Tag: australia

  • ಚೆಂಡು ವಿರೂಪಗೊಳಿಸುತ್ತಿರೋ ಮತ್ತೊಬ್ಬ ಆಸೀಸ್ ಆಟಗಾರನ ವಿಡಿಯೋ ವೈರಲ್

    ಚೆಂಡು ವಿರೂಪಗೊಳಿಸುತ್ತಿರೋ ಮತ್ತೊಬ್ಬ ಆಸೀಸ್ ಆಟಗಾರನ ವಿಡಿಯೋ ವೈರಲ್

    ಸಿಡ್ನಿ: ಕೇಪ್‍ಟೌನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಸೀಸ್ ನ ಮತ್ತೊಬ್ಬ ಆಟಗಾರ ಚೆಂಡು ವಿರೂಪಗೊಳಿಸಲು ಪ್ರಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೇಪ್‍ಟೌನ್ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಆಸೀಸ್ ಬೌಲರ್ ಪ್ಯಾಟ್ ಕಮ್ಮಿನ್ಸ್ ತನ್ನತ್ತ ಬರುತ್ತಿದ್ದ ಚೆಂಡನ್ನು ತಡೆದು ಬಳಿಕ ಕಾಲಿನಿಂದ ತುಳಿಯುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ವಿಡಿಯೋ ವೈರಲ್ ಆಗುತ್ತಿದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಸಲು ಆಗ್ರಹ ವ್ಯಕ್ತವಾಗಿತ್ತು. ಆದರೆ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಘಟನೆ ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಆಕಸ್ಮಿಕವಾಗಿ ನಡೆದಿದೆ ಎಂದು ವಿಕ್ಷಕ ವಿವರಣೆ ನೀಡಿದ ವೇಳೆ ತಿಳಿಸಿದ್ದರು.

    ಘಟನೆ ವೇಳೆ ಆನ್ ಫೀಲ್ಡ್ ಅಂಪೈರ್ ಕೂಡ ಕಂಡು ಚೆಂಡನ್ನು ಪರಿಶೀಲಿಸಿದ್ದ ಬಳಿಕ ಆಟವನ್ನು ಮುಂದುವರೆಸಲು ಅನುಮತಿ ನೀಡಿದ್ದರು. ಈ ಘಟನೆ ಕುರಿತು ದಿನದಾಟದ ಬಳಿಕ ಮಾಧ್ಯಮಗಳು ಸಹ ಪ್ರಶ್ನಿಸಿದ್ದವು. ಈ ವೇಳೆ ಉತ್ತರಿಸಿದ ಕಮ್ಮಿನ್ಸ್ ನಾನು ಚೆಂಡನ್ನು ತಡೆದ ಬಳಿಕ ನೇರ ನಡೆದೆ. ಈ ವೇಳೆ ತಪ್ಪು ನಡೆದಿದೆ. ಕೂಡಲೇ ಅಂಪೈರ್ ಘಟನೆ ಬಗ್ಗೆ ತಿಳಿಸಿದರು ಎಂದು ಸ್ಪಷ್ಟನೆ ನೀಡಿದ್ದರು.

    https://twitter.com/Golfhackno1/status/976807928840839168

    ಈ ಘಟನೆ ನಡೆದ ಎರಡು ದಿನಗಳ ಬಳಿಕ ಆಸೀಸ್ ಆಟಗಾರ ಬ್ಯಾನ್ ಕ್ರಾಫ್ಟ್ ಚೆಂಡು ವಿರೂಪಗೊಳಿಸುವ ವೇಳೆ ಸಿಕ್ಕಿಬಿದ್ದಿದ್ದರು. ಘಟನೆ ಸಂಬಂಧ ಆಸೀಸ್ ಕ್ರಿಕೆಟ್ ಮಂಡಳಿ ನಾಯಕ ಸ್ಮಿತ್, ಉಪನಾಯಕ ವಾರ್ನರನ್ನು ಒಂದು ವರ್ಷ ನಿಷೇಧಗೊಳಿಸಿದ್ದು, ಆರಂಭಿಕ ಆಟಗಾರ ಬ್ಯಾನ್ ಕ್ರಾಫ್ಟ್ 9 ತಿಂಗಳ ನಿಷೇಧ ಎದುರಿಸುತ್ತಿದ್ದಾರೆ.  ಇದನ್ನೂ ಓದಿ:  ಆಸ್ಟ್ರೇಲಿಯಾ ಪರ ಮತ್ತೆ ಕ್ರಿಕೆಟ್ ಆಡಲ್ಲ: ಕ್ಷಮೆಯಾಚಿಸಿ ಕಣ್ಣೀರಿಟ್ಟ ವಾರ್ನರ್

    ಬಿಸಿಸಿಐ ಕೂಡ ಕಳ್ಳಾಟದಲ್ಲಿ ಸಿಕ್ಕಿ ಬಿದ್ದ ಆಸೀಸ್ ಆಟಗಾರರ ಮೇಲೆ ಒಂದು ವರ್ಷ ನಿಷೇಧ ವಿಧಿಸಿದ್ದು ಏಪ್ರಿಲ್ 07 ರಿಂದ ಆರಂಭವಾಗುವ 11ನೇ ಆವೃತ್ತಿಯ ಐಪಿಎಲ್ ಪಂದ್ಯಗಳಿಂದ ಅವರನ್ನು ಹೊರಗಿಟ್ಟಿದೆ. ಇದನ್ನೂ ಓದಿ: 6 ಪದಗಳಿಂದಾಗಿ ಬಚಾವ್ ಆದ್ರು ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್!

    ಘಟನೆ ಕುರಿತು ತನಿಖೆ ಎದುರಿಸಿ ಸಿಡ್ನಿಗೆ ಮರಳಿದ ಆಸೀಸ್ ಆಟಗಾರರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಕೃತ್ಯದ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಇದನ್ನೂ ಓದಿ: ನಾಯಕತ್ವದ ವಿಫಲತೆಯನ್ನು ಒಪ್ಪಿ, ಕ್ಷಮೆ ಕೇಳಿ ಕಣ್ಣೀರಿಟ್ಟ ಸ್ವೀವ್ ಸ್ಮಿತ್

  • ಆಸ್ಟ್ರೇಲಿಯಾ ಪರ ಮತ್ತೆ ಕ್ರಿಕೆಟ್ ಆಡಲ್ಲ: ಕ್ಷಮೆಯಾಚಿಸಿ ಕಣ್ಣೀರಿಟ್ಟ ವಾರ್ನರ್

    ಆಸ್ಟ್ರೇಲಿಯಾ ಪರ ಮತ್ತೆ ಕ್ರಿಕೆಟ್ ಆಡಲ್ಲ: ಕ್ಷಮೆಯಾಚಿಸಿ ಕಣ್ಣೀರಿಟ್ಟ ವಾರ್ನರ್

    ಸಿಡ್ನಿ: ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದ ಆಸೀಸ್ ಉಪನಾಯಕ ಡೇವಿಡ್ ವಾರ್ನರ್ ಕ್ಷಮೆಯಾಚಿಸಿದ್ದಾರೆ.

    ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ವಾರ್ನರ್ ಅವರ ಮೇಲೆ ಒಂದು ವರ್ಷ ನಿಷೇಧ ವಿಧಿಸಿದ ಬಳಿಕ ಮೊದಲ ಬಾರಿಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವಾರ್ನರ್, ತಮ್ಮ ಕೃತ್ಯಕ್ಕೆ ಕ್ಷಮೆ ಕೋರಿದರು. ಅಲ್ಲದೇ ಮತ್ತೆ ಆಸ್ಟ್ರೇಲಿಯಾ ಪರ ಆಡುವುದಿಲ್ಲ ಎಂದು ಹೇಳಿದರು.

    ಈ ವೇಳೆ ಕಣ್ಣೀರಿಟ್ಟ ಅವರು ಮತ್ತೆ ನಾನು ಆಸೀಸ್ ಪರ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ನನ್ನ ವೃತ್ತಿ ಜೀವನದಲ್ಲಿ ಈ ಘಟನೆ ಹೇಗೆ ನಡೆಯಿತು ಎಂಬುದನ್ನು ಅರಿತುಕೊಳ್ಳುತ್ತೇನೆ ಎಂದು ಹೇಳಿ ಆಸ್ಟ್ರೇಲಿಯಾ ಆಟಗಾರರು ಹಾಗೂ ಸಿಬ್ಬಂದಿಯ ಕ್ಷಮೆ ಕೋರಿದರು.

    ವಿಶೇಷವಾಗಿ ಚೆಂಡು ವಿರೂಪಗೊಳಿಸಿದ ಪ್ರಕರಣಲ್ಲಿ ವಾರ್ನರ್ ಪ್ರಮುಖ ಸೂತ್ರಧಾರಿ ಎಂದು ತಿಳಿದು ಬಂದಿದ್ದು, ವಾರ್ನರ್ ಚೆಂಡು ವಿರೂಪಗೊಳಿಸುವ ಕುರಿತು ಸ್ಮಿತ್ ಹಾಗೂ ಬ್ಯಾನ್ ಕ್ರಿಫ್ಟ್ ರ ಮನವೊಲಿಸಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಆಸೀಸ್ ನಾಯಕ ಸ್ಮಿತ್ ಕೂಡ ಗುರುವಾರ ಸುದ್ದಿಗೋಷ್ಠಿ ನಡೆಸಿ ಕ್ಷಮೆಯಾಚಿಸಿದ್ದರು. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಮಿತ್ ಹಾಗೂ ವಾರ್ನರ್ ಗೆ ಒಂದು ವರ್ಷ ನಿಷೇಧ ವಿಧಿಸಿದ್ದು, ಬ್ಯಾನ್ ಕ್ರಾಫ್ಟ್ ಗೆ 9 ತಿಂಗಳು ನಿಷೇಧ ವಿಧಿಸಿದೆ.  ಇದನ್ನೂ ಓದಿ: 6 ಪದಗಳಿಂದಾಗಿ ಬಚಾವ್ ಆದ್ರು ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್!

    ಚೆಂಡು ವಿರೂಪಗೊಳಿಸದ ಪ್ರಕರಣದ ನಂತರ ಆಸೀಸ್ ಕ್ರಿಕೆಟ್ ಮಂಡಳಿ ಭಾರೀ ಮೊತ್ತದ ಪ್ರಯೋಜಕತ್ವವನ್ನು ಕಳೆದು ಕೊಂಡಿತ್ತು. ಅಲ್ಲದೇ ವಯಕ್ತಿಕವಾಗಿ ವಾರ್ನರ್, ಸ್ಮಿತ್ ಹಾಗೂ ಬ್ಯಾನ್ ಕ್ರಿಫ್ಟ್ ಅವರೊಂದಿಗೆ ಖಾಸಗಿ ಸಂಸ್ಥೆಗಳು ಮಾಡಿಕೊಂಡಿದ್ದ ಒಪ್ಪಂದಗಳನ್ನು ರದ್ದುಗೊಳಿಸಿದ್ದವು. ಇದರಿಂದ ಆಸೀಸ್ ಮಂಡಳಿ ಹಾಗೂ ಆಟಗಾರರು ದೊಡ್ಡ ಮೊತ್ತದ ಹಣವನ್ನು ಕಳೆದುಕೊಂಡಿದ್ದರು.  ಇದನ್ನೂ ಓದಿ: ನಾಯಕತ್ವದ ವಿಫಲತೆಯನ್ನು ಒಪ್ಪಿ, ಕ್ಷಮೆ ಕೇಳಿ ಕಣ್ಣೀರಿಟ್ಟ ಸ್ವೀವ್ ಸ್ಮಿತ್

  • ನಾಯಕತ್ವದ ವಿಫಲತೆಯನ್ನು ಒಪ್ಪಿ, ಕ್ಷಮೆ ಕೇಳಿ ಕಣ್ಣೀರಿಟ್ಟ ಸ್ವೀವ್ ಸ್ಮಿತ್

    ನಾಯಕತ್ವದ ವಿಫಲತೆಯನ್ನು ಒಪ್ಪಿ, ಕ್ಷಮೆ ಕೇಳಿ ಕಣ್ಣೀರಿಟ್ಟ ಸ್ವೀವ್ ಸ್ಮಿತ್

    ಸಿಡ್ನಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೆಂಡನ್ನು ವಿರೂಪಗೊಳಿಸಿದ ಪ್ರಕರಣದ ಸಂಪೂರ್ಣ ಹೊಣೆ ಹೊತ್ತಿರುವ ಆಸೀಸ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್, ಘಟನೆಗೆ ಸಂಬಂಧಿಸಿದಂತೆ ಕ್ರಿಕೆಟ್ ಅಭಿಮಾನಿಗಳು ಹಾಗೂ ತಮ್ಮ ಕುಟುಂಬಸ್ಥರಲ್ಲಿ ಕ್ಷಮೆ ಕೇಳಿದ್ದಾರೆ.

    ದಕ್ಷಿಣ ಆಫ್ರಿಕಾದಿಂದ ಹಿಂದುರಿಗಿದ ಬಳಿಕ ಮಾತನಾಡಿದ ಸ್ಮಿತ್, ನನ್ನಿಂದಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ನನ್ನ ಪೋಷಕರಿಗೆ ತುಂಬಾ ನೋವಾಗಿದೆ. ಇದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಕಣ್ಣೀರಿಟಿದ್ದಾರೆ.

    ಕ್ರಿಕೆಟ್ ಆಟವನ್ನು ನಾನು ತುಂಬಾ ಪ್ರೀತಿಸುತ್ತೇನೆ ಮತ್ತು ಕ್ರಿಕೆಟ್ ಆಡುವ ಮಕ್ಕಳ್ಳನ್ನು ಪ್ರೀತಿಸುತ್ತೇನೆ. ಆದರೆ ನೀವು ನನ್ನನ್ನು ಪ್ರಶ್ನಿಸುವಂತಹ ಸಮಯ ಬಂದಿರುವುದು ದುರದೃಷ್ಟಕರ. ಮೊದಲು ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದರು.

    ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸದಂತೆ ಸ್ಮಿತ್ ಮತ್ತು ಬ್ಯಾನ್ ಕ್ರಾಫ್ಟ್ ಪಂದ್ಯದ ನಂತರ ಮಾತನಾಡಿ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದರು.

    ಮೌನ ಮುರಿದ ವಾರ್ನರ್: ಸ್ಮಿತ್ ಹೇಳಿಕೆಗೂ ಮುನ್ನವೇ ವಾರ್ನರ್ ಸಾಮಾಜಿಕ ಜಾಲದಲ್ಲಿ ಕ್ಷಮೆ ಕೇಳಿದ್ದು, ಪ್ರಕರಣದ ಪೂರ್ಣ ಜವಾಬ್ದಾರಿಯನ್ನು ಹೊರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 6 ಪದಗಳಿಂದಾಗಿ ಬಚಾವ್ ಆದ್ರು ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್!

    https://www.instagram.com/p/Bg5NwaFn2ZK/?utm_source=ig_embed

    ಈ ಕುರಿತು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಬರೆದು ಕೊಂಡಿರುವ ಅವರು, ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ. ಈ ಕೃತ್ಯದಿಂದ ಕ್ರೀಡಾ ಅಭಿಮಾನಿಗಗಳಿಗೆ ಮತ್ತು ಕ್ರೀಡಾ ಮೌಲ್ಯಗಳಿಗೆ ದಕ್ಕೆ ಉಂಟಾಗಿದೆ. ಅಭಿಮಾನಿಗಳಿಗೆ ಉಂಟಾದ ನೋವನ್ನು ಅರ್ಥ ಮಾಡಿಕೊಂಡಿದ್ದೇನೆ. ಆದರೆ ನನ್ನ ಬಾಲ್ಯದಿಂದಲೂ ಕ್ರಿಕೆಟ್ ಎಂದರೆ ಪ್ರೀತಿ. ಸದ್ಯ ತಾನು ನನ್ನ ಕುಟುಂಬ, ಸ್ನೇಹಿತರು ಮತ್ತು ವಿಶ್ವಾಸಾರ್ಹ ಸಲಹೆಗಾರರೊಂದಿಗೆ ಸಮಯ ಕಳೆಯಬೇಕಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:  ಚೆಂಡು ವಿರೂಪಗೊಳಿಸಿದ ಆಸೀಸ್ ಕಳ್ಳಾಟ ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ!

    ಆಸೀಸ್ ಕ್ರಿಕೆಟ್ ಮಂಡಳಿ ಬುಧವಾರ ಚೆಂಡು ವಿರೂಪಗೊಳಿಸಿದ ಪ್ರಮುಖ ಆಟಗಾರರಾದ ಸ್ಮಿತ್ ಹಾಗೂ ವಾರ್ನರ್ ಮೇಲೆ ಒಂದು ವರ್ಷದ ಕಾಲ ನಿಷೇಧ ವಿಧಿಸಿ ಕಠಿಣ ಸಂದೇಶ ರವಾನಿಸಿತ್ತು. ಆದರೆ ದೇಶಿಯ ಕ್ರಿಕೆಟಿನಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಬಿಸಿಸಿಐ ಕೂಡ ಐಪಿಎಲ್ ನಲ್ಲಿ ಒಂದು ವರ್ಷ ಭಾಗವಹಿಸಿಲು ನಿಷೇಧ ವಿಧಿಸಿದೆ. ಇನ್ನು ಚೆಂಡು ವಿರೂಪಗೊಳಿಸಿದ್ದ ಬ್ಯಾನ್ ಕ್ರಾಫ್ಟ್ 9 ತಿಂಗಳು ನಿಷೇಧ ಒಳಗಾಗಿದ್ದಾರೆ. ಸದ್ಯ ಮೂವರನ್ನು ವಿಚಾರಣೆಗೊಳಪಟ್ಟ ಬಳಿಕ ಆಸ್ಟ್ರೇಲಿಯಾಗೆ ಹಿಂದಿರುಗಿದ್ದಾರೆ. ಇದನ್ನೂ ಓದಿ: ಆಟಗಾರರ ಕಳ್ಳಾಟಕ್ಕೆ ಭಾರೀ ಮೊತ್ತದ ಪ್ರಾಯೋಜಕತ್ವವನ್ನು ಕಳೆದುಕೊಂಡಿತು ಆಸ್ಟ್ರೇಲಿಯಾ!

     

  • 6 ಪದಗಳಿಂದಾಗಿ ಬಚಾವ್ ಆದ್ರು ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್!

    6 ಪದಗಳಿಂದಾಗಿ ಬಚಾವ್ ಆದ್ರು ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್!

    ಸಿಡ್ನಿ: ಆಸೀಸ್ ಆಟಗಾರರು ಚೆಂಡು ವಿರೂಪಗೊಳಿಸಿ ಸಿಕ್ಕಿ ಬಿದ್ದ ಸಮಯದಲ್ಲಿ ಕೋಚ್ ಡ್ಯಾರೆನ್ ಲೆಹ್ಮನ್ ಆಡಿದ ಆರು ಪದಗಳು ಅವರನ್ನು ಈಗ ಉಳಿಸಿದೆ.

    ಹೌದು, ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಆಸೀಸ್ ಆರಂಭಿಕ ಆಟಗಾರ ಬ್ಯಾನ್ ಕ್ರಾಫ್ಟ್ ಚೆಂಡು ವಿರೂಪಗೊಳಿಸುತ್ತಿರುವ ವೇಳೆ ಕ್ಯಾಮೆರಾದ ಕಣ್ಣಿಗೆ ಸಿಕ್ಕಿ ಬಿದ್ದಿದ್ದರು. ಇದನ್ನು ನೋಡಿದ ಡ್ಯಾರೆನ್ ಲೆಹ್ಮನ್ ವಾಕಿಟಾಕಿಯಲ್ಲಿ ‘What the f*** is going on?’ ಎಂದು ಮೈದಾನದಲ್ಲಿದ್ದ 12ನೇ ಆಟಗಾರರನ್ನು ಪ್ರಶ್ನಿಸಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಜೇಮ್ಸ್ ಸುಂದರ್ಲ್ಯಾಂಡ್  ಪ್ರಕರಣದಲ್ಲಿ ಕೋಚ್ ಲೆಹ್ಮನ್ ಅವರ ಪಾತ್ರದ ಕುರಿತು ಘಟನೆ ವೇಳೆ ಅವರು ವಾಕಿಟಾಕಿ ನಡೆಸಿದ್ದ ಸಂಭಾಷಣೆ ಪ್ರಮುಖ ಸಾಕ್ಷಿಯಾಗಿದೆ. ಇದು ಅವರನ್ನು ಪ್ರಕರಣದ ಶಿಕ್ಷೆಯಿಂದ ಕಾಪಾಡಿದೆ ಎಂದು ತಿಳಿಸಿದ್ದಾರೆ.

    ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಬುಧವಾರ ನಾಯಕ ಸ್ಮಿತ್, ಉಪನಾಯಕ ವಾರ್ನರ್ ಗೆ ಒಂದು ವರ್ಷ ಹಾಗೂ ಆರಂಭಿಕ ಆಟಗಾರ ಬ್ಯಾನ್ ಕ್ರಾಫ್ಟ್ ಗೆ 9 ತಿಂಗಳು ಶಿಕ್ಷೆ ವಿಧಿಸಿತ್ತು. ಆದರೆ ಕೋಚ್ ಲೆಹ್ಮನ್ ಗೆ ತಮ್ಮ ಸ್ಥಾನದಲ್ಲಿ ಮುಂದುವರೆಲು ಸೂಚಿಸಿದೆ.

    ಪ್ರಕರಣದ ತನಿಖೆ ನಡೆಸಿದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನೇಮಿಸಿದ್ದ ಸಮಿತಿಯ ಮುಖ್ಯಸ್ಥ ಇಯಾನ್ ರಾಯ್ ಸತ್ಯಾಂಶವನ್ನು ಹೊರ ತಂದಿದ್ದಾರೆ. ಪ್ರಕರಣದಲ್ಲಿ ಕೋಚ್ ಲೆಹ್ಮನ್ ಪಾತ್ರವಹಿಸಿಲ್ಲ ಹಾಗೂ ಈ ಕುರಿತು ತಿಳಿದಿಲ್ಲ ಎಂಬುದು ತಮಗೆ ತೃಪ್ತಿ ತಂದಿದೆ ಎಂದು ಸುಂದರ್ಲ್ಯಾಂಡ್ ಹೇಳಿದ್ದಾರೆ.

    ಇದೇ ವೇಳೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆಟಗಾರರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದಾಗಿ ತಿಳಿಸಿದ ಅವರು, ತಮ್ಮ ಕೃತ್ಯದ ಕುರಿತು ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಚೆಂಡು ವಿರೂಪಗೊಳಿಸಿದ ಆಸೀಸ್ ಕಳ್ಳಾಟ ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ!

    ಬಿಸಿಸಿಐ ಸ್ಮಿತ್ ಹಾಗೂ ವಾರ್ನರ್ ಐಪಿಎಲ್ ನಲ್ಲಿ ಭಾಗವಹಿಸಿದಂತೆ ಒಂದು ವರ್ಷ ನಿಷೇಧ ವಿಧಿಸಿದೆ. ಇದರೊಂದಿಗೆ ಕಳ್ಳಾಟದ ನಡೆಸಿದ ಪರಿಣಾಮವಾಗಿ ಇಬ್ಬರು ಆಟಗಾರರು ಸುಮಾರು 13 ಕೋಟಿ ರೂ. ಮೊತ್ತದ ಒಪ್ಪಂದಗಳನ್ನು ಕಳೆದು ಕೊಂಡಿದ್ದಾರೆ. ಇದನ್ನೂ ಓದಿ: ಆಟಗಾರರ ಕಳ್ಳಾಟಕ್ಕೆ ಭಾರೀ ಮೊತ್ತದ ಪ್ರಾಯೋಜಕತ್ವವನ್ನು ಕಳೆದುಕೊಂಡಿತು ಆಸ್ಟ್ರೇಲಿಯಾ!

  • ಆಟಗಾರರ ಕಳ್ಳಾಟಕ್ಕೆ ಭಾರೀ ಮೊತ್ತದ ಪ್ರಾಯೋಜಕತ್ವವನ್ನು ಕಳೆದುಕೊಂಡಿತು ಆಸ್ಟ್ರೇಲಿಯಾ!

    ಆಟಗಾರರ ಕಳ್ಳಾಟಕ್ಕೆ ಭಾರೀ ಮೊತ್ತದ ಪ್ರಾಯೋಜಕತ್ವವನ್ನು ಕಳೆದುಕೊಂಡಿತು ಆಸ್ಟ್ರೇಲಿಯಾ!

    ಸಿಡ್ನಿ: ಆಟಗಾರರು ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಬಳಿಕ ಆಸ್ಟ್ರೇಲಿಯಾದ ಮ್ಯಾಗೆಲ್ಲಾನ್ ಫೈನಾನ್ಷಿಯಲ್ ಗ್ರೂಪ್ ಸಂಸ್ಥೆ ತನ್ನ ಪ್ರಯೋಜಕತ್ವವನ್ನು ಹಿಂಪಡೆದಿದೆ. ಇದು ಆಸೀಸ್ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟವನ್ನು ಉಂಟು ಮಾಡಿದೆ.

    ಮ್ಯಾಗೆಲ್ಲಾನ್ ಸಂಸ್ಥೆ ತನ್ನ ಪ್ರಯೋಜಕತ್ವನ್ನು ಹಿಂಪಡೆದ ಕಾರಣ ಆಸೀಸ್ ಮಂಡಳಿ ತೀವ್ರ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ಮಾಧ್ಯಮಗಳ ವರದಿ ಪ್ರಕಾರ ಮ್ಯಾಗೆಲ್ಲಾನ್ ಸಂಸ್ಥೆಯೊಂದಿಗೆ ಸುಮಾರು 17-20 ದಶಲಕ್ಷ ಆಸ್ಟ್ರೇಲಿಯಾನ್ ಡಾಲರ್(ಅಂದಾಜು 90 ಕೋಟಿ ರೂ.) ಮೊತ್ತದ ಒಪ್ಪಂದವಾಗಿತ್ತು. ಇದರೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಭಾರೀ ಮೊತ್ತದ ಪ್ರಯೋಜಕತ್ವವನ್ನು ಕಳೆದುಕೊಂಡಿದೆ. ಆದರೆ ಕೆಲ ಸಂಸ್ಥೆಗಳು ತಮ್ಮ ಪ್ರಯೋಜಕತ್ವವನ್ನು ಮುಂದುವರೆಸಿವೆ.

    ಈ ಕುರಿತು ಗುರುವಾರ ಪ್ರತಿಕ್ರಿಯೆ ನೀಡಿರುವ ಮ್ಯಾಗೆಲ್ಲಾನ್ ಸಂಸ್ಥೆ, ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾಗಿದ್ದ ಮೂರು ವರ್ಷಗಳ ಪ್ರಯೋಜಕತ್ವ ಒಪ್ಪಂದವನ್ನು ಅಂತ್ಯಗೊಳಿಸಲಾಗಿದೆ. ಈ ಹಿಂದೆ ಸಮಗ್ರತೆ, ನಾಯಕತ್ವ, ಸಮರ್ಪಣೆ ಸಂಸ್ಕೃತಿಯ ಮೌಲ್ಯಗಳ ಆಧಾರದ ಮೇಲೆ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ತನ್ನ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದೆ.

    ದಕ್ಷಿಣ ಆಫ್ರಿಕಾದ ಮೂರನೇ ಟೆಸ್ಟ್ ನಲ್ಲಿ ಆಸೀಸ್ ಆಟಗಾರರು ಉದ್ದೇಶ ಪೂರಕವಾಗಿ ನಿಯಮಗಳನ್ನು ಮುರಿದಿರುವ ಕಾರಣ ಇದು ಒಂದು ಪಿತೂರಿಯಾಗಿದ್ದು, ಆಟದ ಸಮಗ್ರತೆಯ ಮನೋಭವಕ್ಕೆ ಧಕ್ಕೆಯಾಗಿದೆ ಎಂದು ಮ್ಯಾಗೆಲ್ಲಾನ್ ಸಿಇಒ ಹ್ಯಾಮಿಶ್ ಡೌಗ್ಲಾಸ್ ಹೇಳಿದ್ದಾರೆ.

    ಆಸೀಸ್ ಕ್ರಿಕೆಟ್ ಮಂಡಳಿ ಬುಧವಾರ ಚೆಂಡು ವಿರೂಪಗೊಳಿದ ಪ್ರಮುಖ ಆಟಗಾರರಾದ ಸ್ಮಿತ್ ಹಾಗೂ ವಾರ್ನರ್ ಮೇಲೆ ಒಂದು ವರ್ಷದ ಕಾಲ ನಿಷೇಧ ವಿಧಿಸಿ ಕಠಿಣ ಸಂದೇಶ ರವಾಸಿತ್ತು. ಆದರೆ ದೇಶಿಯ ಕ್ರಿಕೆಟ್ ನಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಬಿಸಿಸಿಐ ಕೂಡ ಐಪಿಎಲ್ ನಲ್ಲಿ ಒಂದು ವರ್ಷ ಭಾಗವಹಿಸಿಲು ನಿಷೇಧ ವಿಧಿಸಿದೆ. ಇನ್ನು ಚೆಂಡು ವಿರೂಪಗೊಳಿಸಿದ್ದ ಬ್ಯಾನ್ ಕ್ರಾಫ್ಟ್ 9 ತಿಂಗಳು ನಿಷೇಧಕ್ಕೆ ಒಳಗಾಗಿದ್ದಾರೆ. ಸದ್ಯ ಮೂವರು ಆಟಗಾರರು ವಿಚಾರಣೆಗೊಳಪಟ್ಟ ಬಳಿಕ ಆಸ್ಟ್ರೇಲಿಯಾಗೆ ಹಿಂದಿರುಗಿದ್ದಾರೆ. ಇದನ್ನೂ ಓದಿ:  ಚೆಂಡು ವಿರೂಪಗೊಳಿಸಿದ ಆಸೀಸ್ ಕಳ್ಳಾಟ ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ!

    ಆಸೀಸ್ ಆಟಗಾರ ವಾರ್ನರ್ ಹಾಗೂ ಬ್ಯಾನ್ ಕ್ರಾಫ್ಟ್ ರೊಂದಿಗೆ ಉಡುಪು ತಯಾರಿಕ ಸಂಸ್ಥೆ ಎಎಸ್‍ಐಸಿಎಸ್ ಮಾಡಿಕೊಂಡಿದ್ದ ಒಪ್ಪಂದವನ್ನು ಅಂತ್ಯಗೊಳಿಸುವುದಾಗಿ ತಿಳಿಸಿದೆ. ಮತ್ತೊಂದೆಡೆ ಎಲೆಕ್ಟ್ರಾನಿಕ್ಸ್ ತಯಾರಿಕಾ ಸಂಸ್ಥೆ ವಾರ್ನರ್ ರೊಂದಿನ ಒಪ್ಪಂದವನ್ನು ಅಂತ್ಯಗೊಳಿಸಿದೆ.

  • ಚೆಂಡು ವಿರೂಪಗೊಳಿಸಿದ ಆಸೀಸ್ ಕಳ್ಳಾಟ ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ!

    ಚೆಂಡು ವಿರೂಪಗೊಳಿಸಿದ ಆಸೀಸ್ ಕಳ್ಳಾಟ ಸೆರೆಹಿಡಿದ ಕ್ಯಾಮೆರಾಮೆನ್ ಈಗ ಹೀರೋ!

    ಕೇಪ್‍ಟೌನ್: ಆಸೀಸ್ ಆಟಗಾರರ ಬ್ಯಾನ್ ಕ್ರಾಪ್ಟ್ ಚೆಂಡು ವಿರೂಪಗೊಳಿಸುತ್ತಿದ್ದ ದೃಶ್ಯಗಳನ್ನು ಸೆರೆ ಹಿಡಿದ ಕ್ಯಾಮೆರಾಮೆನ್ ಗೆ ಪ್ರಶಂಸೆಯ ಸುರಿಮಳೆ ವ್ಯಕ್ತವಾಗಿದೆ.

    ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂದು ಆಸ್ಟ್ರೇಲಿಯಾ ಆಟಗಾರ ಬ್ರಾಕ್ ಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಿದ ದೃಶ್ಯಗಳನ್ನು ಜೋಟಾನಿ ಅಸ್ಕರ್ ತನ್ನ ಕ್ಯಾಮರಾ ಮೂಲಕ ಸೆರೆ ಹಿಡಿದಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಸ್ಕರ್, ತಾನು ತನ್ನ ಕೆಲಸವನ್ನು ಅಷ್ಟೇ ಮಾಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಘಟನೆ ಕುರಿತು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದ ದಕ್ಷಿಣ ಆಫ್ರಿಕಾದ ವಿಕ್ಷಣಾ ವಿವರಣೆಗಾರ ನೀಲ್ ಮ್ಯಾಂಥಾರ್ಪ್ ಪಂದ್ಯದ ವೇಳೆ ಆಟಗಾರರ ವರ್ತನೆ ಅನುಮಾನಸ್ಪದವಾಗಿ ಕಂಡು ಬಂದಿತ್ತು. ಈ ಕೃತ್ಯವನ್ನು ಬಯಲಿಗೆ ತಂದ ಶ್ರೇಯಸ್ಸು ಕ್ಯಾಮೆರಾಮೆನ್ ಗೆ ಸಲ್ಲುತ್ತದೆ. ಅನುಚಿತ ಘಟನೆ ನಡೆಯುವ ಕುರಿತು ಅವರು ಗ್ರಹಿಸಿದ್ದರು ಎಂದು ಹೇಳಿ ಶ್ಲಾಘಿಸಿದ್ದಾರೆ.

    ಘಟನೆಯನ್ನು ಮೈದಾನದ ಸ್ಟ್ಯಾಂಡ್ ನಲ್ಲಿ ಕುಳಿತು ಗ್ರಹಿಸಲು ಸಾಧ್ಯವಿಲ್ಲ. ಅಲ್ಲದೇ ಸಮಾನ್ಯ ಟೆಲಿವಿಷನ್‍ಗಳಲ್ಲೂ ಇದನ್ನು ಗಮನಿಸಲು ಸಾಧ್ಯವಿಲ್ಲ. ಕ್ಯಾಮರಾ ಮೆನ್ ಗಳು ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ. ಸರಿಯಾದ ಸಮಯದಲ್ಲಿ ದೃಶ್ಯಗಳನ್ನು ಸೆರೆ ಹಿಡಿಯುವ ಕೌಶಲ್ಯವನ್ನು ಹೊಂದಿದ್ದರಿಂದ ಪ್ರಕರಣ ಬಯಲಾಗಿದೆ ಎಂದರು. ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ನಾಯಕತ್ವ ಸ್ಥಾನದಿಂದ ಸ್ಮಿತ್ ಔಟ್ – ರಹಾನೆಗೆ ಪಟ್ಟ

    ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾನ್ ಕ್ರಾಫ್ಟ್ ಹಾಗೂ ನಾಯಕ ಸ್ಮಿತ್ ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದರು. ಸದ್ಯ ಅಸೀಸ್ ನಾಯಕ ಸ್ಮಿತ್, ಉಪನಾಯಕ ವಾರ್ನರ್ ಒಂದು ವರ್ಷದ ನಿಷೇಧಕ್ಕೆ ಒಳಪಡುವ ಸಾಧ್ಯತೆಗಳಿವೆ. ಇದನ್ನೂ ಓದಿ:  ಚೆಂಡು ವಿರೂಪಗೊಳಿಸಿದ್ದಕ್ಕೆ ಸ್ಮಿತ್, ವಾರ್ನರ್ ಗೆ ಒಂದು ವರ್ಷ ನಿಷೇಧ?

  • ಚೆಂಡು ವಿರೂಪಗೊಳಿಸಿದ್ದಕ್ಕೆ ಸ್ಮಿತ್, ವಾರ್ನರ್ ಗೆ ಒಂದು ವರ್ಷ ನಿಷೇಧ?

    ಚೆಂಡು ವಿರೂಪಗೊಳಿಸಿದ್ದಕ್ಕೆ ಸ್ಮಿತ್, ವಾರ್ನರ್ ಗೆ ಒಂದು ವರ್ಷ ನಿಷೇಧ?

    ಕೇಪ್‍ಟೌನ್: ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿದ ಆಸೀಸ್ ನಾಯಕ ಸ್ಮಿತ್, ಉಪನಾಯಕ ವಾರ್ನರ್ ರನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಒಂದು ವರ್ಷ ನಿಷೇಧ ಗೊಳಿಸುವ ಸಾಧ್ಯತೆ ಇದೆ ಎಂದು ಆಸೀಸ್ ಮಾಧ್ಯಮಗಳು ವರದಿ ಮಾಡಿದೆ.

    ಆಸೀಸ್ ಆಟಗಾರರ ಕೃತ್ಯದ ಕುರಿತು ಕಟು ಟೀಕೆ ವ್ಯಕ್ತಪಡಿಸಿರುವ ಮಾಧ್ಯಮಗಳು, ತಂಡದ ಕೋಚ್ ಡ್ಯಾರೆನ್ ಲೆಹ್ಮನ್ ಅವರು ಸಹ ತಮ್ಮ ಸ್ಥಾನ ತೊರೆಯುವ ಸಾಧ್ಯತೆಯೂ ಇದೆ ಎಂದು ವರದಿ ಮಾಡಿವೆ. 2013 ರಲ್ಲಿ ಆಸ್ಟ್ರೇಲಿಯಾ ತಂಡದ ಕೋಚ್ ಆಗಿ ಲೆಹ್ಮನ್ ಆಯ್ಕೆ ಆಗಿದ್ದರು. ಸದ್ಯ ಆಸೀಸ್ ಆಟಗಾರರ ಕೃತ್ಯದ ಕುರಿತು ದಕ್ಷಿಣ ಆಫ್ರಿಕಾಗೆ ತೆರಳಿರುವ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

    ಆಟಗಾರರ ಮೋಸದಾಟದ ಬಗ್ಗೆ ಆಸೀಸ್ ಮಾಧ್ಯಮಗಳು ಕೆಂಡಕಾರಿದ್ದು, ಸ್ಮಿತ್ ಹಾಗೂ ವಾರ್ನರ್ ಮೇಲೆ ನಿಷೇಧ ವಿಧಿಸಲು ಆಗ್ರಹಿಸಿವೆ. ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಮೇಲು ಹೆಚ್ಚಿನ ಒತ್ತಡ ವ್ಯಕ್ತವಾಗುತ್ತಿದ್ದು, ತನಿಖೆಯ ಕುರಿತು ಅಭಿಮಾನಿಗಳಿಗೆ ಶೀಘ್ರವೇ ಮಾಹಿತಿ ನೀಡುವುದಾಗಿ ಬೋರ್ಡ್ ಅಧ್ಯಕ್ಷ ಸದರ್ಲ್ಯಾಂಡ್ ತಿಳಿಸಿದ್ದಾರೆ.

    ಚೆಂಡು ವಿರೂಪಗೊಳಿಸುವ ಜಾಲ ರೂಪಿಸಿದ್ದ ಆಸೀಸ್ ನಾಯಕ ಸ್ಮಿತ್ ಗೆ ಐಸಿಸಿ ಪಂದ್ಯದ 100% ದಂಡ, ಒಂದು ಪಂದ್ಯದ ನಿಷೇಧ ಹಾಗೂ ಬ್ಯಾಟ್ಸ್ ಮನ್ ಬ್ಯಾನ್ ಕ್ರಾಫ್ಟ್ ಗೆ ಪಂದ್ಯದ 75% ದಂಡ, 3 ಡಿಮೆರಿಟ್ ಅಂಕಗಳನ್ನು ನೀಡಿದೆ. ಅಲ್ಲದೇ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಮಿತ್ ಹಾಗೂ ಉಪನಾಯಕ ವಾರ್ನರ್ ಅವರ ಸ್ಥಾನವನ್ನು ತಲೆ ದಂಡ ಮಾಡಿದೆ. ಇದರೊಂದಿಗೆ ಸ್ಮಿತ್ ಐಪಿಎಲ್ ನ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವವನ್ನು ಕಳೆದುಕೊಂಡಿದ್ದಾರೆ. ಸದ್ಯ ಆರ್ ಆರ್ ನಾಯಕತ್ವವನ್ನು ಟೀಂ ಇಂಡಿಯಾದ ಬ್ಯಾಟ್ಸ್ ಮನ್ ರಹಾನೆ ಪಡೆದಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ನಾಯಕತ್ವ ಸ್ಥಾನದಿಂದ ಸ್ಮಿತ್ ಔಟ್ – ರಹಾನೆಗೆ ಪಟ್ಟ

    ನಡೆದಿದ್ದು ಏನು?
    ಆಸೀಸ್ ಆರಂಭಿಕ ಆಟಗಾರ ಕ್ಯಾಮರಾನ್ ಬ್ಯಾನ್ ಕ್ರಾಪ್ಟ್ ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 3ನೇ ದಿನದ ವೇಳೆ ಚೆಂಡನ್ನ ವಿರೂಪಗೊಳಿಸಿದ್ದರು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದಿನದಾಟದ ಬಳಿಕ ಮಾತನಾಡಿದ ಆಸೀಸ್ ನಾಯಕ ಸ್ಮಿತ್ ಹಾಗೂ ಬ್ಯಾನ್‍ಕ್ರಾಫ್ಟ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು.  ಇದನ್ನೂ ಓದಿ: ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ ನೀತಿ ವಿರುದ್ಧ ಹರ್ಭಜನ್ ಕಿಡಿ

  • ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ ನೀತಿ ವಿರುದ್ಧ ಹರ್ಭಜನ್ ಕಿಡಿ

    ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ ನೀತಿ ವಿರುದ್ಧ ಹರ್ಭಜನ್ ಕಿಡಿ

    ನವದೆಹಲಿ: ಆಸೀಸ್ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಕಳ್ಳಾಟ ನಡೆಸಿದ ಬಳಿಕ ಟೀಂ ಇಂಡಿಯಾ ಆಫ್‍ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಐಸಿಸಿ ವಿರುದ್ಧ ಕಿಡಿಕಾರಿ ಟ್ವೀಟ್ ಮಾಡಿದ್ದಾರೆ.

    ಚೆಂಡು ವಿರೂಪಗೊಳಿಸುವ ಜಾಲ ರೂಪಿಸಿದ್ದ ಆಸೀಸ್ ನಾಯಕ ಸ್ಮಿತ್ ಗೆ ಐಸಿಸಿ ಪಂದ್ಯದ 100% ದಂಡ, ಒಂದು ಪಂದ್ಯದ ನಿಷೇಧ ಹಾಗೂ ಬ್ಯಾಟ್ಸ್ ಮನ್ ಬ್ಯಾನ್ ಕ್ರಾಫ್ಟ್ ಗೆ ಪಂದ್ಯದ 75% ದಂಡ, 3 ಡಿಮೆರಿಟ್ ಅಂಕಗಳನ್ನು ನೀಡಿದೆ. ಅಲ್ಲದೇ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಮಿತ್ ಹಾಗೂ ಉಪನಾಯಕ ವಾರ್ನರ್ ಅವರ ಸ್ಥಾನವನ್ನು ತಲೆ ದಂಡ ಮಾಡಿದೆ. ಆದರೆ ಪ್ರಕರಣದ ಕುರಿತು ಐಸಿಸಿ ಆಸೀಸ್ ಆಟಗಾರರ ವಿರುದ್ಧ ಕೈಗೊಂಡಿರುವ ಕ್ರಮದ ಕುರಿತು ಹರ್ಭಜನ್ ಕೋಪಗೊಂಡಿದ್ದಾರೆ.


    ಈ ಬಗ್ಗೆ ಟ್ವೀಟ್ ಮಾಡಿರುವ ಹರ್ಭಜನ್ `ವಾವ್ ಐಸಿಸಿ. ಉತ್ತಮ ಕ್ರಮ ಮತ್ತು ನ್ಯಾಯೋಚಿತ ವರ್ತನೆ. ಚೆಂಡು ವಿರೂಪಗೊಳಿಸಿದ ಬ್ಯಾನ್ ಕ್ರಾಫ್ಟ್ ಗೆ ನಿಷೇಧವಿಲ್ಲ. 2001 ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಹೆಚ್ಚು ಬಾರಿ ಅಪೀಲ್ ಮಾಡಿದ್ದೇವೆ ಎಂದು ಯಾವುದೇ ಸಾಕ್ಷಿ ಇಲ್ಲದೆ 6 ಮಂದಿಗೆ ನಿಷೇಧ ವಿಧಿಸಿದ್ದೀರಿ. 2008 ರ ಸಿಡ್ನಿ ಟೆಸ್ಟ್ ಘಟನೆ ನಿಮಗೆ ನೆನಪಿಲ್ಲವೇ? ತಪ್ಪು ಮಾಡದೆಯೂ 3 ಪಂದ್ಯಕ್ಕೆ ನಿಷೇಧ ಹೇರಿದ್ದೀರಿ. ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ನಿಯಮ ಎಂದು ಬರೆದು ಟ್ವೀಟ್‍ನಲ್ಲಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನು ಓದಿ: ಸ್ವೀವ್ ಸ್ಮಿತ್, ವಾರ್ನರ್ ಐಪಿಎಲ್ ಭವಿಷ್ಯ ಶೀಘ್ರವೇ ನಿರ್ಧಾರ

    ಆಸೀಸ್ ಆಟಗಾರರ ಕೃತ್ಯ ಕ್ರಿಕೆಟ್ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಲಿದ್ದು, ವಿಶ್ವ ಕ್ರಿಕೆಟ್‍ನ ಹಲವು ದಿಗ್ಗಜ ಆಟಗಾರರು ಕೃತ್ಯದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಆಸೀಸ್ ನ ಮಾಧ್ಯಮಗಳು ಸಹ ತಮ್ಮ ದೇಶದ ಕ್ರಿಕೆಟ್ ಆಟಗಾರರ ಕೃತ್ಯವನ್ನು ಖಂಡಿಸಿವೆ.

  • ಸ್ವೀವ್ ಸ್ಮಿತ್, ವಾರ್ನರ್ ಐಪಿಎಲ್ ಭವಿಷ್ಯ ಶೀಘ್ರವೇ ನಿರ್ಧಾರ

    ಸ್ವೀವ್ ಸ್ಮಿತ್, ವಾರ್ನರ್ ಐಪಿಎಲ್ ಭವಿಷ್ಯ ಶೀಘ್ರವೇ ನಿರ್ಧಾರ

    ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಕಳ್ಳಾಟ ಬಯಲಾದ ಬಳಿಕ ನಾಯಕ ಸ್ಮಿತ್ ಹಾಗೂ ಉಪನಾಯಕ ವಾರ್ನರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣ ಏಪ್ರಿಲ್ 6 ರಂದು ಆರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕೆಲ ಬದಲಾವಣೆಗೆ ಕಾರಣವಾಗಲಿದೆ ಎನ್ನಲಾಗಿದೆ.

    ರಾಜಸ್ಥಾನ ರಾಯಲ್ಸ್ ತಂಡ ನಾಯಕತ್ವ ವಹಿಸುವ ಸ್ಮಿತ್ ಹಾಗೂ ಸನ್‍ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ವಹಿಸುವ ಡೇವಿಡ್ ವಾರ್ನರ್ ಸ್ಥಾನಗಳು ಬದಲಾಗುವ ಸಾಧ್ಯತೆಗಳಿವೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ, ಈ ಘಟನೆ ಬಹಳ ಗಂಭೀರವಾಗಿದ್ದು, ಐಸಿಸಿ ಸಮಿತಿ ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

    2018ರ ಐಪಿಎಲ್ ಪಂದ್ಯಗಳು ಏಪ್ರಿಲ್ 7 ರಿಂದ ಆರಂಭವಾಗುತ್ತಿರುವುದರಿಂದ ಈ ಅವಧಿಗೂ ಮುನ್ನವೇ ನಿರ್ಧಾರ ಕೈಗೊಳ್ಳಲಾಗುತ್ತದೆ. ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ವೇಳೆಯಲ್ಲಿ ನಿರ್ಧಾರ ಪ್ರಕಟಿಸುವುದು ಸೂಕ್ತ ಕ್ರಮವಲ್ಲ, ತನಿಖೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು, ಬಿಸಿಸಿಐ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಸಮಿತಿ ಕೈಗೊಳ್ಳುವ ತೀರ್ಮಾನ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದಾರೆ.

    ಪ್ರಕರಣದ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ರಾಜಸ್ತಾನ ರಾಯಲ್ಸ್ ತಂಡದ ಮುಖ್ಯಸ್ಥ ರಂಜಿತ್ ಬಾರ್ತಕುರ್, ಸ್ಮಿತ್ ಅವರ ಬಗ್ಗೆ ನಿರ್ಧಾರ ಕೈಗೊಳ್ಳುವ ಮುನ್ನ ಬಿಸಿಸಿಐ ನಿರ್ದೇಶನಗಳನ್ನು ಪಡೆಯುವುದಾಗಿ ತಿಳಿಸಿದ್ದಾರೆ. ಅಲ್ಲದೇ ಕ್ರಿಕೆಟ್ ಆಟಕ್ಕೆ ಕಳಂಕ ತರುವ ಘಟನೆಗಳನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಈ ಕುರಿತು ಇದುವರೆಗೆ ಹೈದರಾಬಾದ್ ತಂಡ ಮಾಲೀಕರು ಯಾವುದೇ ಪ್ರತಿಕ್ರಿಯೇ ನೀಡಿಲ್ಲ.

    ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಕ್ಯಾಮರಾನ್ ಬ್ಯಾನ್ ಕ್ರಾಫ್ಟ್ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕ ಸ್ಟಿವ್ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್‍ನ ಇನ್ನು 2 ದಿನದ ಆಟ ಬಾಕಿಯಿರುವಾಗಲೆ ರಾಜೀನಾಮೆ ನೀಡಿದ್ದು, ವಿಕೇಟ್ ಕೀಪರ್ ಟೈಮ್ ಪೈನ್ ತಂಡದ ಉಸ್ತುವಾರಿ ನಾಯಕರಾಗಲಿದ್ದಾರೆ. ಇಬ್ಬರು ತಮ್ಮ ಸ್ಥಾನದಿಂದ ಕೆಳಗಿಳಿದಿರುವ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಸಿಇಒ ಜೇಮ್ಸ್ ಸುಟರ್‍ಲ್ಯಾಂಡ್ ಸ್ಪಷ್ಟಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಸದ್ಯ ಐಸಿಸಿ ಸ್ಮಿತ್ ಗೆ ಪಂದ್ಯದ 100% ದಂಡ, ಒಂದು ಪಂದ್ಯ ನಿಷೇಧ ಹಾಗೂ ಕ್ಯಾಮರಾನ್ ಬ್ಯಾನ್‍ಕ್ರಾಪ್ಟ್ ಗೆ ಪಂದ್ಯದ 75% ದಂಡ, 3 ಡಿಮೆರಿಟ್ ಅಂಕಗಳನ್ನು ನೀಡಿದೆ.

    ರಾಜಸ್ಥಾನ ರಾಯಲ್ಸ್ ತಂಡ 2 ವರ್ಷದ ನಿಷೇಧದ ಬಳಿಕ ಐಪಿಎಲ್ ಗೆ ಆಗಮಿಸುತ್ತಿದೆ. ಈ ಹಿಂದಿನ 2014 ಮತ್ತು 15 ಸರಣಿಗಳಲ್ಲಿ ಸ್ಮಿತ್ ಆರ್ ಆರ್ ತಂಡವನ್ನು ಮುನ್ನಡೆಸಿದ್ದರು. ಈ ಬಾರಿಯ ಹರಾಜು ವೇಳೆಯು ತಂಡದ ಮಾಲೀಕರು ಸ್ಮಿತ್ ರನ್ನು ಉಳಿಸಿಕೊಂಡಿದ್ದರು. 2017 ರಲ್ಲಿ ಪುಣೆ ತಂಡದ ನಾಯಕತ್ವ ವಹಿಸಿದ್ದ ಸ್ಮಿತ್, ತಂಡ ಫೈನಲ್ ಪ್ರವೇಶ ಪಡೆಯುವುದರಲ್ಲಿ ಪ್ರಮುಖ ಸ್ಥಾನ ವಹಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿ ಪಡೆದಿತ್ತು.

    ನಡೆದಿದ್ದು ಏನು?
    ಆಸೀಸ್ ಆರಂಭಿಕ ಆಟಗಾರ ಕ್ಯಾಮರಾನ್ ಬ್ಯಾನ್‍ಕ್ರಾಪ್ಟ್ ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 3ನೇ ದಿನದ ವೇಳೆ ಚೆಂಡನ್ನ ವಿರೂಪಗೊಳಿಸಿದ್ದರು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ದಿನದಾಟದ ಬಳಿಕ ಮಾತನಾಡಿದ ಆಸೀಸ್ ನಾಯಕ ಸ್ಮಿತ್ ಹಾಗೂ ಬ್ಯಾನ್‍ಕ್ರಾಫ್ಟ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ

  • ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ?

    ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ?

    ಕೇಪ್‍ಟೌನ್: ಆಸ್ಟ್ರೇಲಿಯಾ ತಂಡ ಹಲವು ಆಟಗಾರರು ಎದುರಾಳಿ ತಂಡದ ಆಟಗಾರರನ್ನು ಕೆಣಕುವ ಮೂಲಕ ವಿವಾದಕ್ಕೆ ಕಾರಣರಾದ ವಿಷಯ ಎಲ್ಲರಿಗೂ ತಿಳಿದ ವಿಷಯ. ಆದರೆ ಈ ಬಾರಿ ಆಸೀಸ್ ಬ್ಯಾಟ್ಸ್ ಮನ್ ಕೆಮರೂನ್ ಬ್ಯಾಂಕ್ರೋಫ್ಟ್ ಚೆಂಡನನ್ನು ವಿರೂಪಗೊಳಿಸಿ ಸುದ್ದಿಯಾಗಿದ್ದಾರೆ.

    ಕೇಪ್ ಟೌನ್ ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ನ ಮೂರನೇ ದಿನದಾಟದಂದು ಘಟನೆ ನಡೆದಿದೆ. ಆಸ್ಟ್ರೇಲಿಯಾದ ಕೆಮರೊನ್ ಬ್ಯಾಂಕ್ರೊಫ್ಟ್ ಪಂದ್ಯದ ವೇಳೆ ಜೇಬಿನಿಂದ ಹಳದಿ ಬಣ್ಣದ ವಸ್ತುವಿನಿಂದ ಬಾಲ್ ವಿರೂಪಗೊಳಿಸಿದ್ದಾರೆ. ಬಾಲ್ ವಿರೂಪಗೊಳಿಸಿದ ಬಳಿಕ ಕೆಮರೊನ್ ಹಳದಿ ಬಣ್ಣದ ವಸ್ತುವನ್ನು ಜೇಬಿಗೆ ತೂರಿಸಿದ್ದಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇಯ್ನ್ ಟ್ವಿಟ್ಟರ್ ನಲ್ಲಿ ಈ ದೃಶ್ಯಗಳನ್ನು ಶೇರ್ ಮಾಡಿದ್ದಾರೆ.

    ಪಂದ್ಯದ ವೇಳೆಗೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಡುಪ್ಲೆಸಿಸ್ ಇದನ್ನು ಅಂಪೈರ್ ಗಮನಕ್ಕೂ ತಂದಿದ್ದಾರೆ. ಆದರೆ ತಾನೇನು ಮಾಡಿಲ್ಲ ಎಂಬಂತೆ ನಟಿಸಿದ ಕೆಮರೊನ್, ಜೇಬಿನಿಂದ ಸನ್ ಗ್ಲಾಸ್ ಹೊರ ತೆಗೆದಿದ್ದಾರೆ. ಕೆಮರೊನ್ ಬಾಲ್ ತಿದ್ದಿರುವುದನ್ನು ದೃಶ್ಯಗಳನ್ನು ಗಮನಿಸಿರುವ ಆಸೀಸ್ ಕೋಚ್ ಡೆರನ್ ಲೆಹಮನ್ ವಾಕಿಟಾಕಿ ಮೂಲಕ ವಿಷಯ ತಿಳಿಸಿದ್ದಾರೆ.

    ಸದ್ಯ ಈ ಕೃತ್ಯದಲ್ಲಿ ಆಸೀಸ್ ನಾಯಕ ಸ್ಮಿತ್ ತಮ್ಮ ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೇ ದಿನದಾಟದ ವಿರಾಮ ವೇಳೆಯಲ್ಲಿ ಈ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದ್ದು, ಚೆಂಡು ಬೌಲರ್ ಗಳಿಗೆ ಸಹಾಯವಾಗುವಂತೆ ಮಾಡಲು ಈ ಕೃತ್ಯ ಎಸಗಿದ್ದಾರೆ. ಅಲ್ಲದೇ ಈ ಪ್ಲಾನ್ ನಲ್ಲಿ ತಂಡದ ಕೋಚ್ ಗಳ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

    ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯಸ್ಥ ಜೇಮ್ಸ್ ಸುದರ್ಲ್ಯಾಂಡ್ ತಮ್ಮ ಆಟಗಾರರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲು ನಿರಾಕರಿಸಿದ್ದಾರೆ. ಭಾನುವಾರ ಪ್ರಕರಣದ ಕುರಿತು ತನಿಖೆ ನಡೆಸಲು ಸಮಿತಿಯನ್ನು ಆಫ್ರಿಕಾ ಗೆ ಕಳುಹಿಸಿಕೊಡಲಾಗುವುದು. ಸಮಿತಿಯ ತನಿಖೆಯ ಬಳಿಕ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ಇದೇ ವೇಳೆ ತಮ್ಮ ನಾಯಕತ್ವ ಸ್ಥಾನವನ್ನು ಸಮರ್ಥಿಸಿಕೊಂಡಿರುವ ಸ್ಮಿತ್ ಈ ಘಟನೆ ದೊಡ್ಡ ತಪ್ಪು ಎಂದು ಹೇಳಿದ್ದಾರೆ. ಸದ್ಯ ಸ್ಮಿತ್ ಟೆಸ್ಟ್ ಕ್ರಿಕೆಟ್ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

    ಬಾಲ್ ವಿರೂಪಗೊಳಿಸಿರುವ ಕೆಮರೊನ್ ಬ್ಯಾಂಕ್ರೊಫ್ಟ್ ಗೆ ಐಸಿಸಿ ದಂಡ ವಿಧಿಸುವ ಸಾಧ್ಯತೆ ಇದ್ದು, 3 ರಿಂದ 4 ಡಿಮೆರಿಟ್ ಅಂಕ ಪಡೆಯುವ ಸಾಧ್ಯತೆ ಇದೆ. ಅಲ್ಲದೇ ಜೊಹನ್ಸ್ ಬರ್ಗ್ ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ನಿಂದ ನಿಷೇಧಗೊಳ್ಳುವ ಸಾಧ್ಯತೆಯಿದೆ.

    ಆಸ್ಟ್ರೇಲಿಯಾ ಪ್ರಧಾನಿ ಕೂಡ ಘಟನೆ ಕುರಿತು ಅಸಮಾಧಾನವನ್ನು ಹೊರ ಹಾಕಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಮಿತ್ ತಮ್ಮ ನಾಯಕತ್ವ ಸ್ಥಾನ ಕಳೆದು ಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.