Tag: B. Sharath

  • ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ವರ್ಗಾವಣೆ ಆದೇಶಕ್ಕೆ ತಡೆ

    ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ವರ್ಗಾವಣೆ ಆದೇಶಕ್ಕೆ ತಡೆ

    ಮೈಸೂರು: ಜಿಲ್ಲಾಧಿಕಾರಿ ಬಿ.ಶರತ್ ವರ್ಗಾವಣೆಯ ಆದೇಶಕ್ಕೆ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ತಡೆ ನೀಡಿದ್ದು, ರಾಜ್ಯ ಸರ್ಕಾರದ ಆದೇಶಕ್ಕೆ ಹಿನ್ನಡೆ ಆಗಿದೆ. ಬಿ.ಶರತ್ ಅವರ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನ ಮೈಸೂರು ಜಿಲ್ಲಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿತ್ತು.

    ಬಿ ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ಮರು ನೇಮಕ ಮಾಡಬೇಕು. ಡಿಸೆಂಬರ್ 22ರೊಳಗೆ ಈ ಸಂಬಂಧ ಆದೇಶ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ತಿಳಿಸಲು ಅಡ್ವೊಕೇಟ್ ಜನರಲ್ ಗೆ ಸಿಎಟಿ ನಿರ್ದೇಶನ ನೀಡಿದೆ. ಒಂದು ವೇಳೆ ತಪ್ಪಿದ್ದಲ್ಲಿ ಸಿಎಟಿ ಈ ಬಗ್ಗೆ ಆದೇಶ ಹೊರಡಿಸಲಿದೆ ಎಂದು ಸೂಚಿಸಿದೆ. ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ತಿಂಗಳಲ್ಲಾದ ಬಿ.ಶರತ್ ತಮ್ಮ ವರ್ಗಾವಣೆಯನ್ನ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದರು.

    ಕೆಲ ದಿನಗಳಿಂದ ಮೈಸೂರಿನ ಜನಪ್ರತಿನಿಧಿಗಳು ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜನಪರ ಕಾರ್ಯಕ್ರಮಗಳನ್ನ ಆಯೋಜಿಸುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದರು. ಇನ್ನು ಸಚಿವ ಆರ್.ಅಶೋಕ್ ಸಹ ಬಹಿರಂಗವಾಗಿ ರೋಹಿಣಿ ಸಿಂಧೂರಿ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು.

    ವರ್ಗಾವಣೆ ಆಗಿದ್ದೇಕೆ?: ಶರತ್ ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಒಂದು ತಿಂಗಳಿನಿಂದ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಸೋಂಕಿನ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಯಾವುದೇ ಪ್ಲಾನ್ ಮಾಡಿಕೊಂಡಿರಲಿಲ್ಲ. ಸಾವಿನ ಸಂಖ್ಯೆ, ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದರೂ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆಯಲು ಜಿಲ್ಲಾಧಿಕಾರಿ ಶರತ್ ಮುಂದಾಗಿರಲಿಲ್ಲ ಅನ್ನೋ ಆರೋಪಗಳು ಬಿ.ಶರತ್ ಅವರ ವಿರುದ್ಧ ಕೇಳಿ ಬಂದಿದ್ದವು. ಕೊರೊನಾ ಏರಿಕೆ ನಡುವೆ ಅತಿ ಸರಳ ದಸರಾ ಆಚರಣೆ ಸರ್ಕಾರಕ್ಕೆ ದೊಡ್ಡ ಸವಾಲು ಆಗಿತ್ತು. ದಸರಾ ಸಮೀಪಿಸಿದ್ದರೂ ಆಚರಣೆ ಯೋಜನೆಯನ್ನ ಸರ್ಕಾರಕ್ಕೆ ಸಲ್ಲಿಸದ ಹಿನ್ನೆಲೆ ಶರತ್ ಅವರ ವರ್ಗಾವಣೆ ಆಗಿದೆ ಎನ್ನಲಾಗಿತ್ತು.

    ವರ್ಗಾವಣೆ ಬಳಿಕ ಶರತ್ ಅವರಿಗೆ ಕರೆ ಮಾಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ, ಬೇರೆ ಸೂಕ್ತ ಸ್ಥಳ ನೀಡುತ್ತೇವೆ. ಕಾನೂನು ತೊಡಕು ಮಾಡಿಕೊಳ್ಳಬೇಡಿ ಎಂದು ಹೇಳಿದ್ದರು ಎನ್ನಲಾಗಿದೆ. ಶರತ್ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನೇ ನೇಮಿಸಬೇಕೆಂದು ಸಿಎಂ ಮೇಲೆ ಒತ್ತಡ ಹಾಕಲಾಗಿತ್ತು ಎಂದು ತಿಳಿದು ಬಂದಿದೆ.

  • ಕಲಬುರಗಿಯಲ್ಲಿಂದು ಎಂಟು ಜನರಿಗೆ ಕೊರೊನಾ ಸೋಂಕು

    ಕಲಬುರಗಿಯಲ್ಲಿಂದು ಎಂಟು ಜನರಿಗೆ ಕೊರೊನಾ ಸೋಂಕು

    ಕಲಬುರಗಿ: ಜಿಲ್ಲೆಯಲ್ಲಿ ಶನಿವಾರ ಮತ್ತೆ ಎಂಟು ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 94ಕ್ಕೆ ಏರಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

    ಕಲಬುರಗಿ ನಗರದ ರೋಗಿ ಸಂಖ್ಯೆ-848 ಸಂಪರ್ಕದಲ್ಲಿ ಬಂದ ಮೋಮಿನಪುರ ಪ್ರದೇಶದ 33 ವರ್ಷದ ಯುವತಿ (ರೋಗಿ-1080), 15 ವರ್ಷದ ಬಾಲಕಿ (ರೋಗಿ-1081), 14 ವರ್ಷದ ಬಾಲಕಿ (ರೋಗಿ-1082), 55 ವರ್ಷದ ಮಹಿಳೆ (ರೋಗಿ-1083), 60 ವರ್ಷದ ಪುರುಷ (ರೋಗಿ-1086) ಹಾಗೂ 10 ವರ್ಷದ ಬಾಲಕಿ (ರೋಗಿ-1087) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

    ಹುಮನಾಬಾದ ಬೇಸ್-ಮೋಮಿನಪುರ ಕಂಟೈನ್‍ಮೆಂಟ್ ಝೋನ್ ಪ್ರದೇಶದಲ್ಲಿ ಕಳೆದ ಮೇ-11 ರಂದು ಕೊರೊನಾ ಸೋಂಕಿನಿಂದ ಮೃತ ವ್ಯಕ್ತಿಯ ಸಂಪರ್ಕದಲ್ಲಿ ಬಂದ ಇದೇ ಪ್ರದೇಶದ 50 ವರ್ಷದ ಮಹಿಳೆಗೂ (ರೋಗಿ-1085) ಕೋವಿಡ್-19 ಸೋಂಕು ತಗುಲಿದೆ.

    ಇದಲ್ಲದೆ ಇತ್ತೀಚೆಗೆ ಮುಂಬೈನಿಂದ ವಲಸೆ ಬಂದು ಚಿತ್ತಾಪುರದ ನಾಗಾವಿ ಬಳಿಯ ಮೋರಾರ್ಜಿ ದೇಸಾಯಿ ವಸತಿಯ ಶಾಲೆ ಕ್ವಾರಂಟೈನ್ ಕೇಂದ್ರದಲ್ಲಿದ್ದ ಚಿತ್ತಾಪುರ ತಾಲೂಕಿನ ಬೆಳಗೇರಾ ತಾಂಡಾ ಮೂಲದ 30 ವರ್ಷದ ಮಹಿಳೆಗೂ ಕೊರೊನಾ ಸೋಂಕು ದೃಢವಾಗಿದೆ. ಇವರನ್ನು ಈಗಾಗಲೇ ಕ್ವಾರಂಟೈನ್ ಕೇಂದ್ರದಿಂದ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಪೀಡಿತ 94 ರೋಗಿಗಳಲ್ಲಿ 7 ಜನ ನಿಧನರಾಗಿದ್ದು, 47 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದಂತೆ 40 ರೋಗಿಗಳಿಗೆ ಚಿಕಿತ್ಸೆ ಮುಂದುವರಿದಿದೆ.

  • ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆಗೆ ಮಾಲೀಕಯ್ಯ ಗುತ್ತೇದಾರ ತರಾಟೆ-ಯೂ ಟರ್ನ್ ಹೊಡೆದ ಸರ್ಕಾರ

    ಕಲಬುರಗಿ ಜಿಲ್ಲಾಧಿಕಾರಿ ವರ್ಗಾವಣೆಗೆ ಮಾಲೀಕಯ್ಯ ಗುತ್ತೇದಾರ ತರಾಟೆ-ಯೂ ಟರ್ನ್ ಹೊಡೆದ ಸರ್ಕಾರ

    ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಅವರನ್ನು ವರ್ಗಾವಣೆ ಮಾಡಿದಕ್ಕೆ ಬಿಜೆಪಿ ಮುಖಂಡ ಹಾಗು ಮಾಲೀಕಯ್ಯ ಗುತ್ತೇದಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗು ಸಿಎಂ ಬಿ.ಎಸ್.ಯಡಿಯೂರಪ್ಪ ಗೇ ಮಾಲೀಕಯ್ಯ ಕರೆ ಮಾಡಿ ವರ್ಗಾವಣೆ ಆದೇಶ ಹಿಂಪಡೆಯಲು ಆಗ್ರಹಿಸಿದ್ದರು, ಮಾಲೀಕಯ್ಯ ಗುತ್ತೇದಾರ ಅವರ ಮಾತಿಗೆ ಬೆಲೆಕೊಟ್ಟ ಸಿಎಂ ಯಡಿಯೂರಪ್ಪ ಕೂಡಲೇ ಜಿಲ್ಲಾಧಿಕಾರಿಗಳ ಆದೇಶವನ್ನು ಆದೇಶ ಹೊರಡಿಸಿದ ಒಂದು ಗಂಟೆಯಲ್ಲಿಯೇ ಆದೇಶ ರದ್ದು ಮಾಡಿ ಕಲಬುರಗಿ ಜಿಲ್ಲಾಧಿಕಾರಿಯಾಗಿ ಬಿ.ಶರತ್ ಅವರನ್ನು ಮುಂದುವರಿಸಿದ್ದಾರೆ.

    ಡಿಸಿ ಅವರ ವರ್ಗಾವಣೆ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ಮಾತನಾಡಿದ ಮಾಲೀಕಯ್ಯ ಗುತ್ತೇದಾರ, ಈಗಾಗಲೇ ಜಿಲ್ಲಾಧಿಕಾರಿ ಬಿ.ಶರತ್ ಕೋವಿಡ್ ತಡೆಹಿಡಿಯಲು ಕಠಿಣ ಪರಿಶ್ರಮದಿಂದ ಲಾಕ್‍ಡೌನ್ ಸೇರಿದಂತೆ ಹಲವು ಕ್ರಮಗಳನ್ನು ಜರುಗಿಸಿದ ಪರಿಣಾಮವೇ ಸೋಂಕು ತಡೆಹಿಡಿಯಲು ಯಶಸ್ವಿಯಾಗಿದೆ. ಆದ್ರೆ ಇತ್ತೀಚೆಗೆ ಬಂದ ತಬ್ಲಿಘಿಗಳಿಂದ ಜಿಲ್ಲೆಯಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಒಂದಿಷ್ಟು ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಸಹ ಬಿ.ಶರತ್ ಅಧಿಕಾರಿಗಳ ತಂಡ ಕಟ್ಟಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದಾರೆ.

    ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಸೇರಿದಂತೆ ಇಡೀ ಜಿಲ್ಲೆಯ ಇಂಚಿಂಚು ಮಾಹಿತಿ ಸಹ ಶರತ್ ಅವರು ಕಲೆ ಹಾಕಿ ಕೆಲಸ ಮಾಡುವಾಗ ಕೆಲ ಪಟ್ಟಭದ್ದ ಹಿತಾಸಕ್ತಿಗಳ ಮಾತಿಗೆ ಬೆಲೆ ಕೊಡಬಾರದು ಅಂತಾ ಸಿಎಂ ಯಡಿಯೂರಪ್ಪ ಗೇ ಮಾಲೀಕಯ್ಯ ಗುತ್ತೇದಾರ ಕಿವಿ ಮಾತು ಹೇಳಿದ್ದಾರೆ.

    ಇನ್ನು ಮಾಲೀಕಯ್ಯ ಅವರ ಮಾತಿಗೆ ಬೆಲೆಕೊಟ್ಟ ಸಿಎಂ ಯಡಿಯೂರಪ್ಪ ಅವರೇ ಕೂಡಲೇ ಖುದ್ದು ಡಿಸಿ ಶರತ್ ಗೆ ಕರೆ ಮಾಡಿ ವರ್ಗಾವಣೆ ಆದೇಶ ಹಿಂಪಡೆಯಲಾಗುವದು. ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸ ಮುಂದುವರೆಸಿ ಅಂತಾ ಬಿ.ಎಸ್.ವೈ ಸಹ ಅಭಯ ನೀಡಿದ್ದಾರೆ.

  • ಕಲಬುರಗಿ ಜಿಲ್ಲಾಧಿಕಾರಿ ಶರತ್ ವರ್ಗಾವಣೆಗೆ ಸಿಎಂ ತಡೆ

    ಕಲಬುರಗಿ ಜಿಲ್ಲಾಧಿಕಾರಿ ಶರತ್ ವರ್ಗಾವಣೆಗೆ ಸಿಎಂ ತಡೆ

    ಬೆಂಗಳೂರು: ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಅವರ ವರ್ಗಾವಣೆಯ ಆದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ತಡೆ ಹಿಡಿದಿದ್ದಾರೆ.

    ಇಂದು ಬಿ.ಶರತ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ, ಸುರಾಲ್ಕರ್ ವಿಕಾಸ್ ಕಿಶೋರ್ ಕಲಬುರಗಿ ಡಿಸಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಡಿಸಿ ವರ್ಗಾವಣೆ ಆದೇಶದ ಬೆನ್ನಲ್ಲೇ ವ್ಯಾಪಕ ಟೀಕೆಗಳು ವ್ಯಕ್ತವಾದವು. ಕಲಬುರಗಿಯಲ್ಲಿ ಈಗಾಗಲೇ ಕೊರೊನಾದಿಂದ ಐವರು ಸಾವನ್ನಪ್ಪಿದ್ರೆ, ಸೋಂಕಿತರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಕೊರೊನಾ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ವರ್ಗಾವಣೆ ಬೇಕಿತ್ತಾ ಎಂದು ಸಾರ್ವಜನಿಕರು ಪ್ರಶ್ನಿಸತೊಡಗಿದರು.

    ಸಾರ್ವಜನಿಕರ ಟೀಕೆಯಿಂದ ಎಚ್ಚೆತ್ತ ಮುಖ್ಯಮಂತ್ರಿಗಳು ಬಿ.ಶರತ್ ಅವರ ವರ್ಗಾವಣೆಯನ್ನು ತಡೆ ಹಿಡಿದಿದ್ದಾರೆ. ದೂರವಾಣಿ ಬಿ.ಶರತ್ ಜೊತೆ ಮಾತನಾಡಿರುವ ಮುಖ್ಯಮಂತ್ರಿಗಳು, ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದೀರಿ, ಮುಂದುವರಿಸಿ. ಸದ್ಯ ನಿಮ್ಮನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ವರ್ಗಾವಣೆಯ ಆದೇಶ ಹೊರ ಬೀಳುತ್ತಿದ್ದಂತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸಹ ಟ್ವಿಟ್ಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.

  • ಕೊರೊನಾ ವಿರುದ್ಧ ಗೆದ್ದ ಕಲಬುರಗಿ-ಮಹಾಮಾರಿಗೆ ತಿರುಮಂತ್ರ ಹಾಕಿದ್ದು ಹೇಗೆ ಗೊತ್ತಾ?

    ಕೊರೊನಾ ವಿರುದ್ಧ ಗೆದ್ದ ಕಲಬುರಗಿ-ಮಹಾಮಾರಿಗೆ ತಿರುಮಂತ್ರ ಹಾಕಿದ್ದು ಹೇಗೆ ಗೊತ್ತಾ?

    -ಆರಂಭದಲ್ಲಿ ಎಡವಿದ್ದ ಕಲಬುರಗಿ ಈಗ ರಾಜ್ಯಕ್ಕೆ ಮಾದರಿ

    ಕಲಬುರಗಿ: ಭಾರತದಲ್ಲಿ ಮೊದಲು ಕೊರೊನಾ ವೈರಸ್ ಕಲಬುರಗಿ ವೃದ್ಧನೋರ್ವನನ್ನು ಬಲಿ ಪಡೆದುಕೊಂಡಿತ್ತು. ಆರಂಭದಲ್ಲಿ ಎಡವಿದ್ದ ಕಲಬುರಗಿ ಜಿಲ್ಲಾಡಳಿತ ಈಗ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಕಲಬುರಗಿ ಅನುಸರಿಸಿದ ನಿಯಮಗಳನ್ನು ಇನ್ನುಳಿದ ಜಿಲ್ಲಾಡಳಿತ ಫಾಲೋ ಮಾಡಬೇಕೆಂಬ ಸೂಚನೆ ಸಹ ನೀಡಲಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಲಬುರಗಿ ಜಿಲ್ಲಾಡಳಿತದ ಕಾರ್ಯವನ್ನು ಶ್ಲಾಘಿಸಿದೆ.

    ತಿರುಮಂತ್ರ ಹಾಕಿದ್ದು ಹೇಗೆ ಗೊತ್ತಾ? ದೇಶದಲ್ಲಿ ಮೊದಲ ಸಾವಾದರೂ ಕಲಬುರಗಿ ಜಿಲ್ಲಾಡಳಿತ ಪರಿಸ್ಥಿತಿ ಸಮರ್ಥವಾಗಿ ನಿರ್ವಹಣೆ ಮಾಡಿತು. ಮೊದಲ ಪ್ರಕರಣವಾಗಿದ್ದರಿಂದ ದೇಶದಲ್ಲಿಯೇ ಮೊದಲ ಬಾರಿಗೆ ಕಲಬುರಗಿ ಲಾಕ್‍ಡೌನ್ ಮಾಡಲಾಗಿತ್ತು. ಇಡೀ ಕಲಬುರಗಿ ಜಿಲ್ಲೆಯಲ್ಲಿಯೇ 144 ಸೆಕ್ಷನ್ ಜಾರಿಗೆಗೆ ತರಲಾಗಿತ್ತು. ತಜ್ಞರ ಜೊತೆ ಚರ್ಚಿಸಿ ಅಧಿಕಾರಿಗಳಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ಕೊರೊನಾ ಜಾಗೃತಿ ಕುರಿತು ರಸ್ತೆಗಳಲ್ಲಿ ಫ್ಲೆಕ್ಸ್ ಹಾಕಲಾಗಿತ್ತು.

    ಪೊಲೀಸ್ ಕಣ್ಗಾವಲು: ವಿದೇಶದಿಂದ ಬಂದಿದ್ದ ಒಟ್ಟು 3500 ಮಂದಿಯ ಮೇಲೆ ನಿಗಾ ಇಡಲು ಎಲ್ಲರ ಮನೆಗಳಿಗೂ ಹೋಂಗಾರ್ಡ್ ಸೇರಿದಂತೆ ಪೊಲೀಸ್ ಸಿಬ್ಬಂದಿಯ ಕಾವಲು ಹಾಕಲಾಗಿತ್ತು. ಕ್ವಾರಂಟೈನ್ ಆದವರು ಮನೆ ಬಿಟ್ಟು ಹೊರಬಾರದಂತೆ ಎಚ್ಚರಿಕೆ ನೀಡಲಾಗಿತ್ತು. ಇನ್ನು ಹೋಮ್ ಕ್ವಾರಂಟೈನ್ ಆದವರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಹೋಮ್ ಕ್ವಾರಂಟೈನ್ ಗೆ ಒಳಪಟ್ಟವರು ಮನೆಯಿಂದ ಯಾರೇ ಹೊರಬಂದ್ರೂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುವಂತೆ ಸ್ಥಳೀಯರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.

    ಜಿಲ್ಲಾಮಟ್ಟದಲ್ಲಿ ಕಮಿಟಿಗಳನ್ನು ರಚನೆ ಮಾಡಿ, ಅಧಿಕಾರಿಗಳನ್ನು ಒಟ್ಟುಗೂಡಿಸಿ ಟೀಮ್ ರಚಿಸಲಾಗಿತ್ತು. ಈ ತಂಡಗಳ ಮೂಲಕ ಜಿಲ್ಲಾಡಳಿತ ಕೊರೊನಾ ವಿರುದ್ಧದ ಯುದ್ಧಕ್ಕೆ ಇಳಿದಿತ್ತು. ಮುಂಜಾಗ್ರತ ಕ್ರಮವಾಗಿ 5 ಸಾವಿರ ಬೆಡ್ ಗಳನ್ನು ಸಿದ್ಧ ಮಾಡಿಕೊಂಡಿತ್ತು. ಕಲಬುರಗಿಗೆ ಯಾರ ಪ್ರವೇಶವೂ ಇಲ್ಲ. ಯಾರು ಕಲಬುಗಗಿ ಬಿಟ್ಟು ಹೋಗುವ ಹಾಗಿಲ್ಲ ಅನ್ನುವ ನಿಯಮವನ್ನು ಜಿಲ್ಲಾಡಳಿಯ ಕಟ್ಟುನಿಟ್ಟಾಗಿ ಜಾರಿಗೆ ತಂದಿತ್ತು. ಕಂಪ್ಲೀಟ್ ಲಾಕ್‍ಡೌನ್‍ನಿಂದ ಕೊರೋನಾ ಸೋಂಕು ತಡೆಯುವಲ್ಲಿ ಕಲಬುರಗಿ ಯಶಸ್ವಿಯಾಗಿದ್ದು, ಕಳೆದ 12 ದಿನಗಳಲ್ಲಿ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ.

  • ಕಲಬುರಗಿಯಲ್ಲಿ ಕೊರೊನಾ ಸೋಂಕು ಹಿನ್ನೆಲೆ 1 ತಿಂಗಳು ಅಘೋಷಿತ ಬಂದ್: ಡಿಸಿ ಬಿ. ಶರತ್

    ಕಲಬುರಗಿಯಲ್ಲಿ ಕೊರೊನಾ ಸೋಂಕು ಹಿನ್ನೆಲೆ 1 ತಿಂಗಳು ಅಘೋಷಿತ ಬಂದ್: ಡಿಸಿ ಬಿ. ಶರತ್

    ಕಲಬುರಗಿ: ಕೊರೊನಾ ಸೋಂಕಿತ ಮೃತ ವ್ಯಕ್ತಿಯ ಸಂಪರ್ಕ ಹೊಂದಿದ್ದ ಇಬ್ಬರು ವ್ಯಕ್ತಿಗಳು ಹಾಗೂ ವಿದೇಶದಿಂದ ಬಂದ ಇಬ್ಬರು ವ್ಯಕ್ತಿಗಳು ಸೇರಿ ಹೊಸದಾಗಿ 4 ಮಂದಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು, ಅವರ ಗಂಟಲು ದ್ರವ್ಯ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ 1 ತಿಂಗಳು ಅಘೋಷಿತ ಬಂದ್ ಇರಲಿದೆ ಎಂದು ಡಿಸಿ ಬಿ. ಶರತ್ ಅವರು ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಇಎಸ್‍ಐಸಿ ಮೆಡಿಕಲ್ ಕಾಲೇಜಿನಲ್ಲಿ ಈ ಹಿಂದಿನ ಕೊರೊನಾ ಶಂಕಿತ ಪ್ರಕರಣಗಳ 3 ನೆಗೆಟಿವ್, 1 ಪಾಸಿಟಿವ್ ರೋಗಿ ಹಾಗೂ ಹೊಸದಾಗಿ ರೋಗದ ಲಕ್ಷಣ ಕಾಣಿಸಿಕೊಂಡ 4 ರೋಗಿಗಳಿಗೆ ಪ್ರತ್ಯೇಕವಾಗಿ ಐಸೋಲೇಷನ್ಸ್ ವಾರ್ಡ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಮೃತ ವ್ಯಕ್ತಿ ಸಂಪರ್ಕ ಹೊಂದಿದ್ದರು ಎಂದು ಗುರುತಿಸಿದ 71 ವ್ಯಕ್ತಿಗಳು, ಎರಡನೇ ಸಂಪರ್ಕ ಹೊಂದಿದ 238 ವ್ಯಕ್ತಿಗಳನ್ನು ಹಾಗೂ ವಿದೇಶದಿಂದ ಮರಳಿದ 61 ವ್ಯಕ್ತಿಗಳು ಸೇರಿದಂತೆ ಒಟ್ಟಾರೆ 370 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    370 ಜನರಲ್ಲಿ 8 ಮಂದಿಗೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ಹೋಂ ಕ್ವಾರಂಟೈನ್‍ನಲ್ಲಿಟ್ಟು ನಿಗಾ ವಹಿಸಲಾಗುತ್ತಿದೆ. ಕಲಬುರಗಿ ಜಿಲ್ಲೆಯ ಪ್ರತಿ ತಾಲೂಕಾ ಕೇಂದ್ರದಲ್ಲಿ 5 ಐಸೋಲೇಶನ್ ವಾರ್ಡ್ ಸ್ಥಾಪಿಸಲಾಗಿದೆ. ಜಿಮ್ಸ್ ನಲ್ಲಿ 12 ಮತ್ತು ಇಎಸ್‍ಐಸಿನಲ್ಲಿ 50 ಐಸೋಲೇಷನ್ ವಾರ್ಡ್‍ಗಳಿವೆ. ಇದರ ಜೊತೆಯಲ್ಲಿ 200 ಕ್ವಾರಂಟೈನ್ ವಾರ್ಡ್ ಸಹ ಇದ್ದು, ಇಲ್ಲಿ ತೀವ್ರ ನಿಗಾ ವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಕಲಬುರಗಿ ಜಿಲ್ಲೆಯಲ್ಲಿ ಈವರೆಗೆ 61 ಜನ ವಿದೇಶದಿಂದ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಅವರೆಲ್ಲರ ಮೇಲೆ ನಿಗಾ ಇರಿಸಲಾಗಿದೆ. ವಿದೇಶದಿಂದ ಬಂದವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಇದಕ್ಕಾಗಿ 24 ಗಂಟೆ ಸಹಾಯವಾಣಿ ಸ್ಥಾಪಿಸಲಾಗಿದೆ. ಸಹಾಯವಾಣಿ ಸಂಖ್ಯೆ 08472-278604/278677 ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಡಿಸಿ ಮನವಿ ಮಾಡಿದರು.

    ಅಷ್ಟೇ ಅಲ್ಲದೇ ಸಾರ್ವಜನಿಕರು ಸಾಮಾಜಿಕ ಜಾಲತಾಣದ ಸುದ್ದಿ ಅಥವಾ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು. ಜಿಲ್ಲಾಡಳಿತ ನೀಡುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಬೇಕು ಎಂದು ಬಿ. ಶರತ್ ಅವರು ಕೋರಿಕೊಂಡರು.