Tag: australia

  • ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್: ಆಸೀಸ್‍ಗೆ 359 ರನ್ ಗುರಿ

    ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್: ಆಸೀಸ್‍ಗೆ 359 ರನ್ ಗುರಿ

    ಮೊಹಾಲಿ: ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಆಸೀಸ್‍ಗೆ ಗೆಲ್ಲಲು 359 ರನ್ ಗುರಿ ನೀಡಿದೆ.

    ಕಳೆದ ಮೂರು ಏಕದಿನ ಪಂದ್ಯಗಳಲ್ಲಿ ವಿಫಲವಾಗಿದ್ದ ಆರಂಭಿಕ ಶಿಖರ್ ಧವನ್ 115 ಎಸೆತಗಳಲ್ಲಿ 143 ರನ್ ಸಿಡಿಸಿ ವಿಶ್ವಕಪ್‍ಗೂ ಮುನ್ನ ಫಾರ್ಮ್ ಗೆ ಮರಳಿದ್ದಾರೆ. ಇತ್ತ ಮತ್ತೊಬ್ಬ ಆರಂಭಿಕ ರೋಹಿತ್ ಶರ್ಮಾ ಕೂಡ 92 ಎಸೆತಗಳಿಂದ 5 ಬೌಂಡರಿ 2 ಸಿಕ್ಸರ್ ಮೂಲಕ 95 ರನ್ ಗಳಿಸಿ ಮಿಂಚಿದರು. ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ 158 ರನ್ ಗಳಿಸಿತು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಟೀಂ ಇಂಡಿಯಾಗೆ ಧವನ್ ಸ್ಫೋಟಕ ಆಟದ ಮೂಲಕ ಆರಂಭ ನೀಡಿದರು. ಇತ್ತ ರೋಹಿತ್ ಶರ್ಮಾ ರಕ್ಷಣಾತ್ಮಕ ಆಟವಾಡಿ ಧವನ್‍ಗೆ ಸಾಥ್ ನೀಡಿದ್ದರು. ಈ ಜೋಡಿ ಮೊದಲ ವಿಕೆಟ್‍ಗೆ 186 ಎಸೆತಗಳಲ್ಲಿ ಬರೋಬ್ಬರಿ 193 ರನ್ ಜೊತೆಯಾಟ ನೀಡಿದರು. ಈ ಮೂಲಕ ಮೊದಲ ವಿಕೆಟ್‍ಗೆ ಭಾರತದ ಅತಿ ಹೆಚ್ಚು ರನ್ ಗಳಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. ಸಚಿನ್-ಸೌರವ್ ಗಂಗೂಲಿ ಜೋಡಿ 8,227 ಗಳಿಸಿದ್ದರು. ಸದ್ಯ ರೋಹಿತ್-ಧವನ್ ಜೋಡಿ 4,387 ರನ್ ಗಳಿಸಿದ್ದಾರೆ. ಅಲ್ಲದೇ ಇಷ್ಟೇ ರನ್ ಗಳಿಸಿದ್ದ ಸಚಿನ್-ಸೆಹ್ವಾಗ್ ಜೋಡಿಯನ್ನು ಹಿಂದಿಕ್ಕಿದ್ದಾರೆ. ವಿಶ್ವ ಕ್ರಿಕೆಟ್‍ನಲ್ಲಿ ರೋಹಿತ್-ಧವನ್ 7ನೇ ಜೊಡಿಯಾಗಿದೆ.

    97 ಎಸೆತಗಳಲ್ಲಿ ಶತಕ ಪೂರೈಸಿದ ಧವನ್ ಏಕದಿನ ಕ್ರಿಕೆಟಿನಲ್ಲಿ 16ನೇ ಶತಕ ಪೂರ್ಣಗೊಳಿಸಿದರು. ಅಲ್ಲದೇ ಧವನ್ ಏಕದಿನ ಮಾದರಿಯಲ್ಲಿ ಸಿಡಿಸಿದ ಗರಿಷ್ಠ ಸ್ಕೋರ್ ಇದಾಗಿದೆ. ಈ ಹಿಂದೆ 137 ರನ್ ಧವನ್ ಅತ್ಯಧಿಕ ರನ್ ಆಗಿತ್ತು. 95 ರನ್ ಗಳಿಸಿದ್ದ ವೇಳೆ ಎಡವಿದ ರೋಹಿತ್ 40ನೇ ಅರ್ಧ ಶತಕ ಸಿಡಿಸಿ ನಿರ್ಗಮಿಸಿದರು.

    ಕೊಹ್ಲಿ 7 ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ 31 ಎಸೆತಗಳಲ್ಲಿ 26 ರನ್ ಗಳಿಸಿದರು. ರಿಷಬ್ ಪಂತ್ 24 ಎಸೆತಗಳಲ್ಲಿ 36 ರನ್ ಗಳಿಸಿದರು. ವಿಜಯ್ ಶಂಕರ್ ಕೂಡ 11 ಎಸೆತಗಳಲ್ಲಿ 19 ರನ ಗಳಿಸಿದರು.

    ಉಳಿದಂತೆ ಅಂತಿಮ 2 ಪಂದ್ಯಗಳಿಗೆ ವಿಶ್ರಾಂತಿ ಪಡೆದಿರುವ ಧೋನಿ ಅವರು ಆಡುವ 11ರಲ್ಲಿ ಬಳಗದಲ್ಲಿ ಇಲ್ಲದೇ 2005ರ ಬಳಿಕ ಮೊದಲ ಬಾರಿಗೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ಪರ ಕಣಕ್ಕೆ ಇಳಿದಿತ್ತು.

    ಮೊದಲ ವಿಕೆಟ್ 159 ರನ್ ಗಳಿಗೆ ಉರುಳಿದರೆ 165 ರನ್ ಗಳಿಗೆ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡಿತ್ತು. ಆಸೀಸ್ ಪರ ಕಮ್ಮಿನ್ಸ್ 10 ಓವರ್ ಗಳಲ್ಲಿ 70 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ರಿಚಡ್ರ್ಸನ್ 3, ಜಂಪಾ 1 ವಿಕೆಟ್ ಪಡೆದರು.

    ಭಾರತದ ರನ್ ಏರಿದ್ದು ಹೇಗೆ?
    9.2 ಓವರ್ 50 ರನ್
    17.2 ಓವರ್ 100 ರನ್
    32 ಓವರ್ 200 ರನ್
    43.5 ಓವರ್ 300 ರನ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಡೋ ಆಸೀಸ್ 4ನೇ ಏಕದಿನ ಪಂದ್ಯ – ಕೆಎಲ್ ರಾಹುಲ್‍ಗೆ ಸಿಗುತ್ತಾ ಚಾನ್ಸ್!

    ಇಂಡೋ ಆಸೀಸ್ 4ನೇ ಏಕದಿನ ಪಂದ್ಯ – ಕೆಎಲ್ ರಾಹುಲ್‍ಗೆ ಸಿಗುತ್ತಾ ಚಾನ್ಸ್!

    ಮೊಹಾಲಿ: ಆಸೀಸ್ ವಿರುದ್ಧದ ಅಂತಿಮ 2 ಏಕದಿನ ಪಂದ್ಯಗಳಲ್ಲಿ ಕೆಲವು ಪ್ರಯೋಗಗಳನ್ನು ಮಾಡುತ್ತೇವೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದು, ಕೆಎಲ್ ರಾಹುಲ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲಿದ್ದರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

    ಆರಂಭಿಕ ಶಿಖರ್ ಧವನ್ ಸತತ ವೈಫಲ್ಯ ಅನುಭವಿಸುತ್ತಿದ್ದು, ತಂಡದ ಆರಂಭಿಕರು ಪದೇ ಪದೇ ಉತ್ತಮ ಆರಂಭ ನೀಡಲು ವಿಫಲವಾಗುತ್ತಿರುವುದು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೆಚ್ಚಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಕಪ್‍ಗಾಗಿ ಉತ್ತಮ ಕಾಂಬಿನೇಶನ್ ರೂಪಿಸಲು ಅಂತಿಮ 2 ಪಂದ್ಯಗಳಲ್ಲಿ ಕೊಹ್ಲಿ ಪ್ರಯೋಗಕ್ಕೆ ಮುಂದಾಗಿದ್ದಾರೆ.

    ನಾಳೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮೊಹಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಸರಣಿ ಗೆಲುವಿನ ಪ್ರದರ್ಶನ ನಿರೀಕ್ಷೆ ಮಾಡಲಾಗುತ್ತಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡರೆ ದೆಹಲಿಯಲ್ಲಿ ನಡೆಯುವ ಪಂದ್ಯ ಮತ್ತಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ.

    ಈಗಾಗಲೇ ಧೋನಿ ಅವರಿಗೆ ಪಂದ್ಯದಿಂದ ವಿಶ್ರಾಂತಿ ನೀಡಿರುವುದರಿಂದ ಪಂತ್ ಸ್ಥಾನ ಪಡೆಯುವುದು ಖಚಿತವಾಗಿದ್ದು, ಶಮಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಭುವನೇಶ್ವರ್ ಅಂತಿಮ ಬಳಗದಲ್ಲಿ ಆಡುವುದು ಖಚಿತವಾಗಿದೆ. ಫಾರ್ಮ ಸಮಸ್ಯೆಯಿಂದ ಬಳಲುತ್ತಿರುವ ರಾಯುಡು ಈ ಪಂದ್ಯದಲ್ಲಿಯಾದ್ರು ಉತ್ತಮ ಪ್ರದರ್ಶನ ನೀಡುತ್ತರಾ ಕಾದು ನೊಡಬೇಕಿದೆ.

    ಉಳಿದಂತೆ ಮೊಹಾಲಿ ಪಿಚ್ ಕೂಡ ಬ್ಯಾಟಿಂಗ್ ಪಿಚ್ ಆಗಿರುವುದರಿಂದ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ದುಕೊಳ್ಳಲಿದೆ. ಇದುವರೆಗೂ ಕ್ರೀಡಾಂಗಣದಲ್ಲಿ 24 ಅಂತರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿದ್ದು, 15 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂದ್ಯವೇ ಗೆಲುವು ಪಡೆದಿದೆ. ಕಳೆದ ರಾಂಚಿ ಪಂದ್ಯದಂತೆ ಇಲ್ಲಿಯೂ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ರಾಡ್ಮನ್, ಸಚಿನ್, ಲಾರಾಕ್ಕಿಂತ ಕೊಹ್ಲಿಯೇ ಶ್ರೇಷ್ಠ: ಇಂಗ್ಲೆಂಡ್ ಮಾಜಿ ನಾಯಕ

    ಬ್ರಾಡ್ಮನ್, ಸಚಿನ್, ಲಾರಾಕ್ಕಿಂತ ಕೊಹ್ಲಿಯೇ ಶ್ರೇಷ್ಠ: ಇಂಗ್ಲೆಂಡ್ ಮಾಜಿ ನಾಯಕ

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕದ ಕುರಿತು ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ವಿಶ್ವ ಕ್ರಿಕೆಟ್‍ನಲ್ಲಿ ಬ್ರಾಡ್ಮನ್, ಗವಾಸ್ಕರ್ ಲಾರಾ ಅವರಗಿಂತ ಕೊಹ್ಲಿ ಶ್ರೇಷ್ಠ ಆಟಗಾರ ಎಂದಿದ್ದಾರೆ.

    ವಿಶ್ವ ಕ್ರಿಕೆಟ್ ಆಟದಲ್ಲಿ ಕೊಹ್ಲಿ, ದಿ ಗೋಟ್ (ಗ್ರೇಟೆಸ್ಟ್ ಅಫ್ ಅಲ್ ಟೈಮ್) ಅಟ್ ಅಗೈನ್ ಎಂದು ವಾನ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದ ಅಭಿಮಾನಿಯೊಬ್ಬರು ಬ್ರಾಡ್‍ಮನ್, ಸಚಿನ್, ಲಾರಾ ಅವರಿಗಿಂತ ಕೊಹ್ಲಿ ಶ್ರೇಷ್ಠರೇ ಎಂದು ಪ್ರಶ್ನಿಸಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ವಾನ್ ಏಕದಿನ ಕ್ರಿಕೆಟಿನಲ್ಲಿ ಹೌದು ಎಂದಿದ್ದಾರೆ.

    ಆಸೀಸ್ ಏಕದಿನ ಸರಣಿಯಲ್ಲಿ ಕೊಹ್ಲಿ ಸತತವಾಗಿ 2 ಶತಕ ಗಳಿಸಿ ಮಿಂಚಿದ್ದಾರೆ. ಆದರೆ 3ನೇ ಏಕದಿನ ಪಂದ್ಯದಲ್ಲಿ ತಂಡ ಸೋಲುಂಡಿತ್ತು. ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದರು. ಆದರೆ ಕೊಹ್ಲಿ ನಿರ್ಧಾರ ತಪ್ಪು ಎಂದು ಆಸೀಸ್ ಆಟಗಾರರು ಸಾಬೀತು ಪಡಿಸಿದ್ದರು. ಕೊಹ್ಲಿಗೆ ಟೀಂ ಇಂಡಿಯಾ ಯಾವೊಬ್ಬ ಆಟಗಾರರು ಸಾಥ್ ನೀಡದ್ದು ಸೋಲಿಗೆ ಪ್ರಮುಖವಾಗಿತ್ತು.

    ಕೇವಲ 85 ಎಸೆತಗಳಲ್ಲಿ ಕೊಹ್ಲಿ ಶತಕ ಸಿಡಿಸಿ ಏಕದಿನ ಕ್ರಿಕೆಟ್‍ನಲ್ಲಿ 41ನೇ ಶತಕ ಸಿಡಿಸಿದ್ದರು. ಅಲ್ಲದೇ ನಾಯಕರಾಗಿ 4 ಸಾವಿರ ರನ್ ಗಳನ್ನು ವೇಗವಾಗಿ ಪೂರೈಸಿದ ಸಾಧನೆಯನ್ನು ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್ ಅಂತಿಮ 2 ಏಕದಿನ ಪಂದ್ಯಗಳಿಂದ ಧೋನಿಗೆ ವಿಶ್ರಾಂತಿ – ರಿಷಬ್ ಪಂತ್ ಇನ್

    ಆಸೀಸ್ ಅಂತಿಮ 2 ಏಕದಿನ ಪಂದ್ಯಗಳಿಂದ ಧೋನಿಗೆ ವಿಶ್ರಾಂತಿ – ರಿಷಬ್ ಪಂತ್ ಇನ್

    ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಏಕದಿನ ಪಂದ್ಯಗಳ ಏಕದಿನ ಕ್ರಿಕೆಟ್ ಟೂರ್ನಿಯ ಅಂತಿಮ 2 ಪಂದ್ಯಗಳಿಗೆ ಧೋನಿಗೆ ವಿಶ್ರಾಂತಿ ನೀಡಲಾಗಿದ್ದು, ಧೋನಿ ಸ್ಥಾನದಲ್ಲಿ ರಿಷಬ್ ಪಂತ್ ತಂಡವನ್ನು ಸೇರಲಿದ್ದಾರೆ.

    ಟೀಂ ಇಂಡಿಯಾ ಸಹಾಯಕ ಕೋಚ್ ಸಂಜಯ್ ಬಂಗಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಅಂತಿಮ ಪಂದ್ಯಗಳನ್ನು ಆಡುವ 11ರ ಬಳಗದಲ್ಲಿ ಬದಲಾವಣೆ ಇದೇಯಾ ಎಂಬ ಪ್ರಶ್ನೆಗೆ ಉತ್ತರಿಸಿ ಸ್ಪಷ್ಟನೆ ನೀಡಿದರು.

    ಧೋನಿ ಅಂತಿಮ ಎರಡು ಪಂದ್ಯಗಳನ್ನು ಆಡುತ್ತಿಲ್ಲ. ಪರಿಣಾಮ ತಂಡದಲ್ಲಿ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದೆ. ಅಲ್ಲದೇ ಶಮಿ ಕೂಡ ಗಾಯಗೊಂಡಿದ್ದು, ಅವರು ಲಭ್ಯವಿರುತ್ತಾರ ಎಂಬುವುದನ್ನು ಕಾದು ನೋಡಬೇಕಿದೆ. ಶಮಿ ಆಡದಿದ್ದರೆ ಅವರ ಸ್ಥಾನದಲ್ಲಿ ಭುವನೇಶ್ವರ್ ಆಡುತ್ತಾರೆ. ಪಂದ್ಯಕ್ಕೂ ಮುನ್ನ ಈ ಕುರಿತು ಕೋಚ್ ಹಾಗೂ ನಾಯಕ ಕೊಹ್ಲಿ ತಂಡವನ್ನು ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.

    ರಾಂಚಿ ಕ್ರೀಡಾಂಣದಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಧೋನಿ ಆಸೀಸ್ ನೀಡಿದ್ದ 313 ರನ್ ಮೊತ್ತವನ್ನು ಚೇಸ್ ಮಾಡುವ ಭರವಸೆ ಮೂಡುವಂತೆ ಮಾಡಿದರು, ಆದರೆ 26 ರನ್ ಗಳಿಸಿದ್ದ ವೇಳೆ ಜಂಪಾ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದರು.

    ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಇನ್ನುಳಿದ 2 ಪಂದ್ಯಗಳಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿದೆ. ಅಲ್ಲದೇ ವಿಶ್ವಕಪ್‍ಗೂ ಮುನ್ನ ಉತ್ತಮ ಬ್ಯಾಟಿಂಗ್ ಕಾಂಬಿನೇಶನ್ ತಂಡದ ಸಿದ್ಧತೆಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕ್ಯಾಪ್ಟನ್ ಕೊಹ್ಲಿ ಶತಕ ವ್ಯರ್ಥ- ಭಾರತ ನೆಲದಲ್ಲಿ 50ನೇ ಏಕದಿನ ಗೆಲುವು ಸಾಧಿಸಿದ ಆಸೀಸ್

    ಕ್ಯಾಪ್ಟನ್ ಕೊಹ್ಲಿ ಶತಕ ವ್ಯರ್ಥ- ಭಾರತ ನೆಲದಲ್ಲಿ 50ನೇ ಏಕದಿನ ಗೆಲುವು ಸಾಧಿಸಿದ ಆಸೀಸ್

    ರಾಂಚಿ: ಟೀಂ ಇಂಡಿಯಾ ನಾಯಕ ಕೊಹ್ಲಿ ಶತಕ (123 ರನ್, 95 ಎಸೆತ, 16 ಬೌಂಡರಿ, 1 ಸಿಕ್ಸರ್)ದ ನಡುವೆಯೂ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ  32 ರನ್‍ಗಳ ಗೆಲುವು ಪಡೆದಿದೆ. ಈ ಮೂಲಕ  ಸರಣಿಯಲ್ಲಿ 1-2 ಅಂತರವನ್ನು ಕಾಯ್ದುಕೊಂಡು ಟೂರ್ನಿಯನ್ನು ಜೀವಂತವಾಗಿಸಿದೆ.

    ಆಸ್ಟೇಲಿಯಾದ 314 ರನ್‍ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 48.2 ಓವರ್ 281 ರನ್ ಗಳಲ್ಲಿ ಅಲೌಟ್ ಆಯಿತು. ಭಾರತದ ನೆಲದಲ್ಲಿ ಆಸೀಸ್ 50ನೇ ಏಕದಿನ ಪಂದ್ಯವನ್ನು ಗೆದ್ದ ಸಾಧನೆಯನ್ನು ಮಾಡಿದೆ. ಆಸ್ಟ್ರೇಲಿಯಾ 89 ಏಕದಿನ ಪಂದ್ಯಗಳನ್ನು ಭಾರತದಲ್ಲಿ ಆಡಿದ್ದು, ಇದರಲ್ಲಿ 50 ಗೆಲುವು 34 ರಲ್ಲಿ ಪಂದ್ಯದಗಳಲ್ಲಿ ಸೋಲು ಕಂಡಿದೆ.

    ಟೀಂ ಇಂಡಿಯಾ ಪರ ಆರಂಭಿಕರಿಬ್ಬರು ಮತ್ತೆ ವಿಫಲ ಆನುಭವಿಸಿದರು. ಧವನ್ 1 ರನ್, ರೋಹಿತ್ ಶರ್ಮಾ 14 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಅಂಬಟಿ ರಾಯುಡು ಕೂಡ ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. 6.2 ಓವರ್ ಗಳಲ್ಲಿ 27 ರನ್ ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು.

    ಈ ಹಂತದಲ್ಲಿ ಒಂದಾದ ನಾಯಕ ಕೊಹ್ಲಿ ಹಾಗೂ ಧೋನಿ ರಕ್ಷಣಾತ್ಮಕ ಆಟಕ್ಕೆ ಮುಂದಾಗಿ ರನ್ ವೇಗಕ್ಕೆ ಶಕ್ತಿ ತುಂಬಲು ಯತ್ನಿಸಿದರು. 4ನೇ ವಿಕೆಟ್‍ಗೆ 59 ರನ್ ಜೊತೆಯಾಟ ನೀಡಿದ ಈ ಜೋಡಿ ಪಂದ್ಯದ ತಂಡದ ಹಿಡಿತ ತಪ್ಪದಂತೆ ನೋಡಿಕೊಂಡರು. ಆದರೆ ಉತ್ತಮವಾಗಿ ಆಡುತ್ತಿದ್ದ 26 ರನ್ ಗಳಿಸಿ ಆಡುತ್ತಿದ್ದ ಧೋನಿರನ್ನು ಜಂಪಾ ಔಟ್ ಮಾಡಿ ಪೆವಿಲಿಯನ್‍ಗಟ್ಟಿದರು. ಆ ಬಳಿಕ ನಾಯಕ ಕೊಹ್ಲಿರನ್ನು ಕೂಡಿಕೊಂಡ ಉತ್ತಮ ಸಾಥ್ ನೀಡಿದರು. ಇಬ್ಬರ ಆಟದಲ್ಲಿ 88 ರನ್ ಜೊತೆಯಾಟ ಮೂಡಿಬಂತು. ಆದರೆ ಜಾಧವ್ 26 ರನ್ ಗಳಿಸಿದ್ದ ವೇಳೆ ಜಂಪಾಗೆ ವಿಕೆಟ್ ಒಪ್ಪಿಸಿದರು. ಮಹತ್ವದಲ್ಲಿ ಹಂತದಲ್ಲಿ ಟೀಂ ಇಂಡಿಯಾದ ಎರಡು ವಿಕೆಟ್ ಪಡೆದ ಜಂಪಾ ಆಸೀಸ್ ಗೆಲುವಿನ ಆಸೆ ಮೂಡುವಂತೆ ಮಾಡಿದ್ರು.

    ಕೊಹ್ಲಿ ಶತಕ ವೈಭವ: ವಿಕೆಟ್ ಉರುಳುತ್ತಿದ್ದರು ಕೂಡ ಏಕಾಂಗಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 52 ಎಸೆತಗಳಲ್ಲಿ ಅರ್ಧ ಶತಕ ಹಾಗು ಬಳಿಕ 35 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ 85 ಎಸೆತಗಳಲ್ಲಿ ಏಕದಿನ ಕ್ರಿಕೆಟ್‍ನಲ್ಲಿ 41ನೇ ಶತಕ ಸಿಡಿಸಿದರು. ಸರಣಿಯಲ್ಲಿ ಕೊಹ್ಲಿ ಸಿಡಿಸಿದ 2ನೇ ಶತಕ ಇದಾಗಿದೆ. ಅಲ್ಲದೇ ಏಕದಿನ ಕ್ರಿಕೆಟಿನಲ್ಲಿ ನಾಯಕನಾಗಿ ವೇಗವಾಗಿ 4 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ಕೊಹ್ಲಿ ಕೇವಲ 63 ಇನ್ನಿಂಗ್ಸ್ ನಲ್ಲಿ 4 ಸಾವಿರ ರನ್ ಗಳಿಸಿ ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿವಿಲಿಯರ್ಸ್ ದಾಖಲೆ ಮುರಿದರು. ಎಬಿಡಿ 77 ಇನ್ನಿಂಗ್ಸ್ ಗಳಲ್ಲಿ 4 ಸಾವಿರ ರನ್ ಪೂರೈಸಿದ್ದರು.

    95 ಎಸೆತಗಳಲ್ಲಿ 16 ಬೌಂಡರಿ, ಸಿಕ್ಸರ್ ಮೂಲಕ ಶತಕ ಸಿಡಿಸಿದ ಕೊಹ್ಲಿರನ್ನು ಜಂಪಾ ಬೌಲ್ಡ್ ಮಾಡಿ ಕೊಹ್ಲಿ ಹೋರಾಟಕ್ಕೆ ಅಂತ್ಯವಾಡಿದರು. ಬಳಿಕ ಬಂದ ಯುವ ಆಟಗಾರ ವಿಜಯ್ ಶಂಕರ್ 32 ರನ್ ಹಾಗೂ ರವೀಂದ್ರ ಜಡೇಜಾ 24 ರನ್, ಶಮಿ 8 ರನ್ ಗಳಿಸಿ ನಿರ್ಗಮಿಸಿದರು. ಅಂತಿಮವಾಗಿ ತಂಡ ಓವರ್ ಗಳಲ್ಲಿ 281 ರನ್ ಗಳಿಗೆ ಅಲೌಟ್ ಆಯ್ತು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡದ ಪರ ಉಸ್ಮಾನ್ ಖವಾಜ 104, ಫಿಂಚ್ 93, ಮ್ಯಾಕ್ಸ್‍ವೆಲ್ 47, ಸ್ಟೋಯ್ನಿಸ್ 31 ರನ್ ಬಾರಿಸಿದರು. ಪರಿಣಾಮ 5 ವಿಕೆಟ್ ನಷ್ಟಕ್ಕೆ ಆಸೀಸ್ 313 ರನ್ ಪೇರಿಸಿತ್ತು. ಆಸೀಸ್ ಪರ ಜಂಪಾ, ಕಮ್ಮಿನ್ಸ್, ರಿಚಡ್ರ್ಸನ್ ತಲಾ 3 ವಿಕೆಟ್ ಪಡೆದು ಮಿಂಚಿದರೆ, ಲಯನ್ 1 ವಿಕೆಟ್ ಪಡೆದರು.

    ಟೀಂ ಇಂಡಿಯಾ ಆಟಗಾರರು ಸೇನೆಗೆ ಗೌರವ ಸಲ್ಲಿಸುವ ಸಲುವಾಗಿ ಆರ್ಮಿ ಕ್ಯಾಪ್ ಧರಿಸಿ ಮೈದಾನಕ್ಕಿಳಿದಿದ್ದರು. ಅಲ್ಲದೇ ಪಂದ್ಯದ ಸಂಭಾವನೆಯ ಸೇನೆ ನಿಧಿಗೆ ನೀಡುವುದಾಗಿ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖವಾಜಾ ಶತಕ, ಫಿಂಚ್ ಫಿಫ್ಟಿ – ಬೃಹತ್ ಮೊತ್ತ ಗುರಿ ಪಡೆದ ಟೀಂ ಇಂಡಿಯಾ

    ಖವಾಜಾ ಶತಕ, ಫಿಂಚ್ ಫಿಫ್ಟಿ – ಬೃಹತ್ ಮೊತ್ತ ಗುರಿ ಪಡೆದ ಟೀಂ ಇಂಡಿಯಾ

    ರಾಂಚಿ: ಸರಣಿ ಜೀವಂತವಾಗಿರಿಸಲು ಹೋರಾಟ ನಡೆಸುತ್ತಿರುವ ಆಸ್ಟ್ರೇಲಿಯಾ ತಂಡದ ಆಟಗಾರರು ಟೀಂ ಇಂಡಿಯಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 313 ರನ್‍ಗಳ ಬಹೃತ್ ಮೊತ್ತದ ಸವಾಲು ನೀಡಿದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ಆಸೀಸ್ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಿದೆ. ಬ್ಯಾಟಿಂಗ್ ಇಳಿದ ಆಸೀಸ್ ಪಡೆ ಭರ್ಜರಿ ಆರಂಭವನ್ನು ಪಡೆಯಿತು. ಆಸೀಸ್ ನಾಯಕ ಆ್ಯರೋನ್ ಫಿಂಚ್ ಫಾರ್ಮ್ ಗೆ ಮರಳಿದರೆ, ಖವಾಜಾ ಶತಕ ಸಿಡಿಸಿ ಭಾರತ ನೆಲದಲ್ಲಿ ಮೊದಲ ಶತಕ ಸಿಡಿಸಿದ ಸಾಧನೆ ಮಾಡಿದರು.

    ಆರಂಭದಿಂದಲೂ ಟೀಂ ಇಂಡಿಯಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ಆಸೀಸ್ ಆರಂಭಿಕ ಆಟಗಾರರು, ಬೌಲರ್ ಗಳನ್ನು ದಂಡಿಸುತ್ತಲೇ ಬ್ಯಾಟ್ ಬೀಸಿದರು. ಆ್ಯರೋನ್ ಫಿಂಚ್ ಹಾಗೂ ಖವಾಜಾ ಜೋಡಿ ಮೊದಲ ವಿಕೆಟ್‍ಗೆ ಬರೋಬ್ಬರಿ 193 ರನ್ ಗಳ ದಾಖಲೆಯ ಜೊತೆಯಾಟವನ್ನು ನೀಡಿದರು.

    ಮೊದಲ 50 ರನ್ ಗಳನ್ನು 9.5 ಓವರ್ ಗಳಲ್ಲಿ ಗಳಿಸಿದ ಆಸೀಸ್, 16.3 ಓವರ್ ಗಳಲ್ಲಿ 100 ರನ್ ಗಡಿ ದಾಟಿತು. ಫಿಂಚ್ 51 ಎಸೆತಗಳಲ್ಲಿ ಅರ್ಧ ಶತಕ ಪೂರ್ಣಗೊಳಿಸಿ ಏಕದಿನ ಕ್ರಿಕೆಟ್‍ನಲ್ಲಿ 19ನೇ ಅರ್ಧ ಶತಕ ಪೂರ್ಣಗೊಳಿಸಿದರು. ಇತ್ತ ಖವಾಜಾ 56 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು. ಟೀಂ ಇಂಡಿಯಾ ಬೌಲರ್ ಗಳ ಬೆವರು ಹರಿಸಿದ ಈ ಜೋಡಿ ಕೇದರ್ ಜಾಧವ್ ರ ಮೊದಲ 2 ಓವರ್ ಗಳಲ್ಲಿ 32 ರನ್ ಗಳಿಸಿತ್ತು. ಇತ್ತ ಬೌಲರ್ ಗಳು ವಿಕೆಟ್ ಪಡೆಯಲು ವಿಫಲವಾಗುತ್ತಿದ್ದರೆ, ಕಳಪೆ ಫೀಲ್ಡಿಂಗ್ ನಡೆಸಿ ಆಟಗಾರರು ಆಸೀಸ್ ರನ್ ವೇಗಕ್ಕೆ ಕಡಿವಾಣ ಹಾಕಲು ಪರದಾಡಿದರು. 24.4 ಓವರ್ ಗಳಲ್ಲೇ ಆಸೀಸ್ 150 ರನ್ ಗಡಿ ದಾಟಿತ್ತು.

    ಇತ್ತ ಉತ್ತಮವಾಗಿ ಆಡುತ್ತ ಶತಕದಂಚಿನಲ್ಲಿದ್ದ ಫಿಂಚ್ ರನ್ನು ಎಲ್‍ಬಿ ಬಲೆಗೆ ಕೆಡವಿದ ಕುಲ್ದೀಪ್ ಯಾದವ್ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. 99 ಎಸೆತ ಎದುರಿಸಿದ್ದ ಫಿಂಚ್ 10 ಬೌಂಡರಿ, 3 ಸಿಕ್ಸರ್ ನೆರವಿನಿಂದ 93 ರನ್ ಗಳಿಸಿ ನಿರ್ಗಮಿಸಿದರು. ಆ ಬಳಿಕ ಬಂದ ಮಾಕ್ಸ್ ವೆಲ್ ಕೂಡ ಬಿರುಸಿನ ಬ್ಯಾಟಿಂಗ್ ಆಡಿ ರನ್ ಗತಿಗೆ ಮತ್ತಷ್ಟು ವೇಗ ತುಂಬಿದರು. ಇತ್ತ ಖವಾಜಾ 107 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು. ಇದರ ಬೆನ್ನಲ್ಲೇ ಶಮಿ ಬೌಲಿಂಗ್‍ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಪಂದ್ಯದಲ್ಲಿ 113 ಎಸೆತಗಳನ್ನು ಎದುರಿಸಿದ ಖವಾಜಾ 11 ಬೌಂಡರಿ, ಸಿಕ್ಸರ್ ನೆರವಿನಿಂದ 104 ರನ್ ಗಳಿಸಿದರು.

    ಖವಾಜಾ ಔಟಾಗುತ್ತಿದಂತೆ ಬಿರುಸಿನ ಆಟವಾಡುತ್ತಿದ್ದ ಮ್ಯಾಕ್ಸ್ ವೆಲ್‍ಗೆ ರನೌಟ್‍ಗೆ ಬಲಿಯಾದ್ರು. 31 ಎಸೆತಗಳಲ್ಲಿ 47 ರನ್ ಗಳಿಸಿ ಮ್ಯಾಕ್ಸ್ ವೆಲ್ ಪೆವಿಲಿಯನ್‍ಗೆ ಮರಳಿದರು. ಆ ಬಳಿಕ ಬಂದ ಮಾರ್ಚ್ 7 ರನ್, ಹ್ಯಾಡ್ ಕಾಮ್ಸ್ ಶೂನ್ಯ ಸುತ್ತುವ ಮೂಲಕ ಬಂದಷ್ಟೇ ವೇಗದಲ್ಲಿ ಹಿಂದಿರುಗಿದರು. ಈ ಹಂತದಲ್ಲಿ ಟೀಂ ಇಂಡಿಯಾ ಬೌಲರ್ ಗಳು ಅಲ್ಪ ಯಶಸ್ಸು ಕಂಡರು ಕೂಡ ರನ್ ವೇಗಕ್ಕ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.

    ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದ ಸ್ಟೋಯಿನ್ಸ್ 30 ರನ್ ಹಾಗೂ ಕ್ಯಾರಿ 21 ರನ್ ಗಳಿಸಿದರು. ಅಂತಿಮವಾಗಿ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಿ ಬೃಹತ್ ಗುರಿ ನೀಡಿತು. ಭಾರತದ ಪರ ಎಲ್ಲಾ ಬೌಲರ್ ಗಳು ಕೂಡ ದುಬಾರಿಯಾದರು. ಕುಲ್ದೀಪ್ 3 ವಿಕೆಟ್ ಪಡೆದರೆ, ಶಮಿ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಸೀಸ್ – ಐತಿಹಾಸಿಕ ಗೆಲುವು ಪಡೆದ ಕೊಹ್ಲಿ ಪಡೆ

    ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಸೀಸ್ – ಐತಿಹಾಸಿಕ ಗೆಲುವು ಪಡೆದ ಕೊಹ್ಲಿ ಪಡೆ

    ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ರನ್ ಗಳ ರೋಚಕ ಗೆಲುವು ಪಡೆದಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯನ್ನು ಸಾಧಿಸಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ 250 ರನ್ ಅಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ಓವರ್ ಗಳಲ್ಲಿ 49.3 ಓವರ್ ಗಳಲ್ಲಿ 242 ರನ್ ಗಳಿಗೆ ಅಲೌಟ್ ಆಯ್ತು.

    ಆಸೀಸ್ ವಿರುದ್ಧ 2ನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ 500 ಗೆಲುವುಗಳನ್ನು ಪೂರ್ಣಗೊಳಿಸಿತು. ಈ ಪಟ್ಟಿಯಲ್ಲಿ ಆಸೀಸ್ ಬಳಿಕ 2ನೇ ಸ್ಥಾನ ಭಾರತ 2ನೇ ಸ್ಥಾನವನ್ನು ಪಡೆದಿದೆ. ಆಸೀಸ್ ಇದುವರೆಗೂ 923 ಪಂದ್ಯಗಳಿಂದ 558 ಗೆಲುವು ಪಡೆದಿದ್ದರೆ, ಟೀಂ ಇಂಡಿಯಾ 963 ಪಂದ್ಯಗಳಿಂದ 500 ಗೆಲುವು ಗಳಿಸಿದೆ.

    ಟೀಂ ಇಂಡಿಯಾ ನೀಡಿದ 251 ರನ್ ಗಳ ಗುರಿ ಬೆನ್ನತ್ತಿದ್ದ ಆಸೀಸ್ ಪಡೆ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ನಾಯಕ ಆ್ಯರೋನ್ ಫಿಂಚ್ ಹಾಗೂ ಉಸ್ಮಾನ್ ಖವಾಜಾ ಮೊದಲ ವಿಕೆಟ್‍ಗೆ 83 ರನ್ ಗಳ ಜೊತೆಯಾಟ ನೀಡಿದರು. ಟೀಂ ಇಂಡಿಯಾ ಬೌಲರ್ ಗಳನ್ನು ಎಚ್ಚರಿಕೆಯಿಂದ ಎದುರಿಸುತ್ತಿದ್ದ ಈ ಇಬ್ಬರ ಜೋಡಿಯನ್ನು ಕುಲ್ದೀಪ್ ಯಾದವ್ ಬೇರ್ಪಡಿಸಿದರು. ರಕ್ಷಣಾತ್ಮಕವಾಗಿ ಬ್ಯಾಟ್ಸ್ ಬೀಸುತ್ತಿದ್ದ ಫಿಂಚ್ 37 ರನ್ ಗಳಿಸಿದ್ದ ವೇಳೆ ಎಲ್‍ಬಿ ಬಲೆಗೆ ಸಿಲುಕಿ ಔಟಾದರು. ಬೆನ್ನ್ಲೇ ಮತ್ತೊರ್ವ ಆರಂಭಿಕ ಉಸ್ಮಾನ್ ಖವಾಜಾ 38 ರನ್ ಗಳಿಸಿದ್ದ ವೇಳೆ ಕೇದರ್ ಜಾಧವ್‍ಗೆ ವಿಕೆಟ್ ಒಪ್ಪಿಸಿದರು.

    ಆರಂಬಿಕ ವಿಕೆಟ್ ಪಡೆದ ಮೇಲೂ ಭಾರತ ಬೌಲರ್ ಗಳು ರನ್ ವೇಗಕ್ಕೆ ಕಡಿವಾಣ ಹಾಕಲು ಶ್ರಮವಹಿಸಿದರು. 3ನೇ ವಿಕೆಟ್ ಜೊತೆಯಾಟ ಶಾನ್ ಮಾರ್ಶ್ ಹಾಗೂ ಪೀಟರ್ ಹ್ಯಾಂಡ್ಸ್ ಕಾಂಬ್ ಮಹತ್ವದ 41 ರನ್‍ಗಳ ಜೊತೆಯಾಟ ನೀಡಿದರು. 16 ರನ್ ಗಳಿಸಿದ್ದ ಮಾರ್ಶ್ ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ ಈ ಝೊಡಿಯನ್ನು ಬೇರ್ಪಡಿಸಿದರು. ಈ ಹಂತದಲ್ಲಿ ಆಸೀಸ್ 25 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 126 ಗಳಿಸಿ ಸುಸ್ಥಿಯಲ್ಲಿ ಇತ್ತು.

    ಆ ಬಳಿಕ ಬಂದ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಮ್ಯಾಕ್ಸ್ ವೆಲ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕುಲ್ದೀಪ್ ಯಾದವ್ ಪಂದ್ಯಕ್ಕೆ ಬೀಗ್ ಟರ್ನ್ ನೀಡಿದರು. ಆ ಬಳಿಕ ತಾಳ್ಮೆಯ ಆಟವಾಡುತ್ತಿದ್ದ ಹ್ಯಾಂಡ್ಸ್ ಕಾಂಬ್ ರನ್ನು ಜಡೇಜಾ ರನೌಟ್ ಮಾಡುವ ಮೂಲಕ ಗೆಲುವಿನ ಆಸೆಯನ್ನ ಚಿಗುರುವಂತೆ ಮಾಡಿದರು. ಆದರೆ ಸ್ಟೋಯಿನ್ಸ್ ಅಂತಿಮ ಸಮಯದ ವರೆಗೂ ಬೌಲರ್ ಕಾಡಿದರು.

    ಬುಮ್ರಾ ಮಿಂಚು: 46ನೇ ಓವರ್ ಎಸೆದ ಬುಮ್ರಾ ಬೌಲಿಂಗ್ ನಲ್ಲಿ ನೈಲ್ 4 ರನ್, ಕಮ್ಮಿನ್ಸ 0 ಶೂನ್ಯಕ್ಕೆ ಹಿಂದಿರುಗಿದರು ಕೂಡ ಬ್ಯಾಟಿಂಗ್ ಕಾಯ್ದುಕೊಂಡ ಸ್ಟೋಯಿನ್ಸ್ ಟೀಂ ಇಂಡಿಯಾಗೆ ತಲೆನೋವಾಗಿ ಕಾಡಿದರು. ಅಂತಿಮ 18 ಎಸೆಗಳಲ್ಲಿ 2 ವಿಕೆಟ್ ನಿಂದಿಗೆ ಆಸೀಸ್ 21 ರನ್ ಗಳಿಸಬೇಕಿತ್ತು. 48ನೇ ಓವರ್ ಬೌಲ್ ಮಾಡಿದ ಬುಮ್ರಾ ಬಿಗಿ ಬೌಲಿಂಗ್ ದಾಳಿ ನಡೆಸಿದರು. ಪರಿಣಾಮ ಓವರಿನಲ್ಲಿ ಒಂದು ರನ್ ಮಾತ್ರ ಲಭಿಸಿತು. ನಂತರದ ಓವರಿನಲ್ಲಿ ಸ್ಟೋಯಿನ್ಸ್ ತಮ್ಮ ಅರ್ಧ ಶತಕ ಪೂರೈಸಿದರು. ಈ ಓವರಿನಲ್ಲಿ ಶಮಿ 9 ರನ್ ಬಿಟ್ಟುಕೊಟ್ಟ ಪರಿಣಾಮ ಅಂತಿಮ ಓವರಿನಲ್ಲಿ 11 ರನ್ ಗಳಿಸುವ ಒತ್ತಡಕ್ಕೆ ಆಸೀಸ್ ಸಿಲುಕಿತು.

    ಅಂತಿಮ ಓವರ್ ಎಸೆದ ವಿಜಯ್ ಶಂಕರ್ ಮೊದಲ ಎಸೆತದಲ್ಲೇ ಸ್ಟೋಯಿನ್ಸ್ ರನ್ನು ಎಲ್‍ಬಿ ಬಲೆಗೆ ಕೆಡವಿದರು. 65 ಎಸೆತಗಳನ್ನು ಎದುರಿಸಿದ್ದ ಸ್ಟೋಯಿನ್ಸ್ 52 ರನ್ ಗಳಿಸಿ ಔಟಾದರು. ಬಳಿಕ ಜಂಪಾ ವಿಕೆಟ್ ಪಡೆಯುತ್ತಿದಂತೆ ಆಸೀಸ್ 49.3 ಓವರ್ ಗಳಲ್ಲಿ 242 ರನ್ ಗಳಿಗೆ ಅಲೌಟ್ ಆಯ್ತು.

    ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರೆ, ಶಂಕರ್ ಹಾಗೂ ಬುಮ್ರಾ ತಲಾ 2, ಜಾಧವ್, ಜಡೇಜಾ ತಲಾ 1 ವಿಕೆಟ್ ಪಡೆದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭಿಕರ ವೈಫಲ್ಯದ ನಡುವೆಯೂ ನಾಯಕ ಕೊಹ್ಲಿ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ ಪರಿಣಾಮ ಸವಾಲಿನ ಮೊತ್ತ ಗಳಿಸಿತು. ಕೊಹ್ಲಿ 120 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 116 ರನ್ ಗಳಿಸಿ ಮಿಂಚಿದರು. ಇತ್ತ ಯುವ ಆಟಗಾರ ವಿಜಯ್ ಶಂಕರ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಉನ್ನತಿ ಪಡೆದು ಬಂದು ಬಿರುಸಿನ ಆಟ ಪ್ರದರ್ಶಿಸಿದರು. ಅಲ್ಲದೇ ಕೊಹ್ಲಿಯೊಂದಿಗೆ 81 ರನ್‍ಗಳ ಜತೆಯಾಟದಲ್ಲಿ ನೀಡಿದ್ದರು. ಆದರೆ 46 ರನ್ ಗಳಿಸಿದ್ದ ವೇಳೆ ಅನಿರೀಕ್ಷಿತವಾಗಿ ರನೌಟ್ ಆದ್ರು.

    ವಿಶೇಷವೆಂದರೆ ಪಂದ್ಯದಲ್ಲಿ ಒನ್‍ಡೌನ್ ಆಟಗಾರರಾಗಿ ಬಂದ ಕೊಹ್ಲಿ ಟೀಂ ಇಂಡಿಯಾ ಗಳಿಸಿದ್ದ 248 ರನ್ ಗಳ ಅವಧಿಯಲ್ಲಿ ಫೀಲ್ಡ್ ನಲ್ಲೇ ಇದ್ದರು. ಕೊಹ್ಲಿ ಔಟಾದ ವೇಳೆಯಲ್ಲಿ ತಂಡ 248 ರನ್ ಗಳಿಸಿತ್ತು. ಕೊಹ್ಲಿ ಔಟಾದ ಬಳಿಕ 2 ರನ್ ಮೊತ್ತಕ್ಕೆ ಸೇರ್ಪಡೆಯಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಯಾಪ್ಟನ್ ಕೊಹ್ಲಿ ಶತಕದಾಸರೆ – ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ ಟೀಂ ಇಂಡಿಯಾ

    ಕ್ಯಾಪ್ಟನ್ ಕೊಹ್ಲಿ ಶತಕದಾಸರೆ – ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ ಟೀಂ ಇಂಡಿಯಾ

    ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕದ ಸಾಧನೆ ಮಾಡಿದ್ದು, ಟೀಂ ಇಂಡಿಯಾ 48.2 ಓವರ್ ಗಳಲ್ಲಿ 250 ರನ್ ಗಳಿಸಿ ಸವಾಲಿನ ಗುರಿ ನೀಡಿದೆ.

    ತಂಡದ ಆರಂಭಿಕರ ವೈಫಲ್ಯದ ನಡುವೆಯೂ ಕೊಹ್ಲಿ ನಾಯಕತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದು, 120 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 116 ರನ್ ಗಳಿಸಿ ಮಿಂಚಿದರು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಇನ್ನಿಂಗ್ಸ್ ಮೊದಲ ಓವರಿನ ಅಂತಿಮ ಎಸೆತದಲ್ಲಿ ಔಟಾಗಿ ಶೂನ್ಯ ಸಾಧನೆ ಮಾಡಿದ ರೋಹಿತ್ ನಿರಾಸೆ ಮೂಡಿಸಿದರೆ, ಕಳೆದ ಪಂದ್ಯದಲ್ಲಿ ವಿಫಲರಾಗಿ ಮತ್ತೊಂದು ಅವಕಾಶ ಪಡೆದ ಧವನ್ 21 ರನ್ ಗಳಿಸಿ ನಿರ್ಗಮಿಸಿದರು. ತಂಡ 38 ರನ್ ಗಳಿಸುವ ವೇಳೆ ಇಬ್ಬರು ಆರಂಭಿಕರು ಪೆವಿಲಿಯನ್ ಸೇರಿದ್ದರು.

    ಈ ಹಂತದಲ್ಲಿ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿದ ಅಂಬಾಟಿ ರಾಯುಡು ಕೂಡ 18 ರನ್ ಗಳಿಸಿ ಆಸೀಸ್ ಬೌಲರ್ ನಥನ್ ಲಯನ್‍ಗೆ ವಿಕೆಟ್ ಒಪ್ಪಿಸಿದರು. ಆಸೀಸ್ ಅಂಪೈರ್ ತೀರ್ಪಿನ ವಿರುದ್ಧ ಮನವಿ ಡಿಆರ್ ಎಸ್ ಸಲ್ಲಿಸಿ ಈ ಪಂದ್ಯದಲ್ಲೂ ಯಶಸ್ವಿಯಾಯಿತು. ಬಳಿಕ ಬಂದ ಯುವ ಆಟಗಾರ ವಿಜಯ್ ಶಂಕರ್ ನಾಯಕನೊಂದಿಗೆ ಜವಾಬ್ದಾರಿ ಹಂಚಿಕೊಂಡು ಬಿರುಸಿನ ಬ್ಯಾಟಿಂಗ್ ನಡೆಸಿದರು. ಆದರೆ 46 ರನ್ ಗಳಿಸಿದ್ದ ವೇಳೆ ಅನಿರೀಕ್ಷಿತವಾಗಿ ರನೌಟ್ ಆದ್ರು. ಆದಾಗಲೇ ಶಂಕರ್, ಕೊಹ್ಲಿಯೊಂದಿಗೆ 81 ರನ್‍ಗಳ ಜತೆಯಾಟದಲ್ಲಿ ಭಾಗಿಯಾದರು.

    ಮೊದಲ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದ ಧೋನಿ ಹಾಗೂ ಜಾಧವ್ ರನ್ನು ಈ ಬಾರಿ ಬ್ಯಾಕ್ ಟು ಬ್ಯಾಕ್ ಎಸೆತಗಳಲ್ಲೇ ಜಾಂಪಾ ಪೆವಿಲಿಯನ್‍ಗಟ್ಟಿದ್ದರು. ಈ ವೇಳೆಗೆ ಟೀಂ ಇಂಡಿಯಾ 25 ಓವರ್‍ಗಳಲ್ಲಿ ಭಾರತ ಮೂರು ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತ್ತು. ಒತ್ತಡ ಪರಿಸ್ಥಿತಿಯ ನಡುವೆಯೇ ಆಕರ್ಷಕವಾಗಿ ಬ್ಯಾಟ್ ಬೀಸಿದ ನಾಯಕ ಕೊಹ್ಲಿ ತಂಡದ ಮೊತ್ತವನ್ನು ಹೆಚ್ಚಿಸುವತ್ತ ಗಮನ ಹರಿಸಿದ್ದರು. ಅಲ್ಲದೇ ಅತ್ಯಂತ ಒತ್ತಡ ಸಮಯದಲ್ಲಿ ಶತಕ ಸಿಡಿಸಿ ಮಿಂಚಿದರು. ಕೇವಲ 107 ಎಸೆತಗಳಲ್ಲಿ ಕೊಹ್ಲಿ ಶತಕ ಸಾಧನೆ ಮಾಡಿದ್ದರು.

    ಇನ್ನಿಂಗ್ಸ್ ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಲು ಮುಂದಾದ ಕೊಹ್ಲಿ 116 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಜಡೇಜಾ 21 ರನ್ ಗಳಿಸಿದ್ದು ಹೊರತುಪಡಿಸಿದರೆ ಬೇರೆ ಯಾವ ಆಟಗಾರ ಕೂಡ ಎರಡಂಕ್ಕಿ ಮೊತ್ತ ದಾಟಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ 48.2 ಓವರ್ ಗಳಲ್ಲಿ 250 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆಸೀಸ್ ಪರ ಕಮ್ಮಿನ್ಸ್ 4 ವಿಕೆಟ್ ಪಡೆದು ಪ್ರಭಾವಿ ಎನಿಸಿಕೊಂಡರೆ ಜಾಂಪಾ 2, ಲಯನ್, ಮ್ಯಾಕ್ಸ್ ವೆಲ್, ನೈಲ್ ತಲಾ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸೀಸ್ 2ನೇ ಏಕದಿನ ಪಂದ್ಯ – ಕೆಎಲ್ ರಾಹುಲ್‍ಗೆ ಸಿಗುತ್ತಾ ಚಾನ್ಸ್?

    ಆಸೀಸ್ 2ನೇ ಏಕದಿನ ಪಂದ್ಯ – ಕೆಎಲ್ ರಾಹುಲ್‍ಗೆ ಸಿಗುತ್ತಾ ಚಾನ್ಸ್?

    ಮುಂಬೈ: ಮಹಾರಾಷ್ಟ್ರದ ವಿದರ್ಭ ಕ್ರೀಡಾಂಗಣದಲ್ಲಿ ಆಸೀಸ್ ವಿರುದ್ಧ 2ನೇ ಏಕದಿನ ಕ್ರಿಕೆಟ್ ಪಂದ್ಯ ನಾಳೆ ನಡೆಯಲಿದ್ದು, ಟೀಂ ಇಂಡಿಯಾ ಮೊದಲ ಪಂದ್ಯದ ಗೆಲುವಿನ ನಡುವೆಯೂ ಅನುಭವಿಸಿದ ವೈಫಲ್ಯಗಳನ್ನು ತಿದ್ದಿಕೊಳ್ಳುವ ತಯಾರಿ ನಡೆಸಿದೆ.

    ಟಿ20 ಸರಣಿ ಸೋತು ಮುಖಭಂಗ ಅನುಭವಿಸಿದ್ದ ವಿರಾಟ್ ಕೊಹ್ಲಿ ಬಳಗಕ್ಕೆ ಮೊದಲ ಏಕದಿನ ಗೆಲುವು ವಿಶ್ವಾಸವನ್ನು ತುಂಬಿದೆ. ಆದರೆ ಪಂದ್ಯದಲ್ಲಿ ಆರಂಭಿಕ ಧವನ್ ಕೈಕೊಟ್ಟ ಪರಿಣಾಮದಿಂದ ಟೀಂ ಇಂಡಿಯಾ ಪ್ರಯಾಸದ ಗೆಲುವು ಪಡೆದಿತ್ತು. ಟಿ20 ಸರಣಿಯಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ ಬಳಿಕವೂ ಕೂಡ ಅವರಿಗೆ ಮೊದಲ ಪಂದ್ಯದಲ್ಲಿ ಅವಕಾಶ ಲಭಿಸಿರಲಿಲ್ಲ. ಸದ್ಯ ರಾಹುಲ್ ಉತ್ತಮ ಫಾರ್ಮ್ ಗೆ ಮರಳಿದ್ದು, ವಿಶ್ವಕಪ್‍ಗೂ ಮುನ್ನ ಹೆಚ್ಚಿನ ಅವಕಾಶಗಳನ್ನು ನೀಡಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಶೂನ್ಯಕ್ಕೆ ಔಟಾಗುವ ಮೂಲಕ ಧವನ್ ನಿರಾಸೆ ಮೂಡಿಸಿದ್ದ ಪರಿಣಾಮ ಉತ್ತಮ ಫಾರ್ಮ್ ಹೊಂದಿರುವ ರಾಹುಲ್‍ಗೆ ಚಾನ್ಸ್ ನೀಡಿ ಎನ್ನುತ್ತಿದ್ದಾರೆ ಅಭಿಮಾನಿಗಳು.

    ದೇಶಿಯ ಕ್ರಿಕೆಟ್ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ನಡೆಸಿದ್ದ ರಾಹುಲ್, ಮೊದಲ ಟಿ20 ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದರು. ಅಲ್ಲದೇ 2ನೇ ಪಂದ್ಯದಲ್ಲೂ ಉತ್ತಮ ಬ್ಯಾಟಿಂಗ್ ನಡೆಸಿದ್ದರು. ಆದರೆ ಧವನ್ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರೂ ಕೂಡ ಮತ್ತೊಂದು ಚಾನ್ಸ್ ಪಡೆಯುತ್ತರಾ ಎಂಬುವುದು ಕುತೂಹಲ ಮೂಡಿಸಿದೆ.

    ಬ್ಯಾಟಿಂಗ್‍ನಲ್ಲಿ ಆರಂಭಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಂಬಟಿ ರಾಯುಡು ಅವರು ಹೆಚ್ಚಿನ ಜವಾಬ್ದಾರಿ ಹೊಂದಿದ್ದು, ಮೊದಲ ಪಂದ್ಯದ ಗೆಲುವಿನ ಜೋಡಿಯಾಗಿದ್ದ ಧೋನಿ ಹಾಗೂ ಕೇದಾರ್ ಜಾಧವ್ ಮೇಲೆ ಎಲ್ಲರ ಕಣ್ಣಿದೆ. ಬೌಲಿಂಗ್ ನಲ್ಲಿ ಬುಮ್ರಾ ಹಾಗೂ ಶಮಿ ಮಿಂಚುವುದು ಅನಿವಾರ್ಯವಾಗಿದ್ದು, ಕುಲ್‍ದೀಪ್ ಯಾದವ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದರ ನಡುವೆ 2ನೇ ಪಂದ್ಯದಲ್ಲಿ ರವೀಂದ್ರ ಜಡೇಜಾ ಸ್ಥಾನ ಉಳುಸಿಕೊಳ್ಳುತ್ತಾರ ಅಥವಾ ಚಹಲ್ ಅವಕಾಶ ಪಡೆದುಕೊಳ್ತಾರ ನೋಡಬೇಕಿದೆ.

    https://twitter.com/mrShl12/status/1101916666860994567?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧೋನಿ, ಜಾಧವ್ ಶತಕದ ಜೊತೆಯಾಟ – ಟೀಂ ಇಂಡಿಯಾಗೆ ಆಸೀಸ್ ವಿರುದ್ಧ ಹೈದರಾಬಾದ್‍ನಲ್ಲಿ ಮೊದಲ ಗೆಲುವು

    ಧೋನಿ, ಜಾಧವ್ ಶತಕದ ಜೊತೆಯಾಟ – ಟೀಂ ಇಂಡಿಯಾಗೆ ಆಸೀಸ್ ವಿರುದ್ಧ ಹೈದರಾಬಾದ್‍ನಲ್ಲಿ ಮೊದಲ ಗೆಲುವು

    ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳ ಭರ್ಜರಿ ಗೆಲುವು ಪಡೆದಿದ್ದು, ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ.

    ಧೋನಿ, ಜಾಧವ್‍ರ ಉಪಯುಕ್ತ ಶತಕದ ಜೊತೆಯಾಟದ ಪರಿಣಾಮ ಟೀಂ ಇಂಡಿಯಾ 10 ಎಸೆತ ಬಾಕಿ ಇರುವಂತೆ ಗೆಲುವಿನ ಗುರಿ ತುಲುಪಿದ್ದು, 48.2 ಓವರ್ ಗಳಲ್ಲಿ 240 ರನ್ ಗಳಿಸಿತು. ಅಲ್ಲದೇ ಹೈದರಾಬಾದ್ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಆಸೀಸ್ ವಿರುದ್ಧ ಟೀಂ ಇಂಡಿಯಾ ಗೆಲುವು ಪಡೆಯಿತು. ಈ ಹಿಂದೆ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದಿದ್ದ 2 ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲುಂಡಿತ್ತು.

    ಆಸ್ಟ್ರೇಲಿಯಾ ನೀಡಿದ 237 ರನ್ ಗುರಿ ಬೆನ್ನಟಿದ ಟೀಂ ಇಂಡಿಯಾ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಶಿಖರ್ ಧವನ್ ಶೂನ್ಯಕ್ಕೆ ಔಟಾಗುವ ಮೂಲಕ ತಂಡಕ್ಕೆ ಮೊದಲ ಅಘಾತ ಎದುರಾಯಿತು. ಈ ವೇಳೆ ಕಣಕ್ಕೆ ಇಳಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆಗೂಡಿ 2ನೇ ವಿಕೆಟ್‍ಗೆ 76 ರನ್ ಜೊತೆಯಾಟ ನೀಡಿದರು.

    45 ಎಸೆತಗಳಲ್ಲಿ 44 ರನ್ ಗಳಿಸಿ ಉತ್ತಮವಾಗಿ ಬ್ಯಾಟ್ಸ್ ಬೀಸುತ್ತಿದ್ದ ಕೊಹ್ಲಿರನ್ನು ಜಂಪಾ ಎಲ್‍ಬಿ ಬಲೆಗೆ ಕೆಡವಿದರು. ಆದರೆ ಫೀಲ್ಡ್ ಅಂಪೈರ್ ನಾಟೌಟ್ ಎಂದು ತೀರ್ಮಾನ ನೀಡಿದರು, ಡಿಆರ್‍ಎಸ್ ಪಡೆದ ಆಸೀಸ್ ವಿಕೆಟ್ ಪಡೆಯಲು ಯಶಸ್ವಿಯಾಯಿತು. ಇದರ ಬೆನ್ನಲ್ಲೇ 66 ಎಸೆಗಳಿಂದ 37 ರನ್ ಗಳಿದ್ದ ರೋಹಿತ್ ಶರ್ಮಾ ಫಿಂಚ್‍ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ರಾಯುಡು ಕೂಡ 13 ರನ್ ಗಳಿಸಿ ನಿರ್ಗಮಿಸಿದರು. ಪರಿಣಾಮ ತಂಡ 23.3 ಓವರ್ ಗಳಲ್ಲಿ 99 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

    ಈ ಹಂತದಲ್ಲಿ ಒಂದಾದ ಮಾಜಿ ನಾಯಕ ಧೋನಿ ಹಾಗೂ ಕೇಧಾರ್ ಜಾದವ್ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ನಿರ್ಣಾಯಕ ಹಂತದಲ್ಲಿ ರನ್ ಕದಿಯುತ್ತ, ಕೆಟ್ಟ ಎಸೆತಗಳನ್ನು ದಂಡಿಸುತ್ತಾ 149 ಎಸೆತಗಳಲ್ಲಿ 141 ರನ್ ಗಳ ಶತಕ ಜೊತೆಯಾಟ ನೀಡಿ ಗೆಲುವು ತಂದರು. ಜಾಧವ್ 67 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರೆ, ಧೋನಿ 68 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ನೆರವಿನಿಂದ ಅರ್ಧ ಶತಕ ಸಿಡಿಸಿದರು. ಆ ಮೂಲಕ ಧೋನಿ ವೃತ್ತಿ ಜೀವನದ 106ನೇ ಅರ್ಧ ಶತಕ ಪೂರ್ಣಗೊಳಿಸಿದರು. ಅಂತಿಮವಾಗಿ ಜಾಧವ್ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರೆ, ಧೋನಿ 72 ಎಸೆತಗಳಿಂದ 59 ರನ್ ಗಳಿಸಿ ಅಜೇಯರಾಗಿ ಉಳಿದರು.

    ಇದಕ್ಕೂ ಮುನ್ನ ಟಾಸ್ ಗೆದ್ದು ಆಸ್ಟ್ರೇಲಿಯಾ ಖವಾಜಾ ಅರ್ಧ ಶತಕ ಹಾಗೂ ಮ್ಯಾಕ್ಸ್ ವೆಲ್ 40 ರನ್ ಗಳ ನೆರವಿನಿಂದ ನಿಗದಿ 50 ಓವರ್ ಗಳಲ್ಲಿ 236 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಪಂದ್ಯದಲ್ಲಿ ಟೀಂ ಇಂಡಿಯಾಗೆ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದ ಶಮಿ 44/2, ಕುಲ್ದೀಪ್ ಯಾದವ್ 46/2, ಬುಮ್ರಾ 60/2 ವಿಕೆಟ್ ಪಡೆದರೆ, ಕೇದಾರ್ ಜಾಧವ್ 1 ವಿಕೆಟ್ ಪಡೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv