Tag: Baby

  • ಆರ್ಥಿಕ ಸಮಸ್ಯೆ- 2 ತಿಂಗಳ ಮಗುವನ್ನು 45 ಸಾವಿರಕ್ಕೆ ಮಾರಿದ ಮಹಿಳೆ

    ಆರ್ಥಿಕ ಸಮಸ್ಯೆ- 2 ತಿಂಗಳ ಮಗುವನ್ನು 45 ಸಾವಿರಕ್ಕೆ ಮಾರಿದ ಮಹಿಳೆ

    ಹೈದರಾಬಾದ್: ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಯೊಬ್ಬಳು ತನ್ನ 2 ತಿಂಗಳ ಮುಗ್ಧ ಕಂದಮ್ಮನನ್ನು 45 ಸಾವಿರ ರೂ. ಗೆ ಮಾರಾಟ ಮಾಡಿದ್ದಾಳೆ. ಈ ಘಟನೆ ಹೈದರಾಬಾದ್‍ನ ಸುಭಾನ್‍ಪುರ್ ಪ್ರದೇಶದಲ್ಲಿ ನಡೆದಿದೆ.

    ಮಹಿಳೆಯನ್ನು ಝೋಯಾ ಖಾನ್ ಎಂದು ಗುರುತಿಸಲಾಗಿದೆ. ಆಯೆಷಾ ಜಬೀನ್, ಶಮೀಮಾ ಬೇಗಂ ಹಾಗೂ ಸಿರಾಜ್ ಬೇಗಂ ಇತರ ಆರೋಪಿಗಳಾಗಿದ್ದಾರೆ. ಆಗಸ್ಟ್ 11 ರಂದು ಅಬ್ದುಲ್ ಮುಜಾಹೇದ್ ಎಂಬ ವ್ಯಕ್ತಿ ಹಬೀಬ್ ನಗರ ಪೊಲೀಸ್ ಠಾಣೆಗೆ ಬಂದು ತನ್ನ ಪತ್ನಿ ಮಗುವನ್ನು ಮಾರಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ತಮ್ಮ ಮಗುವನ್ನು ಮೊಹಮ್ಮದ್ ಹಾಗೂ ತಬಸ್ಸುಮ್ ಬೇಗಂಗೆ 45 ಸಾವಿರಕ್ಕೆ ಮಾರಾಟ ಮಾಡಲಾಗಿದೆ ಎಂದು ದೂರಿದ್ದಾನೆ.

    ದೂರು ದಾಖಲಾಗುತ್ತಿದ್ದಂತೆಯೇ ಪೊಲಿಸರು ಮಹಿಳೆ ಝೋಯಾ ಖಾನ್ ನನ್ನು ವಶಕ್ಕೆ ಪಡೆದುಕೊಂಡರು. ತನಿಖೆ ನಡೆಸದಿ ವೇಳೆ ಮಹಿಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆಗಸ್ಟ್ 3ರಂದು ಮುಜಾಹೇದ್ ತನ್ನ ಪತ್ನಿಯೊದಿಗೆ ಜಗಳವಾಡಿ ಹೆತ್ತವರ ಮನೆಗೆ ತೆರಳಿದ್ದನು. ತನ್ನ ಪತಿಯ ವರ್ತನೆಯಿಂದ ಬೇಸರಗೊಂಡ ಝೋಯಾಳಿಗೆ ಆರ್ಥಿಕ ಬಿಕ್ಕಟ್ಟು ಎದುರಾಯಿತು. ಹೀಗಾಗಿ ಆಲೆ ಮಗುವನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾಳೆ. ಅಲ್ಲದೆ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ ತನ್ನ 2 ತಿಂಗಳ ಮಗನನ್ನು ಮಾರಾಟ ಮಾಡಲು ಬಯಸಿದ್ದಾಗಿ ಪೊಲೀಸರ ಬಳಿ ತಿಳಿಸಿದ್ದಾಳೆ.

    ಮಗುವನ್ನು 45 ಸಾವಿರಕ್ಕೆ ಮಾರಾಲು ಒಪ್ಪಿಕೊಂಡ ಝೋಯಾ, ಅದರಂತೆ ಆಗಸ್ಟ್ ಮೊದಲ ವಾರದಲ್ಲಿ ಮಗುವನ್ನು ವ್ಯಕ್ತಿಗೆ ನೀಡಿದ್ದಾಳೆ. ಇತ್ತ ಆಗಸ್ಟ್ 8 ರಂದು ಹೆತ್ತವರ ಮನೆಯಿಂದ ಬಂದ ಪತಿ ಮಗು ಎಲ್ಲಿ ಎಂದು ಕೇಳಿದ್ದಾನೆ. ಈ ವೇಳೆ ಆಕೆ, ಮಗುವನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪತಿ, ಮಗುವಿನ ಹುಡುಕಾಟ ಶುರುಮಾಡದನು. ಎಲ್ಲೂ ಸಿಗದ ನಂತರ ಆತ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.

    ದೂರಿನ ಮೇರೆಗೆ ಪೊಲಿಸರು ಚಂಚಲಗುಡದಲ್ಲಿರುವ ಆಯೆಷಾ ಮನೆಗೆ ತೆರಳಿ ಮಗುವನ್ನು ಪತ್ತೆ ಮಾಡಿದ್ದಾರೆ. ಪ್ರಕರಣ ಸಂಬಂಧ ಇತರ ಆರೋಪಿಗಳೊಂದಿಗೆ ಮಹಿಳೆಯನ್ನು ಬಂಧಿಸಲಾಗಿದ್ದು, ಮಗುವನ್ನು ರಕ್ಷಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಆರು ದಿನ ಕಳೆದ್ರೂ ಪತ್ತೆಯಾಗದ ಅತ್ಯಾಚಾರಿ- ಸುಳಿವು ನೀಡಿದ್ರೆ ಬಹುಮಾನ

    ಆರು ದಿನ ಕಳೆದ್ರೂ ಪತ್ತೆಯಾಗದ ಅತ್ಯಾಚಾರಿ- ಸುಳಿವು ನೀಡಿದ್ರೆ ಬಹುಮಾನ

    -ಜೀವನ್ಮರಣ ಹೋರಾಟದಲ್ಲಿ 6 ವರ್ಷದ ಕಂದಮ್ಮ

    ಲಕ್ನೋ: ಉತ್ತರ ಪ್ರದೇಶದ ಹಾಪುಡ ಪ್ರಕರಣದ ಪ್ರಮುಖ ಆರೋಪಿ ಇದುವರೆಗೂ ಪೊಲೀಸರ ಕೈಗೆ ಸಿಕ್ಕಿಲ್ಲ. ಈಗಾಗಲೇ ಆರೋಪಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿ, ಸಾರ್ವಜನಿಕರ ಸಹಕಾರ ಕೇಳಿದ್ದರು.

    ಆರು ದಿನ ಕಳೆದರೂ ಆರೋಪಿ ಪತ್ತೆಯಾಗದ ಹಿನ್ನೆಲೆಯಲ್ಲಿ ಕಾಮುಕನ ಸುಳಿವು ನೀಡಿದವರಿಗೆ 50 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಪೊಲೀಸರು ಪ್ರಕಟನೆ ಹೊರಡಿಸಿದ್ದಾರೆ. ಪೊಲೀಸರು ಆರೋಪಿಯ ಬಂಧನಕ್ಕಾಗಿ ವಿಶೇಷ ಬಲೆ ಬೀಸಿದ್ದಾರೆ. ಇದನ್ನೂ ಓದಿ:  6ರ ಕಂದಮ್ಮನ ಅತ್ಯಾಚಾರಗೈದ ಕಾಮುಕರ ಸ್ಕೆಚ್ ಬಿಡುಗಡೆ

    ಆರೋಪಿಯನ್ನು ರೋಹತಾಶ್ ನಿವಾಲಿ ಎಂದು ಗುರುತಿಸಲಾಗಿದೆ. ಆರೋಪಿಯ ಸುಳಿವು ನೀಡಿದವರ ಹೆಸರನ್ನು ಗೌಪ್ಯವಾಗಿರಿಸಲಾಗುವುದು. ಘಟನೆ ನಡೆದ ಇಲಾಖೆಯ ಗಲ್ಲಿ ಗಲ್ಲಿಗಳಲ್ಲಿಯೂ ಪೊಲೀಸರು ಶೋಧ ನಡೆಸಿದ್ದಾರೆ. ಇನ್ನು ಅತ್ಯಾಚಾರಕ್ಕೊಳಗಾದ ಕಂದಮ್ಮ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದೆ ಎಂದು ವರದಿಯಾಗಿದೆ.

  • ನವಜಾತ ಶಿಶುವನ್ನು ಕಸದ ಬುಟ್ಟಿಗೆ ಎಸೆದು ಹೋದ ಪಾಪಿ ತಾಯಿ

    ನವಜಾತ ಶಿಶುವನ್ನು ಕಸದ ಬುಟ್ಟಿಗೆ ಎಸೆದು ಹೋದ ಪಾಪಿ ತಾಯಿ

    – ನಗರಸಭೆ ನೌಕರನಿಂದ ಮಗು ರಕ್ಷಣೆ

    ಉಡುಪಿ: ಸುರಿಯುವ ಮಳೆಯಲ್ಲಿ ಪಾಪಿ ತಾಯಿಯೊಬ್ಬಳು ನವಜಾತ ಶಿಶುವನ್ನು ಕಸದಬುಟ್ಟಿಯಲ್ಲಿ ಎಸೆದು ಹೋಗಿದ್ದಾಳೆ. ಈ ಅಮಾನವೀಯ ಘಟನೆ ಉಡುಪಿ ನಗರದ ಚಿತ್ತರಂಜನ್ ಸರ್ಕಲ್ ಬಳಿ ನಡೆದಿದೆ.

    ಉಡುಪಿಯಲ್ಲಿ ಕಳೆದ 10 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಇಂದು ಬೆಳಗ್ಗೆಯಿಂದ ನಿರಂತರ ಮಳೆಯಾಗುತ್ತಿದೆ. ಭಾರೀ ಮಳೆಯ ನಡುವೆಯೇ ಹೋಟೆಲೊಂದರ ಮುಂಭಾಗದ ಕಸದ ಬುಟ್ಟಿಗೆ ಪಾಪಿಗಳು ಮಾನವೀಯತೆ ಮರೆತು ಮಗು ಎಸೆದು ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಉಡುಪಿ ನಗರಸಭೆಯ ಪೌರಕಾರ್ಮಿಕರು ಕಸ ಕೊಂಡೊಯ್ಯಲು ಬರುವಾಗ ಮಗುವಿನ ಅಳು ಕೇಳಿದೆ.

    ಕಸದ ಬುಟ್ಟಿಯನ್ನು ಪರಿಶೀಲಿಸಿದಾಗ ನವಜಾತ ಶಿಶು ಪತ್ತೆಯಾಗಿದೆ. ಹೋಟೆಲ್ ಮಾಲೀಕರಿಗೆ, ಸುತ್ತಮುತ್ತ ಸಾರ್ವಜನಿಕರ ವಿಚಾರ ಗಮನಕ್ಕೆ ತಂದಿದ್ದಾರೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಸ್ಥಳಕ್ಕಾಗಮಿಸಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಉಡುಪಿ ಜಿಲ್ಲಾ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸರ್ಕಾರಿ ಮಹಿಳಾ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮಗು ಇಂದು ಬೆಳಗ್ಗೆ ಹುಟ್ಟಿದ್ದು ಮಗುವಿನ ಕರುಳಬಳ್ಳಿಯನ್ನು ಕೂಡ ಕತ್ತರಿಸಲಾಗಿಲ್ಲ. 9 ತಿಂಗಳು ಹೊತ್ತು, ಮಗುವನ್ನು ಯಾವುದೇ ಕರುಣೆ ಇಲ್ಲದೆ ಕಸದಬುಟ್ಟಿಯಲ್ಲಿ ಎಸೆದ ಪ್ರಕರಣ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಹೆಣ್ಣು ಮಗುವೆಂದು ನವಜಾತ ಶಿಶುವನ್ನು ಕಸದಬುಟ್ಟಿಗೆ ಎಸೆದಿರುವ ಸಾಧ್ಯತೆ ಇದೆ. ಸದ್ಯ ಮಗು ಹೆರಿಗೆ ಆಸ್ಪತ್ರೆಯಲ್ಲಿ ಆರೋಗ್ಯವಾಗಿದೆ ಎಂದು ನಿತ್ಯಾನಂದ ಒಳಕಾಡು ಹೇಳಿದ್ದಾರೆ. ಉಡುಪಿ ನಗರ ಠಾಣೆಯ ಎಸ್ ಐ ಶಕ್ತಿವೇಲು, ಮಹಿಳಾ ಠಾಣೆ ಎಸ್ ಐ ವೈಲೆಟ್ ಫೆಮಿನಾ ಮತ್ತಿತರರು ಸಮ್ಮುಖದಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

  • ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ತಿರುವನಂತಪುರಂ: ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ದುರಂತದಲ್ಲಿ ಪುಟ್ಟ ಕಂದಮ್ಮವೊಂದು ಬದುಕುಳಿದಿದೆ.

    ವಿಮಾನ ಭೀಕರ ದುರಂತಕ್ಕೀಡಾದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿಗೆ ಪುಟ್ಟ ಮಗುವೊಂದು ಅಳುತ್ತಿರುವ ಶಬ್ದ ಕೇಳಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಮಗುವಿನ ಅಳು ಕೇಳುತ್ತಿರುವ ಕಡೆ ತೆರಳಿ ರಕ್ಷಿಸಿದ್ದಾರೆ. ಘಟನೆಯಿಂದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೊಂಡ್ರೊಟ್ಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.

    ಈ ಸಂಬಂಧ ಸಿವಿಲ್ ಪೊಲಿಸ್ ಅಧಿಕಾರಿ ಮಗುವನ್ನು ಹಿಡಿದ ಫೋಟೋದೊಂದಿಗೆ ಆಡಿಯೋ ಬಿಡುಗಡೆ ಮಾಡಿದ್ದು, ದುಬೈನಿಂದ ಬಂದ ವಿಮಾನ ಇಲ್ಲಿ ಅವಘಡಕ್ಕೆ ತುತ್ತಾಗಿದೆ. ಘಟನೆಯಲ್ಲಿ ಮಗುವೊಂದು ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಮಗುವಿಗೆ ಯಾರೂ ಇಲ್ಲ. ಮಗುವನ್ನು ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದ್ದಾರೆ.

    ಇಂದು ಸಂಜೆ 7.45ರ ಸುಮಾರಿಗೆ ದುಬೈನಿಂದ ಕೋಯಿಕ್ಕೋಡ್ ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಗೆ ವೇಳೆ ನಿಲ್ದಾಣದ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾಗಿದೆ. ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು. ಸದ್ಯ ಪ್ರಯಾಣಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

  • ಎರಡೂವರೆ ವರ್ಷದ ಮಗಳ ಜೊತೆ ನರ್ಸ್ ಕೆಲಸ

    ಎರಡೂವರೆ ವರ್ಷದ ಮಗಳ ಜೊತೆ ನರ್ಸ್ ಕೆಲಸ

    ಧಾರವಾಡ: ಎರಡೂವರೆ ವರ್ಷದ ಪುಟ್ಟ ಮಗಳ ಜೊತೆ ನರ್ಸ್ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

    ಧಾರವಾಡ ನಗರದ ವಿವಿಧ ಬಡಾವಣೆಗಳಲ್ಲಿ ಆಂಟಿಜಿನ್ ಕಿಟ್ ಟೆಸ್ಟ್ ಬಸ್ ಸಂಚರಿಸಿ ಶಂಕಿತರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದೇ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನರ್ಸ್ ಪುಟ್ಟ ಮಗಳ ಜೊತೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇನ್ನು ಮಾಧ್ಯಮಗಳ ಕ್ಯಾಮೆರಾ ಕಂಡ ಕೂಡಲೇ ಮಗುವಿಗೆ ಮಾಸ್ಕ್ ಹಾಕಲಾಗಿದೆ.

    ನಗರದ ಹಲವು ಕಡೆಗಳಲ್ಲಿ ಈ ಬಸ್ ಸಂಚರಿಸಿ ಶಂಕಿತ ಕೊರೊನಾ ಸೋಂಕಿತರ ಟೆಸ್ಟ್ ಮಾಡುತ್ತಿದೆ. ಈ ಬಸ್ ನಲ್ಲಿ ಮಗು ನೋಡಿದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ನರ್ಸ್ ಮಾತ್ರ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಕರೆ ತಂದಿದ್ದೇನೆ ಎಂದು ಹೇಳಿದ್ದಾರೆ.

  • ಹುಟ್ಟಿದ ಮಗು ಹೆಣ್ಣೆಂದು ಗೊತ್ತಾಗ್ತಿದ್ದಂತೆ ಬಾಯೊಳಗೆ ಬೆರಳು ತುರುಕಿ ಉಸಿರುಗಟ್ಟಿಸಿ ಕೊಂದ!

    ಹುಟ್ಟಿದ ಮಗು ಹೆಣ್ಣೆಂದು ಗೊತ್ತಾಗ್ತಿದ್ದಂತೆ ಬಾಯೊಳಗೆ ಬೆರಳು ತುರುಕಿ ಉಸಿರುಗಟ್ಟಿಸಿ ಕೊಂದ!

    ಶಿಮ್ಲಾ: ಆಗ ತಾನೇ ಹುಟ್ಟಿದ ಮಗು ಹೆಣ್ಣು ಎಂದು ಗೊತ್ತಾಗುತ್ತಿದ್ದಂತೆ ಅದರ ಬಾಯೊಳಗೆ ತನ್ನ ಬೆರಳು ತುರುಕಿ ಉಸಿರುಗಟ್ಟಿಸಿ ಕೊಲೆಗೈದ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಕೃತ್ಯ ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಆರೋಪಿಯನ್ನು ಹರೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಜಿಲ್ಲೆಯ ನಸ್ಲೋಹ್ ಗ್ರಾಮದ ನಿವಾಸಿ. ಈತನ ವಿರುದ್ಧ ಪತ್ನಿ ಮೀನಾ ದೇವಿ(27) ಪೊಲೀಸರ ಬಳಿ ಪತಿಯ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾಳೆ.

    8 ವರ್ಷಗಳ ಹಿಂದೆ ನಾನು ಕುಮಾರ್ ನನ್ನು ಮದುವೆಯಾಗಿದ್ದು, ಈಗಾಗಲೇ ನಮಗೆ 7 ಮತ್ತು 4 ವರ್ಷದ ಹೆಣ್ಣು ಹಾಗೂ ಗಂಡು ಮಕ್ಕಳಿದ್ದಾರೆ. ಮದುವೆಯಾದಾಗಿನಿಂದ ನನಗೆ ಇಬ್ಬರು ಗಂಡು ಮಕ್ಕಳು ಬೇಕು ಎಂದು ಕುಮಾರ್ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದನು ಎಂದು ಮೀನಾ ಪೊಲೀಸರ ಬಳಿ ತಿಳಿಸಿದ್ದಾಳೆ.

    ಇತ್ತ ಬುಧವಾರ ಮೀನಾ ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದರಿಂದ ಸಿಟ್ಟಿಗೆದ್ದ ಕುಮಾರ್, ಪತ್ನಿಗೆ ಚೆನ್ನಾಗಿ ಥಳಿಸಿದ್ದಾನೆ. ಅಲ್ಲದೆ ಆಗ ತಾನೇ ಹುಟ್ಟಿದ ಮಗುವನ್ನು ತಲೆಕೆಳಗೆ ಮಾಡಿ ಹಿಡಿದುಕೊಂಡು ಬಾಯೊಳಗೆ ತನ್ನ ಕೈ ಬೆರಳು ತುರುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಇಷ್ಟಾದ ನಂತರ ಕೆಲ ಸಮಯದ ಬಳಿಕ ಮತ್ತೆ ನನ್ನ ಬಳಿ ಬಂದು ತಾನು ಮಗುವನ್ನು ಸಮಾಧಿ ಮಾಡಿದೇನೆ ಎಮದು ಹೇಳಿದ್ದಾನೆ ಅಂತ ಮೀನಾ ಪೊಲೀಸರ ಬಳಿ ಕಣ್ಣೀರು ಹಾಕಿದ್ದಾಳೆ.

  • 4 ದಿನದ ಮಗುವಿಗೆ ಬ್ಲಡ್ ಕ್ಯಾನ್ಸರ್ -ಶಿವಮೊಗ್ಗ ಟು ಮಣಿಪಾಲ್ ಝೀರೋ ಟ್ರಾಫಿಕ್‍

    4 ದಿನದ ಮಗುವಿಗೆ ಬ್ಲಡ್ ಕ್ಯಾನ್ಸರ್ -ಶಿವಮೊಗ್ಗ ಟು ಮಣಿಪಾಲ್ ಝೀರೋ ಟ್ರಾಫಿಕ್‍

    ಶಿವಮೊಗ್ಗ : ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಾಲ್ಕು ದಿನದ ಮಗುವನ್ನು ಶಿವಮೊಗ್ಗದಿಂದ ಮಣಿಪಾಲ್ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ನಲ್ಲಿ ರವಾನೆ ಮಾಡಲಾಯಿತು.

    ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದಿಂದ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಭದ್ರಾವತಿಯ ಅಶ್ವಥ್ ನಗರದ ದೇವೆಂದ್ರ ಮತ್ತು ಸುಪ್ರಿಯಾ ದಂಪತಿಗೆ ನಾಲ್ಕು ದಿನದ ಹಿಂದೆ ಹೆಣ್ಣು ಮಗು ಜನಿಸಿತ್ತು. ಜನಿಸಿದ ಸಮಯದಲ್ಲಿಯೇ ಹಸುಗೂಸು ತನ್ನೂಂದಿಗೆ ರಕ್ತದ ಕ್ಯಾನ್ಸರ್ ಹೂತ್ತು ತಂದಿದೆ. ಇದನ್ನು ಪತ್ತೆ ಹಚ್ಚಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

    ಮಗುವನ್ನು ಶಿವಮೊಗ್ಗದಿಂದ ಮಣಿಪಾಲ್ ವರೆಗೂ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು ಮಾಡಿದ್ದರು. ಶಿವಮೊಗ್ಗದಿಂದ ಉಡುಪಿಯ ಗಡಿ ಭಾಗದ ತನಕ ಶಿವಮೊಗ್ಗ ಜಿಲ್ಲೆಯ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ನಂತರ ಉಡುಪಿ ಪೊಲೀಸರು ಝೀರೋ ಟ್ರಾಫಿಕ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ.

  • ಆರೋಗ್ಯ ಸಿಬ್ಬಂದಿಯನ್ನ ಬೆದರಿಸಿ ಕೊರೊನಾ ಸೋಂಕಿತೆಗೆ ಹೆರಿಗೆ

    ಆರೋಗ್ಯ ಸಿಬ್ಬಂದಿಯನ್ನ ಬೆದರಿಸಿ ಕೊರೊನಾ ಸೋಂಕಿತೆಗೆ ಹೆರಿಗೆ

    -ಧಮ್ಕಿ ಹಾಕಿ ಹಲ್ಲೆಗೆ ಯತ್ನ

    ಬೆಳಗಾವಿ/ಚಿಕ್ಕೋಡಿ: ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಹಾಗೂ ಸಿಬ್ಬಂದಿಗೆ ಬೆದರಿಸಿ ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.

    ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ಗರ್ಭಿಣಿ ಮಹಿಳೆಯ ಕುಟುಂಬಸ್ಥರು ಸಮುದಾಯ ಆರೋಗ್ಯ ಕೇಂದ್ರದ ಎದುರು ಗಲಾಟೆ ನಡೆಸಿ, ವೈದ್ಯರಿಗೆ ಆವಾಜ್ ಹಾಕಿ ಆರೋಗ್ಯ ಕೇಂದ್ರದಲ್ಲೇ ಹೆರಿಗೆ ಮಾಡುವಂತೆ ಮಾಡಿದ್ದಾರೆ. ಇನ್ನೂ ಸೋಂಕಿತ ಗರ್ಭಿಣಿಗೆ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಆಗಿದ್ದರಿಂದ ಆಸ್ಪತ್ರೆಯನ್ನು ಸೀಲ್‍ಡೌನ್ ಮಾಡಲಾಗಿದೆ.

    ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪಟ್ಟಣದ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದರು. ಕೊವಿಡ್-19 ನಿಯಮಗಳ ಪ್ರಕಾರ ಗರ್ಭಿಣಿಯನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಿದಾಗ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆ ಗರ್ಭಿಣಿಯನ್ನ ಹೆರಿಗೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರಗೆ ಕರೆದೊಯ್ಯಲು ಆರೋಗ್ಯ ಸಿಬ್ಬಂದಿ ಮುಂದಾಗಿದ್ದರು. ಬೆಳಗಾವಿಗೆ ರೋಗಿಯನ್ನ ಕರೆದುಕೊಂಡು ಹೋಗುವಾಗ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ವಾಹನ ತಡೆದು ಧಮ್ಕಿ ಹಾಕಿದ ಕುಟುಂಬಸ್ಥರು ಅಂಬ್ಯಲೆನ್ಸ್ ಮರಳಿ ನಿಪ್ಪಾಣಿ ಆಸ್ಪತ್ರೆಗೆ ಕರೆ ತಂದು ಜಿಲ್ಲಾಸ್ಪತ್ರೆಗೆ ಕರೆದೊಯ್ಯದಂತೆ ಆಸ್ಪತ್ರೆ ಎದುರು ಗಲಾಟೆ ನಡೆಸಿದ್ದಾರೆ.

    ಪಟ್ಟಣದ ಆರೋಗ್ಯ ಕೇಂದ್ರದಲ್ಲಿಯೇ ಹೆರಿಗೆ ಮಾಡಿಸುವಂತೆ ಆರೋಗ್ಯ ಸಿಬ್ಬಂದಿ ಹಾಗೂ ವೈದ್ಯರಿಗೆ ಆವಾಜ್ ಹಾಕಿದ್ದಾರೆ. ವೈದ್ಯರು ಕೂಡ ಕುಟುಂಬಸ್ಥರ ಗಲಾಟೆ ಹಾಗೂ ಒತ್ತಾಯದಿಂದ ಸಮುದಾಯ ಆರೋಗ್ಯ ಕೇಂದ್ರದಲ್ಲೇ ಸೋಂಕಿತೆಗೆ ಹೆರಿಗೆ ಮಾಡಿದ್ದಾರೆ. ಸದ್ಯ ಕೊರೊನಾ ಸೋಂಕಿತಗೆ ಹೆರಿಗೆ ಮಾಡಿದ್ದರಿಂದ ಆರೋಗ್ಯ ಕೇಂದ್ರವನ್ನು ಸ್ಯಾನಿಟೈಸ್ ಮಾಡಿ ಸೀಲ್‍ಡೌನ್ ಮಾಡಲಾಗಿದ್ದು, ಬಾಣಂತಿಯನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ.

    ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ವಿರುದ್ಧ ಗಲಾಟೆ ಮಾಡಿ ಆವಾಜ್ ಹಾಕಿರುವ ಮಹಿಳೆ ಕುಟುಂಬಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಆಗ್ರಹಿಸಿದ್ದಾರೆ.

  • ಬರೋಬ್ಬರಿ 8 ವರ್ಷಗಳ ಬಳಿಕ ಗಂಡು ಮಗು ಜನನ- ಗ್ರಾಮದ ಜನಸಂಖ್ಯೆ 29ಕ್ಕೆ ಏರಿಕೆ

    ಬರೋಬ್ಬರಿ 8 ವರ್ಷಗಳ ಬಳಿಕ ಗಂಡು ಮಗು ಜನನ- ಗ್ರಾಮದ ಜನಸಂಖ್ಯೆ 29ಕ್ಕೆ ಏರಿಕೆ

    – ಹಬ್ಬದ ವಾತಾವರಣದಲ್ಲಿ ಹಳ್ಳಿಯ ಜನ

    ರೋಮ್: ಅತೀ ಕಡಿಮೆ ಜನಸಂಖ್ಯೆ ಇರುವ ಇಟಲಿಯ ಪುಟ್ಟ ಗ್ರಾಮವೊಂದರ ಮನೆಯಲ್ಲಿ ಗಂಡು ಮಗುವಿನ ಜನನವಾಗಿದೆ. ಈ ಮೂಲಕ ಬರೋಬ್ಬರಿ 8 ವರ್ಷದ ಬಳಿಕ ಮಗು ಹುಟ್ಟಿದ್ದು, ಹೀಗಾಗಿ ಗ್ರಾಮದ ಜನ ಅದ್ಧೂರಿಯಾಗಿ ಶಿಶುವನ್ನು ಸ್ವಾಗತಿಸಿದ್ದಾರೆ.

    ಲೊಂಬಾರ್ಡಿಯ ಮೌಂಟೇನಿಯಸ್ ಸಮುದಾಯದ ಮೊರ್ಟೆರೋನ್ ನಲ್ಲಿ ಗಂಡು ಮಗು ಜನನದ ಬಳಿಕ ಅಲ್ಲಿನ ಜನಸಂಖ್ಯೆ 29ಕ್ಕೆ ಏರಿಕೆಯಾಯಿತು. ಮಗುವಿಗೆ ಡೇನಿಸ್ ಎಂದು ನಾಮಕರಣ ಕೂಡ ಮಾಡಲಾಗಿದೆ.

    ಗಂಡು ಮಗು ಹುಟ್ಟಿದ್ದೇ ತಡ ಇಡೀ ಸಮುದಾಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು ಎಂದು ಮೊರ್ಟೆರೋನ್ ಮೇಯರ್ ಇನ್ವರ್ನಿಜಿ ತಿಳಿಸಿದ್ದಾರೆ.

    ಡೇನಿಸ್ ತಂದೆ ಮ್ಯಾಟಿಯೊ ಹಾಗೂ ತಾಯಿ ಸಾರಾ ತಮಗೆ ಗಂಡು ಮಗು ಹುಟ್ಟಿರುವ ವಿಚಾರವನ್ನು ಇಟಾಲಿಯನ್ ಸಂಪ್ರದಾಯದಂತೆ ಘೋಷಣೆ ಮಾಡಿದ್ದಾರೆ. ನೀಲಿ ಬಣ್ಣ ಅಂದ್ರೆ ಗಂಡು, ಪಿಂಕ್ ಬಣ್ಣ ಅಂದ್ರೆ ಹುಡುಗಿ ಎಂದು ಸಾಮಾನ್ಯವಾಗಿ ಗ್ರಹಿಸಲಾಗುತ್ತದೆ. ಅಂತೆಯೇ ಡೇನಿಸ್ ತಂದೆ- ತಾಯಿ ಮನೆ ಬಾಗಿಲಿಗೆ ನೀಲಿ ಬಣ್ಣದ ರಿಬ್ಬನ್ ಕಟ್ಟುವ ಮೂಲಕ ಗಂಡು ಮಗುವಾಗಿರುವ ವಿಚಾರ ತಿಳಿಸಿದ್ದಾರೆ.

    2012ರಲ್ಲಿ ಹೆಣ್ಣು ಮಗು ಹುಟ್ಟಿದ ಬಳಿಕ ಇದೇ ಮೊದಲ ಬಾರಿಗೆ ಹಳ್ಳಿಯಲ್ಲಿ ರಿಬ್ಬನ್ ಕಂಡು ಬಂದಿರುವುದಾಗಿದೆ. ಲೆಕ್ಕೊದ ಅಲೆಸ್ಸಾಂಡ್ರೊ ಮಂಜೋನಿ ಆಸ್ಪತ್ರೆಯಲ್ಲಿ ಡೇನಿಸ್ ಜನನವಾಗಿದ್ದು, ಹುಟ್ಟಿದಾಗ ಈತ 2.6 ಕೆ.ಜಿ ಇದ್ದನು.

    ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಸಾರಾ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಸಮಯದಲ್ಲಿಯೇ ಗರ್ಭಿಣಿಯಾಗಿದ್ದು, ನನಗೆ ಭಾರೀ ಸವಾಲಾಗಿತ್ತು. ಮೊರ್ಟೆರೋನ್ ಬಿಟ್ಟು ಲೊಂಬಾರ್ಡಿ ಪ್ರದೇಶದಲ್ಲಿ ಕೋವಿಡ್ 19 ತನ್ನ ಅಟ್ಟಹಾಸ ಮೆರೆದಿತ್ತು. ಹೀಗಾಗಿ ನಾನು ತುಂಬಾ ಆತಂಕಕ್ಕೀಡಾಗಿದ್ದೆ. ಇಂತಹ ಸಮಯದಲ್ಲಿ ಹೊರಗಡೆ ಹೋಗಲು ಸಾಧ್ಯವಗುತ್ತಿರಲಿಲ್ಲ. ಅಲ್ಲದೆ ಪ್ರೀತಿ ಪಾತ್ರರನ್ನು ಭೇಟಿಯಾಗಲು ಕೂಡ ಅಸಾಧ್ಯವಾಗಿತ್ತು ಎಂದು ತಿಳಿಸಿದ್ದಾರೆ.

    ತಮಗೆ ಗಂಡು ಮಗು ಹುಟ್ಟಿದ ಖುಷಿಗಾಗಿ ಆಸ್ಪತ್ರೆಯಿಂದ ತೆರಳಿ ಇಡೀ ಕುಟುಂಬಕ್ಕೆ ಭರ್ಜರಿ ಪಾರ್ಟಿ ನೀಡಲು ತೀರ್ಮಾನಿಸಿದ್ದೇವೆ. ಈ ಪಾರ್ಟಿಗೆ ಎಲ್ಲರನ್ನೂ ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

    ಡೆನಿಸ್ ಜನಿಸುವ ಕೆಲ ವಾರಗಳ ಮೊದಲು ಇಟಲಿಯ ಜನನ ಪ್ರಮಾಣ 2019ರಲ್ಲಿ ದಾಖಲೆಯ ಕನಿಷ್ಟ ಮಟ್ಟವನ್ನು ತಲುಪಿದೆ ಎಂದು ಹೇಳಲಾಗಿತ್ತು. 1862ರಲ್ಲಿ ದಾಖಲೆಗಳು ಪ್ರಾರಂಭವಾದ ಬಳಿಕ ಇದೇ ಮೊದಲು ಅತ್ಯಂತ ಕಡಿಮೆ ಜನನ ಪ್ರಮಾಣ ಹೊಂದಿರುವುದಾಗಿದೆ. ಜನಸಂಖ್ಯೆಯ ಆಧಾರದ ಮೇಲೆ ಮೊರ್ಟೆರೋನ್ ಅನ್ನು ಇಟಲಿಯ ಅತ್ಯಂತ ಚಿಕ್ಕ ಪುರಸಭೆ ಎಂದು ವರ್ಗೀಕರಿಸಲಾಗಿದೆ. ಇತ್ತೀಚೆಗೆ ಮೇಯರ್ ತಂದೆ ನಿಧನರಾಗಿದ್ದು, ಆ ಬಳಿಕ ಜನಸಂಖ್ಯೆ 28ಕ್ಕೆ ಕುಸಿದಿತ್ತು.

    ಪ್ರಸ್ತುತ ನಮ್ಮ ಜನಸಂಖ್ಯೆ 29ಕ್ಕೆ ಏರಿಕೆಯಾಗಿದೆ. ನನ್ನ ಪ್ರಕಾರ ಸದ್ಯ ಯಾರೂ ಗರ್ಭಿಣಿಯರು ಇಲ್ಲ. ಆದರೆ ಇದೀಗ ಗಂಡು ಮಗು ಜನಿಸಿರುವುದು ನಮಗೆ ತುಂಬಾ ಖುಷಿ ತಂದಿದೆ ಎಂದು ಇನ್ವರ್ನಿಜಿ ಖುಷಿ ಹಂಚಿಕೊಂಡಿದ್ದಾರೆ.

  • ತಿಂಗ್ಳ ಹಸುಗೂಸಿಗಾಗಿ ಪ್ರತಿದಿನ 1,000 ಕಿಮೀ ದೂರದಿಂದ ಬರ್ತಿದೆ ತಾಯಿ ಎದೆಹಾಲು

    ತಿಂಗ್ಳ ಹಸುಗೂಸಿಗಾಗಿ ಪ್ರತಿದಿನ 1,000 ಕಿಮೀ ದೂರದಿಂದ ಬರ್ತಿದೆ ತಾಯಿ ಎದೆಹಾಲು

    ನವದೆಹಲಿ: ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಒಂದು ತಿಂಗಳ ಕಂದಮ್ಮನಿಗಾಗಿ ಪ್ರತಿದಿನ ಸುಮಾರು 1 ಸಾವಿರ ಕಿಮೀ ದೂರದಿಂದ ತಾಯಿ ಎದೆ ಹಾಲನ್ನು ತರಿಸಿಕೊಳ್ಳುತ್ತಿರುವ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

    ಕಳೆದ ಮೂರು ವಾರಗಳಿಂದ ಲಡಾಖ್ ನ ಲೇಹ್‍ನಿಂದ ದೆಹಲಿಗೆ ವಿಮಾನ ಮೂಲಕ ತಾಯಿ ಎದೆಹಾಲು ಬರುತ್ತಿದ್ದು, ಪ್ರತಿದಿನ ಮಗುವಿನ ತಂದೆ ಜಿಕ್‍ಮೆಟ್ ವಂಗಡು ಅವರು ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಪಾರ್ಸೆಲ್‍ಗಾಗಿ ಕಾಯುತ್ತಿರುವುದು ಸಾಮಾನ್ಯವಾಗಿದೆ.

    ಏನಿದು ಘಟನೆ: ಜೂನ್ 16 ರಂದು ಲೇಹ್‍ನ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ತಾಯಿಯ ಎದೆಹಾಲನ್ನು ಕೂಡಿಯಲು ಸಮಸ್ಯೆ ಎದುರಿಸುತ್ತಿದ್ದದ್ದು ಕಂಡು ಬಂದಿತ್ತು. ಈ ಕುರಿತು ತಿಳಿದ ವೈದ್ಯರು ಮಗುವನ್ನು ದೆಹಲಿಯ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಲಹೆ ನೀಡಿದ್ದರು. ಕೂಡಲೇ ಮಗುವನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ದೆಹಲಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದರು. ಇದಾದ ಬಳಿಕ ಜೂನ್ 19 ರಂದು ಮಗುವಿಗೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಸಿಲಾಗಿತ್ತು. ಮಗು ಶೀಘ್ರ ಚೇತರಿಕೊಳ್ಳಲು ತಾಯಿಯ ಎದೆಹಾಲು ಅಗತ್ಯವಿದೆ ಎಂದು ವೈದ್ಯರು ಹೇಳಿದ್ದರು. ವೈದರ ಸಲಹೆ ಮೇರೆಗೆ ಲೇಹ್‍ನಿಂದ ಮಗುವಿನ ತಾಯಿಯ ಎದೆಹಾಲನ್ನು ವಿಮಾನ ಮೂಲಕ ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು.

    ಪ್ರತಿದಿನ ಮಗುವಿನ ತಂದೆ ವಿಮಾನ ನಿಲ್ದಾಣಕ್ಕೆ ತೆರಳಿ ಲೇಹ್‍ನಿಂದ ಬರುವ ಪಾರ್ಸೆಲ್‍ಗಾಗಿ ಕಾಯುತ್ತಾ ನಿಂತಿರುತ್ತಿದ್ದರು. ಈ ಮಾಹಿತಿ ತಿಳಿದ ವಿಮಾನ ಸಂಸ್ಥೆ ಇದಕ್ಕಾಗಿ ಉಚಿತ ಸೇವೆ ನೀಡಲು ಮುಂದಾಗಿತ್ತು. ಸದ್ಯ ಮಗು ಚೇತರಿಸಿಕೊಳ್ಳುತ್ತಿದ್ದು, ಶೀಘ್ರವೇ ತಂದೆಯೊಂದಿಗೆ ಲೇಹ್‍ಗೆ ಹಿಂದಿರುಗಲಿದೆ.

    ಈ ಕುರಿತು ಮಹಿತಿ ನೀಡಿರುವ ವೈದ್ಯ ಹರ್ಷವರ್ಧನ್, ತಾಯಿಯ ಎದೆ ಹಾಲನ್ನು ಥರ್ಮೋಕಾಲ್ ಮತ್ತು ರೆಕ್ಸಿನ್‍ನಿಂದ ಮಾಡಿರುವ ನಿರ್ದಿಷ್ಟ ಬಾಟಲ್‍ನಲ್ಲಿ ಬರುತ್ತದೆ. ತಾಯಿಯ ಎದೆ ಹಾಲು ಕುಡಿದ ಬಳಿಕ ಮಗು ಬಹು ಬೇಗ ಚೇತರಿಸಿಕೊಳ್ಳುತ್ತಿದೆ. ಲೇಹ್‍ನಿಂದ ಬಂದ ಬಾಟಲ್‍ಗಳನ್ನು ಮತ್ತೆ ವಾಪಸ್ ಕಳುಹಿಸಿ ಪುನಃ ತಾಯಿ ಹಾಲನ್ನು ಪಡೆಯುತ್ತೇವೆ ಎಂದು ವಿವರಿಸಿದ್ದಾರೆ.

    ಮಗುವಿನ ತಂದೆ ಜಿಕ್‍ಮೆಟ್ ವಂಗಡು ಮಾತನಾಡಿ, ಲೇಹ್‍ನಲ್ಲಿರುವ ವಿಮಾನ ನಿಲ್ದಾಣದ ಸಿಬ್ಬಂದಿಯಿಂದ ನನಗೆ ಇದು ಸಾಧ್ಯವಾಹಿತು. ಮೊದಲು ಹಾಲಿನ ಪುಡಿಯನ್ನು ಮಗುವಿಗೆ ನೀಡುತ್ತಿದ್ದೇವು. ಇದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ತಾಯಿ ಹಾಲನ್ನು ನೀಡುತ್ತಿದ್ದು, ಮಗು ಚೇತರಿಸಿಕೊಳ್ಳುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.