Tag: Baby

  • ಕಾಶ್ಮೀರದಲ್ಲಿ ಸಾವಿನಂಚಿನಲ್ಲಿದ್ದ ತಾಯಿ, ಮಗುವಿಗೆ ರಕ್ತ ನೀಡಿ ಜೀವ ಉಳಿಸಿದ ಯೋಧ

    ಕಾಶ್ಮೀರದಲ್ಲಿ ಸಾವಿನಂಚಿನಲ್ಲಿದ್ದ ತಾಯಿ, ಮಗುವಿಗೆ ರಕ್ತ ನೀಡಿ ಜೀವ ಉಳಿಸಿದ ಯೋಧ

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕೇಂದ್ರೀಯ ಮೀಸಲು ಪಡೆಯ ಯೋಧರೊಬ್ಬರು ಇಲ್ಲಿನ ಸ್ಥಳೀಯ ಗರ್ಭಿಣಿಗೆ ರಕ್ತದಾನ ಮಾಡಿ ತಾಯಿಯೊಂದಿಗೆ ಮಗುವಿನ ಜೀವವನ್ನೂ ಉಳಿಸಿ ಎಲ್ಲರ ಮನ ಗೆದ್ದಿದ್ದಾರೆ.

    25 ವರ್ಷದ ಮಹಿಳೆಯೊಬ್ಬರಿಗೆ ಡೆಲಿವರಿ ಸಮಯದಲ್ಲಿ ಸಮಸ್ಯೆಯಾಗಿ, ಅವರ ದೇಹದಲ್ಲಿ ರಕ್ತದ ಕೊರತೆ ಉಂಟಾಗಿತ್ತು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ 53ನೇ ಬೆಟಾಲಿಯನ್‍ನ ಸಿಆರ್‌ಪಿಎಫ್ ಯೋಧ ಗೋಯಲ್ ಶೈಲೇಶ್ ಅವರು ಮಹಿಳೆಗೆ ರಕ್ತ ನೀಡಿ, ತಾಯಿ ಮತ್ತು ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.

    ಡೆಲಿವರಿ ಸಮಯದಲ್ಲಿ ಮಹಿಳೆಯ ದೇಹದಲ್ಲಿ ರಕ್ತದ ಅಭಾವ ಉಂಟಾದಾಗ ಗುಲ್‍ಶಾನ್ ನಿವಾಸಿಗಳಾದ ಆಕೆಯ ಕುಟುಂಬಸ್ಥರು ‘ಮದಾದ್ಗರ್’ ಮೂಲಕ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ. ‘ಮದಾದ್ಗರ್’ ಕಾಶ್ಮೀರದ ಜನತೆಗೆ ವೈದ್ಯಕೀಯ ತುರ್ತು ಸೇವೆ ಒದಗಿಸಲು ಸಿಆರ್‌ಪಿಎಫ್ ಸ್ಥಾಪಿಸಿದ ಸಹಾಯವಾಣಿಯಾಗಿದ್ದು, ಕರೆ ಬಂದ ತಕ್ಷಣ ಯೋಧ ಆಸ್ಪತ್ರೆಗೆ ತೆರಳಿ ಸಹಾಯ ಮಾಡಿ ಎರಡು ಜೀವಗಳಿಗೆ ಪುನರ್ಜನ್ಮ ನೀಡಿದ್ದಾರೆ.

    ಈ ಬಗ್ಗೆ ಸಿಆರ್‌ಪಿಎಫ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ ಯೋಧನಿಗೆ ಅಭಿನಂದನೆ ಅರ್ಪಿಸಿದೆ. ಇದು ರಕ್ತದ ಸಂಬಂಧ. 53ನೇ ಬೆಟಾಲಿಯನ್ ಕಾನ್‍ಸ್ಟೇಬಲ್ ಗೋಹಿಲ್ ಶೈಲೇಶ್ ಅವರು ಡೆಲಿವರಿ ಸಮಯದಲ್ಲಿ ತೊಂದರೆ ಅನಿಭವಿಸುತ್ತಿದ್ದ 25 ವರ್ಷದ ಮಹಿಳೆಗೆ ರಕ್ತದಾನ ಮಾಡಿದ್ದಾರೆ. ಅವರ ರಕ್ತವು ತಾಯಿ ಹಾಗೂ ಮಗು ಇಬ್ಬರ ಜೀವವನ್ನು ಉಳಿಸಿ ಒಂದು ಬಂಧವನ್ನು ಸೃಷ್ಟಿಸಿದೆ ಎಂದು ಬರೆದು ಯೋಧ ರಕ್ತ ನೀಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದೆ.

    ಯೋಧನ ಈ ನಿಸ್ವಾರ್ಥ ಸಹಾಯಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಯೋಧನ ಕಾರ್ಯಕ್ಕೆ ನೆಟ್ಟಿಗರು ಸಲಾಂ ಹೊಡೆಯುತ್ತಿದ್ದಾರೆ.

  • ಹಸಿವಿನಿಂದ ಅಳ್ತಿದ್ದ 3ರ ಕಂದಮ್ಮನಿಗೆ ಹಾಲಿನ ಬಾಟಲಿಯಲ್ಲಿ ಮದ್ಯ ಕುಡಿಸಿದ!

    ಹಸಿವಿನಿಂದ ಅಳ್ತಿದ್ದ 3ರ ಕಂದಮ್ಮನಿಗೆ ಹಾಲಿನ ಬಾಟಲಿಯಲ್ಲಿ ಮದ್ಯ ಕುಡಿಸಿದ!

    ನವದೆಹಲಿ: ಹಸಿವಿನಿಂದ ಅಳುತ್ತಿದ್ದ 3 ವರ್ಷದ ಪುಟ್ಟ ಮಗುವಿಗೆ ಆಕೆಯ ತಂದೆ ಹಾಲಿನ ಬಾಟಲಿಯಲ್ಲಿ ಮದ್ಯ ಹಾಕಿ ಒತ್ತಾಯಪೂರ್ವಕವಾಗಿ ಕುಡಿಸುತ್ತಿದ್ದ ಹೀನಾಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ದೆಹಲಿಯ ಪ್ರೇಮ್ ನಗರ ಪ್ರದೇಶದಲ್ಲಿ ನಡೆದಿದ್ದು, ಪುಟ್ಟ ಕಂದಮ್ಮಳನ್ನು ದೆಹಲಿಯ ಮಹಿಳಾ ಆಯೋಗದ ತಂಡ ರಕ್ಷಣೆ ಮಾಡಿದೆ. ವಿಸರ್ಜನೆಯಾದ ಮಲ-ಮೂತ್ರದಲ್ಲಿಯೇ ಮಲಗಿ ಹೊರಳಾಡುತ್ತಿದ್ದ 3 ವರ್ಷದ ಪುಟ್ಟ ಕಂದಮ್ಮ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದು, ಈಕೆಯ ಪಕ್ಕದಲ್ಲೇ ಕುಡಿದ ಮತ್ತಿನಲ್ಲಿ ತಂದೆಯೂ ಮಲಗಿದ್ದರುವುದು ಮಹಿಳಾ ಆಯೋಗದ ತಂಡ ಭೇಟಿ ನೀಡಿದಾಗ ಕಂಡುಬಂದಿದೆ.

    ಕಳೆದ ಮೂರು ದಿನಗಳಿಂದ ಪ್ರೇಮ ನಗರ ಪ್ರದೇಶದಲ್ಲಿ ಮಗು ಮಲ-ಮೂತ್ರ ಮಾಡಿಕೊಂಡು ಅದರ ಮೇಲೆಯೇ ಮಲಗುತ್ತಿದ್ದಳು. ಅಲ್ಲದೆ ತಂದೆ ಆಕೆಗೆ ಆನ್ನ-ಆಹಾರ ನೀಡುತ್ತಿರಲಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಕೂಡಲೇ ಆಯೋಗದವರು ಸ್ಥಳಕ್ಕೆ ದೌಡಾಯಿಸಿದಾಗ ರೂಮಿನಲ್ಲಿ ಮದ್ಯದ ಖಾಲಿ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿತ್ತು. ಇದರ ಮಧ್ಯೆಯೇ ತಂದೆ ವಿಪರೀತ ಕುಡಿದು ಜಗತ್ತಿನ ಪರಿವೇ ಇಲ್ಲದಂತೆ ಮಲಗಿದ್ದನು. ಹೀಗಾಗಿ ಆತನನ್ನು ಎಬ್ಬಿಸಲು ಆಯೋಗದ ಸಿಬ್ಬಂದಿ ಪ್ರಯತ್ನಿಸಿದರು. ಆದ್ರೆ ಆತ ಸಿಬ್ಬಂದಿ ಮೇಲೆ ಎಗರಾಡಿದ್ದಾನೆ.

    ಈ ವೇಳೆ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಹೀಗಾಗಿ ಸ್ಥಳಕ್ಕೆ ಬಂದ ಪೊಲೀಸರು ತಂದೆ ಹಾಗೂ ಮಗಳನ್ನು ಪ್ರೇಮ್ ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆದ್ರೆ ಇದೂವರೆಗೂ ಈ ಬಗ್ಗೆ ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂಬುದಾಗಿ ವರದಿಯಾಗಿದೆ.

    ಇತ್ತ ಸ್ಥಳೀಯರು ಮಗುವಿನ ತಂದೆ ಕೈ ಗಾಡಿ ಓಡಿಸುತ್ತಿದ್ದು, ವಿಪರೀತ ಮದ್ಯವ್ಯಸನಿಯಾಗಿದ್ದಾನೆ. ಹೀಗಾಗಿ ಆತನಿಗೆ ತನ್ನ ಮಗಳು ಎದ್ದು ಹಸಿನಿಂದ ಅಳುತ್ತಿದ್ದರೂ ಗೋಚರವೇ ಇರುವುದಿಲ್ಲ. ಅಲ್ಲದೆ ರೂಮ್ ಕೂಡ ಕೊಳಕಿನಿಂದ ಕೂಡಿದೆ. ಪುಟ್ಟ ಕಂದಮ್ಮ ವರ್ಷದ ಹಿಂದೆಯಷ್ಟೇ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಆ ಬಳಿಕ ತಂದೆ ಕುಡಿತದ ದಾಸನಾಗಿದ್ದಾನೆ ಎಂದು ಆಯೋಗದ ತಂಡಕ್ಕೆ ದೂರಿದ್ದಾರೆ.

    ಆತ ಕೋಣೆಯೊಳಗೆ ಪುಟ್ಟ ಕಂದಮ್ಮ ಒಬ್ಬಳನ್ನೇ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದನು. ಅಲ್ಲದೆ ನೆರೆಹೊರೆಯವರನ್ನು ಕೂಡ ತನ್ನ ಮನೆಗೆ ಹೋಗಲು ಬಿಡುತ್ತಿಲ್ಲ. ಅಲ್ಲದೆ ಮುಗ್ಧ ಕಂದಮ್ಮ ಹಸಿವಿನಿಂದ ಅಳುತ್ತಿದ್ದರೆ ಆತ ಹಾಲಿನ ಬಾಟಲಿಯಲ್ಲಿ ಮದ್ಯ ಹಾಕಿ ಒತ್ತಾಯಪೂರ್ವಕವಾಗಿ ಕುಡಿಸುತ್ತಿದ್ದನು ಎಂದು ದೂರಿದ್ದಾರೆ.

    ಸದ್ಯ ಮಹಿಳಾ ಆಯೋಗದವರು ಮಗುವನ್ನು ಹೊಲಸು ಕೊಠಡಿಯಿಂದ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಆಕೆಯ ಖಾಸಗಿ ಅಂಗದಲ್ಲಿ ಸೋಂಕು ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಕೆ ಗುಣಮುಖಳಾದ ಬಳಿಕ ಆಕೆಯನ್ನು ಆಶ್ರಯ ಮನೆಗೆ ಕಳುಹಿಸಲಾಗುವುದು ಎಂದು ಮಹಿಳಾಯ ಆಯೋಗದ ಸಿಬ್ಬಂದಿ ತಿಳಿಸಿದ್ದಾರೆ.

    ಈ ಎಲ್ಲಾ ಘಟನೆಯನ್ನು ಕಂಡು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ದಂಗಾಗಿದ್ದು, ಕಂದಮ್ಮನ ತಂದೆಯ ವಿರುದ್ಧ ಕ್ರಮ ಜರುಗಿಸಬೇಕೆಂದು ದೆಹಲಿ ಪೊಲೀಸರಿಗೆ ಆಗ್ರಹಿಸಿದ್ದಾರೆ.

  • ಮೊದಲ ಮಗುವಾದ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

    ಮೊದಲ ಮಗುವಾದ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

    ಢಾಕಾ: ಬಾಂಗ್ಲಾದೇಶದ ತಾಯಿಯೊಬ್ಬರು ಮೊದಲ ಮಗುವಿಗೆ ಜನ್ಮ ನೀಡಿ 26 ದಿನಕ್ಕೆ ಅವಳಿ ಮಕ್ಕಳಿಗೆ ಜನ್ಮ ನೀಡುವುದರ ಮೂಲಕ ವೈದ್ಯರಿಗೆ ಅಚ್ಚರಿ ನೀಡಿದ್ದಾರೆ.

    ಅರಿಫಾ ಸುಲ್ತಾನ(20) ಕಳೆದ ತಿಂಗಳು ನಾರ್ಮಲ್ ಡೆಲಿವರಿ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮೊದಲ ಮಗುವಿನ ಡೆಲಿವರಿ ಮಾಡುವ ವೇಳೆ ವೈದ್ಯರು ಮಹಿಳೆ ದೇಹದಲ್ಲಿ ಎರಡನೇ ಗರ್ಭಾಶಯ ಇರುವುದನ್ನು ಗಮನಿಸಿರಲಿಲ್ಲ.

    ಅರಿಫಾ ಅವರಿಗೂ ನಾನು ಅವಳಿ ಮಕ್ಕಳ ಗರ್ಭಿಣಿ ಎಂಬ ವಿಷಯ ಗೊತ್ತಿರಲಿಲ್ಲ. ಆಕೆ ಮೊದಲ ಮಗುವಿಗೆ ಜನ್ಮ ನೀಡಿ 26 ದಿನದ ಬಳಿಕ ಆಕೆಯ ಹೊಟ್ಟೆಯಲ್ಲಿದ್ದ ನೀರು ಒಡೆದಿದೆ. ಆಗ ಅರಿಫಾ ಆಸ್ಪತ್ರೆಗೆ ದಾಖಲಾದರು ಎಂದು ಸ್ತ್ರೀರೋಗ ತಜ್ಞೆ ಶೀಲಾ ಪೊದರ್ ತಿಳಿಸಿದ್ದಾರೆ.

    ಕಳೆದ ಶುಕ್ರವಾರ ಅರಿಫಾ ಆಸ್ಪತ್ರೆಗೆ ಬಂದ ತಕ್ಷಣ ವೈದ್ಯೆ ಶೀಲಾ ಸಿಸೇರಿಯನ್ ಮಾಡಿ ಅವಳಿ ಮಕ್ಕಳಾದ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹೊರತೆಗೆದಿದ್ದಾರೆ. ಮಕ್ಕಳಿಬ್ಬರು ಆರೋಗ್ಯವಾಗಿದ್ದು, ಮಂಗಳವಾರ ತಾಯಿ- ಮಕ್ಕಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ನಾನು ನನ್ನ 30 ವರ್ಷದ ವೈದ್ಯಕೀಯದ ಅನುಭವದಲ್ಲಿ ಇಂತಹ ಕೇಸ್ ನೋಡಿಲ್ಲ ಎಂದು ಜೆಸ್ಸೋರ್ ಜಿಲ್ಲಾಸ್ಪತ್ರೆಯ ವೈದ್ಯ ದಿಲೀಪ್ ರಾಯ್ ಹೇಳಿದ್ದಾರೆ. ಅಲ್ಲದೆ ಅರಿಫಾಳ ಎರಡನೇ ಗರ್ಭಧಾರಣವನ್ನು ಪತ್ತೆ ಹಚ್ಚದ ಕಾರಣ ಖುಲ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯರ ವಿರುದ್ಧ ದಿಲೀಪ್ ಕ್ರಮಕೈಗೊಂಡಿದ್ದಾರೆ.

    ನನ್ನ ಪತಿ ಕಾರ್ಮಿಕನಾಗಿದ್ದು, ಪ್ರತಿ ತಿಂಗಳು 5 ಸಾವಿರ ರೂ. ದುಡಿಯುತ್ತಾರೆ. ನನಗೆ ಮೂವರು ಮಕ್ಕಳು ಹುಟ್ಟಿರುವುದು ಸಂತೋಷ. ಆದರೆ ಅವರನ್ನು ಹೇಗೆ ನೋಡಿಕೊಳ್ಳುವುದು ಎಂಬ ಚಿಂತೆ ಶುರುವಾಗಿದೆ ಎಂದು ಅರಿಫಾ ಹೇಳಿದ್ದಾರೆ. ಅಲ್ಲಾನ ಚಮತ್ಕಾರದಿಂದ ನನ್ನ ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ನನ್ನ ಮಕ್ಕಳನ್ನು ಖುಷಿಯಾಗಿ ಇಡಲು ನಾನು ಪ್ರಯತ್ನಪಡುತ್ತೇನೆ ಎಂದು ಅರಿಫಾ ಪತಿ ಸುಮೋನ್ ಬಿಸ್ವಾಸ್ ತಿಳಿಸಿದ್ದಾರೆ.

  • ರಣಬಿಸಿಲಿಗೆ ತತ್ತರಿಸಿದ ರಾಯಚೂರು ಜಿಲ್ಲೆಯ ಜನರು

    ರಣಬಿಸಿಲಿಗೆ ತತ್ತರಿಸಿದ ರಾಯಚೂರು ಜಿಲ್ಲೆಯ ಜನರು

    ರಾಯಚೂರು: ರಾಜ್ಯದೆಲ್ಲೆಡೆ ಲೋಕಸಭಾ ಚುನಾವಣೆ ಕಾವು ರಂಗೇರಿದ್ದರೆ. ಬಿಸಿಲನಾಡು ರಾಯಚೂರಿನಲ್ಲಿ ಮಾತ್ರ ಚುನಾವಣಾ ಕಣ ಮಂಕಾದ್ರೂ ರಣಬಿಸಿಲೇ ಜಿಲ್ಲೆಯ ಜನರನ್ನು ತತ್ತರಿಸುವಂತೆ ಮಾಡಿದೆ. ಚುನಾವಣೆ ಹಿನ್ನೆಲೆ ಸರ್ಕಾರಿ ಕಚೇರಿ ಸಮಯದಲ್ಲೂ ಬದಲಾವಣೆಯಾಗದ ಹಿನ್ನೆಲೆ ಚುನಾವಣಾ ಸಿಬ್ಬಂದಿಯೂ ಬಿಸಿಲಿಗೆ ನಲುಗಿಹೋಗಿದ್ದಾರೆ. ಇನ್ನೂ ಸಾರ್ವಜನಿಕರಂತೂ ಮನೆಯಿಂದ ಹೊರಬರಲು ಹೆದರುವಂತಾಗಿದ್ದು, ಮಣ್ಣಿನ ಗಡಿಗೆ, ಜ್ಯೂಸ್ ವ್ಯಾಪಾರ ಜೋರಾಗಿ ನಡೆದಿದೆ.

    ಬಿಸಿಲನಾಡು ರಾಯಚೂರು ಈಗ ಅಕ್ಷರಶಃ ರಣಬಿಸಿಲಿನಿಂದಾಗಿ ಬೆಂದು ಹೋಗುತ್ತಿದೆ. ಚುನಾವಣೆಯ ಕಾವು ಜಿಲ್ಲೆಯಲ್ಲಿ ಕಾಣದಿದ್ದರೂ ಕಳೆದ ವರ್ಷಕ್ಕಿಂತಲೂ ಈ ಬಾರಿ ಅತೀ ಹೆಚ್ಚು ಬಿಸಿಲು ದಾಖಲಾಗುವ ಲಕ್ಷಣಗಳಿದ್ದು ಜನ ತತ್ತರಿಸಿ ಹೋಗಿದ್ದಾರೆ. ಬಿರು ಬೇಸಿಗೆಯಲ್ಲೇ ಲೋಕಸಭಾ ಚುನಾವಣೆ ಬಂದಿರುವುದು ರಾಯಚೂರಿನ ಸರ್ಕಾರಿ ನೌಕರರಿಗಂತೂ ಹೇಳತೀರದ ಕಷ್ಟತಂದಿದೆ. ಯಾಕಂದ್ರೆ ಬೇಸಿಗೆ ಆರಂಭದಲ್ಲೇ ರಣಬಿಸಿಲು ಬಂದಿದ್ದು, ಮತದಾನ ವೇಳೆಗೆ ಅದಿನ್ನೆಷ್ಟು ತಾಪಮಾನ ದಾಖಲಾಗಿರುತ್ತದೋ ಗೊತ್ತಿಲ್ಲ.

    ಈಗಾಗಲೇ 39 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಮಧ್ಯಾಹ್ನ ಹೊರಗಡೆ ಬರುವುದೇ ಕಷ್ಟವಾಗಿದೆ. ಅತಿಯಾದ ಬಿಸಿಲಿನಿಂದಾಗಿ ಕಳೆದ ವರ್ಷ ಶಿಶುಗಳು ತೀವ್ರತರದ ಕಾಯಿಲೆಗಳಿಗೆ ತುತ್ತಾಗಿದ್ದವು. ಕೆಲ ಗ್ರಾಮಗಳಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಜನ ಬಳಲಿದ್ದರು. ಇನ್ನೂ ಈ ಬಾರಿಯ ಬಿಸಿಲು ಯಾವ್ಯಾವ ಸಮಸ್ಯೆಗಳನ್ನು ತಂದೊಡ್ಡಲಿದೆಯೋ ಗೊತ್ತಿಲ್ಲ. ಸಾರ್ವಜನಿಕರಂತೂ ಈ ಬಾರಿಯ ಬಿಸಿಲಿಗೆ ಹೆದರಿದ್ದಾರೆ.

    ಆರ್ ಟಿಪಿಎಸ್ ಜೊತೆ ವೈಟಿಪಿಎಸ್ ಶಾಖೋತ್ಪನ್ನು ವಿದ್ಯುತ್ ಕೇಂದ್ರ ಕಾರ್ಯಾರಂಭಿಸಿದ್ದು ಕೂಡ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಹಣ್ಣಿನ ಅಂಗಡಿಗಳು, ಎಳನೀರು, ಜ್ಯೂಸ್ ಅಂಗಡಿಗಳ ಸಂಖ್ಯೆಯೂ ಹೆಚ್ಚಾಗಿದೆ. ವಿದ್ಯುತ್ ಲೋಡ್ ಶಡ್ಡಿಂಗ್ ಹಿನ್ನೆಲೆ ಫ್ಯಾನ್, ರೆಫ್ರಜರೇಟರ್ ಕೆಲಸ ಮಾಡದೇ ತತ್ತರಿಸುವ ಜನ ಮನೆಯಲ್ಲಿ ತಣ್ಣನೆ ನೀರಿಗಾಗಿ ಮಣ್ಣಿನ ಮಡಿಕೆಗಳನ್ನು ಅವಲಂಬಿಸುತ್ತಿದ್ದಾರೆ. ಹೀಗಾಗಿ ಬೇಸಿಗೆ ಕಾಲದ ವ್ಯಾಪಾರಗಳು ಜೋರಾಗಿ ನಡೆದಿವೆ.

    ಲೋಕಸಭಾ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಬಿ.ವಿ.ನಾಯಕ್‍ಗೆ ಎದುರಾಳಿಯಾಗಿ ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೋ ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಚುನಾವಣಾ ರಂಗು ಇನ್ನೂ ಏರಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಂತೂ ಬಿಸಿಲಿನಿಂದ ಎಲ್ಲರೂ ಹೈರಾಣಾಗುವುದಂತೂ ಸತ್ಯ.

  • ಮಹಿಳಾ ಕೈದಿಯ ಮಗುವಿಗೆ ಕಾರಾಗೃಹದಲ್ಲಿ ನಾಮಕರಣ

    ಮಹಿಳಾ ಕೈದಿಯ ಮಗುವಿಗೆ ಕಾರಾಗೃಹದಲ್ಲಿ ನಾಮಕರಣ

    ಕೊಪ್ಪಳ: ಜಿಲ್ಲಾ ಕಾರಾಗೃಹದಲ್ಲಿ ಮಹಿಳಾ ವಿಚಾರಣಾ ಕೈದಿಯ ಮಗುವಿನ ನಾಮಕರಣ ಹಾಗೂ ಹುಟ್ಟುಹಬ್ಬದ ಕಾರ್ಯಕ್ರಮ ನಡೆದಿದೆ.

    ಒಂದು ವರ್ಷದ ಮಗುವಿಗೆ ಅಭಿನಂದನ್ ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಗಿದೆ. ಕಳ್ಳತನ ಪ್ರಕರಣವೊಂದರಲ್ಲಿ ವಿಚಾರಣಾದೀನ ಖೈದಿಯಾಗಿರುವ ಆಂಧ್ರ ಮೂಲದ ಜ್ಯೋತಿ ಎಂಬವರ ಮಗುವಿಗೆ ನಾಮಕರಣ ನಡೆದಿದೆ.

    ಜ್ಯೋತಿ ವರ್ಷದ ಹಿಂದೆ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಪೂಜಾ ವಿಧಿ- ವಿಧಾನ, ಮಂತ್ರ ಘೋಷಗಳೊಂದಿಗೆ ಮಗುವಿಗೆ ನಾಮಕರಣ ಮಾಡಲಾಗಿದೆ. ಅಲ್ಲದೇ ಮಗುವಿಗೆ ತಾಯಿಯ ಇಚ್ಚೆಯಂತೆ ಅಭಿನಂದನ್ ಎಂದು ನಾಮಕರಣ ಮಾಡಲಾಗಿದೆ.

    ಜಿಲ್ಲಾ ನ್ಯಾಯಾಧೀಶ ಸಂಜೀವ್ ಕುಲಕರ್ಣಿ ನೇತೃತ್ವದಲ್ಲಿ ನಾಮಕರಣ ಕಾರ್ಯಕ್ರಮ ನಡೆದಿದ್ದು, ಮಹಿಳಾ ಬಂಧಿಗಳು ಗ್ರಾಮೀಣ ಸೊಗಡಿನ ಜೋಗುಳ ಹಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ

    ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿ

    ಬೀದರ್: ವೈದ್ಯರ ನಿರ್ಲಕ್ಷ್ಯದಿಂದ ಹಸಗೂಸು ಸಾವನ್ನಪ್ಪಿದೆ ಎಂದು ಬ್ರಿಮ್ಸ್ ಆಸ್ಪತ್ರೆ ವೈದ್ಯರ ವಿರುದ್ಧ ಮಗುವಿನ ಪೋಷಕರು ಆರೋಪಿಸಿದ್ದಾರೆ.

    ಎರಡು ದಿನಗಳ ಹಿಂದೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಮಗುವನ್ನು ಹೆತ್ತವರು ದಾಖಲಿಸಿದ್ದರು. ಆಗ ಆಸ್ಪತ್ರೆಯ ವೈದ್ಯರು ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದರು. ಬುಧವಾರ ನಿಮ್ಮ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದ್ರೆ ಇಂದು ಮಗು ಸಾವನ್ನಪ್ಪಿದೆ ಎಂದಿದ್ದಾರೆ. ಮಗು ಮೃತಪಡಲು ವೈದ್ಯರ ನಿರ್ಲಕ್ಷ್ಯವೇ ಕಾರಣ. ನಿನ್ನೆ ಆರೋಗ್ಯವಾಗಿದ್ದ ಮಗು ಇಂದು ಸಾವನ್ನಪ್ಪಿದೆ ಎಂದರೇ ಏನರ್ಥ ಎಂದು ಹೆತ್ತವರು ಕಣ್ಣೀರಿಡುತ್ತಿದ್ದಾರೆ.

    ಸದ್ಯ ಬ್ರೀಮ್ಸ್ ಆಸ್ಪತ್ರೆ ಮುಂದೆ ಮಗುವಿನ ಹೆತ್ತವರು ಹಾಗೂ ಸಂಬಂಧಿಕರು ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಹಸುಗೂಸು ಬಲಿಯಾಗಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಬಿಗ್‍ಬಾಸ್ ಸ್ಪರ್ಧಿ ರಿಯಾಜ್ ಕುಟುಂಬಕ್ಕೆ ಹೊಸ ಅತಿಥಿ

    ಬಿಗ್‍ಬಾಸ್ ಸ್ಪರ್ಧಿ ರಿಯಾಜ್ ಕುಟುಂಬಕ್ಕೆ ಹೊಸ ಅತಿಥಿ

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಕನ್ನಡ ಸೀಸನ್ 5’ರ ಸ್ಪರ್ಧಿಯಾಗಿದ್ದ ರಿಯಾಜ್ ಬಾಷಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು, ತಂದೆಯಾದ ಖುಷಿಯಲ್ಲಿದ್ದಾರೆ.

    ಬುಧವಾರ ರಿಯಾಝ್ ಪತ್ನಿ ಆಯೇಶಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ರಿಯಾಜ್ ಸ್ವತಃ ಫೇಸ್‍ಬುಕ್‍ನಲ್ಲಿ ಹೇಳಿಕೊಂಡಿದ್ದು, ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

    “ಸಿಹಿ ಸುದ್ದಿ ತಂದೆ.. ನಾನು ತಂದೆ ಮತ್ತು ಆಯೇಶಾ ತಾಯಿಯಾದೆವು. ನಿಮ್ಮ ಆಶೀರ್ವಾದ ಸದಾ ನಮ್ಮೊಂದಿಗಿರಲಿ” ಎಂದು ಹೇಳಿ ನಗುವ ಎಮೋಜಿಯನ್ನು ಹಾಕಿದ್ದಾರೆ. ಜೊತೆಗೆ ತಾವು ಆಸ್ಪತ್ರೆಯಲ್ಲಿದ್ದ ಹಾಗೂ ಮಗುವಿನ ಪಕ್ಕವಿರುವ ಫೋಟೋವನ್ನು ಹಾಕುವ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

    ರಿಯಾಜ್ ಅವರು ವೃತ್ತಿಯಲ್ಲಿ ರೇಡಿಯೋ ಜಾಕಿ ಹಾಗೂ ನಿರೂಪಕರಾಗಿ ಕೆಲಸ ಮಾಡುತ್ತಿದ್ದರು. ಬಾಲಿವುಡ್ ತಾರೆಯರ ಅನೇಕ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ರಿಯಾಜ್ ನಿರೂಪಣೆಯ ಮಾಡಿದ್ದಾರೆ. ಇವರು ‘ಬಿಗ್ ಬಾಸ್ ಸೀಸನ್ 5’ರ ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ಕರ್ನಾಟಕದ ಜನತೆಗೂ ಪರಿಚಯವಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ – ಅವಿವಾಹಿತೆ, ಮಗು ಸಾವು

    ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ – ಅವಿವಾಹಿತೆ, ಮಗು ಸಾವು

    ಲಕ್ನೋ: ಅವಿವಾಹಿತೆ ಗರ್ಭಿಣಿಯೊಬ್ಬಳು ಯೂಟ್ಯೂಬ್‍ನಲ್ಲಿ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಲು ಮುಂದಾದಾಗ ತೀವ್ರ ರಕ್ತಸ್ರಾವದಿಂದ ತಾಯಿ ಮತ್ತು ಮಗು ಮೃತಪಟ್ಟಿರುವ ಘಟನೆ ಸೋಮವಾರ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದಿದೆ.

    ಯುವತಿ ಮಗುವಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ. ಈ ವೇಳೆ ಮನೆಯ ಮಾಲೀಕ ಹಾಗೂ ಅಕ್ಕಪಕ್ಕದ ಮನೆಯವರು ಯುವತಿಯ ರೂಮಿನ ಹೊರಗೆ ರಕ್ತವನ್ನು ನೋಡಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುವಾಗ ಯುವತಿಯ ಮೊಬೈಲಿನಲ್ಲಿ ವಿಡಿಯೋ ಪ್ಲೇ ಆಗುತ್ತಿತ್ತು.

    ಪೊಲೀಸರ ಪ್ರಕಾರ ಯುವತಿ ಬಹರಾಯಿಚ್‍ನಲ್ಲಿ ವಾಸಿಸುತ್ತಿದ್ದಳು. ನಾಲ್ಕು ದಿನಗಳ ಹಿಂದೆಷ್ಟೇ ಆಕೆ ಗೋರಖ್‍ಪುದ ರವಿ ಉಪಾಧ್ಯಾಯ್ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಕೆಲವು ದಿನಗಳಲ್ಲಿ ನನ್ನ ತಾಯಿ ನನ್ನ ಜೊತೆ ವಾಸಿಸಲು ಬರುತ್ತಾರೆ ಎಂದು ಯುವತಿ ಮನೆ ಮಾಲೀಕನಿಗೆ ಹೇಳಿದ್ದಳು.

    ಯುವತಿಯ ಕುಟುಂಬದವರು ಆಕೆಗೆ ಗರ್ಭಪಾತ ಮಾಡಿಸಬೇಕು ಎಂದುಕೊಂಡಿದ್ದರು. ಆದರೆ ಯುವತಿ ಇದಕ್ಕೆ ಒಪ್ಪಲಿಲ್ಲ. ಸಮಾಜಕ್ಕೆ ಹೆದರಿ ಯುವತಿ ಕೆಲವು ದಿನಗಳ ಹಿಂದಷ್ಟೇ ಬಚರಾಯಿಚ್‍ನಿಂದ ಗೋರಖ್‍ಪುರಕ್ಕೆ ಬಂದಿದ್ದಳು. ಗೋರಖ್‍ಪುರಕ್ಕೆ ಬಂದ ನಂತರ ಯುವತಿ ಬೇರೆ ಬೇರೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.

    ಪೊಲೀಸರು ಯುವತಿಯ ಮೊಬೈಲ್ ಪರಿಶೀಲಿಸಿ ಆಕೆಯ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಪೋಷಕರಿಗೆ ಕರೆ ಮಾಡಿದ್ದಾಗ ಯುವತಿ ಅವಿವಾಹಿತೆ ಎಂಬುದು ತಿಳಿದುಬಂದಿದೆ. ಸಾಕ್ಷಿಗಳು ನಾಶ ಆಗಬಾರದೆಂದು ಪೊಲೀಸರು ಯುವತಿ ಇದ್ದ ಕೊಠಡಿಯನ್ನು ಸೀಲ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಮಾನ ಏರುವ ಭರದಲ್ಲಿ ಮಗುವನ್ನೇ ಮರೆತ ತಾಯಿ!

    ವಿಮಾನ ಏರುವ ಭರದಲ್ಲಿ ಮಗುವನ್ನೇ ಮರೆತ ತಾಯಿ!

    ರಿಯಾದ್: ಪ್ರಯಾಣ ಮಾಡುವ ವೇಳೆ ಗಡಿಬಿಡಿಯಲ್ಲಿ ಕೆಲವೊಮ್ಮೆ ಪ್ರಯಾಣಿಕರು ಲಗೇಜ್ ಮರೆತು ಹೋಗುತ್ತಾರೆ. ಆದ್ರೆ ಮಹಿಳೆಯೊಬ್ಬರು ವಿಮಾನ ಹತ್ತುವ ಭರದಲ್ಲಿ ತನ್ನ ಮಗುವನ್ನೇ ಏರ್​ಪೋರ್ಟ್ ನಲ್ಲಿ  ಮರೆತು ಹೋದ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

    ಹೌದು, ಜೆಡ್ಡಾದ ಕಿಂಗ್ ಅಬ್ದುಲ್ಲ ಅಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ಘಟನೆ ಜರುಗಿದೆ. ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಯಲ್ಲಿ ತನ್ನ ಮಗುವಿನೊಂದಿಗೆ ವಿಮಾನಕ್ಕಾಗಿ ಕಾಯುತ್ತಿದ್ದ ಮಹಿಳೆ, ವಿಮಾನ ಬಂದ ಪ್ರಕಟಣೆ ಕೇಳಿದ ಕೂಡಲೇ ಮಗುವನ್ನು ಅಲ್ಲಿಯೇ ಬಿಟ್ಟು ವಿಮಾನ ಏರಿದ್ದಾಳೆ. ಬಳಿಕ ವಿಮಾನ ಟೇಕಾಫ್ ಆಗಿ ಸ್ವಲ್ಪ ದೂರ ಹೋದ ಬಳಿಕ ಮಹಿಳೆಗೆ ತನ್ನ ಮಗುವಿನ ನೆನಪಾಗಿದೆ. ನಂತರ ಗಾಬರಿಯಿಂದ ವಿಮಾನದ ಸಿಬ್ಬಂದಿಗೆ ವಿಷಯ ತಿಳಿಸಿ ವಾಪಸ್ ವಿಮಾನವನ್ನು ಜೆಡ್ಡಾ ವಿಮಾನ ನಿಲ್ದಾಣಕ್ಕೆ ತಿರುಗಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ.

    ಕೊನೆಗೆ ಮಹಿಳೆಯ ಮನವಿಗೆ ಮಣಿದ ಸಿಬ್ಬಂದಿ ವಿಮಾನವನ್ನು ವಾಪಸ್ ವಿಮಾನ ನಿಲ್ದಾಣಕ್ಕೆ ತಿರುಗಿಸಿದ್ದು, ಮಹಿಳೆ ಮಗುವನ್ನು ಕರೆದುಕೊಂದು ವಾಪಸ್ ಅದೇ ವಿಮಾನದಲ್ಲಿ ತಾನು ಹೋಗಬೇಕಿದ್ದ ಊರಿಗೆ ಪ್ರಯಾಣಿಸಿದ್ದಾರೆ.

    ಈ ರೀತಿ ಪ್ರಕರಣ ಇದೇ ಮೊದಲ ಬಾರಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಅಲ್ಲದೆ ಮಗುವೊಂದೇ ನಿಲ್ದಾಣದಲ್ಲಿ ತಾಯಿಗಾಗಿ ಕಾಯುತ್ತಿದ್ದ ಕಾರಣಕ್ಕೆ ವಿಮಾನವನ್ನು ವಾಪಸ್ ತಿರುಗಿಸಲಾಯಿತು ಎಂದು ಪೈಲಟ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 14 ದಿನದ ಮಗುವಿಗೆ ಅಭಿನಂದನ್ ಹೆಸರನ್ನಿಟ್ಟ ದಂಪತಿ!

    14 ದಿನದ ಮಗುವಿಗೆ ಅಭಿನಂದನ್ ಹೆಸರನ್ನಿಟ್ಟ ದಂಪತಿ!

    ರಾಯಚೂರು: ಪಾಕಿಸ್ತಾನದಲ್ಲಿ ಸಿಕ್ಕಿ ಬಿದ್ದರೂ ದೇಶ ಪ್ರೇಮ ಮೆರೆದ ವೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಹೆಸರನ್ನು ತಮ್ಮ ಮಗನಿಗೆ ನಾಮಕರಣ ಮಾಡುವ ಮೂಲಕ ರಾಯಚೂರಿನ ಸಿಂಧನೂರಿನ ದಂಪತಿ ದೇಶಾಭಿಮಾನ ಮೆರೆದಿದ್ದಾರೆ.

    ಸಿಂಧನೂರು ತಾಲೂಕಿನ ದಿದ್ದಗಿ ಗ್ರಾಮದ ರೈತ ದಂಪತಿ ಸುರೇಶ್ ಹಾಗೂ ಶ್ರೀದೇವಿ ತಮ್ಮ ಮಗನಿಗೆ ಅಭಿನಂದನ್ ಎಂದು ಹೆಸರು ಇಟ್ಟಿದ್ದಾರೆ. ದೇಶಕ್ಕಾಗಿ ಹೋರಾಡಿ ಮರಳಿ ಬಂದಿರುವ ವೀರ ಯೋಧನ ಹೆಸರಿನಿಂದ ಮಗನನ್ನು ಕರೆಯುವುದೇ ದೊಡ್ಡ ಖುಷಿ ಎಂದು ದಂಪತಿ ಹೇಳಿದ್ದಾರೆ. ಇದನ್ನೂ ಓದಿ: ತಮ್ಮ ಮಗುವಿಗೆ ಅಭಿನಂದನ್ ಎಂದು ಹೆಸರಿಟ್ಟ ದಂಪತಿ

    ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲೂ ಕೂಡ ದಂಪತಿ ವಿಂಗ್ ಕಮಾಂಡರ್ ಅಭಿನಂದನ್ ಗೌರವಾರ್ಥ ನಾಮಕರಣ ಮಾಡಿದ್ದಾರೆ. ಮಹಾಂತೇಶ್ ಶೆಟ್ಟರ್ ಹಾಗೂ ಶಾಂತಾ ಶೆಟ್ಟರ್ ದಂಪತಿ ತಮ್ಮ ಪುತ್ರನಿಗೆ ಅಭಿನಂದನ್ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ: ಮಗನಿಗೆ ಅಭಿನಂದನ್ ಎಂದು ನಾಮಕರಣ ಮಾಡಿದ ಕೊಪ್ಪಳದ ದಂಪತಿ

    ದಂಪತಿ ಈ ಮೊದಲು ತಮ್ಮ ಪುತ್ರನಿಗೆ ಅಥರ್ವ ಅಥವಾ ಅಭಿನವ ಎಂದು ನಾಮಕರಣ ಮಾಡುವುದಾಗಿ ನಿರ್ಧರಿಸಿದ್ದರು. ಆದ್ರೆ ಇತ್ತೀಚೆಗೆ ಅಭಿನಂದನ್ ಮಾಡಿದ ಸಾಹಸಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ಮೂರು ತಿಂಗಳ ಗಂಡು ಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv