Tag: Avane Srimannarayana

  • ನಾರಾಯಣನ ಯಾತ್ರೆಯಲ್ಲಿ ರಕ್ಷಿತ್ ಶೆಟ್ಟಿಯ ‘ಪುಣ್ಯಕೋಟಿ’ ಜಪ

    ನಾರಾಯಣನ ಯಾತ್ರೆಯಲ್ಲಿ ರಕ್ಷಿತ್ ಶೆಟ್ಟಿಯ ‘ಪುಣ್ಯಕೋಟಿ’ ಜಪ

    ಉಡುಪಿ: ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ರಕ್ಷಿತ್ ಶೆಟ್ಟಿ ತಮ್ಮ ತವರೂರು ಉಡುಪಿಗೆ ಆಗಮಿಸಿ ಸಿನಿಮಾ ವೀಕ್ಷಿಸಿದ್ದಾರೆ.

    ಉಡುಪಿಯ ಕಲ್ಪನಾ ಸಿನಿಮಾ ಮಂದಿರಕ್ಕೆ ಆಗಮಿಸಿದ ರಕ್ಷಿತ್ ಶೆಟ್ಟಿ ಅಭಿಮಾನಿಗಳ ಜೊತೆ ಸಿನಿಮಾ ನೋಡಿದ್ದಾರೆ. ನಟಿ ಶಾನ್ವಿ ಶ್ರೀವಾಸ್ತವ್ ಕೂಡ ರಕ್ಷಿತ್‍ಗೆ ಸಾಥ್ ಕೊಟ್ಟಿದ್ದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ರಕ್ಷಿತ್, ಶ್ರೀಮನ್ನಾರಾಯಣ ಚಿತ್ರಕ್ಕೆ ರಾಜ್ಯಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲೂ ಒಳ್ಳೆಯ ರೆಸ್ಪಾನ್ಸ್ ಇದೆ ಎಂದು ಖುಷಿ ಪಟ್ಟಿದ್ದಾರೆ.

    ಹಿಂದಿ ಭಾಷೆಯಲ್ಲೂ ಸಿನಿಮಾ ಬಿಡುಗಡೆಯ ದಿನವನ್ನು ನಿಗದಿ ಮಾಡುತ್ತೇವೆ. ಮಲಯಾಳಿ, ತೆಲುಗು, ತಮಿಳು ಭಾಷೆಯಲ್ಲೂ ಸಿನಿಮಾ ಯಶಸ್ವಿ ಕಾಣುತ್ತಿದೆ. ನನ್ನ ಮುಂದಿನ ಚಿತ್ರ ‘ಪುಣ್ಯಕೋಟಿ’ ಕೂಡ ಫ್ಯಾಂಟಸಿ ರೀತಿಯಲ್ಲೇ ತೆರೆಗೆ ಬರಲಿದೆ. ಅದರ ತಯಾರಿ ಕೂಡ ನಡೆಯುತ್ತಿದೆ. ಇನ್ನೂ ‘ಪುಣ್ಯಕೋಟಿ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿಲ್ಲ. ಸದ್ಯ ನಮ್ಮ ಎಲ್ಲಾ ಗಮನ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಮೇಲಷ್ಟೇ ಇದೆ ಎಂದು ಹೇಳಿದರು.

  • ತುಳುವಿನಲ್ಲೇ ಮಾತಾಡಿ ರಂಜಿಸಿದ ‘ಅವನೇ ಶ್ರೀಮನ್ನಾರಾಯಣ’

    ತುಳುವಿನಲ್ಲೇ ಮಾತಾಡಿ ರಂಜಿಸಿದ ‘ಅವನೇ ಶ್ರೀಮನ್ನಾರಾಯಣ’

    ಮಂಗಳೂರು: ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರಚಾರಕ್ಕಾಗಿ ನಾಯಕ ನಟ ರಕ್ಷಿತ್ ಶೆಟ್ಟಿ ಇಂದು ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರಿನ ಸುಚಿತ್ರಾ ಥಿಯೇಟರಿಗೆ ಆಗಮಿಸಿದ ರಕ್ಷಿತ್ ಶೆಟ್ಟಿ, ಪ್ರೇಕ್ಷಕರನ್ನು ಭೇಟಿಯಾದರು.

    ತಮ್ಮ ಮಾತೃಭಾಷೆಯಾದ ತುಳುವಿನಲ್ಲೇ ಮಾತು ಆರಂಭಿಸಿದ ರಕ್ಷಿತ್ ಶೆಟ್ಟಿ, ಚಿತ್ರಕ್ಕೆ ಹೆಚ್ಚು ಪ್ರಚಾರ ನೀಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿದರು. ಇದೇ ವೇಳೆ ಚಿತ್ರ ಪ್ರೇಮಿಗಳು ರಕ್ಷಿತ್ ಜೊತೆ ಸೆಲ್ಫಿಗೆ ಮುಗಿಬಿದ್ದರು.

    ಬಳಿಕ ಮಾಧ್ಯಮದ ಜೊತೆ ಮಾತನಾಡಿದ ರಕ್ಷಿತ್ ಶೆಟ್ಟಿ, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ ಹೀಗೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು ಹೆಮ್ಮೆ ಎನಿಸಿದೆ. ಜನರು ಹೆಚ್ಚು ಥಿಯೇಟರಿಗೆ ಆಗಮಿಸಿ ಚಿತ್ರ ನೋಡಬೇಕು. ಪೈರಸಿ ಕಾಟ ನಮ್ಮ ಚಿತ್ರಕ್ಕೂ ತಗುಲಿದ್ದು, ಅದನ್ನು ನೀಗಿಸಲು ಪೈರಸಿ ಟೀಂ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಈ ವೇಳೆ ಚಿತ್ರದ ನಿರ್ದೇಶಕರು ಮತ್ತು ನಾಯಕಿ ನಟಿ ಶಾನ್ವಿ ಜೊತೆಗಿದ್ದರು.

  • 3ನೇ ದಿನದಲ್ಲಿ 30 ಕೋಟಿ – ತೆಲುಗಿನಲ್ಲಿ 36 ಸಾವಿರ ಮುಂಗಡ ಟಿಕೆಟ್ ಬುಕ್ಕಿಂಗ್

    3ನೇ ದಿನದಲ್ಲಿ 30 ಕೋಟಿ – ತೆಲುಗಿನಲ್ಲಿ 36 ಸಾವಿರ ಮುಂಗಡ ಟಿಕೆಟ್ ಬುಕ್ಕಿಂಗ್

    ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ಶಾನ್ವಿ ಶ್ರೀವಾಸ್ತವ್ ಅಭಿನಯದ ಬಹುನಿರೀಕ್ಷಿತ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಕಂಡಿದೆ. ಅದರಲ್ಲೂ ಚಿತ್ರ ಬಿಡುಗಡೆಯಾದ ಮೂರೇ ದಿನದಲ್ಲಿ ಬರೋಬ್ಬರಿ 30 ಕೋಟಿ ಗಳಿಕೆಯನ್ನು ಕಾಣುವ ಮೂಲಕ ಯಶಸ್ಸು ಕಂಡಿದೆ.

    ಸಿನಿಮಾ ರಿಲೀಸ್ ಆದ ಮೂರು ದಿನ ಕಳೆದಿದ್ದು, ಚಿತ್ರ 24 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲೇ 450 ಸ್ಕ್ರೀನ್‍ಗಳಲ್ಲಿ ಮೂರು ದಿನಗಳಲ್ಲಿ 5 ಸಾವಿರ ಶೋ ಕಂಡಿದೆ. ಇನ್ನೂ ರಾಜ್ಯದ 50 ಕೇಂದ್ರಗಳಲ್ಲಿ ಪ್ರೀಮಿಯರ್ ಶೋವನ್ನು ಆಯೋಜನೆ ಮಾಡಲಾಗಿತ್ತು. ಅಲ್ಲಿಯೂ ಟಿಕೆಟ್ ನೀಡಲಾಗಿತ್ತು. ಹೀಗಾಗಿ ಅದರಿಂದಲೇ ಬರೋಬ್ಬರಿ 3-4 ಕೋಟಿ ಗಳಿಕೆ ಕಂಡಿದೆ.

    ಎರಡನೇ ವಾರದಲ್ಲಿ 80ಕ್ಕೂ ಹೆಚ್ಚುವರಿ ಕೇಂದ್ರಗಳಲ್ಲಿ ಚಿತ್ರ ತೆರೆಕಾಣಲಿದೆ. ಹೀಗಾಗಿ ಸಿನಿಮಾ ಒಂದು ವಾರದಲ್ಲಿಯೇ 50-60 ಕೋಟಿ ಗಳಿಕೆ ಕಾಣುವ ಸಾಧ್ಯತೆ ಇದೆ. ಸದ್ಯಕ್ಕೆ ಕನ್ನಡದಲ್ಲಿ ‘ಅವನೇ ಶ್ರೀಮನ್ನಾರಾಯಣ’ ಇದೇ ತಿಂಗಳ 27 ರಂದು ಬಿಡುಗಡೆಯಾಗಿತ್ತು. ಜನವರಿ 3ರಂದು ತಮಿಳು ಮತ್ತು ಮಲಯಾಳಂನಲ್ಲಿ, ಜನವರಿ 16 ರಂದು ಹಿಂದಿಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ತೆಲುಗಿನಲ್ಲಿ 36 ಸಾವಿರ ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ಆಗಿದೆ.

    ಈ ಬಗ್ಗೆ ಮಾತನಾಡಿದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಮೂರು ದಿನದಲ್ಲಿ ಸಿನಿಮಾ 30 ಕೋಟಿ ಗಳಿಕೆ ಕಂಡಿದೆ. ಈ ಸಿನಿಮಾಗಾಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡಿದ್ದೇವೆ. ನನಗೆ ಕಮರ್ಷಿಯಲ್ ಸಿನಿಮಾ ಮಾಡಿ ಹಣ ಗಳಿಸುವುದು ಮುಖ್ಯವಾಗಿರಲಿಲ್ಲ. ಹೊಸತನದ ಮೇಕಿಂಗ್ ಬೇಕು, ಪ್ರೇಕ್ಷಕರು ಸಿನಿಮಾ ನೋಡುವ ಕ್ರಮ ಬದಲಾಗಬೇಕು. ಅಲ್ಲದೇ ಕನ್ನಡದಲ್ಲಿ ಫ್ಯಾಂಟಸಿ ಸಿನಿಮಾ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಅದೇ ರೀತಿ ಒಂದು ಸಾಹಸ ಸಿನಿಮಾವನ್ನು ಮಾಡಿದ್ದೇನೆ. ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿದೆ. ಇದರಿಂದ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದರು.

  • ಶ್ರೀಮನ್ನಾರಾಯಣ ಚಿತ್ರಕ್ಕೆ ಅಡ್ಡಿಪಡಿಸಿದ ಶಿವಸೇನೆ ಪುಂಡರು

    ಶ್ರೀಮನ್ನಾರಾಯಣ ಚಿತ್ರಕ್ಕೆ ಅಡ್ಡಿಪಡಿಸಿದ ಶಿವಸೇನೆ ಪುಂಡರು

    ಬೆಳಗಾವಿ: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿದ ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೂ ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದದ ಬಿಸಿ ತಟ್ಟಿದೆ.

    ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೆ ಶಿವಸೇನೆ ಪುಂಡರು ಅಡ್ಡಿ ಮಾಡಿದ್ದಾರೆ. ಕೊಲ್ಲಾಪೂರ ನಗರದ ಅಪ್ಸರಾ ಚಿತ್ರಮಂದಿರಕ್ಕೆ ನುಗ್ಗಿದ ಶಿವಸೇನೆಯ ಕಿಡಿಗೇಡಿಗಳು ಚಿತ್ರಮಂದಿರದಲ್ಲಿ ಇದ್ದ ಪ್ರೇಕ್ಷಕರನ್ನು ಹೊರಗೆ ಕಳುಹಿಸಿದ್ದಾರೆ. ಅಲ್ಲದೆ ಚಿತ್ರಮಂದಿರದಲ್ಲಿ ಅಳವಡಿಸಿದ್ದ ಚಿತ್ರದ ಬ್ಯಾನರಗಳನ್ನು ಕೆಳಗಿಳಿಸಿ ಹರಿದಿದ್ದಾರೆ. ಚಿತ್ರಮಂದಿರದ ಮಾಲೀಕ ಪ್ರೇಕ್ಷಕರಿಗೆ ಹಣ ನೀಡಿ ವಾಪಸ್ಸು ಕಳಿಸಿದ್ದು, ಇಂದು ಕೂಡ ಚಿತ್ರ ಪ್ರದರ್ಶನವನ್ನ ರದ್ದು ಗೊಳಿಸಿದ್ದಾರೆ.

    ಚಿತ್ರಮಂದಿರಕ್ಕೆ ಅಷ್ಟೇ ಅಲ್ಲದೇ ಕನ್ನಡದಲ್ಲಿ ಮುದ್ರಿಸಿದ್ದ ಫಲಕಗಳಿಗೆ ಶಿವಸೇನೆಯ ಪುಂಡರು ಕಪ್ಪು ಮಸಿ ಬಳಿದಿದ್ದಾರೆ. ಇಂದು ಕೂಡ ಮಹಾರಾಷ್ಟ್ರದಲ್ಲಿ ಶಿವಸೇನೆಯ ಪುಂಡರು ಪ್ರತಿಭಟನೆ ನಡೆಸಲಿದ್ದಾರೆ. ಬೆಳಗಾವಿ ಜಿಲ್ಲೆಯ ಗಡಿಯಲ್ಲಿ ಶಿವಸೇನೆಯ ಪುಂಡಾಟಿಕೆಯನ್ನು ಖಂಡಿಸಿ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.

    ಇಂದು ಕೂಡ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಬಿಗುವಿನ ವಾತಾವರಣವಿದ್ದು, ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಬಸ್ ಸಂಚಾರ ರಾತ್ರಿಯಿಂದ ಆರಂಭವಾಗಿದ್ದರು ಯಾವುದೇ ಅಹಿತಕರ ಘಟನೆ ನಡೆದರೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗುವದು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

  • ನಿಧಿ ನಿಗೂಢದ ನಡುವೆ ನಿಗಿನಿಗಿಸೋ ನಾರಾಯಣ!

    ನಿಧಿ ನಿಗೂಢದ ನಡುವೆ ನಿಗಿನಿಗಿಸೋ ನಾರಾಯಣ!

    ನಿರೀಕ್ಷೆ ನಿಜವಾಗಿದೆ. ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ದಾಖಲೆ ಬರೆಯುವಂತೆ ಮೂಡಿ ಬಂದಿದೆ ಎಂಬ ನಂಬಿಕೆ ಪ್ರತೀ ಪ್ರೇಕ್ಷಕರಲ್ಲಿಯೂ ಇತ್ತು. ಅಭಿಮಾನದಾಚೆಗೂ ಎಲ್ಲ ವರ್ಗದ ಪ್ರೇಕ್ಷಕರು ಈ ಸಿನಿಮಾವನ್ನು ವರ್ಷಾಂತ್ಯದ ಮಹಾ ಹಬ್ಬವೆಂಬಂತೆಯೇ ಪರಿಭಾವಿಸಿ ಕಾತರಗೊಂಡಿದ್ದರು. ಅದೆಲ್ಲವನ್ನೂ ನೂರಕ್ಕೆ ನೂರರಷ್ಟು ನಿಜಗೊಳಿಸುವಂತೆ ಈ ಚಿತ್ರವೀಗ ತೆರೆಕಂಡಿದೆ. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯರ ಕನಸುಗಾರಿಕೆ, ನಿರ್ದೇಶಕ ಸಚಿನ್ ರವಿ ಸೇರಿದಂತೆ ಇಡೀ ತಂಡದ ಕ್ರಿಯೇಟಿವಿಟಿ ಮತ್ತು ರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲ ಕಲಾವಿದರ ಸಮರ್ಪಣಾ ಮನೋಭಾವದಿಂದಾಗಿ ಶ್ರೀಮನ್ನಾರಾಯಣ ಕಳೆಗಟ್ಟಿಕೊಂಡೇ ಪ್ರೇಕ್ಷಕರನ್ನು ಎದುರುಗೊಂಡಿದ್ದಾನೆ.

    ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಶ್ರೀಮನ್ನಾರಾಯಣನ ಅವತಾರದಷ್ಟೇ ಅದರ ಸೂತ್ರಧಾರಿ ಸಚಿನ್ ರವಿಯವರ ಕಸುಬುದಾರಿಕೆ ಮತ್ತು ಧೈರ್ಯವೂ ಗಮನ ಸೆಳೆಯುತ್ತದೆ. ಇದು ಸಚಿನ್ ಪಾಲಿಗೆ ಮೊದಲ ಚಿತ್ರ. ಆದರೆ ಇಲ್ಲಿ ಅತ್ಯಂತ ಸಂಕೀರ್ಣವಾದ ಕಥೆಯನ್ನೇ ಅವರು ಕೈಗೆತ್ತಿಕೊಂಡಿದ್ದಾರೆ. ಇಲ್ಲಿ ಅಗಾಧ ಪ್ರಮಾಣದ ಪಾತ್ರ ವರ್ಗವಿದೆ. ಕಥೆಯೆಂಬುದು ಸುಳಿವೇ ಸಿಗದಂತೆ ಮತ್ಯಾವುದೋ ದಿಕ್ಕಿನತ್ತ ಕೈ ಚಾಚಿಕೊಳ್ಳುತ್ತದೆ. ಒಂದರೊಳಗೊಂದು ಹೊಸೆದುಕೊಂಡೇ ಒಂದೇ ಸಲಕ್ಕೆ ಹಲವಾರು ದಿಕ್ಕುಗಳತ್ತ ಚಿಮ್ಮುವ ಕಥೆ ಕೊಂಚ ಸೂತ್ರ ತಪ್ಪಿದರೆ ದಿಕ್ಕಾಪಾಲಾಗಿ ಬಿಡುವ ಅಪಾಯವಿತ್ತು. ಆದರೆ ಎಲ್ಲಿಯೂ ಅದು ಸೂತ್ರ ತಪ್ಪದಂತೆ ಜಾಣ್ಮೆಯಿಂದಲೇ ನೋಡಿಕೊಂಡು ಸಚಿನ್ ಕಸುಬುದಾರಿಕೆ ಪ್ರದರ್ಶಿಸಿದ್ದಾರೆ.

    ಶ್ರೀಮನ್ನಾರಾಯಣನ ಕಥೆಯ ಮೂಲಸ್ಥಾನ ಅಮರಾವತಿ ಎಂಬ ಊರು. ವಿಶಿಷ್ಟವಾದ ಚಹರೆಗಳನ್ನು ಹೊಂದಿರೋ ಆ ಊರನ್ನು ದರೋಡೆಯನ್ನೇ ಕಸುಬಾಗಿಸಿಕೊಂಡಿರುವ ಮಂದಿ ಆಳುತ್ತಿರುತ್ತಾರೆ. ಧನದಾಹದಿಂದ ಮನುಷ್ಯತ್ವವನ್ನೇ ಮರೆತಂತಿರೋ ಆ ಗ್ಯಾಂಗು ಎಂಥಾ ಭೀಕರ ಕಸುಬಿಗೂ ಹೇಸದಿರುವಂಥಾದ್ದು. ಅಂಥಾದ್ದರ ನಡುವೆ ನಾಟಕ ತಂಡವೊಂದು ಭಾರೀ ನಿಧಿಯನ್ನು ನಿಗೂಢ ಸ್ಥಳದಲ್ಲಿ ಅವುಸಿಡುತ್ತದೆ. ಅದನ್ನು ಪಡೆಯೋ ದಾಹದಿಂದ ಆ ನಾಟಕ ತಂಡದ ಒಂದಷ್ಟು ಮಂದಿಯನ್ನು ದರೋಡೆ ಗ್ಯಾಂಗು ಕೊಂದು ಕೆಡವೋದಲ್ಲದೇ ಇಡೀ ಕುಟುಂಬವನ್ನೇ ನಾಶ ಮಾಡೋ ಪಣ ತೊಡುತ್ತದೆ. ಅಂಥಾ ಊರಿಗೆ ಪೊಲೀಸ್ ಅವತಾರದ ಶ್ರೀಮನ್ನಾರಾಯಣನ ಎಂಟ್ರಿಯಾಗುತ್ತದೆ.

    ಆ ರಕ್ಕಸ ಗ್ಯಾಂಗನ್ನು ಮಟ್ಟಹಾಕಿ ಹೇಗೆ ಆ ನಿಧಿಯನ್ನು ಪೊಲೀಸ್ ಅಧಿಕಾರಿ ಕಾಪಾಡಿಕೊಳ್ಳುತ್ತಾನೆಂಬುದು ಪ್ರಧಾನ ಕುತೂಹಲ. ಅದಕ್ಕೆ ರೋಚಕ ಉತ್ತರಗಳೇ ಈ ಚಿತ್ರದಲ್ಲಿವೆ. ರಕ್ಷಿತ್ ಶೆಟ್ಟಿ ಈ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದರೆ, ಶಾನ್ವಿ ಶ್ರೀವಾತ್ಸವ ಅದಕ್ಕೆ ಪ್ರತಿಸ್ಪರ್ಧೆ ಒಡ್ಡುವಂತೆ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಅಶ್ವಿನ್ ಹಾಸನ್, ಗೋಪಾಲ ದೇಶಪಾಂಡೆ, ಮಧುಸೂಧನ್ ರಾವ್, ಗೌತಮ್ ಸೇರಿದಂತೆ ಪ್ರತೀ ಕಲಾವಿದರೂ ಗಮನಾರ್ಹವಾಗಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಮತ್ತು ಚರಣ್ ರಾಜ್ ಸಂಗೀತ ಮನಮುಟ್ಟುವಂತಿದೆ. ಕರಮ್ ಚಾವ್ಲಾರ ಛಾಯಾಗ್ರಹಣ ಇದರ ಪ್ಲಸ್ ಪಾಯಿಂಟುಗಳಲ್ಲೊಂದಾಗಿ ಗುರುತಿಸುವಂತಿದೆ.

  • ಇಂದಿನಿಂದ ಶ್ರೀಮನ್ನಾರಾಯಣನ ದರ್ಶನ- ಪ್ರೀಮಿಯರ್ ಶೋನಲ್ಲಿ ರಕ್ಷಿತ್ ಶೆಟ್ಟಿಗೆ ಶಹಬ್ಬಾಷ್

    ಇಂದಿನಿಂದ ಶ್ರೀಮನ್ನಾರಾಯಣನ ದರ್ಶನ- ಪ್ರೀಮಿಯರ್ ಶೋನಲ್ಲಿ ರಕ್ಷಿತ್ ಶೆಟ್ಟಿಗೆ ಶಹಬ್ಬಾಷ್

    ಬೆಂಗಳೂರು: `ಅವನೇ ಶ್ರೀಮನ್ನಾರಾಯಣ’ನ ಅವತಾರದಲ್ಲಿ ಲಕ್ಷ್ಮೀ ಸಮೇತ ಇಂದು ರಕ್ಷಿತ್ ಶೆಟ್ಟಿ ರಾಜಾದ್ಯಂತ ಥಿಯೇಟರ್‍ಗೆ ಎಂಟ್ರಿಕೊಡುತ್ತಿದ್ದಾರೆ. ವಿಭಿನ್ನ ಕಥೆಯ ಮೂಲಕ ಅದೃಷ್ಟ ಪರೀಕ್ಷೆಗಿಳಿದಿರುವ ಸಿಂಪಲ್‍ಸ್ಟಾರ್ ಬಂಪರ್ ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾರೆ.

    ಹೌದು. ಇಂದಿನಿಂದ ಶ್ರೀಮನ್ನಾರಾಯಣ ದರ್ಶನ ಕೊಡುತ್ತಿದ್ದಾನೆ. ಹ್ಯಾಟ್ಸಪ್ ಸಾಂಗ್ ಮೂಲಕ ಕಿಕ್ಕೇರಿಸಿದ್ದ ರಕ್ಷಿತ್ ಶೆಟ್ಟಿಯ ಕಲ್ಪನೆಯ ಕೂಸು ಅವನೇ ಶ್ರೀಮನ್ನಾರಾಯಣ ಇಂದು 10 ಗಂಟೆಯಿಂದ ಬೆಳ್ಳಿತೆರೆಯ ಮೇಲೆ ರಾರಾಜಿಸಲಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿರೋ ಸಿಂಪಲ್ ಸ್ಟಾರ್ ನ ಸಕ್ಸಸ್ ಯಾತ್ರೆ ಇಂದು 450ಕ್ಕೂ ಹೆಚ್ಚಿನ ಚಿತ್ರಮಂದಿರಲ್ಲಿಂದು ಮೆರವಣಿಗೆ ಹೊರಡಲಿದೆ.

    ಅಂದಹಾಗೇ ಅವನೇ ಶ್ರೀಮನ್ನಾರಾಯಣನ ರಕ್ಷಿತ್ ಶೆಟ್ಟಿಯ ಮೂರು ವರ್ಷದ ತಪಸ್ಸು. ಈಗಾಗಲೇ ಇನ್ಸ್ ಸ್ಟಾಗ್ರಾಂ, ಫೇಸ್‍ಬುಕ್, ಟ್ವಿಟ್ಟರ್ ನಲ್ಲಿ ಶ್ರೀಮನ್ನಾರಾಯಣ ಭಜನೆ ಜೋರಾಗಿದೆ. ಚಿತ್ರಮಂದಿರದ ಮುಂದೆ ಅವನೇ ಶ್ರೀಮನ್ನಾರಾಯಣನ ಕಟೌಟ್‍ಗಳು ರಾರಾಜಿಸ್ತಿದ್ದು, ಗ್ರ್ಯಾಂಡಾಗಿ ನಾರಾಯಣನನ್ನು ವೆಲ್‍ಕಂ ಮಾಡಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.

    ಗುರುವಾರ ಊರ್ವಶಿ ಚಿತ್ರಮಂದಿರದಲ್ಲಿ ಅದ್ಧೂರಿ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಕಲರ್‍ಫುಲ್ ಪ್ರಿಮಿಯರ್ ಶೋನಲ್ಲಿ ಶಿವರಾಜ್ ಕುಮಾರ್, ರವಿಚಂದ್ರನ್, ರಿಷಬ್ ಶೆಟ್ಟಿ, ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ಗುರುದತ್ತ್, ವಸಿಷ್ಠ, ಇಮ್ರಾನ್ ಸರ್ದಾರಿಯಾ, ಕೆ.ಮಂಜು ಸೇರಿದಂತೆ ಚಿತ್ರರಂಗ ಕಲಾವಿದರು, ತಂತ್ರಜ್ಞರು ಭಾಗಿಯಾಗಿದ್ರು. ಚಿತ್ರ ನೋಡಿದವರೆಲ್ಲಾ ಶೆಟ್ರಿಗೆ ಹ್ಯಾಟ್ಸಪ್ ಹೇಳಿದ್ದಾರೆ.

    1980ರ ಕಾಲಘಟ್ಟದ ಕಥೆ ಇದಾಗಿದೆ. ಸೂಪರ್ ಹಿಟ್ ಚಿತ್ರ ಕಿರಿಕ್ ಪಾರ್ಟಿ ವೇಳೆ ಹೊಳೆದ ಅವನೇ ಶ್ರೀಮನ್ನಾರಾಯಣ ಕಥೆಯನ್ನ ಸ್ವತಃ ರಕ್ಷಿತೇ ಬರೆದಿದ್ದಾರೆ. ರಕ್ಷಿತ್ ಶೆಟ್ಟಿ ಚಿತ್ರ ಅಂದ್ರೆ ಅದರಲ್ಲೇನೋ ವಿಶೇಷ ಇದ್ದೇ ಇರುತ್ತೆ. ಫ್ಯಾನ್ ಇಂಡಿಯಾ ರಿಲೀಸ್ ಆಗಲಿರುವ ಚಿತ್ರಕ್ಕೆ ಸಚಿನ್ ನಿರ್ದೇಶನವಿದೆ, ರಕ್ಷಿತ್ ಶೆಟ್ಟಿ- ಶಾನ್ವಿ ಜೋಡಿಯನ್ನು ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳುವ ಕಾತರತೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಪ್ರಕಾಶ್ ಗೌಡ ನಿರ್ಮಿಸಿರೋ 30 ಕೋಟಿ ವೆಚ್ಚದ `ಅವನೇ ಶ್ರೀಮನ್ನಾರಾಯಣ’ ದರ್ಶನಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.

    ಒಟ್ಟಿನಲ್ಲಿ ಸಿನಿರಸಿಕರೇ ಚರಿತ್ರೆ ಸೃಷ್ಠಿಸುವ ಅವತಾರದಲ್ಲಿ `ಅವನೇ ಶ್ರೀಮನ್ನಾರಾಯಣ’ ಮತ್ತು ಅಮರಾವತಿಯಿಂದ ಬಂದಿರೋ ಲಕ್ಷ್ಮೀಯ ದರ್ಶನನ್ನ ಥಿಯೇಟರ್‍ನಲ್ಲೇ ಪಡೆಯಿರಿ.

  • 2019ರಲ್ಲಿ ಚಂದನವನವನ್ನ ತಿರುಗಿ ನೋಡಿತು ಭಾರತೀಯ ಸಿನಿಲೋಕ

    2019ರಲ್ಲಿ ಚಂದನವನವನ್ನ ತಿರುಗಿ ನೋಡಿತು ಭಾರತೀಯ ಸಿನಿಲೋಕ

    2019 ಕನ್ನಡ ಸಿನಿಮಾಗಳಿಗೆ ಹೊಸ ರೂಪು ನೀಡಿತು ಎಂದ್ರೆ ಸುಳ್ಳಾಗಲ್ಲ. ಕರ್ನಾಟಕದ ಮಾರುಕಟ್ಟೆಗೆ ಸೀಮಿತಗೊಂಡಿದ್ದ ಚಂದನವನನ್ನ ಇಂದು ಇಡೀ ಭಾರತವೇ ತಿರುಗಿ ನೋಡುತ್ತಿದೆ. ಇಂದು ಕನ್ನಡ ಸಿನಿಮಾಗಳಿಗೆ ಹೊರ ರಾಜ್ಯದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಕನ್ನಡ ಸ್ಟಾರ್ ಗಳನ್ನು ಇಂದು ಗುರುತಿಸುವಂತಾಗಿದೆ. ಇದೆಕ್ಕೆಲ್ಲಾ ಕಾರಣ ಪ್ಯಾನ್ ಇಂಡಿಯಾ ಕಾನ್ಸೆಪ್ಟ್.

    ಹೌದು, ಮೊದಲಿಗೆ ಕನ್ನಡದ ಯಾವುದೇ ಸಿನಿಮಾ ಬಿಡುಗಡೆ ಆದ್ರೆ ಅದು ಕೇವಲ ಕರ್ನಾಟಕದ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿತ್ತು. ಇಂದು ಕನ್ನಡದ ಸಿನಿಮಾಗಳು ಗಡಿಯನ್ನು ದಾಟಿ ವಿದೇಶದಲ್ಲಿ ನಮ್ಮ ಚಂದನವನದ ಪರಿಮಳವನ್ನು ಪಸರಿಸಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ 2018 ಡಿಸೆಂಬರ್ 21ರಂದು ತೆರೆಕಂಡಿತ್ತು. ಈ ಕನ್ನಡದ ಸಿನಿಮಾವನ್ನು ಇಡೀ ಭಾರತೀಯ ಚಿತ್ರರಂಗ ಒಪ್ಪಿ, ಅಪ್ಪಿಕೊಂಡು ಮುದ್ದಾಡಿದೆ. ಕೆಜಿಎಫ್ ಎಂಬ ದೈತ್ಯ ಸಿನಿಮಾ ಕನ್ನಡದ ಮಾರುಕಟ್ಟೆಯನ್ನು ವಿಸ್ತರಿಸಿತು. ಕೆಜಿಎಫ್ ಬಳಿಕ ಕನ್ನಡದ ಸಿನಿಮಾಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನ್ನು ಅಳವಡಿಸಿಕೊಳ್ಳಲು ಮುಂದಾದವು.

    ಸೆಪ್ಟೆಂಬರ್ 12ರಂದ ಬಿಡುಗಡೆಯಾದ ಸ್ಯಾಂಡಲ್‍ವುಡ್ ಸ್ವಾತಿಮುತ್ತು ಸುದೀಪ್ ಅಭಿನಯದ ‘ಪೈಲ್ವಾನ್’ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ತೆರೆಕಂಡಿತು. ಕನ್ನಡ ಮಾತ್ರವಲ್ಲದೇ ತೆಲಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಪೈಲ್ವಾನ್ ಹೊಡೆದ ಸೆಡ್ಡು ಎಲ್ಲರನ್ನು ನಡಗುವಂತೆ ಮಾಡಿತ್ತು. ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಮೊದಲ ಬಾರಿಗೆ ಪೈಲ್ವಾನ್ ನಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡಿದ್ದು ಈ ಚಿತ್ರದ ಮತ್ತೊಂದು ವಿಶೇಷ. 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪೈಲ್ವಾನ್ ಅಂದಾಜು 113 ಕೋಟಿಗೂ ಅದಿಕ ಹಣವನ್ನು ತನ್ನ ಗಲ್ಲಾ ಪೆಟ್ಟಿಗೆಯಲ್ಲಿ ತುಂಬಿಕೊಂಡಿತ್ತು.

    ಇದಾದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಸಹ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಆಗಸ್ಟ್ 9ರಂದು ಬಿಡುಗಡೆಗೊಂಡಿತು. ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಿಲ್ಲೊಂದು ವಿಷಯಗಳಿಗೆ ಚಿತ್ರ ಗಾಂಧಿನಗರದಲ್ಲಿ ಸದ್ದು ಮಾಡುತ್ತಿತ್ತು. ದರ್ಶನ್, ಅಂಬರೀಶ್, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್, ಅರ್ಜುನ್ ಸರ್ಜಾ, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಸೋನು ಸೂದ್ ದೊಡ್ಡ ತಾರಾಬಳಗವನ್ನೇ ಸಿನಿಮಾ ಹೊಂದಿತ್ತು. ಮುನಿರತ್ನ ಕುರುಕ್ಷೇತ್ರ ಸಿನಿಮಾ ಸಹ 100 ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ.

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೂರು ವರ್ಷಗಳ ಬಳಿಕ ಬೆಳ್ಳಿ ಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನ ಬಳಿಕ ಅವನೇ ಶ್ರೀಮನ್ನಾರಾಯಣನಾಗಿ ರಕ್ಷಿತ್ ಶೆಟ್ಟಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಟೀಸರ್, ಟ್ರೈಲರ್ ಮತ್ತು ಹಾಡುಗಳ ಮೂಲಕ ಕ್ರೇಜ್ ಹುಟ್ಟಿಸಿರೋ ಅವನೇ ಶ್ರೀಮನ್ನಾರಾಯಣ ಸಹ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಥೀಮ್ ನಲ್ಲಿ ರಿಲೀಸ್ ಆಗಲು ಭರ್ಜರಿ ತಯಾರಿ ನಡೆಸಿದೆ. ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಭಾಷೆಗಳಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗಲಿದೆ.

  • ಸೋಶಿಯಲ್ ಮೀಡಿಯಾದಲ್ಲಿ ಮೇಳೈಸಿತು ಶ್ರೀಮನ್ನಾರಾಯಣನ ಕ್ರೇಜ್!

    ಸೋಶಿಯಲ್ ಮೀಡಿಯಾದಲ್ಲಿ ಮೇಳೈಸಿತು ಶ್ರೀಮನ್ನಾರಾಯಣನ ಕ್ರೇಜ್!

    ಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ತೆರೆಗಾಣಲು ಕೌಂಟ್ ಡೌನ್ ಶುರುವಾಗಿದೆ. ಇದೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಶ್ರೀಮನ್ನಾರಾಯಣನ ಹವಾ ಜೋರಾಗಿದೆ. ಅಷ್ಟಕ್ಕೂ ಆರಂಭದಿಂದ ಇಲ್ಲಿಯವರೆಗೂ ಈ ಸಿನಿಮಾ ಬಗ್ಗೆ ಕಾಲ ಕಾಲಕ್ಕೆ ಒಂದಷ್ಟು ಚರ್ಚೆಗಳು ಚಾಲ್ತಿಯಲ್ಲಿದ್ದುಕೊಂಡು ಆ ಮೂಲಕವೇ ಕುತೂಹಲವೊಂದು ಸದಾ ಚಾಲ್ತಿಯಲ್ಲಿದೆ. ಈ ವಾರ ಬಿಡುಗಡೆಗೊಳ್ಳುತ್ತಿರುವ ಈ ಚಿತ್ರದ ಕೌಂಟ್ ಡೌನ್ ಕ್ರೇಜ್ ಅಂತೂ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳುವ ಕಡೇಯ ಕ್ಷಣಗಳನ್ನು ಪ್ರೇಕ್ಷಕರೆಲ್ಲ ಸೋಶಿಯಲ್ ಮೀಡಿಯಾ ಮೂಲಕ ಸಂಭ್ರಮಿಸುತ್ತಿದ್ದಾರೆ.

    ಇದು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿರುವ ಬಿಗ್ ಬಜೆಟ್ಟಿನ ಚಿತ್ರ. ಈ ವಾರ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗುತ್ತಿದ್ದರೂ ಇಷ್ಟರಲ್ಲಿಯೇ ಮಿಕ್ಕ ನಾಲಕ್ಕು ಭಾಷೆಗಳಲ್ಲಿ ಅವನೇ ಶ್ರೀಮನ್ನಾರಾಯಣ ಬಿಡುಗಡೆಯಾಗಲಿದ್ದಾನೆ. ಈ ಘಳಿಗೆಯಲ್ಲಿ ಶ್ರೀಮನ್ನಾರಾಯಣನ ಬರುವಿಕೆಯ ಕ್ಷಣಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇದರೊಂದಿಗೆ ಶ್ರೀಮನ್ನಾರಾಯಣನ ಬಗ್ಗೆ ಪ್ರೇಕ್ಷಕ ವಲಯದಲ್ಲಿ ಮಡುಗಟ್ಟಿಕೊಂಡಿರೋ ಕ್ಯೂರಿಯಾಸಿಟಿ ಮತ್ತಷ್ಟು ತೀವ್ರವಾಗಿ ಬಿಟ್ಟಿದೆ.

    ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ರದರ್ಶಿಸುತ್ತಿರುವ ವಿಭಿನ್ನವಾದ ಪ್ರಚಾರದ ಪಟ್ಟುಗಳಂತೂ ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಸರ್ವವ್ಯಾಪಿಯಾಗಿಸುತ್ತಿವೆ. ಸಿನಿಮಾ ಪ್ರಚಾರದ ವಿಚಾರದಲ್ಲಿಯೂ ಒಂದಷ್ಟು ಸಿದ್ಧ ಸೂತ್ರಗಳಿವೆ. ಪುಷ್ಕರ್ ಅದೆಲ್ಲದರಾಚೆಗೆ ಪ್ರತಿಯೊಬ್ಬರೂ ಶ್ರೀಮನ್ನಾರಾಯಣನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲು ಅವರು ಅವನೇ ಶ್ರೀಮನ್ನಾರಾಯಣ ಚಿತ್ರದ ಬೃಹತ್ ಕಟೌಟಿನ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಇನ್ನು ಎಪ್ಪತ್ತೆರಡು ಗಂಟೆಗಳು ಮಾತ್ರ ಬಾಕಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ. ಇದಕ್ಕೆ ಬಂದಿರೋ ಕಮೆಂಟುಗಳೇ ಶ್ರೀಮನ್ನಾರಾಯಣನ ಬಗ್ಗೆ ಅದೆಂಥಾ ಕ್ರೇಜ್ ಇದೆ ಎಂಬುದನ್ನು ಸಾರಿ ಹೇಳುವಂತಿದೆ. ಇಂಥಾ ಕೌಂಟ್‍ಡೌನ್ ಕ್ರೇಜ್ ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ ಮೇರೆ ಮೀರಿಕೊಂಡಿದೆ.

  • ಮೊದಲ ಬಾರಿ ಟ್ರೈನ್ ಏರಿ ಬಂದು ಕನ್ನಡದಲ್ಲಿ ಇತಿಹಾಸ ನಿರ್ಮಿಸಿದ ಶ್ರೀಮನ್ನಾರಾಯಣ

    ಮೊದಲ ಬಾರಿ ಟ್ರೈನ್ ಏರಿ ಬಂದು ಕನ್ನಡದಲ್ಲಿ ಇತಿಹಾಸ ನಿರ್ಮಿಸಿದ ಶ್ರೀಮನ್ನಾರಾಯಣ

    ಬೆಂಗಳೂರು: ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಬೆಳ್ಳಿ ತೆರೆಗೆ ಬರಲು ಅವನೇ ಶ್ರೀಮನ್ನಾರಾಯಣ ಸಿದ್ಧನಾಗಿದ್ದಾನೆ.

    ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿರುವ ಈ ವರ್ಷದ ಅತ್ಯಂತ ನಿರೀಕ್ಷೆಗಳನ್ನ ಹುಟ್ಟುಹಾಕಿರೋ ಸಿನಿಮಾ ಈ ವರ್ಷದ ಕೊನೆಯ ವಾರ ನಿಮ್ಮನ್ನೆಲ್ಲ ರಂಜಿಸಲು ಸಿದ್ಧವಾಗಿದೆ. ಸಿನಿಮಾ ಟ್ರೈಲರ್, ಹಾಡುಗಳು ಈಗಾಗಲೇ ಭಾರೀ ಸದ್ದು ಮಾಡುತ್ತಿದೆ.

    ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾಗಳು ಹೊಸತನದಿಂದ ಇರೋದು ಎಲ್ಲರಿಗೂ ಗೊತ್ತಿದೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ಹೆಸರಿನಲ್ಲೇ ವಿಭಿನ್ನವಾಗಿದ್ದು ಸಿನಿಮಾ ಕೂಡ ವಿಭಿನ್ನವಾಗಿರೋತ್ತೆ ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿಬಂದಿದೆ. ಕೇವಲ ಸಿನಿಮಾ ಮಾತ್ರ ಅಲ್ಲ ಈ ಸಿನಿಮಾದ ಜಾಹೀರಾತು ಸಹ ವಿಭಿನ್ನತೆಯಿಂದ ಕೂಡಿದೆ.

    ಹೌದು ಟ್ರೈನ್ ಬೋಗಿಗಳ ಮೇಲೆ ಅವನೇ ಶ್ರೀಮನ್ನಾರಾಯಣ ಪೋಸ್ಟರ್‍ಗಳು ಸಂಚಲನ ಮೂಡಿಸಿದೆ. ಕನ್ನಡದ ಚಿತ್ರವೊಂದು ಹೀಗೆ ರೈಲ್ವೇ ಬೋಗಿಯ ಮೇಲೆ ಜಾಹೀರಾತು ನೀಡುತ್ತಿರೋದು ಇದೇ ಮೊದಲು. ಸಿನಿಮಾ ಹೆಸರಿನ ಮೂಲಕವೇ ಸದ್ದು ಮಾಡಿತ್ತು. ಈಗ ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡುತ್ತಿರೋದು ಸಹ ಸಿನಿ ಪ್ರಿಯರಲ್ಲಿ ಸಿನಿಮಾದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.

  • ‘ಎಲ್ರ ಗಮನ ನನ್ನ ಕಡೆ ಇದೆ ಅಂತ ಗೊತ್ತು, ಹಾಗೆ ಗಮನವಿಟ್ಟು ಕೇಳಿ’

    ‘ಎಲ್ರ ಗಮನ ನನ್ನ ಕಡೆ ಇದೆ ಅಂತ ಗೊತ್ತು, ಹಾಗೆ ಗಮನವಿಟ್ಟು ಕೇಳಿ’

    – ಮೂರು ವರ್ಷದ ಬಳಿಕ ಶ್ರೀಮನ್ನಾರಾಯಣನ ಅವತಾರದಲ್ಲಿ ರಕ್ಷಿತ್
    – 5 ಭಾಷೆಯಲ್ಲಿ ಟ್ರೈಲರ್ ರಿಲೀಸ್

    ಸ್ಯಾಂಡಲ್‍ವುಡ್ ನಟ ರಕ್ಷಿತ್ ಶೆಟ್ಟಿ ತೆರೆ ಮೇಲೆ ಕಾಣಿಸಿಕೊಂಡು ಬರೋಬ್ಬರಿ ಮೂರು ವರ್ಷಗಳಾಗಿವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ತೆರೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದರು. ಇದೀಗ ಬಹುನಿರೀಕ್ಷಿತ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಟ್ರೈಲರ್ ಮೂಲಕ ಮತ್ತೆ ತೆರೆ ಮೇಲೆ ಬಂದಿದ್ದಾರೆ.

    ಅವನೇ ಶ್ರೀಮನ್ನಾರಾಯಣ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡಿಕೊಂಡು ಬರುತ್ತಿರುವ ಸಿನಿಮಾ. ಎಂದಿನಂತೆ ರಕ್ಷಿತ್ ಶೆಟ್ಟಿ ತಮ್ಮ ಯೋಚನೆ, ಕಲ್ಪನೆ ಭಿನ್ನ ಎಂಬುದನ್ನು ಟ್ರೈಲರಿನಲ್ಲಿ ತೋರಿಸಿದ್ದಾರೆ. 80-90ರ ದಶಕದ ಘಮಲಿನಲ್ಲಿ ಸಿನಿಮಾ ಅರಳಿದ್ದು, ಪೋಸ್ಟರ್ ಮತ್ತು ಟೀಸರ್ ನೋಡಿದವರು ಮತ್ತೊಂದು ಕೆಜಿಎಫ್ ಅಂತಾ ಪ್ರಶ್ನೆ ಮಾಡಿದ್ದರು. ಈ ತರಹದ ಎಲ್ಲಾ ಪ್ರಶ್ನೆಗಳಿಗೂ ಟ್ರೈಲರ್ ಮೂಲಕ ರಕ್ಷಿತ್ ಉತ್ತರ ನೀಡಿದ್ದಾರೆ.

    90ರ ದಶಕದ ಕಾಲಘಟ್ಟದ ಶೈಲಿಯನ್ನು ಅವನೇ ಶ್ರೀಮನ್ನಾರಾಯಣದಲ್ಲಿ ಮರುಸೃಷ್ಟಿಸಲಾಗಿದೆ. ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಕ್ಷಿತ್ ಶೆಟ್ಟಿ, ದರೋಡೆಕೋರರ ಗ್ಯಾಂಗ್ ಪ್ರವೇಶಿಸಿ ಅವರಿಗೆ ಪ್ರತಿ ಮಾತಿನಲ್ಲಿ ಚಮಕ್ ನೀಡುತ್ತಾರೆ. ದರೋಡೆಕೋರರು ಮತ್ತು ರಕ್ಷಿತ್ ಶೆಟ್ಟಿ ನಡುವಿನ ಫೈಟಿಂಗ್ ದೃಶ್ಯಗಳು ಸಿನಿಮಾ ಬಗೆಗಿನ ಕುತೂಹಲವನ್ನು ಹೆಚ್ಚುವಂತೆ ಮಾಡುತ್ತವೆ.

    ನಟ ರಕ್ಷಿತ್ ಶೆಟ್ಟಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದ ದಿನವೇ ಇಂದು ಟ್ರೈಲರ್ ರಿಲೀಸ್ ಮಾಡುವುದಾಗಿ ತಿಳಿಸಿದ್ದರು. ಅದರಂತೆಯೇ ಯೂಟ್ಯೂಬ್ ನಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಟ್ರೈಲರ್ ರಿಲೀಸ್ ಆಗಿದೆ. ತಮಿಳಿನಲ್ಲಿ ಸೂಪರ್ ಸ್ಟಾರ್ ಧನುಷ್, ತೆಲುಗು ಟ್ರೈಲರನ್ನು ನಟ ನಾನಿ ಮತ್ತು ಮಲೆಯಾಳಂ ನಟ ನಿವಿನ್ ಪೌಲಿ ಸಿನಿಮಾ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಟ್ರೈಲರ್ 4.14 ನಿಮಿಷಗಳಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಾತ್ರವಾಗಿದೆ.

    ಇದೇ ಮೊದಲ ಬಾರಿಗೆ ನಟ ರಕ್ಷಿತ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಜೋಡಿಯಾಗಿ ನಟಿ ಶಾನ್ವಿ ಶ್ರೀವಾಸ್ತವ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಸಚಿನ್ ರವಿ ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್ 27 ರಂದು ಸಿನಿಮಾ ಬಿಡುಗಡೆಯಾಗಲಿದೆ.