Tag: Baby

  • ಅಂತ್ಯಸಂಸ್ಕಾರದ ವೇಳೆ ಕೆಮ್ಮಿದ ಕಂದಮ್ಮ- ಇಳಕಲ್ ನಗರದಲ್ಲಿ ಅಚ್ಚರಿ ಘಟನೆ

    ಅಂತ್ಯಸಂಸ್ಕಾರದ ವೇಳೆ ಕೆಮ್ಮಿದ ಕಂದಮ್ಮ- ಇಳಕಲ್ ನಗರದಲ್ಲಿ ಅಚ್ಚರಿ ಘಟನೆ

    ಬಾಗಲಕೋಟೆ: ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಗುವೊಂದು ಕೆಮ್ಮುವ ಮೂಲಕ ಅಚ್ಚರಿ ಮೂಡಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ (Ilkal, Bagalkote) ನಗರದಲ್ಲಿ ನಡೆದಿದೆ.

    ಬಸವರಾಜ ಭಜಂತ್ರಿ ಹಾಗೂ ನೀಲಮ್ಮ ದಂಪತಿಯ 13 ತಿಂಗಳ ದ್ಯಾಮಣ್ಣ ಭಜಂತ್ರಿ ಬದುಕಿದ ಮಗು. ಉಸಿರಾಟ ತೊಂದರೆ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಗುವನ್ನು ಕಳೆದ ನಾಲ್ಕೈದು ದಿನಗಳ ಹಿಂದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗು ಬದುಕೋದು ಕಷ್ಟ ಎಂದು ಹೇಳಿದ್ದರು. ಹೀಗಾಗಿ ವಾಪಸ್ ವಾಹನದಲ್ಲಿ ಬರುವಾಗ ಮಗುವಿಗೆ ಪ್ರಜ್ಞೆ ತಪ್ಪಿದೆ.

    ಪ್ರಜ್ಞೆ ತಪ್ಪಿದ ಮಗು ಮೃತಪಟ್ಟಿದೆ ಎಂದು ಭಾವಿಸಿ ಪೋಷಕರು ಸಂಬಂಧಿಕರಿಗೆ ಸಾವಿನ ಸುದ್ದಿ ಮುಟ್ಟಿಸಿದ್ದರು. ಅದರಂತೆ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಅಂತ ಬಂದಿದ್ದು, ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಗು ಕೆಮ್ಮಿದೆ. ಈ ವೇಳೆ ಮಗು ಬದುಕಿದೆ ಎಂದು ಪೋಷಕರು ನಿಟ್ಟುಸಿರು ಬಿಟ್ಟರೆ, ಇತ್ತ ಅಂತ್ಯಸಂಸ್ಕಾರಕ್ಕೆಂದು ಬಂದವರಿಗೆ ಅಚ್ಚರಿಯಾಗಿದೆ.

    ಬಳಿಕ ಇದು ಮುರ್ತುಜಾ ಖಾದ್ರಿ ಪವಾಡ ಎಂದು ನಂಬಿ ಪೋಷಕರು ಮಗುವನ್ನು ದರ್ಗಾಕ್ಕೆ ಕರೆದುಕೊಂಡು ಹೋದರು. ಸದ್ಯ ಮಗಿವಿಗೆ ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದನ್ನೂ ಓದಿ: ಕ್ರಿಕೆಟ್ ಜಗಳ ತಾರಕಕ್ಕೇರಿ ಗುಂಪು ಘರ್ಷಣೆ- ಬೆಳಗಾವಿ ನಗರದ ಅಳ್ವಾನ್ ಗಲ್ಲಿ ಉದ್ವಿಗ್ನ

  • ಮಲತಾಯಿ ಕ್ರೌರ್ಯಕ್ಕೆ ಬಲಿಯಾಯ್ತಾ 4 ವರ್ಷದ ಕಂದಮ್ಮ?

    ಮಲತಾಯಿ ಕ್ರೌರ್ಯಕ್ಕೆ ಬಲಿಯಾಯ್ತಾ 4 ವರ್ಷದ ಕಂದಮ್ಮ?

    ಬೆಳಗಾವಿ: ನಾಲ್ಕು ವರ್ಷದ ಮಗಳನ್ನ ಮಲತಾಯಿಯೇ ಕೊಲೆ ಮಾಡಿರುವ ಆರೋಪ ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಕಂಗ್ರಾಳಿ ಕೆಎಚ್ ಗ್ರಾಮದಲ್ಲಿ ನಡೆದಿದೆ.

    ಸಮೃದ್ಧಿ ರಾಯಣ್ಣ ನಾವಿ(4) ಮೃತ ಬಾಲಕಿ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮನೆಯಲ್ಲಿ ಆಟವಾಡುತ್ತಿದ್ದ ಮಗು ಏಕಾಏಕಿ ಸಾವನ್ನಪ್ಪಿದೆ. ಹುಷಾರಿಲ್ಲವೆಂದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬರುವಾಗಲೇ ದಾರಿ ಮಧ್ಯೆ ಮಗು ಕೊನೆಯುಸಿರೆಳೆದಿದೆ. ಮಗು ಸಾವಿನ ಸುದ್ದಿ ತಿಳಿದು ಆಸ್ಪತ್ರೆಗೆ ಅಜ್ಜ, ಅಜ್ಜಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ.

    ಮಗುವಿನ ಸಾವಿಗೆ ಮಲತಾಯಿ ಸಪ್ನಾ ರಾಯಣ್ಣ ನಾವಿ ಕಾರಣ. 2021ರಲ್ಲಿ ವರದಕ್ಷಿಣೆ ಕಿರುಕುಳ ಕೊಟ್ಟು ತಾಯಿ ಭಾರತಿ ನಾವಿ ಕೊಲೆ ಮಾಡಲಾಗಿತ್ತು. ಈಗ ಮಲತಾಯಿ ಸಪ್ನಾಳೇ 4 ವರ್ಷದ ಮೊಮ್ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಬಾಲಕಿ‌ ಅಜ್ಜ ಸುನೀಲ ಹಂಪನ್ನವರ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್‌ ದುರಂತಕ್ಕೀಡಾದವರ ಮೃತದೇಹ ಸಾಗಿಸ್ತಿರೋ ಮೊದಲ ದೃಶ್ಯ ಬಿಡುಗಡೆ

    ಮೃತ ಬಾಲಕಿ ತಂದೆ ರಾಯಣ್ಣ ನಾವಿ ಛತ್ತೀಸ್‌ಗಢದಲ್ಲಿ ಸಿಆರ್ ಪಿಎಫ್ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ. ಮಗುವಿನ ತಂದೆ ಬರೋವರೆಗೂ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 4 ನೇ ಮಹಡಿಯಿಂದ ಬಿದ್ದು ರಕ್ಷಿಸಲ್ಪಟ್ಟಿದ್ದ ಮಗುವಿನ ತಾಯಿ ಟೆಕ್ಕಿ ಆತ್ಮಹತ್ಯೆ!

    4 ನೇ ಮಹಡಿಯಿಂದ ಬಿದ್ದು ರಕ್ಷಿಸಲ್ಪಟ್ಟಿದ್ದ ಮಗುವಿನ ತಾಯಿ ಟೆಕ್ಕಿ ಆತ್ಮಹತ್ಯೆ!

    ಚೆನ್ನೈ: ಕೆಲದಿನಗಳ ಹಿಂದೆ ಪುಟ್ಟ ಕಂದಮ್ಮವೊಂದು ಅಪಾರ್ಟ್‌ ಮೆಂಟ್‌ನ ಬಾಲ್ಕನಿಯಿಂದ ಸನ್ ಶೇಡ್ ಮೇಲೆ ಬಿದ್ದಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿತ್ತು. ಇದೀಗ ಈ ಮಿರಾಕಲ್ ಮಗುವಿನ ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಹೌದು. ಆಕಸ್ಮಿಕವಾಗಿ ತನ್ನ ಕೈಯಿಂದ ಜಾರಿ ಮಗು ಅಪಾರ್ಟ್‌ ಮೆಂಟ್‌ ಬಾಲ್ಕನಿಯಲ್ಲಿ (Apartment Balcony) ಬಿದ್ದ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ನಿಂದನೆ ವ್ಯಕ್ತವಾಗಿದ್ದರಿಂದ ಮನನೊಂದು ಟೆಕ್ಕಿ ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಯಮತ್ತೂರಿನ (Coimbatore) ಕಾರಮಡೈಯಲ್ಲಿರುವ ತವರು ಮನೆಯಲ್ಲಿ ಭಾನುವಾರ ರಮ್ಯಾ ಸಾವಿನ ದಾರಿ ಹಿಡಿದಿದ್ದಾರೆ.

    ರಮ್ಯಾ (Techie Ramya) ಚೆನ್ನೈನ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರೆ, ಪತಿ ವೆಂಕಟೇಶ್ ಕೂಡ ಐಟಿ ಉದ್ಯೋಗಿ. ಎರಡು ವಾರಗಳ ಹಿಂದೆ ರಮ್ಯಾ ಮತ್ತು ಅವರ ಪತಿ ತಮ್ಮ ಮಗುವಿನೊಂದಿಗೆ ಕರಾಮಡೈನಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು. ಇದನ್ನೂ ಓದಿ: ಇರಾನ್ ಅಧ್ಯಕ್ಷ ರೈಸಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

    ಭಾನುವಾರದಂದು ಪೋಷಕರು ಶುಭ ಸಮಾರಂಭದಲ್ಲಿ ಭಾಗವಹಿಸಲು ಮನೆಯಿಂದ ತೆರಳಿದ್ದರು. ಇತ್ತ ರಮ್ಯಾ ಮನೆಯಲ್ಲಿ ಒಬ್ಬಳೇ ಇದ್ದರು. ಇದೇ ಸಮಯವನ್ನು ನೋಡಿಕೊಂಡ ರಮ್ಯಾ ಆತ್ಮಹತ್ಯೆಯ ನಿರ್ಧಾರ ಮಾಡಿದರು. ಇನ್ನು ಸಮಾರಂಭ ಮುಗಿಸಿ ಹಿಂದಿರುಗಿದ ಪೋಷಕರಿಗೆ ಆಘಾತವೇ ಕಾದಿತ್ತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರಮ್ಯಾರನ್ನು ಪೋಷಕರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

    ಅಂದು ನಡೆದಿದ್ದೇನು..?: ಏಪ್ರಿಲ್ 28 ರಂದು ರಮ್ಯಾ ಅವರ 7 ತಿಂಗಳ ಮಗು ಕೈಜಾರಿ 4ನೇ ಮಹಡಿಯಿಂದ ಮೊದಲ ಮಹಡಿಯ ಸನ್ ಶೇಡ್ ಮೇಲೆ ಬಿದ್ದಿತ್ತು. ಬಳಿಕ ಸ್ಥಳೀಯರು ಸೇರಿ ಮಗುವನ್ನು ರಕ್ಷಿಸಿದ್ದರು. ಇದಾದ ಬಳಿಕ ರಮ್ಯಾ ಸ್ಥಳೀಯರಿಂದ ಹಾಗೂ ಸಾಮಾಜಿಕ ಜಾಲದಲ್ಲಿ ಭಾರೀ ಟಿಕೆಗೆ ಒಳಗಾದರು.

    ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ತಾಯಿಯ ನಿರ್ಲಕ್ಷ್ಯವೇ ಕಾರಣ. ತಾಯಿ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ. ಹೀಗಾಗಿ ಈ ಘಟನೆ ನಡೆಯಲು ತಾಯಿಯೇ ನೇರ ಕಾರಣ ಎಂದೆಲ್ಲ ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಲಾಗಿತ್ತು. ಇದರಿಂದ ರಮ್ಯ ಮನೊಂದಿದ್ದರು. ಇಷ್ಟು ಮಾತ್ರವಲ್ಲದೇ ಕೆಲ ಸುದ್ದಿ ವಾಹಿನಿಗಳಿಗೆ ಬೈಟ್‌ ಕೊಟ್ಟಿದ್ದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಕೂಡ ತಾಯಿಯ ವೈಫಲ್ಯವೇ ಈ ಘಟನೆಗೆ ಕಾರಣ ಎಂದು ಬಿಂಬಿಸುವಂತಹ ಹೇಳಿಕೆಗಳನ್ನು ನೀಡಿದ್ದರು. ಈ ಎಲ್ಲಾ ಅವಮಾನಗಳು, ಹೇಳಿಕೆಗಳು ರಮ್ಯಾ ಅವರನ್ನು ಖಿನ್ನತೆಗೆ ದೂಡಿತು. ಅಂತಿಮವಾಗಿ ಅವರ ಸಾವಿಗೆ ಕಾರಣವಾಯಿತು.

    ಪ್ರಕರಣ ಸಂಬಂಧ ಕರಮಡೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಕೈಬೆರಳಿನ ಶಸ್ತ್ರಚಿಕಿತ್ಸೆಗೆ ಕರೆದೊಯ್ದು ನಾಲಿಗೆಗೆ ಸರ್ಜರಿ ಮಾಡಿದ್ರು!- ತನಿಖೆಗೆ ಆದೇಶ

    ಕೈಬೆರಳಿನ ಶಸ್ತ್ರಚಿಕಿತ್ಸೆಗೆ ಕರೆದೊಯ್ದು ನಾಲಿಗೆಗೆ ಸರ್ಜರಿ ಮಾಡಿದ್ರು!- ತನಿಖೆಗೆ ಆದೇಶ

    ತಿರುವನಂತಪುರಂ: ಆರು ಬೆರಳುಗಳಿರುವ ಮಗುವನ್ನು ಶಸ್ತ್ರಚಿಕಿತ್ಸೆಗೆಂದು ಕರೆದೊಯ್ದು ನಾಲಿಗೆಗೆ ಸರ್ಜರಿ (Tongue Surgery) ಮಾಡಿ ವೈದ್ಯರು ಎಡವಟ್ಟು ಮಾಡಿರುವ ಪ್ರಕರಣವೊಂದು ಕೇರಳದ (Kerala) ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

    ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆರೈಕೆ ಕೇಂದ್ರದಲ್ಲಿ ನಾಲ್ಕು ವರ್ಷದ ಬಾಲಕಿಯ ಕೈಯಲ್ಲಿರುವ ಆರನೇ ಬೆರಳನ್ನು ತೆಗೆಯುವ ಶಸ್ತ್ರ ಚಿಕಿತ್ಸೆ ನಡೆಯಬೇಕಿತ್ತು. ಈ ಬಾಲಕಿಯ ನಾಲಿಗೆಗೆ ಯಾವುದೇ ತೊಂದರೆ ಇರಲಿಲ್ಲ. ಆದರೆ ವೈದ್ಯರು ಆಕೆಯ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಭಾರೀ ಎಡವಟ್ಟು ಮಾಡಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಕಾಡಿಗೆ ಕರೆದೊಯ್ದು ಮೊಣಕಾಲುಗಳಿಗೆ ಸುತ್ತಿಗೆಯಿಂದ ಹಲ್ಲೆಗೈದು, ಮಚ್ಚು ಬೀಸಿದ ಪತಿ!

    ತನಿಖೆಗೆ ಆದೇಶ: ಶಸ್ತ್ರಚಿಕಿತ್ಸೆಯ ನಂತರ ಆಕೆಯ ಬಾಯಿಯಲ್ಲಿದ್ದ ಹತ್ತಿಯನ್ನು ನೋಡಿದಾಗ ವೈದ್ಯರ ಎಡವಟ್ಟು ಬಯಲಾಗಿದೆ. ಆಕೆಯ ಕೈ ಬೆರಳಿನ ಬದಲು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ. ಘಟನೆ ಕುರಿತು ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಆರೋಗ್ಯ ಸಚಿವೆ ವೀಣಾ (Health Minister Veena) ಸೂಚಿಸಿದ್ದಾರೆ.

    ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ: ಈ ಘಟನೆಯ ನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘೋರ ತಪ್ಪಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

  • ಮಗು ಆರೋಗ್ಯವಾಗಿ, ಫಿಟ್ ಆಗಿರಲು ಗರ್ಭಿಣಿಯರು ಈ ಆಹಾರಗಳನ್ನು ಸೇವಿಸಿ

    ಮಗು ಆರೋಗ್ಯವಾಗಿ, ಫಿಟ್ ಆಗಿರಲು ಗರ್ಭಿಣಿಯರು ಈ ಆಹಾರಗಳನ್ನು ಸೇವಿಸಿ

    ವೈದ್ಯರು ಗರ್ಭಿಣಿಯರಿಗೆ (Pregnant) ಮನೆಯಲ್ಲಿ ತಯಾರಿಸಿದ ಆಹಾರ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ. ಈ ಸಮಯದಲ್ಲಿ ಆರೋಗ್ಯದ ಹೊರತಾಗಿ, ಮಗುವಿನ ಸರಿಯಾದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ತೆಗೆದುಕೊಳ್ಳಬೇಕು. ಆದ್ದರಿಂದ ಗರ್ಭಿಣಿಯರು ಸೇವಿಸುವ ಆಹಾರದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಆರೋಗ್ಯಕರ (Health) ಕೊಬ್ಬನ್ನು ಒಳಗೊಂಡಿರುವುದು ಮುಖ್ಯವಾಗಿದೆ. 9 ತಿಂಗಳವರೆಗೆ ಮಗುವಿನ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುವ ಆಹಾರದಲ್ಲಿ ಈ ಕೆಳಗಿನವುಗಳನ್ನು ಕೂಡ ಸೇರಿಸಿ.

    ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು?:
    ಡೈರಿ ಉತ್ಪನ್ನಗಳು: ಇವುಗಳಿಂದ ದೇಹವು ಜೀವಸತ್ವಗಳು ಮತ್ತು ಕ್ಯಾಲ್ಸಿಯಂನಂತಹ ಅಗತ್ಯವಾದ ಪೋಷಕಾಂಶಗಳನ್ನು ಸುಲಭವಾಗಿ ಪಡೆಯುತ್ತದೆ. ಈ ಪೋಷಕಾಂಶಗಳು ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕಾಟೇಜ್ ಚೀಸ್, ಮೊಸರು, ಹಾಲು, ಬೆಣ್ಣೆ ಮತ್ತು ಚೀಸ್ ಅನ್ನು ಸೇರಿಸಿಕೊಳ್ಳಿ.

    ಬೆರ್ರಿ ಹಣ್ಣುಗಳು ಮತ್ತು ಸಿಹಿ ಆಲೂಗಡ್ಡೆ: ಬೆರ್ರಿ ಹಣ್ಣುಗಳು ವಿಟಮಿನ್ ಸಿ ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುತ್ತವೆ. ಅಲ್ಲದೇ ಅನೇಕ ಇತರ ಪೋಷಕಾಂಶಗಳು ಸಹ ದೊರೆಯುತ್ತದೆ. ಅದೇ ಸಮಯದಲ್ಲಿ ಸಿಹಿ ಆಲೂಗಡ್ಡೆ ತಿನ್ನುವ ಮೂಲಕ ದೇಹದಲ್ಲಿ ಬೀಟಾ ಕ್ಯಾರೋಟಿನ್ ಕೊರತೆಯನ್ನು ತೆಗೆದುಹಾಕಬಹುದು. ಇದು ಮಗುವಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ.

    ದ್ವಿದಳ ಧಾನ್ಯಗಳು: ಇದರಿಂದ ದೇಹಕ್ಕೆ ಕಬ್ಬಿಣ, ಪ್ರೋಟೀನ್, ಫೈಬರ್ ಮತ್ತು ಕ್ಯಾಲ್ಸಿಯಂ ದೊರೆಯುತ್ತದೆ. ಇವು ಸಸ್ಯ ಆಧಾರಿತ ಆಹಾರದ ಅತ್ಯುತ್ತಮ ಮೂಲವಾಗಿದೆ. ಇನ್ನು ಬೀನ್ಸ್ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸುಲಭವಾಗಿ ಸಿಗುತ್ತವೆ. ಇದನ್ನೂ ಓದಿ: ಎಲೆಗಳು ಮಾತ್ರವಲ್ಲದೆ ತುಳಸಿ ಬೀಜಗಳೂ ಆರೋಗ್ಯಕ್ಕೆ ಒಳ್ಳೆಯದು!

    ಹಸಿರು ತರಕಾರಿಗಳು: ಆಹಾರದಲ್ಲಿ ಹಸಿರು ಎಲೆಗಳ ತರಕಾರಿಗಳು ಮತ್ತು ಬ್ರೊಕೊಲಿಯನ್ನು ಸೇರಿಸಿ. ಹಸಿರು ತರಕಾರಿಗಳಿಂದ ದೇಹವು ಫೋಲೇಟ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಎ, ಬಿ 6, ಸಿ ಮತ್ತು ಕೆ ಪಡೆಯುತ್ತದೆ. ಇದು ಹಿಮೋಗ್ಲೋಬಿನ್ ಅನ್ನು ಆರೋಗ್ಯಕರವಾಗಿ ಮತ್ತು ಮೂಳೆಗಳನ್ನು ಆರೋಗ್ಯಕರವಾಗಿರಿಸುತ್ತದೆ.

    ನೀರು: ದಿನಕ್ಕೆ ಕನಿಷ್ಠ 10-12 ಗ್ಲಾಸ್ ನೀರನ್ನು ಕುಡಿಯಬೇಕು. ಸಾಕಷ್ಟು ನೀರು ಕುಡಿಯುವುದರಿಂದ ಆಮ್ನಿಯೋಟಿಕ್ ದ್ರವವು ಮಗುವಿನ ಸುತ್ತಲೂ ಇರುತ್ತದೆ. ಇದರಿಂದ ಜೀರ್ಣಕ್ರಿಯೆಯು ಸಹ ಉತ್ತಮವಾಗಿರುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ.

    ಒಣ ಹಣ್ಣುಗಳು: ಗರ್ಭಿಣಿಯರು ಪ್ರತಿದಿನ ಒಂದು ಹಿಡಿ ಒಣ ಹಣ್ಣುಗಳನ್ನು ತಿನ್ನಬೇಕು. ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ವಾಲ್‌ನಟ್‌ಗಳಂತಹ ಒಣ ಹಣ್ಣುಗಳನ್ನು ಸೇವಿಸಬೇಕು. ಇದರಿಂದ ದೇಹಕ್ಕೆ ಶಕ್ತಿ ಬರುತ್ತದೆ.

  • ಚಾಕ್ಲೇಟ್ ಅಂತಾ ಮಾತ್ರೆ ಸೇವಿಸಿದ್ದ ಕಂದಮ್ಮ ದುರ್ಮರಣ

    ಚಾಕ್ಲೇಟ್ ಅಂತಾ ಮಾತ್ರೆ ಸೇವಿಸಿದ್ದ ಕಂದಮ್ಮ ದುರ್ಮರಣ

    ಚಿತ್ರದುರ್ಗ: ಚಾಕ್ಲೇಟ್ (Chocolate) ‌ಎಂದು ಭಾವಿಸಿ ಮಾತ್ರೆ ಸೇವಿಸಿದ್ದ ಮಗು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ‌‌ ಕಡಬನಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಕಳೆದ ನಾಲ್ಕು‌ ದಿನಗಳ ಹಿಂದೆ ಕಡಬನಕಟ್ಟೆ ಗ್ರಾಮದ ವಸಂತ್ ಕುಮಾರ್ ಹಾಗೂ ಪವಿತ್ರ ದಂಪತಿಯ ಪುತ್ರ ಹೃತ್ವಿಕ್(4) ಮನೆಯಲ್ಲಿದ್ದ ಮಾತ್ರೆಗಳನ್ನು ಸೇವಿಸಿ ಅಸ್ವಸ್ಥಗೊಂಡಿದ್ದನು. ಇದನ್ನೂ ಓದಿ: ನಮ್ಮ ಸರ್ಕಾರ ಉಗ್ರರನ್ನು ಹಿಡಿದು ಜೈಲಿಗೆ ಕಳಿಸುವ ಕೆಲಸ ಮಾಡುತ್ತೆ: ರಾಮಲಿಂಗಾ ರೆಡ್ಡಿ

    ಬಾಲಕ ಅಸ್ವಸ್ಥಗೊಂಡ ವಿಚಾರ ಗೊತ್ತಾಗುತ್ತಿದ್ದಂತೆಯೇ ಪೋಷಕರು ಆತನನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಕಳೆದ ನಾಲ್ಕು ದಿನಗಳಿಂದ‌ ಚಿಕಿತ್ಸೆ ನೀಡಲಾಗಿದ್ದು, ಬಾಲಕನ ಜೀವ ಉಳಿಸಲು ವೈದ್ಯರು ಶ್ರಮಪಟ್ಟಿದ್ದರು. ಆದರೆ ಚಿಕಿತ್ಸೆ ಫಲಿಸದೇ‌ ಇಂದು ಬಾಲಕ ಕೊನೆಯುಸಿರೆಳೆದಿದ್ದಾನೆ.

    ಮೃತ ಮಗುವಿನ ತಾಯಿ ಪವಿತ್ರಾಗೆ ಈ ಹಿಂದೆ 3 ಶಸ್ತ್ರಚಿಕಿತ್ಸೆಗಳಾಗಿದ್ದು,ಆಕೆಗೆ ವೈದ್ಯರು ನೀಡಿದ್ದ ಮಾತ್ರೆಗಳನ್ನು ಮನೆಯಲ್ಲಿಟ್ಟಿದ್ದರು. ಆದರೆ ಚಾಕ್ಲೇಟ್ ಎಂದು ಭಾವಿಸಿದ್ದ ಮಗು ಆ ಮಾತ್ರೆಗಳನ್ನು ಸೇವಿಸಿತ್ತು.‌ ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದೆ. ಇದರಿಂದಾಗಿ ಮಗುವಿನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಪ್ರಕರಣ ತುರುವನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಅಮ್ಮನ ಜೊತೆ ನಾನು ಹೋಗಲ್ಲ- ಹಲ್ಲೆಗೊಳಗಾದ ಮಗುವಿನ ಮುಗ್ಧ ಮಾತು

    ಅಮ್ಮನ ಜೊತೆ ನಾನು ಹೋಗಲ್ಲ- ಹಲ್ಲೆಗೊಳಗಾದ ಮಗುವಿನ ಮುಗ್ಧ ಮಾತು

    – ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಮಕ್ಕಳ ಆಯೋಗ

    ಬೆಂಗಳೂರು: ಗಿರಿನಗರದಲ್ಲಿ ತಾಯಿಯಿಂದಲೇ ಹಲ್ಲೆಗೊಳಗಾದ ಪುಟ್ಟ ಕಂದಮ್ಮನನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಹಾಗೂ ಡಾ. ತಿಪ್ಪೇಸ್ವಾಮಿ ಕೆ.ಟಿ. ಇಂದು ಭೇಟಿಯಾಗಿದ್ದಾರೆ.

    ಹಲ್ಲೆಗೊಳಗಾದ ಬಾಲಕನನ್ನು ನಿಮ್ಹಾನ್ಸ್ ಬಳಿಯ ಬಾಲ ಮಂದಿರದ ಶಿಶು ಮಂದಿರಕ್ಕೆ ಸೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕು ಆಯೋಗದವರು (Child Rights Commission), ಮಗುವನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಸದ್ಯ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಇದನ್ನೂ ಓದಿ: ಸರ್ಕಾರದ FSL ವರದಿಯನ್ನ ನಾನು ನೋಡಿಯೇ ಇಲ್ಲ: ಪ್ರಿಯಾಂಕ್ ಖರ್ಗೆ

    ಘಟನೆ ವಿವರ: ಬೆಂಗಳೂರಿನ ಗಿರಿನಗರದ (Girinagar Baby) ವೀರಭದ್ರೇಶ್ವರ ನಗರದಲ್ಲಿ ಪುಟ್ಟ ಕಂದಮ್ಮನ ಮೇಲೆ ಪಾಪಿ ತಾಯಿ ಹಲ್ಲೆ ನಡೆಸಿದ್ದಾಳೆ. ಹಲ್ಲೆ ನಡೆಸಿದ ಪರಿಣಾಮ ಮಗುವಿನ ದೇಹದ ತುಂಬೆಲ್ಲಾ ಗಾಯದ ಗುರುತುಗಳಾಗಿದೆ. ತಾಯಿ ಕೆಲಸಕ್ಕೆ ಹೋಗುತ್ತಿದ್ದು, ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಬೀಗ ಹಾಕಿ ಹೋದರೆ ರಾತ್ರಿ ಬರೋವರೆಗೂ ಮಗುವನ್ನು ಕೂಡಿ ಹಾಕಿರುತ್ತಿದ್ದಳು. ಅಲ್ಲದೇ ಮಗುವಿನ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾಳೆ.

    ಈ ಕುರಿತು ಮಗುವಿನ ತಾಯಿಯನ್ನು ಪ್ರಶ್ನಿಸಿದಾಗ, ತಾನು ಗಂಡನ ಜೊತೆ ವಾಸ ಮಾಡುತ್ತಿಲ್ಲ. ಹಣಕಾಸಿನ ತೊಂದರೆಯಿಂದ ಮಗುವನ್ನು ಕೂಡಿಹಾಕಿ ಕೆಲಸ ಹುಡುಕುತ್ತಿರುವುದಾಗಿ ಹೇಳಿದ್ದಾಳೆ. ಮಧ್ಯಾಹ್ನ ಮಗುವಿಗೆ ಊಟ ಕೊಡಲು ಮಹಿಳೆಯ ಫ್ರೆಂಡ್ ಮನೆಗೆ ಬರುತ್ತಿದ್ದು, ಸದ್ಯ ಈ ಬಗ್ಗೆ ಮಗುವಿನ ತಾಯಿಯನ್ನು ಕರೆಸಿ ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಅಲ್ಲದೇ ಮಗುವನ್ನು ಮಕ್ಕಳ ಆಯೋಗದ ಸುಪರ್ದಿಗೆ ಒಪ್ಪಿಸಿದ್ದಾರೆ. ಗಂಡ, ಹೆಂಡತಿ ಇಬ್ಬರೂ ಬಂದು ಕೌನ್ಸಿಲಿಂಗ್‍ಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಗಂಡ-ಹೆಂಡತಿ ಇಬ್ಬರೂ ಬಂದು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದರಷ್ಟೇ ಮಗು ನೀಡುವುದಾಗಿ ಮಕ್ಕಳ ಆಯೋಗ ಹೇಳಿದೆ. ಸದ್ಯ ಹಲ್ಲೆಗೊಳಗಾಗಿರುವ ಮಗು ಮಕ್ಕಳ ಆಯೋಗದ ರಕ್ಷಣೆಯಲ್ಲಿದೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಎನ್‍ಸಿಆರ್ ದಾಖಲಾಗಿದೆ. ಇದನ್ನೂ ಓದಿ: ಕೆಫೆ ಬ್ಲಾಸ್ಟ್ ಪ್ರಕರಣ – ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ

  • ಮಗುವನ್ನು ನೆಲಕ್ಕೆ ಬಡಿದಿದ್ದ ತಂದೆ- ಚಿಕಿತ್ಸೆ ಫಲಿಸದೇ ಕಂದಮ್ಮ ಸಾವು

    ಮಗುವನ್ನು ನೆಲಕ್ಕೆ ಬಡಿದಿದ್ದ ತಂದೆ- ಚಿಕಿತ್ಸೆ ಫಲಿಸದೇ ಕಂದಮ್ಮ ಸಾವು

    ಧಾರವಾಡ: ತಂದೆಯಿಂದಲೇ ನೆಲಕ್ಕೆ ಎಸೆಯಲ್ಪಟ್ಟಿದ್ದ ಹೆಣ್ಣು ಮಗು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

    ಶ್ರೇಯಾ (1 ವರ್ಷ) ಮೃತ ದುರ್ದೈವಿ ಕಂದಮ್ಮ. ಈಕೆಯನ್ನು ತಂದೆ ಶಂಭುಲಿಂಗಯ್ಯ ಕೊಲೆ ಮಾಡಿದ್ದಾನೆ. ಈತ ಧಾರವಾಡ (Dharwad) ತಾಲೂಕಿನ ಯಾದವಾಡ ಗ್ರಾಮದ ನಿವಾಸಿ. ಇದನ್ನೂ ಓದಿ: ಮಗು ಜೋರಾಗಿ ಅಳುತ್ತೆಂದು ನೆಲಕ್ಕೆ ಹೊಡೆದ ತಂದೆ!

    ಏನಿದು ಪ್ರಕರಣ: ನಾಲ್ಕು ವರ್ಷಗಳ ಹಿಂದೆ ಶಂಭಯ್ಯ ಮತ್ತು ಸವಿತಾ ಮದುವೆಯಾಗಿದ್ದರು. ಈ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದರು. ಮೊದಲನೇಯ ಗಂಡು ಮಗುವಿಗೆ ಮೂರು ವರ್ಷವಾಗಿದೆ. ಶಂಭಯ್ಯ ಧಾರವಾಡ ನಗರದಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ನಿತ್ಯ ವಿಪರೀತವಾಗಿ ಕುಡಿಯುತ್ತಿದ್ದ ಶಂಭಯ್ಯ ಮಂಗಳವಾರ ತಡರಾತ್ರಿ ತನ್ನ ಮೇಲೆ ಹಲ್ಲೆ ಮಾಡಿ ಬಳಿಕ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಎಂದು ಪತ್ನಿ ಸವಿತಾ ಮತ್ತು ಸಹೋದರ ಅಳಿಯ ಕಲ್ಲಯ್ಯ ನೋವು ತೋಡಿಕೊಂಡಿದ್ದಾರೆ.

    ಮಲಗುವಾಗ ಮಗು ಅಳುತ್ತೆ ಎಂಬ ಕಾರಣಕ್ಕೆ ಮಗುವನ್ನ ನೆಲಕ್ಕೆ ಎತ್ತಿ ಬಡಿದಿದ್ದಾನೆ. ಪರಿಣಾಮ ಮಗು ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಕೂಡಲೇ ಆಕೆಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಇದೀಗ ಪುಟ್ಟ ಕಂದಮ್ಮ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.

    ಘಟನೆ ಸಂಬಂಧ ಕುಟುಂಬಸ್ಥರು ಪಾಪಿ ತಂದೆ ಶಂಭುಲಿಂಗಯ್ಯನ ವಿರುದ್ಧ ದೂರು ನೀಡಿದ್ದು, ಗರಗ ಠಾಣೆ ಪೆÇಲೀಸರು ಶಂಭುಲಿಂಗಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಧಾರವಾಡ ಗರಗ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • 4 ದಿನದ ಕೂಸನ್ನು ಬಿಸಿ ನೀರಿನಲ್ಲಿ ಕೂರಿಸಿ ಸ್ನಾನ ಪ್ರಕರಣ- ಧಾರವಾಡದ ಆಸ್ಪತ್ರೆಗೆ 10 ಲಕ್ಷ ದಂಡ

    4 ದಿನದ ಕೂಸನ್ನು ಬಿಸಿ ನೀರಿನಲ್ಲಿ ಕೂರಿಸಿ ಸ್ನಾನ ಪ್ರಕರಣ- ಧಾರವಾಡದ ಆಸ್ಪತ್ರೆಗೆ 10 ಲಕ್ಷ ದಂಡ

    ಧಾರವಾಡ: ಆಸ್ಪತ್ರೆ ಸಹಾಯಕಿಯೊಬ್ಬಳು ನಾಲ್ಕು ದಿನದ ಮಗುವನ್ನು ಬಿಸಿನೀರಿನ ಟಬ್‍ನಲ್ಲಿ ಕೂರಿಸಿ ಸುಟ್ಟ ಗಾಯ ಮಾಡಿದ್ದು ತಪ್ಪು ಎಂದು ಪರಿಗಣಿಸಿ ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ (Multi Speciality) ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು 10 ಲಕ್ಷ ದಂಡ ವಿಧಿಸಿ ಆದೇಶ ಮಾಡಿದೆ.

    ಹುಬ್ಬಳ್ಳಿಯ (Hubballi) ವಿನಯ ಹಂಜಿ ಅವರ ಪತ್ನಿ ರೇಖಾ ಅವರು 2019ರ ಡಿ.10ರಂದು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಿಸಿನೀರಿದ್ದ ಟಬ್‍ನಲ್ಲಿ ಮಗುವನ್ನು ಸ್ನಾನಕ್ಕೆ ಕೂರಿಸಿದ್ದರಿಂದ ಪೃಷ್ಠದ ಭಾಗ ಸುಟ್ಟು ಚರ್ಮ ಸುಲಿದಿತ್ತು. ಈ ವಿಚಾರವನ್ನು ಮಗುವಿನ ಪೋಷಕರು ಆಸ್ಪತ್ರೆ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. ಆದರೆ ಅದು ಚರ್ಮ ರೋಗ ಎಂದು ಹೇಳಿ ಆಸ್ಪತ್ರೆಯ ವೈದ್ಯರು ಅದನ್ನ ಮರೆ ಮಾಚಿದ್ದರು.

    ವಿನಯ ಹಂಜಿಯವರು ಪತ್ನಿ ಮತ್ತು ಆ ಮಗುವನ್ನು ಸಿಟಿ ಕ್ಲಿನಿಕ್ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು ಧಾರವಾಡದ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಆಸ್ಪತ್ರೆಯಲ್ಲಿ ಮಗುವಿನ ಚರ್ಮದ ಸುಟ್ಟ ಗಾಯಗಳಿಗೆ ಚಿಕಿತ್ಸೆ ನೀಡಿದರು. ಆಗ ಮಗು ಗುಣಮುಖವಾಯಿತು. ಈ ಬಗ್ಗೆ ವಿನಯ ಹಂಜಿಯವರು ಹುಬ್ಬಳ್ಳಿಯ ಸಿಟಿ ಕ್ಲಿನಿಕ್ ಹಾಗೂ ಅಲ್ಲಿನ 7 ಮಂದಿ ವೈದ್ಯರ ವಿರುದ್ಧ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದನ್ನೂ ಓದಿ: ರಾಮನಗರದಲ್ಲಿ ಅಶಾಂತಿ ಸೃಷ್ಠಿಸೋದೆ ಹೆಚ್‌ಡಿಕೆ ಕೆಲಸ: ಡಿಕೆಶಿ

    ಸದ್ಯ ಕೃತ್ಯ ನಡೆದ ಅವಧಿಯಲ್ಲಿ ವಿಮೆ ಚಾಲ್ತಿಯಲ್ಲಿ ಇದ್ದಿದ್ದರಿಂದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಯು ಪರಿಹಾರದ 75% ಭಾಗ ಮತ್ತು ಬಾಕಿ 25% ಭಾಗವನ್ನು ಆಸ್ಪತ್ರೆಯವರು ಪಾವತಿಸಬೇಕು. ತೀರ್ಪು ನೀಡಿದ ದಿನದಿಂದ ತಿಂಗಳೊಳಗೆ 10 ಲಕ್ಷ ಪರಿಹಾರ ನೀಡಬೇಕು, ತಪ್ಪಿದ್ದಲ್ಲಿ ಪರಿಹಾರ ಮೊತ್ತಕ್ಕೆ ವಾರ್ಷಿಕ 8% ಬಡ್ಡಿ ಲೆಕ್ಕಹಾಕಿ ಕೊಡಬೇಕು ಎಂದು ಆಯೋಗ ಆದೇಶದಲ್ಲಿ ತಿಳಿಸಿದೆ.

  • 6 ವರ್ಷ ಪ್ರೀತಿ, ಮದುವೆ, ಮಗು ಕೊಟ್ಟು ಕೈಬಿಟ್ಟ- ಮತ್ತೊಂದು ಮದುವೆಯಾದ ಭೂಪ

    6 ವರ್ಷ ಪ್ರೀತಿ, ಮದುವೆ, ಮಗು ಕೊಟ್ಟು ಕೈಬಿಟ್ಟ- ಮತ್ತೊಂದು ಮದುವೆಯಾದ ಭೂಪ

    ಯಾದಗಿರಿ: 6 ವರ್ಷ ಪ್ರೀತಿಸಿ, ಮದುವೆಯಾಗಿ ಮಗುವಾದ ಮೇಲೂ ಮತ್ತೊಂದು ಹುಡುಗಿಯ ಬೆನ್ನು ಬಿದ್ದು ಆಕೆಯನ್ನೂ ಕೈಹಿಡಿದ ಘಟನೆಯೊಂದು ಯಾದಗಿರಿ (Yadagiri) ಜಿಲ್ಲೆಯಲ್ಲಿ ನಡೆದಿದೆ.

    ಯಾದಗಿರಿಯ ದಲಿತ ಸಂಘಟನೆಯ ಮುಖಂಡನನ್ನು ಪ್ರೀತಿಸಿ ಮದುವೆ ಆಗಿ ತಪ್ಪು ಮಾಡಿದ್ದೇನೆ. ಇದಕ್ಕೆ ನ್ಯಾಯ ಕೊಡಿಸಿ ಅಂತಾ ಪತ್ನಿ ಇದೀಗ ಕಣ್ಣೀರು ಹಾಕುತ್ತಿದ್ದಾರೆ.

    ಘಟನೆ ವಿವರ: ಜಿಲ್ಲೆಯ ಶಹಾಪುರ (Shahapura) ತಾಲೂಕಿನ ದೋರನಹಳ್ಳಿ ಗ್ರಾಮದ ನಿವಾಸಿ ಶರಣು ಎಂಬಾತ ಕಾಲೇಜು ಜೀವನದಲ್ಲಿ ISI ಕ್ಯಾಂಪ್ ಗೆ ಅಂತ ಬೆಂಗಳೂರಿಗೆ ತೆರಳಿದ್ದ. ಇದೇ ಕ್ಯಾಂಪ್ ಗೆ ಬಂದಿದ್ದ ಕನಕಪುರ ಸುಂದರಿಯೊಬ್ಬಳು ಶರಣುವಿನ ಕಣ್ಣು ಕುಕ್ಕಿದ್ದಳು. 2014ರಲ್ಲಿ ಬೆಂಗಳೂರಿನಲ್ಲಿ ನಡೆದ ಕ್ಯಾಂಪ್ ನಲ್ಲಿ ಕನಕಪುರದ ಸಿಂಧು ಹಾಗೂ ಯಾದಗಿರಿಯ ಶರಣು ಮೊದಲು ಭೇಟಿ ಆಗಿದ್ರು. 15 ದಿನದ ಕ್ಯಾಂಪ್ ನಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಸ್ನೇಹ ಪ್ರೀತಿಗೆ ತಿರುಗಿ, ಶರಣು ಬೆಂಗಳೂರಿನಲ್ಲೇ ಸಿಂಧುವಿಗೆ ಲವ್ ಪ್ರಪೋಸ್ (Love Propose) ಮಾಡಿದ್ದ. ಶರಣುವಿನ ಪ್ರಪೋಸ್ ಗೆ ಆಗ ಕನಕಪುರದ ಸಿಂಧು ಸಹ ಗ್ರೀನ್ ಸಿಗ್ನಲ್ ನೀಡಿದ್ದರು. ಇದನ್ನೂ ಓದಿ: 850 ಅಡಿಕೆ ಮರ ಕಡಿದ ಕೇಸ್‌ಗೆ ಟ್ವಿಸ್ಟ್ – ಮಗಳನ್ನ ಮದುವೆ ಮಾಡಿಕೊಡ್ತೀವಿ ಅಂತಾ 25 ಲಕ್ಷ ಪೀಕಿತ್ತು ಕುಟುಂಬ

    ಇದಾದ ಬಳಿಕ 6 ವರ್ಷಗಳ ಕಾಲ ಸಿಂಧು ಹಾಗೂ ಶರಣು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. 6 ವರ್ಷದ ಬಳಿಕ ಶರಣು, ಸಿಂಧು ಕುಟುಂಬಸ್ಥರಿಗೆ ನಿಮ್ಮ ಮಗಳನ್ನ ಆದರ್ಶಳನ್ನಾಗಿ ಮಾಡ್ತೀನಿ ಅಂತ ಕಥೆ ಹೇಳಿ ಮದುವೆ ಆಗಿದ್ದ. ಮದುವೆಯಾಗಿ ಇಬ್ಬರು 4 ವರ್ಷಗಳ ಕಾಲ ಸುಖವಾದ ಸಂಸಾರ ನಡೆಸಿದ್ದಾರೆ. ಇವರಿಬ್ಬರಿಗೆ ಇದೀಗ ಮುದ್ದಾದ ಮೂರು ವರ್ಷದ ಗಂಡು ಮಗು ಇದೆ. ಹೀಗಿರುವಾಗಲೂ ಶರಣು, ಪತ್ನಿ ಸಿಂಧುಗೆ ತಿಳಿಸದೇ ಸಂಬಂಧಿಕರಲ್ಲೇ ಮತ್ತೊಂದು ವಿವಾಹ ಆಗಿದ್ದಾನೆ. ಮೊದಲ ಪತ್ನಿಯ ಕೈಗೊಂದು‌ ಮಗು ನೀಡಿ, ಆಕೆಯನ್ನ ನಡು ರಸ್ತೆಯಲ್ಲೇ ಕೈಬಿಟ್ಟಿದ್ದಾನೆ. ಪ್ರೀತಿಸಿ ಮದುವೆಯಾಗಿ ಮೋಸ ಮಾಡಿದ ಗಂಡನ ಅಸಲೀ ಮುಖವಾಡ ಕಂಡು ಕಂಗಾಲಾಗಿರೋ ಸಿಂಧು, ನ್ಯಾಯಕ್ಕಾಗಿ ಅಲೆದಾಡ್ತಿದ್ದಾರೆ.

    ಶರಣನ ಬಣ್ಣದ ಮಾತಿಗೆ ಬೆರಗಾಗಿ ಮಗಳನ್ನ ಆತನಿಗೆ ನೀಡಿದ ಕರುಳಿನ ಕೊರಗಂತು ಹೇಳ ತೀರದು. ನಮಗೆ ಶರಣು ಯಾರು ಏನು ಅಂತ ಸಹ ಗೊತ್ತಿರಲಿಲ್ಲ. ನಾವು ನಮ್ಮ ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಕೆಎಎಸ್, ಐಎಸ್ಎಸ್ ಮಾಡಿಸಬೇಕೆಂದು ಕನಸು ಕಂಡಿದ್ವಿ. ಆದರೆ 2014 ರಲ್ಲಿ ಬೆಂಗಳೂರಿನಲ್ಲೆ ನಮ್ಮ ಮಗಳನ್ನ ಶರಣ ಪ್ರೇಮದ ಬಲೆಗೆ ಬಿಳಿಸಿಕೊಂಡಿದ್ದಾನೆ. ಬಳಿಕ ನಮಗೆ ಬಲವಂತವಾಗಿ ಒಪ್ಪಿಸಿ ಮದುವೆ ಆಗಿದ್ದಾನೆ. 4 ವರ್ಷ ಚೆನ್ನಾಗಿಯೇ ಇದ್ದರು. ಇದ್ದಕ್ಕಿದ್ದಂತೆ ಕಳೆದ ಡಿಸೆಂಬರ್ ನಲ್ಲಿ ತಮ್ಮ ಸಂಬಂಧಿಕರ ಹುಡುಗಿಯೊಬ್ಬಳ ಜೊತೆ ವಿವಾಹವಾಗಿದ್ದಾನೆ. ಈಗ ನಮ್ಮ ಮಗಳ ಪಾಡೆನೂ ಅಂತ ತಾಯಿ ಕಣ್ಣೀರು ಹಾಕ್ತಿದ್ದಾರೆ.

    ಸುಮಾರು 600 ಕಿಲೋ ಮಿಟರ್ ದೂರದಿಂದ ಮಗಳು ಚೆನ್ನಾಗಿ ಇರಲಿ ಅಂತ ಮದುವೆ ಮಾಡಿಕೊಟ್ಟಿದ್ವಿ. ಆದರೆ ಆತ ನಮ್ಮ‌ ಮಗಳಿಗೆ ಮೋಸ ಮಾಡಿದ್ದಾನೆ. ಆತನ ವಿರುದ್ದ ಜನವರಿ 10 ರಂದು ಶಹಾಪೂರ ಠಾಣೆಗೆ ದೂರು ನೀಡಿದ್ದೇವೆ. ಆತನ ವಿರುದ್ಧ ದೂರು ನೀಡಿ ಸುಮಾರು 22 ದಿನಗಳು ಕಳೆದ್ರೂ ಪೊಲೀಸರು ಆತನನ್ನ ಬಂಧಿಸುತ್ತಿಲ್ಲ. ನನ್ನ ಮಗಳಿಗೆ ನ್ಯಾಯ‌ ಕೊಡಿಸಿ ಸರ್ ಅಂತ ಸಿಂಧುವಿನ ತಾಯಿ ಕಣ್ಣೀರು ಹಾಕ್ತಿದ್ದಾರೆ.

    ಈ ಶರಣು ದೋರನಹಳ್ಳಿ ದಲಿತ ಸಂಘಟನೆಯೊಂದರ ಯಾದಗಿರಿ ಜಿಲ್ಲಾ ಉಸ್ತುವಾರಿ ಆಗಿದ್ದಾನಂತೆ. ಇದೇ ಕಾರಣಕ್ಕೆ ನನ್ನ ಏನೂ ಮಾಡಿಕೊಳ್ಳೋದಕ್ಕೆ ಆಗಲ್ಲ ಅಂತಾ ಅದೇಷ್ಟೋ ಹುಡುಗಿಯರ ಬಾಳಲ್ಲಿ ಚೆಲ್ಲಾಟ ಆಡಿದ್ದಾನಂತೆ. ಇದೀಗ ಪರಸ್ಪರ ಪ್ರೀತಿಸಿ, ಕಾನೂನಾತ್ಮಕವಾಗಿ ಮದುವೆ ಆಗಿ ಯುವತಿ ಬಾಳಿಗೆ ಕೊಳ್ಳಿ ಇಟ್ಟಿದ್ದಾನೆ. ಅಷ್ಟೇ ಅಲ್ಲ ಆಕೆಗೊಂದು‌ ಮಗು ಕೊಟ್ಟು ಆಕೆಯನ್ನ ನಡು ನೀರಲ್ಲಿ ಕೈ ಬಿಟ್ಟಿದ್ದು ಎಷ್ಟು ಸರಿ ಅಂತ ನಾಗರಿಕ ಸಮಾಜ‌ ಪ್ರಶ್ನೆ ಮಾಡ್ತಿದೆ. ಹೀಗಾಗಿ ಪೊಲೀಸರು ಕೂಡಲೇ ಆರೋಪಿಯನ್ನ ಬಂಧಿಸಿ, ಕಠಿಣ ಶಿಕ್ಷೆ ಕೊಡಿಸುವ ಜೊತೆಗೆ ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕಿದೆ.