Tag: Ayodhya Judgment

  • ಅಯೋಧ್ಯೆ, ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸಿದ ಪಾಕಿಗೆ ಚಳಿ ಬಿಡಿಸಿದ ಭಾರತದ ಅಧಿಕಾರಿ

    ಅಯೋಧ್ಯೆ, ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸಿದ ಪಾಕಿಗೆ ಚಳಿ ಬಿಡಿಸಿದ ಭಾರತದ ಅಧಿಕಾರಿ

    – ವಿಶ್ವಸಂಸ್ಥೆಯಲ್ಲಿ ಮುಜುಗರಕ್ಕೀಡಾದ ಪಾಕ್

    ಪ್ಯಾರಿಸ್: ಕಾಶ್ಮೀರ ಮತ್ತು ಅಯೋಧ್ಯೆ ವಿಚಾರದಲ್ಲಿ ಮೂಗು ತೂರಿಸಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತದ ಅಧಿಕಾರಿ ಚಳಿ ಬಿಡಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ.

    ಯುನೆಸ್ಕೋ(UNESCO)ದ 40ನೇ ಸಾಮಾನ್ಯ ಸಭೆ(ಜನರಲ್ ಕಾನ್ಫರೆನ್ಸ್)ಯಲ್ಲಿ ಕಾಶ್ಮೀರ ಮತ್ತು ಅಯೋಧ್ಯೆ ವಿಷಯಗಳನ್ನು ಪಾಕಿಸ್ತಾನ ಪ್ರಸ್ತಾಪ ಮಾಡಿತು. ಈ ಎರಡು ಭಾರತದ ಆಂತರಿಕ ವಿಚಾರಗಳಾಗಿವೆ. ಹಾಗಾಗಿ ಪಾಕಿಸ್ತಾನ ಇದರಲ್ಲಿ ಹಸ್ತಕ್ಷೇಪ ಮಾಡದಿರುವುದೇ ಉತ್ತಮ ಹಾಗೂ ಈ ವಿಷಯಗಳಲ್ಲಿ ನಮ್ಮ ಮೇಲೆ ಯಾವುದೇ ಒತ್ತಡ ಹಾಕುವಂತಿಲ್ಲ ಎಂದು ಭಾರತದ ಪ್ರತಿನಿಧಿ ಖಡಕ್ ಆಗಿ ಯುನೆಸ್ಕೋದಲ್ಲಿ ಹೇಳಿದ್ದಾರೆ.

    ನಾವು ಪಾಕಿಸ್ತಾನದ ದುಷ್ಟಬುದ್ಧಿ ಮತ್ತು ಸುಳ್ಳು ಪ್ರಚಾರವನ್ನು ಬಲವಾಗಿ ಖಂಡಿಸುತ್ತೇವೆ. ಪಾಕಿಸ್ತಾನ ತನ್ನ ಸುಳ್ಳುಗಳಿಂದ ಭಾರತದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಭಾರತದ ಸವೋಚ್ಛ ನ್ಯಾಯಾಲಯ ನೀಡಿದ ಅಯೋಧ್ಯೆ ತೀರ್ಪನ್ನು ಪಾಕಿಸ್ತಾನ ಟೀಕಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿದೆ. ಅಯೋಧ್ಯೆ ವಿಷಯ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರವಾಗಿದ್ದು, ಪಾಕಿಸ್ತಾನಕ್ಕೆ ಈ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು.

    ಪಾಕಿಸ್ತಾನದ ಶಿಕ್ಷಣ ಮಂತ್ರಿ ಶಫಾಕತ್ ಮಹಮೂದ್ ಅಯೋಧ್ಯೆಯ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕುತ್ತಾ, ಯುನೆಸ್ಕೋದ ಧಾರ್ಮಿಕ ಸ್ವಾತಂತ್ರ್ಯದ ಮೌಲ್ಯಗಳಿಗೆ ಅನುಗುಣವಾಗಿ ತೀರ್ಪು ಬಂದಿಲ್ಲ ಎಂದು ಮೂಗು ತೂರಿಸುವ ಪ್ರಯತ್ನ ಮಾಡಿದ್ದರು.

    ಶಫಾಕತ್‍ಗೆ ತಿರುಗೇಟು ನೀಡಿದ ಭಾರತದ ಪ್ರತಿನಿಧಿ, ಜೀವನದ ಅಧಿಕಾರ (Right To life) ದೇಶದ ಮೂಲಭೂತ ಅಧಿಕಾರವಾಗಿದೆ. ವಿಶ್ವಮಟ್ಟದಲ್ಲಿ ಈ ಅಧಿಕಾರಕ್ಕೆ ಭಯೋತ್ಪಾದನೆ ದೊಡ್ಡ ವಿಘ್ನವಾಗಿದೆ. ಪಾಕಿಸ್ತಾನ ಭಯೋತ್ಪಾದನೆಯ ಉತ್ಪಾದಕ ಕೇಂದ್ರ ಮತ್ತು ರಪ್ತು ಮಾಡುವ ದೇಶವಾಗಿದೆ. ಪಾಕಿಸ್ತಾನದ ರಾಜಕಾರಣದಲ್ಲಿ ಭಯೋತ್ಪಾದನೆ ಬೇರೂರಿದೆ. ಪಾಕಿಸ್ತಾನದ ಮೂಲಕವೇ ಭಯೋತ್ಪಾದನೆ ಮುಖ್ಯವಾಹಿನಿಗೆ ಬರುತ್ತಿದೆ ಎಂಬುವುದು ವಿಶ್ವಮಟ್ಟದಲ್ಲಿ ಗೊತ್ತಾಗಿದೆ ಎಂದು ಚಳಿ ಬಿಡಿಸಿದರು.

    ಇದೇ ವೇಳೆ ಪಾಕಿಸ್ತಾನ ಕಾಶ್ಮೀರದ ವಿಚಾರವನ್ನು ಪ್ರಸ್ತಾಪ ಮಾಡಿತು. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಮೂರು ಭಾರತದ ಅವಿಭಾಜ್ಯ ಅಂಗಗಳಾಗಿವೆ. ಈ ಮೂರು ಭಾಗಗಳು ಯಾವಾಗಲೂ ಭಾರತದ ಅಂಗಗಳಾಗಿಯೇ ಇರಲಿವೆ. ಇದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸಹ ಸೇರಿದೆ. ಪಾಕಿಸ್ತಾನ ಕಾನೂನುಬಾಹಿರ ಮತ್ತು ಬಲವಂತವಾಗಿ ಕಾಶ್ಮೀರದ ಭಾಗವನ್ನು ಆಕ್ರಮಿಸಿಕೊಂಡಿದೆ ಎಂದು ಭಾರತದ ಪ್ರತಿನಿಧಿ ಆರೋಪಿಸಿದರು.

     

  • ಮುಸ್ಲಿಂ ಸಮುದಾಯ ಮೇಲೆ ಮತ್ತಷ್ಟು ಒತ್ತಡ ಹಾಕಲಿದೆ – ಪಾಕ್ ಪ್ರತಿಕ್ರಿಯೆ

    ಮುಸ್ಲಿಂ ಸಮುದಾಯ ಮೇಲೆ ಮತ್ತಷ್ಟು ಒತ್ತಡ ಹಾಕಲಿದೆ – ಪಾಕ್ ಪ್ರತಿಕ್ರಿಯೆ

    ಇಸ್ಲಾಮಾಬಾದ್: ಅಯೋಧ್ಯೆ ತೀರ್ಪಿಗೆ ಪಾಕಿಸ್ತಾನ ವಿದೇಶಾಂಗ ಮಂತ್ರಿ ಶಾ ಮಹಮೂದ್ ಖುರೇಷಿ ಪ್ರತಿಕ್ರಿಯೆ ನೀಡಿದ್ದಾರೆ.

    ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಒತ್ತಡದಲ್ಲಿರುವ ಮುಸ್ಲಿಂ ಸುಮುದಾಯ ಮೇಲೆ ಮತ್ತಷ್ಟು ಒತ್ತಡ ಹಾಕಲಿದೆ. ಪಾಕಿಸ್ತಾನ ವಿದೇಶ ಕಾರ್ಯಾಲಯದಿಂದ ತೀರ್ಪಿನ ಹೆಚ್ಚಿನ ವಿವರಣೆಯನ್ನು ಪಡೆದುಕೊಂಡು ಪ್ರತಿಕ್ರಿಯಿಸುತ್ತೇನೆ ಎಂದು ಖುರೇಶಿ ಹೇಳಿದ್ದಾರೆ.

    ಅಯೋಧ್ಯೆಯ ಜಾಗ ಹಿಂದೂಗಳಿಗೆ ಸೇರಿದ್ದು ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿ, ಸುಮಾರು 5 ಶತಮಾನಗಳ ವಿವಾದಕ್ಕೆ ಷರಾ ಬರೆದಿದೆ. ರಾಮಜನ್ಮಭೂಮಿ ರಾಮನಿಗಷ್ಟೇ. ಸರ್ಕಾರದ ಟ್ರಸ್ಟ್ ಗೆ ಸೇರಬೇಕು. ಈ ಟ್ರಸ್ಟ್ ದೇವಾಲಯ ನಿರ್ಮಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಎಸ್.ಎ. ಬೋಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ತೀರ್ಪು ನೀಡಿದೆ.

    ಅಖಿಲ ಭಾರತೀಯ ಮುಸ್ಲಿಂ ಮಹಾಸಂಘದ ಅಧ್ಯಕ್ಷರಾಗಿರುವ ಫರ್ಹತ್ ಖಾನ್ ತಮ್ಮ ರಕ್ತದಿಂದ ‘ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಹಿಂದೂಸ್ಥಾನಕ್ಕೆ ತೀರ್ಪನ್ನು ಅರ್ಥೈಸುವ ಕೆಲಸವನ್ನು ಮಾಡುತ್ತೇನೆ. ಇಲ್ಲಿ ಪ್ರೀತಿ, ಬಾಂಧವ್ಯ ಮತ್ತು ಸಹೋದರತೆಗೆ ಗೆಲುವು ಸಿಕ್ಕಿದೆ. ನ್ಯಾಯಾಧೀಶರು ಎಲ್ಲ ಆಂಶಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯೋಚಿತವಾದ ತೀರ್ಪನ್ನು ಪ್ರಕಟಿಸಿದ್ದಾರೆ. ಹಾಗಾಗಿ ಅಯೋಧ್ಯೆ ತೀರ್ಪನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಹಿಂದೂಸ್ಥಾನದ ಪ್ರತಿಯೊಂದು ಕಣದಲ್ಲಿ ರಾಮ್ ಮತ್ತು ರಹೀಂ ಇದ್ದಾರೆ ಎಂದು ಫರ್ಹರ್ ಹೇಳಿದ್ದಾರೆ.

    ನಾವು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಆದ್ರೆ ಈ ತೀರ್ಪು ನಮಗೆ ಸಮಾಧಾನ ತಂದಿಲ್ಲ. 5 ಮಂದಿ ನ್ಯಾಯಾಧೀಶರು ನೀಡಿದ ಸಂವಿಧಾನ ಪೀಠದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಚಿಂತಿಸಲಾಗುತ್ತದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.

  • ರಾಮಮಂದಿರ ಸುಗ್ರೀವಾಜ್ಞೆಯ ಪ್ರಧಾನಿಗಳ ಹೇಳಿಕೆಗೆ ನಮ್ಮ ಸ್ವಾಗತವಿದೆ: ಪೇಜಾವರ ಶ್ರೀ

    ರಾಮಮಂದಿರ ಸುಗ್ರೀವಾಜ್ಞೆಯ ಪ್ರಧಾನಿಗಳ ಹೇಳಿಕೆಗೆ ನಮ್ಮ ಸ್ವಾಗತವಿದೆ: ಪೇಜಾವರ ಶ್ರೀ

    ಬೆಂಗಳೂರು: ಅಯೋಧ್ಯೆ ರಾಮಮಂದಿರ ನಿರ್ಮಾಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗೆ ನಮ್ಮ ಸ್ವಾಗತವಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.

    ನಗರದಲ್ಲಿ ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಕಾನೂನು ಮೀರಿ ಯಾವುದನ್ನು ಮಾಡಬಾರದು. ಈ ಬಗ್ಗೆ ಮೋದಿ ಅವರ ಹೇಳಿಕೆಯ ಬಗ್ಗೆ ನಮ್ಮ ಸ್ವಾಗತ ಇದೆ. ಆದರೆ ಮಂದಿರದ ನಿರ್ಮಾಣದ ಬಗ್ಗೆ ಕಾನೂನು ತಜ್ಞರು ಸಲಹೆ ಪಡೆದು ಸುಗ್ರೀವಾಜ್ಞೆ ಹೊರಡಿಸಬಹುದು. ಈ ಕುರಿತು ನಮ್ಮ ಹಂತದಲ್ಲಿ ಮತ್ತೆ ಕಾನೂನು ತಜ್ಞರೊಂದಿಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಕಾನೂನನ್ನೂ ಮೀರಿ ಯಾವುದೂ ಮಾಡಬಾರದು ಎಂಬ ಕಾರಣಕ್ಕೆ ಪ್ರಧಾನಿಗಳು ಈ ರೀತಿ ಹೇಳಿರಬಹುದು ಎಂದರು.

    ಮೋದಿ ಅವರು ಸಂವಿಧಾನದ ಒಳಗೆ ನಿರ್ಧಾರ ಮಾಡುವುದು ಎಂದು ಹೇಳಿದ್ದಾರೆ. ಆದ್ದರಿಂದ ನಾನು ರಾಮಮಂದಿರ ಬಗ್ಗೆ ಕಾನೂನು ತಜ್ಞರು ಹಾಗೂ ಸಂಘಟನೆಗಳೊಂದಿಗೆ ಬಗ್ಗೆ ಚರ್ಚೆ ನಡೆಸುತ್ತೇನೆ. ಸುಗ್ರೀವಾಜ್ಞೆ ಹೊರಡಿಸುವುದು ಸಂವಿಧಾನ ವಿರೋಧವಲ್ಲ ಎಂಬ ಅಭಿಪ್ರಾಯ ಇದೆ. ಈ ತಿಂಗಳ ಕೊನೆಗೆ ಕುಂಭಮೇಳ ನಡೆಯಲಿದ್ದು, ಇಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ತಿಳಿಸುತ್ತೇವೆ. ಈ ಬಳಿಕವೇ ನನ್ನ ಖಚಿತ ಅಭಿಪ್ರಾಯವೂ ತಿಳಿಸುತ್ತೇನೆ ಎಂದರು.

    ಮೋದಿ ಹೇಳಿದ್ದೇನು?
    ಸುಪ್ರೀಂ ಕೋರ್ಟ್ ಅಯೋಧ್ಯೆ ಕುರಿತು ತೀರ್ಪು ನೀಡಿದ ಬಳಿಕ ಸರ್ಕಾರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ನ್ಯಾಯಾಲಯದಲ್ಲಿ ರಾಮಮಂದಿರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವಿಳಂಬವಾಗಲು ಕಾಂಗ್ರೆಸ್ ವಕೀಲರು ಕಾರಣ. ರಾಮಮಂದಿರ ಬಿಜೆಪಿ ಭಾವಾತ್ಮಕ ವಿಚಾರವಾಗಿದ್ದು ಅದನ್ನು ನಾವು ನಿರ್ಲಕ್ಷ್ಯ ವಹಿಸಿಲ್ಲ. ರಾಮಮಂದಿರವನ್ನು ಸಂವಿಧಾನದ ವ್ಯಾಪ್ತಿಯಲ್ಲಿ ಇತ್ಯರ್ಥ ಪಡಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿದೆ. ಹೀಗಾಗಿ ನಾವು ನ್ಯಾಯಾಂಗದಲ್ಲಿ ನಂಬಿಕೆ ಇಟ್ಟಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರವಷ್ಟೇ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಯನ್ನು ಹೊರಡಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv