Tag: Baby

  • 25 ಸಾವಿರ ರೂ.ಗೆ ನವಜಾತ ಶಿಶುವನ್ನೇ ಮಾರಿದ ತಾಯಿ- ಈಗ ಮಗುವಿಗಾಗಿ ಕಣ್ಣೀರು

    25 ಸಾವಿರ ರೂ.ಗೆ ನವಜಾತ ಶಿಶುವನ್ನೇ ಮಾರಿದ ತಾಯಿ- ಈಗ ಮಗುವಿಗಾಗಿ ಕಣ್ಣೀರು

    ಧಾರವಾಡ: ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು 25 ರೂ.ಗೆ ಮಾರಿ, ಈಗ ಕಂದಮ್ಮನಿಗಾಗಿ ಕಣ್ಣೀರು ಹಾಕುತ್ತಿರುವ ಮನಕಲುಕುವ ಘಟನೆ ನಗರದಲ್ಲಿ ನಡೆದಿದೆ.

    ರೇಖಾ ನರೇಂದ್ರ ಚಾವಲಾ ಮಗು ಮಾರಾಟ ಮಾಡಿ ಪರದಾಡಿದ ತಾಯಿ. ನಗರದ ಮಾಳಮಡ್ಡಿಯಲ್ಲಿ ಕಳೆದ ತಿಂಗಳು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ರೇಖಾ ಚಾವಲಾ ಕಳೆದ ಜೂನ್ 20ರಂದು ತೌಹಿದ್ ಶೇಖ್, ಆಸ್ಮಾ ಮತ್ತು ಉಜ್ಮಾ ಎಂಬವರಿಗೆ 25 ಸಾವಿರ ರೂ. ತನ್ನ ಗಂಡು ಮಗುವನ್ನು ಮಾರಾಟ ಮಾಡಿದ್ದಳು. ನಂತರ ಮಗು ನೆನಪಾಗಿ ವಾಪಸ್ ಕೇಳಿದಾಗ, ಮಗು ಖರೀದಿಸಿದ್ದ ಮೂವರು ಮಗುವಿಗೆ ಖರ್ಚು ಮಾಡಿದ್ದ 8 ಸಾವಿರ ರೂ. ಹಾಗೂ ತಾವು ನೀಡಿದ್ದ 25 ಸಾವಿರ ರೂ. ಹಣ ಕೇಳಿದ್ದಾರೆ. ತನ್ನ ಬಳಿ ಹಣವಿಲ್ಲದ ಕಾರಣ ಮಗುವನ್ನು ವಾಪಸ್ ಪಡೆಯಲು ರೇಖಾಗೆ ಸಾಧ್ಯವಾಗಿರಲಿಲ್ಲ.

    ಈ ಸಂಬಂಧ ರೇಖಾ ಮಕ್ಕಳ ರಕ್ಷಣಾ ಘಟಕಕ್ಕೆ ಹೋಗಿ ದೂರು ನೀಡಿದ್ದಾರೆ. ನಂತರ ಧಾರವಾಡ ವಿದ್ಯಾಗಿರಿ ಪೊಲೀಸರ ಸಹಾಯದಿಂದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ವಾಪಸ್ ಪಡೆದು, ಮಗು ಖರೀದಿ ಮಾಡಿದ್ದ ಮೂವರನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ.

    ಮೂವರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ಮಗು ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿದೆ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಗುವಿಗೆ ಚಿಕಿತ್ಸೆ ಕೊಡದ ವೈದ್ಯರು – ಮೊಬೈಲಿನಲ್ಲಿ ಶೂಟ್ ಮಾಡೋ ವೇಳೆ ಲೈಟ್ ಆಫ್

    ಮಗುವಿಗೆ ಚಿಕಿತ್ಸೆ ಕೊಡದ ವೈದ್ಯರು – ಮೊಬೈಲಿನಲ್ಲಿ ಶೂಟ್ ಮಾಡೋ ವೇಳೆ ಲೈಟ್ ಆಫ್

    ಮೈಸೂರು: ಚಿಕಿತ್ಸೆಗಾಗಿ ಬಂದಿದ್ದ ಮಗುವಿಗೆ ಚಿಕಿತ್ಸೆ ನೀಡದ ವೈದ್ಯರನ್ನು ಮಗುವಿನ ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಗರದ ಕೆ.ಆರ್.ಆಸ್ಪತ್ರೆಯಲ್ಲಿ ನಡೆದಿದೆ.

    ಭಾನುವಾರದಂದು ಸುಟ್ಟಗಾಯಗಳಿಂದ ಬಳಲುತ್ತಿದ್ದ ಮಗುವನ್ನು ತಾಯಿ ಆಸ್ಪತ್ರೆಗೆ ಕರೆತಂದಿದ್ದರು. ಆದ್ರೆ ಈ ವೇಳೆ ವೈದ್ಯರು ಚಿಕಿತ್ಸೆ ಕೊಡಲು ನಿರಾಕರಿಸಿದ್ದಾರೆ. ಸತತ 2 ಗಂಟೆಗಳ ಕಾಲ ರೋಗಿಗೆ ಚಿಕಿತ್ಸೆ ನೀಡದೇ ಕೆ.ಆರ್.ಆಸ್ಪತ್ರೆ ವೈದ್ಯರು ನಿರ್ಲಕ್ಷ್ಯಿಸಿದ್ದಾರೆ. ಅಲ್ಲದೆ ವೈದ್ಯರು ಚಿಕಿತ್ಸೆ ನೀಡಲು ಆಗಲ್ಲ ಎನ್ನುತ್ತಿರುವುದನ್ನ ಮಗುವಿನ ಸಂಬಂಧಿಕರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ವಿಡಿಯೋದಲ್ಲಿ ಮಗುವನ್ನು ತಾಯಿ ಎತ್ತುಕೊಂಡು ಚಿಕಿತ್ಸೆ ಕೊಡದ ವೈದ್ಯರ ನಡೆಯಿಂದ ಕಂಗಾಲಾಗಿ ನಿಂತಿರುವುದು ಕೂಡ ಸೆರೆಯಾಗಿದೆ. ಜೊತೆಗೆ ವೈದ್ಯರು, ನಾವು ಚಿಕಿತ್ಸೆ ನೀಡಲ್ಲ, ಹೊರಗಡೆ ಹೋಗಿ ಎಂದಿದ್ದಾರೆ. ಆಗ ಯಾಕೆ ನಾವು ಹೋಗಬೇಕು? ಚಿಕಿತ್ಸೆ ನೀಡಲು ಆಗಲ್ಲ ಎಂದು ಬರೆದು ಕೊಡಿ ಎಂದು ಮಗುವಿನ ಸಂಬಂಧಿಕರು ವೈದ್ಯರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿಯನ್ನು ಕರೆಸಿ ಅವರನ್ನು ಹೊರಗೆ ಕಳಿಹಿಸುವಂತೆ ವೈದ್ಯರು ಹೇಳಿದ್ದಾರೆ.

    ವಿಡಿಯೋ ಸೆರೆಹಿಡಿಯುವ ವೇಳೆ ಕ್ಯಾಮೆರಾ ಕಿತ್ತುಕೊಳ್ಳಲು ಸ್ಥಳದಲ್ಲಿದ್ದ ಮಹಿಳಾ ಸಿಬ್ಬಂದಿ ಮುಂದಾಗಿದ್ದಾರೆ. ಇದ್ಯಾವುದ್ದಕ್ಕೂ ರೋಗಿಯ ಸಂಬಂಧಿಕರು ಕೇಳದ ಹಿನ್ನೆಲೆಯಲ್ಲಿ ಕೊಠಡಿಯ ಲೈಟ್ ಆಫ್ ಮಾಡಿ ಏನಾದರೂ ಮಾಡಿಕೊಳ್ಳಿ ಎಂದು ತಮ್ಮ ಪಾಡಿಗೆ ವೈದ್ಯರು ಹಾಗೂ ಸಿಬ್ಬಂದಿ ಹೋಗಿದ್ದಾರೆ. ಈ ಏಲ್ಲಾ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ಆರೋಗ್ಯ ಸಚಿವರೇ ಕೆ.ಆರ್.ಆಸ್ಪತ್ರೆಯತ್ತ ನೋಡಿ, ನಿರ್ಲಕ್ಷ್ಯ ತೋರುವ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಮಗುವಿನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ವಿಚ್ಛೇದನ ಬಯಸಿದ ಬಳಿಕವೂ ಪತಿಯಿಂದಲೇ ಮಗು ಬೇಕು ಯಾಕೆ – ತನ್ನ ಉದ್ದೇಶವನ್ನು ತಿಳಿಸಿದ ಮಹಿಳೆ

    ವಿಚ್ಛೇದನ ಬಯಸಿದ ಬಳಿಕವೂ ಪತಿಯಿಂದಲೇ ಮಗು ಬೇಕು ಯಾಕೆ – ತನ್ನ ಉದ್ದೇಶವನ್ನು ತಿಳಿಸಿದ ಮಹಿಳೆ

    ಮುಂಬೈ: ವಿಚ್ಛೇದನಕ್ಕೆ ಅರ್ಜಿ ಹಾಕಿದ ಬಳಿಕ ಪತಿಯಿಂದ ಮಗುಬೇಕು ಎಂದು ಕೋರ್ಟ್ ಮೇಟ್ಟಿಲೇರಿದ್ದ ನಾಂದೇಡ್ ಮಹಿಳೆ ತನ್ನ ಈ ನಿರ್ಧಾರದ ಹಿಂದಿನ ಉದ್ದೇಶವೇನು ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಪತಿ ಜೊತೆ ಬಾಳಲು ಸಾಧ್ಯವಿಲ್ಲ ಎಂದು 35 ವರ್ಷದ ವೈದ್ಯೆಯೊಬ್ಬರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಆದರೆ ಬಳಿಕ ಪತಿಯಿಂದಲೇ ಐವಿಎಫ್(ಇನ್-ವಿಟ್ರೋ ಫಲೀಕರಣ) ವಿಧಾನದ ಮೂಲಕ ಮಗು ಪಡೆಯಲು ಅವಕಾಶ ನೀಡುವಂತೆ ನಾಂದೇಡ್ ಕುಟುಂಬ ನ್ಯಾಯಾಲಯದ ಮೊರೆ ಹೋಗಿದ್ದು, ಈ ಮನವಿಗೆ ಕೋರ್ಟ್ ಅನುಮತಿ ಕೂಡ ನೀಡಿತ್ತು.

    ಈ ಬಗ್ಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ವೈದ್ಯೆ ತಾನು ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎನ್ನುವುದನ್ನು ತಿಳಿಸಿದ್ದಾರೆ. ವೃತ್ತಿಯಲ್ಲಿ ದಂಪತಿ ವೈದ್ಯರಾಗಿದ್ದು, ಇವರಿಗೆ ಮಗ ಕೂಡ ಇದ್ದಾನೆ. ಒಡಹುಟ್ಟಿದವರಿಲ್ಲದೆ ತಮ್ಮ ಮಗ ಒಬ್ಬಂಟಿಯಾಗಿ ಬೆಳೆಯಬಾರದು ಎಂದು ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಪತಿಯಿಂದ ಮಗುವನ್ನು ಅಪೇಕ್ಷಿಸಿದೆ ಎಂದು ಹೇಳಿದ್ದಾರೆ.

    ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲು 2015-16ರ ಮಧ್ಯೆ ಎರಡು ಭಾರಿ ಗರ್ಭಿಣಿಯಾದಾಗಲೂ ಪತಿ ಮಾತಿಗೆ ಮರುಳಾಗಿ ನಾನು ಗರ್ಭಪಾತ ಮಾಡಿಸಿದ್ದೆ. ಬಳಿಕ ಮಗನಿಗೆ ಮೂರು ವರ್ಷ ತುಂಬಿದ ಬಳಿಕ ಮತ್ತೊಂದು ಮಗು ಬೇಕೆಂದು ಪತಿ ಬಳಿ ಹೇಳಲು ಹಿಂಜರಿದೆ. ನನ್ನ ಪತಿಗೆ ಯಾರು ಒಡೆಹುಟ್ಟಿದವರಿಲ್ಲ. ಅದೇ ವಾತಾವರಣದಲ್ಲಿ ನನ್ನ ಮಗ ಕೂಡ ಬೆಳೆಯುವುದು ನನಗೆ ಇಷ್ಟವಿಲ್ಲ. ಹೀಗಾಗಿ ನನಗೆ ಮತ್ತೊಂದು ಮಗು ಬೇಕು ಎಂದು ಅನಿಸಿದೆ ಎಂದು ತಿಳಿಸಿದರು.

    ನನಗೆ ಈಗಾಗಲೇ 35 ವರ್ಷ ಆಗಿಬಿಟ್ಟಿದೆ. ವಯಸ್ಸು ಮೀರಿದರೆ ಮಕ್ಕಳಾಗುವುದು ಕಷ್ಟ. ಅಷ್ಟೇ ಅಲ್ಲದೆ ನನಗೆ ಮತ್ತೊಂದು ಮದುವೆಯಾಗಲು ಇಷ್ಟವಿಲ್ಲ. ಹೀಗಾಗಿ ನಾನು ಪತಿಯಿಂದ ವಿಚ್ಛೇದನ ಪಡೆಯಲು ಬಯಸಿದ ಮೇಲೂ ಐವಿಎಫ್ ವಿಧಾನದ ಮೂಲಕ ಅವರಿಂದ ಮಗು ಪಡೆಯಲು ಕೋರ್ಟ್‍ಗೆ ಅನುಮತಿ ಕೇಳಿದೆ. ಪತಿ ನನ್ನ ನಿರ್ಧಾರಕ್ಕೆ ಸಹಕರಿಸಿದರೆ ಅವರ ಮೇಲೆ ಹಾಕಿರುವ ವರದಕ್ಷಿಣೆ ಕೇಸ್ ಹಾಗೂ ಕಿರುಕುಳದ ಕೇಸ್ ಹಿಂದಕ್ಕೆ ಪಡೆಯುತ್ತೇನೆ ಎಂದು ವೈದ್ಯೆ ಸ್ಪಷ್ಟನೆ ನೀಡಿದರು.

    ದಂಪತಿ 2017ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್‍ನಲ್ಲಿ ವಿಚಾರಣೆ ನಡೆಯುವಾಗಲೇ ಪತಿಯಿಂದ ಮಗು ಬೇಕು ಎಂಬ ಕಾರಣಕ್ಕೆ 2018ರಲ್ಲೇ ಪತ್ನಿ ಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ಕೋರ್ಟ್ ವಿಚಾರಣೆ ನಡೆಸಿದ್ದು, ಮಹಿಳೆ ಸಂತಾನ ಪಡೆಯುವ ಹಕ್ಕಿದೆ. ಇದು ಮನುಷ್ಯನ ಮೂಲ ನಾಗರಿಕ ಹಕ್ಕು ಎಂದು ಪರಿಗಣಿಸಿ ಮಹಿಳೆ ಮನವಿಯನ್ನು ಕೋರ್ಟ್ ಸಮ್ಮತಿಸಿದೆ.

    ಈ ರೀತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಕಾನೂನುನಲ್ಲಿ ಯಾವುದೇ ಪ್ರಸ್ತಾವ ಇಲ್ಲದಿರುವ ಕಾರಣಕ್ಕೆ ಕೋರ್ಟ್ ಅಂತಾರಾಷ್ಟ್ರೀಯ ಕಾನೂನುಗಳ ಮೊರೆ ಹೋಗಿತ್ತು. ಅಷ್ಟೇ ಅಲ್ಲದೆ ಜೂನ್ 24ರ ಒಳಗೆ ಆಪ್ತ ಸಲಹೆಗಾರರ ನೆರವಿನಿಂದ ಐವಿಎಫ್ ಪರಿಣಿತರನ್ನು ಭೇಟಿ ಮಾಡಿ ಎಂದು ನ್ಯಾಯಾಲಯ ದಂಪತಿಗೆ ಸೂಚಿಸಿದೆ ಎನ್ನಲಾಗಿದೆ.

    ಪತ್ನಿಯ ಆಗ್ರಹವನ್ನು ಪತಿ ವಿರೋಧಿಸಿದ್ದು, ಸಾಮಾಜಿಕ ನಿಯಮಗಳಿಗೆ ಇದು ವಿರುದ್ಧವಾಗಿದೆ. ಅಷ್ಟೇ ಅಲ್ಲದೆ ಇದು ಅಕ್ರಮವೆಂದು ವಾದಿಸಿದ್ದಾರೆ. ಆದರೆ ಕೋರ್ಟ್ ಪತಿ ವಾದವನ್ನು ನಿರಾಕರಿಸಿದ್ದರಿಂದ, ಪತಿ ಅನಿವಾರ್ಯವಾಗಿ ವೀರ್ಯದಾನ ಮಾಡಬೇಕಿದೆ.

  • ಬೈಕ್ ತಪ್ಪಿಸಲು ಹೋಗಿ ಇನ್ನೋವಾ ಕಾರು ಪಲ್ಟಿ: ಮಗು ಸೇರಿದಂತೆ ನಾಲ್ವರು ಸಾವು

    ಬೈಕ್ ತಪ್ಪಿಸಲು ಹೋಗಿ ಇನ್ನೋವಾ ಕಾರು ಪಲ್ಟಿ: ಮಗು ಸೇರಿದಂತೆ ನಾಲ್ವರು ಸಾವು

    ಚಿಕ್ಕಬಳ್ಳಾಪುರ: ಬೈಕ್ ತಪ್ಪಿಸಲು ಹೋಗಿ ಇನ್ನೋವಾ ಕಾರು ಪಲ್ಟಿ ಹೊಡೆದು ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ನಡೆದಿದೆ.

    ಯಲಹಂಕದ ಶಿವಕೋಟೆ ಗ್ರಾಮದ ಪಾರ್ವತಮ್ಮ (30), ನಾಗಮ್ಮ, ಪಲ್ಸರ್ ಬೈಕ್ ಸವಾರ ಶಶಿಕುಮಾರ್ (35) ಹಾಗೂ ಒಂದು ವರ್ಷದ ಮಗು ಮೃತ ದುರ್ದೈವಿಗಳು. ಇನ್ನೋವಾ ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶಿವಕೋಟೆ ಗ್ರಾಮದ ಪಾರ್ವತಮ್ಮ ಹಾಗೂ ಸಂಬಂಧಿಕರು ಬೀಗರ ಊಟಕ್ಕಾಗಿ ದೇವನಹಳ್ಳಿಯ ಪುಟ್ಟಪ್ಪನಗುಡಿ ಬೀದಿಗೆ ಹೋಗಿದ್ದರು. ಊಟ ಮುಗಿಸಿಕೊಂಡು ಮರಳುತ್ತಿರುವಾಗ ರಾಷ್ಟ್ರೀಯ ಹೆದ್ದಾರಿಯ ಕನ್ನಮಂಗಲಪಾಳ್ಯ ಗೇಟ್ ಬಳಿ ಪಲ್ಸರ್ ಬೈಕ್ ಏಕಾಏಕಿ ಅಡ್ಡ ಬಂದಿದೆ. ಬೈಕ್ ತಪ್ಪಿಸಲು ಮುಂದಾದ ಚಾಲಕ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ರಸ್ತೆಯ ಪಕ್ಕದ ಡಿವೈಡರ್ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಪರಿಣಾಮ ಇನ್ನೋವಾ ಕಾರಿನಲ್ಲಿದ್ದ ಮೂವರು ಹಾಗೂ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಗೆ ಬೈಕ್ ಸವಾರನ ಅಜಾಗರುಕತೆಯೇ ಕಾರಣ ಎನ್ನಲಾಗಿದೆ.

    ಘಟನಾ ಸ್ಥಳಕ್ಕೆ ಏರ್‍ಪೋರ್ಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಕೆಐಎಎಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

  • ವಿಚ್ಛೇದನಕ್ಕೆ ಅರ್ಜಿ ಹಾಕಿ ಬಳಿಕ ಪತಿಯಿಂದ ಮಗುಬೇಕೆಂದ ಮಹಿಳೆ

    ವಿಚ್ಛೇದನಕ್ಕೆ ಅರ್ಜಿ ಹಾಕಿ ಬಳಿಕ ಪತಿಯಿಂದ ಮಗುಬೇಕೆಂದ ಮಹಿಳೆ

    ಮುಂಬೈ: ವಿಚ್ಛೇದನಕ್ಕೆ ಅರ್ಜಿ ಹಾಕಿದ ಬಳಿಕ ಪತಿಯಿಂದ ಮಗುಬೇಕು ಎಂದ ಮಹಿಳೆ ಕೋರ್ಟ್ ಗೆ ಮನವಿ ಮಾಡಿರುವ ವಿಚಿತ್ರ ಪ್ರಕರಣವೊಂದು ಮಹಾರಾಷ್ಟ್ರದ ಕೌಂಟುವಿಕ ನ್ಯಾಯಾಲದಲ್ಲಿ ನಡೆದಿದೆ.

    ಪತಿ ಜೊತೆ ಬಾಳಲು ಸಾಧ್ಯವಿಲ್ಲ ಎಂದು 35 ವರ್ಷದ ಮಹಿಳೆಯೊಬ್ಬರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಆದರೆ ಈಗ ಪತಿಯಿಂದಲೇ ಐವಿಎಫ್(ಇನ್-ವಿಟ್ರೋ ಫಲೀಕರಣ) ವಿಧಾನದ ಮೂಲಕ ಮಗು ಪಡೆಯಲು ಅವಕಾಶ ನೀಡುವಂತೆ ಮಹಿಳೆ ನಾಂದೇಡ್ ಕುಟುಂಬ ನ್ಯಾಯಾಲಯದ ಮೊರೆ ಹೋಗಿದ್ದು, ಈ ಮನವಿಗೆ ಕೋರ್ಟ್ ಅನುಮತಿ ನೀಡಿದೆ.

    ವಿಚ್ಛೇದನಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿರುವಾಗಲೇ ಮಹಿಳೆ ಮಗುಗಾಗಿ ಮನವಿ ಮಾಡಿರುವ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದ್ದು, ಸಂತಾನೋತ್ಪತ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಮಹಿಳೆಗೆ ಮಗು ಪಡೆಯುವ ಹಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

    ಈ ರೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಕಾನೂನುನಲ್ಲಿ ಯಾವುದೇ ಪ್ರಸ್ತಾವ ಇಲ್ಲದಿರುವ ಕಾರಣಕ್ಕೆ ಕೋರ್ಟ್ ಅಂತಾರಾಷ್ಟ್ರೀಯ ಕಾನೂನುಗಳ ಮೊರೆ ಹೋಗಿದೆ. ಅಷ್ಟೇ ಅಲ್ಲದೆ ಜೂನ್ 24ರ ಒಳಗೆ ಆಪ್ತ ಸಲಹೆಗಾರರ ನೆರವಿನಿಂದ ಐವಿಎಫ್ ಪರಿಣಿತರನ್ನು ಭೇಟಿ ಮಾಡಿ ಎಂದು ನ್ಯಾಯಾಲಯ ದಂಪತಿಗೆ ಸೂಚಿಸಿದೆ ಎನ್ನಲಾಗಿದೆ.

    ಪತ್ನಿಯ ಆಗ್ರಹವನ್ನು ಪತಿ ವಿರೋಧಿಸಿದ್ದು, ಸಾಮಾಜಿಕ ನಿಯಮಗಳಿಗೆ ಇದು ವಿರುದ್ಧವಾಗಿದೆ. ಅಷ್ಟೇ ಅಲ್ಲದೆ ಇದು ಅಕ್ರಮವೆಂದು ವಾದಿಸಿದ್ದಾರೆ. ಆದರೆ ಕೋರ್ಟ್ ಪತಿ ವಾದವನ್ನು ನಿರಾಕರಿಸಿದ್ದರಿಂದ, ಪತಿ ಅನಿವಾರ್ಯವಾಗಿ ವೀರ್ಯದಾನ ಮಾಡಬೇಕಿದೆ.

    ದಂಪತಿ 2017ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಈಗಾಗಲೇ ಅವರಿಬ್ಬರಿಗೆ ಒಂದು ಮಗುವನ್ನು ಕೂಡ ಇದೆ. ಆದರೆ ಇನ್ನೊಂದು ಮಗು ಬೇಕು ಎಂಬ ಕಾರಣಕ್ಕೆ 2018ರಲ್ಲೇ ಪತ್ನಿ ಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ಕೋರ್ಟ್ ವಿಚಾರಣೆ ನಡೆಸಿದ್ದು, ಮಹಿಳೆ ಸಂತಾನ ಪಡೆಯುವ ಹಕ್ಕಿದೆ. ಇದು ಮನುಷ್ಯನ ಮೂಲ ನಾಗರಿಕ ಹಕ್ಕು ಎಂದು ಪರಿಗಣಿಸಿ ಮಹಿಳೆ ಮನವಿಯನ್ನು ಕೋರ್ಟ್ ಸಮ್ಮತಿಸಿದೆ.

  • ವೈದ್ಯರ ನಿರ್ಲಕ್ಷ್ಯತನಕ್ಕೆ 4 ದಿನದ ಹಸುಗೂಸು ಬಲಿ

    ವೈದ್ಯರ ನಿರ್ಲಕ್ಷ್ಯತನಕ್ಕೆ 4 ದಿನದ ಹಸುಗೂಸು ಬಲಿ

    ಲಕ್ನೋ: ಉತ್ತರಪ್ರದೇಶ ರಾಜ್ಯದ ಬರೇಲಿಯ ಆಸ್ಪತ್ರೆಯೊಂದರಲ್ಲಿ ವೈದ್ಯರು ಚಿಕಿತ್ಸೆ ನೀಡದೇ ವಿನಾಕಾರಣ ಸುತ್ತಾಡಿಸಿದ ಪರಿಣಾಮ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಾಲ್ಕು ದಿನದ ಹಸುಗೂಸು ಸಾವನ್ನಪ್ಪಿದೆ.

    ಜೂನ್ 15 ರಂದು ಜನಿಸಿದ್ದ ಊರ್ವಶಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಳು. ಇದರಿಂದ ಗಾಬರಿಗೊಂಡ ಪೋಷಕರು ಮಗುವನ್ನು ಅಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆ ಮಗುವನ್ನು ಮಹಿಳಾ ವಿಭಾಗದಿಂದ ಪುರುಷರ ವಿಭಾಗಕ್ಕೆ, ಮತ್ತೆ ಪುರುಷರ ವಿಭಾಗದಿಂದ ಮಹಿಳಾ ವಿಭಾಗಕ್ಕೆ ಚಿಕಿತ್ಸೆ ನೀಡದೆ ಮೂರು ಗಂಟೆಗಳವರೆಗೆ ಅಲೆದಾಡಿಸಿದ್ದಾರೆ. ದುರಾದೃಷ್ಟವಶಾತ್ ಮಗು ಆಸ್ಪತ್ರೆಯ ಮೆಟ್ಟಿಲಿನ ಮೇಲೆಯೇ ಪ್ರಾಣ ಬಿಟ್ಟಿದೆ.

    ಮಹಾರಣ ಪ್ರತಾಪ್ ಜಂಟಿ ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಗುವನ್ನು ಮೊದಲು ಪುರುಷರ ವಿಭಾಗದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿ, ಮಹಿಳಾ ವಿಭಾಗಕ್ಕೆ ಕಳುಹಿಸಿದ್ದಾರೆ. ಆದರೆ ಮಹಿಳಾ ವಿಭಾಗದಲ್ಲಿ ಹಾಸಿಗೆ ಕೊರತೆಯ ಕಾರಣವೊಡ್ಡಿ ಮಗುವನ್ನು ಮತ್ತೆ ಪುರುಷರ ವಿಭಾಗಕ್ಕೆ ಕರೆದುಕೊಂಡು ಹೋಗಲು ವೈದ್ಯರು ಸೂಚಿಸಿದ್ದಾರೆ. ಈ ರವಾನೆಯ ಮಾರ್ಗ ಮಧ್ಯೆಯಲ್ಲಿ ಮಗು ಸಾವನ್ನಪ್ಪಿದ್ದು, ಪ್ರಕರಣ ಸಂಬಂಧ ಓರ್ವ ವೈದ್ಯನನ್ನು ಅಮಾನತು ಮಾಡಲಾಗಿದೆ. ಘಟನೆಗೆ ಕಾರಣಕರ್ತರಾದ ಉಳಿದವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

    ಮಗುವಿಗೆ ಚಿಕಿತ್ಸೆ ನೀಡದೆ ವಿನಾಕಾರಣ ಮೂರು ಗಂಟೆಗಳ ಕಾಲ ಸುತ್ತಾಡಿಸಿದರು. ಕೊನೆಗೆ ಮಗುವನ್ನು ಮನೆಗೆ ಕರೆದೊಯ್ಯಲು ತೀರ್ಮಾನಿಸಿದೆವು. ಆದರೆ ಮಗು ಆಸ್ಪತ್ರೆಯ ಮೆಟ್ಟಿಲಿನ ಮೇಲೆಯೇ ಅಸುನೀಗಿತು ಎಂದು ಮಗುವಿನ ಅಜ್ಜಿ ಕುಸುಮಾದೇವಿ ಕಣ್ಣೀರು ಹಾಕಿದರು.

    ಮಗುವಿನ ಸಾವಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸಿದ ಎರಡು ವಿಭಾಗದ ವೈದ್ಯರ ನಡುವೆ ವಾಗ್ವಾದ ನಡೆಯಿತು. ಅಮಾನತುಗೊಂಡ ವೈದ್ಯ ಕಲ್ಮೆಂದ್ರ ಸ್ವರೂಪ್ ಗುಪ್ತ, ಮೊದಲು ಮಗುವನ್ನು ಹೊರರೋಗಿಗಳ ವಿಭಾಗಕ್ಕೆ ಕರೆದೊಯ್ಯಲಾಗಿದೆ. ಅಲ್ಲಿಂದ ಮಗುವನ್ನು ಮಹಿಳಾ ವಿಭಾಗದ ಮಕ್ಕಳ ವಿಶೇಷ ನಿಗಾ ಘಟಕಕ್ಕೆ ರವಾನಿಸಲಾಗಿದೆ. ಅಲ್ಲಿ ವೈದ್ಯರು ಏನು ಹೇಳಿದರೋ ಪೋಷಕರು ಸುತ್ತಾಡುತ್ತಲೇ ಇದ್ದರು. ಅವರು ತುರ್ತು ಪರಿಸ್ಥಿತಿಗೆ ತಲುಪಿದಾಗ ದಾಖಲಾತಿಗಾಗಿ ಕೆಳಗಡೆ ಕಳುಹಿಸಲಾಯಿತು ಎಂದಿದ್ದಾರೆ.

    ಮಹಿಳಾ ವಿಭಾಗದಲ್ಲಿ ಮಗುವಿನ ಉಷ್ಣತೆ ಕಾಪಾಡುವ ನಾಲ್ಕು ಹಾಸಿಗೆಗಳು ಮಾತ್ರ ಇದ್ದು, ಈಗಾಗಲೇ ನಾಲ್ಕು ಹಾಸಿಗೆಗಳಲ್ಲಿ 8 ಮಕ್ಕಳಿದ್ದಾರೆ. ಅದಕ್ಕಾಗಿ ನಾವು ಈ ಮಗುವನ್ನು ಪುರುಷರ ವಿಭಾಗಕ್ಕೆ ಕಳುಹಿಸಿದೆವು. ಯಾವಾಗಲೂ ಪುರುಷರ ವಿಭಾಗದ ವೈದ್ಯರು ಕುರುಡರಂತೆ ಎಲ್ಲರನ್ನೂ ಇಲ್ಲಿಗೆ ಕಳುಹಿಸುತ್ತಾರೆ. ನಮ್ಮಲಿದ್ದ ವಾರ್ಮರ್(ಉಷ್ಣತೆ ಕಾಪಾಡುವ ಬೆಡ್)ಗಳನ್ನು ಸರ್ಕಾರಕ್ಕೆ ಹಿಂದಿರುಗಿಸಲಾಗಿದೆ. ಒಂದು ವೇಳೆ ಹೆಚ್ಚಿನ ವಾರ್ಮರ್ ಇದ್ದಿದ್ದರೆ ಮಗುವಿಗೆ ಚಿಕಿತ್ಸೆ ನೀಡಬಹುದಿತ್ತು ಎಂದು ಮಹಿಳಾ ವಿಭಾಗದ ವೈದ್ಯೆ ಅಲ್ಕಾ ಶರ್ಮ ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಕರ್ತವ್ಯ ನಿರ್ಲಕ್ಷ್ಯತನ ತೋರಿದ ಕಲ್ಮೇಂದ್ರ ಸ್ವರೂಪರನ್ನು ಅಮಾನತು ಮಾಡಲು ಆದೇಶಿಸಿದ್ದು, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯತನವನ್ನು ನಾವು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

    ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆಯಿರುವ ಉತ್ತರಪ್ರದೇಶ ಸರ್ಕಾರಿ ವೈದ್ಯರು ಮತ್ತು ಆಸ್ಪತ್ರೆ ಹಾಸಿಗೆಗಳ ಕೊರತೆಯನ್ನು ಎದುರಿಸುತ್ತಿದೆ. ಕೇಂದ್ರದ ಪ್ರಕಾರ ರಾಜ್ಯದಲ್ಲಿ ಪ್ರತಿ ವೈದ್ಯರಿಂಂದ ಸರಾಸರಿ 19,962 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಲೆಕ್ಕಾಚಾರದಲ್ಲಿ ಬಿಹಾರ ಮೊದಲ ಸ್ಥಾನದಲ್ಲಿದ್ದು ಅಲ್ಲಿ ಪ್ರತಿ ವೈದ್ಯರು 28,391 ಜನರಿಗೆ ಚಿಕಿತ್ಸೆ ನೀಡುತ್ತಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ವೈದ್ಯರಿಲ್ಲದೆ ಹೆರಿಗೆ ಮಾಡಿಸಿದ ನರ್ಸ್- ನವಜಾತ ಶಿಶು ಸಾವು

    ವೈದ್ಯರಿಲ್ಲದೆ ಹೆರಿಗೆ ಮಾಡಿಸಿದ ನರ್ಸ್- ನವಜಾತ ಶಿಶು ಸಾವು

    ಬೆಂಗಳೂರು: ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆಯೇ ನರ್ಸ್ ತಾನೇ ಹೆರಿಗೆ ಮಾಡಿಸಿದ ಹಿನ್ನೆಲೆಯಲ್ಲಿ ನವಜಾತ ಶಿಶು ಸಾವನ್ನಪ್ಪಿದ ಘಟನೆ ಆನೇಕಲ್ ತಾಲೂಕಿನ ಹಾರಗದ್ದೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

    ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಸಾವನ್ನಪ್ಪಿದೆ ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ. ದಾವಣಗೆರೆಯಿಂದ ಬಂದು ವಡ್ಡರಪಾಳ್ಯದಲ್ಲಿ ನೆಲೆಸಿದ್ದ ದಂಪತಿ ಶಶಿಧರ್ ಮತ್ತು ರಂಜಿತಾ ಅವರ ಮಗು ಜೀವಕಳೆದುಕೊಂಡಿದೆ.

    ಭಾನುವಾರ ಹೆರಿಗೆ ನೋವು ಕಾಣಿಸಿಕೊಂಡು ರಂಜಿತಾರನ್ನು ಪತಿ ಶಶಿಧರ್ ಹಾರಗದ್ದೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದರು. ಆದರೆ ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇರದ ಕಾರಣ ನರ್ಸ್ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಮಗುವಿನ ಉಸಿರಾಟಕ್ಕೆ ತೊಂದರೆ ಆಗಿದೆ. ಕೂಡಲೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ನರ್ಸ್ ದಂಪತಿಗೆ ತಿಳಿಸಿದ್ದಾರೆ.

    ಆದರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗು ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹೆರಿಗೆ ಮಾಡಿಸಿದ ಸರ್ಕಾರಿ ಆಸ್ಪತ್ರೆ ನರ್ಸ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಗುವಿನ ಕುಟುಂಬಸ್ಥರು ವೈದ್ಯರು ಹಾಗೂ ನರ್ಸ್ ನಿರ್ಲಕ್ಷ್ಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಆಪರೇಷನ್ ಬಳಿಕ ಹೊಟ್ಟೆಯಲ್ಲಿ ಮಗು ಇಲ್ಲವೆಂದು ವೈದ್ಯರು

    ಆಪರೇಷನ್ ಬಳಿಕ ಹೊಟ್ಟೆಯಲ್ಲಿ ಮಗು ಇಲ್ಲವೆಂದು ವೈದ್ಯರು

    – ಆಸ್ಪತ್ರೆಯ ಮುಂಭಾಗದಲ್ಲಿ ಹೈಡ್ರಾಮಾ
    – Pesudo Pregnancy case ಎಂದ ವೈದ್ಯರು

    ಭೋಪಾಲ್: ಆಪರೇಷನ್ ಬಳಿಕ ಗರ್ಭಿಣಿ ಹೊಟ್ಟೆಯಲ್ಲಿ ಮಗು ಇಲ್ಲವೆಂದು ವೈದ್ಯರು ಹೇಳಿದ ಬಳಿಕ ಆಸ್ಪತ್ರೆಯ ಮುಂದೆ ಹೈಡ್ರಾಮ ನಡೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಒಂಭತ್ತು ತಿಂಗಳಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಆಪರೇಷನ್ ಬಳಿಕ ನಿಮ್ಮ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ವೈದ್ಯರು ಸುಳ್ಳು ಹೇಳುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಧ್ಯಪ್ರದೇಶದ ಹೋಶಂಗಾಬಾದ್ ರಸ್ತೆಯ ನೊಬಲ್ ಆಸ್ಪತ್ರೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

    ಹೆರಿಗೆ ನೋವೆಂದು ಆಸ್ಪತ್ರೆಗೆ ಕೃಷ್ಣಾ ಸೋಲಂಕಿ ದಾಖಲಾಗಿದ್ದರು. ತುರ್ತು ಪ್ರಕರಣವೆಂದು ವೈದ್ಯರು ಮಹಿಳೆಗೆ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದರು. ಒಂದು ಗಂಟೆಯ ಬಳಿಕ ಆಸ್ಪತ್ರೆಗೆ ಆಗಮಿಸಿದ ಮಹಿಳೆಯ ಪತಿ ಪ್ರೇಮ್ ಲಾಲ್‍ರನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆಸಿ ನಿಮ್ಮ ಪತ್ನಿಯ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ. ಆಕೆ ಗರ್ಭಿಣಿಯೇ ಆಗಿಲ್ಲ ಎಂದು ತಿಳಿಸಿದ್ದಾರೆ.

    ನಡೆದಿದ್ದು ಏನು?
    ಬಂಗರಸಿಯಾ ಸಿಆರ್‍ಪಿಎಫ್ ಕ್ಯಾಂಪ್ ನಿವಾಸಿ ಕೃಷ್ಣಾ ಸೋಲಂಕಿ ಜೂನ್ 2ರಂದು ನೊಬಲ್ ಆಸ್ಪತ್ರೆಗೆ ಸುಮಾರು ರಾತ್ರಿ 11 ಗಂಟೆಗೆ ದಾಖಲಾಗುತ್ತಾರೆ. ಹೆರಿಗೆ ನೋವು ಎಂದು ಹೇಳಿ ದಾಖಲಾದ ಮಹಿಳೆ ತಾನು ಒಂಭತ್ತು ತಿಂಗಳ ತುಂಬು ಗರ್ಭಿಣಿ ಎಂದು ತಿಳಿಸಿದ್ದಾರೆ. ಮಹಿಳೆಯ ಮಾತನ್ನು ನಂಬಿದ ಆಸ್ಪತ್ರೆಯ ಸಿಬ್ಬಂದಿ ಆಕೆಯ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಆಪರೇಷನ್ ವೇಳೆ ಹೊಟ್ಟೆಯಲ್ಲಿ ಮಗು ಇಲ್ಲದಿರುವುದು ಬೆಳಕಿಗೆ ಬಂದಿದೆ.

    ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಮಗು ಜೀವಂತವಾಗಿದೆ. ಮಗುವಿನ ಉಸಿರಾಟ ಪ್ರಕ್ರಿಯೆ ಶೇ.80ರಷ್ಟಿದೆ ಎಂದು ತಿಳಿಸಿ ಅತ್ತಿಗೆಯನ್ನು ಆಪರೇಷನ್ ಕೋಣೆಗೆ ಕರೆದುಕೊಂಡು ಹೋಗಿದ್ದಾರೆ. ಒಂದು ಗಂಟೆಯ ಬಳಿಕ ಸೋದರನನ್ನು ಕರೆದು ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ಹೇಳಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯೇ ಮಗುವನ್ನು ಬೇರೆಡೆಗೆ ರಹಸ್ಯವಾಗಿ ರವಾನಿಸಿದ್ದಾರೆ ಎಂದು ಮಹಿಳೆಯ ಬಾಮೈದ ದೀಪಕ್ ಸೋಲಂಕಿ ಆರೋಪಿಸಿದ್ದಾರೆ.

    ವೈದ್ಯರು ಹೇಳಿದ್ದೇನು?
    ಹೆರಿಗೆ ನೋವು ಎಂದು ದಾಖಲಾದ ಮಹಿಳೆಗೆ ಆಸ್ಪತ್ರೆಯ ಸಿಬ್ಬಂದಿ ಈ ಹಿಂದಿನ ಸೋನೊಗ್ರಾಫಿಯ ರಿಪೋರ್ಟ್ ಕೇಳಿದ್ದಾರೆ. ಈ ವೇಳೆ ಮಹಿಳೆ ತನ್ನ ಬ್ಯಾಗ್ ಮರೆ ಮಾಡುವುದು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆ ಬಚ್ಚಿಟ್ಟ ವರದಿಯಲ್ಲಿ ಆಕೆ ಗರ್ಭಿಣಿ ಅಲ್ಲ ಎಂದು ದಾಖಲಾಗಿದೆ. ಮಹಿಳೆ ಪ್ರಕಾರ ಆಕೆ ಕಳೆದ ಆರು ತಿಂಗಳಿನಿಂದ ನೊಬಲ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದು, ವೈದ್ಯರು ಮೊದಲೇ ಆಕೆ ಗರ್ಭಿಣಿ ಅಲ್ಲ ಎಂದು ಖಚಿತ ಪಡಿಸಿದ್ದರು.

    ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಸೋನೊಗ್ರಾಫಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮಹಿಳೆ ಕಳೆದ ಆರು ತಿಂಗಳಿನಿಂದ ನಿಮ್ಮ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಮೊದಲಿನ ಹೆರಿಗೆ ಸಹ ಶಸ್ತ್ರಚಿಕಿತ್ಸೆಯಿಂದಾಗಿ ನಡೆದಿದೆ ಎಂದಾಗ ಎಮರ್ಜಿನ್ಸಿ ಸಂದರ್ಭದಲ್ಲಿ ಸೋನೊಗ್ರಾಫಿ ಇಲ್ಲದೆಯೇ ಕೆಲವೊಮ್ಮ ಶಸ್ತ್ರಚಿಕಿತ್ಸೆ ಮಾಡಬೇಕಾಗತ್ತದೆ. ಮಹಿಳೆ ಸುಳ್ಳು ಹೇಳುತ್ತಿದ್ದಾರೆ ನೊಬಲ್ ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

    ಮಹಿಳೆ ಸುಡೋ ಪ್ರಗ್ನೆನ್ಸಿ ಕಾಯಿಲೆಗೆ ಒಳಗಾಗಿದ್ದು, ಆಕೆಯನ್ನು ನೋವಿನಿಂದ ಒದ್ದಾಡುತ್ತಿದ್ದ ಆಸ್ಪತ್ರೆಗೆ ಕರೆತರಲಾಗಿತ್ತು. ಮಹಿಳೆಯ ಬಳಿ ದೊರೆತ ರಿಪೋರ್ಟ್ ನಲ್ಲಿ ಆಕೆ ಗರ್ಭಿಣಿ ಅಲ್ಲ ಎಂದು ವರದಿಯಾಗಿದೆ ಎಂದು ನೊಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಪ್ರಜ್ಞಾ ಮಿಶ್ರಾ ತಿಳಿಸಿದ್ದಾರೆ.

    ಏನಿದು ಸುಡೋ ಪ್ರೆಗ್ನೆನ್ಸಿ?
    ಸುಡೋ ಎಂದರೆ ಕಾಲ್ಪನಿಕ. ಸೊಡೋ ಪ್ರೆಗ್ನೆನ್ಸಿಯಿಂದ ಬಳಲುತ್ತಿರುವ ಮಹಿಳೆ ತಾನು ಗರ್ಭಿಣಿ ಎಂದು ಬಲವಾಗಿ ನಂಬಿಕೊಂಡಿರುತ್ತಾರೆ. ನಂಬಿಕೆಯಂತೆ ಮಹಿಳೆಯ ಹೊಟ್ಟೆಯೂ ಸಹ ದೊಡ್ಡದಾಗುತ್ತಾ ಹೋದಾಗ ಆಕೆಯ ನಂಬಿಕೆ ಮತ್ತಷ್ಟು ಬಲವಾಗುತ್ತದೆ. ಈ ಸಂದರ್ಭದಲ್ಲಿ ಸೊನೊಗ್ರಾಫಿ ಮಾಡಿಸಿದಾಗ ನಿಜಾಂಶ ತಿಳಿಯುತ್ತದೆ. ಸಾಮಾನ್ಯವಾಗಿ ಸೊನೊಗ್ರಾಫಿ ವರದಿಗಳಿಲ್ಲದೇ ಯಾರು ಶಸ್ತ್ರಚಿಕಿತ್ಸೆಗೆ ಮುಂದಾಗುವುದಿಲ್ಲ. ಹೆರಿಗೆಯ ತುರ್ತು ಸಂದರ್ಭಗಳಲ್ಲಿ ಎರಡು ಜೀವಗಳ ಉಳಿವಿಗಾಗಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂದು ಜಿಎಂಸಿಯ ಡೀನ್, ಡಾ.ಅರುಣ್ ಕುಮಾರ್ ಹೇಳಿದ್ದಾರೆ.

  • 109 ಗಂಟೆಗಳ ಬಳಿಕ ಪಂಜಾಬ್‍ನ ಕೊಳವೆಬಾವಿಗೆ ಬಿದ್ದಿದ್ದ ಮಗುವಿನ ರಕ್ಷಣೆ- ಸಾವು

    109 ಗಂಟೆಗಳ ಬಳಿಕ ಪಂಜಾಬ್‍ನ ಕೊಳವೆಬಾವಿಗೆ ಬಿದ್ದಿದ್ದ ಮಗುವಿನ ರಕ್ಷಣೆ- ಸಾವು

    ಚಂಡೀಗಢ: 150 ಅಡಿ ಆಳದ ಕೊಳವೆಬಾವಿಗೆ ಬಿದ್ದ 2 ವರ್ಷದ ಬಾಲಕನನ್ನು ಸುಮಾರು 109 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ರಕ್ಷಿಸುವ ಪ್ರಯತ್ನ ನಡೆಸಿದರೂ ಆತ ಮೃತಪಟ್ಟ ಘಟನೆ ಇಂದು ನಡೆದಿದೆ.

    ಫಥೇವೀರ್ ಸಿಂಗ್ ಬಳಕೆ ಮಾಡದ ಕೊಳವೆ ಬಾವಿಗೆ ¸ಬಿದ್ದ ಬಾಲಕ. ಈತ ಸಂಗೂರ್ ಜಿಲ್ಲೆಯ ಭಗವಾನ್ ಪುರ ಗ್ರಾಮದಲ್ಲಿ ತಮ್ಮ ಮನೆಯ ಹತ್ತಿರವೇ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಆಟವಾಡುತ್ತಿದ್ದನು. ಈ ವೇಳೆ ಬಳಕೆ ಮಾಡದೇ ಇರುವ ಬೋರ್ ವೆಲ್ ಒಳಗೆ ಆಯತಪ್ಪಿ ಬಿದ್ದಿದ್ದಾನೆ.

    ಸರಿಸುಮಾರು 7 ಇಂಚು ಅಗಲವಿರುವ ಈ ಕೊಳವೆ ಬಾವಿಯನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಇದನ್ನು ಗಮನಿಸದ ಬಾಲಕ ಆಟವಾಡುತ್ತಾ ಅದರ ಒಳಗಡೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ತಾಯಿ ಬಾಲಕನನ್ನು ರಕ್ಷಿಸಲು ಮುಂದಾದ್ರೂ ವಿಫಲರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆ ಬಳಿಕ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಸುಮಾರು 5 ದಿನಗಳಿಂದ ರಕ್ಷಣಾ ಕಾರ್ಯ ನಡೆದಿದ್ದು, ಇಂದು ಬಾಲಕನನ್ನು ಬೋರ್ ವೆಲ್ ಒಳಗಡೆಯಿಂದ ರಕ್ಷಿಸಲಾಯಿತು. ಕೂಡಲೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಆ ರಾಜ್ಯದಲ್ಲಿ ಚಾಪರ್ ನಿಲುಗಡೆ ಮಾಡಲು ಸಾಧ್ಯವಿಲ್ಲವಾಯಿತು. ಹೀಗಾಗಿ ಬಾಲಕನನ್ನು ರಸ್ತೆ ಮಾರ್ಗವಾಗಿ 140 ಕೀ.ಮಿ ತೆರಳಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆ ಸಂಬಂಧ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ. ದೇವರು ಆತನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.

    ಕಳೆದ ರಾತ್ರಿ ಬಾಲಕನ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದ್ದಂತೆಯೇ ಸ್ಥಳೀಯರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಇದೇ ವೇಳೆ ಅಲ್ಲಿನ ಮುಖ್ಯಮಂತ್ರಿಗಳು ಕೂಡ ವಿರೋಧ ಪಕ್ಷಗಳು ಕಾರ್ಯಾಚರಣೆಯನ್ನು ತಡಮಾಡುತ್ತವೆ ಎಂದು ಆರೋಪಿಸಿದ್ದರು.

  • ಗಂಡ ಹಣ ಕೊಡದ್ದಕ್ಕೆ ಸಿಟ್ಟು- ಮಗುವನ್ನ ಸ್ಟೇಷನ್‍ನಲ್ಲೇ ಬಿಟ್ಟು ಹೋದ ತಾಯಿ!

    ಗಂಡ ಹಣ ಕೊಡದ್ದಕ್ಕೆ ಸಿಟ್ಟು- ಮಗುವನ್ನ ಸ್ಟೇಷನ್‍ನಲ್ಲೇ ಬಿಟ್ಟು ಹೋದ ತಾಯಿ!

    ಕೊಪ್ಪಳ: ಮದುವೆಯಾಗಿ ಮಕ್ಕಳಾದ ಬಳಿಕ ಪತ್ನಿಗೆ ಹಣದ ಮೇಲೆ ವ್ಯಾಮೋಹ ಬಂದಿದೆ. ಪತಿ ಬಳಿ 2 ಲಕ್ಷ ರೂ. ಹಣಕ್ಕಾಗಿ ಪೀಡಿಸಿದ್ದಾಳೆ. ಆದರೆ ಪತಿ ಹಣ ನೀಡದೆ ಇದ್ದಾಗ ಹೆತ್ತ ಮಗುವನ್ನು ಪೊಲೀಸ್ ಠಾಣೆಗೆ ಬಂದು, ನಿನ್ನ ಮಗು ನೀನೇ ಇಟ್ಕೊ ಎಂದು ಬಿಟ್ಟು ಹೋಗಿರುವ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.

    ಕಂಪ್ಲಿ ಮೂಲದ ಸಾಹಿತಿ ಮತ್ತು ಗಂಗಾವತಿಯ ದ್ವಾರಕ್ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಅವರಿಬ್ಬರ ಸುಖಸಂಸಾರಕ್ಕೆ ಒಂದು ಮುದ್ದಾದ ಗಂಡು ಮಗು ಕೂಡ ಹುಟ್ಟಿತ್ತು. ಆದರೆ ಅದ್ಯಾಕೋ ಏನೋ ಸಾಹಿತಿಗೆ ಹಣದ ವ್ಯಾಮೋಹ ಹೆಚ್ಚಾಗಿದೆ.

    ಹಣಕ್ಕಾಗಿ ತನ್ನ ಪತಿಯನ್ನು ಪೀಡಿಸುತ್ತಿದ್ದಳು. ಆದರೆ ಒಮ್ಮಿಂದೊಮ್ಮೆಲೇ ಲಕ್ಷಾಂತರ ರೂಪಾಯಿ ಹಣ ಕೇಳಿದರೆ ಎಲ್ಲಿಂದ ತರೋದು ಎಂದು ಪತಿ ಹೇಳಿದ್ದಾರೆ. ಇದರಿಂದ ಸಿಟ್ಟಾದ ಪತ್ನಿ, ತನ್ನ ಮೂರು ತಿಂಗಳ ಹಸುಗೂಸನ್ನು ವಕೀಲರ ಜೊತೆ ಬಂದು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಬಿಟ್ಟು ಹೋಗಿದ್ದಾಳೆ.

    ಪೊಲೀಸ್ ಠಾಣೆಯಲ್ಲಿ ಬಿಟ್ಟು ಹೋದ ಮಗುವನ್ನು ಎತ್ತಿಕೊಂಡ ತಂದೆ ಏನು ಮಾಡೋದು ಎಂದು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಮೂರು ತಿಂಗಳ ಗಂಡು ಮಗುವಿಗೆ ಎದೆ ಹಾಲುಣಿಸಬೇಕಾದ ತಾಯಿನೇ ಕರುಣೆ ಇಲ್ಲದೆ ಬಿಟ್ಟು ಹೋಗಿದ್ದಾಳೆ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ಬಾಟಲಿ ಹಾಲು ಕುಡಿಸಿದ ತಂದೆ ದ್ವಾರಕ್, ತನಗಾದ ನೋವನ್ನು ಪೊಲೀಸರೊಂದಿಗೆ ಹೇಳಿಕೊಂಡಿದ್ದಾರೆ.

    ಒಟ್ಟಿನಲ್ಲಿ ಪತಿ ಮತ್ತು ಪತ್ನಿಯರ ಗಲಾಟೆಯಲ್ಲಿ ಮಗುವಿಗೆ ತಾಯಿ ಆರೈಕೆ ಸಿಗುತ್ತಿಲ್ಲ. ಮಗುವಿನ ತಂದೆ ಮಗುವನ್ನು ನಾನೇ ಸಾಕುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾರೆ.