲಿ ಮಗು ಹುಟ್ಟಿದಾಗ ಮಗುವಿನಲ್ಲಿ ಸಮಸ್ಯೆ ಇರುವುದಾಗಿ ತಂದೆ ತಾಯಿಯವರಿಗೆ ಕಂಡು ಬಂತು. ಮಗುವಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಸಹ ಹೆಚ್ಚಿನ ಚಿಕಿತ್ಸೆ ಸೂಚಿಸಿದರು. ಮಗು ವೇಗವಾಗಿ ಉಸಿರಾಡುತ್ತಿತ್ತು, ಕೆಲವೊಮ್ಮೆ ಉಸಿರಾಡಲು ಕಷ್ಟಪಡುತ್ತಿತ್ತು, ಹೃದಯ ಬಡಿತ ತೀವ್ರವಾಗಿತ್ತು ಮತ್ತು ಚರ್ಮ ತಣ್ಣಗಿತ್ತು. ತಕ್ಷಣ ಮಗುವಿನ ಹೆತ್ತವರು ಕಸ್ತೂರ್ಬಾ ಆಸ್ಪತ್ರೆಯ ಶಿಶುಗಳ ತೀವ್ರ ನಿಘಾ ಘಟಕದಲ್ಲಿ ಶಿಶುರೋಗ ತಜ್ಞರಾದ ಡಾ. ಲೆಸ್ಲಿ ಲೂಯಿಸ್‍ವರನ್ನು ಕಂಡರು. ಹೃದ್ರೋಗ ತಜ್ಞರಾದ ಡಾ. ಪದ್ಮಕುಮಾರ್‍ರವರು ತಪಾಸಣೆ ನಡೆಸಿ `ಮಗು ಟ್ರಾನ್ಸ್ ಪೊಷಿಶನ್ ಆಫ್ ದಿ ಗ್ರೇಟ್ ಆರ್ಟರೀಸ್ (ಟಿಜಿಎ) ಅಂದರೆ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಗಂಭೀರ ಜನ್ಮಜಾತ ಹೃದಯ ನ್ಯೂನತೆಯಿಂದ ಬಳಲುತ್ತಿದೆ’ ಎಂದು ಅಭಿಪ್ರಾಯಪಟ್ಟರು.

    ಆರಂಭಿಕ ಹಂತಗಳಲ್ಲಿ ಇದನ್ನು ಕಂಡುಕೊಳ್ಳುವ ಏಕೈಕ ಮಾರ್ಗವೆಂದರೆ ಭ್ರೂಣದ ಹೃದಯ ಎಕೋಕಾರ್ಡಿಯೋಗ್ರಫಿ, ಇದನ್ನು ಹೆಚ್ಚು ಅಪಾಯದ ಗರ್ಭಧಾರಣೆ ಹೊಂದಿರುವ ಗರ್ಭಿಣಿ ರೋಗಿಗಳಿಗೆ ಅಂದರೆ ಹೈ ರಿಸ್ಕ್ ಪ್ರೆಗ್ನೆನ್ಸಿ ಪೇಶೆಂಟುಗಳಿಗೆ ಮಾಡಲಾಗುವುದು. ಈ ಸೌಲಭ್ಯ ಮತ್ತು ತಾಂತ್ರಿಕ ಪರಿಣತಿಯನ್ನು ಹೊಂದಿರುವ ಸಿಬ್ಬಂದಿಗಳು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮಾತ್ರ ಇರುವುದು ಎಂದು ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಟಾಮ್ ಅಭಿಪ್ರಾಯಪಟ್ಟರು. ವೈದ್ಯರ ಮೀಟಿಂಗ್ ನಲ್ಲಿ ಏನು ಮಾಡಬಹುದು ಎಂಬ ಚರ್ಚೆ ಅಂದು ಆರಂಭವಾಯ್ತು.

    ಗರ್ಭ ಧರಿಸಿದ ಮೊದಲ 8 ವಾರಗಳಲ್ಲಿ ಭ್ರೂಣದ ಹೃದಯದ ಅಸಹಜ ಬೆಳವಣಿಗೆಯಿಂದಾಗಿ ಹೃದಯದಿಂದ ಶ್ವಾಸಕೋಶಗಳಿಗೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತವನ್ನು ಕೊಂಡೊಯ್ಯುವ ದೊಡ್ಡ ರಕ್ತನಾಳಗಳು ಅದಲು ಬದಲಾಗುತ್ತವೆ. ದೇಹದ ಭಾಗಗಳಿಗೆ ಆಮ್ಲಜನಕದ ಪೂರೈಕೆ ಸಮರ್ಪಕವಾಗಿರಲಿಲ್ಲ ಮತ್ತು ಶಿಶುಗಳ ಸುಸಜ್ಜಿತ ತೀವ್ರ ನಿಘಾ ಘಟಕದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಅವಶ್ಯಕ ಆರೈಕೆಯನ್ನು ಒದಗಿಸಿದ ನಂತರ ಮಗುವನ್ನು ಹೃದಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಕಳುಹಿಸಲಾಯಿತು. ಈ ರೀತಿಯ ಪ್ರಕರಣಗಳನ್ನು ಮೊದಲು ಬೆಂಗಳೂರಿಗೆ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಗುತ್ತಿತ್ತು. ಆದರೆ ಬೆಂಗಳೂರಿಗೆ ಹೋಗುವ ತನಕ ಶಿಶು ಬದುಕುಳಿಯುವ ಭರವಸೆ ಇರುತ್ತಿರಲಿಲ್ಲ. ಇದಲ್ಲದೆ, ಸಾರಿಗೆ ವ್ಯವಸ್ಥೆಗಳಿಗೆ, ವೈದ್ಯರು, ದಾದಿಯರು ಮತ್ತು ಇತರೆ ಅಗತ್ಯ ವೆಚ್ಚವು ಸುಮಾರು 60000 – ವರೆಗೆ ಆಗುತ್ತದೆ ಎಂದು ಮನಗಂಡ ವೈದ್ಯರು ಮಗುವನ್ನು ಉಳಿಸಲು ಮುಂದಾದರು.

