Tag: Baby

  • 20 ದಿನದ ಹಸುಗೂಸಿಗಾಗಿ ಮಳೆಯಲ್ಲೇ ಓಡಿ, ಬದುಕಿಸಿಕೊಳ್ಳಲಾಗದೇ ನರಳಾಡುತ್ತಿರುವ ತಾಯಿ!

    20 ದಿನದ ಹಸುಗೂಸಿಗಾಗಿ ಮಳೆಯಲ್ಲೇ ಓಡಿ, ಬದುಕಿಸಿಕೊಳ್ಳಲಾಗದೇ ನರಳಾಡುತ್ತಿರುವ ತಾಯಿ!

    ಮಡಿಕೇರಿ: ತನ್ನ 20 ದಿನದ ಹಸುಗೂಸನ್ನು ರಕ್ಷಿಸಿಕೊಳ್ಳಲು ಪ್ರವಾಹದಲ್ಲೇ ಓಡಿದ ತಾಯಿಯೊಬ್ಬರು, ತನ್ನ ಮಡಿಲಲ್ಲೆ ಮಗುವನ್ನು ಕಳೆದುಕೊಂಡ  ಹೃದಯವಿದ್ರಾವಕ ಘಟನೆ ಕೊಡಗಿನ ಮುಕ್ಕೋಡ್ಲು ಬಳಿ ನಡೆದಿದೆ.

    ಹೌದು. ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ತಾಯಿಯೊಬ್ಬಳು ತನ್ನ ಮಡಿಲಲ್ಲೇ 20 ದಿನದ ಹಸುಗೂಸನ್ನು ಕಳೆದುಕೊಂಡಿರುವ ಕರುಣಾಜನಕ ಕಥೆ ಮುಕ್ಕೋಡ್ಲು ಬಳಿ ನಡೆದಿದೆ. ತನ್ನ ಮಡಿಲಲ್ಲೇ ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಜವರಾಯನಾಗಿ ಬಂದ ಮಳೆರಾಯ ತಾಯಿಯ ಕಂಕುಳಲ್ಲಿದ್ದ ಮಗುವಿನ ಪ್ರಾಣಪಕ್ಷಿಯನ್ನೇ ಕಿತ್ತುಕೊಂಡು ಹೋಗಿದ್ದಾನೆ. ಇದನ್ನೂ ಓದಿ: ಅಜ್ಜಿಯನ್ನು ಹುಡುಕಿಕೊಡುವಂತೆ ಮೊಮ್ಮಗಳ ಮನವಿ – ಅಧಿಕಾರಿಗಳ ಜೊತೆ 5 ಕಿ.ಮೀ. ನಡೆದ ಸಾ.ರಾ.ಮಹೇಶ್

    ಶನಿವಾರ ಮುಕ್ಕೋಡ್ಲು ಬಳಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು, ಈ ವೇಳೆ ಗ್ರಾಮದಲ್ಲಿದ್ದ ಮುತ್ತು ಹಾಗೂ ಸರಸ್ವತಿ ದಂಪತಿಯ ಮನೆ ಕುಸಿದು ಬಿದ್ದಿದೆ. ದಂಪತಿ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ತಮ್ಮ 20 ದಿನದ ಹಿಂದೆ ಹುಟ್ಟಿದ್ದ ಹೆಣ್ಣು ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಪ್ರವಾಹದ ಮಧ್ಯೆ ಓಡಿದ್ದಾರೆ. ಈ ವೇಳೆ ಸರಸ್ವತಿ ಮಗುವಿನೊಂದಿಗೆ ಮಣ್ಣಿನ ಗುಡ್ಡೆಯೊಂದರಲ್ಲಿ ಕುಸಿದು ಬಿದ್ದುಬಿಟ್ಟರು. ಬಿದ್ದ ರಭಸಕ್ಕೆ ಕೈಯಲ್ಲಿದ್ದ ಮಗುವಿನ ಪ್ರಾಣಪಕ್ಷಿ ಹಾರಿಹೋಗಿದೆ. ಅವರು ಸಹ ತಮ್ಮ ಕಾಲನ್ನು ಕಳೆದುಕೊಂಡಿದ್ದಾರೆ.

    ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿಯು, ಕಾಲು ಕಳೆದ ಕೊಂಡ ನೋವನ್ನೂ ಲೆಕ್ಕಿಸದೆ, ಮಗುವಿನ ಚಿಂತೆಯಲ್ಲಿ ಮುಳುಗಿದ್ದಾರೆ. ತನ್ನ ಮಡಿಲಿನಿಂದಲೇ ಕೂಸನ್ನು ಕಿತ್ತುಕೊಂಡ ಜವರಾಯನಿಗೆ ಹಿಡಿಶಾಪ ಹಾಕುತ್ತಿದ್ದಾಳೆ. ಮಗುವನ್ನು ಕಳೆದುಕೊಂಡು ದಂಪತಿಯು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಇದನ್ನೂ ಓದಿ: ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರೀ ಮಳೆಯಿಂದಾಗಿ ಮಂಡಗದ್ದೆಯಲ್ಲಿ ಮೂಕ ಪಕ್ಷಿಗಳ ರೋಧನೆ!

    ಭಾರೀ ಮಳೆಯಿಂದಾಗಿ ಮಂಡಗದ್ದೆಯಲ್ಲಿ ಮೂಕ ಪಕ್ಷಿಗಳ ರೋಧನೆ!

    ಶಿವಮೊಗ್ಗ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲೆಯ ಪ್ರಸಿದ್ಧ ಮಂಡಗದ್ದೆ ಪಕ್ಷಿಧಾಮದಲ್ಲಿ ನೀರಿನ ರಭಸಕ್ಕೆ ಸಾವಿರಾರು ಪಕ್ಷಿಗಳು ಕೊಚ್ಚಿ ಹೋಗಿವೆ.

    ಪ್ರಸಿದ್ಧ ಪಕ್ಷಿಧಾಮ ಮಂಡಗದ್ದೆಯಲ್ಲೀಗ ಶೋಕ ಮಡುಗಟ್ಟಿದ್ದು, ಪ್ರತಿ ವರ್ಷ ಸಂತಾನಭಿವೃದ್ಧಿಗೆ ಬರುವ ಸಾವಿರಾರು ಪಕ್ಷಿಗಳು ತುಂಗೆಯ ಅಬ್ಬರಕ್ಕೆ ತತ್ತರಿಸಿ ಹೋಗಿವೆ. ನಿರಂತರ ಮಳೆಯಿಂದಾಗಿ ತುಂಗಾ ನದಿಯು ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಲ್ಲಿ ಇಲ್ಲಿನ ಸಾವಿರಾರು ಪಕ್ಷಿಗಳ ಗೂಡುಗಳು ಕೊಚ್ಚಿಕೊಂಡು ಹೋಗಿವೆ.

    ಪ್ರತಿ ವರ್ಷ ಉತ್ತರ ಭಾರತದಿಂದ ಮೇ ಹಾಗೂ ಜೂನ್ ತಿಂಗಳಲ್ಲಿ ಬರುವ ಜಾಲಪಾದ, ತುಪ್ಪಳದ ಹಕ್ಕಿಗಳು ಇಲ್ಲಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಗಳೊಂದಿಗೆ ಅಕ್ಟೋಬರ್ ವೇಳೆಗೆ ಹಿಂತಿರುಗುತ್ತವೆ. ಆದರೆ ಈ ವರ್ಷ ಪ್ರವಾಹದಿಂದಾಗಿ ತಳಮಟ್ಟದಲ್ಲಿದ್ದ ಗೂಡುಗಳು ಮೊಟ್ಟೆ-ಮರಿಗಳ ಸಮೇತ ಕೊಚ್ಚಿಕೊಂಡು ಹೋಗಿವೆ.

    ಮೇಲ್ಭಾಗದಲ್ಲಿ ಇರುವ ಕೆಲವು ಗೂಡುಗಳು ಮಾತ್ರ ಉಳಿದುಕೊಂಡಿದ್ದು, ನಿರಂತರ ಮಳೆಯಿಂದಾಗಿ ಪಕ್ಷಿಗಳು ತತ್ತರಿಸಿ ಹೋಗಿವೆ. ಎಂದು ಮಳೆ ನಿಲ್ಲುವುದೋ ಎಂದು ಪಕ್ಷಿಗಳು ಆಕಾಶ ನೋಡುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಸಿರಾಟದ ತೊಂದರೆಯಿಂದಾಗಿ ವಿಮಾನದಲ್ಲೇ ಮೃತಪಟ್ಟ ಹಸುಗೂಸು

    ಉಸಿರಾಟದ ತೊಂದರೆಯಿಂದಾಗಿ ವಿಮಾನದಲ್ಲೇ ಮೃತಪಟ್ಟ ಹಸುಗೂಸು

    ಹೈದರಾಬಾದ್: ಉಸಿರಾಟದ ಸಮಸ್ಯೆಯಿಂದಾಗಿ ನಾಲ್ಕು ತಿಂಗಳ ಹಸುಗೂಸೊಂದು ವಿಮಾನದಲ್ಲೇ ಮೃತಪಟ್ಟಿದೆ.

    ಬೆಂಗಳೂರಿನಿಂದ ಪಾಟ್ನಾಗೆ ತೆರಳುತ್ತಿದ್ದ ವಿಮಾನದಲ್ಲಿ 4 ತಿಂಗಳ ಮಗುವೊಂದು ಉಸಿರಾಟದ ತೊಂದರೆಯಿಂದ ಮೃತಪಟ್ಟಿದೆ. ಮಂಗಳವಾರ ಬೆಳಗ್ಗೆ 6.15 ಕ್ಕೆ 4 ತಿಂಗಳ ಮಗುವಿನೊಂದಿಗೆ ಪೋಷಕರು ಇಂಡಿಗೋದ 6E-897 ವಿಮಾನದಲ್ಲಿ ಬೆಂಗಳೂರಿನಿಂದ ಪಾಟ್ನಾಗೆ ತೆರಳುತ್ತಿದ್ದರು. ಸುಮಾರು 7.30ರ ಹೊತ್ತಿಗೆ ಮಗುವಿಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.

    ಕೂಡಲೇ ಎಚ್ಚೆತ್ತ ವಿಮಾನ ಸಿಬ್ಬಂದಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ತುರ್ತು ಕಾರಣದಿಂದ ವಿಮಾನದ ಮಾರ್ಗವನ್ನು ಬದಲಾಯಿಸಿ, ಹೈದರಬಾದ್ ನಲ್ಲಿ ಲ್ಯಾಂಡ್ ಮಾಡಿದ್ದಾರೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಮಗುವನ್ನು ಅಂಬುಲೆನ್ಸ್ ಮೂಲಕ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಮಗುವನ್ನು ಪರೀಕ್ಷಿಸಿದ ವೈದ್ಯರು, ಈಗಾಗಲೇ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ಇಂಡಿಗೋ ವಿಮಾನಯಾನ ಅಧಿಕಾರಿಗಳು, ಮಂಗಳವಾರ ಬೆಂಗಳೂರಿನಿಂದ ಪಾಟ್ನಾಗೆ ತೆರಳುತಿದ್ದ ವಿಮಾನದಲ್ಲಿ 4 ತಿಂಗಳ ಮಗುವೊಂದು ತೀವ್ರ ಉಸಿರಾಟ ತೊಂದರೆಯಿಂದ ಬಳಲಿತ್ತು. ಹೀಗಾಗಿ ವಿಮಾನವನ್ನು ಕೂಡಲೇ ಹೈದರಾಬಾದ್‍ನಲ್ಲಿ ಲ್ಯಾಂಡ್ ಮಾಡಿ, ಆಸ್ಪತ್ರೆಗೆ ದಾಖಲಿಸಿದರೂ, ಮಗು ಮೃತಪಟ್ಟಿದೆ ಎಂದು ಸಂತಾಪ ಸೂಚಿಸಿದ್ದಾರೆ.

    ಘಟನೆ ಸಂಬಂಧ ಪೊಲೀಸರು ಸಿಆರ್ ಪಿಸಿ ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಗರ್ಭಿಣಿಯರು ಪಾಲಿಸಲೇಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

    ಗರ್ಭಿಣಿಯರು ಪಾಲಿಸಲೇಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

    ಸುನಿತಾ ಎ.ಎನ್.

    ರ್ಭಾವಸ್ಥೆ ಎಂಬುದು ಹೆಣ್ಣಿನ ಬಾಳಿನಲ್ಲಿ ಅತ್ಯಾನಂದವನ್ನುಂಟು ಮಾಡುವ ಸಮಯವಾಗಿದೆ. ಈ ಸಮಯದಲ್ಲಿ ತನ್ನ ಆರೋಗ್ಯ ಮಾತ್ರವಲ್ಲದೆ ಗರ್ಭದೊಳಗಿರುವ ಕೂಸಿನ ಕಾಳಜಿಯನ್ನು ಆಕೆ ಮಾಡಬೇಕು. ನವ ಮಾಸವೂ ಆ ಮಗುವನ್ನು ಗರ್ಭದಲ್ಲಿ ಹೊತ್ತು ತನ್ನ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಬೇಕಾಗುತ್ತದೆ. ಕೆಲವೊಂದು ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕಾಗುತ್ತದೆ.

    ಏನು ತಿನ್ನಬೇಕು? ಏನು ತಿನ್ನಬಾರದು? ಎಂಬುದಾಗಿ ಪಟ್ಟಿ ಮಾಡಿ ಆ ರೀತಿಯೇ ಸೇವಿಸಬೇಕು. ನಿಮಗಿಷ್ಟವಿದ್ದರೂ ಅದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಕೆಲವು ಆಹಾರಗಳನ್ನು ಕೆಲವೊಂದು ಚಟುವಟಿಕೆಗಳನ್ನು ನೀವು ಮಾಡಲೇಬಾರದು. ವೈದ್ಯರ ಸಲಹೆಯನ್ನು ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ಪಡೆದುಕೊಳ್ಳುತ್ತಿರಬೇಕಾಗುತ್ತದೆ.

    ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿಮಗೆ ತಿಳಿಯದಂತೆ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತಿರುತ್ತವೆ. ಈ ಸಮಯದಲ್ಲಿ ಮನೆಯ ಇತರ ಸದಸ್ಯರುಗಳಿಗಿಂತ ಹೆಚ್ಚಾಗಿ ನೀವು ನಿಮ್ಮ ಗರ್ಭದೊಳಗಿರುವ ಕಂದನಿಗೆ ಹೆಚ್ಚಿನ ಅಸ್ಥೆ ಕಾಳಜಿಯನ್ನು ನೀಡಬೇಕಾಗುತ್ತದೆ. ನಿಮ್ಮ ಆಹಾರದ ಕಡೆಗೆ ಗಮನ ಹರಿಸುವುದರ ಜೊತೆಗೆ ಮದ್ಯಪಾನ, ಧೂಮಪಾನ, ಹೆಚ್ಚಿನ ಕೆಫೀನ್ ಅಂಶಗಳ ಸೇವನೆಯನ್ನು ನೀವು ತ್ಯಜಿಸಬೇಕಾಗುತ್ತದೆ. ಇದರೊಂದಿಗೆ ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ನೀವು ಮಾಡುತ್ತಿದ್ದಲ್ಲಿ ಅದಕ್ಕೆಲ್ಲಾ ಪೂರ್ಣ ವಿರಾಮ ಇಡುವ ಸಮಯ ಇದಾಗಿದೆ. ಹೀಗಾಗಿ ಇಲ್ಲಿ ನಿಮ್ಮ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ನೀವು ಏನು ಮಾಡಬೇಕು ಏನು ಮಾಡಬಾರದು ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಗರ್ಭಿಣಿಯರು ಸೇವಿಸಬೇಕಾದ 10 ಸಸ್ಯಹಾರಿ ಆಹಾರ

    ಮಗುವಿನ ಉತ್ತಮ ಆರೋಗ್ಯಕ್ಕಾಗಿ ಏನು ಮಾಡಬೇಕು?

    1. ಸಾಹಸ ಕ್ರಿಯೆಗಳಲ್ಲಿ ಭಾಗವಹಿಸುವುದು ಅಮ್ಯೂಸ್‍ಮೆಂಟ್ ಪಾರ್ಕ್ ಗಳಲ್ಲಿ ಸಾಹಸ ಕ್ರೀಡೆಗಳು, ಏರುವುದು, ಹತ್ತುವುದು, ನೀರಾಟ ಮೊದಲಾದ ಚಟುವಟಿಕೆಗಳಿರುತ್ತವೆ. ನಿಮ್ಮ ಗರ್ಭಾವಸ್ಥೆಯಲ್ಲಿ ಇಂತಹ ಕ್ರಿಯೆಗಳನ್ನು ನೀವು ಮಾಡಲೇಬಾರದು. ರೋಲರ್ ಕೋಸ್ಟರ್ ಸವಾರಿ, ನೀರಿನಾಟ ಮತ್ತು ಒಮ್ಮೆಲೆ ನಿಲ್ಲುವಿಕೆಗಳನ್ನು ಒಳಗೊಂಡಿರುವ ಚಟುವಟಿಕೆಗಳನ್ನು ಮಾಡಬೇಡಿ. ಇದರಿಂದ ಗರ್ಭಪಾತ ಅಥವಾ ನಿಮ್ಮ ಮಗುವಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

    2. ಕ್ರೀಡೆಗಳಲ್ಲಿ ಭಾಗವಹಿಸದಿರಿ ಎಲ್ಲಾ ರೀತಿಯ ಕ್ರೀಡೆಗಳು ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚು ಹಾನಿಕಾರಕವಾಗಿರುತ್ತವೆ. ಕ್ರೀಡೆಗಳಲ್ಲಿ ಭಾಗವಹಿಸದಿರಿ. ಫುಟ್‍ಬಾಲ್, ಕ್ರಿಕೆಟ್ ಮತ್ತು ವಾಲಿಬಾಲ್‍ನಂತಹ ಕ್ರೀಡೆಗಳನ್ನು ಗರ್ಭಾವಸ್ಥೆಯಲ್ಲಿ ಆಡಲೇಬಾರದು.

    3. ಸೈಕಲ್ ಸವಾರಿ ಮಾಡಬೇಡಿ. ಮೂರನೇ ತ್ರೈಮಾಸಿಕದಲ್ಲಿ ನಿಮಗೆ ಸೈಕಲ್ ಸವಾರಿಯ ಹುಚ್ಚಿದ್ದರೂ ಈ ಕ್ರಿಯೆಗೆ ಇಳಿಯಬೇಡಿ. ಸೈಕಲ್ ಸವಾರಿ ಮಾಡುವಾಗ ಸೈಕಲ್ ನಿರ್ವಹಣೆಯನ್ನು ಮಾಡುವುದು ಗರ್ಭಕ್ಕೆ ದುಷ್ಪರಿಣಾಮವನ್ನುಂಟು ಮಾಡಬಹುದು. ಅದಲ್ಲದೆ ನೀವು ನಿಯಂತ್ರಣ ತಪ್ಪಿ ಕೆಳಕ್ಕೆ ಬೀಳುವ ಸಾಧ್ಯತೆ ಕೂಡ ಇರುತ್ತದೆ.

    5. ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ. ಗರ್ಭಾವಸ್ಥೆಯಲ್ಲಿ ಸಕ್ರಿಯರಾಗಿರುವುದು ಒಳ್ಳೆಯ ವಿಷಯವೇ. ಆದರೆ ಈ ಸಮಯದಲ್ಲಿ ಯಾವುದೇ ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ. ಹೊಟ್ಟೆಯ ಮೇಲೆ ಮಲಗಿ ಮಾಡುವ ವ್ಯಾಯಾಮಗಳನ್ನು ಅನುಸರಿಸದಿರಿ. ಹೆಚ್ಚು ನೋವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.

    6. ಬಿಸಿ ಬಿಸಿ ನೀರಿನ ಸ್ನಾನ ಮಾಡದಿರಿ. ಹಾಟ್ ಟಬ್‍ನಲ್ಲಿ ಸ್ನಾನ ಮಾಡುವುದು ಅನಾರೋಗ್ಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಮಗುವಿನ ಆರೋಗ್ಯದ ಮೇಲೆ ಇದು ಹಾನಿಯನ್ನುಂಟು ಮಾಡಬಹುದು. ಸೌನಾ ಅಥವಾ ಹಾಟ್ ಬಾತ್ ನಿಮ್ಮ ಆರೋಗ್ಯದ ಮೇಲೆ ಹಾನಿಯನ್ನು ಉಂಟು ಮಾಡಿ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಉಗುರು ಬೆಚ್ಚಗಿನ ನೀರಿನ ಸ್ನಾನ ಉತ್ತಮ.

    7. ಜಾಗಿಂಗ್ ಬೇಡ ಎರಡನೆಯ ಮತ್ತು ಮೂರನೆಯ ಮಾಸಿಕದಲ್ಲಿ ಓಡುವುದು, ನೆಗೆಯುವುದು ಮೊದಲಾದ ಕ್ರಿಯೆಗಳನ್ನು ಮಾಡಬೇಡಿ. ಓಟದಲ್ಲಿ ಹೆಚ್ಚಿನ ನಿಯಂತ್ರಣ ಬೇಕಾಗಿರುತ್ತದೆ ಈ ಸಮಯದಲ್ಲಿ ನಮ್ಮ ದೇಹ ಒಗ್ಗುವುದಿಲ್ಲ. ಆದ್ದರಿಂದ ಓಡುವುದನ್ನು ಮಾಡದಿರಿ. ಇದರಿಂದ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.

    8. ಯೋಗ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಹಾಗೆಂದ ಮಾತ್ರಕ್ಕೆ ಯೋಗದಲ್ಲಿ ಕಷ್ಟದ ಭಂಗಿಗಳನ್ನು ಅಭ್ಯಸಿಸಬೇಡಿ. ಗರ್ಭಾವಸ್ಥೆಯಲ್ಲಿ ನೀವು ಯೋಗವನ್ನು ಮಾಡದಿರಿ. ಆದರೆ ಕಷ್ಟವಾಗಿರುವ ಭಂಗಿಗಳನ್ನು ಮಾಡದಿರಿ.

    9. ಮನೆಯ ಸ್ವಚ್ಛತೆ ಮಾಡದಿರಿ. ಗರ್ಭಾವಸ್ಥೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುವುದು ಸರಳ ಹೆರಿಗೆಗೆ ಅನುಕೂಲವಾಗಿರುತ್ತದೆ. ಆದರೆ ಮನೆಗೆಲಸ ಮಾಡುವಾಗ ಎತ್ತುವುದು, ಎಳೆಯುವುದು ಮೊದಲಾದ ಕೆಲಸಗಳನ್ನು ಮಾಡದಿರಿ. ಮನೆಯ ಇತರ ಸದಸ್ಯರು ಈ ಕೆಲಸಗಳನ್ನು ಮಾಡುತ್ತಾರೆ. ನೀವು ಆದಷ್ಟು ನಿಮ್ಮ ಆರೋಗ್ಯಕ್ಕೆ ಹೆಚ್ಚು ಗಮನ ನೀಡಬೇಕು. ಅದರಲ್ಲೂ ಮನೆಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಅತಿ ಹೆಚ್ಚಾಗಿ ಬಗ್ಗುವಂತಹ ಕೆಲಸಗಳನ್ನು ಮಾಡಕೂಡದು. ಏಕೆಂದರೆ ಈ ಪರಿ ಬಗ್ಗುವುದರಿಂದ (sciatic nerve) ಅಥವಾ ಬೆನ್ನುಮೂಳೆಯ ಕೆಳಭಾಗದಿಂದ ಕಾಲಿಗೆ ಧಾವಿಸುವ ನರದ ಮೇಲೆ ಹೆಚ್ಚಿನ ಒತ್ತಡ ಬಿದ್ದು ಈ ನರವನ್ನು ಘಾಸಿಗೊಳಿಸಬಹುದು.

    10. ಕೆಲವರಿಗೆ ಕುದುರೆ ಸವಾರಿ ಮಾಡುವ ಅಭ್ಯಾಸವಿರುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಕುದುರೆ ಸವಾರಿ ಮಾಡುವುದು ನಿಮ್ಮ ಗರ್ಭಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚು.

    11. ಹೈಕಿಂಗ್ ನಮ್ಮ ದೇಹಕ್ಕೆ ಉತ್ತಮ ಚಟುವಕೆಯನ್ನು ನೀಡುವ ಕ್ರಿಯೆಯಾಗಿದೆ ಹೈಕಿಂಗ್. ಆದರೆ ಹೈಕಿಂಗ್ ಸಮಯದಲ್ಲಿ ನೀವು ಬೀಳುವ, ಏಟು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ನಿಮ್ಮ ಮಗುವಿಗೆ ಹಾನಿಯುಂಟಾಗುವುದು ಹೆಚ್ಚು.

    12. ಗುಡಿಸುವುದು, ಬಟ್ಟೆ ಒಣಗಿಸುವುದು ಇವುಗಳನ್ನೆಲ್ಲಾ ಮಾಡಬೇಡಿ. ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಗರ್ಭಾವಸ್ಥೆಯಲ್ಲಿ ದೇಹದ ಪ್ರಮುಖ ಗಂಟುಗಳು ಮತ್ತು ಮಡಚುವ ಮೂಳೆಗಳ ಭಾಗಗಳು ಕೊಂಚ ಮೆತ್ತಗಾಗುತ್ತವೆ. ಆದ್ದರಿಂದ ಇತರ ಸಮಯದಲ್ಲಿ ಸುಲಭವಾಗುತ್ತಿದ್ದ ಕೆಲಸಗಳು ಈಗ ಕಷ್ಟವಾಗುತ್ತವೆ. ಆದ್ದರಿಂದ ಈ ಕೆಲಸಗಳಿಗೆಲ್ಲಾ ಮನೆಯವರ ಅಥವಾ ಕೆಲಸದವರ ಸಹಾಯ ಪಡೆಯುವುದು ಒಳ್ಳೆಯದು. ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಮೊದಲಾದ ಕೆಲಸಗಳಿಗೆ ಸಹಾಯ ಪಡೆದುಕೊಳ್ಳುವುದೇ ಜಾಣತನವಾಗಿದೆ.

     

    13. ಬೆಕ್ಕಿನ ಸಂಗ ಬಿಟ್ಟು ಬಿಡಿ! ಒಂದು ವೇಳೆ ನಿಮ್ಮ ಮನೆಯಲ್ಲಿ ಸಾಕಿರುವ ಬೆಕ್ಕು ಇದ್ದರೆ ಬೆಕ್ಕಿನ ಸಂಗ ಈ ಸಮಯದಲ್ಲಿ ಸಲ್ಲದು. ವಿಶೇಷವಾಗಿ ಬೆಕ್ಕಿನ ಮಲವನ್ನು ಸ್ವಚ್ಛಗೊಳಿಸುವುದಿರಲಿ, ಬಳಿಗೂ ಸುಳಿಯಕೂಡದು. ಏಕೆಂದರೆ ಇದರಲ್ಲಿ ಕೆಲವು ಪರಾವಲಂಬಿ ಕ್ರಿಮಿಗಳಿದ್ದು ಗರ್ಭಿಣಿಗೆ ಮಾರಕವಾಗುತ್ತವೆ. ಅಷ್ಟೇ ಅಲ್ಲ, ಬೆಕ್ಕಿನ ಕೂದಲು ಯಾವುದೇ ಕಾರಣಕ್ಕೂ ಆಹಾರ ಅಥವಾ ನೀರಿನ ಮೂಲಕ ದೇಹ ಪ್ರವೇಶಿಸಬಾರದು. ಇದು ಭಾರೀ ಅಲರ್ಜಿಕಾರಕವಾಗಿದ್ದು ಗರ್ಭಿಣಿಯ ಆರೋಗ್ಯವನ್ನು ಕೆಡಿಸಬಹುದು.

    ಧ್ಯಾನ ಮಾಡಿ
    * ನಿಮಗೆ ಆರಾಮವೆನಿಸುವ ಭಂಗಿಯಲ್ಲಿ ಚಕ್ಕಲೆಮಕ್ಕಲೆ ಕುಳಿತುಕೊಳ್ಳಿ. ಆರಾಮ ಅನ್ನಿಸದಿದ್ದರೆ ಕುರ್ಚಿಯ ಮೇಲೂ ಕುಳಿತುಕೊಳ್ಳಹುದು. ಸಾಧ್ಯವಾದಷ್ಟು ಬೆನ್ನುಮೂಳೆ ನೆಟ್ಟಗೇ ಇರಲಿ.
    * ಮನಸ್ಸು ಸೆಳೆಯುವ ಯಾವುದೇ ವಸ್ತು ಎದುರಿಗಿರದಂತೆ ನೋಡಿಕೂಳ್ಳಿ. ಕಣ್ಣುಮುಚ್ಚಿಕೊಂಡು ನಿಮ್ಮ ಗಮನವನ್ನು ಒಂದು ವಿಷಯದತ್ತ ಕೇಂದ್ರೀಕರಿಸಿ.
    * ಈ ಸಮಯದಲ್ಲಿ ಕೇವಲ ಧನಾತ್ಮಕ ವಿಚಾರಗಳು ಆವರಿಸಲಿ. ಉದಾಹರಣೆಗೆ ನನಗೆ ಹುಟ್ಟಲಿರುವ ಮಗು ಉತ್ತಮ ವ್ಯಕ್ತಿಯಾಗಿದ್ದು ಸಮಾಜದಲ್ಲಿ ಮನ್ನಣೆ ಮತ್ತು ಗೌರವ ಪಡೆಯುತ್ತಾನೆ/ತ್ತಾಳೆ ಇತ್ಯಾದಿ.
    * ಪ್ರತಿದಿನ ಒಂದೇ ಸಮಯವನ್ನು ಆಯ್ದುಕೊಂಡು ಆ ಪ್ರಕಾರವೇ ಅನುಸರಿಸಿ. ಇದರಿಂದ ಹೆರಿಗೆಯ ಸಮಯದಲ್ಲಿ ಮಾತ್ರವಲ್ಲ ಮುಂದಿನ ಜೀವನದಲ್ಲಿಯೂ ಒತ್ತಡವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ.

    ಗರ್ಭಪಾತದ ಸಾಧ್ಯತೆ:
    ಗರ್ಭಾವಸ್ಥೆಯಲ್ಲಿ ಉಂಟಾಗುವ ಒತ್ತಡವು ಗರ್ಭಕೋಶದಲ್ಲಿ ರಾಸಾಯನಿಕ ಹಾನಿಯನ್ನುಂಟುಮಾಡುವುದು ಎಂದು ವೈದ್ಯರು ಹೇಳುತ್ತಾರೆ. ಒತ್ತಡ ಉಂಟಾದಾಗ ಕಾರ್ಟಿಕೋಟ್ರೋಪಿನ್ ಎನ್ನುವ ಹಾರ್ಮೋನ್ ಬಿಡುಗಡೆಯಾಗುವುದು. ಈ ಹಾರ್ಮೋನ್‍ಗಳ ಬದಲಾವಣೆಯಿಂದ ಗರ್ಭಕೋಶದಲ್ಲಿ ಅಧಿಕ ಸಂಕೋಚನವನ್ನು ಉಂಟುಮಾಡುವುದು. ಇದು ಬಹುತೇಕ ಸಂದರ್ಭದಲ್ಲಿ ಗರ್ಭವನ್ನು ಕುಗ್ಗಿಸುವುದು ಅಥವಾ ಗರ್ಭಪಾತಕ್ಕೆ ಕಾರಣವಾಗುವುದು. ಹಾಗಾಗಿ ಬಾಹ್ಯ ಪರಿಸ್ಥಿತಿ ಹೇಗೇ ಇರಲಿ, ನಿಮ್ಮ ಮಗುವಿನ ಬೆಳವಣಿಗೆ ಉತ್ತಮವಾಗಿರಬೇಕು ಎಂದು ನೀವು ಬಯಸುವುದಾದರೆ ಒತ್ತಡದಿಂದ ದೂರ ಇರಲು ಪ್ರಯತ್ನಿಸಿ. ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಹೇಗಿರಬೇಕು ಎನ್ನುವುದರ ಕುರಿತು ಚಿಂತಿಸಿ.

    ಭ್ರೂಣದ ಮೆದುಳು ಬೆಳವಣಿಗೆ:
    ತಾಯಿಯಲ್ಲಾಗುವ ಒತ್ತಡವು ಮಗುವಿನ ಮಿದುಳು ಬೆಳವಣಿಗೆಯ ಮೇಲೆ ನೇರವಾದ ಪ್ರಭಾವ ಉಂಟಾಗುವುದು ಎಂದು ವೈದ್ಯರು ಹೇಳುತ್ತಾರೆ. ಇದು ಮಗುವಿನ ಮೇಲೆ ದೀರ್ಘ ಕಾಲದ ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಮಗುವಿನ ಮೆದುಳಿನ ಮೇಲೆ ಉಂಟಾದ ಪ್ರಭಾವಗಳು ಮಗು ಹುಟ್ಟಿದ ತಕ್ಷಣ ತಿಳಿಯದು. ದಿನಕಳೆದಂತೆ ಮಗುವಿನ ಬೆಳವಣಿಗೆ ನಡೆಯುವುದು. ಆಗ ಸಮಸ್ಯೆಗಳನ್ನು ಗುರುತಿಸಬಹುದು. ಇಂತಹ ಮಕ್ಕಳಲ್ಲಿ ಅಧಿಕ ರಕ್ತದ ಒತ್ತಡದಂತಹ ಅಪಾಯ ಉಂಟಾಗಬಹುದು. ಮಕ್ಕಳಲ್ಲಿ ಮಾನಸಿಕ ಬದಲಾವಣೆಗಳು ಚಿಂತನೀಯ ರೀತಿಯಲ್ಲಿ ಉಂಟಾಗುವುದು. ಅಲ್ಲದೆ ಮಕ್ಕಳು ಬೆಳವಣಿಗೆ ಹೊಂದಿದ ನಂತರ ಜೀವನದಲ್ಲೂ ಬಹುಬೇಗ ಅಧಿಕ ಒತ್ತಡಕ್ಕೆ ಒಳಗಾಗುವ ಮಾನಸಿಕ ಶಕ್ತಿಯನ್ನು ಪಡೆದುಕೊಳ್ಳುವರು.

  • ಸಿಲಿಕಾನ್ ಸಿಟಿಯ `ಅಮ್ಮಂದಿರಿಗೆ’ ಇದು ಶಾಕಿಂಗ್ ಸುದ್ದಿ!

    ಸಿಲಿಕಾನ್ ಸಿಟಿಯ `ಅಮ್ಮಂದಿರಿಗೆ’ ಇದು ಶಾಕಿಂಗ್ ಸುದ್ದಿ!

    ಬೆಂಗಳೂರು: ನಗರದ ಅಮ್ಮಂದಿರಿಗೆ ಶಾಕಿಂಗ್ ಸುದ್ದಿ. ತಾಯ್ತನದ ಸಂಭ್ರಮದಲ್ಲಿರುವವರಿಗೆ ಅರಗಿಸಿಕೊಳ್ಳಲಾರದ ಕಹಿಯನ್ನು ವೈದ್ಯಲೋಕ ಹೊರಹಾಕಿದೆ.

    ನವಮಾಸ ಕಂದಮ್ಮಗಳು ಗರ್ಭದಲ್ಲಿ ನಿಲ್ಲುತ್ತಿಲ್ಲ, ಗ್ರಾಮೀಣ ಭಾಗಕ್ಕಿಂತ ಸಿಟಿಭಾಗದಲ್ಲಿಯೇ ಅವಧಿಪೂರ್ವ ಹೆರಿಗೆ ಪ್ರಕರಣ ಹೆಚ್ಚಾಗುತ್ತಿದೆ. ಅವಧಿ ಪೂರ್ವ ಹುಟ್ಟಿದ ಮಕ್ಕಳು ಕೇವಲ 600 ರಿಂದ 800 ಗ್ರಾಂ ಇರೋದ್ರಿಂದ ಬದುಕುವ ಸಾಧ್ಯತೆಯೂ ಕಡಿಮೆ. ಹೀಗಾಗಿ ಆತ್ಯಾಧುನಿಕ ತಂತ್ರಜ್ಞಾನಗಳು ಇದ್ರೂ ಖರ್ಚುವೆಚ್ಚವನ್ನು ಭರಿಸೋದು ಕಷ್ಟ ಅನ್ನುವಂತಾಗಿದೆ. ಇದನ್ನೂ ಓದಿ: 375 ಗ್ರಾಂ ತೂಕದ ಅತೀ ಚಿಕ್ಕ ಮಗು ಜನನ!

    ಮಹಿಳೆಯರಲ್ಲಿ ಹೆಚ್ಚುತ್ತಿರುವ ಧೂಮಪಾನ, ಮದ್ಯಪಾನ, ಒತ್ತಡ ಸೇರಿದಂತೆ ಬದಲಾದ ಜೀವನ ಶೈಲಿ ಈ ಅವಧಿಪೂರ್ವ ಹೆರಿಗೆಗೆ ಕಾರಣವಾಗಿದೆ. ಹತ್ತರಲ್ಲಿ ಎರಡರಿಂದ ಮೂರು ಹೆರಿಗೆ ಅವಧಿಪೂರ್ವವೇ ಆಗುತ್ತಿದ್ದು, ವೈದ್ಯಲೋಕಕ್ಕೆ ಕೊಂಚ ಸವಾಲಾಗಿದೆ ಅಂತ ಫೋರ್ಟಿಸ್ ಫೆಮಿನಾ ಆಸ್ಪತ್ರೆ ಮುಖ್ಯಸ್ಥೆ ಡಾ ಪ್ರತಿಮಾ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • 375 ಗ್ರಾಂ ತೂಕದ ಅತೀ ಚಿಕ್ಕ ಮಗು ಜನನ!

    375 ಗ್ರಾಂ ತೂಕದ ಅತೀ ಚಿಕ್ಕ ಮಗು ಜನನ!

    ಹೈದರಾಬಾದ್: ನಗರದಲ್ಲಿ ಆಗ್ನೇಯ ಏಷ್ಯಾದ 375 ಗ್ರಾಂ ತೂಕವುಳ್ಳ ಮಗುವಿಗೆ ತಾಯಿ ಜನ್ಮ ನೀಡಿದ್ದಾರೆ.

    ಹೈದರಾಬಾದ್‍ನಲ್ಲಿರುವ ರೈನ್‍ಬೋ ಆಸ್ಪತ್ರೆಯಲ್ಲಿ 375 ಗ್ರಾಂ ಮಗು ಜನನವಾಗಿದೆ. ವೈದ್ಯರು ಈ ಮಗುವಿನ ತೂಕ ನೋಡಿ ದಂಗಾಗಿದ್ದಾರೆ. ಅಲ್ಲದೇ ಕಡಿಮೆ ತೂಕವಿರುವ ಮಗು ಆರೋಗ್ಯವಾಗಿ ಇರೋದನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದಾರೆ.

    ನಿಖಿತಾ ಹಾಗೂ ಸೌರವ್ ದಂಪತಿಗೆ ಈ ಮಗು ಜನಿಸಿದೆ. ನಿಖಿತಾ ಮೂಲತಃ ಛತ್ತಿಸ್‍ಗಢದವರಾಗಿದ್ದು, ಮಗುವಿನ ತಾಯಿ ನಿಖಿತಾ ಹಾಗೂ ಮಗಳು ಚೆರಿ ಆರೋಗ್ಯಕರವಾಗಿದ್ದಾರೆ ಎಂದು ವರದಿಯಾಗಿದೆ. ಡೆಲಿವರಿ ಸಮಯದಲ್ಲಿ ವೈದ್ಯರು ಈ ಮಗುವನ್ನು ನೋಡಿ ಒಂದು ಕ್ಷಣ ದಂಗಾದರು. ನಂತರ ಮಗು ಆರೋಗ್ಯಕರವಾಗಿದೆ ಎಂದು ತಿಳಿದು ವೈದ್ಯರು ನಿಟ್ಟಸಿರು ಬಿಟ್ಟಿದ್ದಾರೆ.ಸದ್ಯ ಈ ಹೆಣ್ಣು ಮಗು ಯಾವುದೇ ತೊಂದರೆ ಇಲ್ಲದೇ ಸುಖಕರವಾಗಿದೆ ಎಂದು ಹೇಳಲಾಗಿದೆ.

    ಸೌರವ್ ತನ್ನ ಅತ್ಯಂತ ಚಿಕ್ಕ ಮಗುವನ್ನು ಕಂಡು ಸಾಕಷ್ಟು ಖುಷಿಯಾಗಿದ್ದಾರೆ. ಈ ಮಗುವನ್ನು ನಿಖಿತಾ 25 ವಾರದೊಳಗೆ ಜನ್ಮ ನೀಡಿದ್ದಾರೆ. ನಾಲ್ಕು ತಿಂಗಳು ಮೊದಲೇ ಮಗು ಜನಿಸಿದ್ದು, 20 ಸೆ.ಮೀ ಉದ್ದವಿದೆ ಎಂದು ರೈನ್‍ಬೋ ಆಸ್ಪತ್ರೆಯ ಚೇರ್‍ಮೆನ್ ಹಾಗೂ ಎಂಡಿ ರಮೇಶ್ ಕಂಚ್ರಾಲಾ ತಿಳಿಸಿದ್ದಾರೆ.

    ಈ ಹಿಂದೆ ಮುಂಬೈನಲ್ಲಿ ಭಾರತದ ಅತ್ಯಂತ ಚಿಕ್ಕ ಮಗು ಜನಿಸಿತ್ತು. ಆ ಮಗುವಿನ ಹೆಸರು ನಿರ್ವಾನ್ ಆಗಿದ್ದು, ಮುಂಬೈನ ಸೂರ್ಯ ಆಸ್ಪತ್ರೆಯಲ್ಲಿ 5 ತಿಂಗಳಿಗೆ ಜನ್ಮ ಪಡೆದಿತ್ತು. ಮಗುವಿನ ತಾಯಿ ಗರ್ಭವತಿ ಆಗಿ 22ನೇ ವಾರದಲ್ಲಿ ಅಂದರೆ ಮೇ 12, 2017ರಂದು ಜನ್ಮ ನೀಡಿದ್ದರು. ಈ ಮಗು 610 ಗ್ರಾಂ ತೂಕವಿತ್ತು.

  • 21 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾದ್ರೂ ಸೋರುವ ಕಟ್ಟಡದಲ್ಲೇ ಶಿಶು, ಬಾಣಂತಿಯರು!

    21 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾದ್ರೂ ಸೋರುವ ಕಟ್ಟಡದಲ್ಲೇ ಶಿಶು, ಬಾಣಂತಿಯರು!

    ಮಂಗಳೂರು: ನಗರದ ಸರ್ಕಾರಿ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳು ಮಳೆಗಾಲದಲ್ಲಿ ಪಡುವ ದುಸ್ಥಿತಿ ಯಾರಿಗೂ ಬೇಡ.

    ಹಳೆ ಆಸ್ಪತ್ರೆ ಎದುರಲ್ಲೇ ಹೊಸ ಆಸ್ಪತ್ರೆ ಕಟ್ಟಡ ರೆಡಿಯಾಗಿದೆ. ಎಂಆರ್ ಪಿಎಲ್ ಸಹಯೋಗದಲ್ಲಿ 21 ಕೋಟಿ ವೆಚ್ಚದಲ್ಲಿ 290 ಹಾಸಿಗೆ ಸಾಮಥ್ರ್ಯದ ಆರು ಅಂತಸ್ತಿನ ಬೃಹತ್ ಆಸ್ಪತ್ರೆ ತಲೆಯೆತ್ತಿ ನಿಂತಿದೆ. ಕಟ್ಟಡದ ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಕಳೆದಿದೆ. ಆದರೆ ಇನ್ನು ಉದ್ಘಾಟನೆ ಭಾಗ್ಯ ಮಾತ್ರ ದೊರೆತಿಲ್ಲ. ಅಲ್ಲದೇ ಆಸ್ಪತ್ರೆಗೆ ಅಗತ್ಯವುಳ್ಳ ಸಾಮಾಗ್ರಿಗಳೂ ಪೂರೈಕೆಯಾಗಿಲ್ಲ. ಹೀಗಾಗಿ ಬಾಣಂತಿಯರು ಸೇರಿದಂತೆ ಈಗತಾನೆ ಹುಟ್ಟಿದ ಶಿಶುಗಳನ್ನು ಹಳೆ ಕಟ್ಟಡದ ನೆಲದಲ್ಲಿಯೇ ಹಾಸಿಗೆ ಹಾಸಿಕೊಂಡು ಮಲಗಿಸಿದ್ದಾರೆ.

    ಒಂದುಕಡೆ ಸೋರುವ ಕಟ್ಟಡ, ಮತೊಂದೆಡೆ ಮಳೆ ನೀರಿನ ಹೊಡೆತ, ಸೊಳ್ಳೆ ಕಡಿತ ಇವೆಲ್ಲವನ್ನೂ ಸಹಿಸಿಕೊಂಡು ಬಡ ರೋಗಿಗಳು ಕಾಲ ಕಳೆಯಬೇಕು. ಬಾಣಂತಿಯರಿಗೆ ಯಾವುದೇ ಕಾರಣಕ್ಕೂ ಮಳೆಯ ಹೊಡೆತ ತಾಗದಂತೆ ಜಾಗ್ರತೆ ವಹಿಸಬೇಕು. ಆದರೆ ಈ ಆಸ್ಪತ್ರೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೊಸ ಆಸ್ಪತ್ರೆ ಕಟ್ಟಡ ರೆಡಿಯಾಗಿದ್ರೂ, ಇನ್ನೂ ಸ್ಥಳಾಂತರ ಮಾಡಿಲ್ಲ.

    ಹಳೆಯ ಹಂಚಿನ ಕಟ್ಟಡದಲ್ಲಿ ಮಳೆಯ ಹೊಡೆತದ ಮಧ್ಯೆಯೇ ಬಡ ರೋಗಿಗಳನ್ನು ಸತಾಯಿಸುತ್ತಿದ್ದಾರೆ. ಹಳೆ ಕಟ್ಟಡದ ಒಂದು ಭಾಗದಲ್ಲಂತು ಮಳೆಗೆ ಅಡ್ಡಲಾಗಿ ಟರ್ಪಾಲ್ ಹೊದಿಕೆ ಹಾಕಿದ್ದು, ಒಳಭಾಗದಲ್ಲಿ ಬಾಣಂತಿಯರ ಶುಶ್ರೂಷೆ ಹೇಗಿರುತ್ತೋ ಗೊತ್ತಿಲ್ಲ. ಇದಲ್ಲದೆ ಸಿಸೇರಿಯನ್ ಆದವರೂ ಇದೇ ಶೀತ ಕಾರುವ ನೆಲದಲ್ಲಿ ದಿನ ದೂಡವ ಪರಿಸ್ಥತಿ ಎದುರಾಗಿದೆ.

  • ಪೊದೆ ಬಳಿ ಎಸೆದ ಸ್ಥಿತಿಯಲ್ಲಿ 15 ದಿನಗಳ ನವಜಾತ ಶಿಶು ಪತ್ತೆ

    ಪೊದೆ ಬಳಿ ಎಸೆದ ಸ್ಥಿತಿಯಲ್ಲಿ 15 ದಿನಗಳ ನವಜಾತ ಶಿಶು ಪತ್ತೆ

    ಬೆಂಗಳೂರು: ಸುಮಾರು 15 ದಿನಗಳ ಹೆಣ್ಣು ಮಗುವೊಂದನ್ನು ರಸ್ತೆಯ ಬದಿಯ ಪೊದೆಯಲ್ಲಿ ಎಸೆದ ಸ್ಥಿತಿಯಲ್ಲಿ ಆನೇಕಲ್ ತಾಲೂಕಿನ ಜಿಗಳ ಕ್ರಾಸ್ ಪತ್ತೆಯಾಗಿದೆ.

    ಇಂದು ಬೆಳಗ್ಗೆ ಮರದ ಪೊದೆಯಲ್ಲಿ ಮಗುವೊಂದು ಪತ್ತೆಯಾಗಿದೆ. ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಸ್ಥಳೀಯರು ಮಗುವಿನ ಅಳು ಕೇಳಿ, ಕೂಡಲೇ ಅಕ್ಕ-ಪಕ್ಕದಲ್ಲಿ ಹುಡುಕಿದ್ದಾರೆ. ಈ ವೇಳೆ ಮರದ ಪೊದೆಯೊಂದರ ಬಳಿ ಸುಮಾರು 15 ದಿನಗಳ ಹೆಣ್ಣುಮಗು ಸಿಕ್ಕಿದೆ. ಕೂಡಲೇ ಸ್ಥಳೀಯರು ಅತ್ತಿಬೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ರಕ್ಷಣೆ ಮಾಡಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಮಗುವಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಸದ್ಯ ಮಗುವಿಗೆ ಯಾವುದೇ ಪ್ರಾಣಾಪಾಯ ತೊಂದರೆ ಇಲ್ಲವೆಂದು ವೈದ್ಯರು ತಿಳಿಸಿದ್ದು, ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪತ್ನಿ ಮೇಲಿನ ಕೋಪಕ್ಕೆ 3 ವರ್ಷದ ಮಗುವನ್ನು ಆಟೋಗೆ ಬಡಿದ- ವಿಡಿಯೋ ನೋಡಿ

    ಪತ್ನಿ ಮೇಲಿನ ಕೋಪಕ್ಕೆ 3 ವರ್ಷದ ಮಗುವನ್ನು ಆಟೋಗೆ ಬಡಿದ- ವಿಡಿಯೋ ನೋಡಿ

    ಹೈದರಾಬಾದ್: ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಪತ್ನಿ ಮೇಲಿನ ಕೋಪಕ್ಕೆ ಮೂರು ವರ್ಷದ ಮಗುವನ್ನು ಆಟೋಗೆ ಬಡಿದು ತನ್ನ ಕೋಪ ತೀರಿಸಿಕೊಂಡಿರುವ ಅಮಾನವೀಯ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ಆಟೋ ರಿಕ್ಷಾ ಚಾಲಕನಾಗಿರುವ ಶಿವ ಗೌಡರ್(40) ಮಗುವನ್ನು ಆಟೋಗೆ ಬಡಿದು ಆಕ್ರೋಶ ವ್ಯಕ್ತಪಡಿಸಿದ ತಂದೆಯಾಗಿದ್ದಾನೆ. ಘಟನೆ ಬಳಿಕ ತಂದೆ ತಲೆಮರೆಸಿಕೊಂಡಿದ್ದಾನೆ.

    ಶಿವ ಗೌಡರ್ ಕುಡಿದ ಮತ್ತಿನಲ್ಲಿ ಭಾನುವಾರ ರಾತ್ರಿ ತನ್ನ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ಈ ವೇಳೆ ಪತ್ನಿಯು ಸ್ಥಳದಲ್ಲಿದ್ದ ಗಸ್ತು ಪೊಲೀಸರಿಗೆ ತಿಳಿಸಿದ್ದಾಳೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಶಿವಗೌಡರ್ ಗೆ ಎಚ್ಚರಿಸಿದ್ದಾರೆ. ಈ ವೇಳೆ ಕುಪಿತಗೊಂಡ ಅವನು ಪತ್ನಿ ಮೇಲಿನ ಕೋಪವನ್ನು ತನ್ನ ಮೂರು ವರ್ಷದ ಮಗುವನ್ನು ಆಟೋಗೆ ಎಸೆದು ತನ್ನ ಕೋಪ ತೀರಿಸಿಕೊಂಡಿದ್ದಾನೆ.

    ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಆರೋಪಿಗೆ ಬಾರಿಸಿದ್ದಾರೆ. ಅಲ್ಲದೇ ವಶಕ್ಕೆ ಪಡೆಯುವ ವೇಳೆ  ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಎಲ್ಲಾ ಘಟನೆಯನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಮಗುವನ್ನು ಆಟೋಗೆ ಬಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಯ ಮೇಲೆ ನೆಟ್ಟಿಗರು ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಘಟನೆಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡಲಾಗಿದೆ.

    ಘಟನೆ ಕುರಿತು ಮಗುವಿನ ತಾಯಿ ತನ್ನ ಪತಿಯ ವಿರುದ್ಧ ದೂರು ದಾಖಲಿಸಲು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರೇ ಸ್ವಯಂ ಪ್ರೇರಿತ ದೂರು ದಾಖಲುಮಾಡಿಕೊಂಡು ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 324 ಮತ್ತು 75ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಗುವಿನ ಮೇಲೆ ಹಲ್ಲೆ ಮಾಡಿದ ಆರೋಪಿಯ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

  • ಅಮ್ಮ ನಾನು ಬದುಕಬೇಕು, ನಿಮ್ಮನ್ನೆಲ್ಲಾ ಸಾಕಬೇಕು ಎನ್ನುವ ಬಾಲಕಿ ಹೃದಯ ಶಸ್ತ್ರಚಿಕಿತ್ಸೆಗೆ ಬೇಕಿದೆ ನೆರವು

    ಅಮ್ಮ ನಾನು ಬದುಕಬೇಕು, ನಿಮ್ಮನ್ನೆಲ್ಲಾ ಸಾಕಬೇಕು ಎನ್ನುವ ಬಾಲಕಿ ಹೃದಯ ಶಸ್ತ್ರಚಿಕಿತ್ಸೆಗೆ ಬೇಕಿದೆ ನೆರವು

    ಬೆಂಗಳೂರು: ಮಗಳಿಗೆ ಇರುವ ಆರೋಗ್ಯ ಸಮಸ್ಯೆಯಿಂದಾಗಿ ತಾಯಿ ಕಣ್ಣೀರು ಹಾಕುತ್ತಲೇ ದೇವರಿಗೆ ಮೊರೆ ಹೋಗುತ್ತಿದ್ದಾರೆ. ಈ ಕುಟುಂಬವು ನಗರದ ಎಲೆಕ್ಟ್ರಾನಿಕ್ ಸಿಟಿಯ ಕೂಡ್ಲಗೇಟ್‍ನಲ್ಲಿ ವಾಸವಾಗಿದೆ.

    13 ವರ್ಷದ ಜ್ಯೋತಿ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಜ್ಯೋತಿಗೆ ತಂದೆ ಇಲ್ಲ, ತಾಯಿ ಸೆಲ್ವಮ್ಮ ಮಾತ್ರ ಇರುವುದು. ಎಲ್ಲ ಮಕ್ಕಳಂತೆ ಶಾಲೆಗೆ ಹೋಗಿ, ಆಟ ಆಡಿ, ಪಾಠ ಕಲಿಯುವ ಆಸೆ. ಆದರೆ ಈಕೆಗೆ ಹುಟ್ಟಿನಿಂದಲೇ ಹೃದಯದಲ್ಲಿ ರಂಧ್ರವಿದೆ. ಹೀಗಾಗಿ ಉಸಿರಾಟದ ತೊಂದರೆಯಿದ್ದು ಓಡಾಡಲು, ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ.

    ಮನೆಯಲ್ಲಿ ಕಡುಬಡತನವಿದ್ದು, ತಾಯಿ ಸೆಲ್ವಮ್ಮ ಅವರಿವರ ಮನೆ ಕೆಲಸ ಮಾಡಿಕೊಂಡು ವಯಸ್ಸಾದ ತಂದೆ ತಾಯಿಯನ್ನು ಸಾಕುತ್ತಿದ್ದಾರೆ. ಜ್ಯೋತಿ ಹೃದಯದಲ್ಲಿ ರಂಧ್ರವಿರುವುದು ಗೊತ್ತಾಗಿನಿಂದ ನಿತ್ಯವೂ ಕಣ್ಣೀರಲ್ಲೆ ಕಾಲ ಕಳೆಯುತ್ತಿದ್ದಾರೆ.

    ಬಾಲಕಿ ಜ್ಯೋತಿಯ ಹೃದಯದಲ್ಲಿ ರಂಧ್ರವಿರುವುದಕ್ಕೆ ಚನ್ನೈ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿದ ಮೇಲೂ ಮಗಳು ಉಳಿಯುತ್ತಾಳೆ ಅಂತಾ ಹೇಳಲಿಕ್ಕೆ ಆಗುವುದಿಲ್ಲ. ಅಲ್ಲದೆ ದುಬಾರಿ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರಂತೆ. ಇದರಿಂದ ಭಯಗೊಂಡ ತಾಯಿ ಸೆಲ್ವಮ್ಮ ಅವರು ಸರಿಯಾದ ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ಮರುಗುತ್ತಿದ್ದಾರೆ.

    “ಅಮ್ಮ ನಾನು ಬದುಕಬೇಕು. ಓದಬೇಕು. ಓದಿ ನಿಮ್ಮನ್ನೆಲ್ಲಾ ಸಾಕಬೇಕು” ಎಂದು ಬಾಲಕಿ ಜ್ಯೋತಿ ಕಣ್ಣೀರು ಹಾಕಿ ಹೇಳುವುದನ್ನು ಕಂಡು ತಾಯಿ ಜೀವನ ಮರುಗಿದೆ. ಆದಾಗಿ ನೊಂದ ತಾಯಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ನೋಡಿ ನನ್ನ ಮಗಳಿಗೆ ಚಿಕಿತ್ಸೆ ಕೊಡಿಸಿ ಅಂತಾ ಅಳಲು ತೊಡಿಕೊಳ್ಳುತ್ತಿದ್ದಾರೆ.

    https://www.youtube.com/watch?v=pkzEJsH8wgU