Tag: australia

  • ಆಸೀಸ್ ಸರಣಿಗೆ ಕೆಎಲ್ ರಾಹುಲ್ ಕಮ್‍ಬ್ಯಾಕ್ – ಕಾರ್ತಿಕ್ ಡ್ರಾಪ್

    ಆಸೀಸ್ ಸರಣಿಗೆ ಕೆಎಲ್ ರಾಹುಲ್ ಕಮ್‍ಬ್ಯಾಕ್ – ಕಾರ್ತಿಕ್ ಡ್ರಾಪ್

    ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ತವರಿನ ಸಿಮೀತ ಓವರ್ ಗಳ ಸರಣಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ನಾಯಕ ವಿರಾಟ್‍ಕೊಹ್ಲಿ ಹಾಗೂ ಬುಮ್ರಾ ತಂಡವನ್ನು ಸೇರಿಕೊಂಡಿದ್ದಾರೆ.

    ಆಸೀಸ್ ಸರಣಿಯ ಮೊದಲ 2 ಮತ್ತು ಅಂತಿಮ 3 ಏಕದಿನ ಪಂದ್ಯಗಳಿಗೆ 15 ಮಂದಿ ಆಟಗಾರರ ಹೆಸರನ್ನು ಬಿಸಿಸಿಐ ಪ್ರತ್ಯೇಕವಾಗಿ ಪ್ರಕಟಿಸಿದೆ. ಪ್ರಮುಖವಾಗಿ ಕಾಫಿ ವಿಥ್ ಕರಣ್ ಶೋ ಬಳಿಕ ಆಸೀಸ್ ಸರಣಿಯಿಂದ ಹೊರಬಂದಿದ್ದ ಕೆಎಲ್ ರಾಹುಲ್ 15 ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಕಾರ್ತಿಕ್ ಅವರನ್ನು ಸರಣಿಯಿಂದ ಡ್ರಾಪ್ ಮಾಡಲಾಗಿದೆ. ವಿಶೇಷವೆಂಬಂತೆ ಯುವ ವಿಕೆಟ್ ಕೀಪರ್ ರಿಷಬ್ ಈ ಬಾರಿ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.

    ಬೌಲಿಂಗ್ ವಿಭಾಗದಲ್ಲಿ ಬುಮ್ರಾ ಸೇರಿಕೊಂಡಿದ್ದರೆ, ಯುವ ವೇಗಿ ಖಲೀಲ್ ಅಹ್ಮದ್ ಅವರನ್ನು ಕೈಬಿಡಲಾಗಿದೆ. ಅಲ್ಲದೇ ಭುವನೇಶ್ವರ್ ಕುಮಾರ್ ಅವರನ್ನು ಕೂಡ 2 ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ಆ ಸ್ಥಾನದಲ್ಲಿ ಸಿದ್ದಾರ್ಥ್ ಕೌಲ್ ಆಡಲಿದ್ದು, ಅಂತಿಮ 3 ಪಂದ್ಯಗಳಿಗೆ ಭುವನೇಶ್ವರ್ ಭಾಗವಹಿಸಲಿದ್ದಾರೆ. ಉಳಿದಂತೆ ಟಿ20 ಸರಣಿಗೆ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಮೊದಲ ಬಾರಿಗೆ ಆಯ್ಕೆ ಆಗಿದ್ದಾರೆ.

    2019ರ ವಿಶ್ವಕಪ್ ಟೂರ್ನಿಯ ಉದ್ದೇಶದಿಂದ ಟೀಂ ಇಂಡಿಯಾ ಆಯ್ಕೆ ಬಹುಮುಖ್ಯವಾಗಿದ್ದು, ಆಸೀಸ್ ವಿರುದ್ಧ ಐದು ಏಕದಿನ ಹಾಗೂ 2 ಟಿ20 ಕ್ರಿಕೆಟ್ ಪಂದ್ಯಗಳು ನಡೆಯಲಿದೆ. ಫೆ. 24 ರಂದು ಮೊದಲ ಟಿ20 ಪಂದ್ಯ ನಡೆಯಲಿದೆ. ಮಾರ್ಚ್ 13 ರಂದು ಅಂತಿಮ ಏಕದಿನ ದಿನ ಪಂದ್ಯದೊಂದಿಗೆ ಟೂರ್ನಿ ಅಂತ್ಯವಾಗಲಿದೆ.

    ಮೊದಲ 2 ಏಕದಿನ: ವಿರಾಟ್ ಕೊಹ್ಲಿ ನಾಯಕ, ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಾಟಿ ರಾಯುಡು, ಕೇದರ್ ಜಾಧವ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಬುಮ್ರಾ, ಮೊಹಮ್ಮದ್ ಶಮಿ, ಚಹಲ್, ಕುಲ್ದೀಪ್ ಯಾದವ್, ವಿಜಯ್ ಶಂಕರ್, ರಿಷಬ್ ಪಂತ್, ಸಿದ್ದಾರ್ಥ್ ಕೌಲ್, ಕೆಎಲ್ ರಾಹುಲ್.

    ಅಂತಿಮ 3 ಏಕದಿನ:ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಬುಮ್ರಾ, ಭುವನೇಶ್ವರ್ ಕುಮಾರ್, ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವಿಜಯ್ ಶಂಕರ್, ಕೆಎಲ್ ರಾಹುಲ್, ರಿಷಬ್ ಪಂತ್.

    ಟಿ20 ಸರಣಿ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶಿಖರ್ ಧವನ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ವಿಜಯ್ ಶಂಕರ್, ಚಹಲ್, ಬುಮ್ರಾ, ಉಮೇಶ್ ಯಾದವ್, ಸಿದ್ದಾರ್ಥ್ ಕೌಲ್, ಮಯಾಂಕ್ ಮಾರ್ಕಂಡೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದೇಶಕ್ಕೆ ಹೋಗಲು ಅಣ್ಣನನ್ನೇ ಮದ್ವೆಯಾದ ಸೋದರಿ..!

    ವಿದೇಶಕ್ಕೆ ಹೋಗಲು ಅಣ್ಣನನ್ನೇ ಮದ್ವೆಯಾದ ಸೋದರಿ..!

    ಚಂಡೀಗಢ: ಸಂಬಂಧದಲ್ಲಿ ಅಣ್ಣನಾಗಬೇಕಿದ್ದವನ ಜೊತೆ ಮದ್ವೆಯಾಗಿದೆ ಎಂದು ನಕಲಿ ದಾಖಲೆ ಸೃಷ್ಠಿಸಿ ತನ್ನ ಆಸೆ ಪೂರೈಸಿಕೊಂಡಿದ್ದು, ಈಗ ಯುವತಿ ಸಿಕ್ಕಿಬಿದ್ದ ಘಟನೆ ಪಂಜಾಬ್ ನಲ್ಲಿ ನಡೆದಿದೆ.

    ಯುವತಿಯ ಸೋದರ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದನು. ಹೀಗಾಗಿ ತಾನೂ ಆಸ್ಟ್ರೇಲಿಯಾಗೆ ತೆರಳಬೇಕೆಂಬ ಬಯಕೆ ಹೊಂದಿದ್ದ ಯುವತಿ, ಸಹೋದರನೊಂದಿಗೆ ಮದುವೆಯಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾಳೆ.

    ಅದರಂತೆಯೇ ಆಕೆ ತಮ್ಮ ಮದುವೆಯನ್ನು ನೋಂದಾಯಿಸಲು ಪಂಜಾಬ್ ನ ನ್ಯಾಯಾಲಯಕ್ಕೆ ಆಸ್ಟ್ರೇಲಿಯಾದ ವೀಸಾವನ್ನು ಹೊಂದಿದ್ದ ಅಣ್ಣನ ದಾಖಲೆಗಳನ್ನು ಉಪಯೋಗಿಸಿಕೊಂಡಿದ್ದಾಳೆ. ಬಳಿಕ ಪಾಸ್‍ಪೋರ್ಟ್ ಮಾಡಿಸಿಕೊಂಡು ಆಸ್ಟ್ರೇಲಿಯಾಕ್ಕೆ ತೆರಳಿದ್ದಾಳೆ.

    ಯುವತಿಯ ಮೋಸದ ಬಗ್ಗೆ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಸಾಮಾಜಿಕ, ಕಾನೂನು ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾಳೆ. ವಿದೇಶಕ್ಕೆ ಹೋಗಬೇಕೆಂಬ ಹುಚ್ಚು ಹಠದಿಂದ ಈ ರೀತಿ ಮಾಡಿದ್ದಾಳೆ. ಸದ್ಯಕ್ಕೆ ನಾವು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

    ಜೋಡಿಯು ನೀಡಿದ್ದ ಎಲ್ಲ ದಾಖಲೆಗಳನ್ನು ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ. ಕಳೆದ 4 ವರ್ಷಗಳಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿರುವ 1500 ಕ್ಕಿಂತ ಹೆಚ್ಚು ವಿದೇಶಿಯರು ತಮ್ಮ ವಿದೇಶಿ ವೀಸಾಗಳನ್ನು ತಿರಸ್ಕರಿಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಇಲಾಖೆ ತಿಳಿಸಿದೆ.

    ಈ ಕುರಿತು ಆರು ಮಂದಿಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ ಈವರೆಗೂ ಯಾರೊಬ್ಬರನ್ನು ಬಂಧಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಟಾಯ್ಲೆಟ್ ಕಮೋಡ್ ನಲ್ಲಿ ಅಡಗಿ ಕೂತಿತ್ತು 5 ಅಡಿ ಉದ್ದದ ಹೆಬ್ಬಾವು..!

    ಟಾಯ್ಲೆಟ್ ಕಮೋಡ್ ನಲ್ಲಿ ಅಡಗಿ ಕೂತಿತ್ತು 5 ಅಡಿ ಉದ್ದದ ಹೆಬ್ಬಾವು..!

    ಕ್ಯಾನ್ಬೆರಾ: ಬರೋಬ್ಬರಿ 5 ಅಡಿ ಉದ್ದದ ಹೊಬ್ಬಾವೊಂದು ಟಾಯ್ಲೆಟ್  ಕಮೋಡ್ ನಲ್ಲಿ  ಅಡಗಿ ಕೂತಿದ್ದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

    ಕಳೆದ ಮಂಗಳವಾರ ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರ ನಿವಾಸಯಾದ ಹೆಲೆನ್ ರಿಚಾರ್ಡ್(59) ಅವರ ಮನೆಯ ಟಾಯ್ಲೆಟ್‍ನಲ್ಲಿ ಬಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿತ್ತು. ಮಹಿಳೆ ಶೌಚಾಲಯಕ್ಕೆ ಹೋಗಿದ್ದಾಗ ಟಾಯ್ಲೆಟ್  ಕಮೋಡ್ ನಲ್ಲಿ ಅಡಗಿದ್ದ ಹೆಬ್ಬಾವು ಕಚ್ಚಿತ್ತು. ಈ ವೇಳೆ ಮಹಿಳೆ ಎನಪ್ಪಾ ಇದು ಎಂದು ಶೌಚಾಲಯದ ಲೈಟ್ ಹಾಕಿ ನೋಡಿದಾಗ  ಕಮೋಡ್ ನಲ್ಲಿದ್ದ ಹಾವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

    ಬಳಿಕ ಗಾಬರಿಯಿಂದ ಮಹಿಳೆ ಉರಗ ತಜ್ಞರಿಗೆ ಕರೆಮಾಡಿ ಮಾಹಿತಿ ತಿಳಿಸಿದ್ದಾರೆ. ಹಾಗೆಯೇ ಟಾಯ್ಲೆಟ್ ಕಮೋಡ್ ನಲ್ಲಿದ್ದ ಹೆಬ್ಬಾವಿನ ಫೋಟೋವನ್ನು ಮೊಬೈಲ್‍ನಲ್ಲಿ ಸೆರೆಹಿಡಿದು “ಟಾಯ್ಲೆಟ್‍ಗೆ ಹೋದಾಗ ಎಚ್ಚರ” ಅಂತ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಸದ್ಯ ಎಲ್ಲಡೆ ವೈರಲ್ ಆಗಿದ್ದು, ನೋಡಿದವರು ಅಚ್ಚರಿ ಪಟ್ಟಿದ್ದಾರೆ.

    ಸ್ಥಳಕ್ಕೆ ಬಂದ ಉರಗ ತಜ್ಞರು ಟಾಯ್ಲೆಟ್‍ಯಿಂದ ಸುರಕ್ಷಿತವಾಗಿ 5 ಅಡಿ ಉದ್ದದ ಹೆಬ್ಬಾವನ್ನು ಹೊರೆಗೆದು ರಕ್ಷಣೆ ಮಾಡಿದ್ದಾರೆ.

    https://www.facebook.com/www.snakecatchers.com.au/photos/a.185721661616455/947707375417876/?type=3

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯದಲ್ಲಿ ಹೈಡ್ರಾಮ – ಯಾವುದೇ ಚಿಂತೆಯಿಲ್ಲದೇ ವಿದೇಶಕ್ಕೆ ಹಾರಿದ ರೇವಣ್ಣ

    ರಾಜ್ಯದಲ್ಲಿ ಹೈಡ್ರಾಮ – ಯಾವುದೇ ಚಿಂತೆಯಿಲ್ಲದೇ ವಿದೇಶಕ್ಕೆ ಹಾರಿದ ರೇವಣ್ಣ

    ಬೆಂಗಳೂರು: ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯದಿಂದಾಗಿ ರಾಜ್ಯದಲ್ಲಿ ಸರ್ಕಾರ ಇದೆಯೇ ಇಲ್ಲವೇ ಎನ್ನುವ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ. ಈ ಮಧ್ಯೆ ಸೂಪರ್ ಸಿಎಂ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ.

    ಸಹೋದರ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಗಂಡಾಂತರ ಎದುರಾಗಿದ್ದಕ್ಕೆ ಸಚಿವರು ಯಾವುದೇ ರೀತಿಯ ಟೆನ್ಶನ್ ತಗೆದುಕೊಂಡಿಲ್ಲ. ರಾಜಕೀಯ ಜಂಜಾಟವೇ ಬೇಡ ಅಂತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವ ರೇವಣ್ಣ ಅವರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಸಚಿವರು ಒಂದು ವಾರ ಕಾಲ ಅಲ್ಲಿ ಅಧ್ಯಯನ ನಡೆಸಿ ಮರಳಲಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ.

    ವಿದೇಶಕ್ಕೆ ಹಾರಿದ್ದನ್ನು ಕಂಡು ಸರ್ಕಾರ ಉಳಿಯುತ್ತೆ ಅಂತಾ ಯಾರಾದ್ರೂ ರೇವಣ್ಣಗೆ ಜ್ಯೋತಿಷ್ಯ ಹೇಳಿದ್ರಾ? ಹೆಚ್‍ಡಿ ರೇವಣ್ಣಗೆ ಸರ್ಕಾರ ಬೀಳಲ್ಲ ಎನ್ನುವ ಅಚಲ ನಂಬಿಕೆ ಬಂದುಬಿಟ್ಟಿದ್ಯಾ ಎನ್ನುವ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಗದು ಬಹುಮಾನ ನೀಡದ್ದಕ್ಕೆ ವಿಂಬಲ್ಡನ್ ಉದಾಹರಣೆ ಕೊಟ್ಟು ಕಿಡಿಕಾರಿದ ಗವಾಸ್ಕರ್

    ನಗದು ಬಹುಮಾನ ನೀಡದ್ದಕ್ಕೆ ವಿಂಬಲ್ಡನ್ ಉದಾಹರಣೆ ಕೊಟ್ಟು ಕಿಡಿಕಾರಿದ ಗವಾಸ್ಕರ್

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ ತಂಡಕ್ಕೆ ನಗದು ಬಹುಮಾನ ನೀಡದ್ದಕ್ಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿಕಾರಿದ್ದಾರೆ.

    ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಯಜುವೇಂದ್ರ ಚಹಲ್ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿಗೆ 500 ಡಾಲರ್(35,600 ರೂ.) ನಗದು ಬಹುಮಾನವಾಗಿ ನೀಡಿದ್ದಾರೆ. ತಂಡದ ಆಟಗಾರರಿಗೆ ಒಂದು ಟ್ರೋಫಿ ಬಿಟ್ಟರೆ ಬೇರೆ ಏನೂ ಸಿಕ್ಕಿಲ್ಲ. ಸಂಘಟಕರು ಪ್ರಸಾರದ ಹಕ್ಕಿನಿಂದ ಸಾಕಷ್ಟು ಹಣವನ್ನು ಸಂಪಾದಿಸಿದ್ದರೂ ಆಟಗಾರರಿಗೆ ನಗದು ಬಹುಮಾನ ನೀಡಿಲ್ಲ ಯಾಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ವಿಂಬಲ್ಡನ್ ಟೆನ್ನಿಸ್ ಟೂರ್ನಿ ನೋಡಿ ಕಲಿತುಕೊಳ್ಳಲಿ. ಹಣ ಉತ್ಪಾದನೆಯಾಗುವುದೇ ಆಟಗಾರರಿಂದ. ಹೀಗಿರುವಾಗ ಆಟಗಾರರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.

    500 ಡಾಲರ್ ನಗದು ಬಹುಮಾನ ಸಿಕ್ಕಿದರೂ ಚಹಲ್ ಮತ್ತು ಧೋನಿ ಆ ಹಣವನ್ನು ದಾನ ನೀಡಿದ್ದಾರೆ. ವಿಂಬಲ್ಡನ್ ಟೆನ್ನಿಸ್ ನಲ್ಲಿ ಮೊದಲ ಹಂತದಲ್ಲಿ ಸೋತ ಸ್ಪರ್ಧಿಗೆ 36 ಲಕ್ಷ ರೂ. ಹಣ ಸಿಕ್ಕಿದರೆ, ಸಿಂಗಲ್ಸ್ ವಿಜೇತರು ಅಂದಾಜು 21 ಕೋಟಿ ರೂ. ನಗದು ಬಹುಮಾನವನ್ನು ಪಡೆಯುತ್ತಾರೆ.

    ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ 20 ಪಂದ್ಯ 1-1 ರಲ್ಲಿ ಸಮಬಲಗೊಂಡಿತ್ತು. ಎರಡನೇ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಟೆಸ್ಟ್ ಸರಣಿ 2-1 ರಿಂದ ಗೆದ್ದಿದ್ದ ಭಾರತ ಈಗ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಟಿ-20 ಪಂದ್ಯದಲ್ಲಿ ಮಳೆಯಿಂದಾಗಿ ಡಕ್‍ವರ್ಥ್ ಲೂಯಿಸ್ ನಿಯಮದಿಂದ ಪರಿಷ್ಕೃತ ರನ್ ನೀಡಿದ ಪರಿಣಾಮ ಭಾರತ ಗೆಲುವಿನ ಸಮೀಪ ಬಂದು ಸೋತಿತ್ತು. ಆಸ್ಟ್ರೇಲಿಯಾ 4 ರನ್ ಗಳಿಂದ ಈ ಪಂದ್ಯವನ್ನು ಗೆದ್ದುಕೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹ್ಯಾಟ್ರಿಕ್ ಫಿಫ್ಟಿ – ಟೀಕೆಗಳಿಗೆ ಬ್ಯಾಟ್‍ನಿಂದಲೇ ಉತ್ತರಿಸಿದ ಎಂಎಸ್‍ಡಿ

    ಹ್ಯಾಟ್ರಿಕ್ ಫಿಫ್ಟಿ – ಟೀಕೆಗಳಿಗೆ ಬ್ಯಾಟ್‍ನಿಂದಲೇ ಉತ್ತರಿಸಿದ ಎಂಎಸ್‍ಡಿ

    ಮೆಲ್ಬರ್ನ್: ಕಳಪೆ ಪ್ರದರ್ಶನದ ಕಾರಣ ನೀಡಿ ನಿವೃತ್ತಿ ನೀಡುವಂತೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಟೀಕೆ ಮಾಡಿದ್ದವರಿಗೆ ಎಂಎಸ್‍ಡಿ ಹ್ಯಾಟ್ರಿಕ್ ಫಿಫ್ಟಿ ಸಿಡಿಸುವ ಮೂಲಕ ಉತ್ತರಿಸಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ಏಕದಿನ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿರುವ ಧೋನಿ ಹ್ಯಾಟ್ರಿಕ್ ಫಿಫ್ಟಿ ಸಿಡಿಸಿ ವೃತ್ತಿ ಜೀವನದ 70ನೇ ಅರ್ಧ ಶತಕ ಪೂರೈಸಿದರು. ಉಳಿದಂತೆ ಮೊದಲ ಪಂದ್ಯದಲ್ಲಿ 96 ಎಸೆತಗಳಲ್ಲಿ 51 ರನ್, 2ನೇ ಪಂದ್ಯದಲ್ಲಿ 54 ಎಸೆತಗಳಲ್ಲಿ 55* ರನ್ ಹಾಗೂ 3ನೇ ಪಂದ್ಯದಲ್ಲಿ 114 ಎಸೆತಗಳಲ್ಲಿ 87* ರನ್ ಸಿಡಿಸಿದ್ದಾರೆ.

    ಧೋನಿ ಈ ಹಿಂದೆ 2 ಬಾರಿ ಹ್ಯಾಟ್ರಿಕ್ ಅರ್ಧ ಶತಕ ಗಳಿಸಿದ ಸಾಧನೆ ಮಾಡಿದ್ದು, 2011 ಇಂಗ್ಲೆಂಡ್, 2014 ನ್ಯೂಜಿಲೆಂಡ್, ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧ ಶತಕ ಸಿಡಿಸಿದ್ದರು. ಉಳಿದಂತೆ 2018ರಲ್ಲಿ 13 ಇನ್ನಿಂಗ್ಸ್ ಗಳನ್ನು ಆಡಿದ್ದ ಧೋನಿ ಒಂದು ಅರ್ಧ ಶತಕ ಕೂಡ ಗಳಿಸಿರಲಿಲ್ಲ. ಅಲ್ಲದೇ 2018ರಲ್ಲಿ 20 ಏಕದಿನ ಪಂದ್ಯಗಳಿಂದ 275 ರನ್ ಮಾತ್ರ ಗಳಿಸಿದ್ದರು.

    ಟೀಂ ಇಂಡಿಯಾ ಪರ ಧೋನಿ 6ನೇ ಬಾರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಹಿಂದೆ ಸಚಿನ್ 14 ಬಾರಿ, ಯುವರಾಜ್ ಸಿಂಗ್ 7 ಬಾರಿ ಹಾಗೂ ಸೌರವ್ ಗಂಗೂಲಿ, ಕೊಹ್ಲಿ ತಲಾ 6 ಬಾರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

    1 ಸಾವಿರ ರನ್: ಧೋನಿ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಆಸೀಸ್ ವಿರುದ್ಧ ಏಕದಿನ ಮಾದರಿಯಲ್ಲಿ 1 ಸಾವಿರ ರನ್ ಪೂರೈಸಿದರು. ಈ ಮೂಲಕ ಸಚಿನ್, ಕೊಹ್ಲಿ, ರೋಹಿತ್ ಶರ್ಮಾ ಬಳಿಕ ಈ ಸಾಧನೆ ಮಾಡಿದ ಭಾರತೀಯ ಆಟಗಾರ ಎನಿಸಿಕೊಂಡರು.

    ನಂ.4: ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ, ಧೋನಿ ಪರ ಬ್ಯಾಟ್ ಮಾಡಿದ್ದರು. ಈ ವೇಳೆ ಧೋನಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಅವಕಾಶ ನೀಡುವುದು ಉತ್ತಮ ಎಂದು ತಿಳಿಸಿದ್ದರು. ಈ ಕುರಿತು ಅರಿತ ನಾಯಕ ಕೊಹ್ಲಿ, ಧೋನಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿದ್ದರು. ಒಟ್ಟಾರೆ 2018ರ ವೈಫಲ್ಯಗಳ ಧೋನಿ ಬ್ಯಾಟಿಂಗ್‍ನಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡೆಡ್ ಬಾಲ್ ಎಸೆದು ಫಿಂಚ್‍ಗೆ ಅಚ್ಚರಿ ನೀಡಿದ ಭುವಿ – ವಿಡಿಯೋ ನೋಡಿ

    ಡೆಡ್ ಬಾಲ್ ಎಸೆದು ಫಿಂಚ್‍ಗೆ ಅಚ್ಚರಿ ನೀಡಿದ ಭುವಿ – ವಿಡಿಯೋ ನೋಡಿ

    ಮೆಲ್ಬರ್ನ್: ಇಲ್ಲಿನ ಎಂಸಿಜೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ಬೌಲರ್ ಭುವನೇಶ್ವರ್ ಕುಮಾರ್ ಡೆಡ್ ಬಾಲ್ ಎಸೆದು ಎದುರಾಳಿ ಬ್ಯಾಟ್ಸ್ ಮನ್ ಫಿಂಚ್‍ಗೆ ಶಾಕ್ ನೀಡಿದ ಘಟನೆ ನಡೆದಿದೆ.

    ಪಂದ್ಯದ 9ನೇ ಓವರ್ ಬೌಲ್ ಮಾಡಿದ ಭುವನೇಶ್ವರ್ ಕುಮಾರ್, ಓವರಿನ ಅಂತಿಮ ಎಸೆತವನ್ನು ಅಂಪೈರ್ ಹಿಂದಿನಿಂದಲೇ ಎಸೆದಿದ್ದರು. ಈ ವೇಳೆ ಸ್ಟ್ರೈಕ್ ನಲ್ಲಿದ್ದ ಫಿಂಚ್ ಕ್ಷಣ ಕಾಲ ಶಾಕ್‍ಗೆ ಒಳಗಾಗಿದ್ದರು. ಆದರೆ ಈ ಎಸೆತವನ್ನು ಅಂಪೈರ್ ಡೆಡ್ ಬಾಲ್ ಎಂದು ಪರಿಗಣಿಸಿದರು. ಪರಿಣಾಮ ಭುವಿ ಮತ್ತೊಂದು ಎಸೆತ ಬೌಲ್ ಮಾಡಿದರು. ಅಚ್ಚರಿ ಎಂಬಂತೆ ಈ ಎಸೆತದಲ್ಲಿ ಫಿಂಚ್ ಎಲ್‍ಬಿಡಬ್ಲೂ ಬಲೆಗೆ ಸಿಲುಕಿ ಪೆವಿಲಿಯನ್ ಸೇರಿದರು.

    ಸರಣಿಯಲ್ಲಿ ಭುವನೇಶ್ವರ್ ಕುಮಾರ್ 3ನೇ ಭಾರಿಗೆ ಫಿಂಚ್ ವಿಕೆಟ್ ಪಡೆದ ಸಾಧನೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭುವನೇಶ್ವರ್ ಕುಮಾರ್ ಡೆಡ್ ಬೌಲಿಂಗ್ ಮಾಡುತ್ತಿರುವ ಜಿಫ್ ವಿಡಿಯೋ ಚರ್ಚೆಯಾಗುತ್ತಿದೆ. ಪಂದ್ಯದಲ್ಲಿ ಭುವಿ 8 ಓವರ್ ಗಳಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರವಿಶಾಸ್ತ್ರಿ ದಾಖಲೆ ಮುರಿದು, ಅಗರ್ಕರ್ ದಾಖಲೆ ಸರಿಗಟ್ಟಿದ ಚಹಲ್!

    ರವಿಶಾಸ್ತ್ರಿ ದಾಖಲೆ ಮುರಿದು, ಅಗರ್ಕರ್ ದಾಖಲೆ ಸರಿಗಟ್ಟಿದ ಚಹಲ್!

    ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರು ರವಿಶಾಸ್ತ್ರಿ ಹೆಸರಿನಲ್ಲಿದ್ದ ದಾಖಲೆ ಮುರಿದು ಅಜಿತ್ ಅಗರ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಷ್ಟೇ ಅಲ್ಲದೇ ಆಸ್ಟ್ರೇಲಿಯಾ ನೆಲದಲ್ಲಿ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಚಹಲ್ 6 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ 48.4 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟ್ ಆಗಿದೆ. 10 ಓವರ್ ಎಸೆದು, 42 ರನ್ ನೀಡಿ 6 ವಿಕೆಟ್ ಕಿತ್ತ ಚಹಲ್ ಕೋಚ್ ರವಿಶಾಸ್ತ್ರಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. 1991 ರಲ್ಲಿ ಪರ್ತ್ ಪಂದ್ಯದಲ್ಲಿ ಸ್ಪಿನ್ನರ್ ಆಗಿದ್ದ ಶಾಸ್ತ್ರಿ 15 ರನ್ ನೀಡಿ 5 ವಿಕೆಟ್ ಕಿತ್ತಿದ್ದರು.

    ಅಜಿತ್ ಅಗರ್ಕರ್ ಮೆಲ್ಬರ್ನ್ ಕ್ರೀಡಾಂಗಣದಲ್ಲಿ 9.3 ಓವರ್ ಎಸೆದು 42 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಉಸ್ಮಾನ್ ಖವಜಾ, ಶೇನ್ ಮಾರ್ಶ್, ಪೀಟರ್ ಹ್ಯಾಂಡ್ಸ್‍ಕಾಂಬ್, ಸ್ಟೋಯಿನ್ ಸನ್, ರಿಚರ್ಡ್ ಸನ್, ಆಡಂ ಜಂಪಾ ಅವರ ವಿಕೆಟ್ ಪಡೆದು ಆಸ್ಟ್ರೇಲಿಯಾದ ರನ್ ವೇಗಕ್ಕೆ ಕಡಿವಾಣ ಹಾಕಿದರು.

    ಪೀಟರ್ ಹ್ಯಾಂಡ್ಸ್‍ಕಾಂಬ್ 58 ರನ್(63 ಎಸೆತ, 2 ಬೌಂಡರಿ) ಹೊಡೆದು ಆಸೀಸ್ ರನ್ ಹೆಚ್ಚಿಸಲು ನೆರವಾದರು. ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ತಲಾ 2 ವಿಕೆಟ್ ಪಡೆದರು.

    ಈ ಪಂದ್ಯ ಸೇರಿದಂತೆ ಒಟ್ಟು 35 ಪಂದ್ಯ ಆಡಿರುವ ಚಹಲ್ 62 ವಿಕೆಟ್ ಪಡೆದಿದ್ದಾರೆ. 2018 ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 22 ರನ್ ನೀಡಿ 5 ವಿಕೆಟ್ ಪಡೆದಿದ್ದು ಇದೂವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಶಾರ್ಟ್ ರನ್’ – ಧೋನಿ ತಪ್ಪಿಲ್ಲ: ಅಭಿಮಾನಿಯ ಡೌಟ್ ಕ್ಲಿಯರ್ ಮಾಡಿದ ಗಿಲ್‍ಕ್ರಿಸ್ಟ್

    ‘ಶಾರ್ಟ್ ರನ್’ – ಧೋನಿ ತಪ್ಪಿಲ್ಲ: ಅಭಿಮಾನಿಯ ಡೌಟ್ ಕ್ಲಿಯರ್ ಮಾಡಿದ ಗಿಲ್‍ಕ್ರಿಸ್ಟ್

    ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಪಡೆದು ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಆದರೆ ಪಂದ್ಯದ ವೇಳೆ ಧೋನಿ ರನ್ ಪೂರ್ಣಗೊಳಿಸದೇ ಇರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಆಸೀಸ್ ಮಾಜಿ ಆಟಗಾರ, ವಿಕೆಟ್ ಕೀಪರ್ ಗಿಲ್‍ಕ್ರಿಸ್ಟ್ ಘಟನೆಯಲ್ಲಿ ಧೋನಿ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದಾರೆ.

    ಧೋನಿ ಶಾರ್ಟ್ ರನ್ ಕುರಿತು ಅಭಿಮಾನಿಯೊಬ್ಬರು ಟ್ವೀಟ್ ಮಾಡಿ ಗಿಲ್‍ಕ್ರಿಸ್ಟ್ ಅಭಿಪ್ರಾಯವನ್ನು ಕೇಳಿದ್ದು, ಈ ಟ್ವೀಟ್‍ಗೆ ಗಿಲ್‍ಕ್ರಿಸ್ಟ್ ಪ್ರತಿಕ್ರಿಯೆ ನೀಡಿದ್ದಾರೆ. ಧೋನಿ ನಿಯಮಗಳ ವಿರುದ್ಧ ಏನೂ ಮಾಡಿಲ್ಲ. ಇದು ಸಾಮಾನ್ಯವಾಗಿ ಕಂಡುಬಾರದ ಸಂದರ್ಭ ಎಂದು ಹೇಳಿ ಧನ್ಯವಾದ ತಿಳಿಸಿದ್ದಾರೆ.

    ಧೋನಿ ಶಾರ್ಟ್ ರನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಗಿಲ್‍ಕ್ರಿಸ್ಟ್ ಅವರನ್ನು ಪ್ರಶ್ನಿಸಿರುವ ದರ್ಶಕ್ ಪಟೇಲ್ ಎಂಬವರು, ಪಂದ್ಯದಲ್ಲಿ ಬ್ಯಾಟ್ಸ್ ಮನ್ 2ನೇ ರನ್ ಅಥವಾ ಅದಕ್ಕಿಂತ ಹೆಚ್ಚಿನ ರನ್ ಪಡೆಯುವ ಸಂದರ್ಭದಲ್ಲಿ ಶಾರ್ಟ್ ರನ್ ಸಂಭವಿಸಿದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತದೆ. ಒಮ್ಮೆ ಬ್ಯಾಟ್ಸ್ ಮನ್ ಮೊದಲ ರನ್ ಪೂರ್ಣಗೊಳಿಸಿದ ವೇಳೆ ಬಳಿಕ ಫೀಲ್ಡಿಂಗ್ ತಂಡ ಏನನ್ನು ಮಾಡಬಾರದು ಎಂದು ನಿರ್ಧರಿಸಿದರೆ ಅದು ರನ್ ಆಗುತ್ತದೆ ಅಲ್ಲವೇ? ಇದನ್ನು ಬಗೆಹರಿಸಿ ಎಂದು ಗಿಲ್‍ಕ್ರಿಸ್ಟ್ ಅವರಲ್ಲಿ ಕೇಳಿದ್ದರು.

    ನಡೆದಿದ್ದೇನು?
    ಅಡಿಲೇಡ್ ಏಕದಿನ ಪಂದ್ಯದ 45ನೇ ಓವರಿನಲ್ಲಿ ಧೋನಿ ಒಂದು ರನ್ ಪಡೆದು ಮುಂದಿನ ಓವರಿಗೆ ಬ್ಯಾಟಿಂಗ್ ಕಾಯ್ದುಕೊಳ್ಳಲು ನಿರ್ಧರಿಸಿದ್ದರು. ಆದರೆ ಈ ವೇಳೆ ರನ್ ಪೂರ್ಣಗೊಳಿಸದೆ ಕೆಲವೇ ಇಂಚುಗಳ ಅಂತರದಲ್ಲಿ ಮರಳಿ ಹಿಂದಕ್ಕೆ ತೆರಳಿದ್ದರು. ಧೋನಿ ಅವರ ಈ ಎಡವಟ್ಟನ್ನು ಅಂಪೈರ್ ಹಾಗೂ ಎದುರಾಳಿ ತಂಡದ ಆಟಗಾರರು ಕೂಡ ಗಮನಿಸಿರಲಿಲ್ಲ.

    ಪಂದ್ಯದ ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಹಲವರು, ತಂಡಕ್ಕೆ 18 ಎಸೆತಗಳಲ್ಲಿ 25ರನ್ ಬೇಕಿತ್ತು. ಒಂದೊಮ್ಮೆ ಧೋನಿ ಬ್ಯಾಟಿಂಗ್ ಸ್ಟ್ರೈಕ್ ಪಡೆಯದಿದ್ದರೆ, ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    https://twitter.com/ALL_IN_ONE_MAN/status/1085528833183236096

    ನಿಯಮ ಏನು ಹೇಳುತ್ತೆ: ಮೆಲ್ಬರ್ನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಕ್ರಿಕೆಟ್ ನಿಯಮವಾಳಿಯ (18.4.1) ಪ್ರಕಾರ ಆಟಗಾರ 2ನೇ ರನ್ ಪಡೆಯುವ ಅಥವಾ ಚೆಂಡು ಬೌಂಡರಿ ಗೆರೆದಾಟಿದೆ ಎಂದು ಭಾವಿಸಿ ರನ್ ಶಾಟ್ ರನ್ ಮಾಡಿದರೆ ಮಾತ್ರ ಅದನ್ನು ಅಂಪೈರ್ ಪರಿಗಣಿಸಬಹುದಾಗಿದೆ. ಆದರೆ ಧೋನಿ ಹಾಗೂ ದಿನೇಶ್ ಕಾರ್ತಿಕ್ ಇಬ್ಬರು 2ನೇ ರನ್ ಪಡೆಯಲು ಯತ್ನಿಸದಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗ ಮನೆಯಿಂದ ಹೊರಗೆ ಬಂದಿಲ್ಲ: ಹಾರ್ದಿಕ್ ಪಾಂಡ್ಯ ತಂದೆ

    ಮಗ ಮನೆಯಿಂದ ಹೊರಗೆ ಬಂದಿಲ್ಲ: ಹಾರ್ದಿಕ್ ಪಾಂಡ್ಯ ತಂದೆ

    ಮುಂಬೈ: ಆಸ್ಟ್ರೇಲಿಯಾ ಏಕದಿನ ಪಂದ್ಯಗಳಿಂದ ಕೈ ಬಿಟ್ಟ ಬಳಿಕ ತಮ್ಮ ಮಗ ಮನೆಯಿಂದ ಹೊರ ಬರಲು ಇಷ್ಟ ಪಡುತ್ತಿಲ್ಲ. ಅಲ್ಲದೇ ಯಾರ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಹಾರ್ದಿಕ್ ಪಾಂಡ್ಯ ತಂದೆ ಹಿಮಾಂಶು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಹಾರ್ದಿಕ್ ಪಾಂಡ್ಯ ತನ್ನ ಹೇಳಿಕೆ ಕುರಿತು ಪಶ್ಚಾತ್ತಾಪ ಪಡುತ್ತಿದ್ದಾನೆ. ಹಬ್ಬದ ಸಮಯದಲ್ಲಿ ಹಾರ್ದಿಕ್ ಗಾಳಿ ಪಟ ಹಾರಿಸಲು ಇಷ್ಟ ಪಡುತ್ತಿದ್ದ, ಆದರೆ ಆಸ್ಟ್ರೇಲಿಯಾದಿಂದ ಬಂದ ಮೇಲೆ ಬೇಸರದಲ್ಲಿದ್ದಾನೆ. ಮೊನ್ನೆಯ ಪಂದ್ಯವನ್ನು ಟಿವಿಯಲ್ಲಿ ನೋಡಿದ್ದಾನೆ ಎಂದು ತಿಳಿಸಿದ್ದಾರೆ.

    ಸದ್ಯದ ಪರಿಸ್ಥಿತಿಯಲ್ಲಿ ನಾವು ಕಾರ್ಯಕ್ರಮದಲ್ಲಿ ಮಾತನಾಡಿದ ವಿಚಾರದ ಬಗ್ಗೆ ಆತನೊಂದಿಗೆ ಚರ್ಚೆ ನಡೆಸಿಲ್ಲ. ಈಗಾಗಲೇ ಕ್ಷಮೆ ಕೋರಿರುವ ಪಾಂಡ್ಯ, ಮುಂದೇ ಇಂತಹ ತಪ್ಪನ್ನು ಮಾಡಲ್ಲ ಎಂದು ತಿಳಿಸಿದ್ದಾರೆ ಎಂದರು.

    ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅಕ್ಷೇಪಾರ್ಹವಾಗಿ ಮಾತನಾಡಿದ್ದ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಬಳಿಕ ಬಿಸಿಸಿಐ ಎದುರು ಕ್ಷಮೆ ಕೋರಿದ್ದರು. ಆದರೆ ಆಟಗಾರರ ವರ್ತನೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮುಂದಾದ ಬಿಸಿಸಿಐ ವಿಚಾರಣೆಗೆ ಮುಂದಾಗಿದೆ. ಪರಿಣಾಮ ಆಸೀಸ್ ಸರಣಿಯಿಂದ ಕೈ ಬಿಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv