Tag: Baby

  • ತಾಯಿಗೆ ಬೇಡವಾದ ನವಜಾತ ಶಿಶು ಚರಂಡಿ ಪಾಲು!

    ತಾಯಿಗೆ ಬೇಡವಾದ ನವಜಾತ ಶಿಶು ಚರಂಡಿ ಪಾಲು!

    ಗದಗ: ಚರಂಡಿ ಪಕ್ಕದಲ್ಲೇ ನವಜಾತ ಗಂಡು ಶಿಶುವನ್ನು ಬಿಸಾಕಿರೋ ಅಮಾನವೀಯ ಘಟನೆ ನಗರದ ಕೆ.ಸಿ.ರಾಣಿ ರಸ್ತೆಯ ಬಳಿ ಕಂಡುಬಂದಿದೆ.

    ದುಂಡಪ್ಪ ಮಾನ್ವಿ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಬಳಿ ಚರಂಡಿ ಬಳಿ ದೃಶ್ಯ ಕಂಡುಬಂದಿದೆ. ತಡರಾತ್ರಿ ಹೆರಿಗೆಯಾಗಿದ್ದು, ಬೆಳಗ್ಗಿನ ಜಾವ ರಟ್ಟಿನ ಬಾಕ್ಸ್ ನಲ್ಲಿ ತಂದು ಹಾಕಿ ಹೊಗಿದ್ದಾರೆ.

    ಪಾಪಿ ತಾಯಿಯ ಕಾಮಕ್ಕೆ ಅಥವಾ ಅಕ್ರಮ ಸಂಬಂಧಕ್ಕೆ ಏನೂ ಅರಿಯದ ಕಂದಮ್ಮ ಬಲಿ ಆಯಿತಾ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ಕೆ.ಸಿ ರಾಣಿ ರಸ್ತೆಯಲ್ಲಿ ಸರ್ಕಾರಿ ಹೆರಿಗೆ ಆಸ್ಪತ್ರೆ ಹಾಗೂ ಅನೇಕ ಖಾಸಗಿ ಆಸ್ಪತ್ರೆಗಳಿವೆ. ಆದ್ದರಿಂದ ಯಾವ ಆಸ್ಪತ್ರೆಯಿಂದ ತಂದಿರಬಹುದು ಎಂಬುದರ ಬಗ್ಗೆ ಪೊಲೀಸರ ತನಿಖೆಗೆ ಮುಂದಾಗಿದ್ದಾರೆ.

    ಕೆಲವರು ಮಕ್ಕಳಿಗಾಗಿ ಹತ್ತು ದೇವರಿಗೆ ಹರಕೆ ಹೊತ್ತರೂ ಮಕ್ಕಳ ಭಾಗ್ಯ ಸಿಗುತ್ತಿಲ್ಲ. ಆದರೆ ಮುದ್ದಾದ ಗಂಡು ಮಗು ಬಿಸಾಕಿ ಹೊಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.

    ಸ್ಥಳಕ್ಕೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗದಗ್ ನ ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಾಯಿಗೆ ಕೊರೊನಾ ಪಾಸಿಟಿವ್- ಜೊತೆಯಲ್ಲಿ ಮಲಗಲು 17 ತಿಂಗಳ ಕಂದಮ್ಮ ಹಠ

    ತಾಯಿಗೆ ಕೊರೊನಾ ಪಾಸಿಟಿವ್- ಜೊತೆಯಲ್ಲಿ ಮಲಗಲು 17 ತಿಂಗಳ ಕಂದಮ್ಮ ಹಠ

    ಮುಂಬೈ: ಮಹಾಮಾರಿ ಕೊರೊನಾ ದೇಶವನ್ನು ಒಕ್ಕರಿಸಿದ ಬಳಿಕ ಅನೇಕ ಮಂದಿ ಕೊರೊನಾ ವಾರಿಯರ್ಸ್ ಗಳು ಕೆಲಸದ ಒತ್ತಡದಿಂದಾಗಿ ಹಾಗೂ ಮಕ್ಕಳಿಂದ ದೂರವಿರುವ ನಿಟ್ಟಿನಲ್ಲಿ ನೋಡಲಾಗದೆ ಕಣ್ಣೀರು ಹಾಕಿದಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅಂತೆಯೇ ಮುಂಬೈನ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಇದೀಗ ತನ್ನ 17 ತಿಂಗಳ ಕಂದಮ್ಮನ ಎತ್ತಿ ಮುದ್ದಾಡಲು ಸಾಧ್ಯವಾಗದೆ ತನ್ನ ವೇದನೆಯನ್ನು ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಆಲಿಫ್ಯಾ ಝವೇರಿ ಎಂಬವರು ತನ್ನ ಮನಸ್ಸಿನ ದುಃಖವನ್ನು ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ತನಗೆ ಕೊರೊನಾ ಬಂದರೂ ಪರವಾಗಿಲ್ಲ ತನ್ನ ಮಗಳಿಗೆ ಬಂದಿಲ್ಲ ಎಂಬ ಸಂತಸ ಕೂಡ ಇದ್ದು, ಧನ್ಯತಾ ಭಾವ ಹೊಂದಿದ್ದಾರೆ. ಸದ್ಯ ಝವೇರಿ ಹೋಂ ಕ್ವಾರಂಟೈನ್ ಆಗಿದ್ದು, ಮಗಳಿಂದ ದೂರವಿದ್ದಾರೆ. ವೈದ್ಯರು ಕೊರೊನಾ ಪಾಸಿಟಿವ್ ಇದೆ ಅಂದಾಗ ಗಾಬರಿಯಾಗಿ ನನ್ನ ಮಗಳಿಗೆ ಕೊರೊನಾ ಇದೆಯೋ..? ಇಲ್ಲವೋ..? ಎಂದು ಮೊದಲು ಕೇಳಿರುವುದಾಗಿ ಝವೇರಿ ತಿಳಿಸಿದ್ದಾರೆ.

    ನನಗೆ ಕೊರೊನಾ ಗುಣಲಕ್ಷಣ ಕಂಡುಬಂದ ತಕ್ಷಣವೇ ನಾನು ಹೋಂಕ್ವಾರಂಟೈನ್ ಆದೆ. ಆದರೆ ಇದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ತನ್ನ ಪುಟ್ಟ ಕಂದಮ್ಮನನ್ನು ಬಿಟ್ಟಿರುವುದು ಆಗದ ಕೆಲಸ ಎಂದಿದ್ದಾರೆ. ಸದ್ಯ ನನಗೆ ಒಂದು ಬಾರಿ ನನ್ನ ಮಗಳನ್ನು ಅಪ್ಪಿಕೊಳ್ಳಬೇಕು ಎಂಬ ತನ್ನ ಮನಸ್ಸಿ ತುಡಿತವನ್ನು ಹಂಚಿಕೊಂಡಿದ್ದಾರೆ.

    ಪ್ರತಿದಿನ ಬೆಡ್ ರೂಂ ಪಕ್ಕದಲ್ಲಿರುವ ಕಿಟಿಕಿಯ ಹತ್ತಿರ ಬಂದು ಆಕೆಯ ಪುಟ್ಟ ಕೈಗಳನ್ನು ಕಿಟಕಿ ಗಾಜಿನ ಮೇಲೆ ಇಡುತ್ತಾಳೆ. ಅಲ್ಲದೆ ಅಲ್ಲಿ ನನಗೋಸ್ಕರ ಆಕೆ ಕಾಯುತ್ತಿರುತ್ತಾಳೆ. ಈ ವೇಳೆ ನಾನು ಆಕೆಯನ್ನು ಎತ್ತಿ ಮುದ್ದಾಡಬೇಕು ಅನಿಸುತ್ತಿದೆ. ಆದರೆ ಅದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    ಆಗ ತಾನೇ ಅಂಬೆಗಾಲಿಡುತ್ತಿರುವ ತನ್ನ ಪುಟ್ಟ ಕಂದಮ್ಮ ನನ್ನ ಅನುಪಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದರ ಬಗ್ಗೆಯೂ ಝವೇರಿ ಹೇಳಿಕೊಂಡಿದ್ದಾರೆ. ಆಕೆ ರಾತ್ರಿ ನಾನು ಬೇಕು ಎಂದು ಅಳುತ್ತಾಳೆ. ಆದರೆ ನನ್ನ ಪತಿ ಹಾಗೂ ನಾದಿನಿ ಅವರಿಂದ ಸಾಧ್ಯವಷ್ಟು ಆಕೆಯನ್ನು ನೋಡಿಕೊಳ್ಳುತ್ತಿದ್ದಾರೆ. ಆದರೂ ಆಕೆ 2 ಗಂಟೆ ಸುಮಾರಿಗೆ ಎದ್ದು ‘ಅಮ್ಮ’ ಎಂದು ಕರೆದು ಅಳುತ್ತಾಳೆ. ಆದರೆ ಆ ಸಂದರ್ಭದಲ್ಲಿ ಅಲ್ಲಿ ನಾನು ಇರುವುದಿಲ್ಲ. ಇದನ್ನು ಕೇಳಿದಾಗ ನನ್ನ ಹೃದಯವೇ ಒಡೆದುಹೋದಂತೆ ಭಾಸವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ಕ್ವಾರಂಟೈನ್ ಸಮಯವನ್ನು ಹೇಗೆ ಕಳೆಯುತ್ತಾರೆ ಎಂಬುದರ ಬಗ್ಗೆ ಕೂಡ ಝವೇರಿ ತಿಳಿಸಿದ್ದಾರೆ. ಅಡುಗೆ, ಸ್ವಚ್ಛತೆ ಹಾಗೂ ಕಿಟಕಿಯ ಮೂಲಕ ತನ್ನ ಮಗಳನ್ನು ನೋಡಿಕೊಂಡು ಕ್ವಾರಂಟೈನ್ ದಿನವನ್ನು ಕಳೆಯುತ್ತಿದ್ದೇನೆ. ಅಲ್ಲದೆ ಪ್ರತಿ ದಿನ ಅವಳು ಮಲಗುವುದನ್ನೇ ನೋಡುತ್ತಿರುತ್ತೇನೆ. ಆದರೆ ನನಗೆ ಆಕೆಯನ್ನು ಮಲಗಿಸಲು ಸದ್ಯ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಸದ್ಯ ಈ ಫೇಸ್‍ಬುಕ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಾವಿರಾರುರ ಲೈಕ್ಸ್, ಕಮೆಂಟ್ ಗಳು ಬರುತ್ತಿದೆ. ಇನ್ ಸ್ಟಾದಲ್ಲಿ 46 ಸಾವಿರ ಮಂದಿ ಲೈಕ್ಸ್ ಕೊಟ್ಟಿದ್ದಾರೆ. ಕೆಲ ಫೇಸ್‍ಬುಕ್ ಬಳಕೆದಾರರು, ಪುಟ್ಟ ಮಕ್ಕಳಿರುವ ಪ್ರತಿಯೊಬ್ಬ ತಾಯಿಯೂ ಇಂತಹ ಕಷ್ಟ ಅನುಭವಿಸುತ್ತಿದ್ದಾಳೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಆದಷ್ಟು ಬೇಗ ಕೊರೊನಾದಿಂದ ಗುಣಮುಖರಾಗಿ ನಿಮ್ಮ ಮಗುವನ್ನು ಎತ್ತಿ ಮುದ್ದಾಡುವಂತಾಗಲಿ ಎಂದು ಆಶೀರ್ವದಿಸಿದ್ದಾರೆ.

  • ಕ್ವಾರೆಂಟೈನ್‍ನಲ್ಲಿದ್ದ ಗರ್ಭಿಣಿಗೆ ಸಿಗದ ಸೂಕ್ತ ಚಿಕಿತ್ಸೆ- ಹೊಟ್ಟೆಯಲ್ಲೇ ಪ್ರಾಣ ಬಿಟ್ಟ ಕಂದಮ್ಮ

    ಕ್ವಾರೆಂಟೈನ್‍ನಲ್ಲಿದ್ದ ಗರ್ಭಿಣಿಗೆ ಸಿಗದ ಸೂಕ್ತ ಚಿಕಿತ್ಸೆ- ಹೊಟ್ಟೆಯಲ್ಲೇ ಪ್ರಾಣ ಬಿಟ್ಟ ಕಂದಮ್ಮ

    ಮಂಗಳೂರು: ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದ ಪರಿಣಾಮ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ ಎಂಬ ಆರೋಪವೊಂದು ವೈದ್ಯರ ವಿರುದ್ಧ ಕೇಳಿಬಂದಿದೆ.

    ಮೇ 12ರಂದು ದುಬೈನಿಂದ ಗರ್ಭಿಣಿ ಏರ್ ಲಿಫ್ಟ್ ಆಗಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ಆಕೆಯನ್ನು ಹೊಟೇಲ್ ಕ್ವಾರಂಟೈನ್ ಆಗಿದ್ದರು. ಮರುದಿನ ನಡೆದ ತಪಾಸಣೆಯಲ್ಲಿ ಕೊರೊನಾ ನೆಗೆಟಿವ್ ಬಂದಿತ್ತು. ಆದರೂ ಗರ್ಭಿಣಿಗೆ ಚಿಕಿತ್ಸೆ ನೀಡಲು ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

    ಗರ್ಭಿಣಿಯ ಆರೋಗ್ಯ ತಪಾಸಣೆ ವಿಚಾರದಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದು, ವರದಿ ನೆಗೆಟಿವ್ ಬಂದರೂ ಗರ್ಭಿಣಿಗೆ ಹೋಂ ಕ್ವಾರಂಟೈನ್ ಸಿಗಲಿಲ್ಲ. ಇಷ್ಟು ಮಾತ್ರವಲ್ಲದೆ ಮಂಗಳೂರಿನ ಕೆಲ ಖಾಸಗಿ ಆಸ್ಪತ್ರೆ ವೈದ್ಯರು ಕೂಡ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

    ಒಟ್ಟಿನಲ್ಲಿ ಎರಡನೇ ಟೆಸ್ಟ್ ನಲ್ಲಿ ಕೋವಿಡ್ ನೆಗೆಟಿವ್ ಬಂದರೂ ಚಿಕಿತ್ಸೆ ಸಿಗದೇ ಮಗು ಸಾವನ್ನಪ್ಪಿದೆ. ಇದಕ್ಕೆ ವೈದ್ಯರೇ ನೇರ ಹೊಣೆ ಎಂದು ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

    ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

    ಕಲಬುರಗಿ: ಕ್ವಾರಂಟೈನ್ ಕೇಂದ್ರದಲ್ಲಿದ್ದ ಅಪ್ರಾಪ್ತೆ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಅಪ್ರಾಪ್ತೆ ಅವಿವಾಹಿತಳಾಗಿದ್ದು, ಉದ್ಯೋಗ ಅರಸಿ ಕುಟುಂಬಸ್ಥರ ಜೊತೆ ಮಹಾರಾಷ್ಟ್ರದ ಮುಂಬೈಗೆ ಹೋಗಿದ್ದಳು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೇ 17ರಂದು ಮಹಾರಾಷ್ಟ್ರದಿಂದ ವಾಪಸ್ ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಂದು ಬೆಳಗ್ಗೆ ಅಪ್ರಾಪ್ತೆ ಕ್ವಾರಂಟೈನ್ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆರೋಗ್ಯಾಧಿಕಾರಿಗಳು ಅಪ್ರಾಪ್ತೆ ಮತ್ತು ಮಗುವನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅಪ್ರಾಪ್ತೆ ಮತ್ತು ಮಗು ಆರೋಗ್ಯವಾಗಿದ್ದಾರೆ. ಪೊಲೀಸರು ಕುಟುಂಬಸ್ಥರಿಂದ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

  • 2 ತಿಂಗಳ ಗಂಡು ಮಗುವನ್ನು 22 ಸಾವಿರಕ್ಕೆ ಮಾರಿದ ದಂಪತಿ!

    2 ತಿಂಗಳ ಗಂಡು ಮಗುವನ್ನು 22 ಸಾವಿರಕ್ಕೆ ಮಾರಿದ ದಂಪತಿ!

    – ಆರ್ಥಿಕ ಸಮಸ್ಯೆ ನಿವಾರಿಸಲು ಪತಿ-ಪತ್ನಿ ನಿರ್ಧಾರ

    ಹೈದರಾಬಾದ್: ಹೆತ್ತವರು 22 ಸಾವಿರಕ್ಕೆ ಮಾರಾಟ ಮಾಡಿದ್ದ 2 ತಿಂಗಳ ಗಂಡು ಮಗುವನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

    ಮಗುವಿನ ತಂದೆ ವಿಪರೀತ ಕುಡಿತದ ಚಟ ಹೊಂದಿದ್ದಾನೆ. ಹೀಗಾಗಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರಿಂದ ತಮ್ಮ ಎರಡನೇ ಮಗುವನ್ನು ಶನಿವಾರ ರಾತ್ರಿ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನನ್ನ ಪತಿ ಕುಡಿತದ ಚಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಮಗುವನ್ನು ಮಾರಾಟ ಮಾಡಲು ಆತನೇ ನೇರ ಕಾರಣ ಎಂದು ಮಗುವಿನ ತಾಯಿ ಪೊಲೀಸರ ಬಳಿ ದೂರಿದ್ದಾಳೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಯಾರು ಮಗುವನ್ನು ತೆಗೆದುಕೊಂಡಿದ್ದಾರೋ ಅವರ ಕೈಯಿಂದ ಮಗುವನ್ನು ವಶಕ್ಕೆ ಪಡೆದು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ದಂಪತಿ ಮಹಿಳೆಯೊಬ್ಬರಿಗೆ 22 ಸಾವಿರಕ್ಕೆ ಮಗುವನ್ನು ಮಾರಾಟ ಮಾಡಿದ್ದಾರೆ. ಮಗುವನ್ನು ನೀಡುವದಕ್ಕೂ ಮುನ್ನ ದಂಪತಿ ಬಾಂಡ್ ಗೆ ಸಹಿ ಹಾಕಿದ್ದಾರೆ. ಆ ನಂತರ ಅಂದರೆ ಶನಿವಾರ ರಾತ್ರಿ ಮಹಿಳೆಗೆ ದಂಪತಿ ತಮ್ಮ ಮಗನನ್ನು ಒಪ್ಪಿಸಿದ್ದಾರೆ. ಭಾನುವಾರ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಹಿಳೆಯನ್ನು ಬಂಧಿಸಲಾಯಿತು. ಜೊತೆಗೆ ಮಗುವಿನ ಪೋಷಕರನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸಾವು ಗೆದ್ದು ಬಂದ 8 ತಿಂಗಳ ಮಗು- ಚಪ್ಪಾಳೆಯೊಂದಿಗೆ ಬಿಡುಗಡೆ ಮಾಡಿದ ಆಸ್ಪತ್ರೆ ಸಿಬ್ಬಂದಿ

    ಸಾವು ಗೆದ್ದು ಬಂದ 8 ತಿಂಗಳ ಮಗು- ಚಪ್ಪಾಳೆಯೊಂದಿಗೆ ಬಿಡುಗಡೆ ಮಾಡಿದ ಆಸ್ಪತ್ರೆ ಸಿಬ್ಬಂದಿ

    ದಾವಣಗೆರೆ: ಮಹಾಮಾರಿ ಕೊರೊನಾವನ್ನು 8 ತಿಂಗಳ ಮಗು(ರೋಗಿ-632) ಗೆದ್ದು ಬಂದಿದ್ದು, ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ.

    ಸ್ಪಾಪ್ ನರ್ಸ್ ಸಂಪರ್ಕದಿಂದ 8 ತಿಂಗಳ ಹೆಣ್ಣು ಮಗುವಿಗೆ ಸೋಂಕು ಹರಡಿತ್ತು. ಈ ಹಿನ್ನೆಲೆಯಲ್ಲಿ ಕೊರೊನಾ ಪಾಸಿಟಿವ್ ಒಳಗಾಗಿ ಮಗು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು.

    ಮಗುವಿಗೆ ಪಾಸಿಟಿವ್ ಎಂದು ವರದಿ ಬಂದ ಬೆನ್ನಲ್ಲೇ ಸರ್ವೆಕ್ಷಣಾ ಇಲಾಖೆ ತಕ್ಷಣ ಸ್ಪಂದಿಸಿದೆ. ಜಿಲ್ಲಾಸ್ಪತ್ರೆ ವೈದ್ಯರು ತುರ್ತು ಕ್ರಮ ಕೈಗೊಂಡು ಚಿಕಿತ್ಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪುಟ್ಟ ಕಂದಮ್ಮ ಗುಣಮುಖವಾಗಿದೆ. ಅದೃಷ್ಟವಶಾತ್ ತಾಯಿಗೆ ಕೊರೊನಾ ತಗುಲಿಲ್ಲ. ಸದ್ಯ ಚಪ್ಪಾಳೆ ತಟ್ಟಿ ಆರೋಗ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ.

    ಮಗು ಜೊತೆಯಲ್ಲಿ ಒಟ್ಟು 18 ಮಂದಿ ಬಿಡುಗಡೆಯಾಗಿದ್ದಾರೆ. ಎಲ್ಲರನ್ನೂ ಜಿಲ್ಲಾಡಳಿತ ಸಂಭ್ರಮದಿಂದ ಬಿಳ್ಕೊಟ್ಟಿದೆ. ಇಂದು ರೋಗಿ-630, ರೋಗಿ- 631, ರೋಗಿ-755, ರೋಗಿ- 668 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಳೆದ 25 ದಿನದಲ್ಲಿ ದಾವಣಗೆರೆಯಲ್ಲಿ 123 ಮಂದಿ ಸೋಂಕಿತರು ದಾಖಲಾಗಿದ್ದರು. ಪಾಸಿಟಿವ್ ಪ್ರಕರಣ ದಾಖಲಾಗುತ್ತಿದ್ದಂತೆ ಆತಂಕದಲ್ಲಿ ಇದ್ದ ಜನರಿಗೆ ಸಂತಸದ ಸುದ್ದಿ ಕೂಡ ಹೊರಬಿದ್ದಿದೆ. ಪ್ರತಿದಿನ ಸೋಂಕಿತರು ಗುಣಮುಖರಾಗುತ್ತಿದ್ದು, ಪಾಸಿಟಿವ್ ಪ್ರಕರಣ 71ಕ್ಕೆ ಇಳಿದಿದೆ.

  • ಚಲಿಸುತ್ತಿದ್ದ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ- ಬೆಂಗ್ಳೂರು ಪೊಲೀಸರಿಗೆ ಧನ್ಯವಾದ

    ಚಲಿಸುತ್ತಿದ್ದ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ- ಬೆಂಗ್ಳೂರು ಪೊಲೀಸರಿಗೆ ಧನ್ಯವಾದ

    ಬೆಂಗಳೂರು: ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಚಲಿಸುತ್ತಿದ್ದ ರೈಲಿನಲ್ಲೇ ವಲಸೆ ಕಾರ್ಮಿಕ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ.

    ಉತ್ತರಪ್ರದೇಶ ಮೂಲದ ಸಂಗೀತಾ ಹಾಗೂ ಸಂದೀಪ್ ದಂಪತಿ ನಗರದ ವೈಟ್ ಫೀಲ್ಡ್ ಬಳಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ದಂಪತಿ ಇದೇ 21 ರಂದು ಶ್ರಮಿಕ್ ರೈಲಿನಲ್ಲಿ ತವರು ರಾಜ್ಯ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಸಂಗೀತಾ ರೈಲಿನಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರೂ ಕ್ಷೇಮವಾಗಿ ತವರು ಸೇರಿದ್ದಾರೆ.

    ತುಂಬು ಗರ್ಭಿಣಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದ ವೈಟ್ ಫೀಲ್ಡ್ ಡಿಸಿಪಿ ಅನುಚೇತ್ ಹಾಗೂ ಐಎಫ್‍ಎಸ್ ಆಧಿಕಾರಿಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಗುವಿನೊಂದಿಗೆ ಕ್ಷೇಮವಾಗಿ ಊರು ತಲುಪಿದ್ದಾಗಿ ದಂಪತಿ ಅನುಚೇತ್ ಅವರಿಗೆ ಫೋಟೋ ಶೇರ್ ಮಾಡಿದ್ದಾರೆ.

    ಸಂಗೀತಾ ಗರ್ಭಿಣಿಯಾಗಿದ್ದರಿಂದ ಟ್ರಾವೆಲ್ ಮಾಡೋದು ಬೇಡ ಎಂದು ಮಹಿಳಾ ಐಎಫ್‍ಎಸ್ ಅಧಿಕಾರಿ ಬುದ್ಧಿ ಹೇಳಿದ್ದರು. ಆದರೆ ಇದಕ್ಕೆ ಒಪ್ಪದ ಸಂಗೀತಾ ತವರೂರಿಗೆ ಹೋಗಲೇಬೇಕೆಂದು ಹಠ ಹಿಡಿದಿದ್ದರು. ಈ ವೇಳೆ ಡಿಸಿಪಿ ಎಂ.ಎನ್.ಅನುಚೇತ್ ಅವರು ಸೇವಾಸಿಂದು ಪೋರ್ಟಲ್‍ನಲ್ಲಿ ದಂಪತಿಯ ನೋಂದಣಿ ಮಾಡಿಸಿದ್ದರು. ಬಳಿಕ ರೈಲು ಟಿಕೆಟ್ ಕೊಡಿಸಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಿದ್ದರು.

    ಮೇ 21ರಂದು ಶ್ರಮಿಕ್ ರೈಲಿನಲ್ಲಿ ಊರಿಗೆ ಹೊರಟಿದ್ದ ಸಂಗೀತಾ ಮಾರ್ಗ ಮಧ್ಯೆ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಶ್ರಮಿಕ್ ರೈಲು ಶನಿವಾರ ಉತ್ತರಪ್ರದೇಶದ ಲಕ್ನೋ ತಲುಪಿದ್ದು, ಮಗುವಿನೊಂದಿಗೆ ಕ್ಷೇಮವಾಗಿ ಊರು ತಲುಪಿದ್ದಾಗಿ ದಂಪತಿ ಅನುಚೇತ್ ಅವರಿಗೆ ತಿಳಿಸಿದ್ದಾರೆ.

  • ಪತಿ ಕೊರೊನಾಗೆ ಬಲಿಯಾದಂದೇ ಮಗು ಜನನ!

    ಪತಿ ಕೊರೊನಾಗೆ ಬಲಿಯಾದಂದೇ ಮಗು ಜನನ!

    ಮಂಗಳೂರು: ಮಹಾಮಾರಿ ಕೊರೊನಾ ವೈರಸ್ ಜನರನ್ನು ಯಾವ ರೀತಿಯಲ್ಲೆಲ್ಲ ಆಟ ಆಡಿಸುತ್ತಿದೆ ಎಂಬುದು ದಿನ ನಿತ್ಯ ನೋಡುತ್ತಾ ಇರುತ್ತೀವಿ. ವಿಧಿಯಾಟದ ಮುಂದೆ ಯಾವ ಆಟ ನಡೆಯಲ್ಲಿ ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.

    ಹೌದು. ಅತ್ತ ಪತಿ ಕೊರೊನಾಗೆ ಬಲಿಯಾದರೆ ಇತ್ತ ಪತ್ನಿ ಮಗುವಿಗೆ ಜನ್ಮವಿತ್ತಿದ್ದಾರೆ. ಹೀಗಾಗಿ ಒಂದು ಕಡೆ ಖುಷಿ ವಿಚಾರವಿದ್ದರೆ, ಇನ್ನೊಂದೆಡೆ ಕೊನೆಯ ಬಾರಿ ಪತಿ ಮುಖವನ್ನೂ ನೋಡಲಾಗದೆ ಪತ್ನಿ ಕಂಗಾಲಾಗಿದ್ದಾರೆ.

    ಮೂಡಬಿದಿರೆಯ ಜೈನ್ ಪೇಟೆ ನಿವಾಸಿ ಮುಂಬೈನಲ್ಲಿ ಉದ್ಯೋಗದಲ್ಲಿದ್ದು ಕೊರೊನಾದಿಂದ ಬಳಲುತ್ತಿದ್ದರು. ಆದರೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಇತ್ತ ಅದೇ ದಿನ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಮಗು ಹುಟ್ಟುವ ದಿನವೇ ಪತಿ ಕೊರೊನಾಗೆ ಬಲಿಯಾಗಿರುವುದು ದುರ್ದೈವದ ಸಂಗತಿಯಾಗಿದೆ.

    ಒಟ್ಟಿನಲ್ಲಿ ಪತ್ನಿ ಹಾಗೂ ಮೃತರ ಕುಟುಂಬಕ್ಕೆ ಒಂದು ಕಡೆ ಮಗು ಹುಟ್ಟಿದ ಖುಷಿಯಾದರೆ ಇನ್ನೊಂದೆಡೆ ಕುಟುಂಬದ ಸದಸ್ಯ ಇನ್ನಿಲ್ಲ ಅನ್ನೋ ದುಃಖ ಕಾಡುತ್ತಿದೆ. ಇಂತಹ ಹಲವು ಘಟನೆಗಳ ಮೂಲಕ ಕೊರೊನಾ ಹೆಮ್ಮಾರಿ ಜನರನ್ನು ಸಂದಿಗ್ಧ ಪರಿಸ್ಥಿಯಲ್ಲಿ ತಂದಿಟ್ಟಿದೆ.

  • ತನ್ನ ಜೀವ ಪಣಕ್ಕಿಟ್ಟು ಪುಟ್ಟ ಮರಿಯನ್ನು ರಕ್ಷಿಸಿದ ತಾಯಿ ಕೋತಿ – ವಿಡಿಯೋ ವೈರಲ್

    ತನ್ನ ಜೀವ ಪಣಕ್ಕಿಟ್ಟು ಪುಟ್ಟ ಮರಿಯನ್ನು ರಕ್ಷಿಸಿದ ತಾಯಿ ಕೋತಿ – ವಿಡಿಯೋ ವೈರಲ್

    ನವದೆಹಲಿ: ತಾಯಿ ಪ್ರೀತಿಗೆ ಸಾಟಿಯಿಲ್ಲ, ತಾಯಿ ಎದುರು ಆ ದೇವರೇ ಸಲಾಂ ಹೊಡೆಯುತ್ತಾನೆ ಎಂಬ ಮಾತಿದೆ. ಮನುಷ್ಯರೇ ಆಗಲಿ, ಪ್ರಾಣಿಗಳೇ ಆಗಲಿ ತಾಯಿ ಮಮತೆ, ಪ್ರೀತಿ ಒಂದೆ. ಇದಕ್ಕೆ ಉದಾಹರಣೆ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ತಾಯಿ ಕೋತಿ ತನ್ನ ಮರಿಯನ್ನು ರಕ್ಷಣೆ ಮಾಡಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು, ತನ್ನ ಪ್ರಣವನ್ನು ಲೆಕ್ಕಿಸದೆ ತಾಯಿ ಕೋತಿ ತನ್ನ ಪುಟ್ಟ ಮರಿಯ ಜೀವ ಉಳಿಸಿದ ದೃಶ್ಯ ನೆಟ್ಟಿಗರ ಮನ ಮುಟ್ಟಿದೆ.

    ವೈರಲ್ ವಿಡಿಯೋದಲ್ಲಿ ಕೋತಿಯೊಂದು ತನ್ನ ಕಂದನನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ದೃಶ್ಯ ಸೆರೆಯಾಗಿದೆ. ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಹಾರುವಾಗ ವಿದ್ಯುತ್ ತಂತಿಯ ಮಧ್ಯದಲ್ಲಿ ಸಿಲುಕಿ, ಜೀವ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ಪುಟ್ಟ ಮರಿಯನ್ನು ತಾಯಿ ಕೋತಿ ತನ್ನ ಜೀವ ಪಣಕ್ಕಿಟ್ಟು ರಕ್ಷಿಸಿರುವ ದೃಶ್ಯ ನೋಡಿ ನೆಟ್ಟಿಗರು ಮನಸೋತಿದ್ದಾರೆ.

    ತನ್ನ ಜೀವವನ್ನು ಲೆಕ್ಕಿಸದೆ ಮರಿಗಾಗಿ ತಾಯಿ ಕೋತಿ ಕಟ್ಟದದಿಂದ ವಿದ್ಯುತ್ ತಂತಿಯ ಮೇಲೆ ಹಾರಿ, ತನ್ನ ಕರುಳ ಕುಡಿಯನ್ನು ರಕ್ಷಿಸಿರುವುದು ತಾಯಿಯ ನಿಸ್ವಾರ್ಥ ಪ್ರೀತಿ ಏನು ಎಂಬುದನ್ನು ತಿಳಿಸುತ್ತೆ ಎಂದು ನೆಟ್ಟಿಗರು ಈ ದೃಶ್ಯವನ್ನು ವರ್ಣಿಸಿದ್ದಾರೆ.

    ಈ ಹೃದಯಸ್ಪರ್ಶಿ ವಿಡಿಯೋವನ್ನು ಅರಣ್ಯ ಅಧಿಕಾರಿ ಪ್ರವೀಣ್ ಕಾಸ್ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ತಾಯಿ ನಡೆಸಿದ ರಕ್ಷಣಾ ಕಾರ್ಯಾಚರಣೆ, ವಿಫಲವಾಗಲು ಸಾಧ್ಯವೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ತಾಯಿ ಪ್ರೀತಿಗೆ, ದಿಟ್ಟತನಕ್ಕೆ ಸಲಾಂ ಎಂದಿದ್ದಾರೆ.

  • ಬೆಂಗ್ಳೂರಲ್ಲಿ ಕೊರೊನಾ ಸೋಂಕಿತೆಗೆ ಹೆರಿಗೆ – ಜನ್ಮ ಕೊಟ್ಟ ತಕ್ಷಣ ತಾಯಿ, ಮಗು ಪ್ರತ್ಯೇಕಿಸಿ ಚಿಕಿತ್ಸೆ

    ಬೆಂಗ್ಳೂರಲ್ಲಿ ಕೊರೊನಾ ಸೋಂಕಿತೆಗೆ ಹೆರಿಗೆ – ಜನ್ಮ ಕೊಟ್ಟ ತಕ್ಷಣ ತಾಯಿ, ಮಗು ಪ್ರತ್ಯೇಕಿಸಿ ಚಿಕಿತ್ಸೆ

    ಬೆಂಗಳೂರು: ಪಾದರಾಯನಪುರ ನಿವಾಸಿ 34 ವರ್ಷದ ಕೊರೊನಾ ಸೋಂಕಿತ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಹುಟ್ಟಿದ ಮಗುವನ್ನು ವೈದ್ಯರು ತಾಯಿಯಿಂದ ಬೇರೆ ಮಾಡಿದ್ದಾರೆ. ಇದೀಗ ಒಂದು ದಿನದ ಮಗುವಿಗೂ ಕೋವಿಡ್ ಟೆಸ್ಟ್ ಮಾಡುತ್ತಿದ್ದು, ಮಗುವಿನ ಗಂಟಲು ದ್ರವ ತೆಗೆದುಕೊಂಡು ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ.

    ಮಗುವನ್ನ ಐಸೂಲೇಷನ್ ವಾರ್ಡಿನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ತಾಯಿಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡಿನಲ್ಲಿ ಇರಿಸಲಾಗಿದೆ. ಈ ಮೂಲಕ ಕೊರೊನಾ ಮಹಾ ಮಾರಿಯಿಂದ ತಾಯಿ, ಮಗು ದೂರ ದೂರವಾಗಿದ್ದಾರೆ. ತಂದೆ-ತಾಯಿ ಅಪ್ಪುಗೆಯಲ್ಲಿ ಇರಬೇಕಾದ ಮಗು ಈಗ ಐಸೂಲೇಷನ್ ವಾರ್ಡಿನಲ್ಲಿದೆ.

    ಮಗುವಿಗೆ ಚಿಕಿತ್ಸೆ ಹೇಗೆ?
    ಮೊದಲಿಗೆ ಮಗುವಿನ ಗಂಟಲು ದ್ರವವನ್ನು ತೆಗೆದುಕೊಂಡು ವೈದ್ಯರು ಪರೀಕ್ಷೆ ಮಾಡಿದ್ದಾರೆ. ಗಂಟಲು ದ್ರವ ಪರೀಕ್ಷೆ ಬಳಿಕ ಎರಡನೇ ಹಂತವಾಗಿ ಕಂದಮ್ಮನ ರಕ್ತವನ್ನು ತೆಗೆದುಕೊಂಡು ಪರೀಕ್ಷೆಗೆ ಕಳಿಸಲಿದ್ದಾರೆ. ಅಲ್ಲದೇ ಉಸಿರಾಟದ ಸಮಸ್ಯೆ ಇದಿಯಾ ಎಂದು ಪರೀಕ್ಷೆ ಮಾಡುತ್ತಾರೆ. ನಂತರ ನ್ಯೂಮೋನಿಯಾ ಚೆಕ್ ಮಾಡಲಿದ್ದಾರೆ. ಒಂದು ದಿನದ ಕಂದಮ್ಮನಿಗೆ ಯಾವ ಸಮಸ್ಯೆ ಪತ್ತೆಯಾಗುತ್ತೋ ಆ ಸಮಸ್ಯೆಗೆ ವೈದ್ಯರು ಚಿಕಿತ್ಸೆ ನೀಡುತ್ತಾರೆ.

    ಅಮ್ಮನ ಅಪ್ಪುಗೆಯಲ್ಲಿ ಇರಬೇಕಾದ ಒಂದು ದಿನದ ಮಗುವಿಗೆ ಹೈ ಟ್ರೀಟ್‍ಮೆಂಟ್ ನೀಡಲಾಗುತ್ತದೆ. ಈ ಸಮಯದಲ್ಲಿ ತಾಯಿ ಎದೆ ಹಾಲಿನಿಂದ ಕೊರೊನಾ ಹರಡಲ್ಲ. ಬದಲಾಗಿ ತಾಯಿ ಹತ್ತಿರದಿಂದ ಮಗುವಿಗೆ ಹಾಲು ಕೊಡುವುದರಿಂದ ಉಸಿರಾಟದ ಮೂಲಕ ಕೊರೊನಾ ಹರಡುತ್ತೆ. ಹೀಗಾಗಿ ತಾಯಿ ಮಗುವನ್ನ ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮಗುವಿಗೆ ಹಾಲಿನ ಪೌಡರ್ ನೀಡಲಾಗುತ್ತಿದ್ದು, ಮಗು ಹುಟ್ಟಿದಾಗಲೇ 3 ಕೆ.ಜಿ ಇದೆ ಎಂದು ವೈದ್ಯರು ತಿಳಿಸಿದ್ದಾರೆ.