Tag: Baby

  • ಕೆಮ್ಮು, ಶೀತ ಗುಣಪಡಿಸಲು 4 ತಿಂಗಳ ಮಗುವಿಗೆ ಕಬ್ಬಿಣದ ರಾಡ್‍ನಿಂದ ಬರೆ- ಆಸ್ಪತ್ರೆಗೆ ದಾಖಲು

    ಕೆಮ್ಮು, ಶೀತ ಗುಣಪಡಿಸಲು 4 ತಿಂಗಳ ಮಗುವಿಗೆ ಕಬ್ಬಿಣದ ರಾಡ್‍ನಿಂದ ಬರೆ- ಆಸ್ಪತ್ರೆಗೆ ದಾಖಲು

    ಜೈಪುರ್: ಕೆಮ್ಮು ಹಾಗೂ ಶೀತ ವಾಸಿ ಮಾಡಲೆಂದು 4 ತಿಂಗಳ ಹೆಣ್ಣುಮಗುವಿಗೆ ಕಬ್ಬಿಣದ ರಾಡ್‍ನಿಂದ ಬರೆ ಹಾಕಿರೋ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ

    ಭಿಲ್ವಾರಾದ ರಾಮಾ ಖೇದಾ ಗ್ರಾಮದಲ್ಲಿ ಮಗುವಿಗೆ ಬರೆ ಹಾಕಲಾಗಿದೆ. ಮಗುವಿನ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದ ಕಾರಣ ಕೂಡಲೇ ಮಹಾತ್ಮಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮಗುವಿಗೆ ಕೆಲವು ದಿನಗಳ ಹಿಂದೆ ಬರೆ ಹಾಕಲಾಗಿದೆ. ಆದ್ರೆ ಮಗುವನ್ನ ವೈದ್ಯರ ಬಳಿ ಕರೆದುಕೊಂಡು ಬಂದ ನಂತರ ಸೋಮವಾರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲಿಸರು ಹೇಳಿದ್ದಾರೆ. 4 ತಿಂಗಳ ಹೆಣ್ಣುಮಗು ನ್ಯುಮೋನಿಯಾ ಹಾಗೂ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದೆ ಎಂದು ವರದಿಯಾಗಿದೆ.

    ಕೆಮ್ಮು ಶೀತ ವಾಸಿ ಮಾಡಲು ಬರೆ ಹಾಕುವಂತಹ ಕೆಲವು ಮೂಢನಂಬಿಕೆಗಳು ಭಿಲ್ವಾರಾದಲ್ಲಿ ಸಾಮಾನ್ಯವಾಗಿದೆ. ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ ಎಂದು ಮಹಾತ್ಮಾ ಗಾಂಧಿ ಆಸ್ಪತ್ರೆಯ ಶಿಶುತಜ್ಞರಾದ ಡಾ. ಓಪಿ ಅಗಲ್ ಹೇಳಿದ್ದಾರೆ.

    ಮಕ್ಕಳ ಕಲ್ಯಾಣ ಸಮಿತಿ ನೀಡಿದ ದೂರಿನನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಕಾರೋಯ್ ಪೊಲೀಸ್ ಠಾಣೆಯ ಎಸ್‍ಹೆಚ್‍ಓ ಸುನಿಲ್ ಚೌಧರಿ ಹೇಳಿದ್ದಾರೆ. ಮೂಢನಂಬಿಕೆಯಿಂದ ಮಕ್ಕಳ ಜೀವಕ್ಕೆ ಕುತ್ತು ಬಂದಿರುವುದು ಭಿಲ್ವಾರಾದಲ್ಲಿ ಇದೇ ಮೊದಲೇನಲ್ಲ ಎಂದು ಅವರು ಹೇಳಿದ್ದಾರೆ.

    ಈ ಹಿಂದೆಯೂ ಕೂಡ ಶೀತ, ಕೆಮ್ಮು ವಾಸಿ ಮಾಡಲು 10 ತಿಂಗಳ ಮಗುವಿನ ಅದರ ಅಜ್ಜ ಕಬ್ಬಿಣದ ರಾಡ್‍ನಿಂದ ಬರೆ ಹಾಕಿದ್ದು, ಮಗು ಸಾವನ್ನಪ್ಪಿತ್ತು ಎಂದು ವರದಿಯಾಗಿದೆ.