    ತಜ್ಞರ ಪ್ರಕಾರ, ಇಂತಹ ಶಿಶುಗಳು ಒಂದು ತಿಂಗಳು ಮೀರಿ ಬದುಕುವುದಿಲ್ಲ. ಮತ್ತು ಶಿಶುಗಳ ಉಳಿವಿಗಾಗಿ ಶಸ್ತ್ರಚಿಕಿತ್ಸೆಯೊಂದೇ ಏಕೈಕ ಮಾರ್ಗವಾಗಿದೆ. ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರು ಮತ್ತು ಕನ್ಸಲ್ಟಂಟ್ ಕಾರ್ಡಿಯಾಕ್ ಸರ್ಜನ್ ಆಗಿರುವ ಡಾ. ಅರವಿಂದ ಬಿಷ್ಣೋಯ್‍ಯವರು ಸಾಮಾನ್ಯವಾಗಿ, ಕಡಿಮೆ ಆಮ್ಲಜನಕಯುಕ್ತ ರಕ್ತ (ನೀಲಿ) ದೇಹದ ಭಾಗಗಳಿಂದ ಬಲ ಹೃತ್ಕರ್ಣಕ್ಕೆ ಹಿಂತಿರುಗುತ್ತದೆ, ನಂತರ ಎಡ ಹೃತ್ಕುಕ್ಷಿಯನ್ನು ಸೇರುತ್ತದೆ. ಅಲ್ಲಿಂದ ಅದನ್ನು ಹೃದಯವು ಪಲ್ಮನರಿ ಅಪಧಮನಿಗೆ ಪಂಪ್ ಮಾಡುತ್ತದೆ ಮತ್ತು ಅಲ್ಲಿ ಅದು ಶ್ವಾಸಕೋಶಗಳಿಂದ ಆಮ್ಲಜನಕವನ್ನು ಪಡೆದುಕೊಳ್ಳುತ್ತದೆ. ಆಮ್ಲಜನಕದಿಂದ ಸಮೃದ್ಧವಾದ ರಕ್ತವು (ಕೆಂಪು) ಶ್ವಾಸಕೋಶಗಳಿಂದ ಎಡ ಹೃತ್ಕರ್ಣಕ್ಕೆ ಹಿಂತಿರುಗುತ್ತದೆ ಮತ್ತು ನಂತರ ಎಡ ಹೃತ್ಕುಕ್ಷಿಯನ್ನು ಸೇರುತ್ತದೆ. ಬಳಿಕ ಹೃದಯವು ಅದನ್ನು ಅಯೋರ್ಟಾಕ್ಕೆ ಪಂಪ್ ಮಾಡಿ ದೇಹದ ಉಳಿದ ಭಾಗಗಳಿಗೆ ಕಳುಹಿಸುತ್ತದೆ. ಟ್ರಾನ್ಸ್ ಪೊಷಿಶನ್ ಆಫ್ ದಿ ಗ್ರೇಟ್ ಆರ್ಟರಿ ಅಥವಾ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಈ ಸ್ಥಿತಿಯಲ್ಲಿ ಅಯೋರ್ಟಾವು ಬಲ ಹೃತ್ಕುಕ್ಷಿಗೆ ಮತ್ತು ಪಲ್ಮನರಿ ಅಪಧಮನಿ ಎಡ ಹೃತ್ಕುಕ್ಷಿಗೆ ಜೋಡಣೆಯಾಗಿರುತ್ತದೆ. ಅಂದರೆ ಇದು ಹೃದಯದ ಸಾಮಾನ್ಯ ಚಟುವಟಿಕೆಗೆ ವಿರುದ್ಧವಾಗಿತ್ತು. ಅಪಧಮನಿಗಳನ್ನು ಅದಲು ಬದಲು ಮಾಡುವುದನ್ನು ಒಳಗೊಂಡಿರುವ ಬಹಳ ಸಂಕೀರ್ಣವಾದ ಟಿಜಿಎ ಶಸ್ತ್ರಚಿಕಿತ್ಸೆಗೆ ಒಳಗಾದ ಶಿಶುಗಳು ಸಹಜ ಬೆಳವಣಿಗೆ ಹೊಂದುತ್ತಾರೆ. ಎಂಬುದಾಗಿ ಡಾ. ಅರವಿಂದ ಬಿಷ್ಣೋಯ್ ಹೇಳಿದರು.

    11 ದಿನದ ಮಗುವಿನ ಶಸ್ತ್ರಚಿಕಿತ್ಸೆಯ ಬಳಿಕ ಡಾ. ಲೆಸ್ಲಿ ಲೂಯಿಸ್‍ರವರ ನೇತೃತ್ವದಲ್ಲಿ ಶಿಶುರೋಗ ತಜ್ಞರು ಮಗು ಚೇತರಿಸಿಕೊಳ್ಳಲು ಅಗತ್ಯವಿರುವ ಆರೈಕೆಯನ್ನು ಒದಗಿಸಿದರು. ಈಗ ಮಗು ಈಗ ಚೆನ್ನಾಗಿ ಚೇತರಿಸಿಕೊಂಡಿದೆ. ಆಪರೇಶನ್ ಆಗಿ ಒಂದು ವಾರ ನಿಗಾ ಘಟಕದಲ್ಲಿ ಮಗುವಿಗೆ ಶುಶ್ರೂಶೆ ನೀಡಲಾಗಿದೆ. ಈಗ ಮಗು ಶೇ. 90 ಸುಧಾರಿಸಿದೆ ದು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಮಾಹಿತಿ ನೀಡಿದರು.

    ಟಿಜಿಎ ಅಂದರೆ ದೊಡ್ಡ ರಕ್ತನಾಳಗಳ ಸ್ಥಾನಪಲ್ಲಟ ಎಂಬ ಈ ಸ್ಥಿತಿ ಬಹಳ ಅಪರೂಪವಾಗಿ ಸಂಭವಿಸುತ್ತದೆ. ಇಂಥ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ವಿಶೇಷ ಕೌಶಲ ಮತ್ತು ನಿಖರತೆಯ ಅವಶ್ಯಕತೆ ಇರುತ್ತದೆ. ಇಂಥ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಮುಂಚೆ ಮತ್ತು ನಂತರ ನೀಡುವ ಆರೈಕೆಯು ಮಗು ಚೇತರಿಸಿಕೊಳ್ಳುವಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ ಎಂದು ಹೇಳಿದರು.

  • ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು

    ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು

    ರಾಮನಗರ: ತಿನ್ನಿಸಿದ ಸೆರಲ್ಯಾಕ್ ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ 3 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ನಡೆದಿದೆ.

    ಮಾಗಡಿ ಪಟ್ಟಣದ ಹೊಸಪಾಳ್ಯದ ನಿವಾಸಿಗಳಾದ ಮಂಜುನಾಥ್ ಹಾಗೂ ಧನಲಕ್ಷ್ಮಿ ದಂಪತಿಯ 3 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ. ಕಳೆದ 15 ದಿನಗಳಿಂದ ಮಗುವಿಗೆ ಸೆರಲ್ಯಾಕ್ ತಿನ್ನಿಸುತ್ತಿದ್ದರು. ಇಂದು ಸೆರಲ್ಯಾಕ್ ತಿನ್ನಿಸಿದ್ದು, ಗಂಟಲಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಉಸಿರಾಟದ ತೊಂದರೆ ಅನುಭವಿಸಿ ಮಗು ಸಾವನ್ನಪ್ಪಿದೆ.

    ಮಗುವನ್ನು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಾಗ ಸೆರಲ್ಯಾಕ್ ಗಂಟಲಲ್ಲಿ ಸಿಲುಕಿ ಸಾವನ್ನಪ್ಪಿದ್ದು ದೃಢಪಟ್ಟಿದೆ. ಮೂರು ತಿಂಗಳ ಮಗುವಿನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಹಿಂದೆ ಸೇಬು ತಿಂದು ಬಾಲಕ ಸಾವನ್ನಪ್ಪಿದ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ನಗರದ ಕೆಳಗಿನ ತೋಟ ಬಡಾವಣೆಯಲ್ಲಿ ನಡೆದಿತ್ತು. 6ನೇ ತರಗತಿ ವಿದ್ಯಾರ್ಥಿ ಆಸೀಫ್ (11) ಮೃತ ಬಾಲಕ. ಬಾಲಕ ಜ್ವರದಿಂದ ಬಳಲುತ್ತಿದ್ದಾಗ ಪೋಷಕರು ತಿನ್ನಲ್ಲು ಸೇಬು ಕೊಟ್ಟಿದ್ದರು. ಸೇಬು ತಿಂದ ಕೆಲ ಹೊತ್ತಿನಲ್ಲೇ ಆಸೀಫ್ ಗೆ ಉಸಿರಾಟದ ಸಮಸ್ಯೆ ಕಾಡುತ್ತಿದ್ದು, ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಆಸೀಫ್ ಸಾವನ್ನಪ್ಪಿದ್ದನು.

    ಮರಣೋತ್ತರ ಪರೀಕ್ಷೆ ಬಳಿಕ ಮೃತ ಆಸೀಫ್ ನ ಸಾವಿನ ಕಾರಣ ಬಯಲಾಗಿತ್ತು. ಗಂಟಲಿನಲ್ಲಿ ಸೇಬು ಸಿಲುಕಿಕೊಂಡು ಆಸೀಫ್ ಸಾವು ಎಂದು ವೈದ್ಯರು ಧೃಢಪಡಿಸಿದ್ದರು. ಅನ್ನನಾಳದ ಬದಲು ಉಸಿರಾಟದ ನಾಳಕ್ಕೆ ಸೇಬು ಸೇರಿದ್ದರಿಂದ ಆಸೀಫ್ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದನು. ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!

  • ಪ್ರಾಣವನ್ನೇ ಪಣಕ್ಕಿಟ್ಟು, 3ನೇ ಮಹಡಿಯ ಕಿಟಕಿ ಮೇಲೆ ಸಿಲುಕಿದ್ದ ಮಗುವನ್ನ ರಕ್ಷಿಸಿದ ವ್ಯಕ್ತಿ

    ಪ್ರಾಣವನ್ನೇ ಪಣಕ್ಕಿಟ್ಟು, 3ನೇ ಮಹಡಿಯ ಕಿಟಕಿ ಮೇಲೆ ಸಿಲುಕಿದ್ದ ಮಗುವನ್ನ ರಕ್ಷಿಸಿದ ವ್ಯಕ್ತಿ

    ಬೀಜಿಂಗ್: ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಪುಟ್ಟ ಮಗುವನ್ನ ರಕ್ಷಿಸಿದ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಚೀನಾದ ಝೀಜಿಯಾಂಗ್ ಪ್ರಾಂತ್ಯದ ಹಾಂಗ್ಝೂನಲ್ಲಿ ಜನವರಿ 19ರಂದು ಈ ಘಟನೆ ನಡೆದಿದೆ. ವರದಿಗಳ ಪ್ರಕಾರ ಮಗು ನಾಲ್ಕನೇ ಮಹಡಿಯಲ್ಲಿದ್ದ ತನ್ನ ಮನೆಯ ಕಿಟಕಿಯಿಂದ ಕೆಳಗೆ ಬಿದ್ದಿದ್ದು, ಮೂರನೇ ಮಹಡಿಯ ಛಾವಣಿಯಂತ ಮೇಲ್ಕಟ್ಟಿನ ಮೇಲೆ ಸಿಲುಕಿದೆ.

    ಅಲ್ಲದೆ ಛಾವಣಿ ತುಂಬಾ ಹಳೆಯದಾಗಿದ್ದು, ಮುರಿದುಬೀಳೋ ಸ್ಥಿತಿಯಲ್ಲಿತ್ತು. ಪುಟ್ಟ ಬಾಲಕಿ ಭಯದಲ್ಲಿದ್ದಳು. ಆದ್ರೆ ಸಮಯಕ್ಕೆ ಸರಿಯಾಗಿ ಸ್ಥಳೀಯ ವ್ಯಕ್ತಿಯೊಬ್ಬರು ಬಂದು ಮಗುವನ್ನ ಕಾಪಾಡಿದ್ದಾರೆ.

    ಕಟ್ಟಡದ ಸಮೀಪವೇ ಇದ್ದ ಅಂಗಡಿಯೊಂದರ ಮಾಲೀಕ ಲಾಂಗ್ ಚುಂಕುನ್ ಕೂಡಲೇ ಬಾಲಕಿಯ ನೆರವಿಗೆ ಧಾವಿಸಿದ್ದಾರೆ. ಬಾಲ್ಕನಿಯಿಂದ ಮತ್ತೊಂದು ಬಾಲ್ಕನಿಗೆ ಹೋಗಿ ಕಿಟಕಿಯಿಂದ ತಲೆಕೆಳಗಾಗಿ ಬಾಗಿ ಮಗುವನ್ನ ಹಿಡಿದು ಮನೆಯೊಳಗೆ ಎಳೆದುಕೊಂಡಿದ್ದಾರೆ.

     

  • ವಿಚಾರಣಾಧೀನ ಕೈದಿಯ ಮಗುವಿಗೆ ಜೈಲಿನಲ್ಲೇ ನಾಮಕರಣ ಮಾಡಿದ ಹಾವೇರಿ ಜಿಲ್ಲಾಧಿಕಾರಿ!

    ವಿಚಾರಣಾಧೀನ ಕೈದಿಯ ಮಗುವಿಗೆ ಜೈಲಿನಲ್ಲೇ ನಾಮಕರಣ ಮಾಡಿದ ಹಾವೇರಿ ಜಿಲ್ಲಾಧಿಕಾರಿ!

    ಹಾವೇರಿ: ವಿಚಾರಣಾಧೀನ ಕೈದಿಯೋರ್ವರಿಗೆ ಜನಿಸಿದ ನವಜಾತ ಶಿಶುವಿಗೆ ಜಿಲ್ಲಾಧಿಕಾರಿ ಕೇಂದ್ರ ಕಾರಾಗೃಹದಲ್ಲಿ ನಾಮಕರಣ ಮಾಡಿದ ಅಪರೂಪದ ಕಾರ್ಯಕ್ರಮ ಜರುಗಿತು.

    ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವ್ಹಿ.ವೆಂಕಟೇಶ್ ಮಗುವನ್ನ ತೊಟ್ಟಿನಲ್ಲಿ ಹಾಕಿ ಶಿಶುವಿಗೆ ಹರ್ಷಿತಾ ಎಂದು ನಾಮಕರಣ ಮಾಡಿದ್ರು. ಕಳ್ಳತನ ಪ್ರಕರಣ ಒಂದರಲ್ಲಿ ಜಿಲ್ಲಾ ಕಾರಾಗೃಹದಲ್ಲಿ, ಕೈದಿಯಾಗಿರುವ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಹಾಲಿಂಗಪೂರ ಮೂಲದ 26 ವರ್ಷದ ಮಹಿಳೆ, ಕಳೆದ ಜನವರಿ 4 ರಂದು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

    19 ದಿನಗಳ ಈ ನವಜಾತ ಶಿಶುವಿಗೆ ಮಹಿಳಾ ಕೈದಿಗಳ ಸೆಲ್‍ನಲ್ಲಿ ಕಾರಾಗೃಹದ ಸಿಬ್ಬಂದಿ ನಾಮಕರಣ ಕಾರ್ಯಕ್ರಮ ಆಯೋಜನೆ ಮಾಡಿದ್ರು. ಜೈಲಿನ ಮಹಿಳಾ ಅಧಿಕಾರಿಗಳು ಒಳಗೊಂಡಂತೆ 11 ಜನ ಮಹಿಳಾ ಕೈದಿಗಳು ಹೆಣ್ಣು ಮಗುವಿನ ತಾಯಿಯ ಸಂಪ್ರದಾಯದಂತೆ ತೊಟ್ಟಿಲು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ತೊಟ್ಟಿಲು ಅಲಂಕಾರ, ಜೈಲು ಮಹಿಳಾ ಸೆಲ್‍ನ ಅಲಂಕಾರ ಮನೆಯ ವಾತಾವರಣದಂತೆ ಕಂಗೊಳಿಸಿ ಎಲ್ಲರ ಗಮನಸೆಳೆಯಿತು.

    ಕಂಕಣ ಧರಿಸಿದ ಜಿಲ್ಲಾಧಿಕಾರಿಗಳು ಅಲಂಕರಿಸಿದ ತೊಟ್ಟಿನಲ್ಲಿ ನವಜಾತ ಶಿಶುವನ್ನು ಮಲಗಿಸಿ ನೂಲು ಹಿಡಿದು ಕಿವಿಯಲ್ಲಿ ಮೂರುಭಾರಿ ಹರ್ಷಿತಾ, ಹರ್ಷಿತಾ, ಹರ್ಷಿತಾ.. ಎಂದು ಕರೆಯುವುದರ ಮೂಲಕ ಕೈದಿಯ ಮಗಳಿಗೆ ನಾಮಕರಣಮಾಡಿದ ಅಪರೂಪದ ಪ್ರಸಂಗ ಜರುಗಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಅಧಿಕಾರಿಗಳು ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿ ವ್ಯಕ್ತಪಡಿಸಿದ್ರು.

  • ಗಂಡ ಮಾರಾಟ ಮಾಡಿದ್ದ ಹೆಣ್ಣುಮಗುವನ್ನು ಹೋರಾಟ ಮಾಡಿ ವಾಪಸ್ ಪಡೆದ ದಿಟ್ಟ ಮಹಿಳೆ

    ಗಂಡ ಮಾರಾಟ ಮಾಡಿದ್ದ ಹೆಣ್ಣುಮಗುವನ್ನು ಹೋರಾಟ ಮಾಡಿ ವಾಪಸ್ ಪಡೆದ ದಿಟ್ಟ ಮಹಿಳೆ

    ದಾವಣಗೆರೆ: ಮಾರಾಟ ಮಾಡಿದ್ದ ಐದು ತಿಂಗಳ ಹೆಣ್ಣು ಶಿಶುವನ್ನು ದಿಟ್ಟ ಮಹಿಳೆಯೊಬ್ಬರು ಹೋರಾಟ ಮಾಡಿ ವಾಪಸ್ ತನ್ನ ಮಡಿಲಿಗೆ ಪಡೆದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕ ಬಿದರಿ ಗ್ರಾಮದಲ್ಲಿ ನಡೆದಿದೆ.

    ಶಾಂತಮ್ಮ ಮಗುವನ್ನು ಕರೆತಂದ ದಿಟ್ಟ ಮಹಿಳೆ. ಶಾಂತಮ್ಮ ದಾವಣಗೆರೆಯ ಹೊಸಬಾತಿ ಗ್ರಾಮದ ಸಿದ್ದೇಶ್ ಎನ್ನುವವರನ್ನು ಕಳೆದ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದು. 2017ರ ಆಗಸ್ಟ್ 21 ರಂದು ದಂಪತಿಗೆ ಅವಳಿ ಜವಳಿ ಶಿಶುಗಳು ಜನಿಸಿದ್ದವು. ಅವಳಿ ಜವಳಿ ಮಕ್ಕಳಲ್ಲಿ ಒಂದು ಗಂಡು, ಒಂದು ಹೆಣ್ಣು ಮಗು ಹುಟ್ಟಿತ್ತು. ಆದ್ರೆ ಹಣದ ಅಸೆಗಾಗಿ ಗಂಡ ಸಿದ್ದೇಶ್ ಹುಟ್ಟಿದ ಹೆಣ್ಣುಶಿಶು ಸಾವನ್ನಪ್ಪಿದೆ ಎಂದು ಹೇಳಿ ಬೇರೆಯವರಿಗೆ ಮಾರಾಟ ಮಾಡಿದ್ದ.

    ಕೆಲ ದಿನಗಳ ನಂತರ ಮಗುವನ್ನು ಮಾರಾಟ ಮಾಡಿದ ವಿಷಯ ತಿಳಿದು ಕಂಗಾಲದ ಶಾಂತಮ್ಮ, ಮಗುವನ್ನು ಎಷ್ಟೇ ಕಷ್ಟ ಬಂದ್ರು ಸಾಕಿ ಬೆಳೆಸುತ್ತೇನೆಂದು ಹೋರಾಟ ನಡೆಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯ ಪಡೆದಿದಿದ್ದರು. ಇದೀಗ ಮಗು ತಾಯಿಯ ಮಡಿಲು ಸೇರಿದೆ. ಗಂಡನ ಮನೆ ತೊರೆದು ಇಬ್ಬರು ಶಿಶುಗಳನ್ನು ತೆಗೆದುಕೊಂಡು ತವರು ಮನೆ ಸೇರಿದ ದಿಟ್ಟ ಮಹಿಳೆ ಶಾಂತಮ್ಮ ಸಂತೋಷದಿಂದ ತನ್ನ ಮಡಿಲಲ್ಲಿ ಮಕ್ಕಳನ್ನ ಆಟವಾಡಿಸುತ್ತಿದ್ದಾರೆ.

    ಆದ್ರೆ ಮಗುವನ್ನು ವಾಪಾಸ್ಸು ಕೊಡುವಂತೆ ಬೆದರಿಕೆ ಹಾಕಿ ಫೋನ್ ಕರೆ ಮಾಡಿ ಪೊಲೀಸ್ ಠಾಣೆಗೆ ಬರುವಂತೆ ಪೊಲೀಸರ ಹೆಸರಲ್ಲಿ ಅವಾಜ್ ಹಾಕುತ್ತಿದ್ದಾರೆ ಎನ್ನಲಾಗಿದೆ. ಬೆದರಿಕೆಗೆ ಜಗ್ಗದೇ ಎಷ್ಟೇ ಕಷ್ಟ ಬಂದರೂ ಕೂಲಿ ಮಾಡಿ ಸಾಕುತ್ತೇನೆ ಎಂದು ಅವಳಿ ಜವಳಿ ಮಕ್ಕಳನ್ನ ಶಾಂತಮ್ಮ ಪೋಷಣೆ ಮಾಡುತ್ತಿದ್ದಾರೆ.

    https://www.youtube.com/watch?v=XGZHEr2nhyQ