Tag: Awareness

  • ಹೆಣ್ಣು ಮಕ್ಕಳಿಗಾಗಿ ಮಿಡಿಯಿತು ದರ್ಶನ್ ಮನ- ಮಾಡಿದ್ದಾರೆ ಮಹತ್ವದ ಕೆಲಸ!

    ಹೆಣ್ಣು ಮಕ್ಕಳಿಗಾಗಿ ಮಿಡಿಯಿತು ದರ್ಶನ್ ಮನ- ಮಾಡಿದ್ದಾರೆ ಮಹತ್ವದ ಕೆಲಸ!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಬಗ್ಗೆ ಕಾಳಜಿ ಮೂಡಿಸೋಕೆ ಮುಂದಾಗಿದ್ದು, ಇದೀಗ `ಹೆಣ್ಣು ಭ್ರೂಣ ಹತ್ಯೆ ಮಹಾಪಾಪ’ ಬಗ್ಗೆ ಜಾಗೃತಿ ಮೂಡಿಸೋಕೆ ತಯಾರಾಗಿದ್ದಾರೆ.

    ಹೆಣ್ಣು ಶಿಶು ಹತ್ಯೆಯನ್ನು ಖಂಡಿಸಿ ತಯಾರಾಗಿರುವ ಕಿರುಚಿತ್ರವೊಂದಕ್ಕೆ ದರ್ಶನ್ ಬೆನ್ನುಲುಬಾಗಿ ನಿಂತಿದ್ದಾರೆ. `ಮಾತೃಜನನ’ ಹೆಸರಲ್ಲಿ ನಿರ್ಮಾಣವಾಗಿರುವ ಕಿರುಚಿತ್ರವೊಂದನ್ನು ಬಿಡುಗಡೆ ಮಾಡಿಕೊಡುವುದರ ಮೂಲಕ ಹೊಸ ಪ್ರತಿಭೆಗಳಿಗೆ ಬೆಂಬಲ ಸೂಚಿಸಿದ್ದಾರೆ.

    ಸಾಮಾನ್ಯವಾಗಿ ದರ್ಶನ್ ಹೊಸಬರ ಸಿನಿಮಾಗಳಿಗೆ ಬೆಂಬಲ ಸೂಚಿಸುತ್ತಾರೆ. ಇದೀಗ ಮಾತೃಜನನ ತಂಡಕ್ಕೂ ಸಾಥ್ ಕೊಟ್ಟಿದ್ದಾರೆ. ಹೆಣ್ಣು ಶಿಶು ಹತ್ಯೆಯನ್ನು ಖಂಡಿಸಿ ಕಿರುಚಿತ್ರ ಮಾಡಿದ್ದೇವೆ ಅಂತ ಚಿತ್ರತಂಡ ಹೇಳಿದ ತಕ್ಷಣ ದರ್ಶನ್ ಏನು ಯೋಚಿಸದೇ ಮನೆಗೆ ಕರೆಸಿಕೊಂಡು ಚಿತ್ರದ ಟೀಸರ್ ರಿಲೀಸ್ ಮಾಡಿಕೊಟ್ಟಿದ್ದಾರೆ. ಅಲ್ಲದೇ ಈ ಕಿರುಚಿತ್ರ ಪ್ರದರ್ಶನಕ್ಕೆ ಕಲಾವಿದರ ಸಂಘದ ಭವನದಲ್ಲಿ ಅವಕಾಶ ಕೂಡ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಕುಮಾರಿ 21 ಎಫ್ ಟ್ರೇಲರ್ ರಿಲೀಸ್ ಮಾಡಿದ ಚಾಲೆಂಜಿಂಗ್ ಸ್ಟಾರ್!

    `ಮಾತೃಜನನ’ ಕಿರುಚಿತ್ರವನ್ನು ನಿಶಾಂತ್ ಮೇಗಳಮನೆ ಹಾಗೂ ಸುಮುಖ ಶರ್ಮಾ ನಿರ್ದೇಶನ ಮಾಡಿದ್ದಾರೆ. ಇಡೀ ವಿಶ್ವದಲ್ಲಿ ಅತೀ ಹೆಚ್ಚು ಹೆಣ್ಣು ಶಿಶು ಹತ್ಯೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಈ ಕಳಂಕವನ್ನು ತೊಡೆದು ಹೆಣ್ಣುಭ್ರೂಣ ಹತ್ಯೆಯ ತಡೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದು ತಯಾರಾಗಿದ್ದಾರೆ.

  • ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳನ್ನೇ ಕೊಂದ್ರು!

    ಮಕ್ಕಳ ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅಧಿಕಾರಿಗಳನ್ನೇ ಕೊಂದ್ರು!

    ಅಗರ್ತಲಾ: ಮಕ್ಕಳ ಕಳ್ಳರು ಎಂದು ತಿಳಿದು ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಒಬ್ಬರು ಸದಸ್ಯರು ಸೇರಿದಂತೆ ಇಬ್ಬರ ಮೇಲೆ ಹಲ್ಲೆ ನಡೆಸಿ ಕೊಂದ ಘಟನೆ ತ್ರಿಪುರದಲ್ಲಿ ನಡೆದಿದೆ.

    ಸುಕಾಂತ್ ಚಕ್ರವರ್ತಿ(33) ಕೊಲೆಯಾದ ವ್ಯಕ್ತಿ. ಸುಕಾಂತ್‍ರನ್ನು ಮಕ್ಕಳು ಕಳ್ಳ ಎಂದು ಭಾವಿಸಿದ ಗ್ರಾಮದ ಜನರು ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸ್ಮೃತಿ ರಂಜನ್ ದಾಸ್ ತಿಳಿಸಿದ್ದಾರೆ.

    ಸುಕಾಂತ್ ತ್ರಿಪುರಾದ ಮಾಹಿತಿ ಮತ್ತು ಸಂಸ್ಕೃತಿ ವಿಭಾಗದ ಸದಸ್ಯರಾಗಿದ್ದು, ಮಕ್ಕಳ ಕಳ್ಳರು ವದಂತಿ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುಲು ಅಭಿಯಾನವನ್ನು ಆಯೋಜಿಸಲಾಗಿತ್ತು. ಸ್ಥಳೀಯರಿಗೆ ಜಾಗೃತಿ ಮೂಡಿಸಲು ಹೋದ ಅಧಿಕಾರಿಯೇ ಕೊಲೆಯಾಗಿದ್ದಾರೆ.

    ಸುಕಾಂತ್ ಜನಸಂದಣಿ ಪ್ರದೇಶಗಳಲ್ಲಿ ಲೌಡ್ ಸ್ಪೀಕರ್ ಬಳಸಿ ಮಕ್ಕಳ ಕಳ್ಳರ ಜಾಗೃತಿಯ ಬಗ್ಗೆ ಅಭಿಯಾನ ನಡೆಸುತ್ತಿದ್ದರು. ಆಗ ಗ್ರಾಮಸ್ಥರು ಇವರೇ ಮಕ್ಕಳ ಕಳ್ಳ ಎಂದು ತಿಳಿದು ಅವರನ್ನು ಹೊಡೆದು ಕೊಂದಿದ್ದಾರೆ. ಅಲ್ಲದೇ ಸುಕಾಂತ್ ಜೊತೆಯಲ್ಲಿದ್ದ ಇಬ್ಬರ ಮೇಲೆಯೂ ಹಲ್ಲೆ ನಡೆಸಿ ಅಧಿಕಾರಿಗಳ ವಾಹನವನ್ನು ಜಖಂಗೊಳಿಸಿದ್ದಾರೆ. ಜನರಿಗೆ ಒಳ್ಳೆಯದಾಗಲು ಸರ್ಕಾರದವರೇ ನಮ್ಮನ್ನು ಕಳುಹಿಸಿದ್ದಾರೆ ಎಂದು ಮೂವರು ಹೇಳಿದರು ಅವರ ಮಾತನ್ನು ಕೇಳದೇ ಗ್ರಾಮಸ್ಥರು ದಾಳಿ ನಡೆಸಿದ್ದಾರೆ.

    ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ನಡೆದ ನಂತರ ತ್ರಿಪುರಾ ಮುಖ್ಯಮಂತ್ರಿ ಬಿಪ್‍ಲಾಬ್ ಕುಮಾರ್ ದೇಬ್ ಜನರಲ್ಲಿ ಯಾವುದೇ ವದಂತಿಗೆ ಕಿವಿ ಕೊಡದೇ ಶಾಂತಿ ಕಾಪಾಡಲು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಗುರುವಾರದಿಂದ 48 ಗಂಟೆ ಎಸ್‍ಎಂಎಸ್ ಹಾಗೂ ಇಂಟರ್ ನೆಟ್ ಸ್ಥಗಿತಗೊಳಿಸಿದ್ದಾರೆ.

  • ಶಾಲಾ ಮಕ್ಕಳಿಗೆ ಪಿಎಸ್‍ಐ ರಿಂದ ವಿಶೇಷ ಕ್ಲಾಸ್ – ಮಕ್ಕಳೊಂದಿಗೆ ಪ್ರಮಾಣ ಸ್ವೀಕರಿಸಿದ ಪೊಲೀಸರು

    ಶಾಲಾ ಮಕ್ಕಳಿಗೆ ಪಿಎಸ್‍ಐ ರಿಂದ ವಿಶೇಷ ಕ್ಲಾಸ್ – ಮಕ್ಕಳೊಂದಿಗೆ ಪ್ರಮಾಣ ಸ್ವೀಕರಿಸಿದ ಪೊಲೀಸರು

    ಬೆಂಗಳೂರು: ಅಂತರರಾಷ್ಟ್ರೀಯ ಮಾದಕದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಶಾಲಾ ಮಕ್ಕಳಿಗೆ, ನೀತಿ ಪಾಠ, ಕಾನೂನು ಸಲಹೆ, ಸಂಚಾರಿ ನಿಯಮಗಳ ಬಗ್ಗೆ ಶಾಲಾ ಮಕ್ಕಳಿಗೆ ವಿಶೇಷ ತರಗತಿ ತೆಗೆದುಕೊಂಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಥಾಮಸ್ ಮೆಮೋರಿಯಲ್ ಶಾಲೆಯಲ್ಲಿ, ಪಟ್ಟಣ ಪಿಎಸ್‍ಐ ಮಂಜುನಾಥ್ ಜಾಗೃತಿ ಮೂಡಿಸಿ ಕಾರ್ಯಕ್ರಮ ನಡೆಸಿದ್ದು, ಮಕ್ಕಳ ಭಾವನೆಗೆ ತಕ್ಕಂತೆ ಮನೆಯಲ್ಲಿ ತಂದೆ ತಾಯಿಯ ಪಾತ್ರ, ಶಾಲೆಯಲ್ಲಿ ಶಿಕ್ಷಕರ ಪಾತ್ರ, ಹೊರಗಡೆ ಸ್ನೇಹಿತ, ಸಾರ್ವಜನಿಕರ ಪಾತ್ರ ಬಹುಮುಖ್ಯವಾದದ್ದು. ಈ ಎಲ್ಲಾ ಪಾತ್ರಗಳಲ್ಲಿ ಒಂದರಲ್ಲಿ ನ್ಯೂನತೆ ಎದುರಾದರೆ ಆ ಮಕ್ಕಳ ಭವಿಷ್ಯಕ್ಕೆ ಕುತ್ತು ಎದುರಾಗಲಿದೆ. ಅಲ್ಲದೆ ಆ ಮಕ್ಕಳು ಕೆಟ್ಟ ಚಟಗಳ ಕಡೆ ಗಮನವರಿಸುವುದು ಸಾಮಾನ್ಯ. ಹೀಗಾಗಿ ಓದಿನ ಜೊತೆ ಸಂಬಂಧಗಳ ಪಾತ್ರ ಅಷ್ಟೇ ಮುಖ್ಯವಾದದ್ದು ಎಂದು ಪಿಎಸ್‍ಐ ಮಂಜುನಾಥ್ ಅವರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.

    ಸತತ ಒಂದು ಗಂಟೆಗಳ ಕಾಲ ಶಾಲಾ ಮಕ್ಕಳಿಗೆ ಅರಿವಿನ ಜಾಗೃತಿಯನ್ನ ಮೂಡಿಸಿದ ಪೊಲೀಸರು. ಬಳಿಕ ಜೊತೆಗೆ ಮಕ್ಕಳ ಜೊತೆ ತಾವು ಕೂಡ ಪ್ರಮಾಣ ಮಾಡುವ ಮೂಲಕ, ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಭಾಗಿಯಾಗಿ ಗಮನ ಸೆಳೆದರು.

  • ಶೌಚಾಲಯ ನಿರ್ಮಾಣಕ್ಕೆ ಬರಿಗಾಲಲ್ಲಿ ಜಾಗೃತಿ ಮೂಡಿಸ್ತಿದ್ದಾರೆ ಚಿಂತಾಕಿ ಪಿಡಿಒ ಶಿವಾನಂದ್

    ಶೌಚಾಲಯ ನಿರ್ಮಾಣಕ್ಕೆ ಬರಿಗಾಲಲ್ಲಿ ಜಾಗೃತಿ ಮೂಡಿಸ್ತಿದ್ದಾರೆ ಚಿಂತಾಕಿ ಪಿಡಿಒ ಶಿವಾನಂದ್

    ಬೀದರ್: ಸಾಮಾನ್ಯವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಅಂದ್ರೆ ಕಚ್ಚಾಟವೇ ಜಾಸ್ತಿ ಇರತ್ತೆ. ಆದ್ರೆ, ಇವತ್ತಿನ ಪಬ್ಲಿಕ್ ಹೀರೋ ಸ್ವಲ್ಪ ವಿಭಿನ್ನವಾಗಿದ್ದಾರೆ. ಬೀದರ್ ನ ಔರಾದ್ ತಾಲೂಕಿನ ಚಿಂತಾಕಿ ಗ್ರಾಮ ಪಂಚಾಯ್ತಿಯ ಪಿಡಿಒ ಮತ್ತು ಜನಪ್ರತಿನಿಧಿಗಳು ಬಯಲು ಮುಕ್ತ ಶೌಚಾಲಯ ನಿರ್ಮಿಸುವಲ್ಲಿ ಟೊಂಕಕಟ್ಟಿ ಯಶಸ್ವಿಯಾಗ್ತಿದ್ದಾರೆ.

    ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡಿದ್ರೆ ಏನುಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ಬೀದರ್ ನ ಓರಾದ್ ತಾಲೂಕಿನ ಚಿಂತಾಕಿ ಗ್ರಾಮ ಪಂಚಾಯ್ತಿ ಸಾಕ್ಷಿ. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಐದು ಗ್ರಾಮಗಳನ್ನ ಬಯಲು ಮುಕ್ತ ಶೌಚಾಲಯ ಮಾಡಬೇಕೆಂದು ಪಿಡಿಒ ಶಿವಾನಂದ ಚಂದ್ರಕಾಂತ್ ಔರಾದೆ ಹಾಗೂ ಅಧ್ಯಕ್ಷ ವಿರಾರೆಡ್ಡಿ ಮತ್ತವರ ತಂಡ ಪಣ ತೊಟ್ಟಿದೆ.

    ಐದು ಗ್ರಾಮಗಳಲ್ಲಿ ಒಟ್ಟು 20 ಸಾವಿರ ಜನವಿದ್ದು ಈಗಾಗಲೇ ಬೆಲ್ದಾಳ್, ಲಿಂಗದಗಳ್ಳಿ 2 ಗ್ರಾಮಗಳು ಬಯಲು ಮುಕ್ತ ಶೌಚಾಲಯವಾಗಿವೆ. ಇನ್ನುಳಿದ 3 ಗ್ರಾಮಗಳಲ್ಲಿ ಶೇಕಡಾ 90ರಷ್ಟು ಬಯಲು ಮುಕ್ತ ಶೌಚಾಲಯಗಳ ಕಾಮಗಾರಿ ಮುಕ್ತಾಯದ ಅಂಚಿಗೆ ಬಂದಿದೆ. ಈಗಾಗಲೇ ಮೂರು ತಿಂಗಳಿನಿಂದ ಕಾಲಿಗೆ ಪಾದರಕ್ಷೆ ಹಾಕದೆ ಪ್ರತಿ ಮನೆ ಮನೆಗೆ ತೆರಳಿ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸ್ತಿದ್ದಾರೆ.

    ಬಯಲು ಮುಕ್ತ ಶೌಚಾಲಯದ ಬಗ್ಗೆ ಪ್ರತಿಯೊಬ್ಬ ಮತದಾರನ ಮನೆಗೆ ಕೊರಿಯರ್ ಮೂಲಕ ಅಂಚೆ ಚೀಟಿಗಳನ್ನು ಕಳಿಸಿ ಜಾಗೃತಿ ಮೂಡಿಸ್ತಿದ್ದಾರೆ. ಮಾತ್ರವಲ್ಲ, ವಿದ್ಯಾರ್ಥಿಗಳ ಮೂಲಕ ಬಿತ್ತಿ ಪತ್ರಗಳನ್ನು ಮನೆ ಮನೆಗೆ ತೆರಳುತ್ತಿದ್ದಾರೆ.

    ಇದರ ಜೊತೆಗೆ “ಪಂಚಾಯ್ತಿತಿ ಪರಿಹಾರ” ಎಂಬ ಕಾರ್ಯಕ್ರಮದಲ್ಲಿ ಪ್ರತಿ ವಾರಕ್ಕೆ ಒಂದು ಸಲ ಗ್ರಾಮಕ್ಕೆ ಭೇಟಿ ನೀಡುವ ಈ ತಂಡ ಸಮಸ್ಯೆಗೆ ಪರಿಹಾರ ನೀಡ್ತಿದೆ.

    https://www.youtube.com/watch?v=SWJURNYgmLA

  • ಮತದಾನ ಜಾಗೃತಿ ವಿಡಿಯೋ ಬಿಡುಗಡೆಗೊಳಿಸಿದ ನಿವೇದಿತಾ ಗೌಡ!

    ಮತದಾನ ಜಾಗೃತಿ ವಿಡಿಯೋ ಬಿಡುಗಡೆಗೊಳಿಸಿದ ನಿವೇದಿತಾ ಗೌಡ!

    ಮೈಸೂರು: ಮತದಾನದ ಕುರಿತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಜಾಗೃತಿ ಮೂಡಿಸುತ್ತಿದ್ದಾರೆ.

    ಮತದಾನ ಮಾಡಿದವರೇ ನಿಜವಾದ ಬಿಗ್‍ಬಾಸ್ ಎಂದು ನಿವೇದಿತಾ ಗೌಡ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ವತಿಯಿಂದ ಆಯೋಜಿಸಿರುವ ಮತ ಜಾಗೃತಿ ಕಾರ್ಯಕ್ರಮಕ್ಕೆ ನಿವೇದಿತಾ ಗೌಡ ರಾಯಭಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮತದಾನ ಮಾಡುವಂತೆ ಮನವಿಯ ಜಾಗೃತಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

    ನಾವು ನೀವು ಚೆನ್ನಾಗಿರಬೇಕಾದರೆ ಕಡ್ಡಾಯವಾಗಿ ಒಂದು ನಿಯಮವನ್ನು ಪಾಲಿಸಬೇಕು. ನಮ್ಮದ್ದು ಪ್ರಜಾಪ್ರಭುತ್ವ ದೇಶ. ಈ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪಭ್ರುಗಳು. ಇದನ್ನು ಯಶಸ್ಸು ಗಳಿಸಲು ಪ್ರಜೆಗಳಾದ ನಮ್ಮೆಲರ ಕರ್ತವ್ಯ. ಅದಕ್ಕಾಗಿ ನಾವು ನಮ್ಮ ಮತವನ್ನು ಮತಗಟ್ಟೆಗೆ ಬಂದು ಚಲಾಯಿಸಬೇಕು ಎಂದು ನಿವೇದಿತಾ ಹೇಳಿದ್ದಾರೆ.

    ಚುನಾವಣೆ ದಿನ ಮತಗಟ್ಟೆಗೆ ಹೋಗಿ ನಾನು ನನ್ನ ಮತವನ್ನು ಹಾಕುತ್ತಿದ್ದಿನಿ. ನೀವು ಕೂಡ ಮತಗಟ್ಟೆಗೆ ಬಂದು ನಿಮ್ಮ ಮತವನ್ನು ಚಲಾಯಿಸಿ. ನಾವು ನಮ್ಮ ನರೆಹೊರೆಯವರ ಮತದಾನದ ಬಗ್ಗೆ ಜಾಗೃತಿ ಮೂಡಿಸೋಣ ಹಾಗೂ ಕಡ್ಡಾಯವಾಗಿ ಅವರು ಸಹ ಮತ ಹಾಕುವಂತೆ ಮಾಡೋಣ ಎಂದು ತಿಳಿಸಿದ್ದಾರೆ.

    ಜಾಗೃತ ಮತದಾರ ಪ್ರಜಾಪ್ರಭುತ್ವದ ನೇತಾರ, ಮತದಾನ ಮಾಡುವ ಮತದಾರರೇ ನಿಜವಾದ ಬಿಗ್ ಬಾಸ್ ಎಂದು ಹೇಳುವ ಮೂಲಕ ಬಿಗ್ ಬಾಸ್-5ರ ಸ್ಪರ್ಧಿ ನಿವೇದಿತಾ ಗೌಡ ಮತದಾನದ ಜಾಗೃತಿ ಮೂಡಿಸಿದ್ದಾರೆ.

  • 60 ಸಾವಿರ ಚದರಡಿಯಲ್ಲಿ ಮೂಡಿತು ಮಾನವ ಸರಪಳಿ ಭಾರತ ನಕಾಶೆ

    60 ಸಾವಿರ ಚದರಡಿಯಲ್ಲಿ ಮೂಡಿತು ಮಾನವ ಸರಪಳಿ ಭಾರತ ನಕಾಶೆ

    ಕೊಪ್ಪಳ: ವಿಧಾನಸಭೆ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗಲೇ, ರಾಜ್ಯದ ಪ್ರಮುಖ ಮೂರು ಪಕ್ಷಗಳು ಈಗಾಗಲೇ ಚುನಾವಣಾ ರಣಕಹಳೆ ಮೊಳಗಿಸಿವೆ. ಮೂರು ಪಕ್ಷದ ನಾಯಕರು ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

    ಇದನ್ನೆಲ್ಲ ನೋಡಿದ ಕೊಪ್ಪಳದ ಜಿಲ್ಲಾ ಪಂಚಾಯತ್ ಸಿಇಒ ಮತ್ತು ಡಿಸಿ ನಾವೇನು ಕಮ್ಮಿ ಎಂದು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಹೌದು. ಜಿಲ್ಲಾಧಿಕಾರಿಗಳೂ ಚುನಾವಣೆ ಪ್ರಚಾರ ಮಾಡುತ್ತಿದ್ದು, ಸಾರ್ವಜನಿಕರಲ್ಲಿ ಮತದಾನದ ಕುರಿತ ಜಾಗೃತಿ ಮೂಡಿಸಲು ವಿಶೇಷವಾದ ಕಾರ್ಯಕ್ಕೆ ಮುಂದಾಗಿದ್ದಾರೆ.

    ಜಾಗೃತಿ ಹೇಗೆ?: ವಿದ್ಯಾರ್ಥಿಗಳಿಂದ ಭಾರತರ ನಕಾಶೆ ಮಾದರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಅದರಲ್ಲಿ ಮನಸ್ಸಿಗೆ ಮುದ ನೀಡುವ ಕರ್ನಾಟಕ ನಕಾಶೆಯ ದೃಶ್ಯವನ್ನು ನಿರ್ಮಿಸಿದ್ದರು. ಕೊಪ್ಪಳದ ಗವಿಮಠದ ಆವರಣದಲ್ಲಿ ನಡೆದ ಮತದಾನದ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ಸುಮಾರು 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಭಾರತ ನಕಾಶೆ ಜೊತೆಗೆ ಕನ್ನಡದಲ್ಲಿ ನಮ್ಮ ಮತ, ನಮ್ಮ ಹಕ್ಕು ಎಂದು ಹಾಗೂ ಇಂಗ್ಲೀಷ್ ನಲ್ಲಿ ಮೈ ವೋಟ್, ಮೈ ರೈಟ್ಸ್ ಎಂಬ ಘೋಷ ವಾಕ್ಯ ಬರೆದು ಅದರಲ್ಲೂ ಮಾನವ ಸರಪಳಿ ಮಾಡಲಾಗಿತ್ತು.

    ಮುಂಬಾರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಚುನಾವಣಾ ಆಯೋಗ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶವನ್ನು ಈ ಕಾರ್ಯ ಹೊಂದಿದೆ. ಈ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರತಿ ಜಿಲ್ಲೆಯ ಜಿಪಂ ಸಿಇಒಗೆ ಚುನಾವಣಾ ಆಯೋಗ ಜವಾಬ್ದಾರಿ ವಹಿಸಿದೆ. ಈ ಹಿನ್ನೆಲೆಯಲ್ಲಿ ಮತದಾರರನ್ನು ಮತಗಟ್ಟೆಗೆ ಕರೆತರುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ವಿಭಿನ್ನ ಮಾದರಿಯಲ್ಲಿ ಮತದಾನ ಜಾಗೃತಿ ಆರಂಭವಾಗಲಿದ್ದು, ಕೊಪ್ಪಳ ಜಿಲ್ಲಾಡಳಿತ ತುಸು ಮುಂಚಿತವಾಗಿಯೇ ಈ ಕಾರ್ಯಕ್ಕೆ ಚಾಲನೆ ನೀಡಿದೆ.

    ಕಾರ್ಯಕ್ರಮದ ವೇಳೆ ಮಾತನಾಡಿದ ಕೊಪ್ಪಳ ಡಿಸಿ, ಮತದಾನದ ಹಕ್ಕನ್ನು ನಾವು ಚಲಾಯಿಸದಿದ್ದಲ್ಲಿ, ನಮಗೆ ನಾವು ವಂಚನೆ ಮಾಡಿಕೊಂಡಂತಾಗುತ್ತದೆ ಅಂದ್ರು. ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸವುಳ್ಳ ನಾವು, ಯಾವುದೇ ಪ್ರೇರಣೆ ಮತ್ತು ದಾಕ್ಷಿಣ್ಯಕ್ಕೆ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆ ಎಂಬ ಪ್ರತಿಜ್ಞಾವಿಧಿ ಭೋದಿಸಿದರು. ಈ ಬಾರಿ ಎಲ್ಲ ಪ್ರಜ್ಞಾವಂತರು ಮತಗಟ್ಟೆಗೆ ಬಂದು ಮತ ಚಲಾಯಿಸಲು. ಶೇ. 100 ರಷ್ಟು ಮತದಾನವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

  • ಬಳ್ಳಾರಿ ಪೊಲೀಸರ ವಿನೂತನ ಪ್ರಯತ್ನಕ್ಕೆ ಕೈ ಜೋಡಿಸಿದ ಸ್ಯಾಂಡಲ್ ವುಡ್ ನಟ-ನಟಿಯರು!

    ಬಳ್ಳಾರಿ ಪೊಲೀಸರ ವಿನೂತನ ಪ್ರಯತ್ನಕ್ಕೆ ಕೈ ಜೋಡಿಸಿದ ಸ್ಯಾಂಡಲ್ ವುಡ್ ನಟ-ನಟಿಯರು!

    ಬಳ್ಳಾರಿ: ಅಪಘಾತವಾದಾಗ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲು ಯಾರು ಮುಂದೆ ಬರಲ್ಲ, ಗಾಯಾಳುಗಳನ್ನು ಕರೆದೊಯ್ಯುವ ಅಂಬುಲೆನ್ಸ್ ಗಳಿಗೆ ದಾರಿನೂ ಸಹ ಕೊಡಲ್ಲ. ಹೀಗಾಗಿ ಅಂಬುಲೆನ್ಸ್ ಗಳಿಗೆ ದಾರಿ ಕೊಡಿ ರೋಗಿಗಳ ಜೀವ ಉಳಿಸಿ ಎಂದು ಬಳ್ಳಾರಿ ಪೊಲೀಸರು ಜಾಗೃತಿ ಆರಂಭಿಸಿದ್ದಾರೆ. ಪೊಲೀಸರ ಈ ವಿನೂತನ ಕಾರ್ಯಕ್ಕೆ ಸ್ಯಾಂಡಲವುಡ್ ನಟ-ನಟಿಯರು ಸಹ ಸಾಥ್ ನೀಡಿದ್ದಾರೆ.

    ಅಂಬುಲೆನ್ಸ್ ಗಳಿಗೆ ಅಡ್ಡವಾಗುವ ಜನರಲ್ಲಿ ಜಾಗೃತಿ ಮೂಡಿಸಲು ಬಳ್ಳಾರಿಯ ತೋರಣಗಲ್ ಠಾಣೆಯ ಪೊಲೀಸರು ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಜಾಗೃತಿ ಆರಂಭಿಸಿದ್ದಾರೆ. ಅಂಬುಲೆನ್ಸ್ ಗಳಿಗೆ ದಾರಿ ಬಿಡಿ ರೋಗಿಗಳ ಪ್ರಾಣ ಉಳಿಸಿ ಎಂದು ಜಾಗೃತಿ ಆರಂಭಿಸುವ ಮೂಲಕ ರೋಗಿಗಳಿಗೆ ನೆರವಾಗಲು ಮುಂದಾಗಿದ್ದಾರೆ.

    ತೋರಣಗಲ್ ಪೊಲೀಸ್ ಠಾಣೆಯ ಪಿಎಸ್‍ಐ ಮೊಹ್ಮದ್ ರಫೀಕ್ ಅವರ ಈ ವಿನೂತನ ಕಾರ್ಯಕ್ಕೆ ಬಳ್ಳಾರಿ ಪೊಲೀಸರು ಸಾಥ್ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆಟೋ, ಲಾರಿ, ಟಾಕ್ಸಿ ಚಾಲಕರು ಸೇರಿದಂತೆ ಸಾರ್ವಜನಿಕರಿಗೆ ಅಂಬುಲೆನ್ಸ್ ಗಳಿಗೆ ದಾರಿ ಬಿಡಿ ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ.

    ತೋರಣಗಲ್ ಪೊಲೀಸರ ಈ ವಿನೂತನ ಜಾಗೃತಿಗೆ ಸ್ಯಾಂಡಲ್ ವುಡ್ ತಾರೆಯರಾದ ಯಶ್, ಪ್ರೇಮ್, ದಿಗಂತ್, ಐಂದ್ರಿತಾ ರೈ ಹಾಗೂ ಮೇಘನಾ ಗಾಂವ್ಕರ್ ಸಹ ಕೈ ಜೋಡಿಸಿ ಜನರಿಗೆ ಅಂಬುಲೆನ್ಸ್ ಗಳಿಗೆ ದಾರಿ ಮಾಡಿಕೊಡುವಂತೆ ಸಂದೇಶ ಸಾರುತ್ತಿದ್ದಾರೆ.

    ಬಳ್ಳಾರಿ ಪೊಲೀಸರು ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಅಂಬುಲೆನ್ಸ್ ಗಳಿಗೆ ದಾರಿ ಬಿಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ, ಬಳ್ಳಾರಿ ಪೊಲೀಸರ ಈ ವಿನೂತನ ಕಾರ್ಯಕ್ಕೆ ಹಲವಾರು ವಿದೇಶಗಳ ರಾಯಭಾರಿಗಳು ಹಾಗೂ ಮಾಜಿ ವಿಶ್ವ ಸುಂದರಿಯರು ಸಹ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಪೊಲೀಸರ ಜಾಗೃತಿಗೆ ಕೈಜೋಡಿಸಿ ಅಂಬುಲೆನ್ಸ್ ಗಳ ಮಹತ್ವವನ್ನು ಸಾರುತ್ತಿದ್ದಾರೆ.

  • ಮಾಂಸದ ಮೂಲ ತೋರಿಸಲು ಮೃತ ಹಸುವನ್ನೇ ನೇತುಹಾಕಿದ್ರು!

    ಮಾಂಸದ ಮೂಲ ತೋರಿಸಲು ಮೃತ ಹಸುವನ್ನೇ ನೇತುಹಾಕಿದ್ರು!

    ಅಡಿಲೆಡ್: ಆಸ್ಟ್ರೇಲಿಯಾದ ಪಿಜ್ಜಾ ರೆಸ್ಟೋರೆಂಟ್ ಆವರಣದಲ್ಲಿ ಭಾರೀ ಗಾತ್ರದ ಮೃತ ಹಸುವಿನ ದೇಹವನ್ನು ನೇತು ಹಾಕಲಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

    ಇಟಿಕಾ ಹೆಸರಿನ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಹಸುವಿನ ಮಾಂಸ ಹಾಗೂ ಇತರೆ ಉತ್ಪನ್ನಗಳನ್ನು ಪೂರೈಸುತ್ತಿದೆ. ಈ ರೆಸ್ಟೋರೆಂಟ್ ಮಾಲೀಕರಾದ ಫೆಡೆರಿಕೊ ಮತ್ತು ಮೆಲಿಸಾ ಪಿಸಾನೆಲ್ಲಿ ನಾವು ಗ್ರಾಹಕರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಬಹಳ ಪ್ರಯತ್ನ ಪಟ್ಟಿದ್ದು, ಎಲ್ಲರಿಗೂ ತಾವು ಸೇವಿಸುವ ಮಾಂಸ ಎಲ್ಲಿಂದ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಈ ರೀತಿ ಮಾಡಿರುವುದಾಗಿ ತಮ್ಮನ್ನು ಸಮರ್ಥಿಸಿ ಕೊಂಡಿದ್ದಾರೆ.

     

    ರೆಸ್ಟೋರೆಂಟ್ ಮಾಲೀಕರ ಕ್ರಮವನ್ನು ಹಲವರು ಟೀಕಿಸಿ ಇದೊಂದು ಅಮಾನವೀಯ ಘಟನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹೈನುಗಾರಿಕೆಯ ಕೈಗಾರೀಕರಣದತ್ತ ಹೆಚ್ಚಿನ ಜನರನ್ನು ಸೆಳೆಯುವುದು, ಒಂದು ಉತ್ತಮ ಆರೋಗ್ಯಕರ ಉದ್ಯಮವನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ ಎಂದು ಮೆಲಿಸಾ ಪಿಸಾನೆಲ್ಲಿ ತಿಳಿಸಿದ್ದಾರೆ. ಆದರೆ ರೆಸ್ಟೋರೆಂಟ್‍ನ ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ಹಲವಾರು ತಮ್ಮ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

    ರೆಸ್ಟೋರೆಂಟ್‍ನ ಈ ಕ್ರಮವು ಅತ್ಯಂತ ಕ್ರೂರ ಹಾಗೂ ಅಜ್ಞಾನದಿಂದ ಕೂಡಿದೆ ಎಂದು ಒಬ್ಬರು ಆರೋಪಿಸಿದರೆ, ಮತ್ತೊಬ್ಬರು ನಾವು ತಿನ್ನುವ ಆಹಾರ ಎಲ್ಲಿಂದ ಬರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

    ಕೇವಲ ಕೆಲವು ರೆಸ್ಟೋರೆಂಟ್‍ಗಳು ಮಾತ್ರ ತಾವು ಎಲ್ಲಿಂದ ಆಹಾರವನ್ನು ಪಡೆಯುತ್ತಿದ್ದೇವೆ ಎಂಬುದನ್ನು ತಿಳಿಸುತ್ತವೆ. ಮಾಂಸವು ಸೂಪರ್ ಮಾರ್ಕೆಟ್‍ನಿಂದ ಬರುತ್ತದೆ ಎಂಬ ಭಾವನೆಯನ್ನು ತೊರೆದು, ಅದರ ಹಿಂದಿನ ಪ್ರಾಣಿಗಳ ನೋವು ಹಾಗೂ ಸಂಕಟಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ನಿಮ್ಮ ರೆಸ್ಟೋರೆಂಟ್ ಸಸ್ಯಹಾರಿಯಾಗಿದ್ದಾರೆ ಇದು ಉತ್ತಮ ಅರ್ಥವನ್ನು ನೀಡುತ್ತದೆ, ಆದರೆ ನಿಮ್ಮದೇ ಕಾರಣಗಳಿಗಾಗಿ ಹಸುವನ್ನು ಇಂದು ಅಲಂಕಾರಿಕ ವಸ್ತುವಾಗಿ ಒಳಸುತ್ತಿದ್ದೀರ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ನಮ್ಮ ಈ ಪ್ರಯತ್ನಕ್ಕೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇದರಲ್ಲಿ ಕೆಲವರು ನಮಗೆ ಮೆಚ್ಚುಗೆಯನ್ನು ಸೂಚಿಸಿದರೆ, ಮತ್ತೆ ಕೆಲವರು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ ಎಂದು ಪಿಸಾನೆಲ್ಲಿ ಹೇಳಿದ್ದಾರೆ.