Tag: australia

  • ವೀಡಿಯೋ: ಶಾಪಿಂಗ್ ಮಾಲ್‍ಗೆ ಅಪ್ಪಳಿಸಿದ ವಿಮಾನ- ಐವರ ಸಾವು

    ವೀಡಿಯೋ: ಶಾಪಿಂಗ್ ಮಾಲ್‍ಗೆ ಅಪ್ಪಳಿಸಿದ ವಿಮಾನ- ಐವರ ಸಾವು

    ಮೆಲ್ಬೋರ್ನ್: ವಿಮಾನವೊಂದು ಶಾಪಿಂಗ್ ಮಾಲ್‍ಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಇಂದು ಬೆಳಿಗ್ಗೆ 9 ಗಂಟೆ ವೇಳೆಯಲ್ಲಿ ಮೆಲ್ಬೋರ್ನ್‍ನ ಎಸ್ಸೆಂಡನ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಬೀಚ್‍ಕ್ರಾಫ್ಟ್ ಸೂಪರ್‍ಕಿಂಗ್ ಏರ್ 200 ವಿಮಾನ ಹತ್ತಿರದಲ್ಲೇ ಇದ್ದ ಶಾಪಿಂಗ್ ಮಾಲ್‍ಗೆ ಅಪ್ಪಳಿಸಿದೆ. ಇದರ ಪರಿಣಾಮ ವಿಮಾನದಲ್ಲಿದ್ದ ಪೈಲೆಟ್ ಹಾಗೂ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಎಂಜಿನ್ ಸಮಸ್ಯೆಯಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

    ವಿಮಾನದಲ್ಲಿದ್ದ ಪ್ರಯಾಣಿಕರು ಅಮೆರಿಕದವರಾಗಿದ್ದು ತಸ್ಮಾನಿಯಾದ ಕಿಂಗ್ ದ್ವೀಪಕ್ಕೆ ಗಾಲ್ಫ್ ಆಡಲು ತೆರಳುತ್ತಿದ್ದರು. ವಿಮಾನದ ಪೈಲೆಟ್ ಮ್ಯಾಕ್ ಕ್ವಾರ್ಟರ್‍ಮೈನ್‍ಗೆ ಪೈಲೆಟ್ ಆಗಿ ದಶಕಗಳ ಅನುಭವವಿತ್ತು ಎಂದು ಪತ್ರಿಕೆಗಳು ವರದಿ ಮಾಡಿವೆ.

    ಶಾಪಿಂಗ್ ಮಾಲ್ 10 ಗಂಟೆಗೆ ತೆರೆಯಬೇಕಿದ್ದರಿಂದ ಘಟನೆ ನಡೆದಾಗ ಮಾಲ್‍ನೊಳಗೆ ಗ್ರಾಹಕರಿರಲಿಲ್ಲ. ಅಲ್ಲದೆ ಮಾಲ್‍ನ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಮಾಲ್‍ನವರು ಹೇಳಿಕೆ ನೀಡಿದ್ದಾರೆ. ಘಟನೆಯಿಂದ ಮಾಲ್‍ನ ಚಾವಣಿಗೆ ಹಾನಿಯಾಗಿದೆ. 60ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯ ನಿರ್ವಹಿಸಿ ಬೆಂಕಿ ನಂದಿಸಿದ್ದಾರೆ.

    ವಿಮಾನ ಶಾಪಿಂಗ್ ಮಾಲ್‍ಗೆ ಅಪ್ಪಳಿಸುವ ದೃಶ್ಯ ಕಾರ್‍ವೊಂದರ ಡ್ಯಾಶ್‍ಕ್ಯಾಮ್‍ನಲ್ಲಿ ಸೆರೆಯಾಗಿದೆ.

    https://www.youtube.com/watch?v=9nljpCEYdy8

  • ವೀಡಿಯೋ: ಹೆಬ್ಬಾವು ನುಂಗಿದ್ದ ಟೆನ್ನಿಸ್ ಬಾಲ್ ಹೊರತೆಗೆದ್ರು!

    ಸಿಡ್ನಿ: ಸಾಮಾನ್ಯವಾಗಿ ಹೆಬ್ಬಾವುಗಳು ಮೊಲ, ನಾಯಿ, ಕುರಿಯಂತಹ ಪ್ರಾಣಿಗಳನ್ನ ತಿಂದು ಅವುಗಳ ಹೊಟ್ಟೆ ಊದಿಕೊಂಡಿರೋದನ್ನ ನೋಡಿರ್ತೀರ. ಹಾಗೆ ಕೆಲವೊಮ್ಮೆ ಹೆಬ್ಬಾವುಗಳು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ನುಂಗಿಬಿಡುತ್ತವೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಹೆಬ್ಬಾವೊಂದರ ಬಾಯಿಯಿಂದ ಟೆನ್ನಿಸ್ ಬಾಲ್ ಹೊರತೆಗೆಯೋ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸುಮಾರು 20 ನಿಮಿಷಗಳ ಕಾಲ ಪ್ರಯತ್ನಿಸಿ ಕೊನೆಗೂ ಹಾವು ನುಂಗಿದ್ದ ಟೆನ್ನಿಸ್ ಬಾಲ್ ಹೊರತೆಗೆಯಲಾಗಿದೆ.

    ಆಸ್ಟ್ರೇಲಿಯಾದ ಟೌನ್ಸ್ ವಿಲ್ಲೆಯ ಬೆಲ್ಜಿಯನ್ ಗಾಡನ್ಸ್ ನಿವಾಸಿಯೊಬ್ಬರು ತಮ್ಮ ಮನೆಯ ಹಿತ್ತಲಿನಲ್ಲಿ ಈ ಹಾವು ಹರಿದಾಡೋದನ್ನ ನೋಡಿದ್ದರು. ಅದರ ದೇಹದಲ್ಲಿ ಏನೋ ಗೆಡ್ಡೆಯಂತಿರುವುದನ್ನು ನೋಡಿ ಉರಗ ತಜ್ಞ ಬ್ರೇನ್ ವೆಸ್ಟ್ ಅವರಿಗೆ ವಿಷಯ ತಿಳಿಸಿದ್ರು. ಬ್ರೇನ್ ವೆಸ್ಟ್ ಈ ಹಾವನ್ನು ಟೌನ್ಸ್ ವಿಲ್ಲೆಯ ಪಶುವೈದ್ಯಾಲಯಕ್ಕೆ ಕರೆದೊಯ್ದರು.

    ಅಲ್ಲಿನ ವೈದ್ಯರಾದ ಟ್ರಿಶ್ ಪ್ರೆಂಡರ್‍ಗಾಸ್ಟ್, ಹಾವಿನ ಎಕ್ಸ್- ರೇ ತೆಗೆದರು. ಹಾವು ನುಂಗಿದ್ದ ಚೆಂಡು ಗಂಟಲಿನಿಂದ ತುಂಬಾ ಒಳಗೆ ಹೋಗಿಲ್ಲವಾದ್ದರಿಂದ ಅದನ್ನು ಹೊರತೆಗೆಯಬಹುದು ಎಂದು ವೈದ್ಯರು ಹೇಳಿದ್ದರು. ನಂತರ ಹಾವಿನ ಗಂಟಲಿನ ಭಾಗದಲ್ಲಿ ಮಸಾಜ್ ಮಾಡಿ ಬಾಲ್ ಹೊರತೆಗೆದಿದ್ದಾರೆ. ಈ ಹಾವಿಗೆ ಕೆಲ ದಿನ ಚಿಕಿತ್ಸೆ ನೀಡಿ ನಂತರ ಅರಣ್ಯಕ್ಕೆ ಬಿಡಲಾಗುತ್ತದೆ ಎಂದು ಹೇಳಿದ್ದಾರೆ.

    ಬುಧವಾರದಂದು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಆಗಿರೋ ಈ ವೀಡಿಯೋ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

    https://www.youtube.com/watch?v=P1diUY5WGO4

  • ಆಸ್ಟ್ರೇಲಿಯಾದಲ್ಲಿ ಆಪ್ತರಿಂದಲೇ ಟೆಕ್ಕಿ ಪ್ರಭಾ ಹತ್ಯೆ? ರಾಜ್ಯದಿಂದಲೇ ಸುಪಾರಿ?

    ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಹತ್ಯೆ ಗೀಡಾದ ನಗರದ ಸಾಫ್ಟ್ ವೇರ್ ಉದ್ಯೋಗಿ ಪ್ರಭಾಶೆಟ್ಟಿ(41) ಅವರನ್ನು ಆಪ್ತರೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾರಾ ಎನ್ನುವ ಶಂಕೆ ಈಗ ಎದ್ದಿದೆ.

    ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಡ್ನಿಯ ಪರ್ರಾಮಟ್ಟ ಪೊಲೀಸರು, ಪ್ರಭಾ ಶೆಟ್ಟಿ ಕುಟುಂಬದ ಆಪ್ತರಿಂದಲೇ ಹತ್ಯೆ ನಡೆದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಸದ್ಯದಲ್ಲೇ ಈ ಕೊಲೆಯ ರಹಸ್ಯ ಬಹಿರಂಗವಾಗಲಿದೆ ಎಂದು ಅಲ್ಲಿನ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಸಿಐಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಬೆಂಗಳೂರಿಗೆ ಬಂದಿದ್ದ ತಂಡ: ನ್ಯೂ ಸೌತ್ ವೇಲ್ಸ್ ಪೊಲೀಸ್ ತಂಡ ಜ.14ರಂದು ಬೆಂಗಳೂರಿಗೆ ಆಗಮಿಸಿದ ಪ್ರಭಾ ಕುಟುಂಬದ 28 ಮಂದಿಯನ್ನು ವಿಚಾರಣೆ ನಡೆಸಿದ್ದರು. ಪ್ರಭಾ ಪತಿ ಅರುಣ್‍ಕುಮಾರ್, ಅತ್ತೆ, ಮಾವ, ಬಾವಂದಿರು, ಬಂಟ್ವಾಳದ ಅಮ್ಟೂರಿನಲ್ಲಿರುವ ಪ್ರಭಾ ಪೋಷಕರು, ಸಹೋದರರು, ಅಷ್ಟೇ ಅಲ್ಲದೇ ಪ್ರಭಾ ಕೆಲಸ ಮಾಡುತ್ತಿದ್ದ `ಮೈಂಡ್ ಟ್ರೀ’ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಹರಿಪ್ರಸಾದ್, ಶ್ವೇತಾ ಸೇರಿದಂತೆ ಹಲವರ ವಿಚಾರಣೆ ನಡೆಸಿ ವಿಡಿಯೋ ರೆಕಾರ್ಡ್ ಮಾಡಿ ಜ.28ರಂದು ಆಸ್ಟ್ರೇಲಿಯಾಗೆ ತೆರಳಿತ್ತು.

    ಶಂಕೆ ಮೂಡಿದ್ದು ಯಾಕೆ?
    ಆಸ್ತಿ ವಿಚಾರವಾಗಿ ಸಂಬಂಧಿಯೊಬ್ಬ ಪ್ರಭಾ ಪೋಷಕರ ಜೊತೆ ಗಲಾಟೆ ಮಾಡುತ್ತಿದ್ದ. ಮದುವೆಯಾಗಿದ್ದರೂ ಆತ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಹೊಂದಿದ್ದ. ಆಸ್ತಿಯನ್ನು ಪಡೆದು ಆಕೆಯನ್ನು ಮದುವೆಯಾಗಲು ಆತ ಮುಂದಾಗಿದ್ದ. ಆದರೆ ಆತನ ಈ ಪ್ರಯತ್ನಕ್ಕೆ ಪ್ರಭಾ ಅಡ್ಡಿಯಾಗಿದ್ದರು. 2015ರಲ್ಲಿ ಪ್ರಭಾ ಬೆಂಗಳೂರಿಗೆ ಹಿಂದಿರಗಬೇಕಿತ್ತು. ಈ ವಿಚಾರ ತಿಳಿದು ಆಸ್ಟ್ರೇಲಿಯಾದಲ್ಲಿ ಸಂಬಂಧಿ ಹೊಂದಿದ್ದ ಈತ ಅಲ್ಲೇ ಸುಪಾರಿ ನೀಡಿ ಹತ್ಯೆ ಮಾಡಿಸಿರಬಹುದು ಎನ್ನುವ ಶಂಕೆಯ ಆಧಾರದಲ್ಲಿ ಪೊಲೀಸರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಆ ಸಂಬಂಧಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

    `ಮೈಂಡ್ ಟ್ರಿ’ ಕಂಪೆನಿಯಲ್ಲಿ ಸೀನಿಯರ್ ಟೆಕ್ನಿಕಲ್ ಅನಲಿಸ್ಟ್ ಆಗಿದ್ದ ಪ್ರಭಾ, 2012 ರಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಸ್ಟ್ರಾತ್‍ಫೀಲ್ಡ್ ಪ್ರದೇಶದಲ್ಲಿ ನೆಲೆಸಿದ್ದ ಅವರು, 2015ರ ಮಾರ್ಚ್ 7ರಂದು ಕಚೇರಿಯಿಂದ ಬರುತ್ತಿದ್ದಾಗ ಮನೆಯಿಂದ 300 ಮೀಟರ್ ದೂರದಲ್ಲೇ ಬರ್ಬರವಾಗಿ ಕೊಲೆಯಾಗಿದ್ದರು.

    ಕೊಲೆ ತನಿಖೆಯ ವಿಚಾರಣೆ ಆರಂಭಿಸಿದ್ದ ಅಲ್ಲಿನ ಪೊಲೀಸರು 2016ರ ಫೆಬ್ರವರಿವರೆಗೆ ಎರಡು ಸಾವಿರ ಜನರನ್ನು ವಿಚಾರಣೆ ನಡೆಸಿ, 250 ಹೇಳಿಕೆಗಳನ್ನು ಪಡೆದಿದ್ದರು. ಆದರೂ ಆರೋಪಿಯ ಸುಳಿವು ಸಿಕ್ಕಿರಲಿಲ್ಲ.