Tag: Authorization

  • ಅಧಿಕಾರ ಹಸ್ತಾಂತರ – ಕಣ್ಣೀರು ಹಾಕಿ ಬೆಂಗಳೂರು ಜನತೆಗೆ ನಮಸ್ಕರಿಸಿದ ಭಾಸ್ಕರ್ ರಾವ್

    ಅಧಿಕಾರ ಹಸ್ತಾಂತರ – ಕಣ್ಣೀರು ಹಾಕಿ ಬೆಂಗಳೂರು ಜನತೆಗೆ ನಮಸ್ಕರಿಸಿದ ಭಾಸ್ಕರ್ ರಾವ್

    ಬೆಂಗಳೂರು: ಅಧಿಕಾರ ಹಸ್ತಾಂತರದ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಕಣ್ಣೀರು ಹಾಕಿ ಬೆಂಗಳೂರು ಜನರಿಗೆ ತಲೆಬಾಗಿ ನಮಸ್ಕಾರ ಮಾಡಿದ್ದಾರೆ.

    ಕಳೆದ ಒಂದು ವರ್ಷಗಳ ಕಾಲ ಬೆಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರನ್ನು ಶುಕ್ರವಾರ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ನೂತನ ಕಮಿಷನರ್ ಆಗಿ ಕಮಲ್ ಪಂತ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇಂದು ಭಾಸ್ಕರ್ ರಾವ್ ಅವರು ಕಮಲ್ ಪಂತ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

    ಬ್ಯಾಟನ್ ನೀಡುವ ಮೂಲಕ ಭಾಸ್ಕರ್ ರಾವ್ ಅವರು ನೂತನ ಕಮಿಷನರ್ ಅಧಿಕಾರ ಹಸ್ತಾಂತರಿಸಿದರು. ಇದೇ ವೇಳೆ ಭಾವುಕರಾದ ಬಾಸ್ಕರ್ ರಾವ್ ಅವರು ಬೆಂಗಳೂರು ಜನತೆಗೆ ನಮಸ್ಕರಿಸಿ ನಿರ್ಗಮನ ಮಾಡಿದರು. ಈ ವೇಳೆ ಪೊಲೀಸರಿಂದ ನೂತನ ಕಮಿಷನರ್ ಗೆ ಗಾಡ್ ಅಪ್ ಹಾನರ್ ನೀಡಲಾಯ್ತು. ಇದಾದ ಬಳಿಕ ನಿರ್ಗಮಿತ ಕಮಿಷನರ್ ಹಾಗೂ ಹಾಲಿ ಕಮಿಷನರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು.

    ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೂತನ ಪೊಲೀಸ್ ಕಮಿಷನರ್ ಕಮಲ್ ಪಂತ್, ಸರ್ಕಾರದವರು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಸರ್ಕಾರ ಕೊಟ್ಟ ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ. ಕೋವಿಡ್ ಅನ್ನು ಪೊಲೀಸರು ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ. ಕೆಲವರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡುತ್ತೇನೆ. ಜನರಿಗಾಗಿ ಒಳ್ಳೆಯ ಕೆಲಸ ಮಾಡುತ್ತೇನೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ವಹಿಸಲಾಗುವುದರ ಜೊತೆಗೆ ರೌಡಿ ಚಟುವಟಿಕೆ ತಡೆಯಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.