Tag: B L Santosh

  • ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ: ಬಿ.ಎಲ್.ಸಂತೋಷ್

    ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ: ಬಿ.ಎಲ್.ಸಂತೋಷ್

    – ಗೋವು, ಕುಟುಂಬ ವ್ಯವಸ್ಥೆ, ಮೌಲ್ಯಗಳು ತೀರ್ಥಕ್ಷೇತ್ರಗಳೇ ಇವರ ಟಾರ್ಗೆಟ್ ಅಂತ ಆರೋಪ

    ಉಡುಪಿ: ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (B.L.Santosh) ಆರೋಪಿಸಿದ್ದಾರೆ.

    ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಪ್ರಕರಣ ಸಂಬಂಧ ಬಿ.ಎಲ್.ಸಂತೋಷ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿಯಲ್ಲಿ ಬಿಜೆಪಿ ಕಚೇರಿಯ ಶಿಲಾನ್ಯಾಸದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ. ಮೂರು ವರ್ಷದ ಹಿಂದೆ ಉಡುಪಿ ಕೃಷ್ಣಮಠದ ಮೇಲೂ ಆಕ್ರಮಣ ನಡೆದಿತ್ತು. ಸ್ವಲ್ಪ ದಿನದಲ್ಲಿ ಮೂಡುಬಿದ್ರೆ ಮೇಲೆ ಆಕ್ರಮಣ ನಡೆಯುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್;‌ ಹಲವರಿಗೆ SIT ಬುಲಾವ್‌ – ಯೂಟ್ಯೂಬರ್‌ಗಳಿಗೂ ನೋಟಿಸ್‌ ನೀಡಿ ವಿಚಾರಣೆ

    ಹುಲಿಗೆ ರಕ್ತದ ರುಚಿ ಸಿಕ್ಕಿದೆ. ವೈಚಾರಿಕ ರಾಜಕೀಯದ ಮೂಲಕ ಶಬರಿಮಲೆಯಲ್ಲಿ ಸ್ವಲ್ಪ ರಕ್ತದ ರುಚಿ ನೋಡಿದ್ದರು. ಈಶ ಆಶ್ರಮ, ಶನಿ ಸಿಂಗಾಪುರದಲ್ಲೂ ರಕ್ತದ ರುಚಿ ನೋಡಿದ್ದರು. ಧರ್ಮಸ್ಥಳದಲ್ಲಿ ರಕ್ತದ ರುಚಿ ನೋಡುವ ಕೆಲಸ ಮಾಡುತ್ತಲೇ ಇದ್ದಾರೆ. ನಡೆದಿರುವ ಆಕ್ರಮಣಕ್ಕೆ ಶಿಕ್ಷೆ ಆಗಬೇಕು. ಮಾಡುತ್ತಿರುವ ಅಪಪ್ರಚಾರಕ್ಕೂ ಶಾಸ್ತಿ ಆಗಬೇಕು. ಈ ಸಂಕಲ್ಪವನ್ನ ನಾವು ನಮ್ಮ ಕಾರ್ಯಾಲಯದಲ್ಲಿ ಮಾಡಬೇಕು ಎಂದು ಕರೆ ಕೊಟ್ಟಿದ್ದಾರೆ.

    ಇದು ವ್ಯಕ್ತಿ ಅಥವಾ ಸಂಸ್ಥೆಗೆ ನಡೆದ ಆಕ್ರಮಣ ಅಲ್ಲ. ನಮ್ಮ ಶ್ರದ್ಧೆ, ನಂಬಿಕೆ, ವಿಷಯದ ಮೇಲೆ ಮಾಡಿರುವ ಅಕ್ರಮಣ ಇದು. ಉಡುಪಿ ಮೇಲೆ ಆಕ್ರಮಣ ಯಾಕೋ ಈಗ ಬಿಟ್ಟು ಬಿಟ್ಟಿದ್ದಾರೆ. ಮತ್ತೆ ಆಕ್ರಮಣ ಪಿಕ್‌ಅಪ್ ಮಾಡ್ತಾರೋ ಗೊತ್ತಿಲ್ಲ. ಹಿಂದುಗಳ ಶ್ರದ್ಧೆಯ ವಿಚಾರ ಮತ್ತು ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಗೋವು, ಕುಟುಂಬ ವ್ಯವಸ್ಥೆ, ಮೌಲ್ಯಗಳು ತೀರ್ಥಕ್ಷೇತ್ರಗಳು ಇವರ ಟಾರ್ಗೆಟ್ ಎಂದು ಅಸಮಧಾನ ಹೊರಹಾಕಿದ್ದಾರೆ.

    ಕುಂಭಮೇಳದ ಮೇಲೆ ನಿರಂತರ ಅಪಪ್ರಚಾರ ನಡೆಯಿತು. ಕುಂಭಮೇಳಕ್ಕೆ ಹೋದರೆ ಜಗತ್ತಲ್ಲಿ ಇಲ್ಲದ ಕಾಯಿಲೆ ಬರುತ್ತದೆ ಅಂತ ಹೇಳಿದ್ರು. ಆದರೆ, ದೇಶದ ನಂಬಿಕೆ ಬಹಳ ಗಟ್ಟಿಯಾಗಿದೆ. ಆರೋಪ ಬಂದ ಮೇಲೆ ಕೋಟ್ಯಂತರ ಭಕ್ತರ ಸಂಖ್ಯೆ ಜಾಸ್ತಿ ಆಯ್ತು. ನಾವು ಸವಾಲನ್ನು ಎದುರಿಸುತ್ತೇವೆ. ನಮ್ಮ ಸಮಾಜ ಸಶಕ್ತವಾಗಿದೆ. ದೇಶ ಮತ್ತು ಸಂಸ್ಕೃತಿಗೆ ಹಾಕಿರುವ ಸವಾಲಿಗೆ ಮುಟ್ಟಿ ನೋಡುವಂತೆ ಉತ್ತರ ಕೊಡುತ್ತೇವೆ ಎಂದಿದ್ದಾರೆ.

  • ಮತ್ತೊಬ್ಬ ಬಿಜೆಪಿ ನಾಯಕ ದೆಹಲಿಗೆ – ಲೋಕಸಭೆ ಟಿಕೆಟ್‌ಗೆ ಸುಧಾಕರ್‌ ಕಸರತ್ತು?

    ಮತ್ತೊಬ್ಬ ಬಿಜೆಪಿ ನಾಯಕ ದೆಹಲಿಗೆ – ಲೋಕಸಭೆ ಟಿಕೆಟ್‌ಗೆ ಸುಧಾಕರ್‌ ಕಸರತ್ತು?

    ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಷ್ಟ್ರೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ (BJP) ಮಾಜಿ ಸಚಿವ ಡಾ. ಕೆ.ಸುಧಾಕರ್‌ (K.Sudhakar) ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

    ಸುಧಾಕರ್‌ ಅವರು ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿ.ಎಲ್‌.ಸಂತೋಷ್‌ (B.L.Santosh) ಜೊತೆಗಿರುವ ಫೋಟೋ ವೈರಲ್‌ ಆಗಿದೆ. ಚಿಕ್ಕಬಳ್ಳಾಪುರ ಲೋಕಸಭೆ ಟಿಕೆಟ್‌ಗೆ ಸುಧಾಕರ್‌ ಕಸರತ್ತು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೈಯಲ್ಲಿ ಮಂತ್ರಾಕ್ಷತೆ, ಬಗಲಲ್ಲಿ ದೊಣ್ಣೆ ಹಿಡಿದಿರುವವರಿಗೆ ಕಾಂಗ್ರೆಸ್ಸಿಗರು ಹೆದರಲ್ಲ: ಡಿಕೆಶಿ

    ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ಕೆ.ಸುಧಾಕರ್‌ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಇವರ ವಿರುದ್ಧ ಸ್ಪರ್ಧೆಗಿಳಿದಿದ್ದ ಕಾಂಗ್ರೆಸ್‌ನ ಪ್ರದೀಪ್‌ ಈಶ್ವರ್‌ ಗೆಲುವು ಸಾಧಿಸಿದ್ದರು.

    ಈಗ ಲೋಕಸಭೆ ಚುನಾವಣೆಗೆ ಕಾಲ ಸನ್ನಿಹಿತವಾಗಿದೆ. ಈ ಹೊತ್ತಲ್ಲಿ ರಾಜ್ಯ ನಾಯಕರು ದೆಹಲಿಗೆ ತೆರಳಿ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿ ಚುನಾವಣೆಗೆ ಟಿಕೆಟ್‌ ಗಿಟ್ಟಿಸಲು ಕಸರತ್ತು ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಶ್ರೀರಾಮ ಅವರಪ್ಪನ ಮನೆ ಆಸ್ತಿನಾ? – ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಡಿಕೆಶಿ

    ಈಚೆಗೆ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ದೆಹಲಿಗೆ ತೆರಳಿ ಅಮಿತ್‌ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಇವರು ತಮ್ಮ ಪುತ್ರ ಕಾಂತೇಶ್‌ನನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಟಿಕೆಟ್‌ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿದ್ದ ಸೋಮಣ್ಣ ಕೂಡ ದೆಹಲಿಗೆ ಭೇಟಿ ನೀಡಿ ಪಕ್ಷದ ನಾಯಕರನ್ನು ಭೇಟಿಯಾಗಿದ್ದರು.

  • ಕೆಲವೊಬ್ಬರು ಸುಧಾರಿಸಲು ಸಾಧ್ಯವಿಲ್ಲ ಬಿ. ಎಲ್. ಸಂತೋಷ್ ವ್ಯಂಗ್ಯ

    ಕೆಲವೊಬ್ಬರು ಸುಧಾರಿಸಲು ಸಾಧ್ಯವಿಲ್ಲ ಬಿ. ಎಲ್. ಸಂತೋಷ್ ವ್ಯಂಗ್ಯ

    ನವದೆಹಲಿ: ಕೆಲವೊಬ್ಬರು ಸುಧಾರಿಸುವುದು ಸಾಧ್ಯವಿಲ್ಲ ಎಂದು ಎಸ್‍ಪಿ ಅಧ್ಯಕ್ಷನಿಗೆ ಪರೋಕ್ಷವಾಗಿ ವ್ಯಂಗ್ಯವಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವ್ಯಂಗ್ಯವಾಡಿದ್ದಾರೆ.

    ಪಂಚ ರಾಜ್ಯಗಳ ವಿಧಾನಸಭೆಯ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಬಿ. ಎಲ್. ಸಂತೋಷ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ಗೆ ಸೋಲು

    ಈ ವೇಳೆ ಬಿಜೆಪಿಯ ಗೆಲುವಿನ ಬಗ್ಗೆ ಯಾವಾಗಲೂ ಟೀಕೆ ಮಾಡುವ ಪ್ರತಿಪಕ್ಷಗಳ ವಿರುದ್ಧ ಸಿಡಿದ ಅವರು, ದೇವ ಭೂಮಿಯಲ್ಲಿ ಬಿಜೆಪಿಯು ಗೆಲುವಿನ ನಾಗಾಲೋಟದತ್ತ ಸಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿದ್ದು, ಗಣರಾಜ್ಯವನ್ನು ಕಿತ್ತೊಗೆಯಲಾಗುತ್ತಿದೆ. ಗಡಿನಾಡು ಪಂಜಾಬ್‍ನಲ್ಲಿ ಆಮ್ ಆದ್ಮಿಯು ಗೆಲುವಿನತ್ತ ಸಾಗುತ್ತಿದೆ. ಪರ್ಯಾಯ ಆಡಳಿತದ ಭರವಸೆ, ಆಶಾವಾದ ಮೂಡಿದೆ. ಕೆಲವೊಬ್ಬರು ಸುಧಾರಿಸುವುದೇ ಇಲ್ಲ ಎಂದು ಟ್ವೀಟ್ ಮೂಲಕ ಕುಹಕವಾಡಿದ್ದಾರೆ. ಇದನ್ನೂ ಓದಿ: ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ

    ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಫಲಿತಾಂಶ ಬರುವಂತೆ ಮತಯಂತ್ರಗಳನ್ನು ತಿರುಚಲು ಸರ್ಕಾರದಿಂದ ಜಿಲ್ಲಾಧಿಕಾರಿಗಳಿಗೆ ಸೂಚನೆ ಬಂದಿದೆ ಅಂತ ಆಖಿಲೇಶ್ ಯಾದವ್ ಮಂಗಳವಾರ ಆರೋಪಿಸಿದ್ದರು. ವಾರಣಾಸಿಯಲ್ಲಿ ಇವಿಎಂಗಳನ್ನು ಸಾಗಿಸುತ್ತಿದ್ದು ಎರಡು ಟ್ರಕ್‍ಗಳನ್ನು ಎಸ್‍ಪಿ ಕಾರ್ಯಕರ್ತರು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ ಹರಸಾಹಸದ ನಂತರ ಟ್ರಕ್‍ಗಳು ಮುಂದೆ ಸಾಗಲು ಅನುವು ಮಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.

    ಆರೋಪ ಬಂದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಬಳಸಿರುವ ಮತ ಯಂತ್ರಗಳನ್ನು ಬಲಿಷ್ಟವಾದ ಒಂದು ಕೊಠಡಿಯಲ್ಲಿ ಭದ್ರವಾಗಿ ಇರಿಸಲಾಗಿದೆ. ಅಲ್ಲಿ ಸಿ.ಸಿ.ಟಿ.ವಿ ಕಣ್ಗಾಗಾವಲು ಇದೆ. ಬಲಿಷ್ಟವಾದ ಆ ಕೊಠಡಿಯಿಂದ ಯಾವುದೇ ಮತಯಂತ್ರಗಳನ್ನು ಸಾಗಿಸಿಲ್ಲ. ಟ್ರಕ್‍ನಲ್ಲಿ ಇರುವ ಮತಯಂತ್ರಗಳನ್ನು ಚುನಾವಣೆಯಲ್ಲಿ ಬಳಿಸಿಲ್ಲ. ಮತ ಎಣಿಕೆ ಸಿಬ್ಬಂದಿಗೆ ತರಬೇತಿ ನೀಡಲು ಈ ಮತಯಂತ್ರಗಳನ್ನು ಸಾಗಿಸಲಾಗುತ್ತಿತ್ತು. ರಾಜಕೀಯ ಪಕ್ಷಗಳು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಎಂದು ವಾರಣಾಸಿ ಜಿಲ್ಲಾಧಿಕಾರಿ ಕೌಶಲ್ ಶರ್ಮಾ ಸ್ಪಷ್ಟನೆ ನೀಡಿದ್ದರು.

  • ರಾಮಲಾಲ್ ಜಾಗಕ್ಕೆ ಬಿಎಲ್ ಸಂತೋಷ್ ನೇಮಕ

    ರಾಮಲಾಲ್ ಜಾಗಕ್ಕೆ ಬಿಎಲ್ ಸಂತೋಷ್ ನೇಮಕ

    ಬೆಂಗಳೂರು: ರಾಮಲಾಲ್ ಅವರ ರಾಜೀನಾಮೆಯಿಂದ ತೆರವಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ನೇಮಿಸಲಾಗಿದೆ.

    ಬಿಜೆಪಿ ರಾಷ್ಟ್ರಾಧ್ಯಕ್ಷ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿ.ಎಲ್.ಸಂತೋಷ್ ಅವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಈ ನೇಮಕವು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಮಾಧ್ಯಮ ಹೇಳೆಕೆಯ ಮೂಲಕ ತಿಳಿಸಿದ್ದಾರೆ.

    ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದ ರಾಮಲಾಲ್ ಅವರು, ನನ್ನನ್ನು ಆರ್‌ಎಸ್‌ಎಸ್‌ಗೆ ಕಳುಹಿಸಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಳಿಸಿ ಎಂದು ಮನವಿ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ರಾಮ್‍ಲಾಲ್ ಅವರ ಮನವಿಯನ್ನು ಆಲಿಸಿದ ಹೈಕಮಾಂಡ್ ಬಿಡುಗಡೆ ನೀಡಿದೆ. ಹೀಗಾಗಿ ರಾಮಲಾಲ್ ಅವರು 10 ವರ್ಷಗಳ ನಂತರ ಆರ್‌ಎಸ್‌ಎಸ್‌ಗೆ ವಾಪಸಾಗಿದ್ದಾರೆ.

    ರಾಮಲಾಲ್ ಅವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮಧ್ಯೆ ಪ್ರಮುಖ ಸಂವಹನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಾಮಾನ್ಯವಾಗಿ ಸಂಘಟನೆಯಲ್ಲಿ ಹಲವು ವರ್ಷಗಳ ದುಡಿದವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಹುದ್ದೆಯನ್ನು ನಿರ್ವಹಿಸಿದ್ದರು.

    ರಾಮಲಾಲ್ ಅಡಿಯಲ್ಲಿ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ.ಸತೀಶ್ ಈಗ ಅವರ ಸ್ಥಾನ ತುಂಬಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಬಿಜೆಪಿ ಹೈಕಮಾಂಡ್ ಬಿ.ಎಲ್.ಸಂತೋಷ್ ಅವರಿಗೆ ಮಣೆ ಹಾಕಿದೆ.

    ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಸಂಘಟಿಸುವ ಉದ್ದೇಶದಿಂದ ಬಿ.ಎಲ್.ಸಂತೋಷ್ ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗುತ್ತಿದೆ.

  • ಬಿಜೆಪಿಯ ಪ್ರಭಾವಿ ನಾಯಕ ಬಿಎಲ್ ಸಂತೋಷ್ ಜೊತೆ ಸುಮಲತಾ ಚರ್ಚೆ

    ಬಿಜೆಪಿಯ ಪ್ರಭಾವಿ ನಾಯಕ ಬಿಎಲ್ ಸಂತೋಷ್ ಜೊತೆ ಸುಮಲತಾ ಚರ್ಚೆ

    ಬೆಂಗಳೂರು: ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಯ ಪ್ರಭಾವಿ ನಾಯಕರನ್ನು ಭೇಟಿ ಮಾಡುವ ಮೂಲಕ ಕುತೂಹಲ ಮುಂದುವರಿಸಿದ್ದಾರೆ.

    ಸಂಸದೆ ಸುಮಲತಾ ಅವರು ಮಾಜಿ ಸಿಎಂ ಎಸ್.ಎಂ.ಕೃಷ್ಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಇತ್ತೀಚೆಗಷ್ಟೇ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಇಂದು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಭೇಟಿ ಮಾಡಿದ್ದಾರೆ.

    ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿದ ಸುಮಲತಾ ಅವರನ್ನು ಬಿ.ಎಲ್.ಸಂತೋಷ್ ಹಾಗೂ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ ಸ್ವಾಗತಿಸಿದರು. ಬಿಜೆಪಿ ಕಚೇರಿಯ ವಿಐಪಿ ಕೊಠಡಿಯಲ್ಲಿ ಬಿ.ಎಲ್ ಸಂತೋಷ್ ಮತ್ತು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಜೊತೆ ಸುಮಲತಾ ಅಂಬರೀಷ್ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದರು. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ಚರ್ಚೆ ಬಳಿಕ ಮಾತನಾಡಿದ ಸುಮಲತಾ ಅಂಬರಿಷ್ ಅವರು, ಚುನಾವಣೆಯಲ್ಲಿ ನನಗೆ ಬೆಂಬಲ ಕೊಟ್ಟಿದ್ದಾರೆ. ಹೀಗಾಗಿ ಬಿಜೆಪಿ ನಾಯಕರಿಗೆ ಧನ್ಯವಾದ ತಿಳಿಸಲು ಬಂದಿದ್ದೇನೆ. ಬಾಹ್ಯ ಬೆಂಬಲ ನೀಡುವಂತೆ ಬಿಜೆಪಿ ನಾಯಕರು ಕೇಳಿಕೊಂಡಿಲ್ಲ ಹಾಗೂ ಈ ಕುರಿತು ಯಾವುದೇ ಚರ್ಚೆಯಾಗಿಲ್ಲ. ಒಂದು ವೇಳೆ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾದರೆ ಮಂಡ್ಯ ಜನತೆ ಜೊತೆ ಚರ್ಚಿಸಿ ಮುಂದುವರಿಯುತ್ತೇನೆ ಎಂದು ತಿಳಿಸಿದರು.

    ಮಂಡ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿ ನಾಯಕರ ಜೊತೆಗೆ ಮಾತುಕತೆ ಅಗತ್ಯವಾಗುತ್ತದೆ ಎಂದು ಹೇಳಿದರು.

    ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಇಲ್ಲದ ಸಂದರ್ಭದಲ್ಲೇ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿರುವ ಸುಮಲತಾ ಅವರ ನಡೆ ಕುತೂಹಲ ಮೂಡಿಸಿದೆ.

  • ಜೀನ್ಸ್, ಡಿಎನ್‍ಎ ನೋಡಿ ಟಿಕೆಟ್ ಕೊಡ್ತಾ ಹೋದ್ರೆ ಹೇಗೆ: ಬಿ.ಎಲ್ ಸಂತೋಷ್ ಪ್ರಶ್ನೆ

    ಜೀನ್ಸ್, ಡಿಎನ್‍ಎ ನೋಡಿ ಟಿಕೆಟ್ ಕೊಡ್ತಾ ಹೋದ್ರೆ ಹೇಗೆ: ಬಿ.ಎಲ್ ಸಂತೋಷ್ ಪ್ರಶ್ನೆ

    ಚಾಮರಾಜನಗರ: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿದ್ದರ ಹಿಂದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಸ್ತಕ್ಷೇಪವಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಜೀನ್ಸ್, ಡಿಎನ್‍ಎ ನೋಡಿ ಟಿಕೆಟ್ ಕೊಡ್ತಾ ಹೋದ್ರೆ ಪಾರ್ಟಿ ಮೆಂಬರ್ ಸ್ಲಿಪ್‍ಗೆ ಬೆಲೆ ಬೇಕಲ್ಲ ಎಂದು ಪರೋಕ್ಷವಾಗಿ ಹೇಳುವ ಮೂಲಕ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ತಪ್ಪಿದೆ ಎಂದು ಬಿ.ಎಲ್. ಸಂತೋಷ್ ಹೇಳಿದ್ದಾರೆ.

    ಚಾಮರಾಜನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಎಲ್.ಸಂತೋಷ್, ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಕಟ್ಟಿದ ಇಬ್ಬರಲ್ಲಿ ದಿವಂಗತ ಅನಂತ್‍ಕುಮಾರ್ ಸಹ ಒಬ್ಬರು. ಅನಂತ್‍ಕುಮಾರ್ ಅವರಿಗೆ ಏನು ಕ್ರೆಡಿಟ್ ಕೊಡಬೇಕು ಅದನ್ನು ಸಂಘ ಪರಿವಾರ ಹಿಂದಿನಿಂದಲೂ ಕೊಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಕೊಡುತ್ತದೆ. ಅದೇ ಕ್ರೆಡಿಟ್ ಅವರ ಹೆಂಡತಿ ತೇಜಸ್ವಿನಿ ಪಡೆದುಕೊಳ್ಳಬೇಕೆಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

    20-30 ವರ್ಷ ಪಾರ್ಟಿ ರಾಜಕಾರಣದಲ್ಲಿ ಮುಂದುವರಿಯಲು ಸಾಮರ್ಥ್ಯ ಇರುವವರಿಗೆ ಟಿಕೆಟ್ ಕೊಟ್ಟಿದ್ದೇವೆ. ಸದ್ಯ ಟಿಕೆಟ್ ಪಡೆದವರು ತಮ್ಮ ಸಾಮರ್ಥ್ಯವನ್ನು ಮುಂದಿನ ಐದು ವರ್ಷಗಳಲ್ಲಿ ಸಾಬೀತು ಮಾಡಬೇಕಾಗುತ್ತದೆ. ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ ಎಂದು ಹೇಳುವುದು ಸರಿಯಲ್ಲ. ಪಕ್ಷ ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠವಾಗಿಸಲು ಯಾರಿಗೂ ಅಗೌರವ ಸೂಚಿಸದೇ ಯುವಕರಿಗೆ ಟಿಕೆಟ್ ನೀಡಲಾಗಿದೆ. ಜೀನ್ಸ್, ಡಿಎನ್‍ಎ ಆಧಾರದ ಮೇಲೆ ಟಿಕೆಟ್ ನೀಡಿ ಎಂದು ಎಲ್ಲರೂ ಕೇಳಿದರೆ ಪಾರ್ಟಿಯ ಮೆಂಬರ್ ಶಿಪ್ ರಶೀದಿಗೆ ಬೆಲೆ ಇರಲ್ಲ. ಹಾಗಾಗಿ ಪಕ್ಷ ಎಲ್ಲರನ್ನೂ ಗೌರವದಿಂದ ನೋಡಿ ಸೂಕ್ತ ಸ್ಥಾನಮಾನಗಳನ್ನು ನೀಡುತ್ತಿದೆ ಎಂದರು.

    ಸದ್ಯ ತೇಜಸ್ವಿನಿ ಅವರ ಗೌರವ ಮತ್ತು ಸಾಮರ್ಥ್ಯವನ್ನು ಲೆಕ್ಕ ಹಾಕಿ ಬಿಜೆಪಿ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನೀಡಿರುವ ಅವಕಾಶ ಬಳಸಿಕೊಂಡು ತಮ್ಮನ್ನು ತಾವು ಪಕ್ಷದಲ್ಲಿ ಗುರುತಿಸಿಕೊಳ್ಳಬಹುದು. ಟಿಕೆಟ್ ನೀಡಿದ್ರೆ ಗೌರವ, ನೀಡಲ್ಲ ಅಂದ್ರೆ ಅಗೌರವ ಎಂದು ಹೇಳೋದು ತಪ್ಪಾಗುತ್ತದೆ. ಈ ರೀತಿ ಟಿಕೆಟ್ ನೀಡುವುದು ಪಕ್ಷಕ್ಕೆ ತುಂಬಾನೇ ಅಪಾಯಕಾರಿ. ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ಈ ಅವಕಾಶವನ್ನು ಬಳಸಿಕೊಂಡು ಪಕ್ಷದಲ್ಲಿ ಅವರು ಬೆಳೆಯಬಹುದು ಎಂದು ಹೇಳುವ ಮೂಲಕ ತೇಜಸ್ವಿ ಸೂರ್ಯರಿಗೆ ಟಿಕೆಟ್ ನೀಡಿದ್ದನ್ನು ಬಿ.ಎಲ್.ಸಂತೋಷ್ ಸಮರ್ಥಿಸಿಕೊಂಡಿದ್ದಾರೆ.