  • ಸಾಲ ತೀರಿಸಲು 5 ವರ್ಷದ ಮಗುವನ್ನ ಕಿಡ್ನಾಪ್ ಮಾಡಿದ ಐಎಎಸ್ ಆಕಾಂಕ್ಷಿ

    ಸಾಲ ತೀರಿಸಲು 5 ವರ್ಷದ ಮಗುವನ್ನ ಕಿಡ್ನಾಪ್ ಮಾಡಿದ ಐಎಎಸ್ ಆಕಾಂಕ್ಷಿ

    ನವದೆಹಲಿ: ತನ್ನ ಸಾಲ ತೀರಿಸಲು 5 ವರ್ಷದ ಮಗುವನ್ನ ಕಿಡ್ನಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟ ಯುಪಿಸ್‍ಸಿ ಆಕಾಂಕ್ಷಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಆಸಿಫ್ ಸೈಫಿ(27) ಬಂಧಿತ ಆರೋಪಿ. ಈತ ದೆಹಲಿಯ ಭಜನ್‍ಪುರ ಪ್ರದೇಶದಿಂದ ಮಗುವನ್ನ ಕಿಡ್ನಾಪ್ ಮಾಡಿದ್ದ. ಬಾಲಿವುಡ್ ಸಿನಿಮಾದಿಂದ ಪ್ರೇರಣೆಗೊಂಡಿದ್ದ ಈತ, ಅದರಲ್ಲಿನ ಡೈಲಾಗ್‍ಗಳನ್ನ ಪ್ರಾಕ್ಟೀಸ್ ಮಾಡಿ ನಂತರ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಎಂ.ಟೆಕ್ ಪೂರೈಸಿರೋ ಸೈಫಿ, ನಾಗರೀಕ ಸೇವಾ ಪರೀಕ್ಷೆಗಾಗಿ ತಯಾರಾಗುತ್ತಿದ್ದ. ಆದ್ರೆ ಆತ ಸಾಲದಲ್ಲಿ ಮುಳುಗಿದ್ದ. ವ್ಯಕ್ತಿಯೊಬ್ಬರು ಈತನಿಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆ ನೀಡಿದ್ದು, ಅವರಿಗೆ ಕೊಡಲು 4-5 ಲಕ್ಷ ರೂ. ಸಾಲ ಪಡೆದಿದ್ದ. ಆದ್ರೆ ಆ ವ್ಯಕ್ತಿ ಈತನಿಗೆ ಮೋಸ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಹಣ ಮಾಡಬೇಕೆಂಬ ಉದ್ದೇಶದಿಂದ ಸೈಫಿ 5 ವರ್ಷದ ಮಗುವನ್ನ ಪತ್ತೆಹಚ್ಚಿ ಆ ಮಗುವಿನ ತಂದೆಯ ಫೋನ್ ನಂಬರ್ ಕಲೆ ಹಾಕಿದ್ದ. ಒಂದು ದಿನ ಆರೋಪಿ ಸೈಫಿ ಮಗುವನ್ನ ಹೊತ್ತೊಯ್ದು ಗುಡಿಸಲಿನಲ್ಲಿ ಇರಿಸಿದ್ದ. ನಂತರ ಬೇರೆ ಬೇರೆ ಫೋನ್‍ಗಳಿಂದ ಮಗುವಿನ ತಂದೆಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಂದು ತಿಳಿಸಿದ್ದಾರೆ.

    ಕೊನೆಗೆ ಸೈಫಿಯನ್ನ ಬುಧವಾರದಂದು ಉತ್ತರಪ್ರದೇಶದ ದಾದ್ರಿಯಲ್ಲಿ ಬಂಧಿಸಲಾಗಿದ್ದು, ಮಗುವನ್ನ ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಸಮುದ್ರ ನೀರಿನಲ್ಲೇ ಮಗುವಿಗೆ ಜನ್ಮ: ರಷ್ಯಾ ಮಹಿಳೆಯಿಂದ ವಿಶೇಷ ಸಾಧನೆ

    ಸಮುದ್ರ ನೀರಿನಲ್ಲೇ ಮಗುವಿಗೆ ಜನ್ಮ: ರಷ್ಯಾ ಮಹಿಳೆಯಿಂದ ವಿಶೇಷ ಸಾಧನೆ

    ಕೈರೋ: ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡುವ ಸಲುವಾಗಿ ರಷ್ಯಾ ಮಹಿಳೆ ರೆಸಾರ್ಟ್ ಗೆ ಪ್ರಯಾಣಿಸಿ ನಂತರ ಈಜಿಪ್ಟಿನ ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪರೂಪದ ಸಂಗತಿವೊಂದು ನಡೆದಿದೆ.

    ಹದಿಯಾ ಹೋಸ್ನಿ ಸಮುದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಉತ್ತರ ಶಹರ್ ಎಲ್-ಶೇಖ್ ನ ಡಹಾಬ್ ನಲ್ಲಿರುವ ತನ್ನ ಚಿಕ್ಕಪ್ಪನ ಅಪಾರ್ಟ್ ಮೆಂಟ್‍ನ ಬಾಲ್ಕನಿಯಿಂದ ಡೆಲಿವರಿ ಸಮಯದಲ್ಲಿನ ಫೋಟೋಗಳನ್ನು ತೆಗೆಯಲಾಗಿದೆ.

    ಮಗುವಿಗೆ ಸಮುದ್ರದಲ್ಲಿ ಜನ್ಮ ನೀಡಬೇಕು ಎಂದು ಮೊದಲೇ ತಯಾರಿ ಮಾಡಿಕೊಂಡಿದ್ದೇವು, ಫೋಟೋಗಳಲ್ಲಿ ವೃದ್ಧರೊಬ್ಬರು ಮಗುವನ್ನು ಹಿಡಿದುಕೊಂಡಿರುವುದನ್ನು ನೀವು ನೋಡಬಹುದು. ಈ ವ್ಯಕ್ತಿ ನೀರಿನಲ್ಲಿ ಡೆಲಿವರಿ ಮಾಡಿಸುವುದರಲ್ಲಿ ಸ್ಪೆಷಲಿಸ್ಟ್ ಎಂದು ಹದಿಯಾ ಹೇಳಿದ್ದಾರೆ.

    ಮಗುವಿಗೆ ಜನ್ಮ ನೀಡಿ ಕೆಲವೇ ನಿಮಿಷಗಳಲ್ಲಿ ಹದಿಯಾ ಕೂಡ ಸಮುದ್ರದಿಂದ ಹೊರಬಂದಿದ್ದಾರೆ. ಅವರು ಸಮುದ್ರದಿಂದ ಹೊರಬಂದಿದ್ದನ್ನು ನೋಡಿದ್ದರೆ, ಈಜಲು ಹೋಗಿ ಹಿಂತಿರುಗಿ ಬಂದ ಮಹಿಳೆಯಂತೆ ಆರಾಮಾಗಿ ಸಮುದ್ರದಿಂದ ಹೊರಬಂದಿರುವುದನ್ನು ಕಾಣಬಹುದು.

    ಹದಿಯಾ ಮಗುವಿಗೆ ಜನ್ಮ ನೀಡಲು ಮೊದಲು ಸಮುದ್ರಕ್ಕೆ ಈಜಲು ಹೋದರು. ಅವರ ಹಿಂದೆಯೇ ಆಕೆಯ ಪತಿ ಹಾಗೂ ನೀರಿನಲ್ಲಿ ಡೆಲಿವರಿ ಮಾಡುವ ವೈದ್ಯರು ಹಿಂದೆ ಹೋಗಿ ಡೆಲಿವರಿ ಮಾಡಿಸಿದ್ದರು ಎಂದು ವರದಿಯಾಗಿದೆ.

    ಮಗು ಜನಿಸಿದ ಮೇಲೆ ಶಿಶುವನ್ನು ಬೌಲ್‍ನಲ್ಲಿಟ್ಟರು. ನಂತರ ವೈದ್ಯರು ಹಾಗೂ ಪತಿ ಶಿಶುವನ್ನು ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ಸ್ವಲ್ಪ ಸಮಯದ ನಂತರ ಹದಿಯಾ ಕೂಡ ತಮ್ಮ ಕುಟುಂಬದ ಜೊತೆ ಸೇರಿಕೊಂಡರು ಎಂದು ಪತ್ರಿಕೆವೊಂದು ವರದಿ ಮಾಡಿದೆ.

    ಹದಿಯಾ ಈ ಫೋಟೋಗಳನ್ನು ಶನಿವಾರ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. 2,000ಕ್ಕೂ ಹೆಚ್ಚು ಶೇರ್ ಆಗಿ, ಕಮೆಂಟ್ಸ್ ಗಳು ಬಂದಿವೆ. ಡೆಲಿವರಿ ಆದ ಬಳಿಕ ತಾಯಿ ಮಗು ಕ್ಷೇಮವಾಗಿದ್ದಾರೆ ಎಂದು ವರದಿಯಾಗಿದೆ.

  • ಪ್ಲಾಸ್ಟಿಕ್ ಚೀಲದಲ್ಲಿ 2 ದಿನದ ಗಂಡು ಶಿಶು ಪತ್ತೆ

    ಪ್ಲಾಸ್ಟಿಕ್ ಚೀಲದಲ್ಲಿ 2 ದಿನದ ಗಂಡು ಶಿಶು ಪತ್ತೆ

    ಕಲಬುರಗಿ: ನಗರದ ಸಿದ್ಧಿಬಾಷ ದರ್ಗಾದ ಬಳಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ಎರಡು ದಿನದ ನವಜಾತ ಗಂಡು ಶಿಶು ಪತ್ತೆಯಾಗಿದೆ.

    ಸ್ಥಳೀಯರು ಶಿಶು ಮೃತಪಟ್ಟಿದೆಯೆಂದು ತೆಗೆಯಲು ಹೋದಾಗ, ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಗಳವಾರ ತಡರಾತ್ರಿ ಮಗುವನ್ನು ಬಿಸಾಕಿದ್ದಾರೆ ಎಂದು ಶಂಕಿಸಲಾಗಿದೆ.

    ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಆಂಬುಲೆನ್ಸ್ ಮೂಲಕ ಸ್ಥಳಕ್ಕೆ ಬಂದು ಚಿಕಿತ್ಸೆಗೆಂದು ಶಿಶುವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಎಳೆಮಗುವನ್ನು ಕ್ಯಾರಿಬ್ಯಾಗ್‍ನಲ್ಲಿ ಕಟ್ಟಿಬಿಸಾಕಿದ ಪಾಪಿ ಪೋಷಕರಿಗೆ ಸ್ಥಳಿಯರು ಹಿಡಿಶಾಪ ಹಾಕಿದ್ದಾರೆ.

    ಈ ಘಟನೆ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ತನ್ನ ಮುದ್ದಾದ ಮಗುವನ್ನು ಪರಿಚಯಿಸಿದ ನಿಖಿತಾ

    ತನ್ನ ಮುದ್ದಾದ ಮಗುವನ್ನು ಪರಿಚಯಿಸಿದ ನಿಖಿತಾ

    ಮಂಬೈ: ನಟಿ ನಿಖಿತಾ ತುಕ್ರಾಲ್ ತಮ್ಮ ಮುದ್ದಾದ ಹೆಣ್ಣು ಮಗುವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

    ನಿಖಿತಾ 2016 ಅಕ್ಟೋಬರ್ 16 ರಂದು ಮುಂಬೈ ಮೂಲದ ಉದ್ಯಮಿ ಗಗನ್ ದೀಪ್ ಸಿಂಗ್ ಮಾಗೋ ಅವರನ್ನು ಮದುವೆಯಾಗಿದ್ದರು. ನಿಖಿತಾ ಕಳೆದ ವರ್ಷ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಇತ್ತೀಚೆಗೆ ತಾವು ಮಗುವಿನೊಂದಿಗೆ ಇರುವ ಫೊಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಸ್ಯಾಂಡಲ್‍ವುಡ್ ನ ‘ರಾಜಾಸಿಂಹ’ ಚಿತ್ರದ ಶೂಟಿಂಗ್ ವೇಳೆ ನಿಖಿತಾ 7 ತಿಂಗಳ ಗರ್ಭಿಣಿಯಾಗಿದ್ದರು. ಚಿತ್ರ ತಂಡವು ನನ್ನ ಪರಿಸ್ಥಿತಿಯನ್ನು ಅರಿತುಕೊಂಡಿದ್ದು, ನನ್ನನ್ನು ಬಹಳ ಕಾಳಜಿಯಿಂದ ನೋಡಿಕೊಂಡಿದ್ದರು ಎಂದು ನಿಖಿತಾ ಚಿತ್ರ ತಂಡಕ್ಕೆ ಧನ್ಯವಾದ ಹೇಳಿದ್ದಾರೆ.

    ನಿಖಿತಾ ಮಗುವಿಗೆ `ಜಸ್ಮಿರಾ’ ಎಂದು ಹೆಸರಿಟ್ಟಿದ್ದಾರೆ. ಮಗುವಿಗೆ ಈಗ ಆರು ತಿಂಗಳು ತುಂಬಿದೆ. ಈ ಮೊದಲು ನಾನು ಹೊರಗೆ ಹೋದಾಗ ಜಸ್ಮಿರಾಳನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದೆ. ಆದ್ದರಿಂದ ನನಗೆ ಮಗು ಆಗಿರುವುದು ಬಹಳಷ್ಟು ಮಂದಿಗೆ ತಿಳಿದಿರಲಿಲ್ಲ. ಆದರೆ ಎಲ್ಲರಿಗೂ ಪರಿಚಯಿಸಲು ಇದು ಸೂಕ್ತ ಸಮಯವಾಗಿದೆ. ಆದ್ದರಿಂದ ಅವಳ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದೇನೆ ಎಂದು ನಿಖಿತಾ ಹೇಳಿದ್ದಾರೆ.

    ನಿಖಿತಾ ಸ್ಯಾಂಡಲ್‍ವುಡ್ ನಲ್ಲೂ ಅಭಿನಯಿಸಿದ್ದಾರೆ. ದರ್ಶನ್, ಸುದೀಪ್ ಮತ್ತು ಪುನೀತ್ ರಾಜ್‍ಕುಮಾರ್ ಸ್ಟಾರ್ ಗಳ ಜೊತೆ ನಾಯಕಿಯಾಗಿ ನಟಿಸಿದ್ದು, ಬಿಗ್ ಬಾಸ್ ಸೀಸನ್ ಒಂದರಲ್ಲಿ ಸ್ಪರ್ಧಿಸಿದ್ದರು.

  • ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಒಂಟಿಯಾಗಿ ಬಿಟ್ಟು ಹೋದ ವೈದ್ಯರು-ವಾಪಸ್ ಬಂದು ನೋಡ್ದಾಗ ಕಸದ ಬುಟ್ಟಿಯಲ್ಲಿತ್ತು ಮಗು

    ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಒಂಟಿಯಾಗಿ ಬಿಟ್ಟು ಹೋದ ವೈದ್ಯರು-ವಾಪಸ್ ಬಂದು ನೋಡ್ದಾಗ ಕಸದ ಬುಟ್ಟಿಯಲ್ಲಿತ್ತು ಮಗು

    ಚಂಡೀಘಢ: ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ನವಜಾತ ಶಿಶು ಸಾವು ಬದುಕಿನ ಮಧ್ಯೆ ಹೋರಾಡುವಂತಾಗಿರುವ ಘಟನೆ ಹರಿಯಾಣದ ಫರೀದಾಬಾದ್‍ನಲ್ಲಿ ನಡೆದಿದೆ.

    ಸೋಮವಾರದಂದು ಇಲ್ಲಿನ ಸಿವಿಕ್ ಆಸ್ಪತ್ರೆಗೆ ಗರ್ಭಿಣಿಯನ್ನ ಹೆರಿಗೆಗಾಗಿ ದಾಖಲಿಸಲಾಗಿತ್ತು. ಆದ್ರೆ ಪ್ರಸವ ವೇದನೆಯಲ್ಲಿದ್ದ ಗರ್ಭಿಣಿಯನ್ನ ಆಸ್ಪತ್ರೆಯ ಬೆಡ್ ಮೇಲೆ ಒಂಟಿಯಾಗಿ ಬಿಟ್ಟಿದ್ದು, ಯಾವುದೇ ವೈದ್ಯಕೀಯ ನೆರವು ನೀಡಿರಲಿಲ್ಲ. ವೈದ್ಯರು ಹೊರಗಡೆ ಇದ್ದ ವೇಳೆ ಯಾವುದೇ ಸಹಾಯ ಇಲ್ಲದೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು.

    ವೈದ್ಯರು ಹಾಗೂ ನರ್ಸ್‍ಗಳು ಇಲ್ಲದೆಯೇ ಮಹಿಳೆಗೆ ಹೆರಿಗೆಯಾಗಿತ್ತು. ಆದ್ರೆ ಹಾಸಿಗೆ ಬಳಿ ಇಟ್ಟಿದ್ದ ಕಸದ ಬುಟ್ಟಿಯೊಳಗೆ ನೇರವಾಗಿ ಮಗು ಬಿದ್ದಿತ್ತು. ಹಾಸಿಗೆ ಮೇಲೆ ಮಲಗಿದ್ದ ತಾಯಿ ಸಹಾಯಕ್ಕಾಗಿ ಕಿರುಚಾಡುತ್ತಿದ್ರು.

    ವೈದ್ಯರು ಹಾಗೂ ಸಿಬ್ಬಂದಿ ಬಂದು ನೋಡಿದಾಗ ಮಗು ಕಸದ ಬುಟ್ಟಿಯಲ್ಲಿ ಪತ್ತೆಯಾಗಿತ್ತು. ಮಗುವಿನ ಕರುಳ ಬಳ್ಳಿ ಇನ್ನೂ ತಾಯಿಯ ದೇಹಕ್ಕೆ ಅಂಟಿಕೊಂಡೇ ಇತ್ತು. ಮಗುವನ್ನ ರಕ್ಷಣೆ ಮಾಡಿದ ಬಳಿಕ ವೈದ್ಯರು ಕರುಳ ಬಳ್ಳಿಯನ್ನ ಕಟ್ ಮಾಡಿದ್ದಾರೆ.

    ಹುಟ್ಟಿದ ತಕ್ಷಣ ಮಗು ಅಳಲಿಲ್ಲವಾದ್ದರಿಂದ ವೈದ್ಯರು ಶಿಶುವನ್ನ ಐಸಿಯುನಲ್ಲಿರಿಸಿದ್ದರು. ಮಗು ಕಸದ ಬುಟ್ಟಿಗೆ ಬಿದ್ದಿದ್ದರಿಂದ ಅದರ ತಲೆಗೆ ಏಟು ಬಿದ್ದಿದ್ದು, ಫಿಟ್ಸ್ ಬರಲು ಶುರುವಾಗಿತ್ತು. ನಂತರ ಮಗುವನ್ನ ಬೇರೊಂದು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೂ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

     

  • ಮಗುವಿಗೆ ಕೋಲಿನಿಂದ ಹೊಡೆದು, ಕೆನ್ನೆ ಕಚ್ಚಿ, ಕಾಲರ್ ಹಿಡಿದು ಎತ್ತಿದ್ಳು- ಹಿಡನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಮನೆಕೆಲಸದವಳ ಕ್ರೂರ ಕೃತ್ಯ

    ಮಗುವಿಗೆ ಕೋಲಿನಿಂದ ಹೊಡೆದು, ಕೆನ್ನೆ ಕಚ್ಚಿ, ಕಾಲರ್ ಹಿಡಿದು ಎತ್ತಿದ್ಳು- ಹಿಡನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಮನೆಕೆಲಸದವಳ ಕ್ರೂರ ಕೃತ್ಯ

    ಚಂಡೀಘಢ: ಮನೆಕೆಲಸದವಳು 1 ವರ್ಷದ ಮಗುವನ್ನ ಅಮಾನುಷವಾಗಿ ಥಳಿಸಿರೋ ಘಟನೆ ಪಂಜಾಬ್‍ನ ಕಪುರ್‍ತಲಾದಲ್ಲಿ ನಡೆದಿದ್ದು, ಕ್ರೂರಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    1 ವರ್ಷದ ಪುಟ್ಟ ಮಗುವಿಗೆ ಮಹಿಳೆ ಅಮಾನುಷವಾಗಿ ಥಳಿಸಿದ್ದಾಳೆ. ಕೋಲಿನಿಂದ ಮಗುವಿಗೆ ಹೊಡೆದು, ಮಗುವಿನ ಕೆನ್ನೆಯನ್ನ ಕಚ್ಚಿದ್ದಾಳೆ. ಅಲ್ಲದೆ ಮಗುವಿನ ಕಾಲರ್ ಹಿಡಿದು ಮೇಲೆತ್ತಿದ್ದಾಳೆ. ಮಗು ನೋವಿನಿಂದ ಅಳುತ್ತಿದ್ದರೂ ಕ್ರೂರಿ ಮಹಿಳೆಗೆ ಅದು ಯಾವುದೇ ಪರಿಣಾಮ ಬೀರಲಿಲ್ಲ. ಮಗು ಅಳುತ್ತಿರೋ ಧ್ವನಿ ಹೊರಗೆ ಕೇಳಿಸಬಾರದೆಂದು ಟಿವಿಯ ಶಬ್ದವನ್ನ ಜಾಸ್ತಿ ಮಾಡಿದ್ದಾಳೆ. ಈ ಎಲ್ಲಾ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿತ್ತು.

    ಮಗುವಿನ ತಂದೆ ಸುಖ್‍ದೇವ್ ಸಿಂಗ್ ನೀಡಿದ ದೂರಿನನ್ವಯ ಇದೀಗ ಪೊಲೀಸರು ಆರೋಪಿ ಮಹಿಳೆಯನ್ನ ಬಂಧಿಸಿದ್ದಾರೆ. ಬಂಧಿತಳನ್ನು ಪರ್ವೀನ್(35) ಎಂದು ಗುರುತಿಸಲಾಗಿದ್ದು, ಈಕೆ ಕಪುರ್‍ತಲಾದ ಮೆಹ್ಟಾಬ್‍ಘರ್ ನಿವಾಸಿಯಾಗಿದ್ದಾಳೆ.

    ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಮಗುವನ್ನ ನೋಡಿಕೊಳ್ಳಲು ಪರ್ವೀನ್‍ಳನ್ನ ಕೆಲಸಕ್ಕೆ ತೆಗೆದುಕೊಂಡಿದ್ದರು. ಆಕೆಗೆ ತಿಂಗಳಿಗೆ 1500 ರೂ. ಸಂಬಳ ನೀಡಲಾಗುತ್ತಿತ್ತು ಎಂದು ಮಗುವಿನ ತಂದೆ ಸುಖ್‍ದೇವ್ ಸಿಂಗ್ ಪೊಲೀಸರಿಗೆ ಹೇಳಿದ್ದಾರೆ. ನಿರೀಕ್ಷೆಯಂತೆ ತಂದೆ ತಾಯಿ ಸಮ್ಮುಖದಲ್ಲಿ ಪರ್ವೀನ್ ಮಗುವನ್ನ ಚೆನ್ನಾಗೇ ನೋಡಿಕೊಳ್ಳುತ್ತಿದ್ದಳು.

    ಆದ್ರೆ ಮಗುವಿನ ವರ್ತನೆಯಲ್ಲಿ ಬದಲಾವಣೆ ಕಂಡುಬಂದಾಗ, ಜೊತೆಗೆ ಗಾಯದ ಗುರುತುಗಳು ಕಂಡುಬಂದಾಗ ತಂದೆ ತಾಯಿಗೆ ಅನುಮಾನ ಬಂದಿತ್ತು. ಹೀಗಾಗಿ ಗೌಪ್ಯವಾಗಿ ಮನೆಯ ಮೂಲೆಯೊಂದರಲ್ಲಿ ಮೊಬೈಲ್ ಫೋನ್ ಕ್ಯಾಮೆರಾ ಆನ್ ಮಾಡಿ ಇಟ್ಟಿದ್ದರು. ಆಗ ಪರ್ವೀನ್‍ಳ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಮಗುವನ್ನ ಸುಮ್ಮನಿರಿಸಲು ಹೊಡೆದಿದ್ದಾಗಿ ಪರ್ವೀನ್ ಪೊಲೀಸರಿಗೆ ಹೇಳಿದ್ದಾಳೆ. ಆರೋಪಿ ಪರ್ವೀನ್ ವಿರುದ್ಧ ಐಪಿಸಿ ಸೆಕ್ಷನ್ 323 ಹಾಗೂ 380ರಡಿ ಪ್ರಕರಣ ದಾಖಲಾಗಿದೆ.

  • ಚಾಕ್ಲೇಟ್ ತರ್ತೀನೆಂದು ನಂಬಿಸಿ ಸ್ವಂತ ಮಗಳನ್ನು ಬಸ್‍ನಲ್ಲೇ ಬಿಟ್ಟು ಹೋದ ತಂದೆ

    ಚಾಕ್ಲೇಟ್ ತರ್ತೀನೆಂದು ನಂಬಿಸಿ ಸ್ವಂತ ಮಗಳನ್ನು ಬಸ್‍ನಲ್ಲೇ ಬಿಟ್ಟು ಹೋದ ತಂದೆ

    ದಾವಣಗೆರೆ: ತಂದೆಯೊಬ್ಬ ಚಾಕ್ಲೇಟ್ ತರುವುದಾಗಿ ನಂಬಿಸಿ ತನ್ನ ಸ್ವಂತ ಮಗಳನ್ನು ಬಸ್ ನಲ್ಲೇ ಬಿಟ್ಟು ಹೋಗಿರುವ ಘಟನೆ ದಾವಣಗೆರೆ ನಗರದ ಭದ್ರಾ ಚಾನಲ್ ಬಳಿಯಲ್ಲಿ ನಡೆದಿದೆ.

    ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಶಾನಭೋಗದಹಳ್ಳಿ ನಿವಾಸಿ ಸಯ್ಯದ್ ಈ ಕೃತ್ಯವೆಸಗಿದ ತಂದೆ. ತನ್ನ ಪತ್ನಿ ಫೌಜಿಯಾಗೆ ತಿಳಿಸದೆ ಸಯ್ಯದ್ ಮಗಳನ್ನು ಕರೆತಂದು ಬಸ್‍ನಲ್ಲಿ ಬಿಟ್ಟು ಹೋಗಿದ್ದ. ಆದರೆ ಬಸ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಪುನಃ ಮಗು ತಾಯಿಯ ಮಡಿಲು ಸೇರುವಂತೆ ಮಾಡಿದ್ದಾರೆ.

    ಏನಿದು ಘಟನೆ: ಮೊದಲಿನಿಂದಲೂ ತಂದೆ ಸೈಯದ್ ಗೆ ಹೆಣ್ಣು ಮಗು ಹುಟ್ಟಿದ್ದರಿಂದ ಅಸಮಾಧಾನವಿತ್ತು. ಹೀಗಾಗಿ ಪ್ರತಿನಿತ್ಯ ಮನೆಯಲ್ಲಿ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಪಾಪಿ ತಂದೆ ಸೈಯದ್ ಗುರುವಾರ ರಾತ್ರಿ ಬೆಂಗಳೂರಿನಿಂದ ದಾವಣಗೆರೆಗೆ ಬಸ್ ಟಿಕೆಟ್ ಬುಕ್ ಮಾಡಿ 3 ವರ್ಷದ ಮಗುವನ್ನು ಸ್ಲೀಪರ್ ಕೋಚ್ ನಲ್ಲಿ ಮಲಗಿಸಿ ಚಾಕ್ಲೇಟ್ ತರುವುದಾಗಿ ನಂಬಿಸಿ ಬಿಟ್ಟು ಹೋಗಿದ್ದ. ಆದರೆ ಈ ವೇಳೆಗೆ ಬಸ್ ಬೆಂಗಳೂರು ಬಿಟ್ಟು ದಾವಣಗೆರೆ ಬಂದು ಸೇರಿತ್ತು. ಬೆಳಗ್ಗೆ 6 ಗಂಟೆ ಸುಮಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ ಕ್ಲೀನ್ ಮಾಡುವಾಗ ಮಗು ಇರುವುದು ಬೆಳಕಿಗೆ ಬಂದಿತ್ತು. ಮಗುವನ್ನು ಕಂಡು ಅಚ್ಚರಿಗೊಂಡ ಬಸ್ ಸಿಬ್ಬಂದಿ ಆ ಮಗುವಿನ ವಿಳಾಸ ತಿಳಿಯದೆ ಆತಂಕಕ್ಕೆ ಒಳಗಾಗಿದ್ದರು. ಅನಂತರ ಸಿಬ್ಬಂದಿ ಮಗುವಿಗೆ ತಿಂಡಿ ಕೊಡಿಸಿ ಆರೈಕೆ ಮಾಡಿದ್ದರು.

    ವಿಳಾಸ ತಿಳಿದಿದ್ದು ಹೇಗೆ: ಮಗುವನ್ನ ಸಂತೈಸುವ ವೇಳೆ ಮಗವಿನ ಬಳಿ ಮೊಬೈಲ್ ಪತ್ತೆಯಾಗಿದೆ. ಮೊಬೈಲ್ ಪಡೆದ ಬಸ್ ಸಿಬ್ಬಂದಿ ಮಗುವಿನ ತಾಯಿಗೆ ಮಾಹಿತಿ ನೀಡಿದ್ದಾರೆ. ಬಸ್ ಸಿಬ್ಬಂದಿಯಿಂದ ಮಾಹಿತಿ ಪಡೆದ ತಾಯಿ ಫೌಜಿಯಾ ತಕ್ಷಣ ಸ್ಥಳಕ್ಕೆ ಬಂದು ಮಗಳನ್ನು ಪಡೆದು ಬಸ್ ಸಿಬ್ಬಂದಿಗೆ ಕೃತಜ್ಞತೆ ತಿಳಿಸಿದ್ದಾರೆ.

    ಘಟನೆಗೆ ಹಿಂದಿನ ದಿನ ಪತ್ನಿಯ ಜೊತೆ ಜಗಳ ಮಾಡಿದ್ದ ಸೈಯ್ಯದ್ ಯಾರಿಗೂ ಮಾಹಿತಿ ನೀಡದೆ ಮಗುವನ್ನ ಕರೆದುಕೊಂಡು ಹೋಗಿದ್ದ. ಮಗುವನ್ನು ಕರೆದುಕೊಂಡು ಹೋದ ಬಳಿಕ ಪತ್ನಿ ಫೌಜಿಯಾ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಆದರೆ ಶುಕ್ರವಾರ ಬೆಳಗ್ಗೆ ಬಸ್ ಚಾಲಕ ಗಣಪತಿ ಅವರು ಕರೆ ಮಾಡಿ ಮಗು ದಾವಣಗೆರೆಯಲ್ಲಿ ಇರುವುದನ್ನು ತಿಳಿಸಿದ್ದಾರೆ.

  • ರಾತ್ರಿ ಹುಟ್ಟಿದ ಮಗು ರಾತ್ರಿಯೇ ಕಳವು- ತಾಯಿ ಜೊತೆ ಮಲಗಿದ್ದ ಗಂಡು ಶಿಶುವನ್ನು ಕದ್ದೊಯ್ದರು!

    ರಾತ್ರಿ ಹುಟ್ಟಿದ ಮಗು ರಾತ್ರಿಯೇ ಕಳವು- ತಾಯಿ ಜೊತೆ ಮಲಗಿದ್ದ ಗಂಡು ಶಿಶುವನ್ನು ಕದ್ದೊಯ್ದರು!

    ಕೋಲಾರ: ರಾತ್ರಿ ಹುಟ್ಟಿದ ಗಂಡು ಮಗುವೊಂದನ್ನು ಮಹಿಳೆಯೊಬ್ಬಳು ಕಳ್ಳತನ ಮಾಡಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ನಡೆದಿದೆ.

    ಚಲ್ದೀಗಾನಹಳ್ಳಿ ನಿವಾಸಿ ರವಿ ಹಾಗೂ ಮಾಲಾ ದಂಪತಿಗೆ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಗಂಡು ಮಗುವಿನ ಜನನವಾಗಿತ್ತು. ಆದ್ರೆ ತಡರಾತ್ರಿ 1 ಗಂಟೆಯ ವೇಳೆ ತಾಯಿ ಮಡಿಲಲ್ಲಿ ಇದ್ದ ಶಿಶುವನ್ನು ಇಬ್ಬರು ಅಪರಿಚಿತರು ಕದ್ದು ಪರಾರಿಯಾಗಿದ್ದಾರೆ. ಈ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಇತ್ತ ಶಿಶುವನ್ನು ಕಳೆದುಕೊಂಡ ಪೋಷಕರು ತಮ್ಮ ಶಿಶುವನ್ನು ಪತ್ತೆ ಮಾಡಿಕೊಡುವಂತೆ ಪಟ್ಟುಹಿಡಿದಿದ್ದಾರೆ. ಅಲ್ಲದೇ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಥಳಕ್ಕೆ ರಾರ್ಬಟ್‍ಸನ್ ಪೇಟೆ ಪೊಲೀಸರು ಭೇಟಿ ನೀಡಿದ್ದು, ಸದ್ಯ ಸಿಸಿಟಿವಿ ದೃಶ್ಯವನ್ನಾಧರಿಸಿ ಆರೋಪಿಗಳಿಗಾಗಿ ಪತ್ತೆಗೆ ಬಲೆ ಬೀಸಿದ್ದಾರೆ.

  • ಮಗು ಆಟವಾಡ್ತಿದ್ದನ್ನು ನೋಡದೆ ಕಾರ್ ಹರಿಸಿದ ಚಾಲಕ- ಅಚ್ಚರಿಯ ರೀತಿಯಲ್ಲಿ ಬಾಲಕ ಪಾರಾದ ವಿಡಿಯೋ ನೋಡಿ

    ಮಗು ಆಟವಾಡ್ತಿದ್ದನ್ನು ನೋಡದೆ ಕಾರ್ ಹರಿಸಿದ ಚಾಲಕ- ಅಚ್ಚರಿಯ ರೀತಿಯಲ್ಲಿ ಬಾಲಕ ಪಾರಾದ ವಿಡಿಯೋ ನೋಡಿ

    ಬ್ರೆಸಿಲಿಯಾ: ಆಡವಾಟ್ತಿದ್ದ ಪುಟ್ಟ ಬಾಲಕನ ಮೇಲೆ ಆತನ ಅಂಕಲ್ ಕಾರ್ ಹರಿಸಿದ್ದು, ಅಚ್ಚರಿಯ ರೀತಿಯಲ್ಲಿ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

     

     

     

    ಬ್ರೆಜಿಲ್‍ನ ಸಾಂತಾ ಕ್ಯಾಟರೀನಾದ ಪಾಲ್‍ಹೋಕಾದಲ್ಲಿ ಈ ಘಟನೆ ನಡೆದಿದೆ. ಕಾರ್ ಹರಿದ ಕೆಲವೇ ಸಮಯದಲ್ಲಿ ಬಾಲಕ ಮೇಲೆದ್ದು ಓಡಿಹೋಗೋದನ್ನ ವಿಡಿಯೋದಲ್ಲಿ ಕಾಣಬಹುದು.

    ಬಾಲಕನ ಸಂಬಂಧಿ ಪಾರ್ಕ್ ಮಾಡಲಾಗಿದ್ದ ವೋಕ್ಸ್ ವೇಗನ್ ಕಾರಿನ ಬಳಿ ಬಂದಿದ್ದಾರೆ. ಅವರ ಹಿಂದೆಯೇ ಒಬ್ಬ ಹುಡುಗ ಹಾಗು ಮಗು ಕಲೀಬ್ ಬರೋದನ್ನ ಕಾಣಬಹುದು. ವ್ಯಕ್ತಿ ಹಾಗೂ ಆ ಹುಡುಗ ಕಾರಿನ ಡಿಕ್ಕಿಯಲ್ಲಿ ಏನನ್ನೋ ಹುಡುಕುತ್ತಾ ನಿಂತಿದ್ದಾರೆ. ಈ ವೇಳೆ ಮಗು ಕಲೀಬ್ ಕಾರಿನ ಮುಂದೆ ಹೋಗಿ ತನ್ನ ಪಾಡಿಗೆ ಆಟವಾಡೋದ್ರಲ್ಲಿ ಮಗ್ನವಾಗಿತ್ತು.

     

    ಅತ್ತ ಕಲೀಬ್ ತಂದೆ ಕೂಡ ಕಾರಿನ ಡಿಕ್ಕಿಯ ಬಳಿ ಬಂದಿದ್ದು, ಎಲ್ಲರೂ ಕೆಲ ಕಾಲ ಅಲ್ಲೇ ನಿಂತು ಮಾತನಾಡಿದ್ದಾರೆ. ಕೊನೆಗೆ ಹುಡುಗ ಏನನ್ನೋ ಹಿಡಿದು ಒಳಗೆ ಹೋಗಿದ್ದಾನೆ. ಮೂವರೂ ಮಾತಿನಲ್ಲಿ ಮಗ್ನರಾಗಿ, ಮಗು ಕಾರಿನ ಮುಂದೆ ಬಂದಿರೋದನ್ನ ನೋಡಿಯೇ ಇರಲಿಲ್ಲ.

    ಕೊನೆಗೆ ಕಲೀಬ್ ನ ಅಂಕಲ್ ಡಿಕ್ಕಿಯನ್ನ ಮುಚ್ಚಿ ಕಾರನ್ನ ಏರಿದ್ದಾರೆ. ಕಾರಿನ ಮುಂದೆ ಕಲೀಬ್ ಆಟವಾಡ್ತಿರೋದನ್ನ ಗಮನಿಸದೇ ಆತನ ಮೇಲೆಯೇ ಕಾರ್ ಹರಿಸಿಕೊಂಡು ಹೋಗಿದ್ದಾರೆ. ಕಾರ್ ಹೋದ ತಕ್ಷಣ ಕಲೀಬ್ ಮೇಲೆದ್ದು ಅಲ್ಲೇ ನಿಂತಿದ್ದ ತನ್ನ ತಂದೆಯ ಕಡೆಗೆ ಓಡಿದ್ದಾನೆ.

    ಮನೆಯ ಮುಂದಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಕಲೀಬ್ ನ ಅಂಕಲ್ ಆತನ ಮೇಲೆ ಕಾರ್ ಹರಿಸಿರುವುದು ಗೊತ್ತಾಯಿತು. ಆದ್ರೆ ನನ್ನ ಮಗನಿಗೆ ಯಾವುದೇ ಗಾಯಗಳಾಗಿರಲಿಲ್ಲ ಎಂದು ಮಗುವಿನ ತಾಯಿ ಇಲ್ಲಿನ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.