Tag: australia

  • ಮೊಸಳೆಗಳಿದ್ದ ನೀರಿನಲ್ಲಿ ಮೀನಿಗೆ ಗಾಳ ಹಾಕ್ದ- ಮುಂದೇನಾಯ್ತು? ವಿಡಿಯೋ ನೋಡಿ

    ಮೊಸಳೆಗಳಿದ್ದ ನೀರಿನಲ್ಲಿ ಮೀನಿಗೆ ಗಾಳ ಹಾಕ್ದ- ಮುಂದೇನಾಯ್ತು? ವಿಡಿಯೋ ನೋಡಿ

    ಸಿಡ್ನಿ: ಮೀನುಗಾರನ ಗಾಳಕ್ಕೆ ಮೀನು ಬಿದ್ದು, ಆತ ಇನ್ನೇನು ಅದನ್ನು ಎಳೆದುಕೊಳ್ಳಬೇಕು ಅನ್ನೋ ಹೊತ್ತಿಗೆ ಮೊಸಳೆಯೊಂದು ಬಂದು ಮೀನು ಕಚ್ಚಿಕೊಂಡು ಹೋಗೋ ಮೂಲಕ ಮೀನುಗಾರನನ್ನೇ ದಂಗಾಗಿಸಿದೆ. ಆಸ್ಟ್ರೇಲಿಯಾದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.

    ಆಸ್ಟ್ರೇಲಿಯಾದ ಈಸ್ಟ್ ಅಲಿಗೇಟರ್ ರಿವರ್ ನ ಕಾಹಿಲ್ಸ್ ಕ್ರಾಸಿಂಗ್ ನಲ್ಲಿ ಲ್ಯೂಕ್ ರಾಬರ್ಟ್‍ಸನ್ ಮೀನುಗಾರಿಕೆ ಮಾಡ್ತಿದ್ರು. 75 ಸೆ.ಮೀ ಉದ್ದದ ಬರ್ರಾಮುಂಡಿ ಮೀನನ್ನು ಹಿಡಿಯುವಲ್ಲಿ ಸಪಲರಾಗಿದ್ರು. ಆದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನೋ ಹಾಗಾಯ್ತು ಅವರ ಕಥೆ. ಯಾಕಂದ್ರೆ ಲ್ಯೂಕ್ ಗಾಳದಿಂದ ಮೀನನ್ನು ಎಳೆದುಕೊಳ್ಳುತ್ತಿದ್ದ ವೇಳೆ ಮೊಸಳೆಯೊಂದು ಅಟ್ಟಿಸಿಕೊಂಡು ಬಂದು ಮೀನನ್ನ ಕಚ್ಚಿಕೊಂಡು ಹೋಗಿದೆ.

    ನಾನು ಇನ್ನೇನು ಕ್ರಾಸಿಂಗ್ ಗೆ ಹತ್ತಿರ ಬರುತ್ತಿದ್ದಂತೆ 4 ಮೀಟರ್(13 ಅಡಿ) ಉದ್ದದ ಮೊಸಳೆ ಅದನ್ನ ಅಟ್ಟಿಸಿಕೊಂಡು ಬಂತು. ಅಲ್ಲಿ ನಾವು ನೋಡಿರುವ ಅತೀ ಉದ್ದದ ಮೊಸಳೆ ಇದಾಗಿತ್ತು ಎಂದು ಲ್ಯೂಕ್ ಇಲ್ಲಿನ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    ಬಾಂಕರ್ಸ್ ಅಡ್ವೆಂಚರ್ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ಲ್ಯೂಕ್ ಮೀನನ್ನ ದಡದ ಬಳಿ ಎಳೆದುಕೊಳ್ಳುವ ವೇಳೆಗೆ ಮೊಸಳೆ ಬಂದು ಅದನ್ನ ಬಾಯಲ್ಲಿ ಎಳೆದುಕೊಂಡು ಹೋಗೋದನ್ನ ವಿಡಿಯೋದಲ್ಲಿ ಕಾಣಬಹುದು. ಫೇಸ್‍ಬುಕ್‍ನಲ್ಲಿ ಈ ವಿಡಿಯೋ ಈವರೆಗೆ 71 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

    ನನಗೆ ಅಷ್ಟೊಂದು ಭಯವಾಗಿರಲಿಲ್ಲ. ನಾನು ನೀರಿನಿಂದ 5 ಮೀಟರ್ ದೂರದಲ್ಲಿದ್ದೆ. ಆದ್ರೆ ಕೊನೆಯಲ್ಲಿ ನನ್ನ ಕಾಲುಗಳು ನಡುಗಲು ಶುರುವಾಯ್ತು ಎಂದು ಲ್ಯೂಕ್ ಹೇಳಿದ್ದಾರೆ.

    ಆಸ್ಟ್ರೇಲಿಯಾದ ಕಾಹಿಲ್ಸ್ ಕ್ರಾಸಿಂಗ್ ಮೊಸಳೆಗಳಿಂದ ತುಂಬಿರುವ ನೀರು ಎಂದೇ ಕುಖ್ಯಾತಿ ಹೊಂದಿದೆ. ವರದಿಗಳ ಪ್ರಕಾರ ಇಡೀ ಆಸ್ಟ್ರೇಲಿಯಾದಲ್ಲಿ ಇದು ಅತ್ಯಂತ ಭಯಾನಕವಾದ ಮೊಸಳೆಗಳ ವಾಸಸ್ಥಾನವಾಗಿದೆ.

  • ವಿಡಿಯೋ: ಹೆಲ್ಮೆಟ್‍ನೊಳಗೆ ಅಡಗಿ ಕುಳಿತಿತ್ತು ವಿಷಕಾರಿ ಹಾವು!

    ವಿಡಿಯೋ: ಹೆಲ್ಮೆಟ್‍ನೊಳಗೆ ಅಡಗಿ ಕುಳಿತಿತ್ತು ವಿಷಕಾರಿ ಹಾವು!

    ಸಿಡ್ನಿ: ಕಾರಿನ ಎಂಜಿನ್‍ನಲ್ಲಿ, ಬೈಕ್‍ನಲ್ಲಿ, ಟಾಯ್ಲೆಟ್ ಕಮೋಡ್‍ನಲ್ಲಿ ಹಾವುಗಳು ಕಾಣಿಸಿಕೊಂಡ ಬಗ್ಗೆ ಈ ಹಿಂದೆ ಸುದ್ದಿಯಾಗಿದೆ. ಆದ್ರೆ ಇದೀಗ ಹಾವೊಂದು ಹೆಲ್ಮೆಟ್‍ನೊಳಗೆ ಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿಯನ್ನೇ ಬೆರಗಾಗಿಸಿದೆ.

    ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‍ನ ರುಧರ್‍ಫೋರ್ಡ್ ಫೈರ್ ಸ್ಟೆಷನ್‍ನ ಸಿಬ್ಬಂದಿಯೊಬ್ಬರು ತನ್ನ ಹೆಲ್ಮೆಟ್‍ನಲ್ಲಿ ವಿಷಕಾರಿ ಹಾವು ಇದ್ದಿದ್ದು ನೋಡಿದ್ದಾರೆ. ಹಾವನ್ನ ನೋಡಿದ ನಂತರ ಉರಗ ತಜ್ಞರನ್ನ ಕರೆಸಿ ತನ್ನ ಹೆಲ್ಮೆಟ್‍ನಿಂದ ಸುರಕ್ಷಿವಾಗಿ ಹಾವನ್ನ ಹೊರತೆಗೆಸಿದ್ದಾರೆ.

    ‘ಫೈರ್ ಅಂಡ್ ರೆಸ್ಕ್ಯೂNSW’ ಫೇಸ್‍ಬುಕ್ ಪೇಜಿನಲ್ಲಿ ಇದರ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ಹೆಲ್ಮೆಟ್ ಸ್ಟ್ರಾಪ್ ಸುತ್ತ ಸುತ್ತಿಕೊಂಡಿದ್ದ ಹಾವನ್ನ ಉರಗ ರಕ್ಷಕರು ಹೊರತೆಗೆಯಲು ಪ್ರಯತ್ನಿಸುತ್ತಿರೋದನ್ನ ಕಾಣಬಹುದು.

    ಉರಗ ತಜ್ಞ ಹಾವನ್ನ ಹಿಡಿದುಕೊಳ್ಳಲು ಯತ್ನಿಸಿದಾಗ ಅದು ನುಸುಳಿಕೊಂಡು ಹೋಗುತ್ತದೆ. ಆದ್ರೆ ಅವರು ತನ್ನ ಸಾಧನದ ಸಹಾಯದಿಂದ ಹಾವನ್ನ ಹಿಡಿದು ಬ್ಯಾಗ್‍ನೊಳಗೆ ಹಾಕಿಕೊಳ್ತಾರೆ.

    ಈ ಹಾವು ವಿಷಕಾರಿಯಾದ ರೆಡ್ ಬೆಲ್ಲೀಡ್ ಹಾವು ಎಂದು ಗುರುತಿಸಲಾಗಿದೆ.

    https://www.facebook.com/frnsw/videos/1820913657943203/

  • ಬಣ್ಣದ ಚಿತ್ತಾರಗಳ ಮೂಲಕ 2018ನ್ನು ಬರಮಾಡಿಕೊಂಡ ವಿದೇಶಿಗರು-ಫೋಟೋಗಳಲ್ಲಿ ನೋಡಿ

    ಬಣ್ಣದ ಚಿತ್ತಾರಗಳ ಮೂಲಕ 2018ನ್ನು ಬರಮಾಡಿಕೊಂಡ ವಿದೇಶಿಗರು-ಫೋಟೋಗಳಲ್ಲಿ ನೋಡಿ

    ಸಿಡ್ನಿ: ಈಗಾಗಲೇ ಸಿಡ್ನಿ ನಿವಾಸಿಗಳು 2018ರನ್ನು ಬಣ್ಣದ ಚಿತ್ತಾರಗಳ ಮೂಲಕ ಬರಮಾಡಿಕೊಂಡಿದ್ದಾರೆ. ಸಿಡ್ನಿಯ ಹಾರ್‍ಬರ್ ಬ್ರಿಡ್ಜ್ ಬಳಿ ಸಾವಿರಾರು ಜನರು ಒಂದೆಡೆ ಸೇರಿ 2017ಕ್ಕೆ ವಿದಾಯ ಹೇಳುವ ಮೂಲಕ 2018ನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

    ಹಾರ್‍ಬರ್ ಬ್ರಿಡ್ಜ್ ಬಳಿ ಆಯೋಜನೆ ಮಾಡಿದ್ದ ಹೊಸ ವರ್ಷದ ಸಮಾರಂಭದಲ್ಲಿ ಸ್ಥಳೀಯರು ತಮ್ಮ ಕುಟುಂಬಗಳೊಂದಿಗೆ ಆಗಮಿಸಿದ್ದರು. ಹಾರ್‍ಬರ್ ಬ್ರಿಡ್ಜ್ ಬಳಿ ಸತತವಾಗಿ 12 ನಿಮಿಷಗಳ ಕಾಲ ಲೇಸರ್ ಲೈಟ್‍ಗಳ ಬಾನಂಗಳದಲ್ಲಿ ಚಿತ್ತಾರವನ್ನು ಮೂಡಿಸಿದವು.

    ರಾತ್ರಿ 12 ಗಂಟೆಯಾಗುತ್ತಲೇ ಜನರು ಹರ್ಷೋದ್ಗಾರದ ಮೂಲಕ ಕುಣಿದು ಕುಪ್ಪಳಿಸಿದರು. ಸಂಗೀತ ಕಾರಂಜಿ ಕೂಡ ನೋಡುಗರ ಗಮನ ಸೆಳೆಯಿತು, ಸಿಟಿಯ ಜನರು ಒಂದೆಡೆ ಸೇರಿದ್ದರಿಂದ ಸೋಮವಾರ ಬೆಳಗ್ಗೆವರೆಗೂ ಟ್ರಾಫಿಕ್ ಜಾಮ್ ಉಂಟಾಗಲಿದೆ ಎಂದು ಹೇಳಲಾಗಿದೆ.

  • ಶ್ರೀಲಂಕಾ ವಿರುದ್ಧದ ಸರಣಿ ಕ್ಲೀನ್ ಸ್ವೀಪ್ ಮಾಡಿದ್ರೂ, ವಿಶ್ವ ದಾಖಲೆ ಜಸ್ಟ್ ಮಿಸ್

    ಶ್ರೀಲಂಕಾ ವಿರುದ್ಧದ ಸರಣಿ ಕ್ಲೀನ್ ಸ್ವೀಪ್ ಮಾಡಿದ್ರೂ, ವಿಶ್ವ ದಾಖಲೆ ಜಸ್ಟ್ ಮಿಸ್

    ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಸರಣಿಯನ್ನು ಕೈ ವಶ ಮಾಡಿಕೊಂಡರೂ ಟೀಂ ಇಂಡಿಯಾ ವಿಶ್ವ ದಾಖಲೆ ನಿರ್ಮಿಸುವ ಅವಕಾಶ ಸ್ಪಲ್ಪದರಲ್ಲಿಯೇ ಕೈ ತಪ್ಪಿದೆ.

    ಹೌದು, ಒಂದು ವೇಳೆ 2 ಪಂದ್ಯಗಳನ್ನು ಗೆದ್ದಿದ್ದರೆ ಅಂತರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ಮಾದರಿಯ ಪಂದ್ಯಗಳಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಗೆಲುವು ಪಡೆದ ತಂಡ ಎಂಬ ದಾಖಲೆಯನ್ನು ಟೀಂ ಇಂಡಿಯಾ ನಿರ್ಮಿಸುತಿತ್ತು.

    2017ರಲ್ಲಿ ಭಾರತ ಒಟ್ಟು 37 ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಟೀಂ ಇಂಡಿಯಾ ಪಡೆದ 37 ಗೆಲುವುಗಳಲ್ಲಿ 7 ಟೆಸ್ಟ್, 21 ಏಕದಿನ ಪಂದ್ಯ ಹಾಗೂ 9 ಟಿ20 ಪಂದ್ಯಗಳು ಒಳಗೊಂಡಿದೆ.

    ವರ್ಷ ಒಂದರಲ್ಲಿ ಅತಿ ಹೆಚ್ಚು ಪಂದ್ಯ ಗೆಲುವು ಪಡೆದ ರಾಷ್ಟ್ರಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾಗೆ ಮೊದಲ ಸ್ಥಾನ ಸಿಕ್ಕಿದ್ದು, 2003 ರಲ್ಲಿ ರಿಕಿ ಪಾಟಿಂಗ್ ನಾಯಕತ್ವದಲ್ಲಿ 38 ಪಂದ್ಯಗಳಲ್ಲಿ ಗೆಲುವು ಪಡೆದಿತ್ತು. ಇನ್ನು ಮೂರನೇ ಸ್ಥಾನದಲ್ಲಿಯೂ ಆಸ್ಟ್ರೇಲಿಯಾ ತಂಡವೇ ಇದ್ದು, 1999 ರಲ್ಲಿ 35 ಪಂದ್ಯಗಳಲ್ಲಿ ಗೆಲುವು ಪಡೆದಿತ್ತು.

    ಟೀಂ ಇಂಡಿಯಾ ಪ್ರಸ್ತುತ ವರ್ಷದಲ್ಲಿ ಇಂಗ್ಲೆಂಡ್ (ಏಕದಿನ, ಟಿ20), ಬಾಂಗ್ಲಾದೇಶ (ಟೆಸ್ಟ್), ಆಸ್ಟ್ರೇಲಿಯಾ(ಟೆಸ್ಟ್, ಏಕದಿನ), ವೆಸ್ಟ್ ಇಂಡೀಸ್ (ಏಕದಿನ), ಶ್ರೀಲಂಕಾ (ಏಕದಿನ, ಟಿ20, ಟೆಸ್ಟ್), ನ್ಯೂಜಿಲೆಂಡ್(ಏಕದಿನ, ಟಿ20), ಶ್ರೀಲಂಕಾ (ಏಕದಿನ, ಟಿ20, ಟೆಸ್ಟ್) ವಿರುದ್ಧ ಸರಣಿಗಳಲ್ಲಿ ಭಾಗವಹಿಸಿದೆ. ಈ ಮೂಲಕ ಸತತ 9 ಟೆಸ್ಟ್ ಸರಣಿ ಹಾಗೂ 8 ಏಕದಿನ ಸರಣಿಗಳಲ್ಲಿ ಗೆಲುವು ಪಡೆದಿದೆ.

     

  • ದೈತ್ಯ ಹೆಬ್ಬಾವು ರಸ್ತೆ ದಾಟಲಿ ಎಂದು ಕಾದು ನಿಂತ ಪೊಲೀಸ್- ಫೋಟೋ ವೈರಲ್

    ದೈತ್ಯ ಹೆಬ್ಬಾವು ರಸ್ತೆ ದಾಟಲಿ ಎಂದು ಕಾದು ನಿಂತ ಪೊಲೀಸ್- ಫೋಟೋ ವೈರಲ್

    ಸಿಡ್ನಿ: ಕಾಂಗರೂಗಳು, ಭಯ ಹುಟ್ಟಿಸೋ ಜೇಡಗಳು, ಭಾರಿ ಗಾತ್ರದ ಹಾವು, ಶಾರ್ಕ್‍ಗಳಿಗೆ ಆಸ್ಟ್ರೇಲಿಯಾ ಹೆಸರುವಾಸಿ. ಇದಕ್ಕೆಲ್ಲಾ ಭಯ ಬೀಳೋರು ಆಸ್ಟ್ರೇಲಿಯಾಗೆ ಹೋಗೋಕೆ ಹಿಂದೇಟು ಹಾಕ್ತಾರೆ. ಇಷ್ಟೆಲ್ಲಾ ಸಾಕಾಗಿಲ್ಲ ಅಂದ್ರೆ ಈ ವೈರಲ್ ಫೋಟೋ ನೋಡಿದ್ಮೇಲಂತೂ ಆಸ್ಟ್ರೇಲಿಯಾಗೆ ಪ್ರವಾಸ ಹೋಗೋ ಮುನ್ನ ಒಮ್ಮೆ ಗುಂಡಿಗೆ ಗಟ್ಟಿ ಮಾಡಿಕೊಳ್ಬೇಕು.

    ಹೌದು. ಇಲ್ಲಿನ ಕ್ವೀನ್ಸ್‍ಲ್ಯಾಂಡ್‍ನ ಪೊಲೀಸರೊಬ್ಬರು ದೈತ್ಯ ಹೆಬ್ಬಾವು ರಸ್ತೆ ದಾಟಲು ಕಾದು ನಿಂತಿದ್ದ ಫೋಟೋ ಇದೀಗ ವೈರಲ್ ಆಗಿದೆ. ಇಲ್ಲಿನ ವುಜುಲ್ ವುಜುಲ್ ಬಳಿ ಇಬ್ಬರು ಪೊಲೀಸ್ ಅಧಿಕಾರಿಗಳು ರಾತ್ರಿ ಗಸ್ತಿನಲ್ಲಿದ್ದರು. ಈ ವೇಳೆ ಅತೀ ಉದ್ದದ ಹೆಬ್ಬಾವೊಂದನ್ನ ನೋಡಿದ್ದಾರೆ. ಹೆಬ್ಬಾವು ರಸ್ತೆ ದಾಟುತ್ತಿತ್ತು ಅಷ್ಟೇ.

    ಫೋಟೋ ತೆಗೆಯೋಕೆ ಇದು ಸರಿಯಾದ ಚಾನ್ಸ್ ಎಂದುಕೊಂಡು ಸರ್ಜೆಂಟ್ ಬೆನ್ ಟೋಮ್ ತನ್ನ ಸಹೋದ್ಯೋಗಿಯಾದ ಕ್ರಿಸ್ ಕೆನ್ನಿಯನ್ನ ಕಾರಿನಿಂದ ಕೆಳಗಿಳಿಸಿ ದೈತ್ಯ ಹೆಬ್ಬಾವಿನ ಪಕ್ಕ ನಿಲ್ಲಲು ಹೇಳಿದ್ದಾರೆ. ಹಾವು ಕೂಡಲೇ ಪೊಲೀಸರಿಂದ ದೂರ ಹೋಗಿದೆ. ಆದ್ರೆ ಪೊಲೀಸರು ಅಷ್ಟರಲ್ಲಿ ಫೋಟೋ ತೆಗೆದಿದ್ರು.

    ಈ ಫೋಟೋವನ್ನ ಕ್ವೀನ್ಸ್‍ಲ್ಯಾಂಡ್ ಪೊಲೀಸರು ಫೇಸ್‍ಬುಕ್‍ನಲ್ಲೂ ಹಂಚಿಕೊಂಡಿದ್ದಾರೆ. ಬಾಸ್, ನಮಗೆ ಇನ್ನೂ ಉದ್ದದ ಏಣಿ ಬೇಕು. ವಿಜುಲ್ ವುಜುಲ್ ಬಳಿ ರಾತ್ರಿ ಗಸ್ತಿನ ವೇಳೆ ಅಧಿಕಾರಿಗಳು ಈ ಹೆಬ್ಬಾವು ರಸ್ತೆ ದಾಟೋವರೆಗೆ ಕಾಯಬೇಕಾಯ್ತು ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಈ ಫೋಟೋಗೆ ಈವರೆಗೆ 32 ಸಾವಿರ ರಿಯಾಕ್ಷನ್ಸ್ ಹಾಗೂ 11 ಸಾವಿರ ಕಮೆಂಟ್ಸ್ ಬಂದಿದ್ದು, 19 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಫೋಟೋ ನೋಡಿದವರು ಒಮ್ಮೆ ಹೌಹಾರಿ, ಆ ಕಡೆ ನಾನು ಹೋಗದಂತೆ ಖಚಿತಪಡಿಸಿಕೊಳ್ಳೋಕೆ ನನಗೆ ಈ ಪ್ರದೇಶದ ಮ್ಯಾಪ್ ಬೇಕು ಅಂತ ಕಮೆಂಟ್ ಮಾಡಿದ್ದಾರೆ.

    ಈ ಹಾವು ಸ್ಕ್ರಬ್ ಪೈಥಾನ್ ಜಾತಿಗೆ ಸೇರಿದ್ದು, ಆಸ್ಟ್ರೇಲಿಯಾದಲ್ಲಿ ಇವು ಸಾಮಾನ್ಯ. ಈ ಹಾವು ಸುಮಾರು 16 ಅಡಿ(5 ಮೀಟರ್) ಉದ್ದವಿತ್ತು ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಈ ಹಾವುಗಳು 26 ಅಡಿ(8 ಮೀಟರ್)ನಷ್ಟು ಉದ್ದ ಬೆಳೆಯುತ್ತವೆ. ಇವು ವಿಷಕಾರಿಯಲ್ಲ, ಆದ್ರೆ ತನ್ನ ಬೇಟೆಯನ್ನ ಗಟ್ಟಿಯಾಗಿ ಸುತ್ತುವರಿದು ಕೊಲ್ಲಬಹುದಾಗಿವೆ ಎಂದು ವರದಿಯಾಗಿದೆ.

  • 40 ಸಿಕ್ಸ್ ಬಾರಿಸಿ ತ್ರಿಶತಕ, ಐವರು ‘ಶೂನ್ಯ’ಕ್ಕೆ ಔಟ್! – ಆದ್ರೆ ತಂಡದ ಮೊತ್ತ 354/9

    40 ಸಿಕ್ಸ್ ಬಾರಿಸಿ ತ್ರಿಶತಕ, ಐವರು ‘ಶೂನ್ಯ’ಕ್ಕೆ ಔಟ್! – ಆದ್ರೆ ತಂಡದ ಮೊತ್ತ 354/9

    ಬೆಂಗಳೂರು: ಒಂದು ಕಾಲವಿತ್ತು. ಆಗ ಯಾರಾದ್ರೂ ಕ್ರಿಕೆಟ್ ನಲ್ಲಿ ಒಂದು ದಾಖಲೆ ಮಾಡಿದರೆ ಅದನ್ನು ಮುರಿಯೋಕೆ ವರ್ಷಾನುಗಟ್ಟಲೆ ಕಾಯಬೇಕಿತ್ತು. ಆದರೆ ಯಾವಾಗ ಟಿ20 ಎಂಬ 20 ಓವರ್ ಗಳ ಆಟ ಆರಂಭವಾಯಿತೋ ಬ್ಯಾಟ್ಸ್ ಮ್ಯಾನ್ ಗಳೆಲ್ಲಾ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪರಿಣಾಮ ಬಹುತೇಕ ಪಂದ್ಯಗಳಲ್ಲಿ ರನ್ ಮಳೆಯೇ ಹರಿಯ ತೊಡಗಿತು.

    ಇಂಥದ್ದೇ ಒಂದು ಪಂದ್ಯ ಕಳೆದ ವಾರ ಆಸ್ಟ್ರೇಲಿಯಾದಲ್ಲಿ ನಡೆಯಿತು. 35 ಓವರ್ ಗಳ ಪಂದ್ಯದಲ್ಲಿ ಆಟಗಾರನೊಬ್ಬ ಆಕ್ರಮಣಕಾರಿ ಆಟವಾಡಿ ತ್ರಿಶತಕ ದಾಖಲಿಸಿದ್ದಾನೆ. ಈ ತ್ರಿಶತಕದಲ್ಲಿ ಆತ 40 ಸಿಕ್ಸರ್ ಗಳನ್ನು ಬಾರಿಸಿದ್ದ ಎಂಬುದು ವಿಶೇಷ. ಅಂದ ಹಾಗೆ ಆತನ ಹೆಸರು ಜೋಶ್ ಡನ್ಸ್ಟನ್. ಜೋಶ್ ಈ ತ್ರಿಶತಕದ ಜೊತೆ ಇನ್ನಷ್ಟು ದಾಖಲೆಗಳಿಗೂ ಸಾಕ್ಷಿಯಾಗಿದ್ದಾನೆ. ಈ ಪಂದ್ಯದಲ್ಲಿ ಜೋಶ್ ಒಬ್ಬನೇ 307 ರನ್ ಗಳಿಸಿದರೂ ತಂಡದ ಮೊತ್ತ 35 ಓವರ್ ಗಳಲ್ಲಿ ಆಗಿದ್ದು 354 ಮಾತ್ರ.

    ಸೆಂಟ್ರಲ್ ಸ್ಟರ್ಲಿಂಗ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಆಗಸ್ಟಾ ತಂಡ ನಿಗದಿತ 35 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿತು. ಇದರಲ್ಲಿ 307 ರನ್ ಬಾರಿಸಿದ್ದು ಡನ್ಸ್ಟನ್. ಅರ್ಥಾತ್ ತಂಡದ ಒಟ್ಟು ಮೊತ್ತದ ಶೇ.86.72 ರನ್ ಡನ್ಸ್ಟನ್ ಗಳಿಸಿದ್ದ. ಈ ಮೂಲಕ ಈ ಹಿಂದೆ ವಿವಿಯನ್ ರಿಚರ್ಡ್ಸ್ ಹೆಸರಲ್ಲಿದ್ದ ದಾಖಲೆಯನ್ನು ಸುಲಭವಾಗಿ ತನ್ನದಾಗಿಸಿಕೊಂಡಿದ್ದಾನೆ.

    33 ವರ್ಷ ಹಿಂದಿನ ದಾಖಲೆ ನುಚ್ಚುನೂರು: 33 ವರ್ಷ ಹಿಂದೆ ವಿವಿಯನ್ ರಿಚರ್ಡ್ಸ್ 1984ರಲ್ಲಿ ಇಂಗ್ಲೆಂಡ್ ವಿರುದ್ಧ 189 ರನ್ ಗಳಿಸಿದ್ದರು. ಆದರೆ ರಿಚರ್ಡ್ಸ್ ಅವರಿದ್ದ ವಿಂಡೀಸ್ ತಂಡ ಕೇವಲ 272 ರನ್ ಮಾತ್ರ ಗಳಿಸಿತು. ಅಂದ್ರೆ ಒಟ್ಟು ರನ್ ಗಳ ಶೇ.69.48ರಷ್ಟು ರನ್ ಗಳನ್ನು ವಿವಿಯನ್ ರಿಚರ್ಡ್ಸ್ ಬಾರಿಸಿದ್ದು. ಇದೇ ಈವರೆಗಿನ ಒಬ್ಬ ಆಟಗಾರನ ಗರಿಷ್ಠ ಶೇಕಡಾವಾರು ರನ್ ಆಗಿತ್ತು.

    ಪಂಚ ‘ಶೂನ್ಯ’ಗಳು: ಮತ್ತೂ ವಿಶೇಷವೆಂದರೆ ಒಂದು ಕಡೆ ಜೋಶ್ ಬ್ಯಾಟಿಂಗ್ ಪ್ರತಾಪ ಮುಂದುವರೆಸಿದ್ದರೆ, ಇನ್ನೊಂದೆಡೆ ತಂಡದ ಆಟಗಾರರು ಪೆವಿಲಿಯನ್ ಪರೇಡ್ ಮಾಡುತ್ತಿದ್ದರು. ತಂಡದ ಐವರು ಆಟಗಾರರು ಶೂನ್ಯಕ್ಕೆ ಔಟಾದರು. 307 ರನ್ ಗಳಿಸಿದ್ದ ಜೋಶ್ ರನ್ ಗಳಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಇನ್ನೋರ್ವ ಆಟಗಾರ ಗಳಿಸಿದ 18 ರನ್ 2ನೇ ಗರಿಷ್ಠ ಮೊತ್ತವಾಗಿತ್ತು. ಬಾಕಿ ಆಟಗಾರರೆಲ್ಲಾ ಎರಡಂಕಿ ರನ್ ದಾಖಲಿಸಲ್ಲೂ ವಿಫಲರಾಗಿ ಪೆವಿಲಿಯನ್ ಸೇರಿದ್ದರು.

    207 ರನ್ ಜೊತೆಯಾಟದಲ್ಲಿ ಒಬ್ಬ ಗಳಿಸಿದ್ದು 5 ರನ್ ಮಾತ್ರ!: 7ನೇ ವಿಕೆಟ್ ಗೆ ಜೋಶ್ ಮತ್ತೊಬ್ಬ ಆಟಗಾರನ ಜೊತೆ ಸೇರಿ 207 ರನ್ ಗಳ ಜೊತೆಯಾಟ ನೀಡಿದರು. ಆದರೆ ಇದರಲ್ಲಿ ಸಹ ಆಟಗಾರ ಗಳಿಸಿದ್ದು ಕೇವಲ 5 ರನ್ ಎಂಬುದು ಕೂಡಾ ಈ ಪಂದ್ಯದ ವಿಶೇಷತೆಯಾಗಿತ್ತು.

  • ಗಂಟೆಗೆ 31 ಕಿಮೀ ವೇಗದಲ್ಲಿ ಓಡಿದ ಧೋನಿಯ ವೈರಲ್ ವಿಡಿಯೋ ನೋಡಿ

    ಗಂಟೆಗೆ 31 ಕಿಮೀ ವೇಗದಲ್ಲಿ ಓಡಿದ ಧೋನಿಯ ವೈರಲ್ ವಿಡಿಯೋ ನೋಡಿ

    ಬೆಂಗಳೂರು: ಮಿಂಚಿನ ವೇಗದಲ್ಲಿ ವಿಕೆಟ್ ಹಿಂದೆ ಬ್ಯಾಟ್ಸ್ ಮನ್ ಗಳನ್ನು ಸ್ಟಂಪ್ ಮತ್ತು ರನೌಟ್ ಮಾಡುವ ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಈಗ ವಿಕೆಟ್ ಮುಂದೆ ವೇಗವಾಗಿ ಓಡಿ ಸುದ್ದಿಯಾಗಿದ್ದಾರೆ.

    ಹೌದು, ಅಕ್ಟೋಬರ್ 10 ರಂದು ಗುವಾಹಟಿಯಲ್ಲಿ ಭಾರತ-ಆಸ್ಟೇಲಿಯಾ ನಡುವೆ ಎರಡನೇ ಟಿ 20 ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಧೋನಿ ಎರಡು ರನ್ ಪಡೆಯಲು ಕ್ರೀಸ್ ನಲ್ಲಿ ಗಂಟೆಗೆ ಬರೋಬ್ಬರಿ 31 ಕಿಲೋ ಮೀಟರ್ ವೇಗದಲ್ಲಿ ಓಡಿದ್ದಾರೆ.

    ಧೋನಿ ಕ್ರೀಸ್‍ನಲ್ಲಿ ಓಡುತ್ತಿರುವ ವಿಡಿಯೋವನ್ನು ಸ್ಟಾರ್ ಸ್ಫೋಟ್ರ್ಸ್ ಸಂಸ್ಥೆ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಧೋನಿ 13 ರನ್ ಗಳಿಸಿದ್ದಾಗ ಸ್ಟಂಪ್ ಔಟ್ ಆದರು. ಆಸ್ಟ್ರೇಲಿಯಾ 8 ವಿಕೆಟ್ ಗಳಿಂದ ಈ ಪಂದ್ಯವನ್ನು ಗೆದ್ದುಕೊಂಡಿತ್ತು.

     

     

  • ಇಂದಿನ ಟಿ-20 ಪಂದ್ಯ ಯಶಸ್ವಿಯಾದ್ರೆ ‘ಇವುಗಳಿಗೂ’ ಸಿಗುತ್ತೆ ಕ್ರೆಡಿಟ್!

    ಇಂದಿನ ಟಿ-20 ಪಂದ್ಯ ಯಶಸ್ವಿಯಾದ್ರೆ ‘ಇವುಗಳಿಗೂ’ ಸಿಗುತ್ತೆ ಕ್ರೆಡಿಟ್!

    ಹೈದರಾಬಾದ್: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟಿ-20 ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಹಿನ್ನೆಲೆಯಲ್ಲಿ ಅಂಗಣ ಒಣಗಿಸಲು ಮೂರು ಫ್ಯಾನ್‍ಗಳನ್ನು ಅಳವಡಿಸಲಾಗಿದೆ.

    ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಹಾಗೂ ಮೂರನೇ ಪಂದ್ಯ ಆಂಧ್ರಪ್ರದೇಶದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ಕ್ರೀಡಾಂಗಣದಲ್ಲಿ ಪಂದ್ಯಕ್ಕಾಗಿ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಪಿಚ್ ಕ್ಯೂರೇಟರ್ ವೈ ಎಲ್ ಚಂದ್ರಶೇಖರ್ ತಿಳಿಸಿದ್ದಾರೆ.

    ಕಳೆದ ಒಂದು ವಾರದಿಂದ ಹೈದರಬಾದ್‍ನಲ್ಲಿ ಸಾಧಾರಣ ಮಳೆಯಾಗುತ್ತಿದ್ದು. ಪಂದ್ಯ ಪೂರ್ಣ ಪ್ರಮಾಣದಲ್ಲಿ ನಡೆಸಲು ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಪಡಿಸುವ ಅತಂಕ ವ್ಯಕ್ತವಾಗಿದ್ದು, ಕ್ರೀಡಾಂಗಣದ ಪಿಚ್ ಒಣಗುವಂತೆ ಮಾಡಲು ಮೂರು ಫ್ಯಾನ್‍ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

    ಮೂರು ಪಂದ್ಯಗಳ ಕ್ರಿಕೆಟ್ ಟಿ-20 ಸರಣಿಯು 1-1 ಅಂತರದಲ್ಲಿ ಸಮಗೊಂಡಿದ್ದು, ಇಂದಿನ ಪಂದ್ಯ ಸರಣಿ ಜಯಿಸುವ ದೃಷ್ಟಿಯಿಂದ ಎರಡು ತಂಡಗಳಿಗೂ ಅತ್ಯಂತ ಮಹತ್ವವಾಗಿದೆ.

     

  • ಟಿ20 ಮ್ಯಾಚ್ ಗೆಲುವಿನ ಬಳಿಕ ಆಸೀಸ್ ತಂಡದ ಬಸ್‍ಗೆ ಕಲ್ಲು

    ಟಿ20 ಮ್ಯಾಚ್ ಗೆಲುವಿನ ಬಳಿಕ ಆಸೀಸ್ ತಂಡದ ಬಸ್‍ಗೆ ಕಲ್ಲು

    ಗುವಾಹಟಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ.

    ಮಂಗಳವಾರದಂದು ಭಾರತದ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ಗಳಿಂದ ಜಯ ಸಾಧಿಸಿದ ಬಳಿಕ ಆಸೀಸ್ ಪಡೆ ಹೋಟೆಲ್ ಗೆ ಹೋಗುವ ವೇಳೆಯಲ್ಲಿ ಅವರ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ.

    ಆಸ್ಟ್ರೇಲಿಯಾದ ಎಲ್ಲ ಕ್ರಿಕೆಟಿಗರು ಬರ್ಸಪರ ಸ್ಟೇಡಿಯಂ ನಿಂದ ಹೋಟೆಲ್ ನತ್ತ ತಮ್ಮ ಪ್ರಯಾಣ ಬೆಳೆಸಿದ್ದರು. ಈ ವೇಳೆ ಬಸ್ ಮೇಲೆ ಕಲ್ಲು ಎಸೆಯಲಾಗಿದ್ದು, ಬಸ್ ನ ಕಿಟಕಿಯ ಗಾಜು ಒಡೆದು ಹೋಗಿದೆ. ಘಟನೆಯಲ್ಲಿ ಯಾವುದೇ ಆಟಗಾರರಿಗೂ ಗಾಯವಾಗಿಲ್ಲ. ಕಲ್ಲು ಬಿದ್ದಾಗ ಒಂದು ಕ್ಷಣ ಎಲ್ಲರೂ ವಿಚಲಿತರಾದ್ರು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

    ಪಂದ್ಯದ ಬಳಿಕ ಬಸ್‍ನ ಕಿಟಕಿಗೆ ಕಲ್ಲು ಎಸೆದಿದ್ದು ನಿಜಕ್ಕೂ ಭಯ ತರಿಸುವಂತಿತ್ತು ಎಂದು ಬ್ಯಾಟ್ಸ್‍ಮನ್ ಅರೋನ್ ಫಿಂಚ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಈ ರೀತಿ ಆಸ್ಟ್ರೇಲಿಯಾ ಆಟಗಾರರ ಬಸ್ ಮೇಲೆ ಕಲ್ಲು ಬಿದ್ದ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಚಿತ್ತಗಾಂಗ್ ನಲ್ಲಿ ಆಸ್ಟ್ರೇಲಿಯಾ ಆಟಗಾರರು ಬಾಂಗ್ಲಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಜಯಿಸಿ ಹೋಟೆಲ್ ನತ್ತ ತೆರಳುವಾಗ ದುಷ್ಕರ್ಮಿಗಳು ಕಲ್ಲು ಎಸೆದಿದ್ದರು.

    ಎರಡನೇ ಟಿ 20 ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಳ್ಳುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿಟ್ಟುಕೊಂಡಿದೆ. ಮೊದಲ ಪಂದ್ಯಕ್ಕೆ ಮಳೆ ಬಂದ ಕಾರಣ ಡಕ್‍ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ ಜಯಗಳಿಸಿತ್ತು. ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಗಳಿಸಿದ್ದು, ಮೂರನೇ ಟಿ20 ಶುಕ್ರವಾರ ಹೈದರಾಬಾದ್ ನಲ್ಲಿ ನಡೆಯಲಿದೆ.

    ಇದನ್ನೂ ಓದಿ: ಟಿ20ಯಲ್ಲಿ ಮೊದಲ ಬಾರಿಗೆ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ!

     

  • ಬ್ಯಾಟಿಂಗ್ ವೈಫಲ್ಯ: ಆಸೀಸ್‍ಗೆ 8 ವಿಕೆಟ್‍ಗಳ ಭರ್ಜರಿ ಜಯ

    ಬ್ಯಾಟಿಂಗ್ ವೈಫಲ್ಯ: ಆಸೀಸ್‍ಗೆ 8 ವಿಕೆಟ್‍ಗಳ ಭರ್ಜರಿ ಜಯ

    ಗುವಾಹಟಿ: ಭಾರತದ ವಿರುದ್ಧ ನಡೆದ ಎರಡನೇ ಟಿ 20 ಪಂದ್ಯವನ್ನು ಆಸ್ಟ್ರೇಲಿಯಾ 8 ವಿಕೆಟ್ ಗಳಿಂದ ಗೆದ್ದು ಕೊಳ್ಳುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿಟ್ಟುಕೊಂಡಿದೆ.

    ಗೆಲ್ಲಲು 119 ರನ್‍ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 15.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 122 ರನ್ ಹೊಡೆಯುವ ಮೂಲಕ ಗುರಿಯನ್ನು ಮುಟ್ಟಿತ್ತು.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 16 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದರೆ, 70 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಅಂತಿಮವಾಗಿ 20 ಓವರ್ ನ ಕೊನೆ ಎಸೆತದಲ್ಲಿ ಕುಲದೀಪ್ ಯಾದವ್ ಔಟಾಗುವ ಮೂಲಕ 118 ರನ್ ಗಳಿಗೆ ಆಲೌಟ್ ಆಯ್ತು.

    ಇದೇ ಮೊದಲ ಬಾರಿಗೆ ಟಿ -20 ಯಲ್ಲಿ ಕೊಹ್ಲಿ ಸೊನ್ನೆ ಸುತ್ತಿದರೆ, ಧೋನಿ ಮೊದಲ ಬಾರಿಗೆ ಸ್ಟಂಪ್ ಔಟ್ ಆದರು. ಕೇದಾರ್ ಜಾಧವ್ 27 ರನ್(27 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದರೆ, ಹಾರ್ದಿಕ್ ಪಾಂಡ್ಯ 25 ರನ್(23 ಎಸೆತ, 1 ಬೌಂಡರಿ) ಹೊಡೆದು ಔಟಾದರು.

    ಜೇಸನ್ ಬೆಹಂಡ್ರೂಫ್ ನಾಲ್ಕು ವಿಕೆಟ್ ಪಡೆದರೆ, ಸ್ಪಿನ್ನರ್ ಜಾಂಪಾ 2, ಕೌಂಟರ್‍ನೈಲ್, ಟೈ, ಸ್ಟೋನಿಸ್ ತಲಾ ಒಂದೊಂದು ವಿಕೆಟ್ ಪಡೆದರು.

    ಆಸೀಸ್ ಪರ ಹೆನ್ರಿಕ್ಸ್ ಔಟಾಗದೇ 62 ರನ್(46 ಎಸೆತ, 4 ಬೌಂಡರಿ, 4 ಸಿಕ್ಸರ್) ಟ್ರಾವಿಸ್ ಹೆಡ್ ಔಟಾಗದೇ 48 ರನ್(34 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದು ತಂಡಕ್ಕೆ ಯವನ್ನು ತಂದುಕೊಟ್ಟರು.

    ಮೊದಲ ಪಂದ್ಯಕ್ಕೆ ಮಳೆ ಬಂದ ಕಾರಣ ಡಕ್‍ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ ಜಯಗಳಿಸಿತ್ತು. ಮೂರನೇ ಟಿ 20 ಶುಕ್ರವಾರ ಹೈದರಾಬಾದ್ ನಲ್ಲಿ ನಡೆಯಲಿದೆ.

    ಇದನ್ನೂ ಓದಿ: ಟಿ20ಯಲ್ಲಿ ಮೊದಲ ಬಾರಿಗೆ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ!