Tag: Baby

  • ಸಲ್ಮಾನ್ ಹುಟ್ಟುಹಬ್ಬದಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅರ್ಪಿತಾ

    ಸಲ್ಮಾನ್ ಹುಟ್ಟುಹಬ್ಬದಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅರ್ಪಿತಾ

    ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಇಂದು ತಮ್ಮ 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದಂದೇ ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಅರ್ಪಿತಾ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗುರುವಾರ ರಾತ್ರಿ ಅರ್ಪಿತಾ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬದಂದೇ ಅರ್ಪಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹಾಗಾಗಿ ಡಿಸೆಂಬರ್ 27ರಂದು ಖಾನ್ ಕುಟುಂಬಕ್ಕೆ ಸಂಭ್ರಮಾಚರಣೆ ದುಪ್ಪಟ್ಟಾಗಿದೆ.

    ಈ ಬಗ್ಗೆ ಅರ್ಪಿತಾ ಅವರ ಪತಿ, ನಟ ಆಯೂಷ್, “ಹೆಣ್ಣು ಮಗು ಜನಿಸಿದೆ ಎಂದು ಹೇಳಲು ತುಂಬಾ ಖುಷಿಯಾಗುತ್ತಿದೆ. ಈ ವಿಶೇಷ ದಿನದಂದು ನಾನು ನನ್ನ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಹಾಗೂ ಎಲ್ಲರಿಗೂ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಇಷ್ಟು ಪ್ರೀತಿ ತೋರಿದ ಮಾಧ್ಯಮಕ್ಕೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    We’ve been blessed with a beautiful baby girl. Thank you so much for all the love and blessings for Ayat Sharma

    A post shared by Aayush Sharma (@aaysharma) on

    ಆಯೂಷ್ ಹಾಗೂ ಅರ್ಪಿತಾ 2014 ನವೆಂಬರ್ 18ರಂದು ಹೈದರಾಬಾದ್‍ನ ತಾಜ್ ಫಾಲಕ್‍ನೂಮಾ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2016 ಮಾರ್ಚ್ 30ರಂದು ಅರ್ಪಿತಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಆ ಮಗುವಿಗೆ ಅಹಿಲ್ ಎಂದು ನಾಮಕರಣ ಮಾಡಿದ್ದರು. 2018ರಲ್ಲಿ `ಲವ್ ಯಾತ್ರಿ’ ಚಿತ್ರದ ಮೂಲಕ ಆಯೂಷ್ ಶರ್ಮಾ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು.

  • ಮದ್ವೆಯಾಗಿ ಎರಡೂವರೆ ವರ್ಷವಾದ್ರೂ ಮಕ್ಳಾಗಿಲ್ಲವೆಂದು ಆಶ್ರಮದಿಂದ ಮಗುವನ್ನು ಕದ್ದ

    ಮದ್ವೆಯಾಗಿ ಎರಡೂವರೆ ವರ್ಷವಾದ್ರೂ ಮಕ್ಳಾಗಿಲ್ಲವೆಂದು ಆಶ್ರಮದಿಂದ ಮಗುವನ್ನು ಕದ್ದ

    ಚಂಡೀಗಢ್: ಮದುವೆಯಾಗಿ ಎರಡೂವರೆ ವರ್ಷವಾದರೂ ಮಕ್ಕಳಾಗಿಲ್ಲ ಎಂದು ವ್ಯಕ್ತಿಯೊಬ್ಬ ಆಶ್ರಮದಿಂದ ಮಗುವನ್ನು ಕದ್ದು ಅರೆಸ್ಟ್ ಆದ ಘಟನೆ ಹರಿಯಾಣದ ಕೈತಲ್ ಜಿಲ್ಲೆಯಲ್ಲಿ ನಡೆದಿದೆ.

    ವಿಕಾಸ್ ಮಗುವನ್ನು ಕದ್ದು ಅರೆಸ್ಟ್ ಆದ ವ್ಯಕ್ತಿ. ಮದುವೆಯಾಗಿ ಎರಡೂವರೆ ವರ್ಷವಾದರೂ ದಂಪತಿಗೆ ಮಕ್ಕಳಾಗಿಲ್ಲ. ಈ ಕಾರಣಕ್ಕಾಗಿ ಪತಿ-ಪತ್ನಿ ಇಬ್ಬರು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಆದರೆ ಮಗುವನ್ನು ದತ್ತು ಪಡೆಯುವುದಕ್ಕೆ ತುಂಬಾ ದೊಡ್ಡ ಪ್ರಕ್ರಿಯೆಗಳಿದ್ದ ಕಾರಣ ವಿಕಾಸ್ ಆಶ್ರಮದಿಂದ ಮಗುವನ್ನು ಕದ್ದಿದ್ದನು.

    ಆಶ್ರಮದಿಂದ ವಿಕಾಸ್ ಮಗುವನ್ನು ಕದ್ದ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಾಧ್ಯಮಗಳಲ್ಲಿ ಪ್ರಸಾರವಾಗುವುದಕ್ಕೆ ಶುರುವಾಯಿತು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ವಿಕಾಸ್ ಪೊಲೀಸ್ ಠಾಣೆಗೆ ಹೋಗಿ ಮಗುವನ್ನು ಹಿಂದಿರುಗಿಸಿದ್ದನು.

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಪಿ ವಿರೇಂದ್ರ ಅವರು, ಮದುವೆಯಾಗಿ ಎರಡೂವರೆ ವರ್ಷವಾದ್ರೂ ಮಕ್ಕಳಾಗದ ಕಾರಣ ಪತಿ-ಪತ್ನಿ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಅಲ್ಲದೆ ಇಬ್ಬರು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಮಗುವನ್ನು ದತ್ತು ಪಡೆಯುವುದಕ್ಕೆ ತುಂಬಾ ದೊಡ್ಡ ಪ್ರಕ್ರಿಯೆಗಳಿದ್ದ ಕಾರಣ ವಿಕಾಸ್ ಆಶ್ರಮದಿಂದ ಮಗುವನ್ನು ಕದ್ದಿದ್ದಾನೆ ಎಂದರು.

    ಮಾಧ್ಯಮದಲ್ಲಿ ಈ ಸುದ್ದಿ ಪ್ರಸಾರವಾಗಿದ್ದಕ್ಕೆ ವಿಕಾಸ್ ತನ್ನ ಮನಸ್ಸು ಬದಲಾಯಿಸಿ ಮಗುವನ್ನು ನಮ್ಮ ಬಳಿ ಬಿಟ್ಟು ಹೋಗಿದ್ದಾನೆ ಎಂದು ಎಸ್‍ಪಿ ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಶನಿವಾರ ಆಶ್ರಮದಿಂದ ಕಾಣೆಯಾದ ಮಗುವನ್ನು ಕೇವಲ 18 ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನಮ್ಮ ಬಳಿ ಕರೆಸಿಕೊಂಡಿದ್ದೆವೆ. ಸದ್ಯ ನಾವು ವಿಕಾಸ್‍ನನ್ನು ವಿಚಾರಣೆ ನಡೆಸುತ್ತಿದ್ದೆವೆ ಎಂದು ಎಸ್‍ಪಿ ವಿರೇಂದ್ರ ತಿಳಿಸಿದರು.

  • ಹುಟ್ಟಿದ 3 ಗಂಟೆಯಲ್ಲೇ ನವಜಾತ ಶಿಶು ಸಾವು – ತಾಯಿಯಿಂದ 63 ದಿನದಲ್ಲಿ 15 ಲೀ. ಎದೆಹಾಲು ದಾನ

    ಹುಟ್ಟಿದ 3 ಗಂಟೆಯಲ್ಲೇ ನವಜಾತ ಶಿಶು ಸಾವು – ತಾಯಿಯಿಂದ 63 ದಿನದಲ್ಲಿ 15 ಲೀ. ಎದೆಹಾಲು ದಾನ

    ವಾಷಿಂಗ್ಟನ್: ಹುಟ್ಟಿದ್ದ ಮೂರು ಗಂಟೆಯಲ್ಲೇ ನವಜತ ಶಿಶು ಮೃತಪಟ್ಟ ಕಾರಣ ತಾಯೊಯೊಬ್ಬರು 63 ದಿನದಲ್ಲಿ 15 ಲೀಟರ್ ತಮ್ಮ ಎದೆ ಹಾಲನ್ನು ದಾನ ಮಾಡಿದ್ದಾರೆ.

    ಅಮೆರಿಕ ಮೂಲದ ಸಿಯೆರಾ ಸ್ಟ್ರಾಂಗ್ಫೆಲ್ಡ್ ತಮ್ಮ ಮಗು ಹುಟ್ಟಿದ್ದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪುತ್ತದೆ ಎಂಬ ವಿಷಯ ಅವರಿಗೆ ಮೊದಲೇ ತಿಳಿದಿತ್ತು. ಜನ್ಮ ಪಡೆದ ಬಳಿಕ ಮಗು ಮೂರು ಗಂಟೆಗಳ ಕಾಲ ತನ್ನ ತಾಯಿಯ ತೋಳಿನಲ್ಲಿಯೇ ಇತ್ತು.

    ನೀವು ಜನ್ಮ ನೀಡುವ ಮಗುವಿಗೆ ಟ್ರೈಸೊಮಿ 18 ಇದೆ ಎಂದು ವೈದ್ಯರು ಮೊದಲೇ ಸಿಯೆರಾಗೆ ತಿಳಿಸಿದ್ದರು. ಟ್ರೈಸೊಮಿ ಇದು ಅಪರೂಪದ ಅನುವಂಶಿಕ ಸ್ಥಿತಿಯಾಗಿದ್ದು, ಜನ್ಮ ಪಡೆಯುವಾಗಲೇ ಇದು ಮಕ್ಕಳಿಗೆ ಮಾರಕವಾಗಲಿದೆ. ಈ ಸಮಸ್ಯೆ ಇದ್ದರೆ ದೇಹದ ಬೆಳವಣಿಗೆಯನ್ನು ವಿಳಂಬಗೊಳಿಸುತ್ತದೆ. ಪತ್ರಿಕೆಯೊಂದರಲ್ಲಿ ಮಾತನಾಡಿದ ಸಿಯೆರಾ, “ವೈದ್ಯರು ನನಗೆ ಅರ್ಬಾಷನ್ ಮಾಡಿಸುವಂತೆ ಸಲಹೆ ನೀಡಿದ್ದರು. ಆದರೆ ನಾನು ನನ್ನ ನವಜಾತ ಶಿಶುವನ್ನು ನೋಡಬೇಕತ್ತು. ಕೆಲವೇ ಗಂಟೆಗಳಾಗಲಿ ನನಗೆ ಮಗುವಿನ ಜೊತೆ ಇರಬೇಕು ಎಂದು ನಾನು ಹೇಳಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಸ್ಯಾಮ್ಯೂಯಲ್ (ನವಜಾತ ಶಿಶು) ಕೇವಲ ಒಂದು ಬಾರಿ ಮಾತ್ರ ನನ್ನ ತೋಳಿನಲ್ಲಿದ್ದನು. ಆಗ ವೈದ್ಯರಿಗೆ ಆತನಿಗೆ ಆಕ್ಸಿಜನ್ ಟ್ಯೂಬ್ ಹಾಕಿದ್ದರು. ನಾವಿಬ್ಬರು ಮೂರು ಗಂಟೆಗಳ ಕಾಲ ಜೊತೆಯಲ್ಲಿದ್ದೇವೆ. ನಾನು ಆತನನ್ನು ಮುಟ್ಟಿದ ತಕ್ಷಣ ಆತನ ಹಾರ್ಟ್ ರೇಟ್ ಹಾಗೂ ಆಕ್ಸಿಜನ್ ರೇಟ್ ಇದಕ್ಕಿದ್ದಂತೆ ಹೆಚ್ಚಾಯಿತು. ಆ ಕ್ಷಣ ಅವನು ತನ್ನ ತಾಯಿ ಜೊತೆ ಇರುವುದು ಆತನಿಗೆ ತಿಳಿದಿರುವಂತಿತ್ತು. ಆ ಮೂರು ಗಂಟೆಗಳ ಕಾಲ ನಾನು ಆತನನ್ನೇ ನೋಡುತ್ತಿದ್ದೆ. ಆದರೆ ಆ ಮೂರು ಗಂಟೆ ನಿಮಿಷಗಳಲ್ಲಿ ಮುಗಿದುಹೋಯಿತು ಎಂದರು.

    ಆ ಮೂರು ಗಂಟೆಯಲ್ಲಿ ನಾನು ನನ್ನ ಎದೆ ಹಾಲನ್ನು ದಾನ ಮಾಡಬೇಕೆಂದು ನಿರ್ಧಾರ ಮಾಡಿದೆ. ಅಗತ್ಯವಿರುವ ಮಕ್ಕಳಿಗೆ ನನ್ನ ಎದೆ ಹಾಲು ಉಪಯೋಗವಾಗಬೇಕು ಎಂಬುದು ನನ್ನ ಬಯಕೆ. ನನ್ನ ಮಗುವಿನ ಜೀವನ ಮತ್ತು ಸಾವಿನ ಮೇಲೆ ನನಗೆ ನಿಯಂತ್ರಣವಿಲ್ಲ. ಆದರೆ ನಂತರ ನಾನು ಮಾಡಿದ ಕೆಲಸ ನನ್ನ ನಿಯಂತ್ರಣದಲ್ಲಿತ್ತು. ನಾನು ಗರ್ಭಿಣಿಯಾಗಿದ್ದೇನೆ ಎಂದು ತಿಳಿದಾಗ ಸ್ತನ್ಯಪಾನ ಯಶಸ್ವಿಯಾಗಿ ನೀಡಬೇಕು ಎಂದುಕೊಂಡಿದ್ದೆ. ಆದರೆ ಸ್ಯಾಮ್ಯೂಯಲ್ ಆರೋಗ್ಯದ ಬಗ್ಗೆ ವೈದ್ಯಕೀಯ ರಿಪೋರ್ಟ್ ಸಿಕ್ಕಾಗ ಇದು ಸಾಧ್ಯವಾಗಲ್ಲ ಎಂದು ತಿಳಿಯಿತು ಎಂದು ಸಿಯೆರಾ ಹೇಳಿದ್ದಾರೆ.

    ನನ್ನ ಎದೆ ಹಾಲಿನಿಂದ ಬೇರೆ ನವಜಾತ ಶಿಶುವಿನ ಪ್ರಾಣ ಉಳಿಯುತ್ತದೆ. 63 ದಿನ ಪಂಪ್ ಮೂಲಕ ನಾನು ಎದೆ ಹಾಲನ್ನು ಸಂಗ್ರಹಿಸಿದ್ದೇನೆ. ನಾನು ಮದರ್ ಮಿಲ್ಕ್ ಬ್ಯಾಂಕಿಗೆ 15 ಲೀ. ಹಾಲನ್ನು ನೀಡಿದ್ದೇನೆ ಎಂದು ಸಿಯೆರಾ ಫೇಸ್‍ಬುಕ್‍ನಲ್ಲಿ ತಮ್ಮ ಪೋಸ್ಟ್ ಮಾಡುವ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

  • ಪ್ರೀತ್ಸಿ ಮದುವೆಯಾಗಿದ್ದ ಮಗಳ ಮಗುವನ್ನು 3 ಲಕ್ಷ ರೂ.ಗೆ ಮಾರಿದ ಅಜ್ಜ-ಅಜ್ಜಿ

    ಪ್ರೀತ್ಸಿ ಮದುವೆಯಾಗಿದ್ದ ಮಗಳ ಮಗುವನ್ನು 3 ಲಕ್ಷ ರೂ.ಗೆ ಮಾರಿದ ಅಜ್ಜ-ಅಜ್ಜಿ

    – ನಾಲ್ಕು ತಿಂಗಳ ಬಳಿಕ ತಾಯಿಯ ಮಡಿಲು ಸೇರಿದ ಕಂದ

    ಚೆನ್ನೈ: ಪ್ರೀತಿಸಿ ಮದುವೆಯಾಗಿದ್ದ ಮಗಳ ಎರಡು ತಿಂಗಳ ಕಂದನನ್ನು ಆಕೆಯ ಪೋಷಕರೇ 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ಅಮಾನವೀಯ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ನಾಲ್ಕು ತಿಂಗಳ ಬಳಿಕ ಮಗು ತಾಯಿಯ ಮಡಿಲು ಸೇರಿದೆ.

    ತಮಿಳುನಾಡಿನ ನಾಯನಂಪಟ್ಟಿ ನಿವಾಸಿ ಪೊನ್ನುಸ್ವಾಮಿ ಮಗುವನ್ನು ಮಾರಿದ್ದ ಅಜ್ಜ. ಮಗಳು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾಗ ಆರೋಪಿ ಕೃತ್ಯ ಎಸಗಿದ್ದ. ಪೊನ್ನುಸ್ವಾಮಿ ಜುಲೈ 17ರಂದು ಮಗುವನ್ನು ಮಾರಿದ್ದ. ಇದನ್ನೂ ಓದಿ: ಹೆಣ್ಣು ಶಿಶುವನ್ನು ಮಾರಿ ಮೊಬೈಲ್, ಚಿನ್ನ ಖರೀದಿಸಿದ ದಿನಗೂಲಿ ಕಾರ್ಮಿಕ!

    ಪೊನ್ನುಸ್ವಾಮಿ ಮಗಳು ಮೀನಾ ಅದೇ ಗ್ರಾಮದ ರಾಜಾಲುನನ್ನು ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಎರಡು ವರ್ಷದ ಹಿಂದೆ ಮದುವೆಯಾಗಿದ್ದಳು. ಬಳಿಕ ರಾಜಾಲು ದಂಪತಿ ತಿರುಪ್ಪೂರ್ ಗೆ ಬಂದು ಅಲ್ಲಿಯೇ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಇದೇ ವರ್ಷ ಮೀನಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮೀನಾ ಕೊಯಂಬತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದರು.

    ಈ ವಿಷಯ ತಿಳಿದು ಆಸ್ಪತ್ರೆಗೆ ಬಂದಿದ್ದ ಪೊನ್ನುಸ್ವಾಮಿ ದಂಪತಿ, ಮೀನಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ಮೀನಾ ಜುಲೈ 17ರಂದು ಪ್ರಜ್ಞೆ ಕಳೆದುಕೊಂಡಿದ್ದರು. ಈ ವೇಳೆ ಪೊನ್ನುಸ್ವಾಮಿ, ಮೀನಾಳ ಎರಡು ತಿಂಗಳ ಮಗುವನ್ನು ವಿಲ್ಲುಪುರಂನಲ್ಲಿ ಮೂರು ಲಕ್ಷ ರೂಪಾಯಿಗೆ ಮಾರಿದ್ದ. ಅಷ್ಟೇ ಅಲ್ಲದೆ ಮೀನಾಳ ಪತಿ ರಾಜಾಲುನ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆಯಿಂದ ಹೊರಹಾಕಿದ್ದ.

    ಜುಲೈ 21ರಂದು ಎಚ್ಚರಗೊಂಡ ಮೀನಾ ತನ್ನ ಪತಿ ಹಾಗೂ ಮಗು ಎಲ್ಲಿದ್ದಾರೆ ಎಂದು ಪೋಷಕರಿಗೆ ಕೇಳಿದ್ದಳು. ಆದರೆ ಆಕೆಗೆ ಯಾವುದೇ ಮಾಹಿತಿ ನೀಡಿದೆ, ಪತಿ ಹಾಗೂ ಮಗುವನ್ನು ಮರೆಸುವ ಯತ್ನವನ್ನು ಪೋಷಕರು ಮಾಡುತ್ತಿದ್ದರು. ಅವರಿಂದ ತಪ್ಪಿಸಿಕೊಂಡು ಬಂದ ಮೀನಾ ಸಂಬಂಧಿಕರ ಸಹಾಯದಿಂದ ಗಂಡನನ್ನು ಭೇಟಿಯಾಗಿದ್ದಳು. ಬಳಿಕ ದಂಪತಿ ನವೆಂಬರ್ 18ರಂದು ಸೇಲಂ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಅಳಲು ತೋಡಿಕೊಂಡಿದ್ದರು.

    ರಾಜಾಲು ದಂಪತಿ ಸಹಾಯಕ್ಕೆ ನಿಂತ ಸೇಲಂ ಜಿಲ್ಲಾಧಿಕಾರಿ ಮಗುವನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಆದೇಶ ನೀಡಿದ್ದರು. ತಕ್ಷಣವೇ ಪೊಲೀಸರು ಪೊನ್ನುಸ್ವಾಮಿಯನ್ನು ವಿಚಾರಣೆ ನಡೆಸಿ, ವಿಲ್ಲುಪುರಂ ಜಿಲ್ಲೆಯ ತಿರುವಾವಲೂರಿನ ದಂಪತಿ ಬಳಿ ಇದ್ದ ಮಗು ವಶಕ್ಕೆ ಪಡೆದಿದ್ದಾರೆ. ನಂತರ ಮಗುವನ್ನು ಡಿಎನ್‍ಎ ಪರೀಕ್ಷೆಗೆ ಒಳಪಡಿಸಿ, ಮೀನಾ-ರಾಜಾಲು ದಂಪತಿಗೆ ಒಪ್ಪಿಸಿದ್ದಾರೆ.

  • ಹೆಣ್ಣು ಶಿಶುವನ್ನು ಮಾರಿ ಮೊಬೈಲ್, ಚಿನ್ನ ಖರೀದಿಸಿದ ದಿನಗೂಲಿ ಕಾರ್ಮಿಕ!

    ಹೆಣ್ಣು ಶಿಶುವನ್ನು ಮಾರಿ ಮೊಬೈಲ್, ಚಿನ್ನ ಖರೀದಿಸಿದ ದಿನಗೂಲಿ ಕಾರ್ಮಿಕ!

    ಚೆನ್ನೈ: ದಿನಗೂಲಿ ಕಾರ್ಮಿಕನೊಬ್ಬ ಆಗ ತಾನೇ ಹುಟ್ಟಿದ ಅವಳಿ ಮಕ್ಕಳಲ್ಲಿ ಹೆಣ್ಣು ಮಗುವನ್ನು ಮಾರಿ ಮೊಬೈಲ್ ಹಾಗೂ ಚಿನ್ನದ ಸರ ಖರೀದಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿ ತಂದೆ ಯೇಸುರುಧಯರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮಗುವನ್ನು ಮಕ್ಕಳಿಲ್ಲದವರಿಗೆ ಹಣಕ್ಕಾಗಿ ನೀಡುವ ಮೂಲಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಏನಿದು ಘಟನೆ?
    ನವೆಂಬರ್ 8ರಂದು ಯೇಸುರುಧಯರಾಜ್ ಪತ್ನಿ ಪುಷ್ಪಲತಾ ಗಂಡು ಹಾಗೂ ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಈ ದಂಪತಿಗೆ ಈಗಾಗಲೇ ಒಬ್ಬಳು ಮಗಳಿದ್ದಾಳೆ. ಹೀಗಾಗಿ ಇನ್ನೊಂದು ಹೆಣ್ಣು ಮಗು ಬೇಡ ಎಂದು ನಿರ್ಧರಿಸಿ ಗಂಡು ಮಗುವನ್ನು ಇಟ್ಟುಕೊಂಡು ಹೆಣ್ಣು ಮಗುವನ್ನು ಮಾರಾಟ ಮಾಡಲು ಆರೋಪಿ ತಂದೆ ತೀರ್ಮಾನಿಸಿದ್ದಾನೆ. ಅಲ್ಲದೆ ದಲ್ಲಾಳಿಗಳ ಮುಖಾಂತರ ತಿರುನೆಲ್ವೇಲಿಯಲ್ಲಿ ಮಕ್ಕಳಿಲ್ಲದವರು ಇದ್ದರೆ ತಿಳಿಸಿ. ಹೆಣ್ಣು ಮಗುವನ್ನು ಮಾರಾಟ ಮಾಡುವುದಾಗಿ ಹೇಳಿದ್ದಾನೆ.

    ಹೀಗೆ 1 ಲಕ್ಷದ 80 ಸಾವಿರಕ್ಕೆ ಮಗು ಮಾರಾಟ ಕೂಡ ಆಗುತ್ತದೆ. ಅದರಲ್ಲಿ 80 ಸಾವಿರವನ್ನು ಮೂವರು ಬ್ರೋಕರ್ ಗಳು ಹಂಚಿಕೊಂಡು ಉಳಿದ ಹಣವನ್ನು ಆರೋಪಿ ತಂದೆಯ ಕೈಗಿತ್ತಿದ್ದಾರೆ.

    ವರದಿಗಳ ಪ್ರಕಾರ, ಆರೋಪಿ ಮಗು ಮಾರಾಟ ಮಾಡುವ ವಿಚಾರವನ್ನು ತನ್ನ ಪತ್ನಿಯ ಬಳಿ ತಿಳಿಸಿರಲಿಲ್ಲ. ಹೀಗಾಗಿ ತನ್ನ ಕೈಗೆ ಹಣ ಸಿಕ್ಕಿದ ಕೂಡಲೇ ಆತ ಮದ್ಯ ಹಾಗೂ ಮೊಬೈಲ್ ಖರೀದಿಸಿದ್ದಾನೆ. ನಂತರ ಗಂಡು ಮಗುವಿಗೆ ಚಿನ್ನವನ್ನು ಖರೀದಿ ಮಾಡಿದ್ದಾನೆ. ಜೊತೆಗೆ ತಾನು ಅಡ ಇಟ್ಟಿದ್ದ ಬೈಕ್ ಹಾಗೂ ಸೈಕಲ್ ನನ್ನು ಬಿಡಿಸಿಕೊಂಡಿದ್ದಾನೆ.

    ಇತ್ತ ತನ್ನ ಮಗನನ್ನು ಮಾರಿರುವ ಗಂಡನ ಮೋಸದ ವಿಚಾರ ಪತ್ನಿ ಪುಷ್ಪಲತಾ ಗಮನಕ್ಕೆ ಬಂದಿದ್ದು, ಕ್ಯಾತೆ ತೆಗೆದಿದ್ದಾಳೆ. ಪತಿ ಹಾಗೂ ಪತ್ನಿಯ ಜಗಳ ತಾರಕಕ್ಕೇರುತ್ತಿದ್ದಂತೆಯೇ ಆಸ್ಪತ್ರೆಯ ನರ್ಸ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೂವರು ಬ್ರೋಕರ್ ಗಳು ಹಾಗೂ ಆರೋಪಿ ಯೇಸುರುಧಯರಾಜ್ ವಿರುದ್ಧ ಐಪಿಸಿ ಸೆಕ್ಷನ್ 363(ಅಪಹರಣ), 120ಬಿ(ಕ್ರಮಿನಲ್ ಪಿತೂರಿ), 420(ವಂಚನೆ) ಹಾಗೂ 147(ಗಲಭೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮಗುವನ್ನು ಕಚ್ಚಿ ಕಚ್ಚಿ ತಿಂದ ನಾಯಿಗಳು

    ಮಗುವನ್ನು ಕಚ್ಚಿ ಕಚ್ಚಿ ತಿಂದ ನಾಯಿಗಳು

    ತೈವಾನ್: ತಾಯಿಯೊಬ್ಬಳು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಮನೆಯಿಂದ ಹೊರಗೆ ಎಸೆದಿದ್ದ ನವಜಾತ ಶಿಶುವನ್ನು ನಾಯಿಗಳು ಕಚ್ಚಿ ಕಚ್ಚಿ ತಿಂದ ಘಟನೆ ತೈವಾನ್‍ನಲ್ಲಿ ನಡೆದಿದೆ.

    ದಕ್ಷಿಣ ತೈವಾನ್‍ನ ಕಾವೋಸಿಯುಂಗ್‍ನ ನಿವಾಸಿ ಕ್ಸಿಯಾವೋ ಮೇ (19) ಮಗುವನ್ನು ಎಸೆದಿದ್ದ ತಾಯಿ. ಕ್ಸಿಯಾವೋ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ.

    ದಕ್ಷಿಣ ತೈವಾನ್‍ನ ಕಾವೋಸಿಯುಂಗ್‍ನಲ್ಲಿನ ಬಂಜರು ಭೂಮಿಯಲ್ಲಿ ಬೆಳೆದಿದ್ದ ಎತ್ತರದ ಕಳೆಗಳ ಮಧ್ಯೆ ನವಜಾತ ಶಿಶುವಿನ ಮೂಳೆಗಳು ಪತ್ತೆಯಾಗಿದ್ದವು. ಇದನ್ನು ನೋಡಿದ್ದ ತೈವಾನ್‍ನ ಪೊಲೀಸರು, ಯಾರೋ ಮಗುವನ್ನು ಕೊಲೆಗೈದು, ಎಸೆದು ಹೋಗಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದರು. ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದರು.

    ಕ್ಸಿಯಾವೋ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ವ್ಯಕ್ತಿಯನ್ನು ಪ್ರೀತಿಸಿ ಮದುವೆ ಆಗಿದ್ದಳು. ಹಣಕ್ಕಾಗಿ ಕಷ್ಟಪಡುತ್ತಿದ್ದ ಕ್ಸಿಯಾವೋ ದಂಪತಿ ಕಾವೋಸಿಯುಂಗ್‍ನ ಬಾಡಿಗೆ ಫ್ಲ್ಯಾಟ್‍ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಮಾನಸಿಕವಾಗಿ ಕುಂದಿದ್ದ ಕ್ಸಿಯಾವೋ ಅಕ್ಟೋಬರ್ 2ರಂದು ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ಆ ಮಗುವನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ತುಂಬಿ ಮನೆಯ ಹಿಂಭಾಗದಲ್ಲಿ ಎಸೆದಿದ್ದಳು.

    ಕೃತ್ಯದ ಬಳಿಕ ಈ ಜೋಡಿಯು ತೈವಾನ್‍ಗೆ ಓಡಿಹೋಗಿ ಸುಮಾರು ಒಂದು ತಿಂಗಳು ಇಂಟರ್ನೆಟ್ ಕೆಫೆಯಲ್ಲಿ ತಲೆಮರೆಸಿಕೊಂಡಿದ್ದರು. ಈ ಕುರಿತು ಮಾಹಿತಿ ಕಲೆ ಹಾಕಿದ್ದ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ನಿನ್ನ ಮಗು ಎಲ್ಲಿದೆ ಎಂದು ಪೊಲೀಸರು ವಿಚಾರಣೆ ವೇಳೆ ಕ್ಸಿಯಾವೋಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಆರೋಪಿಯು, ಆ ಮಗುವನ್ನು ಹುಟ್ಟಿದ ದಿನವೇ ಎಸೆದಿದ್ದೇನೆ ಎಂದು ಸತ್ಯ ಒಪ್ಪಿಕೊಂಡಿದ್ದಾಳೆ. ಬಳಿಕ ಮಹಿಳೆ ತಿಳಿಸಿದ ಜಾಗದಲ್ಲಿ ಪರಿಶೀಲನೆ ನಡೆಸಿದಾಗ ಮಗುವಿನ ಅವಶೇಷಗಳನ್ನು ಪತ್ತೆಯಾಗಿವೆ.

  • ಮೆಟ್ಟಿಲಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಿದ ಬೆಕ್ಕು- ವಿಡಿಯೋ ನೋಡಿ

    ಮೆಟ್ಟಿಲಿಂದ ಬೀಳುತ್ತಿದ್ದ ಮಗುವನ್ನು ರಕ್ಷಿಸಿದ ಬೆಕ್ಕು- ವಿಡಿಯೋ ನೋಡಿ

    ಬೋಗೋಟಾ: ತನ್ನ ಒಡೆಯನಿಗಾಗಿ ನಾಯಿಗಳು ಮಾಡಿದ ಸಾಹಸಗಳನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಬೆಕ್ಕು ಮಗುವನ್ನು ಮೆಟ್ಟಿಲ ಕೆಳಗೆ ಬೀಳುವುದನ್ನು ತಡೆಯಲು ಹರಸಾಹಸ ಮಾಡಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸದ್ದು ಮಾಡುತ್ತಿದೆ.

    ಹಿಂದೆ ನಾಯಿಯೊಂದು ಸಣ್ಣ ಹುಡುಗಿಯನ್ನು ಕಾಪಾಡಲು ಆಕೆಯೆ ಉಡುಪನ್ನು ತನ್ನ ಕೋರೆ ಹಲ್ಲಿನಿಂದ ಎಳೆದು ನೀರಿಗೆ ಬೀಳುವುದರಿಂದ ತಡೆದಿತ್ತು. ಮಾತ್ರವಲ್ಲದೆ ಜಮ್ಮು ಕಾಶ್ಮೀರದಲ್ಲಿ ಭೂಕುಸಿತದ ಅವಶೇಷಗಳಡಿಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸಿಆರ್‍ಪಿಎಫ್ ನಾಯಿ ಪತ್ತೆ ಹಚ್ಚಿ ರಕ್ಷಿಸಲು ಸಹಾಯ ಮಾಡಿತ್ತು. ಇದೀಗ ಬೆಕ್ಕು ಸಹ ತನ್ನ ಜಾಗರೂಕತೆಯಿಂದ ಮಗುವನ್ನು ರಕ್ಷಿಸುವ ಮೂಲಕ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

    ಈ ಘಟನೆ ಕೊಲಂಬಿಯಾದಲ್ಲಿ ನಡೆದಿದ್ದು, ಬೆಕ್ಕು ಮಗುವಿನ ಮೇಲೆ ಹಾರಿ ಮೆಟ್ಟಿಲುಗಳಿಂದ ಮಗು ಬೀಳದಂತೆ ತಡೆಯುವ ಮೂಲಕ ಹೀರೋ ಆಗಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಡಿಲೋರ್ ಅಲ್ವಾರೆಜ್ ಎಂಬ ಫೇಸ್‍ಬುಕ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ 9.44 ಲಕ್ಷ ವ್ಯೂವ್ಸ್ ಹಾಗೂ 32 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳನ್ನು ಪಡೆಯುವ ಮೂಲಕ ವೈರಲ್ ಆಗಿದೆ.

    ವಿಡಿಯೋದಲ್ಲಿ ಕೆಂಪು ಬಟ್ಟೆ ಧರಿಸಿದ ಮಗು ನೆಲದ ಮೇಲೆ ತೆವಳುತ್ತಿದ್ದಾಗ ಬೆಕ್ಕು ಹತ್ತಿರದ ಮಂಚದ ಮೇಲೆ ಕುಳಿತಿತ್ತು. ಆಟವಾಡುತ್ತ ಮಗು ಮೆಟ್ಟಿಲುಗಳ ಬಳಿ ತೆರಳುತ್ತದೆ. ಅಪಾಯವನ್ನು ಗಮನಿಸಿದ ಬೆಕ್ಕು ತಕ್ಷಣ ಮಗುವಿನ ಮೇಲೆ ನೆಗೆಯುತ್ತದೆ. ಮಗು ಹಿಂದಕ್ಕೆ ತಿರುಗುವವರೆಗೂ ಬೆಕ್ಕು ಮಗುವಿನ ಮೇಲೆಯೇ ಕುಳಿತಿರುತ್ತದೆ.

    ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಕಮೆಂಟ್ ಮಾಡಿದ್ದು, ಕೆಲವರು ಬೆಕ್ಕು ಅದ್ಭುತ ಸಾಕುಪ್ರಾಣಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಮಗುವಿನ ಪೋಷಕರ ನಿರ್ಲಕ್ಷ್ಯ ಎಂದು ಟೀಕಿಸಿದ್ದಾರೆ.

  • ಮನೆ ಮೇಲ್ಛಾವಣಿ ಕುಸಿದು 11 ತಿಂಗಳ ಕೂಸು ಸಾವು- ತಾಯಿ ಗಂಭೀರ

    ಮನೆ ಮೇಲ್ಛಾವಣಿ ಕುಸಿದು 11 ತಿಂಗಳ ಕೂಸು ಸಾವು- ತಾಯಿ ಗಂಭೀರ

    ಬಾಗಲಕೋಟೆ: ಮನೆ ಮೇಲ್ಛಾವಣಿ ಕುಸಿದು 11 ತಿಂಗಳ ಕೂಸು ಮೃತಪಟ್ಟು, ತಾಯಿಗೆ ಗಂಭೀರ ಗಾಯಗಳಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ತೇರದಾಳ ತಾಲೂಕಿನ ತಮದಡ್ಡಿಯಲ್ಲಿ ನಡೆದಿದೆ.

    ಅಚಲ ಬುಜಬಲಿ ತಿಮ್ಮಣ್ಣವರ ಮೃತ ಬಾಲಕ. ತಮದಡ್ಡಿ ಗ್ರಾಮ ಪ್ರವಾಹಕ್ಕೆ ಸಿಲುಕಿತ್ತು. ಹೀಗಾಗಿ ಮಣ್ಣಿನ ಮನೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಮಗುವಿನ ತಾಯಿ ಅಕ್ಷತಾ ಬುಜಬಲಿ ತಿಮ್ಮಣ್ಣವರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಬುಧವಾರ ರಾತ್ರಿ ಮನೆಯಲ್ಲಿ ನಾಲ್ವರು ಮಲಗಿದ್ದರು. ಬಳಿಕ ಇಂದು ಬೆಳಗ್ಗಿನ ನ ಜಾವ ಸುಮಾರು ನಾಲ್ಕು ಗಂಟೆಗೆ ಇಬ್ಬರು ಎದ್ದು ಹೊರಗಡೆ ಬಂದಿದ್ದರು. ಆದರೆ ತಾಯಿ, ಮಗು ಇನ್ನೂ ಮಲಗಿದ್ದರು. ಈ ವೇಳೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಮಗು ಮೃತಪಟ್ಟಿದ್ದು, ತಾಯಿಗೆ ಗಂಭೀರ ಗಾಯಗಳಾಗಿದೆ.

    ಈ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಮೊಮ್ಮಗ ಯಶ್‍ನಂತೆಯೇ ಕಾಣುತ್ತಾನೆ: ರಾಕಿಂಗ್ ಸ್ಟಾರ್ ತಾಯಿ

    ಮೊಮ್ಮಗ ಯಶ್‍ನಂತೆಯೇ ಕಾಣುತ್ತಾನೆ: ರಾಕಿಂಗ್ ಸ್ಟಾರ್ ತಾಯಿ

    ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅವರು ಮೊಮ್ಮಗ ಯಶ್‍ನಂತೆಯೇ ಕಾಣುತ್ತಾನೆ ಎಂದು ಹೇಳುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪುಷ್ಪ, ಇಂದು ಬೆಳಗ್ಗೆ ರಾಧಿಕಾಳನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. 9 ಗಂಟೆಗೆ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಕರ್ನಾಟಕದ ಜನತೆಯ ಆಶೀರ್ವಾದ ಇಬ್ಬರ ಮೇಲೆ ಹೇಗಿತ್ತೋ, ಹಾಗೆಯೇ ನಮ್ಮ ಮೊಮ್ಮಕ್ಕಳ ಮೇಲೆಯೂ ಇರಲಿ. ಮೊಮ್ಮಗನನ್ನು ನೋಡಿದೆ. ಆತ ಯಶ್‍ನಂತೆಯೇ ಇದ್ದಾನೆ. ಅಮ್ಮ-ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದರು. ಇದನ್ನೂ ಓದಿ: ಎರಡನೇ ಮಗುವಿಗೆ ತಂದೆ-ತಾಯಿಯಾದ ರಾಕಿಂಗ್ ಜೋಡಿ

    ದೇವರ ಆಶೀರ್ವಾದದಿಂದ ಇಂದು ನಾವು ಖುಷಿಯಾಗಿದ್ದೇವೆ. ನನ್ನ ಸೊಸೆ ಕೂಡ ಆರೋಗ್ಯವಾಗಿದ್ದಾಳೆ. ಕರ್ನಾಟಕದ ಜನತೆ ಇಷ್ಟು ದಿನ ಯಶ್ ಹಾಗೂ ರಾಧಿಕಾಳನ್ನು ಹೇಗೆ ಆಶೀರ್ವಾದ ಮಾಡಿದ್ದಾರೋ, ಹಾಗೆ ನನ್ನ ಮೊಮ್ಮಕ್ಕಳಿಗೂ ಆಶೀರ್ವಾದ ಮಾಡಲಿ. ವೈದ್ಯರಿಗೂ ಡೇಟ್ಸ್ ಬಗ್ಗೆ ಕನ್ಫರ್ಮ್ ಇರಲಿಲ್ಲ. ಈ ತಿಂಗಳಿನಲ್ಲಿ ಮಗು ಆಗುತ್ತೆ ಎಂದು ಹೇಳಿದ್ದರು. ಆದರೆ ಇಂದು ಬೆಳಗ್ಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಹೇಳಿದರು.

    ಐರಾಳನ್ನು ಇಷ್ಟು ಹೊತ್ತು ಎತ್ತುಕೊಂಡಿದ್ದೆವು. ಅವಳು ಕೂಡ ತಮ್ಮನನ್ನು ನೋಡಿ ಖುಷಿಪಡುತ್ತಿದ್ದಾಳೆ. ಡಿಸ್ಚಾರ್ಜ್ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಅದೇನಿದ್ದರೂ ಯಶ್ ನಿರ್ಧಾರ ಮಾಡುತ್ತಾನೆ. ನಾವೇನಿದ್ದರೂ ಬಂದು ಮಗುವನ್ನು ನೋಡಿಕೊಂಡು ಹೋಗುತ್ತೇವೆ. ವೈದ್ಯರು ಇಂದು ಅಥವಾ ನಾಳೆ ಡೆಲಿವರಿ ಆಗುತ್ತೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ಹೇಳುವುದಕ್ಕೆ ಆಗಲ್ಲ. ವೈದ್ಯರು ಪ್ರತಿದಿನ ನಮ್ಮ ಸಂಪರ್ಕದಲ್ಲಿದ್ದರು ಎಂದು ಯಶ್ ಅವರ ತಾಯಿ ತಿಳಿಸಿದರು.

     

  • ಎರಡನೇ ಮಗುವಿಗೆ ತಂದೆ-ತಾಯಿಯಾದ ರಾಕಿಂಗ್ ಜೋಡಿ

    ಎರಡನೇ ಮಗುವಿಗೆ ತಂದೆ-ತಾಯಿಯಾದ ರಾಕಿಂಗ್ ಜೋಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಗಂಡು ಮಗುವಿಗೆ ತಂದೆ-ತಾಯಿಯಾಗಿದ್ದಾರೆ.

    ರಾಧಿಕಾ ಪಂಡಿತ್ ಇಂದು ಮುಂಜಾನೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ರಾಕಿಂಗ್ ಕುಟುಂಬದ ಮೂಲಗಳು ತಿಳಿಸಿವೆ. ಸದ್ಯ ಮನೆಯಲ್ಲಿ ಜೂನಿಯರ್ ಯಶ್ ಆಗಮನದಿಂದ ಯಶ್ ಅಭಿಮಾನಿಗಳು ಖುಷಿಯಾಗಿದ್ದಾರೆ.

    ಇತ್ತೀಚೆಗೆ ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ಮಾಡಿಕೊಂಡಿದ್ದರು. ಈ ಕಾರ್ಯಕ್ರಮವನ್ನು ರಾಧಿಕಾ ಸ್ನೇಹಿತರು ಆಯೋಜಿಸಿ ಅವರಿಗೆ ಸರ್ಪ್ರೈಸ್ ನೀಡಿದ್ದರು. ರಾಧಿಕಾ ಕಾರ್ಯಕ್ರಮದ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅದಕ್ಕೆ, ನನ್ನ ಸ್ನೇಹಿತರು ನನಗೆ ಸೀಮಂತ ಪಾರ್ಟಿ ನೀಡಿದ್ದರು. ಈ ಪಾರ್ಟಿ ನೀಡಿದ ಎಲ್ಲ ಆಂಟಿಗಳಿಗೆ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದರು.

    ಡಿಸೆಂಬರ್ 9, 2016ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಅಲ್ಲದೆ ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಪಂಡಿತ್ ಅವರಿಗೆ ಯಶ್ ತಾಳಿ ಕಟ್ಟಿದ್ದರು. ಅರಮನೆ ಮೈದಾನದಲ್ಲಿ ಯಶ್-ರಾಧಿಕಾ ಪಂಡಿತ್ ರವರ ಅದ್ಧೂರಿ ಆರತಕ್ಷತೆ ನಡೆದಿತ್ತು.