Tag: Baby

  • 9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

    9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

    ಮುಂಬೈ: 9 ತಿಂಗಳ ಮಗುವಿಗೆ ತಾಯಿಯ ಮೂತ್ರಪಿಂಡ ಜೋಡಣೆ ಶಸ್ತ್ರಚಿಕಿತ್ಸೆಯನ್ನು ಮುಂಬೈಯ ವೊಕಾರ್ಡ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.

    ಪಾಲ್ಗರ್ ಜಿಲ್ಲೆಯ ಗೋಲ್ವಾಡ್ ಗ್ರಾಮದ ನಿವಾಸಿಗಳಾದ ವಿವೇಕ್ ಹಾಗೂ ನಿಶಾ ದಂಪತಿಯ 9 ತಿಂಗಳ ಮೊದಲನೇ ಗಂಡು ಮಗು ಸದ್ಯ ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದೆ ಎಂದು ವೊಕಾರ್ಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ವೊಕಾರ್ಡ್ ಆಸ್ಪತ್ರೆಯ ಮುಖ್ಯ ವೈದ್ಯರಾದ ಅನುರಾಗ್ ಶ್ರೀಮಾಲ್, ಇದು ಭಾರತದಲ್ಲೇ ಮೊದಲ ಶಸ್ತ್ರಚಿಕಿತ್ಸೆಯಾಗಿದ್ದು, ತಜ್ಞವೈದ್ಯರಿಂದ ಸುಮಾರು 14 ಗಂಟೆಗಳ ಕಾಲ 9 ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಗೊಳಿಸಿದ್ದೇವೆ. ಮಗುವಿಗೆ ತಾಯಿಯ ಮೂತ್ರಪಿಂಡವನ್ನು ಜೋಡಣೆಮಾಡುವುದು ನಮಗೆ ಸವಾಲಿನ ಸಂಗತಿಯಾಗಿತ್ತು ಎಂದು ತಿಳಿಸಿದರು.

    ನಾವು ಸ್ವಲ್ಪ ಎಚ್ಚರ ತಪ್ಪಿದ್ದರೂ ಮಗುವಿನ ಜೀವಕ್ಕೆ ಆಪತ್ತು ಬರಬಹುದಾಗಿದ್ದರಿಂದ ತೀವ್ರ ನಿಗಾ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಮಗು ತುಂಬಾ ಗಟ್ಟಿಯಾಗಿದ್ದು, ತನ್ನ 9ನೇ ತಿಂಗಳಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಸ್ಪಂದಿಸಿದೆ. ಮೂತ್ರಪಿಂಡ ಬದಲಾವಣೆಗಾಗಿ ತಾಯಿಯ ಮೂತ್ರಪಿಂಡದ ತೂಕವನ್ನು 260 ಗ್ರಾಂಗಳಿಂದ 210 ಗ್ರಾಂಗೆ ಇಳಿಸಿ ಜೋಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಮಗುವಿನ ದೇಹ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ದಂಪತಿಯ ಮಗು ಹುಟ್ಟಿನಿಂದಲೇ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಮಗುವಿಗೆ ಮೂತ್ರಪಿಂಡ ಕಸಿ ಮಾಡುವ ವಿಚಾರವನ್ನು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಆದರೆ ಇಷ್ಟು ದೊಡ್ಡ ಮೊತ್ತದ ಶಸ್ತ್ರಚಿಕಿತ್ಸೆಯನ್ನು ಪೋಷಕರು ಭರಿಸುವಲ್ಲಿ ಶಕ್ತರಾಗಿರಲಿಲ್ಲ. ವೊಕಾರ್ಡ್ ಆಸ್ಪತ್ರೆಯು ಮುಂದೆ ಬಂದು ಮಗುವಿನ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ.

    ಮಗುವಿಗೆ ಮೂತ್ರಪಿಂಡದ ಅವಶ್ಯಕತೆ ಹಿನ್ನೆಲೆಯಲ್ಲಿ ದಂಪತಿಗಳು ತಮ್ಮದೇ ಮೂತ್ರಪಿಂಡವನ್ನು ನೀಡಲು ಮುಂದಾಗಿದ್ದರು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ತಾಯಿಯ ಮೂತ್ರಪಿಂಡ ಹೊಂದಾಣಿಕೆಯಾಗುತ್ತದೆ ಎಂದು ಹೇಳಿದಾಗ, ತಾಯಿಯು ತನ್ನ ಪುಟ್ಟ ಕಂದಮ್ಮನಿಗಾಗಿ ಹಿಂದೆಮುಂದು ನೋಡದೆ ಶಸ್ತ್ರಚಿಕಿತ್ಸೆಗೆ ಸಿದ್ಧರಾಗಿದ್ದರು. ಈ ಶಸ್ತ್ರಚಿಕಿತ್ಸೆಗಾಗಿ ತಮ್ಮ ತೂಕವನ್ನು ಸಹ ಇಳಿಸಿಕೊಂಡಿದ್ದರು.

  • ಆಸ್ಪತ್ರೆಯಿಂದ ಹೆಣ್ಣು ಶಿಶುವನ್ನು ಕದ್ದಿದ್ದ ಮಹಿಳೆಯ ಬಂಧನ

    ಆಸ್ಪತ್ರೆಯಿಂದ ಹೆಣ್ಣು ಶಿಶುವನ್ನು ಕದ್ದಿದ್ದ ಮಹಿಳೆಯ ಬಂಧನ

    ಬೀದರ್: ಹೈದ್ರಾಬಾದ್ ನ ಕೊಟಿ ಆಸ್ಪತ್ರೆಯಿಂದ ಹೆಣ್ಣು ಮಗುವನ್ನು ಅಪಹರಿಸಿದ್ದ ಮಹಿಳಾ ಆರೋಪಿಯನ್ನು ತೆಲಂಗಾಣ ಹಾಗೂ ಬೀದರ್ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಯನ(34) ಮಗು ಅಪಹರಿಸಿದ್ದ ಆರೋಪಿ. ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ಸ್ವಗ್ರಾಮದಲ್ಲಿ ಆರೋಪಿಯನ್ನ ಬಂಧಿಸಿಲಾಗಿದೆ. ಬೀದರ್ ತಾಲೂಕಿನ ಕಾಶಂಪೂರ್ (ಬಿ) ಗ್ರಾಮದ ನಿವಾಸಿಯಾಗಿರುವ ನಯನ ಕಳೆದ ಎರಡು ದಿನಗಳ ಹಿಂದೆ ಹೈದ್ರಾಬಾದ್ ನ ಕೊಟಿ ಆಸ್ಪತ್ರೆಯಿಂದ ಹೆಣ್ಣುಮಗು ಅಪಹರಿಸಿ ಬೀದರ್ ಜಿಲ್ಲಾಸ್ಪತ್ರೆಯ ನಲ್ಲಿ ಮಗು ಬಿಟ್ಟು ಪರಾರಿಯಾಗಿದ್ದಳು. ಇದನ್ನೂ ಓದಿ: ಹೈದರಾಬಾದ್‍ನಲ್ಲಿ ಕಾಣೆಯಾಗಿದ್ದ ಮಗು ಬೀದರ್ ನಲ್ಲಿ ಪತ್ತೆ

    ಮದುವೆ ಬಳಿಕ ಹೈದ್ರಾಬಾದ್ ನಲ್ಲಿಯೇ ವಾಸವಾಗಿದ್ದ ನಯನಾಗೆ ಎರಡು ಬಾರಿ ಗರ್ಭಪಾತವಾಗಿತ್ತು. ಇದರಿಂದ ಮನನೊಂದು ನಯನ ಮಗುವನ್ನು ಅಪಹರಿಸಿದ್ದಳು ಎನ್ನಲಾಗಿದೆ.

    ಈ ಕುರಿತು ಹೈದ್ರಾಬಾದ್ ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮಗುವಿನ ಪೋಷಕರಿಂದ ಅಪಹರಣ ಪ್ರಕರಣ ದಾಖಲಾಗಿತ್ತು.

  • ಹಾಲುಣಿಸಿದ ಅನಾಥ ಮಗುವಿನ ಸಾವಿಗೆ ಮರುಕಪಟ್ಟ ಪೊಲೀಸಮ್ಮ

    ಹಾಲುಣಿಸಿದ ಅನಾಥ ಮಗುವಿನ ಸಾವಿಗೆ ಮರುಕಪಟ್ಟ ಪೊಲೀಸಮ್ಮ

    ಬೆಂಗಳೂರು: ಅನೈತಿಕ ಸಂಬಂಧಕ್ಕೋ ಅಥವಾ ಮದುವೆಗೆ ಮುಂಚೆ ಹುಟ್ಟಿದ್ದಕ್ಕೋ ತಾಯಿಯೊಬ್ಬಳು ತನ್ನ ಮಗುವನ್ನು ಪೊದೆಯೊಂದರ ಬಳಿ ಎಸೆದು ಹೋಗಿದ್ದಳು. ರಸ್ತೆಯಲ್ಲಿ ಓಡಾಡೋ ಜನ ಮಗುವಿನ ಅಳುವಿನ ಶಬ್ಧ ಕೇಳಿ ಮಗುವನ್ನು ರಕ್ಷಿಸಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಒಪ್ಪಿಸಿದ್ದರು.

    ಹೊಟ್ಟೆ ಹಸಿವಿನಿಂದ ಅಳುತ್ತಿದ್ದ ಮಗುವಿನ ಕೂಗಿಗೆ ಕೆಲವು ದಿನಗಳ ಹಿಂದಷ್ಟೇ ಬಾಣಂತನ ಮುಗಿಸಿ ಕೆಲಸಕ್ಕೆ ಬಂದಿದ್ದ ಮಹಿಳಾ ಪೇದೆ ಅರ್ಚನಾ ಹಿಂದು-ಮುಂದು ನೋಡದೆ ಹಾಲುಣಿಸಿ ಮಗುವನ್ನು ಬಾಲವಿಹಾರಕ್ಕೆ ಕಳುಹಿಸಿದ್ದರು.

    ಆದರೆ ಬಾಲವಿಹಾರದಲ್ಲಿ ಮಗು ಅನಾರೋಗ್ಯದಿಂದ ಮೃತಪಟ್ಟಿತ್ತು. ಇದೀಗ ಕೇವಲ ಒಂದೇ ಒಂದು ಸಾರಿ ಹಾಲುಣಿಸಿದ ಮಹಿಳಾ ಪೊಲೀಸ್ ಅರ್ಚನಾ ಮಗುವನ್ನು ನೆನಸಿಕೊಂಡು ಮರುಕ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅರ್ಚನಾ, ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಮುಂದಿನ ಜನ್ಮದಲ್ಲಾದ್ರೂ ಮಗುವಿಗೆ ಒಳ್ಳೆ ತಾಯಿ ಸಿಗಲಿ ಎಂದು ಹೇಳಿದ್ದಾರೆ. ಅಲ್ಲದೇ ಒಂದು ಬಾರಿ ಹಾಲುಣಿಸಿದ್ದಕ್ಕೆ ಮಗುವಿನ ಸಾವನ್ನು ತನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾತನಾಡುತ್ತಲೇ, ದುಃಖ ತಡೆಯಲಾರದೆ ಅಳುತ್ತಾ ತೆರಳಿದರು.

  • ಭಾರತದ ಪ್ರಸಿದ್ಧ ಸ್ಥಳವೊಂದರ ಹೆಸರನ್ನು ಇಡಲಿದ್ದಾರೆ ಎಬಿಡಿ ದಂಪತಿ

    ಭಾರತದ ಪ್ರಸಿದ್ಧ ಸ್ಥಳವೊಂದರ ಹೆಸರನ್ನು ಇಡಲಿದ್ದಾರೆ ಎಬಿಡಿ ದಂಪತಿ

    ಬೆಂಗಳೂರು: ಭಾರತದ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಹಲವು ವಿದೇಶಿ ಆಟಗಾರರು ಫಿದಾ ಆಗಿದ್ದು, ಈ ಹಿಂದೆ ಜಾಂಟಿ ರೋಡ್ಸ್ ತಮ್ಮ ಪುತ್ರಿಗೆ ಇಂಡಿಯಾ ಎಂದು ಹೆಸರು ಇಡುವ ಮೂಲಕ ಪ್ರೀತಿಯನ್ನು ಮೆರೆದಿದ್ದರು. ಸದ್ಯ ಈ ಸಾಲಿಗೆ ಆರ್ ಸಿಬಿ ಆಟಗಾರ ಎಬಿಡಿ ಸೇರ್ಪಡೆಯಾಗಲಿದ್ದಾರೆ.

    ಈ ಕುರಿತು ಮಾತನಾಡಿರುವ ಎಬಿಡಿ, ಕರ್ನಾಟಕ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಸಾಕ್ಷಿಯಾಗಿ ತಮ್ಮ ಮೂರನೇ ಮಗುವಿಗೆ `ಕರ್ನಾಟಕ’ ಎಂದು ಹೆಸರಿಡಲು ನಿರ್ಧರಿಸಿದ್ದೆವು. ಆದರೆ ಸದ್ಯ `ತಾಜ್’ ಎಂದು ನಾಮಕರಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ತಾಜ್ ಎಂದು ಹೆಸರಿಡಲು ಕಾರಣವನ್ನು ಬಿಚ್ಚಿಟ್ಟ ಎಬಿಡಿ, ತಾನು ಮೊದಲ ಬಾರಿಗೆ ತನ್ನ ಗೆಳತಿಗೆ ತಾಜ್ ಮಹಲ್ ಮುಂದೇ ಪ್ರೇಮ ನಿವೇದನೆ ಮಾಡಿದ್ದು, ಅದ್ದರಿಂದ ತಮ್ಮ ಮೂರನೇ ಮಗುವಿಗೆ ತಾಜ್ ಎಂದು ಹೆಸರಿಡುವುದಾಗಿ ತಿಳಿಸಿದ್ದಾರೆ.

    ಎಬಿಡಿ ಹಾಗೂ ಡೇನಿಯಲ್ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, 2015 ರಲ್ಲಿ ಜನಿಸಿದ ತಮ್ಮ ಮೊದಲ ಮಗನಿಗೆ ಜೂನಿಯರ್ ಎಬಿಡಿ ಹಾಗೂ 2017 ರಲ್ಲಿ ಜನಿಸಿದ ಮಗನಿಗೆ ಜಾನ್ ರಿಚರ್ಡ್ ಎಂದು ಹೆಸರಿಟ್ಟಿದ್ದಾರೆ. ಸದ್ಯ ಮೂರನೇ ಮಗುವಿನ ನಿರೀಕ್ಷೆಯಲ್ಲಿ ಎಬಿಡಿ ದಂಪತಿ ಇದ್ದಾರೆ.

    ಭಾರತದ ಸಂಸ್ಕೃತಿಗೆ ಮನಸೋತಿರುವ ಎಬಿಡಿ ಹಲವು ಬಾರಿ ಈ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ಅಲ್ಲದೇ ಕೆಲ ದಿನಗಳ ಹಿಂದೆ ಬೆಂಗಳೂರು ನಗರದಲ್ಲಿ ಆಟೋ ಏರಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಈ ವೇಳೆ ಎಬಿಡಿ ಜೊತೆಗಿದ್ದ ಪತ್ನಿ ಹಾಗೂ ಮಕ್ಕಳು ಸಹ “ಈ ಸಲ ಕಪ್ ನಮ್ದೆ” ಎಂದು ಹೇಳುವ ಮೂಲಕ ಮೆಚ್ಚುಗೆ ಪಡೆದಿದ್ದರು.

    ಟೂರ್ನಿಯಲ್ಲಿ ಸತತ ಸೋಲುಗಳ ಮೂಲಕ ನಿರಾಸೆ ಮೂಡಿಸಿದ್ದ ಆರ್ ಸಿಬಿ ಗುರುವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ಧ ಗೆಲ್ಲುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿತ್ತು. ಆದರೆ ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲುವ ಮೂಲಕ ಟೂರ್ನಿ ಹೊರನಡೆದಿದೆ.

  • ತಾಯಿಯ ಹೈಹೀಲ್ಸ್ ಬ್ಯಾಲೆನ್ಸ್ ತಪ್ಪಿ 6 ತಿಂಗ್ಳ ಮಗು ಮೊದಲನೇ ಮಹಡಿಯಿಂದ ಬಿದ್ದು ಸಾವು!

    ತಾಯಿಯ ಹೈಹೀಲ್ಸ್ ಬ್ಯಾಲೆನ್ಸ್ ತಪ್ಪಿ 6 ತಿಂಗ್ಳ ಮಗು ಮೊದಲನೇ ಮಹಡಿಯಿಂದ ಬಿದ್ದು ಸಾವು!

    ಮುಂಬೈ: ತಾಯಿಯ ಹೈಹೀಲ್ಸ್ ಬ್ಯಾಲೆನ್ಸ್ ತಪ್ಪಿ 6 ತಿಂಗಳ ಮಗು ಮೊದಲನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಭಾನುವಾರ ಮಹಾರಾಷ್ಟ್ರದ ಕಲ್ಯಾಣ್ ನಗರದ ಮದುವೆ ಮನೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಮೊಹಮ್ಮದ್ ಶೇಕ್ ಮೃತಪಟ್ಟ ದುರ್ದೈವಿ ಮಗು. ಶೇಕ್ ಮೊದಲನೇ ಮಹಡಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದನು. ಆಗ ಆತನ ಕುಟುಂಬದವರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬರುವಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದರು.

    ಮಗುವಿನ ಕುಟುಂಬದವರು ರಾಮ್ಬೋಗ್‍ದಲ್ಲಿರುವ ಸಂಬಂಧಿಕರ ಮದುವೆಗೆ ಹೋಗಲು ಕಲ್ಯಾಣ್‍ಗೆ ಹೋಗಿದ್ದರು. ಮದುವೆ ಮುಗಿದ ನಂತರ ಮಗುವಿನ ಕುಟುಂಬದವರು ಮನೆಗೆ ಹಿಂದಿರುತ್ತಿರುವಾಗ ಶೇಕ್ ನ ತಾಯಿ ಫೇಮಿದಾ ಶೇಕ್(23)ನ ಹೈಹೀಲ್ಸ್ ಬ್ಯಾಲೆನ್ಸ್ ತಪ್ಪಿದೆ. ಈ ವೇಳೆ ಎತ್ತಿಕೊಂಡಿದ್ದ ತನ್ನ ಆರು ತಿಂಗಳ ಮಗುವನ್ನು ಬಿಟ್ಟಿದ್ದಾಳೆ. ಪರಿಣಾಮ ಮಗು 1ನೇ ಮಹಡಿಯಿಂದ ಬಿದ್ದಿದೆ ಎಂದು ವರದಿಯಾಗಿದೆ.

    ಮೊದಲನೇ ಮಹಡಿಯಿಂದ ಬಿದ್ದ ಗಾಯಾಳು ಮಗುವನ್ನು ಕುಟುಂಬದವರು ಕೂಡಲೇ ರುಕ್ಮಿಣಿ ಬಾಯಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಷ್ಟರಲ್ಲಾಗುವಾಗಲೇ ಮಗು ಮೃತಪಟ್ಟಿದೆ. ಇದು ಆ್ಯಕ್ಸಿಡೆಂಟಲ್ ಡೆತ್ ಎಂದು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದೇವೆ ಎಂದು ಮಹಾತ್ಮ ಪುಲೇ ಪೊಲೀಸರು ತಿಳಿಸಿದ್ದಾರೆ.

  • ಐಸಿಯುವಿನಲ್ಲಿರುವ ಮಗುವಿನ ಆರೈಕೆ ಮಾಡಲು 500ರೂ. ಲಂಚ ಕೊಡಬೇಕೆಂದ ನರ್ಸ್!

    ಐಸಿಯುವಿನಲ್ಲಿರುವ ಮಗುವಿನ ಆರೈಕೆ ಮಾಡಲು 500ರೂ. ಲಂಚ ಕೊಡಬೇಕೆಂದ ನರ್ಸ್!

    ತುಮಕೂರು: ನಗರದ ಜಿಲ್ಲಾಸ್ಪತ್ರೆಯ ನರ್ಸ್ ಗಳು ಮಾನವೀಯತೆಯನ್ನೇ ಮರೆತಿದ್ದಾರೆ. ಐಸಿಯುನಲ್ಲಿದ್ದ ಮಗುವನ್ನು ಸರಿಯಾಗಿ ಆರೈಕೆ ಮಾಡಲು ಲಂಚಕ್ಕಾಗಿ ಕೈಯೊಡ್ಡಿರುವ ಆರೋಪವೊಂದು ಕೇಳಿಬಂದಿದೆ.

    ಈ ಸಂಬಂಧ ಶನಿವಾರ ವಸಂತ ಹಾಗೂ ಜ್ಯೋತಿ ಎಂಬ ಇಬ್ಬರು ನರ್ಸ್‍ಗಳು ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ. ಇವರ ಕೈ ಬಿಸಿಯಾಗದಿದ್ದರೆ ಆಗತಾನೇ ಹುಟ್ಟಿದ ನವಜಾತ ಶಿಶುಗಳು ಬದುಕುಳಿಯುವುದು ಕಷ್ಟ ಎನ್ನುವ ಮಟ್ಟಿಗೆ ಲಂಚಾವತಾರ ತಾಂಡವವಾಡುತ್ತಿದೆ. ಈ ಮೂಲಕ ನರ್ಸ್ ಗಳು ನರರಾಕ್ಷಸಿಯರಾಗಿದ್ದಾರೆ.

    ಶ್ವಾಸಕೋಶದ ತೊಂದರೆಯಿಂದ ನರಳುತಿದ್ದ ಶಿಶುವನ್ನು ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು. ಮಗುವಿನ ಕೇರ್ ತಗೋಬೇಕಾದರೆ 500 ರೂ. ಕೊಡಬೇಕು ಎಂದು ನರ್ಸ ವಸಂತಾ ಮಗುವಿನ ಪೋಷಕರ ಬಳಿ ಬೇಡಿಕೆ ಇಟ್ಟಿದ್ದಾಳೆ ಎನ್ನಲಾಗಿದೆ.

    ಆದ್ರೆ ಮಗುವಿನ ಪೋಷಕರು ಬಡವರಾಗಿದ್ದು, ಹೀಗಾಗಿ ಮಗುವಿನ ತಂದೆ 100 ರೂ. ಕೊಡಲು ಹೋದಾಗ ತಿರಸ್ಕರಿಸಿದ್ದಾರೆ. ಪುಡಿಗಾಸು ನಮಗೆ ಬೇಡಾ…ನಾವೂ ದುಡ್ಡು ನೋಡಿದವರೇ ಎಂದು ಧಮ್ಕಿ ಹಾಕಿದ್ದಾಳೆ. ಬಳಿಕ 200 ರೂ. ಕೊಟ್ಟಾಗ ತೆಗೆದುಕೊಂಡು ಸಹನರ್ಸ್ ಜ್ಯೋತಿಗೂ ಹಂಚಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

  • ಆಸ್ಪತ್ರೆಯ ಡ್ರೈನೇಜ್ ನಲ್ಲಿ 7 ತಿಂಗಳ ಭ್ರೂಣ ಪತ್ತೆ

    ಆಸ್ಪತ್ರೆಯ ಡ್ರೈನೇಜ್ ನಲ್ಲಿ 7 ತಿಂಗಳ ಭ್ರೂಣ ಪತ್ತೆ

    ಚಿಕ್ಕಬಳ್ಳಾಪುರ: ಖಾಸಗಿ ಆಸ್ಪತ್ರೆಯ ಡ್ರೈನೇಜ್ ನಲ್ಲಿ 7 ತಿಂಗಳ ಭ್ರೂಣ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಮಾನಸ ಖಾಸಗಿ ಆಸ್ಪತ್ರೆಯ ಚರಂಡಿಯಲ್ಲಿ ಭ್ರೂಣ ಶಿಶು ಪತ್ತೆಯಾಗಿದ್ದು, ಇದನ್ನ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ದೊಡ್ಡಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

    ಆಸ್ಪತ್ರೆಯ ಸಿಬ್ಬಂದಿಯೇ ಅಬಾರ್ಷನ್ ಮಾಡಿ ಶಿಶುವನ್ನ ಚರಂಡಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಚರಂಡಿಯಲ್ಲಿ ಪತ್ತೆಯಾದ ಭ್ರೂಣ ಶಿಶುವನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಆಸ್ಪತ್ರೆಯ ಸಿಬ್ಬಂದಿಯನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

  • ಮಡಿಲಲ್ಲಿ ಮಗುವನ್ನ ಮಲಗಿಸಿಕೊಂಡು ಹಾಲುಣಿಸುತ್ತಲೇ ಪರೀಕ್ಷೆ ಬರೆದ ಮಹಿಳೆ- ಫೋಟೋ ವೈರಲ್

    ಮಡಿಲಲ್ಲಿ ಮಗುವನ್ನ ಮಲಗಿಸಿಕೊಂಡು ಹಾಲುಣಿಸುತ್ತಲೇ ಪರೀಕ್ಷೆ ಬರೆದ ಮಹಿಳೆ- ಫೋಟೋ ವೈರಲ್

    ಕಾಬುಲ್: ಮಹಿಳೆಯೊಬ್ಬರು ತನ್ನ ಮಗುವನ್ನ ಮಡಿಲಲ್ಲಿ ಮಲಗಿಸಿಕೊಂಡೇ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆದ ಫೋಟೋವೊಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    25 ವರ್ಷದ ಮಹಿಳೆ ಜಹಾನ್ ತಾಬ್, ಅಫ್ಘಾನಿಸ್ತಾನದ ಡೇಕುಂಡಿ ಪ್ರಾಂತ್ಯದಲ್ಲಿರೋ ಖಾಸಗಿ ವಿಶ್ವವಿದ್ಯಾಲಯದಲ್ಲಿ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುತ್ತಿರುವುದರ ಫೋಟೋ ತೆಗೆಯಲಾಗಿತ್ತು. ಜಹಾನ್ ಅವರು ನಿಲ್ಲಿ ನಗರದಲ್ಲಿರೋ ನಾಸಿರ್‍ಖೊಸ್ರಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಮಾಜ ವಿಜ್ಞಾನ ಕೋರ್ಸ್‍ಗೆ ಪ್ರವೇಶಾತಿ ಪಡೆಯಲು ಕಾನ್ಕೋರ್ ಎಕ್ಸಾಂ ಎಂಬ ಪ್ರವೇಶಾತಿ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಅವರ 2 ತಿಂಗಳ ಮಗು ಅಳಲು ಶುರುಮಾಡಿತ್ತು.

    ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಯಾಹ್ಯಾ ಇರ್ಫಾನ್ ಈ ಬಗ್ಗೆ ಹೇಳಿಕೆ ನೀಡಿದ್ದು, ಮಹಿಳೆ ಡೆಸ್ಕ್‍ನಿಂದ ಎದ್ದು ನೆಲದ ಮೇಲೆ ಕುಳಿತುಕೊಂಡು ಮಗುವಿಗೆ ಹಾಲುಣಿಸುತ್ತಲೇ ಪರೀಕ್ಷೆ ಬರೆಯೋದನ್ನ ಮುಂದುವರೆಸಿದ್ರು ಎಂದು ಹೇಳಿದ್ದಾರೆ.

    ಇಫಾರ್ನ್, ಮಡಿಲಲ್ಲಿ ಮಗುವನ್ನ ಮಲಗಿಸಿಕೊಂಡು ಪರೀಕ್ಷೆ ಬರೆಯುತ್ತಿದ್ದ ಮಹಿಳೆಯ ಫೋಟೋ ತೆಗೆದಿದ್ದು, ಅದನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ನಂತರ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾವಿರಾರು ಬಾರಿ ಶೇರ್ ಆಗಿದೆ.

    ಮಹಿಳೆಯ ಫೋಟೋ ಹಾಗೂ ಅದು ನೀಡುತ್ತಿರುವ ಸಂದೇಶವನ್ನ ಸಾಮಾಜಿಕ ಜಾಲತಾಣದಲ್ಲಿ ಜನ ಮೆಚ್ಚಿದ್ದಾರೆ. ಅಫ್ಘಾನ್ ಮಹಿಳೆಯರನ್ನು ತಡೆಯಲು ಸಾಧ್ಯವಿಲ್ಲ ಎಂಬ ಟ್ವೀಟ್ ಕೂಡ ವೈರಲ್ ಆಗಿದೆ. ಇನ್ನೂ ಕೆಲವರು ಜಹಾನ್ ಅವರನ್ನು ಸ್ಫೂರ್ತಿದಾಯಕ ಮಹಿಳೆ ಎಂದು ಕರೆದಿದ್ದಾರೆ.

    ಮೂರು ಮಕ್ಕಳ ತಾಯಿಯಾಗಿರುವ ಜಹಾನ್ ಪರೀಕ್ಷೆಗಾಗಿ 6 ಗಂಟೆಗಳ ಕಾಲ ಪ್ರಯಾಣ ಮಾಡಿ ನಿಲ್ಲಿ ನಗರವನ್ನು ತಲುಪಿದ್ದರು. ಜಹಾನ್ ಬರೆದ ಪ್ರವೇಶಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರಾದ್ರೂ ಫೀಸ್ ಭರಿಸುವ ಶಕ್ತಿ ಇಲ್ಲ ಎಂದು ಚಿಂತೆಯಲ್ಲಿದ್ದಾರೆ. ರೈತರೊಬ್ಬರನ್ನ ಮದುವೆಯಾಗಿರೋ ಜಹಾನ್ ತನ್ನ ವಿದ್ಯಾಭ್ಯಾಸ ಮುಂದುವರಿಸಬೇಕೆಂಬ ಇಚ್ಛೆ ಹೊಂದಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

    ದಿ ಅಫ್ಘಾನ್ ಯೂತ್ ಅಸೋಸಿಯೇಷನ್ ಎಂಬ ಬ್ರಿಟಿಷ್ ಸಂಸ್ಥೆ ಜಹಾನ್ ಅವರ ವಿದ್ಯಾಭ್ಯಾಸಕ್ಕಾಗಿ ಹಣಸಹಾಯ ಮಾಡುವಂತೆ ಅಭಿಯಾನ ಶುರು ಮಾಡಿದೆ.

    https://www.facebook.com/yahia.erfan/posts/1456479687797039

  • ಸಮಾಧಿ ಮೇಲೆ ಕೂತು ಕ್ಯಾಮೆರಾ ತಿರುಗಿಸಿದ ಕಡೆಗೆಲ್ಲಾ ಕಣ್ಣು ಹೊರಳಿಸೋ ಗೊಂಬೆ- ಈ ವೈರಲ್ ವಿಡಿಯೋ ಇನ್ನೂ ನೋಡಿಲ್ವಾ?

    ಸಮಾಧಿ ಮೇಲೆ ಕೂತು ಕ್ಯಾಮೆರಾ ತಿರುಗಿಸಿದ ಕಡೆಗೆಲ್ಲಾ ಕಣ್ಣು ಹೊರಳಿಸೋ ಗೊಂಬೆ- ಈ ವೈರಲ್ ವಿಡಿಯೋ ಇನ್ನೂ ನೋಡಿಲ್ವಾ?

    ಮೆಕ್ಸಿಕೋ: ಕೆಲವು ಹಾರರ್ ಸಿನಿಮಾಗಳಲ್ಲಿ ಅಥವಾ ಧಾರಾವಾಹಿಗಳಲ್ಲಿ ಗೊಂಬೆಗಳನ್ನ ದೆವ್ವದ ರೀತಿ ತೋರಿಸಿರೋದನ್ನ ನೋಡಿರ್ತೀರ. ಅದೇ ರೀತಿ ಸಮಾಧಿಯ ಮೇಲೆ ಕುಳಿತಿರುವಂತೆ ಕಾಣುವ ಗೊಂಬೆಯ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಬಿಳಿ ಬಣ್ಣದ ಬಟ್ಟೆ ತೊಟ್ಟಿರುವ ಗೊಂಬೆ, ಪಕ್ಕದಲ್ಲಿರೋ ಫೀಡಿಂಗ್ ಬಾಟಲಿಯಲ್ಲಿ ರಕ್ತದಂತೆ ಕಾಣೋ ಕೆಂಪು ಬಣ್ಣದ ದ್ರಾವಣ. ನೋಡಿದಾಕ್ಷಣ ಎಂಥವರಿಗೂ ಬೆಚ್ಚಿಬೀಳಿಸುತ್ತದೆ. ಇದು ನಿಜವಾದ ಮಗುನಾ ಅಥವಾ ಗೊಂಬೆನಾ ಅನ್ನೋ ಅನುಮಾನ ಕೂಡ ಬರದೇ ಇರದು. ಈ ವಿಡಿಯೋವನ್ನ ಹಂಚಿಕೊಂಡ ನಾಲ್ಕು ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.

    ಈ ವಿಡಿಯೋವನ್ನ ಮಹಿಳೆಯೊಬ್ಬರು ಬ್ರೆಜಿಲ್‍ನಲ್ಲಿ ಚಿತ್ರೀಕರಿಸಿದ್ದು, ಮೆಕ್ಸಿಕನ್ ಮಾಧ್ಯಮಗಳಲ್ಲೂ ಕೂಡ ಪ್ರಸಾರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ನೋಡಿದವರು ಹೌಹಾರಿದ್ದು, ದೆವ್ವದ ಗೊಂಬೆ ಎಂದು ಕಮೆಂಟ್ ಮಾಡಿದ್ದಾರೆ.

    ಗೊಂಬೆಯ ಚಲಿಸುವ ಕಣ್ಣುಗಳು ಕೇವಲ ಒಂದು ಟ್ರಿಕ್ ಅಷ್ಟೇ ಎಂದು ಇನ್ನೂ ಕೆಲವರು ಕಮೆಂಟ್ ಮಾಡಿದ್ದಾರೆ. ಇದೊಂದು ದೃಷ್ಟಿಭ್ರಮೆ(ಆಪ್ಟಿಕಲ್ ಇಲ್ಲ್ಯೂಷನ್), ಹಾಗಂತ ಇದನ್ನ ನೋಡಿದ್ರೆ ಭಯ ಆಗಲ್ಲ ಅಂತೇನಿಲ್ಲ, ಯಾರಾದ್ರೂ ಕಾಪಾಡಿ ಅಂತ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮೆಕ್ಸಿಕೋದ ಸ್ಥಳೀಯ ಮಾಧ್ಯಮಗಳು ಈ ಗೊಂಬೆಯನ್ನ ಚೈಲ್ಡ್ ಪ್ಲೇ ಸರಣಿ ಚಿತ್ರದ ಗೊಂಬೆ ಚಕ್ಕಿ ಗೆ ಹೋಲಿಸಿದ್ದಾರೆ.

    ಆದ್ರೆ ಮೆಕ್ಸಿಕೋದಲ್ಲಿ ಭಯಾನಕ ಗೊಂಬೆಗಳೇನೂ ಹೊಸದಲ್ಲ. ಮೆಕ್ಸಿಕೋ ನಗರಕ್ಕೆ ಹತ್ತಿರವಿರುವ ಕ್ಸೋಚಿಮಿಕೋದ ಕಾಲುವೆಗಳ ನಡುವೆ ಗೊಂಬೆಗಳ ದ್ವೀಪವೇ ಇದೆ. ಇಲ್ಲಿನ ಮರಗಳಲ್ಲಿ ಗೊಂಬೆಗಳನ್ನ ಹಗ್ಗದಿಂದ ನೇತು ಹಾಕಲಾಗಿದ್ದು ಭಯ ಹುಟ್ಟಿಸುತ್ತದೆ.

     

    ಇಲ್ಲಿನವರು ಹೇಳುವ ಪ್ರಕಾರ, ದ್ವೀಪವನ್ನ ನೋಡಿಕೊಳ್ತಿದ್ದ ಜುಲೀಯಾನ್ ಸಂಟಾನಾ ಬರ್ರೇರಾ ಒಂದು ದಿನ ಬೆಳಗ್ಗೆ ಇಲ್ಲಿ ಹುಡುಗಿಯ ಮೃತದೇಹವನ್ನ ನೋಡಿದ್ದರು. ಇದರಿಂದ ಅವರು ತುಂಬಾ ಭಯಗೊಂಡಿದ್ದರು. ಬಳಿಕ ಅದೇ ಹುಡುಗಿಗೆ ಸೇರಿರಬಹುದು ಎನ್ನಲಾದ ಗೊಂಬೆಯ ಮೇಲೆ ಎಡವಿದ್ದರು. ನಂತರ ಆ ಗೊಂಬೆಯನ್ನ ಅಲ್ಲಿನ ಮರಕ್ಕೆ ಸಿಕ್ಕಿಸಿದ್ದರು. ಆದ್ರೆ ಮೃತ ಮಗುವಿನ ಬಗ್ಗೆ ಮರೆಯಲಾಗದೆ ಮರಗಳಿಗೆ ಗೊಂಬೆಗಳನ್ನ ನೇತುಹಾಕೋದನ್ನ ಮುಂದುವರೆಸಿದ್ದರು ಎಂದು ಹೇಳಲಾಗುತ್ತದೆ. ಈಗ ಈ ಮರಗಳಲ್ಲಿ ನೇತುಹಾಕಲಾಗಿರೋ ನೂರಾರು ಗೊಂಬೆಗಳನ್ನ ಕಾಣಬಹುದು.

    https://www.youtube.com/watch?v=6WbEPnlr0CA

  • 10 ತಿಂಗಳ ಕಂದಮ್ಮನ ತಲೆ ಮೇಲೆ ಬಿತ್ತು ಮರದ ಹಲಗೆ

    10 ತಿಂಗಳ ಕಂದಮ್ಮನ ತಲೆ ಮೇಲೆ ಬಿತ್ತು ಮರದ ಹಲಗೆ

    ಬೀಜಿಂಗ್: 10 ತಿಂಗಳ ಗಂಡು ಮಗುವಿನ ತಲೆಯ ಮೇಲೆ ಮರದ ಹಲಗೆಯೊಂದು ಬಿದ್ದಿರುವ ಘಟನೆ ನೈಋತ್ಯ ಚೀನಾದದಲ್ಲಿ ನಡೆದಿದೆ. ಮಗುವಿನ ಮೇಲೆ ಮರದ ಹಲಗೆ ಬೀಳುವ ದೃಶ್ಯಗಳು ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮಾರ್ಚ್ 16ರಂದು ಈ ಘಟನೆ ನಡೆದಿದ್ದು, ಮಗುವಿನ ತಲೆಯ ಮೇಲೆ ಮರದ ಹಲಗೆ ಬೀಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾರ್ಚ್ 16ರಂದು ಮಧ್ಯಾಹ್ನ 1ಗಂಟೆಗೆ ಲಿಯು ಎಂಬ ಮಹಿಳೆ ತಮ್ಮ ಮೊಮ್ಮಗನನ್ನು ಬೇಬಿ ಸಿಟಿಂಗ್ ಚೇರ್ ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ಮೇಲಿಂದ ಸುಮಾರು 2 ಕೆಜಿ ತೂಕವುಳ್ಳ ಮರದ ಹಲಗೆ ಕಂದಮ್ಮನ ತಲೆಯ ಮೇಲೆ ಬಿದ್ದಿದೆ.

    ಮಗುವಿನ ಮೇಲೆ ಹಲಗೆ ಬೀಳುತ್ತಿದ್ದಂತೆ ಲಿಯು ಮೊಮ್ಮಗನನ್ನು ಸ್ಥಳೀಯ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದಾಗಿ ಮಗುವಿನ ಹಣೆಯ ಮೇಲೆ 8 ಸೆಂಟಿ ಮೀಟರ್ (3.15 ಇಂಚು) ಆಳವಾದ ಗಾಯವಾಗಿದೆ. ಮಗುವಿಗೆ ಚಿಕಿತ್ಸೆ ನೀಡಲಾಗತ್ತಿದ್ದು, ಅದರ ಸ್ಥಿತಿ ಚಿಂತಾಜನಕವಾಗಿದೆ ಅಂತಾ ವೈದ್ಯರು ತಿಳಿಸಿದ್ದಾರೆಂದು ವರದಿಯಾಗಿದೆ.

    ಮಗುವಿನದ್ದು ಮೃದು ಹಣೆಯಾಗಿದ್ದರಿಂದ ಮೂಳೆಗಳು ಮುರಿತಕ್ಕೊಳಗಾಗಿದ್ದು, ಅವುಗಳ ಜೋಡಣೆ ಕಾರ್ಯ ನಡೆಯುತ್ತಿದೆ ಅಂತಾ ಮಗುವಿನ ತಾಯಿ ಖಿನ್ ತಿಳಿಸಿದ್ದಾರೆ.

    ಘಟನೆಯ ಬಳಿಕ ಸ್ಥಳೀಯ ಭದ್ರತಾ ಸಿಬ್ಬಂದಿ, ಬಾಲ್ಕನಿಯಲ್ಲಿ ಅಲಂಕಾರಿಕವಾಗಿ ಮರದ ಹಲಗೆಗಳು, ಹೂ ಕುಂಡಗಳನ್ನು ಬೀಳುವ ರೀತಿಯಲ್ಲಿ ಇರಿಸಬಾರದು ಅಂತಾ ಸುತ್ತೋಲೆಯನ್ನು ಹೊರಡಿಸಿದ್ದಾರೆ.

    ಈ ಸಂಬಂಧ ಯುಝಹಾಂಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಮೇಲೆ ಹಲಗೆ ಹೇಗೆ ಬಿತ್ತು ಮತ್ತು ಯಾರ ಮನೆಯ ಬಾಲ್ಕನಿಯಿಂದ ಬಿದ್ದಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    https://youtu.be/KPqRN5aLrvk