Tag: Ayudha Puja

  • ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಿ ಪೂಜಿಸಿ: ನಾರಾಯಣ ಭಾಂಡಗೆ

    ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಿ ಪೂಜಿಸಿ: ನಾರಾಯಣ ಭಾಂಡಗೆ

    ಬಾಗಲಕೋಟೆ: ಶಕ್ತಿಶಾಲಿ ಸಮಾಜ ಕಟ್ಟಬೇಕಿದ್ದಲ್ಲಿ ಸಮಸ್ತ ಹಿಂದೂಗಳು (Hindu) ಆಯುಧ ಪೂಜೆ ಮಾಡಬೇಕು. ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ (Narayana Bhandage) ಕರೆ ನೀಡಿದ್ದಾರೆ.

    ನವಮಿ ಅಂದ್ರೆ ಬಹಳಷ್ಟು ಜನ ಮರೆತಿದ್ದು ಕೇವಲ ಊಟ ಮಾಡುವುದು ಹಬ್ಬ ಅಂತಾಗಿದೆ. ನಿಜವಾಗಿಯೂ ನವಮಿ (Navami) ಅಂದರೆ ಆಯುಧ ಪೂಜೆ ಮಾಡಬೇಕು. ಸೈನಿಕರು, ಪೊಲೀಸರು ಆಯುಧ ಪೂಜೆ ಮಾಡ್ತಾರೆ. ನಾಳೆ ಎಲ್ಲರೂ ಆಯುಧ ಪೂಜೆ (Ayudha Puja) ಮಾಡಬೇಕು ಎಂದರು. ಇದನ್ನೂ ಓದಿ:  Ayudha Puja 2025 | ವಿಜಯದಶಮಿ ಮುನ್ನಾದಿನ ಆಯುಧ ಪೂಜೆ ಆಚರಣೆ ಮಾಡುವುದೇಕೆ? ಈ ವರ್ಷ ಶುಭ ಮುಹೂರ್ತ ಯಾವಾಗ?

     

    ದೇಶ, ರಾಷ್ಟ್ರ, ಸಮಾಜ ರಕ್ಷಣೆ ಮಾಡಬೇಕಿದ್ದಲ್ಲಿ ದುರ್ಗಾ ಮಾತೆಯ ಶಕ್ತಿ ನಮಗೆ ಬರಬೇಕು. ಅದಕ್ಕಾಗಿ ಎಲ್ಲರೂ ಆಯುಧ ಪೂಜೆ ಮಾಡಬೇಕು. ಯಾರಲ್ಲಿ ಆಯುಧಗಳು ಇಲ್ವೋ ಅವರೆಲ್ಲಾಹೊಸದಾಗಿಯಾದ್ರೂ ಖರೀದಿ ಮಾಡಬೇಕು. ಮುಂದಿನ ದಿನಗಳಲ್ಲಿ ಆಯುಧಗಳ ಪೂಜೆ ಬಹಳ ಅವಶ್ಯಕತೆ ಇದೆ ಎಂದು ಹೇಳಿದರು.

    ಹಿಂದೂಗಳಿಗೆ ಶಸ್ತ್ರ ಮತ್ತು ಶಾಸ್ತ್ರ ಎರಡೂ ಬೇಕು. ಸಮರಕ್ಕೆ ಶಸ್ತ್ರ ಬೇಕಾಗುತ್ತೆ, ಅಭ್ಯಾಸಕ್ಕೆ ಶಾಸ್ತ್ರ ಬೇಕಾಗುತ್ತದೆ. ಹಿಂದೂ ಸಮಾಜ ಯಾವತ್ತೂ ಶಕ್ತಿಶಾಲಿ ಸಮಾಜ. ಎಂದಿಗೂ ನಿರ್ವೀರ್ಯ ಸಮಾಜ ಅಲ್ಲ, ನಾವು ಯಾರಿಗೂ ಅನ್ಯಾಯ ಮಾಡಲು ಹೋಗುವುದಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

  • Ayudha Puja 2025 | ವಿಜಯದಶಮಿ ಮುನ್ನಾದಿನ ಆಯುಧ ಪೂಜೆ ಆಚರಣೆ ಮಾಡುವುದೇಕೆ? ಈ ವರ್ಷ ಶುಭ ಮುಹೂರ್ತ ಯಾವಾಗ?

    Ayudha Puja 2025 | ವಿಜಯದಶಮಿ ಮುನ್ನಾದಿನ ಆಯುಧ ಪೂಜೆ ಆಚರಣೆ ಮಾಡುವುದೇಕೆ? ಈ ವರ್ಷ ಶುಭ ಮುಹೂರ್ತ ಯಾವಾಗ?

    ಪ್ರತೀ ವರ್ಷ ಅಶ್ವಿನಿ ಮಾಸದ 9ನೇ ದಿನದಂದು ಅಂದ್ರೆ ಮಹಾನವಮಿಯಂದು ಆಯುಧ ಪೂಜೆಯನ್ನ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ವಿಜಯದಶಮಿ ದಿನದಂದೂ ಆಯುಧ ಪೂಜೆಯನ್ನು ಮಾಡುತ್ತಾರೆ. 2025ರ ಆಯುಧ ಪೂಜೆಯನ್ನು (Ayudha Puja) ಅಕ್ಟೋಬರ್‌ 01ರ ಬುಧವಾರದಂದು ಆಚರಿಸಲಾಗುವುದು. ದಕ್ಷಿಣ ಭಾರತದಲ್ಲಿ ಆಯುಧ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಈ ದಿನ ನಾವು ಕೆಲಸ ಮಾಡಲು ಬಳಸುವ ವಸ್ತುಗಳನ್ನು, ಆಯುಧಗಳನ್ನು ಮತ್ತು ರಕ್ಷಾ ಕವಚಗಳನ್ನು ಪೂಜಿಸುವ ಸಂಪ್ರದಾಯವಿದೆ. ಇದರ ಹಿಂದೆ ಪುರಾಣ ಪುಣ್ಯಕಥೆಗಳೂ ಇವೆ. ಅವುಗಳೇನೆಂಬುದನ್ನಿಲ್ಲಿ ತಿಳಿಯೋಣ…

    ಈ ವರ್ಷ ಶುಭ ಮುಹೂರ್ತ ಎಷ್ಟೊತ್ತಿಗೆ?
    ಈ ವರ್ಷ ಅಕ್ಟೋಬರ್‌ 1ರಂದು ಆಯುಧಪೂಜಾ ಹಬ್ಬ ಇರಲಿದ್ದು, ಇದಾದ ಮುರು ದಿನ ವಿಜಯದಶಮಿ ಆರಂಭವಾಗುತ್ತದೆ. ಈ ಬಾರಿ ಅಕ್ಟೋಬರ್‌ 1ರಂದು ಮಧ್ಯಾಹ್ನ 2:09 ರಿಂದ 2:57ರ ಸಂದರ್ಭ ಶುಭಮುಹೂರ್ತ ಇದೆ.

    navratri special Ayudha Pooja What Is Its Significance

    ಆಯುಧ ಪೂಜೆ ಮಹತ್ವ ಏನು?
    ಹಿಂದೂ ಧರ್ಮದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ಪುರಾಣಗಳ ಪ್ರಕಾರ ಅಂದು ದಿನ ಆಯುಧಗಳನ್ನು ಪೂಜಿಸುವ ಸಂಪ್ರದಾಯವಿದೆ. ಹಿಂದಿನ ಕಾಲದಲ್ಲಿ, ಕ್ಷತ್ರಿಯ ಜನರು ಯುದ್ಧಕ್ಕೆಂದು ಹೋಗುತ್ತಿದ್ದರು. ಇವರು ವಿಜಯದಶಮಿಯ ಒಂದು ದಿನ ಮೊದಲು ಆಯುಧ ಪೂಜೆ ದಿನ ತಮ್ಮ ಯುದ್ಧ ಸಾಮಾಗ್ರಿಗಳನ್ನಿಟ್ಟು ಪೂಜೆಯನ್ನು ಮಾಡುತ್ತಿದ್ದರು. ಆಯುಧ ಪೂಜೆಯ ಮೂಲಕ ಆಯುಧಗಳನ್ನು ಪೂಜಿಸುವುದರಿಂದ ಯುದ್ಧದಲ್ಲಿ ವಿಜಯಿಯಾಗಬಹುದು ಎಂಬುದು ಅವರ ನಂಬಿಕೆಯಾಗಿತ್ತು. ಈ ಪೂಜೆಯನ್ನು ಕೆಲಸ ಮತ್ತು ಜ್ಞಾನದ ಸಮನ್ವಯದ ಸಂಕೇತವೆಂದು ಪರಿಗಣಿಸಲಾಗಿದೆ.

    ಆಯುಧ ಪೂಜೆ ವಿಧಾನ
    ಆಯುಧ ಪೂಜೆಯ ದಿನದಂದು ಜನರು ತಮ್ಮ ಮನೆ, ಕೆಲಸದ ಸ್ಥಳ, ಕಾರ್ಖಾನೆಗಳು ಮತ್ತು ಅಂಗಡಿಗಳಲ್ಲಿ ಬಳಸುವ ಉಪಕರಣಗಳು ಮತ್ತು ಸಲಕರಣೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಪೂಜೆಗೆ ಅಲಂಕರಿಸುತ್ತಾರೆ. ವ್ಯಾಪಾರ ವರ್ಗದವರು ತಮ್ಮ ವ್ಯಾಪಾರ ಸಲಕರಣೆಗಳಾದ ಕಂಪ್ಯೂಟರ್, ಪೆನ್ನು, ಖಾತೆ ಪುಸ್ತಕ ಇತ್ಯಾದಿಗಳಿಗೆ ಪೂಜೆಯನ್ನು ಮಾಡುತ್ತಾರೆ ಮತ್ತು ರೈತರು ತಮ್ಮ ಕೃಷಿ ಉಪಕರಣಗಳನ್ನು ಪೂಜಿಸುತ್ತಾರೆ. ಸೈನಿಕರು ತಮ್ಮ ಆಯುಧಗಳನ್ನು ಪೂಜಿಸುತ್ತಾರೆ.

    MYSURU DASARA 4

    ಅಂದು ಪೂಜಾ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ನಂತರ ಅಲ್ಲಿ ದೇವರು ಮತ್ತು ದೇವತೆಗಳ ವಿಗ್ರಹಗಳು ಅಥವಾ ಚಿತ್ರಗಳನ್ನು ಇಡಲಾಗುತ್ತದೆ. ಇದರ ನಂತರ, ಪೂಜೆಯನ್ನು ನಡೆಸಲಾಗುತ್ತದೆ. ಅದರಲ್ಲಿ ಹೂವುಗಳು, ಧೂಪದ್ರವ್ಯಗಳು, ದೀಪಗಳು ಮತ್ತು ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ತೆಂಗಿನಕಾಯಿ, ಹೂವು, ಅರಿಶಿನ, ಕುಂಕುಮ ಮತ್ತು ಅಕ್ಷತೆಯನ್ನು ಅರ್ಪಿಸಿ ಆಯುಧಗಳು ಮತ್ತು ವಾದ್ಯಗಳನ್ನು ಪೂಜಿಸುತ್ತಾರೆ. ಪೂಜೆಯ ಸಮಯದಲ್ಲಿ, ವಾದ್ಯಗಳನ್ನು ಗೌರವಿಸಲಾಗುತ್ತದೆ. ಪೂಜೆಯ ಕೊನೆಯಲ್ಲಿ ಪ್ರಸಾದವನ್ನು ವಿತರಿಸಲಾಗುತ್ತದೆ.

    ಆಯುಧ ಪೂಜೆ ಕಥೆ
    ಆಯುಧ ಪೂಜೆಗೆ ಸಂಬಂಧಿಸಿದ ದಂತಕಥೆಯ ಪ್ರಕಾರ, ದುರ್ಗಾದೇವಿಯು ತನ್ನ ರೌದ್ರ ರೂಪದಲ್ಲಿ ರಾಕ್ಷಸ ಮಹಿಷಾಸುರನನ್ನು ಸೋಲಿಸಿರುವ ದಿನವಾಗಿದೆ. ಎಲ್ಲಾ ದೇವತೆಗಳು ರಾಕ್ಷಸನನ್ನು ಸೋಲಿಸಲು ದುರ್ಗೆಗೆ ತಮ್ಮ ಆಯುಧಗಳು, ಪ್ರತಿಭೆ ಮತ್ತು ಶಕ್ತಿಗಳನ್ನು ನೀಡಿದರು. ಸಂಪೂರ್ಣ ಯುದ್ಧವು ಒಂಬತ್ತು ದಿನಗಳ ಕಾಲ ನಡೆಯಿತು. ಮತ್ತು ನವಮಿಯ ಮುನ್ನಾದಿನದಂದು, ದುರ್ಗಾ ದೇವಿಯು ಮಹಿಷಾಸುರನನ್ನು ಕೊಲ್ಲುವ ಮೂಲಕ ಯುದ್ಧವನ್ನು ಮುಕ್ತಾಯಗೊಳಿಸಿದಳು. ಹೀಗಾಗಿ, ಆ ದಿನವನ್ನು ಮಹಾನವಮಿ ಎಂದು ಆಚರಿಸಲಾಗುತ್ತದೆ ಮತ್ತು ಆಯುಧ ಪೂಜೆಯ ವಿಧಿವಿಧಾನವನ್ನು ಪೂರೈಸಲಾಗುತ್ತದೆ. ದುರ್ಗಾ ದೇವಿಯು ಬಳಸಿದ ಎಲ್ಲಾ ಆಯುಧಗಳು ಮತ್ತು ಉಪಕರಣಗಳು ತಮ್ಮ ಉದ್ದೇಶವನ್ನು ಸಾಧಿಸಿವೆ ಎನ್ನುವ ನಂಬಿಕೆಯಿದೆ. ಯುದ್ಧದ ನಂತರ ಆ ಆಯುಧಗಳನ್ನು ಗೌರವಿಸಲು ಎಲ್ಲಾ ಆಯುಧಗಳನ್ನು ಪೂಜಿಸಿ ಒಂದೆಡೆ ಇಟ್ಟು ಶುಚಿಗೊಳಿಸಿ ಅಲಂಕರಣ ಮಾಡಿದ ನಂತರ ಆಯಾ ದೇವರು ಮತ್ತು ದೇವತೆಗಳಿಗೆ ಅವುಗಳನ್ನು ಹಿಂದಿರುಗಿಸಲಾಯಿತು.

  • ನವರಾತ್ರಿ ವಿಶೇಷ: ಆಯುಧ ಪೂಜೆ ಯಾಕೆ ಮಾಡಲಾಗುತ್ತದೆ? ಏನಿದರ ಮಹತ್ವ?

    ನವರಾತ್ರಿ ವಿಶೇಷ: ಆಯುಧ ಪೂಜೆ ಯಾಕೆ ಮಾಡಲಾಗುತ್ತದೆ? ಏನಿದರ ಮಹತ್ವ?

    ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ಬರುವ ನವರಾತ್ರಿ ಹಬ್ಬವನ್ನು (Navratri Festival) ಹಿಂದೂಗಳು (Hindu) ವೈಭವದಿಂದ ಆಚರಿಸುತ್ತಾರೆ. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳಲ್ಲಿ ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ (Ayudha Puja) ವಿಶೇಷ ಮಹತ್ವವಿದೆ.

    ಆಯುಧಗಳನ್ನು ಪೂಜಿಸುವ ಮತ್ತು ಅವುಗಳಿಗೆ ಕೃತಜ್ಞರಾಗಿರುವ ದಿನವೇ ಆಯುಧ ಪೂಜೆ. ರೈತರು ನೇಗಿಲು ಕೃಷಿಗೆ ಬಳಸುವ ವಸ್ತುಗಳಿಗೆ ಪೂಜೆ ಮಾಡಿದರೆ ಸೈನಿಕರು ಬಂದೂಕು, ಫಿರಂಗಿ, ಯುದ್ಧ ಟ್ಯಾಂಕರ್, ವಿಮಾನಗಳಿಗೆ ಪೂಜೆ ಮಾಡುತ್ತಾರೆ. ಮನೆಯಲ್ಲಿರುವ ಪುಟಾಣಿಯ ಸೈಕಲಿನಿಂದ ಹಿಡಿದು ದೊಡ್ಡ ವಾಹನಗಳಿಗೆ ಪೂಜೆ ನಡೆದರೆ ಕಚೇರಿಗಳಲ್ಲಿ ಕಂಪ್ಯೂಟರ್‌, ಉತ್ಪಾದನಾ ಯಂತ್ರಗಳಿಗೆ ಪೂಜೆ ನಡೆಯುತ್ತದೆ. ಆಯುಧ ಪೂಜೆಯಂದು ಮನೆಯಲ್ಲಿ ಉಪಯೋಗಿಸುವ ಚೂರಿಯಿಂದ ಹಿಡಿದು ಎಲ್ಲಾ ವಿಧದ ಆಯುಧಗಳನ್ನು ಪೂಜಿಸಲಾಗುತ್ತಿದೆ. ಕುಶಲಕರ್ಮಿಗಳು ತಮ್ಮ ಉಪಕರಣಗಳನ್ನು ಪೂಜಿಸುತ್ತಾರೆ, ಕಲೆಗೆ ಸಂಬಂಧಿಸಿದ ಜನರು ತಮ್ಮ ವಾದ್ಯಗಳನ್ನು ಪೂಜಿಸುತ್ತಾರೆ. ಈ ದಿನ ವಸ್ತುಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತಿದೆ.

    ಆಯುಧ ಪೂಜೆಯು ದುರ್ಗಾ ಮಾತೆಯನ್ನು ಪೂಜಿಸಿದರೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿದೆ. ರಾಜರ ಆಡಳಿತ ಅವಧಿಯಲ್ಲಿ ನವಮಿಯಂದು ಆಯುಧಗಳಿಗೆ ಪೂಜೆ ಮಾಡಿ ದಶಮಿಯಂದು ಯುದ್ಧಕ್ಕೆ ಹೊರಟರೆ ಹೊರಟರೆ ವಿಜಯ ಸಿದ್ಧಿ ಎನ್ನುವ ನಂಬಿಕೆ ಇತ್ತು. ಈ ಕಾರಣಕ್ಕೆ ನವಮಿಯಂದೇ ಪೂಜೆ ಸಲ್ಲಿಸಿ ಜೈತ್ರಯಾತ್ರೆಗೆ ತೆರಳುತ್ತಿದ್ದರು. ಈ ಪದ್ದತಿ ಈಗಲೂ ಉಳಿದುಕೊಂಡಿದೆ. ಸಾಂಕೇತಿಕವಾಗಿ ಕೆಲ ರಾಜವಂಶಸ್ಥರು ತಮ್ಮ ರಾಜ್ಯದ ಗಡಿಯನ್ನು ದಾಟಿ ಮತ್ತೆ ಮರಳುತ್ತಾರೆ. ಇದನ್ನೂ ಓದಿ: ಕೈ ಬೀಸಿ ಕರೆಯುತ್ತಿದೆ ಮಂಗಳೂರು ದಸರಾ – ಬರೋಬ್ಬರಿ 22 ಲಕ್ಷ ಬಲ್ಬುಗಳಿಂದ ಅಲಂಕಾರ

    ಪೌರಾಣಿಕ ಕಥೆ ಏನು?
    ಆಯುಧ ಪೂಜೆಯ ಹಿಂದೆ ಪೌರಾಣಿಕ ಕಥೆಯೂ ಇದೆ. ದ್ವಾಪರ ಯುಗದಲ್ಲಿ ಪಾಂಡವರು (Pandavas) 12 ವರ್ಷಗಳ ವನವಾಸ, ಒಂದು ವರ್ಷ ಅಜ್ಞಾತವಾಸ ಮಾಡುತ್ತಾರೆ. ಅಜ್ಞಾತವಾಸವನ್ನು ಮತ್ಸ್ಯನಗರದ ವಿರಾಟರಾಯನ ಅರಮನೆಯಲ್ಲಿ ಕಳೆಯುತ್ತಾರೆ. ಅಜ್ಞಾತಕ್ಕೆ ತೆರಳುವ ಮುನ್ನ ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಬನ್ನಿ ವೃಕ್ಷದಲ್ಲಿ ಅಡಗಿಸಿ ಇಡುತ್ತಾರೆ.

    ವಿರಾಟನ ಆಸ್ಥಾನದಲ್ಲಿ ಆಗ ಧರ್ಮರಾಜ ಕಂಕಭಟ್ಟ, ಭೀಮ ಬಾಣಸಿಗನಾದ ವಲಲನಾಗಿ, ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕಿಯಾಗಿ ವೇಷ ಧರಿಸಿದರೆ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟನ ಪತ್ನಿಯಾದ ಸುದೇಷ್ಣೆಯ ಆಪ್ತ ಸಖಿಯಾಗಿ ಕೆಲಸ ಮಾಡುತ್ತಿರುತ್ತಾಳೆ.

    ಅಜ್ಞಾತ ವಾಸದ ಕೊನೆಯಲ್ಲಿ ವಿರಾಟರಾಯನ ಗೋವುಗಳನ್ನು ಕೌರವರು ಅಪಹರಿಸುತ್ತಾರೆ. ಈ ವೇಳೆ ವಿರಾಟ ರಾಜನ ಪುತ್ರ ಉತ್ತರ ಕುಮಾರ ಕುರು ಸೇನೆಯನ್ನು ಸೋಲಿಸಿ ಗೋವುಗಳನ್ನು ನಾನು ತರುತ್ತೇನೆ ಎಂದು ಜಂಬ ಕೊಚ್ಚಿಕೊಳ್ಳುತ್ತಾನೆ. ಈತನ ರಥಕ್ಕೆ ಸಾರಥಿಯಾಗಿ ಬೃಹನ್ನಳೆಯಾಗಿರುವ ಅರ್ಜುನನು ತೆರಳುತ್ತಾನೆ. ಕೌರವರ ಬಾಣಗಳನ್ನು ನೋಡಿ ರಥ ತಿರುಗಿಸುವಂತೆ ಉತ್ತರ ಕುಮಾರ ಬೃಹನ್ನಳೆಯ ಬಳಿ ಪರಿ ಪರಿಯಾಗಿ ಕೇಳುತ್ತಾನೆ. ಇದಕ್ಕೆ ಒಪ್ಪದ ಅರ್ಜುನ ಶಮಿ ವೃಕ್ಷದ ಬಳಿ ಬಂದು ಆಯುಧ ಇಳಿಸುತ್ತಾನೆ. ಅರ್ಜುನ ತನ್ನ ಗಾಂಡೀವವನ್ನು ಧರಿಸಿ ಯುದ್ಧ ಮಾಡಿ ಗೋವುಗಳನ್ನು ಕೌರವರ ಸೆರೆಯಿಂದ ಬಿಡಿಸುತ್ತಾನೆ. ಪಾಂಡವರು 12 ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಸಾಧಿಸಿದ ವಿಜಯದ ಕುರುಹಾಗಿ ಕೂಡ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ.

    ಹಿಂದೆ ರಾಜರಿಗೆ ಆಯುಧಗಳ ಬಹಳ ಮುಖ್ಯವಾಗಿದ್ದವು. ಈ ಕಾರಣಕ್ಕೆ ನಮ್ಮನ್ನು ರಕ್ಷಿಸುವ ಕತ್ತಿ, ಖಡ್ಗಗದಂತಹ ಆಯುಧಗಳಿಗೆ ಒಂದು ದಿನ ವಿರಾಮ ನೀಡಿ ಅವುಗಳಿಗೆ ಕೃತಜ್ಞತೆ ಅರ್ಪಿಸಲು ಆಯುಧ ಪೂಜೆ ದಿನದಂದು ವಿಶೇಷ ಪೂಜೆ ಮಾಡಲಾಗುತ್ತದೆ. ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವೀಕ ಶಕ್ತಿ ಇದೆ. ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ.

  • ನವರಾತ್ರಿಯ 9ನೇ ದಿನ ಆಯುಧ ಪೂಜೆ – ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಪೂಜೆ

    ನವರಾತ್ರಿಯ 9ನೇ ದಿನ ಆಯುಧ ಪೂಜೆ – ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಪೂಜೆ

    – ಶನಿವಾರ ವಿಜಯದಶಮಿ ಮೆರವಣಿಗೆಗೆ ಭರದ ಸಿದ್ಧತೆ

    ಮೈಸೂರು: ನವರಾತ್ರಿಯ 9ನೇ ದಿನವಾದ ಇಂದು ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ (Mysore Palace) ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಲಿದೆ. ರಾಜವಂಶಸ್ಥ ಯದುವೀರ್ ಪಟ್ಟದ ಆನೆ, ಕುದುರೆ, ಹಸು ಸೇರಿ ಖಾಸಾ ಆಯುಧಗಳು, ಅರಮನೆ ವಾಹನಗಳಿಗೆ ಪೂಜೆ ಸಲ್ಲಿಸಲಿದ್ದು, ದಸರಾ (Dasara) ವೈಭವ ಮತ್ತಷ್ಟು ಕಳೆಗಟ್ಟಲಿದೆ. ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

    ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. ನವರಾತ್ರಿಯ 9 ದಿನವಾದ ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಆಯುಧ ಪೂಜಾ ನೆರವೇರಿಸಲಿದ್ದಾರೆ. ಈ ಹಿನ್ನೆಲೆ ಅರಮನೆಯಲ್ಲಿ ಬೆಳಗ್ಗಿನಿಂದಲೇ ಆಯುಧ ಪೂಜೆಯ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿವೆ.

    ಬೆಳಿಗ್ಗೆ 6ಗಂಟೆಗೆ ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಚಂಡಿಕಾಹೋಮ ನೆರವೇರಲಿದ್ದು, ಪಟ್ಟದ ಆನೆ, ಕುದುರೆ, ಹಸು ಆನೆ ಬಾಗಿಲಿಗೆ ಆಗಮನವಾಗಲಿವೆ. ಖಾಸಗಿ ಆಯುಧಗಳನ್ನ ಆನೆ ಬಾಗಿಲು ಮೂಲಕ ಶ್ರೀ ಕೋಡಿ ಸೋಮೇಶ್ವರ ದೇವಾಲಯಕ್ಕೆ ರವಾನೆ ಮಾಡಲಾಗುತ್ತದೆ. ಬಳಿಕ ಕೋಡಿ ಸೋಮೇಶ್ವರ ದೇವಾಲಯದಿಂದ ಖಾಸಾ ಆಯುಧಗಳನ್ನ ಆನೆ ಬಾಗಿಲ ಮುಖಾಂತರ ಅರಮನೆಯ ಕಲ್ಯಾಣ ಮಂಟಪಕ್ಕೆ ರವಾನೆ ಮಾಡಲಾಗುತ್ತದೆ. ನಂತರ ಚಂಡಿ ಹೋಮ ಪೂರ್ಣಾಹುತಿ ನೆರವೇರಲಿದೆ. ಆ ನಂತರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆನೆ ಬಾಗಿಲಿಗೆ ಬಂದು, ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಲಿದೆ.

    ಆಯುಧ ಪೂಜೆಯ ಕೊನೆಯಲ್ಲಿ ತಾವು ಬಳಸುವ ವಾಹನಗಳಿಗೂ ಯದುವೀರ್ ಪೂಜೆ ಸಲ್ಲಿಸಲಿದ್ದಾರೆ. ನಂತರ ಅರಮನೆಯ ಕಲ್ಯಾಣ ಮಂಟಪದಲ್ಲಿ ಸಂಜೆ ರತ್ನ ಖಚಿತ ಸಿಂಹಾಸನದಲ್ಲಿ ನವರಾತ್ರಿಯ ಕೊನೆಯ ದಿನದ ಖಾಸಗಿ ದರ್ಬಾರ್ ನಡೆಸಿ, ಸಿಂಹಾಸನದಿಂದ ಸಿಂಹ ವಿಸರ್ಜನೆ ಮಾಡುತ್ತಾರೆ. ಆ ಬಳಿಕ ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡುತ್ತಾರೆ.

    ಒಟ್ಟಾರೆ ಅಂಬಾವಿಲಾಸ ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧಪೂಜೆ ನೆರವೇರಿಸುವ ಮೂಲಕ ನವರಾತ್ರಿ ಪೂಜೆ ಪೂರ್ಣಗೊಳ್ಳಲಿದೆ. ನಾಳೆ ವಿಜಯದಶಮಿ ಮೆರವಣಿಗೆಗೆ ಅರಮನೆ ಆವರಣದಲ್ಲಿ ಭರದ ಸಿದ್ಧತೆ ನಡೆದಿದೆ.

  • ಆಯುಧ ಪೂಜೆ – ಸರ್ಕಾರಿ ಬಸ್‌ಗಳ ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ಡಿಮ್ಯಾಂಡ್

    ಆಯುಧ ಪೂಜೆ – ಸರ್ಕಾರಿ ಬಸ್‌ಗಳ ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ಡಿಮ್ಯಾಂಡ್

    ಬೆಂಗಳೂರು: ನವರಾತ್ರಿ (Navratri) ಹಿನ್ನೆಲೆ ಸೋಮವಾರ ನಾಡಿನಾದ್ಯಂತ ಆಯುಧ ಪೂಜೆಗೆ (Ayudha Puja) ತಯಾರಿ ನಡೆಯುತ್ತಿದೆ. ಈ ಬಾರಿ ಸರ್ಕಾರಿ ಬಸ್‌ಗಳ (Bus) ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ಬೇಡಿಕೆ ಇಡಲಾಗುತ್ತಿದೆ.

    ಪ್ರತಿ ವರ್ಷ ನಿಗಮಗಳು ಆಯುಧ ಪೂಜೆಗೆ ಜೀಪ್, ಕಾರುಗಳಿಗೆ 40 ರೂ. ಬಸ್‌ಗಳಿಗೆ ತಲಾ 100 ರೂ. ಬಿಡುಗಡೆ ಮಾಡುತ್ತಿತ್ತು. ಆದರೆ ಈ ಬಾರಿ ಪ್ರತಿ ಬಸ್‌ಗೆ 500 ರೂ. ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಬೆಲೆ ಏರಿಕೆ ಹಿನ್ನೆಲೆ ನೌಕರರು ಹೆಚ್ಚುವರಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದನ್ನೂ ಓದಿ: ಘೋಸ್ಟ್ ಪ್ರದರ್ಶನ : ಸಂತೋಷ್ ಚಿತ್ರಮಂದಿರದ ಕಚೇರಿ ಗ್ಲಾಸ್ ಪುಡಿಪುಡಿ

    ಈ ಬಾರಿ ಆಯುಧ ಪೂಜೆ ಸಂಭ್ರಮದಿಂದ ಆಚರಿಸಲು ಸಾರಿಗೆ ನಿಗಮದ ನೌಕರರು ತೀರ್ಮಾನ ಮಾಡಿದ್ದಾರೆ. ಒಂದು ಬಸ್‌ಗೆ ಸರಳವಾಗಿ ಪೂಜೆ ಮಾಡಲು ಬಾಳೆಕಂದು, ತೆಂಗಿನಕಾಯಿ, ಕರ್ಪೂರ, ಕುಂಕುಮ, ಬೂದು ಕುಂಬಳಕಾಯಿ, ವಿಭೂತಿ ಅಗತ್ಯ. ಆದರೆ ಪ್ರತಿ ಬಾರಿ ಬಿಎಂಟಿಸಿ (BMTC) ಹಾಗೂ ಕೆಎಸ್‌ಆರ್‌ಟಿಸಿ (KSRTC) ಜಿಪುಣತನ ತೋರಿದೆ. ಹೀಗಾಗಿ ಈ ಬಾರಿ ಆಯುಧ ಪೂಜೆ ಸಂಭ್ರಮಕ್ಕೆ ಹೆಚ್ಚುವರಿ ಹಣ ನೀಡುವಂತೆ ನೌಕರರು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಡಿಕೆಶಿ ಸ್ವಾಗತಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಹೋಗದಿರುವುದು ಎಂಟನೇ ಅದ್ಭುತ: ಮುನಿರತ್ನ ವ್ಯಂಗ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಸರಾ, ಆಯುಧಪೂಜೆ – ಗಗನಕ್ಕೇರಿದ ಹೂ, ಅಗತ್ಯ ವಸ್ತುಗಳ ಬೆಲೆ

    ದಸರಾ, ಆಯುಧಪೂಜೆ – ಗಗನಕ್ಕೇರಿದ ಹೂ, ಅಗತ್ಯ ವಸ್ತುಗಳ ಬೆಲೆ

    ಬೆಂಗಳೂರು: ದಸರಾ (Dasara) ಮತ್ತು ಆಯುಧಪೂಜೆ (Ayudha Puja) ಹಿನ್ನೆಲೆ ನಗರದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಹಿನ್ನೆಲೆ ನಾಳೆ ನಾಡಿದ್ದು ಇನ್ನಷ್ಟು ದರ ಏರಿಕೆ ಸಾಧ್ಯತೆ ಇದ್ದು, ಇಂದೇ ಜನ ಖರೀದಿಗೆ ಮುಂದಾಗಿದ್ದಾರೆ.

    ಹಬ್ಬದ ದಿನಗಳು ಹತ್ತಿರ ಬಂದರೆ ಸಾಕು ಜನಸಾಮಾನ್ಯರ ಜೇಬಿಗೆ ಹೊರೆ ಬೀಳುವುದು ಸಾಮಾನ್ಯ. ಕಾರಣ ಅಗತ್ಯ ವಸ್ತುಗಳ ಖರೀದಿ ಹೆಚ್ಚಾಗುವ ಕಾರಣ ಇತರೆ ದಿನಗಳಿಗೆ ಹೋಲಿಕೆ ಮಾಡಿದರೆ ಹಬ್ಬದ ದಿನಗಳಲ್ಲಿ ಬೆಲೆ ಹೆಚ್ಚಾಗುತ್ತಲೇ ಇರುತ್ತದೆ. ಅದರಂತೆ ಈ ಬಾರಿಯ ಆಯುಧಪೂಜೆ ದಸರಾಗೂ ದರ ಏರಿಕೆಯಾಗಿದ್ದು, ಹಬ್ಬಕ್ಕೆ ಎರಡು ದಿನ ಮುನ್ನವೆ ಖರೀದಿ ಕೂಡ ಜೋರಾಗಿದೆ. ಇದನ್ನೂ ಓದಿ : ಡಿಕೆಶಿ ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದಾಗಿತ್ತು – ಡಿಕೆಶಿ ಕಣ್ಣೀರಿಗೆ ಸಿ.ಟಿ.ರವಿ ವ್ಯಂಗ್ಯ

    ಈ ಬಾರಿ ಆಯುಧಪೂಜೆಗೆ ಕೇವಲ ಎರಡು ದಿನ ಮಾತ್ರ ಬಾಕಿ ಇದೆ. ಸಾಮಾನ್ಯವಾಗಿ ಆಯುಧಪೂಜೆ ಸಂದರ್ಭದಲ್ಲಿ ವಾಹನಗಳು, ಯಂತ್ರಗಳಿಗೆ ಹೂವಿನ ಅಲಂಕಾರದ ಜೊತೆಗೆ, ಪೂಜೆ ಪುನಾಸ್ಕಾರಗಳು ಜೋರಾಗಿಯೇ ಮಾಡುವುದರಿಂದ ಹೂ ಸೇರಿದಂತೆ ಕೆಲ ಅಗತ್ಯ ವಸ್ತುಗಳ ದರ ದುಪ್ಪಟ್ಟಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಹೂವಿನ ದರ ಡಬಲ್ ಏರಿಕೆಯಾಗಿದೆ. ಆದರೆ ವಿಶೇಷ ಅಂದರೆ ಹಣ್ಣು ಮತ್ತು ತರಕಾರಿ ದರ ತಟಸ್ಥವಾಗಿದ್ದು, ಹೂವಿನ ದರ ಕೈಸುಡುತ್ತಿದೆ. ಇನ್ನೂ ನಾಳೆ, ನಾಡಿದ್ದು ಇನ್ನಷ್ಟು ದರ ಏರಿಕೆಯಾಗುವ ಸಾಧ್ಯತೆ ಇದ್ದು, ಹೂ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಇತ್ತ ಗ್ರಾಹಕರು ಕೂಡ ಹೂವಿನ ಬೆಲೆ ಜಾಸ್ತಿ ಆಗುವ ಸಾಧ್ಯತೆ ಹಿನ್ನೆಲೆ ಇಂದೇ ವ್ಯಾಪಾರಕ್ಕೆ ಮುಂದಾಗಿದ್ದಾರೆ.

    ಹೂವಿನ ಬೆಲೆ ಕೆಜಿಗೆ ಎಷ್ಟು?
    ಮಲ್ಲಿಗೆ ಹೂ – 1000 ಸಾವಿರ ರೂ.
    ಸೇವಂತಿಗೆ – 300-500  ರೂ.
    ಚೆಂಡು ಹೂ – 150 ರೂ .
    ಕನಕಾಂಬರ – 3 ಸಾವಿರ
    ಸುಗಂಧರಾಜ – 400 ರೂ.
    ಕಾಕಡ – 700-800 ರೂ.

    ಕೇವಲ ಹೂ ಮಾತ್ರ ಅಲ್ಲ. ಈ ಹಬ್ಬಕ್ಕೆ ಬೇಕಾದ ಮತ್ತೊಂದು ಅಗತ್ಯ ವಸ್ತು ಅಂದರೆ ಕುಂಬಳಕಾಯಿ (Pumpkin) ಹಾಗೂ ಬಾಳೆ ಕಂಬ. ಇವುಗಳ ಬೆಲೆ ಕೂಡ ಡಬಲ್ ಆಗಿದೆ. ತಮಿಳುನಾಡು, ಆಂಧ್ರದಿಂದ ನಗರಕ್ಕೆ ಆಗಮಿಸಿರುವ ಕುಂಬಳಕಾಯಿ ಕೆ.ಜಿಗೆ 35 ರಿಂದ 40 ರೂ. ಗೆ ಏರಿಕೆ ಆಗಿದೆ. ಕಳೆದ ವಾರ 15 ರೂ. ಇದ್ದ ಕುಂಬಳಕಾಯಿ ದರ ಈ ವಾರ ಎರಡು ಪಟ್ಟು ಏರಿಕೆಯಾಗಿದೆ. ಬಾಳೆ ಕಂಬ ಸಹ ಜೊತೆಗೆ 150 ರೂ. ಆಗಿದೆ. ಹಲವೆಡೆ ಮಳೆ ಮತ್ತು ಬೆಳೆನಷ್ಟ ಹಿನ್ನೆಲೆ ಈ ಬಾರಿ ಬೇರೆ ಕಡೆಯಿಂದ ಲೋಡ್ ಬಾರದ ಹಿನ್ನೆಲೆ ಸದ್ಯ ಬೆಲೆ ಏರಿಕೆಯಾಗಿದೆ ಎನ್ನಲಾಗುತ್ತಿದೆ.

    ಒಟ್ಟಾರೆ ನಾಳೆ ನಾಡಿದ್ದು ಇನ್ನಷ್ಟು ದರ ಹೆಚ್ಚಾಗುವ ಸಾಧ್ಯತೆ ಇದೆ. ಇಂದೇ ನಿಮ್ಮ ಖರೀದಿ ಮಾಡಿ ಮುಗಿಸಿದರೆ ಸ್ವಲ್ಪ ಹಣ ಉಳಿತಾಯ ಆದರೂ ಆಗಬಹುದು. ಇದನ್ನೂ ಓದಿ: ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು 2 ಕೋಟಿ ರೂ. ಬಿಡುಗಡೆ: ಪ್ರಭು ಚವ್ಹಾಣ್

    Live Tv
    [brid partner=56869869 player=32851 video=960834 autoplay=true]

  • ಆಯುಧ ಪೂಜೆ ಪ್ರಯುಕ್ತ ರಾಜಭವನದಲ್ಲಿ ರಾಜ್ಯಪಾಲರಿಂದ ವಿಶೇಷ ಪೂಜೆ

    ಆಯುಧ ಪೂಜೆ ಪ್ರಯುಕ್ತ ರಾಜಭವನದಲ್ಲಿ ರಾಜ್ಯಪಾಲರಿಂದ ವಿಶೇಷ ಪೂಜೆ

    ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ರಾಜಭವನದಲ್ಲಿ  ವಿಶೇಷ ಪೂಜೆ ಸಲ್ಲಿಸಿದರು.

    ರಾಜಭವನದ ಆಡಳಿತ ಕಚೇರಿಯಲ್ಲಿ ತಾಯಿ ಚಾಮುಂಡೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ರಾಜ್ಯಪಾಲರು, ಆಯುಧ ಪೂಜೆ ಅಂಗವಾಗಿ ರಾಜಭವನದ ಪೊಲೀಸ್ ಗಾರ್ಡ್ ಕೊಠಡಿಯಲ್ಲಿ ಭದ್ರತಾ ಸಿಬ್ಬಂದಿಯ ಶಸ್ತ್ರಾಸ್ತ್ರಗಳನ್ನು ಇರಿಸಿ ಪೂಜೆ ನೆರವೇರಿಸಿದರು. ಇದನ್ನೂ ಓದಿ: ನಾಡಿನೆಲ್ಲೆಡೆ ಆಯುಧಪೂಜೆಯ ಸಂಭ್ರಮ – ರಾಜವಂಶಸ್ಥರ ಆಯುಧಗಳಿಗೆ ಪೂಜೆ ಸಲ್ಲಿಸಲಿರುವ ಯದುವೀರ್      

    ನಂತರ ರಾಜಭವನದ ವಾಹನಗಳಿಗೆ ಪೂಜೆ ಸಲ್ಲಿಸಿ, ಎಲ್ಲರಿಗೂ ಶುಭ ಕೋರಿದರು. ಈ ಸಂಧರ್ಭದಲ್ಲಿ ರಾಜಭವನದ ಆಡಳಿತ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಇದನ್ನೂ ಓದಿ:  ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

  • ಗುಂಪು ಘರ್ಷಣೆ ಭಾರತೀಯ ಮೂಲದ್ದಲ್ಲ, ಭಾರತವನ್ನು ಅವಮಾನಿಸಲು ಇದನ್ನು ಬಳಸಬೇಡಿ – ಮೋಹನ್ ಭಾಗವತ್

    ಗುಂಪು ಘರ್ಷಣೆ ಭಾರತೀಯ ಮೂಲದ್ದಲ್ಲ, ಭಾರತವನ್ನು ಅವಮಾನಿಸಲು ಇದನ್ನು ಬಳಸಬೇಡಿ – ಮೋಹನ್ ಭಾಗವತ್

    ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂದು ವಿಜಯದಶಮಿಯ ಅಂಗವಾಗಿ ಮಹಾರಾಷ್ಟ್ರದ ನಾಗಪುರದ ಕೇಂದ್ರ ಕಚೇರಿಯಲ್ಲಿ ಆಯುಧ ಪೂಜೆಯನ್ನು ನೆರವೇರಿಸಿದರು.

    ಸ್ವಯಂ ಸೇವಕರು ಡ್ರಿಲ್ ಮೂಲಕ ಪಥಸಂಚಲನ ನಡೆಸಿದ ನಂತರ ಮೋಹನ್ ಭಾಗವತ್ ಅವರು ಆಯುಧ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಪೂಜೆಯ ಬಳಿಕ ರೇಶಿಂಬಾಗ್ ಮೈದಾನದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮೋಹನ್ ಭಾಗವತ್ ಭಾಷಣ ಮಾಡಿದರು.

    ಗುಂಪು ಘರ್ಷಣೆ(ಲಿಂಚಿಂಗ್) ಭಾರತದಲ್ಲ. ಇದು ಕೇವಲ ಒಂದು ನಿರ್ಧಿಷ್ಟ ಸಮುದಾಯದ ಜನರನ್ನು ಮಾತ್ರ ಗುರಿಯಾಗಿಸುವುದಿಲ್ಲ. ಹಿಮ್ಮುಖವಾಗಿಯೂ ಪರಿಣಾಮ ಬೀರುತ್ತದೆ. ಅಭಿಪ್ರಾಯ ಬೇಧ ಏನೇ ಇರಲಿ ಅಥವಾ ಯಾವುದೇ ಪ್ರಚೋದನಕಾರಿ ಕ್ರಮಗಳು ನಡೆದಿರಲಿ. ಇದರ ಹೊರತಾಗಿಯೂ ಸಮಾಜ ಸಂವಿಧಾನದ ಮಿತಿಯಲ್ಲಿ ಉಳಿಯಬೇಕು ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.

    ಗುಂಪು ಘರ್ಷಣೆ ಎಂಬುದು ಭಾರತೀಯ ಮೂಲದ ಪದವಲ್ಲ. ಅದರ ಮೂಲವು ಪ್ರತ್ಯೇಕ ಧಾರ್ಮಿಕ ಪಠ್ಯದಲ್ಲಿನ ಕಥೆಯಿಂದ ಬಂದಿದೆ. ನಾವು ಭಾರತೀಯರು ಸಹೋದರತ್ವವನ್ನು ನಂಬುತ್ತೇವೆ. ಭಾರತೀಯರ ಮೇಲೆ ಅಂತಹ ನಿಯಮಗಳನ್ನು ಹೇರಬೇಡಿ. ಲಿಂಚಿಂಗ್ ಸ್ವತಃ ಪಾಶ್ಚಿಮಾತ್ಯ ಮೂಲದ್ದಾಗಿದೆ. ದೇಶವನ್ನು ಅವಮಾನಿಸಲು ಭಾರತೀಯರ ವಿಷಯದಲ್ಲಿ ಇದನ್ನು ಬಳಸಬಾರದು ಎಂದು ಮನವಿ ಮಾಡಿಕೊಂಡರು.

    ಜಮ್ಮು ಕಾಶ್ಮೀರದ 370ನೇ ವಿಧಿ ರದ್ದುಗೊಳಿಸಿರುವ ಸರ್ಕಾರದ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಶ್ಲಾಘಿಸಿದರು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಭಾರತ ಸದೃಢವಾಗಿರುವುದನ್ನು ಬಯಸುವುದಿಲ್ಲ. 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಸರ್ಕಾರವು ನಮ್ಮ ನಿರೀಕ್ಷೆಗಳನ್ನು ಈಡೇರಿಸುವ ಧೈರ್ಯವನ್ನು ಹೊಂದಿದೆ ಎಂದು ತೋರಿಸಿದೆ. ದೇಶ ಹಿತದೃಷ್ಟಿಯಿಂದ ಜನರ ಭಾವನೆ ಹಾಗೂ ಆಶಯಗಳನ್ನು ಗೌರವಿಸುತ್ತದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ವಿಶ್ವಾಸ ವ್ಯಕ್ತಪಡಿಸಿದರು.

    ಪ್ರತಿಯೊಬ್ಬ ವ್ಯಕ್ತಿಯೂ ಕಾನೂನಿನಡಿಯಲ್ಲಿ ಬದುಕಬೇಕು, ಸಾಮರಸ್ಯ ಮೂಡಿಸಬೇಕು. ಆ ಸಂಸ್ಕಾರದೊಂದಿಗೆ ಸ್ವಯಂ ಸೇವಕರನ್ನು ಬೆಳೆಸಲಾಗುತ್ತದೆ ಎಂದು ತಿಳಿಸಿದರು.

    ಕಳೆದ ಕೆಲವು ವರ್ಷಗಳಿಂದ ಭಾರತದ ಚಿಂತನೆ ಪ್ರಕ್ರಿಯೆಯ ದಿಕ್ಕಿನಲ್ಲಿ ಪರಿವರ್ತನೆ ಕಂಡುಬಂದಿದೆ. ಜಗತ್ತಿನಲ್ಲಿ ಹಾಗೂ ದೇಶದಲ್ಲಿನ ಹಲವರು ಇದನ್ನು ಬಯಸುವುದಿಲ್ಲ. ಅಭಿವೃದ್ಧಿ ಹೊಂದಿದ ಭಾರತ ಪಟ್ಟಭದ್ರ ಹಿತಾಸಕ್ತಿಗಳ ಮನಸ್ಸಿನಲ್ಲಿ ಭಯವನ್ನುಂಟು ಮಾಡುತ್ತದೆ. ಅಂತಹ ಶಕ್ತಿಗಳು ಭಾರತ ಬಲಶಾಲಿಯಾಗುವುದನ್ನು ಬಯಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಸರ್ಕಾರ ಮತ್ತು ಆಡಳಿತದಲ್ಲಿ ವ್ಯಕ್ತಿಗಳು ಹೊರಡಿಸಿದ ಹೇಳಿಕೆಗಳನ್ನು ಸಹ ಪಟ್ಟಭದ್ರ ಹಿತಾಸಕ್ತಿಗಳಿಂದ ಕೆಟ್ಟದಕ್ಕೆ ಅನುಕೂಲವಾಗುವಂತೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇಂತಹವುಗಳನ್ನು ನಾವು ಗುರುತಿಸುವಲ್ಲಿ ನಾವು ಜಾಗರೂಕರಾಗಿರಬೇಕು ಮತ್ತು ಅವುಗಳನ್ನು ಬೌದ್ಧಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ಎದುರಿಸಬೇಕು ಎಂದು ಎಚ್ಚರಿಸಿದ್ದಾರೆ.

    2019ರ ಲೋಕಸಭಾ ಚುನಾವಣೆ ಕುರಿತು ಮಾತನಾಡಿದ ಅವರು, ಇಷ್ಟು ದೊಡ್ಡ ದೇಶದಲ್ಲಿ ಮತದಾನ ಸುಗಮವಾಗಿ ನಡೆಯುತ್ತದೆಯೇ ಎಂದು ತಿಳಿಯಲು ಅಂತರಾಷ್ಟ್ರೀಯ ಸಮುದಾಯ ಆಸಕ್ತಿ ಹೊಂದಿದೆ. ಭಾರತದ ಪ್ರಜಾಪ್ರಭುತ್ವ ಯಾವುದೇ ದೇಶದಿಂದ ಆಮದು ಮಾಡಿಕೊಂಡಿದ್ದಲ್ಲ, ಶತಮಾನಗಳಿಂದಲೂ ಇಲ್ಲಿ ಪ್ರಚಲಿತದಲ್ಲಿದ್ದದ್ದು ಎಂದು ಭಾಗವತ್ ತಿಳಿಸಿದರು.

    ಭಾರತದ ಗಡಿಗಳು ಹಿಂದೆಂದಿಗಿಂತಲೂ ಸುರಕ್ಷಿತವಾಗಿವೆ. ಆದರೆ ಕರಾವಳಿ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ. ಭೂ ಗಡಿಗಳಲ್ಲಿ ಸೈನಿಕರು ಹಾಗೂ ಚೆಕ್ ಪೋಸ್ಟ್ ಗಳ ಸಂಖ್ಯೆ ಮತ್ತು ಕಡಲ ಗಡಿಯುದ್ದಕ್ಕೂ ವಿಶೇಷ ದ್ವೀಪಗಳಲ್ಲಿ ಕಣ್ಗಾವಲು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

    ಆರ್ಥಿಕ ಕ್ಷೇತ್ರದ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ವಿಶ್ವ ಆರ್ಥಿಕತೆಯ ನಿಧಾನಗತಿಯು ಇತರ ಎಲ್ಲ ದೇಶಗಳ ಮೇಲೆ ಪರಿಣಾಮ ಬೀರಿದೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮ ಸಮಾಜ ಉದ್ಯಮಶೀಲವಾಗಿದ್ದು, ಈ ಸವಾಲನ್ನು ನಿವಾರಿಸುವ ಸಾಮಥ್ರ್ಯ ಹೊಂದಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಮೋಹನ್ ಭಾಗವತ್ ಅವರ ಭಾಷಣವನ್ನು ಆರ್ ಎಸ್‍ಎಸ್ ತನ್ನದೇ ಆದ ಇಂಟರ್ನೆಟ್ ಆಧಾರಿತ ರೇಡಿಯೋ ಚಾನೆಲ್ ಪ್ರಸಾರ ಮಾಡಿದೆ. ಅಲ್ಲದೆ ಸರಸಂಘಚಾಲಕರಿಗೆ ದಸರಾ ಹಬ್ಬ ಮಹತ್ವದ್ದಾಗಿದ್ದು, 1925ರಲ್ಲಿ ಇದೇ ದಿನದಂದು ಆರ್‍ಎಸ್‍ಎಸ್ ಸ್ಥಾಪನೆಯಾಗಿದೆ. ಹೀಗಾಗಿ ಆರ್ ಎಸ್‍ಎಸ್ ಕಾರ್ಯಕರ್ತರಿಗೆ ಇದು ವಿಶೇಷ ದಿನವಾಗಿದೆ.

    ಈ ವರ್ಷದ ಆರ್ ಎಸ್‍ಎಸ್ ದಸರಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಐಟಿ ಕಂಪನಿ ಎಚ್‍ಸಿಎಲ್ ಟೆಕ್ನಾಲಜೀಸ್‍ನ ಸಂಸ್ಥಾಪಕ ಶಿವ ನಾಡರ್ ಭಾಗವಹಿಸಿದ್ದರು. ಕೇಂದ್ರ ಸಚಿವ ನಿತಿನ್ ಗಡ್ಕರಿ, ಜನರಲ್ ವಿ.ಕೆ. ಸಿಂಗ್(ನಿವೃತ್ತ) ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಇತರರು ಪಾಲ್ಗೊಂಡಿದ್ದರು.

  • ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ

    ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆಯ ಸಂಭ್ರಮ

    ಮೈಸೂರು: ಜಿಲ್ಲೆಯ ಅಂಬಾವಿಲಾಸ ಅರಮನೆಯಲ್ಲಿ ಇಂದು ಆಯುಧ ಪೂಜೆ ಸಂಭ್ರಮದಿಂದ ತುಂಬಿ ತುಳುಕುತ್ತಿದೆ.

    ಜಯ ಮಾರ್ತಾಂಡ ದ್ವಾರದ ಬಳಿ ಇರುವ ಕೋಡಿಸೋಮೇಶ್ವರ ದೇವಸ್ಥಾನದಲ್ಲಿ ಆಯುಧಗಳಿಗೆ ಪೂಜೆ ಮಾಡಲಾಗಿದೆ. ಸಿಬ್ಬಂದಿ ಅರಮನೆಯಿಂದ ದೇವಸ್ಥಾನದವರೆಗೆ ಪಟ್ಟದ ಆನೆ, ಕುದುರೆ ಒಂಟೆಗಳ ಜೊತೆ ಕೊಂಡೊಯ್ಯಲಾಗಿತ್ತು. ಪೂಜೆ ಬಳಿಕ ಅರಮನೆಯ ಕೊಠಡಿಯಲ್ಲಿ ಚಂಡಿಕಾ ಹೋಮ ನೆರವೇರಿತು.

    ಅರಮನೆಯ ವಾಹನಗಳು ಆಯುಧ ಪೂಜೆಗೆ ಸಿದ್ಧವಾಗಿದ್ದು, ಅರಮನೆ ಸಿಬ್ಬಂದಿ ವಾಹನಗಳನ್ನ ಬಾಳೆ ಹೂವಿನಿಂದ ರಾಜಮನೆತನದ ಎಲ್ಲ ಕಾರುಗಳನ್ನು ಸಿಂಗರಿಸಿದ್ದಾರೆ. ನವರಾತ್ರಿ ಉತ್ಸವಕ್ಕೆ ಇಂದು ತೆರೆಯಾಗುತ್ತಿದ್ದು, ರಾಜವಂಶಸ್ಥರ ಖಾಸಗಿ ದರ್ಬಾರ್ ಸಂಜೆ ಸಮಾಪ್ತಿಯಾಗಲಿದೆ. ಮೈಸೂರು ಅರಮನೆಯಲ್ಲಿಂದು ಸಾಂಪ್ರದಾಯಿಕ ಆಯುಧ ಪೂಜೆ ಆಚರಣೆ ಜರುಗುತ್ತಿದ್ದು, ಇಂದು ಮುಂಜಾನೆ ಚಂಡಿಕಾ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಆರಂಭವಾಗಿದೆ. ಬೆಳಗ್ಗೆ 7 ಗಂಟೆಗೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮಿಸಿವೆ. ನಂತರ ಆಯುಧಗಳನ್ನು ಅರಮನೆಯ ಜಯ ಮಾರ್ತಾಂಡ ದ್ವಾರದ ಮಾರ್ಗವಾಗಿ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕಳುಹಿಸಿ ಪೂಜೆ ಮಾಡಲಾಗಿದೆ. ಇದರೊಂದಿಗೆ ಪಟ್ಟದ ಆನೆ, ಕುದುರೆ, ಹಸು ಕೂಡ ಹೆಜ್ಜೆ ಹಾಕಿದ್ದವು.

    ಬೆಳಗ್ಗೆ 8.15 ರಿಂದ 8.30ಕ್ಕೆ ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಲ್ಯಾಣ ಮಂಟಪಕ್ಕೆ ಆಯುಧಗಳನ್ನು ತರಲಾಗಿದ್ದು, ಬೆ. 9 ಕ್ಕೆ ಚಂಡಿಕಾ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಪೂರ್ಣಾಹುತಿಯಾಗಲಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಬೆ.10 ರಿಂದ 10.25ದ ವರೆಗೆ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ಕೈಗೊಂಡಿದ್ದು, ಕತ್ತಿ, ಖಡ್ಗ, ಗುರಾಣಿ, ಯುದ್ಧೋಪಕರಣ, ವಾಹನ ಸೇರಿದಂತೆ ಅರಮನೆಯ ಆಯುಧಗಳಿಗೆ ಪೂಜೆ ಮಾಡಲಿದ್ದಾರೆ.

    ಸಂಜೆ ಅಂಬಾವಿಲಾಸ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ವಿಸರ್ಜನೆ ಮಾಡಲಿದ್ದು, ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv