Tag: australia

  • ಕೊಹ್ಲಿ ಸೆಂಚುರಿ ದಾಖಲೆಯನ್ನೂ ಮುರಿದ್ಳು!

    ಕೊಹ್ಲಿ ಸೆಂಚುರಿ ದಾಖಲೆಯನ್ನೂ ಮುರಿದ್ಳು!

    ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಾಖಲೆಯನ್ನು ಮಹಿಳೆಯೊಬ್ಬಳು ಮುರಿದಿದ್ದಾಳೆ ಎಂದರೆ ನೀವು ನಂಬ್ತೀರಾ..? ಹೌದು, ಟೀಂ ಇಂಡಿಯಾದ ಕೊಹ್ಲಿ, ದಕ್ಷಿಣ ಆಫ್ರಿಕಾದ ಹಶೀಂ ಆಮ್ಲ ದಾಖಲೆ ಧೂಳೀಪಟವಾಗಿದೆ.

    ನಾವೂ ಪುರುಷರಿಗಿಂತ ಯಾವುದರಲ್ಲೂ ಕಮ್ಮಿಯಿಲ್ಲ ಎಂಬಂತೆ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ಆಟಗಾರ್ತಿ ಮೆಗ್ ಲ್ಯಾನ್ನಿಂಗ್ ಅತ್ಯಂತ ಕಡಿಮೆ ಇನ್ನಿಂಗ್ಸ್‍ನಲ್ಲಿ 11 ಶತಕಗಳನ್ನು ಬಾರಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ದಾಖಲೆ ಬರೆದಿದ್ದಾರೆ.

    2017ರ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಶ್ರೀಲಂಕಾದ 258 ಮೊತ್ತವನ್ನ ಬೆನ್ನಟ್ಟಿ 8 ವಿಕೆಟ್‍ಗಳ ಭರ್ಜರಿ ಜಯ ಗಳಿಸಿತು. ಈ ಪಂದ್ಯದಲ್ಲಿ ಮೆಗ್ ಲ್ಯಾನ್ನಿಂಗ್ ಏಕದಿನ ಪಂದ್ಯಗಳಲ್ಲಿನ 11ನೇ ಸೆಂಚುರಿ ಬಾರಿಸಿ ದಾಖಲೆ ಬರೆದರು.

    ಆಸ್ಟ್ರೇಲಿಯಾ ತಂಡದ ನಾಯಕಿಯಾದ ಲ್ಯಾನ್ನಿಂಗ್ 59 ಇನ್ನಿಂಗ್ಸ್ ನಲ್ಲಿ 11 ಸೆಂಚುರಿ ಬಾರಿಸಿದ್ದು, ಪುರುಷ ಕ್ರಿಕೆಟ್ ಆಟಗಾರರಾದ ಹಶೀಮ್ ಅಮ್ಲಾ, ಕ್ವಿಂಟನ್ ಡಿ ಕಾಕ್ ಹಾಗೂ ಟೀಂ ಇಂಡಿಯಾ ನಾಯಕ ಕೊಹ್ಲಿ ಅವರ ದಾಖಲೆಯನ್ನ ಮುರಿದಿದ್ದಾರೆ. ಅಮ್ಲಾ 64 ಇನ್ನಿಂಗ್ಸ್‍ನಲ್ಲಿ 11 ಸೆಂಚುರಿ ಬಾರಿಸಿದ್ದರು. ಡಿ ಕಾಕ್ 65 ಇನ್ನಿಂಗ್ಸ್ ಹಾಗೂ ವಿರಾಟ್ ಕೊಹ್ಲಿ 82 ಇನ್ನಿಂಗ್ಸ್‍ನಲ್ಲಿ 11 ಶತಕಗಳನ್ನ ಬಾರಿಸಿದ್ದರು.

    ಮತ್ತೊಂದು ವಿಶೇಷತೆ ಅಂದ್ರೆ ಲ್ಯಾನ್ನಿಂಗ್ ಈ 11 ಶತಕಗಳಲ್ಲಿ 8 ಶತಕಗಳನ್ನ ಎದುರಾಳಿ ತಂಡದ ಮೊತ್ತವನ್ನ ಬೆನ್ನಟ್ಟಿದ ವೇಳೆ ಪೂರೈಸಿದ್ದು, ಈ ಎಲ್ಲಾ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಜಯಗಳಿಸಿದೆ. ಪುರುಷರ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ ಈವರೆಗೆ 62 ಇನ್ನಿಂಗ್ಸ್‍ನಲ್ಲಿ ಯಶಸ್ವಿ ಚೇಸಿಂಗ್‍ನಲ್ಲಿ 15 ಸೆಂಚುರಿ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ಲ್ಯಾನ್ನಿಂಗ್ ಅವರು ಗೇಲ್, ಗಿಲ್‍ಕ್ರಿಸ್ಟ್ ಹಾಗೂ ರಿಕಿ ಪಾಂಟಿಂಗ್ ಅವರಿಗಿಂತ ಮುಂಚೂಣಿಯಲ್ಲಿದ್ದಾರೆ.

    ಲ್ಯಾನ್ನಿಂಗ್ 2011ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಮೊದಲ ಏಕದಿನ ಪಂದ್ಯವನ್ನ ಆಡಿದ್ದು, ಈವರೆಗೆ 59 ಪಂದ್ಯಗಳಲ್ಲಿ 2835 ರನ್ ಗಳಿಸಿದ್ದಾರೆ. 11 ಸೆಂಚುರಿಗಳ ದಾಖಲೆಯ ಜೊತೆಗೆ 10 ಅರ್ಧ ಶತಕಗಳನ್ನ ಬಾರಿಸಿದ್ದಾರೆ. ಮಹಿಳಾ ಕ್ರಿಕೆಟ್ ನಲ್ಲಿ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಹೆಗ್ಗಳಿಕೆಗೆ ಲ್ಯಾನ್ನಿಂಗ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಶಾರ್ಲೊಟ್ ಎಡ್ವಡ್ರ್ಸ್ 9 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ನ್ಯೂಜಿಲ್ಯಾಂಡ್‍ನ ಸೂಝಿ ಬೇಟ್ಸ್ 8 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

  • ಹಸಿವಾಯ್ತೆಂದು McDonald’s ಬಳಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲೆಟ್!

    ಹಸಿವಾಯ್ತೆಂದು McDonald’s ಬಳಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲೆಟ್!

    ಸಿಡ್ನಿ: ಕಾರಿನಲ್ಲೋ ಬೈಕ್‍ನಲ್ಲೋ ಹೋಗುವಾಗ ಅಂಗಡಿಯ ಮುಂದೆ ಗಾಡಿ ನಿಲ್ಲಿಸಿ ತಿಂಡಿ ತೆಗೆದುಕೊಳ್ಳೋದು ಕಾಮನ್. ಆದ್ರೆ ಹೆಲಿಕಾಪ್ಟರ್‍ನಲ್ಲಿ ಹೋಗ್ಬೇಕಾದ್ರೆ ಹಸಿವಾದ್ರೆ ಏನು ಮಾಡೋದು? ಪೈಲೆಟ್‍ವೊಬ್ಬರು ಹಸಿವಾಯಿತೆಂಬ ಕಾರಣಕ್ಕೆ ಮ್ಯಾಕ್ ಡೊನಾಲ್ಡ್ಸ್ ರೆಸ್ಟೊಂರೆಂಟ್ ಆವರಣದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ತಿನಿಸನ್ನು ಪಾರ್ಸೆಲ್ ತೆಗೆದುಕೊಂಡು ಮತ್ತೆ ಟೇಕ್ ಆಫ್ ಮಾಡಿದ ಘಟನೆ ಶನಿವಾರ ಸಂಜೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ನೈನ್ ನ್ಯೂಸ್ ಆಸ್ಟ್ರೇಲಿಯಾ ವರದಿಯ ಪ್ರಕಾರ ಸಿಡ್ನಿಯ ಮ್ಯಾಕ್ ಡೊನಾಲ್ಡ್ಸ್ ರೆಸ್ಟೊರೆಂಟಿನ ಬಳಿಯ ನಿವಾಸಿಗಳು ಹುಲ್ಲುಹಾಸಿನ ಮೇಲೆ ಹೆಲಿಕಾಪ್ಟರ್ ಲ್ಯಾಂಡ್ ಆಗೋದನ್ನ ನೋಡಿ ದಂಗಾಗಿದ್ದಾರೆ. ಇದನ್ನ ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿ ಸುದ್ದಿ ವಾಹಿನಿಯೊಂದಕ್ಕೆ ಕಳಿಸಿದ್ದಾರೆ. ಪೈಲೆಟ್ ತಿಂಡಿಯ ಪ್ಯಾಕೆಟ್‍ನೊಂದಿಗೆ ಹೊರಬಂದು ಮತ್ತೆ ಹೆಲಿಕಾಪ್ಟರ್ ಏರಿ ಟೇಕ್ ಆಫ್ ಆಗೋದನ್ನ ವಿಡಿಯೋದಲ್ಲಿ ನೋಡಬಹುದು. ಇದೇ ವೇಳೆ “ನಾನು ಇದೇನೋ ತುರ್ತು ಭೂಸ್ಪರ್ಶವಿರಬಹುದು ಎಂದುಕೊಂಡಿದ್ದೆ” ಅಂತ ವ್ಯಕ್ತಿಯೊಬ್ಬರು ಹೇಳೋದನ್ನ ಕೇಳಬಹುದು.

    ಆಸ್ಟ್ರೇಲಿಯಾದ ನಾಗರೀಕ ವಿಮಾನಯಾನ ಸಂಸ್ಥೆಯ ವಕ್ತಾರರು ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ಒಂದು ವೇಳೆ ಪೈಲೆಟ್‍ಗೆ ನಿರ್ದಿಷ್ಟ ಭೂಮಿಯ ಮಾಲೀಕನ ಸಮ್ಮತಿ ಇದ್ದರೆ ಹೆಲಿಕಾಪ್ಟರ್ ಲ್ಯಾಂಡ್ ಮಾಡೋದು ತಾಂತ್ರಿಕವಾಗಿ ಕಾನೂನು ಬಾಹಿರವಲ್ಲ ಎಂದಿದ್ದಾರೆ.

    ಅಧಿಕಾರಿಗಳು ಪೈಲೆಟ್ ಯಾರೆಂಬುದನ್ನು ದೃಢಪಡಿಸಿಲ್ಲ. ಆದ್ರೆ ಆಸ್ಟ್ರೇಲಿಯಾದ ಪ್ರಸಿದ್ಧ ರೇಡಿಯೋ ಚಾನೆಲ್‍ನಲ್ಲಿ ತಾನು ಪೈಲೆಟ್ ಎಂದು ಮಾತನಾಡಿದ ವ್ಯಕ್ತಿ ನನಗೆ ಮ್ಯಾಕ್ ಡೊನಾಲ್ಡ್ಸ್ ಆವರಣದಲ್ಲಿ ಲ್ಯಾಂಡ್ ಮಾಡಲು ಅನುಮತಿ ಇದೆ. ಆಗಾಗ ನಾವು ಈ ರೀತಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.

    ಪೈಲೆಟ್ ಹೆಲಿಕಾಪ್ಟರನ್ನು ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಮಾಡುವಾಗಿನ ಸುರಕ್ಷತೆಯ ಬಗ್ಗೆ ಹಾಗೂ ಈ ವಿಡಿಯೋ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

    https://www.youtube.com/watch?v=iYMqdEZcf8o

  • ಭಾರತದ ವಿರುದ್ಧ ಆಸೀಸ್ ಸೋತಿದ್ದೂ ಮಾತ್ರವಲ್ಲ, ಈಗ 3.25 ಕೋಟಿಯ ಬಹುಮಾನವೂ ಹೋಯ್ತು!

    ಭಾರತದ ವಿರುದ್ಧ ಆಸೀಸ್ ಸೋತಿದ್ದೂ ಮಾತ್ರವಲ್ಲ, ಈಗ 3.25 ಕೋಟಿಯ ಬಹುಮಾನವೂ ಹೋಯ್ತು!

    ನವದೆಹಲಿ: ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಸೋತಿದ್ದು ಮಾತ್ರವಲ್ಲ ಆಸ್ಟ್ರೇಲಿಯಾ ಈಗ ಐಸಿಸಿ ನೀಡುವ 3.25 ಕೋಟಿ ರೂ. ಬಹುಮಾನವನ್ನೂ ಕಳೆದುಕೊಂಡಿದೆ.

    ಹೌದು. ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ವೆಲ್ಲಿಂಗ್ಟನ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಕಾರಣ ಆಸ್ಟ್ರೇಲಿಯಾ ಐಸಿಸಿ ಬಹುಮಾನವನ್ನು ಕಳೆದುಕೊಂಡಿದೆ.

    ಮಂಗಳವಾರ ಭಾರತ ವಿರುದ್ಧ 8 ವಿಕೆಟ್‍ಗಳಿಂದ ಸೋತಿದ್ದ ಆಸ್ಟ್ರೇಲಿಯಾ 108 ರೇಟಿಂಗ್ ಸಂಪಾದಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ 107 ರೇಟಿಂಗ್‍ನೊಂದಿಗೆ ಮೂರನೇ ಸ್ಥಾನದಲ್ಲಿದಲ್ಲಿತ್ತು. ಆದರೆ ಬುಧವಾರ ದಕ್ಷಿಣ ಆಫ್ರಿಕಾ ಪಂದ್ಯವನ್ನು ಡ್ರಾ ಮಾಡಿಕೊಂಡ ಪರಿಣಾಮ ಅಂಕ ಪಟ್ಟಿಯಲ್ಲಿ ಏರಡನೇ ಸ್ಥಾನಕ್ಕೆ ಏರಿದೆ.

    ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಗಳಿಗೆ ಐಸಿಸಿ ನಗದು ಬಹುಮಾನ ನೀಡಿ ಪುರಸ್ಕರಿಸುತ್ತದೆ. ಹೀಗಾಗಿ ಈ ಬಾರಿ ದಕ್ಷಿಣ ಆಫ್ರಿಕಾಗೆ 5ಲಕ್ಷ ಡಾಲರ್(ಅಂದಾಜು 3.25 ಕೋಟಿ ರೂ.) ಬಹುಮಾನ ಸಿಕ್ಕಿದರೆ, ಆಸ್ಟ್ರೇಲಿಯಾಗೆ 2 ಲಕ್ಷ ಡಾಲರ್(ಅಂದಾಜು 1.3 ಕೋಟಿ ರೂ.) ಬಹುಮಾನ ಸಿಕ್ಕಿದೆ. 101 ರೇಟಿಂಗ್‍ನೊಂದಿಗೆ 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್‍ಗೆ 1 ಲಕ್ಷ ಡಾಲರ್(65 ಲಕ್ಷ ರೂ.) ಬಹುಮಾನ ಸಿಕ್ಕಿದೆ.

    ನ್ಯೂಜಿಲೆಂಡ್ ಒಂದು ವೇಳೆ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದರೆ ಆಸ್ಟ್ರೇಲಿಯಾಗೆ ಎರಡನೇ ಶ್ರೇಯಾಂಕ ಸಿಗುತಿತ್ತು. ಮೂರು ಟೆಸ್ಟ್ ಸರಣಿಯ ಮೊದಲ ಮತ್ತು ಕೊನೆಯ ಟೆಸ್ಟ್ ಡ್ರಾ ಕಂಡಿದ್ದರೆ, ಎರಡನೇ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ 8 ವಿಕೆಟ್‍ಗಳಿಂದ ಗೆದ್ದುಕೊಂಡಿತ್ತು.

    ಟೀಂ ಇಂಡಿಯಾಗೆ ಎಷ್ಟು ಬಹುಮಾನ?
    122 ರೇಟಿಂಗ್ ಪಡೆದು ಮೊದಲ ಸ್ಥಾನದಲ್ಲಿರುವ ಭಾರತಕ್ಕೆ 10 ಲಕ್ಷ ಡಾಲರ್(ಅಂದಾಜು 6.51 ಕೋಟಿ ರೂ) ಬಹುಮಾನ ಸಿಕ್ಕಿದೆ. ಐಸಿಸಿ ಈ ಬಹುಮಾನದ ಜೊತೆ ತವರಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ಟೀಂ ಇಂಡಿಯಾಗೆ ಬಿಸಿಸಿಐನಿಂದಲೂ ಬಹುಮಾನ ಸಿಕ್ಕಿದೆ.

    ತಂಡದ ಪ್ರತಿ ಸದಸ್ಯರಿಗೆ 50 ಲಕ್ಷ ರೂ. ಮುಖ್ಯ ಕೋಚ್ ಅನಿಲ್ ಕುಂಬ್ಳೆಗೆ 25 ಲಕ್ಷ ರೂ. ಸಹಾಯಕ ಸಿಬ್ಬಂದಿಗೆ 15 ಲಕ್ಷ ರೂ. ನೀಡುವುದಾಗಿ ಬಿಸಿಸಿಐ ಪ್ರಕಟಿಸಿದೆ.

    ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ಐಸಿಸಿಯ ಗಾರ್ಫೀಲ್ಡ್ ಸೋಬಾರ್ಸ್ ಪ್ರಶಸ್ತಿ ಆರ್ ಅಶ್ವಿನ್‍ಗೆ ಸಿಕ್ಕಿದೆ.

    ಇದನ್ನೂ ಓದಿ: ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ನಂಬರ್ ಒನ್ ಪಟ್ಟಕ್ಕೆ ಏರಿದ ಕಥೆ ಓದಿ

     

  • ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ನಂಬರ್ ಒನ್ ಪಟ್ಟಕ್ಕೆ ಏರಿದ ಕಥೆ ಓದಿ

    ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ನಂಬರ್ ಒನ್ ಪಟ್ಟಕ್ಕೆ ಏರಿದ ಕಥೆ ಓದಿ

    ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇಯ ಟೆಸ್ಟ್ ಪಂದ್ಯವನ್ನು 8 ವಿಕೆಟ್‍ಗಳಿಂದ ಜಯಗಳಿಸುವ ಮೂಲಕ ಭಾರತ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದು, ಟೆಸ್ಟ್ ಗದೆಯನ್ನು ಸ್ವೀಕರಿಸಿದೆ. ಇದರ ಜೊತೆಗೆ ಐಸಿಸಿಯ 10 ಲಕ್ಷ ಡಾಲರ್(ಅಂದಾಜು 6.51 ಕೋಟಿ ರೂ) ಬಹುಮಾನವನ್ನು ಗೆದ್ದುಕೊಂಡಿದೆ.

    ಪ್ರತಿ ವರ್ಷ ಏಪ್ರಿಲ್ 1ರ ಒಳಗಡೆ ಟಾಪ್ ಸ್ಥಾನಗಳಲ್ಲಿರುವ ತಂಡಗಳಿಗೆ ಐಸಿಸಿ ನಗದು ಬಹುಮಾನ ನೀಡುತ್ತಾ ಬಂದಿದೆ. ಟೀಂ ಇಂಡಿಯಾ 122 ರೇಟಿಂಗ್  ಪಡೆಯುವ ಮೂಲಕ ನಂಬರ್ ಒನ್ ಸ್ಥಾನದಲ್ಲಿದ್ದರೆ, 108 ರೇಟಿಂಗ್ ನೊಂದಿಗೆ ಆಸ್ಟ್ರೇಲಿಯಾ ನಂಬರ್ 2 ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ 107 ರೇಟಿಂಗ್ ಗಳಿಸಿರುವ ದಕ್ಷಿಣ ಆಫ್ರಿಕಾ ಇದ್ದರೆ, 101 ರೇಟಿಂಗ್ ನೊಂದಿಗೆ ಇಂಗ್ಲೆಂಡ್ 4ನೇ ಸ್ಥಾನದಲ್ಲಿದೆ.

    ದ್ವಿತೀಯ ಸ್ಥಾನ ಪಡೆದಿರುವ ಆಸ್ಟ್ರೇಲಿಯಾಗೆ 5ಲಕ್ಷ ಡಾಲರ್(ಅಂದಾಜು 3.25 ಕೋಟಿ ರೂ.), ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾಗೆ 2 ಲಕ್ಷ ಡಾಲರ್(ಅಂದಾಜು 1.3 ಕೋಟಿ ರೂ.) ಬಹುಮಾನ ಸಿಕ್ಕಿದೆ. 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್‍ಗೆ 1 ಲಕ್ಷ ಡಾಲರ್(65 ಲಕ್ಷ ರೂ.) ಬಹುಮಾನ ಸಿಕ್ಕಿದೆ.

    ಟೀಂ ಇಂಡಿಯಾಗೆ ಬಹುಮಾನ ಸಿಕ್ಕಿದ ಹಿನ್ನೆಲೆಯಲ್ಲಿ ಭಾರತ 2016-17ರ ಅವಧಿಯಲ್ಲಿ ಗೆದ್ದಿರುವ ಟೆಸ್ಟ್ ಸರಣಿಯ ವಿವರವನ್ನು ಇಲ್ಲಿ ನೀಡಲಾಗಿದೆ

    ನ್ಯೂಜಿಲೆಂಡ್ ವಿರುದ್ಧ 3-0 ಗೆಲುವು
    ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ 197 ರನ್‍ಗಳಿಂದ ಗೆದ್ದುಕೊಂಡಿದ್ದರೆ, ಕೋಲ್ಕತ್ತಾದಲ್ಲಿ ನಡೆದ ಎರಡನೇ ಪಂದ್ಯವನ್ನು 178 ರನ್‍ಗಳಿಂದ ಗೆದ್ದುಕೊಂಡಿತ್ತು. ಇಂದೋರ್‍ನಲ್ಲಿ ನಡೆದ ಮೂರನೇ ಪಂದ್ಯವನ್ನು 321 ರನ್‍ಗಳಿಂದ ಗೆಲ್ಲುವ ಮೂಲಕ ಭಾರತ ಕ್ಲೀನ್‍ಸ್ವೀಪ್ ಮಾಡಿಕೊಂಡಿತ್ತು. ಈ ಸರಣಿಯಲ್ಲಿ ಅಶ್ವಿನ್‍ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿತ್ತು.

    ಇಂಗ್ಲೆಂಡ್ ವಿರುದ್ಧ 4-0 ಗೆಲುವು
    ರಾಜ್‍ಕೋಟ್‍ನಲ್ಲಿ ನಡೆದ ಮೊದಲ ಪಂದ್ಯ ಡ್ರಾ ಆಗಿದ್ದರೆ, ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 246 ರನ್‍ಗಳಿಂದ ಗೆದ್ದುಕೊಂಡಿತ್ತು. ಮೊಹಾಲಿಯಲ್ಲಿ ನಡೆದ ಮೂರನೇ ಪಂದ್ಯವನ್ನು 8ವಿಕೆಟ್‍ಗಳಿಂದ ಗೆದ್ದುಕೊಂಡಿದ್ದರೆ, ಮುಂಬೈ ನಲ್ಲಿ ನಡೆದ ನಾಲ್ಕನೇಯ ಪಂದ್ಯವನ್ನು ಇನ್ನಿಂಗ್ಸ್ ಮತ್ತು 36 ರನ್‍ಗಳಿಂದ ಗೆದ್ದುಕೊಂಡಿತ್ತು. ಚೆನ್ನೈನಲ್ಲಿ ನಡೆದ 5 ಪಂದ್ಯವನ್ನು ಭಾರತ 1 ಇನ್ನಿಂಗ್ಸ್ ಮತ್ತು 75 ರನ್‍ಗಳಿಂದ ಗೆದ್ದುಕೊಂಡಿತ್ತು. ಸರಣಿಯಲ್ಲಿನ ಅತ್ಯುತ್ತಮ ಆಟಕ್ಕಾಗಿ ವಿರಾಟ್ ಕೊಹ್ಲಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

    ಬಾಂಗ್ಲಾ ವಿರುದ್ಧ ಏಕೈಕ ಸರಣಿ ಜಯ
    ಹೈದರಾಬಾದ್‍ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ 208 ರನ್‍ಗಳಿಂದ ಗೆದ್ದುಕೊಂಡಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 204 ರನ್, ಎರಡನೇ ಇನ್ನಿಂಗ್ಸ್ ನಲ್ಲಿ 38 ರನ್ ಹೊಡೆದ ವಿರಾಟ್ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

    ಆಸ್ಟ್ರೇಲಿಯಾ ವಿರುದ್ಧ 2-1 ಸರಣಿ ಜಯ
    ಪುಣೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‍ಗಳಿದ್ದ ಗೆದ್ದುಕೊಂಡಿದ್ದರೆ, ಬೆಂಗಳೂರಿನಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಂಡಿತು. ರಾಂಚಿಯಲ್ಲಿ ನಡೆದ ಮೂರನೇ ಪಂದ್ಯ ಡ್ರಾ ಕಂಡಿತ್ತು. ಹಿಮಾಚಲ ಪ್ರದೇಶ ಧರ್ಮಶಾಲಾದಲ್ಲಿ ನಡೆದ ಕೊನೆಯ ಪಂದ್ಯವನ್ನು ಭಾರತ 8 ವಿಕೆಟ್‍ಗಳಿಂದ ಗೆದ್ದುಕೊಳ್ಳುವ ಮೂಲಕ ಬಾರ್ಡರ್ ಗಾವಸ್ಕರ್ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕೆ ರವೀಂದ್ರ ಜಡೇಜಾ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿದೆ.

    ಟೆಸ್ಟ್ ನಲ್ಲಿ ನಮ್ಮವರೇ ಮಿಂಚಿಂಗ್:
    ಬ್ಯಾಟ್ಸ್ ಮನ್‍ಗಳ ಪೈಕಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ 941 ರೇಟಿಂಗ್ ಪಡೆಯುವ ಮೂಲಕ ಮೊದಲನೇಯ ಸ್ಥಾನದಲ್ಲಿದ್ದರೆ, ಚೇತೇಶ್ವರ ಪೂಜಾರ 861  ರೇಟಿಂಗ್  ನೊಂದಿಗೆ  ದ್ವಿತೀಯ ಶ್ರೇಯಾಂಕ ಪಡೆದಿದ್ದಾರೆ. ಬೌಲಿಂಗ್‍ನಲ್ಲಿ ರವೀಂದ್ರ ಜಡೇಜಾ 899 ರೇಟಿಂಗ್ ಪಡೆಯುವ  ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಆರ್ ಅಶ್ವಿನ್ 862 ರೇಟಿಂಗ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

    ಇನ್ನು ಅಲ್‍ರೌಂಡರ್ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 431 ರೇಟಿಂಗ್ ಗಳಿಸಿ ಮೊದಲ ಸ್ಥಾನಗಳಿಸಿದ್ದರೆ, ಆರ್ ಅಶ್ವಿನ್ 407 ರೇಟಿಂಗ್ ಗಳಿಸಿ  ಎರಡನೇ ಶ್ರೇಯಾಂಕ, ಜಡೇಜಾ 387 ರೇಟಿಂಗ್ ಗಳಿಸಿ ಮೂರನೇ ಶ್ರೇಯಾಂಕ ಪಡೆದಿದ್ದಾರೆ.

     

  • ಯುಗಾದಿ ಗಿಫ್ಟ್: 2-1 ಅಂತರದಿಂದ ಟೆಸ್ಟ್ ಸರಣಿ ಗೆದ್ದ ಭಾರತ

    ಯುಗಾದಿ ಗಿಫ್ಟ್: 2-1 ಅಂತರದಿಂದ ಟೆಸ್ಟ್ ಸರಣಿ ಗೆದ್ದ ಭಾರತ

    ಧರ್ಮಶಾಲಾ: 4ನೇ ಟೆಸ್ಟ್ ಪಂದ್ಯವನ್ನು ಭಾರತ 8 ವಿಕೆಟ್‍ಗಳಿಂದ ಗೆಲ್ಲುವ ಮೂಲಕ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

    ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 19 ರನ್‍ಗಳಿಸಿದ್ದ ಭಾರತ ಇಂದು 23.5 ಓವರ್‍ಗಳಲ್ಲಿ 106 ಗಳಿಸುವ ಮೂಲಕ ಸರಣಿಯನ್ನು ಗೆದ್ದುಕೊಂಡಿತು.

    ಕೆಎಲ್ ರಾಹುಲ್ ಔಟಾಗದೇ 51 ರನ್(76 ಎಸೆತ, 4 ಬೌಂಡರಿ) ಹಂಗಾಮಿ ನಾಯಕ ಅಜಿಂಕ್ಯಾ ರೆಹಾನೆ ಔಟಾಗದೇ 38 ರನ್(27 ಎಸೆತ,4 ಬೌಂಡರಿ, 2 ಸಿಕ್ಸರ್) ಹೊಡೆಯುವ ಮೂಲಕ ಭಾರತ ಗೆಲುವಿಗೆ ಕಾರಣರಾದರು.

    ಮೊದಲ ಇನ್ನಿಂಗ್ಸ್ ನಲ್ಲಿ 63 ರನ್(95 ಎಸೆತ, 4 ಬೌಂಡರಿ, 4 ಸಿಕ್ಸರ್) ಸಿಡಿಸಿ ಎರಡೂ ಇನ್ನಿಂಗ್ಸ್ ನಲ್ಲಿ ಒಟ್ಟು 4 ವಿಕೆಟ್ ಪಡೆದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಷ್ಟೇ ಅಲ್ಲದೇ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನಕ್ಕೆ ಜಡೇಜಾಗೆ ಸರಣಿಶ್ರೇಷ್ಠ ಪ್ರಶಸ್ತಿ ಸಿಕ್ಕಿತು.

    ಪುಣೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‍ಗಳಿದ್ದ ಗೆದ್ದುಕೊಂಡಿದ್ದರೆ, ಬೆಂಗಳೂರಿನಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಂಡಿತು. ರಾಂಚಿಯಲ್ಲಿ ನಡೆದ ಮೂರನೇ ಪಂದ್ಯ ಡ್ರಾ ಕಂಡಿತ್ತು.

    4ನೇ ಟೆಸ್ಟ್ ಸಂಕ್ಷೀಪ್ತ ಸ್ಕೋರ್:
    ಆಸ್ಟ್ರೇಲಿಯಾ 300 ಮತ್ತು 137
    ಭಾರತ 332 ಮತ್ತು 106/2

  • ಟೀಂ ಇಂಡಿಯಾ ಗೆಲುವಿಗೆ 87 ರನ್ ಬಾಕಿ

    ಟೀಂ ಇಂಡಿಯಾ ಗೆಲುವಿಗೆ 87 ರನ್ ಬಾಕಿ

    ಧರ್ಮಶಾಲಾ: ಟೀಂ ಇಂಡಿಯಾ ಗೆಲುವಿಗೆ 87 ರನ್ ಬಾಕಿ. ನಾಳೆ ಭಾರತ 87 ರನ್ ಗಳಿಸಿದರೆ ಬಾರ್ಡರ್-ಗಾವಸ್ಕರ್ ಟ್ರೋಫಿ ಟೀಂ ಇಂಡಿಯಾ ಮಡಿಲಿಗೆ ಸೇರಲಿದೆ. ಸದ್ಯದ ಮಟ್ಟಿಗೆ ಭಾರತದ ಗೆಲುವು ಬಹುತೇಕ ಖಚಿತವಾಗಿದೆ.

    106 ರನ್‍ಗಳ ಟಾರ್ಗೆಟ್ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಮೊದಲ ಓವರ್‍ನಲ್ಲೇ ಕೆ.ಎಲ್. ರಾಹುಲ್ 3 ಬೌಂಡರಿ ಬಾರಿಸಿ ಉತ್ತಮ ಆರಂಭ ನೀಡಿದರು. ದಿನದಾಟ ಮುಗಿದಾಗ ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದೆ. ಕೆ.ಎಲ್.ರಾಹುಲ್ 13 ಹಾಗೂ ಮುರಳಿ ವಿಜಯ್ 6 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನೂ 2 ದಿನಗಳ ಆಟ ಬಾಕಿಯಿದೆ.

    ಧರ್ಮಶಾಲಾದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತದ ಬೌಲರ್ ಗಳು ತಮ್ಮ ಪರಾಕ್ರಮ ಮೆರೆದರು. ಇದರಿಂದಾಗಿ ಆಸೀಸ್ ತಂಡ 53.3 ಓವರ್ ಗಳಲ್ಲಿ  ಕೇವಲ 137 ರನ್ ಗಳಿಸಿ 2ನೇ ಇನ್ನಿಂಗ್ಸ್ ನಲ್ಲಿ ಆಲೌಟ್ ಆಯಿತು.

    ಆಸ್ಟ್ರೇಲಿಯಾ ಪರವಾಗಿ ಮ್ಯಾಕ್ಸ್ ವೆಲ್ 45 ಹಾಗೂ ವೇಡ್ 25 ರನ್ ಗಳಿಸಿ ತಂಡದ ಮೊತ್ತ 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಆಸ್ಟ್ರೇಲಿಯಾ ತಂಡದಲ್ಲಿ ಒಟ್ಟು 6 ಮಂದಿ ಎರಡಂಕಿ ದಾಟುವಲ್ಲಿ ವಿಫಲರಾದರೆ ಅವರಲ್ಲಿ ಮೂವರು ಶೂನ್ಯಕ್ಕೆ ಔಟಾಗಿದ್ದು ವಿಶೇಷವಾಗಿತ್ತು. ಉಳಿದಂತೆ ರೆನ್ಶಾ 8, ವಾರ್ನರ್ 6, ಸ್ಮಿತ್ 17, ಹ್ಯಾಂಡ್ಸ್ ಕಾಂಬ್ 18, ಮಾರ್ಷ್ 1, ಕಮ್ಮಿನ್ಸ್ 12 ರನ್ ಗಳಿಸಿದರು.

    ಟೀಂ ಇಂಡಿಯಾ ಪರವಾಗಿ ರವೀಂದ್ರ ಜಡೇಜಾ, ಆರ್.ಅಶ್ವಿನ್ ಹಾಗೂ ಉಮೇಶ್ ಯಾದವ್ ತಲಾ 3 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ 1 ವಿಕೆಟ್ ಗಳಿಸಿದರು.

    ಮೊದಲ ಇನ್ನಿಂಗ್ಸ್ ನಲ್ಲಿ  ನಲ್ಲಿ ಆಸ್ಟ್ರೇಲಿಯಾ – 300 ರನ್ ಗಳಿಸಿ ಆಲೌಟಾಗಿದ್ದರೆ ಭಾರತ 332 ರನ್ ಗಳಿಸಿ 32 ರನ್‍ಗಳ ಮುನ್ನಡೆ ಗಳಿಸಿತ್ತು.

  • ಆಸೀಸ್‍ಗೆ ಟೀಂ ಇಂಡಿಯಾದಿಂದ ತಿರುಗೇಟು: ಸರಣಿಯಲ್ಲಿ ಟಾಪ್ ಸ್ಕೋರರ್ ಯಾರು?

    ಆಸೀಸ್‍ಗೆ ಟೀಂ ಇಂಡಿಯಾದಿಂದ ತಿರುಗೇಟು: ಸರಣಿಯಲ್ಲಿ ಟಾಪ್ ಸ್ಕೋರರ್ ಯಾರು?

    ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೆಯ ಹಾಗೂ ಕೊನೆಯ ಟೆಸ್ಟ್ ನ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ.

    ಆಸ್ಟ್ರೇಲಿಯಾದ 300 ರನ್ ಗಳಿಗೆ ಜವಾಬು ನೀಡಲು ಆರಂಭಿಸಿದ ಭಾರತ 90 ಓವರ್‍ಗಳಲ್ಲಿ 248 ರನ್‍ಗಳಿಸಿದೆ. ಮುರಳಿ ವಿಜಯ್ ಇಂದು 21 ರನ್‍ಗಳಿಸಿ ಆರಂಭದಲ್ಲೇ ಔಟಾದರೂ, ಕೆಎಲ್ ರಾಹುಲ್ 60 ರನ್(124 ಎಸೆತ, 9 ಬೌಂಡರಿ, 1 ಸಿಕ್ಸರ್), ಚೇತೇಶ್ವರ ಪೂಜಾರ 57 ರನ್(151 ಎಸೆತ, 6 ಬೌಂಡರಿ) ನಾಯಕ ಅಜಿಂಕ್ಯಾ ರೆಹಾನೆ 46 ರನ್(104 ಎಸೆತ, 7 ಬೌಂಡರಿ, 1 ಸಿಕ್ಸರ್), ಆರ್ ಅಶ್ವಿನ್ 30 ರನ್( 49 ಎಸೆತ, 4 ಬೌಂಡರಿ) ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಕ್ರೀಸ್‍ನಲ್ಲಿ ಈಗ ಕೀಪರ್ ವೃದ್ಧಿಮಾನ್ ಸಹಾ 10 ರನ್(43 ಎಸೆತ,1 ಬೌಂಡರಿ) ರವೀಂದ್ರ ಜಡೇಜಾ 16 ರನ್(23 ಎಸೆತ, 2 ಸಿಕ್ಸರ್) ಗಳಿಸಿ ಆಟವಾಡುತ್ತಿದ್ದು, ಸೋಮವಾರ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.

    ಸ್ಪಿನ್ನರ್ ನಥನ್ ಲಿಯಾನ್ 4 ವಿಕೆಟ್ ಕಿತ್ತರೆ, ಜೋಷ್ ಹ್ಯಾಜಲ್‍ವುಡ್, ಪ್ಯಾಟ್ ಕುಮ್ಮಿಸ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

    ಈ ಸೀರಿಸ್ ಟಾಪ್ ರನ್ ಸ್ಕೋರರ್?
    ನಾಯಕ ಸ್ಮಿತ್ 7 ಇನ್ನಿಂಗ್ಸ್ ಗಳಿಂದ 482 ರನ್ ಗಳಿಸಿದ್ದರೆ, ಚೇತೇಶ್ವರ ಪೂಜಾರ 6 ಇನ್ನಿಂಗ್ಸ್ ಗಳಿಂದ 405 ರನ್ ಗಳಿಸಿದ್ದಾರೆ. 6 ಇನ್ನಿಂಗ್ಸ್ ಗಳಿಂದ 342 ರನ್‍ಗಳಿಸುವ ಮೂಲಕ ಕೆಎಲ್ ರಾಹುಲ್ ಮೂರನೇ ಸ್ವಾನದಲ್ಲಿದ್ದಾರೆ.

    ವಿರಾಟ್ ಕೊಹ್ಲಿ 2011ರಿಂದ ಇಲ್ಲಿಯವರೆಗೆ ಸತತ 54 ಪಂದ್ಯಗಳನ್ನು ಆಡುತ್ತಾ ಬಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಗಾಯದ ಸಮಸ್ಯೆಯಿಂದಾಗಿ ಈ ಟೆಸ್ಟ್ ಪಂದ್ಯದಿಂದ ಹೊರಗಡೆ ಉಳಿದಿದ್ದಾರೆ.

  • 300 ರನ್‍ಗೆ ಆಸ್ಟ್ರೇಲಿಯಾ ಆಲೌಟ್ – ಬೌಲಿಂಗ್‍ನಲ್ಲಿ ಕುಲದೀಪ್ ಕಮಾಲ್!

    300 ರನ್‍ಗೆ ಆಸ್ಟ್ರೇಲಿಯಾ ಆಲೌಟ್ – ಬೌಲಿಂಗ್‍ನಲ್ಲಿ ಕುಲದೀಪ್ ಕಮಾಲ್!

    ಧರ್ಮಶಾಲಾ: ಟೀಂ ಇಂಡಿಯಾ ಹಾಗೂ ಆಸೀಸ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಹಾಗೂ 4ನೇ ಟೆಸ್ಟ್ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ 300 ರನ್‍ಗೆ ಆಲೌಟ್ ಆಗಿದೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 4 ವಿಕೆಟ್ ಪಡೆಯುವ ಮೂಲಕ ಕುಲದೀಪ್ ಯಾದವ್ ಗಮನ ಸೆಳೆದರು.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ತಂಡ ನಾಯಕ ಸ್ಮಿತ್ ಶತಕದಿಂದಾಗಿ ಈ ಮೊತ್ತ ಗಳಿಸುವಲ್ಲಿ ಯಶಸ್ವಿಯಾಯಿತು. ಆದರೆ ಆಸ್ಟ್ರೇಲಿಯಾ ಪರವಾಗಿ 5ಕ್ಕೂ ಹೆಚ್ಚು ಆಟಗಾರರು ಎರಡಂಕಿ ದಾಟಲು ವಿಫಲರಾದರು. ಆಸ್ಟ್ರೇಲಿಯಾ ಪರವಾಗಿ ವಾರ್ನರ್ 56, ಮ್ಯಾಥ್ಯೂ ವೇಡ್ 57 ರನ್ ಗಳಿಸಿ ತಂಡದ ಮೊತ್ತ 300 ತಲುಪಿಸುವಲ್ಲಿ ಯಶಸ್ವಿಯಾದರು. ನಾಯಕ ಸ್ಮಿತ್ 174 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ 111 ರನ್ ಗಳಿಸಿ ಅಶ್ವಿನ್‍ಗೆ ವಿಕೆಟ್ ಒಪ್ಪಿಸಿದರು.

    ಟೀಂ ಇಂಡಿಯಾ ಪರವಾಗಿ ಚೊಚ್ಚಲ ಪಂದ್ಯವಾಡುತ್ತಿರುವ ಕುಲದೀಪ್ ಯಾದವ್ 4 ವಿಕೆಟ್ ಪಡೆದು ಟೀಂ ಇಂಡಿಯಾ ಪರ ಯಶಸ್ವಿ ಬೌಲರ್ ಎನಿಸಿದರು. ಉಮೇಶ್ ಯಾದವ್ 2, ಭುವನೇಶ್ವರ್ ಕುಮಾರ್, ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದರು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ ಶೂನ್ಯ ರನ್ ಗಳಿಸಿದೆ.

     

     

  • ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಟೀಂ ಇಂಡಿಯಾದಿಂದ ದಿಟ್ಟ ಹೋರಾಟದ ಮುನ್ಸೂಚನೆ

    ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಟೀಂ ಇಂಡಿಯಾದಿಂದ ದಿಟ್ಟ ಹೋರಾಟದ ಮುನ್ಸೂಚನೆ

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 451 ರನ್‍ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಬ್ಯಾಟಿಂಗ್‍ನಲ್ಲಿ ದಿಟ್ಟ ಹೋರಾಟ ನೀಡುವ ಮುನ್ಸೂಚನೆ ನೀಡಿದೆ.

    ಮೊದಲ ದಿನ 4 ವಿಕೆಟ್ ಕಳೆದುಕೊಂಡು 299 ರನ್‍ಗಳಿಸಿದ್ದ ಆಸ್ಟ್ರೇಲಿಯಾ ಇಂದು 6 ವಿಕೆಟ್‍ಗಳ ಸಹಾಯದಿಂದ 152 ರನ್ ಗಳಿಸಿ 137.3 ಓವರ್‍ಗಳಲ್ಲಿ 451 ರನ್‍ಗಳಿಗೆ ಆಲೌಟ್ ಆಯ್ತು. ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಜವಾಬು ನೀಡಲು ಆರಂಭಿಸಿದ ಭಾರತ ಎರಡನೇ ದಿನದ ಆಟದ ಆಂತ್ಯಕ್ಕೆ 40 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು 120 ರನ್‍ಗಳಿಸಿದೆ.

    ಗುರುವಾರ 82 ರನ್‍ಗಳಿಸಿ ಅಜೇಯರಾಗಿದ್ದ ಮ್ಯಾಕ್ಸ್ ವೆಲ್ ಇಂದು ಟೆಸ್ಟ್ ಕ್ರಿಕೆಟ್ ಬಾಳ್ವೆಯ ಮೊದಲ ಶತಕ ಹೊಡೆದರು. 180 ಎಸೆತಗಳಲ್ಲಿ ಶತಕ ಹೊಡೆದ ಮ್ಯಾಕ್ಸ್ ವೆಲ್ ಅಂತಿಮವಾಗಿ 104 ರನ್(185 ಎಸೆತ, 9 ಬೌಂಡರಿ, 2 ಸಿಕ್ಸರ್)ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಮತ್ತು ಮ್ಯಾಕ್ಸ್ ವೆಲ್  354 ಎಸೆತಗಳಲ್ಲಿ 5ನೇ ವಿಕೆಟ್‍ಗೆ 191 ರನ್‍ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದರು.

    ಮ್ಯಾಥ್ಯು ವೇಡ್ 37 ರನ್, ಸ್ವೀವ್ ಓ ಕೀಫ್ 25 ರನ್‍ಗಳಿಸಿ ಔಟಾದರು. ಆರಂಭಿಕ ಆಟಗಾರ ವಾರ್ನರ್ ಔಟಾದ ಬಳಿಕ ಕ್ರೀಸ್‍ಗೆ ಬಂದ ನಾಯಕ ಸ್ವೀವ್ ಸ್ಮಿತ್ ಅಜೇಯ 178 ರನ್(361 ಎಸೆತ, 17 ಬೌಂಡರಿ) ಹೊಡೆಯುವ ಮೂಲಕ ತಂಡದ ರನ್ ಬೆಟ್ಟವನ್ನು ಕಟ್ಟಿದರು.

    ರವೀಂದ್ರ ಜಡೇಜಾ 124 ರನ್ ನೀಡಿ 5 ವಿಕೆಟ್ ಪಡೆದರೆ, ಉಮೇಶ್ ಯಾದವ್ 106 ರನ್ ನೀಡಿ 3 ವಿಕೆಟ್ ಪಡೆದರು. ಅಶ್ವಿನ್ 114 ರನ್ ನೀಡಿ 1 ವಿಕೆಟ್ ಕಿತ್ತರು. 9 ಬೈ, 11 ಲೆಗ್ ಬೈ, 2 ನೋಬಾಲ್ ಎಸೆಯುವ ಮೂಲಕ ಭಾರತದ ಬೌಲರ್‍ಗಳು ಇತರೇ ರೂಪದಲ್ಲಿ 22 ರನ್ ಬಿಟ್ಟುಕೊಟ್ಟಿದ್ದಾರೆ.

    ದಿಟ್ಟ ಹೋರಾಟ: ಪ್ರತಿ ಹೋರಾಟ ಆರಂಭಿಸಿದ ಭಾರತ 40 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ. ಕೆಎಲ್ ರಾಹುಲ್ 67 ರನ್( 102 ಎಸೆತ, 9 ಬೌಂಡರಿ) ಗಳಿಸಿ ಔಟಾದರು. ಮುರಳಿ ವಿಜಯ್ ಅಜೇಯ 42 ರನ್(112 ಎಸೆತ, 6 ಬೌಂಡರಿ) ಚೇತೇಶ್ವರ ಪೂಜಾರ 10 ರನ್‍ಗಳಿಸಿ ಕ್ರೀಸ್‍ನಲ್ಲಿ ಆಡುತ್ತಿದ್ದಾರೆ. ರಾಹುಲ್ ಮತ್ತು ವಿಜಯ್ 31.2 ಓವರ್‍ಗಳಲ್ಲಿ ಮೊದಲ ವಿಕೆಟ್‍ಗೆ 91 ರನ್‍ಗಳ ಜೊತೆಯಾಟವಾಡುವ ಮೂಲಕ ಭಾರತದ ಇನ್ನಿಂಗ್ಸ್  ಗೆ ಗಟ್ಟಿ ಆಡಿಪಾಯ ಹಾಕಿದ್ದಾರೆ.

  • ಮೂರನೇ ಟೆಸ್ಟ್ ಪಂದ್ಯದಿಂದ ಕೊಹ್ಲಿ ಔಟ್: ವಿಡಿಯೋ ನೋಡಿ

    ಮೂರನೇ ಟೆಸ್ಟ್ ಪಂದ್ಯದಿಂದ ಕೊಹ್ಲಿ ಔಟ್: ವಿಡಿಯೋ ನೋಡಿ

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಔಟ್ ಆಗಿದ್ದಾರೆ. ಬಲ ಭುಜಕ್ಕೆ ಗಾಯಗೊಂಡಿರುವ ಕೊಹ್ಲಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ ಹಿನ್ನೆಲೆಯಲ್ಲಿ ಈ ಪಂದ್ಯದಿಂದ ಅಲಭ್ಯರಾಗಲಿದ್ದಾರೆ.

    ಜಡೇಜಾ ಎಸೆದ 40ನೇ ಓವರ್‍ನ ಒಂದನೆ ಎಸೆತವನ್ನು ಹ್ಯಾಂಡ್ಸ್ ಕಾಂಬ್ ಬಲವಾಗಿ ಹೊಡೆದಿದ್ದರು. ವೇಗವಾಗಿ ಓಡಿ ಬಂದು ಬೌಂಡರಿ ಬಳಿ ವಿರಾಟ್ ಕೊಹ್ಲಿ ಬಾಲನ್ನು ತಡೆದು ನಿಲ್ಲಿದ್ದರು. ಆದರೆ ಹಿಡಿಯುವ ರಭಸಕ್ಕೆ ನೆಲಕ್ಕೆ ಬಿದ್ದ ಪರಿಣಾಮ ಬಲ ಭುಜಕ್ಕೆ ಪೆಟ್ಟಾಗಿತ್ತು. ಭುಜದ ನೋವು ಹೆಚ್ಚಿದ್ದ ಹಿನ್ನೆಲೆಯಲ್ಲಿ ಕೊಹ್ಲಿ ಮೈದಾನದಿಂದ ತೆರಳಿದ್ದರು.

    ಇದನ್ನೂ ಓದಿ: ವೃದ್ಧಿಮಾನ್ ಸಹಾ, ಸ್ಮಿತ್ ಬಾಲ್ ಆಟ ನೋಡಿ ಅಂಪೈರ್, ಆಟಗಾರರು ನಕ್ಕಿದ್ದೆ ನಕ್ಕಿದ್ದು! ವಿಡಿಯೋ

    ಕೊಹ್ಲಿ ಅನುಪಸ್ಥಿತಿಯಲ್ಲಿ ಉಪನಾಯಕ ಅಜಿಂಕ್ಯ ರಹಾನೆ ಈಗ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಶುಕ್ರವಾರ ಸ್ಕ್ಯಾನಿಂಗ್ ರಿಪೋರ್ಟ್ ಬರಲಿದ್ದು, ಹೆಚ್ಚಿನ ಗಾಯವಾಗಿದ್ದರೆ ಕೊಹ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ.

    ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 333 ರನ್ ಗಳಿಂದ ಸೋತಿದ್ದರೆ, ಬೆಂಗಳೂರು ಟೆಸ್ಟ್ ನಲ್ಲಿ 75 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸಿತ್ತು.

    ಇದನ್ನೂ ಓದಿ:ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್- ಸೊನ್ನೆ ಸುತ್ತಿದ ವೇಡ್