Tag: Avtar Singh

  • ನೇಣಿಗೆ ಶರಣಾದ ಐಎಫ್‍ಎಸ್ ಅಧಿಕಾರಿ

    ನೇಣಿಗೆ ಶರಣಾದ ಐಎಫ್‍ಎಸ್ ಅಧಿಕಾರಿ

    ಬೆಂಗಳೂರು: ನಗರದ ಯಲಹಂಕದ ಅಪಾರ್ಟ್ ಮೆಂಟ್‍ನಲ್ಲಿ ಐಎಫ್‍ಎಸ್ ಹಿರಿಯ ಅಧಿಕಾರಿ ಡಾ.ಅವತಾರ್ ಸಿಂಗ್ ಅವರ ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಹರ್ಯಾಣದ ಯಮುನಾನಗರ ಮೂಲದ ಅವತಾರ್ ಸಿಂಗ್ (58) ಅವರು ಶುಗರ್ ಕಾಯಿಲೆಯಿಂದ ಬಳಲುತ್ತಿದ್ದರು. ಅವತಾರ್ ಸಿಂಗ್ ಅವರು ಪತ್ನಿ, ಇಬ್ಬರು ಮಕ್ಕಳ ಜೊತೆಗೆ ಯಲಹಂಕದ ಪ್ರೆಸ್ಟೀಜ್ ಮೌಂಟ್ ಕಾರ್ಲೋ ಅಪಾರ್ಟ್ ಮೆಂಟ್‍ನ 4ನೇ ಮಹಡಿಯ 3,401 ನಂಬರ್ ಫ್ಲಾಟ್‍ನಲ್ಲಿ ವಾಸವಾಗಿದ್ದರು.

    ಅರಣ್ಯ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವತಾರ್ ಸಿಂಗ್ ಅವರು 1 ತಿಂಗಳ ಹಿಂದಷ್ಟೇ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು. ಅವರ ನಿವೃತ್ತಿಗೆ ಇನ್ನು ಎರಡೇ ವರ್ಷಗಳು ಬಾಕಿಯಿದ್ದವು. ಆದರೆ ಇಂದು ಬೆಳಗ್ಗೆ ವಾಕಿಂಗ್ ಹೋಗಿ ವಾಪಸ್ ಮನೆಗೆ ಬಂದ ಅವತಾರ್ ಸಿಂಗ್ ಬಳಿಕ ತಮ್ಮ ರೂಂ ಸೇರಿಕೊಂಡಿದ್ದರು. ಈ ವೇಳೆ ನೇಣು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

    1990ರ ಬ್ಯಾಚ್‍ನ ಎಕ್ಸ್ ಕೆಡರ್ ಐಎಫ್‍ಎಸ್ ಅಧಿಕಾರಿಯಾಗಿದ್ದ ಅವತಾರ್ ಸಿಂಗ್ ಅವರು ಕೋಲಾರದಿಂದ ಕೆಲಸ ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆ, ಮಂಡಳಿಗಳಲ್ಲಿ ಕೆಲಸ ನಿರ್ವಹಿಸಿದ್ದರು. ಶನಿವಾರ ಅರಣ್ಯಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

    ಅವತಾರ್ ಸಿಂಗ್ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಟೀ ಮಾರುತ್ತಿದ್ದ ಅವತಾರ್ ಸಿಂಗ್ ಉತ್ತರ ದೆಹಲಿಯ ಮೇಯರ್

    ಟೀ ಮಾರುತ್ತಿದ್ದ ಅವತಾರ್ ಸಿಂಗ್ ಉತ್ತರ ದೆಹಲಿಯ ಮೇಯರ್

    ನವದೆಹಲಿ: ಜೀವನ ನಿರ್ವಹಣೆಗಾಗಿ ಟೀ ಮಾರುತ್ತಿದ್ದ ಬಿಜೆಪಿಯ ಕಾರ್ಪೋರೇಟರ್ ಅವತಾರ್ ಸಿಂಗ್ ಅವಿರೋಧವಾಗಿ ಉತ್ತರ ದೆಹಲಿಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

    ಉತ್ತರ ದೆಹಲಿ ಮೇಯರ್ ಸ್ಥಾನಕ್ಕೇರಿದ ಮೊದಲ ದಲಿತ ಸಿಖ್ ನಾಯಕ ಎಂಬ ಹೆಗ್ಗಳಿಕೆಗೆ ಅವತಾರ್ ಸಿಂಗ್ ಪಾತ್ರರಾಗಿದ್ದಾರೆ.

    ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಅವರು ಅವತಾರ್ ಸಿಂಗ್ ಹೆಸರನ್ನು ನಾಮನಿರ್ದೆಶನ ಮಾಡಿದ್ದರು. ಸೋಮವಾರ ನಡೆದ ಚುನಾವಣೆಯಲ್ಲಿ ಸಿಂಗ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ನಗರ ನಿಗಮದ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

    ಈ ವಿಚಾರವಾಗಿ ದೆಹಲಿ ಬಿಜೆಪಿಯ ಹಿರಿಯ ಸದಸ್ಯರೊಬ್ಬರು ಪ್ರತಿಕ್ರಿಯೆ ನೀಡಿ, ಅವತಾರ್ ಸಿಂಗ್ ಅವರು ಬಿಜೆಪಿಯ ಅತ್ಯಂತ ಶ್ರಮಜೀವಿ ಕಾರ್ಯಕರ್ತರು. ಚಹಾ ಮಾರುತ್ತಿದ್ದ ಸಿಂಗ್ ಅವರು ಕಠಿಣ ಪರಿಶ್ರಮದಿಂದ ಮೇಯರ್ ಸ್ಥಾನಕ್ಕೇರಿದ್ದಾರೆ ಎಂದು ಹೇಳಿ ಶ್ಲಾಘಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಅವತಾರ್ ಸಿಂಗ್ ಅವರಿಗೆ ಶುಭಕೋರಿದ್ದಾರೆ. ಅಷ್ಟೇ ಅಲ್ಲದೆ ದಕ್ಷಿಣ ದೆಹಲಿ ಹಾಗೂ ಪೂರ್ವ ದೆಹಲಿಗೆ ಕ್ರಮವಾಗಿ ಮೇರಯ್ ಆಗಿ ಆಯ್ಕೆಯಾದ ಸುನಿತಾ ಕಾಂಗ್ರಾ ಮತ್ತು ಅಂಜು ಕಮಲ್‍ನಾಥ್ ಅವರಿಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

    ಮೇಯರ್ ಆಯ್ಕೆಯಾದವರು ಒಂದು ವರ್ಷ ಅಧಿಕಾರ ನಡೆಸಲಿದ್ದಾರೆ. ದೆಹಲಿ ಕಾರ್ಪೋರೇಷನ್‍ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದಿದೆ. ಮೂರನೇ ವರ್ಷ ಪರಿಶಿಷ್ಟ ಜಾತಿಯ ಅಭ್ಯರ್ಥಿಯನ್ನು ಮೇಯರ್ ಮಾಡಬೇಕಿತ್ತು. ಹೀಗಾಗಿ ಬಿಜೆಪಿಯು ಅವತಾರ್ ಸಿಂಗ್ ಸೇರಿದಂತೆ ಮೂವರು ಪರಿಶಿಷ್ಟ ಜಾತಿಯ ನಾಯಕರಿಗೆ ಮೇಯರ್ ಅವಕಾಶ ಕಲ್ಪಿಸಿದೆ.