Tag: australia

  • ಮುಂಬೈ ತಂಡಕ್ಕೆ ಖರೀದಿಸುತ್ತೇನೆ – ಪೈನೆ ಸ್ಲೆಡ್ಜಿಂಗ್‍ಗೆ ಟಾಂಗ್ ಕೊಟ್ಟ ರೋಹಿತ್!

    ಮುಂಬೈ ತಂಡಕ್ಕೆ ಖರೀದಿಸುತ್ತೇನೆ – ಪೈನೆ ಸ್ಲೆಡ್ಜಿಂಗ್‍ಗೆ ಟಾಂಗ್ ಕೊಟ್ಟ ರೋಹಿತ್!

    ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ರೋಹಿತ್ ವಿರುದ್ಧ ಸ್ಲೆಡ್ಜಿಂಗ್ ನಡೆಸಿದ್ದ ಆಸೀಸ್ ನಾಯಕ ಪೈನೆ ಮಾತಿಗೆ ಶರ್ಮಾ ತಿರುಗೇಟು ನೀಡಿದ್ದು, ಮುಂಬೈ ತಂಡಕ್ಕೆ ಪೈನೆರನ್ನು ಖರೀದಿ ಮಾಡುವುದಾಗಿ ಹೇಳಿದ್ದಾರೆ.

    3ನೇ ದಿನದಾಟದ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್, ಬ್ಯಾಟಿಂಗ್ ವೇಳೆ ಪೈನೆ ಹಾಗೂ ಫಿಂಚ್ ನಡುವಿನ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದೆ. ಆದರೆ ಆ ಸಂದರ್ಭದಲ್ಲಿ ನನ್ನ ಆಟದ ಬಗ್ಗೆ ಮಾತ್ರ ಗಮನ ಹರಿಸಿದ್ದೆ. ಆದರೆ ಈ ಪಂದ್ಯದಲ್ಲಿ ಪೈನೆ ಶತಕ ಸಿಡಿಸಿದರೆ ಮುಂಬೈ ತಂಡಕ್ಕೆ ಪೈನೆರನ್ನು ಖರೀದಿ ಮಾಡಲು ತಂಡದ ಮೆಂಟರ್ ಅವರೊಂದಿಗೆ ಮಾತನಾಡುತ್ತೇನೆ. ಪೈನೆ ಮುಂಬೈ ತಂಡದ ಅಭಿಮಾನಿಯಂತೆ ಕಾಣುತ್ತಾರೆ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.

    2ನೇ ದಿನದಾಟ ವೇಳೆ ಪೈನೆ ವಿಕೆಟ್ ಹಿಂದೆ ನಿಂತು ರೋಹಿತ್ ಶರ್ಮಾರನ್ನು ಕೆಣಕುವಂತೆ ಮಾತನಾಡಿದ್ದರು. ನೀನು ಸಿಕ್ಸರ್ ಸಿಡಿಸಿದರೆ ನಾನು ಮುಂಬೈ ತಂಡಕ್ಕೆ ಬೆಂಬಲ ನೀಡುತ್ತೇನೆ. ನಾನು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಅಥವಾ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುವ ಬಗ್ಗೆ ಗೊಂದಲದಲ್ಲಿದ್ದು, ಈಗ ನೀನು ಸಿಕ್ಸರ್ ಬಾರಿಸಿದರೆ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಸ್ಟ್ರೈಕ್ ನಲ್ಲಿದ್ದರೆ, ರಾಜಸ್ಥಾನ ರಾಯಲ್ಸ್ ತಂಡದ ರಹಾನೆ ಮತ್ತೊಂದು ಬದಿಯಲ್ಲಿ ಇದ್ದರು.

    ಆಸೀಸ್ ನಾಯಕ ಪೈನೆ ಅವರು ಸ್ಲೆಡ್ಜಿಂಗ್ ಬಗ್ಗೆ ಟೀಂ ಇಂಡಿಯಾ ಅಭಿಮಾನಿಗಳು ಟ್ರೋಲ್ ಮಾಡಿ ಕಾಲೆಳೆದಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಡುವ ವೇಳೆ ಮೌನವಾಗಿರುವ ಪೈನೆ, ಕೊಹ್ಲಿ ಔಟಾಗುತ್ತಿದಂತೆ ಮಾತನಾಡಲು ಆರಂಭಿಸುತ್ತಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ. ಪೈನೆ ಅವರ ವರ್ತನೆ ಇಂದು ಕೂಡ ಅಭಿಮಾನಿಗಳ ಟ್ರೋಲ್ ನಂತೆಯೇ ಇದ್ದು, ಕೊಹ್ಲಿ ಶೂನ್ಯಕ್ಕೆ ಔಟಾಗುವ ವರೆಗೂ ಸುಮ್ಮನಿದ್ದ ಪೈನೆ ಬಳಿಕ ರಿಷಬ್ ಪಂತ್ ರನ್ನು ಕಾಲೆಳೆಯಲು ಯತ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೋಚಕ ಹಂತಕ್ಕೆ ತಲುಪಿದ ಬಾಕ್ಸಿಂಗ್ ಡೇ ಟೆಸ್ಟ್- ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

    ರೋಚಕ ಹಂತಕ್ಕೆ ತಲುಪಿದ ಬಾಕ್ಸಿಂಗ್ ಡೇ ಟೆಸ್ಟ್- ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 54 ರನ್ ಗಳಿಸಿ 346 ರನ್ ಮುನ್ನಡೆಯನ್ನು ಪಡೆದುಕೊಂಡಿದೆ.

    3ನೇ ದಿನದಾಟವನ್ನು 8 ರನ್ ಗಳಿಂದ ಆರಂಭಿಸಿದ ಆಸೀಸ್ ತಂಡ ಟೀಂ ಇಂಡಿಯಾ ವೇಗಿ ಬುಮ್ರಾ ದಾಳಿಗೆ ಸಿಲುಕಿ ತತ್ತರಿಸಿತು. ಪರಿಣಾಮವಾಗಿ 151 ರನ್ ಗಳಿಗೆ ಸರ್ವ ಪತನವಾಯಿತು. ಟೀಂ ಇಂಡಿಯಾ ಪರ ಬುಮ್ರಾ 33 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಇತ್ತ 2 ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಕೂಡ 5 ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತು.

    ಪಂದ್ಯದಲ್ಲಿ 6 ವಿಕೆಟ್ ಗಳಿಸಿದ ಬುಮ್ರಾ ವೃತ್ತಿ ಜೀವನದ ಉತ್ತಮ ಪ್ರದರ್ಶನ ನೀಡಿದರು. ಈ ಮೂಲಕ ಆಸೀಸ್, ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧ ಕ್ಯಾಲೆಂಡರ್ ವರ್ಷ ಒಂದರಲ್ಲಿ 5 ವಿಕೆಟ್ ಪಡೆದ ಮೊದಲ ಏಷ್ಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ 2018 ರಲ್ಲಿ ಟೀಂ ಇಂಡಿಯಾ ಪರ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಶಮಿ ಅವರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

    ಟೆಸ್ಟ್ ಕ್ರಿಕೆಟ್‍ಗೆ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ ವರ್ಷದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಬುಮ್ರಾ ಮಾಡಿದ್ದಾರೆ. 2018 ವರ್ಷದಲ್ಲಿ ಬುಮ್ರಾ 45 ವಿಕೆಟ್ ಪಡೆದಿದ್ದಾರೆ. 1979 ರಲ್ಲಿ ದಿಲೀಪ್ ದೋಷಿ ಪಾದಾರ್ಪಣೆ ಮಾಡಿದ ವರ್ಷದಲ್ಲಿ 40 ವಿಕೆಟ್ ಪಡೆದಿದ್ದರು.

    ಇತ್ತ ಆಸೀಸ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕಮ್ಮಿನ್ಸ್ 10 ರನ್ ನೀಡಿ 4 ಪಡೆದು ಮಿಂಚಿದರು. 2ನೇ ಇನ್ನಿಂಗ್ಸ್ ಆರಂಭದಲ್ಲಿ ಪಂದ್ಯದ ಮೇಲೆ ಬಿಗಿ ಹಿಡಿತ ಹೊಂದಿದ್ದ ಟೀಂ ಇಂಡಿಯಾ ಬಹುಬೇಗ ವಿಕೆಟ್ ಕಳೆದುಕೊಂಡು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ತಂಡದ ಪರ ಮೊದಲ ಇನ್ನಿಂಗ್ ಶತಕ ವೀರ ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರು. ಇದರ ಬೆನ್ನಲ್ಲೇ ಅಜಿಂಕ್ಯ ರಹಾನೆ 1 ರನ್, ರೋಹಿತ್ ಶರ್ಮಾ 5 ರನ್ ಮಾತ್ರ ಗಳಿಸಿದರು. ಉಳಿದಂತೆ ಆರಂಭಿಕ ಹನುಮ ವಿಹಾರಿ 13 ರನ್ ಗಳಿಸಲು ಮಾತ್ರ ಶಕ್ತರಾದರು. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಕಳೆದು 447 ರನ್ ಗೆ ಡಿಕ್ಲೇರ್ ಘೋಷಿಸಿತ್ತು. 3ನೇ ದಿನದಾಟದಲ್ಲಿ ಒಟ್ಟು 15 ವಿಕೆಟ್ ಗಳನ್ನು ಪಡೆಯಲು ಇತ್ತಂಡಗಳ ಬೌಲರ್ ಗಳು ಯಶಸ್ವಿಯಾದರು.

    ಮಯಾಂಕ್ ಭರವಸೆ : ಮೊದಲ ಇನಿಂಗ್ಸ್ ಅರ್ಧಶತಕ ಗಳಿಸಿ ದಾಖಲೆ ಬರೆದಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ 28* ರನ್ ಹಾಗೂ ಯುವ ಬ್ಯಾಟ್ಸ್ ಮನ್ ರಿಷಬ್ ಪಂತ್ 6 ರನ್ ಗಳಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಕ್ಸಿಂಗ್ ಡೇ ಟೆಸ್ಟ್: ಟೀಂ ಇಂಡಿಯಾ 443 ರನ್ ಗಳಿಗೆ ಡಿಕ್ಲೇರ್ – ಗಂಗೂಲಿ, ವಿವಿಎಸ್ ಲಕ್ಷ್ಮಣ್ ಹಿಂದಿಕ್ಕಿದ ಪೂಜಾರ

    ಬಾಕ್ಸಿಂಗ್ ಡೇ ಟೆಸ್ಟ್: ಟೀಂ ಇಂಡಿಯಾ 443 ರನ್ ಗಳಿಗೆ ಡಿಕ್ಲೇರ್ – ಗಂಗೂಲಿ, ವಿವಿಎಸ್ ಲಕ್ಷ್ಮಣ್ ಹಿಂದಿಕ್ಕಿದ ಪೂಜಾರ

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ 443 ರನ್ ಗೆ ಡಿಕ್ಲೇರ್ ಮಾಡಿಕೊಂಡಿದೆ.

    ಪಂದ್ಯದ 2ನೇ ದಿನದಾಟದ ಮುಕ್ತಾಯಕ್ಕೆ ಕೆಲವೇ ಓವರ್ ಗಳು ಬಾಕಿ ಇರುವ ವೇಳೆ ಅಚ್ಚರಿ ಎಂಬಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡಿಕ್ಲೇರ್ ಘೋಷಿಸಿದರು. ಈ ವೇಳೆ ಟೀಂ ಇಂಡಿಯಾ 169.4 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 443 ರನ್ ಗಳಿಸಿತ್ತು. ಇತ್ತ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 2ನೇ ದಿನದಾಟದ ಅಂತ್ಯಕ್ಕೆ 6 ಓವರ್ ಗಳಲ್ಲಿ ವಿಕೆಟ್ 8 ರನ್ ಗಳಿಸಿದೆ.

    2ನೇ ದಿನದಾಟವನ್ನು 2 ವಿಕೆಟ್‍ಗೆ 215 ರನ್ ಗಳಿಂದ ಆರಂಭಿಸಿದ ಟೀಂ ಇಂಡಿಯಾ ಚೇತೇಶ್ವರ ಪೂಜಾರ ಭರ್ಜರಿ ಶತಕ, ಕೊಹ್ಲಿ 82 ರನ್ ಕಾಣಿಕೆ ಹಾಗೂ ರೋಹಿತ್ ಶರ್ಮಾರ ಅರ್ಧ ಶತಕ (63* ರನ್) ನೆರವಿನಿಂದ ತಂಡದ ಮೊತ್ತ 400 ರನ್ ಗಡಿ ದಾಟಲು ನೆರವಾಯಿತು. ಅಂತಿಮ ಹಂತದಲ್ಲಿ ಅನುಭವಿ ಆಟಗಾರ ರಹಾನೆ 34 ರನ್ ಹಾಗೂ ರಿಷಬ್ ಪಂತ್ ರ ಬಿರುಸಿನ 39 ರನ್ ಗಳಿಸಿ ತಂಡದ ಮೊತ್ತ ಹೆಚ್ಚಾಗಲು ಕಾರಣರಾದರು. ಮೆಲ್ಬರ್ನ್ ಕ್ರೀಡಾಂಗಣದ ಪಿಚ್ ವಿಭಿನ್ನವಾಗಿ ವರ್ತಿಸುತ್ತಿದ್ದು, 2ನೇ ದಿನದಾಟದ ವೇಳೆ ಪೂಜಾರ ಹಾಗೂ ರಹಾನೆ ಔಟಾದ ರೀತಿ ಇದಕ್ಕೆ ಸಾಕ್ಷಿಯಾಗಿದೆ. ಬೌಲಿಂಗ್ ವೇಳೆ ಚೆಂಡು ಬೌನ್ಸ್ ಆಗದೆ ನೇರವಾಗಿ ವಿಕೆಟ್ ನತ್ತ ನುಗ್ಗಿತ್ತು, ಈ ವೇಳೆ ಪೂಜಾರ ಬೌಲ್ಡ್ ಆದರೆ ರಹಾನೆ ಎಲ್‍ಬಿಡಬ್ಲ್ಯು ಬಲೆಗೆ ಸಿಲುಕಿ ಔಟಾದರು.

    https://twitter.com/telegraph_sport/status/1078176442100391937?

    ಸರಣಿಯಲ್ಲಿ 2ನೇ ಶತಕ ಸಿಡಿಸಿದ ಪೂಜಾರ ವೃತ್ತಿ ಜೀವನದ 17 ನೇ ಟೆಸ್ಟ್ ಶತಕವನ್ನು 112 ಇನ್ನಿಂಗ್ಸ್ ಗಳಲ್ಲಿ ಪೂರೈಸಿದರು. ಆ ಮೂಲಕ ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಶತಕಗಳ ಸಾಧನೆಯನ್ನು ಸರಿಗಟ್ಟಿದರು. 188 ಇನ್ನಿಂಗ್ಸ್ ಗಳಲ್ಲಿ ಗಂಗೂಲಿ 16 ಶತಕಗಳನ್ನು ಸಿಡಿಸಿದ್ದರೆ, ವಿವಿಎಸ್ ಲಕ್ಷ್ಮಣ್ 225 ಇನ್ನಿಂಗ್ಸ್ ಗಳಲ್ಲಿ 17 ಶತಕಗಳನ್ನು ಸಿಡಿಸಿದ್ದಾರೆ.

    ಉಳಿದಂತೆ ಆಸೀಸ್ ತಂಡದ ಪರ ಕಮ್ಮಿನ್ಸ್ 3 ಮತ್ತು ಸ್ಟಾರ್ಕ್ 2 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಆರಂಭಿಕರಾದ ಫಿಂಚ್ 3 ರನ್, ಮಾರ್ಕಸ್ ಹ್ಯಾರಿಸ್ 5 ರನ್ ಗಳಿಸಿದ್ದಾರೆ.

    https://twitter.com/telegraph_sport/status/1078153465489178624?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಕ್ಸಿಂಗ್ ಡೇ ಟೆಸ್ಟ್: ಪಾದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಕನ್ನಡಿಗ ಮಯಾಂಕ್

    ಬಾಕ್ಸಿಂಗ್ ಡೇ ಟೆಸ್ಟ್: ಪಾದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಕನ್ನಡಿಗ ಮಯಾಂಕ್

    ಮೆಲ್ಬರ್ನ್: ಆಸೀಸ್ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಆಕರ್ಷಕ ಅರ್ಧ ಶತಕ (75 ರನ್) ಸಿಡಿಸಿ ಆಸೀಸ್ ನೆಲದಲ್ಲಿ ಪಾದಾರ್ಪಣೆ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

    ಮೆಲ್ಬರ್ನ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕೆ ಇಳಿದ ಮಯಾಂಕ್ ಟೀಂ ಇಂಡಿಯಾದ 295 ಆಟಗಾರನಾಗಿ ನಾಯಕ ವಿರಾಟ್ ಕೊಹ್ಲಿ ಅವರಿಂದ ಕ್ಯಾಪ್ ಪಡೆದರು. ಬಳಿಕ ಪಂದ್ಯದಲ್ಲಿ 8 ಬೌಂಡರಿ, 1 ಸಿಕ್ಸರ್ ನೆರವಿನಿಂದ 75 ರನ್ ಸಿಡಿಸಿ ಆಸೀಸ್ ಸರಣಿಗೆ ತಮ್ಮನ್ನು ಆಯ್ಕೆ ಮಾಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಉಳಿದಂತೆ 1947 ಡಿಸೆಂಬರ್ ನಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ದತ್ತು ಫಾಡ್ಕರ್ 51 ರನ್ ಸಿಡಿಸಿದ್ದರು.

    ಮೊದಲ ದಿನದಾಟದ ಅಂತ್ಯಕ್ಕೆ ಮಯಾಂಕ್ 76 ರನ್, ಪೂಜಾರಾ 68* ರನ್, ಕೊಹ್ಲಿ 47* ರನ್‍ಗಳ ನೆರವಿನಿಂದ 89 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ 215 ರನ್ ಗಳಿಸಿದೆ.

    ವಿದೇಶಿ ನೆಲದಲ್ಲಿ ನಡೆದ ಪಾದಾರ್ಪಣೆ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಿದ ಗವಾಸ್ಕರ್ ರಂತಹ ದಿಗ್ಗಜರ ಸಾಲಿಗೂ ಕೂಡ ಮಯಾಂಕ್ ಸೇರಿದ್ದು, ಈ ಹಿಂದೆ ವಿದೇಶದಲ್ಲಿ ಪಾರ್ದಾಪಣೆ ಪಂದ್ಯದಲ್ಲಿ 1974 ಇಂಗ್ಲೆಂಡ್ ವಿರುದ್ಧ ಸುಧೀರ್ ನಾಯ್ಕ್ 75 ರನ್ ಸಿಡಿಸಿ ಮೊದಲ ಸಾಲಿನಲ್ಲಿದ್ದಾರೆ. ಸುನಿಲ್ ಗವಾಸ್ಕರ್ 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 65 ರನ್ ಸಿಡಿಸಿ 3ನೇ ಸ್ಥಾನದಲ್ಲಿದ್ದಾರೆ.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಪರ ಮಯಾಂಕ್, ಹನುಮ ವಿಹಾರಿ ಯುವ ಜೋಡಿ ಕಣಕ್ಕೆ ಇಳಿದು ಉತ್ತಮ ಆರಂಭ ನೀಡಿತು. ಇಬ್ಬರ ಜೋಡಿ ಮೊದಲ ವಿಕೆಟ್‍ಗೆ 40 ರನ್ ಗಳಿಸಿದ್ದ ವೇಳೆ ವಿಹಾರಿ, ಕಮ್ಮಿನ್ಸ್‍ಗೆ ವಿಕೆಟ್ ಒಪ್ಪಿಸಿದರು. ಆರಂಭಿಕನಾಗಿ ರಕ್ಷಣಾತ್ಮಕ ಆಟಕ್ಕೆ ಮುಂದಾದ ವಿಹಾರಿ 66 ಎಸೆತಗಳಲ್ಲಿ 8 ರನ್ ಗಳಿಸಿದರು.

    ಈ ಹಂತದಲ್ಲಿ ಆರಂಭಿಕ ಮಯಾಂಕ್‍ರನ್ನು ಕೂಡಿಕೊಂಡ ಅನುಭವಿ ಆಟಗಾರ ಪೂಜಾರ ತಂಡವನ್ನು ಉತ್ತಮ ಮೊತ್ತದತ್ತ ಕೊಂಡ್ಯೊಯಲು ಮುಂದಾದರು. ಇತ್ತ ಮಯಾಂಕ್ ತಮ್ಮ ಅಕ್ರಮಣಕಾರಿ ಆಟ ಮುಂದುವರೆಸಿದರು. 95 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ಮಯಾಂಕ್ ಜವಾಬ್ದಾರಿಯುತ ಆಟವಾಡಿದರು. ಈ ಇಬ್ಬರ ಜೋಡಿ 2ನೇ ವಿಕೆಟ್‍ಗೆ 83 ರನ್ ಜೊತೆಯಾಟ ನೀಡಿತು. ಈ ಜೋಡಿಯನ್ನು ಬೇರ್ಪಡಿಸಿದ ಕಮ್ಮಿನ್ಸ್ ಟೀ ಇಂಡಿಯಾಗೆ 2ನೇ ಹೊಡೆತ ನೀಡಿದರು. ಇದನ್ನು ಓದಿ: ಮೂರನೇ ಪಂದ್ಯಕ್ಕೆ ಇತ್ತಂಡಗಳು ರೆಡಿ- `ಬಾಕ್ಸಿಂಗ್ ಡೇ’ ಟೆಸ್ಟ್ ಕರೆಯೋದು ಯಾಕೆ? 

    ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ, ಪೂಜಾರರೊಂದಿಗೆ ಸೇರಿ ತಂಡ ರನ್ ಹೆಚ್ಚಿಸಲು ಕಾರಣರಾದರು. ಮೊದಲ ದಿನದಾಟದ ಅಂತ್ಯಕ್ಕೆ 200 ಎಸೆತಗಳಲ್ಲಿ 68 ರನ್ ಗಳಿಸಿದ ಪೂಜಾರ ಹಾಗೂ 107 ಎಸೆತಗಳಲ್ಲಿ 47 ರನ್ ಗಳಿಸಿರುವ ಕೊಹ್ಲಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದಾರೆ. ಆಸೀಸ್ ಪರ ಕಮ್ಮಿನ್ಸ್ 2 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂರನೇ ಪಂದ್ಯಕ್ಕೆ ಇತ್ತಂಡಗಳು ರೆಡಿ- `ಬಾಕ್ಸಿಂಗ್ ಡೇ’ ಟೆಸ್ಟ್ ಕರೆಯೋದು ಯಾಕೆ?

    ಮೂರನೇ ಪಂದ್ಯಕ್ಕೆ ಇತ್ತಂಡಗಳು ರೆಡಿ- `ಬಾಕ್ಸಿಂಗ್ ಡೇ’ ಟೆಸ್ಟ್ ಕರೆಯೋದು ಯಾಕೆ?

    ಮೆಲ್ಬರ್ನ್: ಪ್ರತಿಷ್ಠೆಯ ಕಣವಾಗಿರುವ ‘ಬಾಕ್ಸಿಂಗ್ ಡೇ’ ಪಂದ್ಯಕ್ಕೆ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ಕಸರತ್ತು ನಡೆಸುತ್ತಿದ್ದು ಆರಂಭಿಕ ಬ್ಯಾಟ್ಸ್ ಮನ್‍ಗಳಾದ ಕೆ.ಎಲ್.ರಾಹುಲ್ ಮತ್ತು ಮುರಳಿ ವಿಜಯ್ ಅವರ ಬದಲಾಗಿ ಕರ್ನಾಟಕದ ಮಯಾಂಕ್ ಅಗರ್ವಾಲ್ ಹಾಗೂ ಆಂಧ್ರದ ಹನುಮ ವಿಹಾರಿ ಅವರು ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

    ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ತಲಾ ಒಂದು ಜಯ ಸಾಧಿಸಿದ್ದು, ಬುಧವಾರದಿಂದ ಮೆಲ್ಬರ್ನ್ ನಲ್ಲಿ ನಡೆಯಲಿರುವ ಸಾಂಪ್ರದಾಯಿಕ ಬಾಕ್ಸಿಂಗ್ ಡೇ ಟೆಸ್ಟ್ ಉಭಯ ತಂಡಗಳಿಗೆ ಸವಾಲಾಗಿದೆ.

    ಅಡಿಲೇಡ್‍ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ ಭಾರತ 31 ರನ್‍ಗಳಿಂದ ಗೆದ್ದಿದ್ದರೆ, ಪರ್ತ್‍ನಲ್ಲಿ ನಡೆದ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ 146 ರನ್‍ಗಳಿಂದ ಗೆದ್ದು ಸಮಬಲದ ಹೋರಾಟ ನೀಡಿದೆ.

    ಬಾಕ್ಸಿಂಗ್ ಡೇ ಅಂದ್ರೆ ಏನು?:
    ಕ್ರಿಸ್ಮಸ್ ನಂತರದ ದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯಲಾಗುತ್ತದೆ. ಈ ಪರಿಕಲ್ಪನೆ ಆರಂಭಗೊಂಡದ್ದು ಇಂಗ್ಲೆಂಡ್‍ನಲ್ಲಿ. ಆದರೆ ಈ ದಿನವನ್ನು ಐರ್ಲೆಂಡ್ ಮತ್ತು ಸ್ಪೇನ್‍ನಲ್ಲಿ ಸೇಂಟ್ ಸ್ಟೀಫನ್ಸ್ ದಿನ ಎಂದು ಹೆಸರಿನಿಂದ ಕರೆಯಲಾಗುತ್ತದೆ. ಪೋಲೆಂಡ್, ರೊಮೇನಿಯಾ, ಹಂಗೇರಿ, ಜರ್ಮನಿ ಮತ್ತು ನೆದರ್ಲೆಂಡ್ಸ್‍ನಲ್ಲಿ ಬಾಕ್ಸಿಂಗ್ ಡೇ ಬದಲಾಗಿದೆ ಎರಡನೇ ಕ್ರಿಸ್‍ಮಸ್ ದಿನ ಎಂದು ಸಂಭ್ರಮಿಸಲಾಗುತ್ತದೆ.

    ಯುರೋಪ್ ರಾಷ್ಟ್ರಗಳ ಚರ್ಚ್ ನಲ್ಲಿ ವರ್ಷಾಂತ್ಯದ ಕೊನೆಯ ವಾರವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ವೇಳೆ ಚರ್ಚ್‍ಗಳಲ್ಲಿ ಪೊಟ್ಟಣಗಳನ್ನು (ಬಾಕ್ಸ್) ಇಟ್ಟು ಹಣ ಮತ್ತು ವಸ್ತುಗಳನ್ನು ಕಾಣಿಕೆ ರೂಪದಲ್ಲಿ ಪಡೆಯಲಾಗುತ್ತದೆ. ಈ ಪೊಟ್ಟಣಗಳಿಂದಲೇ ಬಾಕ್ಸಿಂಗ್ ಡೇ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಆಸ್ಟ್ರೇಲಿಯಾ ಕ್ರಿಕೆಟ್ ಕ್ಲಬ್ ಡಿಸೆಂಬರ್ 26 ರಂದು ಟೆಸ್ಟ್ ಪಂದ್ಯವನ್ನು ನಡೆಸುತ್ತಾ ಬಂದಿರುವ ಕಾರಣ ಈ ಟೆಸ್ಟ್ ಪಂದ್ಯವನ್ನು `ಬಾಕ್ಸಿಂಗ್ ಡೇ’ ಪಂದ್ಯ ಎಂದೇ ಕರೆಯಲಾಗುತ್ತದೆ.

    ಲಕ್ಕಿ ಕ್ರೀಡಾಂಗಣ:
    ಮೆಲ್ಬರ್ನ್ ಮೈದಾನ ಆಸ್ಟ್ರೇಲಿಯಾ ತಂಡದ ಲಕ್ಕಿ ಕ್ರೀಡಾಂಗಣವಾಗಿದೆ. ಇಲ್ಲಿ ಆತಿಥೇಯರು ಉತ್ತಮ ಸಾಧನೆ ಮಾಡಿದ್ದು, ಆಡಿದ ಎಲ್ಲ ತಂಡಗಳ ಮೇಲೆಯೂ ಆಧಿಪತ್ಯ ಸ್ಥಾಪಿಸಿದ್ದಾರೆ. ಉಭಯ ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಿರುವ ಕಾರಣ ಬಾಕ್ಸಿಂಗ್ ಡೇ ಪಂದ್ಯ ಕುತೂಹಲವನ್ನು ಮೂಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್, ಕಿವೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟ – ಧೋನಿಗೆ ಸ್ಥಾನ

    ಆಸೀಸ್, ಕಿವೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟ – ಧೋನಿಗೆ ಸ್ಥಾನ

    ನವದೆಹಲಿ: ನ್ಯೂಜಿಲೆಂಡ್, ಆಸೀಸ್ ವಿರುದ್ಧ ಟಿ20 ಸರಣಿಗೆ ಬಿಸಿಸಿಐ ಟೀಂ ಇಂಡಿಯಾವನ್ನು ಘೋಷಿಸಿದ್ದು, ತಂಡದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಸ್ಥಾನ ಪಡೆದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ಟಿ20 ಸರಣಿಗಳಿಂದ ಧೋನಿ ಅವರನ್ನು ಕೈಬಿಟ್ಟು ರಿಷಬ್ ಪಂತ್, ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಸದ್ಯ ಮತ್ತೆ ಆಯ್ಕೆ ಮಂಡಳಿ ಧೋನಿ ಅವರಿಗೆ ಅವಕಾಶ ನೀಡಲಾಗಿದೆ.

    ಆಸೀಸ್ ಪ್ರವಾಸದ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಳ್ಳಲಿದೆ. ಆಸೀಸ್ ಟೂರ್ನಿಯ ಟೆಸ್ಟ್ ಪಂದ್ಯಗಳ ಬಳಿಕ ಏಕದಿನ ಮಾದರಿ ಪಂದ್ಯಗಳು ನಡೆಲಿದ್ದು, ಆ ಬಳಿಕ ನ್ಯೂಜಿಲೆಂಡ್ ಪ್ರವಾಸ ಆರಂಭವಾಗಲಿದೆ. ಉಳಿದಂತೆ ಇಂದು ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಸತತ ವೈಫಲ್ಯಗಳ ನಡುವೆಯೂ ಕನ್ನಡಿಗ ಕೆಎಲ್ ರಾಹುಲ್ ಅವಕಾಶ ಪಡೆಯಲು ಯಶಸ್ವಿಯಾಗಿದ್ದಾರೆ.

    ನ್ಯೂಜಿಲೆಂಡ್ ಟೂರ್ನಿಯ ತಂಡ ಇಂತಿದೆ: ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಧೋನಿ, ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಕುಲ್ದೀಪ್ ಯಾದವ್, ಚಹಲ್, ಭುವನೇಶ್ವರ್ ಕುಮಾರ್, ಬುಮ್ರಾ, ಖಲೀಲ್ ಅಹ್ಮದ್.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೀಂ ಇಂಡಿಯಾಗೆ ತಲೆನೋವಾದ ಗಾಯದ ಸಮಸ್ಯೆ – ಮೆಲ್ಬರ್ನ್ ಟೆಸ್ಟ್‌ಗೆ ಅಶ್ವಿನ್ ಡೌಟ್

    ಟೀಂ ಇಂಡಿಯಾಗೆ ತಲೆನೋವಾದ ಗಾಯದ ಸಮಸ್ಯೆ – ಮೆಲ್ಬರ್ನ್ ಟೆಸ್ಟ್‌ಗೆ ಅಶ್ವಿನ್ ಡೌಟ್

    ಮೆಲ್ಬರ್ನ್: ಬಹು ನಿರೀಕ್ಷೆಯ ಆಸೀಸ್ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಆಟಗಾರರ ಗಾಯದ ಸಮಸ್ಯೆ ತಲೆನೋವಾಗಿದ್ದು, ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಕಣಕ್ಕೆ ಇಳಿಯವುದು ಅನುಮಾನವಾಗಿದೆ.

    ಟೀಂ ಇಂಡಿಯಾ ಆಟಗಾರರ ಗಾಯದ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ ಕೋಚ್ ರವಿಶಾಸ್ತ್ರಿ, ಅಶ್ವಿನ್ ತಮ್ಮ ಗಾಯದ ಸಮಸ್ಯೆ ಚೇತರಿಸಿಕೊಳ್ಳುತ್ತಿದ್ದು, ಮುಂದಿನ 48 ಗಂಟೆಗಳ ಕಾಲ ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ತಂಡದ ಮತ್ತೊಬ್ಬ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

    ಟೆಸ್ಟ್ ಸರಣಿಯಲ್ಲಿ ಆಸೀಸ್ ತಂಡ ಸಮಬಲದ ಹೋರಾಟ ನೀಡಿದ್ದು, ಸರಣಿಯಲ್ಲಿ ಮುನ್ನಡೆ ಪಡೆಯಲು ಮೆಲ್ಬರ್ನ್ ಪಂದ್ಯದ ಗೆಲುವು ಅನಿವಾರ್ಯವಾಗಿದೆ. ಆದರೆ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಕೊರತೆಯನ್ನು ಎದುರಿಸಿದ್ದು, ಆಸೀಸ್ ಪರ ಏಕೈಕ ಸ್ಪಿನ್ನರ್ ಆಗಿ ಕಣಕ್ಕೆ ಇಳಿದಿದ್ದ ಲಯನ್ 8 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾಗಿದ್ದರು.

    ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಉತ್ತಮ ಬೌಲಿಂಗ್ ಪಡೆಯನ್ನು ಹೊಂದಿದ್ದರೂ ಕೂಡ ಅನುಭವಿ ಸಿನ್ನರ್ ಕೊರತೆಯಿಂದ ಈ ಹಿಂದಿನ ಪಂದ್ಯದಲ್ಲಿ ಸಮಸ್ಯೆ ಎದುರಿಸಿತ್ತು. ಉಳಿದಂತೆ ತಂಡಕ್ಕೆ ಆರಂಭಿಕರ ವೈಫಲ್ಯ ಕೂಡ ಬ್ಯಾಟಿಂಗ್ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಇತ್ತ ಮೊದಲ ಟೆಸ್ಟ್‍ಗೆ ಕಮ್ ಬ್ಯಾಕ್ ಮಾಡಿದ್ದ ರೋಹಿತ್ ಶರ್ಮಾ ಕೂಡ ಇನ್ನು ಗಾಯದ ಸಮಸ್ಯೆಯಿಂದ ಚೇತರಿಕೆ ಪಡೆಯುತ್ತಿದ್ದಾರೆ.

    ಉಳಿದಂತೆ ಆಸೀಸ್ ಟೆಸ್ಟ್ ಸರಣಿಗೆ ಆಯ್ಕೆ ಆಗಿರುವ ಹಾರ್ದಿಕ್ ಪಾಂಡ್ಯ ಗಾಯದಿಂದ ಚೇತರಿಕೆಯಾದ ಬಳಿಕ ಕೇವಲ ಒಂದು ರಣಜಿ ಪಂದ್ಯವನ್ನು ಆಡಿದ್ದು, ಆಸೀಸ್ ಟೆಸ್ಟ್ ತಂಡದ ಆಡುವ 11 ಬಳಗದಲ್ಲಿ ಸ್ಥಾನ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ. ಒಂದೊಮ್ಮೆ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದರೆ ಯುವ ಆಟಗಾರ ಹನುಮವಿಹಾರಿ ಅವಕಾಶ ಕೈ ತಪ್ಪುವ ಸಾಧ್ಯತೆ ಇದೆ.

    ಆರಂಭಿಕ ವೈಫಲ್ಯದ ಕಾರಣ ಕರ್ನಾಟಕ ಮಯಾಂಕ್ ಅಗರ್ವಾಲ್ ತಂಡ ಸೇರಿಕೊಳ್ಳುವ ನಿರೀಕ್ಷೆ ಇದ್ದು, ಆರಂಭಿಕ ಸಮಸ್ಯೆಗೆ ಮಯಾಂಕ್ ಸೂಕ್ತ ಆಯ್ಕೆ ಆಗಲಿದ್ದಾರೆ. ಮಯಾಂಕ್ ಆಯ್ಕೆಯಾದರೆ ಕೆಎಲ್ ರಾಹುಲ್ ಅಥವಾ ಮುರಳಿ ವಿಜಯ್ ಅವಕಾಶ ವಂಚಿತರಾಗುವುದು ನಿಶ್ಚಿತವಾಗಿದೆ. ಡಿಸೆಂಬರ್ 26 ರಿಂದ 3ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಪೈರ್ ಔಟ್ ನೀಡಿದ್ರು ಬ್ಯಾಟ್ಸ್‌ಮನ್‌ಗೆ ಮತ್ತೆ ಆಡಲು ಅವಕಾಶ ಕೊಟ್ಟ ಫೀಲ್ಡಿಂಗ್ ಟೀಂ – ವಿಡಿಯೋ

    ಅಂಪೈರ್ ಔಟ್ ನೀಡಿದ್ರು ಬ್ಯಾಟ್ಸ್‌ಮನ್‌ಗೆ ಮತ್ತೆ ಆಡಲು ಅವಕಾಶ ಕೊಟ್ಟ ಫೀಲ್ಡಿಂಗ್ ಟೀಂ – ವಿಡಿಯೋ

    ಸಿಡ್ನಿ: ಪಂದ್ಯದ ವೇಳೆ ರನ್ ಕದಿಯಲು ಯತ್ನಿಸಿದ ಆಟಗಾರ ರನೌಟ್ ಎಂದು 3ನೇ ಅಂಪೈರ್ ತೀರ್ಪು ನೀಡಿದ್ರು ಎದುರಾಳಿ ತಂಡದ ಆಟಗಾರರು ಮತ್ತೆ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದ ಘಟನೆ ಆಸೀಸ್ ಬಿಗ್ ಬ್ಯಾಶ್ ಲೀಗ್ ಆರಂಭಿಕ ಪಂದ್ಯದಲ್ಲಿ ನಡೆದಿದೆ.

    ಲೀಗ್‍ನ ಆರಂಭಿಕವಾಗಿ ಇಂದು ಆಡಿಲೇಡ್ ಸ್ಟ್ರೇಕರ್ಸ್ ಹಾಗೂ ಬ್ರಿಸ್ಬೇನ್ ಹೀಟ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಬ್ರಿಸ್ಬೇನ್ ಹೀಟ್ ತಂಡದ ಬ್ಯಾಟಿಂಗ್ ನಡೆಸುತ್ತಿದ್ದ 13 ನೇ ಓವರ್ 3ನೇ ಎಸೆತದಲ್ಲಿ ಜೇಮ್ಸ್ ಪ್ಯಾಟಿನ್‍ಸನ್ ರನ್ ಕದಿಯಲು ಯತ್ನಿಸಿದರು. ಈ ವೇಳೆ ರನೌಟ್ ಮಾಡಲು ಯತ್ನಿಸಿದ ಆಡಿಲೇಡ್ ತಂಡದ ಆಟಗಾರರು ಅಂಪೈರ್ ಗೆ ಮನವಿ ಸಲ್ಲಿಸಿದರು.

    ಆಡಿಲೇಡ್ ತಂಡದ ಆಟಗಾರರ ಮನವಿ ಸ್ವೀಕರಿಸಿದ ಆನ್‍ಫೀಲ್ಡ್ ಅಂಪೈರ್ 3ನೇ ಅಂಪೈರ್ ಗೆ ಮನವಿ ಸಲ್ಲಿಸಿದರು. ಈ ವೇಳೆ ದೃಶ್ಯಗಳನ್ನ ಪರಿಶೀಲನೆ ನಡೆಸಿದ 3ನೇ ಅಂಪೈರ್ ರನೌಟ್ ಆಗದಿದ್ದರು ಔಟ್ ಎಂದು ತೀರ್ಪು ನೀಡಿದರು. ಇದನ್ನು ಕಂಡ ಜೇಮ್ಸ್ ಪ್ಯಾಟಿನ್‍ಸನ್ ಕ್ಷಣ ಕಾಲ ಶಾಕ್ ಆಗಿ ಮೈದಾನದಲ್ಲೇ ನಿಂತರು. ದೃಶ್ಯಗಳಲ್ಲಿ ಬ್ಯಾಟ್ಸ್ ಮನ್ ಔಟಾದಿದ್ದನ್ನು ಗಮನಿಸಿದ ಆಡಿಲೇಡ್ ಸ್ಟ್ರೇಕರ್ಸ್ ತಂಡದ ಆಟಗಾರು ತಮ್ಮ ಔಟ್ ಮನವಿಯನ್ನು ವಾಪಸ್ ಪಡೆದು ಮತ್ತೆ ಜೇಮ್ಸ್ ಪ್ಯಾಟಿನ್‍ಸನ್‍ಗೆ ಆಡಲು ಅವಕಾಶ ನೀಡಿ ಕ್ರೀಡಾ ಸ್ಫೂರ್ತಿ ಮೆರೆದರು.

    ಅಂಪೈರ್ ತೀರ್ಪು ಕಂಡ ಆನ್ ಫೀಲ್ಡ್ ಅಂಪೈರ್ ಗಳಾದ ಸೈಮನ್ ಫ್ರೈ, ಪಾಲ್ ವಿಲ್ಸನ್ ಸೇರಿದಂತೆ ಪಂದ್ಯದ ವೀಕ್ಷಕ ವಿವರಣೆಕಾರರು ಕೂಡ ಒಂದು ಕ್ಷಣ ಶಾಕ್ ಒಳಗಾಗಿದ್ದರು. ಸದ್ಯ ಪಂದ್ಯ 3ನೇ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗ್ರೇಗ್ ಡೇವಿಡ್‍ಸನ್ ತೀರ್ಪಿನ ವಿರುದ್ಧ ಕ್ರಿಕೆಟ್ ವಿಶ್ಲೇಷಕರು ಟೀಕೆ ಮಾಡಿದ್ದಾರೆ.

    ಅಂಪೈರ್ ತೀರ್ಪಿನ ವಿರುದ್ಧ ಬಳಿಕ ಏನು ಮಾಡಲಾದ ಜೇಮ್ಸ್ ಪ್ಯಾಟಿನ್‍ಸನ್ ಪೆವಿಲಿಯನ್ ನತ್ತ ನಡೆಯುತ್ತಿದ್ದರು, ಆದರೆ ಆಡಿಲೇಡ್ ಸ್ಟ್ರೇಕರ್ಸ್ ಆಟಗಾರರು ಅಂಪೈರ್ ತಪ್ಪಿನ ಅರಿವಾಗಿ ಮತ್ತೆ ಆಡಲು ಅವಕಾಶ ನೀಡಿದರು. ಆಟಗಾರರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂರು ರನ್ ಅಂತರದಲ್ಲಿ 4 ವಿಕೆಟ್ ಪತನ – 146 ರನ್‍ಗಳಿದ್ದ ಗೆದ್ದ ಆಸ್ಟ್ರೇಲಿಯಾ

    ಮೂರು ರನ್ ಅಂತರದಲ್ಲಿ 4 ವಿಕೆಟ್ ಪತನ – 146 ರನ್‍ಗಳಿದ್ದ ಗೆದ್ದ ಆಸ್ಟ್ರೇಲಿಯಾ

    ಪರ್ತ್: ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 146 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಂತಾಗಿದೆ.

    287 ರನ್ ಗುರಿ ಪಡೆದ ಟೀಂ ಇಂಡಿಯಾ 56 ಓವರ್ ಗಳಲ್ಲಿ 140 ರನ್ ಗಳಿಗೆ ಆಲೌಟ್ ಆಯ್ತು. 5 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದ್ದ ಭಾರತ ಇಂದು ತನ್ನ ಖಾತೆಗೆ 38 ರನ್ ಮಾತ್ರ ಸೇರಿಸಿತು.

    ಹನುಮ ವಿಹಾರಿ 28 ರನ್, ರಿಷಬ್ ಪಂತ್ 30, ಉಮೇಶ್ ಯಾದವ್ 2 ರನ್ ಗಳಿಸಿ ಔಟಾದರು. ಇಶಾಂತ್ ಶರ್ಮಾ ಮತ್ತು ಬುಮ್ರಾ 0 ಸುತ್ತಿದರು. ಕೊನೆಯ ನಾಲ್ಕು ವಿಕೆಟ್ 3 ರನ್‍ಗಳ ಅಂತರದಲ್ಲಿ ಕಳೆದುಕೊಂಡ ಪರಿಣಾಮ ಭಾರತ ಹೀನಾಯ ಸೋಲು ಕಂಡಿದೆ.

    ನಥನ್ ಲಿಯಾನ್ ಮತ್ತು ಸ್ಟ್ರಾಕ್ ತಲಾ 3 ವಿಕೆಟ್, ಹ್ಯಾಝಲ್‍ವುಡ್ ಮತ್ತು ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಸೇರಿದಂತೆ ಈ ಪಂದ್ಯದಲ್ಲಿ 8 ವಿಕೆಟ್ ಕಬಳಿಸಿದ ಸ್ಪಿನ್ನರ್ ಲಿಯಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

    ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ 30 ರವರೆಗೆ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಡಿಲೇಡ್ ನಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಭಾರತ 31 ರನ್ ಗಳಿಂದ ಗೆದ್ದುಕೊಂಡಿತ್ತು.

    ಸಂಕ್ಷಿಪ್ತ ಸ್ಕೋರ್:
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ – 326/10, 108.3 ಓವರ್
    ಭಾರತ ಮೊದಲ ಇನ್ನಿಂಗ್ಸ್ – 283/10, 105.5 ಓವರ್
    ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ – 243/10, 93.2 ಓವರ್
    ಭಾರತ ಎರಡನೇ ಇನ್ನಿಂಗ್ಸ್ – 140/10, 56 ಓವರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್ ಟೆಸ್ಟ್: ಅಂತಿಮ 2 ಪಂದ್ಯಗಳಿಂದ ಹೊರಬಿದ್ದ ಪೃಥ್ವಿ ಶಾ – ಮಯಾಂಕ್ ಅಗರ್ವಾಲ್‍ಗೆ ಸ್ಥಾನ

    ಆಸೀಸ್ ಟೆಸ್ಟ್: ಅಂತಿಮ 2 ಪಂದ್ಯಗಳಿಂದ ಹೊರಬಿದ್ದ ಪೃಥ್ವಿ ಶಾ – ಮಯಾಂಕ್ ಅಗರ್ವಾಲ್‍ಗೆ ಸ್ಥಾನ

    ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಅಂತಿಮ 2 ಟೆಸ್ಟ್ ಪಂದ್ಯಗಳಿಗೆ 19 ಮಂದಿ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಸಿದ್ದು, ಕನ್ನಡಿಗ ಮಯಾಂಕ್ ಅಗರ್ವಾಲ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ಬಿಸಿಸಿಐ ಪ್ರಕಟಿಸಿರುವ ಪಟ್ಟಿಯಲ್ಲಿ ಏಷ್ಯಾಕಪ್ ಟೂರ್ನಿಯ ವೇಳೆ ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಕಮ್ ಬ್ಯಾಕ್ ಮಾಡಲು ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಪೃಥ್ವಿ ಸ್ಥಾನದಲ್ಲಿ ಮಯಾಂಕ್ ಕೂಡ ಸ್ಥಾನ ಪಡೆದಿದ್ದಾರೆ.

    ಆಸೀಸ್ ವಿರುದ್ಧ ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದ ಪೃಥ್ವಿ ಶಾ ಸಂಪೂರ್ಣವಾಗಿ ಚೇತರಿಕೆ ಆಗದ ಕಾರಣ ಅವರನ್ನು ಟೆಸ್ಟ್ ಸರಣಿಯ ಉಳಿದ 2 ಪಂದ್ಯಗಳ ಆಯ್ಕೆ ವೇಳೆ ಪರಿಗಣಿಸಿಲ್ಲ. ಆದರೆ ಕೆಲ ದಿನಗಳ ಹಿಂದೆ ಕೋಚ್ ರವಿಶಾಸ್ತ್ರಿ ಮಾಹಿತಿ ನೀಡಿ ಪೃಥ್ವಿ ಶಾ ಕಮ್ ಬ್ಯಾಕ್ ಮಾಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

    ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಭರಸವೆ ಮೂಡಿಸಿದ್ದ ಪೃಥ್ವಿ ಶಾ ಆಸೀಸ್ ವಿರುದ್ಧ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇತ್ತು. ಆದರೆ ಗಾಯಗೊಂಡು ತಂಡದಿಂದ ಹೊರ ನಡೆದಿದ್ದರು. ಪೃಥ್ವಿ ಶಾ ಗೈರು ಹಾಜರಿಯಲ್ಲಿ ಕೆಎಲ್ ರಾಹುಲ್, ಮುರಳಿ ವಿಜಯ್ ತಂಡದ ಆರಂಭಿಕರ ಸ್ಥಾನ ಪಡೆದಿದದ್ದು, ಇಲ್ಲವಾದರೆ ಪೃಥ್ವಿ ಶಾರೊಂದಿಗೆ ಒಬ್ಬರು ಮಾತ್ರ ಇನ್ನಿಂಗ್ಸ್ ಆರಂಭಿಸುತ್ತಿದ್ದರು. ಉಳಿದಂತೆ ಆಸೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯ ಡಿಸೆಂಬರ್ 26, ಅಂತಿಮ ಪಂದ್ಯ ಜನವರಿ 3 ರಂದು ಆರಂಭವಾಗಲಿದೆ. ಇದನ್ನು ಓದಿ : 2 ತಿಂಗಳ ಬಳಿಕ ಹಾರ್ದಿಕ್ ಬೌಲಿಂಗ್ – ವಿಡಿಯೋ 

    ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಚೇತೇಶ್ವರ ಪೂಜಾರ, ರಹಾನೆ (ಉಪನಾಯಕ), ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಬ್ ಪಂತ್(ವಿಕೆಟ್ ಕೀಪರ್), ಪಾರ್ಥಿಕ್ ಪಟೇಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ಬುಮ್ರಾ, ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv