Tag: baby girls Public TV

  • ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಉತ್ತರಾರಾಧನೆ

    ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ಉತ್ತರಾರಾಧನೆ

    ರಾಯಚೂರು: ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿ 350 ನೇ ಆರಾಧನಾ ಮಹೋತ್ಸವದ ಭಾಗವಾಗಿ ಶ್ರೀ ಮಠದಲ್ಲಿಂದು ರಾಯರ ಉತ್ತರರಾಧನೆ ಸಂಭ್ರಮದಿಂದ ನಡೆಯುತ್ತಿದೆ.

    ರಾಯರು ವೃಂದಾವನಸ್ಥರಾದ ಮರುದಿನವನ್ನ ಉತ್ತರರಾಧಾನೆಯಾಗಿ ಆಚರಿಸಲಾಗುತ್ತದೆ. ಇಂದು ರಾಯರು ಬಹಿರ್ಮುಖರಾಗಿ ರಾಜಬೀದಿಗಳಲ್ಲಿ ಬರ್ತಾರೆ ಅನ್ನೋ ನಂಬಿಕೆಯಿದೆ. ಮಠದ ಶ್ರೀಗಳಿಂದ ರಾಯರಿಗೆ ಬಣ್ಣಗಳ ಸಮರ್ಪಣೆ ನಡೆಯುತ್ತದೆ. ವಿವಿಧ ಬಣ್ಣಗಳನ್ನ ಗುರಾಜರಿಗೆ ಸಮರ್ಪಿಸಿ ಶ್ರೀಗಳು ಹಾಗೂ ಮಠದ ಸಿಬ್ಬಂದಿ ವಸಂತೋತ್ಸವ ಆಚರಿಸುತ್ತಾರೆ.

    ಉತ್ತರಾರಾಧನೆ ಹಿನ್ನೆಲೆ ಮಹಾರಥೋತ್ಸವ ನಡೆಯಲಿದ್ದು, ಇದಕ್ಕೂ ಮುನ್ನ ಪಲ್ಲಕ್ಕಿಯಲ್ಲಿ ಸಂಸ್ಕೃತ ವಿದ್ಯಾಪೀಠ ಶಾಲೆಗೆ ಉತ್ಸವ ಮೂರ್ತಿ ಪ್ರಹ್ಲಾದರಾಜರ ಮೆರವಣಿಗೆ ನಡೆಯುತ್ತದೆ. ಬಳಿಕ ಮಠದ ರಾಜಬೀದಿಯಲ್ಲಿ ಇಂದು ಮಹಾ ರಥೋತ್ಸವ ನಡೆಯಲಿದೆ. ಸಪ್ತರಾತ್ರೋತ್ಸವದ ಮುಖ್ಯ ಮೂರು ದಿನಗಳ ಸಂಭ್ರಮಕ್ಕೆ ಇಂದು ತೆರೆಬೀಳಲಿದೆ. ಆಗಸ್ಟ್ 27ರ ವರೆಗೆ ಸಪ್ತರಾತ್ರೋತ್ಸವ ನಡೆಯಲಿದ್ದು ಮಠದಲ್ಲಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಇದನ್ನೂ ಓದಿ: ರಾಯರ ಆರಾಧನೆ- ಪಾದಯಾತ್ರೆ ಮೂಲಕ ಹರಿದು ಬಂತು ಭಕ್ತರ ದಂಡು

    ಆರಾಧನಾ ಮಹೋತ್ಸವ ಹಿನ್ನೆಲೆ ಬೆಳಗ್ಗೆಯಿಂದ ಮಠದಲ್ಲಿ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಮೂಲರಾಮದೇವರಿಗೆ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಇದನ್ನೂ ಓದಿ: ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಳೆಕಟ್ಟಿದ ರಾಯರ ಆರಾಧನೆ

  • ಕಾಫಿ ತೋಟದೊಳಗೆ ನುಗ್ಗಿ ಪಲ್ಟಿಯಾದ ಕಾರು

    ಕಾಫಿ ತೋಟದೊಳಗೆ ನುಗ್ಗಿ ಪಲ್ಟಿಯಾದ ಕಾರು

    ಚಿಕ್ಕಮಗಳೂರು: ಸಂಬಂಧಿಯನ್ನ ಬ್ಯಾಂಕಿಗೆ ಡ್ರಾಪ್ ಮಾಡಿ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ  ಕಾರು ಕಾಫಿತೋಟದೊಳಕ್ಕೆ ಪಲ್ಟಿಯಾಗಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಎಸ್ಟೇಟ್ ಸಮೀಪ ನಡೆದಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಜಾವಳಿ ಗ್ರಾಮದ ಗಿರೀಶ್ ಎಂಬವರು ತಮ್ಮ ಸಂಬಂಧಿಯನ್ನ ಮೂಡಿಗೆರೆಯ ಬ್ಯಾಂಕಿಗೆ ಡ್ರಾಪ್ ಮಾಡಿ ಹಿಂದಿರುಗಿ ಹೋಗುವಾಗ ಈ ಅಪಘಾತ ಸಂಭವಿಸಿದೆ. ರಸ್ತೆ ಬದಿ ತಡೆಗೋಡೆಗಳು ಇಲ್ಲದ್ದಕ್ಕೆ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರು ಕಾಫಿತೋಟದಲ್ಲಿ ಪಲ್ಟಿಯಾಗಿದ್ದರಿಂದ ಚಾಲಕ ಗಿರೀಶ್ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಲೆನಾಡಲ್ಲಿ ಇಡೀ ದಿನ ಸಾಧಾರಣ ಮಳೆ ಸುರಿಯುತ್ತಿದೆ. ಮಲೆನಾಡಿನ ರಸ್ತೆಗಳು ಅತಿಯಾದ ತಿರುವಿನಿಂದ ಕೂಡಿದ್ದು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಫಿ ತೋಟದೊಳಕ್ಕೆ ಪಲ್ಟಿಯಾಗಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

    ಸ್ಥಳೀಯರು ರಸ್ತೆಗಳಿಗೆ ತಡೆಗೋಡೆಗಳು ಇಲ್ಲದ್ದಕ್ಕೆ ಈ ಅಪಘಾತಕ್ಕೆ ಕಾರಣ ಎಂದು ಅಸಮಾಧಾನ ಹೊರಹಾಕಿ, ಕೂಡಲೇ ಅಪಾಯಕಾರಿ ತಿರುವುಗಳಿಗೆ ತಡೆಗೋಡೆ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಈ ಭಾಗದಲ್ಲಿ ಕಳೆದೊಂದು ತಿಂಗಳಲ್ಲಿ ಸುಮಾರು ಏಳೆಂಟು ಸ್ಥಳೀಯ ಹಾಗೂ ಪ್ರವಾಸಿ ಕಾರುಗಳು ಪಲ್ಟಿಯಾಗಿವೆ. ಅದೃಷ್ಟವಶಾತ್ ಎಲ್ಲೂ ಕೂಡ ಸಾವು ಸಂಭವಿಸಿಲ್ಲ. ಹಾಗಾಗಿ ಸ್ಥಳೀಯರು ಈ ಭಾಗದಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಸರ್ಕಾರ ಅಪಾಯಕಾರಿ ತಿರುವುಗಳಲ್ಲಿ ತಡೆಗೋಡೆ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ.

  • ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ

    ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ

    ಹುಬ್ಬಳ್ಳಿ: ಅವಳಿ ಜವಳಿ ಹೆಣ್ಣು ಮಕ್ಕಳು ಹುಟ್ಟಿವೆ ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ಮನಬಂದಂತೆ ಥಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಹಳೇ ಹುಬ್ಬಳ್ಳಿಯ ಇಸ್ಲಾಂಪುರದಲ್ಲಿ ನಡೆದಿದೆ.

    ಪತ್ನಿ ಬೇಬಿ ಆಯಿಶಾ ದೌರ್ಜನ್ಯಕ್ಕೆ ಒಳಗಾದ ಪತ್ನಿ. ಆರೋಪಿ ಸಲ್ಮಾನ್ ಅಹ್ಮದ್ ಕಲಬುರ್ಗಿ ಪತ್ನಿ ಅವಳಿ ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಹಲ್ಲೆ ಮಾಡಿದ್ದಾನೆ. ಸದ್ಯಕ್ಕೆ ಪತ್ನಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಏಳು ವರ್ಷಗಳ ಹಿಂದೆ ಸಲ್ಮಾನ್ ಅಹ್ಮದ್ ಕಲಬುರ್ಗಿ ಮತ್ತು ಬೇಬಿ ಆಯಿಶಾ ಇಬ್ಬರ ವಿವಾಹವಾಗಿತ್ತು. ಪತ್ನಿ ಬೇಬಿ ಆಯಿಶಾಗೆ ಮೊದಲ ಹೆರಿಗೆಯಲ್ಲಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಹುಟ್ಟಿದೆ. 17 ದಿನಗಳ ಹಿಂದೆ ಎರಡನೇ ಹೆರಿಗೆಯಲ್ಲಿ ಅವಳಿ ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಹೀಗಾಗಿ ತನಗೆ ಮೂರು ಹೆಣ್ಣು ಮಕ್ಕಳಾಗಿವೆ ಎಂದು ಪ್ರತಿನಿತ್ಯ ಕುಡಿದು ಬಂದು ಜಗಳ ಮಾಡುತ್ತಿದ್ದನು.

    ಇವರಿಬ್ಬರ ಜಗಳದ ಮಧ್ಯೆ ಸಮುದಾಯದ ಹಿರಿಯರು ಬಂದು ರಾಜಿಸಂಧಾನ ಮಾಡಿದರು. ಆದರೂ ಇಂದು ಪತ್ನಿ ಬೇಬಿ ಆಯಿಶಾ ಮೇಲೆ ಹಲ್ಲೆ ಮಾಡಿದಲ್ಲದೇ ಪೆಟ್ರೊಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಆಗ ಆಯಿಶಾ ಮನೆಯಿಂದ ಹೊರಗಡೆ ಓಡಿ ಬಂದು ಜೀವ ಉಳಿಸಿಕೊಂಡಿದ್ದಾಳೆ. ಬಳಿಕ ಸ್ಥಳೀಯರು ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈಗ ಆಯಿಶಾ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಈ ಸಂಬಂಧ ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.