Tag: Baby

  • ಗಂಡು ಮಗುವಿನ ತಂದೆಯಾದ ನಿರ್ದೇಶಕ ಎ.ಪಿ. ಅರ್ಜುನ್

    ಗಂಡು ಮಗುವಿನ ತಂದೆಯಾದ ನಿರ್ದೇಶಕ ಎ.ಪಿ. ಅರ್ಜುನ್

    ಬೆಂಗಳೂರು: ವಿಭಿನ್ನವಾದ ಸಿನಿಮಾ ನಿರ್ದೇಶನದ ಮೂಲಕವಾಗಿ ಗುರುತಿಸಿಕೊಂಡ ಎ,ಪಿ ಅರ್ಜುನ್ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಸ್ಯಾಂಡಲ್‍ವುಡ್ ನಿರ್ದೇಶಕ ಎ.ಪಿ. ಅರ್ಜುನ್ ಹಾಗೂ ಅನ್ನಪೂರ್ಣ ದಂಪತಿಗೆ ಗಂಡು ಮಗುವಾಗಿದೆ. ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ನಗುತ್ತಿರುವ ಕಣ್ಣುಗಳಿಂದ ನಗುತ್ತಿರುವ ಮುಖ ನಿಮ್ಮೆಲ್ಲರೊಡನೆ ನನ್ನ ಜೀವನದ ಸಂತೋಷದಾಯಕ ಸುದ್ದಿಗಳನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ನಿನ್ನೆ ಮದ್ಯಾಹ್ನ ಗಂಡು ಮಗುವಾಗಿದ್ದು, ದೇವರ ಕೃಪೆಯಿಂದ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

     

    View this post on Instagram

     

    A post shared by ap arjun (@aparjun_official)

    ಕಳೆದ ವರ್ಷ ಲಾಕ್‍ಡೌನ್ ಆದಾಗ ಈ ಜೋಡಿ ವಿವಾಹವಾಗಿತ್ತು. ಕಳೆದ ವರ್ಷದ ಮೇ 10ರಂದು ಕುಟುಂಬದ ಆಪ್ತರು ಹಾಗೂ ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ದೀರ್ಘಕಾಲದ ಪ್ರೇಮಿ ಅನ್ನಪೂರ್ಣಾ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗಷ್ಟೆ ಮಡದಿಯ ಸೀಮಂತ ಸಮಾರಂಭವನ್ನು ಸರಳವಾಗಿ ಮನೆಯಲ್ಲಿ ಸೆಲೆಬ್ರೆಟ್ ಮಾಡಿದ್ದರು. ಇದೀಗ ಈ ಮುದ್ದಾದ ಜೋಡಿಗೆ ಗಂಡು ಮಗುವಾಗಿದೆ.

  • ಪತ್ನಿ, 5 ವರ್ಷದ ಮಗನ ಬಿಟ್ಟು ಹೋದ ಅಪ್ಪ..!

    ಪತ್ನಿ, 5 ವರ್ಷದ ಮಗನ ಬಿಟ್ಟು ಹೋದ ಅಪ್ಪ..!

    – ಅಮ್ಮನ ಸಂತೈಸಿದ ಪುಟ್ಟ ಕಂದಮ್ಮ

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಕ್ರೂರಿತನಕ್ಕೆ 5 ವರ್ಷದ ಮಗು ಅಪ್ಪನ ಕಳೆದುಕೊಂಡಿದೆ. ತಾಯಿ-ಮಗನ ರೋಧನೆ ಮನಕಲಕುವಂತಿತ್ತು.

    ಈ ಘಟನೆ ಯಲಹಂಕದ ಮೇಡಿ ಚಿತಾಗಾರದ ಮುಂದೆ ನಡೆದಿದೆ. ನಮ್ಮನ್ನ ಬಿಟ್ಟೋದ್ರಿ, ನಮಗೆ ಇನ್ಯಾರು ಗತಿ ಅಂತ ಪತ್ನಿ ಕಣ್ಣೀರು ಹಾಕಿದ್ರೆ, ಇತ್ತ ಪುಟ್ಟ ಕಂದಮ್ಮ ಮಾತ್ರ ಅಮ್ಮಾ.. ಅಪ್ಪಾ ಎಲ್ಲೂ ಹೋಗಿಲ್ಲ, ಬರ್ತಾರೆ ಎಂದು ಹೇಳುವ ಮೂಲಕ ಅಮ್ಮನನ್ನ ಸಮಾಧಾನ ಪಡಿಸಿದ ರೀತಿ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದೆ.

    ಒಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ತನ್ನ ರೌದ್ರನರ್ತನ ತೋರುತ್ತಿದ್ದು, ಜನ ಬೆಡ್, ಆಕ್ಸಿಜನ್ ಗಾಗಿ ಒದ್ದಾಡುತ್ತಿರುವುದು ಇಂದು ಕೂಡ ಕಂಡುಬಂದಿದೆ.

  • ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಒಂದೇ ಬಾರಿಗೆ 9 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ರಬತ್: ಅಪರೂಪದಲ್ಲಿ ಅಪರೂಪ ಎಂಬಂತೆ ಮೊರಕ್ಕೊದಲ್ಲಿ ಮಹಾತಾಯಿಯೊಬ್ಬಳು ಒಂದೇ ಬಾರಿ 9 ಮಂದಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.

    ಪಶ್ಚಿಮ ಆಫ್ರಿಕಾ ಖಂಡದಲ್ಲಿರುವ ಮಾಲಿ ದೇಶದ ಮಹಿಳೆ ಮಂಗಳವಾರ  5 ಹೆಣ್ಣು, 4 ಗಂಡು ಮಕ್ಕಳನ್ನು ಹೆತ್ತಿದ್ದಾಳೆ. ಆಸ್ಪತ್ರೆಗೆ ದಾಖಲಾದ ಬಳಿಕ 7 ಮಂದಿ ಮಕ್ಕಳು ಜನಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ನೀರಿಕ್ಷೆಗೂ ಮೀರಿ 9 ಮಂದಿ ಜನಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ.

    ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಮೊರೊಕ್ಕೊ ಆರೋಗ್ಯ ಸಚಿವಾಲಯ ತಿಳಿಸಿದೆ. ಆರೋಗ್ಯ ಸಚಿವಾಲಯ ವಕ್ತಾರರು ಪ್ರತಿಕ್ರಿಯಿಸಿ, ದೇಶದಲ್ಲಿ ಇದು ಬಹಳ ಅಪರೂಪ. ಈ ರೀತಿ 9 ಮಕ್ಕಳಿಗೆ ಒಂದೇ ಬಾರಿ ಜನ್ಮ ನೀಡಿದ್ದು ಇದೇ ಮೊದಲು ಎಂದು ತಿಳಿಸಿದ್ದಾರೆ.

    ಗರ್ಭಿಣಿಯಾದಾಗ ಆಲ್ಟ್ರಾ ಸೌಂಡ್ ಪರೀಕ್ಷೆ ಮಾಡಿದ್ದು, 7 ಮಂದಿ ಮಕ್ಕಳು ಜನಿಸಬಹುದು ಎಂಬ ನಿರೀಕ್ಷೆ ಇತ್ತು. ಒಂದು ವೇಳೆ ಡೆಲಿವರಿ ಸಮಯದಲ್ಲಿ ಯಾವುದೇ ಸಮಸ್ಯೆ ಆಗಬಾರದು ಎಂಬ ಎಂಬ ಕಾರಣಕ್ಕೆ ಮಹಿಳೆಯನ್ನು ಮೊರಕ್ಕೊ ದೇಶದ ಉತ್ತಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರು ನೀಡಿದ ಸಲಹೆಯ ಮೇರೆಗೆ ಮಾಲಿ ಸರ್ಕಾರ ಮಹಿಳೆಯನ್ನು ಮಾ.30 ರಂದು ಮೊರಕ್ಕೊ ದೇಶಕ್ಕೆ ಶಿಫ್ಟ್ ಮಾಡಿತ್ತು.

    7 ಮಂದಿ ಮಕ್ಕಳು ಜನಿಸುವುದು ಅಪರೂಪ. ಅದರಲ್ಲೂ 9 ಮಂದಿ ಜನಿಸುವುದು ಅಪರೂಪದಲ್ಲಿ ಅಪರೂಪ.

  • ಹೊಸ ಪತ್ನಿ ಜೊತೆ ತಿರುಗಾಡಲು 2 ವರ್ಷದ ಮಗನನ್ನು 18 ಲಕ್ಷಕ್ಕೆ ಮಾರಿ ಭೂಪ..!

    ಹೊಸ ಪತ್ನಿ ಜೊತೆ ತಿರುಗಾಡಲು 2 ವರ್ಷದ ಮಗನನ್ನು 18 ಲಕ್ಷಕ್ಕೆ ಮಾರಿ ಭೂಪ..!

    ಬೀಜಿಂಗ್: ವ್ಯಕ್ತಿಯೊಬ್ಬ ತನ್ನ ಹೊಸ ಪತ್ನಿ ಜೊತೆ ದೇಶ ಸುತ್ತಲು 2 ವರ್ಷದ ಮಗನನ್ನು 18 ಲಕ್ಷಕ್ಕೆ ಮಾರಾಟ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯನ್ನು ಕ್ಸಿ ಎಂದು ಗುರುತಿಸಲಾಗಿದೆ. ಕ್ಸಿ ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದನು. ಹಾಗೆಯೇ ಮಗಳು ತಾಯಿ ಬಳಿ ಇದ್ದಳು. ಇತ್ತ ಕೆಲಸದ ನಿಮಿತ್ತ ಮತ್ತೊಂದು ನಗರಕ್ಕೆ ತೆರಳುವ ಸಂದರ್ಭದಲ್ಲಿ ಕ್ಸಿ ತನ್ನ ಮಗನನ್ನು ಸಹೋದರ ಲಿನ್ ಮನೆಯಲ್ಲಿ ಬಿಟ್ಟು ಹೋಗಿದ್ದನು.

    ಕಳೆದ ತಿಂಗಳು ಸಹೋದರನ ಮನೆಯಿಂದ ಮಗನನ್ನು ಕರೆದುಕೊಂಡು ಹೋಗಿದ್ದನು. ಅಲ್ಲದೆ ತನ್ನ ಪತ್ನಿ ಮಗನನ್ನು ನೋಡಬೇಕೆಂದು ಹೇಳಿದ್ದಾಳೆ. ಹೀಗಾಗಿ ಆತನನ್ನು ಕರೆದುಕೊಂಡು ಹೋಗುವುದಾಗಿ ಕ್ಸಿ ತನ್ನ ಸಹೋದರನ ಬಳಿ ಸುಳ್ಳು ಕಥೆ ಕಟ್ಟಿದ್ದಾನೆ. ಹೀಗೆ ಮಗುವನ್ನು ಕರೆದುಕೊಂಡು ಹೋದ ಕ್ಸಿ ಮತ್ತೆ ಆತನನ್ನು ವಾಪಸ್ ಕರೆದುಕೊಂಡು ಬರುವಂತೆ ಕಾಣಲಿಲ್ಲ. ಇದರಿಂದ ಗಾಬರಿಗೊಂಡ ಆತ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

    ಲಿನ್ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಮಕ್ಕಳಿಲ್ಲದ ದಂಪತಿಗೆ ಕ್ಸಿ ತನ್ನ ಮಗನನ್ನು 18 ಲಕ್ಷಕ್ಕೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಮಗನ ಮಾರಾಟ ಮಾಡಿದ ಹಣವನ್ನು ತನ್ನ ಹೊಸ ಪತ್ನಿಯನ್ನು ದೇಶ ಸುತ್ತಾಡಿಸಲು ಬಳಸಿರುವುದು ಕೂಡ ಗೊತ್ತಾಗಿದೆ.

    ಸದ್ಯ ಪುಟ್ಟ ಕಂದಮ್ಮ ತನ್ನ ಲಿನ್ ಮನೆಗೆ ವಾಪಸ್ ಬಂದಿದೆ. ಇತ್ತ ದಂಪತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

  • ಊಟ ಇಲ್ಲದೇ, ತಾಯಿ ಶವದೊಂದಿಗೆ 2ದಿನ ಕಳೆದ ಕಂದಮ್ಮ

    ಊಟ ಇಲ್ಲದೇ, ತಾಯಿ ಶವದೊಂದಿಗೆ 2ದಿನ ಕಳೆದ ಕಂದಮ್ಮ

    ಲಕ್ನೋ: ತಾಯಿ ತೀರಿಹೋಗಿ2 ದಿನ ಕಳೆದರು ಆಕೆಯ ಕಂದಮ್ಮ ಶವದೊಂದಿಗೆ ಕಾಲಕಳೆದಿರುವ ಮನಕಲಕುವ ಘಟನೆ ನಡೆದಿದೆ.

    ಸರಸ್ವತಿ ರಾಜೇಶ್ ಕುಮಾರ್ (29) ಮೃತಮಹಿಳೆಯಾಗಿದ್ದಾರೆ. ಪಿಂಪ್ರಿ ಚಿಚ್ವಾಡದ ಬಾಡಿಗೆ ಮನೆಯಲ್ಲಿ ಸರಸ್ವತಿ ಅಸುನೀಗಿದ್ದರು. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಕೆಯ ಗಂಡು ಮಗು ದೇಹದ ಪಕ್ಕದಲ್ಲಿ ಬಿದ್ದಿರುವುದು ಕಂಡುಬಂದಿದೆ.

    ಸರಸ್ವತಿ ಮೃತಳಾಗಿರುವ ವಿಚಾರ ಬಂಧುಗಳಿಗೆ ಗೊತ್ತಾದರೂ ಅವರಿಗೆ ಕೊರೊನಾ ಭಯ ಕಾಡಿತ್ತು. ಹೀಗಾಗಿ ಅವರ ಹತ್ತಿರ ಯಾರು ಸುಳಿಲೇ ಇಲ್ಲ. ಕೊನೆಗೆ ಆ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ. ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ತಾಯಿ ಮೃತದೇಹದ ಬಳಿ ಹಸಿವಿನಿಂದ ನರಳುತ್ತಿದ್ದ ಮಗುವೊಂದು ಇತ್ತು.

    ಕೊರೊನಾ ಭಯದಿಂದ ಆ ಮಗುವಿನ್ನು ಯಾರು ಮುಟ್ಟಲಿಲ್ಲ. ಕೊನೆಗೆ ಪೊಲೀಸ್ ಪೇದೆ ಸುಶೀಲಾ ಹಾಗೂ ರೇಖಾ ಮಗುವನ್ನು ಎತ್ತಿಕೊಂಡು ಹಾಲು ನೀಡಿದರು. ಮಗು ಆರೋಗ್ಯಾವಿದೆ. ಮಗುವಿಗೆ ಕೋವಿಡ್ ವರದಿ ನೆಗಿಟಿವ್ ಬಂದಿದೆ. ಸರಸ್ವತಿ ಸಾವಿಗೆ ಕಾರಣ ತನಿಖೆಯಿಂದ ತಿಳಿದು ಬರಬೇಕಿದೆ. ಸರಸ್ವತಿ ಪತಿ ಘಟನೆ ನಡೆದಾಗ ಉತ್ತರ ಪ್ರದೇಶಕ್ಕೆ ಹೋಗಿದ್ದರು ಎನ್ನಲಾಗುತ್ತಿದೆ.

  • ರಣಬಿಸಿಲಲ್ಲಿ ಒಂದು ತಿಂಗಳ ಹಸುಗೂಸು ಹೊತ್ತು 2 ಕಿ.ಮೀ ನಡೆದ ತಾಯಿ

    ರಣಬಿಸಿಲಲ್ಲಿ ಒಂದು ತಿಂಗಳ ಹಸುಗೂಸು ಹೊತ್ತು 2 ಕಿ.ಮೀ ನಡೆದ ತಾಯಿ

    ಮಡಿಕೇರಿ: ಅನಾರೋಗ್ಯದಿಂದ ಬಳಲುತ್ತಿದ್ದ ಒಂದು ತಿಂಗಳ ಮಗವಿಗೆ ಚಿಕಿತ್ಸೆ ಕೊಡಿಸಲೆಂದು ತಾಯಿಯೊಬ್ಬರು ಎರಡು ಕಿಲೋಮೀಟರ್ ನಡೆದುಕೊಂಡು ಬಂದು ಮಗುವಿಗೆ ಚಿಕಿತ್ಸೆ ಕೊಡಿಸಿದ ಘಟನೆ ಮಡಿಕೇರಿ ನಗರದಲ್ಲಿ ಇಂದು ನಡೆದಿದೆ.

    ಲಾಕ್‍ಡೌನ್ ಆಗಿದ್ದ ಪರಿಣಾಮ ಮಡಿಕೇರಿ ನಗರದಲ್ಲಿ ವಾಹನಗಳ ಸಂಚಾರ ಇಲ್ಲದೇ ನಗರದ ಮಹದೇವಪೇಟೆಯಿಂದ ಖಾಸಗಿ ಆಸ್ಪತ್ರೆಗೆ ಬಾಣಂತಿಯನ್ನು ಅವರ ತಾಯಿ ಕರೆದುಕೊಂಡು ಹೋಗಿದ್ದಾರೆ.

    ವಾಹನಗಳು ಯಾವುದು ಇರದ ಕಾರಣ ಸುಡುವ ಬಿಸಿಲಲ್ಲೇ ಮಗುವನ್ನು ಹೊತ್ತುಕೊಂಡು ಸಾಗಿದ್ದು, ರಶ್ಮಿ ಅವರೊಂದಿಗೆ ಅವರು ತಾಯಿ ಚಿಕಿತ್ಸೆಗಾಗಿ ಸಂಕಷ್ಟ ಎದುರಿಸಿದ್ದಾರೆ.

    ಹಸುಗೂಸುನ್ನು ಹೊತ್ತು ನಡೆದ ತಾಯಿಯ ಪರಿಸ್ಥಿತಿಯನ್ನು ಕಂಡು ಕರುಳು ಹಿಂಡಿ ಬರುವಂತಿತ್ತು. ಲಾಕ್‍ಡೌನ್ ಆಗಿರುವುದರಿಂದ ಜಿಲ್ಲೆಯಲ್ಲಿ ಇರುವ ಪೊಲೀಸರು ಕಟ್ಟಿನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿರುವ ಪರಿಣಾಮದಿಂದ ತುರ್ತುಸೇವೆಗಳಿಗೆ ಬರಲು ಕೂಡ ಅಟೋ ಚಾಲಕರು ಹಿಂದೆಟ್ಟು ಹಾಕಿದರು. ಹೀಗಾಗಿ ಎರಡು ಕಿಲೋಮೀಟರ್ ಹಸುಗೂಸನ್ನು ಹೊತ್ತು ನಡೆಯುವ ಪರಿಸ್ಥಿತಿ ಒದಗಿಬಂತು ಎಂದು ನೋವಿನಲ್ಲೇ ಬಾಣಂತಿ ರಶ್ಮಿ ಹೇಳಿದ್ದಾರೆ

  • 4 ವರ್ಷದ ಬಳಿಕ ತಾಯ್ತನದ ಸಂಭ್ರಮ ಚಿವುಟಿದ ಕೊರೊನಾ- ಮಗುವಿಗೆ ಜನ್ಮ ಕೊಟ್ಟು 3 ದಿನದ ಬಳಿಕ ಅಮ್ಮ ಸಾವು

    4 ವರ್ಷದ ಬಳಿಕ ತಾಯ್ತನದ ಸಂಭ್ರಮ ಚಿವುಟಿದ ಕೊರೊನಾ- ಮಗುವಿಗೆ ಜನ್ಮ ಕೊಟ್ಟು 3 ದಿನದ ಬಳಿಕ ಅಮ್ಮ ಸಾವು

    ಬೆಂಗಳೂರು: ಚೀನಿ ವೈರಸ್ ಕೊರೊನಾ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದು, ಬರೋಬ್ಬರಿ ನಾಲ್ಕು ವರ್ಷದ ಬಳಿಕ ತಾಯ್ತನದ ಸಂಭ್ರಮವನ್ನೇ ಕಸಿದುಕೊಂಡಿದೆ.

    ಹೌದು. ಒಂದೆಡೆ ಕಂದನ ಜನುಮ ಇನ್ನೊಂದೆಡೆ ಅಮ್ಮನ ಮರಣ. ನಾಲ್ಕು ವರ್ಷದ ಬಳಿಕ ತಾಯ್ತನದ ಸಂಭ್ರಮವನ್ನೇ ಈ ಮಹಾಮಾರಿ ಕೊರೊನಾ ಚಿವುಟಿದೆ.

    ಬೆಂಗಳೂರು ಪೂರ್ವ ವಿಭಾಗದ ಮಹಿಳೆ ಮಗುವಿಗೆ ಜನ್ಮ ಕೊಟ್ಟು ಮೂರು ದಿನದ ಬಳಿಕ ಕೊರೊನಾಗೆ ಬಲಿಯಾಗಿದ್ದಾರೆ. ಮದ್ವೆಯಾಗಿ ನಾಲ್ಕು ವರ್ಷದ ಬಳಿಕ ದಂಪತಿ ತಾಯ್ತನದ ಖುಷಿಯಲ್ಲಿದ್ದರು. ಆದರೆ ತುಂಬು ಗರ್ಭಿಣಿಯ ಶ್ವಾಸಕೋಶಕ್ಕೆ ಸೋಂಕು ಹರಡಿತ್ತು.

    ಮೈಸೂರು ರಸ್ತೆಯ ಹೆರಿಗೆ ಆಸ್ಪತ್ರೆಯ ವೈದ್ಯರು ಮಹಿಳೆಯನ್ನು ಉಳಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದಾರೆ. ಮಗುವನ್ನು ಅಪರೇಷನ್ ಮಾಡಿ ತೆಗೆದಿದ್ದಾರೆ. ಆದರೆ ತಾಯಿಗೆ ಸೋಂಕು ತೀವ್ರವಾಗಿತ್ತು. ಮಗುವಿನ ಮುಖವನ್ನು ಕೂಡ ತಾಯಿ ನೋಡಿರಲಿಲ್ಲ. ಯಾಕೆಂದರೆ ಮಗುವನ್ನು ಕೊರೊನಾ ಸೋಂಕಿತ ತಾಯಿಯ ಪಕ್ಕ ಇಡುವಂತಿಲ್ಲ.

    ಹುಟ್ಟಿದ ಬಳಿಕ ಮಗುವನ್ನು ಕೆಂಗೇರಿಯಲ್ಲಿದ್ದ ಎನ್‍ಐಸಿ ಯುಗೆ ರವಾನಿಸಿದ್ದಾರೆ. ಆದರೆ ತಾಯಿ ಚಿಕಿತ್ಸೆ ಫಲಕಾರಿಯಾಗದೇ ಮೂರು ದಿನದ ಬಳಿಕ ಸಾವನ್ನಪ್ಪಿದ್ದಾರೆ. ಹೀಗಾಗಿ ಹೆತ್ತ ಮಗುವಿನ ಮುಖವನ್ನು ತಾಯಿ ನೋಡದೆ ಇಹಲೋಕ ತ್ಯಜಿಸಿದ ಮನಕಲಕುವ ಘಟನೆ ನಡೆದಿದೆ.

  • ಗಿಫ್ಟ್ ಸಿಕ್ಕಿದ ಅರ್ಧ ಹಣ ಮಗುವಿನ ಕುಟುಂಬಕ್ಕೆ – ಮತ್ತೆ ಜನರ ಮನ ಗೆದ್ದ ಮಯೂರ್

    ಗಿಫ್ಟ್ ಸಿಕ್ಕಿದ ಅರ್ಧ ಹಣ ಮಗುವಿನ ಕುಟುಂಬಕ್ಕೆ – ಮತ್ತೆ ಜನರ ಮನ ಗೆದ್ದ ಮಯೂರ್

    ಮುಂಬೈ: ವೇಗವಾಗಿ ರೈಲು ಬರುತ್ತಿದ್ದಂತೆಯೇ ಶರವೇಗದಲ್ಲಿ ಓಡಿ ಹೋಗಿ ಬಾಲಕನನ್ನು ರಕ್ಷಿಸುವ ಮೂಲಕ ಭಾರೀ ಮೆಚ್ಚುಗೆಗೆ ಪಾತ್ರರಾರಾಗಿರುವ ಮಯೂರ್ ಶೆಲ್ಕೆ ಅವರು ಇದೀಗ ಮತ್ತೊಂದು ಮಾನವೀಯ ಕಾರ್ಯದ ಮೂಲಕ ಮತ್ತೆ ನಾಡಿನ ಜನರ ಮನ ಗೆದ್ದಿದ್ದಾರೆ.

    ಹೌದು. ಮಯೂರ್ ಅವರು ತನಗೆ ನೀಡಲಾಗಿರುವ ಹಣದಲ್ಲಿ ಅರ್ಧದಷ್ಟು ಹಣವನ್ನು ಮಗುವಿನ ಕುಟುಂಬಕ್ಕೆ ನೀಡಲು ಬಯಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಜನರ ಹೃದಯವನ್ನು ಗೆದ್ದು ಬೀಗಿದ್ದಾರೆ.

    ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಮಯೂರ್, ನಾನು ರಕ್ಷಿಸಿದ ಮಗುವಿನ ಹಿನ್ನೆಲೆ ನೋಡಿದಾಗ ಕುಟುಂಬದ ಕಷ್ಟ ಅರ್ಥವಾಯಿತು. ಹೀಗಾಗಿ ನನಗೆ ಕೊಟ್ಟಿರುವ ಪ್ರೋತ್ಸಾಹಕ ಧನದ ಅರ್ಧದಷ್ಟು ಹಣವನ್ನು ಮಗುವಿನ ಏಳಿಗೆ ಹಾಗೂ ಶಿಕ್ಷಣಕ್ಕಾಗಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

    ಶರವೇಗದಲ್ಲಿ ಓಡಿ ರೈಲು ಬರುತ್ತಿರುವುದನ್ನು ಲೆಕ್ಕಿಸದೆ ಹಳಿ ಮೇಲೆ ಸಿಲುಕಿದ್ದ ಮಗುವನ್ನು ರಕ್ಷಿಸಿದ ರೈಲ್ವೆ ವಲಯದ ಪಾಯಿಂಟ್ ಮನ್ ಮಯೂರ್ ಶೆಲ್ಕೆಗೆ ಕೇಂದ್ರ ರೈಲ್ವೆ ಇಲಾಖೆಯಿಂದ 50 ಸಾವಿರ ರೂ. ಬಹುಮಾನ ನೀಡಿದರೆ, ಇತ್ತ ಬೈಕ್ ಕೂಡ ಉಡುಗೊರೆಯಾಗಿ ಸಿಕ್ಕಿತ್ತು.

    ಮಗುವನ್ನು ರಕ್ಷಿಸಿದ ಮಯೂರ್ ವೀಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆಯೇ ಅವರಿಗೆ ಮೆಚ್ಚುಗೆಯ ಮಹಾಪೂರಗಳೇ ಹರಿಬಂದಿದೆ. ಮಯೂರ್ ಅವರ ಈ ಮಾನವೀಯ ಕಾರ್ಯ ಹಾಗೂ ಧೈರ್ಯಕ್ಕೆ ರೈಲ್ವೇ ಇಲಾಖೆ ಹಣ ನೀಡುವ ಮೂಲಕ ಗೌರವ ತೋರಿದರೆ, ಇತ್ತ ಜಾವಾ ಕ್ಲಾಸಿಕ್ ಬೈಕ್ ಉಡುಗೊರೆಯಾಗಿ ದೊರೆಯಲಿದೆ.

    ಮಹೀಂದ್ರಾ ಕಂಪನಿ ಪಡೆತನದ ಜಾವಾ ಬೈಕ್ಸ್ ಸಿಇಓ ಅನುಪಮ್ ಥರೇಜಾ ಅವರು ಮಯೂರ್ ಅವರ ಸಾಹಸಕ್ಕೆ ತಲೆಬಾಗಿ ಸಂಸ್ಥೆ ವತಿಯಿಂದ ಜಾವಾ ಕ್ಲಾಸಿಕ್ ಬೈಕ್ ಉಡುಗೊರೆ ನೀಡುವುದಾಗಿ ಟ್ವೀಟ್ ಮಾಡುವ ಮೂಲಕವಾಗಿ ತಿಳಿಸಿದ್ದರು. ಮಯೂರ್ ಅವರ ಧೈರ್ಯ ಮೆಚ್ಚಿ ಅವರಿಗೆ ಜಾವಾ ಬೈಕ್ ಉಡುಗೊರೆಯಾಗಿ ನೀಡಲು ಇಚ್ಚಿಸುತ್ತೇವೆ. ಅವರ ಸಾಹಸ ಕಾರ್ಯಕ್ಕೆ ಈ ಮೂಲಕವಾಗಿ ಗೌರವ ನೀಡುವುದಾಗಿ ಟ್ವೀಟ್ ನಲ್ಲಿ ತಿಳಿಸಿದ್ದರು.

    ಏನಿದು ಘಟನೆ..?
    ಮಹಾರಾಷ್ಟ್ರದ ಮುಂಬೈನ ವಂಗನಿ ರೈಲು ನಿಲ್ದಾಣದ ಎರಡನೇ ಪ್ಲಾಟ್‍ಫಾರ್ಮ್‍ನಲ್ಲಿ ಏಪ್ರಿಲ್ 17ರಂದು ಮಧ್ಯಾಹ್ನ ಮಹಿಳೆ ಮತ್ತು ಮಗು ನಡೆದುಕೊಂಡು ಹೋಗುತ್ತಿದ್ದಾಗ ಮಗು ಆಯ ತಪ್ಪಿ ಹಳಿ ಮೇಲೆ ಬಿದ್ದಿದೆ. ಎದುರಿನಿಂದ ರೈಲು ಅತ್ಯಂತ ವೇಗವಾಗಿ ಮಗು ಬಿದ್ದ ಹಳಿ ಮೇಲೆಯೇ ಬರುತ್ತಿತ್ತು. ಮಗುವಿನ ಜೊತೆಗೆ ಇದ್ದ ಮಹಿಳೆ ಭಯಗೊಂಡು ತಕ್ಷಣಕ್ಕೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ಭಯದಿಂದ ಮಗುವನ್ನು ಕಾಪಾಡಲು ನೋಡುತ್ತಿದ್ದರು. ಮಗು ಹಳಿ ಮೇಲೆ ಬಿದ್ದಿರುವುದನ್ನು ಕಂಡು ರೈಲು ನಿಲ್ದಾಣದ ಕೆಲಸಗಾರ ಮಯೂರ್ ಶೆಲ್ಕೆ ಮಿಂಚಿನ ವೇಗದಲ್ಲಿ ಓಡಿ ಮಗುವನ್ನು ಎತ್ತಿ ಪ್ಲಾಟ್‍ಫಾರ್ಮ್ ಮೇಲೆ ಹಾಕಿದರು. ರೈಲು ಡಿಕ್ಕಿ ಹೊಡೆಯುತ್ತದೆ ಎನ್ನುವಷ್ಟರಲ್ಲಿ ಕೆಲವೇ ಸೆಕೆಂಡುಗಳಲ್ಲಿ ಪ್ಲಾಟ್‍ಫಾರ್ಮ್ ಮೇಲೆ ಹಾರಿ ತಮ್ಮ ಪ್ರಾಣ ಹಾಗೂ ಮಗುವಿನ ಪ್ರಾಣವನ್ನು ಉಳಿಸಿದ್ದರು.

    ಈ ದೃಶ್ಯ ಸಿಟಿವಿಯಲ್ಲಿ ಸೆರೆಯಾಗಿತ್ತು. ಅಲ್ಲದೆ ಆ ಬಳಿಕ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ಘಟನೆಯ ವೀಡಿಯೋವನ್ನು ಕೇಂದ್ರ ರೈಲ್ವೇ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿಕೊಂಡು, ಮಗುವಿನ ಜೀವ ಉಳಿಸಲು ತನ್ನ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ. ನೌಕರನ ಧೈರ್ಯ ಮತ್ತು ಕರ್ತವ್ಯದ ಬಗ್ಗೆ ಅತ್ಯಂತ ಭಕ್ತಿಗೆ ನಮಸ್ಕರಿಸುತ್ತೇವೆ. ನೌಕರನಿಗೆ ಅಭಿನಂದನೆಗಳು ಎಂದು ಬರೆದುಕೊಂಡಿತ್ತು. ರೈಲ್ವೆ ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿ ಉಳಿದ ಸಿಬ್ಬಂದಿ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದರು.

  • ಸಂಪ್‍ಗೆ ಬಿದ್ದ ಮಗು – ಒಂದು ನಿಮಿಷದ ಬಳಿಕ ಹೊರ ತೆಗೆದ್ರು!

    ಸಂಪ್‍ಗೆ ಬಿದ್ದ ಮಗು – ಒಂದು ನಿಮಿಷದ ಬಳಿಕ ಹೊರ ತೆಗೆದ್ರು!

    – ಸಾವು ಗೆದ್ದು ಬಂದ ಪುಟ್ಟ ಕಂದ

    ಬೆಂಗಳೂರು: ಸಂಪ್‍ಗೆ ಬಿದ್ದ ಮಗುವನ್ನ ರಕ್ಷಿಸಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿ ನಡೆದಿದೆ. ಮಗು ರಕ್ಷಣೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಏಪ್ರಿಲ್ 3ರಂದು ಎಲೆಕ್ಟ್ರಾನಿಕ್ ಸಿಟಿಯ ಆಂಧ್ರ ಮೆಸ್ ಕಟ್ಟಡದ ಸಂಪಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿತ್ತು. ನೀರು ತುಂಬಿಸುವ ವೇಳೆ ಟ್ಯಾಂಕರ್ ಸಿಬ್ಬಂದಿ ಅಥವಾ ಕಟ್ಟಡದ ಮಾಲೀಕರು ಸಹ ಅಲ್ಲಿ ಇರಲಿಲ್ಲ. ಈ ವೇಳೆ ಆಟವಾಡುತ್ತಾ ಬಂದ ಮಗು ತೆರೆದ ಸಂಪ್‍ಗೆ ಬಿದ್ದಿದೆ. ಮಗು ಸಂಪ್ ಒಳಗೆ ಬಿದ್ದ ಕೆಲವೇ ಕ್ಷಣಗಳಲ್ಲಿ ಜನ ಅಲ್ಲಿಯೇ ಓಡಾಡಿದ್ದಾರೆ. ಆದ್ರೆ ಮಗು ಬಿದ್ದಿರೋದು ಯಾರ ಗಮನಕ್ಕೂ ಬಂದಿಲ್ಲ.

    ಸುಮಾರು ಒಂದೂವರೆ ನಿಮಿಷದ ಬಳಿಕ ಮಗುವನ್ನ ಹುಡುಕಿಕೊಂಡ ಬಂದ ತಂದೆ ಸಂಪ್ ನಲ್ಲಿ ಇಣುಕಿ ನೋಡಿದ್ದಾರೆ. ಮಗು ಕಾಣಿಸುತ್ತಿದ್ದಂತೆ ಸಂಪ್ ಗೆ ಇಳಿದ ಕಂದನ ರಕ್ಷಣೆ ಮಾಡಿದ್ದಾರೆ. ನಂತರ ಮಗುವಿನ ತಾಯಿ ಬಂದು ಮಗುವನ್ನ ಮೇಲೆತ್ತಿಕೊಂಡಿದ್ದಾರೆ. ನಂತರ ಸೇರಿದ ಜನ ಮಗುವಿನ ತಂದೆಗೆ ಸಂಪ್ ನಿಂದ ಹೊರ ಬರಲು ಸಹಾಯ ಮಾಡಿದ್ದಾರೆ. ಸುಮಾರು ಒಂದು ನಿಮಿಷಕ್ಕೂ ಅಧಿಕ ಕಾಲ ಸಂಪ್ ನಲ್ಲಿ ಬಿದ್ದಿದ್ದ ಮಗು ಸಾವನ್ನು ಗೆದ್ದು ಬಂದಿದೆ.

  • ವೈದ್ಯನ ಮೇಲೆ ದಾಳಿಗೆ ಮುಂದಾದ ಆನೆ – ಕ್ಷಣಾರ್ಧದಲ್ಲಿ ಬಚಾವ್

    ವೈದ್ಯನ ಮೇಲೆ ದಾಳಿಗೆ ಮುಂದಾದ ಆನೆ – ಕ್ಷಣಾರ್ಧದಲ್ಲಿ ಬಚಾವ್

    ಶಿವಮೊಗ್ಗ: ಸಾಕಾನೆಯೊಂದು ವೈದ್ಯರ ಮೇಲೆ ದಾಳಿಗೆ ಮುಂದಾದ ಘಟನೆ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ನಡೆದಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

    ಸಕ್ರೆಬೈಲು ಆನೆ ಬಿಡಾರದಲ್ಲಿ ಕಳೆದ ಎರಡು ದಿನದ ಹಿಂದೆ ಭಾನುಮತಿ ಆನೆ ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಆನೆಗೆ, ವೈದ್ಯ ಡಾ.ವಿನಯ್ ಕುಮಾರ್ ಔಷಧೋಪಚಾರ ನಡೆಸುತ್ತಿದ್ದರು. ಈ ವೇಳೆ ಪಕ್ಕದಲ್ಲೇ ಇದ್ದ ನೀಲಾಂಬರಿ ಆನೆ ವೈದ್ಯ ವಿನಯ್ ಕುಮಾರ್ ಅವರಿಗೆ ಸೊಂಡಿಲಿನಿಂದ ತಿವಿದಿದೆ. ಸೊಂಡಿಲಿನಿಂದ ತಿವಿದ ಭರಸಕ್ಕೆ ವೈದ್ಯ ವಿನಯ್ ಕುಮಾರ್ ಕೆಳಗೆ ಬಿದ್ದಿದ್ದಾರೆ.

    ರೋಷಗೊಂಡಿದ್ದ ನೀಲಾಂಬರಿ ಆನೆ ಎರಡು ಬಾರಿ ಕಾಲನ್ನು ಮೇಲೆ ಎತ್ತಿ ವೈದ್ಯರ ಮೇಲೆ ಇಡಲು ಪ್ರಯತ್ನಿಸಿದೆ. ಈ ವೇಳೆ ವೈದ್ಯ ಜೋರಾಗಿ ಕಿರುಚಾಟ ನಡೆಸಿದ್ದಾರೆ. ಆದರೆ ತಾಯಿ ಹಾಗೂ ಮರಿ ಆನೆ ಜೊತೆ ಮಾವುತರು ಹಾಗೂ ಕಾವಾಡಿಗಳು ಇದ್ದಿದ್ದರಿಂದ ವೈದ್ಯರ ಸಹಾಯಕ್ಕೆ ಯಾರೊಬ್ಬರೂ ಬರಲು ಸಾಧ್ಯವಾಗಿಲ್ಲ. ನಂತರ ಕ್ಷಣಾರ್ಧದಲ್ಲಿ ವೈದ್ಯ ವಿನಯ್ ಕುಮಾರ್ ಮೇಲಕ್ಕೆ ಎದ್ದು ಪಕ್ಕಕ್ಕೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

    ನೀಲಾಂಬರಿ ಆನೆ ಚಿತ್ರದುರ್ಗದ ಮುರುಘಾ ಮಠಕ್ಕೆ ಸೇರಿದ್ದ ಆನೆಯಾಗಿದ್ದು, ಈ ಆನೆಯನ್ನು ಹೆಚ್ಚಿನ ಆರೈಕೆಗಾಗಿ ಕಳೆದ ತಿಂಗಳು ಚಿತ್ರದುರ್ಗದಿಂದ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆ ತರಲಾಗಿತ್ತು. ಆದರೆ ಇಂದು ವೈದ್ಯರ ಮೇಲೆ ದಾಳಿಗೆ ಮುಂದಾಗಿದೆ. ಘಟನೆಯಿಂದ ವೈದ್ಯರ ಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದರು. ಹೀಗಾಗಿ ಸಕ್ರೆಬೈಲು ಆನೆ ಬಿಡಾರದಲ್ಲಿ ಭಾರಿ ಅನಾಹುತವೊಂದು ತಪ್ಪಿದಂತೆ ಆಗಿದೆ. ಘಟನೆ ನಂತರ ವೈದ್ಯರು ಹಾಗೂ ಅರಣ್ಯ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.