Tag: Baby

  • ಗೋಡೆ ಕುಸಿದು ಮಗು ಸಾವು – ತಂದೆ, ತಾಯಿಗೆ ಗಂಭೀರ ಗಾಯ

    ಗೋಡೆ ಕುಸಿದು ಮಗು ಸಾವು – ತಂದೆ, ತಾಯಿಗೆ ಗಂಭೀರ ಗಾಯ

    ಚಾಮರಾಜನಗರ: ಸೋಮವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಚಾಮರಾಜನಗರದ ದೇಶೀಗೌಡನಪುರ ಗ್ರಾಮದ ವೀರಭದ್ರಸ್ವಾಮಿ(4) ಮೃತಪಟ್ಟ ಮಗು. ಭಾರೀ ಮಳೆಗೆ ಮನೆಯ ಗೋಡೆ ಕುಸಿದ ಪರಿಣಾಮ ವೀರಭದ್ರಸ್ವಾಮಿ ಮೃತಪಟ್ಟಿದ್ದಾನೆ. ಅಲ್ಲದೆ ಈ ಘಟನೆಯಲ್ಲಿ ತಂದೆ ಮಲ್ಲೇಶ್ ಮತ್ತು ತಾಯಿ ಚೆನ್ನಮ್ಮ ಅವರಿಗೂ ಗಂಭೀರ ಗಾಯಗಳಾಗಿದೆ.

    ಗಾಯಾಳುಗಳನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸೋಮವಾರ ರಾತ್ರಿ ಚಾಮರಾಜನಗರದಲ್ಲಿ ಧಾರಾಕಾರ ಮಳೆಯಾಗಿದೆ. ಮನೆಯಲ್ಲಿ ಮಲಗಿದ್ದ ವೇಳೆ ದಿಢೀರನೇ ಮನೆಯ ಗೋಡೆ ಕುಸಿದ ಪರಿಣಾಮ ನಾಲ್ಕು ವರ್ಷದ ಮಗು ಸಾವನ್ನಪಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆ-ತಾಯಿಗೆ ತಮ್ಮ ಮಗು ಮೃತಪಟ್ಟಿರುವ ವಿಷಯವೇ ತಿಳಿದಿಲ್ಲ ಎನ್ನಲಾಗಿದೆ.

    ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸೋಮವಾರ ಸಂಜೆ ವೇಳೆಗೆ ದಿಢೀರ್ ಎಂದು ಭಾರೀ ಮಳೆಯಾಗಿದೆ. ನಗರದ ಹೃದಯಭಾಗವಾದ ಮೆಜೆಸ್ಟಿಕ್ ಸೇರಿದಂತೆ ಮೈಸೂರು ಸರ್ಕಲ್, ಸಂಜಯ್ ನಗರ, ಯಶವಂತಪುರ, ಕೋರಮಂಗಲ, ಹೆಬ್ಬಾಳ, ಚಾಮರಾಜನಗರ ಭಾಗಗಳಲ್ಲಿ ಮಳೆಯಾಗಿದೆ.

  • ಇನ್ನೇನಿದ್ರೂ ಮುಂದಿನ ವರ್ಷವೇ ಮದುವೆ: ಗರ್ಭಿಣಿ ಆ್ಯಮಿ

    ಇನ್ನೇನಿದ್ರೂ ಮುಂದಿನ ವರ್ಷವೇ ಮದುವೆ: ಗರ್ಭಿಣಿ ಆ್ಯಮಿ

    ಲಂಡನ್: ಬ್ರಿಟನ್ ಬ್ಯೂಟಿ ಆ್ಯಮಿ ಜಾಕ್ಸನ್ ಈಗ ಗರ್ಭಿಣಿಯಾಗಿದ್ದು, ಮುಂದಿನ ವರ್ಷ ಮದುವೆ ಆಗುವುದಾಗಿ ತಿಳಿಸಿದ್ದಾರೆ.

    ಇತ್ತೀಚೆಗೆ ಆ್ಯಮಿ ಜಾಕ್ಸನ್ ಕಪ್ಪು ಬಣ್ಣದ ಹೈ ಸ್ಲಿಟ್ ಗೌನ್ ಧರಿಸಿ ಅದಕ್ಕೆ ಹೈ ಹೀಲ್ಸ್ ಹಾಕಿ ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಲ್ಲದೆ ಈ ಫೋಟೋ ಹಾಗೂ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ “ದಿ ಲಿಟಲ್ ಮ್ಯಾನ್ ಅಟ್ 33 ವೀಕ್ಸ್” ಎಂದು ಬರೆದುಕೊಂಡಿದ್ದಾರೆ. ಈ ವೇಳೆ ತಾವು ಸದ್ಯಕ್ಕೆ ಮದುವೆಯಾಗುವುದಿಲ್ಲ, ಮುಂದಿನ ವರ್ಷವೇ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಹೇಳಿದ್ದಾರೆ.

    2018 ಜನವರಿ 1ರಂದು ಆ್ಯಮಿ ಜಾಕ್ಸನ್ ಉದ್ಯಮಿ ಜಾರ್ಜ್ ಪನಯೌಟು ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳವುದಾಗಿ ಘೋಷಿಸಿದ್ದರು. ಬ್ರಿಟನ್ ಮದರ್ಸ್ ಡೇಯಂದು ಆ್ಯಮಿ ಜಾಕ್ಸನ್ ಗೆಳೆಯನೊಂದಿಗೆ ಕುಳಿತ ಬೇಬಿ ಬಂಪ್ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿಕೊಳ್ಳುವ ಮೂಲಕ ತಾಯಿ ಆಗುತ್ತಿರುವ ವಿಷಯವನ್ನು ತಿಳಿಸಿದ್ದರು. ಗರ್ಭಿಣಿಯಾದ ಬಳಿಕ ಗೆಳೆಯ ಜಾರ್ಜ್ ಜೊತೆ ಮೇ 5ರಂದು ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು.

    ಆ್ಯಮಿ ಗರ್ಭಿಣಿಯಾದಾಗಿನಿಂದಲೂ ಹೊಸ ಹೊಸ ಫೋಟೋಶೂಟ್‍ನಲ್ಲಿ ಮಿಂಚುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಕಳೆದ ತಿಂಗಳು ಆ್ಯಮಿ ಸ್ವಿಮಿಂಗ್ ಪೂಲ್‍ನಲ್ಲಿ ಪ್ರಿಯಕರ ಜಾರ್ಜ್ ಪನಯೌಟು ಜೊತೆ ಇರುವ ಕೂಲ್ ಫೋಟೋವನ್ನು ಇನ್‍ಸ್ಟಾಗ್ರಾಂ ಹಂಚಿಕೊಂಡಿದ್ದರು. ಈ ಫೋಟೋ ಹಂಚಿಕೊಳ್ಳುವ ಮೊದಲು ಆ್ಯಮಿ ಟಾಪ್‍ಲೆಸ್ ಆಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

    ಅಗಸ್ಟ್ 30ರಂದು ಆ್ಯಮಿ ತಮ್ಮ ಸೀಮಂತವನ್ನು ಮಾಡಿಕೊಂಡಿದ್ದರು. ಅಲ್ಲದೆ ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ , “ನನ್ನ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರು ನನ್ನ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನನ್ನ ಮಗ ತುಂಬಾ ಅದೃಷ್ಟವಂತ ಏಕೆಂದರೆ ಆತನನ್ನು ಪ್ರೀತಿಸುವ ಸಾಕಷ್ಟು ಮಹಿಳೆಯರು ಇಲ್ಲಿ ಇದ್ದಾರೆ. ಹೂವಿನ ಅಲಂಕಾರಕ್ಕಾಗಿ ಧನ್ಯವಾದಗಳು” ಎಂದು ಬರೆದುಕೊಂಡಿದ್ದರು.

  • ಮಗು ಬೇಕೆಂದಾಗ ಮದ್ವೆ ಆಗ್ತೀನಿ: ನಟಿ ತಾಪ್ಸಿ

    ಮಗು ಬೇಕೆಂದಾಗ ಮದ್ವೆ ಆಗ್ತೀನಿ: ನಟಿ ತಾಪ್ಸಿ

    ಮುಂಬೈ: ಬಹುಭಾಷಾ ನಟಿ ತಾಪ್ಸಿ ಪನ್ನು ಮಗು ಬೇಕು ಎಂದು ಎನಿಸಿದ್ದಾಗ ಮಾತ್ರ ಮದುವೆ ಆಗುತ್ತೇನೆ ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ.

    ಇತ್ತೀಚೆಗೆ ನಟಿ ತಾಪ್ಸಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂದರ್ಶಕ ಪ್ರಿಯಕರನ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವಿಷಯದ ಬಗ್ಗೆ ತಾಪ್ಸಿ ಅವರನ್ನು ಪ್ರಶ್ನಿಸಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸಿದ ತಾಪ್ಸಿ, ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಗಾಸಿಪ್ ಮಾತ್ರವಲ್ಲದೇ ನನ್ನ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಆಸಕ್ತಿ ಹೊಂದಿರುವವರಿಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ನನಗೆ ಇನ್ನೂ ಮದುವೆಯಾಗಿಲ್ಲ. ನನಗೆ ಮಕ್ಕಳು ಬೇಕು ಎಂದು ಎನ್ನಿಸಿದಾಗ ಮಾತ್ರ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.

    ಅಲ್ಲದೆ ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಆದರೆ ನಾನು ಪ್ರೀತಿಸುತ್ತಿರುವ ವ್ಯಕ್ತಿ ಎಲ್ಲರೂ ಅಂದುಕೊಂಡಂತೆ ನಟ ಅಥವಾ ಕ್ರಿಕೆಟರ್ ಅಲ್ಲ. ಅವರು ನನ್ನ ಸುತ್ತುಮುತ್ತಲೂ ಇಲ್ಲ. ನಾನು ಮದುವೆಯಾದರೆ ತುಂಬಾ ಸರಳವಾಗಿ ಆಗುತ್ತೇನೆ. ಅದ್ಧೂರಿಯಾಗಿ ಖರ್ಚು ಮಾಡಿ ಮದುವೆಯಾಗುವುದ್ದಕ್ಕೆ ನನಗೆ ಇಷ್ಟವಿಲ್ಲ. ನನ್ನ ಕುಟುಂಬ ಮತ್ತು ಸ್ನೇಹಿತರು ಮಾತ್ರ ನಮ್ಮ ಮದುವೆಯಲ್ಲಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದರು.

    ನಾನು ಪ್ರೀತಿಸುತ್ತಿದ್ದೇನೆ ಎಂದು ಹೇಳಿರುವ ತಾಪ್ಸಿಯವರು ಹುಡುಗನ ಹೆಸರು, ಯಾರು ಎಂಬುವುದನ್ನು ರಿವೀಲ್ ಮಾಡಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿದೆ. ಸದ್ಯಕ್ಕೆ ತಾಪ್ಸಿ `ತಡ್ಕಾ’, `ಶಾಂದ್‍ಕಿ ಆಂಖ್’ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

  • 16 ತಿಂಗಳ ಮಗನನ್ನು ಉಸಿರುಗಟ್ಟಿಸಿ ಕೊಂದ ಪಾಪಿ ತಾಯಿ

    16 ತಿಂಗಳ ಮಗನನ್ನು ಉಸಿರುಗಟ್ಟಿಸಿ ಕೊಂದ ಪಾಪಿ ತಾಯಿ

    ಕೊಪ್ಪಳ: ಹೆತ್ತ ತಾಯಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗನನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೊಪ್ಪಳದ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ.

    ಅಭಿನವ ಕೊಲೆ ಆದ ಮಗ. ಸೋಮವಾರ ಸಂಜೆ ಸೋಮನಾಳ ಗ್ರಾಮದ ಪ್ರತಿಮಾ ತನ್ನ 16 ತಿಂಗಳ ಮಗ ಅಭಿನವನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಗುವಿನ ತಂದೆ ಶಶಿಧರ್ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಶಿಧರ್ ನೀಡಿದ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ತಾಯಿ ಪ್ರತಿಮಾಳನ್ನು ವಶಕ್ಕೆ ಪಡೆದಿದ್ದಾರೆ.

    ದೂರಿನಲ್ಲಿ ಏನಿದೆ?
    ನಾನು ಸುಮಾರು 5-6 ತಿಂಗಳಿನಿಂದ ದುಡಿಯದೆ ಮನೆಯಲ್ಲಿಯೇ ಇದ್ದುದರಿಂದ ನನ್ನ ಪತ್ನಿ ನನಗೆ ಪ್ರತಿದಿನ ನೀನು ದುಡಿಯದೇ ಮನೆಯಲ್ಲಿ ಕುಳಿತರೆ ನನ್ನನ್ನು ಮತ್ತು ನನ್ನ ಮಗನನ್ನು ಹೇಗೆ ಸಾಕುತ್ತೀಯಾ. ನೀನು ದುಡಿಯದಿದ್ದರೆ ಮಗನ ಮುಂದಿನ ಭವಿಷ್ಯ ಏನು. ನೀನು ಈ ರೀತಿ ದುಡಿಯದೇ ಇದ್ದರೆ ಮಗನನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನನಗೆ ಪ್ರತಿದಿನ ಹೇಳುತ್ತಿದ್ದಳು. ಈ ವಿಷಯ ನಮ್ಮ ಮನೆಯಲ್ಲಿ ನನ್ನ ಅಣ್ಣಂದಿರಿಗೆ ಮತ್ತು ನಮ್ಮ ತಾಯಿಗೆ ತಿಳಿಸಿದಾಗ ಅವರು ಸಹ ಆಕೆಗೆ ಈ ರೀತಿ ಮಾಡದಂತೆ ಬುದ್ಧಿವಾದ ಹೇಳಿದ್ದರು.

    ಸೋಮವಾರ ನಾನು ಕಾರಟಗಿಗೆ ಬಂದು ನವಲಿ ರಸ್ತೆಯಲ್ಲಿರುವ ಶ್ರೀ ಚನ್ನಬಸಪ್ಪ ಅವರ ಪೆಟ್ರೋಲ್ ಬಂಕ್‍ನಲ್ಲಿ ಕೆಲಸಕ್ಕಾಗಿ ಕೇಳಿದ್ದೇನು. ಅವರು ಇಂದು ಬೆಳಗ್ಗೆ 6 ಗಂಟೆಗೆ ಬರಲು ಹೇಳಿದ್ದರು. ನಾನು ಕೆಲಸಕ್ಕೆ ಸೇರಿದ ವಿಷಯವನ್ನು ಹೇಳದೇ ಸೋಮವಾರ ಬೆಳಗ್ಗೆ 5 ಗಂಟೆಗೆ ಮನೆ ಬಿಟ್ಟು ಕಾರಟಗಿಯ ಪೆಟ್ರೋಲ್ ಬಂಕ್‍ನಲ್ಲಿ ಕೆಲಸಕ್ಕೆ ಬಂದೆ. ನಂತರ ಸಂಜೆ ನನ್ನ ತಾಯಿ ಪಾರ್ವತಮ್ಮ ನನಗೆ ಫೋನ್ ಮಾಡಿ ಮೇಲಿನ ರೂಮಿನಲ್ಲಿ ನಿನ್ನ ಪತ್ನಿ ಬೆಳಗ್ಗೆಯಿಂದ ಒಳಗಡೆಯಿಂದ ಲಾಕ್ ಮಾಡಿಕೊಂಡಿದ್ದಾಳೆ. ಎಷ್ಟು ಬಡಿದರೂ ತೆಗೆಯುತ್ತಿಲ್ಲ. ನೀನು ಕೂಡಲೇ ಬಾ ಎಂದು ತಿಳಿಸಿದರು. ಬಳಿಕ ನಾನು ಮನೆಗೆ ಹೋಗಿ ಬಾಗಿಲು ಬಡಿದೆ. ಆಗ ಪತ್ನಿ ಬಾಗಿಲು ತೆರೆದಿದ್ದಾಳೆ. ಈ ವೇಳೆ ಮಗು ಮೃತಪಟ್ಟಿತ್ತು. ಅಲ್ಲದೆ ಮಗುವಿನ ಎಡಕಿವಿಯ ಹತ್ತಿರ ತರಚಿದ ಗಾಯ, ಮೇಲಿನ ತುಟಿಯಲ್ಲಿ ಸ್ವಲ್ಪ ರಕ್ತ ಬಂದಂತೆ ಕಂಡು ಬಂದಿತ್ತು.

    ಈ ಬಗ್ಗೆ ನನ್ನ ಪತ್ನಿಯನ್ನು ವಿಚಾರಿಸಿದಾಗ ನೀಡು ದುಡಿಯದೇ ಇದ್ದುದ್ದರಿಂದ ನಾನೇ ಮಗುವಿನ ಬಾಯಿ ಹಾಗೂ ಮೂಗನ್ನು ಕೈಯಿಂದ ಒತ್ತಿ ಉಸಿರುಗಟ್ಟಿಸಿ ಸಾಯಿಸಿದ್ದೇನೆ ಎಂದು ಹೇಳಿದ್ದಾಳೆ. ನನ್ನ ಮಗ ಅಭಿನವನನ್ನು ಕೊಲೆ ಮಾಡಿದ ನನ್ನ ಪತ್ನಿಯ ವಿರುದ್ಧ ಕಾನೂನು ಕ್ರಮಕೈಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಪತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ಅಮ್ಮನಾದ ಸಂತಸದಲ್ಲಿ ‘ಮಜಾ ಟಾಕೀಸ್’ರಾಣಿ

    ಅಮ್ಮನಾದ ಸಂತಸದಲ್ಲಿ ‘ಮಜಾ ಟಾಕೀಸ್’ರಾಣಿ

    ಬೆಂಗಳೂರು: ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.

    ನಟಿ ಶ್ವೇತಾ ಚೆಂಗಪ್ಪ ಅವರು ಸೋಮವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಮಗೆ ಮಗುವಾಗಿರುವ ಸಂತಸವನ್ನು ಶ್ವೇತಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    “ನಾವು ಈಗ ಮೂವರಾಗಿದ್ದೇವೆ. ನಮ್ಮ ತಾಯಿ, ತಂದೆ, ಕುಟುಂಬ, ಸ್ನೇಹಿತರು ಮತ್ತು ನಿಮ್ಮೆಲ್ಲರ ಶುಭಾಶಯ ಮತ್ತು ಪ್ರೀತಿಯಿಂದ ನಾನು ಹಾಗೂ ಕಿರಣ್ ನಮ್ಮ ಸಂತೋಷವನ್ನು ಸ್ವಾಗತಿಸಿದ್ದೇವೆ. ನಮಗೆ ಗಂಡು ಮಗುವಾಗಿದೆ” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಆಸ್ಪತ್ರೆಯಲ್ಲಿ ಶ್ವೇತಾ ಮತ್ತು ಕಿರಣ್ ಇಬ್ಬರೂ ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    https://www.instagram.com/p/B2Mrt-yDyLg/

    ಶ್ವೇತಾ ಚಂಗಪ್ಪ ಅವರ ಪತಿಯ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದರು. ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ `ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ.

  • ಮಗುವಿಗೆ ಜನ್ಮ ನೀಡೋದು ನನ್ನ ಟಾಪ್ ಲಿಸ್ಟ್‌ನಲ್ಲಿದೆ: ಪ್ರಿಯಾಂಕಾ

    ಮಗುವಿಗೆ ಜನ್ಮ ನೀಡೋದು ನನ್ನ ಟಾಪ್ ಲಿಸ್ಟ್‌ನಲ್ಲಿದೆ: ಪ್ರಿಯಾಂಕಾ

    ಮುಂಬೈ: ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅವರು ಮನೆ ಖರೀದಿಸುವುದು ಹಾಗೂ ಮಗುವಿಗೆ ಜನ್ಮ ನೀಡುವುದು ನನ್ನ ಟಾಪ್ ಲಿಸ್ಟ್‌ನಲ್ಲಿದೆ ಎಂದು ಹೇಳಿದ್ದಾರೆ.

    ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಅವರು ಮ್ಯಾಗಜೀನ್ ಒಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ನಾನು ಸುಮಾರು ದಿನಗಳಿಂದ ಲಾಸ್ ಏಂಜಲೀಸ್‍ನಲ್ಲಿ ಮನೆ ಹುಡುಕುತ್ತಿದ್ದೇನೆ. ಈಗಾಗಲೇ ಮುಂಬೈ ಹಾಗೂ ನ್ಯೂಯಾರ್ಕ್ ನಲ್ಲಿ ನನ್ನ ಮನೆ ಇದೆ. ಮುಂಬೈ ನೆನಪಾಗಲಿ ಎಂದು ನಾನು ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಲು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ಬಳಿಕ ಮಾತನಾಡಿದ ಪ್ರಿಯಾಂಕಾ, ನನ್ನ ಅಕ್ಕಪಕ್ಕ ನಾನು ಪ್ರೀತಿಸುವ ಜನರಿದ್ದರೆ ನಾನು ತುಂಬಾ ಖುಷಿಯಾಗಿರುತ್ತೇನೆ. ಈಗ ನನಗಾಗಿ ಒಂದು ಮನೆ ಖರೀದಿಸುವುದು ಹಾಗೂ ಮಗುವಿಗೆ ಜನ್ಮ ನೀಡುವುದು ನನ್ನ ಟಾಪ್ ಲಿಸ್ಟ್‌ನಲ್ಲಿ ಇದೆ.

    ಕಳೆದ ವರ್ಷ ಡಿಸೆಂಬರ್ 1 ಮತ್ತು 2ರಂದು ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಇಬ್ಬರೂ ತಮ್ಮ ಕುಟುಂಬದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಕ್ರಿಶ್ಚಿಯನ್ ಹಾಗೂ ಹಿಂದೂ ಎರಡೂ ಸಂಪ್ರದಾಯದ ಪ್ರಕಾರ ಸಪ್ತಪದಿ ತುಳಿದಿದ್ದರು. ಪ್ರಿಯಾಂಕಾ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕದಲ್ಲಿ ಮಾಡಿಕೊಂಡಿದ್ದರು.

  • ವೈದ್ಯರ ನಿರ್ಲಕ್ಷ್ಯ – 9 ತಿಂಗಳ ಗರ್ಭಿಣಿ, ಮಗು ಆಸ್ಪತ್ರೆಯಲ್ಲೇ ಸಾವು

    ವೈದ್ಯರ ನಿರ್ಲಕ್ಷ್ಯ – 9 ತಿಂಗಳ ಗರ್ಭಿಣಿ, ಮಗು ಆಸ್ಪತ್ರೆಯಲ್ಲೇ ಸಾವು

    ಕೋಲಾರ: ಗಣೇಶ್ ಹೆಲ್ತ್ ಕೇರ್ ಖಾಸಗಿ ಆಸ್ಪತ್ರೆಗೆ ಡೆಲಿವರಿ ಮಾಡಿಸಲು ದಾಖಲಾಗಿದ್ದ 9 ತಿಂಗಳ ಗರ್ಭಿಣಿ ಮೃತಪಟ್ಟಿದ್ದಾರೆ.

    ಕೋಲಾರ ತಾಲೂಕಿನ ಮುದುವತ್ತಿ ಗ್ರಾಮದ ನಿವಾಸಿ ಸುಧಾ(22) ಮೃತ ಗರ್ಭಿಣಿ. ಗಣೇಶ್ ಹೆಲ್ತ್ ಕೇರ್ ನ ಡಾ. ಲತಾ ಅವರ ನಿರ್ಲಕ್ಷ್ಯದಿಂದ ಸುಧಾ ಹಾಗೂ ಅವರ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.

    ಹೆರಿಗೆಗೆಂದು ಗಣೇಶ್ ಹೆಲ್ತ್ ಕೇರ್ ಆಸ್ಪತ್ರೆಗೆ ಸುಧಾ ಅವರು ದಾಖಲಾಗಿದ್ದರು. ಆದರೆ ಹೆರಿಗೆಗೆ ಬಂದವರು ಮಸಣ ಸೇರಿದ್ದಾರೆ. ಅವರ ಜೊತೆ ಹೊಟ್ಟೆಯಲ್ಲಿಯೇ ಶಿಶು ಕೂಡ ಮೃತಪಟ್ಟಿದೆ. ಆದರೆ ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ವೈದ್ಯರು ರೋಗಿಯನ್ನು ಸರಿಯಾಗಿ ತಪಾಸಣೆ ಮಾಡಿಲ್ಲ. ಬೇಜವಾಬ್ದಾರಿಯಿಂದ ಕೆಲಸ ಮಾಡಿ ಎರಡು ಜೀವವನ್ನು ಬಲಿ ಪಡೆದಿದ್ದಾರೆ ಎಂದು ಮಹಿಳೆಯ ಪೋಷಕರು, ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನ್ಯಾಯ ಸಿಗುವವರೆಗೂ ಗರ್ಭಿಣಿ ಹಾಗೂ ಶಿಶುವಿನ ಮೃತದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಲ್ಲ ಎಂದು ಪೋಷಕರು ಹಾಗೂ ಸಂಬಂಧಿಕರು ಪಟ್ಟು ಹಿಡಿದಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮಗುವಿನ ಜೊತೆಗೆ ಗೊಂಬೆಗೂ ಚಿಕಿತ್ಸೆ

    ಮಗುವಿನ ಜೊತೆಗೆ ಗೊಂಬೆಗೂ ಚಿಕಿತ್ಸೆ

    ನವದೆಹಲಿ: ಗೊಂಬೆಗೆ ಚಿಕಿತ್ಸೆ ನೀಡುವ ಮೂಲಕ ವೈದ್ಯರು 11 ತಿಂಗಳ ಮಗುವಿನ ಕಾಲು ನೋವನ್ನು ಗುಣಪಡಿಸಿದ ಅಪರೂಪದ ಸಂಗತಿಯೊಂದು ರಾಷ್ಟ್ರರಾಜಧಾನಿ ನವದೆಹಲಿಯ ಲೋಕನಾಯಕ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ.

    11 ತಿಂಗಳ ಮಗು ಝಿಕ್ರಾಳ ಕಾಲು ಮೂಳೆ ಮುರಿದು ಹೋಗಿತ್ತು. ಈ ವೇಳೆ ಮಗುವಿನ ಜೊತೆಗೆ ಆಕೆಯ ಗೊಂಬೆಗೂ ಕೂಡ ಚಿಕಿತ್ಸೆ ನೀಡಲಾಯಿತು. ಮಗು 13 ದಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಗೊಂಬೆ ಆ ಮಗುವಿಗೆ ಸಾಥ್ ನೀಡಿದೆ. ಝಿಕ್ರಾ, ಮಹಮ್ಮದ್ ಶಹಜಾದ್ ಮಲಿಕ್ ಮಗಳಾಗಿದ್ದು ಇವರು ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಾರೆ. 13 ದಿನಗಳ ಹಿಂದೆ ಝಿಕ್ರಾ ಮಲಗಿದ್ದಾಗ ಹಾಸಿಗೆ ಮೇಲಿಂದ ಕೆಳಗೆ ಬಿದಿದ್ದಳು. ಆಗ ಅವರ ತಂದೆ ಮಲಿಕ್ ತಮ್ಮ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.

    ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಾಗ ವೈದ್ಯರು ಎಕ್ಸ್ ರೇ ಮಾಡಿದ್ದಾರೆ. ಈ ವೇಳೆ ಕಾಲು ಫ್ರ್ಯಾಕ್ಚರ್ ಆಗಿರುವ ವಿಷಯ ತಿಳಿದು ಬಂದಿದೆ. ಆಗ ವೈದ್ಯರು ಟ್ರ್ಯಾಕ್ಷನ್ ರಾಡ್ ಮೂಲಕ ಚಿಕಿತ್ಸೆ ನೀಡಬೇಕಾಯಿತು. ಚಿಕ್ಕ ಮಕ್ಕಳಿಗೆ ಟ್ರ್ಯಾಕ್ಷನ್ ರಾಡ್ ಹಾಕಿದರೆ ಕಾಲುಗಳನ್ನು ಮೇಲೆ ಕಟ್ಟಬೇಕಾಗುತ್ತದೆ. ಹೀಗೆ ಮಾಡಿದರೆ ಕಾಲಿನ ಮೂಳೆ ಸರಿ ಹೋಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

    ಹೀಗಾಗಿ ಚಿಕಿತ್ಸೆಗೆಂದು ಝಿಕ್ರಾಳನ್ನು ವೈದ್ಯರು ಹಾಸಿಗೆ ಮೇಲೆ ಮಲಗಿಸಿದಾಗ ಆಕೆ ಒಂದೇ ಕಡೆ ಮಲಗುತ್ತಿರಲಿಲ್ಲ. ಹಾಗಾಗಿ ವೈದ್ಯರಿಗೆ ಝಿಕ್ರಾಳಿಗೆ ಚಿಕಿತ್ಸೆ ಕೊಡಲು ಕಷ್ಟವಾಗುತ್ತಿತ್ತು. ಅಲ್ಲದೆ ಆಕೆಯ ಕಾಲಿಗೆ ಬ್ಯಾಂಡೇಜ್ ಹಾಕಲು ಆಗುತ್ತಿರಲಿಲ್ಲ. ಝಿಕ್ರಾ ನೋವಿನಿಂದ ನರಳುತ್ತಿದ್ದಳು. ಈ ವೇಳೆ ಝಿಕ್ರಾ ತಾಯಿ ಫರೀನ್‍ಗೆ ಆಕೆಯ ಅಜ್ಜಿ ನೀಡಿದ ಗೊಂಬೆ ನೆನಪಾಗಿದೆ. ಝಿಕ್ರಾ ಈ ಗೊಂಬೆಯನ್ನು ಹೆಚ್ಚು ಇಷ್ಟಪಡುತ್ತಿದ್ದಳು. ಬಳಿಕ ಫರೀನ್ ಆ ಗೊಂಬೆಯನ್ನು ಆಸ್ಪತ್ರೆಗೆ ತಂದಾಗ ಝಿಕ್ರಾ ಖುಷಿಪಟ್ಟಿದ್ದಾಳೆ.

    ಝಿಕ್ರಾಗೆ ಬ್ಯಾಂಡೇಜ್ ಹಾಕುವ ಮೊದಲು ವೈದ್ಯರು ಗೊಂಬೆಗೆ ಬ್ಯಾಂಡೇಜ್ ಹಾಕಿದ್ದಾರೆ. ಇದನ್ನು ನೋಡಿದ ಝಿಕ್ರಾ ಸುಮ್ಮನೆ ಬ್ಯಾಂಡೇಜ್ ಕಟ್ಟಿಸಿಕೊಂಡಿದ್ದಾಳೆ. ಈಗ ಝಿಕ್ರಾ ಹಾಗೂ ಆಕೆಯ ಗೊಂಬೆ ‘ಪರಿ’ ಒಂದೇ ಹಾಸಿಗೆಯಲ್ಲಿ ದಾಖಲಾಗಿದ್ದಾರೆ. ಗೊಂಬೆ ಇಲ್ಲದಿದ್ದರೆ ಮಗುವಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತಿತ್ತು. ಗೊಂಬೆಯ ಕಾರಣ ಝಿಕ್ರಾ ಖುಷಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮಗಳು ಆದಷ್ಟು ಬೇಗ ಸರಿಹೋಗಲಿ. ಬೇರೆ ವಿಭಾಗದ ವೈದ್ಯರು ಕೂಡ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಝಿಕ್ರಾ ತಂದೆ ಹೇಳಿದ್ದಾರೆ.

  • ಕಲಾಪದ ವೇಳೆ ಅಳುತ್ತಿದ್ದ ಸಂಸದರ ಮಗುವಿಗೆ ಹಾಲು ಉಣಿಸಿದ ಸ್ಪೀಕರ್

    ಕಲಾಪದ ವೇಳೆ ಅಳುತ್ತಿದ್ದ ಸಂಸದರ ಮಗುವಿಗೆ ಹಾಲು ಉಣಿಸಿದ ಸ್ಪೀಕರ್

    ವೆಲ್ಲಿಂಗ್ಟನ್: ಕಲಾಪದ ವೇಳೆ ಅಳುತ್ತಿದ್ದ ಸಂಸದರ ಮಗುವಿಗೆ ಸ್ಪೀಕರ್ ಒಬ್ಬರು ಬಾಟಲ್ ಹಾಲು ಉಣಿಸಿದ ಪ್ರಸಂಗ ನ್ಯೂಜಿಲೆಂಡ್‍ನ ಪಾರ್ಲಿಮೆಂಟ್‍ನಲ್ಲಿ ನಡೆದಿದೆ.

    ನ್ಯೂಜಿಲೆಂಡ್‍ನ ಸಂಸದೆ ತಮೆತಿ ಕೋಫೆ ಅವರು ತಮ್ಮ ನವಜಾತ ಶಿಶುವಿನೊಂದಿಗೆ ಬುಧವಾರ ಸಂಸತ್ತಿಗೆ ಬಂದ್ದರು. ಚರ್ಚೆಯ ವೇಳೆ ಕೋಫೆ ಅವರ ಮಗು ಅಳುವುದನ್ನು ಸ್ಪೀಕರ್ ಟ್ರೆವರ್ ಮಲ್ಲಾರ್ಡ್ ಕೇಳಿಸಿಕೊಂಡರು. ಇದರಿಂದಾಗಿ ಚರ್ಚೆಗೆ ತೊಂದರೆ ಉಂಟಾಗಬಾದರು ಎಂದು ಮಗುವನ್ನು ಕೋಫೆ ಅವರಿಂದ ಪಡೆದರು. ಬಳಿಕ ಬಾಟಲ್‍ನಲ್ಲಿದ್ದ ಹಾಲನ್ನು ಕುಡಿಸುತ್ತಾ ಮಗುವನ್ನು ಸಮಾಧಾನಪಡಿಸಿ ಚರ್ಚೆಯನ್ನು ಆಲಿಸಿದರು.

    ನ್ಯೂಜಿಲೆಂಡ್ ಪಾರ್ಲಿಮೆಂಟ್ ಹೌಸ್ ನಲ್ಲಿ ನಡೆದ ಈ ಪ್ರಸಂಗದ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಟ್ವಿಟ್ಟಿಗರು ವಿಡಿಯೋ ಹಾಗೂ ಫೋಟೋಗಳನ್ನು ನೋಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಈ ಕುರಿತು ಫೋಟೋಗಳನ್ನು ಟ್ವೀಟ್ ಮಾಡಿರುವ ಸ್ಪೀಕರ್ ಟ್ರೆವರ್ ಮಲ್ಲಾರ್ಡ್ ಅವರು, ಸಾಮಾನ್ಯವಾಗಿ ಸ್ಪೀಕರ್ ಖುರ್ಚಿ ಮೇಲೆ ನಿರ್ದಿಷ್ಟ ವ್ಯಕ್ತಿ ಮಾತ್ರ ಕೂರುತ್ತಾರೆ. ಆದರೆ ಇಂದು ಒಬ್ಬ ವಿಐಪಿ ನನ್ನೊಂದಿಗೆ ಸ್ಥಾನವನ್ನು ಹಂಚಿಕೊಂಡಿದ್ದಾರೆ. ತಮೆತಿ ಕೋಫೆ ಹಾಗೂ ತಿಮ್ ಕುಟುಂಬದ ಹೊಸ ಸದಸ್ಯರಿಗೆ ಅಭಿನಂದನೆ ಎಂದು ಬರೆದುಕೊಂಡಿದ್ದಾರೆ.

  • ಮಗುವಿಗೆ ಜನ್ಮ ನೀಡಿ 11 ವಾರದಲ್ಲಿ ಎರಡನೇ ಬಾರಿ ತಾಯಿಯಾದ ಲಿಲಿಯಾ

    ಮಗುವಿಗೆ ಜನ್ಮ ನೀಡಿ 11 ವಾರದಲ್ಲಿ ಎರಡನೇ ಬಾರಿ ತಾಯಿಯಾದ ಲಿಲಿಯಾ

    ನೂರ್ ಸುಲ್ತಾನ್: ಮಹಿಳೆಯೊಬ್ಬರು ಮೊದಲ ಮಗುವಿಗೆ ಜನ್ಮ ನೀಡಿ 11 ವಾರದಲ್ಲೇ ಮತ್ತೊಂದು ಶಿಶುವಿಗೆ ಜನ್ಮ ನೀಡಿದ ಘಟನೆ ಕಜಾಖಸ್ತಾನದಲ್ಲಿ ನಡೆದಿದೆ.

    ಲಿಲಿಯಾ ಕೋನೋವಾಲೋವಾ ಮೊದಲ ಮಗುವಿಗೆ ಜನ್ಮ ನೀಡಿದ 11 ವಾರದಲ್ಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಅಂದರೆ ಇಬ್ಬರು ಅವಳಿ ಮಕ್ಕಳು. ಲಿಲಿಯಾ ಆರೋಗ್ಯದ ಪರಿಸ್ಥಿತಿ ತಿಳಿದ ವೈದ್ಯರು ಡೆಲಿವರಿಗೆ ಮೊದಲೇ ಎಲ್ಲಾ ತಯಾರಿ ನಡೆಸಿದ್ದರು. ಈಗಾಗಲೇ ಲಿಲಿಯಾ ಅವರಿಗೆ 7 ವರ್ಷದ ಮಗಳಿದ್ದಾಳೆ. ಲಿಲಿಯಾ ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗ, ಅವರಿಗೆ ಎರಡು ಗರ್ಭಕೋಶ ಇರುವುದಾಗಿ ವೈದ್ಯರು ಹೇಳಿದ್ದರು.

    ಎರಡನೇ ಬಾರಿಗೆ ಲಿಲಿಯಾ ಗರ್ಭಿಣಿಯಾಗಿದ್ದಾಗ, ಅವಳಿ ಮಕ್ಕಳಿಗೆ ಜನ್ಮ ನೀಡುವುದಾಗಿ ವೈದ್ಯರು ತಿಳಿಸಿದ್ದರು. ಇಬ್ಬರು ಮಕ್ಕಳು ಲಿಲಿಯಾಳ ಬೇರೆ ಬೇರೆ ಗರ್ಭದಲ್ಲಿ ಬೆಳೆಯುತ್ತಿತ್ತು. ಮೇ 24ರಂದು ಲಿಲಿಯಾ 6 ತಿಂಗಳ ಗರ್ಭಿಣಿಯಾಗಿದ್ದಾಗಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಗ ಮಗುವಿನ ತೂಕ ಕೇವಲ 850 ಗ್ರಾಂ ಇತ್ತು. ಲಿಲಿಯಾ ಅವರ ಮತ್ತೊಂದು ಗರ್ಭದಲ್ಲಿ ಬೆಳೆಯುತ್ತಿದ್ದ ಮಗು 9 ತಿಂಗಳು ನಂತರ ಜನಿಸಿದೆ. ಇಬ್ಬರು ಮಕ್ಕಳು ಈಗ ಆರೋಗ್ಯದಿಂದ ಇದ್ದಾರೆ.

    ವೈದ್ಯರು ನನ್ನ ಆರೋಗ್ಯದ ಸ್ಥಿತಿ ಬಗ್ಗೆ ಹೇಳಿದ್ದಾಗ ನಾನು ಆತಂಕಗೊಂಡಿದೆ. 9 ತಿಂಗಳು ಆಗುವ ಮೊದಲೇ ಮಗಳು ಜನಿಸಿದರಿಂದ ನಾನು ಚಿಂತೆಗೊಳಗಾಗಿದೆ. ಆದರೆ ವೈದ್ಯರು ದೊಡ್ಡವರು. ಅವರು ನನ್ನ ಮಗುವನ್ನು ಉಳಿಸಿದರು. ಅಗಸ್ಟ್ 9ರಂದು ನಾನು ಗಂಡು ಮಗುವಿಗೆ ಜನ್ಮ ನೀಡಿದ್ದೇನೆ. ನಾನು ಈಗ ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತೇನೆ ಎಂದು ಲಿಲಿಯಾ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ಬೇರೆ ಬೇರೆ ಸಮಯದಲ್ಲಿ ಅವಳಿ ಮಕ್ಕಳು ಜನಿಸಿರುವುದು ಇದು ಕಜಾಖಸ್ತಾನದ ಇತಿಹಾಸದಲ್ಲೇ ಮೊದಲ ಬಾರಿ ಆಗಿದೆ. ಅವಳಿ ಮಕ್ಕಳು ಇಬ್ಬರು ಅಣ್ಣ-ತಂಗಿಯಾಗಿದ್ದು, ಇಬ್ಬರ ನಡುವೆ 11 ವಾರ ಅಂತರವಿದೆ. ತಾಯಿ ಹಾಗೂ ಇಬ್ಬರು ಮಕ್ಕಳು ಕ್ಷೇಮವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.