Tag: Baba Budan giri

  • ಪ್ರವಾಸಿಗರೇ ಗಮನಿಸಿ; ಕಾಫಿನಾಡ ಮುಳ್ಳಯ್ಯನಗಿರಿ-ದತ್ತಪೀಠ 3 ದಿನ ಬಂದ್!

    ಪ್ರವಾಸಿಗರೇ ಗಮನಿಸಿ; ಕಾಫಿನಾಡ ಮುಳ್ಳಯ್ಯನಗಿರಿ-ದತ್ತಪೀಠ 3 ದಿನ ಬಂದ್!

    ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ 3 ದಿನಗಳ ಕಾಲ ಉರುಸ್ (Urus) ನಡೆಯುವುದರಿಂದ ಚಿಕ್ಕಮಗಳೂರು (Chikkamagaluru) ಜಿಲ್ಲಾಡಳಿತ ಪ್ರವಾಸಿಗರಿಗೆ (Tourists) ಸಂಪೂರ್ಣ ನಿರ್ಬಂಧ ಹೇರಿದೆ.

    ಉರುಸ್ ಅಂಗವಾಗಿ ಜಿಲ್ಲಾಡಳಿತ 3 ದಿನಗಳ ಕಾಲ ಪಶ್ಚಿಮ ಘಟ್ಟಗಳ ತಪ್ಪಲು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ, ಗಾಳಿಕೆರೆ ಸೇರಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದೆ. ಇದೇ ಮಾರ್ಚ್ 15ರಿಂದ 17ರವರೆಗೆ 3 ದಿನಗಳ ಕಾಲ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ-ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ಮಾರ್ಚ್ 15 ರಿಂದ 17ವರೆಗೆ 3 ದಿನ ಉರುಸ್ ನಡೆಯುವ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿ ತಾಣಗಳಿಗೆ ನಿರ್ಬಂಧಿಸಿದೆ. ಇದನ್ನೂ ಓದಿ: ಮತಾಂತರ ಆಗುವಂತೆ ನನಗೆ ಒತ್ತಡ ಹೇರುತ್ತಿದ್ದರು: ಮಾಜಿ ಪಾಕ್ ಕ್ರಿಕೆಟಿಗ ಕನೇರಿಯಾ

    ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಮುಸ್ಲಿಂ ಬಾಂಧವರು ಉರುಸ್ ಆಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ಅಹಿತಕರ ಘಟನೆ ನಡೆಯಬಾರದು. ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಬಾರದು ಎಂದು ಜಿಲ್ಲಾಡಳಿತ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಇದನ್ನೂ ಓದಿ: ಐಪಿಎಸ್ ಸೂಚನೆಯಂತೆ ರನ್ಯಾಗೆ ಗ್ರೀನ್‌ಚಾನಲ್ – ಡಿಆರ್‌ಐ ಮುಂದೆ ಶಿಷ್ಟಾಚಾರ ಅಧಿಕಾರಿ ಹೇಳಿಕೆ

    ಚಿಕ್ಕಮಗಳೂರಿನಿಂದ ದತ್ತಪೀಠದ ಮಾರ್ಗದ ರಸ್ತೆ ಅತ್ಯಂತ ಚಿಕ್ಕದಾಗಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಬಾರದು ಜೊತೆಗೆ ಭದ್ರತೆಯ ದೃಷ್ಠಿಯಿಂದಲೂ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಆದರೆ, ಹೋಂ ಸ್ಟೇ ಹಾಗೂ ರೆಸಾರ್ಟ್ಗಳಿಗೆ ಮೊದಲೇ ಬುಕ್ ಮಾಡಿರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧವಿಲ್ಲ. ಪ್ರವಾಸಿಗರು ಬುಕ್ಕಿಂಗ್ ತೋರಿಸಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಮಾತ್ರ ಹೋಗಬಹುದು. ಇದನ್ನೂ ಓದಿ: ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ಕೋಚಿಂಗ್‌ಗೆ ಬಂದ ರಾಹುಲ್ ದ್ರಾವಿಡ್

    ಇನ್ನು ಗಿರಿ ಭಾಗದ ಕಾಫಿ ತೋಟಗಳಿಗೆ ಓಡಾಡುವ ಸ್ಥಳೀಯರಿಗೂ ಯಾವುದೇ ನಿರ್ಬಂಧವಿಲ್ಲ. ಉರುಸ್ ಆಚರಣೆ ಹಿನ್ನೆಲೆ ಪೊಲೀಸ್ ಕೂಡ ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಟಿದೆ. ಚಿಕ್ಕಮಗಳೂರು ನಗರ ಹಾಗೂ ದತ್ತಪೀಠದಲ್ಲಿ 800ಕ್ಕೂ ಅಧಿಕ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ: 6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ: ರನ್ಯಾ ತಪ್ಪೊಪ್ಪಿಗೆ

  • ದತ್ತಪೀಠಕ್ಕೆ ಡ್ರೆಸ್ ಕೋಡ್ ತನ್ನಿ- ಜಿಲ್ಲಾಡಳಿತಕ್ಕೆ ಶಾಖಾದ್ರಿ ಕುಟುಂಬ ಮನವಿ

    ದತ್ತಪೀಠಕ್ಕೆ ಡ್ರೆಸ್ ಕೋಡ್ ತನ್ನಿ- ಜಿಲ್ಲಾಡಳಿತಕ್ಕೆ ಶಾಖಾದ್ರಿ ಕುಟುಂಬ ಮನವಿ

    ಚಿಕ್ಕಮಗಳೂರು: ತಾಲೂಕಿನ ವಿವಾದಿತ ಪ್ರದೇಶ ಎಂದೇ ಖ್ಯಾತಿಯಾಗಿರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾಕ್ಕೆ(Inam Dattatreya Baba Budan Giri Swamy Dargah) ಡ್ರೆಸ್ ಕೋಡ್ (Dress Code) ಜಾರಿಗೆ ತನ್ನಿ ಎಂದು ಸಯೈದ್ ಬುಡೇನ್ ಶಾ ಖಾದ್ರಿ ವಂಶಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

    ಮುಸ್ಲಿಮರು (Muslims) ಈ ಜಾಗ ನಮ್ಮದು ಅಂದರೆ ಹಿಂದೂಗಳು (Hindu) ನಮ್ಮದು ಅಂತಾರೆ. ಅದರ ಉಮೇದುವಾರಿಕೆಗಾಗಿ 3 ದಶಕಗಳಿಂದ ಹೋರಾಟ ನಡೆಯುತ್ತಲೇ ಇದೆ. ಆ ಹೋರಾಟದ ಮಧ್ಯೆಯೂ ಮುಸ್ಲಿಂ ಸಂಘಟನೆಗಳು ದತ್ತಪೀಠದಲ್ಲಿ  ಡ್ರೆಸ್‌ ಕೋಡ್‌ ಜೊತೆಗೆ ಹೆಸರು ಬದಲಾವಣೆ ಮಾಡುವಂತೆ ಮನವಿ ಸಲ್ಲಿಸಿವೆ.

    ದತ್ತಪೀಠದಲ್ಲಿ ಡ್ರೆಸ್ ಕೋಡ್ ಜಾರಿಗೆ ತರುವುದರ ಜೊತೆ ರಸ್ತೆಯುದ್ಧಕ್ಕೂ ಇರುವ ದತ್ತಪೀಠ ನಾಮಫಲಕಗಳ ಬದಲಾಗಿ ಗೆಜೆಟೆಡ್ ದಾಖಲೆಯಂತೆ ಇನಾಂ ದತ್ರಾತ್ರೇಯ ಬಾಡಾಬುಡನ್ ಸ್ವಾಮಿ ದರ್ಗಾ ಎಂದು ಬದಲಿಸಬೇಕು. ಬಿಜೆಪಿ ಸರ್ಕಾರ (BJP Government) ದರ್ಗಾವನ್ನು ಮಾಯಮಾಡಿದೆ ಎಂದು ದೂರಿದ್ದಾರೆ. 

    ದತ್ತಪೀಠಕ್ಕೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಾರೆ. ನಿರ್ಬಂಧ ಹೊರತುಪಡಿಸಿ ದತ್ತಪೀಠಕ್ಕೆ ಪ್ರವಾಸಿಗರಿಲ್ಲದ ದಿನವೇ ಇಲ್ಲ. ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು ಬರುವವರು ಭಕ್ತಿ-ಭಾವದಿಂದ ಬರುವವರು ಇಬ್ಬರು ಸಮನಾಗಿದ್ದಾರೆ.

    ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ಪವಿತ್ರವಾದ ಸ್ಥಳ. ಅಲ್ಲಿ ಆರಂಭದಲ್ಲಿ ಹೇಗೆ ಭಾರತೀಯ ಸಾಂಪ್ರಾದಾಯಿಕ ಉಡುಗೆ-ತೊಡುಗೆ ಹಾಕಿಕೊಂಡು ಹೋಗುತ್ತಿದ್ದರೋ ಈಗಲೂ ಅದೇ ರೀತಿ ಡ್ರೆಸ್ ಕೋಡ್ ಜಾರಿಗೆ ತರುವಂತೆ ಶಾಖಾದ್ರಿ ವಂಶಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅವರ ಉಡುಗೆ ಅವರ ಸ್ವಾತಂತ್ರ್ಯ. ಆದರೆ ಇಲ್ಲಿಗೆ ಬರುವಾಗ ಸೀರೆ-ಚೂಡಿ-ಬುರ್ಖಾ-ಕುರ್ತಾ ಇರಲೆಂದು ಮನವಿ ಮಾಡಿದ್ದಾರೆ. ಅಲ್ಲಿ ದರ್ಗಾ, ಗೋರಿ, ಮಸೀದಿ, ದೇವರು ಎಲ್ಲಾ ಇದ್ದಾರೆ. ಅಲ್ಲಿ ಆಧುನಿಕ ಡ್ರೆಸ್ ಹಾಕಿಕೊಂಡು ಬರುವುದು ಎಷ್ಟು ಸರಿ ಎಂದು ಸರ್ಕಾರಕ್ಕೆ ಡ್ರೆಸ್‍ಕೋಡ್ ಜಾರಿ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಕಾಫಿನಾಡ ದತ್ತಪೀಠದ ಇತಿಹಾಸ ಏನು ಗೊತ್ತಾ?

    ಶಾಖಾದ್ರಿ ವಂಶಸ್ಥರು ದತ್ತಪೀಠದ ಹೆಸರನ್ನೂ ಬದಲಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಗೆಜೆಟೆಡ್ ದಾಖಲೆಗಳಲ್ಲಿ ದತ್ತಪೀಠದ ಹೆಸರು ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ಇದೆ. ಆದರೆ ಪ್ರವಾಸೋದ್ಯಮ ಇಲಾಖೆಯ ನಾಮಫಲಕಗಳಲ್ಲಿ ದತ್ತಪೀಠ ಎಂದು ಇದೆ. ಆದರೆ ಇನಾಂ ದತ್ತಾತ್ರೇಯ ಪೀಠ ಗ್ರಾಮದ ಹೆಸರು. 1991ರ ಕೋರ್ಟ್ ತೀರ್ಪೀನಲ್ಲಿ ದತ್ತಾತ್ರೇಯ 1, ದತ್ತಾತ್ರೇಯ 2 ಎಂದು ಹಳ್ಳಿಗಳಿದೆ. ಆ ಹಳ್ಳಿಗಳಿಗೆ ದತ್ತಾತ್ರೇಯ ಪೀಠ ಎಂದು ಹೆಸರು ಕೊಟ್ಟಿದ್ದಾರೆ. ಆದರೆ ಇತ್ತೀಚೆಗೆ ಅಲ್ಲಿ ದರ್ಗಾ ಹೆಸರೇ ಇಲ್ಲ. ಹಾಗಾಗಿ ದರ್ಗಾದ ಹೆಸರನ್ನೂ ಅಲ್ಲಿ ಹಾಕಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

    ಗೆಜೆಟೆಡ್ ದಾಖಲೆಗಳಲ್ಲಿ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ಸ್ವಾಮಿ ದರ್ಗಾ ಎಂದು ಇದೆ. ಅದೇ ಹೆಸರು ಇರಬೇಕು ಎಂದು ಹೇಳಿದ್ದಾರೆ. ಅದು ಗ್ರಾಮವಾಗಬೇಕು. ಇಲ್ಲ ದರ್ಗಾ ಅಂತ ಇರಬೇಕು. ಗ್ರಾಮ ಬೇಕಾದವರು ಗ್ರಾಮಕ್ಕೆ ಹೋಗುತ್ತಾರೆ. ದರ್ಗಾ ಬೇಕಾದವರು ದರ್ಗಾಕ್ಕೆ ಹೋಗುತ್ತಾರೆ. ಅದು ಬಾಬಾಬುಡನ್ ಗಿರಿ ದರ್ಗಾ ಅಂತ ಇತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರ ಅದರ ಹೆಸರನ್ನು ಬದಲಿಸಿದೆ ಎಂದು ಹಿಂದಿನ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

     

  • ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಕಾಫಿನಾಡ ದತ್ತಪೀಠದ ಇತಿಹಾಸ ಏನು ಗೊತ್ತಾ?

    ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಕಾಫಿನಾಡ ದತ್ತಪೀಠದ ಇತಿಹಾಸ ಏನು ಗೊತ್ತಾ?

    ರ್ನಾಟಕದ ಅಯೋಧ್ಯೆ (Ayodhya Of Karnataka) ಎಂದೇ ಖ್ಯಾತಿಯಾಗಿರುವ ವಿವಾದಿತ ಧಾರ್ಮಿಕ ಕ್ಷೇತ್ರ ದತ್ತಪೀಠ. ಹಿಂದೂಗಳು ಇದನ್ನ ಇನಾಂ ದತ್ತಾತ್ರೇಯ ಪೀಠ ಎಂದು ಕರೆದರೆ, ಮುಸ್ಲಿಮರು ಬಾಬಾಬುಡನ್ ಗಿರಿ ದರ್ಗಾ ಎಂದು ನಂಬಿದ್ದಾರೆ. ಆದರೆ ಕಳೆದ ನಾಲ್ಕು ದಶಕಗಳಿಂದ ಇದರ ಉಮೇದುವಾರಿಕೆಗಾಗಿ ಹಿಂದೂ-ಮುಸ್ಲಿಮರು ಹೋರಾಡುತ್ತಿದ್ದಾರೆ. ಪ್ರಕರಣ ಪ್ರಸ್ತುತ ನ್ಯಾಯಾಲಯದಲ್ಲಿರುವುದರಿಂದ ಸರ್ಕಾರ ಇದನ್ನ ʼಇನಾಂ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾʼ ಎಂದು ಕರೆಯುತ್ತಿದೆ. ವರ್ಷಪೂರ್ತಿ ಎರಡು ಕೋಮಿನ ಭಕ್ತರು ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಹಿಂದೂ ಸಂಘಟನೆಗಳು ದತ್ತಪೀಠದಲ್ಲಿ ದತ್ತಜಯಂತಿ ಆಚರಿಸಿದರೆ, ಮುಸ್ಲಿಮರು ಉರುಸ್ ಆಚರಿಸುತ್ತಾರೆ. ಈ ಎರಡೂ ಕಾರ್ಯಕ್ರಮ ಕೂಡ ಸರ್ಕಾರದ ನೆರಳಿನಲ್ಲೇ ನಡೆಯುತ್ತಿದೆ. ಆದರೆ ಈ ಪುಣ್ಯಕ್ಷೇತ್ರ ನಮ್ಮದು ಎಂದು ಎರಡು ಸಮುದಾಯದ ಜನ ಇಂದಿಗೂ ಹೋರಾಡೋದು ಮಾತ್ರ ನಿಂತಿಲ್ಲ, ನಿಲ್ಲೋದು ಇಲ್ಲ.

    ಪಶ್ಚಿಮಘಟ್ಟ (Western Ghat) ಅಂದ್ರೆನೆ ಭೂಲೋಕದ ಸ್ವರ್ಗ. ಮುಗಿಲೆತ್ತರದ ಬೆಟ್ಟಗುಡ್ಡಗಳು. ಕಣ್ಣಿನ ದೃಷ್ಠಿಗೂ ಮುಗಿಯದ ನಿಸರ್ಗ ಮಾತೆಯ ಸೌಂದರ್ಯ. ತಣ್ಣನೆಯ ಗಾಳಿ, ಮೈಕೊರೆವ ಚಳಿ. ವರ್ಷದ 365 ದಿನವೂ ತುಂಬು ಮುತ್ತೈದೆಯಂತಿರೋ ಇಲ್ಲಿನ ಪ್ರಕೃತಿ ದೇವಿ ಸೌಂದರ್ಯ ಮುಂದೆ ಜಗತ್ತಿನ ಎಲ್ಲಾ ಸೌಂದರ್ಯವೂ ನಶ್ವರ. ಇದರ ಅಂದ ಬರೆಯೋಕೆ ಪುಟಗಳು ಸಾಲದು, ವರ್ಣಿಸೋಕೆ ಪದಪುಂಜವೇ ಸಾಲದು. ಇಲ್ಲಿನ ಅಂತಹಾ ವನದೇವಿಯ ಮಧ್ಯೆ ನೆಲೆನಿಂತಿರೋದು ದತ್ತಾತ್ರೇಯ ಸ್ವಾಮಿ. ಆ ಸುಂದರ ಪ್ರಕೃತಿಯ ಮಧ್ಯೆ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆಯೋದೇ ಪುಣ್ಯ ಅನ್ನೋದು ಭಕ್ತರ ನಂಬಿಕೆ. ಹಾಗಾಗಿ ವರ್ಷಪೂರ್ತಿ ಇಲ್ಲಿಗೆ ಲಕ್ಷಾಂತರ ಹಿಂದೂಗಳು ಭೇಟಿ ನೀಡಿ ಪ್ರಕೃತಿಯ ಜೊತೆ ದತ್ತಾತ್ರೇಯ ಸ್ವಾಮಿ ದರ್ಶನ ಕೂಡ ಮಾಡುತ್ತಿದ್ದಾರೆ. ಈ ಪ್ರಕೃತಿಯ ತವರಿನಲ್ಲಿ ಗುರು ದತ್ತಾತ್ರೇಯ ಸ್ವಾಮಿ ಜೊತೆ, ಮಾತೆ ಅನುಸೂಯಾ ದೇವಿಯೂ ನೆಲೆಸಿದ್ದಾರೆ ಅನ್ನೋದು ದತ್ತಭಕ್ತರ ನಂಬಿಕೆ. ಈ ಮಣ್ಣು ಅತ್ರಿ ಮುನಿಗಳು ಬದುಕಿ-ಬಾಳಿದ್ದ ಪುಣ್ಯ ಭೂಮಿ. ಅತ್ರಿಮುನಿಗಳು ತಪಸ್ಸು ಮಾಡಿ, ಶಿಷ್ಯರಿಗೆ ಪಾಠ ಮಾಡಿದ, ಭಕ್ತರಿಗೆ ಅನುಗ್ರಹಿಸಿದ್ದ ತಪೋಭೂಮಿ. ಈ ಎಲ್ಲಾ ಅಂಶಗಳು ಕೂಡ ಶ್ರೀ ದತ್ತ ಭಾಗವತದಲ್ಲಿ ಉಲ್ಲೇಖವಿದೆ. ಇಂತಹ ಗುರು ಪರಂಪರೆಯ ತಪೋಭೂಮಿ ಕಳೆದ ನಾಲ್ಕೈದು ದಶಕಗಳಿಂದ ಹಿಂದೂ ಸಮಾಜದಿಂದ ದೂರವಾಗುವ ಹಂತಕ್ಕೆ ತಲುಪಿದೆ ಅನ್ನೋದು ಹಿಂದೂಗಳ ಆತಂಕ. ಇದನ್ನೂ ಓದಿ: ಕಾಫಿನಾಡಿನ ಸ್ವರ್ಗ ಮುಳ್ಳಯ್ಯನಗಿರಿ ನೀವೂ ಭೇಟಿ ಕೊಡಿ

    ದತ್ತಪೀಠಕ್ಕೆ (Dattapeeta) ತಲೆಮಾರುಗಳಿಂದ ನಡೆದುಕೊಳ್ಳುತ್ತಿರುವ ಭಕ್ತಗಣವಿದೆ. ಇತಿಹಾಸದಲ್ಲಿ ರಾಜ-ಮಹಾರಾಜರುಗಳು, ಮಠ-ಮಂದಿರಗಳು ಇಲ್ಲಿಗೆ ಭಕ್ತಿ ಸಮರ್ಪಣೆ ಮಾಡುತ್ತಿದ್ದರು. ಕೆಳದಿಯ ಚೆನ್ನಮ್ಮ ಇಲ್ಲಿ ಯಾತ್ರಿನಿವಾಸವನ್ನ ಕಟ್ಟಿಸಿದ್ದಳು. ಆನೆಗುಂದಿ ಅರಸರು ಇಪ್ಪತ್ತು ಗ್ರಾಮಗಳನ್ನ ದತ್ತಪೀಠಕ್ಕೆ ಕೊಡುಗೆ ನೀಡಿದ್ದರು. ಮೈಸೂರು ಅರಸರು ಪೀಠಕ್ಕೆ ಸಾವಿರಾರು ಎಕರೆ ಭೂಮಿಯನ್ನ ದಾನ ನೀಡಿದ್ದರು. ಅಷ್ಟೆ ಅಲ್ಲದೆ ದತ್ತಾತ್ರೇಯರಿಗೆ ನಿತ್ಯ ಪೂಜಾ-ಕೈಂಕರ್ಯಕ್ಕೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಸೌಲಭ್ಯ ಕಲ್ಪಿಸಿದ್ದರು. ಮೈಸೂರು ಅರಸರು ಸಾವಿರಾರು ಎಕರೆಯನ್ನ ಇನಾಂ ನೀಡಿದ ಪರಿಣಾಮ ಅಂದಿನಿಂದಲೂ ಈ ಧಾರ್ಮಿಕ ಕ್ಷೇತ್ರ ಇನಾಂ ದತ್ತಾತ್ರೇಯ ಪೀಠ ಎಂದೇ ಜನಜನಿತವಾಗಿದೆ.

    18ನೇ ಶತಮಾನದ ಆಸು-ಪಾಸಿನಲ್ಲಿ ಸೂಫಿ ಪರಂಪರೆಯ ಹಜರತ್ ದಾದಾ ಹಯಾತ್ ಮೀರ್ ಖಲಂದರ್ ಇಲ್ಲಿಗೆ ಭೇಟಿ ನೀಡಿ, ಇಲ್ಲಿಯೇ ವಾಸ್ತವ್ಯ ಹೂಡಿದ್ದರು. ಅಂದಿನಿಂದ ಮುಸ್ಲಿಮರು ಇಲ್ಲಿಗೆ ಬರಲು ಆರಂಭಿಸಿದ್ದರು. ಮೈಸೂರು ಸಂಸ್ಥಾನವನ್ನ ವಶಪಡಿಸಿಕೊಂಡ ಹೈದರಾಲಿ ಶ್ರೀರಂಗಪಟ್ಟಣದ ಇಸ್ಮಾಯಿಲ್ ಶಾಖಾದ್ರಿ ಎಂಬ ಫಕೀರರನ್ನ ಕೆಲಸಕ್ಕೆಂದು ನೇಮಿಸಿತ್ತು. ಆದರೆ ಅವರಿಗೆ ಮಕ್ಕಳಿಲ್ಲದ ಕಾರಣ ಅವರು ಬುಡನ್ ಹಾಗೂ ಸೈಯ್ಯದ್ ಎಂಬ ಇಬ್ಬರು ಮಕ್ಕಳನ್ನ ದತ್ತು ಸ್ವೀಕಾರ ಮಾಡುತ್ತಾರೆ. ಮುಂದೆ ಆಡಳಿತಕ್ಕೆ ಬಂದ ಟಿಪ್ಪು ಇದೇ ಬುಡನ್ ನನ್ನ ದತ್ತಪೀಠದ ಆಡಳಿತಕ್ಕಾಗಿ ನೇಮಕ ಮಾಡುತ್ತಾನೆ. ದತ್ತಪೀಠಕ್ಕೆ ಬಂದ ಬುಡನ್ ಶಾಖಾದ್ರಿ ಓರ್ವ ವ್ಯವಸ್ಥಾಪಕನ ಕೆಲಸಕ್ಕಾಗಿ ಬಂದದ್ದು ವಿನಃ ಆತ ಎಂದೂ ಧಾರ್ಮಿಕ ಗುರು ಆಗಿರಲಿಲ್ಲ. ಅಂದಿನಿಂದ ದತ್ತಪೀಠದ ವ್ಯವಸ್ಥಾಪಕರಾಗಿ ಶಾಖಾದ್ರಿ ಮನೆತನ ಖಾಯಂಗೊಂಡಿದೆ ಅನ್ನೋದು ಹಿಂದೂ ಸಮುದಾಯ ಹಾಗೂ ದತ್ತಪೀಠದ ಹೋರಾಟಗಾರರ ವಾದ, ನಂಬಿಕೆಯಾಗಿದೆ.

    1917ರಲ್ಲಿ ಬ್ರಿಟಿಷರು ಇದನ್ನ ಹಿಂದೂಗಳ ಧಾರ್ಮಿಕ ಕ್ಷೇತ್ರವೆಂದು ಗುರುತಿಸಿ ಮುಜರಾಯಿ ಇಲಾಖೆಗೆ ಸೇರಿಸಿದ್ದರಂತೆ. ಆದರೆ ಮುಜರಾಯಿ ಇಲಾಖೆಯಲ್ಲಿದ್ದ ದತ್ತಪೀಠವನ್ನ 1974ರಲ್ಲಿ ವಕ್ಫ್ ಬೋರ್ಡ್ ಗೆ ಸೇರಿಸಲಾಗಿದೆ ಎಂದು ದತ್ತಪೀಠದ ಹೋರಾಟಗಾರರು ಹೇಳುತ್ತಾರೆ. ಅಂದಿನಿಂದ ಸರ್ಕಾರದ ನಡೆಯನ್ನ ವಿರೋಧಿಸಿ ಹೋರಾಟಗಳು ಅಡಿಇಟ್ಟಿವೆ. 1980ರಿಂದ ಮತ್ತೆ ದತ್ತ ಜಯಂತಿಯ ದಿನ ಪೀಠಕ್ಕೆ ಹೋಗುವ ಸಂಪ್ರದಾಯ ಜನ್ಮತಾಳಿತು. 1980ರ ದಶಕದಲ್ಲೇ ದತ್ತಪೀಠದ ಹೋರಾಟಕ್ಕೆ ಸಮಿತಿ ಕೂಡ ರಚನೆಯಾಗಿತ್ತು. 1992ರಲ್ಲಿ ಆದಿಚುಚಂನಗಿರಿ ಪೀಠಾಧ್ಯಕ್ಷರ ನೇತೃತ್ವದಲ್ಲಿ ದತ್ತಪೀಠಕ್ಕೆ ತೆರಳಿದ್ದ ಹಿಂದೂ ಕಾರ್ಯಕರ್ತರು ದತ್ತಪೀಠದಲ್ಲಿ ಭಗವಧ್ವಜ ಹಾರಿಸಿದ್ದರು. ಅದೇ ಕಾರಣಕ್ಕೆ ಪೊಲೀಸರು ಲಾಠಿಚಾರ್ಜ್ ಮಾಡಿ ಹಲವರನ್ನ ಬಂಧಿಸಿದ್ದರು. ದತ್ತಪೀಠದ ಮುಕ್ತಿಗಾಗಿ ಹೋರಾಡುತ್ತಿದ್ದ ಕಾರ್ಯಕರ್ತರು ತಿಂಗಳುಗಟ್ಲೆ ಜೈಲುವಾಸ ಕೂಡ ಅನುಭವಿಸಿದ್ದರು.

    1980ರ ನಂತರ ದತ್ತಪೀಠದ ಹೋರಾಟದ ರೂಪುರೇಷೆ ಬದಲಾಗುತ್ತಾ ಸಾಗಿತು. ದತ್ತಪೀಠದ ಮುಕ್ತಿಗಾಗಿ 96-97ರಲ್ಲಿ ರಥಯಾತ್ರೆಗಳು ಆರಂಭವಾದವು. ನಾಡಿನಾದ್ಯಂತ ಜನಜಾಗೃತಿ ಉಂಟಾಯಿತು. ದತ್ತ ಜಯಂತಿ ಜೊತೆ ಒಂದು ವಾರಗಳ ಕಾಲ ಯಾವುದೇ ಜಾತಿ-ಬೇಧವಿಲ್ಲದೇ ದತ್ತ ಮಾಲಾಧಾರಣೆ ಮಾಡಿ, ವೃತವನ್ನ ಆಚರಿಸಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ, ಇರುಮುಡಿ ಸಮರ್ಪಣೆಗಳು ಆರಂಭವಾದವು. ಅಂದಿನಿಂದ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಈ ಹೋರಾಟಕ್ಕೆ ಶಕ್ತಿಯಾಗಿ ನಿಂತವು. 1980ರಿಂದ 20 ವರ್ಷಗಳ ನಿರಂತರ ಹೋರಾಟ ಹಾಗೂ ಜನಜಾಗೃತಿಯಿಂದ 2000ನೇ ಇಸವಿ ವೇಳೆಗೆ ದತ್ತಪೀಠದ ದತ್ತಜಯಂತಿಗೆ ಬರುವವರ ಸಂಖ್ಯೆ 50 ಸಾವಿರ ದಾಟಿತ್ತು. 2002ರ ಕಾಂಗ್ರೆಸ್ ಸರ್ಕಾರದ ಸಚಿವ ದಿ.ಡಿ.ಬಿ.ಚಂದ್ರೇಗೌಡರೇ ದತ್ತಪೀಠದ ದತ್ತಜಯಂತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದರು. ಆದರೆ 2004ರ ಬಳಿಕ ಪೀಠದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದು ಹೋಮ-ಹವನಕ್ಕೆ ನಿಷೇಧ ಹೇರಲಾಯಿತು. ಆಗ ಹಿಂದೂ ಸಂಘಟನೆಗಳ ಹೋರಾಟ ಉಗ್ರರೂಪ ತಾಳಿತ್ತು. ಆಗಿನ್ನು ನೂತನವಾಗಿ ಶಾಸಕರಾಗಿದ್ದ ಸಿ.ಟಿ.ರವಿ ಸೇರಿ ಸಾಕಷ್ಟು ಕಾರ್ಯಕರ್ತರು ವಾರಗಟ್ಟಲೇ ಜೈಲಲ್ಲಿದ್ದರು. ಆದರೆ ಪ್ರಮುಖರ ಬಂಧನದ ಮಧ್ಯೆಯೂ ಚಿಕ್ಕಮಗಳೂರಿನ ನಾಲ್ಕು ದಿಕ್ಕಿನಿಂದಲೂ ಸಾವಿರಾರು ದತ್ತಭಕ್ತರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿದ್ದು ಈಗ ಇತಿಹಾಸ.

    ಕಳೆದ ಮೂರ್ನಾಲ್ಕು ದಶಕಗಳಿಂದಲೂ ದತ್ತಪೀಠದ ಉಮೇದುವಾರಿಕೆಗಾಗಿ ಎರಡು ಸಮುದಾಯದವರು ಕೋರ್ಟ್ ಹೊರಗೆ ಹಾಗೂ ಒಳಗೆ ಹೋರಾಡುತ್ತಿದ್ದಾರೆ. ಪ್ರಕರಣ ಸುಪ್ರಿಂಕೋರ್ಟ್ ಕಟಕಟೆ ಕೂಡ ಹತ್ತಿದೆ. 2013ರಲ್ಲಿ ಕಾಂಗ್ರೆಸ್ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ದತ್ತಪೀಠದ ಉಮೇದುಗಾರಿಕೆ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಸೂಚಿಸಿತ್ತು. ಆದರೆ ನಾಗಮೋಹನ್ ದಾಸ ವರದಿ ಇದು ಮುಸ್ಲಿಮರಿಗೆ ಸೇರಿದ್ದು ಎಂದು ವರದಿ ನೀಡಿದ್ದರಿಂದ ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲೇರಿದ್ದವು. ನಾಗಮೋಹನ್ ದಾಸ್ ವರದಿಯನ್ನ ಕೋರ್ಟ್ ವಜಾ ಮಾಡಿತ್ತು. ಇದೀಗ ಕಳೆದ ಸಾಲಿನಲ್ಲಿದ್ದ ಬಿಜೆಪಿ ಸರ್ಕಾರ ದತ್ತಪೀಠದ ವ್ಯವಸ್ಥಾಪನಾ ಸಮಿತಿಯನ್ನ ನೇಮಕ ಮಾಡಿದೆ. ಈ ವ್ಯವಸ್ಥಾಪನಾ ಸಮಿತಿಯ ನೇತೃತ್ವದಲ್ಲಿ ಅರ್ಚಕರ ನೇಮಕವಾಗಿ, ಈಗ ಪ್ರತಿನಿತ್ಯ ತ್ರಿಕಾಲ ಪೂಜೆ ನೆರವೇರುತ್ತಿದೆ. ನಾಲ್ಕು ದಶಕಗಳ ಹೋರಾಟದ ಫಲವಾಗಿ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಗಿ ತ್ರಿಕಾಲ ಪೂಜೆ ನಡೆಯುತ್ತಿದೆ. ಆದರೆ ದತ್ತಪೀಠ ಸಂಪೂರ್ಣ ಹಿಂದೂಗಳಿಗೆ ಸೇರಬೇಕು. ಇಲ್ಲಿರುವ ಗೋರಿಗಳು ನಾಗೇನಹಳ್ಳಿಗೆ ಸ್ಥಳಾಂತರ ಆಗಬೇಕು. ಹಿಂದೂಗಳ ದತ್ತಪೀಠವೇ ಬೇರೆ. ಮುಸ್ಲಿಮರ ದರ್ಗಾವೇ ಬೇರೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರೋದು ದತ್ತಪೀಠ. ದತ್ತಪೀಠದಿಂದ 14 ಕಿ.ಮೀ. ದೂರದಲ್ಲಿರುವ ನಾಗೇನಹಳ್ಳಿಯಲ್ಲಿರೋದು ಮುಸ್ಲಿಮರ ದರ್ಗಾ. ದತ್ತಪೀಠ ಬಂದಮುಕ್ತವಾಗಬೇಕು. ಇಲ್ಲಿರುವ ಘೋರಿಗಳು ಸ್ಥಳಾಂತರವಾಗಬೇಕು. ಅಲ್ಲಿವರೆಗೂ ನಮ್ಮ ಹೋರಾಟ ವಿಶ್ರಮಿಸಲ್ಲ ಅನ್ನೋದು ಹೋರಾಟಗಾರರ ವಾದ ಹಾಗೂ ಸಂಕಲ್ಪವಾಗಿದೆ.

     

     

  • ಚಿಕ್ಕಮಗಳೂರು ಕ್ಷೇತ್ರ ಪರಿಚಯ – ಅಖಾಡ ಹೇಗಿದೆ?

    ಚಿಕ್ಕಮಗಳೂರು ಕ್ಷೇತ್ರ ಪರಿಚಯ – ಅಖಾಡ ಹೇಗಿದೆ?

    ಒಂದು ಕಡೆ ದತ್ತಮಾಲೆ ವಿವಾದ, ಮತ್ತೊಂದ್ಕಡೆ ಕೆಂಪು ಉಗ್ರರ ಹೆಜ್ಜೆಯ ಸಪ್ಪಳ, ಬಗರ್ ಹುಕುಂ ಒತ್ತುವರಿಯ ಗುಟುರು. ಕಾಫಿ ಕಹಿಯಾಗೋಕೆ ಇದಕ್ಕಿಂತ ಏನು ಬೇಕು..? ಅಂದ ಹಾಗೆ, ಇವತ್ತಿನ ಕ್ಷೇತ್ರ ಪರಿಚಯದಲ್ಲಿ ಕಾಫಿ ನಾಡು ಚಿಕ್ಕಮಗಳೂರಿನ ಸ್ವಾರಸ್ಯಕರ ಸಂಗತಿಯ ಜೊತೆಗೆ ರಾಜಕೀಯ ಚಿತ್ರಣವನ್ನೂ ನಿಮ್ಮ ಮುಂದೆ ಇಡ್ತಾ ಇದ್ದೇವೆ.

    ಚಿಕ್ಕಮಗಳೂರು ಹೆಸರ ಹಿಂದಿದೆ ಸುಂದರ ಕಹಾನಿ
    ಚಿಕ್ಕಮಗಳೂರು ಹೆಸರಲ್ಲೇ ಇದೆ ಇದು ಚಿಕ್ಕಮಗಳ ಊರು ಅನ್ನೋದು. ಆದ್ರೆ, ಇದು ಯಾರ ಚಿಕ್ಕ ಮಗಳ ಊರು ಅಂತಾ ಕೇಳಿದ್ರೆ ಅದ್ರ ಹಿಂದೆಯೂ ಸುಂದರ ಕಹಾನಿ ಇದೆ. ಸಖರಾಯ ಪಟ್ಟಣದ ಮುಖ್ಯಸ್ಥ ರುಕ್ಮಾಂಗದ ಈ ಊರನ್ನ ತನ್ನ ಚಿಕ್ಕಮಗಳಿಗೆ ಉಡುಗೊರೆ ರೂಪದಲ್ಲಿ ಕೊಟ್ಟ ಅನ್ನೋದಾಗಿ ಇತಿಹಾಸ ಹೇಳುತ್ತೆ. ಇಲ್ಲಿಂದ ಐದು ಕಿಲೋ ಮೀಟರ್ ದೂರಕ್ಕೆ ಹೋದ್ರೆ, ಹಿರಿಯ ಮಗಳ ಊರು ಕೂಡಾ ಇದೆ. ಹಳೆಯ ಶಾಸನಗಳು ಹೇಳುವಂತೆ ಮೊದಲು ಈ ಎರಡು ಊರುಗಳನ್ನ ಕಿರಿಯ ಮುಗುಲಿ ಹಾಗೂ ಹಿರಿಯ ಮುಗುಲಿ ಅಂತಾ ಕರೆಯಲಾಗ್ತಿತ್ತಂತೆ. ಇದು ಕಾಫಿ ನಾಡಿಗೂ ಮಗಳಿಗೂ ಇರುವ ಭಾವನಾತ್ಮಕ ನಂಟು..!

    ಕಾಫಿನಾಡಲ್ಲಿ ಮೊದಲ ಕಾಫಿ ಬೀಜ ಬಿತ್ತಿದ್ದು ಯಾರ್ ಗೊತ್ತಾ..?
    ಚಿಕ್ಕಮಗಳೂರಿನ ಗಿರಿ ಶ್ರೇಣಿಗಳು ಪಶ್ಚಿಮ ಘಟ್ಟದ ಒಂದು ಭಾಗ. ತುಂಗೆ ಮತ್ತು ಭದ್ರೆಯರ ತವರೂರು. ಇಲ್ಲಿರೋ ಬಾಬಾ ಬುಡನ್ ಬೆಟ್ಟದಲ್ಲಿ ಅರೇಬಿಕಾ ಕಾಫಿಯನ್ನ ಉತ್ಪಾದಿಸ್ತಾರೆ. ಅಂಧ ಹಾಗೆ, ಚಿಕ್ಕ ಮಗಳೂರಿಗೆ ಕಾಫಿ ಹೇಗೆ ಬಂತು? ಅದ್ರ ಇತಿಹಾಸ ಏನು ಅನ್ನೋದನ್ನ ಕೆದಕ್ತಾ ಹೋದ್ರೆ, 17ನೇ ಶತಮಾನದ ಇತಿಹಾಸದ ಪುಟಗಳಿಂದ ಕಾಫಿ ವಾಸನೆ ಬರುತ್ತದೆ. 17ನೇ ಶತಮಾನದಲ್ಲಿ ಬಹೌದ್ ದಿನ್ ಅಥವಾ ಬಾಬಾ ಬುಡನ್ ಅನ್ನೋ ಸೂಫಿ ಸಂತ ಇದ್ರು. ಅವ್ರು ಇಲ್ಲಿರೋ ಬೆಟ್ಟಗಳ ಗುಹೆಗಳಲ್ಲಿ ನೆಲೆ ಕಂಡುಕೊಳ್ತಿದ್ರು. ಸುಮಾರು ಕ್ರಿಸ್ತ ಶಕ 1670ರಲ್ಲಿ ಬಾಬಾ ಬುಡನ್ ಮೆಕ್ಕಾ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಅಲ್ಲಿಂದ 7 ಕಾಫಿ ಬೀಜಗಳನ್ನ ತಂದು ಚಿಕ್ಕಮಗಳೂರಲ್ಲಿ ಬಿತ್ತಿದ್ರು ಅನ್ನೋ ಸ್ವಾರಸ್ಯಕರ ಮಾಹಿತಿ ಸಿಗುತ್ತೆ.

    ಹಸಿರ ತೇರಿನ ಮೇಲೆ ಅಕ್ಷರ ಸಂತರ ಸಾಹಿತ್ಯದ ಗರಿ.
    ಒಂದು ಕಡೆ ಹಸಿರನ್ನೇ ಹೊದ್ದು ಮಲಗಿದಂತಿರೋ ಊರು. ಕವಿಗಳಿಗೆ, ಸಾಹಿತ್ಯ ದಿಗ್ಗಜರಿಗೆ ಇದಕ್ಕಿಂತ ಸ್ವರ್ಗ ಇನ್ನೆಲ್ಲಿ ಸಿಕ್ಕೀತು? ಲಕ್ಷ್ಮೀಶ ದೇವನೂರು, ಡಾ. ಎ.ಆರ್ ಕೃಷ್ಣಶಾಸ್ತ್ರಿ ಅಂಬಳೆಯಂಥಾ ಕವಿ ಮಹೋದಯರು ಕೊಟ್ಟ ಹೆಮ್ಮೆಯ ತಾಣ ಚಿಕ್ಕಮಗಳೂರು. ಹಾಗೆಯೇ ಜ್ಞಾನಪೀಠ ಪ್ರಶಸ್ತಿ ಪಡೆದ ರಾಷ್ಟ್ರಕವಿ ಕುವೆಂಪು, ಕೂದವಳ್ಳಿಯ ಅದ್ಭುತ ಕಥೆಗಾರ ಅಶ್ವತ್ಥ, ಸಾಹಿತ್ಯ ಸಿಂಚನದ ಜೊತೆಗೆ ಪ್ರಕೃತಿಯ ಜೊತೆ ಬೆರೆಯುವಂತೆ ಮಾಡಿದ ಪೂರ್ಣಚಂದ್ರ ತೇಜಸ್ವಿಯಂಥಾ ಸಾಹಿತಿಗಳನ್ನು ಕೊಟ್ಟ ತಾಣ ಇದು.

    ಗಿರಿಕನ್ಯೆಯ ಸೆರಗಿನ ನಡುವೆ ಅಡಗಿವೆ ಈ ಸುಂದರ ತಾಣಗಳು
    ಚುಮುಚುಮು ಚಳಿಯೇ ಇರಲಿ, ಬಿರು ಬೇಸಿಗೆಯೇ ಇರಲಿ, ಒಂದೇ ಸಮನೆ ಸುರಿಯೋ ಮಳೆಯೇ ಇರಲಿ ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ ಮಾತ್ರ ನಿಮ್ಮನ್ನ ಯಾವ ಕಾಲಕ್ಕೂ ಕೈ ಬೀಸಿ ಕರೆಯುತ್ತೆ. ಮುಳ್ಳಯ್ಯನಗಿರಿ ಕರ್ನಾಟಕ ರಾಜ್ಯದಲ್ಲೇ ಅತೀ ಎತ್ತರದ ಗಿರಿ ಶಿಖರ. ಅಲ್ಲಿಂದ ಅನತಿ ದೂರದಲ್ಲಿದೆ ಬಾಬಾ ಬುಡನ್ ಗಿರಿ. ಚಂದ್ರ ದ್ರೋಣ ಪರ್ವತ ಶ್ರೇಣಿಯಲ್ಲಿ ನೆಲೆಸಿರುವ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾವು ಹಿಂದು ಹಾಗೂ ಮುಸ್ಲಿಮ್ ಧರ್ಮದವರಿಬ್ಬರಿಗೂ ಪವಿತ್ರ. ಇಲ್ಲಿರುವ ಲ್ಯಾಟರೈಟ್ ಗುಹೆಯಲ್ಲಿ ದತ್ತಾತ್ರೇಯ ಸ್ವಾಮಿ ಹಾಗು ಹಜರತ್ ದಾದಾ ಹಯತ್ ಮೀರ್ ಕಲಂದರ್ ನೆಲೆಸಿದ್ರು ಅನ್ನೋ ಉಲ್ಲೇಖಗಳು ಸಿಗುತ್ವೆ. ಈ ಜಾಗ ಎಷ್ಟು ಪವಿತ್ರವೋ ಅಷ್ಟೇ ವಿವಾದದ ಕೇಂದ್ರ ಬಿಂದು ಕೂಡಾ ಹೌದು. ಇನ್ನು, ವರ್ಷಕ್ಕೊಮ್ಮೆ ಪೂಜೆ ನಡೆದರೂ ಪ್ರವಾಸಿಗರನ್ನ ಸೆಳೆಯೋ ದೇವೀರಮ್ಮ ಬೆಟ್ಟ, ಕೆಮ್ಮಣ್ಣುಗುಂಡಿ, ರತ್ನಗಿರಿ ಬೋರ್, ಕುದುರೆ ಮುಖ, ಶೃಂಗೇರಿ, ಹೊರನಾಡು, ಭದ್ರಾ ವನ್ಯಜೀವಿಧಾಮ, ಕಲ್ಲತ್ತಗಿರಿ ಜಲಪಾತ, ಹೆಬ್ಬೆ ಜಲಪಾತ, ಕಳಸ ಹೀಗೆ ಒಂದಾ ಎರಡಾ ಚಿಕ್ಕಮಗಳೂರು ಅನ್ನೋ ಗಿರಿಕನ್ಯೆ ಸದಾ ಯೌವ್ವನವನ್ನ ತುಂಬಿಕೊಂಡಿರಲು ಇಷ್ಟು ಸಾಕು.

    ಚಿಕ್ಕಮಗಳೂರಲ್ಲಿ ಹಳೇ ಹುಲಿಗಳ ಹೊಸ ರಾಜಕೀಯ ಪಟ್ಟು..!
    ಚಿಕ್ಕಮಗಳೂರ ತುಂಬಾ ಈಗ ಕಾಫಿ ಹೀರೋ ಜನಕ್ಕೆ ರಾಜಕೀಯವೇ ಮಿರ್ಚಿ ಮಂಡಕ್ಕಿ ಎಲ್ಲಾನೂ. ಇಲ್ಲಿ ಕ್ಯಾಂಪೇನ್ ಮಾಡೋಕೆ ಬರೋರ್ಗೆ ಸಮಸ್ಯೆಗಳೇ ಕೇಂದ್ರಬಿಂದುವಾದ್ರೂ ರಾಜಕೀಯ ಲೆಕ್ಕಾಚಾರ ಮಾತ್ರ ಬೇರೆಯದ್ದೇ ಆಗಿರುತ್ತೆ. ಲಿಂಗಾಯತ, ಒಕ್ಕಲಿಗ, ಹಿಂದುಳಿದ ಸಮುದಾಯಗಳ ವೋಟುಗಳು ಇಲ್ಲಿ ಅಭ್ಯರ್ಥಿಯ ಹಣೆಬರಹವನ್ನು ಬರೀತಾವೆ. ಹಾಗಾದ್ರೆ, ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಚಿತ್ರಣವನ್ನ ನೋಡೋಣ ಬನ್ನಿ.

    ಮತ್ತೆ ಗೆದ್ದು ಸೀಟಿ ಹೊಡೆಯೋ ತವಕದಲ್ಲಿದ್ದಾರೆ ಸಿಟಿ ರವಿ..!

     

    ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಸಿಟಿ ರವಿ ತಮ್ಮ ಪ್ರಭಾವ, ವೈಯಕ್ತಿಕ ವರ್ಚಸ್ಸಿಂದ ಕ್ಷೇತ್ರದಲ್ಲಿ ಸೋಲಿಲ್ಲದ ನಾಯಕನಾಗಿ ಬೆಳೆದಿದ್ದಾರೆ. ಹ್ಯಾಟ್ರಿಕ್ ಸಾಧನೆ ಮಾಡಿರೋ ಸಿಟಿ ರವಿ ಈ ಬಾರಿಯೂ ಬಿಜೆಪಿಯಿಂದ ಕಂಟೆಸ್ಟ್ ಮಾಡ್ತಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್ ನ ಭದ್ರ ಕೋಟೆಯಾಗಿದ್ದ ಚಿಕ್ಕಮಗಳೂರನ್ನ ನಂತ್ರ ಬಿಜೆಪಿ ಹಾಗೂ ಪಕ್ಷೇತರರು ತಮ್ಮ ತೆಕ್ಕೆಗೆ ಎಳೆದುಕೊಂಡಿದ್ದು ಈಗ ಇತಿಹಾಸ. ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ರೂ ಕೊನೆಯದಾಗಿ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಕ್ತಾರ ಬಿಎಲ್ ಶಂಕರ್ ಕಣದಲ್ಲಿದ್ದಾರೆ. ಆದ್ರೆ ಈ ಬಾರಿ ಸಿಟಿ ರವಿಯವ್ರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕೋಕೆ ಜೆಡಿಎಸ್ ಚಿಂತಿಸಿದೆ. ಹೀಗಾಗಿ, ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಬಿಎಸ್ ಹರೀಶ್ ಕಣಕ್ಕೆ ಇಳಿದಿದ್ದಾರೆ. ಇನ್ನು, 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಟಿ ರವಿ 58,683 ವೋಟ್ ಗಳಿಸಿದ್ರು. ಕಾಂಗ್ರೆಸ್ಸಿನ ಕೆ.ಎಸ್ ಶಾಂತೇಗೌಡ 47,695 ಮತಗಳನ್ನು ಗಳಿಸಿ ಸಖತ್ ಫೈಟ್ ಕೊಟ್ಟಿದ್ರು. ಈ ಬಾರಿ ಚುನಾವಣೆಯ ರೋಚಕ ಕ್ಷಣಗಳನ್ನ ಕಣ್ತುಂಬಿಕೊಳ್ಳೋಕೆ ನೀವ್ ರೆಡಿಯಾಗಿ.

    ಬಂಡಾಯದ ಬಿಸಿಗೆ ತರೀಕೆರೆ ತಬ್ಬಿಬ್ಬು..!

     


    ತರೀಕೆರೆ ಕಾಂಗ್ರೆಸ್ ನ ಹಾಲಿ ಶಾಸಕ ಶ್ರೀನಿವಾಸ್ ಮತ್ತೆ ತಮಗೇ ಟಿಕೆಟ್ ಸಿಗುತ್ತೆ ಅನ್ನೋ ಭರವಸೆಯಲ್ಲೇ ಇದ್ರು. ಆದ್ರೆ, ಕೊನೇ ಕ್ಷಣದ ಬದಲಾವಣೆ ಹೊರತಾಗಿ ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದು ಅನ್ನೋದಕ್ಕೆ ಈ ಕ್ಷೇತ್ರ ಸಾಕ್ಷಿ. ಯಾಕಂದ್ರೆ, ಇಲ್ಲಿ ಹಾಲಿ ಶಾಸಕರಿಗೆ ಬಿಟ್ಟು ಮಾಜಿ ಶಾಸಕ ಎಸ್ ಎಂ ನಾಗರಾಜು ಅವ್ರಿಗೆ ಕಾಂಗ್ರೆಸ್ ಮಣೆ ಹಾಕಿದೆ. ಹೀಗಾಗಿ ಶಾಸಕ ಶ್ರೀನಿವಾಸ್ ಬಂಡಾಯ ಎದ್ದು ಜೆಡಿಎಸ್ ಕದ ತಟ್ಟಿದ್ರು. ದುರಾದೃಷ್ಟವಶಾತ್ ಅಲ್ಲೂ ಅವ್ರ ಆಸೆಗೆ ಯಾವ ಸೊಪ್ಪೂ ಬೀಳಲಿಲ್ಲ. ಇನ್ನು, ಇತ್ತ ಜೆಡಿಎಸ್ ನ ಟಿಕೆಟ್ ಆಕಾಂಕ್ಷಿಯಾಗಿದ್ದ ಟಿ. ಎಚ್ ಶಿವಶಂಕರಪ್ಪ ಪಕ್ಷಕ್ಕೆ ಟಾ ಟಾ ಬೈ ಬೈ ಹೇಳಿ ಒಂದು ಕಾಲು ಹೊರಗಿಟ್ಟಿದ್ರು. ಆದ್ರೆ, ಕೊನೇ ಕ್ಷಣದಲ್ಲಿ ತೆನೆಹೊತ್ತ ಮಹಿಳೆ ಶಿವಶಂಕರಪ್ಪ ಅವ್ರಿಗೇ ಜೈ ಅಂದಿದ್ದಾಳೆ. ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಜಿ.ಎಚ್. ಶ್ರೀನಿವಾಸ ಪ್ರಯಾಸದ ಗೆಲುವು ಅಂದ್ರೆ, ಕೇವಲ 899 ಮತಗಳ ಅಂತರದಲ್ಲಿ ಗೆದ್ದು ಗಾದಿ ಹಿಡಿದಿದ್ರು.

    ಮೂಡಿಗೆರೆ ಮತದಾರನ ಮೂಡು ಹೇಗಿದ್ಯೋ..!


    ಮೂಡಿಗೆರೆಯ ಹಾಲಿ ಶಾಸಕ ಬಿ.ಬಿ ನಿಂಗಯ್ಯ ಬಾರಿಯೂ ಜೆಡಿಎಸ್ ನಿಂದ ರಣರಂಗಕ್ಕೆ ಧುಮುಕಿದ್ದಾರೆ. ವಿರೋಧ ಪಕ್ಷದ ಸಮರ್ಥ ನಾಯಕಿಯಾಗಿ ಕೆಲಸ ಮಾಡಿ ಹಾಲಿ ಎಂಎಲ್ ಸಿ ಯಾಗಿದ್ದ ಮೋಟಮ್ಮಗೆ ಕಾಂಗ್ರೆಸ್ ತನ್ನ ಟಿಕೆಟ್ ಕೊಟ್ಟಿದೆ. ಮೊದಲಿನಿಂದಲೂ ಟಿಕೆಟ್ ತನಗೇ ಸಿಗುತ್ತೆ ಅನ್ನೋ ಅಚಲ ವಿಶ್ವಾಸದಲ್ಲಿದ್ದ ಮೋಟಮ್ಮ ಆ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ರು. ಇನ್ನು, ಬಿಜೆಪಿ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಟಿಕೆಟ್ ಕೊಟ್ಟಿದೆ. ಕಳೆದ 15 ವರ್ಷಗಳಿಂದ ಕ್ಷೇತ್ರದಲ್ಲಿ ಓಡಾಡಿ ಪಕ್ಷ ಸಂಘಟನೆ ಮಾಡಿರೋ ಕುಮಾರಸ್ವಾಮಿಯವರಿಗೇ ಟಿಕೆಟ್ ಕೊಡಬೇಕು ಅನ್ನೋದು ಕಾರ್ಯಕರ್ತರ ಒಕ್ಕೊರೊಲ ಆಗ್ರಹವೂ ಆಗಿತ್ತು. ಹಾಗಾಗಿ, ಈ ಬಾರಿ ಮೂಡಿಗೆರೆ ಭಾರೀ ಸ್ಪರ್ಧೆಗೆ ಅಖಾಡವಾಗಿರೋದಂತೂ ಹೌದು.

    ಶೃಂಗೇರಿಯ ಮತಾಧೀಶ ಯಾರನ್ನ ಪೀಠಕ್ಕೆ ಏರಿಸ್ತಾನೆ..?

     


    ಶೃಂಗೇರಿಯ ಹಾಲಿ ಶಾಸಕ ಬಿಜೆಪಿಯ ಡಿ ಎನ್ ಜೀವರಾಜ್ ಈ ಬಾರಿಯೂ ಕಣದಲ್ಲಿರೋದು ಬಹುತೇಕ ಅವ್ರಿಗೆ ಪೈಪೋಟಿ ನೀಡೋ ಅಭ್ಯರ್ಥಿಯೇ ಇಲ್ಲ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಆಡಳಿತ ವಿರೋಧಿ ಅಲೆ, ಮೋದಿ ಅಲೆಯ ಜೊತೆಗೆ ಹಿಂದೂ ಮತಗಳು, ವೈಯಕ್ತಿಕ ವರ್ಚಸ್ಸು ಜೀವರಾಜ್ ಅವ್ರ ಸ್ಟ್ರೆಂಥ್. 2013ರ ಚುನಾವಣೆಯಲ್ಲಿ ಜೀವರಾಜ್ 58,402 ಮತ ಪಡೆದು ವಿಜಯ ಪತಾಕೆ ಹಾರಿಸಿದ್ರು. ಇನ್ನು, ಕಾಂಗ್ರೆಸ್ ಗೆ ಕೈ ಕೊಟ್ಟು ಬಂದು ತೆನೆ ಹೊತ್ತ ಮಾಜಿ ಸಚಿವ ಎಚ್ ಜಿ ಗೋವಿಂದೇಗೌಡ್ರ ಮಗ ವೆಂಕಟೇಶ್ ಈ ಬಾರಿ ಜೆಡಿಎಸ್ ಕಲಿ. ಕಾಂಗ್ರೆಸ್ ನಿಂದ ಕಣಕ್ಕೆ ಧುಮುಕಿರೋ ಟಿ.ಡಿ ರಾಜೇಗೌಡ ಶೃಂಗೇರಿಯ ಜನರ ಮನದಾಳವನ್ನ ಅರಿಯೋ ಪ್ರಯತ್ನ ಮಾಡಿದ್ದಾರೆ. ಹೇಳಿಕೊಂಡಷ್ಟು ಅಭಿವೃದ್ಧಿಯಾಗಿಲ್ಲ. ಜನ ಬದಲಾವಣೆ ಬಯಸಿದ್ದಾರೆ ಅನ್ನೋ ವನ್ ಲೈನ್ ಅಜೆಂಡಾ ಇವ್ರದ್ದು.

    ದತ್ತಾ ಮೇಲಿಲ್ಲ ಕಡೂರು ಜನರಿಗೆ ಯಾವುದೇ ತಕರಾರು..!


    ಕಡೂರಿನ ಹಾಲಿ ಎಂಎಲ್ ಎ, ಜೆಡಿಎಸ್ ನ ವೈ ಎಸ್ ವಿ ದತ್ತಾ ಈ ಬಾರಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 2010ರ ತನಕ ಕಾಂಗ್ರೆಸ್ ಕಪಿಮುಷ್ಟಿಯಲ್ಲಿದ್ದ ಕಡೂರು ಕ್ಷೇತ್ರವನ್ನ 2013ರಲ್ಲಿ ದತ್ತಾ ತಮ್ಮದಾಗಿಸಿಕೊಂಡ್ರು. ಇನ್ನು ಟಿಕೆಟ್ ಘೋಷಣೆಗೂ ಮುನ್ನವೇ ಜಿಪಂ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಪ್ರಚಾರಕ್ಕಾಗಿ ಹೈಟೆಕ್ ವಾಹನವೊಂದನ್ನು ಸಿದ್ಧಗೊಳಿಸಿದ್ರು. ಕೊನೆಗೂ ಬಿಜೆಪಿ ಅವ್ರಿಗೇ ಟಿಕೆಟ್ ಕನ್ಫರ್ಮ್ ಮಾಡಿದೆ. ಕಾಂಗ್ರೆಸ್ ಕೆ. ಎಸ್ ಆನಂದ್ ನ್ನ ಕಣಕ್ಕಿಳಿಸಿದೆ. ಆದ್ರೆ, ಇಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೇ ಇವ್ರಿಗೆ ಟಿಕೆಟ್ ಕೊಟ್ಟಿರೋದು ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ, ಕಡೂರು ಕ್ಷೇತ್ರದಲ್ಲಿ ಯಾವ ರೀತಿಯ ಫಲಿತಾಂಶ ಸಿಗ್ಬೋದು ಅನ್ನೋದೇ ಸಾಕಷ್ಟು ಕುತೂಹಲ ಕೆರಳಿಸಿದೆ.

  • ಬಾಬಾ ಬುಡನ್‍ಗಿರಿ ದರ್ಗಾದ ಆಡಳಿತ ಶಾಖಾದ್ರಿಗೆ – ಸುಪ್ರೀಂ ಅನುಮೋದನೆ

    ಬಾಬಾ ಬುಡನ್‍ಗಿರಿ ದರ್ಗಾದ ಆಡಳಿತ ಶಾಖಾದ್ರಿಗೆ – ಸುಪ್ರೀಂ ಅನುಮೋದನೆ

    ಚಿಕ್ಕಮಗಳೂರು: ಮೂರು ದಶಕಗಳ ಬಾಬಾಬುಡನ್‍ಗಿರಿ ವಿವಾದಕ್ಕೆ ಸುಪ್ರೀಂಕೋರ್ಟ್ ಅಂತ್ಯ ಹಾಡಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ನೀಡಿದ ವರದಿಯನ್ನು ಸುಪ್ರೀಂಕೋರ್ಟ್ ಅನುಮೋದಿಸಿದ್ದು ಅನುಷ್ಠಾನಕ್ಕೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾ.ರಂಜನ್ ಗೊಗಯ್, ನ್ಯಾ.ಭಾನುಮತಿ ನೇತೃತ್ವದ ದ್ವಿಸದಸ್ಯ ಪೀಠ, ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾದ ಆಡಳಿತ ಉಸ್ತುವಾರಿಯನ್ನು ಶಾಖಾದ್ರಿಗೆ ಹೊಣೆ ವಹಿಸಿದೆ. ಪೂಜಾ ಕೈಂಕರ್ಯ, ನಮಾಜ್ ಸೇರಿದಂತೆ ಎಲ್ಲ ಕಾರ್ಯ ಚಟುವಟಿಕೆಗಳ ಶಾಖಾದ್ರಿ ನೇತೃತ್ವದಲ್ಲಿ ನಡೆಯಬೇಕು. ಇದೊಂದು ಭಾವನಾತ್ಮಕ ವಿಷಯ. ಯಾವುದೇ ಕೋಮಿಗೆ ಧಕ್ಕೆಯಾಗಬಾರದು. ಹಿಂದೂ-ಮುಸ್ಲಿಂ ಎರಡೂ ಧರ್ಮಗಳ ಧಾರ್ಮಿಕ ಕೆಲಸಗಳನ್ನು ಶಾಖಾದ್ರಿ ನಿರ್ವಹಣೆ ಮಾಡಲಿ ಅಂತ ಹೇಳಿದೆ.

    1977ರ ಹಿಂದೆ ಶಾಖಾದ್ರಿಗಳ ನೇತೃತ್ವದಲ್ಲಿ ಊರೂಸ್ ನಡೆಯುತ್ತಿತ್ತು, ಯಾವುದೇ ರೀತಿಯ ಹೋಮ-ಹವನ ನಡೆಯುತ್ತಿರಲಿಲ್ಲ ಎಂದು ನಾಗಮೋಹನ್ ದಾಸ್ ನೀಡಿರುವ ಅನ್ವಯ ಸುಪ್ರೀಂ ಕೋರ್ಟ್, 1977ರ ಹಿಂದೆ ಅಲ್ಲಿ ನಡೆಯುತ್ತಿದ್ದ ಪೂಜಾ-ವಿಧಿ-ವಿಧಾನಗಳನ್ನ ಮುಂದುವರೆಸಿಕೊಂಡು ಹೋಗುವಂತೆ ಸೂಚಿಸಿದೆ. ಇನ್ನು ಮುಂದೆ ಬಾಬಾ ಬುಡನ್‍ಗಿರಿ ದರ್ಗಾದಲ್ಲಿ ಮುಜಾವರ್ ನೇತೃತ್ವದಲ್ಲಿ ಪೂಜೆ-ಪುನಸ್ಕಾರಗಳು ನಡೆಯಲಿವೆ.

    ಸುಪ್ರೀಂ ಕೋರ್ಟ್ ನ್ಯಾಯಾಲಯ ನಾಗಮೋಹನ್ ದಾಸ್ ವರದಿಯನ್ನು ಎತ್ತಿ ಹಿಡಿದಿರುವ ಕಾರಣ ಕಾಫಿನಾಡಿನಲ್ಲಿ ಪರ-ವಿರೋಧದ ಚರ್ಚೆ ಆರಂಭವಾಗಿದೆ. ಸುಪ್ರೀಂ ಈ ತೀರ್ಪನ್ನು ಜಿಲ್ಲೆಯ ಕೋಮು ಸೌಹಾರ್ದ ವೇದಿಕೆ ಹಾಗೂ ಕೆಲ ಸಂಘಟನೆಗಳು ಸ್ವಾಗತಿಸಿವೆ. ದತ್ತಪೀಠವನ್ನು ಕೇಸರಿಕರಣ ಮಾಡುವ ಹೋದ ಕೋಮು ಶಕ್ತಿಗಳಿಗೆ ಹಿನ್ನಡ ಉಂಟಾಗಿದೆ ಎಂದು ಅಭಿಪ್ರಾಯ ಪಟ್ಟಿವೆ.

    ನ್ಯಾಯಾಲಯದ ತೀರ್ಪಿನ ವಿರುದ್ಧ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷದ್ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದು, ಚಿಕ್ಕಮಗಳೂರಿನಲ್ಲಿ ದತ್ತಪೀಠವೇ ಬೇರೆ, ಬಾಬಾಬುಡನ್ ದರ್ಗಾವೇ ಬೇರೆ. ದತ್ತಪೀಠ ಸಂಪೂರ್ಣ ಹಿಂದುಗಳಿಗೆ ಸಲ್ಲಬೇಕು, ಸುಪ್ರೀಂ ತೀರ್ಪೀನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದು ಹಿಂದೂ ಸಂಘಟನೆಗಳು ತಿಳಿಸಿವೆ.

    ಇದೇ ವೇಳೆ ರಾಜ್ಯ ಸರ್ಕಾರ ರಚಿಸಿರುವ ನಾಗಮೋಹನದಾಸ್ ವರದಿ ಮ್ಯಾಚ್ ಫಿಕ್ಸಿಂಗ್ ಎಂದು ಆರೋಪಿಸಿರುವ ಬಿಜೆಪಿ ನಾಯಕ ಸಿಟಿ ರವಿ, ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ.