Tag: Avani Chaturvedi

  • ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿ ಭಾರತೀಯ ವಾಯು ಪಡೆಯ ಮಹಿಳಾ ಅಧಿಕಾರಿಯಿಂದ ಇತಿಹಾಸ ಸೃಷ್ಟಿ!

    ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿ ಭಾರತೀಯ ವಾಯು ಪಡೆಯ ಮಹಿಳಾ ಅಧಿಕಾರಿಯಿಂದ ಇತಿಹಾಸ ಸೃಷ್ಟಿ!

    ನವದೆಹಲಿ: ಭಾರತೀಯ ವಾಯು ಪಡೆಯ ಮಹಿಳಾ ಅಧಿಕಾರಿ ಅವನಿ ಚತುರ್ವೇದಿ ಸೋಮವಾರದಂದು ಇತಿಹಾಸ ಸೃಷ್ಟಿಸಿದ್ದಾರೆ. ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸುವ ಮೂಲಕ ಈವರೆಗೆ ಭಾರತದಲ್ಲಿ ಪುರುಷರಿಗೆ ಮಾತ್ರ ತೆರೆದುಕೊಂಡಿದ್ದ ಸಾಮ್ರಾಜ್ಯಕ್ಕೆ ಅವನಿ ಕಾಲಿಟ್ಟಿದ್ದಾರೆ.

    ಅವನಿ ಚತುರ್ವೇದಿ ಗುಜರಾತ್‍ನ ಜಮ್‍ನಗರ್‍ನಿಂದ ಎಮ್‍ಐಜಿ-21 ಬೈಸನ್ ವಿಮಾನವೇರಿ ಹಾರಾಟ ಶುರು ಮಾಡಿದ್ರು. ರಷ್ಯಾ ನಿರ್ಮಿತ ಸೂಪರ್ ಸೋನಿಕ್ ಯುದ್ಧವಿಮಾನದಲ್ಲಿ ಸುಮಾರು 30 ನಿಮಿಷಗಳ ಕಾಲ ಯಶ್ವಿಯಾಗಿ ಹಾರಾಟ ನಡೆಸಿದ್ರು. ಈ ಮೂಲಕ ಅವನಿ, ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡ್ರು.

    ಅವನಿ ಚತುರ್ವೇದಿ ಮೂಲತಃ ಮಧ್ಯಪ್ರದೇಶದ ರೇವಾ ಜಿಲ್ಲೆಯವರು. ಅವನಿ ಕುಟುಂಬದಲ್ಲಿ ಸೇನೆಗೆ ಸೇರ್ಪಡೆಯಾಗಿರುವುದು ಅವರೇ ಮೊದಲೇನಲ್ಲ. ಅವನಿ ಅವರ ಸಹೋದರ ಸೈನಿಕರಾಗಿದ್ದು, ಅವರಿಂದಲೇ ಸ್ಫೂರ್ತಿ ಪಡೆದಿದ್ದಾರೆ. ಅವನಿ ಹುಟ್ಟಿದ್ದು 1993ರ ಅಕ್ಟೋಬರ್ 24ರಂದು. 24 ವರ್ಷ ವಯಸ್ಸಿನ ಅವನಿಗೆ ಚೆಸ್, ಟೇಬಲ್ ಟೆನ್ನಿಸ್ ಹಾಗೂ ಚಿತ್ರಕಲೆಯಲ್ಲೂ ಪರಿಣಿತಿ ಇದೆ.

    ಅವನಿ ತಮ್ಮ ಶಾಲಾ ವಿದ್ಯಾಭ್ಯಾಸವನ್ನ ಡಿಯೋಲ್ಯಾಂಡ್‍ನಲ್ಲಿ ಮುಗಿಸಿದ್ರು. ನಂತರ 2014ರಲ್ಲಿ ಬನಸ್ತಲಿ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ಪದವಿ ಪೂರೈಸಿದ್ರು. ಭಾರತೀಯ ವಾಯು ಪಡೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಹೈದರಾಬಾದ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದರು.

     

     

    2016ರ ಜೂನ್ 18ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಕ್ವಾಡ್ರಾನ್‍ಗೆ ಸೇರ್ಪಡೆಯಾದ ಮೂವರು ಮಹಿಳೆಯರಲ್ಲಿ ಅವನಿ ಕೂಡ ಒಬ್ಬರಾಗಿದ್ದರು. ಇವರೊಂದಿಗೆ ಮೋಹನಾ ಸಿಂಗ್ ಹಾಗೂ ಭಾವನಾ ಕಾಂತ್ ಸೇರ್ಪಡೆಯಾಗಿದ್ದರು.

    43 ಪುರುಷರ ಜೊತೆಯಲ್ಲಿ ಈ ಮೂವರು ಮಹಿಳೆಯರು ತರಬೇತಿ ಪಡೆದಿದ್ದು, ಇವರಿಗೆ ಮದುವೆ ಹಾಗೂ ಗರ್ಭಧಾರಣೆಯನ್ನ ಮುಂದೂಡುವಂತೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ. ಮೋಹನಾ ಸಿಂಗ್ ಹಾಗೂ ಭಾವನಾ ಕಾಂತ್ ಕೂಡ ತರಬೇತಿ ಪೂರೈಸಿದ್ದು, ಶೀಘ್ರದಲ್ಲೇ ಅವರೂ ಕೂಡ ಯುದ್ಧವಿಮಾನ ಹಾರಾಟ ನಡೆಸಲಿದ್ದಾರೆ.

    ಅವನಿ ಚತುರ್ವೇದಿ ಎಮ್‍ಐಜಿ-21 ಬೈಸನ್ ಗೂ ಮೊದಲು ಏಕಾಂಗಿಯಾಗಿ ಪೈಲಾಟಸ್ ಪಿಸಿ-7 ಟರ್ಬೊಪ್ರಾಪ್ಸ್, ಕಿರಣ್ ಹಾಗೂ ಹಾವ್ಕ್ ವಿಮಾನಗಳ ಹಾರಾಟ ನಡೆಸಿದ್ದರು. ಚತುರ್ವೇದಿ ಅವರು ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿರುವುದು ಭಾರತವದ ಕಿರೀಟಕ್ಕೆ ಮತ್ತೊಂದು ಗರಿ ತಂದುಕೊಟ್ಟಂತಾಗಿದೆ. ಬ್ರಿಟನ್, ಅಮೆರಿಕ, ಇಸ್ರೇಲ್ ಹಾಗು ಪಾಕಿಸ್ತಾನದಲ್ಲಿ ಈಗಾಗಲೇ ಮಹಿಳೆಯರು ಯುದ್ಧವಿಮಾನ ಹಾರಾಟ ನಡೆಸುತ್ತಿದ್ದು, ಇದೀಗ ಆ ಪಟ್ಟಿಗೆ ಭಾರತವೂ ಸೇರ್ಪಡೆಯಾಗಿದೆ.