Tag: Ayyappaswamy

  • ಮುಸ್ಲಿಮರ ಮನೆಯಲ್ಲಿ ಅಯ್ಯಪ್ಪಸ್ವಾಮಿ ಪೂಜೆ

    ಮುಸ್ಲಿಮರ ಮನೆಯಲ್ಲಿ ಅಯ್ಯಪ್ಪಸ್ವಾಮಿ ಪೂಜೆ

    ಕೊಪ್ಪಳ: ಜಿಲ್ಲೆಯ ಗಂಗಾವತಿ ಜಯನಗರದ ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷ ಕಾಶಿಂಅಲಿ ಮುದ್ದಾಬಳ್ಳಿ ಅವರ ಮನೆಯಲ್ಲಿ ಅಯ್ಯಪ್ಪ ಸ್ವಾಮಿ (Ayyappa Swamy) ಮಾಲಾಧಾರಿಗಳು ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದ್ದಾರೆ.

    ಪಿಂಜಾರ ಸಮುದಾಯದ ಜಿಲ್ಲಾಧ್ಯಕ್ಷ ಕಾಶಿಂಅಲಿ ಮುದ್ದಾ ಬಳ್ಳಿ ತಮ್ಮ ಸ್ವಗೃಹದಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪೂಜೆ ನಡೆಸಲು ಎಲ್ಲ ರೀತಿಯ ಪೂಜಾ ಸಾಮಗ್ರಿಗಳ ನ್ನು ತರಿಸಿ ವ್ಯವಸ್ಥೆ ಕಲ್ಪಿಸಿ, ಸುತ್ತಮುತ್ತಲಿನ ಜನರಿಗೆ ಪೂಜೆ ಆಗಮಿಸುವಂತೆ ಮಾಹಿತಿ ನೀಡಿದ್ದರು.

    ಇದರನ್ವಯ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಬೆಳಗ್ಗೆ ತಂಡದೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಅಯ್ಯಪ್ಪ ಸ್ವಾಮಿ ನಾಮಸ್ಮರಣೆ ಮಾಡಿದರು. ನಂತರ ಎಲ್ಲ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪ್ರಸಾದ ಸೇವಿಸಿದರು. ಇದನ್ನೂ ಓದಿ: ಸರ್ಕಾರದಿಂದ ಗುಡ್‍ನ್ಯೂಸ್- ಅಯೋಧ್ಯೆಯಲ್ಲಿ ತಲೆಯೆತ್ತಲಿದೆ ಕರ್ನಾಟಕ ಯಾತ್ರಿ ನಿವಾಸ

    ಕಾಶಿಂಅಲಿ ಮುದ್ದಾಬಳ್ಳಿ ಅವರು ಎಲ್ಲ ಅಯ್ಯಪ್ಪಸ್ವಾಮಿ ಮಾಲಾಧಾರಿಗಳನ್ನ ಸನ್ಮಾನಿಸಿ, ಬೀಳ್ಕೊಟ್ಟರು. ಈ ವೇಳೆ ಮಲಾಧಾರಿಗಳು, ಭಕ್ತರು, ಮುಸ್ಲಿಂ ಬಾಂಧವರು ಇದ್ದರು.

  • ಅಯ್ಯಪ್ಪ ಸ್ವಾಮಿ ಮಾಲಾಧಾರಣೆ ಹೇಗೆ..?- ಹೇಗಿರುತ್ತೆ ವ್ರತ, ಜೀವನ ಶೈಲಿ..?

    ಅಯ್ಯಪ್ಪ ಸ್ವಾಮಿ ಮಾಲಾಧಾರಣೆ ಹೇಗೆ..?- ಹೇಗಿರುತ್ತೆ ವ್ರತ, ಜೀವನ ಶೈಲಿ..?

    – ಗುರುಸ್ವಾಮಿಯಾಗಲು ಏನು ಮಾಡಬೇಕು..?

    ಬರಿಮಲೆ (Sabarimala) ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರೋದು ಅಯ್ಯಪ್ಪ ಸ್ವಾಮಿ (Ayyappaswamy) ಮತ್ತು ಮಾಲೆ ಧರಿಸುವ ಭಕ್ತರು. ಈ ಅಯ್ಯಪ್ಪ ಸ್ವಾಮಿಯ ಸಾನಿಧ್ಯವಾದ ಶಬರಿಮಲೆಯನ್ನು ಜಾತ್ಯಾತೀತೆಯ ನೆಲೆಬೀಡೆಂದರೆ ತಪ್ಪಾಗಲಾರದು. ಯಾಕೆಂದರೆ ಮಾಲೆ ಧರಿಸಿದ ಯಾವುದೇ ಜಾತಿಯ ಭಕ್ತನಾದರೂ ಕೂಡ ಶಬರಿಮಲೆಯಲ್ಲಿ ಒಂದಾಗುತ್ತಾರೆ. ಇಲ್ಲಿ ಭಕ್ತರ ಭಕ್ತಿಯೇ ಪ್ರಧಾನವಾಗಿರುತ್ತದೆ ಹೊರತು ಜಾತಿ-ಧರ್ಮವಲ್ಲ. ಮಾಲೆ ಧರಿಸಿದ ಪ್ರತಿಯೊಬ್ಬ ಭಕ್ತನು ಕೂಡ ನಾವೆಲ್ಲ ಒಂದೇ ಕುಟುಂಬದವರು ಎಂಬಂತೆ ಮಕರ ಸಂಕ್ರಾಂತಿಯಂದು ಶಬರಿ ಮಲೆಯಲ್ಲಿ ಬಂದು ಸೇರುತ್ತಾರೆ. ಅಂದು ಮಕರ ಜ್ಯೋತಿಯನ್ನು ಕಣ್ತುಂಬಿಕೊಂಡು ಪುನೀತರಾಗುತ್ತಾರೆ.

    ಪ್ರತೀ ತಿಂಗಳು ಕೇವಲ 5 ದಿನಗಳ ಕಾಲ ಮಾತ್ರ ತೆರೆಯುವ ಈ ದೇವಾಲಯವು ಪ್ರತೀ ವರ್ಷ ನವೆಂಬರ್‍ನಿಂದ ಡಿಸೆಂಬರ್‍ವರೆಗೆ ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಗಾಗಿ ತೆರೆದಿರುತ್ತದೆ. ವ್ರತ ಕೈಗೊಂಡು ಮಾಲೆ ಧರಿಸಿದ ಭಕ್ತರು ಪ್ರತೀ ವರ್ಷ ಈ ಸಮಯದಲ್ಲಿ ಶಬರಿ ಮಲೆ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶಬರಿ ಮಲೆ ದೇವಾಲಯಕ್ಕೆ ಮಾಲೆಯನ್ನು ಧರಿಸಿ ಭೇಟಿ ನೀಡುವ ಮುನ್ನ ಅಯ್ಯಪ್ಪ ಭಕ್ತರು 41 ದಿನಗಳ ಕಾಲ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಠಿಣ ವ್ರತವನ್ನು ಪಾಲಿಸಬೇಕಾಗುತ್ತದೆ. ಹಾಗಿದ್ರೆ ಮಾಲೆ ಹಾಕುವುದು ಹೇಗೆ..?, ವ್ರತ ಹೇಗೆ ಮಾಡುತ್ತಾರೆ..?, ಗುರುಸ್ವಾಮಿ ಅಂದ್ರೆ ಯಾರು..?, ಮಾಲೆ ಹಾಕಿ ಬಳಿಕ ಅವರ ಜೀವನ ಶೈಲಿ ಹೇಗಿರುತ್ತೆ..? ಹೀಗೆ ಮುಂತಾದ ವಿಚಾರಗಳನ್ನು ಡೀಟೈಲ್ ಆಗಿ ಇಲ್ಲಿ ಕೊಡಲಾಗಿದೆ.

    ಮಾಲಾಧಾರಣೆ ಬಗ್ಗೆ: ಅಯ್ಯಪ್ಪ ಸ್ವಾಮಿಯ ಮಾಲಾಧಾರಣೆ ಮಾಡುವಾಗ ಕೆಲವೊಂದು ನಿಯಮಗಳಿವೆ. ಮನೆಯ ಹೊರಗೆ ಎಲ್ಲಿಯಾದರೂ ಮಾಲಾಧಾರಣೆ ಮಾಡಿದರೆ ನೇರವಾಗಿ ಮನೆಗೆ ಹೋಗುವುದು ವಾಡಿಕೆ. ಮಾಲೆ ಹಾಕಿದ ಬಳಿಕ ಯಾವುದೇ ಸಾವು ಸಂಭವಿಸಿದ ಕಡೆ ಹೋಗುವುದು. ಅಂದರೆ ಆಸ್ಪತ್ರೆಗಳು, ಹೋಟೆಲ್‍ಗಳು ಅಥವಾ ಇತರರ ಮನೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಮಾಲೆಯನ್ನು ಧರಿಸಿರುವಾಗ ಯಾವುದೇ ಅಂತ್ಯಕ್ರಿಯೆಯ ವಿಧಿಗಳನ್ನು ನಡೆಸಬಾರದು. ಹಾಗೆಯೇ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು. ಇಷ್ಟು ಮಾತ್ರವಲ್ಲದೇ ಮಾಲೆ ಹಾಕಿದ ಬಳಿಕ ಹಗಲು ಹೊತ್ತಿನಲ್ಲಿ ಮಲಗಬಾರದು ಎಂದು ಸಹ ಹೇಳಲಾಗುತ್ತದೆ.

    ಮಾಲೆ ಧರಿಸಿದ ಸ್ವಾಮಿಗಳು ಕಪ್ಪು ಬಟ್ಟೆಗಳನ್ನು ಧರಿಸುವುದು ಸಾಮಾನ್ಯ. ಆದರೆ ನೀಲಿ, ಕೇಸರಿ ಬಟ್ಟೆಯನ್ನು ಸಹ ಹಾಕಲು ಅವಕಾಶವಿದೆ. ಶಬರಿಮಲೆಗೆ ತೀರ್ಥಯಾತ್ರೆ ಪೂರ್ಣಗೊಳ್ಳುವವರೆಗೆ ಮಾಲೆಯನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ಈ ಸಮಯದಲ್ಲಿ ನಿಮ್ಮನ್ನು ಸ್ವಾಮಿ ಎಂದು ಕರೆಯಲಾಗುತ್ತದೆ. ಅಲ್ಲದೇ ಮಾಲಾಧಾರಿ ಕೂಡ ಎಲ್ಲರನ್ನೂ ಸ್ವಾಮಿ ಎಂದೇ ಕರೆಯಬೇಕು. ಈ ಸಮಯದಲ್ಲಿ ಯಾವುದೇ ರೀತಿಯ ಸೌಂದರ್ಯವರ್ಧಕಗಳು ಅಥವಾ ಇತರ ಅಲಂಕಾರಗಳನ್ನು ಮಾಡುವಂತಿಲ್ಲ. ಭೌತಿಕ ಅಗತ್ಯತೆಗಳು ಮತ್ತು ಆಹಾರದ ವಿಷಯದಲ್ಲಿ ಅತ್ಯಂತ ಸರಳ ಜೀವನವನ್ನು ನಡೆಸಬೇಕು. ಹಾಗೆಯೇ ನಿಮ್ಮ ಉಗುರುಗಳನ್ನು ಕಟ್? ಮಾಡುವುದು ಅಥವಾ ಕೂದಲು ಕತ್ತರಿಸುವುದು ಕೂಡ ಮಾಡಬಾರದು.

    ಹೇಗಿರತ್ತೆ ವ್ರತ?: ತಮ್ಮ ಕಷ್ಟಗಳನ್ನು ದೂರಾಗಿಸುವಂತೆ ಬೇಡಿಕೆಯನ್ನಿಟ್ಟು ಮಾಲೆ ಹಾಕುವ ಭಕ್ತರು ಕಠಿಣ ವ್ರತವನ್ನು ಪಾಲಿಸಬೇಕಾಗುತ್ತದೆ. ಮಾಲೆ ಧರಿಸಿದ ವ್ರತ ಧಾರಿಗಳು ಕೊರೆಯುವ ಚಳಿಯಲ್ಲಿ ಮುಂಜಾನೆ ಬೇಗ ಎದ್ದು, ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಬಾಯಲ್ಲಿ ಅಯ್ಯಪ್ಪ ಸ್ವಾಮಿಯ ಭಜನೆ ಹೇಳುತ್ತಿರುತ್ತಾರೆ. ಹಿಡಿದ ವ್ರತ ಮುಗಿಯುವವರೆಗೆ ಚಪ್ಪಲಿ ಧರಿಸುವುದಿಲ್ಲ. ಒಟ್ಟಾರೆಯಾಗಿ ಮಾಂಸಾಹಾರದೊಂದಿಗಿನ ತಮ್ಮ ಐಷಾರಾಮಿ ಜೀವನ ಶೈಲಿಯನ್ನು ತ್ಯಜಿಸಿ, ದುಶ್ಚಟಗಳಿಂದ ದೂರಾಗಿ ಅಯ್ಯಪ್ಪನ ನಾಮ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಾರೆ.

    ಅಯ್ಯಪ್ಪ ಭಕ್ತರು 41 ದಿನಗಳ ಕಾಲ ಉಪವಾಸ ವ್ರತವನ್ನು ಕೈಗೊಳ್ಳಬೇಕು. ಪ್ರತೀ ವರ್ಷದ ನವೆಂಬರ್ ತಿಂಗಳ ಎರಡನೇ ವಾರದಿಂದ ಭಕ್ತರು ಉಪವಾಸ ವ್ರತವನ್ನು ಕೈಗೊಂಡು ಮಾಲೆಯನ್ನು ಧರಿಸುತ್ತಾರೆ. ಉಪವಾಸದ ಸಮಯದಲ್ಲಿ ಅಯ್ಯಪ್ಪ ಭಕ್ತರು ಯಾವುದೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಿಲ್ಲ. ಭಕ್ತರು ಮಾಲೆ ಧರಿಸಿದ ಸಮಯದಲ್ಲಿ ಕೇವಲ ದೇವರ ಭಜನೆಯಲ್ಲಿ, ಪೂಜೆಯಲ್ಲಿ, ದೇವರ ನಾಮ ಸ್ಮರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಬಡವರಿಗೆ, ನಿರ್ಗತಿಕರಿಗೆ, ರೋಗಿಗಳಿಗೆ ಕೈಲಾದಷ್ಟು ಸಹಾಯವನ್ನು ಮಾಡಬೇಕು.

    ಗುರುಸ್ವಾಮಿ: ಪ್ರತಿಯೊಬ್ಬ ಅಯ್ಯಪ ಸ್ವಾಮಿ ಮಾಲಾಧಾರಿಗೆ ಗುರುಸ್ವಾಮಿಯ ಮಾರ್ಗದರ್ಶನ ಬೇಕಾಗುತ್ತದೆ. ಗುರುಸ್ವಾಮಿಯಾಗಬೇಕಾದರೆ ಓರ್ವ ಅಯ್ಯಪ್ಪ ಮಾಲಾಧಾರಿಯು ಸತತವಾಗಿ 5 ವರ್ಷಗಳ ಕಾಲ ಮಾಲೆಯನ್ನು ಹಾಕಿ, ಪ್ರತೀ ಮಕರ ಸಂಕ್ರಾಂತಿಯಂದು ಅಯ್ಯಪ್ಪನ ದರ್ಶನ ಭಾಗ್ಯವನ್ನು ಪಡೆದುಕೊಳ್ಳಬೇಕಾಗುತ್ತದೆ. 5 ವರ್ಷ ಸಂಪೂರ್ಣಗೊಂಡ ನಂತರ ಅಯ್ಯಪ್ಪ ಸ್ವಾಮಿಯ ಸಾನಿಧ್ಯದಲ್ಲಿ ಶಬರಿಮಲೆಯ ತಂತ್ರಿಗಳ ಉಪಸ್ಥಿತಿಯಲ್ಲಿ ಗುರುಗಳಿಂದ ದೀಕ್ಷೆಯನ್ನು ಪಡೆದು ನಂತರ ಗುರುಸ್ವಾಮಿಯಾಗಬೇಕಾಗುತ್ತದೆ.

    ದೀಕ್ಷೆ ಪಡೆದ ನಂತರ ಅಲ್ಲಿಗೆ ತನ್ನ ಕರ್ತವ್ಯವನ್ನು ಕೈಬಿಡುವಂತಿಲ್ಲ. ಪ್ರತೀ ವರ್ಷ ಒಬ್ಬ ಕನ್ನಿ ಸ್ವಾಮಿಯೊಂದಿಗೆ ಶಬರಿಮಲೆಗೆ ಹೋಗಬೇಕಾಗುತ್ತದೆ. ತನ್ನ ಶಿಷ್ಯರ ಯಾತ್ರೆಯ ಎಲ್ಲಾ ಜವಬ್ದಾರಿಗಳು, ನೀತಿ – ನಿಯಮಗಳು ಗುರುಸ್ವಾಮಿಯ ಮೇಲಿರುತ್ತದೆ. ಈ ಗುರುಸ್ವಾಮಿಯವರ ಕೈಯಿಂದ ಇತರೆ ವ್ರತಧಾರಿಗಳು ಮಾಲಾಧಾರಣೆ ಮಾಡಿಕೊಂಡು, ಗುರುಸ್ವಾಮಿ ಬೋಧಿಸಿದ ನೀತಿ ನಿಯಮಗಳನ್ನು ಪಾಲಿಸಿಕೊಂಡು ವ್ರತಾಚರಣೆ ಮಾಡಬೇಕಾಗುತ್ತದೆ.

    ಜೀವನ ಶೈಲಿ: ಒಂದು ಬಾರಿ ಮಾಲೆ ಹಾಕಿ ಅಯ್ಯಪ್ಪ ಸ್ವಾಮಿಯ ಭಕ್ತರಾದರೆ ಅವರು ಯಾವುದೇ ಕಾರಣಕ್ಕೂ ಮಾಂಸಾಹಾರವನ್ನು ಸೇವಿಸುವಂತಿಲ್ಲ. ಕಾಲಿಗೆ ಚಪ್ಪಲಿಯನ್ನು ಹಾಕುವಂತಿಲ್ಲ, ಬರಿಗಾಲಿನಲ್ಲೇ ನಡೆಯವೇಕು. ಹಾಸಿಗೆ ಮೇಲೆ ಮಲಗುವಂತಿಲ್ಲ, ನೆಲದ ಮೇಲೆ ಮಲಗಬೇಕು. ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ವ್ರತಧಾರಿಗಳು ಕೈಯಲ್ಲಿ ತುಳಸಿ ಎಲೆಗಳನ್ನು ಇಟ್ಟುಕೊಂಡಿರಬೇಕು. ಯಾವುದೇ ಕಾರಣಕ್ಕೂ ತಲೆಗೆ ಮತ್ತು ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬಾರದು. ಒಟ್ಟಿನಲ್ಲಿ ಈ ಸಮಯದಲ್ಲಿ ಆಡಂಭರದ ಬದುಕಿನಿಂದ ಅತ್ಯಂತ ಸರಳ ಜೀವನಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.

    ಬಟ್ಟೆ: ಇಷ್ಟೆಲ್ಲಾ ಕಠಿಣ ನಿಯಮಗಳನ್ನು ಪಾಲಿಸಿದ ಬಳಿಕ ಇರುಮುಡಿ ಹೊತ್ತು ಶಬರಿಮಲೆಯತ್ತ ಸಾಗುತ್ತಾರೆ. ಭಕ್ತರು ಕಡ್ಡಾಯವಾಗಿ ಕಪ್ಪು ಬಟ್ಟೆಯನ್ನು, ಕೇಸರಿ ಬಟ್ಟೆಯನ್ನು ಮಾತ್ರ ಧರಿಸಿ ಹಣೆಗೆ ಗಂಧವನ್ನು ಹಚ್ಚಿಕೊಂಡಿರಬೇಕು. ದೇವಸ್ಥಾನಕ್ಕೆ ಹೋಗುವಾಗ ಜೋಳಿಗೆಯನ್ನು ಹಿಡಿದುಕೊಂಡು ಹೋಗಬೇಕು. ಅಯ್ಯಪ್ಪ ವ್ರತಧಾರಿಗಳು ಧರಿಸುವ ಜೋಳಿಗೆಯಲ್ಲೂ ಕೆಲವೊಂದು ನಿಯಮಗಳಿವೆ. ದೇವಸ್ಥಾನಕ್ಕೆ ಮೊದಲಬಾರಿ ಹೋಗುವ ಭಕ್ತರು ಕೆಂಪು ಬಣ್ಣದ ಜೋಳಿಗೆ ಹೊಂದಿರಬೇಕು. ಮೂರನೇ ಬಾರಿ ದೇಗುಲಕ್ಕೆ ಭೇಟಿ ನೀಡುವರು ನೀಲಿ ಜೋಳಿಗೆ ಈಗಾಗಲೇ ಅನೇಕ ಬಾರಿ ಹೋದವರಿಗೆ ಕೇಸರಿ ಬಣ್ಣದ ಜೋಳಿಗೆ ನೀಡುವ ಕ್ರಮವಿದೆ.

  • ಕರ್ನಾಟಕದ ಶಬರಿಮಲೆ ಯಾತ್ರಾರ್ಥಿಗಳಿಗೆ ಸಹಾಯವಾಣಿ ತೆರೆದ ಸರ್ಕಾರ

    ಕರ್ನಾಟಕದ ಶಬರಿಮಲೆ ಯಾತ್ರಾರ್ಥಿಗಳಿಗೆ ಸಹಾಯವಾಣಿ ತೆರೆದ ಸರ್ಕಾರ

    – ಕೊರೊನಾ ಪರೀಕ್ಷೆಯ ಅವ್ಯವಸ್ಥೆ ಹಿನ್ನೆಲೆ ಕ್ರಮ

    ಬೆಂಗಳೂರು: ರಾಜ್ಯದಿಂದ ಶಬರಿಮಲೆಗೆ ತೆರಳುವ ಭಕ್ತಾದಿಗಳಿಗೆ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದರೂ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಕುರಿತು ಸುದ್ದಿಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಯಾತ್ರಾರ್ಥಿಗಳಿಗಾಗಿ ಸಹಾಯವಾಣಿಯನ್ನು ಆರಂಭಿಸಿದೆ.

    ಕೇರಳದ ಶಬರಿಮಲೆಗೆ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ಹೆಲ್ಪ್ ಲೈನ್ ಆರಂಭಿಸಿ ಸರ್ಕಾರ ಆದೇಶ ಹೊರಡಿಸಿದೆ. 2020-21ನೇ ಸಾಲಿನ ಮಂಡಲ-ಮಕರವಿಳಕ್ಕು ಕಾರ್ಯಕ್ರಮಕ್ಕೆ ತೆರಳುವ ಭಕ್ತರ ಸಮಸ್ಯೆ ಆಲಿಸಲು ಹಾಗೂ ಆರೋಗ್ಯ ಸಲಹೆಗಳಿಗಾಗಿ ಈ ಸಹಾಯವಾಣಿಯನ್ನು ಆರಂಭಿಸಿದೆ. ಕೊರೊನಾ ಹಿನ್ನಲೆ ಶಬರಿಮಲೆ ಮಾರ್ಗಸೂಚಿ ವಿವರಿಗಳಿಗಾಗಿ ಕರೆ ಮಾಡಬಹುದು.

    ಕೇರಳ ಗಡಿಯಲ್ಲಿ ಅಥವಾ ಶಬರಿಮಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದರೆ ಈ ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದಾಗಿದೆ. ಸರ್ಕಾರ ಸಮಸ್ಯೆಗೆ ಪರಿಹಾರ ಕಲ್ಪಿಸಲಿದೆ. ಯಾವುದೇ ಮಾಹಿತಿ, ತುರ್ತು ಸಂದರ್ಭದಲ್ಲಿ 080-26709689 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.

    ಇತ್ತೀಚೆಗೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಭಕ್ತರು ಶಬರಿಮಲೆಯ ಅಯ್ಯಪ್ಪನನ್ನು ನೋಡಲು ಹೋದ ವೇಳೆ ಅಲ್ಲಿನ ಪೊಲೀಸರು ತಡೆ ಹಿಡಿದಿದ್ದಾರು. ಜೊತೆಗೆ ಕೊರೊನಾ ವರದಿ ನೆಗೆಟಿವ್ ಬಂದರೂ, ಅಯ್ಯಪ್ಪನ ಬೆಟ್ಟಕ್ಕೆ ಹೋಗಲು ಬಿಟ್ಟಿಲ್ಲ. ತಲಾ 625 ರೂ. ಪಡೆದು ನೆಗೆಟಿವ್ ರಿಪೋರ್ಟ್ ನೀಡುವ ಪೋಲಿಸರ ವಿರುದ್ಧ ಭಕ್ತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.

    ಕೇರಳ ಪೊಲೀಸರ ಈ ವರ್ತನೆಯಿಂದ ಕರ್ನಾಟಕ ಭಕ್ತರು ಕಂಗಾಲಾಗಿದ್ದರು. ಅಲ್ಲಿನ ವೈದ್ಯರು ಈ ವರದಿ ಆಗುತ್ತೆ ಅಂದರೂ ಪೊಲೀಸರು ಮಾತ್ರ ಆಗಲ್ಲ ಎಂದು ಕಿರಿಕಿರಿ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಕರ್ನಾಟಕ ರಾಜ್ಯದ ಉನ್ನತ ಅಧಿಕಾರಿಗಳು ಪ್ರವಾಸೋದ್ಯಮ ಹಾಗೂ ಮುಜರಾಯಿ ಸಚಿವರು ಕೇರಳ ರಾಜ್ಯದ ಅಧಿಕಾರಿಗಳ ಜೊತೆಗೆ ಮಾತನಾಡಿ ಕನ್ನಡದ ಭಕ್ತರಿಗೆ ಆಗುತ್ತಿರುವ ಕಿರಿಕಿರಿಯನ್ನು ಹಾಗೂ ತೊಂದರೆಯನ್ನು ತಪ್ಪಿಸಬೇಕು ಎಂದು ಭಕ್ತರು ಮನವಿ ಮಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.

  • ಶಬರಿಮಲೆ ಶಿಷ್ಟಾಚಾರ ಉಲ್ಲಂಘನೆ ಮಾಡೋದು ಸರಿಯಲ್ಲ -ಸಿಎಂ ಎಚ್‍ಡಿಕೆ

    ಶಬರಿಮಲೆ ಶಿಷ್ಟಾಚಾರ ಉಲ್ಲಂಘನೆ ಮಾಡೋದು ಸರಿಯಲ್ಲ -ಸಿಎಂ ಎಚ್‍ಡಿಕೆ

    – ಪೂರ್ವಿಕರ ಸಂಸ್ಕೃತಿ ಹಾಗೇ ನಡೆದುಕೊಂಡು ಹೋಗಲಿ

     ಮೈಸೂರು: ಸಾವಿರಾರು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಶವರಿಮಲೆ ಶಿಷ್ಟಾಚಾರ ಉಲ್ಲಂಘನೆ ಮಾಡುವುದು ಉತ್ತಮವಲ್ಲ. ಸದ್ಯ ಅಗೋಚರ ಶಕ್ತಿಗಳ ವಿರುದ್ಧ ನಾವು ಸಂಘರ್ಷ ಮಾಡುವ ವಾತಾವರಣ ನಿರ್ಮಾಣ ಮಾಡಿಕೊಂಡಿದ್ದೇವೆ. ಆದರೆ ಇದೀಗ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ವೈಜ್ಞಾನಿಕವಾಗಿ ನಾವು ಬಹಳ ಮುಂದೆ ದಾಪುಗಾಲು ಇಟ್ಟು ಮುಂದೆ ಹೋಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಚಂದ್ರ ಲೋಕದಲ್ಲಿ ವಾಸ ಮಾಡುವ ವ್ಯವಸ್ಥೆ ಮಾಡುವ ಆಶ್ವಾಸನೆಯನ್ನು ವಿಜ್ಞಾನಿಗಳು ನೀಡುತ್ತಿದ್ದಾರೆ. ಆದರೆ ಸಾಕಷ್ಟು ಮುಂದುವರಿದರೂ ಯಾವುದಕ್ಕೂ ಪ್ರಕೃತಿ ವಿಕೋಪಗಳನ್ನು ತಡೆಯಲಾಗುತ್ತಿಲ್ಲ. ನನ್ನ ನಿಲುವು ಎಂಬುದಕ್ಕಿಂತ ನಮ್ಮ ಸಂಸ್ಕೃತಿಯನ್ನು ಪೂರ್ವಿಕರು ಮಾಡುವಾಗ ಅವರದ್ದೇ ಉದ್ದೇಶಗಳು ಇರುತ್ತವೆ. ಇದೀಗ ಆ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.

    ಶಬರಿಮಲೆ ಕುರಿತು ನನ್ನ ಮಾತನ್ನು ಸಿಎಂ ಆಗಿ ಹೇಳಿದ್ದಲ್ಲ, ಅದು ವೈಯಕ್ತಿಕ ಅಭಿಪ್ರಾಯವಾಗಿ ವ್ಯಕ್ತಪಡಿಸುತ್ತಿದ್ದು, ಈ ಹಿಂದೆ ಹೇಗೆ ನಡೆದುಕೊಂಡು ಬಂದಿದೆ ಹಾಗೆಯೇ ನಡೆದುಕೊಂಡು ಹೋಗಲಿ. ನಮ್ಮ ಸಂಸ್ಕೃತಿಗಳು ಮುಂದುವರಿಯಲಿ. ಆದರೆ ನಮ್ಮಲ್ಲಿ ಕೆಲ ಮುಂದುವರಿದ ಮಂದಿ ಎಲ್ಲವನ್ನೂ ಮೌಢ್ಯ ಎನ್ನುತ್ತಾರೆ. ಆದರೆ ನಮ್ಮ ಎಲ್ಲಾ ಹಬ್ಬ ಹರಿದಿನ ಊಟ ವ್ಯವಸ್ಥೆ ಸೇರಿದಂತೆ ಎಲ್ಲದಕ್ಕೂ ವೈಜ್ಞಾನಿಕ ಕಾರಣವಿದೆ. ಇಂದು ನಡೆಯುತ್ತಿರುವ ವಿಕೋಪ ತಡೆಯಲು ಆಧುನಿಕ ತಂತ್ರಜ್ಞಾನ ಮತ್ತಷ್ಟು ಮುಂದುವರಿಯಬೇಕಿದೆ. ಇದು ನನ್ನ ಅಭಿಪ್ರಾಯ ಮಾತ್ರ. ಇದನ್ನು ಮತ್ತೊಬ್ಬರ ಮೇಲೆ ಒತ್ತಾಯ ಪೂರ್ವಕವಾಗಿ ಹಾಕುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

    ನಮಗೆ ಸಂಬಂಧಿಸಿದಲ್ಲ:
    ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಅದು ಸಂಬಂಧಿಸಿಲ್ಲ. ಈ ಹಿಂದಿನ ಸರ್ಕಾರ ಏನು ಪ್ರಕ್ರಿಯೆ ನಡೆಸಿದೆ ಅದು ಅಷ್ಟಕ್ಕೆ ನಿಂತಿದೆ. ನಮ್ಮ ಸರ್ಕಾರದ ರಚನೆಯಾದ ಬಳಿಕ ಯಾವುದೇ ಪ್ರಗತಿ ಪರಿಶೀಲನೆ ನಡೆದಿಲ್ಲ. ಅದ್ದರಿಂದ ಈ ಕುರಿತು ನಾನು ಹೆಚ್ಚು ಮಾತನಾಡಲ್ಲ. ಆದರೆ ಧರ್ಮದ ವಿಚಾರ ಬಂದಾಗ ಧರ್ಮ ಗುರುಗಳೇ ಮಾತುಕತೆ ಮೂಲಕ ಬಗೆಹರಿಸಕೊಳ್ಳಬೇಕು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಣರಂಗವಾಯ್ತು ಪ್ರತಿಭಟನೆ: ಪೊಲೀಸರ ಮೇಲೆ ಅಯ್ಯಪ್ಪ ಭಕ್ತರಿಂದ ಕಲ್ಲು ತೂರಾಟ!

    ರಣರಂಗವಾಯ್ತು ಪ್ರತಿಭಟನೆ: ಪೊಲೀಸರ ಮೇಲೆ ಅಯ್ಯಪ್ಪ ಭಕ್ತರಿಂದ ಕಲ್ಲು ತೂರಾಟ!

    ತಿರುವನಂತಪುರ: ಬೆಳಗ್ಗೆಯಿಂದಲೂ ಬೂದಿ ಮುಚ್ಚಿದ ಕೆಂಡದಂತ್ತಿದ್ದ ನಿಳಕ್ಕಲ್ ಬಳಿಯ ಅಯ್ಯಪ್ಪ ಭಕ್ತರ ಪ್ರತಿಭಟನೆ ಸಂಜೆ ವೇಳೆಗೆ ಹಿಂಸಾಚಾರಕ್ಕೆ ತಿರುಗಿದ್ದು, ಭಕ್ತರು ಹಾಗೂ ಪೊಲೀಸರ ನಡುವೇ ಕಲ್ಲು ತೂರಾಟಕ್ಕೆ ನಡೆದಿದೆ.

    ನಿಳಕ್ಕಲ್ ಬಳಿ ಬೆಳಗ್ಗೆಯಿಂದ ಶಬರಿಮಲೆಗೆ ತೆರಳುತ್ತಿದ್ದ ಪ್ರತಿ ವಾಹನವನ್ನು ಪರಿಶೀಲನೆ ನಡೆಸಿ ಮಹಿಳಾ ಭಕ್ತರನ್ನು ತಡೆಯುತ್ತಿದ್ದರು. ಈ ವೇಳೆ ವರದಿ ಮಾಡಲು ತೆರಳಿದ್ದ ಮಹಿಳಾ ಪತ್ರಕರ್ತರ ಮೇಲೂ ದೌರ್ಜನ್ಯ ನಡೆಸಿದ ಭಕ್ತರು ಹಲ್ಲೆ ನಡೆಸಿದ್ದರು. ಇದರ ನಡುವೆಯೇ ಪ್ರತಿಭಟನಕಾರರು ಪೊಲೀಸ್ ಬೈಕನ್ನು ನಾಶ ಪಡಿಸಿದ್ದರು. ಅಲ್ಲದೇ ಪೊಲೀಸ್ ಕ್ಯಾಪ್ ಮೇಲೂ ಕಲ್ಲೆಸೆದಿದ್ದರು.

    ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಮುಂದಾದ ಪೊಲೀಸರು ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸುವ ಪ್ರಯತ್ನ ನಡೆಸಿದರು.

    ಬೆಳಗ್ಗೆಯಿಂದ ನಿರಂತರವಾಗಿ ಪೊಲೀಸರ ಕಾರ್ಯಕರ್ತರ ನಡುವೇ ವಾಗ್ವಾದ ನಡೆಯುತ್ತಲೇ ಇತ್ತು. ಆದರೂ ಅಯ್ಯಪ್ಪ ದರ್ಶನ ಪಡೆಯಲು ಇಷ್ಟಪಟ್ಟಿದ್ದ ಮಹಿಳಾ ಭಕ್ತರಿಗೆ ಬೀಗಿ ಪೊಲೀಸ್ ಭದ್ರತೆ ನೀಡಿದ್ದ ಪೊಲೀಸರು ಅವರನ್ನು ಅಯ್ಯಪ್ಪ ಬೆಟ್ಟದತ್ತ ಕರೆದ್ಯೊಯಲು ಮುಂದಾದರು. ಈ ವೇಳೆ ರೊಚ್ಚಿಗೆದ್ದ ಭಕ್ತರು ಪೊಲೀಸ್ ಜೀಪ್ ಸೇರಿದಂತೆ ಕ್ಯಾಪ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv