Tag: B.S yedyurappa

  • ಜನ್ಮದಿನದಂದೇ ಅದೃಷ್ಟದ ಮನೆಗೆ ಬಿಎಸ್‍ವೈ ಎಂಟ್ರಿ

    ಜನ್ಮದಿನದಂದೇ ಅದೃಷ್ಟದ ಮನೆಗೆ ಬಿಎಸ್‍ವೈ ಎಂಟ್ರಿ

    -ಕಾವೇರಿಯಲ್ಲಿ ಸಿಎಂ ಗೃಹ ಪ್ರವೇಶ ಪೂಜೆ

    ಬೆಂಗಳೂರು: ಸಿಎಂ ಯಡಿಯೂರಪ್ಪ ಅವರು ತಮ್ಮ 78ನೇ ಹುಟ್ಟುಹಬ್ಬದಂದೇ ಅದೃಷ್ಟದ ಮನೆಗೆ ಕಾಲಿಡುತ್ತಿದ್ದಾರೆ. ಸರ್ಕಾರಿ ಬಂಗಲೆ ತಮ್ಮ ಅದೃಷ್ಟದ ಕಾವೇರಿ ನಿವಾಸಕ್ಕೆ ಯಡಿಯೂರಪ್ಪ ಅವರು ಪೂಜೆ ಮಾಡಿದ್ದಾರೆ.

    ಯಡಿಯೂರಪ್ಪ ಅವರು ಇಂದು ಗೃಹಪ್ರವೇಶ ಪೂಜೆ ಮಾಡಿ ಕೆಲ ದಿನಗಳಲ್ಲಿ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಲಿದ್ದಾರೆ. ಇಂದು ಮುಂಜಾನೆಯೇ ಬಿಎಸ್‍ವೈ ಹಾಗೂ ಅವರ ಕುಟುಂಬಸ್ಥರು ಗೃಹ ಪ್ರವೇಶ ಪೂಜೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಂದರು ಕಾವೇರಿ ನಿವಾಸದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ವಾಸವಿದ್ದರು. ಸಿದ್ದರಾಮಯ್ಯರ ಮನೆ ಖಾಲಿ ಮಾಡಿದ್ದು, ಇಂದು ಬಿಎಸ್ ವೈ ಕಾವೇರಿಗೆ ಎಂಟ್ರಿ ಕೊಟ್ಟಿದ್ದಾರೆ. ಲಕ್ಕಿ ಮನೆ ಎಂದು ಬಿಎಸ್‍ವೈ ಖುಷಿಖುಷಿಯಾಗಿ ಗೃಹ ಪ್ರವೇಶ ಪೂಜೆ ಮಾಡಿದ್ದಾರೆ.

    ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಸಂಜೆ ಅರಮನೆ ಮೈದಾನದ ವೈಟ್‍ಪೆಟಲ್ಸ್ ಸಭಾಂಗಣದಲ್ಲಿ ಸಂಜೆ ಸಿಎಂಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಇನ್ನು ಯಾರೂ ಕೂಡ ಹಾರ-ತುರಾಯಿ, ಕಾಣಿಕೆಗಳನ್ನು ತರಬಾರದು ಎಂದು ಆಪ್ತೇಷ್ಠರಿಗೆ ಟ್ವಿಟರ್ ಮೂಲಕ ಸಿಎಂ ಮನವಿ ಮಾಡಿ, ನಿಮ್ಮ ಪ್ರೀತಿ ಸದಾ ಹೀಗೆಯೇ ಇರಲಿ ಅಭಿಮಾನಿಗಳಿಗೆ ಹೇಳಿದ್ದರು.

  • ನನಗೆ ಗನ್ ಮ್ಯಾನ್ ಅವಶ್ಯಕತೆಯಿಲ್ಲ, ರಾಜ್ಯ ಸರ್ಕಾರ ಕ್ಷುಲ್ಲಕ ರಾಜಕೀಯ ಮಾಡಬಾರದು: ಡಿಕೆಶಿ

    ನನಗೆ ಗನ್ ಮ್ಯಾನ್ ಅವಶ್ಯಕತೆಯಿಲ್ಲ, ರಾಜ್ಯ ಸರ್ಕಾರ ಕ್ಷುಲ್ಲಕ ರಾಜಕೀಯ ಮಾಡಬಾರದು: ಡಿಕೆಶಿ

    ಕಲಬುರಗಿ: 27 ಮಾಜಿ ಸಚಿವರಿಗೆ ನೀಡಿದ ಗನ್ ಮ್ಯಾನ್ ವಾಪಸ್ ಪಡೆದಿರುವುದು ಸರಿಯಲ್ಲ, ಬಿಜೆಪಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಇನ್ನು ನನಗೆ ಗನ್ ಮ್ಯಾನ್ ಅವಶ್ಯಕತೆ ಸಹ ಇಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಲಬುರಗಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದಕ್ಕೂ ಮೊದಲು ಡಿಕೆಶಿ ಬೆಳಗ್ಗೆ 8 ಗಂಟೆಗೆ ಗಾಣಗಾಪುರಕ್ಕೆ ತೆರಳಿ ಅಲ್ಲಿ ದತ್ತನ ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಿದರು. ನಾನು ಈ ಪುಣ್ಯಕ್ಷೇತ್ರದ ಅಭಿವೃದ್ಧಿಗೆ 5 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಅದನ್ನು ತಡೆ ಹಿಡಿದಿದ್ದು, ಅದರ ಬಗ್ಗೆ ನಾನು ಮಾತನಾಡಲ್ಲ ಶ್ರೀ ದತ್ತಾತ್ರೇಯ ಅದನ್ನು ನೋಡಿಕೊಳ್ಳುತ್ತಾನೆ. ಅಧಿಕಾರ ಇರುವುದು ಜನರಿಗೆ ಸಹಾಯ ಮಾಡುವುದಕ್ಕೆ ಯಾರೋ ಕೊಟ್ಟಂತಹ ಕಾರ್ಯಕ್ರಮ ರದ್ದು ಮಾಡುವುದಕ್ಕೆ ಅಲ್ಲ ಎಂದು ಸಿಎಂ ಬಿಎಸ್‍ವೈ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

    ಬಿಎಸ್‍ವೈ ಮೇಲೆ ರಮೇಶ್ ಜಾರಕಿಹೊಳಿ ಮನಸ್ತಾಪ ಮಾಡಿಕೊಂಡಿರುವುದು ಅವರಿಗೆ ಬಿಟ್ಟ ವಿಷಯ. ಈ ಹಿಂದೆ ಅವರು ಮೊದಲು ಸಿದ್ದರಾಮಯ್ಯ ನಾಯಕ ಎಂದು ಹೇಳಿದ್ದರು. ಅದಾದ ಬಳಿಕ ನನ್ನನ್ನು ಫ್ರೆಂಡ್ ಎಂದರು. ಇದೀಗ ಬಿಎಸ್‍ವೈ ನಮ್ಮ ನಾಯಕ ಎಂದು ಹೇಳುತ್ತಿದ್ದಾರೆ ಎಂದರು.

    ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡುತ್ತಾರೆ. ಅದನ್ನು ಮಾಧ್ಯಮಗಳ ಮುಂದೆ ನಿಂತು ಎಲ್ಲವು ಹೇಳವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.

    ಡಿ.ಕೆ ಶಿವಕುಮಾರ್ ಗಾಣಗಾಪುರ ಭೇಟಿ ವೇಳೆ ಅರುಣ್ ರೆಡ್ಡಿ ಹಾಗೂ ಡಿಕೆಶಿ ಅಭಿಮಾನಿಗಳು 2 ಜೆಸಿಬಿಗಳ ಮುಖಾಂತರ ಹೂ ಚೆಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು.

  • ಬೇಬಿ ಬೆಟ್ಟದ ಗಣಿಗಾರಿಕೆಗೆ ಸಂಪೂರ್ಣ ನಿಷೇಧ – ಜಿಲ್ಲಾಧಿಕಾರಿ ಆದೇಶ

    ಬೇಬಿ ಬೆಟ್ಟದ ಗಣಿಗಾರಿಕೆಗೆ ಸಂಪೂರ್ಣ ನಿಷೇಧ – ಜಿಲ್ಲಾಧಿಕಾರಿ ಆದೇಶ

    ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಇದೀಗ ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ.

    ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ಇದೀಗ ನಿಷೇಧ ಮಾಡಿರುವುದಾಗಿ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯಿಂದ ಹಳೆ ಮೈಸೂರು ಭಾಗದ ಜೀವ ನಾಡಿಯಾಗಿದ್ದ ಕೆಆರ್‍ಎಸ್ ಡ್ಯಾಂಗೆ ಅಪಾಯ ಎದುರಾಗುತ್ತಿದೆ ಎಂದು ವರದಿಗಳನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿತ್ತು.

    ಈ ಕುರಿತು ಪಬ್ಲಿಕ್ ಟಿವಿಯಲ್ಲಿ ಸಾಕಷ್ಟು ಬಾರಿ ಸುದ್ದಿ ಬಿತ್ತರವಾಗಿತ್ತು. ಹೀಗಾಗಿ ಭಾನುವಾರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೇಬಿ ಬೆಟ್ಟದ ಗಣಿಗಾರಿಕೆಯನ್ನು ನಿಷೇಧ ಮಾಡಲು ಜಿಲ್ಲಾಧಿಕಾರಿಗೆ ಆದೇಶ ನೀಡಿದರು. ಇದೀಗ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಬೇಬಿ ಬೆಟ್ಟದ ಗಣಿಗಾರಿಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

    ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗಾಗಿ ಬಳಕೆ ಮಾಡುತ್ತಿದ್ದ ಎಲ್ಲಾ ಯಂತ್ರೋಪಕರಣಗಳನ್ನು ಖಾಲಿ ಮಾಡಬೇಕೆಂದು ಸಹ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಆದೇಶವನ್ನು ಮೀರಿ ಗಣಿಗಾರಿಕೆ ನಡೆಸಿದರೆ ಕ್ರಿಮಿನಲ್ ಕೇಸ್ ದಾಖಲು ಮಾಡುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  • ಪೇಜಾವರ ಶ್ರೀಗಳಿಗೆ ತೀವ್ರ ಅನಾರೋಗ್ಯ – ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

    ಪೇಜಾವರ ಶ್ರೀಗಳಿಗೆ ತೀವ್ರ ಅನಾರೋಗ್ಯ – ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

    – ಶನಿವಾರ ಅಮಿತ್ ಶಾ, ಬಿಎಸ್ ವೈ ಉಡುಪಿ ಭೇಟಿ ಸಾಧ್ಯತೆ

    ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪೇಜಾವರ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದಾರೆ.

    ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ರಾಜಕೀಯ ನಾಯಕರು, ಭಕ್ತರು, ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಮೋದಿ ಆರೋಗ್ಯ ವಿಚಾರಿಸಿದ್ದಾರೆ. ಶನಿವಾರ ಅಮಿತ್ ಶಾ, ಸಿಎಂ ಯಡಿಯೂರಪ್ಪ ಉಡುಪಿಗೆ ಬರುವ ಸಾಧ್ಯತೆಯಿದೆ. ಆಸ್ಪತ್ರೆ ಸುತ್ತ ಝೀರೋ ಜೋನ್ ನಿರ್ಮಾಣ ಮಾಡಲಾಗಿದೆ.

    ಇಂದು ಬೆಳಗ್ಗೆ 5 ಗಂಟೆಗೆ ಕೆಎಂಸಿ ಆಸ್ಪತ್ರೆಯ ಕಸ್ತೂರಬಾ ಬ್ಲ್ಯಾಕ್‍ನಲ್ಲಿ ದಾಖಲಾಗಿದ್ದರು. ಬಳಿಕ ಅವರನ್ನು ಐಸಿಯುನಲ್ಲಿ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗ್ಗಿನಿಂದಲೂ ಭಕ್ತರು ಆಸ್ಪತ್ರೆ ಬಳಿ ಬಂದು ಸ್ವಾಮೀಜಿಯ ಆರೋಗ್ಯ ವಿಚಾರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸ್ವಾಮೀಜಿ ಅವರಿಗೆ ಹಾರ್ನಿಯಾ ಆಪರೇಶನ್ ಆಗಿತ್ತು. ಬಳಿಕ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದರು. ಆದರೆ ಈಗ ಅವರು ಶ್ವಾಸಕೋಶಕ್ಕೆ ಸಂಬಂಧಪಟ್ಟಂತ ಕೆಲ ಸೋಂಕಿಗೆ ಅವರು ಒಳಗಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

    48 ಗಂಟೆಗಳ ಕಾಲ ನಿರಂತರವಾಗಿ ಸ್ವಾಮೀಜಿ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಪೇಜಾವರ ಶ್ರೀ ಆಸ್ಪತ್ರೆಗೆ ದಾಖಲಾದ ನಂತರ ಇಲ್ಲಿ ಯಾರು ಬರಬಾರದು ಎಂದು ಪೊಲೀಸರು ಹಾಗೂ ಆಸ್ಪತ್ರೆ ಸಿಬ್ಬಂದಿ ಬ್ಯಾರಿಕೇಡ್‍ಗಳನ್ನು ಹಾಕಿದ್ದಾರೆ. ಆಸ್ಪತ್ರೆ ಮುಂಭಾಗದಲ್ಲಿ ಝೀರೋ ಜೋನ್ ಮಾಡಲಾಗಿದೆ. ಪೇಜಾವರ ಶ್ರೀ ಆಸ್ಪತ್ರೆಗೆ ದಾಖಲಾದಾಗಿನಿಂದ ಇವರೆಗೂ ಕೃತಕ ಉಸಿರಾಟಕ್ಕೆ ಅವರು ಸ್ಪಂದಿಸುತ್ತಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.

  • ನಾಲ್ಕೈದು ದಿನಗಳಲ್ಲಿ ಎಂಟಿಬಿ, ವಿಶ್ವನಾಥ್‍ಗೆ ಸಿಗಲಿದೆ ಗುಡ್ ನ್ಯೂಸ್

    ನಾಲ್ಕೈದು ದಿನಗಳಲ್ಲಿ ಎಂಟಿಬಿ, ವಿಶ್ವನಾಥ್‍ಗೆ ಸಿಗಲಿದೆ ಗುಡ್ ನ್ಯೂಸ್

    ಬೆಂಗಳೂರು: ಉಪಚುನಾವಣೆಯಲ್ಲಿ ಸೋಲು ಕಂಡ ಹೆಚ್. ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಅವರಿಗೆ ನಾಲ್ಕೈದು ದಿನಗಳಲ್ಲಿ ಗುಡ್ ನ್ಯೂಸ್ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಉಪಚುನಾವಣೆಯಲ್ಲಿ ಸೋತ ಎಂಟಿಬಿ ಹಾಗೂ ವಿಶ್ವನಾಥ್ ಅವರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ‘ಡೋಂಟ್ ವರಿ’ ಎಂದು ಸಂದೇಶ ನೀಡಿದ್ದಾರೆ. ಅಲ್ಲದೆ ನನ್ನ ಜೊತೆ ಸರ್ಕಾರ ರಚನೆಗೆ ಸಹಕರಿಸಿದ ಎಲ್ಲ ಅನರ್ಹ ಶಾಸಕರಿಗೂ ಈ ಹಿಂದೆ ಮಾತು ಕೊಟ್ಟಂತೆ ಸ್ಥಾನ ಮಾನ ಕೊಡುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಇದನ್ನೂ ಓದಿ: ಅನರ್ಹರು ಸೋತರೆ ಸಚಿವ ಸ್ಥಾನ ಇಲ್ಲ: ಈಶ್ವರಪ್ಪ

    ಇನ್ನು ನಾಲ್ಕೈದು ದಿನದಲ್ಲಿ ದೆಹಲಿಗೆ ಹಾರಲಿರುವ ಬಿಎಸ್‍ವೈ ಅಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅದರಲ್ಲೂ ಸಚಿವರಾಗಿದ್ದು ರಾಜೀನಾಮೆ ಕೊಟ್ಟ ಎಂಟಿಬಿ ಕೈಯನ್ನು ಬಿಜೆಪಿ ಬಿಡಲಾರದು ಎನ್ನಲಾಗಿದೆ. ಬಹುತೇಕ ಇಡೀ ಅಪರೇಷನ್‍ನ ಉಸ್ತುವಾರಿಯನ್ನು ವಹಿಸಿದ್ದ ವಿಶ್ವನಾಥ್‍ರನ್ನು ಹಿಂದೆ ಸರಿಸುವ ಪ್ರಮೇಯ ಬಹುಶಃ ಬಿಜೆಪಿ ಮಾಡಲಾರದು ಎನ್ನಲಾಗಿದೆ. ಹಾಗಾಗಿ ನಾಲ್ಲೈದು ದಿನದಲ್ಲಿ ಸೋತಿರುವ ಎಂಟಿಬಿ ಹಾಗೂ ವಿಶ್ವನಾಥ್‍ಗೂ ಗುಡ್ ನ್ಯೂಸ್ ಸಿಗಬಹುದು ಎನ್ನುವ ನಿರೀಕ್ಷೆಯಿದೆ.

    ಬಿಜೆಪಿಯಿಂದ ಬಂಡಾಯ ಎದ್ದು ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ 11,484 ಮತಗಳ ಅಂತರದಿಂದ ಎಂಟಿಬಿ ನಾಗರಾಜ್ ವಿರುದ್ಧ ಜಯಗಳಿಸಿದ್ದಾರೆ. ಶರತ್ ಬಚ್ಚೇಗೌಡರಿಗೆ 81,667 ಮತಗಳು ಬಿದ್ದರೆ ಎಂಟಿಬಿ ನಾಗರಾಜ್ ಅವರಿಗೆ 70,183 ಮತಗಳು ಬಿದ್ದಿತ್ತು. ಜೆಡಿಎಸ್ ಪರವಾಗಿ 41,443 ವೋಟ್ ಚಲಾವಣೆಯಾಗಿದೆ. ಕಳೆದ ಬಾರಿ ಶರತ್ ಬಚ್ಚೇಗೌಡ ವಿರುದ್ಧ 7,597 ಮತಗಳ ಅಂತರದಿಂದ ಎಂಟಿಬಿ ಜಯಗಳಿಸಿದ್ದರು. ಶರತ್ ಬಚ್ಚೇಗೌಡ ಅವರಿಗೆ 91,227 ಮತಗಳು ಬಿದ್ದಿತ್ತು.

    ಮೈತ್ರಿ ಸರ್ಕಾರವನ್ನು ಬೀಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿಜೆಪಿಯ ವಿಶ್ವನಾಥ್ ಸೋತಿದ್ದಾರೆ. ಬಿಜೆಪಿ ಪರವಾಗಿ 52,998 ಮತಗಳು ಚಲಾವಣೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ 92,725 ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿ 8,575 ಮತಗಳ ಅಂತರದಿಂದ ಗೆದ್ದ ವಿಶ್ವನಾಥ್ ಈ ಬಾರಿ 39,727 ಮತಗಳ ಅಂತರದಿಂದ ಸೋತಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿಂದು ಘಟಾನುಘಟಿಗಳ ಪ್ರಚಾರ – ಸುಧಾಕರ್ ಪರ ಬಿಎಸ್‍ವೈ, ಜೆಡಿಎಸ್ ಪರ ಹೆಚ್‍ಡಿಕೆ ಮತಬೇಟೆ

    ಚಿಕ್ಕಬಳ್ಳಾಪುರದಲ್ಲಿಂದು ಘಟಾನುಘಟಿಗಳ ಪ್ರಚಾರ – ಸುಧಾಕರ್ ಪರ ಬಿಎಸ್‍ವೈ, ಜೆಡಿಎಸ್ ಪರ ಹೆಚ್‍ಡಿಕೆ ಮತಬೇಟೆ

    ಚಿಕ್ಕಬಳ್ಳಾಪುರ: ಉಪಚುನಾವಣಾ ಅಖಾಡದಲ್ಲಿ ಘಟಾನುಘಟಿ ನಾಯಕರ ಭರ್ಜರಿ ಪ್ರಚಾರ ನಡೆಯಲಿದೆ. ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಸಹ ಒಂದೇ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದು, ಆ ಕ್ಷೇತ್ರದ ಮತದಾರರ ಮನಗೆಲುವುದಕ್ಕೆ ಇಬ್ಬರು ನಾಯಕರು ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದ ಈ ಕ್ಷೇತ್ರ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಭದ್ರಕೋಟೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿರುವ ಸುಧಾಕರ್ ಬಿಜೆಪಿ ಪಕ್ಷದಿಂದ ಅಖಾಡಕ್ಕಿಳಿದಿದ್ದು, ಜೆಡಿಎಸ್‍ನಿಂದ ರಾಧಾಕೃಷ್ಣ ಹಾಗೂ ಕಾಂಗ್ರೆಸ್‍ನಿಂದ ಎಂ ಅಂಜಿನಪ್ಪ ಅಖಾಡದಲ್ಲಿದ್ದಾರೆ. ಈಗಾಗಲೇ ಶತಾಯಗತಾಯ ಗೆಲ್ಲಲೆಬೇಕು ಎಂದು ಪಣ ತೊಟ್ಟಿರುವ ಸುಧಾಕರ್, ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರತಿದಿನ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

    ಈಗಾಗಲೇ ಸ್ವತಃ ಸಿಎಂ ಯಡಿಯೂರಪ್ಪ ಸಹ ಎರಡು ಬಾರಿ ಚಿಕ್ಕಬಳ್ಳಾಪುರಕ್ಕೆ ಬಂದು ಸುಧಾಕರ್ ಪರ ಪ್ರಚಾರ ನಡೆಸಿ, ಮೆಡಿಕಲ್ ಕಾಲೇಜಿಗೆ ಶಂಕುಸ್ಥಾಪನೆ ಸೇರಿದಂತೆ ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿದರು. ಈಗ ಮೂರನೇ ಬಾರಿ ಇಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸುತ್ತಿರುವ ಸಿಎಂ ಯಡಿಯೂರಪ್ಪ ಮಂಚೇನಹಳ್ಳಿ ಪಟ್ಟಣದಲ್ಲಿ 3 ಗಂಟೆಗೆ ಬೃಹತ್ ರೋಡ್ ಶೋ ನಡೆಸಲಿದ್ದು, ಮಾಜಿ ಸಿಎಂ ಎಸ್.ಎಂ ಕೃಷ್ಣ ಸಹ ಸುಧಾಕರ್ ಪರ ಪ್ರಚಾರ ನಡೆಸಲಿದ್ದಾರೆ.

    ಇತ್ತ ಜೆಡಿಎಸ್‍ನಿಂದ ಬೆಳ್ಳಂಬೆಳಗ್ಗೆಯೇ ಚುನಾವಣಾ ಅಖಾಡಕ್ಕೆ ಧುಮಕಲಿರುವ ಎಚ್.ಡಿ ಕುಮಾರಸ್ವಾಮಿ, ಮೊದಲಿಗೆ ನಂದಿ ಗ್ರಾಮದಲ್ಲಿ ಪ್ರಚಾರ ನಡೆಸಿ, ಚಿಕ್ಕಬಳ್ಳಾಪುರ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ನಂತರ ಬಿಜೆಪಿ ಅಭ್ಯರ್ಥಿ ಸುಧಾಕರ್ ಸ್ವಗ್ರಾಮ ಪೇರೇಸಂದ್ರ ಸರ್ಕಲ್‍ನಲ್ಲಿ ಬಹಿರಂಗ ಭಾಷಣ ಮಾಡಿ, ತದನಂತರ ಪ್ರತಿಷ್ಠೆಯ ವಿಷಯವಾಗಿರುವ ಮಂಚೇನಹಳ್ಳಿಗೆ ತೆರಳಲಿದ್ದು, ಅಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಎಚ್.ಡಿ ಕುಮಾರಸ್ವಾಮಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಇಡೀ ದಿನ ಕ್ಷೇತ್ರದ್ಯಾಂತ ಎಚ್‍ಡಿಕೆ ಪ್ರಚಾರ ನಡೆಸಲಿದ್ದಾರೆ.

    ಮಂಚೇನಹಳ್ಳಿ ತಾಲೂಕು ಘೋಷಣೆ ಮಾಡಿರುವ ಯಡಿಯೂರಪ್ಪ ಮುಂದೆಯೇ ಮಂಚೇನಹಳ್ಳಿಯಲ್ಲಿ ಶಕ್ತಿ ಪ್ರದರ್ಶನದ ಮೂಲಕ ಭರ್ಜರಿ ಸ್ವಾಗತ ಕೋರಿ ಸನ್ಮಾನಿಸುವುದಕ್ಕೆ ಸುಧಾಕರ್ ಸಿದ್ಧರಾಗಿದ್ದಾರೆ.

  • ಸಿದ್ದರಾಮಯ್ಯ, ಸ್ಪೀಕರ್ ಷಡ್ಯಂತ್ರಕ್ಕೆ ಸುಪ್ರೀಂ ತಕ್ಕ ತೀರ್ಪು ಕೊಟ್ಟಿದೆ: ಸಿಎಂ ಬಿಎಸ್‍ವೈ

    ಸಿದ್ದರಾಮಯ್ಯ, ಸ್ಪೀಕರ್ ಷಡ್ಯಂತ್ರಕ್ಕೆ ಸುಪ್ರೀಂ ತಕ್ಕ ತೀರ್ಪು ಕೊಟ್ಟಿದೆ: ಸಿಎಂ ಬಿಎಸ್‍ವೈ

    ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಸೇರಿ ಷಡ್ಯಂತ್ರ ಮಾಡಿದ್ದರು. ಅದಕ್ಕೆ ಸುಪ್ರೀಂ ತಕ್ಕ ತೀರ್ಪು ಕೊಟ್ಟಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್‍ವೈ, ಸುಪ್ರೀಂ ಕೋರ್ಟ್‍ನ ಆದೇಶಕ್ಕಾಗಿ ಇಡೀ ದೇಶ ಕಾತುರದಿಂದ ಕಾಯುತ್ತಿತ್ತು. ನಮ್ಮ ಹಿಂದಿನ ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯ ಜೊತೆ ಸೇರಿಕೊಂಡು ಷಡ್ಯಂತ್ರ ಮಾಡಿದ್ದರು. ಅದಕ್ಕೆ ಸುಪ್ರೀಂ ಕೋರ್ಟ್ ತಕ್ಕ ತೀರ್ಪು ಕೊಟ್ಟಿದೆ. 17 ಶಾಸಕರು ಸ್ಪರ್ಧೆ ಮಾಡುವುದಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. 17ಕ್ಕೆ 17 ಸೀಟ್ ಗೆಲ್ಲಲು ಪ್ರಯತ್ನಿಸುತ್ತೇವೆ. ನಾಳೆಯಿಂದ ನಮ್ಮ ಮುಖಂಡರುಗಳು ಹಾಗೂ ಸಚಿವರು 17 ಕ್ಷೇತ್ರ ಗೆಲ್ಲುವುದಕ್ಕೆ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇವೆ ಎಂದರು.

    ಇಂದು ಸಂಜೆ ಕೋರ್ ಕಮಿಟಿ ಸಭೆ ಇದೆ. ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ಚರ್ಚೆ ಮಾಡುತ್ತೇವೆ. ಟಿಕೆಟ್ ನೀಡುವುದರ ಬಗ್ಗೆ ರಾಷ್ಟ್ರೀಯ ನಾಯಕರ ಜೊತೆಗೂ ಚರ್ಚೆ ನಡೆಸಿ ತೀರ್ಮಾನಿಸುತ್ತೇವೆ. ಇಂದು ಸಂಜೆ ಅನರ್ಹ ಶಾಸಕರು ವಾಪಸ್ ಬೆಂಗಳೂರಿಗೆ ಬರುತ್ತಾರೆ. ಅವರ ಜೊತೆಗೂ ನಾವು ಸಮಾಲೋಚನೆ ಮಾಡುತ್ತೇವೆ ಎಂದು ಸಿಎಂ ಹೇಳಿದರು.

    ಸುಪ್ರೀಂ ಕೋರ್ಟಿನಿಂದ ಇಂದು ತೀರ್ಪು ಹೊರಬಿದ್ದಿದ್ದು, 17 ಮಂದಿ ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಚಿ ವಿಚಾರಣೆ ನಡೆಸಿದ್ದ ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ನೇತೃತ್ವದ ಪೀಠ ಇಂದು ಮಹತ್ವದ ಆದೇಶ ಪ್ರಕಟಿಸಿದ್ದು, ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪಿತ್ತಿದೆ.

    17 ಮಂದಿ ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿ. ಆದರೆ ವಿಧಾನಸಭೆ ಮುಗಿಯುವವರೆಗೆ ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿಯಲ್ಲ. ಹೀಗಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದೆ.

    ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ತೆರವಾದ ಕ್ಷೇತ್ರಗಳಿಗೆ 6 ತಿಂಗಳ ಒಳಗಡೆ ಚುನಾವಣೆ ನಡೆಸಬೇಕಾಗುತ್ತದೆ.

  • ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ರನ್ನು ತೆಗಳಿದ ಬಿಜೆಪಿ ಮುಖಂಡನ ಉಚ್ಛಾಟನೆ

    ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ರನ್ನು ತೆಗಳಿದ ಬಿಜೆಪಿ ಮುಖಂಡನ ಉಚ್ಛಾಟನೆ

    ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ತೆಗಳಿ, ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಹೊಗಳಿದ ಬಿಜೆಪಿ ಮುಖಂಡನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

    ತುಮಕೂರು ಜಿಲ್ಲೆ ಕೊರಟಗೆರೆ ಮಂಡಳದ ಕಾರ್ಯದರ್ಶಿ ಕೆ. ಶಿವರುದ್ರಯ್ಯ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಯಡಿಯೂರಪ್ಪ ಮಾಸ್ ಲೀಡರ್, ಅವರಂಥಹ ಮಾಸ್ ಲೀಡರ್ ಬಿಜೆಪಿ ಪಕ್ಷದಲ್ಲಿ ಬೇರೆ ಯಾರು ಇಲ್ಲ. ಯಡಿಯೂರಪ್ಪ ಒಂದು ಕುಗ್ರಾಮಕ್ಕೆ ಹೋದರೂ 5 ಸಾವಿರ ಜನ ಸೇರುತ್ತಾರೆ. ನಳಿನ್ ಕುಮಾರ್ ಕಟೀಲ್ ಬಂದರೆ 5 ಸಾವಿರ ಜನನೂ ಸೇರಲ್ಲ ಎಂದು ನಳೀನ್ ಕುಮಾರ್ ಕಟೀಲ್ ಅವರನ್ನು ತೆಗಳಿ ಸಾಮಾಜಿಕ ಜಾಲತಾಣದಲ್ಲಿ ಶಿವರುದ್ರಯ್ಯ ವಿಡಿಯೋ ಹರಿಬಿಟ್ಟಿದ್ದರು.

    ಅಲ್ಲದೆ ಗ್ರಾಮ ಪಂಚಾಯ್ತಿಯಲ್ಲೂ ಗೆಲ್ಲಲು ಸಾಮಥ್ರ್ಯ ಇಲ್ಲದವರು ಯಡಿಯೂರಪ್ಪ ಅವರಿಗೆ ಕಿರುಕುಳ ಕೊಡುತ್ತಿದ್ದಾರೆ. ನೆಮ್ಮದಿಯಾಗಿ ಅಧಿಕಾರ ನಡೆಸಲು ಕೊಡುತ್ತಿಲ್ಲ. ಈಗಲಾದರೂ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚೊದು ಗ್ಯಾರಂಟಿ ಎಂಬ ಹೇಳಿಕೆ ನೀಡಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

    ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧ್ಯಕ್ಷ ಜಿ.ಬಿ ಜ್ಯೋತಿಗಣೇಶ್ ಶಿವರುದ್ರಯ್ಯ ಅವರನ್ನು ವಜಾಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ.

  • ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ

    ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ

    ಮೈಸೂರು: ದಸರಾ ಉದ್ಘಾಟನೆ ವೇಳೆ ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ ತೋರಲಾಗಿದೆ.

    ಕಾರ್ಯಕ್ರಮ ಉದ್ಘಾಟನೆಗೂ ಮೊದಲು ಎಸ್.ಎಲ್ ಭೈರಪ್ಪ ಅವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರಬೇಕಿತ್ತು. ಏಕೆಂದರೆ ದಸರಾ ಉದ್ಘಾಟನೆಗೆ ಮೆರವಣಿಗೆ ಮೂಲಕ ಸ್ವಾಗತಿಸುವುದು ಶಿಷ್ಟಾಚಾರ. ಆದರೆ ಉದ್ಘಾಟನಕಾರ ಎಸ್.ಎಲ್ ಭೈರಪ್ಪ ಅವರನ್ನೇ ಸರ್ಕಾರ ಹಾಗೂ ಮಂತ್ರಿಗಳು ಮರೆತು ಬಿಟ್ಟಿದ್ದರು.

    ಸಿಎಂ ಯಡಿಯೂರಪ್ಪ ಅವರು ಭೈರಪ್ಪ ಅವರನ್ನು ಸ್ವಾಗತಿಸಿ ಮೆರವಣಿಗೆ ಮೂಲಕ ಮಹಿಷಾ ಪ್ರತಿಮೆಯಿಂದ ವೇದಿಕೆಗೆ ಕರೆದೊಯ್ಯಬೇಕಿತ್ತು. ಹೀಗಾಗಿ ಭೈರಪ್ಪ ಅವರು ಸಿಎಂಗಾಗಿ 30 ನಿಮಿಷಗಳ ಕಾಲ ಮಹಿಷಾ ಪ್ರತಿಮೆ ಬಳಿ ನಿಲ್ಲಿಸಿಕೊಂಡ ಕಾರಿನಲ್ಲೇ ಕುಳಿತಿದ್ದರು. ಅರ್ಧ ಗಂಟೆಯಾದರೂ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಬರಲೇ ಇಲ್ಲ. ಹೀಗಾಗಿ ಯಡಿಯೂರಪ್ಪ ಹಾಗೂ ಸಚಿವರೆಲ್ಲಾ ಸಾಗಿದ ಮೇಲೆ ಭೈರಪ್ಪ ಅವರು ಬೇಸರದಿಂದ ಒಬ್ಬರೇ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದರು.

    ಸಾಹಿತಿ ಎಸ್.ಎಲ್. ಭೈರಪ್ಪ ಅವರು ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ಅಧಿಕೃತ ಚಾಲನೆ ಕೊಟ್ಟಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸದಾನಂದ ಗೌಡ, ಜೆಡಿಎಸ್ ನಾಯಕ ಜಿ.ಟಿ ದೇವೇಗೌಡ, ಸಚಿವ ವಿ. ಸೋಮಣ್ಣ ಸೇರಿದಂತೆ ರಾಜ್ಯ ಸರ್ಕಾರದ ಸಚಿವರು ಭಾಗಿಯಾಗಿದ್ದು, ಸಾಂಸ್ಕೃತಿಕ ನಾಡಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ.

  • ಮೈಸೂರಿನಲ್ಲಿ ನಾಳೆಯಿಂದ ದಸರಾ ಮಹೋತ್ಸವ ಆರಂಭ

    ಮೈಸೂರಿನಲ್ಲಿ ನಾಳೆಯಿಂದ ದಸರಾ ಮಹೋತ್ಸವ ಆರಂಭ

    ಮೈಸೂರು: ಭಾನುವಾರದಿಂದ ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ಷರಶಃ ಧಾರ್ಮಿಕ, ಪಾರಂಪರಿಕ, ಸಾಂಸ್ಕೃತಿಕ ಹಾಗೂ ಮನರಂಜನೆ ಪೂರಿತ ವಾತಾವರಣ ನಿರ್ಮಾಣವಾಗಲಿದೆ. ಏಕೆಂದರೆ ನಾಳೆಯಿಂದ ದಸರಾ ಮಹೋತ್ಸವ ಆರಂಭವಾಗಲಿದೆ.

    ಮೈಸೂರು ದಸರಾ ಮಹೋತ್ಸವ ವಿಶ್ವವನ್ನೇ ತನ್ನತ್ತ ಸೆಳೆದುಕೊಂಡು ತನ್ನ ವೈವಿಧ್ಯಮಯವಾದ ಆಚರಣೆಗಳನ್ನು ಜಗತ್ತಿಗೆ ತೋರ್ಪಡಿಸುತ್ತದೆ. ಭಾನುವಾರದಿಂದ ಮೈಸೂರಿನಲ್ಲಿ ದಸರಾ ಮೆರಗು ತುಂಬಲಿದೆ. ಈ ಮೆರುಗಿಗೆ ಸಾಹಿತಿ ಎಸ್.ಎಲ್ ಭೈರಪ್ಪ ಅವರು ಭಾನುವಾರ ಬೆಳಗ್ಗೆ 9.39ರ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿ ಬೆಟ್ಟದಲ್ಲಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಚರಣೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

    ದಸರಾ ಉದ್ಘಾಟನಾ ಕಾರ್ಯಕ್ರಮ ಭಾನುವಾರ ಚಾಮುಂಡಿ ಬೆಟ್ಟದಲ್ಲಿ ಜರುಗಲಿದ್ದು, ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಸಂಪುಟದ ಸಚಿವರು, ಸಂಸದರು, ಶಾಸಕರು ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ.

    ಒಂದು ಕಡೆ ಭಾನುವಾರ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ದೊರೆತರೆ, ಇತ್ತ ಮೈಸೂರು ಅಂಬ ವಿಲಾಸ ಅರಮನೆಯಲ್ಲಿ ಯದುವಂಶದ ಅರಸ ಯದುವೀರ ಕೃಷ್ಣದತ್ತ ಒಡೆಯರ್ ಅವರು ಖಾಸಗಿ ದರ್ಬಾರನ್ನು ಆರಂಭಿಸಲಿದ್ದಾರೆ. ಇದಲ್ಲದೇ ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಸಹ ಜರುಗುಲಿವೆ. ಇನ್ನೊಂದೆಡೆ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ನಗರಾದ್ಯಂತ 10 ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಿಗೂ ಸಹ ಚಾಲನೆ ನೀಡಲಾಗುತ್ತದೆ.

    ಭಾನುವಾರದಿಂದ ಹತ್ತು ದಿನಗಳ ಸಾಂಸ್ಕೃತಿಕ ನಗರಿ ಮೈಸೂರು ಮಧುವಣಗಿತ್ತಿಯಂತೆ ಅಲಂಕಾರಗೊಂಡು, ತನ್ನ ಸಂಸ್ಕೃತಿಯನ್ನು ಬಿತ್ತರಿಸುವ ಮೂಲಕ ಜನರಿಗೆ ಧಾರ್ಮಿಕ, ಪಾರಂಪರೆಯ ಜೊತೆಗೆ ಮನರಂಜನೆಯ ಬೆಳಕನ್ನೂ ಸಹ ಚೆಲ್ಲಲಿದೆ.