Tag: Azharuddin

  • ಅಜರುದ್ದೀನ್ ವಿರುದ್ಧ 20.96 ಲಕ್ಷ ರೂ. ವಂಚನೆ ಆರೋಪ – ದೂರು ದಾಖಲು

    ಅಜರುದ್ದೀನ್ ವಿರುದ್ಧ 20.96 ಲಕ್ಷ ರೂ. ವಂಚನೆ ಆರೋಪ – ದೂರು ದಾಖಲು

    ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜರುದ್ದೀನ್ ಹಾಗೂ ಇನ್ನಿಬ್ಬರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

    ಅಜರುದ್ದೀನ್ ಹಾಗೂ ಇನ್ನಿಬ್ಬರು ಬರೋಬ್ಬರಿ 20.96 ಲಕ್ಷ ವಂಚಿಸಿದ್ದಾರೆ ಎಂದು ಟ್ರಾವೆಲ್ ಏಜೆಂಟ್ ಮೊಹಮ್ಮದ್ ಶಹಾಬ್ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಜರುದ್ದೀನ್ ಈ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ ಮೊಹಮ್ಮದ್ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಅಜರುದ್ದೀನ್ ಅವರ ಪಿಎ ಮುಜಿಬ್ ಖಾನ್ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಅಜರುದ್ದೀನ್ ಹಾಗೂ ಮತ್ತೆ ಕೆಲವರ ಹೆಸರಿನಲ್ಲಿ 20.96 ಲಕ್ಷ ಮೊತ್ತದ ಹಲವು ಇಂಟೆರ್ ನ್ಯಾಷನಲ್ ಟಿಕೆಟ್ ಬುಕ್ ಮಾಡಿದ್ದರು. ಟಿಕೆಟ್ ಬುಕ್ ಮಾಡಿದ ಬಳಿಕ ಆನ್‍ಲೈನ್‍ನಲ್ಲಿ ಪೇಮೆಂಟ್ ಮಾಡುವುದಾಗಿ ಹೇಳುತ್ತಿದ್ದರು. ಆದರೆ ಇದುವರೆಗೂ ಯಾವುದೇ ಹಣ ನನಗೆ ಸಿಕ್ಕಿಲ್ಲ ಎಂದು ಡ್ಯಾನೀಶ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಏಜೆನ್ಸಿ ಮಾಲೀಕರಾಗಿರುವ ಮೊಹಮ್ಮದ್ ಶಾಹಬ್ ಆರೋಪಿಸಿದ್ದಾರೆ.

    ದೂರಿನಲ್ಲಿ ಶಹಾಬ್, ನಾನು ಪೇಮೆಂಟ್ ಬಗ್ಗೆ ಕೇಳುತ್ತಿದ್ದಾಗ ಮುಜಿಬ್ ಸಹದ್ಯೋಗಿ ಸುದೇಶ್ ಅವಕ್ಕಲ್ 10.6 ಲಕ್ಷ ರೂ. ವರ್ಗಾಯಿಸಿದ್ದೇನೆ ಎಂದು ಇಮೇಲ್ ಮಾಡಿದ್ದರು. ಆದರೆ ಇದುವರೆಗೂ ಯಾವುದೇ ಹಣ ಸಿಗಲಿಲ್ಲ. ನವೆಂಬರ್ 24ರಂದು ಸುದೇಶ್ ಚೆಕ್ ನೀಡುತ್ತಿರುವ ಫೋಟೋವನ್ನು ಶಹಾಬ್‍ಗೆ ಕಳುಹಿಸಿದ್ದರು. ಬಳಿಕ ನವೆಂಬರ್ 29ರಂದು ಮಜಿಬ್ ಕೂಡ ಇದೇ ರೀತಿ ಮಾಡಿದರು. ಶಹಾಬ್‍ಗೆ ಇದುವರೆಗೂ ಯಾವುದೇ ಚೆಕ್ ಸಿಗಲಿಲ್ಲ.

    ಶಹಾಬ್ ಬುಧವಾರ ಸಿಟಿ ಚೌಕ್ ಪೊಲೀಸ್ ಠಾಣೆಯಲ್ಲಿ ಅಜುರುದ್ದೀನ್, ಮುಜಿಬ್ ಖಾನ್ ಹಾಗೂ ಸುದೇಶ್ ಅವಕ್ಕಲ್ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಮೂವರ ವಿರುದ್ಧ ಐಪಿಸಿ ಸೆಕ್ಷನ್ 420(ವಂಚನೆ), 406(ನಂಬಿಕೆ ದ್ರೋಹ) ಹಾಗೂ 34(ಒಂದೇ ಉದ್ದೇಶದಿಂದ ಅನೇಕ ವ್ಯಕ್ತಿಗಳಿಂದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಈ ಆರೋಪಗಳನ್ನು ಅಜರುದ್ದೀನ್ ತಳ್ಳಿ ಹಾಕಿದ್ದಾರೆ.

  • ಕಾಂಗ್ರೆಸ್ ಟಿಕೆಟ್ ಕೊಟ್ರೆ ಸಿಕಂದರಾಬಾದ್‍ನಿಂದ ನಿಲ್ತೀನಿ: ಅಜರುದ್ದೀನ್

    ಕಾಂಗ್ರೆಸ್ ಟಿಕೆಟ್ ಕೊಟ್ರೆ ಸಿಕಂದರಾಬಾದ್‍ನಿಂದ ನಿಲ್ತೀನಿ: ಅಜರುದ್ದೀನ್

    ಹೈದರಾಬಾದ್: 2019ರ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದ ಸಿಕಂದರಬಾದ್‍ನಿಂದ ಸ್ಪರ್ಧಿಸಲು ಬಯಸುವುದಾಗಿ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಕಾಂಗ್ರೆಸ್ ನಾಯಕ ಮೊಹಮ್ಮದ್ ಅಜರುದ್ದೀನ್‍ರವರು ಹೇಳಿದ್ದಾರೆ.

    ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಟಿಕೆಟ್ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಅಂತಿಮ ಎಂದರು.

    ನಾನು ಈ ಕ್ಷೇತ್ರದಲ್ಲಿನ ಹಲವಾರು ಸ್ಥಳಗಳು ಮತ್ತು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ರೈತರು, ಜನರೊಂದಿಗೆ ಮಾತಾನಾಡಿದ್ದೇನೆ. ಭೇಟಿ ವೇಳೆ ಈ ಚುನಾವಣೆಯಲ್ಲಿ ಇಲ್ಲಿಂದ ಸ್ಪರ್ಧಿಸುವಂತೆ ಕೇಳಿಕೊಂಡಿದ್ದಾರೆ. ಜನರಿಗಾಗಿ ಕೆಲಸ ಮಾಡಲು ಇಚ್ಛಿಸುತ್ತೇನೆ. ಆದರೆ ಪ್ರಚಾರವನ್ನು ನಾನು ಬಯಸುವುದಿಲ್ಲ. ನಾನು ನಿಲ್ಲಬೇಕೆಂದು ಜನ ಆಶಿಸುತ್ತಿದ್ದಾರೆ ಎಂದರು.

    2009 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮೊರಾದಬಾದ್‍ನಲ್ಲಿ ಕಣಕ್ಕೆ ನಿಂತು ಜಯಗಳಿಸಿದ್ದ ಅಜರುದ್ದೀನ್, 2014 ರ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಸ್ಪರ್ಧಿಸಿ ಸೋತಿದ್ದರು.

    ಕಳೆದ ವರ್ಷ ಜನವರಿಯಲ್ಲಿ ಅಜರುದ್ದೀನ್ ಅವರು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್(ಎಚ್‍ಸಿಎ) ಅಧ್ಯಕ್ಷ ಹುದ್ದೆಗೆ ಅರ್ಜಿ ಹಾಕಿದ್ದರು. ಆದರೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಅಜರ್ ಅರ್ಜಿ ತಿರಸ್ಕೃತಗೊಂಡಿತ್ತು.

  • ಕ್ರಿಸ್ ಗೇಲ್, ಅಜರುದ್ದೀನ್ ಸಾಧನೆಯನ್ನು ಹಿಂದಿಕ್ಕಿದ ಕೊಹ್ಲಿ

    ಕ್ರಿಸ್ ಗೇಲ್, ಅಜರುದ್ದೀನ್ ಸಾಧನೆಯನ್ನು ಹಿಂದಿಕ್ಕಿದ ಕೊಹ್ಲಿ

    ಜೋಹನ್ಸ್ ಬರ್ಗ್: ಇಲ್ಲಿನ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 75 ರನ್ ಸಿಡಿಸಿ ಏಕದಿನದಲ್ಲಿ 9,423 ರನ್ ಪೂರ್ಣಗೊಳಿಸಿದರು. ಈ ಮೂಲಕ ವಿಂಡಿಸ್ ಆಟಗಾರರ ಕ್ರಿಸ್ ಗೇಲ್ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಅಜರುದ್ದೀನ್ ರನ್ನು ಹಿಂದಿಕ್ಕಿದ್ದಾರೆ.

    ವಿಶ್ವ ಕ್ರಿಕೆಟ್ ನಲ್ಲಿ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಈಗ 16 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಭಾರತದ ಪರ 5 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 29 ವರ್ಷದ ಕೊಹ್ಲಿ 206 ಪಂದ್ಯಗಳಲ್ಲಿ 9,423 ರನ್ ಗಳಿಸಿ ಈ ಸಾಧನೆಯನ್ನು ಏರಿದ್ದಾರೆ.

    ಕ್ರಿಸ್ ಗೇಲ್ 9,420 ರನ್ ಗಳಿಸಿದ್ದರೆ, ಅಜರುದ್ದೀನ್ 9,378 ರನ್ ಗಳಿಸಿದ್ದರು. ಭಾರತದ ಪರ ಮೊದಲ ಸ್ಥಾನ ಪಡೆರುವ ಸಚಿನ್ 18,426 ರನ್, ನಂತರದಲ್ಲಿ ಸೌರವ್ ಗಂಗೂಲಿ 11,363 ರನ್, ದ್ರಾವಿಡ್ 10,889 ಮತ್ತು ಮಹೇಂದ್ರ ಸಿಂಗ್ ಧೋನಿ 9,954 ರನ್ ಗಳಿಸಿದ್ದಾರೆ.

    ಈ ಪಂದ್ಯದಲ್ಲಿ 83 ಎಸೆತಗಳ ಮೂಲಕ 75 ರನ್ ಸಿಡಿಸಿದ ಕೊಹ್ಲಿ ತಮ್ಮ 46 ನೇ ಅರ್ಧ ಶತಕವನ್ನು ಪೂರ್ಣಗೊಳಿದರು. ಅಲ್ಲದೇ ಆಫ್ರಿಕಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಾರೆ. ವಿಶೇಷವಾಗಿ ಆಫ್ರಿಕಾ ನೆಲದಲ್ಲಿ ಎಬಿಡಿ ವಿಲಿಯರ್ಸ್ ನಂತರ ಏಕದಿನ ಪಂದ್ಯಗಳಲ್ಲಿ 350 ಪ್ಲಸ್ ರನ್ ಕಲೆ ಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ 2013 ರಲ್ಲಿ ಎಬಿಡಿ ಪಾಕ್ ವಿರುದ್ಧದ ಸರಣಿಯಲ್ಲಿ 367 ರನ್ ಸಿಡಿಸಿದ್ದರು.

    ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ 34 ಶತಕಗಳನ್ನು ಗಳಿಸಿದ್ದು, ಭಾರತ ಪರ ಸಚಿನ್(49) ಅತಿ ಹೆಚ್ಚು ಶತಕ ಹೊಡೆದಿದ್ದಾರೆ.