Tag: Ayurveda Hospital

  • ಆಯುರ್ವೇದ ಚಿಕಿತ್ಸೆಯಿಂದ ಮುಖ್ಯಮಂತ್ರಿಗಳ ಮಂಡಿ ನೋವು ವಾಸಿ: ಲೋಕೇಶ್ ಟೇಕಲ್

    ಆಯುರ್ವೇದ ಚಿಕಿತ್ಸೆಯಿಂದ ಮುಖ್ಯಮಂತ್ರಿಗಳ ಮಂಡಿ ನೋವು ವಾಸಿ: ಲೋಕೇಶ್ ಟೇಕಲ್

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಂಡಿ ನೋವಿಗೆ ಆಯುರ್ವೇದ ಚಿಕಿತ್ಸೆ ನೀಡಲಾಗಿದ್ದು, ಎರಡೇ ದಿನದಲ್ಲಿ ನೋವು ವಾಸಿ ಆಗಿದೆ ಎಂದು ಮೈಸೂರು ಮೂಲದ ನಾಟಿ ವೈದ್ಯ ಲೋಕೇಶ್ ಟೇಕಲ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಡಿ ನೋವಿನಿಂದ ಬಳಲುತ್ತಿದ್ದರು. ಆಗ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮುಖ್ಯಮಂತ್ರಿ ಬೊಮ್ಮಯಿಗೆ ನಮ್ಮನ್ನು ಸಂಪರ್ಕಿಸಿದ್ದರು. ಅವರ ಕರೆಯ ಮೇರೆಗೆ ಆಯುರ್ವೇದ ಪದ್ಧತಿಯಿಂದ ಚಿಕಿತ್ಸೆ ನೀಡಿದ್ದೇವೆ. ಅವರ ಮಂಡಿ ನೋವು ವಾಸಿಮಾಡಲು ಆಯುರ್ವೇದ ಪದ್ಧತಿಯನ್ನು ಅನುಸರಿಸಿದ್ದೇವೆ. ನೋವಿಗೆ ಕೆಲವು ದೇಸಿ ಪದ್ಧತಿಯ ತೈಲ ಹಾಗೂ ಆಡಿನ ಹಾಲಿನ ಮಾತ್ರೆಯನ್ನು ನೀಡಿದ್ದು ದಿನಾಲೂ ತೆಗೆದುಕೊಳ್ಳಲು ಸಲಹೆ ನೀಡಿದ್ದೇನೆ ಎಂದರು.

    ಆಯುರ್ವೇದ ಚಿಕಿತ್ಸೆಯ ಪರಿಣಾಮವಾಗಿ ಅವರು ನೋವಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇದು ಆರು ತಿಂಗಳ ಕೋರ್ಸ್ ಆಗಿದ್ದು, ಮೊದಲನೇ ಹಂತ 40 ದಿನಗಳ ಚಿಕಿತ್ಸೆಯಾಗಿದೆ. ಅದರಲ್ಲಿ 20 ದಿನಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಬಳಸಿಕೊಳ್ಳುತ್ತೇವೆ. ಕೇವಲ 2 ದಿನಗಳಲ್ಲಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ನೋವು ವಾಸಿ ಆಗಿದ್ದರೂ, ಒಂದು ಕೋರ್ಸ್ ನ್ನು ಮುಗಿಸಬೇಕಾಗುತ್ತದೆ. ಇದರಿಂದಾಗಿ ಮುಖ್ಯಮಂತ್ರಿಗಳು ಇನ್ನೂ 20 ದಿನ ಚಿಕಿತ್ಸೆಯನ್ನು ಪಡೆಯಬೇಕು ಎಂದು ಮಾಹಿತಿ ನೀಡಿದರು.

    ಲಕ್ಷ್ಮಣ ಸವದಿ ಅವರ ಬಗ್ಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಅವರು ಮಾಜಿ ಉಪ ಮುಖ್ಯಮಂತ್ರಿಗಳಿದ್ದಾಗ ಚರ್ಮ ವ್ಯಾದಿಯಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ನನ್ನನ್ನು ಕರೆಸಿದ್ದರು. ಅವರಿಗೆ ದೇಸಿ ಪದ್ಧತಿಯ ಚಿಕಿತ್ಸೆ ನೀಡಿ ಚರ್ಮ ರೋಗವನ್ನು ಸಂಪೂರ್ಣ ಗುಣಮುಖ ಮಾಡಲಾಯಿತು. ನಂತರ ಅವರು ಕೊರೊನಾ ಸಂದರ್ಭದಲ್ಲಿ ಸೋಂಕಿತರನ್ನು ಗುಣಮುಖ ಮಾಡುವಂತಹ ಯಾವುದಾದರೂ ಮದ್ದು ಇದೆಯೇ ಎಂದು ಕೇಳಿದ್ದರು. ಇದನ್ನೂ ಓದಿ: ಸಿಎಂ ಕಾರ್ಯಕ್ರಮಕ್ಕೆ ಇಲ್ಲ ಕೊರೊನಾ ರೂಲ್ಸ್ – ಬಸ್‍ಗಳಲ್ಲಿ ಜನರನ್ನು ತುಂಬಿಸಿಕೊಂಡು ಬಂದ ಸರ್ಕಾರ

    ಅದಕ್ಕೆ ಚಿಕಿತ್ಸೆ ನೀಡುತ್ತೇವೆ ಎಂದು ತಿಳಿಸಿದ್ದೆ. ಆ ಸಂದರ್ಭದಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಆಗ ಸವದಿ ಅವರು ಅಥಣಿ ಮೂಲದ ನಿವಾಸಿಯೊಬ್ಬರನ್ನು ಚಿಕಿತ್ಸೆಗಾಗಿ ಕಳುಹಿಸಿದ್ದರು. ಕೇವಲ ಮೂರು ನಾಲ್ಕು ದಿನಗಳಲ್ಲಿ ಸೋಂಕನ್ನು ಸಂಪೂರ್ಣವಾಗಿ ಗುಣಮುಖ ಪಡಿಸಿದ್ದೆವು ಎಂದು ಹೇಳಿದರು. ಇದನ್ನೂ ಓದಿ: ಮಂಡಿ ನೋವಿಗೆ ನಾಟಿ ಚಿಕಿತ್ಸೆ ಪಡೆದ ಸಿಎಂ ಬೊಮ್ಮಾಯಿ

    ಮೇಕೆ ಹಾಲಿನ ಬಗ್ಗೆ ಮಾತನಾಡಿದ ಅವರು, ಮೇಕೆ ಹಾಲಿನ ಬಗ್ಗೆ ಪುರಾತನ ಕಾಲದಿಂದಲೂ ಉಲ್ಲೇಖವಿದೆ. ಇದನ್ನು ಪ್ಯಾರಾಲಿಸಸ್‌ಗೂ ಮುಖ್ಯ ಮದ್ದಾಗಿ ಬಳಸುತ್ತಾರೆ. ಮೇಕೆ ಹಾಲಿನ ಜೊತೆಗೆ ಕೆಲವು ಅಡುಗೆ ಸಾಮಾಗ್ರಿ ಹಾಗೂ ವನಸ್ಪತಿಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

  • ಉಡುಪಿಯಲ್ಲಿ ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆ ಉದ್ಘಾಟನೆ

    ಉಡುಪಿಯಲ್ಲಿ ಧರ್ಮಸ್ಥಳದ ಆಯುರ್ವೇದ ಆಸ್ಪತ್ರೆ ಉದ್ಘಾಟನೆ

    ಉಡುಪಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ರತ್ನಶ್ರೀ ಆರೋಗ್ಯಧಾಮ ಉಡುಪಿಯ ಆಯುರ್ವೇದ ಆಸ್ಪತ್ರೆಯನ್ನು ಕೇಂದ್ರ ಆಯುಷ್, ಬಂದರು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ ಉದ್ಘಾಟಿಸಿದರು.

    ಉಡುಪಿಯ ಕುತ್ಪಾಡಿ ಯಲ್ಲಿರುವ ಎಸ್‍ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವಠಾರದಲ್ಲಿ ನೂತನ ಸುಸಜ್ಜಿತ ಆಯುರ್ವೇದ ಆಸ್ಪತ್ರೆ ಸೇವಾರಂಭ ಆಗಿದೆ. ಆಸ್ಪತ್ರೆ ಉದ್ಘಾಟನೆ ನಂತರ ಸಭಾಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಆಯುಷ್ ಇಲಾಖೆ ಸಚಿವರು, ಪ್ರಧಾನಿ ಮೋದಿ ಆಯುಷ್ ಇಲಾಖೆಗೆ ಶಕ್ತಿಕೊಟ್ಟಿದ್ದಾರೆ. 2014ರ ನಂತರ ದೇಶಾದ್ಯಂತ ಆಯುಷ್ ಇಲಾಖೆ ವಿಸ್ತಾರಗೊಂಡಿದೆ. ಎಸ್‍ಡಿಎಂ ಸಂಸ್ಥೆ ಆಯುರ್ವೇದ ವಿಚಾರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಶ್ರಮದ ಫಲದಿಂದ ಧರ್ಮಸ್ಥಳ ಸಂಸ್ಥೆ ಸಾಧನೆ ಮಾಡುತ್ತಿದೆ ಸೇವಾ ಸಮರ್ಪಣೆ ಮತ್ತು ವೀರೇಂದ್ರ ಹೆಗ್ಗಡೆಯವರ ಮನೋಭಾವದಿಂದ ಇಷ್ಟೆಲ್ಲಾ ಸಾಧನೆ ಸಾಧ್ಯ ಆಗಿದೆ ಎಂದು ಶ್ಲಾಘಿಸಿದರು.

    ಆಯುರ್ವೇದ ವೈದ್ಯ ಪದ್ಧತಿಯಿಂದ ಸ್ವಸ್ಥ ಸಮಾಜ ನಿರ್ಮಾಣ ಆಗಲಿದೆ. ಎಲ್ಲಾ ಚಿಕಿತ್ಸಾ ಪದ್ಧತಿಗಳ ದೇಹ ಒಂದೇ ಆಗಿರುತ್ತದೆ ಆದರೆ ಆಯುರ್ವೇದ ಚಿಕಿತ್ಸೆಯಲ್ಲಿ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ. ಕಳೆದ ಏಳು ವರ್ಷದಲ್ಲಿ ಆಯುಷ್ ಇಲಾಖೆ ದೇಶಾದ್ಯಂತ ಬಹಳ ವಿಸ್ತಾರವಾಗಿ ಬೆಳೆದಿದೆ. ಎಲ್ಲಾ ರೋಗಗಳಿಗೂ ಆಯುರ್ವೇದ ಚಿಕಿತ್ಸೆ ಫಲಕಾರಿ. ದೇಶಾದ್ಯಂತ ಸಂಶೋಧನೆಗಳು, ಪ್ರಯೋಗಗಳು ಈ ನಿಟ್ಟಿನಲ್ಲಿ ನಡೆಯುತ್ತಿದೆ ಎಂದರು. ಇದನ್ನೂ ಓದಿ: ನೆಟ್ಟಿಗರ ಮನಗೆದ್ದ ನ್ಯೂಸ್‍ಪೇಪರ್ ಬಾಯ್

    ಆಯುರ್ವೇದದ ವಿಶ್ವಾಸಾರ್ಹತೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಜನರಿಗೆ ಆಯುರ್ವೇದದ ಮೇಲೆ ನಂಬಿಕೆ ಬರುತ್ತಿದೆ. ಆಯುರ್ವೇದ ಚಿಕಿತ್ಸೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ನವಭಾರತ ನಿರ್ಮಾಣಕ್ಕೆ ಕೈ ಜೋಡಿಸೋಣ. ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ದೇಶದ ಯೋಗ, ಆಯುರ್ವೇದ, ನ್ಯಾಚುರೋಪತಿ ವಿಶ್ವಕ್ಕೆ ಮಾದರಿಯಾಗುತ್ತಿದೆ. ಪ್ರಕೃತಿ ವಿರುದ್ಧವಾದ ಯಾವುದೇ ವೈದ್ಯಕೀಯ ಚಿಕಿತ್ಸೆಗಳಿಗೆ ಜನ ಒಳಗಾಗಬಾರದು. ಪ್ರಕೃತಿಗೆ ಪೂರಕವಾದ ಚಿಕಿತ್ಸೆಯ ಪಡೆಯೋಣ ಎಂದು ನುಡಿದರು.

    ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಹರ್ಷೇಂದ್ರ ಕುಮಾರ್, ಡಾ. ಸುರೇಂದ್ರ ಕುಮಾರ್, ಡಾ. ಮಮತಾ ಮತ್ತು ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು. ಇದನ್ನೂ ಓದಿ: ಹುಟ್ಟುಹಬ್ಬದ ಪಾರ್ಟಿಗೆ ಆಗಮಿಸಿದ ಟೆಕ್ಕಿ ಸಾವು