Tag: Awareness Program

  • ಮಂಜಿನ ನಗರಿಯಲ್ಲಿ ಜಾದೂ ಮೂಲಕ ಕೊರೊನಾ ಜಾಗೃತಿ

    ಮಂಜಿನ ನಗರಿಯಲ್ಲಿ ಜಾದೂ ಮೂಲಕ ಕೊರೊನಾ ಜಾಗೃತಿ

    ಮಡಿಕೇರಿ: ಎಲ್ಲೆಡೆ ತೀವ್ರಗತಿಯಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಸೋಂಕನ್ನು ನಿಯಂತ್ರಿಸಲು ಸರ್ಕಾರಗಳು ಕೂಡ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅದಕ್ಕಾಗಿ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯಗಳು ಕೂಡ ನಡೆಯುತ್ತಿವೆ. ಅದಕ್ಕೆ ಪೂರಕವಾಗಿ ಮಡಿಕೇರಿಯಲ್ಲಿ ವಿಕ್ರಮ್ ಜಾದುಗಾರ್ ಅವರು ಜಾದೂ ಕಾರ್ಯಕ್ರಮ ಮಾಡುವ ಮೂಲಕ ಜನರಲ್ಲಿ ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಕೊರೊನಾ ವೈರಸ್ ಬಗ್ಗೆ ಆತಂಕದಿಂದ ಹೇಳುವ ಬದಲು ಮನರಂಜನೆಯ ಮೂಲಕ ಹೇಳಿದರೆ ವಿಷಯ ಹೆಚ್ಚು ಜನರನ್ನು ತಲಪುತ್ತದೆ. ಜನರನ್ನು ಹೆಚ್ಚು ಆಕರ್ಷಿತರನ್ನಾಗಿಸಿ ಜಾಗೃತಿ ಮೂಡಿಸಲು ಇದು ಸುಲಭದ ಮಾರ್ಗವಾಗಿದೆ. ಆದ್ದರಿಂದ ವಿಕ್ರಮ್ ಜಾದೂಗಾರ ಅವರು ಮಡಿಕೇರಿಯ ಸಾರ್ವಜನಿಕ ಸ್ಥಳಗಳಲ್ಲಿ ಜಾದೂ ಮಾಡುವ ಮೂಲಕ ಜನರಿಗೆ ಕೊರೊನಾ ಸೋಂಕಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

    ವೈರಸ್ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು, ಶುಚಿತ್ವದ ಕಡೆ ಒತ್ತು ನೀಡಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ವಿರಾಜಪೇಟೆ ತಾಲೂಕಿನ ಸಿದ್ದಾಪುರದ ಅನೇಕ ಹಾಡಿಗಳಿಗೆ ಹೋಗಿ ಕಾಡಿನ ನಿವಾಸಿಗಳಿಗೂ ಕೊರೊನಾ ವೈರಸ್ ಬಗ್ಗೆ ತಿಳಿಸಿ, ಅರಿವು ಮೂಡಿಸುತ್ತೇನೆ ಎಂದು ವಿಕ್ರಮ್ ಅವರು ತಿಳಿಸಿದ್ದಾರೆ.

  • ಕೊಡಗಿನ ಪೊಲೀಸ್ ಠಾಣೆಗೆ ಇನ್ಮುಂದೆ ತಿಂಗಳಿಗೊಮ್ಮೆ ಬರ್ತಾರೆ ವಿದ್ಯಾರ್ಥಿಗಳು

    ಕೊಡಗಿನ ಪೊಲೀಸ್ ಠಾಣೆಗೆ ಇನ್ಮುಂದೆ ತಿಂಗಳಿಗೊಮ್ಮೆ ಬರ್ತಾರೆ ವಿದ್ಯಾರ್ಥಿಗಳು

    ಮಡಿಕೇರಿ: ಪ್ರತಿ ತಿಂಗಳಿಗೊಮ್ಮೆ ಶಾಲಾ ಮಕ್ಕಳು ಪೊಲೀಸ್ ಠಾಣೆಗೆ ಬರುತ್ತಾರೆ ಅಂದರೆ ಯಾಕೆ ಬರುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ. ಆದರೆ ಇದಕ್ಕೆ ಉತ್ತರ ‘ತೆರೆದ ಮನೆ’ ಕಾರ್ಯಕ್ರಮ.

    ಹೌದು. ಪೊಲೀಸ್ ಇಲಾಖೆಯು ಜನಸ್ನೇಹಿ, ಸಮಾಜಮುಖಿಯಾಗಲಿ ಎಂದು ‘ತೆರೆದ ಮನೆ’ ಅನ್ನುವ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಕೊಡಗು ಜಿಲ್ಲೆಯಲ್ಲಿ ‘ತೆರೆದ ಮನೆ’ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಕಡ್ಡಾಯವಾಗಿ ಕೊಡಗಿನ ಪೊಲೀಸ್ ಠಾಣೆಯಲ್ಲಿ ಪ್ರತಿ ತಿಂಗಳು ಈ ಕಾರ್ಯಕ್ರಮ ನಡೆಯಲಿದ್ದು ವಿದ್ಯಾರ್ಥಿಗಳು ಠಾಣೆಗೆ ಬಂದು ಇಲ್ಲಿನ ಕೆಲಸ, ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.

    ಏನಿದು ತೆರೆದ ಮನೆ?
    ತೆರೆದ ಮನೆಗೆ ಶಾಲಾ ಮಕ್ಕಳು ಮುಕ್ತವಾಗಿ ಬರಬಹುದಾಗಿದೆ.  ಪೊಲೀಸ್ ಠಾಣೆಯಲ್ಲಿ ಏನೇನು ದೈನಂದಿನ ಕಾರ್ಯಗಳು ನಡೆಯುತ್ತೆ? ಪೊಲೀಸರು ಹಾಗೂ ಶಾಲಾ ಮಕ್ಕಳ ಮಧ್ಯೆ ಬಾಂಧವ್ಯ ವೃದ್ಧಿ, ಕಾನೂನು ತಿಳುವಳಿಕೆ, ಮಕ್ಕಳ ಸುರಕ್ಷತೆ, ರಸ್ತೆ ಸಂಚಾರ ನಿಯಮಾವಳಿ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಸೇರಿದಂತೆ ಮಕ್ಕಳಿಗೆ ಉಪಯುಕ್ತವಾದ ಕಾನೂನಿನ ಬಗ್ಗೆ ತೆರೆದ ಮನೆಯಲ್ಲಿ ಅರಿವು ಮೂಡಿಸಲಾಗುತ್ತಿದೆ.

    ಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದರೆ ಉತ್ತಮ ನಾಗರಿಕರನ್ನಾಗಿ ಮಾಡಬಹುದು ಅನ್ನೋದು ಪೊಲೀಸ್ ಇಲಾಖೆ ಚಿಂತನೆಯಾಗಿದೆ. ಈ ಕಾರ್ಯಕ್ರಮ ರಾಜ್ಯಾದ್ಯಂತ ಜಾರಿಯಲ್ಲಿದ್ದು, ತೆರೆದ ಮನೆಯಲ್ಲಿ ಕಾನೂನಿನ ಬಗ್ಗೆ ತಿಳಿದುಕೊಳ್ಳಲು  ಶಾಲಾ ಮಕ್ಕಳು ಸಹ ಉತ್ಸುಕರಾಗಿದ್ದಾರೆ. ಕಾನೂನು ಪಾಲನೆಯಲ್ಲಿ ನಮ್ಮ ಪಾತ್ರವೇನು ಎನ್ನುವುದನ್ನು ವಿದ್ಯಾರ್ಥಿಗಳ ಮೂಲಕ ಅವರ ಕುಟುಂಬಸ್ಥರಿಗೂ ಕಾನೂನಿನ ತಿಳುವಳಿಕೆ ವರ್ಗಾಯಿಸೋದು ಇದರ ಉದ್ದೇಶವಾಗಿದೆ.

    ಪೊಲೀಸರು ಸಮಾಜದ ಒಂದು ಭಾಗ. ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪೊಲೀಸರು ಸಮಾಜದೊಂದಿಗೆ ಹೇಗಿರಬೇಕು? ನಾಗರಿಕರು ಪೊಲೀಸರೊಂದಿಗೆ ಹೇಗಿರಬೇಕು? ಹೀಗೆ ಪರಸ್ಪರ ಬಾಂಧವ್ಯ ಬೆಳೆಸಲು, ಪೊಲೀಸ್ ಇಲಾಖೆ ಸಮಾಜಮುಖಿ ಹಾಗೂ ಜನ ಸ್ನೇಹಿಯಾಗುವುದಕ್ಕೆ ತೆರೆದ ಮನೆ ಕಾರ್ಯಕ್ರಮ ಸಹಕಾರಿಯಾಗಿದೆ. ಅಲ್ಲದೆ ಇದರಿಂದ ಮಕ್ಕಳಿಗೂ ಪೋಲಿಸರ ಭಯ ಮತ್ತು ಆತಂಕ ದೂರವಾಗುತ್ತದೆ ಎಂಬುವುದು ವಿದ್ಯಾರ್ಥಿಗಳ ಮಾತಾಗಿದೆ.

  • ಚುನಾವಣಾ ಸಾಕ್ಷರತೆ ಕ್ಲಬ್ ವತಿಯಿಂದ ಮತದಾನ ಮಹತ್ವದ ಬಗ್ಗೆ ಜಾಥಾ

    ಚುನಾವಣಾ ಸಾಕ್ಷರತೆ ಕ್ಲಬ್ ವತಿಯಿಂದ ಮತದಾನ ಮಹತ್ವದ ಬಗ್ಗೆ ಜಾಥಾ

    ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ 7ನೇ ಹೊಸಕೋಟೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಚುನಾವಣಾ ಸಾಕ್ಷರತೆ ಕ್ಲಬ್(ಇಎಲ್‍ಸಿ) ವತಿಯಿಂದ ಮತದಾನ ಮಹತ್ವದ ಬಗ್ಗೆ ಜಾಥಾವನ್ನು ಹಮ್ಮಿಕೊಳ್ಳಲಾಯಿತು.

    ಜೂನ್ 15 2019ರಲ್ಲಿ ಸ್ಥಾಪನೆ ಅದ ಚುನಾವಣಾ ಸಾಕ್ಷರತೆ ಕ್ಲಬ್‍ನಲ್ಲಿ ನೋಡಲ್ ಅಧಿಕಾರಿಯಾಗಿ ಚಂದ್ರಹಾಸ ಮಾಯಗೌಡ, ಸಮಾಜ ಶಿಕ್ಷಕಿ ಶೈಲಾ, ಸಹಾಯಕ ನೋಡಲ್ ಅಧಿಕಾರಿಯಾಗಿ ಬಸವರಾಜ್ ಹಾಗೂ ಸುಮಾರು 10 ಜನ ವಿದ್ಯಾರ್ಥಿ ಪ್ರತಿನಿಧಿಗಳನ್ನು ಈ ಕ್ಲಬ್ ಒಳಗೊಂಡಿದೆ. ಇದರ ಉದ್ದೇಶ ಶಾಲೆಯ ಆಸು-ಪಾಸಿನಲ್ಲಿರುವ ಗ್ರಾಮದ ಜನರಿಗೆ ಜಾಥಾದ ಮೂಲಕ ಮತದಾನದ ಅರಿವು ಹಾಗೂ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

    ಇಂದು ಶಾಲಾ ಮಕ್ಕಳು 7ನೇ ಹೊಸಕೋಟೆಯ ಬೀದಿಗಳಲ್ಲಿ ಜಾಥಾ ನಡೆಸಿ ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಮತದಾನದ ಅರಿವು ಮೂಡಿಸಿದ್ದಾರೆ. ಶಾಲೆಯಲ್ಲಿಯೇ ಮಂತ್ರಿ ಮಂಡಲವನ್ನು ರಚಿಸಿ ಯಾವ ರೀತಿ ಅಭ್ಯರ್ಥಿಯು ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು? ಜನ ಸಾಮಾನ್ಯರು ಯಾವ ರೀತಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು? ಹೀಗೆ ಮತದಾನದ ಹಲವು ವಿಚಾರದ ಬಗ್ಗೆ ಶಾಲೆಯಲ್ಲಿಯೇ ಮಾದರಿ ಚುನಾವಣೆಯನ್ನು ಏರ್ಪಡಿಸಿ, ಶಾಲಾ ಮಂತ್ರಿಮಂಡಲವನ್ನು ರಚಿಸಿಕೊಂಡು ಶಾಲೆಯ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿದರು.

  • ಎದೆ ಸೀಳಿದರೆ ಎರಡಕ್ಷರ ಇಲ್ಲದವರು ಜಾಗೃತಿ ಸಭೆಗೆ ಬಂದಿಲ್ಲ: ತೇಜಸ್ವಿ ಸೂರ್ಯ

    ಎದೆ ಸೀಳಿದರೆ ಎರಡಕ್ಷರ ಇಲ್ಲದವರು ಜಾಗೃತಿ ಸಭೆಗೆ ಬಂದಿಲ್ಲ: ತೇಜಸ್ವಿ ಸೂರ್ಯ

    ಬೆಂಗಳೂರು: ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತವರು ಈ ಕಾರ್ಯಕ್ರಮಕ್ಕೆ ಸೇರಿಲ್ಲ ಎಂದು ಹೇಳುವ ಮೂಲಕ ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಟೌನ್ ಹಾಲ್ ಮುಂಭಾಗ ನಡೆದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಟೀಕೆ ಮಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಜಾಗೃತಿ ಸಭೆಗೆ ಸೇರಿದವರೆಲ್ಲರೂ ಐಟಿ ಕಂಪನಿಗಳ ಉದ್ಯೋಗಿಗಳು, ವೈದ್ಯರು, ವಕೀಲರು, ಆಟೋ ಚಾಲಕರು ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಹಾಗೂ ದೇಶದ ಆರ್ಥಿಕತೆಗೆ ತಮ್ಮದೇಯಾದ ಕೊಡುಗೆ ನೀಡುತ್ತಿರುವ ವಿದ್ಯಾವಂತರು. ನಮ್ಮ ಪ್ರತಿಭಟನೆಯಲ್ಲಿ ಎದೆ ಸೀಳಿದರೆ ಎರಡಕ್ಷರ ಇಲ್ಲದಂತಹ ಅನಕ್ಷರಸ್ಥರು, ಪಂಕ್ಚರ್ ಅಂಗಡಿ ಹಾಕಿಕೊಂಡಿರುವಂತಹವರು ಯಾರೂ ಸೇರಿಲ್ಲ ಎಂದು ಕಿಡಿ ಕಾರಿದ್ದಾರೆ.

    ಬೆಂಗಳೂರು ಪ್ರಪಂಚದಲ್ಲೇ ಪ್ರಸಿದ್ಧಿ ಪಡೆದಿರುವ ನಗರ, ಇಂತಹ ನಗರದಲ್ಲಿ ಹಿಂಸಾಚಾರ ನಡೆಸಿದ್ದಾರೆ. ಆದರೆ ಇಂದು ನಾವು ಶಾಂತಿಯುತವಾಗಿ ಹೋರಾಟ ಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಹಿಂಸಾತ್ಮಕವಾಗಿ ಪ್ರತಿಭಟನೆ ಮಾಡಿದವರಿಗೆ ಅವರು ಯಾಕೆ ಪ್ರತಿಭಟನೆ ಮಾಡುತ್ತಿದ್ದರು ಎಂಬುದೇ ತಿಳಿದಿರಲಿಲ್ಲ. ಕೆಲವರು ಜಿಎಸ್‍ಟಿ ವಿರೋಧಿಸಿ, ಇನ್ನೂ ಕೆಲವು ಈರುಳ್ಳಿ, ಬೆಳ್ಳುಳ್ಳಿ ಬೆಲೆ ಹೆಚ್ಚಾಗಿದೆ ಹೀಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದಿದ್ದರು ಎಂದು ತಿಳಿಸಿದರು.

    ಅವರಲ್ಲಿ ಬಹುತೇಕರಿಗೆ ಈ ಕಾನೂನಿನ ಉದ್ದೇಶವೇನು, ಇದರ ಉಪಯೋಗವೇನು, ಇದನ್ನು ಯಾಕೆ ಜಾರಿಗೆ ತಂದಿದ್ದಾರೆ, ಇದಾವುದನ್ನೂ ಪ್ರತಿಭಟನಾಕಾರರಿಗೆ ತಿಳಿದಿರಲಿಲ್ಲ. ನಿಮ್ಮನ್ನು ಪಾಕಿಸ್ತಾನಕ್ಕೆ ಓಡಿಸಿ ಬಿಡುತ್ತಾರಂತೆ ಎಂದು ಸುಳ್ಳು ಹೇಳಿ ಕರೆ ತಂದಿದ್ದಾರೆ. ಈ ಮೂಲಕ ಇಡೀ ದೇಶಕ್ಕೆ ಬೆಂಕಿ ಹಚ್ಚುವಂತಹ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಏನೂ ತಿಳಿಯದ ಮುಸ್ಲಿಂ ಯುವಕರಿಗೆ ತಪ್ಪು ಮಾಹಿತಿ ನೀಡಿ ಹಿಂಸಾಚಾರಕ್ಕೆ ತಳ್ಳಿದ್ದಾರೆ ಎಂದು ಕಿಡಿ ಕಾರಿದ್ದಾರೆ.

    ಮಂಗಳೂರಿನಲ್ಲಿ ಇಬ್ಬರ ಸಾವಿಗೆ ಮಾಜಿ ಸಚಿವ ಯುಟಿ ಖಾದರೇ ಕಾರಣ. ಯುವಕರ ಜೀವನದ ಜೊತೆ ಚೆಲ್ಲಾಟವಾಡಬೇಡಿ, ಹೊರದೇಶದಿಂದ ಭಾರತಕ್ಕೆ ವಲಸೆ ಬರುವ ಮುಸ್ಲಿಮರನ್ನು ರಾಷ್ಟ್ರದೊಳಗೆ ಬಿಟ್ಟುಕೊಳ್ಳುವುದಿಲ್ಲ ಎಂದರೆ ಇವರಿಗೇನು ಸಮಸ್ಯೆ? ಪಾಕಿಸ್ತಾನದ ಇಮ್ರಾನ್ ಖಾನ್, ಕಾಂಗ್ರೆಸ್ ನ ರಾಹುಲ್ ಗಾಂಧಿ ಒಂದೇ ಭಾಷಣ ಮಾಡುತ್ತಾರೆ. ಈ ಕಾನೂನು, ಭಾರತೀಯ ಹಿಂದೂಗಳು, ಹಿಂದೂ ಮುಸ್ಲಿಮರನ್ನು ಒಂದೇ ರೀತಿಯಾಗಿ ನೋಡುತ್ತದೆ. ನಮ್ಮ ದೇಶ ಭಾರತ, ಮನಸ್ಸೋ ಇಚ್ಚೆ ಇರುವ ಧರ್ಮಕ್ಷೇತ್ರ ಭಾರತವಲ್ಲ ಎಂದು ಕಿಡಿಕಾರಿದರು.

    ಅಲ್ಲದೆ ಕಾಂಗ್ರೆಸ್ಸಿನವರದ್ದು, ಉಸರವಳ್ಳಿ ಮಾತುಗಳು. ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದ ಮುಸ್ಲಿಮೇತರರಿಗೆ ಪೌರತ್ವ ನೀಡುವುದು ತಪ್ಪು ಎಂದಾದರೆ, ಈ ಹಿಂದೆ ಇವರೇ ಹುಡುಕಿ ವೋಟರ್ ಐಡಿ, ಆಧಾರ್ ಮಾಡಿಕೊಟ್ಟಿದ್ದಾರಲ್ಲ. ಇದು ಸೆಕ್ಯೂಲರಾ ಹಾಗಾದರೆ ಎಂದು ಪ್ರಶ್ನಿಸಿದರು.