Tag: babru

  • ಸುಂದರ ಕಥೆಯೊಂದಿಗೆ ಅಮೆರಿಕ ಸುತ್ತಿಸೋ ಬಬ್ರೂ!

    ಸುಂದರ ಕಥೆಯೊಂದಿಗೆ ಅಮೆರಿಕ ಸುತ್ತಿಸೋ ಬಬ್ರೂ!

    ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಪುನರಾಗಮನವೂ ಸೇರಿದಂತೆ ಹಲವಾರು ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಚಿತ್ರ ಬಬ್ರೂ. ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣ ನಡೆಸಿಕೊಂಡಿರೋ ಚಿತ್ರವೆಂಬುದರಿಂದ ಹಿಡಿದು, ಜರ್ನಿಯ ಜೊತೆ ನಡೆಯೋ ರೋಚಕ ಕಥೆಯನ್ನೊಳಗೊಂಡಿದೆಯೆಂಬ ಸುಳಿವು… ಪ್ರೇಕ್ಷಕರು ಈ ಸಿನಿಮಾದತ್ತ ಕಣ್ಣಿಟ್ಟು ಕಾಯಲು ಇವುಗಳ ಹೊರತಾಗಿ ಮತ್ಯಾವ ಕಾರಣಗಳೂ ಬೇಕಿರಲಿಲ್ಲ. ಹೀಗೆ ಯಾವ್ಯಾವ ದಿಕ್ಕಿನಿಂದ ಕುತೂಹಲ ಹುಟ್ಟಿಕೊಂಡಿತ್ತೋ ಅದೆಲ್ಲವನ್ನು ತಣಿಸುವಂತೆ ನಿರ್ದೇಶಕ ಸುಜಯ್ ರಾಮಯ್ಯ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಈ ಬಲದಿಂದಲೇ ಪ್ರತೀ ಕ್ಷಣವೂ ತನ್ನ ಜರ್ನಿಯನ್ನು ತೀವ್ರವಾಗಿಸಿಕೊಂಡಿರುವ ಚೆಂದದ ಚಿತ್ರವಾಗಿ ಬಬ್ರೂ ಪ್ರೇಕ್ಷಕರ ಮುಂದೆ ಬಂದಿದೆ.

    ಸುಮನ್ ನಗರ್‍ಕರ್ ಇಲ್ಲಿ ಸನಾ ಎಂಬ ಪಾತ್ರದಲ್ಲಿ ನಟಿಸಿದ್ದರೆ ಮಹಿ ಹಿರೇಮಠ್ ಅರ್ಜುನ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದು ಎರಡು ಬದುಕುಗಳ ಒಂದೇ ದಿಕ್ಕಿನ ಪಯಣ. ಆದರೆ ಗುರು ಮಾತ್ರ ತದ್ವಿರುದ್ಧ, ಚಿತ್ರವಿಚಿತ್ರವಾದದ್ದು. ಹೀಗೆ ದೂರ ತೀರದತ್ತ ಯಾನಕ್ಕೆ ಹೊರಟು ನಿಂತ ಸನಾಳ ಹಿಂದೆ ಕೌಟುಂಬಿಕ ತಾಪತ್ರಯದ ಪಡಿಪಾಟಲುಗಳಿರುತ್ತವೆ. ಅರ್ಜುನನದ್ದು ಪ್ರೇಮ ನಿವೇದನೆ ಮಾಡಿಕೊಳ್ಳುವ ತವಕ. ಆದರೆ ಈ ಎರಡು ಪಯಣಗಳಿಗೆ ಸಿಗೋದು ಒಂದೇ ಕಾರು. ಅದರಲ್ಲಿಯೇ ಅಮೆರಿಕಾದಿಂದ ಕೆನಡಾದತ್ತ ಪಯಣ ಹೊರಡೋ ಈ ಇಬ್ಬರ ಜೊತೆಗೆ ಕೆಲ ವ್ಯಕ್ತಿಗಳ ರೂಪದಲ್ಲಿ ಬೆಚ್ಚಿ ಬೀಳಿಸುವಂಥಾ ಟ್ವಿಸ್ಟುಗಳು ಜಮೆಯಾಗುತ್ತಾ ಸಾಗುತ್ತವೆ.

    ಸಾಮಾನ್ಯವಾಗಿ ಇಂಥಾ ಜರ್ನಿಯ ಕಥೆಗಳೆಂದರೆ ಪ್ರೇಕ್ಷಕರಲ್ಲೊಂದು ಒಲವು ಇದ್ದೇ ಇರುತ್ತೆ. ಆದರೆ ಬಬ್ರೂವಿನದ್ದು ಯಾರ ಎಣಿಕೆಗೂ ಸಿಗದ ಜರ್ನಿ. ಇಲ್ಲಿ ಬಬ್ರೂ ರೋಚಕವಾದ ಕಥೆ ಹೇಳುತ್ತಲೇ ಇಡೀ ಅಮೆರಿಕಾದ ಸುಂದರ ತಾಣಗಳಲ್ಲಿ ರೌಂಡು ಹೊಡೆಸುತ್ತಾನೆ. ಈ ಹಾದಿಯಲ್ಲಿ ಸನಾ ಮತ್ತು ಅರ್ಜುನರ ಪಯಣದ ದಿಕ್ಕು ಚದುರಿಕೊಳ್ಳುವಂಥಾ ಚಿತ್ರವಿಚಿತ್ರವಾದ ಸನ್ನಿವೇಶಗಳು ಎದುರಾಗುತ್ತಾ ಕುತೂಹಲದ ಕಾವು ನೋಡುಗರಲ್ಲಿ ಬಿಸಿಯೇರಿಸಲಾರಂಭಿಸುತ್ತೆ. ಇದನ್ನೂ ಓದಿ: ಸೊಗಸಾಗಿದೆ ಬೆಳದಿಂಗಳ ಬಾಲೆಯ ‘ಬಬ್ರೂ’ ಟ್ರೇಲರ್!

    ಇಲ್ಲಿ ಒಂದೇ ಕಾರಿನಲ್ಲಿ ಸಾಗುವ ಸನಾ ಮತ್ತು ಅರ್ಜುನ್ ಒಬ್ಬರಿಗೊಬ್ಬರು ಪರಿಚಯವಿರೋದಿಲ್ಲ. ಆದರೆ ಎರಡು ಜೀವಗಳ ನಡುವೆ ಯಾವ ಪರಿಚಯದ ಹಂಗೂ ಇಲ್ಲದೇ ಒಂದು ಹೂ ನಗುವೇ ಎಲ್ಲವನ್ನೂ ಗೌಣವಾಗಿಸಿ ಬಿಡುತ್ತೆ. ಅಷ್ಟಕ್ಕೂ ಈ ಇಬ್ಬರ ದಿಕ್ಕುಗಳೂ ತೀವ್ರವಾದ್ದರಿಂದ ಒಬ್ಬರ ಬಗ್ಗೆ ಮತ್ತೊಬ್ಬರು ತಿಳಿದುಕೊಳ್ಳುವಂಥಾ ಯಾವ ವ್ಯವಧಾನವೂ ಇರೋದಿಲ್ಲ. ಹೀಗೆ ಪಯಣ ಸಾಗುತ್ತಲೇ ಬಬ್ರೂ ಕಾರು ಹಾದಿ ಮಧ್ಯೆಯೇ ಪಂಕ್ಚರ್ ಆಗುತ್ತೆ. ಅದಕ್ಕೆ ಪಕ್ಚರ್ ಹಾಕಲು ಬಂದ ಕ್ಯಾರೆಕ್ಟರೊಂದು ಇವರ ಪಯಣಕ್ಕೆ ಜೊತೆಯಾಗಿ ಬಿಡುತ್ತದೆ. ಹಾಗೆ ಜೊತೆಯಾಗೋ ಪಾತ್ರವನ್ನು ಹಾಲಿವುಡ್ ನಟ ರೇ ಟೊಸ್ಟಾಡೋ ನಿರ್ವಹಿಸಿದ್ದಾರೆ. ಈ ಪಾತ್ರದ ಪ್ರವೇಶವಾದ ಬಳಿಕ ನಿಜಕ್ಕೂ ಬಬ್ರೂ ಕಥೆ ರೋಚಕತೆಯತ್ತ ಮಗ್ಗುಲು ಬದಲಿಸಿಕೊಳ್ಳುತ್ತೆ.

    ಹೀಗೆ ಪಯಣ ಹೊರಟ ಮೂವರನ್ನು ಹಿಂಬಾಲಿಸೋ ಮತ್ತೋರ್ವ ರಕ್ಕಸ ವ್ಯಕ್ತಿತ್ವದವನು. ಆತ ಯಾರನ ನೋ ಹುಡುಕಾಡುತ್ತಿರುತ್ತಾನೆ. ಆ ಹುಡುಕಾಟ ಎಂಥಾದ್ದೆಂದರೆ ಅಡ್ಡ ಬಂದವರನ್ನೆಲ್ಲ ಕೊಂದು ಕೆಡವಿಕೊಂಡು ಮುಂದುವರೆಯುತ್ತಿರುತ್ತಾನೆ. ಅಂಥವನು ಯಾಕೆ ಈ ಮೂವರನ್ನು ಹಿಂಬಾಲಿಸುತ್ತಾನೆ, ಈ ಮೂವರ ಹಿನ್ನೆಲೆಗಳೇನು? ಇದೆಲ್ಲ ಎಲ್ಲಿಗೆ ತಲುಪಿಕೊಳ್ಳುತ್ತದೆ ಎಂಬ ಕುತೂಹಲಕ್ಕಿಲ್ಲಿ ಸರಿಕಟ್ಟಾದ ಉತ್ತರವೇ ಸಿದ್ಧವಿದೆ. ಚೂರೇ ಚೂರು ಯಡವಟ್ಟಾದರೂ ಗೋಜಲಾಗಿ ಗೊಂದಲದ ಗೂಡಾಗಿ ಬಿಡುವಂಥ ಇಲ್ಲಿನ ಸನ್ನಿವೇಶಗಳನ್ನು ನಿರ್ದೇಶಕ ಸುಜಯ್ ರಾಮಯ್ಯ ನಯ ನಾಜೂಕಿನಿಂದಲೇ ಹ್ಯಾಂಡಲ್ ಮಾಡಿದ್ದಾರೆ. ಸುಮನ್ ನಗರ್‍ಕರ್ ನಟನೆಯ ಬಗ್ಗೆ ಎರಡು ಮಾತಿಲ್ಲ. ಇಂಥಾ ಅನುಭವಸ್ಥ ನಟಿಗೆ ಮಹಿ ಹಿರೇಮಠ್ ಕೂಡಾ ಮೆಚ್ಚಿಕೊಳ್ಳುವಂತೆ ಸಾಥ್ ಕೊಟ್ಟಿದ್ದಾರೆ. ಗಾನಾ ಭಟ್ ಪುಟ್ಟ ಪಾತ್ರದಲ್ಲಿಯೇ ಮನಸಲ್ಲುಳಿಯುವಂತೆ ನಟಿಸಿದ್ದಾರೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಹಾಡುಗಳೆಲ್ಲವೂ ಬಬ್ರೂವನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಒಂದು ಅಪರೂಪದ ಜನೀಯ ಅನುಭವಕ್ಕಾಗಿ ಬಬ್ರೂವನ್ನು ನೋಡಬೇಕಿದೆ.  ಇದನ್ನೂ ಓದಿ:  ಬಿಡುಗಡೆಗೂ ಮುನ್ನವೇ ಬಬ್ರೂ ದಾಖಲೆ!

    ರೇಟಿಂಗ್ : 3.5 / 5

  • ಬಬ್ರೂಗೆ ಸ್ಯಾಂಡಲ್‍ವುಡ್ ಸ್ಟಾರ್ಸ್ ಬೆಂಬಲ!

    ಬಬ್ರೂಗೆ ಸ್ಯಾಂಡಲ್‍ವುಡ್ ಸ್ಟಾರ್ಸ್ ಬೆಂಬಲ!

    ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ನಟಿಸಿ ನಿರ್ಮಾಣ ಮಾಡಿರುವ ಚಿತ್ರ ಬಬ್ರೂ. ಈಗಾಗಲೇ ಅಷ್ಟ ದಿಕ್ಕುಗಳಿಂದಲೂ ಅಗಾಧ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಈ ವಾರ ಅಂದರೆ ಡಿಸೆಂಬರ್ 6ರಂದು ತೆರೆಗಾಣುತ್ತಿದೆ. ಸಾಮಾನ್ಯವಾಗಿ ಯಾವುದೇ ಹೊಸ ರೀತಿಯ ಪ್ರಯತ್ನಗಳು ನಡೆದರು ಸಹ ಕನ್ನಡ ಚಿತ್ರರಂಗದ ಸ್ಟಾರ್ ನಟರು ಸಾಥ್ ಕೊಡುತ್ತಾರೆ. ಅದೆಷ್ಟೇ ಬ್ಯುಸಿಯಾಗಿದ್ದರೂ ಹಲವು ರೀತಿಯಲ್ಲಿ ಬೆಂಬಲಿಸುತ್ತಾರೆ. ವಿಶಿಷ್ಟವಾದ ಕಥಾ ಹಂದರ ಹೊಂದಿರುವ ಬಬ್ರೂ ಚಿತ್ರಕ್ಕೂ ಸ್ಯಾಂಡಲ್‍ವುಡ್ ಸ್ಟಾರ್‍ಗಳ ಭರ್ಜರಿ ಬೆಂಬಲವೇ ಸಿಕ್ಕಿದೆ.  ಇದನ್ನೂ ಓದಿ:  ಬಿಡುಗಡೆಗೂ ಮುನ್ನವೇ ಬಬ್ರೂ ದಾಖಲೆ!

    ಈ ಚಿತ್ರದ ಹಾಡುಗಳನ್ನು ಒಂದೊಳ್ಳೆ ಮೊತ್ತಕ್ಕೆ ಖರೀದಿಸಿ ಪ್ರೋತ್ಸಾಹಿಸುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಬ್ರೂಗೆ ಬೆಂಬಲ ಸೂಚಿಸಿದ್ದರು. ನಂತರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸಂಜಿತ್ ಹೆಗ್ಡೆ ಹಾಡಿದ್ದ ಮಧುರವಾದ ಹಾಡೊಂದನ್ನು ಬಿಡುಗಡೆಗೊಳಿಸೋ ಮೂಲಕ ಸಾಥ್ ನೀಡಿ ಶುಭ ಕೋರಿದ್ದರು. ಆ ನಂತರದಲ್ಲಿ ಈ ಚಿತ್ರದ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದ್ದು ರಾಕಿಂಗ್ ಸ್ಟಾರ್ ಯಶ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಬೆಳದಿಂಗಳ ಬಾಲೆಯ ರೀಎಂಟ್ರಿಯಂತಿರೋ ಈ ಚಿತ್ರಕ್ಕೆ ಬೆಂಬಲ ಸೂಚಿಸಿ ಶುಭ ಕೋರಿದ್ದಾರೆ. ಇದು ಚಿತ್ರತಂಡಕ್ಕೆ ಹೊಸ ಹುರುಪು ತುಂಬೋದರ ಜೊತೆಗೆ ಗೆಲ್ಲುವ ಭರವಸೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಇದನ್ನೂ ಓದಿ: ಸೊಗಸಾಗಿದೆ ಬೆಳದಿಂಗಳ ಬಾಲೆಯ ‘ಬಬ್ರೂ’ ಟ್ರೇಲರ್!

    ಬಬ್ರೂ ಅತ್ಯಂತ ಅಪರೂಪದ ಕಥಾನಕವನ್ನೊಳಗೊಂಡಿರೋ ಚಿತ್ರವೆಂಬುದು ಈಗಾಗಲೇ ಸ್ಪಷ್ಟವಾಗಿದೆ. ಇದರ ಟ್ರೇಲರ್‍ನಲ್ಲಿಯೇ ಆ ಲಕ್ಷಣಗಳು ದಟ್ಟವಾಗಿ ಕಾಣಿಸಿವೆ. ಇದು ಸಂಪೂರ್ಣವಾಗಿ ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡಿರುವ ಕನ್ನಡದ ಮೊದಲ ಚಿತ್ರ. ಹಾಲಿವುಡ್ ತಂತ್ರಜ್ಞರು ಮತ್ತು ನಟರು ಇದರ ಭಾಗವಾಗಿದ್ದಾರೆ. ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರುವ ಈ ಸಿನಿಮಾದ ಮೇಲೆ ಕನ್ನಡದ ಪ್ರೇಕ್ಷಕರೆಲ್ಲ ಮೋಹಗೊಂಡಿದ್ದಾರೆ. ಜರ್ನಿಯಲ್ಲಿ ತೆರೆದುಕೊಳ್ಳುವ ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಕಥೆಯ ಬಬ್ರೂ ಪ್ರೇಕ್ಷಕರ ಮುಂದೆ ಬರಲು ಇನ್ನೆರಡು ದಿನಗಳು ಮಾತ್ರವೇ ಉಳಿದುಕೊಂಡಿವೆ. ಈ ಚಿತ್ರವನ್ನು ಸುಜಯ್ ರಾಮಯ್ಯ ನಿರ್ದೇಶನ ಮಾಡಿದ್ದರೆ, ಸುಮನ್ ನಗರ್‍ಕರ್ ಸನಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಮಹಿ ಹಿರೇಮಠ್ ನಾಯಕನಾಗಿ ಜೊತೆಯಾಗಿದ್ದಾರೆ. ಇದನ್ನೂ ಓದಿ: ‘ಬಬ್ರೂ’ ಈ ವಾರ ತೆರೆಗೆ

  • ‘ಬಬ್ರೂ’ ಈ ವಾರ ತೆರೆಗೆ

    ‘ಬಬ್ರೂ’ ಈ ವಾರ ತೆರೆಗೆ

    ಸುಮನ್ ನಗರಕರ್ ಪ್ರೊಡಕ್ಷನ್ಸ್ ಹಾಗೂ ಯುಗ ಕ್ರಿಯೆಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಬಬ್ರೂ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

    ಸುಜಯ್ ರಾಮಯ್ಯ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಸುಮುಖ್ ಹಾಗೂ ಸುಜಯ್ ರಾಮಯ್ಯ ಅವರ ಛಾಯಾಗ್ರಹಣ, ಬಿಂದು ಮಾಧವ ಸಂಕಲನ ಈ ಚಿತ್ರಕ್ಕಿದೆ. ವರುಣ್ ಶಾಸ್ತ್ರಿ ಅವರು ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಲೋಕೇಶ್ ಬಿ.ಎಸ್ ಅವರ ಸಹ ನಿರ್ದೇಶನ ಹಾಗೂ ನಿರ್ಮಾಣ ಮೇಲ್ವಿಚಾರಣೆಯಿದೆ. ಗುರುದೇವ್ ನಾಗರಾಜ(ಗುರು) ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಇದನ್ನೂ ಓದಿ:  ಬಿಡುಗಡೆಗೂ ಮುನ್ನವೇ ಬಬ್ರೂ ದಾಖಲೆ!

    ಸುಮನ್ ನಗರಕರ್, ಮಾಹಿ ಹಿರೇಮಠ್, ರೇತೊಸ್ತಾಡೊ, ಸನ್ನಿ ಮೋಜ, ಪ್ರಕೃತಿ ಕಶ್ಯಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ಸೊಗಸಾಗಿದೆ ಬೆಳದಿಂಗಳ ಬಾಲೆಯ ‘ಬಬ್ರೂ’ ಟ್ರೇಲರ್!

  • ಬಿಡುಗಡೆಗೂ ಮುನ್ನವೇ ಬಬ್ರೂ ದಾಖಲೆ!

    ಬಿಡುಗಡೆಗೂ ಮುನ್ನವೇ ಬಬ್ರೂ ದಾಖಲೆ!

    ನ್ನಡ ಚಿತ್ರರಂಗವೀಗ ಹೊಸ ಪ್ರಯತ್ನಗಳಿಂದ ಕಳೆಗಟ್ಟಿಕೊಂಡಿದೆ. ಇದನ್ನು ಮತ್ತಷ್ಟು ಮಿರುಗಿಸುವಂಥಾ ಚಿತ್ರಗಳೇ ಅಡಿಗಡಿಗೆ ತೆರೆಗಾಣುತ್ತಿರುವುದರಿಂದ ಕನ್ನಡದತ್ತ ಪರಭಾಷಾ ಚಿತ್ರರಂಗದ ಮಂದಿಯೂ ಬೆರಗಾಗಿ ನೋಡುವಂಥಾ ವಾತಾವರಣವನ್ನು ಸೃಷ್ಟಿಸಿದೆ. ಅದೇ ಸಾಲಿನಲ್ಲಿ ಮೂಡಿ ಬಂದಿರುವ ಚಿತ್ರ ಬಬ್ರೂ. ಇದು ಕನ್ನಡದಲ್ಲಿ ಇಂಥಾ ಚಿತ್ರವನ್ನೂ ರೂಪಿಸಲು ಸಾಧ್ಯವಾ ಎಂಬ ಪ್ರಶ್ನೆ ಕಾಡುವಷ್ಟು ಅಚ್ಚುಕಟ್ಟುತನದಿಂದ, ಹೊಸ ಪ್ರಯೋಗಗಳಿಂದ ರೂಪುಗೊಂಡಿರುವ ಚಿತ್ರ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೇಲರ್ ಮೂಲಕ ಪ್ರೇಕ್ಷಕರನ್ನೆಲ್ಲ ಆಕರ್ಷಿಸಿಕೊಂಡಿರುವ ಈ ಚಿತ್ರ ಇದೇ ಡಿಸೆಂಬರ್ 6ರಂದು ತೆರೆಗಾಣುತ್ತಿದೆ. ಅಚ್ಚರಿಯ ಸಂಗತಿಯೆಂದರೆ ಈ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಬರೆದು ಬಿಟ್ಟಿದೆ.

    ಅಮೆರಿಕದ ಸಿನಿ ಲಾಂಚ್‍ನಲ್ಲಿ ಈ ಸಿನಿಮಾದ ಪ್ರೀಮಿಯರ್ ಶೋವನ್ನು ನವೆಂಬರ್ ಎರಡರಂದೇ ಏರ್ಪಡಿಸಲಾಗಿತ್ತು. ಅದಕ್ಕೆ ಸಿಕ್ಕ ಬೆಂಬಲ ಮತ್ತು ಸಿನಿಮಾ ನೋಡಿ ವ್ಯಕ್ತಪಡಿಸಿದ ಅಭಿಪ್ರಾಯಗಳೇಲ್ಲವೂ ಬಬ್ರೂ ಗೆಲುವನ್ನು ನಿಚ್ಚಳವಾಗಿಸುವಂತಿವೆ. ಸಿನಿಲಾಂಚ್ ಮಾಲ್‍ನ ಏಳೂ ಪರದೆಗಳಲ್ಲಿ ಬಬ್ರೂ ಪ್ರದರ್ಶನಗೊಂಡಿವೆ. ಇದರ ಟಿಕೆಟುಗಳೆಲ್ಲವೂ ಅತ್ಯಂತ ವೇಗವಾಗಿ ಸೇಲಾಗಿ ಭರ್ಜರಿ ಪ್ರದರ್ಶನವನ್ನೂ ಕಂಡಿದೆ. ಬಬ್ರೂವನ್ನು ನೋಡಿದವರೆಲ್ಲರೂ ಮೆಚ್ಚಿ ಕೊಂಡಾಡಿದ್ದಾರೆ. ಅಂದಹಾಗೆ, ಅಮೆರಿಕಾದ ಸಿನಿ ಲಾಂಚ್‍ನ ಅಷ್ಟೂ ಪರದೆಗಳಲ್ಲಿ ಪ್ರದರ್ಶನ ಕಂಡ, ಹೌಸ್ ಫುಲ್ ಆಗುವಂತೆ ನೋಡಿಸಿಕೊಂಡ ಕನ್ನಡದ ಮೊದಲ ಚಿತ್ರವಾಗಿ ಬಬ್ರೂ ದಾಖಲಾಗಿದೆ.

    ಇದೊಂದು ಅನಿರೀಕ್ಷಿತ ಜರ್ನಿಯ ಕಥೆ. ಅದರಲ್ಲಿಯೇ ಪ್ರೀತಿ, ಪ್ರೇಮ ಮತ್ತು ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಕಥಾನಕ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಇದರ ಹೆಚ್ಚಿನ ಭಾಗ ಕಾರೊಳಗಿನ ಜರ್ನಿಯಲ್ಲಿಯೇ ಸಾಗುತ್ತದೆ. ಇದರಲ್ಲಿ ಈವರೆಗೆ ಯಾವ ಭಾಷೆಯ ಸಿನಿಮಾಗಳಲ್ಲಿಯೂ ಕಾಣಿಸದಿರುವಂಥಾ ಅಮೆರಿಕಾದ ಪ್ರದೇಶಗಳಿವೆ. ಕನ್ನಡಕ್ಕೆ ಅಪರೂಪದ್ದೆಂಬಂತೆ ಕಾಣುವ ಕಥೆಯೂ ಇದೆ. ಈ ಚಿತ್ರವನ್ನು ಸುಜಯ್ ರಾಮಯ್ಯ ನಿರ್ದೇಶನ ಮಾಡಿದ್ದಾರೆ. ಲೋಕೇಶ್ ಬಿ.ಎಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಯುಗ ಕ್ರಿಯೇಷನ್ಸ್ ಹಾಗೂ ಸುಮನ್ ನಗರ್‍ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ಬಬ್ರೂ ನಿರ್ಮಾಣಗೊಂಡಿದೆ. ಇಲ್ಲಿ ಸುಮನ್ ನಗರ್‍ಕರ್ ಮತ್ತು ಮಹಿ ಹಿರೇಮಠ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ನಿ ಮೋಜಾ, ರೇ ಟೊಸ್ಟಾದೋ, ಪ್ರಕೃತಿ ಕಶ್ಯಪ್, ಗಾನಾ ಭಟ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

  • ಹಾಲಿವುಡ್ ಕನ್ನಡ ಚಿತ್ರ ಬಬ್ರೂ!

    ಹಾಲಿವುಡ್ ಕನ್ನಡ ಚಿತ್ರ ಬಬ್ರೂ!

    ನ್ನಡಿಗರ ಪಾಲಿನ ಎವರ್ ಗ್ರೀನ್ ಬೆಳದಿಂಗಳ ಬಾಲೆ ಸುಮನ್ ನಗರ್‍ಕರ್ ಮರಳಿ ಬರುತ್ತಿದ್ದಾರೆಂಬ ಕಾರಣಕ್ಕೆ ಆರಂಭಿಕವಾಗಿ ಒಂದಷ್ಟು ಸದ್ದು ಮಾಡಿದ್ದ ಚಿತ್ರ ಬಬ್ರೂ. ಇತ್ತೀಚೆಗಷ್ಟೇ ಈ ಸಿನಿಮಾದ ಹಾಡು ಮತ್ತು ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾ ಇದೇ ಡಿಸೆಂಬರ್ 6ರಂದು ಬಿಡುಗಡೆಯಾಗೋದೂ ಪಕ್ಕಾ ಆಗಿದೆ. ಈ ಘಳಿಗೆಯಲ್ಲಿಯೇ ಬಬ್ರೂ ಟ್ರೇಲರ್ ಮೂಲಕ ಪ್ರೇಕ್ಷಕರಲ್ಲೊಂದು ಕಾತರ ಮೂಡಿಸುವಲ್ಲಿ ಯಶ ಕಂಡಿದೆ. ಅದಕ್ಕೆ ಕಾರಣವಾಗಿರೋದು ವಿಭಿನ್ನ ಕಥೆಯ ಲಕ್ಷಣ ಮತ್ತು ಅದರಲ್ಲಿನ ದೃಶ್ಯಗಳ ತಾಜಾತನ ಬೆರೆತ ಅದ್ಧೂರಿತನ. ಅಷ್ಟಕ್ಕೂ ಈ ಸಿನಿಮಾ ರೂಪುಗೊಂಡಿರುವ ರೀತಿಯೇ ಅಷ್ಟೊಂದು ವಿಶೇಷವಾಗಿದೆ.

    ಕನ್ನಡ ಸಿನಿಮಾ ಮಾಡುವ ಅನೇಕರಿಗೆ ಅಮೆರಿಕದಲ್ಲಿ ಚಿತ್ರೀಕರಣ ನಡೆಸಬೇಕು, ಅಲ್ಲಿನ ಸುಂದರ ಪ್ರದೇಶಗಳನ್ನು ಕಾಣಿಸಬೇಕೆಂಬ ಆಸೆ ಇರುತ್ತದೆ. ಆದರೆ ಒಂದೇ ಒಂದು ಹಾಡಿನ ಚಿತ್ರೀಕರಣ ನಡೆಸೋದರಲ್ಲಿ ಸುಸ್ತು ಹೊಡೆಯಬೇಕಾಗುತ್ತದೆ. ಅಂಥದ್ದರಲ್ಲಿ ಸಿನಿಮಾದ ಇತರೇ ಭಾಗಗಳ ಚಿತ್ರೀಕರಣವನ್ನು ಅಲ್ಲೇ ನಡೆಸೋದಕ್ಕೆ ಹರಸಾಹಸವನ್ನೇ ಪಡಬೇಕಾಗುತ್ತದೆ. ಬಬ್ರೂ ಚಿತ್ರದ ವಿಶೇಷತೆಗಳಿರುವುದು ಈ ವಿಚಾರದಲ್ಲಿಯೇ. ಈ ಇಡೀ ಚಿತ್ರವೇ ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಣಗೊಂಡಿದೆ. ಇದು ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡಿರುವ ಕನ್ನಡದ ಏಕೈಕ ಚಿತ್ರವೆಂಬ ಕೀರ್ತಿಗೂ ಭಾಜನವಾಗಿದೆ.

    ಈ ಚಿತ್ರವನ್ನು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರೇ ಸೇರಿಕೊಂಡು ರೂಪಿಸಿದ್ದಾರೆ. ಸುಜಯ್ ರಾಮಯ್ಯ ನಿರ್ದೇಶನದ ಈ ಚಿತ್ರವನ್ನು ಯುಗ ಕ್ರಿಯೇಷನ್ಸ್ ಹಾಗೂ ಸುಮನ್‍ನಗರ್‍ಕರ್ ಪೊಡ್ರಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸುಮನ್ ನಗರ್‍ಕರ್ ಇದರಲ್ಲಿ ಪ್ರಧಾನ ಪಾತ್ರವನ್ನೂ ನಿರ್ವಹಿಸಿದ್ದಾರೆ. ವಿಶೇಷವೆಂದರೆ ಇದರ ತಾಂತ್ರಿಕ ವರ್ಗದಲ್ಲಿಯೂ ಅಮೆರಿಕದವರೇ ಕಾರ್ಯ ನಿರ್ವಹಿಸಿದ್ದಾರೆ. ಒಂದಷ್ಟು ಮುಖ್ಯ ಪಾತ್ರಗಳನ್ನು ಅಮೆರಿಕದ ಕಲಾವಿದರು ನಿರ್ವಹಿಸಿದ್ದಾರೆ. ಇಷ್ಟೆಲ್ಲ ವಿಚಾರಗಳ ಆಧಾರದಲ್ಲಿ ನೋಡುವುದಾದರೆ ಇದನ್ನು ಹಾಲಿವುಡ್ ಕನ್ನಡ ಚಿತ್ರ ಎನ್ನಲಡ್ಡಿಯಿಲ್ಲ.

    ಸುಮನ್ ನಗರ್‍ಕರ್ ಅಖಂಡ ಹದಿನೈದು ವರ್ಷಗಳ ಬಳಿಕ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೂಲಕ ನಿರ್ಮಾಪಕಿಯಾಗಿಯೂ ಅವತಾರವೆತ್ತಿರುವ ಅವರು ಬಹಳಷ್ಟು ವರ್ಷಗಳ ಬಳಿಕ ಕನ್ನಡದ ಪ್ರೇಕ್ಷಕರನ್ನು ಮುಖಾಮುಖಿಯಾಗುತ್ತಿದ್ದಾರೆ. ಮಹಿ ಹಿರೇಮಠ್ ಮತ್ತೊಂದು ಪ್ರಧಾನ ಪಾತ್ರದಲ್ಲಿ ಜರ್ನಿಯ ಕ್ರೇಜ್ ಹೊಂದಿರೋ ಸೋಮಾರಿ ಹುಡುಗನಾಗಿ ನಟಿಸಿದ್ದಾರಂತೆ. ಈಗಾಗಲೇ ಬಿಡುಗಡೆಯಾಗಿರೋ ಟ್ರೇಲರ್ ಸೂಪರ್ ಹಿಟ್ ಆಗಿದೆ. ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಈ ಸಿನಿಮಾದತ್ತ ಪ್ರೇಕ್ಷಕ ವಲಯದಲ್ಲೊಂದು ಕಾತರ ಮನೆ ಮಾಡಿಕೊಂಡಿದೆ. ಈ ಚಿತ್ರಕ್ಕೆ ಲೋಕೇಶ್ ಬಿ.ಎಸ್ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಪಾಲಿಗೆ ಮೈಲಿಗಲ್ಲಿನಂತಹ ಈ ಚಿತ್ರ ಇದೇ ಡಿಸೆಂಬರ್ 6ರಂದು ತೆರೆಗಾಣುತ್ತಿದೆ.

  • ಸೊಗಸಾಗಿದೆ ಬೆಳದಿಂಗಳ ಬಾಲೆಯ ‘ಬಬ್ರೂ’ ಟ್ರೇಲರ್!

    ಸೊಗಸಾಗಿದೆ ಬೆಳದಿಂಗಳ ಬಾಲೆಯ ‘ಬಬ್ರೂ’ ಟ್ರೇಲರ್!

    ಬೆಂಗಳೂರು: ಸುಮನ್ ನಗರ್‍ಕರ್ ಪುನರಾಗಮನವಾಗುತ್ತಿದೆ ಎಂಬ ಕಾರಣದಿಂದಲೇ ಸುದ್ದಿ ಕೇಂದ್ರಕ್ಕೆ ಬಂದಿದ್ದ ಚಿತ್ರ ಬಬ್ರೂ. ಒಂದಷ್ಟು ಸಂಗತಿಗಳನ್ನು ಜಾಹೀರು ಮಾಡೋ ಮೂಲಕ ಚಿತ್ರತಂಡ ಬಬ್ರೂವಿನ ಬಗ್ಗೆ ಪ್ರೇಕ್ಷಕರೆಲ್ಲ ಗಮನ ಕೊಡುವಂತೆ ಮಾಡಿತ್ತು. ಒಂದೇ ನೋಟಕ್ಕೆ ಸೆಳೆಯುವಂತಹ ಪೋಸ್ಟರ್ ಗಳೊಂದಿಗೆ ತಾಜಾ ಅನುಭವ ನೀಡಿದ್ದ ಈ ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿತ್ತು. ಸಂಜಿತ್ ಹೆಗ್ಡೆ ಹಾಡಿದ್ದ ಈ ಹಾಡು ತನ್ನ ಮಾಧುರ್ಯದಿಂದ ಪ್ರಸಿದ್ಧಿ ಪಡೆಯೋದರ ಜೊತೆಗೆ ಬಬ್ರೂವನ್ನು ಕೂಡ ಮಿಂಚುವಂತೆ ಮಾಡಿತ್ತು. ಅದರ ಬಿಸಿ ಹಾಗೆಯೇ ಮುಂದುವರಿದಿರೋ ಈ ಹೊತ್ತಲ್ಲಿ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.

    ಇದೊಂದು ಪಯಣದ ಕಥೆ ಅನ್ನಿಸುವಂತೆ ತೆರೆದುಕೊಂಡು ಮತ್ಯಾವುದೋ ಅಗೋಚರ ಕಥೆಯ ಹೊಳಪು ನೀಡುವಂತೆ ಮೂಡಿ ಬಂದಿರೋ ಈ ಟ್ರೇಲರ್ ಗೆ ಎಲ್ಲ ಕಡೆಯಿಂದಲೂ ಮೆಚ್ಚುಗೆ ಕೇಳಿ ಬರುತ್ತಿದೆ. ಅದಕ್ಕೆ ತಕ್ಕುದಾದ ಉತ್ತಮ ಪ್ರತಿಕ್ರಿಯೆಗಳೂ ಸಿಗುತ್ತಿವೆ. ಲವಲವವಿಕೆಯಿಂದಲೇ ಸಾಗೋ ಪಯಣದ ಕಥೆ ಸಸ್ಪೆನ್ಸ್ ಥ್ರಿಲ್ಲರ್ ಜಾಡಿನತ್ತ ಹೊರಳಿಕೊಳ್ಳುವ ಮೂಲಕ ಕುತೂಹಲವನ್ನು ನೋಡುಗರ ಮನಸ್ಸಿಗೆ ದಾಟಿಸಿ ಈ ಟ್ರೆಲರ್ ಸಮಾಪ್ತಿಯಾಗುತ್ತದೆ.

    ಇದು ಸಂಪೂರ್ಣವಾಗಿ ಅಮೆರಿಕದಲ್ಲಿಯೇ ಚಿತ್ರೀಕರಣಗೊಂಡಿರೋ ಚಿತ್ರ. ಸುಜಯ್ ರಾಮಯ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಬ್ರೂ ಸುಮನ್ ನಗರ್‍ಕರ್ ಪ್ರೊಡಕ್ಷನ್ಸ್ ಮತ್ತು ಯುಗ ಕ್ರಿಯೇಷನ್ಸ್ ನಿರ್ಮಾಣದಲ್ಲಿ ಮೂಡಿ ಬಂದಿದೆ. ಸಂಪೂರ್ಣವಾಗಿ ಚಿತ್ರೀಕರಣ, ಕೆಲಸ ಕಾರ್ಯ ಮುಗಿಸಿಕೊಂಡಿರೋ ಬಬ್ರೂ ಇದೀಗ ಸಿನಿಮಾ ಮಂದಿರಗಳತ್ತ ಮುಖ ಮಾಡಿದೆ. ಬೆಳದಿಂಗಳ ಬಾಲೆ ಚಿತ್ರದಲ್ಲಿ ನಟಿಸಿ ಆ ಪಾತ್ರದ ಮೂಲಕವೇ ಇಂದಿಗೂ ಕನ್ನಡ ಪ್ರೇಕ್ಷಕರ ಮನಸ್ಸಲ್ಲಿ ಉಳಿದುಕೊಂಡಿರುವವರು ಸುಮನ್ ನಗರ್‍ಕರ್. ಅವರು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರದ ರೂಪುರೇಷೆಯೂ ಈ ಟ್ರೇಲರ್ ಮೂಲಕ ಅನಾವರಣಗೊಂಡಿದೆ.

    ಮಾಹಿ ಹಿರೇಮಠ್, ರೇ ತೊಸ್ತಾಡೋ, ಸನ್ನಿ ಮೋಜಾ, ಪ್ರಕೃತಿ ಕಶ್ಯಪ್ ಮೊದಲಾದ ಕಲಾವಿದರು ಬಬ್ರೂ ಚಿತ್ರದ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿಯವರ ಸಂಗೀತದಲ್ಲಿ ಮೂಡಿ ಬಂದಿರೋ ಹಾಡು ಈಗಾಗಲೇ ಫೇಮಸ್ ಆಗಿದೆ. ಈಗಾಗಲೇ ಸಿನಿಮಾ ಲಾಂಚ್‍ನಲ್ಲಿ ಪ್ರದರ್ಶನಗೊಂಡಿರೋ ಈ ಚಿತ್ರವನ್ನು ನೋಡಿ ವಿದೇಶದಲ್ಲಿ ನೆಲೆಸಿರೋ ಕನ್ನಡಿಗರು ಖುಷಿಗೊಂಡಿದ್ದಾರೆ. ಈ ಮೂಲಕ ಬಹು ಕಾಲದ ನಂತರ ಮರಳಿರುವ ಸುಮನ್ ನಗರ್‍ಕರ್ ಮತ್ತೆ ಕನ್ನಡಿಗರ ಮನಮುಟ್ಟುವ ತವಕದಲ್ಲಿದ್ದಾರೆ.