Tag: Baby Monkey

  • ಕಂದ ಮೃತಪಟ್ಟು ವಾರಗಳು ಕಳೆದರೂ ಕಂಕುಳಿನಲ್ಲಿ ಹೊತ್ತು ತಿರುಗುತ್ತಿದೆ ಕೋತಿ!

    ಕಂದ ಮೃತಪಟ್ಟು ವಾರಗಳು ಕಳೆದರೂ ಕಂಕುಳಿನಲ್ಲಿ ಹೊತ್ತು ತಿರುಗುತ್ತಿದೆ ಕೋತಿ!

    ಚಾಮರಾಜನಗರ: ತಾಯಿ ಪ್ರೀತಿ ಅಂದರೆ ಅಮೃತಕ್ಕಿಂತಲೂ ಹೆಚ್ಚು, ತನ್ನ ಕಂದನಿಗೆ ಸ್ವಲ್ಪ ನೋವಾದರೂ ಕೂಡ ತಾಯಿ ಜೀವ ವಿಲವಿಲನೆ ಒದ್ದಾಡುತ್ತೆ. ಮನುಷ್ಯರಷ್ಟೇ ಅಲ್ಲ ಪ್ರಾಣಿಗಳಲ್ಲೂ ಸಹ ಇಂತಹದ್ದೇ ವಾತ್ಸಲ್ಯ ತುಂಬಿರುತ್ತೆ. ಹೀಗೆ ಕೋತಿಯೊಂದು ತನ್ನ ಕಂದ ಮೃತಪಟ್ಟು ವಾರಗಳು ಕಳೆದರೂ, ತನ್ನ ಮರಿ ಸಾವನ್ನಪ್ಪಿಲ್ಲ ಎಂಬಂತೆ ತನ್ನ ಕಂಕುಳಿನಲ್ಲಿ ಹೊತ್ತು ತಿರುಗುತ್ತಿದೆ.

    ಚಾಮರಾಜನಗರದ ಭ್ರಮರಾಂಭ ಬಡಾವಣೆಯಲ್ಲಿ ಕೋತಿಯೊಂದು ಕಳೆದ ಒಂದು ವಾರದಿಂದ ತನ್ನ ಮೃತ ಮರಿಯನ್ನು ತನ್ನ ಕಂಕುಳಿನಲ್ಲಿ ಹೊತ್ತು ತಿರುಗಾಡುತ್ತಿದೆ. ಕೋತಿ ತಾಯಿಗೆ ತನ್ನ ಕಂದ ಒಂದು ವಾರದ ಹಿಂದೆಯೇ ಮೃತಪಟ್ಟಿದೆ ಎಂಬ ವಿಷಯ ತಿಳಿದಿಲ್ಲ. ತಿಳಿದಿದ್ರು ತಾಯಿ ಕರುಳು ಮಾತ್ರ ತನ್ನ ಮರಿ ಸಾವನ್ನಪ್ಪಿಲ್ಲ ಎಂಬ ಭಾವನೆಯಲ್ಲೇ ಇದೆ. ತನ್ನ ಕಂದ ಈಗ ಏಳುತ್ತೆ, ಆಗ ಏಳುತ್ತೆ ಎಂಬ ಭಾವನೆಯಲ್ಲೇ ತಾಯಿ ಕೋತಿ ಮರಿ ಕೋತಿಯ ಮುಖವನ್ನೇಲ್ಲಾ ನೆಕ್ಕಿ ಎಬ್ಬಿಸಲು ಪ್ರಯತ್ನ ಪಡುತ್ತಿದೆ.

    ತಾಯಿ ಕೋತಿ ತನ್ನ ಮೃತ ಮರಿಯನ್ನು ಎಬ್ಬಿಸುತ್ತಿರುವ ರೀತಿಯನ್ನು ನೋಡಿದರೆ, ಎಂತವರಿಗೂ ಸಹ ಕಣ್ಣಲ್ಲಿ ನೀರು ಬರುತ್ತದೆ. ಹೀಗಾಗಿ ಕೋತಿಯನ್ನು ನೋಡುತ್ತಿರುವ ಚಾಮರಾಜನಗರದ ಭ್ರಮರಾಂಭ ಬಡಾವಣೆಯ ಜನರ ಕಣ್ಣು ತುಂಬಿ ಬರುತ್ತಿದೆ. ತನ್ನ ಕಂದ ಸಾವನ್ನಪ್ಪಿದೆ ಎಂದರೆ ಎಂತಹ ತಾಯಿಗೂ ಕರುಳು ಹಿಂಡಿದ ಹಾಗೆ ಆಗುತ್ತದೆ. ಅದೇ ಸ್ಥಿತಿಯಲ್ಲಿ ಈ ಕೋತಿ ಇದ್ದು, ಬಹುಶಃ ಆ ತಾಯಿ ಕೋತಿಗೆ ತನ್ನ ಮರಿ ಸಾವನ್ನಪ್ಪಿರುವದರಿಂದ ಬುದ್ದಿ ಭ್ರಮಣೆಯಾಗಿದೆ. ಹೀಗಾಗಿ ಕೋತಿ ತನ್ನ ಕಂದ ಮೃತಪಟ್ಟಿಲ್ಲ ಎಂದು ಆ ಮರಿ ಕೋತಿ ಶವವನ್ನು ಎತ್ತುಕೊಂಡು ಓಡಾಡುತ್ತಿದೆ ಎಂದು ಇಲ್ಲಿನ ಜನರು ಕಣ್ಣುಂಬಿಕೊಂಡು ಹೇಳುತ್ತಿದ್ದಾರೆ.

    https://www.youtube.com/watch?v=7PBC8F7fC9c

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನ್ನನ್ನು ಬಿಟ್ ಹೋಗ್ಬೇಡ- ನರಳಾಡುತ್ತಿದ್ದ ಮರಿಯನ್ನು ರಕ್ಷಿಸಿದ ತಾಯಿ ಕೋತಿ ಮನಕಲಕುವ ವಿಡಿಯೋ ನೋಡಿ

    ನನ್ನನ್ನು ಬಿಟ್ ಹೋಗ್ಬೇಡ- ನರಳಾಡುತ್ತಿದ್ದ ಮರಿಯನ್ನು ರಕ್ಷಿಸಿದ ತಾಯಿ ಕೋತಿ ಮನಕಲಕುವ ವಿಡಿಯೋ ನೋಡಿ

    ಕೊಪ್ಪಳ: ತಾಯಿ ತನ್ನ ಮಕ್ಕಳನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ ಎನ್ನುವುದನ್ನು ಕೋತಿಯೊಂದು ತೋರಿಸಿಕೊಟ್ಟಿದೆ. ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿ ಗಾಯಗೊಂಡು ನರಳಾಡುತ್ತ ಬಿದ್ದಿದ್ದ ತನ್ನ ಮರಿಯನ್ನು ಕೋತಿಯೊಂದು ರಕ್ಷಿಸಿ ಆರೈಕೆ ಮಾಡಿದೆ.

    ಗಾಯಗೊಂಡು ನರಳಾಡುತ್ತಿದ್ದ ಮರಿಯನ್ನು ಗಮನಿಸಿದ ತಾಯಿ ಕೋತಿ ಅದನ್ನು ರಕ್ಷಣೆ ಮಾಡಿಕೊಂಡಿದೆ. ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಮರಿಯನ್ನು ಕಷ್ಟ ಪಟ್ಟು ಎತ್ತುಕೊಂಡು ಹೋಗಿ ಆರೈಕೆ ಮಾಡಿ ತಾಯಿ ಪ್ರೀತಿಯನ್ನು ತೋರಿಸಿದೆ.

    ಸ್ವಲ್ಪ ದೂರ ಹೊತ್ತುಕೊಂಡು ಹೋಗುತ್ತಿದ್ದಾಗ ಭಾರವಿದ್ದ ಮರಿ ನೆಲಕ್ಕೆ ಬಿದ್ದಿದೆ. ನಂತರ ತಾಯಿ ಕೋತಿ ಮುಂದೆ ಹೆಜ್ಜೆ ಹಾಕುತ್ತಿದ್ದಂತೆ ಮರಿ ಕೋತಿ “ಅಮ್ಮ ನನ್ನನ್ನು ಬಿಟ್ಟು ಹೋಗಬೇಡ. ನಾನು ನಿನ್ನ ಜೊತೆ ಬರುತ್ತೇನೆ” ಎಂದು ಹೇಳುವಂತೆ ತಾಯಿಯನ್ನು ಬಿಗಿದು ಅಪ್ಪಿ ಅಪ್ಪಿಕೊಂಡಿದೆ. ಮರಿಯ ನೋವನ್ನು ಕಂಡು ತಾಯಿ ಕೋತಿ ನಂತರ ಕಷ್ಟಪಟ್ಟು ಹೆಜ್ಜೆ ಹಾಕಿ ಮುಂದೆ ಸಾಗಿದೆ.

    https://www.youtube.com/watch?v=gCzriAEEkXg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗರ್ಭಿಣಿ ಕೋತಿಗೆ ಕಾರು ಡಿಕ್ಕಿ – ಸಿಸೇರಿಯನ್ ಮಾಡಿ ಮರಿಕೋತಿ ಹೊರತೆಗೆದ ಮಹಿಳೆ!

    ಗರ್ಭಿಣಿ ಕೋತಿಗೆ ಕಾರು ಡಿಕ್ಕಿ – ಸಿಸೇರಿಯನ್ ಮಾಡಿ ಮರಿಕೋತಿ ಹೊರತೆಗೆದ ಮಹಿಳೆ!

    ಬ್ಯಾಂಕಾಕ್: ಕಾರ್ ಅಪಘಾತವಾಗಿ ಕೋತಿಯೊಂದು ಸಾವನ್ನಪ್ಪಿದ್ದು, ಅದರ ಹೊಟ್ಟೆಯಲ್ಲಿ ಇದ್ದ ಮರಿಕೋತಿಯನ್ನು ಮಹಿಳೆಯೊಬ್ಬರು ಸಿಸೇರಿಯನ್ ಮಾಡಿ ಹೊರತೆಗೆದ ಘಟನೆ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿ ನಡೆದಿದೆ.

    ಪದತಾಮ ಕೆದಕುರಿಯಾನನ್(36) ಕೋತಿಮರಿಯನ್ನು ರಕ್ಷಿಸಿದ ಮಹಿಳೆ. ಘಟನೆ ಹೇಗಾಯ್ತು ಎಂದು ವಿವರಿಸಿದ ಅವರು, ನಾಕೌನ್ ಸಾವನ್ ಪ್ರದೇಶದಲ್ಲಿರುವ ದೇವಾಲಯದ ಬಳಿ ಗರ್ಭಿಣಿ ಕೋತಿಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಆಗ ನಾನು ಓಡಿಬಂದು ನೋಡಿದ್ದಾಗ ತಾಯಿ ಸಾವನ್ನಪ್ಪಿತ್ತು. ಆ ಕ್ಷಣ ಮರಿಯನ್ನು ಕಾಪಾಡಬೇಕು ಇಲ್ಲವೆಂದರೆ ಮರಿ ಕೂಡ ತನ್ನ ತಾಯಿಯ ಹೊಟ್ಟೆಯಲ್ಲೇ ಸಾವನ್ನಪ್ಪುತ್ತದೆ ಎಂದು ತಿಳಿದು ಮರಿಯನ್ನು ರಕ್ಷಿಸಿದೆ ಎಂದು ತಿಳಿಸಿದ್ದಾರೆ.

    ನಾನು ಸಿಸೇರಿಯನ್ ಮಾಡುವಾಗ ಸಂಬಂಧಿಯೊಬ್ಬರು ತನ್ನ ಮೊಬೈಲಿನಲ್ಲಿ ಅದನ್ನು ವಿಡಿಯೋ ಮಾಡುತ್ತಿದ್ದರು. ಕೋತಿಮರಿಯ ತಲೆ ಹೊರಬರುತ್ತಿದ್ದಂತೆ ನಮಗೆ ಖುಷಿಯಾಯಿತ್ತು. ನಾನು ಕೋತಿಯ ಹೊಟ್ಟೆ ಭಾಗ ಮಾಡಿ ಮರಿಯನ್ನು ಹೊರತೆಗೆದೆ. ಆದರೆ ಅದು ಉಸಿರಾಡುತ್ತಿರಲಿಲ್ಲ. ತಕ್ಷಣ ಮರಿಯ ಎದೆ ಮೇಲೆ ಹೊಡೆದೆ ಹಾಗೂ ಅದರ ಬಾಯಿಗೆ ಗಾಳಿಯನ್ನು ಊದಿದೆ ಎಂದು ಪದತಾಮ ಹೇಳಿದ್ದಾರೆ.

    ಸದ್ಯ ಆ ಕೋತಿಮರಿ ನನ್ನ ಜೊತೆಯಲ್ಲೇ ಇದ್ದು, ನನ್ನ ಜೊತೆಯಲ್ಲಿಯೇ ಮಲಗುತ್ತದೆ. ಮರಿ ಬೆಳೆದು ದೊಡ್ಡದಾಗುವವರೆಗೂ ನಾನು ಅದನ್ನು ನೋಡಿಕೊಳ್ಳುತ್ತೇನೆ ಎಂದು ತಿಳಿಸಿದರು.

    ಸಿಸೇರಿಯನ್ ಮಾಡಲು ಧೈರ್ಯ ಹೇಗೆ ಬಂತು ಎಂದು ಕೇಳಿದ್ದಕ್ಕೆ, ನನ್ನ ಹೊಟ್ಟೆಯಿಂದ ಮಗುವನ್ನು ವೈದ್ಯರು ಸಿಸೇರಿಯನ್ ಮಾಡಿ ತೆಗೆದಿದ್ದರು. ಈ ವಿಚಾರ ನೆನಪಾಗಿ ನಾನು ಯಾಕೆ ಮಾಡಬಾರದು ಎಂದು ಪ್ರಯತ್ನಿಸಿದೆ. ಅದೃಷ್ಟಕ್ಕೆ ಮರಿ ಕೋತಿ ಜೀವಂತವಾಗಿ ಹೊರ ಬಂತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

  • ಅಪಘಾತವಾಗಿ ಮೃತಪಟ್ಟ ತಾಯಿಮಂಗದ ಹೊಟ್ಟೆಯಿಂದ ಹೊರಬಂದ ಮರಿ- ಕರುಳ ಬಳ್ಳಿ ಕತ್ತರಿಸಿ ರಕ್ಷಣೆ

    ಅಪಘಾತವಾಗಿ ಮೃತಪಟ್ಟ ತಾಯಿಮಂಗದ ಹೊಟ್ಟೆಯಿಂದ ಹೊರಬಂದ ಮರಿ- ಕರುಳ ಬಳ್ಳಿ ಕತ್ತರಿಸಿ ರಕ್ಷಣೆ

    ಉಡುಪಿ: ಅಪಘಾತದಲ್ಲಿ ಮೃತಪಟ್ಟಿದ್ದ ತಾಯಿ ಮಂಗನ ಹೊಟ್ಟೆಯಿಂದ ಹೊರಬಂದಿದ್ದ ಮರಿಯನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಅಲೆವೂರು ಪಂಚಾಯತ್ ವ್ಯಾಪ್ತಿಯ ಕರ್ವಾಲಿನಲ್ಲಿ ನಡೆದಿದೆ.

    ಉಡುಪಿ ಸಮೀಪದ ಅಲೆವೂರು ಪಂಚಾಯತ್ ವ್ಯಾಪ್ತಿಯ ಕರ್ವಾಲಿನಲ್ಲಿ ಅಪರಿಚಿತ ಬಸ್ಸಿನ ಹಿಂಬದಿ ಚಕ್ರಕ್ಕೆ ಸಿಲುಕಿದ ಮಂಗ ಸಾವನ್ನಪ್ಪಿತ್ತು. ಈ ವೇಳೆ ಗರ್ಭಿಣಿ ಮಂಗದ ಹೊಟ್ಟೆಯಲ್ಲಿದ್ದ ಮರಿ ಹೊರಗೆ ಎಸೆಯಲ್ಪಟ್ಟು ಸಾವಿನಂಚಿನಲ್ಲಿ ಸಿಲುಕಿತ್ತು. ಇದನ್ನು ಗಮನಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು ಮಂಗದ ಮರಿಯ ಕರುಳ ಬಳ್ಳಿಯನ್ನು ಕತ್ತರಿಸಿ ಮರಿಯನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ಅಲೆವೂರು ಪಂಚಾಯತ್ ಅಧ್ಯಕ್ಷ ಶ್ರೀಕಾಂತ್ ಹಾಗೂ ರಂಜಿತ್ ಎಂಬವರಿಬ್ಬರು ಮರಿ ಮಂಗದ ರಕ್ಷಣೆ ಮಾಡಿದ್ದಾರೆ. ನಂತರ ತಾಯಿ ಮಂಗವನ್ನು ಅಲ್ಲೇ ಸಮೀಪ ಮಣ್ಣು ಮಾಡಿದ್ದಾರೆ. ಮರಿ ಮಂಗವನ್ನು ರಂಜಿತ್ ತಮ್ಮ ಮನೆಗೆ ಕೊಂಡೊಯ್ದು ಆರೈಕೆ ಮಾಡಿದ್ದಾರೆ. ನಂತರ ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಪಂಚಾಯತ್ ಅಧ್ಯಕ್ಷರು ಹಾಗೂ ಸ್ಥಳೀಯ ವ್ಯಕ್ತಿ ಮೂಕ ಪ್ರಾಣಿಯ ಪ್ರಾಣ ಉಳಿಸಿದ್ದಕ್ಕೆ ಶ್ಲಾಘನೆಗೆ ವ್ಯಕ್ತವಾಗಿದೆ.

  • ಪ್ರವಾಸಿಗರ ಬಳಿ ಕಿತ್ತುಕೊಂಡ ಕಾಫಿ ಕುಡಿದು 10 ಗಂಟೆ ಕಾಲ ಪ್ರಜ್ಞೆತಪ್ಪಿತು 6 ತಿಂಗಳ ಕೋತಿಮರಿ

    ಪ್ರವಾಸಿಗರ ಬಳಿ ಕಿತ್ತುಕೊಂಡ ಕಾಫಿ ಕುಡಿದು 10 ಗಂಟೆ ಕಾಲ ಪ್ರಜ್ಞೆತಪ್ಪಿತು 6 ತಿಂಗಳ ಕೋತಿಮರಿ

    ಬ್ಯಾಂಕಾಕ್: ಕೆಲವು ಜನರಿಗೆ ಬೆಳಗ್ಗೆ ಹೊತ್ತು ಕಾಫಿ ಕುಡಿಯದಿದ್ದರೆ ಅವರ ದಿನ ಶುರು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಕೋತಿ ಮರಿಯೊಂದು ಕಾಫಿ ಕುಡಿದು 10 ಗಂಟೆಗಳ ಕಾಲ ಪ್ರಜ್ಷೆ ತಪ್ಪಿದ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ.

    ಲಾಂಗ್ ಟೇಲ್ ಮಕಾವ್ ಕೋತಿ ಮರಿಯೊಂದು ಪ್ರವಾಸಿಗರೊಬ್ಬರ ಗಾಡಿ ಮೇಲೆ ಎಗರಿ, ಗಾಡಿಯ ಹ್ಯಾಂಡಲ್‍ ಗೆ ನೇತುಹಾಕಿದ್ದ ಬ್ಯಾಗ್ ಕಸಿದುಕೊಂಡಿತ್ತು. ಅದರಲ್ಲಿದ್ದ ಐಸ್ ಕಾಫಿಯನ್ನು ಕುಡಿದಿತ್ತು. ದೇಹದಲ್ಲಿ ಕಾಫೀನ್ ಅಂಶ ಹೆಚ್ಚಾಗಿ ಕೆಲವೇ ನಿಮಿಷಗಳಲ್ಲಿ ಕೋತಿ ಕುಸಿದು ಬಿದ್ದಿದೆ.

    6 ತಿಂಗಳ ಕೋತಿ ಮರಿ ಸ್ವಲ್ಪ ಸಮಯದ ಹಿಂದೆ ಪ್ರವಾಸಿಗರು ಕಾಫಿ ಕುಡಿಯೋದನ್ನ ನೋಡಿ ಅವರಂತಯೇ ಕಾಫಿ ಕುಡಿಯಲು ಪ್ರಯತ್ನಿಸಿತ್ತು ಎಂದು ಇಲ್ಲಿನ ಫೇಸ್‍ಬುಕ್ ಗುಂಪೊಂದು ಪೋಸ್ಟ್ ಮಾಡಿದೆ.

    ಕೋತಿ ಮರಿಯನ್ನು ನೋಡುತ್ತಿದ್ದ ಜನರು ಅದು ಪ್ರಜ್ಞೆ ತಪ್ಪುತ್ತಿದ್ದಂತೆ ಪಶುವೈದ್ಯರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪಶುವೈದ್ಯರು ಕೋತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದರು. ಇದಾದ 10 ಗಂಟೆಗಳ ನಂತರ ಕೋತಿಗೆ ಪ್ರಜ್ಞೆ ಬಂದಿದೆ.

    ಕೋತಿ ಮರಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ಮೇಲೆ ಅದನ್ನು ಅದರ ಗುಂಪಿನ ಜೊತೆ ಬಿಡಲಾಗಿದೆ. ಮಕಾವ್ ಕೋತಿಮರಿಯ ಚೇತರಿಕೆ ಮತ್ತು ಅದರ ಕುಟುಂಬದೊಂದಿಗೆ ಮರಳಿ ಸೇರಿಸಿದ ಫೋಟೋಗಳನ್ನು ಫೇಸ್‍ ಬುಕ್ ಗುಂಪು ಹಂಚಿಕೊಂಡಿದೆ.