Tag: australia

  • 37 ಸಾವಿರ ಅಡಿ ಎತ್ತರದಲ್ಲಿ ವಿವಾಹವಾದ ಪ್ರೇಮಿಗಳು

    37 ಸಾವಿರ ಅಡಿ ಎತ್ತರದಲ್ಲಿ ವಿವಾಹವಾದ ಪ್ರೇಮಿಗಳು

    ಮೆಲ್ಬರ್ನ್: ನ್ಯೂಜಿಲೆಂಡ್ ಮಹಿಳೆ ಹಾಗೂ ಆಸ್ಟ್ರೇಲಿಯಾದ ವ್ಯಕ್ತಿ ವಿಮಾನದಲ್ಲಿ ಪ್ರಯಾಣಿಸುತ್ತ 37 ಸಾವಿರ ಅಡಿ ಎತ್ತರದಲ್ಲಿ ವಿವಾಹವಾಗಿದ್ದಾರೆ.

    ಕಮರ್ಷಿಯಲ್ ಜೆಟ್‍ಸ್ಟಾರ್ ಫ್ಲೈಟ್ 201ನಲ್ಲಿ ಪ್ರೇಮಿಗಳಾದ ನ್ಯೂಜಿಲೆಂಡ್‍ನ ಡೇವಿಡ್ ವ್ಯಾಲಿಯಂಟ್ ಹಾಗೂ ಆಸ್ಟ್ರೇಲಿಯಾದ ವ್ಯಕ್ತಿ ಕ್ಯಾಥೆ ವಿವಾಹವಾಗಿದ್ದಾರೆ. ವಿಶೇಷ ಸಂಭ್ರಮಕ್ಕೆ ಸಹ ಪ್ರಯಾಣಿಕರು ಕೂಡ ಸಾಕ್ಷಿಯಾದರು. ಅಷ್ಟೇ ಅಲ್ಲದೆ ಈ ಮದುವೆಗೆ ವಿಮಾನಯಾನ ಕಂಪನಿ ದಂಪತಿಗಳಿಂದ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ವಿಧಿಸಲಿಲ್ಲ. ಆದರೆ ಅವರ ಇಚ್ಛೆಗೆ ಸಂಪೂರ್ಣ ಬೆಂಬಲ ನೀಡಿದೆ. ಇದನ್ನೂ ಓದಿ: ಶವಪೆಟ್ಟಿಗೆಯಲ್ಲಿ ಮದುವೆ ಹಾಲ್‍ಗೆ ಬಂದ ವಧು: ವಿಡಿಯೋ

    ವಿಮಾನವು ಸಿಡ್ನಿಯಿಂದ ಹೊರಟ ತಕ್ಷಣ, ವಧು-ವರರು ತಮ್ಮ ಪ್ರೀತಿ ವ್ಯಕ್ತಪಡಿಸಿದರು. ಬಳಿಕ ಒಟ್ಟಿಗೆ ಜೀವನ ನಡೆಸುವ ಭರವಸೆ ನೀಡಿದರು. ಹೀಗಾಗಿ ಪ್ರಯಾಣದ ಅರ್ಧ ದಾರಿಯಲ್ಲಿ ವಿವಾಹ ಸಮಾರಂಭವನ್ನು ನಡೆಸಲಾಯಿತು.

    ಮದುವೆಯ ನಂತರ ವಧು ಕ್ಯಾಥಿ ಮಾತನಾಡಿ, ಇದು ಅತ್ಯಂತ ಅದ್ಭುತ ಅನುಭವ. ನನ್ನ ಜೀವನದುದ್ದಕ್ಕೂ ನಾವು ಅದನ್ನು ನೆನಪಿಸಿಕೊಳ್ಳುತ್ತೇವೆ. 2011ರಲ್ಲಿ ಡೇವಿಸ್ ಪರಿಚಯವಾಗಿದ್ದರು. ಎರಡು ವರ್ಷಗಳ ನಂತರ ಅಂದ್ರೆ 2013ರಲ್ಲಿ ನಾನು ಸಿಡ್ನಿ ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿಯಾದೆ. ವಿಮಾನ ಪ್ರಯಾಣದ ಮೇಲಿನ ನಮ್ಮ ಪ್ರೀತಿ ನಮ್ಮನ್ನು ಈ ಹಂತಕ್ಕೆ ಕರೆತಂದಿತು ಎಂದು ಹೇಳಿಕೊಂಡಿದ್ದಾರೆ.

    ನನ್ನ ಮದುವೆಯಲ್ಲಿ ಸ್ಮರಣೀಯವಾದದ್ದನ್ನು ಮಾಡಲು ಬಯಸಿದ್ದೆ. ನನ್ನ ಕಲ್ಪನೆಯನ್ನು ಜೆಟ್‍ಸ್ಟಾರ್ ನ ಫೇಸ್‍ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದೆ. ಇದಕ್ಕೆ ಜೆಟ್‍ಸ್ಟಾರ್ ಒಪ್ಪಿಕೊಂಡರು ಮತ್ತು ಹಣವಿಲ್ಲದೆ ಎಲ್ಲಾ ವ್ಯವಸ್ಥೆ ಮಾಡಿದರು ಎಂದು ಕ್ಯಾಥಿ ತಿಳಿಸಿದ್ದಾರೆ.

    ಈ ಕುರಿತು ಜೆಟ್‍ಸ್ಟಾರ್ ಸಿಬ್ಬಂದಿ ರಾಬಿನ್ ಹಾಲ್ಟ್ ಮಾತನಾಡಿ, ಪ್ರಯಾಣಿಕರು ಡೇವಿಡ್ ಮತ್ತು ಕ್ಯಾಥಿ ಅವರ ಮದುವೆಯನ್ನು ಆನಂದಿಸಿದ್ದಾರೆ. ಈ ವಿವಾಹದ ಮಾಹಿತಿಯನ್ನು ಪ್ರಯಾಣಿಕರಿಗೆ ಇ-ಮೇಲ್ ಮೂಲಕ ಮೊದಲೇ ನೀಡಲಾಗಿತ್ತು. ಒಂದು ವೇಳೆ ಅವರು ಬಯಸಿದರೆ ವಿಮಾನವನ್ನು ಬದಲಾಯಿಸಲು ಸಹ ಅವಕಾಶ ಕಲ್ಪಿಸಲಾಗಿತ್ತು. ವಿವಾಹಕ್ಕಾಗಿ ದಂಪತಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಡೆದಿಲ್ಲ ಎಂದು ಹೇಳಿದ್ದಾರೆ.

  • ಕ್ರಿಕೆಟ್ ಪಂದ್ಯಕ್ಕೂ ಮುನ್ನ ಇನ್‍ಸ್ಟಾ ಪೋಸ್ಟ್ – ಆಟಗಾರ್ತಿಗೆ 3 ತಿಂಗಳು ನಿಷೇಧ

    ಕ್ರಿಕೆಟ್ ಪಂದ್ಯಕ್ಕೂ ಮುನ್ನ ಇನ್‍ಸ್ಟಾ ಪೋಸ್ಟ್ – ಆಟಗಾರ್ತಿಗೆ 3 ತಿಂಗಳು ನಿಷೇಧ

    ಸಿಡ್ನಿ: ಕ್ರಿಕೆಟ್ ಮೈದಾನದಲ್ಲಿ ಅಸಭ್ಯ ವರ್ತನೆ ತೋರಿದ ಆಟಗಾರರು/ ಆಟಗಾರ್ತಿಯರು ನಿಷೇಧಕ್ಕೆ ಒಳಗಾಗಿರುವುದನ್ನು ನೀವು ಓದಿರಬಹುದು. ಆದರೆ ಆಸ್ಟ್ರೇಲಿಯಾದಲ್ಲಿ ಆಡುವ 11 ಮಂದಿ ಆಟಗಾರ್ತಿಯರ ವಿವರವನ್ನು ಪಂದ್ಯಕ್ಕೂ ಮುನ್ನ ಬಹಿರಂಗ ಪಡಿಸಿದ್ದ ಆಟಗಾರ್ತಿಗೆ 3 ತಿಂಗಳ ನಿಷೇಧ ಹೇರಲಾಗಿದೆ.

    ಬಿಗ್ ಬ್ಯಾಷ್ ಲೀಗ್ ಟಿ 20ಯಲ್ಲಿ ಹೋಬಾರ್ಟ್ ತಂಡದ ಕೀಪರ್ ಎಮಿಲಿ ಸ್ಮಿತ್ ಸಿಡ್ನಿ ಥಂಡರ್ ತಂಡದ ವಿರುದ್ಧ ಆಡುತ್ತಿರುವ 11ರ ಬಳಗದ ಆಟಗಾರ್ತಿಯರ ಹೆಸರು ಇರುವ ವಿಡಿಯೋ ಪೋಸ್ಟ್ ಅನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪ್ರಕಟಿಸಿದ್ದರು.

    ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕ್ರಿಕೆಟ್ ಆಸ್ಟ್ರೇಲಿಯಾ ಭ್ರಷ್ಟಾಚಾರ ನಿಯಮ ಉಲ್ಲಂಘಿಸಿದ್ದಕ್ಕೆ 1 ವರ್ಷ ನಿಷೇಧ ಹೇರಿ 9 ತಿಂಗಳ ಶಿಕ್ಷೆಯನ್ನು ಅಮಾನತುಗೊಳಿಸಿದೆ.

    ಕ್ರಿಕೆಟ್ ಆಸ್ಟ್ರೇಲಿಯಾದ ಭ್ರಷ್ಟಾಚಾರ ವಿರೋಧಿ ನೀತಿ ಸಂಹಿತೆಯ ಪ್ರಕಾರ ಪಂದ್ಯಕ್ಕೂ ಮುನ್ನ ಆಟಗಾರರ/ ಆಟಗಾರ್ತಿಯರ ಹೆಸರನ್ನು ಅನುಮತಿ ಇಲ್ಲದೇ ಯಾರೂ ಪ್ರಕಟಿಸುವಂತಿಲ್ಲ. ಅಷ್ಟೇ ಅಲ್ಲದೆ ತಂಡದ ಒಳಗಿನ ವಿಚಾರವನ್ನು ಸಾಮಾಜಿಕ ಜಾಲತಾಣ/ ಮಾಧ್ಯಮಗಳಿಗೆ ತಿಳಿಸುವಂತಿಲ್ಲ.

    ಪಂದ್ಯಕ್ಕೂ ಮುನ್ನ ತಂಡದ ವಿವರವನ್ನು ಪ್ರಕಟಿಸಿದರೆ ಬೆಟ್ಟಿಂಗ್ ನಡೆಸುವ ಮಂದಿಗೆ ಸಹಾಯವಾಗುತ್ತದೆ. ಹೀಗಾಗಿ ಈ ಪ್ರಕರಣವನ್ನು ಆಸ್ಟ್ರೇಲಿಯಾ ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮವನ್ನು ಕೈಗೊಂಡಿದೆ.

    3 ತಿಂಗಳು ನಿಷೇಧ ಇರುವ ಪರಿಣಾಮ ಎಮಿಲಿ ಸ್ಮಿತ್ ಈ ವರ್ಷದ ಬಿಗ್ ಬ್ಯಾಷ್ ಟಿ -20ಯಲ್ಲಿ ಆಡುವ ಎಲ್ಲ ಪಂದ್ಯಗಳನ್ನು ಕಳೆದುಕೊಂಡಿದ್ದಾರೆ.

  • ಅಂಪೈರ್, ಎದುರಾಳಿ ಆಟಗಾರನೊಂದಿಗೆ ಅಸಭ್ಯ ವರ್ತನೆ- ಆಸೀಸ್ ವೇಗಿಗೆ ನಿಷೇಧದ ಬರೆ

    ಅಂಪೈರ್, ಎದುರಾಳಿ ಆಟಗಾರನೊಂದಿಗೆ ಅಸಭ್ಯ ವರ್ತನೆ- ಆಸೀಸ್ ವೇಗಿಗೆ ನಿಷೇಧದ ಬರೆ

    ಬ್ರಿಸ್ಬೇನ್: ಅಂಪೈರ್, ಎದುರಾಳಿ ಆಟಗಾರರೊಂದಿಗೆ ಅಸಭ್ಯ ವರ್ತಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ಅವರಿಗೆ ನಿಷೇಧದ ಬರೆ ಬಿದ್ದಿದೆ. ಇದರಿಂದಾಗಿ ಮುಂದಿನ ವಾರ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟಿಗೆ ಜೇಮ್ಸ್ ಪ್ಯಾಟಿನ್ಸನ್ ಅಲಭ್ಯವಾಗಲಿದ್ದಾರೆ.

    ದೇಶೀಯ ಪಂದ್ಯದ ಸಂದರ್ಭದಲ್ಲಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ಯಾಟಿನ್ಸನ್ ರನ್ನು ನಿಷೇಧಿಸಲಾಗಿದೆ. ಪ್ಯಾಟಿನ್ಸನ್ ಶೆಫೀಲ್ಡ್  ವಿಕ್ಟೋರಿಯಾ ಪರ ಆಡುವಾಗ ಕ್ವೀನ್ಸ್ ಲ್ಯಾಂಡ್ ಆಟಗಾರ ಮತ್ತು ಅಂಪೈರ್ ಜೊತೆ ಕೆಟ್ಟದಾಗಿ ವರ್ತಿಸಿದರು.

    ಪ್ಯಾಟಿನ್ಸನ್ ಕಳೆದ ವರ್ಷವೂ ನಿಯಮ ಉಲ್ಲಂಘಿಸಿ ಎರಡು ಬಾರಿ ಶಿಕ್ಷೆಗೆ ಗುರಿಯಾಗಿದ್ದರು. ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳದ ಪ್ಯಾಟಿನ್ಸನ್, ಕಳೆದ ವಾರ ತವರಿನಲ್ಲಿ ನಡೆದ ಪಂದ್ಯವೊಂದರಲ್ಲಿ ಕ್ವೀನ್ಸ್ ಲ್ಯಾಂಡ್ ಆಟಗಾರನನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಅಂಪೈರ್ ಜೊತೆಗೂ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ ಅಂತರಾಷ್ಟ್ರೀಯ ಪಂದ್ಯವೊಂದಕ್ಕೆ ಪ್ಯಾಟಿನ್ಸನ್ ಅವರಿಗೆ ನಿಷೇಧಿಸಲಾಯಿತು. ಈ ಮೂಲಕ ಗಬ್ಬಾದಲ್ಲಿ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ಯಾಟಿನ್ಸನ್ ಅಲಭ್ಯವಾಗಲಿದ್ದಾರೆ.

    ಆ ಒಂದು ಕ್ಷಣದಲ್ಲಿ ನಾನು ತಪ್ಪು ಮಾಡಿದ್ದೇನೆ. ಅದನ್ನು ತಕ್ಷಣವೇ ಅರಿತುಕೊಂಡೆ. ಹೀಗಾಗಿ ಅದೇ ಸಮಯದಲ್ಲಿ ಅಂಪೈರ್ ಮತ್ತು ಎದುರಾಳಿ ಆಟಗಾರರಿಗೆ ಕ್ಷಮೆಯಾಚಿಸಿದೆ. ನಾನು ತಪ್ಪು ಮಾಡಿದ್ದೇನೆ. ಇದರಿಂದಾಗಿ ಟೆಸ್ಟ್ ಪಂದ್ಯದಿಂದ ದೂರವಿರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಪ್ಯಾಟಿನ್ಸನ್ ತಿಳಿಸಿದ್ದಾರೆ.

    ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್ ಕೂಡ ಜೇಮ್ಸ್ ಪ್ಯಾಟಿನ್ಸನ್ ಅವರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಬಾಲ್ ಟ್ಯಾಂಪರಿಂಗ್ ವಿವಾದದಲ್ಲಿ ಅಂದಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಮೇಲೆ ಒಂದು ವರ್ಷದ ನಿಷೇಧ ಹೇರಿದ ನಂತರ, ಕ್ರಿಕೆಟ್ ಆಸ್ಟ್ರೇಲಿಯಾ ಶಿಸ್ತಿನ ಬಗ್ಗೆ ಕಠಿಣ ನಿಲುವನ್ನು ತೆಗೆದುಕೊಂಡಿದೆ. ಪ್ಯಾಟಿನ್ಸನ್ ವಿರುದ್ಧದ ಕಠಿಣ ಕ್ರಮವೂ ಇದಕ್ಕೆ ಸಾಕ್ಷಿ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಗುರುವಾರದಿಂದ ಬ್ರಿಸ್ಬೇನ್‍ನಲ್ಲಿ ಪ್ರಾರಂಭವಾಗಲಿದೆ.

  • ಹರ್ಭಜನ್ ನನಗೆ ಶಾಪದಂತೆ ಕಾಡಿದ್ದರು- ಗಿಲ್‍ಕ್ರಿಸ್ಟ್

    ಹರ್ಭಜನ್ ನನಗೆ ಶಾಪದಂತೆ ಕಾಡಿದ್ದರು- ಗಿಲ್‍ಕ್ರಿಸ್ಟ್

    ನವದೆಹಲಿ: ಟೀಂ ಇಂಡಿಯಾದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ನನ್ನನ್ನು ಶಾಪದಂತೆ ಕಾಡಿದರು ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‍ಮನ್, ವಿಕೆಟ್ ಕೀಪರ್ ಅಡಮ್ ಗಿಲ್‍ಕ್ರಿಸ್ಟ್ ಹೇಳಿದ್ದಾರೆ.

    ಆಡಮ್ ಗಿಲ್‍ಕ್ರಿಸ್ಟ್ ನವೆಂಬರ್ 14ರಂದು ತಮ್ಮ 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನಾ ದಿನವಾದ ಇಂದು ಆಸ್ಟ್ರೇಲಿಯಾ ಕ್ರಿಕೆಟ್ ವೆಬ್‍ಸೈಟ್‍ಗೆ ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ಯಾವಾಗಲೂ ಎದುರಿಸಲು ತೊಂದರೆ ಅನುಭವಿಸುತ್ತಿದ್ದ ಬೌಲರ್ ಗಳಲ್ಲಿ ಹರ್ಭಜನ್ ಸಿಂಗ್ ಕೂಡ ಒಬ್ಬರು ಎಂದಿರುವ ಗಿಲ್‍ಕ್ರಿಸ್ಟ್ ಹರ್ಭಜನ್ ತಮ್ಮ ವೃತ್ತಿಜೀವನದ ಶಾಪವೆಂದು ಬಣ್ಣಿಸಿದ್ದಾರೆ.

    ಗಿಲ್‍ಕ್ರಿಸ್ಟ್ 2001ರಲ್ಲಿ ಭಾರತದ ವಿರುದ್ಧದ ಸರಣಿಯನ್ನು ನೆನಪಿಸಿಕೊಂಡು, ಆಸ್ಟ್ರೇಲಿಯಾ ತಂಡವು ಸತತ 15 ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತದ ವಿರುದ್ಧ ಆಡಲು ಮುಂದಾಗಿತ್ತು. ಮುಂಬೈನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಆದರೆ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೆಟ್ಟ ರೀತಿಯಲ್ಲಿ ಸೋಲಬೇಕಾಯಿತು. ಇದಕ್ಕೆ ದೊಡ್ಡ ಕಾರಣ ಭಾರತದ ಮೊದಲ ಟೆಸ್ಟ್ ಹ್ಯಾಟ್ರಿಕ್ ಸೇರಿದಂತೆ ಮೂರು ಪಂದ್ಯಗಳಲ್ಲಿ 32 ವಿಕೆಟ್ ಪಡೆದ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಎಂದು ತಿಳಿಸಿದ್ದಾರೆ.

    ಈಡನ್ ಗಾರ್ಡನ್‍ನಲ್ಲಿ 18 ವರ್ಷಗಳ ಹಿಂದೆ ನಡೆದ ಈ ಐತಿಹಾಸಿಕ ಟೆಸ್ಟ್ ಪಂದ್ಯವು ಅನೇಕ ವಿಶೇಷತೆ ಹೊಂದಿದೆ. ಮುಂಬೈನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್‍ಕ್ರಿಸ್ಟ್ ಶತಕ ಬಾರಿಸಿದ್ದರು. ಆದರೆ ಮುಂದಿನ ಎರಡು ಪಂದ್ಯಗಳಲ್ಲಿ ಅವರು ವಿಶೇಷವಾದ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಪ್ರತಿ ಬಾರಿಯೂ ಅವರು ಹರ್ಭಜನ್ ಸಿಂಗ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳುತ್ತಿದ್ದರು.

    ಆ ಟೆಸ್ಟ್ ಸರಣಿಯಲ್ಲಿ ಹರ್ಭಜನ್ ಸಿಂಗ್ ಕಾಡಿದರು. ಅಷ್ಟೇ ಅಲ್ಲದೆ ನನ್ನ ವೃತ್ತಿ ಜೀವನದುದ್ದಕ್ಕೂ ಹರ್ಭಜನ್ ನನಗೆ ಶಾಪವಾಗಿದರು. ನನ್ನ ದೃಷ್ಟಿಯಲ್ಲಿ, ಹರ್ಭಜನ್ ಸಿಂಗ್ ಮತ್ತು ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರನ್ನು ಎದುರಿಸಲು ಹೆಚ್ಚು ಕಷ್ಟಪಟ್ಟಿದ್ದೇನೆ ಎಂದು ಗಿಲ್‍ಕ್ರಿಸ್ಟ್ ನೆನಪಿಸಿಕೊಂಡಿದ್ದಾರೆ.

    ಈಡನ್ ಗಾರ್ಡನ್ಸ್ ಟೆಸ್ಟ್ ವೇಳೆ ಆಸ್ಟ್ರೇಲಿಯಾ ತಂಡವು ಭಾರತದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತ್ತು. ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯವನ್ನು ಗೆದ್ದಿತ್ತು. ಹಾಗೆಯೇ ಈ ಪಂದ್ಯದಲ್ಲೂ ಅವರು ಭಾರತವನ್ನು ಸೋಲಿಸಲು ಮುಂದಾಗಿತ್ತು. ಮೊದಲ ಇನ್ನಿಂಗ್ಸ್‍ನಲ್ಲಿ ಆಸ್ಟ್ರೇಲಿಯಾ ತಂಡವು ನೀಡಿದ್ದ 445 ರನ್‍ಗಳ ಗುರಿ ಬೆನ್ನಟ್ಟಿದ್ದ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡವನ್ನು ಕೇವಲ 171 ರನ್ ಗಳಿಸಲು ಶಕ್ತವಾಗಿತ್ತು.

    ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಆರಂಭಿಕ ಜೋಡಿ ನಂತರ ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಅದ್ಭುತ ಬ್ಯಾಟಿಂಗ್ ಮಾಡಿದರು. ಇವರಿಬ್ಬರು ಎರಡನೇ ವಿಕೆಟಿಗೆ 376 ರನ್‍ಗಳ ದಾಖಲೆಯ ಜೊತೆಯಾಟವಾಡಿ ಭಾರತ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದರು. ಲಕ್ಷ್ಮಣ್ 281 ರನ್ ಹೊಡೆಯುವ ಮೂಲಕ ಭಾರತದ ಪರ ಟೆಸ್ಟ್ ಕ್ರಿಕೆಟಿನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರ ಎನ್ನುವ ದಾಖಲೆ ಬರೆದಿದ್ದರು. 2004ರಲ್ಲಿ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನ ವಿರುದ್ಧ ಮುಲ್ತಾನಿನಲ್ಲಿ ನಡೆದ ಪಂದ್ಯದಲ್ಲಿ ತ್ರಿಶಕತ ಸಿಡಿಸಿ ವಿವಿಎಸ್ ಲಕ್ಷ್ಮಣ್ ದಾಖಲೆ ಮುರಿದಿದ್ದರು.

  • ಬಾಂಗ್ಲಾ ವಿರುದ್ಧ ಗೆದ್ದು ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ದಾಖಲೆ ಬರೆದ ಭಾರತ

    ಬಾಂಗ್ಲಾ ವಿರುದ್ಧ ಗೆದ್ದು ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ದಾಖಲೆ ಬರೆದ ಭಾರತ

    ನವದೆಹಲಿ: ಗುರುವಾರ ಬಾಂಗ್ಲಾದೇಶದ ವಿರುದ್ಧ ನಡೆದ ಎರಡನೇ ಟಿ-20 ಗೆಲ್ಲುವ ಮೂಲಕ ಭಾರತ ಚುಟುಕು ಪಂದ್ಯಗಳ ಚೇಸಿಂಗ್‍ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿದೆ.

    ಬಾಂಗ್ಲಾ ವಿರುದ್ಧ ಭಾನುವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ಸೋತಿದ್ದ ಭಾರತ, ಗುರುವಾರ ರಾಜ್‍ಕೋಟ್‍ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸೇಡು ತೀರಿಸಿಕೊಂಡಿತ್ತು. ಬಾಂಗ್ಲಾ ನೀಡಿದ 154 ರನ್‍ಗಳ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ನಾಯಕ ರೋಹಿತ್ ಶರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 15.4 ಓವರ್ ಗಳಲ್ಲೇ 154 ರನ್ ಹೊಡೆದು ಜಯಗಳಿಸಿತು.

    ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಎಂಟು ವಿಕೆಟ್‍ಗಳ ಜಯ ಸಾಧಿಸಿದ ಭಾರತ, ಟಿ-20 ಚೇಸಿಂಗ್‍ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಹೊಸ ದಾಖಲೆಯನ್ನು ಬರೆದಿದೆ. ಟಿ-20 ಯಲ್ಲಿ ಒಟ್ಟು 69 ಬಾರಿ ಚೇಸಿಂಗ್ ಮಾಡಿರುವ ಆಸಿಸ್ ಅದರಲ್ಲಿ 40 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದರೆ 61 ಪಂದ್ಯಗಳಲ್ಲಿ ಚೇಸಿಂಗ್ ಮಾಡಿರುವ ಭಾರತ ಅದರಲ್ಲಿ 41 ಪಂದ್ಯಗಳನ್ನು ಗೆದ್ದು ಹೊಸ ದಾಖಲೆಯನ್ನು ನಿರ್ಮಾಣ ಮಾಡಿದೆ. ಈ ಎರಡು ತಂಡಗಳನ್ನು ಬಿಟ್ಟರೆ ಒಟ್ಟು 67 ಚೇಸಿಂಗ್ ನಲ್ಲಿ ಪಾಕಿಸ್ತಾನ 36 ರಲ್ಲಿ ಗೆಲವು ಸಾಧಿಸಿ ಮೂರನೇ ಸ್ಥಾನ ಪಡೆದಿದೆ.

    ಎರಡನೇ ಪಂದ್ಯದಲ್ಲಿ ಬಾಂಗ್ಲಾ ನೀಡಿದ 154 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 15.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 154 ರನ್ ಹೊಡೆದು ಜಯಗಳಿಸಿತು. ತನ್ನ 100 ನೇ ಪಂದ್ಯವನ್ನು ಸ್ಮರಣೀಯವಾಗಿಸಿದ ರೋಹಿತ್ ಶರ್ಮಾ ತಾನು ಹಿಟ್ ಮ್ಯಾನ್ ಎನ್ನುವುದನ್ನು ಮತ್ತೊಮ್ಮೆ ತೋರಿಸಿದರು. 23 ಎಸೆತಗಳಲ್ಲಿ ಅರ್ಧ ಶತಕ ಹೊಡೆತ ರೋಹಿತ್ 85 ರನ್ (43 ಎಸೆತ, 6 ಬೌಂಡರಿ, 6 ಸಿಕ್ಸರ್) ಹೊಡೆದು ಶತಕದಿಂದ ವಂಚಿತರಾದರು. ತನ್ನ ಅತ್ಯುತ್ತಮ ಆಟಕ್ಕಾಗಿ ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

    ರೋಹಿತ್ ಬ್ಯಾಟಿಂಗ್ ಆರ್ಭಟ ಹೇಗಿತ್ತು ಅಂದರೆ 5.2 ಓವರ್ ಗಳಲ್ಲಿ 50 ರನ್ ಬಂದರೆ, 9.2 ಓವರ್ ಗಳಲ್ಲಿ ಭಾರತ 100 ರನ್ ಗಳಿಸಿತು. ನಾಯಕನಿಗೆ ಉತ್ತಮ ಸಾಥ್ ನೀಡಿದ ಶಿಖರ್ ಧವನ್ 31 ರನ್ (27 ಎಸೆತ, 4 ಬೌಂಡರಿ) ಹೊಡೆದರು. ಇವರಿಬ್ಬರು ಮೊದಲ ವಿಕೆಟಿಗೆ 11.5 ಓವರ್ ಗಳಲ್ಲಿ 118 ರನ್ ಜೊತೆಯಾಟವಾಡಿ ಭಾರತದ ಗೆಲುವಿಗೆ ಭದ್ರ ಬುನಾದಿ ಹಾಕಿದರು. ಕೊನೆಯಲ್ಲಿ ಕೆ.ಎಲ್. ರಾಹುಲ್ ಔಟಾಗದೇ 8 ರನ್, ಶ್ರೇಯಸ್ ಅಯ್ಯರ್ ಔಟಾಗದೇ 24 ರನ್ (13 ಎಸೆತ, 3 ಬೌಂಡರಿ,1 ಸಿಕ್ಸರ್) ಹೊಡೆದರು. ಕೊನೆಯ ಟಿ 20 ಪಂದ್ಯ ಭಾನುವಾರ ನಾಗ್ಪುರದಲ್ಲಿ ನಡೆಯಲಿದೆ.

  • ಮಾನಸಿಕ ಆರೋಗ್ಯ ಸಮಸ್ಯೆ – ಕ್ರಿಕೆಟ್‍ನಿಂದ ವಿರಾಮ ಪಡೆದ ಮ್ಯಾಕ್ಸ್‌ವೆಲ್

    ಮಾನಸಿಕ ಆರೋಗ್ಯ ಸಮಸ್ಯೆ – ಕ್ರಿಕೆಟ್‍ನಿಂದ ವಿರಾಮ ಪಡೆದ ಮ್ಯಾಕ್ಸ್‌ವೆಲ್

    ಸಿಡ್ನಿ: ಆಸ್ಟ್ರೇಲಿಯಾದ ಸ್ಫೋಟಕ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮಾನಸಿಕ ಆರೋಗ್ಯದ ತೊಂದರೆಯಿಂದ ಬಳಲುತ್ತಿದ್ದು, ಸ್ವಲ್ಪ ಕಾಲ ಕ್ರಿಕೆಟ್‍ನಿಂದ ದೂರ ಸರಿಯಲಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ತಿಳಿಸಿದೆ.

    ಭಾನುವಾರ ಶ್ರೀಲಂಕಾ ವಿರುದ್ಧ ಅಡಿಲೇಡ್ ಮೈದಾನದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಮ್ಯಾಕ್ಸ್‌ವೆಲ್ ಸ್ಫೋಟಕ ಅರ್ಧ ಶತಕ ಸಿಡಿಸಿ ಆಸ್ಟ್ರೇಲಿಯಾ 134 ರನ್‍ಗಳ ಅಂತರದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮಾನಸಿಕ ಆರೋಗ್ಯ ತೊಂದರೆಯಿಂದ ಬಳಲುತ್ತಿರುವ ಮ್ಯಾಕ್ಸ್ ವೆಲ್ ಸ್ವಲ್ಪ ಸಮಯದ ಕಾಲ ಕ್ರಿಕೆಟ್‍ಗೆ ಅಲ್ಪವಿರಾಮ ಹಾಕಲಿದ್ದಾರೆ ಎಂದು ಆಸಿಸ್ ಮಂಡಳಿ ತಿಳಿಸಿದೆ.

    ಈಗ ಸದ್ಯ ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ-20 ಸರಣಿ ಆಡುತ್ತಿದ್ದು, ಎರಡರಲ್ಲಿ ಭರ್ಜರಿ ಜಯ ಸಾಧಿಸಿದೆ. ಈಗ ಉಳಿದ ಒಂದು ಪಂದ್ಯಕ್ಕೆ ಮ್ಯಾಕ್ಸ್‌ವೆಲ್ ಅವರು ಅಲಭ್ಯರಾಗಲಿದ್ದು, ಅವರ ಜಾಗಕ್ಕೆ ಮೊತ್ತೊಬ್ಬ ಆಲ್‍ರೌಂಡರ್ ಡಿಆರ್ಸಿ ಶಾರ್ಟ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹೇಳಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಆಸ್ಟ್ರೇಲಿಯಾ ತಂಡದ ಮನಶಾಸ್ತ್ರಜ್ಞ ಡಾ. ಮೈಕೆಲ್ ಲಾಯ್ಡ್, ಗ್ಲೆನ್ ಮ್ಯಾಕ್ಸ್ ವೆಲ್ ಅವರ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಅವರು ಸ್ವಲ್ಪ ಸಮಯ ಆಟದಿಂದ ದೂರು ಉಳಿಯಲಿದ್ದು, ಚಿಕಿತ್ಸೆ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಕ್ರಿಕೆಟ್ ಮಂಡಳಿಯಿಂದ ಮ್ಯಾಕ್ಸ್‌ವೆಲ್ ಗೆ ಸಂಪೂರ್ಣ ಬೆಂಬಲ ಸಿಗಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಕಾರ್ಯನಿರ್ವಾಹಕ ಜನರಲ್ ಮ್ಯಾನೇಜರ್ ಬೆನ್ ಆಲಿವರ್ ಹೇಳಿದ್ದಾರೆ. ನಮಗೆ ನಮ್ಮ ತಂಡದ ಆಟಗಾರರ ಮತ್ತು ಸಿಬ್ಬಂದಿ ಯೋಗಕ್ಷೇಮ ಮುಖ್ಯ. ಆದ್ದರಿಂದ ಸದ್ಯ ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಆಲಿವರ್ ತಿಳಿಸಿದ್ದಾರೆ.

    ನಮ್ಮ ಆಸ್ಟ್ರೇಲಿಯಾ ತಂಡದಲ್ಲಿ ಮ್ಯಾಕ್ಸ್‌ವೆಲ್ ತುಂಬ ವಿಶೇಷ ಆಟಗಾರ ಮತ್ತು ನಮ್ಮ ತಂಡದ ಪ್ರಮುಖ ಭಾಗವಾಗಿದ್ದಾರೆ. ಮುಂದಿನ ಬೇಸಿಗೆ ಸಮಯದಲ್ಲಿ ಅವರನ್ನು ನಾವು ಮತ್ತೆ ತಂಡದಲ್ಲಿ ನೋಡಲು ಬಯಸುತ್ತೇವೆ. ಅವರು ಮತ್ತೆ ಕ್ರಿಕೆಟ್‍ಗೆ ಮರಳಲು ನಿರ್ಧಾರ ಮಾಡಿದಾಗ ಅದಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಮ್ಯಾಕ್ಸ್‌ವೆಲ್ ಅವರ ರಾಜ್ಯ ತಂಡ ವಿಕ್ಟೋರಿಯಾ ಕ್ರಿಕೆಟ್ ಮಂಡಳಿಯೊಂದಿಗೆ ಮಾತನಾಡಿದ್ದೇವೆ ಎಂದು ಆಲಿವರ್ ಹೇಳಿದ್ದಾರೆ.

  • ಬಿಸಿಸಿಐ ಮನವಿಗೆ ಒಪ್ಪಿದ ಬಾಂಗ್ಲಾ- ಕೋಲ್ಕತ್ತಾದಲ್ಲಿ ಮೊದ್ಲ ಡೇ-ನೈಟ್ ಟೆಸ್ಟ್ ಪಂದ್ಯ

    ಬಿಸಿಸಿಐ ಮನವಿಗೆ ಒಪ್ಪಿದ ಬಾಂಗ್ಲಾ- ಕೋಲ್ಕತ್ತಾದಲ್ಲಿ ಮೊದ್ಲ ಡೇ-ನೈಟ್ ಟೆಸ್ಟ್ ಪಂದ್ಯ

    ನವದೆಹಲಿ: ಐತಿಹಾಸಿಕ ಕ್ರಿಕೆಟ್ ಪಂದ್ಯಕ್ಕೆ ಕೋಲ್ಕತ್ತಾ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಸಾಕ್ಷಿಯಾಗುತ್ತಿದೆ. ಭಾರತದ ಮೊದಲ ಹೊನಲು ಬೆಳಕಿನ (ಡೇ-ನೈಟ್) ಟೆಸ್ಟ್ ಕ್ರಿಕೆಟ್ ಪಂದ್ಯ ಆಯೋಜಿಸಲು ಬಿಸಿಸಿಐ ಮಾಡಿದ್ದ ಮನವಿಗೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಸಮ್ಮತಿ ಸೂಚಿಸಿದೆ.

    ಟೀಂ ಇಂಡಿಯಾ ತನ್ನ ಮೊದಲ ಪಿಂಕ್ ಬಾಲ್ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು ಆಯೋಜಿಸಲಿದ್ದು, ನ.22 ರಂದು ಐತಿಹಾಸಿಕ ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ಸೌರವ್ ಗಂಗೂಲಿ ಅವರು ಬಾಂಗ್ಲಾ ತಂಡವನ್ನು ಒಪ್ಪಿಸಲು ಯಶಸ್ವಿಯಾಗಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಪಂದ್ಯಕ್ಕೆ ಸಮ್ಮತಿ ಸೂಚಿಸಿದ್ದಾರೆ.

    ಈ ಕುರಿತು ನಿನ್ನೆಯಷ್ಟೇ ಮಾಹಿತಿ ನೀಡಿದ್ದ ಗಂಗೂಲಿ, ನಾನು ಬಿಸಿಬಿ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಒಪ್ಪಿಗೆ ಸೂಚಿಸುವ ವಿಶ್ವಾಸವಿದೆ. ಆಟಗಾರರೊಂದಿಗೆ ಚರ್ಚೆ ನಡೆಸಿ ತಮ್ಮ ನಿರ್ಧಾರವನ್ನು ತಿಳಿಸಲಿದ್ದಾರೆ. ಶೀಘ್ರವೇ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

    ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿ ನಡೆಯುತ್ತಿರುವ ಟೆಸ್ಟ್ ಟೂರ್ನಿಯ ಕಾರಣ ಈ ಮೊದಲು ಈ ಹೊಸ ಮಾದರಿಗೆ ಬಿಸಿಸಿಐ ನಿರಾಕರಿಸಿತ್ತು. ಆದರೆ ಗಂಗೂಲಿ ಅವರು ಅಧ್ಯಕ್ಷ ಸ್ಥಾನ ಪಡೆದ ಬಳಿಕ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ.

    ವಿಶ್ವ ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ, ಐರ್ಲೆಂಡ್ ತಂಡಗಳು ಮಾತ್ರ ಇದುವರೆಗೂ ಡೇ-ನೈಟ್ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. 2015 ರಲ್ಲಿ ಮೊದಲ ಬಾರಿಗೆ ಆಸೀಸ್ ಹಾಗೂ ನ್ಯೂಜಿಲೆಂಡ್ ನಡುವೆ ಡೇ-ನೈಟ್ ಟೆಸ್ಟ್ ಪಂದ್ಯ ನಡೆದಿತ್ತು. ಆ ಬಳಿಕ ಇದುವರೆಗೂ 11 ಪಂದ್ಯಗಳು ಈ ಮಾದರಿಯಲ್ಲಿ ನಡೆದಿದೆ.

    ಐಸಿಸಿಯ ನಿಯಮಗಳ ಅನ್ವಯ ಪಂದ್ಯಕ್ಕೆ ಅತಿಥೇಯ ತಂಡ ಎದುರಾಳಿ ದೇಶದ ಅನುಮತಿಯನ್ನು ಪಡೆದ ಬಳಿಕವೇ ಡೇ-ನೈಟ್ ಟೆಸ್ಟ್ ಪಂದ್ಯ ಆಯೋಜಿಸಬೇಕಿದೆ. ಟೀಂ ಇಂಡಿಯಾ ಕೂಡ ಕಳೆದ ವರ್ಷ ಅಡಿಲೇಡ್‍ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆಯೇ ಡೇ-ನೈಟ್ ಟೆಸ್ಟ್ ಆಡುವ ನಿರೀಕ್ಷೆ ಇತ್ತು. ಆದರೆ ಬಿಸಿಸಿಐ ಇದಕ್ಕೆ ಸಮ್ಮಿತಿ ಸೂಚಿಸಿರಲಿಲ್ಲ. ವಿಶೇಷ ಎಂದರೆ ಡೇ-ನೈಟ್ ಬಳಕೆ ಮಾಡುವ ಪಿಂಕ್ ಬಾಲ್ ಅನ್ನು ಟೀಂ ಇಂಡಿಯಾ 2016 ರಿಂದ 2018ವರೆಗೂ ನಡೆದ ದಿಲೀಪ್ ಟ್ರೋಫಿಯಲ್ಲಿ ಬಳಕೆ ಮಾಡಿತ್ತು. 2019 ಅವಧಿಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ರೆಡ್ ಬಾಲ್ ಬಳಕೆ ಮಾಡಲಾಯಿತು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಾಂಗ್ಲಾ ಕ್ರಿಕೆಟ್ ತಂಡದ ಕೋಚ್ ರಸೆಲ್ ಡೊಮಿಂಗೋ, ತಂಡದ ಕೋಚ್ ಹಾಗೂ ಹಿರಿಯ ಆಟಗಾರನಾಗಿ ಇದನ್ನು ಅತ್ಯುತ್ತಮ ಅವಕಾಶ ಎಂದು ಭಾವಿಸುತ್ತೇನೆ. ಏಕೆಂದರೆ ಟೀಂ ಇಂಡಿಯಾ ಕೂಡ ಇದುವರೆಗೂ ಪಿಂಕ್ ಬಾಲ್ ಕ್ರಿಕೆಟ್ ಆಡಿಲ್ಲ. ನಾವು ಮೊದಲ ಬಾರಿಗೆ ಆಡುತ್ತಿದ್ದು, ಈಡನ್ ಗಾರ್ಡನ್ಸ್ ನಲ್ಲಿ ಬಹದೊಡ್ಡ ಅವಕಾಶ ಲಭಿಸಿದೆ ಎಂದಿದ್ದಾರೆ.

    ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಭಾರತದ ಒಲಂಪಿಯನ್ಸ್ ಆದ ಅಭಿನವ್ ಬಿಂದ್ರಾ, ಮೇರಿ ಕೋಮ್, ಪಿವಿ ಸಿಂಧು, ಸೇರಿದಂತೆ ಇತರ ಆಟಗಾರರಿಗೆ ಆಹ್ವಾನ ನೀಡುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ಕೂಡ ಪಿಂಕ್ ಟೆಸ್ಟ್ ಪಂದ್ಯಕ್ಕೆ ಸ್ತನ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮೆಕ್‍ಗ್ರಾತ್ ಫೌಂಡೇಶನ್‍ಗೆ ಆಹ್ವಾನ ನೀಡಿತ್ತು. ಗಂಗೂಲಿ ಅವರು ಕೂಡ ಈಡನ್ ಗಾರ್ಡನ್ಸ್ ಡೇ-ನೈಟ್ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • ಹುಟ್ಟು ಹಬ್ಬದಂದೇ ಟಿ-20ಯಲ್ಲಿ ಮೊದಲ ಶತಕ ಸಿಡಿಸಿದ ವಾರ್ನರ್

    ಹುಟ್ಟು ಹಬ್ಬದಂದೇ ಟಿ-20ಯಲ್ಲಿ ಮೊದಲ ಶತಕ ಸಿಡಿಸಿದ ವಾರ್ನರ್

    ಸಿಡ್ನಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ತಮ್ಮ ಹುಟ್ಟು ಹಬ್ಬದಂದೇ ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಮೊದಲ ಶತಕ ಸಿಡಿಸಿದ್ದಾರೆ.

    ಅಡಿಲೇಡ್‍ನಲ್ಲಿ ಶ್ರೀಲಂಕಾ ವಿರುದ್ಧ ಭಾನುವಾರ ನಡೆದ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭರ್ಜರಿ ಮಿಂಚಿದ್ದಾರೆ. ವಾರ್ನರ್ ಶ್ರೀಲಂಕಾ ವಿರುದ್ಧದ ಮೂರು ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಅಜೇಯ 100 ರನ್ ಗಳಿಸಿದರು. ಇನ್ನಿಂಗ್ಸ್ 56 ಎಸೆತಗಳನ್ನು ಎದುರಿಸಿದ ವಾರ್ನರ್ ಔಟಾಗದೆ 10 ಬೌಂಡರಿ, ನಾಲ್ಕು ಸಿಕ್ಸರ್ ಸೇರಿ 100 ಸಿಡಿಸಿದರು. ಇದನ್ನೂ ಓದಿ: ಟಿ-20 ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಲಂಕಾ ಬೌಲರ್

    ಬಾಲ್ ಟ್ಯಾಂಪರಿಂಗ್‍ನಿಂದ ನಿಷೇಧಕ್ಕೆ ಗುರಿಯಾಗಿದ್ದ ವಾರ್ನರ್ 20 ತಿಂಗಳ ನಂತರ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟಿ-20 ಪಂದ್ಯ ಆಡಿದರು. ಮೊದಲ ಪಂದ್ಯದಲ್ಲೇ ಸ್ಫೋಟಕ ಬ್ಯಾಟಿಂಗ್ ಮಾಡಿ, ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. 2018ರ ಫೆಬ್ರವರಿ 21ರಂದು ನಡೆದ ಹಿಂದಿನ ಪಂದ್ಯದಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಅಂತರರಾಷ್ಟ್ರೀಯ ಟಿ-20 ಯಲ್ಲಿ ಇದು ವಾರ್ನರ್ ಅವರ ಮೊದಲ ಶತಕ. ಪ್ರಾಸಂಗಿಕವಾಗಿ ವಾರ್ನರ್ ತಮ್ಮ 33ನೇ ಹುಟ್ಟುಹಬ್ಬದಂದೆ ತಮ್ಮ ಮೊದಲ ಶತಕ ಸಿಡಿಸಿದರು. ಇದನ್ನೂ ಓದಿ: ಹಜಾರೆ ಟ್ರೋಫಿಯಲ್ಲಿ ಆರ್.ಅಶ್ವಿನ್ ಎಡವಟ್ಟು- ಮ್ಯಾಚ್ ರೆಫ್ರಿಯಿಂದ ದಂಡ

    ವಾರ್ನರ್ ಅವರ ಶತಕದ ಸಹಾಯದಿಂದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್‍ವೆಲ್ 28 ಎಸೆತಗಳಲ್ಲಿ 62 ರನ್ ಮತ್ತು ನಾಯಕ ಆರನ್ ಫಿಂಚ್ 36 ಎಸೆತಗಳಲ್ಲಿ 64 ರನ್ ಗಳಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಶ್ರೀಲಂಕಾ ತಂಡವು 20 ಓವರ್‍ಗಳಲ್ಲಿ ಒಂಬತ್ತು ವಿಕೆಟ್‍ಗೆ 99 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ದಾಸುನ್ ಸನಾಕಾ 17 ರನ್ ಮತ್ತು ಕುಶಾಲ್ ಪೆರೆರಾ 16 ರನ್ ಗಳಿಸಿದರು. ಲೆಗ್ ಸ್ಪಿನ್ನರ್ ಆಡಮ್ ಜಂಪಾ ಆಸ್ಟ್ರೇಲಿಯಾ ಪರ ಮೂರು ವಿಕೆಟ್ ಪಡೆದರು.

    ಆಸ್ಟ್ರೇಲಿಯಾ ಪರ ಟಿ-20 ಯಲ್ಲಿ ಶತಕ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಡೇವಿಡ್ ವಾರ್ನರ್ ಪಾತ್ರರಾದರು. ಇದಕ್ಕೂ ಮೊದಲು, ಗ್ಲೆನ್ ಮ್ಯಾಕ್ಸ್‌ವೆಲ್ 3 ಶತಕಗಳು, ಆರನ್ ಫಿಂಚ್ 2 ಶತಕಗಳು ಮತ್ತು ಶೇನ್ ವ್ಯಾಟ್ಸನ್ ಒಂದು ಶತಕ ಸಿಡಿಸಿದ್ದಾರೆ. ಫಿಂಚ್ ಜೊತೆ ಪವರ್‌ಪ್ಲೇನಲ್ಲಿ ವಾರ್ನರ್ 57 ರನ್ ಗಳಿಸಿದರು. ಇಬ್ಬರೂ ಮೊದಲ ವಿಕೆಟ್‍ಗೆ 122 ರನ್‍ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದರ ನಂತರ ಮ್ಯಾಕ್ಸ್‍ವೆಲ್ ಮತ್ತು ವಾರ್ನರ್ ಎರಡನೇ ವಿಕೆಟ್‍ಗೆ 107 ರನ್‍ಗಳ ಜೊತೆಯಾಟ ಆಡಿದರು.

    ವಾರ್ನರ್ ಕಳೆದ ವರ್ಷ ಮಾರ್ಚ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರಿಂಗ್‍ನಲ್ಲಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ವಾರ್ನರ್ ಹಾಗೂ ಸ್ಟೀವ್ ಸ್ಮಿತ್‍ಗೆ ಒಂದು ವರ್ಷ ಹಾಗೂ ಕ್ಯಾಮರೂನ್ ಬೆನ್‍ಕ್ರಾಫ್ಟ್ ಮೇಲೆ 10 ತಿಂಗಳ ನಿಷೇಧ ಹೇರಲಾಗಿತ್ತು. ಜೊತೆಗೆ ಬೆನ್‍ಕ್ರಾಫ್ಟ್ ಗೆ ಶಿಕ್ಷೆ ವಿಧಿಸಲಾಗಿತ್ತು. ವಾರ್ನರ್ 2019ರ ವಿಶ್ವಕಪ್ ಟೂರ್ನಿ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಮರಳಿದರು. ವಿಶ್ವಕಪ್ ಟೂರ್ನಿಯಲ್ಲಿ ವಾರ್ನರ್ 647 ರನ್ ದಾಖಲಿಸಿದ್ದರು. ಅದರ ನಂತರ ಅವರು ಆಶಸ್ ಸರಣಿಯಲ್ಲಿ ಫ್ಲಾಪ್ ಆಗಿದ್ದರು. ಐದು ಪಂದ್ಯಗಳಲ್ಲಿ ಕೇವಲ 95 ರನ್ ಗಳಿಸಿದ್ದರು.

  • ಟಿ-20 ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಲಂಕಾ ಬೌಲರ್

    ಟಿ-20 ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಲಂಕಾ ಬೌಲರ್

    ಸಿಡ್ನಿ: ಶ್ರೀಲಂಕಾದ ವೇಗದ ಬೌಲರ್ ಕಸುನ್ ರಾಜಿತಾ ಅವರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅತಿ ಹೆಚ್ಚು ರನ್ ನೀಡುವ ಮೂಲಕ ಟಿ-20 ಕ್ರಿಕೆಟ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ಬೌಲರ್ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.

    ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಡೇವಿಡ್ ವಾರ್ನರ್ ಅವರ ಶತಕದ ಸಹಾಯದಿಂದ ಒಟ್ಟು 233 ರನ್ ಗಳಿಸಿತು. ಈ ಇನ್ನಿಂಗ್ಸ್ ನಲ್ಲಿ ಲಂಕಾ ಬೌಲರ್ ಗಳ ಬೆವರಿಳಿಸಿದ ಆಸ್ಟ್ರೇಲಿಯಾ ದಾಂಡಿಗರು, ಕಸುನ್ ರಾಜಿತಾ ಅವರಿಗೆ ಒಟ್ಟು 4 ಓವರ್ ಗಳಲ್ಲಿ ಬರೋಬ್ಬರಿ 75 ರನ್ ಚಚ್ಚಿದರು.

    ಕಸುನ್ ರಾಜಿತಾ ಅವರು ಮಾಡಿದ ನಾಲ್ಕು ಓವರ್ ಗಳನ್ನು ಸರಿಯಾಗಿ ಉಪಯೋಗಿಸಿಕೊಂಡ ಆಸ್ಟ್ರೇಲಿಯಾ ಬ್ಯಾಟ್ಸ್ ಮ್ಯಾನ್‍ಗಳು, ರಾಜಿತಾ ಅವರು ಎಸೆದ 24 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಸಮೇತ ಒಟ್ಟು 75 ರನ್ ಬಾರಿಸಿದರು. ಇದಕ್ಕು ಮುನ್ನಾ ಟರ್ಕಿ ಬೌಲರ್ ತುನಾಹನ್ ತಹರ್ ಅವರು ಒಂದು ಟಿ-20 ಪಂದ್ಯದಲ್ಲಿ 70 ರನ್ ನೀಡಿ ದುಬಾರಿ ಬೌಲರ್ ಆಗಿದ್ದರು. ಆದರೆ ಈಗ ಈ ದಾಖಲೆಯನ್ನು ರಾಜಿತಾ ಅವರು ತಳ್ಳಿ ಹಾಕಿದ್ದಾರೆ.

    ಇಂದು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ 56 ಎಸೆತದಲ್ಲಿ 100 (10 ಬೌಂಡರಿ 4 ಸಿಕ್ಸರ್ ), ನಾಯಕ ಆರೋನ್ ಪಿಂಚ್ 36 ಎಸೆತದಲ್ಲಿ 66 (8 ಬೌಂಡರಿ, 3 ಸಿಕ್ಸರ್) ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ 28 ಎಸೆತದಲ್ಲಿ 62 (7 ಬೌಂಡರಿ, 3 ಸಿಕ್ಸರ್) ಸಹಾಯದಿಂದ ಎರಡು ವಿಕೆಟ್ ನಷ್ಟಕ್ಕೆ 233 ರನ್‍ಗಳ ಬೃಹತ್ ಮೊತ್ತ ಕಲೆಹಾಕಿತು.

    ಈ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲರಾದ ಲಂಕಾ ಬ್ಯಾಟ್ಸ್ ಮ್ಯಾನ್‍ಗಳು ಆಡಮ್ ಜಂಪಾ ಮತ್ತು ಮಿಚಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 99 ರನ್‍ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ 134 ರನ್‍ಗಳ ಬೃಹತ್ ರನ್‍ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಶತಕ ಸಿಡಿಸಿ ಮಿಂಚಿದ ಡೇವಿಡ್ ವಾರ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

  • ಮೈದಾನದಲ್ಲಿ ಡ್ರಿಂಕ್ಸ್ ಬಾಯ್ ಆಗಿ ಕೆಲಸ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ

    ಮೈದಾನದಲ್ಲಿ ಡ್ರಿಂಕ್ಸ್ ಬಾಯ್ ಆಗಿ ಕೆಲಸ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ

    ಕ್ಯಾನ್ಬೆರಾ: ಆಸ್ಟ್ರೇಲಿಯಾದ ಓವಲ್ ಕ್ರಿಕೆಟ್ ಮೈದಾನದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಅಭ್ಯಾಸದ ಪಂದ್ಯದ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಕ್ರಿಕೆಟ್ ಆಟಗಾರರಿಗೆ ನೀರು ಹಾಗೂ ಪಾನೀಯ ವಿತರಿಸುವ ಮೂಲಕ ಡ್ರಿಂಕ್ಸ್ ಬಾಯ್ ಆಗಿ ಕೆಲಸ ಮಾಡಿದ್ದಾರೆ.

    ಆಸ್ಟ್ರೇಲಿಯಾ ಪ್ರಧಾನಿಗಳ ಇಲೆವನ್ ತಂಡ ಹಾಗೂ ಶ್ರೀಲಂಕಾ ನಡುವಿನ ಅಭ್ಯಾಸದ ಪಂದ್ಯದ ಸಂದರ್ಭದಲ್ಲಿ ಡ್ರಿಂಕ್ಸ್ ಬಾಯ್ ಆಗಿ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಕಾರ್ಯನಿರ್ವಹಿಸಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

    ಮಾರಿಸನ್ ಪ್ರಧಾನಿಯಾಗಿದ್ದರೂ ಸಹ ತನ್ನ ತಂಡದ ಆಟಗಾರರಿಗೆ ನೀರು ಹಾಗೂ ಪಾನೀಯವನ್ನು ಹೊತ್ತೊಯ್ದಿದ್ದು ಕಂಡು ಬಂತು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ಪ್ರಧಾನಿಯನ್ನು ನೆಟ್ಟಿಗರು ಕೊಂಡಾಡಿದ್ದಾರೆ.

    ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‍ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ ಕೇವಲ 130 ರನ್ ಗಳಿಸಲು ಶಕ್ತವಾಯಿತು. ಆರಂಭಿಕ ಆಟಗಾರ ಹ್ಯಾರಿ ನೀಲ್ಸನ್ 50 ಎಸೆತಗಳಲ್ಲಿ 79 ರನ್ ಗಳಿಸಿದರು. ಆದರೆ ವಿಕೆಟ್‍ಗಳು ಬೇಗನೇ ಉರುಳಿದ್ದರಿಂದ 9 ವಿಕೆಟ್‍ಗಳನ್ನು ಕಳೆದುಕೊಂಡಿತು. ಕೊನೆಗೆ 19.5 ಓವರ್ ನಲ್ಲಿ 132 ರನ್ ಗಳಿಸಿ ಗೆಲುವು ದಾಖಲಿಸಿತು.