Tag: australia

  • ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳ ಸಂಹಾರಕ್ಕೆ ಸಿದ್ಧತೆ

    ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳ ಸಂಹಾರಕ್ಕೆ ಸಿದ್ಧತೆ

    -ನೀರು ಉಳಿಸಲು ಸರ್ಕಾರ ಚಿಂತನೆ

    ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನ ಕಾರಣದಿಂದ ಅಪಾರ ಪರಿಸರ ನಾಶವಾಗಿದ್ದು, ಸದ್ಯ ಆಸ್ಟ್ರೇಲಿಯಾದ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

    ಐದು ದಿನಗಳ ಅವಧಿಯಲ್ಲಿ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದು, ಬುಧವಾರದಿಂದಲೇ ಈ ಕಾರ್ಯಾಚರಣೆ ಬೇಕಾದ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಕಾಡ್ಗಿಚ್ಚಿನ ಪ್ರಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಂಟೆಗಳು ಬೆಂಕಿಯ ತೀವ್ರತೆಗೆ ಹೆಚ್ಚಿನ ಪ್ರಮಾಣದ ನೀರನ್ನು ಸೇವನೆ ಮಾಡುತ್ತಿರುವುದೇ ಅವುಗಳನ್ನು ಹತ್ಯೆ ಮಾಡಲು ಕಾರಣ ಎನ್ನಲಾಗಿದೆ. ಒಂಟೆಗಳನ್ನು ಹತ್ಯೆ ಮಾಡಲು ಅಲ್ಲಿನ ಸರ್ಕಾರ ಹೆಲಿಕಾಪ್ಟರ್ ಗಳನ್ನು ಒದಗಿಸುತ್ತಿದೆ.

    ಈ ಕುರಿತು ಮಾತನಾಡಿರುವ ಮಾರಿಟಾ ಬೇಕರ್ ಎಂಬ ಅಧಿಕಾರಿ, ಕಾಡ್ಗಿಚ್ಚಿನ ಪರಿಣಾಮದಿಂದ ಇಡೀ ದೇಶವೇ ಸುಟ್ಟು ಹೋಗಿದೆ. ಅಲ್ಲದೇ ಬೆಂಕಿಯಿಂದ ಬಿಸಿಯ ಪ್ರಮಾಣ ಹೆಚ್ಚಾಗಿದ್ದು, ಕನಿಷ್ಠ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಕೆ ಮಾಡಲು ಪರದಾಡುತ್ತಿದ್ದೇವೆ. ಇದೇ ವೇಳೆ ಒಂಟೆಗಳು ವಸತಿ ಪ್ರದೇಶಗಳಿಗೆ ನುಗ್ಗಿ ಸಂಗ್ರಹಿಸಿದ್ದ ನೀರನ್ನು ಕುಡಿಯುತ್ತಿವೆ. ಅಲ್ಲದೇ ಈ ವೇಳೆ ಒಂಟೆಗಳ ವ್ಯರ್ಥದಿಂದಲೂ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಸಮಸ್ಯೆಯನ್ನು ವಿವರಿಸಿದ್ದಾರೆ.

    ಕಳೆದ ನವೆಂಬರ್ ನಲ್ಲಿ ಆರಂಭವಾದ ಕಾಡ್ಗಿಚ್ಚು ಆಸ್ಟ್ರೇಲಿಯಾ ಜನರ ಪರಿಸ್ಥಿತಿಯನ್ನೇ ಬದಲಿಸಿದೆ. ಇದರಿಂದ ದೇಶದ ಜನರ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಆದ್ದರಿಂದಲೇ ಕಾನೂನಿನ ನಿಯಮಗಳ ಅನ್ವಯವೇ ಒಂಟೆಗಳ ಹತ್ಯೆಗೆ ಅನುಮತಿ ಪಡೆಯಲಾಗಿದೆ. ಆಸ್ಟ್ರೇಲಿಯಾದಲ್ಲಿ ಉಂಟಾದ ಕಾಡ್ಗಿಚ್ಚಿನಲ್ಲಿ ಇದುವರೆಗೂ 480 ಮಿಲಿಯನ್ ಪ್ರಾನಿಗಳು ಸಾವನ್ನಪ್ಪಿರುವುದಾಗಿ ಸರ್ಕಾರ ಅಂದಾಜು ಮಾಹಿತಿ ನೀಡಿದೆ.

    ಆಸ್ಟ್ರೇಲಿಯಾದ ಕಾಡ್ಗಿಚ್ಚು ವಿಶ್ವವನ್ನೇ ಆತಂಕಗೊಳಿಸಿದೆ. ಕಾಡ್ಗಿಚ್ಚಿನ ಪರಿಣಾಮ ಹಲವು ಪ್ರಾಣಿಗಳು ಬೆಂಕಿಗೆ ಸುಲಿಕಿ ಸಾವನ್ನಪ್ಪಿದ್ದರೆ ಒಂಟೆಗಳಿಗೆ ಉಸಿರುಗಟ್ಟಿದ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲೇ ಒಂಟೆಗಳು ನೀರು ಕುಡಿಯುತ್ತದೆ, ಸದ್ಯದ ಪರಿಸ್ಥಿತಿಯಲ್ಲಿ ಒಂಟೆಗಳು ಮತ್ತಷ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತಿದೆ. ಇದು ಕಾಡಂಚಿನ ಭಾಗದಲ್ಲಿ ಇರುವ ಜನರಿಗೆ ಮತ್ತಷ್ಟು ಸಮಸ್ಯೆ ಉಂಟು ಮಾಡಿದೆ. ಆದರೆ ಸರ್ಕಾರದ ಈ ಕ್ರಮಕ್ಕೆ ವಿಶ್ವದ ಪ್ರಾಣಿ ಪ್ರಿಯ ಸಂಘಗಳಿಂದ ಆಕ್ಷೇಪ ವ್ಯಕ್ತವಾಗುತ್ತಿದ್ದು, ಈ ಸಮಸ್ಯೆಗೆ ಬೇರೊಂದು ಉಪಾಯ ಕಂಡು ಹಿಡಿಯುವಂತೆ ಸಲಹೆ ನೀಡಿದ್ದಾರೆ.

  • 2020ಕ್ಕೆ ಸ್ವಾಗತ ಕೋರಿದ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಜನತೆ

    2020ಕ್ಕೆ ಸ್ವಾಗತ ಕೋರಿದ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ ಜನತೆ

    ಬೆಂಗಳೂರು: ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ಜನರು ಈಗಾಗಲೇ 2020ಕ್ಕೆ ಸ್ವಾಗತ ಕೋರಿದ್ದಾರೆ. ಈ ದೇಶಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಭರ್ಜರಿಯಾಗಿ ನಡೆದಿದೆ.

    ನ್ಯೂಜಿಲ್ಯಾಂಡ್‍ನ ಆಕ್ಲೆಂಡ್, ವೆಲ್ಲಿಂಗ್ಟನ್, ಕ್ರೈಸ್ಟ್‌ಚರ್ಚ್, ಹ್ಯಾಮಿಲ್ಟನ್, ಟೌರಂಗಾ, ನೇಪಿಯರ್, ಡುನೆಡಿನ್ ಸೇರಿದಂತೆ ವಿವಿಧ ನಗರಗಳು ಸೇರಿದಂತೆ ಪ್ರವಾಸಿ ತಾಣದಲ್ಲಿ ಪಟಾಕಿ ಭಾರೀ ಸದ್ದು ಮಾಡುತ್ತಿವೆ. ಅಷ್ಟೇ ಅಲ್ಲದೆ ಬಣ್ಣ ಬಣ್ಣದ ದೀಪಗಳು ನಗರದಲ್ಲಿ ಬೆಳಕು ಹರಡಿದ್ದರೆ, ವಿವಿಧ ಸ್ಥಳಗಳಲ್ಲಿ ಜನರು ಡಿಜೆ ಸದ್ದಿಗೆ ಹೆಜ್ಜೆ ಹಾಕಿದ್ದಾರೆ.

    ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬರ್ನ್, ಬ್ರಿಸ್ಬೇನ್, ಪರ್ತ್, ಅಡಿಲೇಡ್, ನ್ಯೂಕ್ಯಾಸಲ್, ಕ್ಯಾನ್ಬೆರಾದಲ್ಲಿ ಹೊಸ ವರ್ಷವನ್ನು ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಸಿಡ್ನಿ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿ ಆಕಾಶದಲ್ಲಿ ಪಟಾಕಿ ಸಿಡಿ ಹೊಸ ವರ್ಷಾಚರಣೆಯನ್ನು ಸಂಭ್ರಮಿಸಿದ್ದಾರೆ.

    ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಬೆನ್ನಲ್ಲೇ ಜಪಾನ್, ದಕ್ಷಿಣ ಕೊರಿಯಾ, ಚೀನಾ, ಫಿಲಿಪೈನ್ಸ್, ಇಂಡೋನೇಷ್ಯಾ ಹಾಗೂ ಥೈಲ್ಯಾಂಡ್ 2020 ಅನ್ನು ಸ್ವಾಗತಿಸಲಿವೆ. ಬಳಿಕ ಬಾಂಗ್ಲಾದೇಶ, ನೇಪಾಳ, ಭಾರತ, ಶ್ರೀಲಂಕಾ, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಇರಾನ್ ಹೊಸ ವರ್ಷವನ್ನು ಬರಮಾಡಿಕೊಳ್ಳಲಿವೆ.

    ಜರ್ಮನಿ, ಯುನೈಟೆಡ್ ಕಿಂಗ್‍ಡಮ್, ಕೆನಡಾ ಬಳಿಕ ಅಮೆರಿಕ ಹೊಸ ವರ್ಷಾಚರಣೆ ಮಾಡಲಿದೆ. ಭಾರತದಲ್ಲಿ ವರ್ಷ ಆಚರಣೆಗೆ ಭಾರೀ ಸಿದ್ಧತೆ ನಡೆದಿದೆ.

  • ಐಸಿಸಿಗೆ ‘ಬಿಗ್ ತ್ರೀ’ ಶಾಕ್ – ಬಿಸಿಸಿಐನಿಂದ ಸೂಪರ್ ಸೀರಿಸ್ ಪ್ರಸ್ತಾಪ? ಕಿತ್ತಾಟದ ಅಸಲಿ ಕಥೆ ಇಲ್ಲಿದೆ

    ಐಸಿಸಿಗೆ ‘ಬಿಗ್ ತ್ರೀ’ ಶಾಕ್ – ಬಿಸಿಸಿಐನಿಂದ ಸೂಪರ್ ಸೀರಿಸ್ ಪ್ರಸ್ತಾಪ? ಕಿತ್ತಾಟದ ಅಸಲಿ ಕಥೆ ಇಲ್ಲಿದೆ

    ಮುಂಬೈ: ಬಿಸಿಸಿಐ ಮುಂಬರುವ ವರ್ಷದಲ್ಲಿ ಏಕದಿನ ಸೂಪರ್ ಸೀರಿಸ್ ನಡೆಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇಂಗ್ಲೆಂಡ್, ಆಸ್ಟ್ರೇಲಿಯಾ ಸೇರಿದಂತೆ 4 ದೇಶಗಳ ನಡುವೆ ಸೂಪರ್ ಸೀರಿಸ್ ಕ್ರಿಕೆಟ್ ಟೂರ್ನಿಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಮೂಲಕ ಕ್ರಿಕೆಟ್ ಜಗತ್ತಿನ ‘ಬಿಗ್ ತ್ರೀ’ ಮಂಡಳಿಗಳು ಐಸಿಸಿ ವಿರುದ್ಧವೇ ತೊಡೆ ತಟ್ಟಲು ಮುಂದಾಗುತ್ತಿದೆ.

    ಐಸಿಸಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಾರ್ಷಿಕ ಒಂದು ಸರಣಿಯನ್ನು ವಿಶ್ವಕಪ್ ಮಾದರಿಯಲ್ಲಿ ನಡೆಸಲು ಸಿದ್ಧತೆ ನಡೆಸಿತ್ತು. ಆ ಮೂಲಕ ವಾರ್ಷಿಕವಾಗಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಐಸಿಸಿ ಚಿಂತನೆ ನಡೆಸಿತ್ತು. ಆದರೆ ಬಿಸಿಸಿಐ ಈ ಪ್ರಸ್ತಾಪಕ್ಕೆ ವಿರೋಧವಾಗಿ 4 ದೇಶಗಳ ನಡುವೆ ಸೂಪರ್ ಸೀರಿಸ್ ನಡೆಸಲು ಮುಂದಾಗುತ್ತಿದೆ.

    ಯಾಕೆ ಈ ಪ್ರಸ್ತಾಪ?
    ಆದಾಯ ಹಂಚಿಕೆ ವಿಚಾರದಲ್ಲಿ ಬಿಸಿಸಿಐ ಮತ್ತು ಐಸಿಸಿ ನಡುವೆ ಕಿತ್ತಾಟಗಳು ನಡೆಯುತ್ತಿದ್ದು ಬಿಸಿಸಿಐ ಸೇರಿದಂತೆ ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳು ಐಸಿಸಿಗೆ ಹೆಚ್ಚು ಆದಾಯ ತಂದುಕೊಡುವ ದೇಶಗಳಾಗಿವೆ. ಈ ಹಿನ್ನೆಲೆಯಲ್ಲಿ ಐಸಿಸಿಯ ಆದಾಯದಲ್ಲಿ ತಮಗೆ ಹೆಚ್ಚಿನ ಪಾಲನ್ನು ನೀಡುವಂತೆ ಈ ಹಿಂದೆಯೇ ಈ ಮಂಡಳಿಗಳು ಪ್ರಸ್ತಾಪ ಮಾಡಿದ್ದವು. ಬಿಗ್ ತ್ರೀ ಕ್ರಿಕೆಟ್ ರಾಷ್ಟ್ರಗಳ ಈ ಬೇಡಿಕೆಯನ್ನು ನಿರಾಕರಿಸಿದ್ದ ಐಸಿಸಿ ಕ್ರಿಕೆಟ್ ಬೆಳವಣಿಗೆ ಕಾಣುತ್ತಿರುವ ಇತರೇ ರಾಷ್ಟ್ರಗಳಿಗೂ ಕೂಡ ಆರ್ಥಿಕವಾಗಿ ಬೆಂಬಲ ನೀಡಬೇಕಾದ ಕಾರಣ ಹೆಚ್ಚಿನ ಪಾಲನ್ನು ನೀಡಲಾಗುವುದಿಲ್ಲ ಎಂದಿತ್ತು.

    ಐಸಿಸಿ ತನ್ನ ಹೆಚ್ಚಿನ ಆದಾಯವನ್ನು ಕ್ರಿಕೆಟ್ ಸರಣಿಯ ಟೆಲಿವಿಷನ್ ಪ್ರಸಾರ ಹಕ್ಕುಗಳ ಮಾರಾಟದ ಮೂಲಕ ಪಡೆಯುತ್ತದೆ. ಉದಾಹರಣೆ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳ ಪ್ರಸಾರ ಹಕ್ಕುಗಳ ಮಾರಾಟದಿಂದ ಅತಿ ಹೆಚ್ಚು ಆದಾಯವನ್ನು ಪಡೆಯುತ್ತದೆ. ಈ ಹಿನ್ನೆಲೆಯಲ್ಲಿ ಆದಾಯ ಹೆಚ್ಚಿಸುವ ಉದ್ದೇಶದಿಂದ ಐಸಿಸಿ ಪ್ರತಿವರ್ಷ ವಿಶ್ವಕಪ್ ಮಾದರಿಯ ಟೂರ್ನಿಯನ್ನು ಆಯೋಜಿಸಲು ಸಿದ್ಧತೆ ನಡೆಸಿತ್ತು.

    ಐಸಿಸಿಯ ಈ ನಿರ್ಧಾರಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಬಿಸಿಸಿಐ ಸದ್ಯ ಸೂಪರ್ ಸೀರಿಸ್ ಆಯೋಜನೆ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಈ ಟೂರ್ನಿಯಲ್ಲಿ ಆಡಲು ಇಂಗ್ಲೆಂಡ್ ಈಗಾಗಲೇ ಸಮ್ಮತಿ ಸೂಚಿಸಿದೆ. ಇತ್ತ ಆಸೀಸ್ ಕೂಡ ಒಲವು ತೋರಿದ್ದು, ಆ ಮೂಲಕ ‘ಬಿಗ್ ತ್ರೀ’ ಎಂದೇ ಖ್ಯಾತಿ ಪಡೆದಿರುವ ಈ ಮೂರು ಸಂಸ್ಥೆಗಳು ಐಸಿಸಿ ವಿರುದ್ಧವೇ ಒತ್ತಡವನ್ನು ಹಾಕುತ್ತಿವೆ.

    ಐಸಿಸಿಯ ಈಗಿನ ನಿಯಮಗಳ ಅನ್ವಯ ಯಾವುದೇ ಕ್ರಿಕೆಟ್ ಸಂಸ್ಥೆ ದ್ವಿಪಕ್ಷೀಯ ಟೂರ್ನಿಗಳನ್ನು ಆಯೋಜಿಸಲು ಮಾತ್ರ ಅನುಮತಿಯನ್ನು ಹೊಂದಿವೆ. ಈಗ ನಿಯಮಗಳ ಬದಲಾವಣೆಗೂ ಐಸಿಸಿ ಮೇಲೆ ಒತ್ತಡ ಹೆಚ್ಚಾಗಿದೆ. ಇದರೊಂದಿಗೆ ಐಸಿಸಿಯ ವಾರ್ಷಿಕ ಕ್ರಿಕೆಟ್ ಟೂರ್ನಿಯ ಪ್ಲಾನ್‍ಗೆ ಅಪಸ್ವರವೂ ಕೇಳಿ ಬಂದಿದ್ದು, ಐಸಿಸಿ ಇಂತಹ ಟೂರ್ನಿ ನಡೆಸುವುದರಿಂದ ಆಟಗಾರರ ಮೇಲಿನ ಒತ್ತಡ ಹೆಚ್ಚಾಗಲಿದೆ. ಅಲ್ಲದೇ ಆಟಗಾರರಿಗೆ ವಿಶ್ರಾಂತಿಯನ್ನು ನೀಡಲು ಕೂಡ ಸಮಸ್ಯೆ ಎದುರಾಗುತ್ತದೆ ಎನ್ನುವುದು ಕ್ರಿಕೆಟ್ ಮಂಡಳಿಗಳ ಅಭಿಪ್ರಾಯವಾಗಿದೆ. ಬಿಸಿಸಿಐ ಅಂದುಕೊಂಡಂತೆ ನಡೆದರೆ 2021 ರಲ್ಲಿ ಸೂಪರ್ ಸೀರಿಸ್ ನಡೆಯಲಿದ್ದು, ಭಾರತದಲ್ಲೇ ಮೊದಲ ಟೂರ್ನಿ ನಡೆಯಲಿದೆ.

    ಬಿಸಿಸಿಐ, ಐಸಿಸಿ ತಿಕ್ಕಾಟ ಯಾಕೆ?
    ಬಿಸಿಸಿಐ ಹಾಗೂ ಐಸಿಸಿ ನಡುವಿನ ತಿಕ್ಕಾಟ ಹಿಂದಿನಿಂದಲೇ ಜೋರಾಗಿದ್ದು, ಈ ಹಿಂದೆ ಆದಾಯದ ಹೆಚ್ಚುವರಿ ಪಾಲನ್ನು ನೀಡದಿದ್ದರೆ ಐಸಿಸಿ ಮಂಡಳಿಯಿಂದಲೇ ಹೊರ ಬರುವ ಎಚ್ಚರಿಕೆಯನ್ನು ನೀಡಿತ್ತು. ಈ ಸೂಪರ್ ಸೀರಿಸ್ ಹಿಂದಿನ ಪ್ರಮುಖ ವ್ಯಕ್ತಿ ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಆಗಿದ್ದು, ಸದ್ಯ ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಆಯ್ಕೆಯಾಗಲು ಬೆಂಬಲವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗಂಗೂಲಿ, ಶ್ರೀನಿವಾಸನ್ ಅವರ ಪ್ರಸ್ತಾಪವನ್ನು ಚಾಲ್ತಿಗೆ ತರಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಹಾಗೂ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ನಡುವೆ ಹಲವು ವರ್ಷಗಳಿಂದ ಮನಸ್ತಾಪವಿದೆ.

    ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾದ ಆರಂಭದಲ್ಲೇ ಐಸಿಸಿ ಆದಾಯ ಹಂಚಿಕೆ ವಿರುದ್ಧ ಅಪಸ್ವರ ಎತ್ತಿದ್ದರು. ಅಲ್ಲದೇ ಬಿಸಿಸಿಐಗೆ ಹೆಚ್ಚಿನ ಆದಾಯವನ್ನು ತರುವುದು ತಮ್ಮ ಪ್ರಮುಖ ಗುರಿ ಎಂದಿದ್ದರು. ಈ ಹಿಂದೆ ಅಧಿಕಾರದಲ್ಲಿದ್ದ ಶ್ರೀನಿವಾಸನ್ ಅವರು ಕೂಡ ಮಂಡಳಿಗೆ ಹೆಚ್ಚಿನ ಆರ್ಥಿಕತೆಯನ್ನು ತರುವ ನಿಟ್ಟಿನಲ್ಲಿ ಗಮನ ಹರಿಸಿದ್ದರು. ಬಿಸಿಸಿಐ ವಿಶ್ವ ಕ್ರಿಕೆಟ್‍ಗೆ ಸೇರುವ ಆದಾಯ ಶೇ.75 ರಿಂದ 80ರಷ್ಟನ್ನು ನೀಡುತ್ತಿದೆ.

    ವಿಶೇಷ ಎಂದರೆ ಹಲವು ಕ್ರಿಕೆಟ್ ಸಂಸ್ಥೆ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸತತ 3 ವರ್ಷಗಳಿಂದ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ನಷ್ಟವನ್ನು ಎದುರಿಸುತ್ತಿದೆ. ಅಲ್ಲದೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೂಡ ಕಳೆದ ವರ್ಷ ಆರ್ಥಿಕ ಸಮಸ್ಯೆಗೆ ಸಿಲುಕಿ ಆಟಗಾರರ ವೇತನವನ್ನು ಪಾವತಿ ಮಾಡಲು ಸಮಸ್ಯೆ ಎದುರಿಸಿತ್ತು. ಐರ್ಲೆಂಡ್ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದ ಆಯೋಜನೆಯ ಅವಕಾಶವನ್ನು ಕೈ ಚೆಲ್ಲಿತ್ತು. ಉಳಿದಂತೆ ಪಾಕ್ ಕ್ರಿಕೆಟ್ ಮಂಡಳಿ ಕೂಡ ಆರ್ಥಿಕ ಸಮಸ್ಯೆಯಿಂದ ಒದ್ದಾಡುತ್ತಿದ್ದು, ಅದರ ಭವಿಷ್ಯವೇ ಡೋಲಾಯಮಾನವಾಗಿದೆ.

    ಬಿಸಿಸಿಐ ನಿರ್ಧಾರವೇಕೆ?
    ಈಗಾಗಲೇ ಬಿಸಿಸಿಐ ಅಧ್ಯಕ್ಷರು ಮಂಡಳಿಗೆ ಆರ್ಥಿಕತೆಯನ್ನು ಹೆಚ್ಚಿಸುವತ್ತ ಗಮನ ನೀಡುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಪರ್ ಸೀರೀಸ್ ಆಯೋಜಿಸಿದರೆ ಟೂರ್ನಿಯ ಪ್ರಸಾರ ಹಕ್ಕುಗಳು ಸಹಜವಾಗಿಯೇ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿ ಆದಾಯ ಹೆಚ್ಚಳವಾಗಲಿದೆ. ಅಲ್ಲದೇ ಸೂಪರ್ ಸೀರೀಸ್ ಟೂರ್ನಿ ನಡೆಯುವುದರಿಂದ ಐಸಿಸಿಯ ಮಿನಿ ವಿಶ್ವಕಪ್ ಟೂರ್ನಿಯನ್ನು ತಪ್ಪಿಸಿಬಹುದಾಗಿದೆ.

  • ಬುಮ್ರಾ, ಧವನ್ ಬ್ಯಾಕ್, ರೋಹಿತ್‍ಗೆ ವಿಶ್ರಾಂತಿ – ಲಂಕಾ, ಆಸಿಸ್ ಸರಣಿಗೆ ಭಾರತ ಆಟಗಾರ ಪಟ್ಟಿ ಬಿಡುಗಡೆ

    ಬುಮ್ರಾ, ಧವನ್ ಬ್ಯಾಕ್, ರೋಹಿತ್‍ಗೆ ವಿಶ್ರಾಂತಿ – ಲಂಕಾ, ಆಸಿಸ್ ಸರಣಿಗೆ ಭಾರತ ಆಟಗಾರ ಪಟ್ಟಿ ಬಿಡುಗಡೆ

    ನವದೆಹಲಿ: ಮುಂಬರುವ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟಿ-20 ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಇಂದು ಆಯ್ಕೆ ಮಾಡಿದ್ದು, ಕಳೆದ ನಾಲ್ಕು ತಿಂಗಳಿಂದ ತಂಡದಿಂದ ಹೊರಗಡೆಯಿದ್ದ ಬೌಲರ್ ಜಸ್ಪ್ರಿತ್ ಬುಮ್ರಾ ಅವರು ಭಾರತದ ತಂಡಕ್ಕೆ ವಾಪಸ್ ಆಗಿದ್ದಾರೆ.

    ಬುಮ್ರಾ ಅವರ ಜೊತೆಗೆ ಕಳೆದ ವೆಸ್ಟ್ ಇಂಡೀಸ್ ಸರಣಿಯಲ್ಲಿ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಿದ್ದಿದ್ದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಟಿ-20 ಮತ್ತು ಏಕದಿನ ಎರಡು ತಂಡಗಳಿಗೆ ಮರಳಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಸಿಡಿಸಿರುವ ರೋಹಿತ್ ಶರ್ಮಾ ಅವರಿಗೆ ಶ್ರೀಲಂಕಾ ವಿರುದ್ಧದ ಟಿ-20 ಸರಣಿಗೆ ರೆಸ್ಟ್ ನೀಡಲಾಗಿದೆ. ಇವರ ಜೊತೆಗೆ ವೇಗಿ ಮೊಹಮ್ಮದ್ ಶಮಿ ಅವರಿಗೂ ರೆಸ್ಟ್ ನೀಡಲಾಗಿದೆ.

    ಬೆನ್ನು ನೋವಿನ ಸಮಸ್ಯೆಯಿಂದ ಶಸ್ತ್ರಚಿಕೆತ್ಸೆಗೆ ಒಳಗಾಗಿದ್ದ ಬುಮ್ರಾ ಅವರು ನಾಲ್ಕು ತಿಂಗಳ ನಂತರ ಭಾರತ ತಂಡಕ್ಕೆ ವಪಾಸ್ ಆಗಿದ್ದಾರೆ. ಅವರು ಕಳೆದ ಆಗಸ್ಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಇದಾದ ನಂತರ ವಿಶಾಖಪಟ್ಟಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನೆಟ್‍ನಲ್ಲಿ ಬೌಲಿಂಗ್ ಮಾಡಿ ತಮ್ಮ ಫಿಟ್ನೆಸ್ ಸಾಬೀತು ಮಾಡಿದ್ದರು.

    ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದ ಶಿಖರ್ ಧವನ್ ಅವರು ಮತ್ತೆ ತಂಡಕ್ಕೆ ಮರಳಿದ್ದಾರೆ. ಈ ವರ್ಷ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಭಾರತವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರಿಗೆ ಕೊಂಚ ಬ್ರೇಕ್ ನೀಡಲಾಗಿದ್ದು, ಎಂದಿನಂತೆ ನಾಯಕ ಕೊಹ್ಲಿ ಜನವರಿ 5 ರಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ 3 ಟಿ-20 ಸರಣಿ ಮತ್ತು ಜನವರಿ 14 ರಿಂದ ಆರಂಭವಾಗುವ ಆಸ್ಟ್ರೇಲಿಯಾದ ವಿರುದ್ಧದ 3 ಏಕದಿನ ಸರಣಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ.

    ಎಂಎಸ್‍ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯು ನವದೆಹಲಿಯಲ್ಲಿ ಈ ಎರಡು ಸರಣಿಗೆ ಆಟಗಾರರನ್ನು ಆಯ್ಕೆ ಮಾಡಿದೆ. ಸಭೆಯ ನಂತರ ಮಾತನಾಡಿದ ಎಂಎಸ್‍ಕೆ ಪ್ರಸಾದ್ ರಿಷಭ್ ಪಂತ್ ಅವರಿಗೆ ವಿಕೆಟ್ ಕೀಪಿಂಗ್ ಕೌಶಲ್ಯವನ್ನು ಸುಧಾರಿಸಲು ಒಳ್ಳೆಯ ವಿಕೆಟ್ ಕೀಪಿಂಗ್ ಕೋಚ್ ಅನ್ನು ನೇಮಕ ಮಾಡಲಾಗುತ್ತದೆ. ಅವರು ಕೀಪಿಂಗ್ ಅಲ್ಲಿ ಸ್ವಲ್ಪ ಸುಧಾರಿಸಬೇಕಿದೆ ಹಾಗಾಗಿ ತಜ್ಞ ತರಬೇತುದಾರನನ್ನು ನೇಮಕ ಮಾಡುತ್ತೇವೆ ಎಂದು ತಿಳಿಸಿದರು.

    ಶ್ರೀಲಂಕಾ ಟಿ-20 ಸರಣಿ:
    ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಿವಂ ದುಬೆ, ಯುಜ್ವೇಂದ್ರ ಚಹಲ್, ಕುಲದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಮನೀಶ್ ಪಾಂಡೆ, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್.

    ಆಸ್ಟ್ರೇಲಿಯಾ ಏಕದಿನ ಸರಣಿ:
    ವಿರಾಟ್ ಕೊಹ್ಲಿ (ಕ್ಯಾಪ್ಟನ್), ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಕೇದಾರ್ ಜಾಧವ್, ಶಿವಂ ದುಬೆ, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಹಲ್, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಜಸ್ಪ್ರಿತ್ ಬುಮ್ರಾ.

  • 2 ಡೇ-ನೈಟ್ ಟೆಸ್ಟ್ ಪಂದ್ಯಗಳಿಗೆ ಮನವಿ ಮಾಡಿದ ಆಸೀಸ್

    2 ಡೇ-ನೈಟ್ ಟೆಸ್ಟ್ ಪಂದ್ಯಗಳಿಗೆ ಮನವಿ ಮಾಡಿದ ಆಸೀಸ್

    ಕೋಲ್ಕತ್ತಾ: ಮುಂದಿನ ವರ್ಷ ಟೀಂ ಇಂಡಿಯಾ ತಂಡ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಳ್ಳಲಿದ್ದು, ಈ ವೇಳೆ ಆಡುವ 4 ಟೆಸ್ಟ್ ಪಂದ್ಯಗಳಲ್ಲಿ 2 ಪಂದ್ಯಗಳನ್ನು ಡೇ-ನೈಟ್ ಆಡುವಂತೆ ಆಸೀಸ್ ಕ್ರಿಕೆಟ್ (ಸಿಎ) ಬಿಸಿಸಿಐಗೆ ಮನವಿ ಮಾಡಿದೆ.

    ಸಿಎ ಮುಖ್ಯಸ್ಥರಾಗಿರುವ ಅರ್ಲ್ ಎಡ್ಡಿಂಗ್ಸ್ ತಮ್ಮ ಮನವಿಯನ್ನು ಬಿಸಿಸಿಐ ಮುಂದಿಟ್ಟಿದ್ದು, ಬರುವ ಜನವರಿಯಲ್ಲಿ ಭಾರತ ಆಸೀಸ್ ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಕುರಿತು ಚರ್ಚೆ ನಡೆಸುವ ವೇಳೆ ಮುಂದಿನ ಟೆಸ್ಟ್ ಟೂರ್ನಿಯಲ್ಲಿ ಅಡಿಲೇಡ್ ಹಾಗೂ ಪರ್ಥ್ ಕ್ರೀಡಾಂಗಣದಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯಗಳನ್ನು ಆಡುವ ಕುರಿತು ಅಧಿಕೃತ ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗಿದೆ.

    ಇತ್ತೀಚೆಗಷ್ಟೇ ಟೀಂ ಇಂಡಿಯಾ ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ವಿರುದ್ಧ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಡಿತ್ತು. ಅಲ್ಲದೇ ಪಂದ್ಯದಲ್ಲಿ ಎದುರಾಳಿ ತಂಡವನ್ನು ಸುಲಭವಾಗಿ ಮಣಿಸಿ ಜಯ ಪಡೆದಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ನಾವು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅತಿಥೇಯ ಮಂಡಳಿಯ ಕೋರಿಕೆಯಂತೆ ವ್ಯವಹರಿಸುತ್ತೇವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಆಸೀಸ್ ಕ್ರಿಕೆಟ್ ಮುಖ್ಯಸ್ಥರು 2 ಟೆಸ್ಟ್ ಪಂದ್ಯಗಳನ್ನು ಆಡುವ ಕುರಿತು ಮನವಿ ಮಾಡಲು ಮುಂದಾಗಿದ್ದಾರೆ.

    ಇತ್ತ ಆಸೀಸ್ ಮನವಿಯ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿರುವ ಸೌರವ್ ಗಂಗೂಲಿ, ಇದುವರೆಗೂ ಅಧಿಕೃತವಾಗಿ ಆಸೀಸ್ ಕ್ರಿಕೆಟ್‍ನಿಂದ ಯಾವುದೇ ಮನವಿ ಬಂದಿಲ್ಲ. ಆದರೂ ಒಂದೇ ಟೂರ್ನಿಯಲ್ಲಿ 2 ಡೇ-ನೈಟ್ ಪಂದ್ಯವೆಂದರೆ ಹೆಚ್ಚಾಗುತ್ತದೆ. ಸಿರೀಸ್ ಒಂದರಲ್ಲಿ ಒಂದೇ ಡೇ-ನೈಟ್ ಪಂದ್ಯವಿದ್ದರೆ ಸಾಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷದ ನವೆಂಬರ್ ನಲ್ಲಿ ಟೀಂ ಇಂಡಿಯಾ ತಂಡದ ಆಸೀಸ್ ಪ್ರವಾಸವನ್ನು ಕೈಗೊಳ್ಳಲಿದೆ. ಈ ವೇಳೆ 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನು ಆಡಲಿದೆ.

  • ಗಾಂಧೀಜಿ ಮಾತು ಹೇಳಿ ಪತಿಗೆ ಧೈರ್ಯ ತುಂಬಿದ ವಾರ್ನರ್ ಪತ್ನಿ

    ಗಾಂಧೀಜಿ ಮಾತು ಹೇಳಿ ಪತಿಗೆ ಧೈರ್ಯ ತುಂಬಿದ ವಾರ್ನರ್ ಪತ್ನಿ

    -ಶಕ್ತಿ ಅದಮ್ಯ ಆತ್ಮವಿಶ್ವಾಸದಿಂದ ಹೊಮ್ಮುತ್ತೆ
    – ಪಾಕ್ ವಿರುದ್ಧ ಆಸೀಸ್‍ಗೆ ಭರ್ಜರಿ ಗೆಲವು

    ಅಡಿಲೇಡ್: ಮಹಾತ್ಮ ಗಾಂಧೀಜಿ ಮಾತನನ್ನು ಹೇಳಿ ಕ್ಯಾಂಡಿಸ್ ವಾರ್ನರ್, ಪತಿ ಡೇವಿಡ್ ವಾರ್ನರ್ ಅವರಿಗೆ ಧೈರ್ಯ ತುಂಬಿದ್ದಾರೆ.

    ಟ್ವೀಟ್ ಮಾಡಿರುವ ಕ್ಯಾಂಡಿಸ್ ವಾರ್ನರ್, ಶಕ್ತಿ ದೈಹಿಕ ಬಲದಿಂದ ಹೊರ ಹೊಮ್ಮುವುದಿಲ್ಲ. ಅದು ಅದಮ್ಯ ಆತ್ಮವಿಶ್ವಾಸದಿಂದ ಹೊರ ಬರುತ್ತದೆ ಎಂಬ ಮಹಾತ್ಮ ಗಾಂಧೀಜಿ ಕೋಟ್ ಅನ್ನು ಬಳಸಿದ್ದಾರೆ. ಜೊತೆಗೆ ಇನ್ನೊಬ್ಬರು ನಿನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಎನ್ನುವುದು ಮುಖ್ಯವೇ ಅಲ್ಲ. ನಿನ್ನ ಬಗ್ಗೆ ನೀನು ಹೊಂದಿರುವ ವಿಶ್ವಾಸವೇ ಅತಿ ಮುಖ್ಯ ಎಂದು ಕ್ಯಾಂಡಿಸ್ ವಾರ್ನರ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ‘ಬಾಲ್ ಟ್ಯಾಂಪರಿಂಗ್’ ಗುಟ್ಟು ಬಿಚ್ಚಿಟ್ಟಿದ್ದ ವಾರ್ನರ್

    ಪಾಕಿಸ್ತಾನನ ವಿರುದ್ಧ ನಡೆದ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಒಂದು ಇನ್ನಿಂಗ್ಸ್ ಹಾಗೂ 48 ರನ್‍ಗಳಿಂದ ಭರ್ಜರಿ ಗೆಲವು ಸಾಧಿಸಿದೆ. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ 335 ರನ್ ಸಿಡಿಸಿ ಡೇವಿಡ್ ವಾರ್ನರ್ ಪಾತ್ರರಾಗಿದ್ದಾರೆ.

    ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಔಟಾಗದೆ 335 ರನ್( 418 ಎಸೆತ, 39 ಬೌಂಡರಿ, 1 ಸಿಕ್ಸರ್), ಲಬುಶೇನ್ 162 ರನ್(238 ಎಸೆತ, 22 ಬೌಂಡರಿ) ಸಹಾಯದಿಂದ ಮೂರು ವಿಕೆಟ್ ನಷ್ಟಕ್ಕೆ 589 ರನ್ ಸಿಡಿಸಿ 127 ಓವರ್ ನಲ್ಲಿ ಡಿಕ್ಲೇರ್ ಘೋಷಿಸಿತು. ಈ ಬೃಹತ್ ಮೊತ್ತವನ್ನು ಪೇರಿಸುವಲ್ಲಿ ಪಾಕ್ ತಂಡ ವಿಫಲವಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಪಾಕ್ 94.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 302 ಗಳಿಸಿ, ಫಾಲೋಆನ್‍ಗೆ ತುತ್ತಾಗಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡವು 82 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 239 ರನ್ ಗಳಿಸಿತ್ತು. ಈ ಮೂಲಕ ಆಸ್ಟ್ರೇಲಿಯಾ ತಂಡವು ಇನ್ನಿಂಗ್ಸ್ ಹಾಗೂ 48 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇದನ್ನೂ ಓದಿ: ಐಪಿಎಲ್‍ನಲ್ಲಿ ಸೆಹ್ವಾಗ್ ನೀಡಿದ್ದ ಸಲಹೆ ನೆರವಾಯ್ತು- ತ್ರಿಶತಕ ವೀರ ವಾರ್ನರ್

    ಆಸೀಸ್ ಟೀಂ ನಾಯಕ ಟಿಮ್ ಪೈನ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸುವ ಸಮಯದಲ್ಲಿ, ತಂಡವು 127 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 589ರನ್ ಗಳಿಸಿತ್ತು. ಡೇವಿಡ್ ವಾರ್ನರ್ 418 ಎಸೆತಗಳನ್ನು ಎದುರಿಸಿದ್ದ ವಾರ್ನರ್ 39 ಬೌಂಡರಿ ಹಾಗೂ ಸಿಕ್ಸ್ ನೆರವಿನಿಂದ 335 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇದರಿಂದಾಗಿ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಲಾರಾ ಅವರ ದಾಖಲೆಯನ್ನು ಹಿಂದಿಕ್ಕುವ ಅವಕಾಶದಿಂದ ವಾರ್ನರ್ ವಂಚಿತರಾದರು. ಬ್ರಿಯಾನ್‌ ಲಾರಾ ಏಪ್ರಿಲ್ 2004ರಲ್ಲಿ ಇಂಗ್ಲೆಂಡ್ ವಿರುದ್ಧದ ಆಂಟಿಗುವಾದಲ್ಲಿ ನಡೆದ ಟೆಸ್ಟ್ ನಲ್ಲಿ 582 ಎಸೆತಗಳನ್ನು ಎದುರಿಸಿ ಅಜೇಯ 400 ರನ್ ಗಳಿಸಿದ್ದರು.

  • ಐಪಿಎಲ್‍ನಲ್ಲಿ ಸೆಹ್ವಾಗ್ ನೀಡಿದ್ದ ಸಲಹೆ ನೆರವಾಯ್ತು- ತ್ರಿಶತಕ ವೀರ ವಾರ್ನರ್

    ಐಪಿಎಲ್‍ನಲ್ಲಿ ಸೆಹ್ವಾಗ್ ನೀಡಿದ್ದ ಸಲಹೆ ನೆರವಾಯ್ತು- ತ್ರಿಶತಕ ವೀರ ವಾರ್ನರ್

    – ಲಾರಾ ದಾಖಲೆಯನ್ನ ರೋಹಿತ್ ಮುರಿಯುತ್ತಾರೆ
    – ಇನ್ನಿಂಗ್ಸ್ ಡಿಕ್ಲೇರ್ ಮಾಡಿದ್ದ ನಿರ್ಧಾರ ಸರಿಯಾಗಿದೆ

    ಅಡಿಲೇಡ್: ಐಪಿಎಲ್ ಟೂರ್ನಿ ವೇಳೆ ವೀರೇಂದ್ರ ಸೆಹ್ವಾಗ್ ನೀಡಿದ ಸಲಹೆ ತ್ರಿಶತಕ ಗಳಿಸುವಲ್ಲಿ ನೆರವಾಯಿತು ಎಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಿಳಿಸಿದ್ದಾರೆ.

    ತ್ರಿಶತಕ ಸಿಡಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಐಪಿಎಲ್‍ನಲ್ಲಿ ಡೆಲ್ಲಿ ಡೇರ್‍ಡೆವಿಲ್ಸ್ ತಂಡದ ಜೊತೆ ಆಡುತ್ತಿದ್ದಾಗ ಸೆಹ್ವಾಗ್ ತನಗೆ ನೀಡಿದ್ದ ಸಲಹೆಯನ್ನು ತಿಳಿಸಿದರು. ಇದನ್ನೂ ಓದಿ: 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, ಯಾಸಿರ್ ಶಾ ಶತಕ- ಪಾಕಿಸ್ತಾನಕ್ಕೆ ಫಾಲೋಆನ್, ಆರಂಭಿಕ ಆಘಾತ

    ನಾನು ಟಿ-20 ಕ್ರಿಕೆಟಿಗ್‍ಗಿಂತ ಟೆಸ್ಟ್‍ಗೆ ಉತ್ತಮ ಬ್ಯಾಟ್ಸ್‌ಮನ್ ಎಂದು ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದರು. ಆ ಸಮಯದಲ್ಲಿ ಅವರ ಹೇಳಿಕೆಯನ್ನು ನಾನು ನಂಬಲಿಲ್ಲ. ಏಕೆಂದರೆ ನಾನು ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಲಿಲ್ಲ. ಆದರೆ ಅವರು ತಿಳಿಸಿದ್ದ ಕೆಲವು ಸಲಹೆಗಳು ಇಂದು ನನ್ನ ತ್ರಿಶತಕ ಸಾಧನೆಗೆ ಸಹಾಯವಾಯಿತು ಎಂದು ಹೇಳಿದರು.

    ಟೆಸ್ಟ್ ನಲ್ಲಿ ಸ್ಲಿಪ್ ಮತ್ತು ಗಲ್ಲಿ ಇರುತ್ತೆ. ಕವರ್ ಓಪನ್ ಆಗಿರುತ್ತದೆ. ಮಿಡನ್ ಮತ್ತು ಮಿಡಾಫ್ ಅಪ್ ಆಗಿರುತ್ತದೆ. ಇದರಿದಾಗಿ ದಿನಪೂರ್ತಿ ಬಾಲನ್ನು ಆಡುವ ಸಾಮಥ್ರ್ಯ ನಿನ್ನ ಬಳಿ ಇದೆ ಎಂದು ಹೇಳಿದ್ದರು. ಈ ವಿಚಾರ ನನ್ನ ತಲೆಯಲ್ಲಿ ಯಾವಾಗಲೂ ಇರುತಿತ್ತು. ಚರ್ಚೆಯ ವೇಳೆ ಸೆಹ್ವಾಗ್ ನೀಡಿದ ಟಿಪ್ಸ್ ನನಗೆ ಬಹಳ ಬೇಗ ಅರ್ಥವಾಯಿತು ಎಂದು ತಿಳಿಸಿದರು.

    ವೆಸ್ಟ್ ಇಂಡೀಸ್‍ನ ಬ್ರಿಯಾನ್ ಲಾರಾ ಅವರ ಟೆಸ್ಟ್ ದಾಖಲೆಯನ್ನು ಮುರಿಯುವ ಸಾಮಥ್ರ್ಯ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರಿಗೆ ಎಂದು ಆಸ್ಟ್ರೇಲಿಯಾದ ಬ್ಯಾಟ್ಸ್‍ಮನ್ ಡೇವಿಡ್ ವಾರ್ನರ್ ಅಭಿಪ್ರಾಯಪಟ್ಟರು.

    ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಲಾರಾ ದಾಖಲೆ ಮುರಿಯುವುದಕ್ಕೆ ವಾರ್ನರ್ ಸನಿಹದಲ್ಲಿದ್ದರು. ಆದರೆ ನಾಯಕ ಟಿಮ್ ಪೈನೆ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದ್ದರಿಂದ ಲಾರಾ ದಾಖಲೆಯನ್ನು ಮುರಿಯಲು ಅವರಿಗೆ ಸಾಧ್ಯವಾಗಲಿಲ್ಲ. ಈ ವಿಚಾರದ ಬಗ್ಗೆ ಸಾಮಾಜಿಜ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಅಡಿಲೇಡ್‍ನಲ್ಲಿ ಹವಾಮಾನ ವರದಿಯ ಪ್ರಕಾರ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ನಾನು ಯಾವಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುತ್ತಾರೆ ಎಂದು ತಂಡವನ್ನು ನೋಡುತ್ತಿದ್ದೆ. ಕ್ರೀಸ್ ನಲ್ಲಿದ್ದಾಗ ಸ್ಪಿತ್ ಜೊತೆ ಯಾವಾಗ ತಂಡ ಡಿಕ್ಲೇರ್ ಮಾಡಿಕೊಳ್ಳುತ್ತದೆ ಎಂದು ಪ್ರಶ್ನಿಸಿದ್ದೆ. ಟೀ ಬ್ರೇಕ್ ವೇಳೆ ನಾನು ಯಾವಾಗ ಡಿಕ್ಲೇರ್ ಆಗುತ್ತದೆ ಎಂದಾಗ ತಂಡದಿಂದ ಸಂಜೆ 5:40ಕ್ಕೆ ಎಂಬ ಉತ್ತರ ಬಂತು. ಸಂಜೆ 5:40ರ ವೇಳೆ ನಾಯಕ ಪೈನೆ ಡಿಕ್ಲೇರ್ ಮಾಡಿಕೊಂಡರು. ಇದು ಮೊದಲೇ ಪೂರ್ವ ನಿರ್ಧಾರವಾಗಿತ್ತು ಎಂದು ತಿಳಿಸಿದರು.

    ಟಿಮ್ ಪೈನ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸುವ ಸಮಯದಲ್ಲಿ, ತಂಡವು 127 ಓವರ್‍ನಲ್ಲಿ 3 ವಿಕೆಟ್ ನಷ್ಟಕ್ಕೆ 589ರನ್ ಗಳಿಸಿತ್ತು. ಡೇವಿಡ್ ವಾರ್ನರ್ 418 ಎಸೆತಗಳನ್ನು ಎದುರಿಸಿದ್ದ ವಾರ್ನರ್ 39 ಬೌಂಡರಿ ಹಾಗೂ ಸಿಕ್ಸ್ ನೆರವಿನಿಂದ 335 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ವೆಸ್ಟ್ ಇಂಡೀಸ್ ಬ್ಯಾಟ್ಸ್‍ಮನ್ ಲಾರಾ ಏಪ್ರಿಲ್ 2004ರಲ್ಲಿ ಇಂಗ್ಲೆಂಡ್ ವಿರುದ್ಧದ ಆಂಟಿಗುವಾದಲ್ಲಿ ನಡೆದ ಟೆಸ್ಟ್ ನಲ್ಲಿ 582 ಎಸೆತಗಳನ್ನು ಎದುರಿಸಿ ಅಜೇಯ 400 ರನ್ ಗಳಿಸಿದ್ದರು.

    ರೋಹಿತ್ ಶರ್ಮಾ ಇದುವರೆಗೆ 32 ಟೆಸ್ಟ್ ಪಂದ್ಯಗಳಲ್ಲಿ 46.54 ಸರಾಸರಿಯಲ್ಲಿ 2,141 ಮತ್ತು 218 ಏಕದಿನ ಪಂದ್ಯಗಳಲ್ಲಿ 48.52 ರ ಸರಾಸರಿಯಲ್ಲಿ 8,686 ರನ್ ಗಳಿಸಿದ್ದಾರೆ. ಈ ವರ್ಷ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‍ನಲ್ಲಿ ತಮ್ಮ ಮೊದಲ ಡಬಲ್ ಸೆಂಚುರಿ ಗಳಿಸಿದ್ದಾರೆ. ಅವರು ಏಕದಿನದಲ್ಲಿ ಮೂರು ಡಬಲ್ ಶತಕಗಳನ್ನು ಗಳಿಸಿದ್ದಾರೆ. ಸೀಮಿತ ಓವರ್‍ಗಳ ಕ್ರಿಕೆಟ್‍ನಲ್ಲಿ ಅವರ ಅತ್ಯುತ್ತಮ ಸ್ಕೋರ್ 264 ರನ್ ಆಗಿದ್ದು, 2014 ರ ನವೆಂಬರ್‍ನಲ್ಲಿ ಕೋಲ್ಕತ್ತಾದಲ್ಲಿ ಶ್ರೀಲಂಕಾ ವಿರುದ್ಧ ಈ ರನ್ ಹೊಡೆದಿದ್ದರು.

  • 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, ಯಾಸಿರ್ ಶಾ ಶತಕ- ಪಾಕಿಸ್ತಾನಕ್ಕೆ ಫಾಲೋಆನ್, ಆರಂಭಿಕ ಆಘಾತ

    7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್, ಯಾಸಿರ್ ಶಾ ಶತಕ- ಪಾಕಿಸ್ತಾನಕ್ಕೆ ಫಾಲೋಆನ್, ಆರಂಭಿಕ ಆಘಾತ

    ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಲೆಗ್ ಸ್ಪಿನ್ನರ್ ಯಾಸಿರ್ ಶಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ವೃತ್ತಿ ಜೀವನದ ಮೊದಲ ಶತಕ ಸಿಡಿಸಿದ್ದಾರೆ.

    ಪಿಂಕ್ ಬಾಲ್ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಪಾಕ್ ಕ್ರಿಕೆಟರ್ ಯಾಸಿರ್ ಶಾ ಈ ಸಾಧನೆ ಮಾಡಿದ್ದಾರೆ. 33 ವರ್ಷದ ಸ್ಪಿನ್ ಬೌಲರ್ ಯಾಸಿರ್ ಶಾ ಆಡಿದ ಹಿಂದಿನ 36 ಟೆಸ್ಟ್ ಪಂದ್ಯಗಳಲ್ಲಿ ಗರಿಷ್ಠ 42 ರನ್ ಗಳಿಸಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ 113 ರನ್(213 ಎಸೆತ, 13 ಬೌಂಡರಿ) ಹೊಡೆದು ಕೊನೆಯವರಾಗಿ ಔಟಾದರು.

    31.5 ಓವರ್ ಗಳಲ್ಲಿ ಪಾಕಿಸ್ತಾನ 6 ವಿಕೆಟ್ ಕಳೆದುಕೊಂಡು 89 ರನ್ ಗಳಿಸಿದ್ದಾಗ ಕ್ರೀಸ್‍ಗೆ ಆಗಮಿಸಿದ ಯಾಸಿರ್ ಶಾ ಬಾಬರ್ ಅಜಂ ಜೊತೆಗೂಡಿ 7ನೇ ವಿಕೆಟಿಗೆ 105 ರನ್ ಜೊತೆಯಾಟವಾಡಿ ಪಾಕ್ ಚೇತರಿಕೆಗೆ ಕಾರಣರಾದರು. ಬಾಬರ್ ಅಜಂ 97 ರನ್(132 ಎಸೆತ, 11 ಬೌಂಡರಿ) ಹೊಡೆದರೆ, ಬೌಲರ್ ಮೊಹಮ್ಮದ್ ಅಬ್ಬಾಸ್ 29 ರನ್ ಹೊಡೆದರು. ಅಂತಿಮವಾಗಿ ಪಾಕಿಸ್ತಾನ 94.4 ಓವರ್ ಗಳಲ್ಲಿ 302 ರನ್‍ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಫಾಲೋಆನ್‍ಗೆ ತುತ್ತಾಗಿದೆ.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಔಟಾಗದೆ 335 ರನ್( 418 ಎಸೆತ, 39 ಬೌಂಡರಿ, 1 ಸಿಕ್ಸರ್), ಲಬುಶೇನ್ 162 ರನ್(238 ಎಸೆತ, 22 ಬೌಂಡರಿ) ಸಹಾಯದಿಂದ ಮೂರು ವಿಕೆಟ್ ನಷ್ಟಕ್ಕೆ 589 ರನ್ ಸಿಡಿಸಿ 127 ಓವರ್ ನಲ್ಲಿ ಡಿಕ್ಲೇರ್ ಘೋಷಿಸಿತು.

    ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಸಿಡಿಸಿದ ವಾರ್ನರ್ ಆಸ್ಟ್ರೇಲಿಯಾ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಹಿಂದೆ ಆರಂಭಿಕ ಆಟಗಾರ ಮಾಥ್ಯು ಹೇಡನ್ 2003 ರಲ್ಲಿ ಜಿಂಬಾಬ್ವೆ ವಿರುದ್ಧ 380 ರನ್(437 ಎಸೆತ, 38 ಬೌಂಡರಿ, 11 ಬೌಂಡರಿ) ಹೊಡೆದಿದ್ದರು.

    287 ರನ್‍ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಆರಂಭದಲ್ಲೇ ಕುಸಿತಗೊಂಡಿದ್ದು, 15.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದೆ.

  • ಪಾಕ್ ಆಟಗಾರರೊಂದಿಗೆ ಭೋಜನ ಸವಿದ ಭಾರತೀಯ ಕ್ಯಾಬ್ ಡ್ರೈವರ್

    ಪಾಕ್ ಆಟಗಾರರೊಂದಿಗೆ ಭೋಜನ ಸವಿದ ಭಾರತೀಯ ಕ್ಯಾಬ್ ಡ್ರೈವರ್

    ಸಿಡ್ನಿ: ಕಾರಿನಲ್ಲಿ ಡ್ರಾಪ್ ಮಾಡಿ ಹಣ ಪಡೆಯಲು ಒಪ್ಪದ ಭಾರತೀಯ ಕ್ಯಾಬ್ ಡ್ರೈವರ್ ಅನ್ನು ಪಾಕಿಸ್ತಾನಿ ಆಟಗಾರರು ತಮ್ಮ ಜೊತೆ ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಆಟಗಾರರು ಶಾಹೀನ್ ಶಾ ಅಫ್ರಿದಿ, ಯಾಸಿರ್ ಷಾ ಮತ್ತು ನಸೀಮ್ ಷಾ ಅವರು ಬ್ರಿಸ್ಬೇನ್‍ನಲ್ಲಿ ಊಟಕ್ಕೆ ಹೋಟೆಲ್ ಗೆ ಹೋಗಿದ್ದರು. ಆಟಗಾರರನ್ನು ಹೋಟೆಲಿಗೆ ಕರೆತಂದಿದ್ದ ಭಾರತೀಯ ಕ್ಯಾಬ್ ಚಾಲಕ ಹಣ ಪಡೆದಿರಲಿಲ್ಲ. ಹೀಗಾಗಿ ಆಟಗಾರರೆಲ್ಲರೂ ಚಾಲಕನನ್ನು ತಮ್ಮ ಜೊತೆಗೆ ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ.

    ಪಾಕಿಸ್ತಾನಿ ಕ್ರಿಕೆಟ್ ಆಟಗಾರರು ಭಾರತೀಯ ಕಾರು ಚಾಲಕನಿಗೆ ಊಟ ಕೊಡಿಸಿರುವ ಕಥೆಯನ್ನು ಟೆಸ್ಟ್ ಪಂದ್ಯದ ಕಾಮೆಂಟ್ರಿ ಮಾಡುವ ವೇಳೆ ಎಬಿಸಿ ರೇಡಿಯೊ ನಿರೂಪಕಿ ಅಲಿಸನ್ ಮಿಚೆಲ್ ಅವರು ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್‍ಗೆ ಹೇಳಿದ್ದಾರೆ. ಕ್ರಿಕೆಟ್ ಆಟಗಾರರ ಜೊತೆ ಊಟ ಮಾಡುವ ಅವಕಾಶ ಸಿಕ್ಕ ನಂತರ ಕ್ಯಾಬ್ ಚಾಲಕ ಎಷ್ಟು ಉತ್ಸುಕನಾಗಿದ್ದ ಎಂಬುದನ್ನು ಅಲಿಸನ್ ಮಿಚೆಲ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    https://twitter.com/abcgrandstand/status/1198442285509357570

    ಈ ವಿಡಿಯೋದಲ್ಲಿ ನಿರೂಪಕಿ ಅಲಿಸನ್ ಮಿಚೆಲ್ ಅವರು ಇಂದು ನಾನು ನಿಮಗೆ ಒಂದು ಕಥೆಯನ್ನು ಹೇಳುತ್ತೇನೆ. ಆ ಮೂಲಕ ಇಂದಿನ ದಿನವನ್ನು ಆರಂಭ ಮಾಡೋಣ. ಆಗ ಮಿಚೆಲ್ ಪಾಕಿಸ್ತಾನಿ ಆಟಗಾರರು ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯಕ್ಕಾಗಿ ಬ್ರಿಸ್ಬೇನ್ ಬಂದಿದ್ದ ಪಾಕಿಸ್ತಾನಿ ಆಟಗಾರರು ಊಟಕ್ಕೆಂದು ಹೋಟೆಲ್ ಗೆ ಹೋಗಲು ಕ್ಯಾಬ್ ಬುಕ್ ಮಾಡುತ್ತಾರೆ.

    ಆಗ ಅಲ್ಲಿಗೆ ಬಂದ ಕ್ಯಾಬ್ ಚಾಲಕ ಒಬ್ಬ ಭಾರತೀಯ, ಅದೂ ಅಲ್ಲದೇ ಆತ ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿರುತ್ತಾನೆ. ಪಾಕಿಸ್ತಾನ ಆಟಗಾರನ್ನು ಹತ್ತಿಸಿಕೊಂಡ ಆತ ಹೋಟೆಲ್ ಗೆ ಡ್ರಾಪ್ ಮಾಡುತ್ತಾನೆ. ನಂತರ ಆಟಗಾರರು ಅವನಿಗೆ ಹಣ ಕೊಡಲು ಹೋದಾಗ ಆತ ತೆಗೆದುಕೊಳ್ಳುವುದಿಲ್ಲ. ಆಗ ಪಾಕ್ ಆಟಗಾರರು ಆತನನ್ನು ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಿ ಊಟ ಕೊಡಿಸಿದ್ದಾರೆ ಎಂದು ಮಿಚೆಲ್ ಜಾನ್ಸನ್‍ಗೆ ಹೇಳಿದ್ದಾರೆ.

    ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಹಲವಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಭಾನುವಾರ ಬ್ರಿಸ್ಬೇನ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಆಸ್ಟ್ರೇಲಿಯಾ ಇನ್ನಿಂಗ್ಸ್ ಮತ್ತು 5 ರನ್‍ಗಳಿಂದ ಸೋಲಿಸಿ, ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

  • ಮುದ್ದು ಮಗಳನ್ನು ಅನುಕರಣೆ ಮಾಡಿದ ತಂದೆ- ವಿಡಿಯೋ ಫುಲ್ ವೈರಲ್

    ಮುದ್ದು ಮಗಳನ್ನು ಅನುಕರಣೆ ಮಾಡಿದ ತಂದೆ- ವಿಡಿಯೋ ಫುಲ್ ವೈರಲ್

    ಕ್ಯಾನ್ಬೆರಾ: ದಂಪತಿಗೆ ಮಗು ಹುಟ್ಟಿದರೆ ಜವಾಬ್ದಾರಿ ಜಾಸ್ತಿ ಇರುತ್ತದೆ. ಅಲ್ಲದೆ ಅತ್ಯಂತ ಖುಷಿ ಹಾಗೂ ಪ್ರೀತಿಯಿಂದ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಬ್ಯುಸಿಯಾಗಿರುತ್ತಾರೆ. ಮಗುವಿನ ಜೊತೆ ತಾವೂ ಮಗುವಾಗಿ ಬಿಡುತ್ತಾರೆ. ಅಂತೆಯೇ ತಂದೆ ಹಾಗೂ ಮಗಳ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಹೌದು. ಆಸ್ಟ್ರೇಲಿಯಾದ ಸಿಡ್ನಿಯ ಕಾಮಿಡಿಯನ್ ಜೋಶ್ ಹಾವ್ಕಿನ್ಸ್ ಅವರು ಇತ್ತೀಚೆಗಷ್ಟೇ ಹೆಣ್ಣು ಮಗುವಿನ ತಂದೆಯಾದರು. ಆ ಬಳಿಕ ಅವರು ತಮ್ಮ ಹೆಚ್ಚಿನ ಸಮಯವನ್ನು ಮಗಳ ಆರೈಕೆಗೆಂದು ಮೀಸಲಿಟ್ಟಿದ್ದರು. ಹೀಗೆ ತಮ್ಮ ಮಗಳೊಂದಿಗೆ ಸಮಯ ಕಳೆಯುತ್ತಿರುವ ಕಾಮಿಡಿಯನ್ನು ಆಕೆಯ ಚಲನಚಲನವನ್ನು ಅನುಕರಿಸಲು ಪ್ರಾರಂಭಿಸಿದರು. ಅಲ್ಲದೆ ಅದನ್ನು ವಿಡಿಯೋ ಕೂಡ ಮಾಡಿಕೊಂಡರು.

    ವಿಡಿಯೋದಲ್ಲಿ ಮಗಳ ನಗು, ಅಚ್ಚರಿಯ ನೋಟ, ಕಣ್ಣುಗಳ ಚಲನೆ, ಆಕಳಿಗೆ, ಬೆರಳು ಚೀಪುವುದು.. ಹೀಗೆ ಆಕೆಯನ್ನು ಅನುಕರಣೆ ಮಾಡುವುದನ್ನು ಕಾಣಬಹುದಾಗಿದೆ. ಈ ವಿಡಿಯೋಗೆ ಹಾಲು ಕುಡಿಯುತ್ತಿರೋ ನನ್ನ ಮುದ್ದು ಮಗಳ ಮುಖವನ್ನು ಅನುಕರಿಸೋದು ಇದೀಗ ನನ್ನ ಹೊಸ ಫುಲ್ ಟೈಂ ಕೆಲಸವಾಗಿದೆ ಎಂದು ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ.

    ಸದ್ಯ ಈ ವಿಡಿಯೋ 4.9 ಕೋಟಿಗೂ ಹೆಚ್ಚು ವ್ಯೂವ್ಸ್ ಬಂದಿದ್ದು, ಸರಿಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ಇದರೊಂದಿಗೆ ಕಾಮಿಡಿಯನ್ ಮುಖಭಾವ ನೋಡಿ ಜನ ನಗ್ತಿದ್ದಾರೆ. ಅಲ್ಲದೆ ಆಕೆಯನ್ನು ಅನುಕರಣೆ ಮಾಡಲು ಎಷ್ಟು ಸಮಯ ತೆಗೆದುಕೊಂಡಿರುವುದಾಗಿ ಪ್ರಶ್ನಿಸಿದ್ದಾರೆ.