Tag: baburao chinchansur

  • ನೀವು ಧೀರ, ಶೂರ ಎಂದು ಹೊಗಳಿದವನು ಪಕ್ಷ ಬಿಟ್ಟು ಹೋದ: ಚಿಂಚನಸೂರಿಗೆ ಮಾಜಿ ಸಿಎಂ ಟಾಂಗ್

    ನೀವು ಧೀರ, ಶೂರ ಎಂದು ಹೊಗಳಿದವನು ಪಕ್ಷ ಬಿಟ್ಟು ಹೋದ: ಚಿಂಚನಸೂರಿಗೆ ಮಾಜಿ ಸಿಎಂ ಟಾಂಗ್

    – ಖರ್ಗೆ ಬೆನ್ನಿಗೆ ಚೂರಿ ಹಾಕಿದ ಜಾಧವ್‍ರನ್ನು ಹೀನಾಯವಾಗಿ ಸೋಲಿಸಬೇಕು
    – ಖರ್ಗೆ ಎದುರಿಸುವ ಶಕ್ತಿ ಮೋದಿಗಿಲ್ಲ

    ಯಾದಗಿರಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗುರುಮಠಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೈದಾಪುರದಲ್ಲಿ ನಡೆದ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಪಕ್ಷ ಬಿಟ್ಟು ಹೋದ ನಾಯಕರನ್ನು ನೆನೆದು ವಾಗ್ದಾಳಿ ನಡೆಸಿದ್ದಾರೆ.

    ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಅವರು, ನೀವು ಚಂದ್ರ, ಧೀರ, ಶೂರ ಎಂದು ನನ್ನನ್ನು ಹೊಗಳಿದ್ದ. ನಿಮ್ಮನ್ನ ಬಿಟ್ಟು ಹೋಗಲ್ಲ ಎಂದು ಹೇಳಿದ ಅಸಾಮಿ ಇದೀಗ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡ. ಮಾಜಿ ಶಾಸಕರಾದ ಉಮೇಶ್ ಜಾಧವ್, ಮಾಲಿಕಯ್ಯ ಗುತ್ತೇದಾರ್, ಡಾ.ಎ.ಬಿ.ಮಾಲಕರೆಡ್ಡಿ ಎಲ್ಲರೂ ಬಂದರು, ಪಕ್ಷ ಬಿಟ್ಟು ಹೋದರು. ಆದರೆ ಅವರು ಯಾರೂ ನಿರ್ದಿಷ್ಟ ಕಾರಣ ನೀಡಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

    ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಯಾವತ್ತೂ ಅಧಿಕಾರದಿಂದ ಹೋಗಲಿಲ್ಲ. ಅಧಿಕಾರವೇ ಅವರ ಹಿಂದೆ ಬಂದಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಕಾಂಗ್ರೆಸ್‍ನಲ್ಲಿದ್ದಾಗ ಅವರು ಹೇಳಿದ ಎಲ್ಲ ಕೆಲಸವನ್ನು ಮಾಡಿಕೊಟ್ಟೆ. ಆದರೆ ಪಕ್ಷ ಬಿಟ್ಟು ಹೋದರು. ಮುಂಬೈಗೆ ಹೋಗಿ ಬಿಜೆಪಿ ಹತ್ತಿರ ದುಡ್ಡು ತೆಗೆದುಕೊಂಡು ಅವರ ಪಕ್ಷ ಸೇರಿಕೊಂಡರು. ಉಮೇಶ್ ಜಾಧವ್ ಅವರಿಗೆ ನಾಚಿಕೆ ಆಗಬೇಕು. ಮಲ್ಲಿಕಾರ್ಜುನ ಖರ್ಗೆ ಅವರ ಬೆನ್ನಿಗೆ ಚೂರಿ ಹಾಕಿದ ಅವರನ್ನು ಹೀನಾಯವಾಗಿ ಸೋಲಿಸಬೇಕು. ಆಗ ಅವರಿಗೆ ಬುದ್ಧಿ ಬರುತ್ತದೆ ಎಂದು ಗುಡುಗಿದರು.

    ಮಂತ್ರಿ ಸ್ಥಾನ ನೀಡುತ್ತೇವೆ ಎಂದು ಹೇಳಿದರೂ ಉಮೇಶ್ ಜಾಧವ್ ಪಕ್ಷ ಬಿಟ್ಟರು. ಈಗ ದುಡ್ಡು ಪಡೆದು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಮರ್ಯಾದೆ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಎದುರಿಸುವಷ್ಟು ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಲ್ಲ. ಹೀಗಾಗಿ ಪ್ರಧಾನಿ ಮೋದಿ ಸಂಸತ್‍ಗೆ ಬರುವುದಿಲ್ಲ. ಸಂಸತ್‍ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸ್ಥಾನ ಭರ್ತಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

    ಬಿಜೆಪಿಯವರು ಎಲ್ಲರೂ ಮಾನಗೆಟ್ಟವರು. ಅದಕ್ಕಾಗಿಯೇ ನನ್ನ ಮುಖ ನೋಡಬೇಡಿ, ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಐದು ವರ್ಷ ಏನು ಮಾಡಿದರು ಎಂದು ನಾವು ನೋಡಿದ್ದೇವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸೇವಲಾಲ ಜಯಂತಿ ಆಚರಣೆ ಮಾಡಿದೆ. ಕೋಲಿ ಹಾಗೂ ಕಬ್ಬಲಿಗ ಸಮುದಾಯವನ್ನು ಎಸ್‍ಟಿಗೆ ಸೇರಿಸಲು ಒತ್ತಡ ಹಾಕಿದ್ದೆ. ಅಂಬಿಗರ ಚೌಡಯ್ಯ ಜಯಂತಿ ಮಾಡಿದ್ದು ನಾನು. ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್, ಉಮೇಶ್ ಜಾಧವ್ ಏನು ಮಾಡಿದ್ದಾರೆ ಎಂದು ಕಿಡಿಕಾರಿದರು.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಹಿಂದುಳಿದವರಿಗೆ ಒಂದೇ ಒಂದು ಟಿಕೆಟ್ ನೀಡಿಲ್ಲ. ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಬಾಯ್ಬಡಕ. ಅವನ ಯೋಗ್ಯತೆಗೆ ಬೆಂಕಿ ಹಾಕ, ಕುರುಬ ಸಮಾಜ ಒಬ್ಬ ನಾಯಕನಿಗೆ ಟಿಕೆಟ್ ಕೊಡಿಸಲು ಶ್ರಮಿಸಲಿಲ್ಲ. ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಗ್ರಾಮ ಪಂಚಾಯತ್ ಸದಸ್ಯರಾಗಲು ಕೂಡ ನಾಲಾಯಕ್. ಇಂತಹವನು ಸಂವಿಧಾನ ಬದಲಿಸುವ ಮಾತನಾಡುತ್ತಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

  • ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸೋದೆ ನನ್ನ ಕೊನೆ ಆಸೆ: ಚಿಂಚನಸೂರ್

    ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸೋದೆ ನನ್ನ ಕೊನೆ ಆಸೆ: ಚಿಂಚನಸೂರ್

    – ಪುತ್ರನಿಗಾಗಿ ಖರ್ಗೆ ಕಾಂಗ್ರೆಸ್‍ನಿಂದ ಎಲ್ಲರನ್ನೂ ಹೊರಹಾಕಿದ್ರು

    ಕಲಬುರಗಿ: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಸೇರಿಸುವುದು ನನ್ನ ಕೊನೆ ಆಸೆ. ಈ ನಿಟ್ಟಿನಲ್ಲಿ ನಿರಂತರವಾಗಿ ಹೋರಾಡುತ್ತೇನೆ ಎಂದ ಬಿಜೆಪಿ ಮುಖಂಡ ಬಾಬುರಾವ್ ಚಿಂಚನಸೂರ್ ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಸೇಡಂನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಪುತ್ರನಿಗಾಗಿ ಕಾಂಗ್ರೆಸ್‍ನಿಂದ ಎಲ್ಲರನ್ನೂ ಹೊರಹಾಕಿದರು. ಈಗ ಅವರಿಬ್ಬರೇ ಪಕ್ಷದಲ್ಲಿ ಉಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

    ಮಾಲೀಕಯ್ಯ ಗುತ್ತೆದಾರ ಅವರು ಸಚಿವ ಪ್ರಿಯಾಂಕ್ ಖರ್ಗೆ ಬೆಳವಣಿಗೆಗೆ ಅಡ್ಡಿ ಆಗುತ್ತಾರೆ ಎನ್ನುವುದು ಮಲ್ಲಿಕಾರ್ಜುನ ಖರ್ಗೆ ಅವರ ವಿಚಾರವಾಗಿತ್ತು. ಹೀಗಾಗಿ ಅವರನ್ನು ಪಕ್ಷದಿಂದ ಹೊರ ಹಾಕಿದರು. ಮಾಜಿ ಸಚಿವ ಖಮರ್ ವುಲ್ಲಾ ಇಸ್ಲಾಂ ಅವರಿಂದ ಮಂತ್ರಿಸ್ಥಾನ ಕಿತ್ತುಕೊಂಡರು. ಇದರಿಂದ ಆಘಾತಕ್ಕೆ ಒಳಗಾದ ಖಮರ್ ವುಲ್ಲಾ ಇಸ್ಲಾಂ ಹೃದಯಾಘತಕ್ಕೆ ಒಳಗಾಗಿ ಪ್ರಾಣ ಬಿಟ್ಟರು. ನಂತರ ತಂತ್ರ ರಚಿಸಿ ನನ್ನನ್ನು ಪಕ್ಷದಿಂದ ಹೊರಹಾಕಿದರು ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಗುಡುಗಿದರು.

    ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರನ್ನು ಆಯ್ಕೆ ಮಾಡಲು ಎಲ್ಲರೂ ಶ್ರಮಿಸಬೇಕು. ಉಮೇಶ್ ಜಾಧವ್ ಆಯ್ಕೆಯಾದರೆ ಅವರಿಗೆ ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆ. ಈ ಮೂಲಕ ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗಿಂತ ಉತ್ತಮ ಕಾರ್ಯಗಳನ್ನು ಉಮೇಶ್ ಜಾಧವ್ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಹಳೇ ಪರ್ವತ, ಅದು ತಾನಾಗಿಯೇ ಕುಸಿಯಲು ಆರಂಭಿಸಿದೆ ಎಂದು ವ್ಯಂಗ್ಯವಾಡಿದರು.

  • ನಾನೊಂದ ತರಹ ಮೋದಿ ಇದ್ದಂಗೆ, ನನಗೆ ಪತ್ನಿಯಿದ್ದಾಳೆ ಮೋದಿಗಿಲ್ಲ: ಚಿಂಚನಸೂರ್

    ನಾನೊಂದ ತರಹ ಮೋದಿ ಇದ್ದಂಗೆ, ನನಗೆ ಪತ್ನಿಯಿದ್ದಾಳೆ ಮೋದಿಗಿಲ್ಲ: ಚಿಂಚನಸೂರ್

    ಯಾದಗಿರಿ: ನಾನು ಒಂದ ತರಹ ಪ್ರಧಾನಿ ನರೇಂದ್ರ ಮೋದಿ ಇದ್ದಂತೆ. ಪ್ರಧಾನಿ ಮೋದಿ ಅವರಿಗೆ ಪತ್ನಿ ಇಲ್ಲ. ಆದರೆ ನನಗೆ ಪತ್ನಿಯಿದ್ದಾಳೆ ಅಷ್ಟೇ ವ್ಯತ್ಯಾಸ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದ್ದಾರೆ.

    ಜಿಲ್ಲೆಯ ಗುರುಮಠಕಲ್‍ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಉಮೇಶ್ ಜಾಧವ್ ಗೆದ್ದರೆ ಕೇಂದ್ರದಲ್ಲಿ ಸಚಿವರಾಗುತ್ತಾರೆ. ಅವರು ಸಚಿವರಾದರೆ ಕ್ಷೇತ್ರದ ಪ್ರತಿಯೊಬ್ಬರೂ ಮಂತ್ರಿ ಇದ್ದಂತೆ. ಹೀಗಾಗಿ ಉಮೇಶ್ ಜಾಧವ್ ಅವರನ್ನು ಬಹುಮತದಿಂದ ಗೆಲ್ಲಿಸಿದರೆ ಪಾದಕ್ಕೆ ನಮಾಸ್ಕಾರ ಮಾಡುತ್ತೇನೆ ಎಂದು ಮನವಿ ಮಾಡಿಕೊಂಡರು.

    ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹಳೇ ಪರ್ವತವಿದ್ದಂತೆ. ಆ ಪರ್ವತ ನಿಧಾನವಾಗಿ ಬೀಳುತ್ತದೆ ಎಂದು ವ್ಯಂಗ್ಯವಾಡುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿಕೆಗೆ ಟಾಂಗ್ ಕೊಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಎಸ್‍ವೈ ಕೃಷ್ಣ, ನಾನು ಅರ್ಜುನ ಇದ್ದಂಗೆ: ಬಾಬುರಾವ್ ಚಿಂಚನಸೂರ್

    ಬಿಎಸ್‍ವೈ ಕೃಷ್ಣ, ನಾನು ಅರ್ಜುನ ಇದ್ದಂಗೆ: ಬಾಬುರಾವ್ ಚಿಂಚನಸೂರ್

    ಯಾದಗಿರಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೃಷ್ಣ. ನಾನು ಅರ್ಜುನ ಇದ್ದಂತೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

    ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ನಡೆದ ಮೋದಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಮಾಜಿ ಸಚಿವರು, ಕೃಷ್ಣ (ಬಿ.ಎಸ್.ಯಡಿಯೂರಪ್ಪ) ಯಾವಾಗ ಬಾಣ ಬಿಡು ಅಂತಾರೆ ಆಗ ನಾನು ಬಾಣ ಬಿಡುತ್ತೇನೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ವಿಜಯ ಬಿಜೆಪಿ ಪತಾಕೆ ಹಾರಿಸುತ್ತೆವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ಓದಿ : ಮಾಜಿ ಸಚಿವ ಖಮರುಲ್ ಸಾವಿಗೆ ಮಲ್ಲಿಕಾರ್ಜುನ ಖರ್ಗೆ ಕಾರಣ: ಬಾಬುರಾವ್ ಚಿಂಚನಸೂರು

    ಗುರುಮಠಕಲ್ ಕ್ಷೇತ್ರ ಪರ್ಸೆಂಟೆಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಹಣ ಕೊಟ್ಟರೆ ಮಾತ್ರ ಕ್ಷೇತ್ರದಲ್ಲಿ ಕೆಲಸವಾಗುತ್ತದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚಿಂಚನಸೂರ್ ಗಂಭೀರವಾಗಿ ಆರೋಪಿಸಿದರು.

    ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಮಾಜಿ ಸಚಿವರು, ದೇಶದಲ್ಲಿ ಸದ್ಯ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದೆ. ಅದಕ್ಕಾಗಿ ಪ್ರಿಯಾಂಕ ವಾದ್ರಾ ಅವರನ್ನು ರಾಜಕೀಯಕ್ಕೆ ಕರೆ ತಂದಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆ ಬಿಂಬಿಸುತ್ತಿದ್ದಾರೆ. ಇಂದಿರಾ ಗಾಂಧಿ ಆಡಳಿತದ ಬಗ್ಗೆ ಪ್ರಿಯಾಂಕ ಅವರಿಗೆ ಏನು ಗೊತ್ತು. ರಾಜಕೀಯ ಅನುಭವವಾಗಲು ಇನ್ನೂ 20ರಿಂದ 30 ವರ್ಷ ಬೇಕಾಗುತ್ತದೆ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv